ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಡಿಸೆಂಬರ್ 4, 2010

ಮೂಢ ಉವಾಚ -32 : ವೈರಾಗ್ಯ

ಅಕ್ಕರೆಯ ಪಡೆದವರು ಅರಿಗಳಂತಾಡಿರಲು
ಆಸರೆಯ ಪಡೆದವರು ದೂಡಿ ನಡೆದಿರಲು
ಸ್ವಾರ್ಥವೆಂಬುದು ಪ್ರೀತಿಯನೆ ನುಂಗಿರಲು
ವೈರಾಗ್ಯವೆರಗದಿರೆ ಅಚ್ಚರಿಯು ಮೂಢ


ಮಸಣ ವೈರಾಗ್ಯವದು ಮರೆಯುವ ತನಕ
ಅಭಾವ ವೈರಾಗ್ಯವದು ದೊರೆಯುವ ತನಕ
ಇರುವುದೆ ಸಾಕೆಂಬ ಬೇಕೆಂದು ಕೊರಗದಿಹ
ರಾಗರಾಹಿತ್ಯ ನಿಜವೈರಾಗ್ಯ ಮೂಢ


ಧರ್ಮದ ಅರಿವಿಲ್ಲ ಅರ್ಥ ಸುಳಿದಿಲ್ಲ
ಸುಕಾಮಿಯೆನಿಸಲಿಲ್ಲ ಮುಕ್ತಿಪಥವರಿಯಲಿಲ್ಲ
ಪುರುಷಾರ್ಥ ಸಾಧಿಸಲಾಪದಾ ಕೊರಗಿರಲು
ವಿಫಲತೆ ವೈರಾಗ್ಯ ತರದಿರದೆ ಮೂಢ


ಧರ್ಮದರಿವಿಹುದು ಸಕಲ ಸಂಪತ್ತುಗಳಿಹುದು
ಸುಕಾಮಿಯೆಂದೆನಿಸಿ ಜ್ಞಾನಸಾಧಕನಾಗಿಹನು
ನಿಜ ಪುರುಷನವನು ಮುಕ್ತಿಪಥದಲಿ ಸಾಗಿ
ನಿಜ ವೈರಾಗಿಯವನೆನಿಸುವನು ಮೂಢ
***************
-ಕವಿನಾಗರಾಜ್.

2 ಕಾಮೆಂಟ್‌ಗಳು:

  1. [ಪುರುಷಾರ್ಥ ಸಾಧಿಸಲಾಪದಾ ಕೊರಗಿರಲು
    ವಿಫಲತೆ ವೈರಾಗ್ಯ ತರದಿರದೆ ಮೂಢ]

    ವಿಫಲತೆಯಿಂದ ವೈರಾಗ್ಯಬಂದರೆ ಅದೆಷ್ಟು ದಿನ ಉಳಿದೀತು? ಯಾವುದಾದರೂ ಕೆಲಸದಲ್ಲಿ ಹೆಸರು ಬಂದೊಡನೆ ವೈರಾಗ್ಯವು ಕಾಲ್ಕಿತ್ತೀತು! ಅಲ್ಲವೇ?

    ಪ್ರತ್ಯುತ್ತರಅಳಿಸಿ
  2. ಮೇಲಿನ ಉವಾಚದಲ್ಲೇ ಇದೆಯಲ್ಲ [[ಅಭಾವ ವೈರಾಗ್ಯವದು ದೊರೆಯುವ ತನಕ]]! ವೈರಾಗ್ಯ ಬರುವ ರೀತಿ ಕುರಿತು ತಿಳಿಸಿರುವೆ.

    ಪ್ರತ್ಯುತ್ತರಅಳಿಸಿ