ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಮಾರ್ಚ್ 28, 2013

ನಾನು


ಅಲ್ಲಿ ನೋಡಲು ನಾನು ಇಲ್ಲಿ ನೋಡಲು ನಾನು
ಎಲ್ಲೆಲ್ಲಿ ನೋಡಿದರೂ ಅಲ್ಲಲ್ಲಿ ನಾನು ||ಪ||

ಸಾಯಲಾರದ ನಾನು ಬದುಕಲಾರದ ನಾನು
ನಾನಾ ಸಂತೆಯಲಿ ಸರಕಾದ ನಾನು
ಗೆಲುವೆಂಬುದೆ ನಾನು ಕಂಡೆನೆಂಬುದೆ ನಾನು
ಕಣ್ಣಿದ್ದು ಕಾಣದಾ ಕುರುಡನೇ ನಾನು || ೧ ||

ಅವನಿಗೆ ಅವ ನಾನು ಇವನಿಗೆ ಇವ ನಾನು
ಅವನಿಯೊಳಾಳ್ವಿಕೆ ಮಾಡಿಹುದೇ ನಾನು
ನಾನು ನಾನೆನುತ ಅವಿರತ ಸೆಣಸಾಡಿ
ನರರು ಹತರಾಗಿ ಗೆದ್ದಿದ್ದೆ ನಾನು || ೨ ||

ಬಗೆ ಬಗೆ ಮುಖವಾಡ ಧರಿಸಿಕೊಂಡಿಹ ನಾನು
ಒಳ ನಾನು ಮರೆಯಾಗಿ ನರಳಿದ್ದೇ ನಾನು
ಕಪಟ ಬಂಧವ ಮುರಿದು ಹೊರಬರಲು ನಾನು
ಉದ್ಧಾರವಾದದ್ದೇ ನಿಜ ನಾನು ನಾನು || ೩ ||
***************
-ಕ.ವೆಂ.ನಾಗರಾಜ್.

