ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಮಾರ್ಚ್ 28, 2014

'ವಿಕ್ರಮ'-ಯುಗಾದಿ ವಿಶೇಷ ಸಂಚಿಕೆ (30-03-2014)ರಲ್ಲಿ ಪ್ರಕಟವಾದ ನನ್ನ ವಿನೋದ ಲೇಖನ- ಆಡದ ಮಾತುಗಳು


     ಮಂಕ, ಮಡ್ಡಿ, ಮರುಳ, ಮೂಢರು ಒಂದು ನಿಯಮ ಮಾಡಿಕೊಂಡಿದ್ದರು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲಿ, ಬಿಡಲಿ ವಾರಕ್ಕೊಮ್ಮೆಯಾದರೂ ಮುಠ್ಠಾಳನ ಮನೆಯಲ್ಲಿ ಒಟ್ಟಿಗೆ ಸೇರಿ ಕೆಲವು ಗಂಟೆಗಳಾದರೂ ಕಷ್ಟ-ಸುಖಗಳನ್ನು ವಿನಿಮಯ ಮಾಡಿಕೊಳ್ಳಬೇಕೆಂಬುದೇ ಆ ನಿಯಮ. ಆಗ ಮುಠ್ಠಾಳ ಅವರಿಗೆ ಕಾಫಿ, ತಿಂಡಿ ಒದಗಿಸಬೇಕಾಗಿದ್ದುದೂ ಒಂದು ಅಲಿಖಿತ ನಿಯಮವಾಗಿತ್ತು. ಅವರು ಒಟ್ಟಿಗೆ ಇರುವುದನ್ನು ಕಂಡವರು ಆಡಿಕೊಳ್ಳುತ್ತಿದ್ದರು, 'ಶುರುವಾಯ್ತಪ್ಪಾ ಇವರ ಸತ್ತ ಸಂಗ (ಸತ್ಸಂಗ!)'. ಹಾಗೆ ಸೇರಿದಾಗ ಯಾವುದಾದರೂ ವಿಷಯದ ಮೇಲೆ ಚರ್ಚೆ ಮಾಡುತ್ತಿದ್ದರು. ಹಾಗೆ ಒಂದು ದಿನ ಸೇರಿದಾಗ ಮುಠ್ಠಾಳ ಕೊಟ್ಟ ಬಿಸಿ ಬಿಸಿ ಬೋಂಡಾ ತಿನ್ನುತ್ತಾ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತಿದ್ದರು. ಯಾರೂ ಮಾತು ಪ್ರಾರಂಭಿಸದಿದ್ದರಿಂದ ಮಂಕ ಗಂಟಲು ಸರಿ ಮಾಡಿಕೊಂಡು ತಾನೇ ಶುರು ಮಾಡಿದ:
    "ಗೆಳೆಯರೇ, ಈ ವಿಷಯ ನಿಮಗೆ ಮೊದಲು ಹೇಳಿರಲಿಲ್ಲ. ಈಗ ಹೇಳಿಬಿಡುತ್ತೇನೆ. ನಾನು  ದೇವರಲ್ಲಿ ಶಕ್ತಿ ಕೊಡು ಅಂತ ಕೇಳಿದೆ. ಆ ದೇವರು ನನ್ನನ್ನು ದುರ್ಬಲನಾಗಿ ಮಾಡಿಬಿಟ್ಟ, ಏಕೆಂದರೆ ವಿಧೇಯತೆ ಕಲಿಯಲಿ ಅಂತ. ಆರೋಗ್ಯ ಕೊಡು ಎಂದದ್ದಕ್ಕೆ, ಎಡವಟ್ಟು ಮಾಡಿದ, ಏಕೆಂದರೆ ಏನಾದರೂ ಮಾಡಬೇಕು ಅನ್ನುವ ಮನಸ್ಸು ಬರಲಿ ಅಂತ. ಸುಖ ಅನುಭವಿಸಲು ಶ್ರೀಮಂತಿಕೆ ಕೊಡು ಅಂತ ಕೇಳಿದರೆ ಬಡತನ ಕೊಟ್ಟುಬಿಟ್ಟ. ಬುದ್ಧಿವಂತ ಆಗಲಿ ಅಂತ. ಅಧಿಕಾರ ಕೊಡು, ಜನ ನನ್ನನ್ನು ಹೊಗಳಲಿ ಅಂತ ಕೇಳಿದರೆ ಜವಾನನಾಗಿ ಕೆಲಸ ಮಾಡುವಂತೆ ಮಾಡಿದ, ಏಕೆಂದರೆ ನಾನು ದೇವರನ್ನು ನೆನೆಸಿಕೊಳ್ಳುತ್ತಿರಲಿ ಅಂತ. ಎಲ್ಲಾ ವಸ್ತುಗಳನ್ನು ಜೀವನ ಸುಖವಾಗಿಡಲು ಕೊಡಪ್ಪಾ ಅಂತ ಕೇಳಿದೆ,  ಜೀವನ ಕೊಟ್ಟಿದೀನಿ, ಎಲ್ಲಾ ವಸ್ತುಗಳನ್ನು ನೀನೇ ಪಡಕೊಳ್ಳಬಹುದು ಅಂತ ಹೇಳಿದ. ಆಮೇಲೆ ನಾನು ಅವನನ್ನು ಕೇಳಿಕೊಳ್ಳಬೇಕು ಅಂತ  ಇದ್ದೆನೋ ಅದನ್ನು ಕೇಳಿಕೊಳ್ಳಲೇ ಇಲ್ಲ, ಆದರೆ ಆ ದೇವರು ಅವೆಲ್ಲವನ್ನೂ ನನಗೆ ಕೊಟ್ಟ. ನಾನು ಈಗ ಎಲ್ಲರಿಗಿಂತ ಹೆಚ್ಚು ಸುಖಿಯಾಗಿದೀನಿ." 
     'ಅವನು ಸುಖವಾಗಿರುವ ಮುಖ ನೋಡು' ಅಂತ ಮಡ್ಡಿ ಮನಸ್ಸಿನ ಒಳಗೇ ಗೊಣಗಿಕೊಂಡವನು ಮಂಕನಿಗೆ ಕೇಳಿದ: "ಹೌದಪ್ಪಾ, ಅಂಥಾದ್ದೇನು ನೀನು ದೇವರನ್ನು ಕೇಳಿಕೊಳ್ಳದೇ ಇದ್ದದ್ದು?" 
     "ಅದನ್ನು ನೀವು ಕೇಳಬಾರದು, ನಾನು ಹೇಳಲೂಬಾರದು"-ಮಂಕನ ಉತ್ತರ.
     ಇವರ ಮಾತು ಕೇಳುತ್ತಿದ್ದ ಮೂಢ ಮೂಗು ತೂರಿಸಿದ: "ಮಂಕ ಹೇಳೋದು ಒಂದು ರೀತಿಯಲ್ಲಿ ಸರಿ. ಆಡದ ಮಾತುಗಳಿಂದಾಗಿ ಮತ್ತು ಕೇಳದ ಮಾತುಗಳಿಂದಾಗಿ ಜನ ಗೌರವ ಉಳಿಸಿಕೊಂಡಿದ್ದಾರೆ. ಆಡಲಾಗದ, ಆಡಬಾರದ ಮಾತುಗಳು ಅವರ ಒಳಗೇ ಬಂದಿಯಾಗಿರುತ್ತವೆ. ಅಂತಹ ಮಾತುಗಳು ಒಳಗೇ ಉಳಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆಂದು ಹೊರಗೆ ಬಂದರೆ ಆಗಲೂ ಕೈಕಾಲು ಅಲ್ಲದಿದ್ದರೂ ಮನಸ್ಸಾದರೂ ಮುರಿಯಬಹುದು.  ಮಾತುಗಳು ಒಳಗೆ ಇರುವವರೆಗೆ ಅದಕ್ಕೆ ನೀವು ಬಾಸ್, ಹೊರಬಿತ್ತೋ ಅವಕ್ಕೆ ನೀವೇ ದಾಸರು. ಮಾತುಗಳನ್ನು ನಾವು ಮುಟ್ಟೋಕಾಗಲ್ಲ. ಆದರೆ ಮಾತುಗಳು ನಮ್ಮನ್ನು ಮುಟ್ಟುತ್ತವೆ. ಮಂಕ ಬುದ್ಧಿವಂತ, ಅದಕ್ಕೇ ಅದೇನು ಅಂತ ಹೇಳ್ತಾ ಇಲ್ಲ. ಒಂದಲ್ಲಾ ಒಂದು ದಿನ ಯಾವುದಾದರೂ ರೀತಿಯಲ್ಲಿ ಹೊರಬರುತ್ತೆ ಬಿಡು. ಎಷ್ಟು ದಿನಾ ಅಂತ ಅದನ್ನು ಒಳಗೇ ಇಟ್ಟುಕೊಂಡು ಒದ್ದಾಡ್ತಾನೆ."
     ಅರ್ಥವಾಗದೆ ಕಣ್ಣು ಕಣ್ಣು ಬಿಟ್ಟು ನೋಡಿದ ಮರುಳ, "ಮಾತು ಆಡಕ್ಕಾಗಲ್ವಾ? ಒಳಗೇ ಇರ್ತಾವಾ? ಹೆಂಗೆ?" ಎಂದಾಗ ಮಡ್ಡಿ, "ಅಯ್ಯೋ, ಮರುಳೆ, ನೀನು ಒಂದು ಸುಂದರ ಹುಡುಗಿ ನೋಡ್ತೀಯ, ಅವಳು ಹೆಂಡತಿಯಾಗಿ ಸಿಕ್ಕರೆ ಅಂತ ಆಸೆ ಪಡ್ತೀಯಾ ಅಂತಿಟ್ಕೋ. ಆ ಹುಡುಗಿ ಕಾರಿನಲ್ಲಿ ಓಡಾಡೋಳು, ದೊಡ್ಡ ಶ್ರೀಮಂತ ಅಪ್ಪ. ನೀನೋ ಅಟ್ಲಾಸ್ ಸೈಕಲ್ ಮಾಲಿಕ.  ನೀನು ಅವರಪ್ಪನ್ನ ಅಥವ ಆ ಹುಡುಗೀನ ನಿನ್ನ ಆಸೆ ಬಗ್ಗೆ ಹೇಳಿಕೊಳ್ಳೋಕೆ ಆಗುತ್ತಾ? ಅದು ನಿನ್ನ ಗಂಟಲ ಕೆಳಗೇ ಉಳಿದುಹೋಗುತ್ತೆ. ಅರ್ಥ ಆಯ್ತಾ? ಇನ್ನೊಂದು ಉದಾಹರಣೆ ಹೇಳಬೇಕು ಅಂದರೆ, ಒಬ್ಬ ಹುಡುಗ ಒಂದು ಹುಡುಗಿಯನ್ನು ಪ್ರೀತಿಸ್ತಿದಾನೆ ಅಂತ ಇಟ್ಕೋ. ಆದರೆ ಅದನ್ನು ಹೇಳೋಕೆ ಅವನಿಗೆ ಧೈರ್ಯ ಇಲ್ಲ, ಸುಮ್ಮನೆ ಇರ್ತಾನೆ. ಆ ಹುಡುಗೀಗೂ ಅದೇ ಕಥೇ ಆಗಿದ್ದು ಅವಳದ್ದೂ ಅದೇ ಪರಿಸ್ಥಿತಿ ಅಂತ ಇಟ್ಕೋ. ಇಬ್ಬರೂ ಸುಮ್ಮನೆ ಇರ್ತಾರೆ. ಒಂದು ದಿನ ಅವರ ಅಪ್ಪ-ಅಮ್ಮಂದಿರು ಅವರುಗಳಿಗೆ ಬೇರೆ ಗಂಡು/ಹೆಣ್ಣು ನೋಡಿ ಮದುವೆ ಮಾಡ್ತಾರೆ. ಆಗ ಅವರ ಒಳಗಿನ ಮಾತುಗಳು ಒಳಗೇ, ಹೊರಗಿನ ಮಾತುಗಳು ಹೊರಗೇ ಇರ್ತಾವೆ. ಮುಗಿದು ಹೋಯಿತು, ಮಾತುಗಳು ಅಲ್ಲೇ ಸಮಾಧಿಯಾಗುತ್ತವೆ" ಎಂದವನೇ ತಾನು ಎಷ್ಟು ಬುದ್ಧಿವಂತ ಎಂಬಂತೆ ಉಳಿದವರ ಕಡೆ ಕಣ್ಣು ಹಾಯಿಸಿದ.  
     ಎಲ್ಲರ ತಟ್ಟೆಗಳಿಗೆ ಮತ್ತಷ್ಟು ಬೋಂಡ ತಂದು ಹಾಕುತ್ತಾ ಮುಠ್ಠಾಳ, "ಹೇಳಕ್ಕಾಗದೇ ಇದ್ರೆ ಏನಾಯ್ತು? ಒಳಗೇ ಇದ್ದರೆ ಇರಲಿ, ಏನಾಗುತ್ತೆ?"  ಬೋಂಡಾದ ಮುಲಾಜಿಗೆ ಉಳಿದವರು ಅವನನ್ನು ಹಂಗಿಸಲಿಲ್ಲ. ಮೂಢ ಹೇಳಿದ, "ಹೇಳದೆ ಇದ್ದರೆ ಆ ಮಾತುಗಳು ಒಳಗೇ ಕುಣೀತಾ ಇರ್ತವೆ. ಹೊರಗೆ ಬರಲು ಚಡಪಡಿಸ್ತಾ ಇರ್ತವೆ. ಆಗ ಅಸಮಾಧಾನ, ಅಸಹನೆ ಉಂಟಾಗಿ ಮನಸ್ಸಿಗೆ ಶಾಂತಿಯೇ ಇರಲ್ಲ. ಎದುರಿಗೆ ಇರುವವರನ್ನು ಹಂಗಿಸುವ ಇಚ್ಛೆ ಒಳಗೇ ಇದ್ದರೂ ಹಂಗಿಸಲಾರದೆ, ಮೂರನೆಯವರ ಎದುರಿಗೆ ಅಪರೋಕ್ಷವಾಗಿ ಬೇರೆ ರೀತಿಯಲ್ಲಿ ಮಾತುಗಳು ಹೊರಗೆ ಬಂದುಬಿಡುತ್ತವೆ. ತಮ್ಮ ಅಸಹನೆ ಸಂಬಂಧಿಸಿದವರಿಗೆ ಗೊತ್ತಾಗಲಿ ಎಂಬಂತೆ ಅವರ ವರ್ತನೆ ಇರುತ್ತದೆ. ಸಂಬಂಧಿಸಿದವರಿಗೆ ಹೇಳಲಾಗದ ಮಾತುಗಳನ್ನು ತಮ್ಮ ವಿಶ್ವಾಸದ ಸ್ನೇಹಿತರಲ್ಲಿ ಹೇಳಿಕೊಂಡು ಹಗುರಾಗುತ್ತಾರೆ. ಒಬ್ಬರಿಂದ ಒಬ್ಬರಿಗೆ ಹೋಗುತ್ತಾ ಆ ಮಾತುಗಳು ಉದ್ದೇಶಿಸಿದವರಿಗೂ ತಲುಪಿ ರಂಪ ರಾಮಾಯಣವೂ ಆಗುತ್ತೆ. ಈ ಆಡಲಾಗದ, ಆಡದೇ ಇರುವ ಮಾತುಗಳು ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ."
     ಮಂಕ, "ಅನ್ನಿ, ಅನ್ನಿ. ನೀವು ನನ್ನನ್ನೇ ಅಂತಾ ಇರೋದು ಅಂತ ನನಗೆ ಗೊತ್ತು. ಒಂದು ವಿಷಯ ತಿಳ್ಕೊಳ್ಳಿ, ಮಾತುಗಳು ಮತ್ತು ಹೃದಯಗಳ ಬಗ್ಗೆ ಜೋಪಾನವಾಗಿರಬೇಕು. ಮಾತುಗಳನ್ನು ಆಡುವ ಮುನ್ನ ಮತ್ತು ಹೃದಯಗಳು ಒಡೆಯುವ ಮುನ್ನ ಎಚ್ಚರಿಕೆ ಇರಬೇಕು ಅನ್ನುವುದು ನೆನಪಿರಲಿ" ಅಂದ. ಎಲ್ಲರೂ ಮಂಕನ ಮೇಲೆ ಮುಗಿಬಿದ್ದರು. "ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳುತ್ತೀಯ? ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಸಿದ್ದಪ್ಪ ಎದೆ ಒಡೆದುಕೊಂಡ ಅಂದ ಹಾಗೆ ಆಯ್ತು ನಿನ್ನ ಮಾತು" ಎಂದರು. ಮಂಕನಿಗೆ ಸಿಟ್ಟು ಬಂದು ಹೇಳಿದ, "ನಾನು ಹೇಳಿದ್ದರಲ್ಲಿ ತಪ್ಪೇನಿದೆ, ನಾವು ಏನು ಯೋಚನೆ ಮಾಡ್ತೀವೋ ಅದರ ಬಗ್ಗೆ ಎಚ್ಚರವಾಗಿರಬೇಕು ಅಂತ ಹೇಳಿದ್ದು. ಏಕೆಂದರೆ ಅವೇ ಮಾತುಗಳಾಗಿ ಹೊರಬರೋದು." "ಆಂ?" ಅಂತ ಎಲ್ಲರೂ ತಲೆ ಕೆರೆದುಕೊಂಡರು. 'ಬಾಯಿ ಬಿಟ್ಟರೆ ಬಣ್ಣಗೇಡು' ಅಂತ ಅವನ ಬಗ್ಗೆ ಆಡಿಕೊಳ್ತಾ ಇದ್ದವರು ಮಂಕ ಈರೀತಿ ಮಾತು ಎಲ್ಲಿ ಕಲಿತ ಅಂತ ಆಶ್ಚರ್ಯಪಟ್ಟರು. 
     "ಆಡಲು ಏನೋ ಇದೆ, ಆದರೆ ಆಡಲಾಗುವುದಿಲ್ಲ ಎಂಬಂತಹ ಜನರಿಂದಲೇ     ಈ ಪ್ರಪಂಚ ತುಂಬಿಹೋಗಿದೆ. ಬುದ್ಧಿವಂತರು ಏನೋ ಹೇಳುತ್ತಾರೆ, ಅವರಿಗೆ ಏನೋ ಹೇಳಲು ಇರುತ್ತದೆ. ದಡ್ಡರೂ ಏನೋ ಹೇಳಬೇಕು ಅಂತಾ ಹೇಳ್ತಾರೆ"-ಮೂಢ ಹೇಳಿದ ಈ ಮಾತು ಯಾರಿಗೂ ಅರ್ಥವಾಗಲಿಲ್ಲ. ಮರುಳ ಕೇಳೇಬಿಟ್ಟ, "ಹಂಗಂದ್ರೆ?" ಮೂಢ ಹೇಳಿದ, "ನಂಗೂ ಸರಿಯಾಗಿ ಗೊತ್ತಿಲ್ಲ, ನಮ್ಮ ಗುರುಗಳು ಮೊನ್ನೆ ಹೇಳಿದರು, ಅದನ್ನೇ ನಿಮಗೆ ಹೇಳಿದೆ."
    ಇಷ್ಟು ಹೊತ್ತು ಸುಮ್ಮನೇ ಇದ್ದ ಮಡ್ಡಿ ಇನ್ನೂ ಸುಮ್ಮನೆ ಇದ್ದರೆ ತನ್ನನ್ನು ದಡ್ಡ ಅನ್ನುತ್ತಾರೆ ಅಂದುಕೊಂಡು ಬಾಯಿಬಿಟ್ಟ, "ಎಲ್ಲರೂ ಯಾಕೆ ಚರ್ಚೆ ಮಾಡುತ್ತಾರೆ ಗೊತ್ತಾ, ದೊಡ್ಡ ಬಾಯಿ ಮಾಡಿ ಬೇರೆಯವರ ಬಾಯಿ ಮುಚ್ಚಿಸುತ್ತಾರೆ ಗೊತ್ತಾ? ತಾವೇ ಬುದ್ಧಿವಂತರು, ತಮಗೇ ಹೆಚ್ಚು ತಿಳಿದಿದೆ, ಉಳಿದವರಿಗಿಂತ ತಾವೇ ಒಳ್ಳೆಯವರು, ತಾವೇ ಹೆಚ್ಚು ಕಷ್ಟಪಟ್ಟವರು, ತಾವೇ ಹೆಚ್ಚು ಅಂತ ತೋರಿಸಿಕೊಳ್ಳೋಕೆ. ತಮ್ಮ ಮಾತು ಕೇಳಿದರೆ ಪ್ರಪಂಚ ಉದ್ಧಾರ ಆಗುತ್ತೆ ಅಂತ ಅವರು ಅಂದುಕೊಳ್ತಾರೆ." ಗಂಟಲು ದೊಡ್ಡದು ಮಾಡಿಕೊಂಡು ವಿಷಯಕ್ಕೆ ಸಂಬಂಧಿಸದಿದ್ದ ಮಾತನಾಡಿದ ಮಡ್ಡಿಯನ್ನು ಎಲ್ಲರೂ ಬಾಯಿಬಿಟ್ಟುಕೊಂಡು ನೋಡಿದರು. ಯಾರಿಂದಲೂ ಪ್ರತಿಕ್ರಿಯೆ ಬರದಿದ್ದರಿಂದ ಮಡ್ಡಿಯ ಮುಖ ದಪ್ಪಗಾಯಿತು. 
     "ಅಪ್ಪಂದಿರಾ, ಇನ್ನು ಬೋಂಡಾ ಇಲ್ಲ, ಮುಗೀತು. ಕಾಫಿ ಕುಡಿದು ಜಾಗ ಖಾಲಿ ಮಾಡಿ. ಅಪ್ಪಾ, ಮೂಢೋತ್ತಮ, ವಂದನಾರ್ಪಣೆ ಮಾಡಿ ಮುಗಿಸಿಬಿಡು" - ಮುಠ್ಠಾಳ ಆರ್ಡರ್ ಮಾಡಿದಾಗ, ಎಲ್ಲರಿಗೂ ಏನೋ ಆಡಬೇಕು ಅನ್ನಿಸಿದರೂ ಆಡದೆ ಸುಮ್ಮನಾದರು. ಮೂಢ ಎಲ್ಲರ ಮುಖವನ್ನೂ ನೋಡುತ್ತಾ ಹೇಳಿದ: "ಗೆಳೆಯರೆ, ಸಂಬಂಧಗಳು ಚೆನ್ನಾಗಿರಬೇಕು, ತಮಗೆ ಕೆಡುಕಾಗಬಾರದು ಅನ್ನುವ ಕಾರಣಕ್ಕೆ ಜನ ತಮ್ಮ ಮನಸ್ಸಿನಲ್ಲಿ ಇರುವುದೇ ಒಂದಾದರೂ ಹೊರಗೆ ಆಡುವುದೇ ಬೇರೆ ತೋರಿಕೆಯ ಮಾತುಗಳು. ಅವುಗಳು ಗಟ್ಟಿ ಮಾತುಗಳಲ್ಲವಾದ್ದರಿಂದ ಅಂತಹ ಮಾತುಗಳ ಪ್ರಭಾವ ಕಡಿಮೆ. ಅವು ತೋರಿಕೆ ಮಾತುಗಳು ಅಂತಾ ಗೊತ್ತಾದಾಗ ಅದನ್ನು ಆಡಿದವರ ಬೆಲೆ ಸಹ ಕಡಿಮೆ ಆಗುತ್ತೆ. ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳಿದ್ದರೆ ಒಳ್ಳೆಯ ಮಾತುಗಳು ಬರುತ್ತವೆ. ಕೆಟ್ಟ ವಿಚಾರಗಳಿದ್ದರೆ ಆಡಲಾಗದ ಮಾತುಗಳು ಹುಟ್ಟುತ್ತವೆ. ಅದು ಹೆಚ್ಚು ಕಾಟ ಕೊಡುವುದು ಆ ಮಾತುಗಳನ್ನು ಹುಟ್ಟಿಸಿದವರಿಗೇ. ಆದ್ದರಿಂದ ಒಳ್ಳೆಯ ವಿಚಾರ ಮನಸ್ಸಿನಲ್ಲಿ ಬರುವಂತೆ ಮಾಡು ಅಂತ ದೇವರಲ್ಲಿ ಕೇಳಿಕೊಳ್ಳೋಣ. ಸರ್ವಜ್ಞನ ವಚನ ಹೇಳಿ ಮಾತು ಮುಗಿಸುತ್ತೇನೆ.  'ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಆಡಿಯೂ ಮಾಡದವ ಅಧಮ ಸರ್ವಜ್ಞ'." ಮೂಢ ಮಾತು ಮುಗಿಸುತ್ತಿದ್ದಂತೆಯೇ "ಆಡುವುದಕ್ಕೆ ಆಗದೆ ಇರುವವನು?" ಎಂಬ ಮಾತು ಕೇಳಿಬಂತು. ಎಲ್ಲರೂ ತನ್ನನ್ನು ದುರುಗುಟ್ಟಿ ನೋಡಿದರೂ ನಸುನಗುತ್ತಾ ಇದ್ದ ಮುಠ್ಠಾಳನಿಗೆ ಗೊತ್ತಿತ್ತು, ಕಾಫಿ, ತಿಂಡಿ ಮುಲಾಜಿಗೆ ಯಾರೂ ಏನೂ ಆಡಲಾರರು ಅಂತ!
********************
-ಕ.ವೆಂ.ನಾಗರಾಜ್.

