ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಡಿಸೆಂಬರ್ 15, 2010

ಸೇವಾ ಪುರಾಣ -30: ಬಂದಿಯಾದ ಸಬ್‌ಇನ್ಸ್‌ಪೆಕ್ಟರರ ಕಥೆ


    ಸುಮಾರು 30 ವರ್ಷಗಳ ಹಿಂದಿನ ಘಟನೆಯಿದು. ಹಾಸನ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರದಲ್ಲಿನ ಪೋಲಿಸ್ ಠಾಣೆಗೆ ಬಂದಿದ್ದ ರೈತನಾಯಕರೊಬ್ಬರು ಸಬ್ ಇನ್ಸ್‌ಪೆಕ್ಟರರೊಂದಿಗೆ ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಸಬ್‌ಇನ್ಸ್‌ಪೆಕ್ಟರರ ರಿವಾಲ್ವರ್‌ನಿಂದ ಹಾರಿದ ಗುಂಡು ಆ ರೈತನಾಯಕನ ಪ್ರಾಣ ತೆಗೆದಿತ್ತು. ರಿವಾಲ್ವರ್ ಅನ್ನು ಕೈಬೆರಳಿನಲ್ಲಿ ಸಿಕ್ಕಿಸಿಕೊಂಡು ತಿರುಗಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿತೆಂಬುದು ಸಬ್‌ಇನ್ಸ್‌ಪೆಕ್ಟರರ ವಾದವಾಗಿತ್ತು. ವಾದದ ಭರದಲ್ಲಿ ಸಿಟ್ಟಿನಿಂದ ಗುಂಡು ಹಾರಿಸಿ ಕೊಂದರೆಂದು ಜನರ ಅನಿಸಿಕೆಯಾಗಿತ್ತು. ಈ ವಿಚಾರದಲ್ಲಿ ಬಹಳ ಚರ್ಚೆ, ವಾದ-ವಿವಾದಗಳು, ಪ್ರತಿಭಟನೆಗಳು ನಡೆದವು. ಅಂತಿಮವಾಗಿ ಕೊಲೆ ಆರೋಪದ ಮೇಲೆ ಸಬ್ ಇನ್ಸ್‌ಪೆಕ್ಟರರನ್ನು ಬಂಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ನ್ಯಾಯಾಂಗ ಬಂಧನಕ್ಕೆ ಒಳಗಾದ ಅವರಿಗೆ ಜಾಮೀನು ಸಿಗಲಿಲ್ಲ. ಅವರನ್ನು ವಾಸ್ತವವಾಗಿ ಹಾಸನದ ಜೈಲಿನಲ್ಲಿ ಇರಿಸಬೇಕಾಗಿತ್ತು. ಆದರೆ ಹೊಳೆನರಸಿಪುರದ ಜೈಲಿನಲ್ಲಿ ಇಡಲು ವ್ಯವಸ್ಥೆ ಮಾಡಿದರು. ಕಾರಣ ಅರ್ಥವಾಗದುದೇನಾಗಿರಲಿಲ್ಲ. ಹಾಸನದ ಜೈಲಿನ ಸಿಬ್ಬಂದಿ ಕಾರಾಗೃಹ ಇಲಾಖೆಗೆ ಸೇರಿದವರಾಗಿದ್ದರು. ಅವರ ಮೇಲೆ ಪೋಲಿಸ್ ಇಲಾಖೆಯ ನಿಯಂತ್ರಣ ಇರಲಿಲ್ಲ. ಹೊಳೆನರಸಿಪುರದ ಜೈಲಾದರೆ ಗಾರ್ಡುಗಳು ಪೋಲಿಸ್ ಇಲಾಖೆಯವರಾಗಿದ್ದು, ಜೈಲು ಸೂಪರಿಂಟೆಂಡೆಂಟ್ ಆಗಿದ್ದ ನಾನು ಕಂದಾಯ ಇಲಾಖೆಗೆ ಸೇರಿದವನಾಗಿದ್ದು, ಪದನಿಮಿತ್ತ ಆ ಹುದ್ದೆಯನ್ನು ಹೊಂದಿದ್ದೆ.ತಮ್ಮ ಇಲಾಖೆಯ ಅಧಿಕಾರಿಯನ್ನು ಚೆನ್ನಾಗಿ ನೋಡಿಕೊಳ್ಳಬಹುದೆಂಬುದು ಅವರ ಇರಾದೆಯಾಗಿತ್ತು. ಅದಕ್ಕೆ ತಕ್ಕಂತೆ ಆ ಬಂದಿ ಅಧಿಕಾರಿಯನ್ನು ಸಹೋದ್ಯೋಗಿಗಳು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಊಟ, ತಿಂಡಿಗಳು ಅಲ್ಲಿನ ಪೋಲಿಸರ ಮನೆಗಳಿಂದಲೇ ಬರುತ್ತಿತ್ತು. ಸಾಯಂಕಾಲದಲ್ಲಿ ಪೋಲಿಸ್ ಜೀಪಿನಲ್ಲಿ ಹೊರಗಡೆ ತಿರುಗಾಡಲೂ ಕರೆದೊಯ್ಯುತ್ತಿದ್ದರಂತೆ. ಒಂದು ಸಲ ಅವರನ್ನು ಸಿನೆಮಾ ಟಾಕೀಸಿಗೆ ಸಿನೆಮಾ ನೋಡಲೂ ಕರೆದುಕೊಂಡು ಹೋಗಿದ್ದರಂತೆ. ಸ್ಥಳೀಯ ಪತ್ರಿಕೆಗಳಲ್ಲಿ 'ಹೊಳೆನರಸಿಪುರದ ಜೈಲಿನಲ್ಲಿ ಕೈದಿ ಸಬ್ ಇನ್ಸ್‌ಪೆಕ್ಟರರಿಗೆ ರಾಜೋಪಚಾರ ಎಂದು ವರದಿಗಳೂ ಬಂದವು. ನನಗೆ ಇದೆಲ್ಲಾ ಇಷ್ಟವಾಗದೆ ಹೊಳೆನರಸಿಪುರದ ಸಬ್ ಇನ್ಸ್‌ಪೆಕ್ಟರರಿಗೆ ಇನ್ನು ಮುಂದೆ ಇಂತಹ ಸಂಗತಿಗಳಿಗೆ ಅವಕಾಶ ಕೊಡಬಾರದೆಂದು, ನನ್ನ ಗಮನಕ್ಕೆ ಬಂದರೆ ಡಿ.ಜಿ.ಪಿ.ರವರ ಗಮನಕ್ಕೆ ವರದಿ ಕೊಡಬೇಕಾಗುತ್ತದೆಂದು ತಿಳಿಸಿದೆ. ಗಾರ್ಡುಗಳಿಗೂ ಎಚ್ಚರಿಕೆ ನೀಡಿದೆ.
     ಪತ್ರಿಕೆಯಲ್ಲಿ ವರದಿ ಬಂದ ನಂತರ ನಾನು ಆಗಾಗ್ಗೆ ಜೈಲಿಗೆ ಭೇಟಿ ಕೊಟ್ಟು ಬರುತ್ತಿದ್ದೆ. ನನ್ನ ಕಣ್ಣು ತಪ್ಪಿಸಿ ಅವರು ಮೊದಲಿನ ಚಾಳಿ ಮುಂದುವರೆಸಿದ್ದರು. ಹೀಗಾಗಿ ನಾನು ಎರಡು ದಿನದ ನಂತರ ಸಾಯಂಕಾಲ ಮನೆಗೆ ಹೋದಂತೆ ಮಾಡಿ ಹತ್ತು ನಿಮಿಷ ಬಿಟ್ಟು ಪುನಃ ಅನಿರೀಕ್ಷಿತವಾಗಿ ಜೈಲಿಗೆ ಭೇಟಿ ಕೊಟ್ಟೆ. ಆ ಸಮಯದಲ್ಲಿ ಜೈಲಿನ ಒಳ ಆವರಣದಲ್ಲಿ ಇಡಲಾಗಿದ್ದ ಎರಡು ಬೆತ್ತದ ಕುರ್ಚಿಗಳಲ್ಲಿ ಒಂದರಲ್ಲಿ ಬಂದಿ ಅಧಿಕಾರಿ ಇನ್ನೊಂದರಲ್ಲಿ ಆಗ ಕ.