ಭಾನುವಾರ, ಮಾರ್ಚ್ 17, 2013

ಕೆಳದಿ ಕವಿ ಲಿಂಗಣ್ಣನ 'ಕೆಳದಿನೃಪ ವಿಜಯ'ದಲ್ಲಿ ವಿಜಯನಗರದ ಅರಸರ ವಿವರ


     ವಿಜಯನಗರ ಸಂಸ್ಥಾಪನೆಗೆ ಕಾರಣಕರ್ತರಾದ ವಿದ್ಯಾರಣ್ಯರ ಕುರಿತು 'ದೇಶ ಮತ್ತು ಧರ್ಮರಕ್ಷಕ ವಿದ್ಯಾರಣ್ಯ' ಎಂಬ ಲೇಖನದಲ್ಲಿ ವಿವರವಾಗಿ ಬರೆದಿರುವುದರಿಂದ ಈ ಲೇಖನದಲ್ಲಿ ಅವರ ಕುರಿತು ಸಂಕ್ಷಿಪ್ತವಾಗಿ ಉಲ್ಲೇಖಿಸುವೆ. ಸುರಾಜ್ಯ ಸ್ಥಾಪನೆಗೆ ಯೋಗ್ಯ ವ್ಯಕ್ತಿಗಳ ಆಗಮನಕ್ಕಾಗಿ ಕಾಯುತ್ತಿದ್ದ ವಿದ್ಯಾರಣ್ಯರ ಆಶಯಕ್ಕೆ ತಕ್ಕಂತೆ ಹರಿಹರ ಬುಕ್ಕರೆಂಬ ಬಡ ಕ್ಷತ್ರಿಯರು ದಕ್ಷಿಣ ರಾಜ್ಯಕ್ಕೆ ಬಂದು ಕುರುಬರಲ್ಲಿ ಬಾಂಧವ್ಯ ಬೆಳೆಸಿ ವಿವಾಹ ಮಾಡಿಕೊಂಡು ಸುಖವಾಗಿದ್ದರೆಂದು 'ಕೆಳದಿನೃಪ ವಿಜಯ'ದಲ್ಲಿ ಹೇಳಲಾಗಿದೆ. ಕಮ್ಮಟದುರ್ಗದ ಅರಸ ಕಂಪಿಲರಾಯನ ಅಳಿಯನೂ, ಸಂಸ್ಥಾನದ ಕೋಶಾಧಿಕಾರಿಯೂ ಆಗಿದ್ದ ಸಂಗಮದೇವನ ಮಕ್ಕಳೇ ಆ ಹರಿಹರ ಮತ್ತು ಬುಕ್ಕರು. ಮಹಮದ್ ಬಿನ್ ತುಘಲಕ್ ರಾಜ್ಯವನ್ನು ಆಕ್ರಮಿಸಿ ಅಲ್ಲಿನ ನಿವಾಸಿಗಳನ್ನು ನಿರ್ದಯವಾಗಿ ಮತ್ತು ಬರ್ಬರವಾಗಿ ಹತ್ಯೆಗೈದು, ಅರಸೊತ್ತಿಗೆಯಲ್ಲಿ ಉಳಿದ ಹರಿಹರ, ಬುಕ್ಕರೂ ಸೇರಿದಂತೆ ಹನ್ನೊಂದು ಜನರನ್ನು ಸೆರೆ ಹಿಡಿದು ಡೆಲ್ಲಿಗೆ ಕರೆದೊಯ್ದು ಸೆರೆಮನೆಯಲ್ಲಿರಿಸಿದ್ದ. ತುಘಲಕ್ ದರ್ಬಾರಿನಿಂದ ಅವನ ರಾಜ್ಯದಲ್ಲಿ ಅರಾಜಕತೆಯುಂಟಾದಾಗ ಸೆರೆಮನೆಯಲ್ಲಿದ್ದ ಯುವಕರನ್ನು ಬಿಡುಗಡೆಗೊಳಿಸಿ ತನ್ನ ಸೈನ್ಯಕ್ಕೆ ಸೇರಿಸಿಕೊಂಡು, ದಕ್ಷಿಣ ಭಾಗದಲ್ಲಿ ಮೂಡಿದ್ದ ಅಶಾಂತಿಯನ್ನು ಶಮನಗೊಳಿಸುವ ಪ್ರಯತ್ನವಾಗಿ ಸೈನ್ಯದೊಂದಿಗೆ ದಕ್ಷಿಣಕ್ಕೆ ಕಳಿಸಿದ ಸಂದರ್ಭವನ್ನು ಉಪಯೋಗಿಸಿಕೊಂಡು, ಹರಿಹರ ಮತ್ತು ಬುಕ್ಕರು ತಪ್ಪಿಸಿಕೊಂಡು ವಿದ್ಯಾರಣ್ಯರಲ್ಲಿ ರಕ್ಷಣೆ ಬಯಸಿ ಬಂದಿದ್ದರು. ಹರಿಹರ, ಬುಕ್ಕರನ್ನು ಇಸ್ಲಾಮ್ ಮತಕ್ಕೆ ಮತಾಂತರಿಸಲಾಗಿತ್ತೆಂದೂ, ವಿದ್ಯಾರಣ್ಯರು ಅವರನ್ನು ಮರಳಿ ಮಾತೃಧರ್ಮಕ್ಕೆ ಸೇರಿಸಿದರೆಂದೂ ಐತಿಹ್ಯವಿದೆ. ಈ ವಿಚಾರ ಲಿಂಗಣ್ಣನ ಕಾವ್ಯದಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ. ಬದಲಾಗಿ ಹಿರಿಯನಾದ ಹರಿಹರನಿಗೆ ಪಂಪಾಕ್ಷೇತ್ರದಲ್ಲಿದ್ದ ವಿದ್ಯಾರಣ್ಯರನ್ನು ಆಸ್ರಯಿಸಿದರೆ ಮಹದೈಶ್ವರ್ಯ ಪ್ರಾಪ್ತಿಯಾಗುವ ಹಾಗೆ ಒಂದು ಕನಸು ಬಿದ್ದು, ಆ ಕನಸಿನ ಅಭಿಪ್ರಾಯ ತಿಳಿಯಲು ವಿದ್ಯಾರಣ್ಯರಲ್ಲಿಗೆ ಸೋದರರು ಹೋಗುತ್ತಾರೆಂದು ಹೇಳಲಾಗಿದೆ. ವಿದ್ಯಾರಣ್ಯರ ಸೂಚನೆ ಅನುಸರಿಸಿ, ಹರಿಹರ, ಬುಕ್ಕರು ಕೆಲವು ದೇಶಪ್ರೇಮಿ ಯುವಕರನ್ನು ಜೊತೆ ಮಾಡಿಕೊಂಡು ಜಾಣತನದಿಂದ ತುಘಲಕನ ವಶದಲ್ಲಿದ್ದ ಆನೆಗೊಂದಿಯ ಅರಮನೆ ಪ್ರವೇಶಿಸಿ ತುಘಲಕನ ಪರವಾಗಿ ಆಡಳಿತ ನಡೆಸುತ್ತಿದ್ದ ಮಲಿಕ್ ನಾಯಬ್ ಪಾನಮತ್ತನಾಗಿದ್ದ ಸಂದರ್ಭ ಉಪಯೋಗಿಸಿಕೊಂಡು, ಅವನನ್ನೇ ಸೆರೆಹಿಡಿದು ರಾಜ ಜಂಬುಕೇಶ್ವರರಾಯನನ್ನು ಬಂಧಮುಕ್ತಗೊಳಿಸಿದುದರ ಉಲ್ಲೇಖ ಸಹ ಈ ಕಾವ್ಯದಲ್ಲಿ ಬರುವುದಿಲ್ಲ. ಯಾವುದೇ ರಕ್ತಪಾತವಿಲ್ಲದೆ ಆನೆಗೊಂದಿ ಸ್ವತಂತ್ರವಾಯಿತು. ಅರಮನೆಯ ಮೇಲೆ ಪುನಃ ವರಾಹಧ್ವಜ ಹಾರಾಡಿತು. ಲಿಂಗಣ್ಣನ ಈ ಐತಿಹಾಸಿಕ ಕಾವ್ಯದಲ್ಲಿ ಕೆಳದಿ ಅರಸರ ಇತಿಹಾಸಕ್ಕೆ ಪ್ರಾಧಾನ್ಯತೆ ಕೊಟ್ಟಿದ್ದರಿಂದ ಕಥಾ ಸಂದರ್ಭಕ್ಕನುಗುಣವಾಗಿ ಮಾತ್ರ ಪೂರಕವಾದ ವಿಚಾರಗಳನ್ನು ಸೂಕ್ಷ್ಮ ಮತ್ತು ಸಂಕ್ಷಿಪ್ತವಾಗಿ ಹೇಳಿರುವುದು ಇದಕ್ಕೆ ಕಾರಣವಾಗಿದೆ. ಕೆಳದಿ ಸಂಸ್ಥಾನವು ವಿಜಯನಗರದ ಸಾಮಂತ ಸಂಸ್ಥಾನವಾಗಿ ಪ್ರಾರಂಭವಾದರೂ, ಕೆಲವೇ ದಶಕಗಳ ನಂತರ ವಿಜಯನಗರ ಸಾಮ್ರಾಜ್ಯ ಪತನ ಹೊಂದಿದ್ದರಿಂದ ಸ್ವತಂತ್ರ ಸಂಸ್ಥಾನವಾಗಿ, ಕರ್ನಾಟಕದ ಹೆಮ್ಮೆಯ ಸಂಸ್ಥಾನವಾಗಿ ಮೆರೆದಿದ್ದುದು, ವಿಜಯನಗರದ ಪರಂಪರೆಯನ್ನು ಮುಂದುವರೆಸಿದುದು ಈಗ ಇತಿಹಾಸ.
