ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊಂಟದ ಬಗ್ಗೆ ಮಾತಾಡ್ತಾ ಇದಾನೆ ಅಂತ ಅಂದುಕೊಳ್ಳಬೇಡಿ. ವಾನಪ್ರಸ್ಥಕ್ಕೆ ಹೋಗೋರು ಸೊಂಟದ ಬಗ್ಗೆ ಮಾತಾಡಬಾರದು ಅಂತ ಯಾರಾದರೂ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಮಾತಾಡಿದರೆ ಅಪರಾಧ ಅನ್ನುವ ಕಾನೂನು ಇನ್ನೂ ಬಂದಂತೆ ಕಾಣುತ್ತಿಲ್ಲ. ಅಷ್ಟಕ್ಕೂ ಸೊಂಟ ಸರಿಯಾಗಿದ್ದರೆ ಮಾತ್ರ ವಾನಪ್ರಸ್ಥಕ್ಕೆ ಹೋಗಬಹುದು. ಸೊಂಟ ಬಾಗಿ ಶರೀರ ಹಲವಾರು ಕಾಲೆಗಳ ನೆಲೆವೀಡಾಗಿದ್ದರೆ ಹೋಗಬೇಕಾಗಿರುವುದು ಆಸ್ಪತ್ರೆಗೆ ಅಷ್ಟೆ. ನೀವು 'ಸೊಂಟದ ವಿಸ್ಯ, ಬೇಡವೋ ಸಿಸ್ಯಾ' ಎಂಬ ಜನಪ್ರಿಯ ಹಾಡು ನೆನಪು ಮಾಡಿಕೊಂಡರೆ ಅದು ನನ್ನ ತಪ್ಪಲ್ಲ. ಹಿಂದೊಮ್ಮೆ 'ರಸಿಕರಾಗೋಣ' ಎಂಬ ಲೇಖನ ಬರೆದಾಗ ಕೆಲವರು ಹುಬ್ಬೇರಿಸಿದ್ದರು. ಶೀರ್ಷಿಕೆ ನೋಡಿ ಕುತೂಹಲದಿಂದ ಓದಿದವರು ಇವನಿಗೆ ಹುಚ್ಚು ಹಿಡಿದಿಲ್ಲ ಎಂದು ಸಮಾಧಾನ ಪಟ್ಟಿದ್ದರು, ಕೆಲವರಿಗೆ ನಿರಾಶೆಯೂ ಆಗಿತ್ತು. ಈಗ ಈ ವಯಸ್ಸಿನಲ್ಲಿ ಸೊಂಟದ ಬಗ್ಗೆ ಹೇಳುತ್ತಿರುವುದರಿಂದ ನನ್ನ ತಲೆ ಕೆಡುತ್ತಿದೆಯೆಂದು ಈಗಲೂ ಯಾರಿಗಾದರೂ ಅನ್ನಿಸಿದರೆ ಅದಕ್ಕೆ ನನ್ನ ಅಭ್ಯಂತರವಿಲ್ಲ.
