ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಮಾರ್ಚ್ 14, 2014

ಆಡಲಾಗದ ಮಾತುಗಳು

     'ಮಾತನಾಡಲು ಏನೋ ಇದೆ, ಅದರೆ ಆಡಲಾಗುವುದಿಲ್ಲ' ಎಂಬಂತಹ ಜನರಿಂದಲೇ ಈ ಪ್ರಪಂಚ ತುಂಬಿಹೋಗಿದೆ. ಒಳಗೆ ಇರುವುದೇ ಒಂದು, ಹೊರಬರುವ ಮಾತುಗಳೇ ಮತ್ತೊಂದು! ಇದಕ್ಕೆ ಹಲವಾರು ಕಾರಣಗಳು. ಒಳಗಿರುವ, ಆದರೆ ಹೊರಬರದ ಮಾತುಗಳೇ ಆಡಲಾಗದ ಮಾತುಗಳು! ಈ ಆಡಲಾಗದ ಮಾತುಗಳು ಒಳಗೇ ಇದ್ದು ಮಾಡುವ ಅವಾಂತರಗಳು ಅಷ್ಟಲ್ಲ. ಆಡದ ಮಾತುಗಳಿಂದಾಗಿ ಮತ್ತು ಕೇಳದ ಮಾತುಗಳಿಂದಾಗಿ ಜನ ಗೌರವ ಉಳಿಸಿಕೊಂಡಿದ್ದಾರೆ. ಆಡಲಾಗದ, ಆಡಬಾರದ ಮಾತುಗಳು ಒಳಗೇ ಬಂದಿಯಾಗಿರುತ್ತವೆ. ಅಂತಹ ಮಾತುಗಳು ಒಳಗೇ ಉಳಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆಂದು ಹೊರಗೆ ಬಂದರೆ ಆಗಲೂ ಕೈಕಾಲು ಅಲ್ಲದಿದ್ದರೂ ಮನಸ್ಸಾದರೂ ಮುರಿಯಬಹುದು.  ಮಾತುಗಳು ಒಳಗೆ ಇರುವವರೆಗೆ ಅದಕ್ಕೆ ನೀವು ಬಾಸ್, ಹೊರಬಿತ್ತೋ ಅವಕ್ಕೆ ನೀವೇ ದಾಸರು. 'ಮಾತು ಆಡಿದರೆ ಆಯಿತು, ಮುತ್ತು ಒಡೆದರೆ ಹೋಯಿತು' ಎಂಬ ಗಾದೆ ಮಾತು ಪ್ರಸಿದ್ಧವಾಗಿರುವುದು ಈ ಕಾರಣಕ್ಕಾಗಿಯೇ. ನ್ಯಾಯಾಲಯಗಳಲ್ಲಿ ಪ್ರಮಾಣ ಮಾಡಿಸುತ್ತಾರೆ: 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್ ಹೇಳಿಕೊಟ್ಟಿರುತ್ತಾರೆ, 'ಸತ್ಯ ಅಂತ ಎಲ್ಲಾ ಹೇಳಿದರೆ ಕೆಡುತ್ತೀಯ, ನಾನು ಹೇಳಿಕೊಟ್ಟಿರುವುದೇ ಸತ್ಯ, ಅದನ್ನೇ ಹೇಳು' ಅಂತ. ತಮಗೆ ಅನುಕೂಲವಾಗಲೆಂದು ಸತ್ಯವನ್ನು ಹೇಳದೇ ಒಳಗೆ ಉಳಿಸಿಕೊಂಡಿರುತ್ತಾರಲ್ಲಾ, ಅವೇ ಆಡಲಾಗದ ಮಾತುಗಳು! ಮಾತುಗಳನ್ನು ನಾವು ಮುಟ್ಟಲಾಗುವುದಿಲ್ಲ. ಆದರೆ ಮಾತುಗಳು ನಮ್ಮನ್ನು ಮುಟ್ಟುತ್ತವೆ. ಒಳಗಿರುವ ಮಾತುಗಳು ಒಂದಲ್ಲಾ ಒಂದು ದಿನ ಯಾವುದಾದರೂ ರೀತಿಯಲ್ಲಿ ಹೊರಬರುತ್ತವೆ.
     ಆಡಲಾಗದ ಮಾತಿಗೆ ಒಂದು ಹಾಸ್ಯದ ಉದಾಹರಣೆ ಕೊಡಬೇಕೆಂದರೆ, ಒಬ್ಬ ಒಂದು ಸುಂದರ ಹುಡುಗಿ ನೋಡುತ್ತಾನೆ. ಅವಳು ಹೆಂಡತಿಯಾಗಿ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಂತ ಆಸೆ ಪಡ್ತಾನೆ ಅಂತ ಇಟ್ಟುಕೊಳ್ಳೋಣ. ಆ ಹುಡುಗಿ ಕಾರಿನಲ್ಲಿ ಓಡಾಡೋಳು, ಅವಳ ಅಪ್ಪ ದೊಡ್ಡ ಶ್ರೀಮಂತ. ಆದರೆ ಇವನಾದರೋ ಒಂದು ಅಟ್ಲಾಸ್ ಸೈಕಲ್ ಮಾಲಿಕ.  