     ನಂತರ ವಿದ್ಯಾರಣ್ಯರು ಪಂಪಾಕ್ಷೇತ್ರದಲ್ಲಿ ಒಂದು ಸೂಕ್ತ ಸ್ಥಳವನ್ನು ಆರಿಸಿ ಹರಿಹರ, ಬುಕ್ಕರಿಂದ ಒಂದು ಪಟ್ಟಣವನ್ನು ನಿರ್ಮಿಸಿದರು. ಹರಿಹರ ಬುಕ್ಕರು ಆ ನಗರಕ್ಕೆ ವಿದ್ಯಾನಗರವೆಂದು ಹೆಸರಿಟ್ಟಿದ್ದರೂ, ವಿದ್ಯಾರಣ್ಯರ ಅಪೇಕ್ಷೆಯಂತೆ ಮುಂದೆ ಅದು ವಿಜಯನಗರವೆಂದೇ ಪ್ರಖ್ಯಾತವಾಯಿತು. ಆ ಸ್ಥಳದ ಮಹಿಮೆ ಕುರಿತು ಕವಿ ಹೇಳಿರುವುದು ಹೀಗೆ: 'ಪೂರ್ವದೊಳ್ ಸೂರ್ಯವಂಶಜನಾದ ತ್ರಿಶಂಕು ಮಹಾರಾಯಂ ಪಂಪಾಕ್ಷೇತ್ರಕ್ಕೆ ಬಂದು ಈ ವಿರೂಪಾಕ್ಷಲಿಂಗಂ ಪ್ರಾದುರ್ಭವಲಿಂಗವೋ ಪ್ರತಿಷ್ಠಾಲಿಂಗವೋ ಯೆಂದು ಕೇಳಿದಲ್ಲಿ ಈ ಲಿಂಗಂ ಜ್ಯೋತಿರ್ಮಯವಾದ ಲಿಂಗಂ, ಈ ಲಿಂಗದ ಮಹಿಮೆಯಂ ಪೇಳ್ವುದಕ್ಕೆ ಬ್ರಹ್ಮದೇವರಿಗಾದರೂ ಅಸಾಧ್ಯಮೆಮ್ಮಪಾಡೇನೆನಲಾಗಿ ಆ ಮಾತಂ ಕೇಳ್ದು, ಆ ತ್ರಿಶಂಕು ಮಹಾರಾಯಂ ಪ್ರತಿಷ್ಠಾಲಿಂಗವೋ ಯೆಂದು ಕೇಳ್ದ ದೋಷನಿವೃತ್ತಿಗೋಸುಗಂ ಕೃಷ್ಣವೇಣೀ ನದೀತೀರಮಾರಭ್ಯ ಸೇತುಪರ್ಯಂತಂ ಮೂರುವರೆ ಕೋಟಿರಾಜ್ಯವನೀ ವಿರೂಪಾಕ್ಷದೇವರ್ಗೆ ಧಾರೆಯನೆರೆದನೆಂದು ಸ್ಥಳದವರ್ಪೇಳಲ್ ಆ ಮಾತಂ ಕೇಳ್ದಾ ವಿದ್ಯಾರಣ್ಯರ್ ಹರಿಹರಬುಕ್ಕರಂ ಕರೆದು ಈ ರಾಜ್ಯಕ್ಕೆಲ್ಲಂ ವಿರೂಪಾಕ್ಷಸ್ವಾಮಿಯೇ ಕರ್ತಂ, ನೀಂ ಆ ದೇವರ ಭಕ್ತರಾಗಿ ವರ್ತಿಸುತ್ತುಂ ಶ್ರೀ ವಿರೂಪಾಕ್ಷನೆಂದೊಪ್ಪವಂ ಹಾಕಿ ನಡೆಕೊಂಡು ಸದ್ಧರ್ಮದಿಂ ರಾಜ್ಯವನಾಳಿಕೊಂಡಿರ್ಪುದೆಂದು ಕಟ್ಟಳೆಯಂ ರಚಿಸಿ ಆ ಹರಿಹರಗೆ ಹರಿಹರರಾಯನೆಂದು ಪೆಸರಿಟ್ಟು ವಿದ್ಯಾನಗರಮೆಂಬ ಪಟ್ಟಣಮಂ ನಿರ್ಮಾಣಂ ಮಾಡಿಸುವ ಕಾಲದಲ್ಲಿ. . '  ಈ ನಗರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡುವ ಸಂದರ್ಭದಲ್ಲಿ ದಾಸಯ್ಯನೊಬ್ಬ ಊದಿದ ಶಂಖಧ್ವನಿಯಿಂದಾಗಿ ಮುಹೂರ್ತ ವ್ಯತ್ಯಾಸವಾಯಿತೆನ್ನಲಾಗಿದೆ. ಇದರಿಂದಾಗಿ ಕೆಲವು ವರ್ಷಗಳ ನಂತರ ಈ ನಗರವು ತುರುಕರ ಅಧೀನಕ್ಕೊಳಪಡುವುದೆಂದು ವಿದ್ಯಾರಣ್ಯಾತ್ಮಕ ಕಾಲಜ್ಞಾನವೆಂದು ಗ್ರಂಥ ರಚಿಸಿದರೆನ್ನಲಾಗಿದೆ. ವಿದ್ಯಾರಣ್ಯರು ಶಾಲಿವಾಹನಶಕ ೧೨೫೮ರಲ್ಲಿ (ಕ್ರಿ.ಶ. ೧೩೩೬) ಹರಿಹರರಾಯನಿಗೆ ವಿದ್ಯಾನಗರಿಯ ರತ್ನಸಿಂಹಾಸನದಲ್ಲಿ ಕೂರಿಸಿ ಪಟ್ಟಾಭಿಷೇಕ ಮಾಡುವುದರೊಂದಿಗೆ ವಿಜಯನಗರ ಸಾಮ್ರಾಜ್ಯದ ಉದಯವಾಯಿತು.
     ರಾಯ ಸಂಸ್ಥಾನವೆಂದೇ ಪ್ರಖ್ಯಾತವಾಗಿದ್ದ ವಿಜಯನಗರ ಸಂಸ್ಥಾನದ ಆಳ್ವಿಕೆ ೨೩೨ ವರ್ಷಗಳ ಕಾಲ ನಡೆದು ೧೩ ಅರಸರುಗಳು ಆಳಿದ್ದು, ಅವರ ವಂಶ ಪರಂಪರೆಯನ್ನು 'ಹಬುಹೋವಿಬುದೇವಿಮಾರಾವಿ' ಎಂದು ಸಂಕೇತಾಕ್ಷರದಲ್ಲಿ ಕವಿ ವಿವರಿಸಿರುವುದು ಹೀಗೆ:     
ಆ ರತ್ನಸಿಂಹಾಸನವನಾಳ್ದ ರಾಯರ ವಂಶ ಪರಂಪರಾವಿವರಣಂ-
ಶ್ಲೋ || ಹಬುಹೋವಿಬುದೇರವದೇವಿಮಾರಾವಿಸಂಸ್ಥಿತಾಃ |
ತ್ರಯೋದಶ ಮಹಿಪಾಲಾ ರತ್ನ ಸಿಂಹಾಸನಾಧಿಪಾಃ ||
ದ್ವಾತ್ರಿಂಶದುತ್ತರಾನೇತೇ ದ್ವಿಶತಾಬ್ದಾನ್ ಕ್ಷಿತೌಸ್ಥಿತಾಃ ||
     ನಂತರದಲ್ಲಿ, ಪ್ರೌಢರಾಯ ೧೨ ವರ್ಷ, ವೀರನರಸಿಂಹರಾಯ ೧೦ ವರ್ಷ, ಆಮೇಲೆ ಸಾಳುವ ನರಸಿಂಹ ೧೨ ವರ್ಷ, ಅಚ್ಯುತ ೩ ವರ್ಷ, ಸದಾಶಿವ ೨ ವರ್ಷ, ಕೃಷ್ಣ ೪೦ ವರ್ಷ, ರಾಮರಾಜ ೨೪ ವರ್ಷ - ಈ ಏಳು ಮಂದಿ ರಾಜರು ರತ್ನಸಿಂಹಾಸನಾಧೀಶ್ವರರಾಗಿದ್ದರೆಂದು ಕವಿ ಹೇಳಿದ್ದಾನೆ.      
ಶ್ಲೋ|| ಪ್ರೌಢೋದ್ವಾದಶ ವರ್ಷಾಣಿ ದಶ ವೀರನೃಸಿಂಹರಾಟ್
ತತಸ್ಸಾಳ್ವನೃಸಿಂಹಾಖ್ಯೋ ದ್ವಾದಶ ತ್ರಿಸ್ತತೋಚ್ಯುತಃ ||
ಚತ್ವಾರಿಂಶತ್ತತಃ ಕೃಷ್ಣಸ್ತತೋ ದ್ವೇ ಚ ಸದಾಶಿವಃ
ಚತುರ್ವಿಂಶತಿ ವರ್ಷಾಣಿ ರಾಮರಾಜೋ ಮಹೀಪತಿಃ
ಏತೇ ಸಪ್ತ ಮಹಿಪಾಲಾ: ರತ್ನಸಿಂಹಾಸನೇಶ್ವರಾಃ ||
     ಈ ರಾಮರಾಯ ರಾಜ್ಯವಾಳುತ್ತಿದ್ದ ಸಂದರ್ಭದಲ್ಲಿ ಬಿಜಾಪುರ, ಭಾಗಾನಗರ ಮತ್ತು ಅಹಮದ್ ನಗರಗಳ ಬಾದಶಹರುಗಳು ಒಂದಾಗಿ ಮೋಸದಿಂದ ದಾಳಿ ಮಾಡಲಾಗಿ ವಿದ್ಯಾನಗರಿ ವಿಸ್ಖಲಿತವಾಯಿತು. ರಾಮರಾಯನ ಅಂತ್ಯದ ನಂತರ ಅಲ್ಪ ಸ್ವಲ್ಪ ಭೂಮಿ ಮತ್ತು ಸೈನ್ಯದೊಂದಿಗೆ ವೆಂಕಟಪತಿರಾಯ ೩ ವರ್ಷ, ಶ್ರೀರಂಗರಾಯ ೫ ವರ್ಷ ಆಳಿ ನಂತರ ಅಲ್ಲಿ ನಿಲ್ಲಲಾರದೆ ಪೆನುಗೊಂಡೆಗೆ ಹೋಗಿ ರಾಮರಾಯನ ಮಕ್ಕಳು ಅಲ್ಲಿ ಆಳ್ವಿಕೆ ನಡೆಸಿದರು. ಶ್ರೀರಂಗರಾಯ ೫ ವರ್ಷ, ವೆಂಕಟಪತಿರಾಯ ೭ ವರ್ಷ, ರಾಮದೇವರಾಯ ೬ ವರ್ಷ, ಮುದ್ದುವೆಂಕಟಪತಿರಾಯ ೫ ವರ್ಷ, ಶ್ರೀರಂಗರಾಯ ೨೭ ವರ್ಷ ಆಳಿದ್ದು, ಈ ಪೀಳಿಗೆ ಇಲ್ಲಿಗೆ ಸಮಾಪ್ತವಾಯಿತೆನ್ನಲಾಗಿದೆ.
      ಆನೆಗೊಂದಿಯಲ್ಲಿ ಕೃಷ್ಣರಾಯನ ಅಳಿಯನೂ, ರಾಮರಾಯನ ದಾಯಾದಿಗಳೂ ಆದ ಮರಿತಿಮ್ಮರಾಯನ ಮಕ್ಕಳು ರಾಯಲ್ಲಯ್ಯರಾಯ, ಈತನ ಮಕ್ಕಳು ಪೆದ್ದವೆಂಕಟರಾಯ- ಚಿಕ್ಕವೆಂಕಟರಾಯ, ಇವರ ಮಗ ರಾಮಪ್ಪರಾಯ ಆಳಿದರೆನ್ನಲಾಗಿದೆ. 
-ಕ.ವೆಂ.ನಾಗರಾಜ್.