ಗುರುವಾರ, ಮಾರ್ಚ್ 27, 2014

ನಾಲ್ಕು - ಐದು - ಆರು

     ಮಹಾಭಾರತದ ಉದ್ಯೋಗ ಪರ್ವದ ೩೩ರಿಂದ೪೦ರವರೆಗಿನ ಎಂಟು ಅಧ್ಯಾಯಗಳಲ್ಲಿ ವಿದುರ ಧೃತರಾಷ್ಟ್ರನಿಗೆ ನ್ಯಾಯಯುತ ಮಾರ್ಗದ ಕುರಿತು ತಿಳಿಸಿ ಹೇಳುವುದರೊಂದಿಗೆ, ನಡವಳಿಕೆಗಳು, ಸದಾಚಾರ, ಮಾತು, ನೀತಿ, ಧರ್ಮ, ಸುಖ-ದುಃಖಗಳ ಪ್ರಾಪ್ತಿ, ನ್ಯಾಯ-ಅನ್ಯಾಯ, ಸತ್ಯ, ಅಹಿಂಸೆ, ಕ್ಷಮೆ, ಮಿತ್ರ-ಶತ್ರುಗಳಾರು, ಮುಂತಾದ ಸಂಗತಿಗಳ ಬಗ್ಗೆ ತಿಳುವಳಿಕೆ ನೀಡಿರುವ ಬಗೆಗೂ ವಿಸ್ತೃತವಾಗಿ ವಿವರಿಸಲಾಗಿದೆ. ಪ್ರಾಸಂಗಿಕವಾಗಿ ವಿದುರ ನೀತಿಯ ಕೆಲವು ತುಣುಕುಗಳನ್ನು ನಿಮ್ಮೊಡನೆ ಹಂಚಿಕೊಳ್ಳುವೆ.
ನಾಲ್ಕು:
೧. ಅಲ್ಪ ಬುದ್ಧಿಯವರೊಡನೆ, ಕೆಲಸವನ್ನು ನಿಧಾನವಾಗಿ ಮಾಡುವವರೊಡನೆ, ಆತುರದಿಂದ ಕೆಲಸ ಮಾಡುವವರೊಡನೆ ಮತ್ತು ಸದಾ ಹೊಗಳುವವರೊಡನೆ ಮಂತ್ರಾಲೋಚನೆ ಮಾಡಬಾರದು.
೨. ಮನೆಯಲ್ಲಿ ಕುಟುಂಬದ ವೃದ್ಧ, ಕಷ್ಟದಲ್ಲಿರುವ ಸಜ್ಜನ, ಧನಹೀನನಾದ ಸ್ನೇಹಿತ ಮತ್ತು ಮಕ್ಕಳಿಲ್ಲದ ಸೋದರಿಗೆ ಆಶ್ರಯ ನೀಡಬೇಕು.
೩. ದೇವತೆಗಳ ಸಂಕಲ್ಪ, ಮಹಾಮಹಿಮರ ಅನುಗ್ರಹ, ವಿದ್ಯಾವಂತರ ವಿನಯ ಮತ್ತು ದುರ್ಜನರ ನಾಶಗಳು ಮಂಗಳಕಾರಿಯಾದವು.
೪. ಶ್ರದ್ಧೆಯಿಂದ ಮಾಡಿದ ಅಗ್ನಿಹೋತ್ರ, ಮೌನ, ಆಧ್ಯಯನ ಮತ್ತು ಯಜ್ಞಗಳು ಫಲಕಾರಿ. ಅಶ್ರದ್ಧೆಯಿಂದ ಮಾಡಿದಲ್ಲಿ ಅಹಿತಕಾರಿ.
ಐದು:
೧. ತಂದೆ, ತಾಯಿ, ಯಜ್ಞೇಶ್ವರ, ಆತ್ಮ ಮತ್ತು ಗುರು - ಈ ಐವರನ್ನು ಪ್ರಜ್ಞಾಪೂರ್ವಕವಾಗಿ ಗೌರವಿಸಬೇಕು.
೨. ದೇವತೆಗಳು, ಪಿತೃಗಳು, ಮನುಷ್ಯರು, ಸಂನ್ಯಾಸಿಗಳು ಮತ್ತು ಅತಿಥಿಗಳನ್ನು ಸತ್ಕರಿಸುವವರು ಕೀರ್ತಿಶಾಲಿಗಳಾಗುತ್ತಾರೆ.
೩. ಸ್ನೇಹಿತರು,   ಶತ್ರುಗಳು, ಮಧ್ಯಮರು, ಆಶ್ರಯದಾತರು ಮತ್ತು ಆಶ್ರಯ ಪಡೆದಿರುವವರು - ಇವರುಗಳು ಎಲ್ಲಿಗೆ ಹೋದರೂ ಹಿಂಬಾಲಿಸುತ್ತಾರೆ.
೪. ಪಂಚೇಂದ್ರಿಯಗಳಲ್ಲಿ ಯಾವುದೇ ಒಂದಕ್ಕೆ ಹಾನಿಯಾದರೂ (ವಿಷಯಲಾಲಸೆಗೆ ಒಳಗಾದರೂ) ಮನುಷ್ಯನ ವಿವೇಕವು ಪಾತ್ರೆಯ ರಂಧ್ರದಿಂದ ನೀರೆಲ್ಲವೂ ಸೋರಿಹೋಗುವಂತೆ ಪೂರ್ಣವಾಗಿ ನಷ್ಟವಾಗುತ್ತದೆ.
ಆರು:
೧. ಉನ್ನತ ಸ್ಥಿತಿ ಗಳಿಸಬೇಕೆಂದರೆ ನಿದ್ರೆ, ತೂಕಡಿಕೆ, ಭಯ, ಸಿಟ್ಟು, ಸೋಮಾರಿತನ ಮತ್ತು ವಿಳಂಬ ನೀತಿಯಿಂದ ದೂರವಿರಬೇಕು.
೨. ಜ್ಞಾನವನ್ನು ಹಂಚದ ಗುರು, ಅಧ್ಯಯನ ಮಾಡದ ಋತ್ವಿಜ, ದುರ್ಬಲ ರಾಜ, ಅಪ್ರಿಯವಾಧಿನಿ ಪತ್ನಿ, ಸದಾ ಊರಿನಲ್ಲೇ ಇರಬಯಸುವ ಗೋಪಾಲಕ ಮತ್ತು ವನದಲ್ಲಿ ಇರಬಯಸುವ ಕ್ಷೌರಿಕ - ಈ ಆರು ಜನರನ್ನು ಸಮುದ್ರದಲ್ಲಿ ರಂಧ್ರ ಬಿದ್ದ ನಾವೆಯಂತೆ ದೂರವಿರಿಸಬೇಕು.
೩. ಸತ್ಯ, ದಾನ, ಸೋಮಾರಿಯಾಗದಿರುವುದು, ಅಸೂಯಾಪರನಾಗದಿರುವುದು, ಕ್ಷಮಾಗುಣ, ಧೈರ್ಯ - ಈ ಗುಣಗಳನ್ನು ಎಂದಿಗೂ ಬಿಡಬಾರದು.
೪. ಮನುಷ್ಯನಿಗೆ ಸುಖ-ಸಂತೋಷಗಳನ್ನು ನೀಡುವ ಸಂಗತಿಗಳೆಂದರೆ, ಧನಪ್ರಾಪ್ತಿ, ಒಳ್ಳೆಯ ಆರೋಗ್ಯ, ಅನುಕೂಲವತಿ ಜೊತೆಗೆ ಪ್ರಿಯವಾದಿನಿ ಸತಿ, ವಿಧೇಯ ಮಗ, ಧನಸಂಪಾದನೆಗೆ ನೆರವಾಗುವ ವಿದ್ಯೆ.
೫. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹಗಳ ಮೇಲೆ ಪ್ರಭುತ್ವ ಸಾಧಿಸುವವನು ಪಾಪಗಳಿಂದ ಮುಕ್ತನಾಗಿರುತ್ತಾನೆ.
೬. ಕಳ್ಳರು ಅಜಾಗರೂಕ ಜನರಿಂದ, ವೈದ್ಯರು ರೋಗಿಗಳಿಂದ, ಕಾಮಿನಿಯರು ಕಾಮುಕರಿಂದ, ಪುರೋಹಿತರು ಯಾಗ ಮಾಡುವವರಿಂದ, ವಿವಾದಗಳಲ್ಲಿ ತೊಡಗಿರುವ ಪ್ರಜೆಗಳಿಂದ ರಾಜ ಜೀವಿತಗಳನ್ನು ಕಂಡುಕೊಳ್ಳುತ್ತಾರೆ.
೭. ಉಪೇಕ್ಷೆ ಮಾಡಿದರೆ ಗೋವು, ಸೇವೆ, ಕೃಷಿ, ಪತ್ನಿ, ವಿದ್ಯೆ, ಸೇವಕ -  ಈ ಆರು ಸಂಗತಿಗಳು ಕೈಬಿಡುತ್ತವೆ.
೮. ವಿದ್ಯಾಭ್ಯಾಸದ ನಂತರ ಶಿಷ್ಯರು ಗುರುವನ್ನು, ವಿವಾಹದ ನಂತರ ಮಕ್ಕಳು ತಾಯಿಯನ್ನು, ಕಾಮವಾಂಛೆ ತೀರಿದ ನಂತರ ಪುರುಷನು ಸ್ತ್ರೀಯನ್ನು, ಕೆಲಸ ಪೂರ್ಣವಾದನಂತರ ಅದಕ್ಕೆ ನೆರವಾದವರನ್ನು, ಹೊಳೆ ದಾಟಿದ ಮೇಲೆ ಅಂಬಿಗನನ್ನು ಮತ್ತು ಕಾಯಿಲೆ ಗುಣವಾದ ನಂತರ ರೋಗಿಯು ವೈದ್ಯನನ್ನು ಉಪೇಕ್ಷಿಸುತ್ತಾರೆ.
೯. ಸುಖವೆಂದರೆ ಆರೋಗ್ಯವಾಗಿರುವುದು, ಸಾಲರಹಿತನಾಗಿರುವುದು, ವಿದೇಶಕ್ಕೆ ಹೋಗದಿರುವುದು, ಸಜ್ಜನ ಸಹವಾಸ, ಮನಸ್ಸಿಗೆ ಒಪ್ಪುವ ಕೆಲಸ ಮತ್ತು ಸ್ವಾತಂತ್ರ್ಯ.
೧೦. ನಿತ್ಯ ದುಃಖಿಗಳಿವರು: ಅಸೂಯಾಪರರು, ದುರಾಸೆಯವರು, ಅತೃಪ್ತರು, ಶೀಘ್ರಕೋಪಿಗಳು, ಪ್ರತಿಯೊಂದನ್ನೂ ಸಂಶಯ ದೃಷ್ಟಿಯಿಂದ  ನೋಡುವವರು, ಇತರರ ಗಳಿಕೆಯಿಂದ ಬಾಳುವವರು.
     ವಿದುರ ನೀತಿಯಲ್ಲಿ ಸಜ್ಜನ-ಸಾಧಕರಿಗೆ ಇರಬೇಕಾದ ನೂರಾರು ಕಲ್ಯಾಣಕಾರಿ ಗುಣಗಳ ಬಗ್ಗೆ ಮಾಹಿತಿ, ಮಾರ್ಗದರ್ಶನಗಳು ಇದ್ದರೂ ಈ ೪-೫-೬ ಅಂಶಗಳನ್ನು ಮಾತ್ರ ಹೆಕ್ಕಿ ಲೇಖನವಾಗಿಸಿದುದರ ಕಾರಣವೆಂದರೆ, ಇದು 'ಸಂಪದ'ದಲ್ಲಿನ ನನ್ನ ೪೫೬ನೆಯ ಬರಹ!
-ಕ.ವೆಂ.ನಾಗರಾಜ್.
[ಆಧಾರ: ಮಹಾಭಾರತದ ಉದ್ಯೋಗ ಪರ್ವದ ೩೩ನೆಯ ಅಧ್ಯಾಯ.]
ಚಿತ್ರ ಕೃಪೆ: http://en.wikipedia.org/wiki/File:Vidura_and_Dhritarashtra.jpg

ಸೋಮವಾರ, ಮಾರ್ಚ್ 24, 2014

ನಂಬಿಕೆಯೇ ಮಾರ್ಗದರ್ಶಿ


     ಈ ಚಿತ್ರವನ್ನು ಗಮನಿಸಿ. ಆಫ್ರಿಕಾದ ಬೋಟ್ಸ್ವಾನಾದಲ್ಲಿ ಒಬ್ಬ ತಾಯಿ ತನ್ನ ಮಗುವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಕೈಯಲ್ಲಿ ಒಂದು ಪಾತ್ರೆ ಹಿಡಿದುಕೊಂಡು ಎದೆಮಟ್ಟದ ನೀರಿನಲ್ಲಿ ಸಾಗುತ್ತಿದ್ದಾಳೆ. ಇಲ್ಲಿ ಮಮತಾಮಯಿ ತಾಯಿಯ ಜೊತೆಗೆ ಮಗುವೂ ಕೈಕಾಲುಗಳ ಸಹಿತ ಸೊಂಟದವರೆಗೆ ನೀರಿನಲ್ಲಿ ಮುಳುಗಿದ್ದರೂ ನಿಶ್ಚ್ಚಿಂತೆಯಾಗಿ ತಾಯಿಯ ಬೆನ್ನಿನ ಮೇಲೆ ಒರಗಿ ನಿದ್ರಿಸುತ್ತಿರುವುದು ಗಮನ ಸೆಳೆಯುತ್ತದೆ. ತಾಯಿಯ ತೆಕ್ಕೆಯಲ್ಲಿ ತಾನು ಸುಭದ್ರನೆಂಬ ನಂಬಿಕೆ ಈ ಮಗುವಿನ ನಿರಾಳತೆಗೆ ಕಾರಣ. ನಿಜವಾಗಿಯೂ ನಂಬಿಕೆಗೆ ಎಂತಹ ಅದ್ಭುತ ಶಕ್ತಿಯಿದೆ! ನಂಬಿಕೆಯಲ್ಲಿ ನೆಮ್ಮದಿಯಿದೆ. ಮಾನವನಲ್ಲದೆ ಪ್ರಾಣಿಲೋಕದಲ್ಲಿಯೂ ಪರಸ್ಪರ ಪ್ರೀತಿ-ವಿಶ್ವಾಸಗಳಿಂದೊಡಗೂಡಿದ ನಂಬಿಕೆಯನ್ನು ಪುಷ್ಟೀಕರಿಸುವ ಸಂಗತಿಗಳು ಸಿಗುತ್ತವೆ.
    ಈ ದೇವರ ಸೃಷ್ಟಿಯಲ್ಲಿ ಕೆಟ್ಟದ್ದು ಎಂಬುದು ಯಾವುದೂ ಇಲ್ಲ. ಯಾವುದಾದರೂ ಕೆಟ್ಟದ್ದು ಇದ್ದರೆ ಅದು ನಾವು ನೋಡುವ, ಬಳಸುವ ರೀತಿಯಿಂದ ಮಾತ್ರ. ಪ್ರತಿಯೊಂದಕ್ಕೂ ಹಲವು ಮುಖಗಳಿರುತ್ತವೆ. ಅದೇ ರೀತಿ ನಂಬಿಕೆಗೂ ಹಲವು ಮುಖಗಳಿರುತ್ತವೆ. ಅದಕ್ಕೆ ಕಾರಣ ನಂಬಿಕೆ ಎಂದು ನಾವು ನಂಬಿರುವುದರಲ್ಲಿನ ಸಂಗತಿಗಳ ವೈಪರೀತ್ಯಗಳೂ ಕಾರಣವಾಗುತ್ತವೆ. ಹಾಗಾಗಿ ನಂಬಿಕೆ ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು, ಒಂದು ಚಾಕುವನ್ನು ಒಳ್ಳೆಯದು ಮತ್ತು ಕೆಟ್ಟದ್ದು, ಎರಡಕ್ಕೂ ಬಳಸಬಹುದಾಗಿರುವಂತೆ! ನಂಬಿಕೆಯಿಂದ ಜೀವನ ಸುಗಮವಾಗುವುದೇನೋ ನಿಜ, ಆದರೆ ನಂಬಿಕೆಯೇ ಜೀವನವಾಗಬಾರದು ಎಂಬದೂ ಅಷ್ಟೇ ಸರಿ. ಏಕೆಂದರೆ ನಂಬಿಕೆ ಅನ್ನುವುದು ಕಾಲ, ಮಾನ, ದೇಶ, ಪರಿಸ್ಥಿತಿ/ಸಂದರ್ಭಗಳಿಗನುಸಾರವಾಗಿ ಬದಲಾಗಬಹುದಾಗಿರುತ್ತದೆ. ಸ್ವಂತದ ಅನುಭವಗಳಿಂದ ನಂಬಿಕೆಯ ನೆಲೆಗಟ್ಟು ಭದ್ರಗೊಳ್ಳುತ್ತದೆ. ನಿಜವಾದ ನಂಬಿಕೆ ಅನುಭವದಿಂದಲೇ ಬರಬೇಕು.
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ಹಿರಿಯ ನಿಜವರಿತು ನಡೆವ ಮೂಢ ||
     ನಂಬಿಕೆಗೆ ಧಾರ್ಮಿಕ, ಸಾಮಾಜಿಕ, ಐತಿಹಾಸಿಕ, ವೈಜ್ಞಾನಿಕ, ಮುಂತಾದ ಹಲವು ಆಯಾಮಗಳಿವೆ. ಧಾರ್ಮಿಕವಾಗಿ ನಂಬಿಕೆಯಿಂದ ಪ್ರಯೋಜನವೂ ಆಗಿದೆ, ಅನಾಹುತಗಳೂ ಆಗಿವೆ. ಸಾಮಾನ್ಯಗೊಳಿಸಿ ಹೇಳಬೇಕೆಂದರೆ ಪ್ರಚಲಿತವಿರುವ ಎಲ್ಲಾ ಧರ್ಮಗಳು, ಮತಗಳು, ಪುರಾಣ-ಪುಣ್ಯಕಥೆಗಳು, ಧರ್ಮಗ್ರಂಥಗಳು ಗಿರಕಿ ಹೊಡೆಯುವುದು ಜಗತ್ತು, ಜೀವ ಮತ್ತು ದೇವ - ಈ ಮೂರರ ಸುತ್ತಲೇ! ವಿವಿಧ ಧರ್ಮಗಳು, ಧರ್ಮಗ್ರಂಥಗಳು ಈ ಮೂರನ್ನು ವಿವಿಧ ರೀತಿಯಲ್ಲಿ ವಿವರಿಸುತ್ತಿದ್ದು, ವಿವಿಧ ಧರ್ಮಾನುಯಾಯಿಗಳು ತಮ್ಮ ತಮ್ಮ ಧರ್ಮಗ್ರಂಥಗಳು, ಧರ್ಮಗುರುಗಳು ಹೇಳಿದಂತೆ ನಂಬಿಕೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿದ್ದಾರೆ. ಒಂದಂತೂ ಸತ್ಯ, ಈ ಮೂರು ಸಂಗತಿಗಳು ಯಾವುದೇ ರೀತಿಯಲ್ಲಿ ವಿಶ್ಲೇಷಣೆಗೆ ಒಳಪಡಲಿ, ಅವುಗಳು ಇರುವ ರೀತಿಯಲ್ಲಿ ಇರುತ್ತವೆಯೇ ಹೊರತು ವಿಶ್ಲೇಷಣೆಗೆ ತಕ್ಕಂತೆ ಬದಲಾಗಲಾರವು. ಉತ್ತಮವಾದ ಅಂಶವೆಂದರೆ ಎಲ್ಲಾ ಧರ್ಮಗಳು ಮಾನವರು ಇರುವ ಸ್ಥಿತಿಗಿಂತ ಮೇಲೇರಲು ಹೇಗೆ ಇರಬೇಕೆಂಬುದನ್ನು ಹೇಳುತ್ತವೆ. ನಾಗರಿಕ ಧರ್ಮದ ಮೂರು ಅಭಿನ್ನ ಅಂಗಗಳೆಂದು ಗುರುತಿಸಲ್ಪಟ್ಟವು ಜ್ಞಾನ, ಕರ್ಮ ಮತ್ತು ಉಪಾಸನೆಗಳು. ಇರುವ ಸ್ಥಿತಿಗಿಂತ ಮೇಲೇರಲು ಜ್ಞಾನವಿರಬೇಕು. ತಿಳಿವಳಿಕೆಯಿದ್ದರೆ ಆಗಲಿಲ್ಲ, ಅದು ಆಚರಣೆಗೆ ಬರದಿದ್ದರೆ ಅರ್ಥವಿರುವುದಿಲ್ಲ, ಆದ್ದರಿಂದ ವಿಚಾರ ಆಚಾರವಾಗಲು ಕರ್ಮ ಮಾಡಬೇಕು. ಇನ್ನು ಮೂರನೆಯದು ಉಪಾಸನೆ. ಉಪಾಸನೆ ಎಂದರೆ (ದೇವರ) ಸಮೀಪ ಕುಳಿತುಕೊಳ್ಳುವುದು ಎಂದರ್ಥ. ದೇವರ ಸಮೀಪ ಕುಳಿತುಕೊಳ್ಳುವುದೆಂದರೆ ತಮ್ಮನ್ನು ತಾವು ಅರ್ಥ ಮಾಡಿಕೊಂಡು, ಜೀವನವನ್ನು ಅರ್ಥಪೂರ್ಣಗೊಳಿಸಿಕೊಂಡು ದೇವರಿಗೆ ಮಾನಸಿಕವಾಗಿ ಹತ್ತಿರವಿರುವುದೇ ಆಗಿದೆ. ಇದಕ್ಕಾಗಿ ಉಪಾಸನೆಯನ್ನು ಭಕ್ತಿ, ಅರ್ಚನೆ, ಪೂಜೆ, ಇತ್ಯಾದಿಗಳಿಂದಲೂ ಹೆಸರಿಸುತ್ತಾರೆ. ಇಲ್ಲಿ ಉಪಾಸನೆ ಮಾಡಲು ಮೂಲ ಆಧಾರವೇ ತಾವು ನಂಬಿದ ತತ್ವ, ಆದರ್ಶ, ಗುರಿ, ಧ್ಯೇಯ, ಇತ್ಯಾದಿಗಳಲ್ಲಿ ಇರಿಸುವ ನಂಬಿಕೆ. ಅಚಲ ನಂಬಿಕೆ ಇದ್ದಲ್ಲಿ ಮಾತ್ರ ಮುಂದುವರೆಯಲು ಸಾಧ್ಯ. ಇಲ್ಲದಿದ್ದಲ್ಲಿ ಇವೆಲ್ಲವೂ ಕಪಟ ಆಚರಣೆಗಳಾಗಿ ಉಳಿದುಬಿಡುತ್ತವೆ. ಒಂದೊಮ್ಮೆ ಅಗತ್ಯವೆನಿಸಿದ್ದ ಆಚರಣೆಗಳು, ಕಾಲಾನುಕ್ರಮದಲ್ಲಿ ಅಗತ್ಯವೆನಿಸದೇ ಹೋಗಬಹುದು. ಅಂತಹ ಅಗತ್ಯವೆನಿಸದ ಮತ್ತು ಇಂದಿನ ಸಮಯದಲ್ಲಿ ಅಪ್ರಸ್ತುತವೆನಿಸುವ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗುವುದು ಮೂಢನಂಬಿಕೆಗಳೆನಿಸುತ್ತವೆ. ಮೂಢನಂಬಿಕೆಗಳ ಕುರಿತು ಜಿಜ್ಞಾಸೆಗಳು, ಚರ್ಚೆಗಳು ಬಹಳಷ್ಟು ಈಗಾಗಲೇ ಆಗಿರುವುದರಿಂದ ಆ ಕುರಿತು ಮತ್ತೊಮ್ಮೆ ಚರ್ಚಿಸುವ ಅಗತ್ಯ ಕಾಣುವುದಿಲ್ಲ.
     ನಂಬಿಕೆಯೇ ಸತ್ಯವೋ ಅಥವ ಸತ್ಯವೇ ನಂಬಿಕೆಯೋ? ಇದೊಂದು ಬಿಡಿಸಲಾಗದ ಕಗ್ಗಂಟು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಏಕೆಂದರೆ ಒಬ್ಬೊಬ್ಬರ ನಂಬಿಕೆ ಒಂದೊಂದು ತರಹ ಇರುತ್ತದೆ. ಅವರವರ ನಂಬಿಕೆಗಳು ಅವರವರಿಗೆ ಇದ್ದು, ಅದರಂತೆ ಇದ್ದರೆ ಯಾರಿಗೂ ಬಾಧಕವಿಲ್ಲ. ಆದರೆ ಸಮಸ್ಯೆ ಶುರುವಾಗುವುದು ನಮ್ಮ ನಂಬಿಕೆಯೇ ಸರಿ, ನಾವು ನಂಬಿದ್ದೇ ಸರಿ, ಅದನ್ನೇ ಎಲ್ಲರೂ ನಂಬಬೇಕು ಎಂದು ಪ್ರತಿಪಾದಿಸುವಾಗಲೇ. ನಂಬಿಕೆ ತಪ್ಪಲ್ಲ, ಆದರೆ ನಂಬಿಕೆಯನ್ನು ಇತರರ ಮೇಲೆ ಹೇರುವುದು ತಪ್ಪಾಗುತ್ತದೆ. ಬಡತನ, ಅಜ್ಞಾನಗಳನ್ನು ದುರುಪಯೋಗಪಡಿಸಿಕೊಂಡು, ಆಸೆ, ಆಮಿಷಗಳನ್ನೊಡ್ಡಿ ಮತಾಂತರಿಸುವುದು, ತಮ್ಮ ಮತವನ್ನು, ದೇವರನ್ನು ಒಪ್ಪದವರನ್ನು ಕೀಳಾಗಿ ಕಾಣುವುದು, ಮತಾಂಧರ ಭಯೋತ್ಪಾದನೆ, ಜಿಹಾದ್,  ಇತ್ಯಾದಿಗಳು ತಮ್ಮ ನಂಬಿಕೆಯನ್ನು ಇತರರ ಮೇಲೆ ಹೇರುವ ಪ್ರಯತ್ನಗಳೇ ಆಗಿವೆ. ತಮ್ಮ ತಮ್ಮ ಇಷ್ಟದ ದೇವರು, ಧರ್ಮ, ಆದರ್ಶ, ಗುರಿಗಳಲ್ಲಿ ನಂಬಿಕೆ ಇರಿಸಿಕೊಳ್ಳುವುದು ಆಧ್ಯಾತ್ಮಿಕ ಸಾಧನೆಗೆ ಸಹಕಾರಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಉನ್ನತ ಸ್ತರದವರಲ್ಲಿ ಸಾಧನೆಗೆ ನೆರವಾಗುವ ಇಂತಹ ನಂಬಿಕೆ, ಕೆಳಸ್ತರದವರಲ್ಲಿ ಇನ್ನೊಂದು ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ಅದೆಂದರೆ, ತಮ್ಮ ನಂಬಿಕೆಗೆ ವಿರುದ್ಧವಾದ ಇತರ ಎಲ್ಲವನ್ನೂ, ಎಲ್ಲರನ್ನೂ ದ್ವೇಷಿಸುವುದು! ಇದರ ಪರಿಣಾಮವೇ ಮತೀಯ ಕಾರಣಗಳಿಗಾಗಿ ಸಂಘರ್ಷಗಳು, ದೇಶಗಳ ನಡುವೆ ಯುದ್ಧಗಳು ಜರುಗುತ್ತಿರುವುದು. ಇದು ವಿಶ್ವ ಇಂದು ಎದುರಿಸುತ್ತಿರುವ ಜಾಗತಿಕ ಸಮಸ್ಯೆಯಾಗಿದೆ. ಎಲ್ಲಾ ಮತಗಳ, ಧರ್ಮಗಳ ಹಿರಿಯರು, ವಿದ್ವಾಂಸರು ಮುಕ್ತ ಮನಸ್ಸಿನಿಂದ, ಪೂರ್ವಾಗ್ರಹ ರಹಿತರಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮತ್ತು ತಮ್ಮತಮ್ಮವರಿಗೆ ಸೂಕ್ತ ಮಾರ್ಗದರ್ಶನ ಮಾಡದಿದ್ದಲ್ಲಿ ಮುಂದೆ ಘೋರ ದುರಂತ ಕಾದಿದೆ.
     ವೈಯಕ್ತಿಕ ಬದುಕಿನಲ್ಲೂ ನಂಬಿಕೆ ಅನ್ನುವುದು ಮಹತ್ವದ ಪಾತ್ರ ವಹಿಸುತ್ತದೆ. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ನಂಬದಿದ್ದರೆ ಸಂಸಾರ ಹಳ್ಳ ಹಿಡಿಯುತ್ತದೆ. ಇದೇ ಸೂತ್ರ ಗುರು-ಶಿಷ್ಯರು, ತಂದೆ-ಮಕ್ಕಳು, ಬಂಧುಗಳು, ಆಡಳಿತಗಾರ-ಕಾರ್ಮಿಕರು, ನಾಯಕರು-ಪ್ರಜೆಗಳು, ಹೀಗೆ ಎಲ್ಲಾ ರಂಗಗಳಿಗೂ ಅನ್ವಯವಾಗುತ್ತದೆ. ನಂಬಿಕೆ ಇರದೆಡೆಯಲ್ಲಿ ಅಪನಂಬಿಕೆ, ಅಸಮಾಧಾನ, ದ್ವೇಷ, ಕಿರುಕುಳಗಳು ವಿಜೃಂಭಿಸಿ ನೆಮ್ಮದಿ ಹಾಳು ಮಾಡುತ್ತವೆ. ನಂಬಿಕೆಯಲ್ಲಿ ಹೊಂದಾಣಿಕೆಯಿದ್ದರೆ, ಅಪನಂಬಿಕೆಯಲ್ಲಿ ತಳಮಳ ಇರುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಕುಟುಂಬ ಸಂಸ್ಕೃತಿ ಕಾಣಬರದಿರುವುದಕ್ಕೂ, ಭಾರತದಲ್ಲಿ ಈ ಮೊದಲು ಕಂಡುಬರುತ್ತಿದ್ದಂತಹ ಅವಿಭಕ್ತ ಸ್ವರೂಪದ ಪೂರ್ಣ ಪ್ರಮಾಣದಲ್ಲಿ ಅಲ್ಲವಾದರೂ, ವಿಭಕ್ತವಾಗಿಯಾದರೂ ಕುಟುಂಬಗಳು ಉಳಿದಿರುವುದಕ್ಕೂ ಸಂಸ್ಕೃತಿ ನಮಗೆ ಕಲಿಸಿರುವ, ಇನ್ನೂ ಉಳಿದಿರುವ ಪರಸ್ಪರರಲ್ಲಿನ ನಂಬಿಕೆಗಳಿಂದಾಗಿ ಎನ್ನಬಹುದು.
     ನಂಬಿಕೆ ಇದ್ದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಈ ಕೆಲಸ ನನ್ನಿಂದ ಮಾಡಲಾಗುವುದಿಲ್ಲ ಎಂಬ ಭಾವನೆ ಬಂದರೆ ನಿರಾಶೆ, ಸೋಲು ಕಟ್ಟಿಟ್ಟ ಬುತ್ತಿ. ಮಾಡಬಲ್ಲೆ ಎನಿಸಿದರೆ ಗೆಲುವು ನಮ್ಮದೇ! ಆಶಾವಾದದಲ್ಲಿನ ನಂಬಿಕೆ ಗೆಲವಿಗೆ ರಹದಾರಿ. ಭರವಸೆ ಮತ್ತು ವಿಶ್ವಾಸಗಳಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ. ದುಃಖ ಹಿಂದೆ ನೋಡುತ್ತದೆ, ಯೋಚನೆಗಳು ಸುತ್ತಲೂ ನೋಡುತ್ತವೆ, ಆದರೆ ನಂಬಿಕೆ ಮಾತ್ರ ಮೇಲೆ ನೋಡುತ್ತದೆ. ಈ ಚಿತ್ರ ನೋಡಿ. ಗೆಲುವಿನ ಹಲವಾರು ಮೆಟ್ಟಲುಗಳ ಚಿತ್ರವಿದು. ನೀವು ಯಾವ ಮೆಟ್ಟಲಿನಲ್ಲಿದ್ದೀರಿ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ.