ಅವನು ಅವರಪ್ಪನನ್ನು ಅಥವ ಆ ಹುಡುಗಿಯನ್ನು ಮಾತನಾಡಿಸಿ ಅವನ ಆಸೆ ಬಗ್ಗೆ ಹೇಳಿಕೊಳ್ಳೋಕೆ ಆಗುತ್ತಾ? ಅದು ಅವನ ಗಂಟಲ ಕೆಳಗೇ ಹೂತುಹೋಗುತ್ತೆ. ಹಾಗೆಂದು ಮಾತುಗಳು ಒಳಗೇ ಉಳಿದುಬಿಡಬಾರದು ಎಂಬುದಕ್ಕೆ ಇನ್ನೊಂದು ಉದಾಹರಣೆಯನ್ನೂ ನೋಡೋಣ. ಒಬ್ಬ ಹುಡುಗ ಒಂದು ಹುಡುಗಿಯನ್ನು ಪ್ರೀತಿಸ್ತಿದಾನೆ ಅಂತ ಇಟ್ಟುಕೊಳ್ಳೋಣ. ಆದರೆ ಅದನ್ನು ಹೇಳೋಕೆ ಅವನಿಗೆ ಧೈರ್ಯ ಇಲ್ಲ, ಸುಮ್ಮನೆ ಇರ್ತಾನೆ. ಆ ಹುಡುಗಿಯದೂ ಅದೇ ಕಥೆ ಆಗಿದ್ದು ಅವಳದ್ದೂ ಅದೇ ಪರಿಸ್ಥಿತಿ ಅಂತ ಇಟ್ಟುಕೊಳ್ಳೋಣ. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ಒಳಗಿನ ಮಾತುಗಳನ್ನು ಹೊರಗೆ ಹೇಳಲಾಗದೆ ಸುಮ್ಮನೆ ಇರ್ತಾರೆ. ಒಂದು ದಿನ ಅವರ ಅಪ್ಪ-ಅಮ್ಮಂದಿರು ಅವರುಗಳಿಗೆ ಬೇರೆ ಗಂಡು/ಹೆಣ್ಣು ನೋಡಿ ಮದುವೆ ಮಾಡ್ತಾರೆ. ಆಗ ಅವರ ಒಳಗಿನ ಮಾತುಗಳು ಒಳಗೇ, ಹೊರಗಿನ ಮಾತುಗಳು ಹೊರಗೇ ಇರುತ್ತವೆ. ಮುಗಿದು ಹೋಯಿತು, ಮಾತುಗಳು ಅಲ್ಲೇ ಸಮಾಧಿಯಾಗಿಬಿಡುತ್ತವೆ. 
     ಒಬ್ಬ ದೇವರಲ್ಲಿ ಶಕ್ತಿ ಕೊಡು ಅಂತ ಕೇಳಿದನಂತೆ. ಆ ದೇವರು ಅವನನ್ನು ದುರ್ಬಲನಾಗಿ ಮಾಡಿಬಿಟ್ಟನಂತೆ, ಏಕೆಂದರೆ ವಿಧೇಯತೆ ಕಲಿಯಲಿ ಅಂತ. ಆರೋಗ್ಯ ಕೊಡು ಎಂದದ್ದಕ್ಕೆ, ಎಡವಟ್ಟು ಮಾಡಿದ, ಏಕೆಂದರೆ ಏನಾದರೂ ಮಾಡಬೇಕು ಅನ್ನುವ ಮನಸ್ಸು ಬರಲಿ ಅಂತ. ಸುಖ ಅನುಭವಿಸಲು ಶ್ರೀಮಂತಿಕೆ ಕೊಡು ಅಂತ ಕೇಳಿದರೆ ಬಡತನ ಕೊಟ್ಟುಬಿಟ್ಟನಂತೆ, ಬುದ್ಧಿವಂತ ಆಗಲಿ ಅಂತ. ಅಧಿಕಾರ ಕೊಡು, ಜನ ಹೊಗಳಲಿ ಅಂತ ಕೇಳಿದರೆ ಜವಾನನಾಗಿ ಕೆಲಸ ಮಾಡುವಂತೆ ಮಾಡಿದನಂತೆ, ಏಕೆಂದರೆ ತನ್ನನ್ನು ನೆನೆಸಿಕೊಳ್ಳುತ್ತಿರಲಿ ಅಂತ. ಎಲ್ಲಾ ವಸ್ತುಗಳನ್ನು ಜೀವನ ಸುಖವಾಗಿಡಲು ಕೊಡಪ್ಪಾ ಅಂತ ಕೇಳಿದರೆ,  ಜೀವನ ಕೊಟ್ಟಿದೀನಿ, ಎಲ್ಲಾ ವಸ್ತುಗಳನ್ನು ನೀನೇ ಪಡಕೊಳ್ಳಬಹುದು ಅಂತ ಹೇಳಿದನಂತೆ. ಆಮೇಲೆ ಅವನು ಅವನನ್ನು ಏನು ಕೇಳಿಕೊಳ್ಳಬೇಕು ಅಂತ  ಇದ್ದೆನೋ ಅದನ್ನು ಕೇಳಿಕೊಳ್ಳಲೇ ಇಲ್ಲವಂತೆ. ಏಕೆಂದರೆ ಆ ದೇವರು ಅವನು ಕೇಳದೆ ಬಿಟ್ಟಿದ್ದನ್ನು ಅವನಿಗೆ ಕೊಟ್ಟನಂತೆ. ಕೇಳದೇ ಇದ್ದರೂ ದೇವರು ಕೊಟ್ಟಿದ್ದೇನು ಎಂದು ಅವನ ಸ್ನೇಹಿತ ವಿಚಾರಿಸಿದಾಗ, ಅವನು ನಗುತ್ತಾ ಹೇಳಿದನಂತೆ, "ಅದನ್ನು ಕೇಳಬಾರದು, ನಾನು ಹೇಳಲೂಬಾರದು." ಇದೇ 'ಆಡಲಾಗದ ಮಾತು!'
      ಆಡಲಾಗದ ಮಾತುಗಳು ಹೊರಬರದಿದ್ದಾಗ ಒಳಗೇ ಕುಣಿಯುತ್ತಿರುತ್ತವೆ, ಹೊರಗೆ ಬರಲು ಚಡಪಡಿಸುತ್ತಿರುತ್ತವೆ. ಆಗ ಅಸಮಾಧಾನ, ಅಸಹನೆ ಉಂಟಾಗಿ ಮನಸ್ಸಿಗೆ ಶಾಂತಿಯೇ ಇರುವುದಿಲ್ಲ. ಎದುರಿಗೆ ಇರುವವರನ್ನು ಹಂಗಿಸುವ ಇಚ್ಛೆ ಒಳಗೇ ಇದ್ದರೂ ಹಂಗಿಸಲಾರದೆ, ಮೂರನೆಯವರ ಎದುರಿಗೆ ಅಪರೋಕ್ಷವಾಗಿ ಬೇರೆ ರೀತಿಯಲ್ಲಿ ಮಾತುಗಳು ಹೊರಗೆ ಬಂದುಬಿಡುತ್ತವೆ. ತಮ್ಮ ಅಸಹನೆ ಸಂಬಂಧಿಸಿದವರಿಗೆ ಗೊತ್ತಾಗಲಿ ಎಂಬಂತೆ ಅವರ ವರ್ತನೆ ಇರುತ್ತದೆ. ಸಂಬಂಧಿಸಿದವರಿಗೆ ಹೇಳಲಾಗದ ಮಾತುಗಳನ್ನು ತಮ್ಮ ವಿಶ್ವಾಸದ ಸ್ನೇಹಿತರಲ್ಲಿ ಹೇಳಿಕೊಂಡು ಹಗುರಾಗುತ್ತಾರೆ. ಒಬ್ಬರಿಂದ ಒಬ್ಬರಿಗೆ ಹೋಗುತ್ತಾ ಆ ಮಾತುಗಳು ಉದ್ದೇಶಿಸಿದವರಿಗೂ ತಲುಪಿ ರಂಪ ರಾಮಾಯಣವೂ ಆಗುವ ಸಂಭವವೂ ಇರುತ್ತದೆ. ಈ ಆಡಲಾಗದ, ಆಡದೇ ಇರುವ ಮಾತುಗಳು ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಮಾತುಗಳು ಮತ್ತು ಹೃದಯಗಳ ಬಗ್ಗೆ ಜೋಪಾನವಾಗಿರಬೇಕು. ಮಾತುಗಳನ್ನು ಆಡುವ ಮುನ್ನ ಮತ್ತು ಹೃದಯಗಳು ಒಡೆಯುವ ಮುನ್ನ ಎಚ್ಚರಿಕೆ ಇರಬೇಕು. ನಾವು ಏನು ಯೋಚನೆ ಮಾಡ್ತೀವೋ ಅದರ ಬಗ್ಗೆ ಎಚ್ಚರವಾಗಿರಬೇಕು. ಏಕೆಂದರೆ ಮಾತುಗಳಾಗಿ ಹೊರಬರುವುದು ಅವೇ! 
ನುಡಿವ ಸತ್ಯವದು ಗೆಳೆತನವ ನುಂಗೀತು
ಬಂಧುತ್ವ ಕಳೆದೀತು ಸೌಜನ್ಯ ಮರೆಸೀತು |
ಮರುಳು ಮಾಡುವ ಸುಳ್ಳಿಗಿಹ ಬೆಲೆಯ
ಕೊಡರು ಸತ್ಯಕಿದು ಸತ್ಯ ಮೂಢ || 
     'ಇದ್ದದ್ದನ್ನು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ' ಎಂಬ ಅನುಭವಜನ್ಯ ಗಾದೆ ಸತ್ಯವನ್ನು ಹೇಳುವಾಗ ಎಚ್ಚರಿಕೆಯಿಂದಿರಬೇಕೆಂದು ಹೇಳುತ್ತದೆ. ಆಡಲಾಗದ ಮಾತುಗಳಿಗೆ ಇನ್ನೊಂದು ಮಗ್ಗಲೂ ಇದೆ. 'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನಬ್ರೂಯಾತ್ ಸತ್ಯಮಪ್ರಿಯಮ್'- ಸತ್ಯವನ್ನು ಹೇಳಬೇಕು, ಪ್ರಿಯವಾಗಿ ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು. ಒಬ್ಬ ದುಷ್ಟ ಪೈಲ್ವಾನನಿಂದ ತೊಂದರೆಯಾದರೂ ಮಾತನಾಡದೆ ಸುಮ್ಮನಿರಬೇಕಾಗುತ್ತದೆ. ಇಷ್ಟವಿರಲಿ, ಇಲ್ಲದಿರಲಿ ಸಂಬಳ ಕೊಡುವ ಧಣಿಯನ್ನು ಹೊಗಳಲೇಬೇಕು. ಬೈದುಕೊಳ್ಳುವುದೇನಾದರೂ ಇದ್ದರೆ ಹೊರಗೆ ತೋರಿಸಿಕೊಳ್ಳದಂತೆ ಒಳಗೊಳಗೇ ಶಪಿಸಬೇಕು. ಒಳ್ಳೆಯ ಕಾರಣಗಳಿಂದಲೂ ಕೆಲವೊಮ್ಮೆ ಮಾತುಗಳನ್ನು ಅದುಮಿಡಬೇಕಾಗುತ್ತದೆ. ಸಣ್ಣ ಉದಾಹರಣೆಯನ್ನು ನೋಡೋಣ. ರಾತ್ರಿ ಸುಮಾರು ೧೦ ಗಂಟೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಮನೆಯ ಬಾಗಿಲು ಬಡಿಯುತ್ತಾನೆ ಎಂದಿಟ್ಟುಕೊಳ್ಳೋಣ. ಬಾಗಿಲು ತೆರೆದ ತಕ್ಷಣ ಆ ಅಪರಿಚಿತ ಒಳಗೆ ನುಗ್ಗಿ ಬಾಗಿಲು ಹಾಕಿ ಮನೆಯ ಮಾಲಿಕನ ಕಾಲು ಹಿಡಿದು ತನ್ನನ್ನು ಕಾಪಾಡಲು ಕೋರುತ್ತಾನೆ ಎಂದಿಟ್ಟುಕೊಳ್ಳೋಣ. ಏನಾಗುತ್ತಿದೆ ಎಂದು ತಿಳಿಯದೆ ಮಾಲಿಕ ಕಕ್ಕಾಬಿಕ್ಕಿಯಾಗಿದ್ದಾಗ ಪುನಃ ಮನೆಯ ಬಾಗಿಲು ದಬದಬ ಬಡಿಯುವ ಸದ್ದಾಗುತ್ತದೆ. ಒಳಗಿದ್ದವನು ಕರುಣಾಜನಕವಾಗಿ ನೋಡುತ್ತಾನೆ. ತಕ್ಷಣದಲ್ಲಿ ಆತನನ್ನು ಬಚ್ಚಲುಮನೆಯಲ್ಲಿ ಅಡಗಿಕೊಳ್ಳಲು ಸನ್ನೆಯಿಂದ ಸೂಚಿಸಿ ಬಾಗಿಲು ತೆರೆದಾಗ ಐದಾರು ಜನರು ದೊಣ್ಣೆ ಮಚ್ಚುಗಳನ್ನು ಹಿಡಿದು, 'ಮನೆಯೊಳಗೆ ಯಾರಾದರೂ ಬಂದರಾ?' ಎಂದು ಕೇಳುತ್ತಾರೆ. ಅವನು ಸತ್ಯಸಂಧನಂತೆ 'ಹೌದು' ಎಂದರೆ ಕಣ್ಣ ಮುಂದೆಯೇ ಒಂದು ಕೊಲೆ ನಡೆದುಹೋಗಿಬಿಡಬಹುದು. ಬದಲಾಗಿ, 'ಯಾರು? ಇಲ್ಲಿ ಯಾರೂ ಬರಲಿಲ್ಲವಲ್ಲಾ! ಮುಂದೆ ಯಾರೋ ಓಡಿ ಹೋದಂತಾಯಿತು' ಅಂದರೆ? ಬಂದವರು ಹೊರಗೆ ಹುಡುಕಲು ಓಡುತ್ತಾರೆ. ಅಡಗಿಕೊಂಡಿದ್ದವನು ನಂತರ ಕೈಮುಗಿದು ಕೃತಜ್ಞತೆಯಿಂದ ಕಣ್ಣೀರಿಡುತ್ತಾ ಹೊರಗೆ ಬೇರೊಂದು ದಾರಿಯಲ್ಲಿ ಓಡಿಹೋಗುತ್ತಾನೆ. 'ಏನು? ಏಕೆ?' ಏನನ್ನೂ ತಿಳಿಯದವನು ಮುಂದೆ ತನಗೆ ಏನೂ ಗೊತ್ತಿಲ್ಲದಂತೆ ಸುಮ್ಮನೇ ಇರಬೇಕಾಗುತ್ತದೆ.
ಮನದಲ್ಲಿ ಒಂದು ಹೇಳುವುದು ಮತ್ತೊಂದು
ಹೇಳಿದ್ದು ಒಂದು ಮಾಡುವುದು ಮತ್ತೊಂದು |
ಸುಳ್ಳುಗಳು ಒಂದನಿನ್ನೊಂದು ನುಂಗಿರಲು 
ಗೊಂದಲವು ನೆಮ್ಮದಿಯ ನುಂಗದೆ ಮೂಢ || 
