ಈ ಚಿತ್ರವನ್ನು ಗಮನಿಸಿ. ಆಫ್ರಿಕಾದ ಬೋಟ್ಸ್ವಾನಾದಲ್ಲಿ ಒಬ್ಬ ತಾಯಿ ತನ್ನ ಮಗುವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಕೈಯಲ್ಲಿ ಒಂದು ಪಾತ್ರೆ ಹಿಡಿದುಕೊಂಡು ಎದೆಮಟ್ಟದ ನೀರಿನಲ್ಲಿ ಸಾಗುತ್ತಿದ್ದಾಳೆ. ಇಲ್ಲಿ ಮಮತಾಮಯಿ ತಾಯಿಯ ಜೊತೆಗೆ ಮಗುವೂ ಕೈಕಾಲುಗಳ ಸಹಿತ ಸೊಂಟದವರೆಗೆ ನೀರಿನಲ್ಲಿ ಮುಳುಗಿದ್ದರೂ ನಿಶ್ಚ್ಚಿಂತೆಯಾಗಿ ತಾಯಿಯ ಬೆನ್ನಿನ ಮೇಲೆ ಒರಗಿ ನಿದ್ರಿಸುತ್ತಿರುವುದು ಗಮನ ಸೆಳೆಯುತ್ತದೆ. ತಾಯಿಯ ತೆಕ್ಕೆಯಲ್ಲಿ ತಾನು ಸುಭದ್ರನೆಂಬ ನಂಬಿಕೆ ಈ ಮಗುವಿನ ನಿರಾಳತೆಗೆ ಕಾರಣ. ನಿಜವಾಗಿಯೂ ನಂಬಿಕೆಗೆ ಎಂತಹ ಅದ್ಭುತ ಶಕ್ತಿಯಿದೆ! ನಂಬಿಕೆಯಲ್ಲಿ ನೆಮ್ಮದಿಯಿದೆ. ಮಾನವನಲ್ಲದೆ ಪ್ರಾಣಿಲೋಕದಲ್ಲಿಯೂ ಪರಸ್ಪರ ಪ್ರೀತಿ-ವಿಶ್ವಾಸಗಳಿಂದೊಡಗೂಡಿದ ನಂಬಿಕೆಯನ್ನು ಪುಷ್ಟೀಕರಿಸುವ ಸಂಗತಿಗಳು ಸಿಗುತ್ತವೆ.
ಈ ದೇವರ ಸೃಷ್ಟಿಯಲ್ಲಿ ಕೆಟ್ಟದ್ದು ಎಂಬುದು ಯಾವುದೂ ಇಲ್ಲ. ಯಾವುದಾದರೂ ಕೆಟ್ಟದ್ದು ಇದ್ದರೆ ಅದು ನಾವು ನೋಡುವ, ಬಳಸುವ ರೀತಿಯಿಂದ ಮಾತ್ರ. ಪ್ರತಿಯೊಂದಕ್ಕೂ ಹಲವು ಮುಖಗಳಿರುತ್ತವೆ. ಅದೇ ರೀತಿ ನಂಬಿಕೆಗೂ ಹಲವು ಮುಖಗಳಿರುತ್ತವೆ. ಅದಕ್ಕೆ ಕಾರಣ ನಂಬಿಕೆ ಎಂದು ನಾವು ನಂಬಿರುವುದರಲ್ಲಿನ ಸಂಗತಿಗಳ ವೈಪರೀತ್ಯಗಳೂ ಕಾರಣವಾಗುತ್ತವೆ. ಹಾಗಾಗಿ ನಂಬಿಕೆ ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು, ಒಂದು ಚಾಕುವನ್ನು ಒಳ್ಳೆಯದು ಮತ್ತು ಕೆಟ್ಟದ್ದು, ಎರಡಕ್ಕೂ ಬಳಸಬಹುದಾಗಿರುವಂತೆ! ನಂಬಿಕೆಯಿಂದ ಜೀವನ ಸುಗಮವಾಗುವುದೇನೋ ನಿಜ, ಆದರೆ ನಂಬಿಕೆಯೇ ಜೀವನವಾಗಬಾರದು ಎಂಬದೂ ಅಷ್ಟೇ ಸರಿ. ಏಕೆಂದರೆ ನಂಬಿಕೆ ಅನ್ನುವುದು ಕಾಲ, ಮಾನ, ದೇಶ, ಪರಿಸ್ಥಿತಿ/ಸಂದರ್ಭಗಳಿಗನುಸಾರವಾಗಿ ಬದಲಾಗಬಹುದಾಗಿರುತ್ತದೆ. ಸ್ವಂತದ ಅನುಭವಗಳಿಂದ ನಂಬಿಕೆಯ ನೆಲೆಗಟ್ಟು ಭದ್ರಗೊಳ್ಳುತ್ತದೆ. ನಿಜವಾದ ನಂಬಿಕೆ ಅನುಭವದಿಂದಲೇ ಬರಬೇಕು.
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ಹಿರಿಯ ನಿಜವರಿತು ನಡೆವ ಮೂಢ ||
ನಂಬಿಕೆಗೆ ಧಾರ್ಮಿಕ, ಸಾಮಾಜಿಕ, ಐತಿಹಾಸಿಕ, ವೈಜ್ಞಾನಿಕ, ಮುಂತಾದ ಹಲವು ಆಯಾಮಗಳಿವೆ. ಧಾರ್ಮಿಕವಾಗಿ ನಂಬಿಕೆಯಿಂದ ಪ್ರಯೋಜನವೂ ಆಗಿದೆ, ಅನಾಹುತಗಳೂ ಆಗಿವೆ. ಸಾಮಾನ್ಯಗೊಳಿಸಿ ಹೇಳಬೇಕೆಂದರೆ ಪ್ರಚಲಿತವಿರುವ ಎಲ್ಲಾ ಧರ್ಮಗಳು, ಮತಗಳು, ಪುರಾಣ-ಪುಣ್ಯಕಥೆಗಳು, ಧರ್ಮಗ್ರಂಥಗಳು ಗಿರಕಿ ಹೊಡೆಯುವುದು ಜಗತ್ತು, ಜೀವ ಮತ್ತು ದೇವ - ಈ ಮೂರರ ಸುತ್ತಲೇ! ವಿವಿಧ ಧರ್ಮಗಳು, ಧರ್ಮಗ್ರಂಥಗಳು ಈ ಮೂರನ್ನು ವಿವಿಧ ರೀತಿಯಲ್ಲಿ ವಿವರಿಸುತ್ತಿದ್ದು, ವಿವಿಧ ಧರ್ಮಾನುಯಾಯಿಗಳು ತಮ್ಮ ತಮ್ಮ ಧರ್ಮಗ್ರಂಥಗಳು, ಧರ್ಮಗುರುಗಳು ಹೇಳಿದಂತೆ ನಂಬಿಕೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿದ್ದಾರೆ. ಒಂದಂತೂ ಸತ್ಯ, ಈ ಮೂರು ಸಂಗತಿಗಳು ಯಾವುದೇ ರೀತಿಯಲ್ಲಿ ವಿಶ್ಲೇಷಣೆಗೆ ಒಳಪಡಲಿ, ಅವುಗಳು ಇರುವ ರೀತಿಯಲ್ಲಿ ಇರುತ್ತವೆಯೇ ಹೊರತು ವಿಶ್ಲೇಷಣೆಗೆ ತಕ್ಕಂತೆ ಬದಲಾಗಲಾರವು. ಉತ್ತಮವಾದ ಅಂಶವೆಂದರೆ ಎಲ್ಲಾ ಧರ್ಮಗಳು ಮಾನವರು ಇರುವ ಸ್ಥಿತಿಗಿಂತ ಮೇಲೇರಲು ಹೇಗೆ ಇರಬೇಕೆಂಬುದನ್ನು ಹೇಳುತ್ತವೆ. ನಾಗರಿಕ ಧರ್ಮದ ಮೂರು ಅಭಿನ್ನ ಅಂಗಗಳೆಂದು ಗುರುತಿಸಲ್ಪಟ್ಟವು ಜ್ಞಾನ, ಕರ್ಮ ಮತ್ತು ಉಪಾಸನೆಗಳು. ಇರುವ ಸ್ಥಿತಿಗಿಂತ ಮೇಲೇರಲು ಜ್ಞಾನವಿರಬೇಕು. ತಿಳಿವಳಿಕೆಯಿದ್ದರೆ ಆಗಲಿಲ್ಲ, ಅದು ಆಚರಣೆಗೆ ಬರದಿದ್ದರೆ ಅರ್ಥವಿರುವುದಿಲ್ಲ, ಆದ್ದರಿಂದ ವಿಚಾರ ಆಚಾರವಾಗಲು ಕರ್ಮ ಮಾಡಬೇಕು. ಇನ್ನು ಮೂರನೆಯದು ಉಪಾಸನೆ. ಉಪಾಸನೆ ಎಂದರೆ (ದೇವರ) ಸಮೀಪ ಕುಳಿತುಕೊಳ್ಳುವುದು ಎಂದರ್ಥ. ದೇವರ ಸಮೀಪ ಕುಳಿತುಕೊಳ್ಳುವುದೆಂದರೆ ತಮ್ಮನ್ನು ತಾವು ಅರ್ಥ ಮಾಡಿಕೊಂಡು, ಜೀವನವನ್ನು ಅರ್ಥಪೂರ್ಣಗೊಳಿಸಿಕೊಂಡು ದೇವರಿಗೆ ಮಾನಸಿಕವಾಗಿ ಹತ್ತಿರವಿರುವುದೇ ಆಗಿದೆ. ಇದಕ್ಕಾಗಿ ಉಪಾಸನೆಯನ್ನು ಭಕ್ತಿ, ಅರ್ಚನೆ, ಪೂಜೆ, ಇತ್ಯಾದಿಗಳಿಂದಲೂ ಹೆಸರಿಸುತ್ತಾರೆ. ಇಲ್ಲಿ ಉಪಾಸನೆ ಮಾಡಲು ಮೂಲ ಆಧಾರವೇ ತಾವು ನಂಬಿದ ತತ್ವ, ಆದರ್ಶ, ಗುರಿ, ಧ್ಯೇಯ, ಇತ್ಯಾದಿಗಳಲ್ಲಿ ಇರಿಸುವ ನಂಬಿಕೆ. ಅಚಲ ನಂಬಿಕೆ ಇದ್ದಲ್ಲಿ ಮಾತ್ರ ಮುಂದುವರೆಯಲು ಸಾಧ್ಯ. ಇಲ್ಲದಿದ್ದಲ್ಲಿ ಇವೆಲ್ಲವೂ ಕಪಟ ಆಚರಣೆಗಳಾಗಿ ಉಳಿದುಬಿಡುತ್ತವೆ. ಒಂದೊಮ್ಮೆ ಅಗತ್ಯವೆನಿಸಿದ್ದ ಆಚರಣೆಗಳು, ಕಾಲಾನುಕ್ರಮದಲ್ಲಿ ಅಗತ್ಯವೆನಿಸದೇ ಹೋಗಬಹುದು. ಅಂತಹ ಅಗತ್ಯವೆನಿಸದ ಮತ್ತು ಇಂದಿನ ಸಮಯದಲ್ಲಿ ಅಪ್ರಸ್ತುತವೆನಿಸುವ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗುವುದು ಮೂಢನಂಬಿಕೆಗಳೆನಿಸುತ್ತವೆ. ಮೂಢನಂಬಿಕೆಗಳ ಕುರಿತು ಜಿಜ್ಞಾಸೆಗಳು, ಚರ್ಚೆಗಳು ಬಹಳಷ್ಟು ಈಗಾಗಲೇ ಆಗಿರುವುದರಿಂದ ಆ ಕುರಿತು ಮತ್ತೊಮ್ಮೆ ಚರ್ಚಿಸುವ ಅಗತ್ಯ ಕಾಣುವುದಿಲ್ಲ.
ನಂಬಿಕೆಯೇ ಸತ್ಯವೋ ಅಥವ ಸತ್ಯವೇ ನಂಬಿಕೆಯೋ? ಇದೊಂದು ಬಿಡಿಸಲಾಗದ ಕಗ್ಗಂಟು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಏಕೆಂದರೆ ಒಬ್ಬೊಬ್ಬರ ನಂಬಿಕೆ ಒಂದೊಂದು ತರಹ ಇರುತ್ತದೆ. ಅವರವರ ನಂಬಿಕೆಗಳು ಅವರವರಿಗೆ ಇದ್ದು, ಅದರಂತೆ ಇದ್ದರೆ ಯಾರಿಗೂ ಬಾಧಕವಿಲ್ಲ. ಆದರೆ ಸಮಸ್ಯೆ ಶುರುವಾಗುವುದು ನಮ್ಮ ನಂಬಿಕೆಯೇ ಸರಿ, ನಾವು ನಂಬಿದ್ದೇ ಸರಿ, ಅದನ್ನೇ ಎಲ್ಲರೂ ನಂಬಬೇಕು ಎಂದು ಪ್ರತಿಪಾದಿಸುವಾಗಲೇ. ನಂಬಿಕೆ ತಪ್ಪಲ್ಲ, ಆದರೆ ನಂಬಿಕೆಯನ್ನು ಇತರರ ಮೇಲೆ ಹೇರುವುದು ತಪ್ಪಾಗುತ್ತದೆ. ಬಡತನ, ಅಜ್ಞಾನಗಳನ್ನು ದುರುಪಯೋಗಪಡಿಸಿಕೊಂಡು, ಆಸೆ, ಆಮಿಷಗಳನ್ನೊಡ್ಡಿ ಮತಾಂತರಿಸುವುದು, ತಮ್ಮ ಮತವನ್ನು, ದೇವರನ್ನು ಒಪ್ಪದವರನ್ನು ಕೀಳಾಗಿ ಕಾಣುವುದು, ಮತಾಂಧರ ಭಯೋತ್ಪಾದನೆ, ಜಿಹಾದ್, ಇತ್ಯಾದಿಗಳು ತಮ್ಮ ನಂಬಿಕೆಯನ್ನು ಇತರರ ಮೇಲೆ ಹೇರುವ ಪ್ರಯತ್ನಗಳೇ ಆಗಿವೆ. ತಮ್ಮ ತಮ್ಮ ಇಷ್ಟದ ದೇವರು, ಧರ್ಮ, ಆದರ್ಶ, ಗುರಿಗಳಲ್ಲಿ ನಂಬಿಕೆ ಇರಿಸಿಕೊಳ್ಳುವುದು ಆಧ್ಯಾತ್ಮಿಕ ಸಾಧನೆಗೆ ಸಹಕಾರಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಉನ್ನತ ಸ್ತರದವರಲ್ಲಿ ಸಾಧನೆಗೆ ನೆರವಾಗುವ ಇಂತಹ ನಂಬಿಕೆ, ಕೆಳಸ್ತರದವರಲ್ಲಿ ಇನ್ನೊಂದು ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ಅದೆಂದರೆ, ತಮ್ಮ ನಂಬಿಕೆಗೆ ವಿರುದ್ಧವಾದ ಇತರ ಎಲ್ಲವನ್ನೂ, ಎಲ್ಲರನ್ನೂ ದ್ವೇಷಿಸುವುದು! ಇದರ ಪರಿಣಾಮವೇ ಮತೀಯ ಕಾರಣಗಳಿಗಾಗಿ ಸಂಘರ್ಷಗಳು, ದೇಶಗಳ ನಡುವೆ ಯುದ್ಧಗಳು ಜರುಗುತ್ತಿರುವುದು. ಇದು ವಿಶ್ವ ಇಂದು ಎದುರಿಸುತ್ತಿರುವ ಜಾಗತಿಕ ಸಮಸ್ಯೆಯಾಗಿದೆ. ಎಲ್ಲಾ ಮತಗಳ, ಧರ್ಮಗಳ ಹಿರಿಯರು, ವಿದ್ವಾಂಸರು ಮುಕ್ತ ಮನಸ್ಸಿನಿಂದ, ಪೂರ್ವಾಗ್ರಹ ರಹಿತರಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮತ್ತು ತಮ್ಮತಮ್ಮವರಿಗೆ ಸೂಕ್ತ ಮಾರ್ಗದರ್ಶನ ಮಾಡದಿದ್ದಲ್ಲಿ ಮುಂದೆ ಘೋರ ದುರಂತ ಕಾದಿದೆ.
ವೈಯಕ್ತಿಕ ಬದುಕಿನಲ್ಲೂ ನಂಬಿಕೆ ಅನ್ನುವುದು ಮಹತ್ವದ ಪಾತ್ರ ವಹಿಸುತ್ತದೆ. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ನಂಬದಿದ್ದರೆ ಸಂಸಾರ ಹಳ್ಳ ಹಿಡಿಯುತ್ತದೆ. ಇದೇ ಸೂತ್ರ ಗುರು-ಶಿಷ್ಯರು, ತಂದೆ-ಮಕ್ಕಳು, ಬಂಧುಗಳು, ಆಡಳಿತಗಾರ-ಕಾರ್ಮಿಕರು, ನಾಯಕರು-ಪ್ರಜೆಗಳು, ಹೀಗೆ ಎಲ್ಲಾ ರಂಗಗಳಿಗೂ ಅನ್ವಯವಾಗುತ್ತದೆ. ನಂಬಿಕೆ ಇರದೆಡೆಯಲ್ಲಿ ಅಪನಂಬಿಕೆ, ಅಸಮಾಧಾನ, ದ್ವೇಷ, ಕಿರುಕುಳಗಳು ವಿಜೃಂಭಿಸಿ ನೆಮ್ಮದಿ ಹಾಳು ಮಾಡುತ್ತವೆ. ನಂಬಿಕೆಯಲ್ಲಿ ಹೊಂದಾಣಿಕೆಯಿದ್ದರೆ, ಅಪನಂಬಿಕೆಯಲ್ಲಿ ತಳಮಳ ಇರುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಕುಟುಂಬ ಸಂಸ್ಕೃತಿ ಕಾಣಬರದಿರುವುದಕ್ಕೂ, ಭಾರತದಲ್ಲಿ ಈ ಮೊದಲು ಕಂಡುಬರುತ್ತಿದ್ದಂತಹ ಅವಿಭಕ್ತ ಸ್ವರೂಪದ ಪೂರ್ಣ ಪ್ರಮಾಣದಲ್ಲಿ ಅಲ್ಲವಾದರೂ, ವಿಭಕ್ತವಾಗಿಯಾದರೂ ಕುಟುಂಬಗಳು ಉಳಿದಿರುವುದಕ್ಕೂ ಸಂಸ್ಕೃತಿ ನಮಗೆ ಕಲಿಸಿರುವ, ಇನ್ನೂ ಉಳಿದಿರುವ ಪರಸ್ಪರರಲ್ಲಿನ ನಂಬಿಕೆಗಳಿಂದಾಗಿ ಎನ್ನಬಹುದು.
ನಂಬಿಕೆ ಇದ್ದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಈ ಕೆಲಸ ನನ್ನಿಂದ ಮಾಡಲಾಗುವುದಿಲ್ಲ ಎಂಬ ಭಾವನೆ ಬಂದರೆ ನಿರಾಶೆ, ಸೋಲು ಕಟ್ಟಿಟ್ಟ ಬುತ್ತಿ. ಮಾಡಬಲ್ಲೆ ಎನಿಸಿದರೆ ಗೆಲುವು ನಮ್ಮದೇ! ಆಶಾವಾದದಲ್ಲಿನ ನಂಬಿಕೆ ಗೆಲವಿಗೆ ರಹದಾರಿ. ಭರವಸೆ ಮತ್ತು ವಿಶ್ವಾಸಗಳಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ. ದುಃಖ ಹಿಂದೆ ನೋಡುತ್ತದೆ, ಯೋಚನೆಗಳು ಸುತ್ತಲೂ ನೋಡುತ್ತವೆ, ಆದರೆ ನಂಬಿಕೆ ಮಾತ್ರ ಮೇಲೆ ನೋಡುತ್ತದೆ. ಈ ಚಿತ್ರ ನೋಡಿ. ಗೆಲುವಿನ ಹಲವಾರು ಮೆಟ್ಟಲುಗಳ ಚಿತ್ರವಿದು. ನೀವು ಯಾವ ಮೆಟ್ಟಲಿನಲ್ಲಿದ್ದೀರಿ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ.
"ಶಕ್ತಿಯ ಮೂಲ ಇರುವುದು ಅಂತರಂಗದಲ್ಲಿ. ಅಲ್ಲಿಂದ ಶಕ್ತಿಯ ಚಿಲುಮೆ ಚಿಮ್ಮುತ್ತದೆ, ಅದನ್ನು ಬಯಸಿದರೆ! ನಂಬಿಕೆ ಅಸಾಧ್ಯವಾದುದನ್ನು ಸಾಧ್ಯಗೊಳಿಸುತ್ತದೆ. ಭಯವಿಲ್ಲದ ಹೃದಯವೊಂದು ನಂಬಿದರೆ ಆಶ್ಚರ್ಯಗಳು ಜರುಗುತ್ತವೆ, ವಿವೇಕಾನಂದರಂತಹವರು ಉದ್ಭವಿಸುತ್ತಾರೆ."
-ಕ.ವೆಂ.ನಾಗರಾಜ್.
**************
[ ತಾಯಿ-ಮಗುವಿನ ಚಿತ್ರ ಕೃಪೆ: http://zaronburnett.files.wordpress.com/2013/05/mother-child-botswana_3661_990x742.jpg]
ದಿನಾಂಕ 24--3-2014ರ ಜನಮಿತ್ರದಲ್ಲಿ ಈ ಲೇಖನ ಪ್ರಕಟವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