     "ಶಕ್ತಿಯ ಮೂಲ ಇರುವುದು ಅಂತರಂಗದಲ್ಲಿ. ಅಲ್ಲಿಂದ ಶಕ್ತಿಯ ಚಿಲುಮೆ ಚಿಮ್ಮುತ್ತದೆ, ಅದನ್ನು ಬಯಸಿದರೆ! ನಂಬಿಕೆ ಅಸಾಧ್ಯವಾದುದನ್ನು ಸಾಧ್ಯಗೊಳಿಸುತ್ತದೆ. ಭಯವಿಲ್ಲದ ಹೃದಯವೊಂದು ನಂಬಿದರೆ ಆಶ್ಚರ್ಯಗಳು ಜರುಗುತ್ತವೆ, ವಿವೇಕಾನಂದರಂತಹವರು ಉದ್ಭವಿಸುತ್ತಾರೆ."
-ಕ.ವೆಂ.ನಾಗರಾಜ್.
**************
[ ತಾಯಿ-ಮಗುವಿನ ಚಿತ್ರ ಕೃಪೆ: http://zaronburnett.files.wordpress.com/2013/05/mother-child-botswana_3661_990x742.jpg]
ದಿನಾಂಕ  24--3-2014ರ ಜನಮಿತ್ರದಲ್ಲಿ ಈ ಲೇಖನ ಪ್ರಕಟವಾಗಿದೆ.

ಗುರುವಾರ, ಮಾರ್ಚ್ 20, 2014

ತುರ್ತುಪರಿಸ್ಥಿತಿ-ಆರೆಸ್ಸೆಸ್-ಗಾಂಧೀಜಿ ಹಾಗೂ ನಾವು!

     ಎತ್ತಣೆತ್ತಣ ಸಂಬಂಧ! ಯಾವುದೇ ಪೀಠಿಕೆ, ಹಿನ್ನೆಲೆ ಇಲ್ಲದೆ ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ಅಂದು ದಿನಾಂಕ ೯-೧೧-೧೯೭೫. ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ ಸಮಯ. ದೇಶದೆಲ್ಲೆಡೆ ತುರ್ತು ಪರಿಸ್ಥಿತಿಯ ಕಾವು ವ್ಯಾಪಿಸಿತ್ತು. ಪ್ರಜಾಪ್ರಭುತ್ವಕ್ಕೆ ಹಿಡಿದಿದ್ದ ಗ್ರಹಣ ಮುಕ್ತಿಗಾಗಿ ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ 'ಲೋಕ ಸಂಘರ್ಷ ಸಮಿತಿ' ಜನ್ಮ ತಾಳಿತ್ತು. ೧೪-೧೧-೧೯೭೫ರಿಂದ ಸತ್ಯಾಗ್ರಹ ನಡೆಸಿ 'ಜೈಲ್ ಭರೋ' ಚಳುವಳಿ ನಡೆಸಲು ನಿರ್ಧರಿತವಾಗಿತ್ತು. ಅದೇ ರೀತಿ ಹಾಸನ ಜಿಲ್ಲೆಯಲ್ಲೂ ಸತ್ಯಾಗ್ರಹದ ರೂಪರೇಷೆ ನಿರ್ಧರಿಸಲು ನಾವು ಕೆಲವು ತರುಣರು ಒಂದು ಮನೆಯಲ್ಲಿ ಸೇರಿದ್ದೆವು. ಹೀಗೆ ಸೇರಿದ್ದ '೧೨ ಜನ ಬುದ್ಧಿವಂತ'ರಲ್ಲಿ ೧೧ ಜನರು ಯಾರೆಂದರೆ ಆಗಿನ ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈ, ನಾನು, ಇಂಜನಿಯರಿಂಗ್ ಕಾಲೇಜ್ ಡೆಮಾನ್ಸ್ಟ್ರೇಟರ್ ಚಂದ್ರಶೇಖರ್, ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಟೈಲರ್ ಜನಾರ್ಧನ ಐಯಂಗಾರ್, ಪೆಟ್ಟಿಗೆ ಅಂಗಡಿ ಕಛ್ ರಾಮಚಂದ್ರ (ಗೋವಾ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಆತನಿಗೆ ಕಛ್ ಎಂಬ ಪೂರ್ವನಾಮ ಅಂಟಿತ್ತು), ವಿದ್ಯಾರ್ಥಿಗಳಾಗಿದ್ದ ಪಾರಸಮಲ್, ನಾಗಭೂಷಣ, ಶ್ರೀನಿವಾಸ, ಪಟ್ಟಾಭಿರಾಮ, ಸದಾಶಿವ. ೧೨ನೆಯವನ ಹೆಸರು ಹೇಳುವುದಿಲ್ಲ. ನನ್ನನ್ನು ೫ ತಿಂಗಳುಗಳ ಹಿಂದೆಯೇ ಒಮ್ಮೆ ಆರೆಸ್ಸೆಸ್ ಚಟುವಟಿಕೆ ಮಾಡುತ್ತಿದ್ದೆನೆಂಬ ಆರೋಪದ ಮೇಲೆ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಹಾಗಾಗಿ ಹಾಸನದ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ನನ್ನನ್ನು ಸೇವೆಯಿಂದ ಅಮಾನತ್ತು ಮಾಡಿದ್ದರು. ನಾವುಗಳು ಚಂದ್ರಶೇಖರರ ಮನೆಯಲ್ಲಿ ಕುಳಿತು ಕಾಫಿ ಕುಡಿಯುತ್ತಾ ಮಾತನಾಡುತ್ತಿದ್ದಾಗ ಪೋಲಿಸರ ಸಮೂಹವೇ ಮನೆಗೆ ಮುತ್ತಿಗೆ ಹಾಕಿಬಿಟ್ಟಿತ್ತು. ಏನೆಂದು ತಿಳಿಯುವುದರೊಳಗೆ ಮನೆಯೊಳಗೆ ನುಗ್ಗಿ ನಮ್ಮನ್ನು ಸುತ್ತುವರೆದುಬಿಟ್ಟಿದ್ದರು. ಇನ್ನು ಮಾಮೂಲಾಗಿ ಮನೆ ತಲಾಷ್, ನಮ್ಮಲ್ಲಿದ್ದ ಕಾಗದ ಪತ್ರಗಳ ಜಪ್ತು, ಮಹಜರ್, ಇತ್ಯಾದಿಗಳೆಲ್ಲಾ ಮುಗಿದು ನಮ್ಮನ್ನು ಪೋಲಿಸ್ ಠಾಣೆಯಲ್ಲಿ ಕೂಡಿಟ್ಟಾಗ ರಾತ್ರಿ ಹನ್ನೊಂದು ಹೊಡೆದಿತ್ತು. ನಮ್ಮ ಜೊತೆಯಲ್ಲಿದ್ದ ೧೨ನೆಯವನನ್ನು ಬಂಧಿಸಲಿಲ್ಲ. ಆತನನ್ನು ಮಾಹಿತಿದಾರನಾಗಿ ಬಳಸಿಕೊಂಡ ಪೋಲಿಸರು ನಮ್ಮ ವಿರುದ್ಧ ಸಾಕ್ಷಿಯಾಗಿ ಹೆಸರಿಸಿದ್ದರು. ಮರುದಿನ ನಮ್ಮನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹಾಸನದ ಜೈಲಿಗೆ ತಳ್ಳಿದ್ದರು. ಪೋಲಿಸರ ಭಯಕ್ಕೆ ಆತ ನಮ್ಮ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿಯನ್ನೂ ಹೇಳಿದ. ಚಂದ್ರಶೇಖರರ ಮನೆಯ ಮುಂದೆ ನಿಲ್ಲಿಸಿದ್ದ ನನ್ನ ಅಟ್ಲಾಸ್ ಸೈಕಲ್ಲನ್ನು ೧೫ ದಿನಗಳ ನಂತರ ನನ್ನ ತಮ್ಮ ಮನೆಗೆ ತೆಗೆದುಕೊಂಡು ಹೋದ. ನಮ್ಮ ಎಲ್ಲರ ಮನೆಗಳಲ್ಲೂ ಗೋಳಾಟ. ಕೇಳುವವರು ಯಾರು? ನಮಗೆ ಜಾಮೀನು ಸಿಗಲಿಲ್ಲ. ಪ್ರಕರಣ ಮುಗಿಯುವವರೆಗೆ ನಾವುಗಳು ಜೈಲಿನಲ್ಲಿಯೇ ಸುಮಾರು ಮೂರು ತಿಂಗಳುಗಳ ಕಾಲ ಇರಬೇಕಾಯಿತು.


     ಇಷ್ಟಕ್ಕೂ ಇಷ್ಟೊಂದು ದೊಡ್ಡ ಸಾಹಸ ಮಾಡಿದ್ದ ಪೋಲಿಸರು ನಮ್ಮಿಂದ ಜಪ್ತು ಮಾಡಿದ ವಸ್ತುಗಳು ಏನು ಗೊತ್ತೇ? 'ಸತ್ತ ಕತ್ತೆಯ ಕಥೆ' ಎಂಬ ಕವನದ ಮೂರು ಪ್ರತಿಗಳು, ಎರಡು ಮಹಾತ್ಮ ಗಾಂಧಿಯವರ ಭಾವಚಿತ್ರಗಳು ಮತ್ತು ಎರಡು 'ಕಹಳೆ' ಪತ್ರಿಕೆಯ ಪ್ರತಿಗಳು. ನ್ಯಾಯಾಲಯದಿಂದ ಪಡೆದಿರುವ ಪ್ರಮಾಣಿತ ಪ್ರತಿಯಲ್ಲಿ ಈ ದಾಖಲಾತಿಗಳ ವಿವರವಿದೆ. (ಚಿತ್ರ ಗಮನಿಸಿ). ಸತ್ತ ಕತ್ತೆಯ ಕಥೆ ಎಂಬ ಕವನದಲ್ಲಿ ಭಾರತದ ಆಗಿನ ಪ್ರಜಾಸತ್ತೆಯನ್ನು ಒಂದು ಸತ್ತ ಕತ್ತೆಗೆ ಹೋಲಿಸಿ ವಿಡಂಬನೆ ಮಾಡಲಾಗಿತ್ತು. ನ್ಯಾಯಾಲಯ ಅದನ್ನು ರಾಷ್ಟ್ರದ್ರೋಹದ ದಾಖಲೆ ಎಂಬ ಪೋಲಿಸರ ವಾದವನ್ನು ಒಪ್ಪಲಿಲ್ಲ. ಕಹಳೆ ಪತ್ರಿಕೆಯಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿ ಪೋಲಿಸರ ದೌರ್ಜನ್ಯದ ವಿವರಗಳಿದ್ದು ಅದನ್ನೂ ನ್ಯಾಯಾಲಯವು ಪ್ರತೀಕೂಲ ದಾಖಲೆ ಎಂದು ಒಪ್ಪಲಿಲ್ಲ. ನನ್ನ ಪರವಾಗಿ ಆಗ ಹೆಸರಾಂತ ಹಿರಿಯ ವಕೀಲರಾದ ಮತ್ತು ಕಾಂಗ್ರೆಸ್ಸಿನ ಕಟ್ಟಾಧುರೀಣರಾಗಿದ್ದ ದಿ. ಶ್ರೀ ಹಾರನಹಳ್ಳಿ ರಾಮಸ್ವಾಮಿಯವರು ಮತ್ತು ಅವರ ಕಿರಿಯ ವಕೀಲರಾದ ದಿ. ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರು ವಾದಿಸಿದ್ದರು. ಗಾಂಧೀಜಿಯವರ ಭಾವಚಿತ್ರ ಪ್ರತೀಕೂಲ ಸಾಕ್ಷ್ಯವೆಂಬ ಬಗ್ಗೆ ಅವರು ಸಬ್ ಇನ್ಸ್ ಪೆಕ್ಟರರ ವಿರುದ್ಧ ನಡೆಸಿದ ಪಾಟೀಸವಾಲು ಸ್ವಾರಸ್ಯಕರವಾಗಿತ್ತು. ಅದು ಹೀಗಿತ್ತು:
ವಕೀಲರು: ಸ್ವಾಮಿ ಸಬ್ಬಿನಿಸ್ಪೆಕ್ಟರೇ, ಹಾಸನದಲ್ಲಿ ಸುಮಾರು ಎಷ್ಟು ಮನೆಗಳಿವೆ?
ಸ.ಇ.: ಗೊತ್ತಿಲ್ಲ.
ವ: ಅಂದಾಜು ಹೇಳಿ, ಪರವಾಗಿಲ್ಲ. ಸುಮಾರು ೨೦೦೦೦ ಮನೆ ಇರಬಹುದಾ?
ಸ.ಇ.: ಇರಬಹುದು.
ವ: ಎಷ್ಟು ಮನೆಗಳಲ್ಲಿ ಗಾಂಧೀಜಿ ಫೋಟೋ ಇರಬಹುದು? ಅಂದಾಜು ೨೦೦೦ ಮನೆಗಳಲ್ಲಿ ಇರಬಹುದಾ? ಬೇಡ, ೧೦೦೦ ಮನೆಗಳಲ್ಲಿ ಇರಬಹುದಾ?
ಸ.ಇ.: ಇರಬಹುದು.
ವ: ಹಾಗಾದರೆ ಅವರನ್ನೂ ಏಕೆ ಬಂಧಿಸಲಿಲ್ಲ? ಇವರನ್ನು ಏಕೆ ಬಂಧಿಸಿದಿರಿ?
ಸ.ಇ.: ಇವರ ಹತ್ತಿರ ಇರುವ ಗಾಂಧೀಜಿ ಫೋಟೋದಲ್ಲಿ ಪ್ರಚೋದನಾತ್ಮಕ ಹೇಳಿಕೆ ಇದೆ.
ವ: ಏನು ಹೇಳಿಕೆ ಇದೆ? ಯಾರು ಆ ಹೇಳಿಕೆ ಕೊಟ್ಟಿದ್ದು?
ಸ.ಇ.: 'ಅಸತ್ಯ ಅನ್ಯಾಯಗಳ ವಿರುದ್ಧ ತಲೆ ಬಾಗುವುದು ಹೇಡಿತನ' ಎಂಬ ಹೇಳಿಕೆ ಇದೆ. ಅದನ್ನು ಗಾಂಧೀಜಿಯೇ ಹೇಳಿದ್ದು.
ವ: ಹಾಗಾದರೆ ಗಾಂಧೀಜಿಯವರು ಪ್ರಚೋದನಾತ್ಮಕ ಹೇಳಿಕೆ ಕೊಟ್ಟಿದ್ದರು. ಅವರೂ ಅಪರಾಧಿಗಳೇ ಹಾಗಾದರೆ! ಹೋಗಲಿ ಬಿಡಿ, ಈ ಹೇಳಿಕೆಯಲ್ಲಿ ಏನು ಪ್ರಚೋದನಾತ್ಮಕ ಅಂಶ ಇದೆ?
     ಈ ಪ್ರಶ್ನೆಗೆ ಸಬ್ಬಿನಿಸ್ಪೆಕ್ಟರರಿಗೆ ಉತ್ತರಿಸಲಾಗಿರಲಿಲ್ಲ. ಈ ಹಂತದಲ್ಲಿ ನ್ಯಾಯಾಲಯದಲ್ಲಿ ಕುತೂಹಲದಿಂದ ಕಿಕ್ಕಿರಿದು ಸೇರಿದ್ದ ಜನರೊಂದಿಗೆ ನ್ಯಾಯಾಧೀಶರೂ ಗೊಳ್ಳೆಂದು ನಕ್ಕಿದ್ದರು. ಈ ಸಾಕ್ಷ್ಯವೂ ನ್ಯಾಯಾಲಯದಲ್ಲಿ ನಿಲ್ಲಲಿಲ್ಲ. ಮೂರು ತಿಂಗಳ ನಂತರದಲ್ಲಿ ನಾವುಗಳೆಲ್ಲರೂ ನಿರ್ದೋಷಿಗಳೆಂದು ಬಿಡುಗಡೆಯಾಯಿತು. ಬಿಡುಗಡೆಯಾಗಿ ಹೊರಬರುತ್ತಿದ್ದಂತೆ ಬಾಗಿಲ ಬಳಿಯೇ ನಮ್ಮ ಪೈಕಿ ಪಾರಸಮಲ್, ಪಟ್ಟಾಭಿರಾಮ ಮತ್ತು ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈರವರನ್ನು ಪುನಃ ಬಂಧಿಸಿ ಎರಡು ವರ್ಷಗಳ ಕಾಲ ವಿಚಾರಣೆಯಿಲ್ಲದೆ ಬಂಧಿಸಿಡಲು ಅವಕಾಶವಿರುವ 'ಮೀಸಾ' ಕಾಯದೆಯನ್ವಯ ಬಂಧಿಸಿದರು. ನನ್ನನ್ನೂ ಮೀಸಾ ಕಾಯದೆಯಡಿಯಲ್ಲಿ ಬಂಧಿಸಬೇಕೆಂಬ ಎಸ್.ಪಿ.ಯವರ ಶಿಫಾರಸಿಗೆ ಅಂದಿನ ಜಿಲ್ಲಾಧಿಕಾರಿಯವರು ತಮ್ಮ ಕಛೇರಿಯ ನೌಕರನೇ ಆಗಿದ್ದ ನನ್ನನ್ನು ಬಂಧಿಸಲು ಒಪ್ಪಿರದಿದ್ದ ಕಾರಣ ಮೀಸಾ ಬಲೆಯಿಂದ ನಾನು ತಪ್ಪಿಸಿಕೊಂಡಿದ್ದೆ. ವಿಷಾದದ ಸಂಗತಿಯೆಂದರೆ, ತುರ್ತು ಪರಿಸ್ಥಿತಿ ಹಿಂತೆಗೆತದ ನಂತರ ಬಿಡುಗಡೆಯಾದ ಪ್ರಭಾಕರ ಕೆರೆಕೈ ನಂತರದ ಕೆಲವು ವರ್ಷಗಳಷ್ಟೇ ಬದುಕಿದ್ದರು. ತುರ್ತು ಪರಿಸ್ಥಿತಿ ಸಮಯದಲ್ಲಿ ಅನುಭವಿಸಿದ ಹಿಂಸೆಗಳ ಕಾರಣದಿಂದ ಮತಿವಿಕಲತೆಗೆ ಒಳಗಾಗಿ ಕಿರಿಯ ವಯಸ್ಸಿನಲ್ಲೇ ಅವರು ಮೃತರಾದುದು ದುರ್ದೈವ. ಅವರ ಆತ್ಮಕ್ಕೆ ಶಾಂತಿ ಇರಲಿ. ಅವರ ಮತ್ತು ಅವರಂತಹವರ ಹೋರಾಟ ವ್ಯರ್ಥವಾಗದಿರಲಿ.
     ಆರೆಸ್ಸೆಸ್ ಮತ್ತು ಗಾಂಧೀಜಿ ವಿಚಾರದಲ್ಲಿ ಚರ್ಚೆ, ವಾದ-ವಿವಾದಗಳು ಈಗಲೂ ನಿಂತಿಲ್ಲ. ಇವುಗಳ ಸಾಲಿಗೆ ಇದೂ ಸೇರಿಬಿಡಲಿ ಎಂದು ನಿಮ್ಮೊಡನೆ ಹಂಚಿಕೊಂಡಿರುವೆ.

ಸೋಮವಾರ, ಮಾರ್ಚ್ 17, 2014

ಸಹನೆಯ ಕಟ್ಟೆ ಒಡೆಯದಿರಲಿ

     "ಬೇಡಾ, ಕೆಣಕಬೇಡ, ತಲೆ ಕೆಟ್ಟರೆ ನಾನು ಮನುಷ್ಯ ಆಗಿರಲ್ಲ", "ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಪರಿಣಾಮ ನೆಟ್ಟಗಿರಲ್ಲ" -  ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಈ ಮಾತುಗಳ ಅಂತರಾರ್ಥ 'ಇದುವರೆಗೆ ಸಹಿಸಿಕೊಂಡಿದ್ದೇನೆ, ಇನ್ನು ಸಹಿಸಿಕೊಳ್ಳಲಾಗುವುದಿಲ್ಲ' ಎಂಬುದೇ ಆಗಿದೆ. ಸಹನೆಯ ಮಹತ್ವ ಕಾಣಬರುವುದು ಇಲ್ಲಿಯೇ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ 'ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು'! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ.
ಅತ್ತ ಮುಖ ಇತ್ತ ಮುಖ ಎತ್ತೆತ್ತಲೋ ಮುಖ
ಏಕಮುಖ ಬಹುಮುಖ ಸುಮುಖ ಕುಮುಖ|
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ||
   
     ಸಹನೆಯ ಮಹತ್ವವನ್ನು ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ದಾರ್ಶನಿಕವಾಗಿ ಅನೇಕ ಮಗ್ಗಲುಗಳಲ್ಲಿ ವಿಶ್ಲೇಷಿಸಬಹುದು. ವಿಜ್ಞಾನದ ಆವಿಷ್ಕಾರಗಳು ವಿಜ್ಞಾನಿಗಳ ಸಹನಾಸಹಿತವಾದ ಶ್ರಮದ ಫಲವೇ ಆಗಿದೆ. ಪ್ರಯೋಗಗಳನ್ನು ಮಾಡುತ್ತಾ ಮಾಡುತ್ತಾ, ವಿಫಲರಾದರೂ ಪ್ರಯತ್ನ ಮುಂದುವರೆಸಿ ಯಶಸ್ವಿಯಾದವರ ಪಟ್ಟಿ ದೊಡ್ಡದಿದೆ. ಥಾಮಸ್ ಆಲ್ವಾ ಎಡಿಸನ್ ಹೇಳಿದ್ದಂತೆ ಒಂದು ಸಾವಿರ ಪ್ರಯೋಗಗಳು ವಿಫಲವಾದರೂ, ಆ ಒಂದು ಸಾವಿರ ವಿಫಲ ಪ್ರಯೋಗಗಳಿಂದ ಆ ರೀತಿ ಮಾಡಿದರೆ ಪ್ರಯೋಜನವಾಗುವುದಿಲ್ಲ ಎಂಬ ಸಂಗತಿ ಗೊತ್ತಾಗುವುದೂ ದೊಡ್ಡ ಸಂಗತಿಯೇ ಅಲ್ಲವೇ? ಛಲ ಬಿಡದ ತ್ರಿವಿಕ್ರಮರೆನಿಸಿಕೊಳ್ಳಲು ಸಹನೆ ಇರಲೇಬೇಕು. ಒಂದು ಕಾಗದವನ್ನೋ, ವಸ್ತುವನ್ನೋ ಇಟ್ಟುಕೊಂಡು ಅದರಲ್ಲಿ ಏನೋ ಮಾಡಬೇಕೆಂದು ಪ್ರಯತ್ನಿಸುವ ಪುಟ್ಟ ಮಗುವನ್ನು ಗಮನಿಸಿ. ಅದು ತದೇಕಚಿತ್ತದಿಂದ ಏನನ್ನೋ ಮಾಡುತ್ತಿರುತ್ತದೆ. ತನ್ನ ಮನಸ್ಸಿನಂತೆ ಆಗದಿದ್ದರೆ ಸಿಟ್ಟು ಮಾಡಿಕೊಂಡು ಅದನ್ನು ಎಸೆಯುತ್ತದೆ. ಆದರೆ ಅಲ್ಲಿಗೇ ನಿಲ್ಲಿಸುವುದಿಲ್ಲ, ಮತ್ತೆ ಅದನ್ನು ತೆಗೆದುಕೊಂಡು ಪ್ರಯತ್ನ ಮುಂದುವರೆಸುತ್ತದೆ. ಯಾರಾದರೂ ಹಿರಿಯರು ಅದಕ್ಕೆ ಸಹಾಯ ಮಾಡುತ್ತಾ, ಹೇಳಿಕೊಡುತ್ತಾ ಇದ್ದು, ಮಗು ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ಆಗ ಅದು ಪಡುವ ಸಂತೋಷವನ್ನು ಕಂಡವರಿಗೂ ಸಂತೋಷವಾಗುತ್ತದೆ. ಹೀಗೆ ಸಹನೆ ಮೊಳಕೆಯೊಡೆಯುತ್ತದೆ. ಯಾವುದೇ ಸಾಧನೆಗೆ ಸಹನೆ ಬೇಕೇಬೇಕು. ಅಟ್ಟ ಹತ್ತಲಾಗದವನು ಬೆಟ್ಟ ಹತ್ತಲಾರ. ಯಾವುದೇ ದೊಡ್ಡ ಸಾಧನೆ ಕಾರ್ಯರೂಪಕ್ಕೆ ಬರುವುದು ಯಾರೂ ಗಮನಿಸದ ಒಂದು ಮೊದಲಿನ ಸಣ್ಣ ಹೆಜ್ಜೆಯಿಂದಲೇ ಎಂಬುದನ್ನು ನೆನಪಿಡೋಣ.
     ಧಾರ್ಮಿಕವಾಗಿಯೂ ಸಹನೆ ಅತ್ಯಂತ ಪ್ರಧಾನವಾಗಿ ಬೋಧಿಸಲ್ಪಟ್ಟ ವಿಷಯವಾಗಿದೆ. ದೇವರಿಗೆ ಹತ್ತಿರವಾಗಲು ಇರಬೇಕಾದ ರೀತಿ ನೀತಿಗಳನ್ನು ಸ್ಪಷ್ಟಪಡಿಸುವ ಧಾರ್ಮಿಕ ಸಂಪ್ರದಾಯಗಳು, ಕಟ್ಟಳೆಗಳು ಸಹನೆಗೆ ಪ್ರಾಧಾನ್ಯತೆ ನೀಡಿವೆಯೆಂದರೆ ತಪ್ಪಲ್ಲ. ಸನಾತನ ಕಾಲದಲ್ಲಿ ಮೋಕ್ಷ ಸಂಪಾದನೆಗಾಗಿ ತಪಸ್ಸು, ಧ್ಯಾನಗಳಲ್ಲಿ ತೊಡಗಿರುತ್ತಿದ್ದ ಸಾಧು-ಸಂತ-ಸಂನ್ಯಾಸಿಗಳು ಸಹನೆಯ ಪ್ರತೀಕರಾಗಿದ್ದರು. 'ನೀನೂ ಜೀವಿಸು, ಇತರರನ್ನೂ ಜೀವಿಸಲು ಬಿಡು' ಎಂಬ ಮಹಾವೀರನ ಬೋಧನೆಯಲ್ಲಿ ಕಾಣುವುದೂ ಸಹನೆಯ ನೀತಿಪಾಠವೇ. ಏಸುಕ್ರಿಸ್ತ ತನ್ನವರಿಗಾಗಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಸಹಿಸಿದ್ದವನು. 'ತಾಳ್ಮೆಯಿಂದಿರುವ ವ್ಯಕ್ತಿ ಯೋಧನಿಗಿಂತಲೂ ಶ್ರೇಷ್ಠ, ರಾಜ್ಯವನ್ನು ಗೆದ್ದವನಿಗಿಂತ ತನ್ನ ಭಾವನೆಗಳನ್ನು ನಿಯಂತ್ರಿಸಿ ಗೆದ್ದವನೇ ಶ್ರೇಷ್ಠ' ಎಂದು ಹೀಬ್ರೂ ಗಾದೆಯಿದೆ. ಒಬ್ಬ ಶ್ರೇಷ್ಠ ಮಹಮದೀಯ ಅಲ್ಲಾಹುವಿಗೆ ಸಮೀಪನಾಗಿರಬೇಕೆಂದರೆ ಶ್ರೇಷ್ಠ ರೀತಿಯಲ್ಲಿ ಜೀವಿಸಬೇಕು, ಅರ್ಥಾತ್ ಸಹನಾಮುಯಾಗಿರಬೇಕು. ಪರಿಪೂರ್ಣತೆಯ ಸಾಧನೆಗೆ ತಾಳ್ಮೆ ಅತ್ಯಂತ ಅಗತ್ಯವೆಂದು ಬೌದ್ಧ ಧರ್ಮ ಪ್ರತಿಪಾದಿಸುತ್ತದೆ.
     ಸನಾತನ ಧರ್ಮವಂತೂ ಸಹಿಷ್ಣುತೆಗ ಪ್ರಾಧಾನ್ಯತೆ ನೀಡಿದ ಧರ್ಮವಾಗಿದೆ. ಇದರಲ್ಲಿ ಸಹಿಷ್ಣುತೆಗೆ ೧೦ ಪರೀಕ್ಷೆಗಳಿವೆ. ಅವೆಂದರೆ:
೧. ಅಹಿಂಸೆ (ಯಾರನ್ನೂ ದೈಹಿಕವಾಗಿ, ಮಾನಸಿಕವಾಗಿ, ಬರವಣಿಗೆಯ ಮೂಲಕವಾಗಲೀ, ಮಾತಿನ ಮೂಲಕವಾಗಲೀ, ಇನ್ನು ಯಾವುದೇ ರೀತಿಯಲ್ಲಾಗಲೀ ನೋಯಿಸದಿರುವುದು.)
೨. ಸತ್ಯ,
೩. ಅಸ್ತೇಯ (ಇತರರ ವಸ್ತುಗಳನ್ನು ಭೌತಿಕವಾಗಿಯಾಗಲೀ, ಮಾನಸಿಕವಾಗಿಯಾಗಲಿ ಕದಿಯದಿರುವುದು),
೪. ಬ್ರಹ್ಮಚರ್ಯ (ಮದುವೆಯಾಗದೆ ಇರುವುದು ಎಂಬ ಅರ್ಥ ಮಾತ್ರವಲ್ಲದೆ, ಬ್ರಹ್ಮ=ಆಧ್ಯಾತ್ಮಿಕ ವಿಚಾರದಲ್ಲಿ ಸಂಚರಿಸುವುದು ಎಂಬ ಅರ್ಥವೂ ಇದೆ)
೫. ದಯೆ,
೬. ಮೋಸ ಮಾಡದಿರುವುದು,
೭. ಕ್ಷಮಾಗುಣ,
೮. ಧೃತಿ (ಯಾವುದೇ ಸಂದರ್ಭದಲ್ಲಿ, ಹಾನಿ, ನಷ್ಟ, ಅವಮಾನ, ಇತ್ಯಾದಿ ಸಂದರ್ಭಗಳಲ್ಲಿ ಧೃಢಚಿತ್ತತೆ)
೯. ಮಿತಾಹಾರ (ಅಗತ್ಯವಿರುವಷ್ಟೇ ಆಹಾರ ಸೇವನೆ) ಮತ್ತು
೧೦. ಶೌಚ (ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧವಾಗಿರುವುದು).
     ಮೇಲಿನ ೧೦ ಸಂಗತಿಗಳನ್ನು ಪಾಲಿಸುವವರಿಗೆ ಸಹನಾಶಕ್ತಿ ತಾನಾಗಿ ಒಲಿದು ಬರದೇ ಇರಲಾರದು.
     ಇಷ್ಟಾದರೂ ಮತೀಯ, ಧಾರ್ಮಿಕ ಅಸಹನೆಗಳು ಇಂದು ವಿಶ್ವದ ಬೃಹತ್ ಸಮಸ್ಯೆಯಾಗಿರುವುದಕ್ಕೆ ಕಾರಣ ಧರ್ಮಗಳದ್ದಲ್ಲ, ಅದನ್ನು ತಪ್ಪಾಗಿ ತಿಳಿದು ಅನುಸರಿಸುವ ಮತಾಂಧ ಅನುಯಾಯಿಗಳದು. ಎಲ್ಲಾ ಧರ್ಮಗಳ ಹಿರಿಯರೆನಿಸಿಕೊಂಡವರು ವಿಶ್ವಶಾಂತಿಯ ದೃಷ್ಟಿಯಿಂದ ಪರಸ್ಪರ ಸಮಾಲೋಚಿಸಿ ತಮ್ಮ ಅನುಯಾಯಿಗಳಿಗೆ ಸುಯೋಗ್ಯ ಮಾರ್ಗದರ್ಶನ ನೀಡದಿದ್ದರೆ ವಿನಾಶದ ಹಾದಿ ಖಂಡಿತವೆಂದರೆ ಅತಿಶಯೋಕ್ತಿಯಲ್ಲ. ಸಹನೆಯಿದ್ದಲ್ಲಿ ಸಮಸ್ಯೆಗಳಿಗೆ ಸ್ಥಳವಿರುವುದಿಲ್ಲ.
     ಸಹನೆ ಅನ್ನುವುದು ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿ ಇಡುವಂತಹ ನಿಯಂತ್ರಕ ಶಕ್ತಿ ಎಂಬುದನ್ನು ಅರಿತೆವು. ಸಹನೆ ಸಜ್ಜನರ ಆಸ್ತಿಯಾಗಿದ್ದು, ಉತ್ತಮ ಫಲಗಳನ್ನು ಕೊಡುತ್ತದೆ ಎಂಬುದೂ ಅನುಭವದ ಮಾತು. ಸಹನೆಯ ವಿರುದ್ಧ ಗುಣವಾದ ಅಸಹನೆಗೂ ಹಲವು ಮಗ್ಗಲುಗಳಿವೆ. ಸಹನೆಯ ಕಟ್ಟೆ ಒಡೆದಾಗ ಉಂಟಾಗುವ ಅಸಹನೆಯ ಪರಿಣಾಮ ಮಾತ್ರ ಘೋರವಾಗಿರುತ್ತದೆ. ಮಿತಿಯಾಗಿದ್ದಾಗ ವಿಷವೂ ಅಮೃತವಾಗಬಹುದು, ಅತಿಯಾದರೆ ಅಮೃತವೂ ವಿಷವಾಗಬಹುದು. ಅವರು ಮುಂದಿದ್ದಾರೆ, ನಾವು ಹಿಂದಿದ್ದೇವೆ ಎಂಬ ಕಾರಣದಿಂದ ಉಂಟಾಗುವ ಅಸಹನೆ ಹತೋಟಿಯಲ್ಲಿದ್ದರೆ ನಾವೂ ಮುಂದುವರೆಯಲು ಅದು ಪ್ರೇರಿಸಬಹುದು. ಮಿತಿ ಮೀರಿದರೆ ಅದು ಮುಂದಿರುವವರ ವಿರುದ್ಧದ ದ್ವೇಷವಾಗಿಯೂ ಪರಿವರ್ತಿತವಾಗಬಹುದು. ಇದು ಬಂಧು-ಬಳಗಗಳಲ್ಲಿ, ವೃತ್ತಿ ವಲಯಗಳಲ್ಲಿ, ಜಾತಿ-ಜಾತಿಗಳ ನಡುವೆ ಸಾಮಾನ್ಯವಾಗಿ ಕಾಣಬರುವಂತಹದು. ಸಂಘರ್ಷವಲ್ಲ, ವೈಚಾರಿಕ ಜಾಗೃತಿ ಮಾತ್ರ ಇದಕ್ಕೆ ಪರಿಹಾರ ಕೊಡಬಲ್ಲದು.
     ನಿರಂತರವಾದ ಕಿರುಕುಳ, ಯಾವುದೋ ಒಂದು ಕಾರಣದಿಂದಾದ ವೈಮನಸ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸತತವಾಗಿ ಮಾಡುವ ದ್ವೇಷ, ಇತ್ಯಾದಿಗಳು ಸಹನೆಯ ಕಟ್ಟೆ ಒಡೆಯಲು ಸಾಕಾಗುತ್ತದೆ. ಎಲಾಸ್ಟಿಕ್ಕಿನ ಎಳೆಯನ್ನು ಒಂದು ಹಂತದವರೆವಿಗೂ ತುಂಡಾಗದಂತೆ ಎಳೆಯಬಹುದು. ಆದರೆ ಅದರ ಧಾರಣಾಶಕ್ತಿ ಮೀರಿ ಎಳೆದರೆ ತುಂಡಾಗುತ್ತದೆ. ಮನುಷ್ಯರ ನಡುವಣ ವ್ಯವಹಾರವೂ ಹೀಗೆಯೇ. ಒಂದು ಹಂತದವರೆಗೆ ಸಹಿಸುತ್ತಾರೆ. ಇನ್ನು ಸಹಿಸಲು ಸಾಧ್ಯವೇ ಇಲ್ಲವೆಂದಾದಾಗ ಸ್ಫೋಟಕ ವಾತಾವರಣ ಉಂಟಾಗುತ್ತದೆ. ಆಗ ಮನಸ್ಸಿನ ನಿಯಂತ್ರಣ ಮೀರಿ ಸಹನೆಯ ಮುಖವಾಡ ಕಳಚುತ್ತದೆ, ಕ್ರೋಧಾಸುರ ಆವಾಹನೆಗೊಳ್ಳುತ್ತಾನೆ. ವಿವೇಕರಹಿತವಾದ ಆ ಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು, ಕೊಲೆ ಆಗಬಹುದು, ಆತ್ಮಹತ್ಯೆ ಮಾಡಿಕೊಳ್ಳಬಹುದು, ದೀರ್ಘಕಾಲದ ಸಂಬಂಧಗಳ ಇತಿಶ್ರೀ ಆಗಬಹುದು. ಏನೇ ಆದರೂ ಪರಿಣಾಮ ಮಾತ್ರ ಸಂಬಂಧಿಸಿದ ಯಾರಿಗೂ ಹಿತವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಸಿಟ್ಟಿಗೊಳಗಾದ ವ್ಯಕ್ತಿ ರಾಕ್ಷಸನಂತೆಯೇ ವರ್ತಿಸುತ್ತಾನೆ. ಅವನ ಸ್ಥಿತಿ ಹೇಗಿರುತ್ತದೆಂದರೆ:

ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||

ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ|
ತಡೆಯಬಂದವರ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||
     ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತರಾದಾಗ ಬರುವುದಿಲ್ಲ ಎಂಬುದು ಸಹನೆಯ ಕಟ್ಟೆ ಒಡೆದವರಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಅಸಹನೆಯ ಮುದ್ದು ಕೂಸುಗಳಾದ ಕೋಪ, ಮತ್ಸರ ಮತ್ತು ದ್ವೇಷಗಳು ವಿವೇಚನೆ ಮಾಡುವ ಶಕ್ತಿಯನ್ನು ನುಂಗಿಬಿಡುತ್ತವೆ.  ವಿವೇಚನಾಶಕ್ತಿ ನಾಶವಾಗಿರುವ ಆ ಸ್ಥಿತಿಯಲ್ಲಿ ಅನಾಹುತ ನಡೆದುಹೋಗುತ್ತದೆ. ಅದರ ದೀರ್ಘಕಾಲದ ಪರಿಣಾಮವನ್ನು ಸಂಬಂಧಿಸಿದವರಲ್ಲದೆ ಅವರ ಕುಟುಂಬದವರೂ ಎದುರಿಸಬೇಕಾಗುತ್ತದೆ.
     ಸಾಮೂಹಿಕವಾಗಿ ಉಂಟಾಗುವ ಅಸಹನೆ ಅರಾಜಕತೆ, ಅಶಾಂತಿಗೆ ಕಾರಣವಾಗುತ್ತದೆ. ಸಾಮೂಹಿಕ ಅಸಹನೆ, ಅಶಾಂತಿಗೆ ಇಂದಿನ ರಾಜಕೀಯ ವ್ಯವಸ್ಥೆ, ವಿವಿಧ ಮಾಧ್ಯಮಗಳು ಗಣನೀಯ ಪಾಲು ನೀಡುತ್ತಿವೆ. ಇದಕ್ಕೆ ಪರಿಹಾರವಿಲ್ಲವೇ ಅಂದರೆ ಖಂಡಿತಾ ಇದೆ. ಕಾಯಿಲೆ ಬಂದ ಮೇಲಿನ ಚಿಕಿತ್ಸೆಗಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದೇ ಅತ್ಯುತ್ತಮವಾದ ಪರಿಹಾರ. ಸಹನೆ ಕಾಯ್ದುಕೊಳ್ಳಲು ಪೂರಕವಾದ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳಬೇಕು. ನಮ್ಮ ಸ್ನೇಹಿತರು, ಪರಿಸರಗಳ ವಿಚಾರದಲ್ಲಿ ಜಾಗೃತರಾಗಿರಬೇಕು. ಹುಳುಕು ಹುಡುಕುವವರು ವಿಷ ಕಕ್ಕುತ್ತಾರೆ, ಒಳಿತು ಕಾಣುವವರು ಅಮೃತ ಸುರಿಸುತ್ತಾರೆ ಎಂಬುದು ಅನುಭವಿಗಳ ನುಡಿ. ಎಲ್ಲೆಲ್ಲೂ ಕೆಟ್ಟದನ್ನು ಕಾಣುವ ದೃಷ್ಟಿಕೋನ ಬದಲಾಯಿಸಿಕೊಂಡು ಒಳಿತನ್ನು ಅರಸುವ ಮನೋಭಾವ ಮೂಡಿದರೆ, ಲೇಖನದಲ್ಲಿ ತಿಳಿಸಿರುವ ಸಹಿಷ್ಣುತೆಗೆ ಪೂರಕವಾದ ೧೦ ಅಂಶಗಳ ಪಾಲನೆ ಮಾಡುವ ಪ್ರವೃತ್ತಿ ರೂಢಿಸಿಕೊಂಡರೆ ನಾವು ಖಂಡಿತಾ ಸಹನಶೀಲರಾಗುತ್ತೇವೆ. ಸಮಯಕ್ಕೆ ತನ್ನದೇ ಆದ ರಹಸ್ಯಗಳಿರುತ್ತವೆ. ಅದು ತನ್ನ ರಹಸ್ಯಗಳನ್ನು ಬಿಟ್ಟುಕೊಡುವವರೆಗೆ ಕಾಯುವುದೇ ಸಹನೆ! ತಾಳ್ಮೆ ಕಹಿಯಾಗಿರುತ್ತದೆ, ಆದರೆ ಅದರ ಫಲ ಸಿಹಿಯಾಗಿರುತ್ತದೆ. ಸಹನೆ ಎಂದಿಗೂ ದುರ್ಬಲರ ಅನಿವಾರ್ಯತೆಯಲ್ಲ, ಅದು ಬಲಶಾಲಿಗಳ ಆಯುಧ. ಸಹನೆ ಸಹಬಾಳ್ವೆಗೆ ಒತ್ತು ಕೊಡುತ್ತದೆ. ಅಸಹನೆಯ ಮೂಲ ಸ್ವಾರ್ಥಪರ ಚಿಂತನೆ. ಕೇವಲ ಸ್ವಕೇಂದ್ರಿತ ಚಿಂತನೆ ಮತ್ತು ವಿಚಾರಗಳು ಇತರರನ್ನು ದ್ವೇಷಿಸುವಂತೆ, ಸಹಿಸಿಕೊಳ್ಳದಿರುವಂತೆ ಮಾಡುತ್ತವೆ. ಸಹನೆ ಗುಣವಲ್ಲ, ಅದೊಂದು ಸಾಧನೆ. ಸಹನೆ ನಮ್ಮ ಸಂಪತ್ತೆನಿಸಲು ಅಸಹನೆಯ ಮೊಳಕೆ ನಮ್ಮೊಳಗೆ ಚಿಗುರದಂತೆ ಎಚ್ಚರವಿರಬೇಕು.
ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು
ಉಸಿರು ನಿಲ್ಲುವವರೆಗೆ ಕಾಡುವವನಿವನು |
ಧೃಢಚಿತ್ತ ಸಮಚಿತ್ತಗಳಾಯುಧವ ಮಾಡಿ
ಒಳವೈರಿಯನು ಅಟ್ಟಿಬಿಡು ಮೂಢ ||
      "ಸಹನೆ ಚಾರಿತ್ರ್ಯವನ್ನು ನಿರ್ಮಿಸುತ್ತದೆ; ಚಾರಿತ್ರ್ಯವಂತರು ಚರಿತ್ರೆಯ ವಿಷಯವಾಗುತ್ತಾರೆ, ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ."
-ಕ.ವೆಂ.ನಾಗರಾಜ್.