ಪೂರಕ ಲೇಖನ: ದೇಶ ಮತ್ತು ಧರ್ಮರಕ್ಷಕ ವಿದ್ಯಾರಣ್ಯರು


ಮಂಗಳವಾರ, ಮಾರ್ಚ್ 12, 2013

ವಾತ್ಸಲ್ಯಮಯಿ ಶ್ರೀಮತಿ ಪ್ರಭಾಮಣಿ ಶ್ರೀನಿವಾಸಮೂರ್ತಿ      ಹಳೇಬೀಡಿನ ದಿ. ಶ್ಯಾನುಭೋಗ್ ಸುಬ್ಬರಾಯರ ಮನೆ ಒಂದು ಕಾಲದಲ್ಲಿ ನಂದಗೋಕುಲವಿದ್ದಂತೆ ಇದ್ದ, ಚೆನ್ನಾಗಿ ಬಾಳಿ ಬದುಕಿದ್ದ ಮನೆ. ಸದಾ ಮನೆಯವರಿಂದ, ಬಂಧು-ಬಳಗದವರಿಂದ, ಬಂದು ಹೋಗುವವರಿಂದ ತುಂಬಿ ತುಳುಕುತ್ತಿದ್ದ, ಗಿಜಿಗುಡುತ್ತಿದ್ದ ಮನೆ. ಬೇಸಿಗೆ ರಜೆ ಬಂತೆಂದರೆ ಸಾಕು, ಎಲ್ಲಾ ಮೊಮ್ಮಕ್ಕಳೂ ಅಲ್ಲಿ ಆಡಿ, ಕುಣಿದಾಡಲು ಓಡೋಡಿ ಬರಲು ಬಯಸುತ್ತಿದ್ದ, ಅಲ್ಲಿ ಸಿಗುತ್ತಿದ್ದ ಪ್ರೀತಿ, ಪ್ರೇಮ, ವಿಶ್ವಾಸಗಳ ಸವಿಯನ್ನು ಉಣ್ಣಲು ಕಾತರಿಸುತ್ತಿದ್ದ ಸಮಯವೆಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ನಾನೂ ಸಹ ಒಬ್ಬ ಮೊಮ್ಮಗನಾಗಿ, ಆ ಮನೆಯ ಮೊದಲ ಮೊಮ್ಮಗನಾಗಿ, ಅಲ್ಲಿನ ಪ್ರೀತಿಯ ಸವಿಯನ್ನು ಉಂಡವನಾಗಿದ್ದು, ಅಂದಿನ ಬಾಲ್ಯದ ದಿನಗಳು ಹಚ್ಚ ಹಸಿರಾಗಿ ಉಳಿದಿವೆ. ಸುಬ್ಬರಾಯರ ಅವಿಭಕ್ತ ಕುಟುಂಬದಂತಹ ಕುಟುಂಬಗಳನ್ನು ಇಂದು ಕಾಣುವುದನ್ನಾಗಲೀ, ಕಲ್ಪಿಸಿಕೊಳ್ಳುವುದಾಗಲೀ ಇಂದಿನವರಿಗೆ ಸಾಧ್ಯವಾಗಲಾರದೇನೋ! ಆ ದೊಡ್ಡ ಕುಟುಂಬದ ಆಗು-ಹೋಗುಗಳು, ಕೆಲಸ ಕಾರ್ಯಗಳನ್ನು ನಿರ್ವಹಿಸಲು, ನಿಭಾಯಿಸಲು ಹೆಣ್ಣು ಮಕ್ಕಳು, ಸೊಸೆಯಂದಿರು ಕಷ್ಟಪಟ್ಟಿದ್ದಾರೆ. ಅಜ್ಜಿ ಲಕ್ಷ್ಮಮ್ಮನ ಹೆಗಲಿಗೆ ಹೆಗಲಾಗಿ ಶ್ರಮಿಸಿದ್ದಾರೆ. ದಿ. ಸುಬ್ಬರಾಯರ ಹಿರಿಯ ಮಗ ಶ್ರೀನಿವಾಸಮೂರ್ತಿಯವರ (ನನ್ನ ತಾಯಿ ಸೀತಮ್ಮನವರ ಅಣ್ಣ) ಕೈಹಿಡಿದು ಮನೆಗೆ ಕಾಲಿರಿಸಿದ ದಿನದಿಂದ ಮನೆಯವರ ಏಳಿಗೆ ಬಯಸಿದ, ಅದಕ್ಕಾಗಿ ದುಡಿದ ಶ್ರೀಮತಿ ಪ್ರಭಾಮಣಿಯವರು ದಿನಾಂಕ ೧೧-೦೩-೨೦೧೩ರಂದು ಬೆಂಗಳೂರಿನ ಮಗನ ನಿವಾಸದಲ್ಲಿ ಇಹಯಾತ್ರೆ ಮುಗಿಸಿ ಇನ್ನು ನಮಗೆ ನೆನಪಾಗಿ ಮಾತ್ರ ಉಳಿದಿದ್ದಾರೆ. ನನ್ನ ಸೋದರತ್ತೆ ಪ್ರಭಾಮಣಿಯವರ ಕುರಿತು ನನ್ನ ಬಾಲ್ಯಕಾಲದ ಒಂದೆರಡು ಅನುಭವಗಳನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳುತ್ತಿದ್ದೇನೆ.
     ಮೊದಲೇ ಹೇಳಿರುವಂತೆ ಬೇಸಿಗೆ ಕಾಲ ಬಂತೆಂದರೆ ನೆಂಟರ, ಇಷ್ಟರ ದೊಡ್ಡ ಸಮೂಹವೇ ಹಳೇಬೀಡಿನ ಮನೆಯಲ್ಲಿ ಸೇರುತ್ತಿತ್ತು. ಸುಬ್ಬರಾಯರು-ಲಕ್ಷ್ಮಮ್ಮನವರ ಎಂಟು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳ ಬಳಗವೆಂದರೆ ಸುಮ್ಮನಾದೀತೇ? ಹಬ್ಬ-ಹರಿದಿನಗಳು, ಕಾರ್ಯಕ್ರಮಗಳು, ಬಸಿರು, ಬಾಣಂತನ, ಆರೈಕೆಗಳು, ನಾಮಕರಣ, ಮುಂಜಿ, ಮದುವೆ, ಇತ್ಯಾದಿ, ಇತ್ಯಾದಿ ಕಲಾಪಗಳು ಸದಾ ಇದ್ದೇ ಇರುತ್ತಿದ್ದ ದಿನಗಳವು. ಮಕ್ಕಳ ಸೈನ್ಯವೇ ಅಲ್ಲಿ ಸೇರಿರುತ್ತಿತ್ತು. ಎಲ್ಲರ ಊಟೋಪಚಾರಗಳು, ಬೇಕು-ಬೇಡಗಳನ್ನು ನಿಭಾಯಿಸುವಲ್ಲಿ ಅಜ್ಜಿ ಲಕ್ಷ್ಮಮ್ಮನವರಿಗೆ ಹಿರಿಯ ಸೊಸೆ ಪ್ರಭಾಮಣಿ ಬೆನ್ನೆಲುಬಾಗಿದ್ದರು. ಗದ್ದಲವೆಬ್ಬಿಸಿ ಚಿಟ್ಟು ಹಿಡಿಸುತ್ತಿದ್ದ ಮಕ್ಕಳ ಸೈನ್ಯ ನಿಯಂತ್ರಿಸುವುದರಲ್ಲಿ ಎಲ್ಲರಿಗೂ ಸಾಕೋಸಾಕಾಗುತ್ತಿತ್ತು. ಅಂತಹ ಮಕ್ಕಳನ್ನು  ಅವರು ಒಬ್ಬೊಬ್ಬರನ್ನಾಗಿ ಹಿಡಿಹಿಡಿದು ಕರೆದೊಯ್ದು ಸ್ನಾನ ಮಾಡಿಸಿ ಟವೆಲ್ ಸುತ್ತಿ ಹೊರಗೆ ಕಳಿಸುತ್ತಿದ್ದುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆಡುತ್ತಿದ್ದ ಆಟ ಬಿಟ್ಟು ಬರದ ಅವರನ್ನು ಹಿಡಿದು ಸ್ನಾನ ಮಾಡಿಸುವ ಈ ಕೆಲಸ ಏನೂ ಸಾಮಾನ್ಯದ್ದಾಗಿರಲಿಲ್ಲ, ಒಂದು ಸಣ್ಣ ಯುದ್ಧದಲ್ಲಿ ಗೆದ್ದಂತೆಯೇ. ಅದು ಆಗುತ್ತಿದ್ದಂತೆ ತಿಂಡಿ ಮಾಡಿ ಎಲ್ಲರದೂ ಆಯಿತೇ ಎಂದು ನೋಡಿಕೊಳ್ಳುವ ಕೆಲಸ, ತಿಂಡಿ ಕೆಲಸ ಮುಗಿಯುವ ಮುನ್ನವೇ ಊಟದ ಸಿದ್ಧತೆ ಪ್ರಾರಂಭವಾಗಬೇಕಿತ್ತು. ಈಗಿನಂತೆ ಆಗ ಗ್ಯಾಸ್ ಸ್ಟೌ, ಎಲೆಕ್ಟ್ರಿಕ್ ಒಲೆಗಳು ಇರದಿದ್ದ ಕಾಲ. ಸ್ನಾನಕ್ಕೆ ಬಿಸಿನೀರು, ತಿಂಡಿ, ಅಡುಗೆ ಎಲ್ಲದಕ್ಕೂ ಸೌದೆಯನ್ನೇ ಬಳಸುತ್ತಿದ್ದುದು. ನಸುಕು ಹರಿಯುವ ಮುನ್ನವೇ ಹಚ್ಚುತ್ತಿದ್ದ ಮಣ್ಣಿನ ಒಂದು ಕೂಡಲಿ ಒಲೆ, ಮತ್ತೊಂದು ಒಂಟಿ ಒಲೆ ಆರುತ್ತಿದ್ದುದು ರಾತ್ರಿ ಮಲಗುವ ವೇಳೆಯಲ್ಲಿಯೇ. ನನಗೆ ಇನ್ನೂ ನೆನಪಿದೆ. ಒಂದು ಬೇಸಿಗೆಯ ರಜಾಕಾಲದಲ್ಲಿ ಆಟವಾಡುತ್ತಿದ್ದಾಗ ಸೋದರತ್ತೆ ಪ್ರಭಾಮಣಿ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದರು. ಹತ್ತಿರದ ದಾಸವಾಳದ ಗಿಡದಿಂದ ಬಿಳಿ ದಾಸವಾಳದ ಹೂವುಗಳನ್ನು ನಾವುಗಳು ಕಿತ್ತು ತಿನ್ನುತ್ತಾ ಆಟವಾಡುತ್ತಿದ್ದೆವು. ಆಗಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ಗಡಿಬಿಡಿಯಿಂದ ಕೋಣೆಗೆ ಹೋದ ಒಂದೆರಡು ಕ್ಷಣದಲ್ಲೇ ಹೆರಿಗೆಯಾಗಿತ್ತು. ಆಗ ಹುಟ್ಟಿದವಳೇ ಅವರ ಕಿರಿಯ ಮಗಳು ರಾಧಾ. ಅವಳು ಈಗ ನನ್ನ ಕಿರಿಯ ತಮ್ಮನ ಪತ್ನಿ, ತನ್ನ ಕುಟುಂಬದೊಡನೆ ಅಮೆರಿಕಾದಲ್ಲಿದ್ದಾಳೆ. ನಗುನಗುತ್ತಾ ಕಷ್ಟಗಳನ್ನು ಸಹಿಸಿ, ಮಕ್ಕಳ ಓದು, ವಿದ್ಯಾಭ್ಯಾಸಕ್ಕೆ ಉತ್ತೇಜಿಸಿ, ಅವರ ಅಭಿವೃದ್ಧಿ ಕಂಡು ಸಂತಸ ಪಟ್ಟ ಜೀವವದು. ಹಲವಾರು ನೆನಪುಗಳು ಅವರು ಮರೆಯಾಗಿರುವ ಈ ಸಮಯದಲ್ಲಿ ಮನಃಪಟಲದಲ್ಲಿ ಹಾದು ಹೋಗುತ್ತಿವೆ. ಅವರ ಮಾತೃವಾತ್ಸಲ್ಯ ಭರಿತ ನೋಟ, ಮಕ್ಕಳೊಡನೆ ಮಕ್ಕಳಾಗಿ ಬೆರೆತು ಆಡುತ್ತಿದ್ದುದು, ಸಣ್ಣ ಸಣ್ಣ ವಿಷಯಗಳನ್ನೂ ಬೆರಗಾಗಿ ಕೇಳಿ ಪ್ರತಿಕ್ರಿಯಿಸುತ್ತಿದ್ದ ರೀತಿ, ಉದ್ಗಾರಗಳು ಕಣ್ಣಿಗೆ ಕಟ್ಟಿದಂತಿದೆ. ಅವರ ಆಶೀರ್ವಾದದ ಫಲದಿಂದ ಅವರ ಮಕ್ಕಳು ಮತ್ತು ಬಂಧುಗಳು ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ, ಅವರ ಆಶೀರ್ವಾದ ಸದಾ ಎಲ್ಲರಿಗೂ ಶ್ರೀರಕ್ಷೆಯಾಗಿರಲಿ.     