ರಾ.ರ.ಸಾ.ಸಂಸ್ಥೆಯ ಡಿವಿಷನಲ್ ಕಂಟ್ರೋಲರ್ ಮತ್ತು ಉಪ ಜನರಲ್ ಮೇನೇಜರ್ ಆಗಿದ್ದ ವ್ಯಕ್ತಿ ಕುಳಿತು ಚಹ ಹೀರುತ್ತಾ ಕುಶಲೋಪರಿ ಮಾತುಕಥೆಗಳನ್ನಾಡುತ್ತಿದ್ದರು. ನನ್ನನ್ನು ನೋಡಿದ ಅವರು "ಬನ್ನಿ ಸಾಹೇಬರೇ, ಕುಳಿತುಕೊಳ್ಳಿ. ಏಯ್, ಸಾಹೇಬರಿಗೆ ಒಳ್ಳೆಯ ಟೀ ತೆಗೆದುಕೊಂಡು ಬನ್ನಿ" ಎಂದು ಅಲ್ಲಿದ್ದ ಗಾರ್ಡಿಗೆ ಹೇಳಿದರು. ನಾನು ಗಾರ್ಡ್ ಅನ್ನು ದುರುಗುಟ್ಟಿ ನೋಡಿದೆ. ಆತ ಪೆಚ್ಚಾಗಿ ನಿಂತಿದ್ದ. ನನಗೆ ಸಿಟ್ಟು ಬಂದಿತ್ತು. ನಾನು ಆ ಜಿಲ್ಲಾ ಮಟ್ಟದ ಅಧಿಕಾರಿಗೆ "ನೀವು ಜಿಲ್ಲಾ ಮಟ್ಟದ ಅಧಿಕಾರಿಯಿರಬಹುದು. ಆದರೆ ನಿಮ್ಮ ಅಧಿಕಾರ ವ್ಯಾಪ್ತಿ ಇಲ್ಲಿಲ್ಲ. ನೀವು ಇಲ್ಲಿ ಯಾರ ಅನುಮತಿ ಪಡೆದು ಒಳಗೆ ಬಂದಿರಿ? ನನ್ನ ಅನುಮತಿ ಪಡೆಯದೆ ಒಳಗೆ ಬಂದಿದ್ದಲ್ಲದೆ ನನ್ನ ಜೈಲಿನಲ್ಲೇ ನನಗೇ ಉಪಚಾರ ಮಾಡುವಷ್ಟು ಧೈರ್ಯ ನಿಮಗೆ ಹೇಗೆ ಬಂತು? ನಿಮ್ಮನ್ನು ನೀವು ಏನೆಂದು ತಿಳಿದುಕೊಂಡಿದ್ದೀರಿ? ಇದರ ಪರಿಣಾಮ ಏನು ಅನ್ನುವುದು ನಿಮಗೆ ಗೊತ್ತೆ?" ಎಂದೆಲ್ಲಾ ಹೇಳಿದ್ದಲ್ಲದೆ ಗುಮಾಸ್ತರನ್ನು ಕರೆಯಿಸಿ "ಈಗಲೇ ಅವರ ಹೇಳಿಕೆ ಪಡೆಯಿರಿ, ಅವರನ್ನು ಬಿಟ್ಟವರು ಯಾರು, ಏಕೆ ಬಿಟ್ಟರು, ಅವರು ಯಾವ ಉದ್ದೇಶಕ್ಕೆ ಬಂದರು, ಈ ಎಲ್ಲಾ ಅಂಶ ಬರುವಂತೆ ಹೇಳಿಕೆ ದಾಖಲಿಸಿಕೊಳ್ಳಿ" ಎಂದು ಸೂಚನೆ ಕೊಟ್ಟೆ. ಈ ಪ್ರಕರಣದ ಬಗ್ಗೆ ಡಿ.ಜಿ.ಪಿ.