ಶನಿವಾರ, ಮಾರ್ಚ್ 15, 2014

ದೇವನ ನೆನೆಯುವೆ

     ಬೆಳಗಿನ ಸಮಯ ಏಳುವಾಗ ದೇವಸ್ಮರಣೆ ಮಾಡುವ ಸಲುವಾಗಿ ಹೇಳುವ ಋಗ್ವೇದದ ಮಂತ್ರಗಳು 7.41.1ರಿಂದ5ರ ಪ್ರೇರಣೆಯಿಂದ ಇದನ್ನು ರಚಿಸಿರುವೆ. ಭಗಿನಿ ಕಲಾವತಿಯವರು 'ಈಶಾವಾಸ್ಯಮ್'ನಲ್ಲಿ ನಡೆಯುವ ಅಗ್ನಿಹೋತ್ರ ಮತ್ತು ವೇದಾಭ್ಯಾಸದ ಸಂದರ್ಭದಲ್ಲಿ ಈ ರಚನೆಗೆ ರಾಗ ಸಂಯೋಜಿಸಿ ಹಾಡಿದ್ದಾರೆ. ಇದನ್ನು ಶ್ರೀ ಹರಿಹರಪುರಶ್ರೀಧರರು ಫೇಸ್ ಬುಕ್ಕಿನಲ್ಲೂ ಶೇರ್ ಮಾಡಿದ್ದು, ಆಲಿಸಿದ ಹುಬ್ಬಳ್ಳಿಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು ದೂರವಾಣಿ ಮೂಲಕ ನಮ್ಮೆಲ್ಲರಿಗೆ ಆಶೀರ್ವದಿಸಿ ಇಂತಹ ಪ್ರಯತ್ನ ಮುಂದುವರೆಸಲು ಹೇಳಿದ್ದು ಆನಂದ ತಂದಿದೆ. ನೀವೂ ಆಲಿಸಿ. ಸಾಹಿತ್ವವನ್ನೂ ಕೆಳಗೆ ಕೊಟ್ಟಿರುವೆ.
-ಕ.ವೆಂ.ನಾಗರಾಜ್.
ಬೆಳಗಾಗಿ ನಾನೆದ್ದು ದೇವನ ನೆನೆಯುವೆ
ಪರಮಸಂಪದದೊಡೆಯ ತೇಜಸ್ವಿಯ |
ಭೂತಾಯಿಯಂತೆ ಮತ್ತೆ ಆಗಸದಂತೆ
ಎಲ್ಲೆಲ್ಲೂ ಇರುವವಗೆ ಶರಣೆನ್ನುವೆ || ೧ ||

ಬುದ್ಧಿಗೊಡೆಯ ಜಗದೀಶನ ನೆನೆಯುವೆ
ಕರ್ಮಫಲದಾತ ಜ್ಯೋತಿರ್ಮಯನ |
ಮಂಗಳಮಯ ಸಕಲ ಲೋಕಪ್ರಿಯ
ದೇವಾಧಿದೇವನಿಗೆ ಶರಣೆನ್ನುವೆ || ೨ ||

ನಿತ್ಯವಿಜಯಿಯಾದ ಒಡೆಯನ ನೆನೆಯುವೆ 
ಸಕಲ ಲೋಕಾಧಾರ ತೇಜಸ್ವಿಯ |
ಪಾತಕಿಕಂಟಕ ಸತ್‌ಪ್ರಕಾಶ ಈಶ
ಸರ್ವಜ್ಞ ದೇವನಿಗೆ ಶರಣೆನ್ನುವೆ || ೩ ||

ಮನೋಧಿನಾಯಕ ದೇವನ ಬೇಡುವೆ
ಕೊಡು ಮತಿಯ ಕೊಡು ಸಕಲ ಸಂಪತ್ತಿಯ |
ಮಾಡೆನ್ನ ಸತ್ಪ್ರಜೆಯ ಬೆಳೆಸುತಲಿ ಸಜ್ಜನರ
ಸತ್ಯಕ್ಕಾಧೀಶ ದೇವ ಶರಣೆನ್ನುವೆ || ೪ ||

ಪರಮ ಬೆಳಕಿನೊಡೆಯ ದೇವನ ಬೇಡುವೆ
ಕರುಣಿಸು ರಕ್ಷೆ ಮೇಣ್ ಸಕಲಸುಖವ |
ಸಜ್ಜನರ ಸುಮತಿಯ ಪಾಲಿಸುವ ಮನವ
ನೀಡೆಂದು ಬೇಡುತ ಶರಣೆನ್ನುವೆ || ೫ ||

ಜಗದಂತರಾತ್ಮನೆ ವಿದ್ವಜ್ಜನರ ಬೇಡುವೆ
ನಿಮ್ಮಂತೆ ಎಮಗೂ ಸಿಗಲಿ ಸದ್ಬುದ್ಧಿ |
ಸಕಲಜಗವು ನಿನ್ನ ಹಾಡಿ ಹೊಗಳುತಲಿರಲು
ದಾರಿ ತೋರೈ ಪ್ರಭುವೆ ಶರಣೆನ್ನುವೆ || ೬ ||
-ಕ.ವೆಂ.ನಾ.
************** 
ಪ್ರೇರಣೆ:
ಓಂ ಪ್ರಾತರಗ್ನಿಂ ಪ್ರಾತರಿಂದ್ರಂ ಹವಾಮಹೇ ಪ್ರಾತರ್ಮಿತ್ರಾವರುಣಾ ಪ್ರಾತರಶ್ವಿನಾ |
ಪ್ರಾತರ್ಭಗಂ ಪೂಷಣಂ ಬ್ರಹ್ಮಣಸ್ಪತಿಂ ಪ್ರಾತಃ ಸೋಮಮುತ ರುದ್ರಂ ಹುವೇಮ || (ಋಕ್.೭.೪೧.೧.)

ಓಂ ಪ್ರಾತರ್ಜಿತಂ ಭಗಮುಗ್ರಂ ಹುವೇಮ ವಯಂ ಪುತ್ರಮದಿತೇರ್ಯೋ ವಿಧರ್ತಾಃ |
ಆಧ್ರಶ್ಚಿದ್ ಯಂ ಮನ್ಯಮಾನಸ್ತುರಶ್ಚಿದ್ ರಾಜಾ ಚಿದ್ ಯಂ ಭಗಂ ಭಕ್ಷೀತ್ಯಾಹ || (ಋಕ್.೭.೪೧.೨.)

ಓಂ ಭಗ ಪ್ರಣತೇರ್ಭಗ ಸತ್ಯರಾಧೋ ಭಗೇಮಾಂ ಧಿಯಮುದವಾ ದದನ್ನಃ |
ಭಗ ಪ್ರ ಣೋ ಜನಯ ಗೋಭರಶ್ವೈರ್ಭಗ ಪ್ರ ನೃಭಿರ್ನೃವಂತಃ ಸ್ಯಾಮ || (ಋಕ್.೭.೪೧.೩.)

ಓಂ ಉತೇದಾನೀಂ ಭಗವಂತಃ ಸ್ಯಾಮೋತ ಪ್ರಪಿತ್ವ ಉತ ಮಧ್ಯೇ ಅಹ್ನಾಂ |
ಉತೋದಿತಾ ಮಘವನ್ ತ್ಸೂರ್ಯಸ್ಯ ವಯಂ ದೇವಾನಾಂ ಸುಮತೌ ಸ್ಯಾಮ || (ಋಕ್.೭.೪೧.೪.)

ಓಂ ಭಗ ಏವ ಭಗವಾನ್ ಅಸ್ತು ದೇವಸ್ತೇನ ವಯಂ ಭಗವಂತಃ ಸ್ಯಾಮ | 
ತಂ ತ್ವಾ ಭಗ ಸರ್ವ ಇಜ್ಜೋಹವೀ ತಿ ಸ ನೋ ಭಗ ಪುರಏತಾ ಭವೇಹಃ || (ಋಕ್.೭.೪೧.೫.) 

ಶುಕ್ರವಾರ, ಮಾರ್ಚ್ 14, 2014

ಆಡಲಾಗದ ಮಾತುಗಳು

     'ಮಾತನಾಡಲು ಏನೋ ಇದೆ, ಅದರೆ ಆಡಲಾಗುವುದಿಲ್ಲ' ಎಂಬಂತಹ ಜನರಿಂದಲೇ ಈ ಪ್ರಪಂಚ ತುಂಬಿಹೋಗಿದೆ. ಒಳಗೆ ಇರುವುದೇ ಒಂದು, ಹೊರಬರುವ ಮಾತುಗಳೇ ಮತ್ತೊಂದು! ಇದಕ್ಕೆ ಹಲವಾರು ಕಾರಣಗಳು. ಒಳಗಿರುವ, ಆದರೆ ಹೊರಬರದ ಮಾತುಗಳೇ ಆಡಲಾಗದ ಮಾತುಗಳು! ಈ ಆಡಲಾಗದ ಮಾತುಗಳು ಒಳಗೇ ಇದ್ದು ಮಾಡುವ ಅವಾಂತರಗಳು ಅಷ್ಟಲ್ಲ. ಆಡದ ಮಾತುಗಳಿಂದಾಗಿ ಮತ್ತು ಕೇಳದ ಮಾತುಗಳಿಂದಾಗಿ ಜನ ಗೌರವ ಉಳಿಸಿಕೊಂಡಿದ್ದಾರೆ. ಆಡಲಾಗದ, ಆಡಬಾರದ ಮಾತುಗಳು ಒಳಗೇ ಬಂದಿಯಾಗಿರುತ್ತವೆ. ಅಂತಹ ಮಾತುಗಳು ಒಳಗೇ ಉಳಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆಂದು ಹೊರಗೆ ಬಂದರೆ ಆಗಲೂ ಕೈಕಾಲು ಅಲ್ಲದಿದ್ದರೂ ಮನಸ್ಸಾದರೂ ಮುರಿಯಬಹುದು.  ಮಾತುಗಳು ಒಳಗೆ ಇರುವವರೆಗೆ ಅದಕ್ಕೆ ನೀವು ಬಾಸ್, ಹೊರಬಿತ್ತೋ ಅವಕ್ಕೆ ನೀವೇ ದಾಸರು. 'ಮಾತು ಆಡಿದರೆ ಆಯಿತು, ಮುತ್ತು ಒಡೆದರೆ ಹೋಯಿತು' ಎಂಬ ಗಾದೆ ಮಾತು ಪ್ರಸಿದ್ಧವಾಗಿರುವುದು ಈ ಕಾರಣಕ್ಕಾಗಿಯೇ. ನ್ಯಾಯಾಲಯಗಳಲ್ಲಿ ಪ್ರಮಾಣ ಮಾಡಿಸುತ್ತಾರೆ: 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್ ಹೇಳಿಕೊಟ್ಟಿರುತ್ತಾರೆ, 'ಸತ್ಯ ಅಂತ ಎಲ್ಲಾ ಹೇಳಿದರೆ ಕೆಡುತ್ತೀಯ, ನಾನು ಹೇಳಿಕೊಟ್ಟಿರುವುದೇ ಸತ್ಯ, ಅದನ್ನೇ ಹೇಳು' ಅಂತ. ತಮಗೆ ಅನುಕೂಲವಾಗಲೆಂದು ಸತ್ಯವನ್ನು ಹೇಳದೇ ಒಳಗೆ ಉಳಿಸಿಕೊಂಡಿರುತ್ತಾರಲ್ಲಾ, ಅವೇ ಆಡಲಾಗದ ಮಾತುಗಳು! ಮಾತುಗಳನ್ನು ನಾವು ಮುಟ್ಟಲಾಗುವುದಿಲ್ಲ. ಆದರೆ ಮಾತುಗಳು ನಮ್ಮನ್ನು ಮುಟ್ಟುತ್ತವೆ. ಒಳಗಿರುವ ಮಾತುಗಳು ಒಂದಲ್ಲಾ ಒಂದು ದಿನ ಯಾವುದಾದರೂ ರೀತಿಯಲ್ಲಿ ಹೊರಬರುತ್ತವೆ.
     ಆಡಲಾಗದ ಮಾತಿಗೆ ಒಂದು ಹಾಸ್ಯದ ಉದಾಹರಣೆ ಕೊಡಬೇಕೆಂದರೆ, ಒಬ್ಬ ಒಂದು ಸುಂದರ ಹುಡುಗಿ ನೋಡುತ್ತಾನೆ. ಅವಳು ಹೆಂಡತಿಯಾಗಿ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಂತ ಆಸೆ ಪಡ್ತಾನೆ ಅಂತ ಇಟ್ಟುಕೊಳ್ಳೋಣ. ಆ ಹುಡುಗಿ ಕಾರಿನಲ್ಲಿ ಓಡಾಡೋಳು, ಅವಳ ಅಪ್ಪ ದೊಡ್ಡ ಶ್ರೀಮಂತ. ಆದರೆ ಇವನಾದರೋ ಒಂದು ಅಟ್ಲಾಸ್ ಸೈಕಲ್ ಮಾಲಿಕ.  ಅವನು ಅವರಪ್ಪನನ್ನು ಅಥವ ಆ ಹುಡುಗಿಯನ್ನು ಮಾತನಾಡಿಸಿ ಅವನ ಆಸೆ ಬಗ್ಗೆ ಹೇಳಿಕೊಳ್ಳೋಕೆ ಆಗುತ್ತಾ? ಅದು ಅವನ ಗಂಟಲ ಕೆಳಗೇ ಹೂತುಹೋಗುತ್ತೆ. ಹಾಗೆಂದು ಮಾತುಗಳು ಒಳಗೇ ಉಳಿದುಬಿಡಬಾರದು ಎಂಬುದಕ್ಕೆ ಇನ್ನೊಂದು ಉದಾಹರಣೆಯನ್ನೂ ನೋಡೋಣ. ಒಬ್ಬ ಹುಡುಗ ಒಂದು ಹುಡುಗಿಯನ್ನು ಪ್ರೀತಿಸ್ತಿದಾನೆ ಅಂತ ಇಟ್ಟುಕೊಳ್ಳೋಣ. ಆದರೆ ಅದನ್ನು ಹೇಳೋಕೆ ಅವನಿಗೆ ಧೈರ್ಯ ಇಲ್ಲ, ಸುಮ್ಮನೆ ಇರ್ತಾನೆ. ಆ ಹುಡುಗಿಯದೂ ಅದೇ ಕಥೆ ಆಗಿದ್ದು ಅವಳದ್ದೂ ಅದೇ ಪರಿಸ್ಥಿತಿ ಅಂತ ಇಟ್ಟುಕೊಳ್ಳೋಣ. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ಒಳಗಿನ ಮಾತುಗಳನ್ನು ಹೊರಗೆ ಹೇಳಲಾಗದೆ ಸುಮ್ಮನೆ ಇರ್ತಾರೆ. ಒಂದು ದಿನ ಅವರ ಅಪ್ಪ-ಅಮ್ಮಂದಿರು ಅವರುಗಳಿಗೆ ಬೇರೆ ಗಂಡು/ಹೆಣ್ಣು ನೋಡಿ ಮದುವೆ ಮಾಡ್ತಾರೆ. ಆಗ ಅವರ ಒಳಗಿನ ಮಾತುಗಳು ಒಳಗೇ, ಹೊರಗಿನ ಮಾತುಗಳು ಹೊರಗೇ ಇರುತ್ತವೆ. ಮುಗಿದು ಹೋಯಿತು, ಮಾತುಗಳು ಅಲ್ಲೇ ಸಮಾಧಿಯಾಗಿಬಿಡುತ್ತವೆ. 
     ಒಬ್ಬ ದೇವರಲ್ಲಿ ಶಕ್ತಿ ಕೊಡು ಅಂತ ಕೇಳಿದನಂತೆ. ಆ ದೇವರು ಅವನನ್ನು ದುರ್ಬಲನಾಗಿ ಮಾಡಿಬಿಟ್ಟನಂತೆ, ಏಕೆಂದರೆ ವಿಧೇಯತೆ ಕಲಿಯಲಿ ಅಂತ. ಆರೋಗ್ಯ ಕೊಡು ಎಂದದ್ದಕ್ಕೆ, ಎಡವಟ್ಟು ಮಾಡಿದ, ಏಕೆಂದರೆ ಏನಾದರೂ ಮಾಡಬೇಕು ಅನ್ನುವ ಮನಸ್ಸು ಬರಲಿ ಅಂತ. ಸುಖ ಅನುಭವಿಸಲು ಶ್ರೀಮಂತಿಕೆ ಕೊಡು ಅಂತ ಕೇಳಿದರೆ ಬಡತನ ಕೊಟ್ಟುಬಿಟ್ಟನಂತೆ, ಬುದ್ಧಿವಂತ ಆಗಲಿ ಅಂತ. ಅಧಿಕಾರ ಕೊಡು, ಜನ ಹೊಗಳಲಿ ಅಂತ ಕೇಳಿದರೆ ಜವಾನನಾಗಿ ಕೆಲಸ ಮಾಡುವಂತೆ ಮಾಡಿದನಂತೆ, ಏಕೆಂದರೆ ತನ್ನನ್ನು ನೆನೆಸಿಕೊಳ್ಳುತ್ತಿರಲಿ ಅಂತ. ಎಲ್ಲಾ ವಸ್ತುಗಳನ್ನು ಜೀವನ ಸುಖವಾಗಿಡಲು ಕೊಡಪ್ಪಾ ಅಂತ ಕೇಳಿದರೆ,  ಜೀವನ ಕೊಟ್ಟಿದೀನಿ, ಎಲ್ಲಾ ವಸ್ತುಗಳನ್ನು ನೀನೇ ಪಡಕೊಳ್ಳಬಹುದು ಅಂತ ಹೇಳಿದನಂತೆ. ಆಮೇಲೆ ಅವನು ಅವನನ್ನು ಏನು ಕೇಳಿಕೊಳ್ಳಬೇಕು ಅಂತ  ಇದ್ದೆನೋ ಅದನ್ನು ಕೇಳಿಕೊಳ್ಳಲೇ ಇಲ್ಲವಂತೆ. ಏಕೆಂದರೆ ಆ ದೇವರು ಅವನು ಕೇಳದೆ ಬಿಟ್ಟಿದ್ದನ್ನು ಅವನಿಗೆ ಕೊಟ್ಟನಂತೆ. ಕೇಳದೇ ಇದ್ದರೂ ದೇವರು ಕೊಟ್ಟಿದ್ದೇನು ಎಂದು ಅವನ ಸ್ನೇಹಿತ ವಿಚಾರಿಸಿದಾಗ, ಅವನು ನಗುತ್ತಾ ಹೇಳಿದನಂತೆ, "ಅದನ್ನು ಕೇಳಬಾರದು, ನಾನು ಹೇಳಲೂಬಾರದು." ಇದೇ 'ಆಡಲಾಗದ ಮಾತು!'
      ಆಡಲಾಗದ ಮಾತುಗಳು ಹೊರಬರದಿದ್ದಾಗ ಒಳಗೇ ಕುಣಿಯುತ್ತಿರುತ್ತವೆ, ಹೊರಗೆ ಬರಲು ಚಡಪಡಿಸುತ್ತಿರುತ್ತವೆ. ಆಗ ಅಸಮಾಧಾನ, ಅಸಹನೆ ಉಂಟಾಗಿ ಮನಸ್ಸಿಗೆ ಶಾಂತಿಯೇ ಇರುವುದಿಲ್ಲ. ಎದುರಿಗೆ ಇರುವವರನ್ನು ಹಂಗಿಸುವ ಇಚ್ಛೆ ಒಳಗೇ ಇದ್ದರೂ ಹಂಗಿಸಲಾರದೆ, ಮೂರನೆಯವರ ಎದುರಿಗೆ ಅಪರೋಕ್ಷವಾಗಿ ಬೇರೆ ರೀತಿಯಲ್ಲಿ ಮಾತುಗಳು ಹೊರಗೆ ಬಂದುಬಿಡುತ್ತವೆ. ತಮ್ಮ ಅಸಹನೆ ಸಂಬಂಧಿಸಿದವರಿಗೆ ಗೊತ್ತಾಗಲಿ ಎಂಬಂತೆ ಅವರ ವರ್ತನೆ ಇರುತ್ತದೆ. ಸಂಬಂಧಿಸಿದವರಿಗೆ ಹೇಳಲಾಗದ ಮಾತುಗಳನ್ನು ತಮ್ಮ ವಿಶ್ವಾಸದ ಸ್ನೇಹಿತರಲ್ಲಿ ಹೇಳಿಕೊಂಡು ಹಗುರಾಗುತ್ತಾರೆ. ಒಬ್ಬರಿಂದ ಒಬ್ಬರಿಗೆ ಹೋಗುತ್ತಾ ಆ ಮಾತುಗಳು ಉದ್ದೇಶಿಸಿದವರಿಗೂ ತಲುಪಿ ರಂಪ ರಾಮಾಯಣವೂ ಆಗುವ ಸಂಭವವೂ ಇರುತ್ತದೆ. ಈ ಆಡಲಾಗದ, ಆಡದೇ ಇರುವ ಮಾತುಗಳು ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಮಾತುಗಳು ಮತ್ತು ಹೃದಯಗಳ ಬಗ್ಗೆ ಜೋಪಾನವಾಗಿರಬೇಕು. ಮಾತುಗಳನ್ನು ಆಡುವ ಮುನ್ನ ಮತ್ತು ಹೃದಯಗಳು ಒಡೆಯುವ ಮುನ್ನ ಎಚ್ಚರಿಕೆ ಇರಬೇಕು. ನಾವು ಏನು ಯೋಚನೆ ಮಾಡ್ತೀವೋ ಅದರ ಬಗ್ಗೆ ಎಚ್ಚರವಾಗಿರಬೇಕು. ಏಕೆಂದರೆ ಮಾತುಗಳಾಗಿ ಹೊರಬರುವುದು ಅವೇ! 
ನುಡಿವ ಸತ್ಯವದು ಗೆಳೆತನವ ನುಂಗೀತು
ಬಂಧುತ್ವ ಕಳೆದೀತು ಸೌಜನ್ಯ ಮರೆಸೀತು |
ಮರುಳು ಮಾಡುವ ಸುಳ್ಳಿಗಿಹ ಬೆಲೆಯ
ಕೊಡರು ಸತ್ಯಕಿದು ಸತ್ಯ ಮೂಢ || 
     'ಇದ್ದದ್ದನ್ನು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ' ಎಂಬ ಅನುಭವಜನ್ಯ ಗಾದೆ ಸತ್ಯವನ್ನು ಹೇಳುವಾಗ ಎಚ್ಚರಿಕೆಯಿಂದಿರಬೇಕೆಂದು ಹೇಳುತ್ತದೆ. ಆಡಲಾಗದ ಮಾತುಗಳಿಗೆ ಇನ್ನೊಂದು ಮಗ್ಗಲೂ ಇದೆ. 'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನಬ್ರೂಯಾತ್ ಸತ್ಯಮಪ್ರಿಯಮ್'- ಸತ್ಯವನ್ನು ಹೇಳಬೇಕು, ಪ್ರಿಯವಾಗಿ ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು. ಒಬ್ಬ ದುಷ್ಟ ಪೈಲ್ವಾನನಿಂದ ತೊಂದರೆಯಾದರೂ ಮಾತನಾಡದೆ ಸುಮ್ಮನಿರಬೇಕಾಗುತ್ತದೆ. ಇಷ್ಟವಿರಲಿ, ಇಲ್ಲದಿರಲಿ ಸಂಬಳ ಕೊಡುವ ಧಣಿಯನ್ನು ಹೊಗಳಲೇಬೇಕು. ಬೈದುಕೊಳ್ಳುವುದೇನಾದರೂ ಇದ್ದರೆ ಹೊರಗೆ ತೋರಿಸಿಕೊಳ್ಳದಂತೆ ಒಳಗೊಳಗೇ ಶಪಿಸಬೇಕು. ಒಳ್ಳೆಯ ಕಾರಣಗಳಿಂದಲೂ ಕೆಲವೊಮ್ಮೆ ಮಾತುಗಳನ್ನು ಅದುಮಿಡಬೇಕಾಗುತ್ತದೆ. ಸಣ್ಣ ಉದಾಹರಣೆಯನ್ನು ನೋಡೋಣ. ರಾತ್ರಿ ಸುಮಾರು ೧೦ ಗಂಟೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಮನೆಯ ಬಾಗಿಲು ಬಡಿಯುತ್ತಾನೆ ಎಂದಿಟ್ಟುಕೊಳ್ಳೋಣ. ಬಾಗಿಲು ತೆರೆದ ತಕ್ಷಣ ಆ ಅಪರಿಚಿತ ಒಳಗೆ ನುಗ್ಗಿ ಬಾಗಿಲು ಹಾಕಿ ಮನೆಯ ಮಾಲಿಕನ ಕಾಲು ಹಿಡಿದು ತನ್ನನ್ನು ಕಾಪಾಡಲು ಕೋರುತ್ತಾನೆ ಎಂದಿಟ್ಟುಕೊಳ್ಳೋಣ. ಏನಾಗುತ್ತಿದೆ ಎಂದು ತಿಳಿಯದೆ ಮಾಲಿಕ ಕಕ್ಕಾಬಿಕ್ಕಿಯಾಗಿದ್ದಾಗ ಪುನಃ ಮನೆಯ ಬಾಗಿಲು ದಬದಬ ಬಡಿಯುವ ಸದ್ದಾಗುತ್ತದೆ. ಒಳಗಿದ್ದವನು ಕರುಣಾಜನಕವಾಗಿ ನೋಡುತ್ತಾನೆ. ತಕ್ಷಣದಲ್ಲಿ ಆತನನ್ನು ಬಚ್ಚಲುಮನೆಯಲ್ಲಿ ಅಡಗಿಕೊಳ್ಳಲು ಸನ್ನೆಯಿಂದ ಸೂಚಿಸಿ ಬಾಗಿಲು ತೆರೆದಾಗ ಐದಾರು ಜನರು ದೊಣ್ಣೆ ಮಚ್ಚುಗಳನ್ನು ಹಿಡಿದು, 'ಮನೆಯೊಳಗೆ ಯಾರಾದರೂ ಬಂದರಾ?' ಎಂದು ಕೇಳುತ್ತಾರೆ. ಅವನು ಸತ್ಯಸಂಧನಂತೆ 'ಹೌದು' ಎಂದರೆ ಕಣ್ಣ ಮುಂದೆಯೇ ಒಂದು ಕೊಲೆ ನಡೆದುಹೋಗಿಬಿಡಬಹುದು. ಬದಲಾಗಿ, 'ಯಾರು? ಇಲ್ಲಿ ಯಾರೂ ಬರಲಿಲ್ಲವಲ್ಲಾ! ಮುಂದೆ ಯಾರೋ ಓಡಿ ಹೋದಂತಾಯಿತು' ಅಂದರೆ? ಬಂದವರು ಹೊರಗೆ ಹುಡುಕಲು ಓಡುತ್ತಾರೆ. ಅಡಗಿಕೊಂಡಿದ್ದವನು ನಂತರ ಕೈಮುಗಿದು ಕೃತಜ್ಞತೆಯಿಂದ ಕಣ್ಣೀರಿಡುತ್ತಾ ಹೊರಗೆ ಬೇರೊಂದು ದಾರಿಯಲ್ಲಿ ಓಡಿಹೋಗುತ್ತಾನೆ. 'ಏನು? ಏಕೆ?' ಏನನ್ನೂ ತಿಳಿಯದವನು ಮುಂದೆ ತನಗೆ ಏನೂ ಗೊತ್ತಿಲ್ಲದಂತೆ ಸುಮ್ಮನೇ ಇರಬೇಕಾಗುತ್ತದೆ.
ಮನದಲ್ಲಿ ಒಂದು ಹೇಳುವುದು ಮತ್ತೊಂದು
ಹೇಳಿದ್ದು ಒಂದು ಮಾಡುವುದು ಮತ್ತೊಂದು |
ಸುಳ್ಳುಗಳು ಒಂದನಿನ್ನೊಂದು ನುಂಗಿರಲು 
ಗೊಂದಲವು ನೆಮ್ಮದಿಯ ನುಂಗದೆ ಮೂಢ || 
     ಸಂಬಂಧಗಳು ಚೆನ್ನಾಗಿರಬೇಕು, ತಮಗೆ ಕೆಡುಕಾಗಬಾರದು ಅನ್ನುವ ಕಾರಣಕ್ಕೆ ಜನ ತಮ್ಮ ಮನಸ್ಸಿನಲ್ಲಿ ಇರುವುದೇ ಒಂದಾದರೂ ಹೊರಗೆ ಆಡುವುದೇ ಬೇರೆ ತೋರಿಕೆಯ ಮಾತುಗಳು. ಅವುಗಳು ಗಟ್ಟಿ ಮಾತುಗಳಲ್ಲವಾದ್ದರಿಂದ ಅಂತಹ ಮಾತುಗಳ ಪ್ರಭಾವ ಕಡಿಮೆ. ಅವು ತೋರಿಕೆ ಮಾತುಗಳು ಅಂತಾ ಗೊತ್ತಾದಾಗ ಅದನ್ನು ಆಡಿದವರ ಬೆಲೆ ಸಹ ಕಡಿಮೆ ಆಗುತ್ತೆ. ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳಿದ್ದರೆ ಒಳ್ಳೆಯ ಮಾತುಗಳು ಬರುತ್ತವೆ. ಕೆಟ್ಟ ವಿಚಾರಗಳಿದ್ದರೆ ಆಡಲಾಗದ ಮಾತುಗಳು ಹುಟ್ಟುತ್ತವೆ. ಅದು ಹೆಚ್ಚು ಕಾಟ ಕೊಡುವುದು ಆ ಮಾತುಗಳನ್ನು ಹುಟ್ಟಿಸಿದವರಿಗೇ. ಆದ್ದರಿಂದ ಒಳ್ಳೆಯ ವಿಚಾರ ಮನಸ್ಸಿನಲ್ಲಿ ಬರುವಂತೆ ಮಾಡು ಎಂದು ಪ್ರಾರ್ಥಿಸಬೇಕು. ಸರ್ವಜ್ಞನ ಈ ತ್ರಿಪದಿ ಹೇಳುತ್ತದೆ:
'ಆಡದೆ ಮಾಡುವನು ರೂಢಿಯೊಳಗುತ್ತಮನು,
ಆಡಿ ಮಾಡುವನು ಮಧ್ಯಮ,
ಆಡಿಯೂ ಮಾಡದವ ಅಧಮ ಸರ್ವಜ್ಞ'
'ಆಡುವುದಕ್ಕೆ ಆಗದೆ ಇರುವವನು' ನೆಮ್ಮದಿ ಇರದವನು ಎಂದು ಸಾಂದರ್ಭಿಕವಾಗಿ ಸೇರಿಸಿಕೊಳ್ಳಬಹುದಾಗಿದೆ. ನಾಲಿಗೆ ಎರಡು ಅಲಗಿನ ಕತ್ತಿಯಿದ್ದಂತೆ. ಆಡುವ ಮಾತಿನಲ್ಲಿ ನಿಯಂತ್ರಣವಿರಬೇಕು. ಇಲ್ಲದಿದ್ದರೆ ಅದು ಇತರರನ್ನು ಮಾತ್ರವಲ್ಲದೆ ಆಡಿದವರನ್ನೂ ಘಾತಿಸುತ್ತದೆ.
     ಸ್ವಾಮಿ ದಯಾನಂದ ಸರಸ್ವತಿಯವರು ಹೇಳುತ್ತಿದ್ದರು, "ಸತ್ಯವನ್ನೇ ಹೇಳುತ್ತೇನೆಂದು ಶಪಥ ಮಾಡಬೇಡಿ. ಹೇಳಿ, ಸತ್ಯವನ್ನೇ ಹೇಳಿ, ಆದರೆ ಶಪಥ ಮಾಡಬೇಡಿ. ಏಕೆಂದರೆ, ಶಪಥ ಮಾಡುವ ಕಾಲಕ್ಕೆ ಸತ್ಯ ಅನ್ನುವುದನ್ನು ನೀವೇ ತಪ್ಪು ತಿಳಿದುಕೊಂಡಿರಬಹುದು, ಅಥವ ಯಾವುದನ್ನೋ ಸತ್ಯವೆಂದು ತಪ್ಪು ತಿಳಿದಿರಬಹುದು. ಅದರಿಂದ ಬೇರೆಯವರಿಗೆ ಹಾನಿಯಾಗಬಹುದು." ನಿಜ, ಬೇರೆಯವರಿಗೆ ಹಾನಿ ಉಂಟುಮಾಡುವಂತಹದು ಸತ್ಯವಲ್ಲ. ತಮಗೆ ಮಾತ್ರ ಒಳ್ಳೆಯದಾಗಬೇಕೆಂದು ಬಯಸುವುದೂ ಸತ್ಯವಲ್ಲ. ನಮ್ಮ ಹಾಗೇ ಎಲ್ಲರಿಗೂ ಒಳ್ಳೆಯದಾಗಬೇಕು, ಯಾರಿಗೂ ಕೆಟ್ಟದಾಗಬಾರದು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಈ ರೀತಿ ಇದ್ದಲ್ಲಿ ಆಡಲಾಗದ ಮಾತುಗಳು ಹುಟ್ಟಲಾರವು, ಯಾರಿಗೂ ತೊಂದರೆ ಕೊಡಲಾರವು.
ಮಾತಾಗಲಿ ಮುತ್ತು ತರದಿರಲಿ ಆಪತ್ತು
ಮಾತು ನಿಜವಿರಲಿ ನೋವು ತರದಿರಲಿ |
ಪ್ರಿಯವಾದ ಹಿತವಾದ ನುಡಿಗಳಾಡುವನು
ನುಡಿಯೋಗಿ ಜನಾನುರಾಗಿ ಮೂಢ ||
-ಕ.ವೆಂ.ನಾಗರಾಜ್.
***************
[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದುದು.]