ಮಂಗಳವಾರ, ಮಾರ್ಚ್ 5, 2013

ಅದ್ಭುತ ವಿಚಾರ, ಉದಾತ್ತ ಕಲ್ಪನೆಯ ಬಲಿವೈಶ್ವದೇವಯಜ್ಞ
     ಬಲಿವೈಶ್ವದೇವಯಜ್ಞ - ನಿಜಕ್ಕೂ ಒಂದು ಅದ್ಭುತ ವಿಚಾರ ಮತ್ತು ಉದಾತ್ತ ಕಲ್ಪನೆಗಳನ್ನೊಳಗೊಂಡ ಪ್ರತಿದಿನ ಮಾಡಬೇಕಾದ ಯಜ್ಞವಾಗಿದೆ. ಇದನ್ನು ಪ್ರತ್ಯಕ್ಷ ಆಚರಣೆಗೆ ತಂದಿರುವವರನ್ನು ನಾನು ಕಂಡಿಲ್ಲ. ಅಂತಹವರು ಇದ್ದರೆ ಅವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ಈ ಯಜ್ಞದ ಆಚರಣೆಯ ಕ್ರಮ ಹೀಗಿದೆ. ಭೋಜನಕ್ಕಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಲ್ಲಿ ಹುಳಿ, ಉಪ್ಪು, ಖಾರ, ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಆಹಾರದಲ್ಲಿ ಸ್ವಲ್ಪ ಭಾಗವನ್ನು ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ, ಶಾಂತಿ, ಇತ್ಯಾದಿ ಸದ್ಗುಣಗಳ ಧಾರಣೆಗಾಗಿ, ಪ್ರಾಣಾಪಾನ ಪುಷ್ಟಿಗಾಗಿ, ವಿವಿಧ ಶಕ್ತಿಗಳ ಸಲುವಾಗಿ ಮತ್ತು ಸಮಸ್ತ ವಿದ್ವಜ್ಜನರ ಪ್ರಸನ್ನತೆಯ ಸಲುವಾಗಿ, ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯನ ಹಾಗೂ ರೋಗನಿರೋಧಕ ಶಕ್ತಿ ಪ್ರಾಪ್ತಿಗಾಗಿ, ಶರೀರಧಾರ್ಢ್ಯ ಪ್ರಾಪ್ತಿಗಾಗಿ, ಅಧ್ಯಯನಾನುಕೂಲ ವಿದ್ವಾಂಸರ ಪ್ರಸನ್ನತೆಗಾಗಿ, ನಮ್ಮ ಹಿರಿಯರು ಮತ್ತು ಪರಮಾತ್ಮನ ತೃಪ್ತಿಗಾಗಿ ಒಂದು ಮಂತ್ರಕ್ಕೆ ಒಂದು ಸಲದಂತೆ ಅಗ್ನಿಗೆ ಆಹುತಿ ನೀಡಬೇಕು. ಹೇಳಲಾಗುವ 10 ಮಂತ್ರಗಳು:
     ಓಂ ಅಗ್ನಯೇ ಸ್ವಾಹಾ || ಓಂ ಸೋಮಾಯ ಸ್ವಾಹಾ || ಓಂ ಅಗ್ನಿ ಸೋಮಾಭ್ಯಾಂ ಸ್ವಾಹಾ || ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ || ಓಂ ಧನ್ವಂತರಯೇ ಸ್ವಾಹಾ || ಓಂ ಕುಹ್ವೈ ಸ್ವಾಹಾ || ಓಂ ಅನುಮತ್ಯೈ ಸ್ವಾಹಾ || ಓಂ ಪ್ರಜಾಪತಯೇ ಸ್ವಾಹಾ || ಓಂ ಸಹ ದ್ವಾವಾ ಪೃಥಿವೀಭ್ಯಾಂ ಸ್ವಾಹಾ || ಓಂ ಸ್ವಿಷ್ಟಕೃತೇ ಸ್ವಾಹಾ || 
     ನಂತರದಲ್ಲಿ ಒಂದು ಎಲೆಯ ಮೇಲೆ ಉಪ್ಪು ಹಾಕಲ್ಪಟ್ಟ ಸಿದ್ಧಪಡಿಸಿದ ಅನ್ನ, ಸಾರು, ಪಲ್ಯ, ರೊಟ್ಟಿ ಮುಂತಾದ ಆಹಾರಪದಾರ್ಥಗಳ ಒಂದು ಭಾಗವನ್ನು ಹರಡಿ, ಅದನ್ನು ಪುನಃ ಏಳು ಭಾಗಗಳಾಗಿ ವಿಂಗಡಿಸಿ, 'ಶ್ವಭ್ಯೋ ನಮಃ| ಪತಿತೇಭ್ಯೋ ನಮಃ| ಶ್ವಪಗ್ಯೋ ನಮಃ| ಪಾಪ ರೋಗಿಭ್ಯೋ ನಮಃ| ಗೋಭ್ಯೋ ನಮಃ| ವಾಯುಸೇಭ್ಯೋ ನಮಃ| ಕೃಮಿಭ್ಯೋ ನಮಃ|' ಎಂದು ಹೇಳಿ ಆ ಭಾಗಗಳನ್ನು ದೀನರಿಗೆ, ದುರ್ಬಲರಿಗೆ, ಹಸಿದವರಿಗೆ, ರೋಗಿಗಳಿಗೆ, ಗೋವು, ನಾಯಿ, ಮುಂತಾದ ಸಾಕುಪ್ರಾಣಿಗಳಿಗೆ, ಪಕ್ಷಿಗಳಿಗೆ, ಇರುವೆ ಮೊದಲಾದ ಕ್ರಿಮಿಕೀಟಗಳಿಗೆ ಕೊಡಬೇಕು. ನಂತರದಲ್ಲಿ ಸ್ವತಃ ಊಟ ಮಾಡುವುದು ಕ್ರಮ. ಸಾಮರಸ್ಯ, ಸ್ವಾರ್ಥತ್ಯಾಗ, ಪರಾರ್ಥ ಚಿಂತನೆಗೆ ಇಂಬು ಕೊಡುವ ಇಂತಹ ಕ್ರಿಯೆಯನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಮನುಷ್ಯ-ಮನುಷ್ಯರ ನಡುವೆಯೇ ಆ ಜಾತಿ, ಈ ಜಾತಿ, ಮೇಲು-ಕೀಳು, ಬಡವ-ಶ್ರೀಮಂತ, ಜ್ಞಾನಿ-ಅಜ್ಞಾನಿ, ಇತ್ಯಾದಿ ಭೇದ ಭಾವಗಳ ಮಹಾಪೂರವನ್ನೇ ಕಾಣುತ್ತಿರುವ ನಮಗೆ, ಮಾನವರಿರಲಿ, ಸಕಲ ಜೀವರಾಶಿಗಳ ಅಭ್ಯುದಯದ ಕಲ್ಪನೆ, ಮಾರ್ಗದರ್ಶನ ಮಾಡುವ ಈ ಕ್ರಿಯೆ ಅನುಕರಣೀಯವಾಗಿದೆ. ಪಂ. ಸುಧಾಕರ ಚತುರ್ವೇದಿಯವರು ಈ ವಿಚಾರದಲ್ಲಿ ಹೇಳಿರುವುದು ಹೀಗೆ:-

     ಬಲಿವೈಶ್ವದೇವ - ಇದು ಸಾಧುಗಳಾದ ಮೂಕಪಕ್ಷಿಗಳ, ಗುಣ ಹೊಂದದ ಭಯಂಕರ ರೋಗಿಗಳ ಮತ್ತು ಇತರ ರೀತಿಯಲ್ಲಿ ಅಸಹಾಯಕರಾದ ಮಾನವರ ಸೇವೆ ಮಾಡುವ ಮಹಾಕಾರ್ಯ. ಪ್ರಿಯಃ ಪಶೂನಾಂ ಭೂಯಾಸಮ್ || (ಅಥರ್ವ.೧೭.೧.೪) - ಪ್ರಭೋ, ನಾನು ಪಶುಗಳಿಗೆ ಪ್ರಿಯನಾಗುವೆ -  ಎಂಬ ಹಾರ್ದಿಕ ಪ್ರಾರ್ಥನೆಗೆ ಕ್ರಿಯಾತ್ಮಕ ರೂಪ ಕೊಟ್ಟು ಮಾನವಜನಾಂಗಕ್ಕೆ ನಾನಾ ವಿಧದಲ್ಲಿ ಸಹಾಯಕವಾಗಿರುವ ಪಶು-ಪಕ್ಷಿಗಳಿಗೆ ತಮ್ಮ ಶಕ್ತ್ಯಾನುಸಾರ ಆಹಾರ ಕೊಡುವುದು ಬಲಿವೈಶ್ವದೇವದ ಪ್ರಥಮಭಾಗ. ನಾನಾ ಕಾರಣಗಳಿಂದ, ಅತ್ಯಂತ ದುಃಖಮಯವಾದ ಸ್ಥಿತಿಯಲ್ಲಿರುವ ಮಾನವರ ಕ್ಲೇಶನಿವಾರಣೆಗಾಗಿ ಆಹಾರಾದಿ ಪದಾರ್ಥಗಳನ್ನು ಕೊಡುವುದು ಎರಡನೆಯ ಭಾಗ. ಋಗ್ವೇದ ಹೇಳುತ್ತಿದೆ: 
ಉತ ದೇವಾ ಅವಹಿತಂ ದೇವಾ ಉನ್ನಯಥಾ ಪುನಃ | 
ಉತಾಗಶ್ಚಕ್ರುಷಂ ದೇವಾ ದೇವಾ ಜೀವಯಥಾ ಪುನಃ || (ಋಕ್.೧೦.೧೩೭.೧)
     [ದೇವಾಃ ದೇವಾಃ] ದಾನಶೀಲರಾದ ವಿದ್ವಾಂಸರೇ, [ಅವಹಿತಮ್] ಕೆಳಗೆ ಬಿದ್ದವನನ್ನು [ಪುನಃ] ಮತ್ತೆ [ಉನ್ನಯಥಾ] ಮೇಲಕ್ಕೆತ್ತಿರಿ. [ಉತ] ಮತ್ತು [ದೇವಾಃ ದೇವಾಃ] ಪ್ರಕಾಶವಂತರಾದ ಪುಣ್ಯಾತ್ಮರೇ, [ಅಗಃ ಚಕ್ರುಷಮ್] ಪಾಪ ಮಾಡುವವನಲ್ಲಿ, [ಪುನಃ] ಮರಳಿ, [ಜೀವಯಥಾ] ನವಜೀವನವನ್ನು ತುಂಬಿಸಿರಿ.
     ವೈದಿಕ ಧರ್ಮದ ಈ ಔದಾರ್ಯಕ್ಕೆ ವಾಸ್ತವಿಕತೆಯ ರೂಪ ಕೊಡುವುದು ಗೃಹಸ್ಥ-ಗೃಹಿಣಿಯರ ಕರ್ತವ್ಯವೇ ಆಗಿದೆ. ಮತ್ತೂ ಕೇಳಿರಿ:-
ಅಮಾಜುರಶ್ಚಿದ್ಭವಥೋ ಯುವಂ ಭಗೋsನಾಶೋಶ್ಚಿದವಿತಾರಾಪಮಸ್ಯ ಚಿತ್ | 
ಅಂಧಸ್ಯ ಚಿನ್ನಾಸತ್ಯಾ ಕೃಶಸ್ಯ ಚಿದ್ಯುವಾಮಿದಾಹುರ್ಭಿಷಜಾ ರುತಸ್ಯ ಚಿತ್ || (ಋಕ್.೧೦.೩೯.೩)
     [ನಾಸತ್ಯಾ] ಓ ಅಸತ್ಯದೂರರಾದ ದಂಪತಿಗಳೇ, [ಯುವಮ್] ನೀವಿಬ್ಬರೂ, [ಅಮಾಜುರಃ ಚಿತ್] ನಿಜವಾಗಿ ಒಬ್ಬರಿಗೊಬ್ಬರು ಸಮೀಪಸ್ಥರೂ, [ಭಗಃ] ಒಬ್ಬರಿಗೊಬ್ಬರು ಐಶ್ವರ್ಯರೂಪರೂ [ಭವತಃ] ಆಗಿರಿ. [ಅನಾಶೋಃ ಚಿತ್] ಉದರವ್ಯಾಧಿಯಿಂದ ತಿನ್ನಲಾಗದವನ [ಅಪಮಸ್ಯ ಚಿತ್] ಮತ್ತು ಮನೋರೋಗಕ್ಕೆ ತುತ್ತಾದವನ [ಅಂಧಸ್ಯ ಚಿತ್] ಕುರುಡನ [ಕೃಶಸ್ಯ ಚಿತ್] ಕೃಶನಾದವನ [ಅವಿತಾರಾ] ರಕ್ಷಕರಾಗಿರಿ. [ಯುವಾಂ ಇತ್] ನಿಮ್ಮಿಬ್ಬರನ್ನೇ [ರುತಸ್ಯ ಚಿತ್ ಭಿಷಜಾ] ವ್ಯಾಧಿಗ್ರಸ್ಥನ ಚಿಕಿತ್ಸಕರೆಂದು [ಆಹುಃ] ಹೇಳುತ್ತಾರೆ.
ಯುವಂ ಹ ಕೃಶಂ ಯುವಮಶ್ವಿನಾ ಶಯುಂ ಯುವಂ ವಿಧಂತಂ ವಿಧವಾಮುರುಷ್ಯಥಃ | 
ಯುವಂ ಸನಿಭ್ಯಃ ಸ್ತನಯಂತಮಶ್ವಿನಾsಪವ್ರಜಮೂರ್ಣುಥಃ ಸಪ್ತಾಸ್ಯಮ್ || (ಋಕ್.೧೦.೪೦.೮)
     [ಅಶ್ವಿನಾ ಅಶ್ವಿನಾ] ಆತ್ಮವಂತರಾದ ನರ-ನಾರಿಯರೇ, [ಹ] ನಿಜವಾಗಿ [ಯುವಮ್] ನೀವಿಬ್ಬರೂ, [ಕೃಶಂ] ಕ್ಷಯರೋಗಿಯನ್ನೂ, [ಯುವಂ] ನೀವಿಬ್ಬರೂ [ಶಯುಂ] ವ್ಯಾಧಿಗ್ರಸ್ಥನಾಗಿ ಹಾಸಿಗೆ ಹಿಡಿದವನನ್ನೂ [ಯುವಂ] ನೀವಿಬ್ಬರೂ [ವಿಧಂತಮ್] ಸಮಾಜಸೇವೆಯಲ್ಲಿ ದೀನ ದರಿದ್ರರನ್ನೂ ಉದ್ಧರಿಸಲು ನಿಂತವನನ್ನೂ, [ವಿಧವಾಮ್] ವಿಧವೆಯನ್ನೂ [ಉರುಷ್ಕಥಃ] ರಕ್ಷಿಸಿರಿ. [ಸನಿಭ್ಯಃ] ದಾತೃಗಳಿಗೆ [ಸ್ತನಯಂತಮ್] ಉದ್ಗಮದಂತಿರುವ [ಸಪ್ತಾಸ್ಯಮ್] ಪಂಚಜ್ಞಾನೇಂದ್ರಿಯಗಳು ಮತ್ತು ಮನೋಬುದ್ಧಿಗಳಿಂದ ಕೂಡಿದ್ದು [ಅಪವ್ರಜಮ್] ತಪ್ಪುದಾರಿ ಹಿಡಿದ ಇಂದ್ರಿಯಗಳನ್ನುಳ್ಳ ದುರ್ಬಲ ಮನಸ್ಕನನ್ನು [ಊರ್ಣುಥಃ] ಉದ್ಧರಿಸಿರಿ.
     ಪಾಠಕರು ಈ ಎರಡು ಮಂತ್ರಗಳ ಮೇಲೂ ಪೂರ್ಣ ಗಮನ ನೀಡಬೇಕು. ಬಲಿವೈಶ್ವದೇವ - ಎಂದರೆ, ಅಗ್ನಿಯಲ್ಲಿ ಸ್ವಲ್ಪ ಮಧುರಖಾದ್ಯಗಳನ್ನರ್ಪಿಸಿ, "ಆಯಿತು" ಎಂದುಕೊಳ್ಳುವುದಲ್ಲ. ಕುಲ-ಜಾತಿಗಳ ಪ್ರಶ್ನೆಯಲ್ಲ. ಸಮಾಜದಲ್ಲಿ ಶಾರೀರಿಕ-ಮಾನಸಿಕ ವ್ಯಾಧಿಗಳಿಗೆ ತುತ್ತಾದವರಿರುತ್ತಾರೆ. ದೌರ್ಬಲ್ಯದಿಂದ ಇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳಲಾರದೆ, ದುರ್ಮಾರ್ಗಕ್ಕಿಳಿದವರಿರುತ್ತಾರೆ. ವೈದಿಕ ಧರ್ಮ "ಪಾಪಿಗಳನ್ನು ದೂರಕ್ಕಟ್ಟು" ಎಂದು ಹೇಳುವ ಸಂಕುಚಿತ ಮನೋಭಾವ ಬೆಳೆಸುವ ಜೀವನಪಥವಲ್ಲ. ಪರಮ ಔದಾರ್ಯ ಆರ್ಯತತ್ತ್ವದ ಜೀವ ಜೀವಾಳ. "ಪಾಪವನ್ನು ದ್ವೇಷಿಸು! ಪಾಪಿಯನ್ನಲ್ಲ" ಎನ್ನುವುದು ವೇದೋಕ್ತ ಜೀವನಾದರ್ಶ. ಧೂರ್ತಿಃ ಪ್ರಣಜ್ ಮರ್ತ್ಯಸ್ಯ || (ಋಕ್.೧.೧೮.೩) - ಮಾನವನ ಧೂರ್ತತನ ನಾಶವಾಗಲಿ - ಎನ್ನುವುದೇ ವೇದಾದರ್ಶ. ಅಥರ್ವವೇದ ಹೇಳುತ್ತದೆ:-
ಸಂ ವೋ ಮನಾಂಸಿ ಸಂ ವ್ರತಾ ಸಮಾಕೂತೀರ್ನಮಾಮಸೀ | 
ಅಮೀ ಯೇ ವಿವ್ರತಾ ಸ್ಥನ ತಾನ್ವಃ ಸಂ ನಮಯಾಮಸಿ || (ಆಥರ್ವ.೬.೯೪.೧)
     [ವಃ ಮನಾಂಸಿ] ನಿಮ್ಮ ಮನಸ್ಸುಗಳು, [ಸಮ್] ಒಳಿತಾಗಿ, ಒಂದಾಗಿ ಇರಲಿ. [ವ್ರತಾ] ಸಂಕಲ್ಪಗಳೂ ಕೂಡ ಒಳಿತಾಗಿ, ಒಂದಾಗಿರಲಿ. [ನಮಾಮಸಿ] ನಾವು ವಿನೀತರಾಗಿ ನಡೆದುಕೊಳ್ಳುತ್ತೇವೆ. [ವಃ] ನಿಮ್ಮ ಮಧ್ಯೆ [ಯೇ ಅಮೀ] ಯಾವ ಈ ಜನರು [ವಿವ್ರತಾಃಸ್ಥನ] ವಿರುದ್ದ ಸಂಕಲ್ಪವುಳ್ಳವರಾಗಿರುತ್ತಾರೋ [ತಾನ್] ಅವರನ್ನು [ಸಮ್] ಒಳಿತಾದ ರೀತಿಯಲ್ಲಿ [ನಮಯಾಮಸಿ] ವಿನೀತರನ್ನಾಗಿ ಮಾಡುತ್ತೇವೆ. ಮಾತ್ರವಲ್ಲ, ಇದನ್ನೂ ಕೇಳಿರಿ:-
ತ್ರಾಯಂತಾಮಿಮಂ ದೇವಾಸ್ತ್ರಾಯಂತಾಂ ಮರುತಾಂ ಗಣಾಃ |
ತ್ರಾಯಂತಾಂ ವಿಶ್ವಾ ಭೂತಾನಿ ಯಥಾಯಮರಪಾ ಅಸತ್ || (ಅಥರ್ವ.೬.೯೪.೧)
     [ಯಥಾ ಅಯಂ ಅರಪಾಃ ಅಸತ್] ಈ ಪಾಪಿಯು ನಿಷ್ಪಾಪನಾಗುವಂತೆ [ದೇವಾಃ] ವಿದ್ವಜ್ಜನರು [ಇಮಂ ತ್ರಾಯಂತಾಮ್] ಇವನನ್ನು ರಕ್ಷಿಸಲಿ. [ಮರುತಾಂ ಗಣಾಃ] ಸಂಯಮಿಗಳು [ತ್ರಾಯಂತಾಮ್] ರಕ್ಷಿಸಲಿ. [ವಿಶ್ವಾ ಭೂತಾನಿ] ಸಮಸ್ತ ಪ್ರಾಣಿಗಳು, [ತ್ರಾಯಂತಾಮ್] ರಕ್ಷಿಸಲಿ.
     ಕ್ಷಯ-ಕುಷ್ಠ ಮೊದಲಾದವು ಶಾರೀರಿಕ ರೋಗಗಳಾದರೆ, ಉನ್ಮಾದ-ಅಪಸ್ಮಾರ ಮೊದಲಾದವು ಮಾನಸಿಕ ರೋಗಗಳಾದರೆ, ಪಾಪ ಆತ್ಮಿಕ ರೋಗ. ಈ ಬಗೆಯ ರೋಗಗಳಿಂದ ಗ್ರಸ್ತರಾದವರೂ ಗೃಹಸ್ಥ-ಗೃಹಿಣಿಯರ ಸಹಾನುಭೂತಿ, ಸೇವಾ-ಶುಶ್ರೂಷೆಗಳಿಗೆ ಪಾತ್ರರೇ ಸರಿ. ಬಲಿವೈಶ್ವದೇವಯಜ್ಞ ವಿಶ್ವದೇವನ ಮಕ್ಕಳೇ ಆದ ಪಶು-ಪಕ್ಷಿಗಳಿಗೂ, ವ್ಯಾಧಿಗ್ರಸ್ತ ಪಾಪಿಷ್ಠ ಮಾನವರಿಗೂ ಭಾಗವನ್ನೆತ್ತಿಡುವ ಈ ಶುಭಕರ್ಮ, ಮನೆಮನೆಯಲ್ಲಿಯೂ ಆಚರಿಸಲ್ಪಟ್ಟರೆ, ಅದೆಷ್ಟು ಸಂಘ-ಸಂಸ್ಥೆ-ಸಮಾಜಗಳನ್ನು ದೀನಹೀನರ ಉದ್ಧಾರಕ್ಕಾಗಿ ಕಟ್ಟಬಹುದೋ? 
    