     ಸಂಬಂಧಗಳು ಚೆನ್ನಾಗಿರಬೇಕು, ತಮಗೆ ಕೆಡುಕಾಗಬಾರದು ಅನ್ನುವ ಕಾರಣಕ್ಕೆ ಜನ ತಮ್ಮ ಮನಸ್ಸಿನಲ್ಲಿ ಇರುವುದೇ ಒಂದಾದರೂ ಹೊರಗೆ ಆಡುವುದೇ ಬೇರೆ ತೋರಿಕೆಯ ಮಾತುಗಳು. ಅವುಗಳು ಗಟ್ಟಿ ಮಾತುಗಳಲ್ಲವಾದ್ದರಿಂದ ಅಂತಹ ಮಾತುಗಳ ಪ್ರಭಾವ ಕಡಿಮೆ. ಅವು ತೋರಿಕೆ ಮಾತುಗಳು ಅಂತಾ ಗೊತ್ತಾದಾಗ ಅದನ್ನು ಆಡಿದವರ ಬೆಲೆ ಸಹ ಕಡಿಮೆ ಆಗುತ್ತೆ. ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳಿದ್ದರೆ ಒಳ್ಳೆಯ ಮಾತುಗಳು ಬರುತ್ತವೆ. ಕೆಟ್ಟ ವಿಚಾರಗಳಿದ್ದರೆ ಆಡಲಾಗದ ಮಾತುಗಳು ಹುಟ್ಟುತ್ತವೆ. ಅದು ಹೆಚ್ಚು ಕಾಟ ಕೊಡುವುದು ಆ ಮಾತುಗಳನ್ನು ಹುಟ್ಟಿಸಿದವರಿಗೇ. ಆದ್ದರಿಂದ ಒಳ್ಳೆಯ ವಿಚಾರ ಮನಸ್ಸಿನಲ್ಲಿ ಬರುವಂತೆ ಮಾಡು ಎಂದು ಪ್ರಾರ್ಥಿಸಬೇಕು. ಸರ್ವಜ್ಞನ ಈ ತ್ರಿಪದಿ ಹೇಳುತ್ತದೆ:
'ಆಡದೆ ಮಾಡುವನು ರೂಢಿಯೊಳಗುತ್ತಮನು,
ಆಡಿ ಮಾಡುವನು ಮಧ್ಯಮ,
ಆಡಿಯೂ ಮಾಡದವ ಅಧಮ ಸರ್ವಜ್ಞ'
'ಆಡುವುದಕ್ಕೆ ಆಗದೆ ಇರುವವನು' ನೆಮ್ಮದಿ ಇರದವನು ಎಂದು ಸಾಂದರ್ಭಿಕವಾಗಿ ಸೇರಿಸಿಕೊಳ್ಳಬಹುದಾಗಿದೆ. ನಾಲಿಗೆ ಎರಡು ಅಲಗಿನ ಕತ್ತಿಯಿದ್ದಂತೆ. ಆಡುವ ಮಾತಿನಲ್ಲಿ ನಿಯಂತ್ರಣವಿರಬೇಕು. ಇಲ್ಲದಿದ್ದರೆ ಅದು ಇತರರನ್ನು ಮಾತ್ರವಲ್ಲದೆ ಆಡಿದವರನ್ನೂ ಘಾತಿಸುತ್ತದೆ.
     ಸ್ವಾಮಿ ದಯಾನಂದ ಸರಸ್ವತಿಯವರು ಹೇಳುತ್ತಿದ್ದರು, "ಸತ್ಯವನ್ನೇ ಹೇಳುತ್ತೇನೆಂದು ಶಪಥ ಮಾಡಬೇಡಿ. ಹೇಳಿ, ಸತ್ಯವನ್ನೇ ಹೇಳಿ, ಆದರೆ ಶಪಥ ಮಾಡಬೇಡಿ. ಏಕೆಂದರೆ, ಶಪಥ ಮಾಡುವ ಕಾಲಕ್ಕೆ ಸತ್ಯ ಅನ್ನುವುದನ್ನು ನೀವೇ ತಪ್ಪು ತಿಳಿದುಕೊಂಡಿರಬಹುದು, ಅಥವ ಯಾವುದನ್ನೋ ಸತ್ಯವೆಂದು ತಪ್ಪು ತಿಳಿದಿರಬಹುದು. ಅದರಿಂದ ಬೇರೆಯವರಿಗೆ ಹಾನಿಯಾಗಬಹುದು." ನಿಜ, ಬೇರೆಯವರಿಗೆ ಹಾನಿ ಉಂಟುಮಾಡುವಂತಹದು ಸತ್ಯವಲ್ಲ. ತಮಗೆ ಮಾತ್ರ ಒಳ್ಳೆಯದಾಗಬೇಕೆಂದು ಬಯಸುವುದೂ ಸತ್ಯವಲ್ಲ. ನಮ್ಮ ಹಾಗೇ ಎಲ್ಲರಿಗೂ ಒಳ್ಳೆಯದಾಗಬೇಕು, ಯಾರಿಗೂ ಕೆಟ್ಟದಾಗಬಾರದು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಈ ರೀತಿ ಇದ್ದಲ್ಲಿ ಆಡಲಾಗದ ಮಾತುಗಳು ಹುಟ್ಟಲಾರವು, ಯಾರಿಗೂ ತೊಂದರೆ ಕೊಡಲಾರವು.
ಮಾತಾಗಲಿ ಮುತ್ತು ತರದಿರಲಿ ಆಪತ್ತು
ಮಾತು ನಿಜವಿರಲಿ ನೋವು ತರದಿರಲಿ |
ಪ್ರಿಯವಾದ ಹಿತವಾದ ನುಡಿಗಳಾಡುವನು
ನುಡಿಯೋಗಿ ಜನಾನುರಾಗಿ ಮೂಢ ||
-ಕ.ವೆಂ.ನಾಗರಾಜ್.
***************
[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದುದು.]

3 ಕಾಮೆಂಟ್‌ಗಳು:

 1. ಮಾತು ಮಾತೆ.. ಆಡುವ ಮಾತು.. ಕಾಡುವ ಮಾತು.. ಮನದ ಮಾತು ಮೂಕ ಮನದ ಮಾತು.. ಹೀಗೆ ಜಗವ ಕಾಡುವ ಮಾತನ್ನು ಕಾಡುವಂತೆ ಲೇಖನ ಮಾಲಿಕೆಯನ್ನಾಗಿ ಪ್ರಸ್ತುತ ಪಡಿಸಿದ ರೀತಿ ಸುಂದರವಾಗಿದೆ. ಮತ್ತು ಅದಕ್ಕೆ ಕೊಟ್ಟಿರುವ ಪದ್ಯಗಳ, ಪದಗಳ, ವಚನಗಳ ಒಟ್ಟು ಇನ್ನಷ್ಟು ಮಧುರವಾಗಿಸಿದೆ. ಹೌದು ನೀವು ಉಲ್ಲೇಖ ಮಾಡಿರುವ ಅಷ್ಟು ವಿಷಯಗಳು ಸತ್ಯವೇ ಸತ್ಯ

  ಒಂದು ಸುಂದರ ಲೇಖನ ಓದಿದ ನೆಮ್ಮದಿ ನನಗಾಗಿದೆ.. ಧನ್ಯವಾದಗಳು ಸರ್ಜಿ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು, ಶ್ರೀಕಾಂತ ಮಂಜುನಾಠರೇ.

   ಅಳಿಸಿ
  2. naveengkn on March 14, 2014 - 11:06pm
   ಕವಿಗಳೇ "ಸತ್ಯ‌" ಹಾಗು "ಮಾತನ್ನು" ಜೊತೆಗೆ ಪೋಣಿಸಿ "ಆಡಲಾಗದ‌ ಮಾತುಗಳನ್ನು" ಸುಂದರವಾಗಿ ಹೆಣೆದಿದ್ದೀರಿ,,,,, ಸತ್ಯದ‌ ಮಹಾತ್ಮೆ ಮತ್ತು ಮರ್ಮವನ್ನು ಚೆನ್ನಾಗಿ ವರ್ಣಿಸಿದ್ದೀರಿ, "ನುಡಿದರೆ ಮುತ್ತಿನ‌ ಹಾರದಂತಿರಬೇಕು" ಎಂಬ‌ ಕವಿವಾಣಿ ನೆನಪಾಯಿತು,,,,,,ಜೀವನ‌ಪಾಠ‌ ಕಲಿಸುವ‌ ಬರಹ‌,,,
   ಧನ್ಯವಾದಗಳೊಂದಿಗೆ ನವೀನ್ ಜೀ ಕೇ

   kavinagaraj on March 15, 2014 - 1:15pm
   ಧನ್ಯವಾದ, ನವೀನರೇ.

   nageshamysore on March 15, 2014 - 2:42am
   ತೀರಾ ಹತ್ತಿರದ ನೆಂಟು, ಗೆಳೆತನಗಳಲ್ಲೂ ದಾಕ್ಷಿಣ್ಯಕ್ಕೊ, ಸಂಭಾವಿತತನದ ಔದಾರ್ಯಕ್ಕೊ, 'ಆಡಲಾಗದ' ಅನಿವಾರ್ಯಕ್ಕೊ ಎಷ್ಟೊ ಆಡದ ಮಾತುಗಳು ಹಾಸಿಕೊಂಡು ಬಿದ್ದಿರುತ್ತವೆ. ಕೆಲವು ಬಿಸಿ ತುಪ್ಪದ ಹಾಗೆ ಆಡುವಂತಿಲ್ಲ ಬಿಡುವಂತಿಲ್ಲ. ಮೌನದ ಮುಖವಾಡ ಹೊದ್ದ ಆಡದ ಮಾತುಗಳ ಅಸಹನೀಯ ಭಾರ ಮತ್ತೊಂದು ರೀತಿಯದು!

   kavinagaraj on March 15, 2014 - 1:17pm
   ಧನ್ಯವಾದ, ನಾಗೇಶರೇ. ನನ್ನಿಂದ ಇದನ್ನು ಬರೆಸಿರುವುದೂ ಆಡಲಾಗದ ಮಾತುಗಳೇ. :)

   partha1059 on March 15, 2014 - 2:14pm
   ನಾಗರಾಜರಿಗೆ ನಮಸ್ಕಾರ‌
   ನಿಮ್ಮ‌ ನಿರೂಪಣೆ ಚೆನ್ನಾಗಿದೆ,
   ಆದರೂ ಅನ್ನಿಸಿತು, ಕಡೆಗೊಮ್ಮೆ ನಮ್ಮ‌ ಒಳಗಿನ‌ ಮಾತು ಆಡಬಾರದು ಮಾತುಗಳು ಕಡಿಮೆಯಾದಷ್ಟು ನಮಗೆ ಒಳ್ಳೆಯದು
   ಒಳಗೆ ಹಾಗು ಹೊರಗೆ ಮೌನ‌ ಸಾಧಿಸಲು ಸಾದ್ಯವಾದರೆ ಅದು ನಮ್ಮ‌ ನೆಮ್ಮದಿಯ‌ ದಿನ‌!
   ಮಾತಿನಿಂದ‌ ಉಪಯೋಗಕ್ಕಿಂತ‌ ಅನರ್ಥ ತೊಂದರೆಗಳೇ ಹೆಚ್ಚು !!
   ಅದಕ್ಕೆ ಹೇಳಿದ್ದಾರೇನೊ ಮಾತು ಬೆಳ್ಳಿ ಮೌನ‌ ಬಂಗಾರ‌ !