ಭಾನುವಾರ, ಮಾರ್ಚ್ 9, 2014

1975-77ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹಾಸನ ಜಿಲ್ಲೆ ವಹಿಸಿದ ಪಾತ್ರ [Role of Hassan district in the struggle against Emergency -1975-77]

     ಪರಕೀಯರ ಸಂಕೋಲೆಯಿಂದ ೧೯೪೭ರಲ್ಲಿ ದೇಶ ಸ್ವತಂತ್ರಗೊಂಡ ಕೇವಲ ೨೮ ವರ್ಷಗಳ ನಂತರದಲ್ಲಿ ಸ್ವಕೀಯರಿಂದಲೇ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ ೧೯೭೫ರಲ್ಲಿ ತುರ್ತುಪರಿಸ್ಥಿತಿ ರೂಪದಲ್ಲಿ ಬಂದೆರಗಿತ್ತು. ಎರಡು ವರ್ಷಗಳ ಈ ತುರ್ತುಪರಿಸ್ಥಿತಿಯ ಅವಧಿ ದೇಶದ ಅತ್ಯಂತ ಕಲಂಕಿತ ಅವಧಿಯಾಗಿದ್ದು, ಇಂದು ಕಂಡುಬರುತ್ತಿರುವ ಅಧಿಕಾರದ ಹಪಾಹಪಿಗೆ ಭದ್ರ ತಳಪಾಯ ಒದಗಿಸಿತ್ತು. ಅಲಹಾಬಾದ್ ಉಚ್ಚನ್ಯಾಯಾಲಯವು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಮೇಲಿದ್ದ ಭ್ರಷ್ಠಾಚಾರದ ಆರೋಪವನ್ನು ಎತ್ತಿ ಹಿಡಿದು ಅವರ ಚುನಾವಣೆಯ ಗೆಲುವನ್ನು ಅನೂರ್ಜಿತಗೊಳಿಸಿದ್ದಲ್ಲದೆ ಮುಂದಿನ ಆರು ವರ್ಷಗಳು ಅವರು ಚುನಾವಣೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದನ್ನು ಅವರು ಲೆಕ್ಕಿಸದೆ ಹೇಯಮಾರ್ಗ ಹಿಡಿದು ದೇಶದ ಮೇಲೆ ಅನಗತ್ಯವಾದ ತುರ್ತುಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾಗಿ ಅಟ್ಟಹಾಸದಿಂದ ಮೆರೆದರು. ಕಹಿಯಾದ ಕಠಿಣ ಸತ್ಯವೆಂದರೆ ಭ್ರಷ್ಠಾಚಾರ ತಪ್ಪಲ್ಲವೆಂಬ ಭಾವನೆಗೆ, ಭ್ರಷ್ಠಾಚಾರ ಇಂದು ಮುಗಿಲೆತ್ತರಕ್ಕೆ ಬೆಳೆದಿರುವುದಕ್ಕೆ ಅಂದು ಹಾಕಿದ್ದ ಈ ಭದ್ರ ಬುನಾದಿಯೇ ಕಾರಣ. ಕಾಯದೆ, ಕಾನೂನುಗಳನ್ನು ಅನುಕೂಲಕ್ಕೆ ತಕ್ಕಂತೆ ತಿದ್ದಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಯಿತು. ಲೋಕಸಭೆಯ ಅವಧಿ ಪೂರ್ಣಗೊಂಡರೂ ಸಂಸತ್ತಿನಲ್ಲಿ ನಿರ್ಣಯ ಮಾಡಿ ಮತ್ತೆ ಎರಡು ವರ್ಷಗಳ ಅವಧಿಗೆ ಮುಂದುವರೆಸಲಾಯಿತು. ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ಮಾಡಲಾಯಿತು. ೧೯೭೫ರ ಜೂನ್ ೨೬ರ ಬೆಳಕು ಹರಿಯುವಷ್ಟರಲ್ಲಿ ಭಾರತದ ಸ್ವತಂತ್ರತೆ ನಿರ್ಬಂಧಿಸಲ್ಪಟ್ಟಿತು. ಅಭಿವ್ಯಕ್ತಿ ಸ್ವಾತಂತ್ರ್ಯ, ಲೇಖನ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸ್ವಂತ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ, ಇತ್ಯಾದಿ ಎಲ್ಲಾ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ದೇಶಾದ್ಯಂತ ನೂರಾರು ವಿರೋಧ ಪಕ್ಷದ ನಾಯಕರುಗಳನ್ನು ಬಂಧಿಸಿ ಸೆರೆಯಲ್ಲಿರಿಸಿದರು. ಜನರು ಸರ್ಕಾರದ ವಿರುದ್ಧ ಮಾತನಾಡಲು ಅಂಜುವಂತೆ ಆಯಿತು. ಆಕಾಶವಾಣಿ ಇಂದಿರಾವಾಣಿ ಆಯಿತು, ದೂರದರ್ಶನ ಇಂದಿರಾದರ್ಶನವಾಯಿತು. ಇಂದಿರಾ ಪರ ಸುದ್ದಿಗಳಿಗೆ ಮಾತ್ರ ಅವಕಾಶ. 'ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ' ಆಗಿಹೋಯಿತು. 
     ಹಾಸನದಲ್ಲಿ ಆರೆಸ್ಸೆಸ್ ಕಾರ್ಯಾಲಯಕ್ಕೆ ಬೀಗಮುದ್ರೆ ಬಿದ್ದಿತು. ಅದಕ್ಕೆ ಮುಂಚೆಯೇ ಎಚ್ಚೆತ್ತಿದ್ದ ಸಂಘದ ಕಾರ್ಯಕರ್ತರು ಕಟ್ಟಡದಲ್ಲಿದ್ದ ವಸ್ತುಗಳನ್ನು ಬೇರೆಡೆಗ ಸಾಗಿಸಿಬಿಟ್ಟಿದ್ದರು. ಸಂಘದ ಪ್ರಚಾರಕರುಗಳು, ಹಿರಿಯ ನಾಯಕರು ಭೂಗತರಾಗಿದ್ದರು. ಆರೆಸ್ಸೆಸ್ ನಿಷೇಧದ ಹಿನ್ನೆಲೆಯಲ್ಲಿ ದಿ. ಬಿ.ಆರ್.ಕೃಷ್ಣಮೂರ್ತಿ, ದಿ. ಎಸ್.ವಿ.ಗುಂಡೂರಾವ್, ಕರಿಬಸಪ್ಪ, ಮುಂತಾದವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು. ತುರ್ತುಪರಿಸ್ಥಿತಿ ವಿರೋಧಿಸಲು ಲೋಕನಾಯಕ ಜಯಪ್ರಕಾಶ ನಾರಾಯಣರ  ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಜನ್ಮ ತಾಳಿತು. ಅದರ ಬೆನ್ನೆಲುಬು ಆರೆಸ್ಸೆಸ್ಸೇ ಆಗಿತ್ತು. ಹಾಸನ ಜಿಲ್ಲೆಯಲ್ಲೂ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಚಟುವಟಿಕೆಗಳನ್ನು ಸಂಘದ ಕಾರ್ಯಕರ್ತರು ಆರಂಭಿಸಿದರು. 'ಕಹಳೆ' ಹೆಸರಿನಲ್ಲಿ ತುರ್ತು ಪರಿಸ್ಥಿತಿಯ ಕರಾಳ ಮುಖಗಳ ಅನಾವರಣ ಮಾಡುವ ಪತ್ರಿಕೆಯನ್ನು ಗುಪ್ತವಾಗಿ ಹಂಚುವ ಕೆಲಸ ಆರಂಭವಾಯಿತು. ಮುದ್ರಿತ ಪತ್ರಿಕೆಗಳನ್ನು ತರುವ, ವಿತರಿಸುವ ಕೆಲಸ ಬಂಧನವನ್ನು ಎದುರಿಸುವ ಭೀತಿಯಲ್ಲೇ ಜಿಲ್ಲೆಯ ಎಲ್ಲಾ ಮೂಲೆಗೂ ತಲುಪಿಸುವ ಕೆಲಸವನ್ನು ಅನಾಮಧೇಯ ಸಂಘದ ಹುಡುಗರು ಯಶಸ್ವಿಯಾಗಿ ಮಾಡುತ್ತಿದ್ದರು. ೧೯೭೫ರ ಜುಲೈ ೪ರಂದು ಹಾಸನದ ಗ್ರಂಥಾಲಯದಲ್ಲಿ ಕಹಳೆ ಪತ್ರಿಕೆಯ ಪ್ರತಿ ಹಾಕುತ್ತಿದ್ದನೆಂದು ಶ್ರೀನಿವಾಸ ಎಂಬ ವಿದ್ಯಾರ್ಥಿಯ ಬಂಧನವಾಯಿತು. ಮರುದಿನ ಹಾಸನ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಫುಡ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನನ್ನನ್ನು ಆರೆಸ್ಸೆಸ್ ಕಾರ್ಯಕರ್ತನಾಗಿ ದೇಶದ್ರೋಹಿ ಚಟುವಟಿಕೆಗಳನ್ನು ಮಾಡುತ್ತಿದ್ದೆನೆಂದು ಆರೋಪಿಸಿ ಬಂಧಿಸಿದರು. ನಾನು ಕೆಲಸಕ್ಕೆ ಸೇರಿ ಕೇವಲ ಎರಡು ವರ್ಷಗಳಾಗಿದ್ದು, ನನ್ನನ್ನು ಸೇವೆಯಿಂದ ಅಮಾನತ್ತುಗೊಳಿಸಲಾಯಿತು. ಜಿಲ್ಲೆಯಲ್ಲಿ ಬಂಧನಗಳ ಸರಣಿಗೆ ಚಾಲನೆ ಚುರುಕುಗೊಂಡಿತು. ಪಾರಸಮಲ್ ಸೇರಿದಂತೆ ಹಲವರ ಬಂಧನ ಮುಂದಿನ ವಾರಗಳಲ್ಲಿ ಆಯಿತು. ನವೆಂಬರ್ ೧೪ರಿಂದ ಸತ್ಯಾಗ್ರಹ ನಡೆಸಿ ಬಂಧನಕ್ಕೊಳಗಾಗುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲು ಲೋಕ ಸಂಘರ್ಷ ಸಮಿತಿ ನಿರ್ಧಾರದಂತೆ ಜಿಲ್ಲೆಯಲ್ಲೂ ಚಳುವಳಿ ಪ್ರಾರಂಭಿಸುವ ಬಗ್ಗೆ ಚರ್ಚಿಸಲು  ೯-೧೧-೧೯೭೫ರಂದು ಆಗಿನ ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈ, ನಾನು, ಇಂಜನಿಯರಿಂಗ್ ಕಾಲೇಜ್ ಡೆಮಾನ್ಸ್ಟ್ರೇಟರ್ ಚಂದ್ರಶೇಖರ್, ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಜನಾರ್ಧನ ಐಯಂಗಾರ್, ಕಛ್ ರಾಮಚಂದ್ರ, ವಿದ್ಯಾರ್ಥಿಗಳಾಗಿದ್ದ ಪಾರಸಮಲ್, ನಾಗಭೂಷಣ, ಶ್ರೀನಿವಾಸ, ಪಟ್ಟಾಭಿರಾಮ, ಸದಾಶಿವ ಇವರೆಲ್ಲರೂ ಚಂದ್ರಶೇಖರರ ಮನೆಯಲ್ಲಿ ಸೇರಿದ್ದಾಗ ನಮ್ಮ ಜೊತೆಯಲ್ಲೇ ಇದ್ದ ಇನ್ನೊಬ್ಬ ಸ್ನೇಹಿತ (ಆತನ ಹೆಸರನ್ನು ಉದ್ದೇಶಪೂರ್ವಕ ಉಲ್ಲೇಖಿಸಿಲ್ಲ) ಕೊಟ್ಟಿದ್ದ ಮಾಹಿತಿಯ ಆಧಾರದಲ್ಲಿ ರಾಷ್ಟ್ರೀಯ ಭದ್ರತಾ ಕಾಯದೆ ಅನ್ವಯ ಬಂಧಿಸಿ ಜೈಲಿಗೆ ತಳ್ಳಿದರು. ಮಾಹಿತಿ ಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸದೆ ಆತನನ್ನು ನಮ್ಮ ವಿರುದ್ಧ ಸಾಕ್ಷಿಯಾಗಿ ಪೋಲಿಸರು ಬಳಸಿಕೊಂಡರು. ಪೋಲಿಸರ ಭಯಕ್ಕೆ ಆತ ಕೋರ್ಟಿನಲ್ಲಿ ನಮ್ಮ ವಿರುದ್ಧ ಸಾಕ್ಷಿಯನ್ನೂ ಹೇಳಿದ್ದ. ಈ ಪ್ರಕರಣದಲ್ಲಿ ನಮಗೆ ಜಾಮೀನು ಸಿಗದ ಕಾರಣ ಪ್ರಕರಣ ಮುಗಿಯುವವರೆಗೂ ಹಲವು ತಿಂಗಳು ಹಾಸನದ ಜೈಲಿನಲ್ಲೆ ಕಳೆಯಬೇಕಾಯಿತು. ಚಳುವಳಿ ಅಧಿಕೃತವಾಗಿ ಪ್ರಾರಂಭವಾಗುವ ಮೊದಲೇ ಬಂಧಿತರಾದ ನಮ್ಮನ್ನು 'ಮಂಗಳಪಾಂಡೆ ತಂಡ' ಎಂದು ಹಾಸ್ಯ ಮಾಡುತ್ತಿದ್ದರು. ಹೀಗೆ ಘೋಷಿತ ದಿನಾಂಕದ ಮೊದಲೇ ಹಾಸನದಲ್ಲಿ ಚಳುವಳಿ ಉದ್ಘಾಟನೆಯಾದಂತಾಗಿತ್ತು.
     ಹಾಸನದ ಜೈಲಿನ ಸ್ಥಿತಿ ಅನುಭವಿಸಿದವರಿಗಷ್ಟೇ ಗೊತ್ತು. ಬಂಧಿತರಾದವರ ಜನಿವಾರ, ಉಡುದಾರ, ಶಿವದಾರ, ಇತ್ಯಾದಿಗಳನ್ನು ಕಿತ್ತು ಬಿಸಾಡಲಾಗುತ್ತಿತ್ತು. ಜೇಬಿನಲ್ಲಿದ್ದ ಪುಡಿಕಾಸು, ಗಡಿಯಾರ, ಇತ್ಯಾದಿಗಳನ್ನು ವಶಪಡಿಸಿಕೊಂಡು ಗಬ್ಬು ವಾಸನೆ ಬರುತ್ತಿದ್ದ ತಿಗಣೆಗಳು, ಕೂರೆಗಳು ಹರಿದಾಡುತ್ತಿದ್ದ ಹರಕು ಕಂಬಳಿ, ನೆಗ್ಗಿ ನುಗ್ಗೇಕಾಯಿ ಆಗಿರುತ್ತಿದ್ದ ಅಲ್ಯೂಮಿನಿಯಮ್ ಚಂಬು, ತಟ್ಟೆಗಳನ್ನು ಕೊಟ್ಟು ಬ್ಯಾರಕ್ಕಿನ ಒಳಗೆ ದಬ್ಬುತ್ತಿದ್ದರು. ಮಲಗಲು ಸಿಮೆಂಟಿನ ಒಂದು ಅಡಿ ಎತ್ತರದ ಕಟ್ಟೆಗಳಿದ್ದವು. ಇರಬೇಕಾದ ಸಂಖ್ಯೆಗಿಂತ ಹೆಚ್ಚಿನ ಕೈದಿಗಳು ಇದ್ದುದರಿಂದ ನಮ್ಮನ್ನು ಇತರ ಕಳ್ಳಕಾಕರು, ಕೊಲೆಗಾರರು, ಇತ್ಯಾದಿ ಅಪರಾಧಿಗಳೊಂದಿಗೇ ಕೂಡಿ ಹಾಕಿದ್ದರು. ಕಟ್ಟೆಗಳನ್ನು ಸಮಾಧಿ ಎನ್ನಲಾಗುತ್ತಿತ್ತು. ಕೈದಿಗಳ ಸಂಖ್ಯೆ ಜಾಸ್ತಿ ಇದ್ದುದರಿಂದ ಕಟ್ಟೆಗಳ ನಡುವಣ ಜಾಗದಲ್ಲೂ ಕೈದಿಗಳು ಮಲಗಬೇಕಾಗುತ್ತಿತ್ತು. ಅದನ್ನು ಸಮಾಧಿಯ ಒಳಗೆ ಅನ್ನುತ್ತಿದ್ದರು. ನನಗೆ ಸಮಾಧಿಯ ಒಳಗೆ ಜಾಗ ಸಿಕ್ಕಿತ್ತು. ಬ್ಯಾರಕ್ಕಿನ ಒಂದು ಮೂಲೆಯಲ್ಲಿ ಇದ್ದ ಬಾಗಿಲಿಲ್ಲದ ಶೌಚಾಲಯ ಕಟ್ಟಿಕೊಂಡು ಹೊರಗೆಲ್ಲಾ ತುಂಬಿಕೊಂಡಿದ್ದು, ಆ ಗಬ್ಬು ವಾಸನೆಯ ನಡುವೆಯೇ ಅಲ್ಲಿರಬೇಕಿತ್ತು. ಅದನ್ನು ನೆನೆಸಿಕೊಂಡರೆ ಈಗಲೂ ವಾಕರಿಕೆ ಬರುತ್ತದೆ. ಊಟಕ್ಕೆ ಬಿಟ್ಟಾಗ ಕೊಡುತ್ತಿದ್ದ ಅರ್ಧ ಇಟ್ಟಿಗೆ ಆಕಾರದ ಮುದ್ದೆ ಮತ್ತು ಅರ್ಧ ಸೌಟು ಅರ್ಧಂಬರ್ಧ ಬೆಂದ ಬೇಳೆ ಸಾರುಗಳನ್ನು ಹಸಿವು ತಡೆಯದೆ ತಿನ್ನಲೇಬೇಕಿತ್ತು. ಸ್ನಾನ ಮಾಡಲು, ತಟ್ಟೆ ತೊಳೆಯಲು, ಮುಖ ತೊಳಯಲು ಇದ್ದ ತೊಟ್ಟಿಯ ನೀರು ಚರಂಡಿಯ ನೀರಿನಂತೆ ಕಾಣುತ್ತಿತ್ತು. ಕಟ್ಟಿಸಿದಾಗಿನಿಂದ ಅದನ್ನು ಬಹುಷಃ ಶುಚಿ ಮಾಡಿರಲಿಕ್ಕಿಲ್ಲ.
     ಹಾಸನ ಜಿಲ್ಲೆಯಲ್ಲೂ ನಿಗದಿತ ದಿನಾಂಕದಿಂದ ಚಳುವಳಿ ಆರಂಭವಾಗೇ ಬಿಟ್ಟಿತು. ಇಂತಹ ಸ್ಥಳದಲ್ಲಿ ಇಂತಹವರ ನಾಯಕತ್ವದಲ್ಲಿ ಚಳುವಳಿ ಮಾಡಲಾಗುವುದೆಂದು ಮೊದಲೇ ಕರಪತ್ರಗಳನ್ನು ಹಂಚಿ ಆ ಸಮಯಕ್ಕೆ ತುರ್ತು ಪರಿಸ್ಥಿತಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಚಳುವಳಿ ಮಾಡಲಾಗುತ್ತಿತ್ತು. ಹಾಸನದ ಗುಂಡೂರಾಯರು, ವೆಂಕಟರಮಣೇಗೌಡ, ಕರಿಬಸಪ್ಪ, ಅರಸಿಕೆರೆಯ ದುರ್ಗಪ್ಪಶೆಟ್ಟಿ, ಶ್ರೀನಿವಾಸಮೂರ್ತಿ, ಬಸವರಾಜು, ರಾಮಚಂದ್ರ, ಮರುಳಸಿದ್ದಪ್ಪ, ಛಾಯಾಪತಿ, ಆಲೂರಿನ ಮರಸು ಮಂಜುನಾಥ್, ಬಸವೇಗೌಡ, ಅರಕಲಗೂಡು ಹಿರಣ್ಣಯ್ಯ, ಅನಂತರಾಮು, ಬೇಲೂರಿನ ರವಿ, ನಾರಾಯಣ ಕಾಮತ್, ಚ.ರಾ.ಪಟ್ಟಣದ ಮಳಲಿಗೌಡ, ಸಕಲೇಶಪುರದ ಲೋಕೇಶಗೌಡ, ಹುರುಡಿ ವಿಶ್ವನಾಥ್, ಸತ್ಯನಾರಾಯಣ ಗುಪ್ತ, ವಿ.ಎಸ್.ಭಟ್, . . ಅಬ್ಬಾ, ಹೆಸರುಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ, (ಎಲ್ಲರ ಹೆಸರುಗಳನ್ನು ನಮೂದಿಸಲಾಗದಿರುವುದಕ್ಕೆ ಕ್ಷಮೆಯಿರಲಿ) ಇವರೆಲ್ಲರ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ ಚಳುವಳಿಗಳು ನಡೆದೇ ನಡೆದವು. ಬಂಧನಕ್ಕೊಳಗಾಗಿ ಸತ್ಯಾಗ್ರಹಿ ತಂಡಗಳು ಜೈಲಿಗೆ ಬರುತ್ತಿದ್ದಂತೆ ಒಳಗಿದ್ದ ಕೈದಿಗಳಿಂದ ಅವರಿಗೆ ವೀರೋಚಿತ ಸ್ವಾಗತ ಕಾದಿರುತ್ತಿತ್ತು. ಹಾಗೆಂದು ಇದೇನೂ ಸುಲಲಿತವಾಗಿ ನಡೆಯುತ್ತಿದ್ದ ಚಳುವಳಿಗಳೇನೂ ಅಲ್ಲ. ಭಾಗವಹಿಸಿದವರಿಗೆ ಪೋಲಿಸ್ ಠಾಣೆಯಲ್ಲಿ ಭಯಂಕರವಾದ, ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಆತಿಥ್ಯ ಸಿಗುತ್ತಿತ್ತು.