ಶನಿವಾರ, ಮಾರ್ಚ್ 2, 2013

ಸೊಂಟದ ವಿಷಯ   ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊಂಟದ ಬಗ್ಗೆ ಮಾತಾಡ್ತಾ ಇದಾನೆ ಅಂತ ಅಂದುಕೊಳ್ಳಬೇಡಿ. ವಾನಪ್ರಸ್ಥಕ್ಕೆ ಹೋಗೋರು ಸೊಂಟದ ಬಗ್ಗೆ ಮಾತಾಡಬಾರದು ಅಂತ ಯಾರಾದರೂ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಮಾತಾಡಿದರೆ ಅಪರಾಧ ಅನ್ನುವ ಕಾನೂನು ಇನ್ನೂ ಬಂದಂತೆ ಕಾಣುತ್ತಿಲ್ಲ. ಅಷ್ಟಕ್ಕೂ ಸೊಂಟ ಸರಿಯಾಗಿದ್ದರೆ ಮಾತ್ರ ವಾನಪ್ರಸ್ಥಕ್ಕೆ ಹೋಗಬಹುದು. ಸೊಂಟ ಬಾಗಿ ಶರೀರ ಹಲವಾರು ಕಾಲೆಗಳ ನೆಲೆವೀಡಾಗಿದ್ದರೆ ಹೋಗಬೇಕಾಗಿರುವುದು ಆಸ್ಪತ್ರೆಗೆ ಅಷ್ಟೆ. ನೀವು  'ಸೊಂಟದ ವಿಸ್ಯ, ಬೇಡವೋ ಸಿಸ್ಯಾ' ಎಂಬ ಜನಪ್ರಿಯ ಹಾಡು ನೆನಪು ಮಾಡಿಕೊಂಡರೆ ಅದು ನನ್ನ ತಪ್ಪಲ್ಲ. ಹಿಂದೊಮ್ಮೆ 'ರಸಿಕರಾಗೋಣ' ಎಂಬ ಲೇಖನ ಬರೆದಾಗ ಕೆಲವರು ಹುಬ್ಬೇರಿಸಿದ್ದರು. ಶೀರ್ಷಿಕೆ ನೋಡಿ ಕುತೂಹಲದಿಂದ ಓದಿದವರು ಇವನಿಗೆ ಹುಚ್ಚು ಹಿಡಿದಿಲ್ಲ ಎಂದು ಸಮಾಧಾನ ಪಟ್ಟಿದ್ದರು, ಕೆಲವರಿಗೆ ನಿರಾಶೆಯೂ ಆಗಿತ್ತು. ಈಗ ಈ ವಯಸ್ಸಿನಲ್ಲಿ ಸೊಂಟದ ಬಗ್ಗೆ ಹೇಳುತ್ತಿರುವುದರಿಂದ ನನ್ನ ತಲೆ ಕೆಡುತ್ತಿದೆಯೆಂದು ಈಗಲೂ ಯಾರಿಗಾದರೂ ಅನ್ನಿಸಿದರೆ ಅದಕ್ಕೆ ನನ್ನ ಅಭ್ಯಂತರವಿಲ್ಲ. 
     ಸೊಂಟ ಅಂದಾಕ್ಷಣ ಸಿನೆಮಾ ತಾರೆಯರ, ಮಾಡೆಲ್ಲುಗಳ, ಸುಂದರ ತರುಣಿಯರ ಬಳುಕುವ ಸೊಂಟಗಳ ನೆನಪು ಸುಳಿದಾಡಿದರೆ ಅದು ನಿಮ್ಮ ಹಣೆಯಬರಹ. ಸುಂದರಿಯರ ಸ್ಪರ್ಧೆಯಲ್ಲಿ ಪ್ರಧಾನ ಪಾತ್ರ ವಹಿಸುವುದು ಸೊಂಟವೇ. ಯಾರ ಯಾರ ಸೊಂಟದ ಅಳತೆ ಎಷ್ಟೆಷ್ಟು ಅಂತ ಪಡ್ಡೆ ಹುಡುಗರು ನೋಡಿದ ತಕ್ಷಣ ಹೇಳಿಬಿಡುತ್ತಾರೆ. ಸೊಂಟದ ಅಳತೆ ಕಡಿಮೆಯಿರುವವರೆಗೆ ಮಾತ್ರ ನಾಯಕಿಯರುಗಳಿಗೆ ಬೇಡಿಕೆ. ಸ್ವಲ್ಪ ದಪ್ಪವಾಯಿತೋ ಅವರುಗಳು ಅಕ್ಕ, ಅಮ್ಮರ ಪಾತ್ರಗಳಿಗೆ ವರ್ಗಾವಣೆಯಾಗಿಬಿಡುತ್ತಾರೆ. ಪುರಾತನ ಕಾಲದಿಂದಲೂ ಕವಿಗಳು ತರುಣಿಯರ ಸೊಂಟವನ್ನು ಬಳುಕುವ ಬಳ್ಳಿಗೆ ಹೋಲಿಸಿ ಪ್ರಿಯತಮನ ತೋಳಿನಾಸರೆ ಅವರುಗಳಿಗೆ ಅವಶ್ಯವೆಂದು ಸಾರಿ ಸಾರಿ ಬರೆಯುತ್ತಾ ಬಂದಿದ್ದಾರೆ. ಸೊಂಟದ ಬಗ್ಗೆ ತಲೆ ಕೆಡಿಸಿಕೊಂಡ ಕೆಲವರು ಸೊಂಟ ಮುರಿಸಿಕೊಂಡದ್ದೂ ಇದೆ. ಇರಲಿ ಬಿಡಿ, ನಾನು ಸೊಂಟದ ಈ ರೀತಿಯ ಕಲ್ಪನೆಗೆ ಹೊರತಾಗಿ ಬರೆಯುವೆ. ಸೊಂಟಾಭಿಮಾನಿಗಳ ವಿರೋಧವನ್ನು ನಾನು ಕಟ್ಟಿಕೊಳ್ಳಲಾರೆ, ನನ್ನ ಸೊಂಟವೂ ಗಟ್ಟಿಯಾಗಿ ಉಳಿಯಬೇಕಲ್ಲಾ, ಆದ್ದರಿಂದ ಮೊದಲೇ ಹೇಳಿಬಿಡುವೆ, ಸೊಂಟ ಪ್ರಧಾನವಾದ ಅಂಗ ಎಂಬುದನ್ನು ಪ್ರತಿಪಾದಿಸುವುದೇ ಈ ಬರಹದ ಉದ್ದೇಶ. 
     ಸೊಂಟದ ಸುತ್ತಳತೆ ಶರೀರದ ಎತ್ತರದ ಅರ್ಧಕ್ಕಿಂತ ಹೆಚ್ಚಿಗೆ ಇರಬಾರದೆಂದು ಯಾರೋ ಪುಣ್ಯಾತ್ಮ ಹೇಳಿದ್ದಾನೆ. ಇದು ಸರಿಯೋ, ಅಲ್ಲವೋ ನನಗಂತೂ ಗೊತ್ತಿಲ್ಲ. ಗೊತ್ತಿರುವವರು ನನಗೂ ತಿಳಿಸಿ. ಈ ಸೊಂಟ ಇದೆಯಲ್ಲಾ, ಅದೇ ಆಧಾರ ಮನುಷ್ಯನಿಗೆ. ಸೊಂಟ ಭದ್ರವಿಲ್ಲದಿದ್ದರೆ ಕೂರುವುದು, ಓಡಾಡುವುದಾದರೂ ಹೇಗೆ? ಮನುಷ್ಯನಿಗೆ ಆಧಾರವಾಗಿರುವ ಪ್ರಧಾನ ಬೆನ್ನು ಮೂಳೆಯ ಉಗಮ ಸೊಂಟದ ಕೆಳಭಾಗದಿಂದಲೇ. ಸೊಂಟ ಬಾಗಿಸಿದರೋ, ಬೆನ್ನೂ ಬಾಗುತ್ತದೆ. ಎದೆ ಎತ್ತಿ, ಎದೆ ಉಬ್ಬಿಸಿ ನಡೆ ಎಂದು ಹೇಳುತ್ತಾರೆ. ಆದರೆ ಎದೆ ಎತ್ತಬೇಕಾದರೆ, ಎದೆ ಉಬ್ಬಿಸಿ ನಡೆಯಬೇಕೆಂದರೆ ಸೊಂಟ ನೆಟ್ಟಗಿರಬೇಕಲ್ಲವೇ? ಸೊಂಟ ಸೊಟ್ಟಗಿದ್ದರೆ ಎದೆ ಉಬ್ಬುವುದಾದರೂ ಹೇಗೆ? ಕೆಲಸ ಸೊಂಟದ್ದು, ಹೆಸರು ಮಾತ್ರ ಎದೆಗೆ! ಯಾರ ಸೊಂಟ ನೆಟ್ಟಗಿದೆಯೋ ಅವರು ಆರೋಗ್ಯವಾಗಿರುತ್ತಾರೆ. ಸೊಟ್ಟ ಸೊಂಟದವನ ಆರೋಗ್ಯವೂ ಸೊಟ್ಟವೇ ಆಗಿರುತ್ತದಂತೆ! ನೆಚ್ಚಿನ ಸಹಾಯಕ ದೂರವಾದರೆ ಕೈ ಮುರಿದಂತೆ ಅನ್ನುತ್ತಾರೆ. ಸಾಲ ಕೊಟ್ಟವರು ಕೇಳಲು ಬಂದರೆ ಕಿಬ್ಬದಿಯ ಕೀಲು ಮುರಿದಂತೆ ಅಂತ ಸರ್ವಜ್ಞನೇ ಹೇಳಿದ್ದಾನೆ. ಆದರೆ ಆಸರೆಯಾಗಿರುವವರು ದೂರವಾದರೆ ಸೊಂಟವೇ ಮುರಿದಂತೆ ಎಂದು ಹೇಳುತ್ತಾರೆ. ಆಸರೆ, ಆಧಾರಕ್ಕೆ ಪರ್ಯಾಯವೇ ಸೊಂಟ! ಯಾರಿಗಾದರೂ ಹಿರಿಯರಿಗೆ ಗೌರವ ಸಲ್ಲಿಸಬೇಕೆಂದರೆ ನಡು ಬಗ್ಗಿಸಿ ನಮಸ್ಕರಿಸುತ್ತಾರೆ. ಜಪಾನ್, ಚೀನಾಗಳಲ್ಲೂ ಸೊಂಟ ಬಗ್ಗಿಸಿ ಸಲಾಮು ಮಾಡುವುದು ಗೌರವದ ಸಂಕೇತ. ದೈನ್ಯ ಪ್ರದರ್ಶನಕ್ಕೂ, ಇಷ್ಟವಿರಲಿ, ಇಲ್ಲದಿರಲಿ ಸೊಂಟ ಬಗ್ಗಿಸಿ ಗೌರವ ಸಲ್ಲಿಸಬೇಕು. ಅಂತಹ ಗೌರವ ಕೊಡುವುದಕ್ಕೆ ಡೊಗ್ಗು ಸಲಾಮು ಎನ್ನುತ್ತಾರೆ. ಜನರಿಗೆ ನಮಸ್ಕಾರ ಮಾಡಿ ಅಧಿಕಾರಕ್ಕೇರಿದವರು ನಂತರ ಜನರಿಂದ ನಮಸ್ಕಾರ ಪಡೆದುಕೊಳ್ಳುತ್ತಾರೆ. ಧಿಮಾಕು ತೋರಿಸಬೇಕೆಂದವರು ಸೊಂಟದ ಮೇಲೆ ಕೈಯಿಟ್ಟು ಕುಹಕ ನೋಟ ಬೀರುತ್ತಾರೆ. ಮರುಳು ಮಾಡುವ ಲಲನಾಮಣಿಯರೂ ಸೊಂಟದ ಮೇಲೆ ಕೈಯಿಟ್ಟು ಓರೆನೋಟ ಬೀರುತ್ತಾರೆ. ಎಲ್ಲದಕ್ಕೂ ಸೊಂಟ ಬೇಕು! ಮಾನವಬಾಂಬುಗಳಾಗಿ ಹಲವರ ಪ್ರಾಣ ತೆಗೆಯುವ ಉಗ್ರಗಾಮಿಗಳು ಬಾಂಬು ಇರುವ ಬೆಲ್ಟು ಕಟ್ಟಿಕೊಳ್ಳುವುದಕ್ಕೂ ಸೊಂಟ ಬೇಕು. ಮಾನ ಮುಚ್ಚುವ ಬಟ್ಟೆಗೆ ಆಧಾರಕ್ಕೂ ಈ ಸೊಂಟವೇ ಬೇಕು. ಆಡುವ ಮಾತುಗಳಿಗೂ ಸೊಂಟಕ್ಕೂ ಏನೋ ಸಂಬಂಧವಿರಬೇಕು. ಸೊಂಟದ ಕೆಳಗಿನ ಮಾತು ಅಂದರೆ ಆಡಬಾರದ ಮಾತು, ಸೊಂಟದ ಮೇಲಿನ ಮಾತು ಅಂದರೆ ಹೃದಯದಿಂದ ಬಂದ ಮಾತು ಎನ್ನುವುದು ವಾಡಿಕೆ. ಆದರೆ ಸೊಂಟ ಮಾತ್ರ ಎರಡು ರೀತಿಯ ಮಾತುಗಳಿಗೂ ಮಧ್ಯದಲ್ಲಿದ್ದು ನಿಷ್ಪಕ್ಷಪಾತವಾಗಿರುತ್ತದೆ.
     'ಕೊಬ್ಬು ಜಾಸ್ತಿ ಮಗನಿಗೆ, ನಾನು ಇಳಿಸುತ್ತೇನೆ' ಎಂಬ ರೀತಿಯ ಮಾತುಗಳು ಕಿವಿಗೆ ಬಿದ್ದಿರಬಹುದು. ಈ ಕೊಬ್ಬು ಅನ್ನುವುದು ಎರಡು ತರಹ ಇರುತ್ತದೆ, ಒಂದು ಮಾನಸಿಕ, ಇನ್ನೊಂದು ಶಾರೀರಿಕ. ಮಾನಸಿಕ ಕೊಬ್ಬಿನ ಬಗ್ಗೆ ಮಾತನಾಡುವುದು ಇಲ್ಲಿ ಅಪ್ರಸ್ತುತ. ಶಾರೀರಿಕ ಕೊಬ್ಬು ಇದೆಯಲ್ಲಾ ಅದು ಮೊದಲು ಆಕ್ರಮಿಸುವುದು ಸೊಂಟವನ್ನೇ, ಚೀನಾ ಟಿಬೆಟ್ಟನ್ನು ನುಂಗಿದಂತೆ. ಅಂತಹವರ ಸೊಂಟ ಯಾವುದು ಹೊಟ್ಟೆ ಯಾವುದು ಗೊತ್ತಾಗುವುದಿಲ್ಲ. ಕೆಲವರ ಸೊಂಟ-ಕಮ್-ಹೊಟ್ಟೆಯ ಸುತ್ತಳತೆ ಶರೀರದ ಎತ್ತರಕ್ಕಿಂತ ಜಾಸ್ತಿಯಿರುತ್ತದೆ. ಸಾಮಾನ್ಯವಾಗಿ ಅವರಿಗೆ ಸಿಟ್ಟು ಬರುವುದು ಕಡಿಮೆ. ಸೊಂಟ ಮಾಯವಾಗುವುದರಿಂದ ಸಿಟ್ಟೂ ಮಾಯವಾಗುತ್ತದೆಯೇ ಎಂಬುದು ಸಂಶೋಧನೆ ಮಾಡಬೇಕಾದ ವಿಷಯ. ವೈಜ್ಞಾನಿಕ ಕಾರಣ ಏನಿರಬಹುದು ಎಂಬ ಕುತೂಹಲ ಯಾರಿಗಾದರೂ ಇದ್ದರೆ ನನ್ನನ್ನು ಕೇಳಬೇಡಿ, ನನಗೆ ಗೊತ್ತಿಲ್ಲ. ಸೊಂಟದ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ನನ್ನ ಸೊಂಟದ ಬಗ್ಗೆಯೂ ಸಹ ಕಾಳಜಿ ವಹಿಸಬೇಕಲ್ಲಾ, ಅದಕ್ಕಾಗಿ ಮುಗಮ್ಮಾಗಿ ಸೂಕ್ಷ್ಮವಾಗಿ ಪ್ರಸ್ತಾಪಿಸಿರುವೆ. ನಾನು ಹೇಳದೆ ಬಿಟ್ಟಿರುವ ಸಂಗತಿಗಳನ್ನು ನೀವೇ ಕಲ್ಪಿಸಿಕೊಳ್ಳಿ.
     ಮನುಷ್ಯನ ಮಧ್ಯ  ವಯಸ್ಸು ಎಂದರೆ ಸಣ್ಣ ಸೊಂಟ ಮತ್ತು ವಿಶಾಲ ಮನಸ್ಸುಗಳು ಸ್ಥಳ ಬದಲಾಯಿಸಲು ಪ್ರಾರಂಭಿಸುವ ಸಮಯ; ಅಂದರೆ ಸೊಂಟ ವಿಶಾಲವಾಗುತ್ತಾ ಹೋಗುತ್ತದೆ, ಮನಸ್ಸು ಸಣ್ಣದಾಗುತ್ತಾ ಹೋಗುತ್ತದೆ. ಇದನ್ನು ಎಲ್ಲರಿಗೂ ಅನ್ವಯಿಸಿ ಬರೆಯುತ್ತಿಲ್ಲ. ಹೆಚ್ಚಿನವರಿಗೆ ಅನ್ವಯಿಸಬಹುದು. ಪ್ರತಿಯೊಂದಕ್ಕೂ ಅಪವಾದವಿರುತ್ತದೆ.
     ಏನಾದರೂ ಸಾಧಿಸಬೇಕು ಎನ್ನುವುದಕ್ಕೆ ಸೊಂಟ ಭದ್ರವಿರಬೇಕು ಎನ್ನುತ್ತಾರೆ. ಶ್ರಮದ ಕೆಲಸ ಮಾಡುವವರು ಸೊಂಟಕ್ಕೆ ಭದ್ರವಾಗಿ ಟವೆಲನ್ನೋ, ವಸ್ತ್ರವನ್ನೋ ಕಟ್ಟಿರುತ್ತಾರೆ. ಅದರಿಂದ ಸೊಂಟಕ್ಕೆ ಆಧಾರ, ಬಲ ಬರುತ್ತದೆ. ಹಿಡಿದ ಕೆಲಸ ಬಿಡದೆ ಸಾಧಿಸುವವರನ್ನು 'ಟೊಂಕ ಕಟ್ಟಿ' ನಿಂತವರು ಎನ್ನುತ್ತಾರೆ. ಈ ಟೊಂಕ ಎಂದರೆ ಬೇರೆ ಅಲ್ಲ, ಸೊಂಟವೇ. ಸ್ವಾಮಿ ವಿವೇಕಾನಂದರ ಜನಪ್ರಿಯ ಭಂಗಿಯ ಫೋಟೋ ಗಮನಿಸಿದ್ದೀರಾ? ಅವರು ಸೊಂಟಕ್ಕೆ ವಸ್ತ್ರ ಬಿಗಿದುಕೊಂಡು ಕೈಕಟ್ಟಿ ಎದೆಯುಬ್ಬಿಸಿ ನೋಡುತ್ತಿರುವ ನೋಟ ಎಂತಹವರಲ್ಲೂ ಅವರಲ್ಲಿ ಗೌರವ ಉಕ್ಕಿಸುತ್ತದೆ. ನಾವು ಏನೇನೋ ಮಾಡಬೇಕೆಂದು ಅಂದುಕೊಂಡಿರುತ್ತೇವೆ. ಅಂದುಕೊಂಡದ್ದನ್ನು ಮಾಡಲಾಗದ್ದಕ್ಕೆ ಮುಖ್ಯ ಕಾರಣ ಟೊಂಕ ಕಟ್ಟಿ ನಿಲ್ಲದಿರುವುದು! ಇನ್ನು ಮುಂದಾದರೂ ನಮ್ಮ ವೈಫಲ್ಯಗಳಿಗೆ ನೆಪಗಳನ್ನು ಹೇಳದಿರೋಣ, ಟೊಂಕ ಕಟ್ಟಿ ನಿಂತು ಸಾಧಿಸೋಣ. ಏನಂತೀರಿ?
-ಕ.ವೆಂ.ನಾಗರಾಜ್.