ರವರಿಗೂ ಒಂದು ವರದಿ ಸಿದ್ಧ ಮಾಡಿ ಎಂತಲೂ ಹೇಳಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಬಗ್ಗೆ ಅವರು ಗಾಬರಿಗೊಂಡಿದ್ದರು. ಮುಖದ ಬೆವರು ಒರೆಸಿಕೊಳ್ಳುತ್ತಾ 'ತಪ್ಪಾಗಿದೆ, ಕ್ಷಮಿಸಿ' ಎಂದು ಬೇಡಿಕೊಂಡರು. ಗಾರ್ಡುಗಳೂ 'ಇನ್ನುಮುಂದೆ ಹೀಗೆ ಮಾಡುವುದಿಲ್ಲ, ನಮ್ಮ ಮೇಲಾಧಿಕಾರಿಗಳ ಮಾತು ಕೇಳದಿದ್ದರೆ ನಮಗೆ ಉಳಿಗಾಲವಿಲ್ಲ, ಕೇಳಿದರೆ ನಿಮ್ಮಿಂದ ನಮಗೆ ಉಳಿಗಾಲವಿಲ್ಲ. ನಮಗೆ ಏನು ಮಾಡಬೇಕೋ ತೋಚುತ್ತಿಲ್ಲ. ಈಸಲಕ್ಕೆ ಕ್ಷಮಿಸಿ' ಎಂದು ಕೇಳಿಕೊಂಡಾಗ ಎಚ್ಚರಿಕೆ ನೀಡಿ ಮುಗಿಸಿದೆ. ಆ ಅಧಿಕಾರಿ ಬಿಟ್ಟರೆ ಸಾಕೆಂಬಂತೆ ಅಲ್ಲಿಂದ ಜಾಗ ಖಾಲಿ ಮಾಡಿದರು. ಬೆತ್ತದ ಕುರ್ಚಿಗಳನ್ನು ಎಲ್ಲಿಂದ ತಂದರೋ ಅಲ್ಲಿಗೆ ವಾಪಸು ಇಡಲು ಸೂಚಿಸಿದೆ. ಬಂದಿ ಸಬ್‌ಇನ್ಸ್‌ಪೆಕ್ಟರ್ ಮಾತಾಡದೇ ನನ್ನನ್ನು ದುರುಗುಟ್ಟಿಕೊಂಡು ನೋಡಿ ತಮ್ಮ ಸೆಲ್‌ಗೆ ಹೋದರು.
     ಈ ಬಂದಿಯನ್ನು ಇಲ್ಲಿ ಜೈಲಿನಲ್ಲಿ ಇಟ್ಟುಕೊಳ್ಳುವುದು ಸೂಕ್ತವಲ್ಲವೆಂದು ನನಗೆ ತೋರಿತು. ಮರುದಿನ ಬೆಳಿಗ್ಗೆ ಬಂದವನೇ ಆರೋಪಿಯನ್ನು ಹಾಸನದ ಜೈಲಿಗೆ ವರ್ಗಾಯಿಸಿದ ವಾರೆಂಟ್ ಸಿದ್ಧಪಡಿಸಿ ಕೂಡಲೇ ಕಳುಹಿಸಲು ಸೂಚನೆ ಕೊಟ್ಟೆ. ಸರ್ಕಲ್ ಇನ್ಸ್‌ಪೆಕ್ಟರರು ನನ್ನನ್ನು ಭೇಟಿ ಮಾಡಿ ಬಂದಿಯನ್ನು ಹೊಳೆನರಸಿಪುರದ ಜೈಲಿನಲ್ಲೇ ಉಳಿಸುವಂತೆ ಕೋರಿದರು. ಈಗ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳು ಗೊತ್ತಿದ್ದೂ ಈ ಕೋರಿಕೆ ಎಷ್ಟರಮಟ್ಟಿಗೆ ಸರಿ? ಎಂದು ಕೇಳಿದ ನಾನು ನನ್ನ ನಿರ್ಧಾರಕ್ಕೆ ಬದ್ಧನಾದೆ. ನಂತರದಲ್ಲಿ ತಿಳಿದದ್ದೇನೆಂದರೆ ಎದೆನೋವಿನ ನೆಪ ಹೇಳಿ ಅವರನ್ನು ಪೋಲಿಸರು ಆಸ್ಪತ್ರೆಗೆ ಸೇರಿಸಿದ್ದರು. ಈ ಹಂತದಲ್ಲಿ ಅವರನ್ನು ವರ್ಗಾಯಿಸುವಂತಿರಲಿಲ್ಲ. ನಾನು ಸುಮ್ಮನಿರಬೇಕಾಯಿತು. ಎರಡು ದಿನದ ನಂತರ ಆಸ್ಪತ್ರೆಯ ವೈದ್ಯಾಧಿಕಾರಿಯನ್ನು ಭೇಟಿ ಮಾಡಿ ರಹಸ್ಯವಾಗಿ ಚರ್ಚಿಸಿದೆ. ಅವರನ್ನು ಒಪ್ಪಿಸಿ ಎದೆ ನೋವಿಗೆ ಹೆಚ್ಚಿನ ಚಿಕಿತ್ಸೆ ಸಲುವಾಗಿ ಬಂದಿಯನ್ನು ಹಾಸನದ ಆಸ್ಪತ್ರೆಗೆ ಕಳಿಸಲು ಅವರಿಂದ ಪತ್ರ ಪಡೆದೆ. ಅದನ್ನು ಆಧರಿಸಿ ಬಂದಿಯನ್ನು ಹಾಸನದಲ್ಲಿ ಚಿಕಿತ್ಸೆ ಕೊಡಿಸುವ ಸಲುವಾಗಿ ಹಾಸನದ ಜೈಲಿಗೆ ವರ್ಗಾಯಿಸಿದ ವಾರೆಂಟ್ ನೀಡಿ ಅರ್ಧ ದಿನ ರಜೆ ಹಾಕಿ ಹಾಸನಕ್ಕೆ ಹೊರಟುಹೋದೆ. ಸರ್ಕಲ್ ಇನ್ಸ್‌ಪೆಕ್ಟರರು ಸಿಟ್ಟು ಮಾಡಿಕೊಂಡು ನನ್ನನ್ನು ನೋಡಿಕೊಳ್ಳುವುದಾಗಿ ಧಮಕಿ ಹಾಕಿದ್ದ ವಿಷಯ ನಂತರ ತಿಳಿಯಿತು. ವೈದ್ಯರ ಮೇಲೂ ಕೂಗಾಡಿದ್ದರಂತೆ. ನನ್ನನ್ನು ಹುಡುಕಿಕೊಂಡು ಪೋಲಿಸ್ ಸಿಬ್ಬಂದಿ ಹಲವಾರು ಸಲ ನನ್ನ ಮನೆಗೆ ಬಂದಿದ್ದರು. ಆಗ ಮೊಬೈಲ್ ದೂರವಾಣಿ ಬಳಕೆಗೆ ಬಂದಿರದಿದ್ದುದು ಒಳ್ಳೆಯದೇ ಆಗಿತ್ತು. ಇಂತಹ ಒತ್ತಡ ತಪ್ಪಿಸಿಕೊಳ್ಳುವ ಸಲುವಾಗೇ ನಾನು ಅಲ್ಲಿಂದ ಜಾಗ ಖಾಲಿ ಮಾಡಿದ್ದೆ. ಸಾಯಂಕಾಲ ಬಹು ಹೊತ್ತಾದರೂ ನಾನು ಸಿಗದಿದ್ದಾಗ ವಿಧಿಯಿಲ್ಲದೇ ಬಂದಿಯನ್ನು ಹಾಸನದ ಜೈಲಿಗೆ ಕರೆದುಕೊಂಡು ಹೋಗಿದ್ದರು. ಆ ವಿಷಯ ಖಚಿತಪಡಿಸಿಕೊಂಡ ನಂತರವೇ ನಾನು ಮರಳಿ ಬಂದದ್ದು.
     ಎರಡು ವಾಕ್ಯಗಳಲ್ಲಿ ಮುಂದಿನ ಬೆಳವಣಿಗೆ ಹೇಳಿ ಮುಗಿಸುವೆ. ಹಲವಾರು ತಿಂಗಳುಗಳ ಕಾಲ ಪ್ರಕರಣ ನಡೆದು ಆರೋಪ ಸಾಬೀತಾಗಲಿಲ್ಲವೆಂದು ಈ ಆರೋಪಿಯ ಬಿಡುಗಡೆಯಾದ ಸುದ್ದಿ ಪತ್ರಿಕೆಗಳಲ್ಲಿ ಬಂದಿತು. ನಂತರದ ವರ್ಷಗಳಲ್ಲಿ ಅವರಿಗೆ ಬಡ್ತಿಗಳೂ ಸಿಕ್ಕಿದವು.

2 ಕಾಮೆಂಟ್‌ಗಳು: