ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಮಾರ್ಚ್ 15, 2014

ದೇವನ ನೆನೆಯುವೆ

     ಬೆಳಗಿನ ಸಮಯ ಏಳುವಾಗ ದೇವಸ್ಮರಣೆ ಮಾಡುವ ಸಲುವಾಗಿ ಹೇಳುವ ಋಗ್ವೇದದ ಮಂತ್ರಗಳು 7.41.1ರಿಂದ5ರ ಪ್ರೇರಣೆಯಿಂದ ಇದನ್ನು ರಚಿಸಿರುವೆ. ಭಗಿನಿ ಕಲಾವತಿಯವರು 'ಈಶಾವಾಸ್ಯಮ್'ನಲ್ಲಿ ನಡೆಯುವ ಅಗ್ನಿಹೋತ್ರ ಮತ್ತು ವೇದಾಭ್ಯಾಸದ ಸಂದರ್ಭದಲ್ಲಿ ಈ ರಚನೆಗೆ ರಾಗ ಸಂಯೋಜಿಸಿ ಹಾಡಿದ್ದಾರೆ. ಇದನ್ನು ಶ್ರೀ ಹರಿಹರಪುರಶ್ರೀಧರರು ಫೇಸ್ ಬುಕ್ಕಿನಲ್ಲೂ ಶೇರ್ ಮಾಡಿದ್ದು, ಆಲಿಸಿದ ಹುಬ್ಬಳ್ಳಿಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು ದೂರವಾಣಿ ಮೂಲಕ ನಮ್ಮೆಲ್ಲರಿಗೆ ಆಶೀರ್ವದಿಸಿ ಇಂತಹ ಪ್ರಯತ್ನ ಮುಂದುವರೆಸಲು ಹೇಳಿದ್ದು ಆನಂದ ತಂದಿದೆ. ನೀವೂ ಆಲಿಸಿ. ಸಾಹಿತ್ವವನ್ನೂ ಕೆಳಗೆ ಕೊಟ್ಟಿರುವೆ.
-ಕ.ವೆಂ.ನಾಗರಾಜ್.
ಬೆಳಗಾಗಿ ನಾನೆದ್ದು ದೇವನ ನೆನೆಯುವೆ
ಪರಮಸಂಪದದೊಡೆಯ ತೇಜಸ್ವಿಯ |
ಭೂತಾಯಿಯಂತೆ ಮತ್ತೆ ಆಗಸದಂತೆ
ಎಲ್ಲೆಲ್ಲೂ ಇರುವವಗೆ ಶರಣೆನ್ನುವೆ || ೧ ||

ಬುದ್ಧಿಗೊಡೆಯ ಜಗದೀಶನ ನೆನೆಯುವೆ
ಕರ್ಮಫಲದಾತ ಜ್ಯೋತಿರ್ಮಯನ |
ಮಂಗಳಮಯ ಸಕಲ ಲೋಕಪ್ರಿಯ
ದೇವಾಧಿದೇವನಿಗೆ ಶರಣೆನ್ನುವೆ || ೨ ||

ನಿತ್ಯವಿಜಯಿಯಾದ ಒಡೆಯನ ನೆನೆಯುವೆ 
ಸಕಲ ಲೋಕಾಧಾರ ತೇಜಸ್ವಿಯ |
ಪಾತಕಿಕಂಟಕ ಸತ್‌ಪ್ರಕಾಶ ಈಶ
ಸರ್ವಜ್ಞ ದೇವನಿಗೆ ಶರಣೆನ್ನುವೆ || ೩ ||

ಮನೋಧಿನಾಯಕ ದೇವನ ಬೇಡುವೆ
ಕೊಡು ಮತಿಯ ಕೊಡು ಸಕಲ ಸಂಪತ್ತಿಯ |
ಮಾಡೆನ್ನ ಸತ್ಪ್ರಜೆಯ ಬೆಳೆಸುತಲಿ ಸಜ್ಜನರ
ಸತ್ಯಕ್ಕಾಧೀಶ ದೇವ ಶರಣೆನ್ನುವೆ || ೪ ||

ಪರಮ ಬೆಳಕಿನೊಡೆಯ ದೇವನ ಬೇಡುವೆ
ಕರುಣಿಸು ರಕ್ಷೆ ಮೇಣ್ ಸಕಲಸುಖವ |
ಸಜ್ಜನರ ಸುಮತಿಯ ಪಾಲಿಸುವ ಮನವ
ನೀಡೆಂದು ಬೇಡುತ ಶರಣೆನ್ನುವೆ || ೫ ||

ಜಗದಂತರಾತ್ಮನೆ ವಿದ್ವಜ್ಜನರ ಬೇಡುವೆ
ನಿಮ್ಮಂತೆ ಎಮಗೂ ಸಿಗಲಿ ಸದ್ಬುದ್ಧಿ |
ಸಕಲಜಗವು ನಿನ್ನ ಹಾಡಿ ಹೊಗಳುತಲಿರಲು
ದಾರಿ ತೋರೈ ಪ್ರಭುವೆ ಶರಣೆನ್ನುವೆ || ೬ ||
-ಕ.ವೆಂ.ನಾ.
************** 
ಪ್ರೇರಣೆ:
ಓಂ ಪ್ರಾತರಗ್ನಿಂ ಪ್ರಾತರಿಂದ್ರಂ ಹವಾಮಹೇ ಪ್ರಾತರ್ಮಿತ್ರಾವರುಣಾ ಪ್ರಾತರಶ್ವಿನಾ |
ಪ್ರಾತರ್ಭಗಂ ಪೂಷಣಂ ಬ್ರಹ್ಮಣಸ್ಪತಿಂ ಪ್ರಾತಃ ಸೋಮಮುತ ರುದ್ರಂ ಹುವೇಮ || (ಋಕ್.೭.೪೧.೧.)

ಓಂ ಪ್ರಾತರ್ಜಿತಂ ಭಗಮುಗ್ರಂ ಹುವೇಮ ವಯಂ ಪುತ್ರಮದಿತೇರ್ಯೋ ವಿಧರ್ತಾಃ |
ಆಧ್ರಶ್ಚಿದ್ ಯಂ ಮನ್ಯಮಾನಸ್ತುರಶ್ಚಿದ್ ರಾಜಾ ಚಿದ್ ಯಂ ಭಗಂ ಭಕ್ಷೀತ್ಯಾಹ || (ಋಕ್.೭.೪೧.೨.)

ಓಂ ಭಗ ಪ್ರಣತೇರ್ಭಗ ಸತ್ಯರಾಧೋ ಭಗೇಮಾಂ ಧಿಯಮುದವಾ ದದನ್ನಃ |
ಭಗ ಪ್ರ ಣೋ ಜನಯ ಗೋಭರಶ್ವೈರ್ಭಗ ಪ್ರ ನೃಭಿರ್ನೃವಂತಃ ಸ್ಯಾಮ || (ಋಕ್.೭.೪೧.೩.)

ಓಂ ಉತೇದಾನೀಂ ಭಗವಂತಃ ಸ್ಯಾಮೋತ ಪ್ರಪಿತ್ವ ಉತ ಮಧ್ಯೇ ಅಹ್ನಾಂ |
ಉತೋದಿತಾ ಮಘವನ್ ತ್ಸೂರ್ಯಸ್ಯ ವಯಂ ದೇವಾನಾಂ ಸುಮತೌ ಸ್ಯಾಮ || (ಋಕ್.೭.೪೧.೪.)

ಓಂ ಭಗ ಏವ ಭಗವಾನ್ ಅಸ್ತು ದೇವಸ್ತೇನ ವಯಂ ಭಗವಂತಃ ಸ್ಯಾಮ | 
ತಂ ತ್ವಾ ಭಗ ಸರ್ವ ಇಜ್ಜೋಹವೀ ತಿ ಸ ನೋ ಭಗ ಪುರಏತಾ ಭವೇಹಃ || (ಋಕ್.೭.೪೧.೫.) 

8 ಕಾಮೆಂಟ್‌ಗಳು:

 1. ಒಂದು ಸುಂದರ ಬೆಳಗನ್ನು ಇನ್ನಷ್ಟು ಸುಂದರ ಮಾದುವ ಈ ಲೇಖನ ಹಾಗು ಗೀತ ಮಾಲಿಕೆಗೆ ಧನ್ಯವಾದಗಳು ಸರ್ಜಿ

  ಪ್ರತ್ಯುತ್ತರಅಳಿಸಿ
 2. ವಂದನೆಗಳು, ಶ್ರೀಕಾಂತ ಮಂಜುನಾಥರೇ.

  ಪ್ರತ್ಯುತ್ತರಅಳಿಸಿ
 3. ಒ೦ದು ಸಾರ್ಥಕ ಪ್ರಯತ್ನ ನಾಗರಾಜ್ ರವರೇ, ಉನ್ನತ ಜೀವನ ಬಯಸುವವರಿಗೆ ಇ೦ಥಾ ನಿಮ್ಮ ಪ್ರಯತ್ನ ಅತ್ಯಗತ್ಯ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. Parthasarathy Narasingarao
   ಹಾಗೆ ಹಳೆಯದೊಂದು ಜಾನಪದ ನೆನಪಾಯಿತು !
   ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ
   ಎಳ್ಳು ಜೀರಿಗೆ ಬೆಳೆಯೊಳ| ಭೂಮಿತಾಯ
   ಎದ್ದೊಂದು ಗಳಿಗೇ ನೆನೆದೇನಾ||

   ಕಲ್ಲು ಕೊಟ್ಟವ್ವಾಗೆ ಎಲ್ಲಾ ಭಾಗ್ಯವು ಬರಲಿ
   ಪಲ್ಲಕ್ಕಿ ಮೇಲೆ ಮಗ ಬರಲಿ | ಆ ಮನೆಗೆ
   ಮಲ್ಲಿಗೆ ಮುಡಿಯೊ ಸೊಸೆ ಬರಲಿ||

   ಕಲ್ಲಮ್ಮ ಮಾತಾಯಿ ಮೆಲ್ಲಮ್ಮ ರಾಗೀಯ
   ಜಲ್ಲ ಜಲ್ಲನೆ ಉದುರಮ್ಮ| ನಾನಿನಗೆ
   ಬೆಲ್ಲದಾರತಿಯಾ ಬೆಳಗೇನಾ||

   ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ
   ಕಲ್ಲು ಕಾವೇರಿ ಕಪನೀಯಾ| ನೆನೆದರೆ
   ಹೊತ್ತಿದ್ದ ಪಾಪ ಪರಿಹಾರ||

   ಅಳಿಸಿ
  2. ಧನ್ಯವಾದ, ಪಾರ್ಥರೇ. ನಾನು ಈ ಹಾಡಿನ ಧಾಟಿಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಇದನ್ನು ರಚಿಸಿರುವೆ. ಹಾಡಿದವರಿಗೂ ಈ ಧಾಟಿಯಲ್ಲಿ ಹಾಡಲು ಕೋರಿದ್ದೆ.

   ಅಳಿಸಿ
  3. nageshamysore on March 10, 2014 - 7:36pm
   ಕವಿಗಳೆ, ಭಕ್ತಿಪೂರ್ಣ ಕವನ, ಸರ್ವಜ್ಞ ಚಿತ್ರದ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ' ನೆನಪಿಸಿತು ! ಧನ್ಯವಾದಗಳು, ನಾಗೇಶ ಮೈಸೂರು

   kavinagaraj on March 11, 2014 - 8:46am
   ಧನ್ಯವಾದ, ನಾಗೇಶರೇ. ನೀವು ಹೇಳಿದ ಗೀತೆಯ ಧಾಟಿಯನ್ನೇ ಮನಸ್ಸಿನಲ್ಲಿಟ್ಟುಕೊಂಡು ರಚಿಸಿದ್ದು ಇದು!

   ಅಳಿಸಿ
  4. Durgaprasad Menda
   "ಕೊಡು ಸಕಲ ಸಂಪತ್ತಿಯ" ಎಂಬುದರಿಂದಾಗಿ ಅಹೇತುಕೀ ಭಕ್ತಿ ಭಾವಕ್ಕೆ ಕೊರತೆ ಬಂತೆಂದು ಅನ್ನಿಸುತ್ತದೆ.

   Kavi Nagaraj
   ಓಂ ಭಗ ಪ್ರಣತೇರ್ಭಗ ಸತ್ಯರಾಧೋ ಭಗೇಮಾಂ ಧಿಯಮುದವಾ ದದನ್ನಃ |
   ಭಗ ಪ್ರ ಣೋ ಜನಯ ಗೋಭರಶ್ವೈರ್ಭಗ ಪ್ರ ನೃಭಿರ್ನೃವಂತಃ ಸ್ಯಾಮ || (ಋಕ್.೭.೪೧.೩.) ಈ ಮಂತ್ರದ ಅರ್ಥ "ಹೇ ದೇವದೇವ, ಮನೋಧಿನಾಯಕ, ಸತ್ಯಪ್ರಚೋದಕ, ಸತ್ಯೈಶ್ವರ್ಯದಾತ, ನಮಗೆ ಬುದ್ಧಿಯನ್ನು ದಯಪಾಲಿಸು, ಯೋಗ್ಯವಾದ ದಾನದಿಂದ ನಮ್ಮನ್ನು ಪುಷ್ಟೀಕರಿಸು. ಗೋವು, ಕುದುರೆ ಮುಂತಾದ ಉಪಯುಕ್ತ ಪ್ರಾಣಿಗಳಿಂದ ಯುಕ್ತ ಸಂಪತ್ತು ಸಿಕ್ಕಲಿ. ನಾವು ಉತ್ತಮರಾದ ಪ್ರಜಾಸಂಯುಕ್ತರಾಗಿ ರಂಜಿಸುವಂತಾಗಲಿ" ಎಂದಾಗುತ್ತದೆ. 'ಕೊಡು ಸಕಲ ಸಂಪತ್ತಿಯ' ಎಂಬುದನ್ನು ಇದರಿಂದಾಗಿ ಬಳಸಿರುವೆ.

   ಅಳಿಸಿ