     ಮೊದಲೇ ಚಳುವಳಿಯ ಸ್ಥಳ, ಸಮಯ ಮತ್ತು ಭಾಗವಹಿಸುವವರ ವಿವರಗಳನ್ನು ಪ್ರಕಟಿಸುತ್ತಿದ್ದರಿಂದ ಪೋಲಿಸರು ಚಳುವಳಿ ತಡೆಯಲು ಮತ್ತು ಚಳುವಳಿ ಮಾಡುವುದಕ್ಕೆ ಮೊದಲೇ ಬಂಧಿಸಲು ಸಹಾಯವಾಗುತ್ತಿದ್ದರಿಂದ ನಂತರದ ದಿನಗಳಲ್ಲಿ ತಂತ್ರ ಬದಲಿಸಿ ಬೇರೆ ಬೇರೆ ಸ್ಥಳಗಳಲ್ಲಿ ಚಳುವಳಿಗಳು ನಡೆಯುತ್ತಿದ್ದವು. ಲೇಖನ ವಿಸ್ತಾರದ ಭಯದಿಂದ ಒಂದೆರಡು ಸ್ವಾರಸ್ಯಕರ ಸಂಗತಿಗಳ ಬಗ್ಗೆ ಮಾತ್ರ ಉಲ್ಲೇಖಿಸುವೆ. ಅರಸಿಕೆರೆಯಲ್ಲಿ ಒಂದು ಶವಯಾತ್ರೆ ನಡೆದಿತ್ತು. ದುಃಖತಪ್ತರು ವಾದ್ಯಸಮೇತ ಮೆರವಣಿಗೆಯಲ್ಲಿ ಸಾಗಿದ್ದರು. ಮೆರವಣಿಗೆ ಬಸ್ ಸ್ಟ್ಯಾಂಡ್ ಸಮೀಪ ಬರುತ್ತಿದ್ದಂತೆ ತುರ್ತು ಪರಿಸ್ಥಿತಿ ವಿರುದ್ಧ ಘೋಷಣೆಗಳು ಮೆರವಣಿಗೆಯಲ್ಲಿದ್ದವರಿಂದ ಮೊಳಗಲಾರಂಭಿಸಿದವು. ಪೋಲಿಸರಿಗೆ ಇದು ಸತ್ಯಾಗ್ರಹ ಎಂದು ಅರಿವಾಗಿ ಧಾವಿಸುವಷ್ಟರಲ್ಲಿ ಶವದ ಆಕಾರದ ಗೊಂಬೆಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚಿಬಿಟ್ಟಿದ್ದರು. ಆ ಬೊಂಬೆಯಲ್ಲಿ ಹುದುಗಿಸಿಟ್ಟಿದ್ದ ಸರಪಟಾಕಿಗಳು ಕಿವಿ ಗಡಚಿಕ್ಕುವ ಶಬ್ದ ಹೊರಡಿಸಲು ಪ್ರಾರಂಭಿಸಿದಾಗ ಪೋಲಿಸರು ಕಕ್ಕಾಬಿಕ್ಕಿಯಾಗಿದ್ದರು. 
     ಹಾಸನದ ನರಸಿಂಹರಾಜವೃತ್ತದಲ್ಲಿ ಸಕಲೇಶಪುರದ ಲೋಕೇಶಗೌಡರ ನೇತೃತ್ವದಲ್ಲಿ ಚಳುವಳಿ ನಡೆಯುವುದೆಂದು ಪ್ರಚುರವಾಗಿತ್ತು. ಅದನ್ನು ಶತಾಯ ಗತಾಯ ತಡೆಯಲು ಪೋಲಿಸರು ಎಲ್ಲೆಡೆ ಕಟ್ಟೆಚ್ಚರದಿಂದ ಕಾಯುತ್ತಿದ್ದರು. ಆ ರಸ್ತೆಯಲ್ಲಿ ಸಂಚಾರವನ್ನೇ ಸ್ಥಗಿತಗೊಳಿಸಿ ಬೇರೆ ದಾರಿಯಿಂದ ಸಂಚರಿಸಲು ವ್ಯವಸ್ಥೆ ಮಾಡಿದ್ದರು. ಜನರು ಒಟ್ಟಿಗೆ ಓಡಾಡದಂತೆ, ಅಲ್ಲಿ  ನಿಂತುಕೊಳ್ಳದಂತೆ ಪೋಲಿಸರು ತಾಕೀತು ಮಾಡುತ್ತಿದ್ದರು. ಹೀಗಿದ್ದಾಗ ಅಲ್ಲಿಗೆ ಒಂದು ಮೆಟಡಾರ್ ಅಲ್ಲಿಗೆ ಬಂದಿತು. ಬೇರೆ ದಾರಿಯಲ್ಲಿ ಹೋಗುವಂತೆ ಪೋಲಿಸರು ಸೂಚಿಸುವಾಗ ಅವರಿಗೆ ಅದರಲ್ಲಿ ಮೈಗೆಲ್ಲಾ ಬ್ಯಾಂಡೇಜ್ ಹಾಕಿಕೊಂಡಿದ್ದರೂ ರಕ್ತ ಒಸರುತ್ತಿದ್ದ ಅಪಾಯ ಸ್ಥಿತಿಯಲ್ಲಿದ್ದ ವ್ಯಕ್ತಿ ಮತ್ತು ಆತನ ಬಂಧುಗಳಿದ್ದುದು ಕಂಡುಬಂದಿತ್ತು. ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿದಾಗ ಮಾನವೀಯತೆಯಿಂದ ಆ ವಾಹನವನ್ನು ಮುಂದೆ ಹೋಗಲು ಬಿಟ್ಟರು. ಸ್ವಲ್ಪ ದೂರ ಹೋದ ಆ ವಾಹನ ಸರ್ಕಲ್ ಸಮೀಪದಲ್ಲೇ ಕೆಟ್ಟು ನಿಂತುಬಿಟ್ಟಿತು. ಬೇರೆ ವಾಹನ ತರುವುದಾಗಿ ಹೇಳಿ ವ್ಯಾನಿನಲ್ಲಿದ್ದವರು ನಾಲ್ಕು ಭಾಗಗಳಾಗಿ ನಾಲ್ಕು ರಸ್ತೆಗಳಲ್ಲಿ ಸ್ವಲ್ಪ ಮುಂದೆ ಸಾಗಿ ಅಂಗಿಯ ಒಳಗೆ ಹುದುಗಿಸಿಟ್ಟಿದ್ದ ಸರಪಟಾಕಿಗಳನ್ನು ಹಚ್ಚಿಬಿಟ್ಟರು. ವ್ಯಾನಿನ ಒಳಗೆ ಇದ್ದ ಬ್ಯಾಂಡೇಜ್ ಸುತ್ತಿಕೊಂಡಿದ್ದ ವ್ಯಕ್ತಿ ಒಂದು ಕೈಯಲ್ಲಿ ಭಗವಾದ್ವಜ ಇನ್ನೊಂದು ಕೈಲ್ಲಿ ತ್ರಿವರ್ಣ ದ್ವಜ ಹಿಡಿದು ಹೊರಗೆ ಬಂದು ಸರ್ಕಲ್ಲಿನ ಮಧ್ಯದಲ್ಲಿ ನಿಂತು, 'ಭಾರತಮಾತಾ ಕಿ ಜೈ', 'ತುರ್ತು ಪರಿಸ್ಥಿತಿಗೆ ಧಿಕ್ಕಾರ' ಎಂದು ಘೋಷಿಸಲು ಪ್ರಾರಂಭಿಸಿತ್ತು. ಆತ ಮತ್ಯಾರೂ ಆಗಿರದೇ ಲೋಕೇಶಗೌಡರೇ ಆಗಿದ್ದರು! ಪೋಲಿಸರಿಗೆ ಕೆಲಕ್ಷಣ ಯಾರನ್ನು ಬಂಧಿಸಬೇಕು ಎಂದು ತಿಳಿಯದೆ ಪರದಾಡಿ, ಕೊನೆಗೆ ಎಲ್ಲರನ್ನೂ ಬಂಧಿಸಿ ಹಾಸನದ ಸೆರೆಮನೆಗೆ ಅಟ್ಟಿದ್ದರು. 
     ಅರಕಲಗೂಡಿನ ಅನಂತ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ರಾತ್ರಿ ಧ್ವಜಸ್ಥಂಭ ಏರಿ ಅಲ್ಲಿ ಕಪ್ಪು ಬಾವುಟ ಹಾರಿಸಿ ಕೆಳಗೆ ಇಳಿದು ಬರುತ್ತಾ ಕಂಬಕ್ಕೆ ಗ್ರೀಸ್ ಮೆತ್ತಿ ಬಂದಿದ್ದ. ಮರುದಿನ ಬೆಳಿಗ್ಗೆ ಆ ಕಪ್ಪು ಬಾವುಟ ಇಳಿಸಿ ರಾಷ್ಟ್ರದ್ವಜ ಹಾರಿಸಲು ಅಧಿಕಾರಿಗಳು ಪಟ್ಟಿದ್ದ ಪಾಡು ಅಷ್ಟಲ್ಲ. ಇಂತಹ ಯಾವುದೇ ಸುದ್ದಿಗಳು ಆಕಾಶವಾಣಿಯಲ್ಲಾಗಲೀ, ಪತ್ರಿಕೆಯಲ್ಲಾಗಲೀ ಪ್ರಕಟವಾಗುತ್ತಲೇ ಇರಲಿಲ್ಲ. ಕೇವಲ ಭೂಗತ ಪತ್ರಿಕೆ 'ಕಹಳೆ'ಯ ಮೂಲಕ ಮಾತ್ರ ಸುದ್ದಿ ಹೊರಜಗತ್ತಿಗೆ ತಿಳಿಯುತ್ತಿತ್ತು. ಜನರು ಆ ಪತ್ರಿಕೆಯನ್ನು ಓದಲು, ಕೈಯಲ್ಲಿ ಹಿಡಿದುಕೊಳ್ಳಲೂ ಹೆದರುತ್ತಿದ್ದರೆಂದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾದೀತು. ಚಳುವಳಿಯಲ್ಲಿ ಅರಸಿಕೆರೆ ತಾಲ್ಲೂಕು ಮುಂಚೂಣಿಯಲ್ಲಿತ್ತು. ಬಂಧಿತರು, ಭಾಗವಹಿಸಿದವರಲ್ಲಿ ಅವರದೇ ಸಿಂಹಪಾಲು. ಉಳಿದ ತಾಲ್ಲೂಕುಗಳೂ ಗಣನೀಯ ಸಂಖ್ಯೆಯಲ್ಲಿ ಚಳುವಳಿಯಲ್ಲಿ ಭಾಗವಹಿಸಿದವು. ಆದರೆ ಇತರ ಎಲ್ಲಾ ತಾಲ್ಲೂಕುಗಳಿಗೆ ಹೋಲಿಸಿದರೆ  ಹೊಳೆನರಸಿಪುರ ತಾಲ್ಲೂಕಿನಲ್ಲಿ ವ್ಯಕ್ತವಾದ ಪ್ರತಿಭಟನೆ ಸ್ವಲ್ಪ ಸಪ್ಪೆಯೆಂದೇ ಹೇಳಬೇಕಾಗುತ್ತದೆ.
     ಭಾರತ ರಕ್ಷಣಾ ಕಾಯದೆ (ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್) ಅನ್ನು ಡಿಫೆನ್ಸ್ ಆಫ್ ಇಂದಿರಾ ರೂಲ್ಸ್ ಮತ್ತು ಆಂತರಿಕ ಭದ್ರತಾ ಶಾಸನ (ಮೀಸಾ-ಮೈಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ ಆಕ್ಟ್) ಅನ್ನು ಮೈಂಟೆನೆನ್ಸ್ ಆಫ್ ಇಂದಿರಾ ಸಂಜಯ್ ಆಕ್ಟ್ ಎಂದು ವ್ಯಂಗ್ಯವಾಗಿ ಆಡಿಕೊಳ್ಳಲಾಗುತ್ತಿತ್ತು. ಎರಡು ವರ್ಷಗಳ ಕಾಲ ಯಾವುದೇ ವಿಚಾರಣೆಯಿಲ್ಲದೆ, ನ್ಯಾಯಾಲಯಕ್ಕೆ ಯಾವುದೇ ಕಾರಣ ಕೊಡದೆ ಬಂಧಿಸಲು ಅವಕಾಶ ಕೊಡುವ ಮೀಸಾ ಕಾಯದೆ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಸರಿಯಾಗಿ ಮೀಸೆಯೇ ಬರದಿದ್ದ ವಿದ್ಯಾರ್ಥಿಗಳಾದ ಹಾಸನದ ಪಾರಸಮಲ್, ಅರಕಲಗೂಡಿನ ಪಟ್ಟಾಭಿರಾಮರನ್ನು ಬಂಧಿಸಿದ್ದರು. ಇತರ ಮೀಸಾ ಬಂದಿಗಳೆಂದರೆ, ದಿ. ಎಸ್.ವಿ.ಗುಂಡೂರಾವ್, ದಿ. ವೆಂಕಟರಮಣೇಗೌಡ, ದಿ. ಎನ್.ಕೆ.ಗಣಪಯ್ಯ, ಸಕಲೇಶಪುರದ ತರುಣ ಸತ್ಯನಾರಾಯಣಗುಪ್ತ, ಅರಸಿಕೆರೆಯ ಶ್ರೀನಿವಾಸಮೂರ್ತಿ, ದುರ್ಗಪ್ಪಶೆಟ್ಟಿ, ಆಲೂರು ತಾ.ನ ದಿ. ಬಸವೇಗೌಡ, ಮರಸು ಮಂಜುನಾಥ್, ಆರೆಸ್ಸೆಸ್ಸಿನ ಜಿಲ್ಲಾ ಪ್ರಚಾರಕ ದಿ. ಪ್ರಭಾಕರ ಕೆರೆಕೈ, ಅರೆಹಳ್ಳಿಯ ನಾರಾಯಣ ಕಾಮತ್, ಡಾ. ವಿ.ಎಸ್.ಭಟ್, ಸಕಲೇಶಪುರ. ಇವರ ಪೈಕಿ ಗಣಪಯ್ಯನವರು ಭಾರತೀಯ ಲೋಕದಳಕ್ಕೆ ಸೇರಿದವರಾಗಿದ್ದು ಉಳಿದವರೆಲ್ಲರೂ ಆರೆಸ್ಸೆಸ್ಸಿನವರು. ನನ್ನನ್ನೂ ಮೀಸಾ ಪ್ರಕಾರ ಬಂಧಿಸಲು ಆಗಿನ ಎಸ್.ಪಿ.ಯವರು ಶಿಫಾರಸು ಮಾಡಿದ್ದರೂ, ಆಗಿನ ಜಿಲ್ಲಾಧಿಕಾರಿ ಶ್ರೀ ಧೀರೇಂದ್ರಸಿಂಗರು ಅವರ ಕಛೇರಿಯ ನೌಕರನೇ ಆಗಿದ್ದ ನನ್ನನ್ನು ಮೀಸಾ ಬಂದಿಯಾಗಿಸಲು ಒಪ್ಪದ ಕಾರಣ ಮೀಸಾಬಂದಿಯಾಗಿ ಬಳ್ಳಾರಿ ಜೈಲಿಗೆ ಹೋಗುವುದು ತಪ್ಪಿತ್ತು. ದೇವೇಗೌಡರನ್ನು ಅವರ ಬೆಂಗಳೂರಿನ ನಿವಾಸದಲ್ಲಿ ಸರ್ಕಾರ ಮುಂಜಾಗ್ರತೆಯಾಗಿ ಬಂಧಿಸಿ ಬೆಂಗಳೂರಿನ ಜೈಲಿನಲ್ಲಿಟ್ಟಿದ್ದು, ಹಾಸನ ಜಿಲ್ಲೆಯಲ್ಲಿ ಬಂಧಿತರಾದವರ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಭಾರತ ರಕ್ಷಣಾ ಕಾಯದೆಯನ್ವಯ ಜಿಲ್ಲೆಯಲ್ಲಿ ಸುಮಾರು ೩೦೦ ಜನರು ಬಂಧಿತರಾಗಿದ್ದು ಅವರೆಲ್ಲರೂ ಆರೆಸ್ಸೆಸ್ಸಿನ ಮೂಲದವರೇ ಆಗಿದ್ದು ವಿಶೇಷವೇ ಸರಿ. ಇದಲ್ಲದೆ ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ವಿವಿಧ ಪ್ರಕರಣಗಳಲ್ಲಿ ಒಳಗೊಂಡವರು, ಜೈಲುಗಳಲ್ಲಿ ಸ್ಥಳವಿಲ್ಲದೆ ಹೆದರಿಸಿ, ಬೆದರಿಸಿ ಬಿಡಲ್ಪಟ್ಟವರ ಸಂಖ್ಯೆ ಲೆಕ್ಕಕ್ಕಿಲ್ಲ. ವಿವಿಧ ಕಾಲೇಜಿನ ತರುಣರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ. ಬಂಧನಕ್ಕೆ ಒಳಗಾಗದೆ, ಭೂಗತರಾಗಿ ಚಳುವಳಿಗೆ ಪ್ರೇರಿಸುವ, ಜನಜಾಗೃತಿ ಮಾಡುವ ಆರೆಸ್ಸೆಸ್ಸಿನ ತರುಣರ, ಪ್ರಚಾರಕರುಗಳ ಸಂಖ್ಯೆ ಮತ್ತು ಅವರು ತುರ್ತು ಪರಿಸ್ಥಿತಿ ತೆರವಿಗೆ ಮಾಡಿದ ಕೆಲಸ ಶ್ಲಾಘನೀಯವಾದುದಾಗಿದೆ. ಬಂಧನದ ಕಾಲದಲ್ಲಿ ಕಿರುಕುಳಕ್ಕೆ ಒಳಗಾಗಿದ್ದ ಜಿಲ್ಲಾ ಪ್ರಚಾರಕ ಪ್ರಭಾಕರ ಕೆರೆಕೈ ನಂತರದಲ್ಲಿ ಮತಿವಿಕಲತೆಗೆ ಒಳಗಾಗಿ ಕಿರಿಯ ವಯಸ್ಸಿನಲ್ಲೇ ಮೃತಪಟ್ಟರು. 
     ದೇಶದೆಲ್ಲೆಡೆ ತುರ್ತುಪರಿಸ್ಥಿತಿ ವಿರುದ್ಧ ಜನರ ಪ್ರತಿಭಟನೆ ಕಾವು ಪಡೆಯುತ್ತಿದ್ದಂತೆ ಇಂದಿರಾ ಸರ್ಕಾರ ತುರ್ತು ಪರಿಸ್ಥಿತಿ ತೆರವುಗೊಳಿಸಿ ಆರೆಸ್ಸೆಸ್ ಸೇರಿದಂತೆ ವಿವಿಧ ಸಂಘಟನೆಗಳ ಮೇಲಿನ ನಿಷೇಧ ರದ್ದು ಪಡಿಸಲೇಬೇಕಾತು. ಲೋಕಸಭೆ ವಿಸರ್ಜಿಸಿ ಚುನಾವಣೆ ನಡೆಸಿ, ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದು ತಮ್ಮದು ಸರಿಯಾದ ಕ್ರಮವಾಗಿತ್ತೆಂದು ಸಮರ್ಥಿಸಿಕೊಳ್ಳಬಹುದೆಂದು ಎಣಿಸಿದ್ದ ಅವರ ಎಣಿಕೆ ತಲೆಕೆಳಗಾಯಿತು. ವಿರೋಧ ಪಕ್ಷಗಳು ಕಾಂಗ್ರೆಸ್ ವಿರುದ್ಧ ಒಗ್ಗೂಡಿ ಜನತಾಪಕ್ಷ ರಚಿಸಿಕೊಂಡು ಚುನಾವಣೆ ಎದುರಿಸಿ ಯಶಸ್ವಿಯಾದವು. ಕೇಂದ್ರದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರ ನೀಡಿತು. ಕರ್ನಾಟಕದಲ್ಲಿ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರ ಮತ್ತು ಹಾಸನದಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದರು. ಹಾಸನದ ಎಸ್. ನಂಜೇಶಗೌಡರು ಅಲ್ಪ ಬಹುಮತದಿಂದ ಜಯಗಳಿಸಿದ್ದು ಜಿಲ್ಲೆಯ ಜನತೆಯ ಪ್ರಜಾಫ್ರಭುತ್ವದ ಒಲವನ್ನು ಎತ್ತಿ ತೋರಿಸಿತ್ತು, ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಬೆಂಬಲಿಸಿದಂತಿತ್ತು.
     ಸುಮಾರು ಒಂದು ವರ್ಷದ ಹಿಂದೆ, ದಿನಾಂಕ ೨೯-೧೨-೨೦೧೨ರಂದು ತುರ್ತುಪರಿಸ್ಥಿತಿಯ ನೆನಪುಗಳಿಗೆ ಸಂಬಂಧಿಸಿದ ಲೇಖಕನ "ಆದರ್ಶದ ಬೆನ್ನು ಹತ್ತಿ. ." ಕೃತಿ ಬಿಡುಗಡೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡವರ ಸಮಾವೇಶ ಏರ್ಪಡಿಸಲಾಗಿತ್ತು. ಎಷ್ಟೋ ಜನರು ಸತ್ತೇ ಹೋಗಿದ್ದರು, ಎಷ್ಟೋ ಜನರು ಊರು ಬಿಟ್ಟು ಹೋಗಿದ್ದು ಅವರ ವಿಳಾಸ ತಿಳಿದಿರಲಿಲ್ಲ. ಹಾಗಾಗಿ ಅಂದು ತರುಣರಾಗಿದ್ದು, ಈಗ ಜೀವನ ಸಂಧ್ಯಾಕಾಲದಲ್ಲಿರುವ ಜಿಲ್ಲೆಯ ಸುಮಾರು ೧೦೦ ಜನರನ್ನು ಶ್ರಮವಹಿಸಿ ಒಟ್ಟಿಗೆ ಸೇರಿಸಿದ್ದು ಮರೆಯಲಾಗದ ಅನುಭವ ನೀಡಿತ್ತು. ೧೯೭೫-೭೭ರ ಅವಧಿಯಲ್ಲಿ ಬಂಧಿತರಾಗಿದ್ದಾಗ ಕಂಡಿದ್ದವರು ಸುಮಾರು ೩೫ ವರ್ಷಗಳ ನಂತರದಲ್ಲಿ ಪರಸ್ಪರ ಮುಖಾಮುಖಿಯಾದಾಗ ಅವರುಗಳಿಗೆ ಆದ ಅನುಭವ, ಆನಂದ ಅವರ್ಣನೀಯ. ಪರಸ್ಪರರನ್ನು ತಬ್ಬಿಕೊಂಡು, 'ಅಯ್ಯೋ, ನೀನಿನ್ನೂ ಬದುಕಿದ್ದೀಯೇನೋ, ಸತ್ತೇ ಹೋಗಿದ್ದಿಯೇನೋ ಅಂದುಕೊಂಡಿದ್ದೆ' ಎಂದು ಆನಂದಬಾಷ್ಪ ಸುರಿಸಿದ್ದರು. ಎಲ್ಲರೂ ಹಿಂದಿನ ತಾರುಣ್ಯದ ಕಾಲಕ್ಕೆ ಜಾರಿದ್ದರು. ಜೈಲಿನಲ್ಲಿ ಹಾಡುತ್ತಿದ್ದ 'ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲೇಳಲಿ' ಎಂಬ ಹಾಡನ್ನು ಎದೆಯುಬ್ಬಿಸಿ ಸಾಮೂಹಿಕವಾಗಿ ಹಾಡಿದಾಗ ಕಣ್ಣಂಚಿನಲ್ಲಿ ನೀರಾಡಿದ್ದವು. ನಿರಂತರ ಜಾಗೃತಿಯೇ ಪ್ರಜಾಪ್ರಭುತ್ವದ ಉಳಿವಿಗೆ ಕಾರಣ ಎಂಬ ಸಂದೇಶ ಬಿತ್ತರವಾಗಿತ್ತು.
-ಕ.ವೆಂ.ನಾಗರಾಜ್.
*****

ನಿಂತಿರುವವರು: ನಾಗಭೂಷಣ, ವಾಸುದೇವ, . . . . ,ರವಿಕುಮಾರ್, ಸತ್ಯಮೂರ್ತಿ, ಕುಮಾರ್, ಫಾಲಾಕ್ಷ, ಶ್ರೀರಾಮ, ಸುಬ್ರಹ್ಮಣ್ಯ, ಪ್ರಸನ್ನ, ಹಿರಿಯಣ್ಣ, ರಾಮಶಂಕರಬಾಬು, ಸುವರ್ಣ, ಪುರುಷೋತ್ತಮ
ಕುಳಿತಿರುವವರು: ಎ.ವಿ. ಚಂದ್ರಶೇಖರ್, ಶಿವರಾಮ್, ಬಸವರಾಜು, ಪಾರಸಮಲ್, ಜಯಪ್ರಕಾಶ್, ಕರಿಬಸಪ್ಪ, ಎಸ್.ವಿ. ಗುಂಡೂರಾವ್, ರಾಜಶೇಖರ್, ಜನಾರ್ಧನ ಐಯ್ಯಂಗಾರ್, ಚಂದ್ರಶೇಖರ್, ಶಾಂತಿಲಾಲ್, ಲೇಖಕ ಕ.ವೆಂ.ನಾಗರಾಜ್, ರಾಮಚಂದ್ರ.
****
     ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಾಸನದಲ್ಲಿ 28-02-2014 ಮತ್ತು 01-03-2014ರಂದು ನಡೆದ 14ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟವಾದ ವಿಶೇಷ ತ್ರೈಮಾಸಿಕ 'ಹೊಯ್ಸಳ ಸಿರಿ'ಯಲ್ಲಿ ಈ ಲೇಖನ ಪ್ರಕಟವಾಗಿದೆ. ಸಂಪಾದಕ ಶ್ರೀ ಅರಕಲಗೂಡು ಜಯಕುಮಾರರು ಈ ಬಗ್ಗೆ ಬರೆಯಲು ದೂರವಾಣಿ ಮೂಲಕ ಕೋರಿದ್ದಲ್ಲದೆ, ತರಿಸಿಕೊಂಡು ಪ್ರಕಟಿಸಿದ್ದಾರೆ. ಅವರಿಗೆ ವಂದನೆಗಳು.
ಸೋಮವಾರ, ಮಾರ್ಚ್ 3, 2014

ಹೊಳೆ ದಾಟಿದ ಮೇಲೆ . . .

     ಹೊಳೆ ದಾಟಿದ ಮೇಲೆ ಅಂಬಿಗನನ್ನು, ವಿದ್ಯಾಭ್ಯಾಸದ ನಂತರ ಶಿಷ್ಯ ಗುರುವನ್ನು, ಸಂಸಾರಿಯಾದ ಮಕ್ಕಳು ಪೋಷಕರನ್ನು, ಕಾಮವಾಂಛೆ ತೀರಿದ ನಂತರ ಪುರುಷ ಸ್ತ್ರೀಯನ್ನು, ಕೈಕೊಂಡ ಕೆಲಸ ಪೂರ್ಣವಾದ ನಂತರ ಕೆಲಸಕ್ಕೆ ನೆರವಾದವರನ್ನು ಮತ್ತು ರೋಗ ಗುಣವಾದ ನಂತರ ವೈದ್ಯನನ್ನು ಅವಗಣಿಸುವುದು ಸಾಮಾನ್ಯ ಎಂದು ವಿದುರನೀತಿಯಲ್ಲಿ ಉಲ್ಲೇಖವಿದೆ. ಸ್ವಾರ್ಥ ಪ್ರಧಾನವಾದಾಗ ಇಂತಹ ಅವಗಣನೆ ಕೆಲವೊಮ್ಮೆ ಕ್ರೂರ ರೂಪವನ್ನೂ ತಳೆಯಬಲ್ಲದು. ಇಂತಹ ಒಂದು ಕ್ರೂರ ಘಟನೆಯ ಕಥೆಯ ರೂಪ ಇಲ್ಲಿದೆ:
     ಗಡಿಬಿಡಿಯಿಂದ ಸುಬ್ಬಣ್ಣ ಬಸ್ ನಿಲ್ದಾಣದ ಹತ್ತಿರ ಬರುವುದಕ್ಕೂ ಅವನು ಹತ್ತಬೇಕಾಗಿದ್ದ ಬಸ್ಸು ಅವನ ಕಣ್ಣ ಮುಂದೆಯೇ ಹೊರಟುಹೋಗುವುದಕ್ಕೂ ಸರಿಯಾಯಿತು. ಇನ್ನು ಮುಂದಿನ ಬಸ್ಸಿಗೆ ಏಳು ಗಂಟೆಯವರೆಗೆ ಕಾಯಬೇಕಲ್ಲಾ ಎಂದುಕೊಂಡವನು ಹೋಟೆಲಿನಲ್ಲಿ ಕಾಫಿ ಕುಡಿದು ಸಮೀಪದ ಪಾರ್ಕಿಗೆ ಹೋಗಿ ಅಲ್ಲಿನ ಬೆಂಚಿನ ಮೇಲೆ ಉಸ್ಸಪ್ಪಾ ಎಂದು ಕುಳಿತವನಿಗೆ ಹಿಂದಿನ ದಿನಗಳ ನೆನಪಾದವು. ಇಪ್ಪತ್ತು ವರ್ಷಗಳ ಕಾಲ ಕಛೇರಿ ಗುಮಾಸ್ತನಾಗಿದ್ದವನು ಬಡ್ತಿ ಹೊಂದಿ ಕಳೆದ ಹನ್ನೆರಡು ವರ್ಷಗಳಿಂದ ಸೂಪರಿಂಟೆಂಡೆಂಟ್ ಆಗಿದ್ದ. ೩೨ ವರ್ಷಗಳ ಸೇವೆಯಿಂದ ರಸ ಹೀರಿದ ಕಬ್ಬಿನಂತೆ ತೋರುತ್ತಿದ್ದ ಅವನು ಅಷ್ಟರಲ್ಲಿ ಇಪ್ಪತ್ತು ವರ್ಗಾವಣೆಗಳನ್ನು ಕಂಡಿದ್ದ. ನ್ಯಾಯ, ನೀತಿ, ನಿಯತ್ತು ಎಂದು ದುಡಿಯುವವರನ್ನು ಕಂಡರೆ ಯಾರಿಗೆ ತಾನೇ ಹೊಂದಾಣಿಕೆ ಆಗುತ್ತೆ? ಮೇಲಾಧಿಕಾರಿಗಳು, ರಾಜಕಾರಣಿಗಳ ಅವಕೃಪೆ, ಸಹೋದ್ಯೋಗಿಗಳ ಅಸಹಕಾರಗಳನ್ನು ಇಂತಹ ನಿಯತ್ತಿನ ಪ್ರಾಣಿಗಳು ಎದುರಿಸಬೇಕಾದದ್ದೇ. ಹೀಗಾಗಿ ಊರಿಂದ ಊರಿಗೆ ಅಲೆಯಬೇಕಾಗಿದ್ದ ಸುಬ್ಬಣ್ಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಕಳೆದ ಇಪ್ಪತ್ತು ವರ್ಷಗಳಿಂದಲೂ ಹೆಂಡತಿ ಪರಿಮಳ, ಮಕ್ಕಳು ಶ್ವೇತಾ ಮತ್ತು ಶಂಕರರನ್ನು ಹೊಸೂರಿನಲ್ಲೇ ಬಿಟ್ಟು, ಸೂಟ್ ಕೇಸ್ ಹಿಡಿದುಕೊಂಡು ತಾನೊಬ್ಬನೇ ವರ್ಗಾವಣೆ ಆದ ಸ್ಥಳಕ್ಕೆ ಸುತ್ತಾಡುತ್ತಿದ್ದ. ವಾರಕ್ಕೊಮ್ಮೆ ಊರಿಗೆ ಹೋಗಿ ಹೆಂಡತಿ ಮಕ್ಕಳೊಡನೆ ಕಳೆದು ಬರುತ್ತಿದ್ದ. ಸುತ್ತಾಟ, ಹೋಟೆಲ್ ಊಟ, ಕೆಲಸದ ಒತ್ತಡ ಎಲ್ಲವೂ ಸೇರಿ ಆರೋಗ್ಯವೂ ಅಷ್ಟಕ್ಕಷ್ಟೇ ಆಗಿದ್ದ ಸುಬ್ಬಣ್ಣ ದೈಹಿಕವಾಗಿ, ಮಾನಸಿಕವಾಗಿ ಸೋತುಹೋಗಿದ್ದ. ಕಷ್ಟಪಟ್ಟು ಸಾಲ-ಸೋಲ ಮಾಡಿ ೧೫ ವರ್ಷದ ಹಿಂದೆ ಊರಿನಲ್ಲಿ ತನ್ನದೇ ಆದ ಒಂದು ಪುಟ್ಟ ಮನೆ ಕಟ್ಟಿದ್ದ ಸುಬ್ಬಣ್ಣ, ಮನೆಯ ಖರ್ಚಿನ ಜೊತೆಗೆ ಸಾಲದ ಕಂತುಗಳು, ಬಡ್ಡಿಗೆ ಹಣ ಹೊಂದಿಸುವಲ್ಲಿ ಹೈರಾಣಾಗಿದ್ದ. ಕಳೆದ ವರ್ಷವಷ್ಟೇ ಮನೆ ಸಾಲ ತೀರಿತ್ತು. ಮಗಳ ಮದುವೆಯೂ ಆಗಿ ಆಕೆ ಗಂಡನೊಂದಿಗೆ ನರಸಾಪುರದಲ್ಲಿ ಸುಖವಾಗಿದ್ದುದು ಮನಸ್ಸಿಗೆ ಕೊಂಚ ನೆಮ್ಮದಿ ಕೊಟ್ಟಿತ್ತು. ಗ್ರಾಜುಯೇಟ್ ಮಗ ಶಂಕರನಿಗೆ ನೌಕರಿ ಸಿಕ್ಕಿರದಿದ್ದುದೇ ಒಂದು ಚಿಂತೆಯಾಗಿದ್ದು, ಅದಕ್ಕಾಗಿ ಅವರಿವರ ಕೈಕಾಲು ಹಿಡಿದರೂ ಪ್ರಯೋಜನವಾಗಿರಲಿಲ್ಲ. ಅವನಿಗೊಂದು ನೌಕರಿ ಸಿಕ್ಕಿಬಿಟ್ಟಿದ್ದರೆ, ಇಷ್ಟು ವರ್ಷ ಕಷ್ಟ ಪಟ್ಟಿದ್ದಕ್ಕೂ ಸಾರ್ಥಕವಾಗುತ್ತಿತ್ತು ಎಂದು ಅವನ ಮನ ಯೋಚಿಸುತ್ತಿತ್ತು.
     ಕತ್ತಲಾಗುತ್ತಾ ಬಂದು ಪಾರ್ಕಿನಲ್ಲಿದ್ದ ಜನರು ಖಾಲಿಯಾಗುತ್ತಿದ್ದರು. ಗಡಿಯಾರ ಏಳು ಗಂಟೆಗೆ ಹತ್ತು ನಿಮಿಷವಿರುವುದನ್ನು ತೋರಿಸುತ್ತಿತ್ತು. ಸುಬ್ಬಣ್ಣ ಜೋಳಿಗೆಯಂತಿದ್ದ ಬ್ಯಾಗನ್ನು ಹೆಗಲಿಗೇರಿಸಿ ಬಸ್ ನಿಲ್ದಾಣಕ್ಕೆ ಬಂದಾಗ ಅಪರೂಪಕ್ಕೆ ಬಸ್ಸು ಸರಿಯಾದ ಸಮಯಕ್ಕೆ ಬಂತು. ಟಿಕೆಟ್ ಪಡೆದು ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತ. ಹೊಸೂರಿಗೆ ಸುಮಾರು ಎರಡೂವರೆ ಗಂಟೆಗಳ ಪ್ರಯಾಣ. ಸದ್ಯ, ಇನ್ನು ಆರು ತಿಂಗಳಿಗೆ ರಿಟೈರಾಗುತ್ತಿದ್ದು, ಈ ಪ್ರಯಾಣ, ಒದ್ದಾಟ ತಪ್ಪಿ, ಉಪ್ಪೋ, ಗಂಜಿಯೋ ಬರುವ ಪೆನ್ಶನ್ನಿನಲ್ಲಿ ಮನೆ ಊಟ ಮಾಡಿಕೊಂಡು ಮನೆಯವರೊಂದಿಗೆ ಇರಬಹುದೆಂದುಕೊಂಡಾಗ ಸಂತೋಷವಾಗುತ್ತಿತ್ತು. ಮನೆ ತಲುಪಿದಾಗ ರಾತ್ರಿ ಒಂಬತ್ತೂ ಮುಕ್ಕಾಲು ಆಗಿತ್ತು. ತರಲೆ ಭಾವಮೈದುನ ಕಿಟ್ಟನೂ ಮನೆಗೆ ಬಂದಿದ್ದ. ಎಲ್ಲರೂ ಹರಟೆ ಹೊಡೆಯುತ್ತಿದ್ದರು. ಕಿಟ್ಟ ಬಂದಾಗಲೆಲ್ಲಾ ಏನೇನೋ ಹೆಂಡತಿ, ಮಕ್ಕಳ ತಲೆಗೆ ತುಂಬಿ ಮನಸ್ಸು ಕೆಡಿಸುತ್ತಿದ್ದರಿಂದ ಸುಬ್ಬಣ್ಣನಿಗೆ ಅವನನ್ನು ಕಂಡರೆ ಅಷ್ಟಕ್ಕಷ್ಟೇ ಇದ್ದರೂ ಔಪಚಾರಿಕವಾಗಿ ಮಾತನಾಡಿಸುತ್ತಿದ್ದ.
     ಊಟ ಮಾಡುತ್ತಾ ಇದ್ದಾಗ ಕಿಟ್ಟ ಹೇಳಿದ: ಆ ಮೂಲೆಮನೆ ವೆಂಕಟೇಶ, ಅದೇ ಹೆಲ್ತ್ ಇನ್ಸ್‌ಪೆಕ್ಟರ್ ಆಗಿದ್ದೋನು, ಆಕ್ಸಿಡೆಂಟ್ ಆಗಿ ಸತ್ತಿದ್ದನಲ್ಲಾ, ಅವನ ಮಗನಿಗೆ ಅನುಕಂಪದ ಆಧಾರದ ಮೇಲೆ ಡಿ.ಸಿ. ಆಫೀಸಿನಲ್ಲಿ ಅಸಿಸ್ಟೆಂಟ್ ಆಗಿ ಅಪಾಯಿಂಟ್ ಆಯಿತು. ನಿನ್ನೆ ನೌಕರಿಗೆ ಸೇರಿದ.
ಪರಿಮಳ:  ಹಾಗಾದರೆ ವೆಂಕಟೇಶನ ಹೆಂಡತಿಗೆ ಪೆನ್ಶನ್ ಬರಲ್ಲವಾ?
ಕಿಟ್ಟ:  ಎಲ್ಲಾ ಬರುತ್ತೆ. ಪೆನ್ಶನ್, ಗ್ರಾಚುಯಿಟಿ, ಬರಬೇಕಾಗಿದ್ದ ಎಲ್ಲ ಸವಲತ್ತೂ ಬಂದೇ ಬರುತ್ತೆ. ವೆಂಕಟೇಶ ಸತ್ತ ಅನ್ನೋದೊಂದೇ ಹೊರತು ಅವನ ಮನೆಯವರಿಗೆ ಇನ್ನೂ ಅನುಕೂಲವೇ ಆಯಿತು. ಮಗನಿಗೆ ಹೊಸ ನೌಕರಿ, ಒಳ್ಳೆ ಸಂಬಳ, ಜೊತೆಗೆ ವೆಂಕಟೇಶನ ಹೆಂಡತಿಗೆ ಸಾಯೋವರೆಗೂ ಪೆನ್ಶನ್ನು! ರಾಜರ ಹಂಗೆ ಇರಬಹುದು.
ಸುಬ್ಬಣ್ಣ:  ಏನೋ ನೀನು ಹೇಳೋದು? ಹೆಂಡತಿ, ಮಕ್ಕಳು ಚೆನ್ನಾಗಿರಬೇಕು ಅಂದ್ರೆ ಗಂಡ ಸತ್ತರೂ ಪರವಾಗಿಲ್ಲ ಅಂತ ಹೇಳ್ತೀಯಲ್ಲೋ!
ಕಿಟ್ಟ: ಇನ್ನೇನು ಬಿಡಿ ಭಾವಾ. ಆ ಕುಡುಕ ವೆಂಕಟೇಶ ಹೆಚ್ಚು ದಿನ ಏನೂ ಬದುಕ್ತಾ ಇರಲಿಲ್ಲ. ನೂರೆಂಟು ಕಾಯಿಲೆ ಅವನಿಗೆ. ಕೆಲಸದಲ್ಲಿದ್ದಾಗಲೇ ಸತ್ತಿದ್ದರಿಂದ ಮನೆಗೆ ಉಪಕಾರ ಆಯ್ತು ಬಿಡಿ. 
     ಸುಬ್ಬಣ್ಣ ಮಾತು ಮುಂದುವರೆಸದೆ ಊಟ ಮಾಡಿದವನೇ ಸುಸ್ತಾಗಿದ್ದರಿಂದ ಹೋಗಿ ಮಲಗಿಬಿಟ್ಟ. ಮಲಗಿದರೂ ಮನಸ್ಸು ಮಲಗಲಿಲ್ಲ. ಮಗನಿಗೆ ಒಂದು ನೌಕರಿ ಸಿಕ್ಕಿದ್ದರೆ ಎಷ್ಟು ಚೆನ್ನಾಗಿತ್ತು, ಸುಖವಾಗಿ ಕಣ್ಣು ಮುಚ್ಚಬಹುದಿತ್ತು. ಮಿನಿಸ್ಟರು ಕೊಮಾರೇಗೌಡರು ೫ ಲಕ್ಷ ಕೊಟ್ಟರೆ ಡೈರಿಯಲ್ಲಿ ನೌಕರಿ ಕೊಡಿಸ್ತೀನಿ ಅಂದಿದ್ರು. ಸಾಲ ಸೋಲಾನಾದ್ರೂ ಮಾಡಿ ಹಣ ಹೊಂದಿಸಿ ಅವನಿಗೆ ಒಂದು ಕೆಲಸ ಅಂತ ಕೊಡಿಸಬೇಕು ಅಂತೆಲ್ಲಾ ಮನ ಯೋಚಿಸುತ್ತಿತ್ತು. ಹಾಗೆಯೇ ನಿದ್ರೆ ಆವರಿಸಿತು. ಗಾಢ ನಿದ್ದೆಯಲ್ಲಿದ್ದ ಸುಬ್ಬಣ್ಣನಿಗೆ ಮಧ್ಯರಾತ್ರಿಯಲ್ಲಿ ಏನೋ ಶಬ್ದವಾದಂತಾಗಿ ಎಚ್ಚರವಾಯಿತು. ಲೈಟು ಹಾಕಲು ಎದ್ದವನಿಗೆ ಹಿಂಬದಿಯಿಂದ ತಲೆಗೆ ದೊಣ್ಣೆಯಿಂದ ಬಲವಾದ ಪೆಟ್ಟು ಬಿದ್ದಿತ್ತು. ಕುಸಿದು ಬೀಳುತ್ತಾ 'ಅಮ್ಮಾ' ಎಂದದ್ದೇ ಅವನ ಕೊನೆಯ ಮಾತಾಯಿತು.
     ಓದುಗರೇ, ಹೇಳಬೇಕಾಗಿದ್ದಷ್ಟನ್ನು ಹೇಳಿಯಾಗಿದೆ. ಶೇಷ ಭಾಗವನ್ನು ತಮ್ಮ ವಿವೇಚನೆಗೆ ತಕ್ಕಂತೆ ಮುಂದುವರೆಸಿಕೊಳ್ಳಬಹುದು.  
-ಕ.ವೆಂ.ನಾಗರಾಜ್.