   gunashekara murthy on March 15, 2014 - 2:41pm
   ಪ್ರೀತಿಯ‌ ಸ್ನೇಹಿತರಾದ‌ ನಾಗರಾಜ ರವರೇ, ನೀವು ಮತ್ತು ನಾವು ಏಕೆ ಬಹಳ ಜನರು ಸತ್ಯವನ್ನು ಕೆಲವು ಕಡೆ ಮರೇಮಾಚುತ್ತೇವೆ. ಆದರೇ ಸುಳ್ಳು ಹೇಳಲು ಇಚ್ಚಿಸುವುದಿಲ್ಲ‌, ಸುಳ್ಳು ಹೇಳುವುದಿಲ್ಲ‌. ಸುಳ್ಳು ಹೇಳಲೇಬೇಕಾದ‌ ಸಂದರ್ಭಬಂದಲ್ಲಿ ಸುಳ್ಳು ಹೇಳಲೇ ಬೇಕೆಂದರೇ ಬಲವಾದ‌ ಲಾಭವಿರಬೇಕು ( ಜೀವಹಾನಿ, ಕುಟುಂಭಹಾನಿ, ಗೌರವ‌, ಬದುಕು ಹೀಗೆ ಹಲವು) . ಆದರೇ, ಮನದಲ್ಲಿರುವ‌ ಆ ಸತ್ಯವು ತನ್ನನ್ನು ಆಗಾಗ‌ ತಲೆಯನ್ನು ತಿನ್ನುತ್ತಲೇ ಇರುತ್ತದೆ, ಮನವನ್ನು ನೋಯಿಸುತ್ತಿರುತ್ತದೆ.ಆಡಬಾರದ‌ ಮಾತಾಗಿ ಮನದಲ್ಲಿ ಹಿಂಸಿಸಿ ಕೊಲ್ಲುತ್ತದೆ. ಸತ್ಯಕ್ಕಂಥು ಸಾವಿಲ್ಲ‌..

   kavinagaraj on March 16, 2014 - 9:01am
   ವಂದನೆ ಮಿತ್ರ ಗುಣಶೇಖರಮೂರ್ತಿಯವರೇ. ನಿಮ್ಮ ಅನಿಸಿಕೆ ಸರಿಯಾಗಿದೆ.

   kavinagaraj on March 16, 2014 - 8:59am
   ಪಾರ್ಥಸಾರಥಿಯವರಿಗೆ ನಮಸ್ಕಾರ. ಹೌದು, ಮೌನ ಒಳ್ಳೆಯದೇ. ಆಡಬಾರದ, ಅಡಲಾಗದ ಮಾತುಗಳನ್ನು ಒಳಗಿಟ್ಟುಕೊಂಡಾಗ ಕೆಲವು ಸಂದರ್ಭಗಳಲ್ಲಿ ಮೌನವೂ ಹಿಂಸೆ ಉಂಟುಮಾಡಬಹುದೇನೋ!

   sathishnasa on March 15, 2014 - 9:17pm
   ಎಲ್ಲ ಸಂಧರ್ಭಗಳಲ್ಲಿ ಮೌನವಾಗಿರುವುದರಿಂದ ಅನರ್ಥಗಳು ತಪ್ಪುತ್ತದೆ ಎಂಬುದು ನನ್ನ ಭಾವನೆ. ಅನಿವಾರ್ಯವಾದಗ ಯೋಚಿಸಿ ಮಾತು ಹೊರ ಹಾಕುವುದು ಒಳ್ಳೆಯದು. ಅದರಲ್ಲು ಮನಸ್ಸು ಕೋಪದಲ್ಲಿ ಇದ್ದಾಗ ಮಾತನಾಡದೆ ಇರುವುದು ಒಳ್ಳೆಯದು. ಒಳ್ಳೆಯ ಲೇಖನ ನಾಗರಾಜ್ ರವರೇ .....ಸತೀಶ್

   ಕವಿನಾಗರಾಜ್ on March 16, 2014 - 9:02am
   ಕೆಲವು ಸಲ ಮೌನವೂ ಅನರ್ಥ ಉಂಟುಮಾಡಬಹುದು. ಹಾಸ್ಯಕ್ಕಾಗಿ ಹೇಳಬೇಕೆಂದರೆ ಮಾತನಾಡಬೇಕಾಗಿದ್ದಾಗಲೂ ಮಾತನಾಡದ ಮನಮೌನಸಿಂಗರು!

   ಅಳಿಸಿ