ಸೊಂಟ ಅಂದಾಕ್ಷಣ ಸಿನೆಮಾ ತಾರೆಯರ, ಮಾಡೆಲ್ಲುಗಳ, ಸುಂದರ ತರುಣಿಯರ ಬಳುಕುವ ಸೊಂಟಗಳ ನೆನಪು ಸುಳಿದಾಡಿದರೆ ಅದು ನಿಮ್ಮ ಹಣೆಯಬರಹ. ಸುಂದರಿಯರ ಸ್ಪರ್ಧೆಯಲ್ಲಿ ಪ್ರಧಾನ ಪಾತ್ರ ವಹಿಸುವುದು ಸೊಂಟವೇ. ಯಾರ ಯಾರ ಸೊಂಟದ ಅಳತೆ ಎಷ್ಟೆಷ್ಟು ಅಂತ ಪಡ್ಡೆ ಹುಡುಗರು ನೋಡಿದ ತಕ್ಷಣ ಹೇಳಿಬಿಡುತ್ತಾರೆ. ಸೊಂಟದ ಅಳತೆ ಕಡಿಮೆಯಿರುವವರೆಗೆ ಮಾತ್ರ ನಾಯಕಿಯರುಗಳಿಗೆ ಬೇಡಿಕೆ. ಸ್ವಲ್ಪ ದಪ್ಪವಾಯಿತೋ ಅವರುಗಳು ಅಕ್ಕ, ಅಮ್ಮರ ಪಾತ್ರಗಳಿಗೆ ವರ್ಗಾವಣೆಯಾಗಿಬಿಡುತ್ತಾರೆ. ಪುರಾತನ ಕಾಲದಿಂದಲೂ ಕವಿಗಳು ತರುಣಿಯರ ಸೊಂಟವನ್ನು ಬಳುಕುವ ಬಳ್ಳಿಗೆ ಹೋಲಿಸಿ ಪ್ರಿಯತಮನ ತೋಳಿನಾಸರೆ ಅವರುಗಳಿಗೆ ಅವಶ್ಯವೆಂದು ಸಾರಿ ಸಾರಿ ಬರೆಯುತ್ತಾ ಬಂದಿದ್ದಾರೆ. ಸೊಂಟದ ಬಗ್ಗೆ ತಲೆ ಕೆಡಿಸಿಕೊಂಡ ಕೆಲವರು ಸೊಂಟ ಮುರಿಸಿಕೊಂಡದ್ದೂ ಇದೆ. ಇರಲಿ ಬಿಡಿ, ನಾನು ಸೊಂಟದ ಈ ರೀತಿಯ ಕಲ್ಪನೆಗೆ ಹೊರತಾಗಿ ಬರೆಯುವೆ. ಸೊಂಟಾಭಿಮಾನಿಗಳ ವಿರೋಧವನ್ನು ನಾನು ಕಟ್ಟಿಕೊಳ್ಳಲಾರೆ, ನನ್ನ ಸೊಂಟವೂ ಗಟ್ಟಿಯಾಗಿ ಉಳಿಯಬೇಕಲ್ಲಾ, ಆದ್ದರಿಂದ ಮೊದಲೇ ಹೇಳಿಬಿಡುವೆ, ಸೊಂಟ ಪ್ರಧಾನವಾದ ಅಂಗ ಎಂಬುದನ್ನು ಪ್ರತಿಪಾದಿಸುವುದೇ ಈ ಬರಹದ ಉದ್ದೇಶ.
ಸೊಂಟದ ಸುತ್ತಳತೆ ಶರೀರದ ಎತ್ತರದ ಅರ್ಧಕ್ಕಿಂತ ಹೆಚ್ಚಿಗೆ ಇರಬಾರದೆಂದು ಯಾರೋ ಪುಣ್ಯಾತ್ಮ ಹೇಳಿದ್ದಾನೆ. ಇದು ಸರಿಯೋ, ಅಲ್ಲವೋ ನನಗಂತೂ ಗೊತ್ತಿಲ್ಲ. ಗೊತ್ತಿರುವವರು ನನಗೂ ತಿಳಿಸಿ. ಈ ಸೊಂಟ ಇದೆಯಲ್ಲಾ, ಅದೇ ಆಧಾರ ಮನುಷ್ಯನಿಗೆ. ಸೊಂಟ ಭದ್ರವಿಲ್ಲದಿದ್ದರೆ ಕೂರುವುದು, ಓಡಾಡುವುದಾದರೂ ಹೇಗೆ? ಮನುಷ್ಯನಿಗೆ ಆಧಾರವಾಗಿರುವ ಪ್ರಧಾನ ಬೆನ್ನು ಮೂಳೆಯ ಉಗಮ ಸೊಂಟದ ಕೆಳಭಾಗದಿಂದಲೇ. ಸೊಂಟ ಬಾಗಿಸಿದರೋ, ಬೆನ್ನೂ ಬಾಗುತ್ತದೆ. ಎದೆ ಎತ್ತಿ, ಎದೆ ಉಬ್ಬಿಸಿ ನಡೆ ಎಂದು ಹೇಳುತ್ತಾರೆ. ಆದರೆ ಎದೆ ಎತ್ತಬೇಕಾದರೆ, ಎದೆ ಉಬ್ಬಿಸಿ ನಡೆಯಬೇಕೆಂದರೆ ಸೊಂಟ ನೆಟ್ಟಗಿರಬೇಕಲ್ಲವೇ? ಸೊಂಟ ಸೊಟ್ಟಗಿದ್ದರೆ ಎದೆ ಉಬ್ಬುವುದಾದರೂ ಹೇಗೆ? ಕೆಲಸ ಸೊಂಟದ್ದು, ಹೆಸರು ಮಾತ್ರ ಎದೆಗೆ! ಯಾರ ಸೊಂಟ ನೆಟ್ಟಗಿದೆಯೋ ಅವರು ಆರೋಗ್ಯವಾಗಿರುತ್ತಾರೆ. ಸೊಟ್ಟ ಸೊಂಟದವನ ಆರೋಗ್ಯವೂ ಸೊಟ್ಟವೇ ಆಗಿರುತ್ತದಂತೆ! ನೆಚ್ಚಿನ ಸಹಾಯಕ ದೂರವಾದರೆ ಕೈ ಮುರಿದಂತೆ ಅನ್ನುತ್ತಾರೆ. ಸಾಲ ಕೊಟ್ಟವರು ಕೇಳಲು ಬಂದರೆ ಕಿಬ್ಬದಿಯ ಕೀಲು ಮುರಿದಂತೆ ಅಂತ ಸರ್ವಜ್ಞನೇ ಹೇಳಿದ್ದಾನೆ. ಆದರೆ ಆಸರೆಯಾಗಿರುವವರು ದೂರವಾದರೆ ಸೊಂಟವೇ ಮುರಿದಂತೆ ಎಂದು ಹೇಳುತ್ತಾರೆ. ಆಸರೆ, ಆಧಾರಕ್ಕೆ ಪರ್ಯಾಯವೇ ಸೊಂಟ! ಯಾರಿಗಾದರೂ ಹಿರಿಯರಿಗೆ ಗೌರವ ಸಲ್ಲಿಸಬೇಕೆಂದರೆ ನಡು ಬಗ್ಗಿಸಿ ನಮಸ್ಕರಿಸುತ್ತಾರೆ. ಜಪಾನ್, ಚೀನಾಗಳಲ್ಲೂ ಸೊಂಟ ಬಗ್ಗಿಸಿ ಸಲಾಮು ಮಾಡುವುದು ಗೌರವದ ಸಂಕೇತ. ದೈನ್ಯ ಪ್ರದರ್ಶನಕ್ಕೂ, ಇಷ್ಟವಿರಲಿ, ಇಲ್ಲದಿರಲಿ ಸೊಂಟ ಬಗ್ಗಿಸಿ ಗೌರವ ಸಲ್ಲಿಸಬೇಕು. ಅಂತಹ ಗೌರವ ಕೊಡುವುದಕ್ಕೆ ಡೊಗ್ಗು ಸಲಾಮು ಎನ್ನುತ್ತಾರೆ. ಜನರಿಗೆ ನಮಸ್ಕಾರ ಮಾಡಿ ಅಧಿಕಾರಕ್ಕೇರಿದವರು ನಂತರ ಜನರಿಂದ ನಮಸ್ಕಾರ ಪಡೆದುಕೊಳ್ಳುತ್ತಾರೆ. ಧಿಮಾಕು ತೋರಿಸಬೇಕೆಂದವರು ಸೊಂಟದ ಮೇಲೆ ಕೈಯಿಟ್ಟು ಕುಹಕ ನೋಟ ಬೀರುತ್ತಾರೆ. ಮರುಳು ಮಾಡುವ ಲಲನಾಮಣಿಯರೂ ಸೊಂಟದ ಮೇಲೆ ಕೈಯಿಟ್ಟು ಓರೆನೋಟ ಬೀರುತ್ತಾರೆ. ಎಲ್ಲದಕ್ಕೂ ಸೊಂಟ ಬೇಕು! ಮಾನವಬಾಂಬುಗಳಾಗಿ ಹಲವರ ಪ್ರಾಣ ತೆಗೆಯುವ ಉಗ್ರಗಾಮಿಗಳು ಬಾಂಬು ಇರುವ ಬೆಲ್ಟು ಕಟ್ಟಿಕೊಳ್ಳುವುದಕ್ಕೂ ಸೊಂಟ ಬೇಕು. ಮಾನ ಮುಚ್ಚುವ ಬಟ್ಟೆಗೆ ಆಧಾರಕ್ಕೂ ಈ ಸೊಂಟವೇ ಬೇಕು. ಆಡುವ ಮಾತುಗಳಿಗೂ ಸೊಂಟಕ್ಕೂ ಏನೋ ಸಂಬಂಧವಿರಬೇಕು. ಸೊಂಟದ ಕೆಳಗಿನ ಮಾತು ಅಂದರೆ ಆಡಬಾರದ ಮಾತು, ಸೊಂಟದ ಮೇಲಿನ ಮಾತು ಅಂದರೆ ಹೃದಯದಿಂದ ಬಂದ ಮಾತು ಎನ್ನುವುದು ವಾಡಿಕೆ. ಆದರೆ ಸೊಂಟ ಮಾತ್ರ ಎರಡು ರೀತಿಯ ಮಾತುಗಳಿಗೂ ಮಧ್ಯದಲ್ಲಿದ್ದು ನಿಷ್ಪಕ್ಷಪಾತವಾಗಿರುತ್ತದೆ.
'ಕೊಬ್ಬು ಜಾಸ್ತಿ ಮಗನಿಗೆ, ನಾನು ಇಳಿಸುತ್ತೇನೆ' ಎಂಬ ರೀತಿಯ ಮಾತುಗಳು ಕಿವಿಗೆ ಬಿದ್ದಿರಬಹುದು. ಈ ಕೊಬ್ಬು ಅನ್ನುವುದು ಎರಡು ತರಹ ಇರುತ್ತದೆ, ಒಂದು ಮಾನಸಿಕ, ಇನ್ನೊಂದು ಶಾರೀರಿಕ. ಮಾನಸಿಕ ಕೊಬ್ಬಿನ ಬಗ್ಗೆ ಮಾತನಾಡುವುದು ಇಲ್ಲಿ ಅಪ್ರಸ್ತುತ. ಶಾರೀರಿಕ ಕೊಬ್ಬು ಇದೆಯಲ್ಲಾ ಅದು ಮೊದಲು ಆಕ್ರಮಿಸುವುದು ಸೊಂಟವನ್ನೇ, ಚೀನಾ ಟಿಬೆಟ್ಟನ್ನು ನುಂಗಿದಂತೆ. ಅಂತಹವರ ಸೊಂಟ ಯಾವುದು ಹೊಟ್ಟೆ ಯಾವುದು ಗೊತ್ತಾಗುವುದಿಲ್ಲ. ಕೆಲವರ ಸೊಂಟ-ಕಮ್-ಹೊಟ್ಟೆಯ ಸುತ್ತಳತೆ ಶರೀರದ ಎತ್ತರಕ್ಕಿಂತ ಜಾಸ್ತಿಯಿರುತ್ತದೆ. ಸಾಮಾನ್ಯವಾಗಿ ಅವರಿಗೆ ಸಿಟ್ಟು ಬರುವುದು ಕಡಿಮೆ. ಸೊಂಟ ಮಾಯವಾಗುವುದರಿಂದ ಸಿಟ್ಟೂ ಮಾಯವಾಗುತ್ತದೆಯೇ ಎಂಬುದು ಸಂಶೋಧನೆ ಮಾಡಬೇಕಾದ ವಿಷಯ. ವೈಜ್ಞಾನಿಕ ಕಾರಣ ಏನಿರಬಹುದು ಎಂಬ ಕುತೂಹಲ ಯಾರಿಗಾದರೂ ಇದ್ದರೆ ನನ್ನನ್ನು ಕೇಳಬೇಡಿ, ನನಗೆ ಗೊತ್ತಿಲ್ಲ. ಸೊಂಟದ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ನನ್ನ ಸೊಂಟದ ಬಗ್ಗೆಯೂ ಸಹ ಕಾಳಜಿ ವಹಿಸಬೇಕಲ್ಲಾ, ಅದಕ್ಕಾಗಿ ಮುಗಮ್ಮಾಗಿ ಸೂಕ್ಷ್ಮವಾಗಿ ಪ್ರಸ್ತಾಪಿಸಿರುವೆ. ನಾನು ಹೇಳದೆ ಬಿಟ್ಟಿರುವ ಸಂಗತಿಗಳನ್ನು ನೀವೇ ಕಲ್ಪಿಸಿಕೊಳ್ಳಿ.
ಮನುಷ್ಯನ ಮಧ್ಯ ವಯಸ್ಸು ಎಂದರೆ ಸಣ್ಣ ಸೊಂಟ ಮತ್ತು ವಿಶಾಲ ಮನಸ್ಸುಗಳು ಸ್ಥಳ ಬದಲಾಯಿಸಲು ಪ್ರಾರಂಭಿಸುವ ಸಮಯ; ಅಂದರೆ ಸೊಂಟ ವಿಶಾಲವಾಗುತ್ತಾ ಹೋಗುತ್ತದೆ, ಮನಸ್ಸು ಸಣ್ಣದಾಗುತ್ತಾ ಹೋಗುತ್ತದೆ. ಇದನ್ನು ಎಲ್ಲರಿಗೂ ಅನ್ವಯಿಸಿ ಬರೆಯುತ್ತಿಲ್ಲ. ಹೆಚ್ಚಿನವರಿಗೆ ಅನ್ವಯಿಸಬಹುದು. ಪ್ರತಿಯೊಂದಕ್ಕೂ ಅಪವಾದವಿರುತ್ತದೆ.
ಏನಾದರೂ ಸಾಧಿಸಬೇಕು ಎನ್ನುವುದಕ್ಕೆ ಸೊಂಟ ಭದ್ರವಿರಬೇಕು ಎನ್ನುತ್ತಾರೆ. ಶ್ರಮದ ಕೆಲಸ ಮಾಡುವವರು ಸೊಂಟಕ್ಕೆ ಭದ್ರವಾಗಿ ಟವೆಲನ್ನೋ, ವಸ್ತ್ರವನ್ನೋ ಕಟ್ಟಿರುತ್ತಾರೆ. ಅದರಿಂದ ಸೊಂಟಕ್ಕೆ ಆಧಾರ, ಬಲ ಬರುತ್ತದೆ. ಹಿಡಿದ ಕೆಲಸ ಬಿಡದೆ ಸಾಧಿಸುವವರನ್ನು 'ಟೊಂಕ ಕಟ್ಟಿ' ನಿಂತವರು ಎನ್ನುತ್ತಾರೆ. ಈ ಟೊಂಕ ಎಂದರೆ ಬೇರೆ ಅಲ್ಲ, ಸೊಂಟವೇ. ಸ್ವಾಮಿ ವಿವೇಕಾನಂದರ ಜನಪ್ರಿಯ ಭಂಗಿಯ ಫೋಟೋ ಗಮನಿಸಿದ್ದೀರಾ? ಅವರು ಸೊಂಟಕ್ಕೆ ವಸ್ತ್ರ ಬಿಗಿದುಕೊಂಡು ಕೈಕಟ್ಟಿ ಎದೆಯುಬ್ಬಿಸಿ ನೋಡುತ್ತಿರುವ ನೋಟ ಎಂತಹವರಲ್ಲೂ ಅವರಲ್ಲಿ ಗೌರವ ಉಕ್ಕಿಸುತ್ತದೆ. ನಾವು ಏನೇನೋ ಮಾಡಬೇಕೆಂದು ಅಂದುಕೊಂಡಿರುತ್ತೇವೆ. ಅಂದುಕೊಂಡದ್ದನ್ನು ಮಾಡಲಾಗದ್ದಕ್ಕೆ ಮುಖ್ಯ ಕಾರಣ ಟೊಂಕ ಕಟ್ಟಿ ನಿಲ್ಲದಿರುವುದು! ಇನ್ನು ಮುಂದಾದರೂ ನಮ್ಮ ವೈಫಲ್ಯಗಳಿಗೆ ನೆಪಗಳನ್ನು ಹೇಳದಿರೋಣ, ಟೊಂಕ ಕಟ್ಟಿ ನಿಂತು ಸಾಧಿಸೋಣ. ಏನಂತೀರಿ?
-ಕ.ವೆಂ.ನಾಗರಾಜ್.
ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊಂಟದ ಬಗ್ಗೆ ಮಾತಾಡ್ತಾ ಇದಾನೆ ಅಂತ ಅಂದುಕೊಳ್ಳಬೇಡಿ.
ಪ್ರತ್ಯುತ್ತರಅಳಿಸಿಚಿಂತೆಯಿಲ್ಲ ಬಿಡಿ ವಾನಪ್ರಸ್ಥದಲ್ಲು 'ಪ್ರಸ್ಥ' ಎನ್ನುವ ಪದ ಅಡಕವಲ್ಲವೆ,
ಹಾಗಿರಲು ಚಿ೦ತಿಸಿದ ಮಾತ್ರಕ್ಕೆ ತಪ್ಪೇನಿಲ್ಲ :-)
ಆದರು ಈಗೆಲ್ಲ ಈ ಕೊಲೆಸ್ಟರಲ್ ಮುಂತಾದ ಚಿಂತನೆ ಅತಿಯಾಯಿತೇನೊ, ಪ್ರಚಾರದ ಪ್ರಭಾವವಲ್ಲವೆ. ನೂರಾರು ವರ್ಷಗಳು ಗಾಣದೆಣ್ಣೆಯ ತಿಂದವರಿಗೆ ಬರದ ಕೊಲೆಸ್ತರಲ್ ಈಗ ಕಡಲೆಕಾಯಿ ಎಣ್ಣೆಯ ತಿಂಡಿ ತಿಂದರೆ ಬರುತ್ತದೆ, ಅನ್ನುವಾಗ ಹೊರದೇಶದಿ೦ದ ಬರುವ ಅಮದು ಎಣ್ಣೆಯವರ ಪ್ರಚಾರ ಮಾತ್ರ ಅನ್ನಿಸದೆ.
:) ನನಗೇನೂ ಚಿಂತೆಯಿಲ್ಲ. ಓದುವವರು ಚಿಂತೆ ಮಾಡದಿದ್ದರೆ ಸಾಕು. ಧನ್ಯವಾದ, ಹಾಸ್ಯಮಿಶ್ರಿತ ಪ್ರತಿಕ್ರಿಯೆಗೆ.
ಪ್ರತ್ಯುತ್ತರಅಳಿಸಿ