ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಮಾರ್ಚ್ 5, 2013

ಅದ್ಭುತ ವಿಚಾರ, ಉದಾತ್ತ ಕಲ್ಪನೆಯ ಬಲಿವೈಶ್ವದೇವಯಜ್ಞ




     ಬಲಿವೈಶ್ವದೇವಯಜ್ಞ - ನಿಜಕ್ಕೂ ಒಂದು ಅದ್ಭುತ ವಿಚಾರ ಮತ್ತು ಉದಾತ್ತ ಕಲ್ಪನೆಗಳನ್ನೊಳಗೊಂಡ ಪ್ರತಿದಿನ ಮಾಡಬೇಕಾದ ಯಜ್ಞವಾಗಿದೆ. ಇದನ್ನು ಪ್ರತ್ಯಕ್ಷ ಆಚರಣೆಗೆ ತಂದಿರುವವರನ್ನು ನಾನು ಕಂಡಿಲ್ಲ. ಅಂತಹವರು ಇದ್ದರೆ ಅವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ಈ ಯಜ್ಞದ ಆಚರಣೆಯ ಕ್ರಮ ಹೀಗಿದೆ. ಭೋಜನಕ್ಕಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಲ್ಲಿ ಹುಳಿ, ಉಪ್ಪು, ಖಾರ, ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಆಹಾರದಲ್ಲಿ ಸ್ವಲ್ಪ ಭಾಗವನ್ನು ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ, ಶಾಂತಿ, ಇತ್ಯಾದಿ ಸದ್ಗುಣಗಳ ಧಾರಣೆಗಾಗಿ, ಪ್ರಾಣಾಪಾನ ಪುಷ್ಟಿಗಾಗಿ, ವಿವಿಧ ಶಕ್ತಿಗಳ ಸಲುವಾಗಿ ಮತ್ತು ಸಮಸ್ತ ವಿದ್ವಜ್ಜನರ ಪ್ರಸನ್ನತೆಯ ಸಲುವಾಗಿ, ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯನ ಹಾಗೂ ರೋಗನಿರೋಧಕ ಶಕ್ತಿ ಪ್ರಾಪ್ತಿಗಾಗಿ, ಶರೀರಧಾರ್ಢ್ಯ ಪ್ರಾಪ್ತಿಗಾಗಿ, ಅಧ್ಯಯನಾನುಕೂಲ ವಿದ್ವಾಂಸರ ಪ್ರಸನ್ನತೆಗಾಗಿ, ನಮ್ಮ ಹಿರಿಯರು ಮತ್ತು ಪರಮಾತ್ಮನ ತೃಪ್ತಿಗಾಗಿ ಒಂದು ಮಂತ್ರಕ್ಕೆ ಒಂದು ಸಲದಂತೆ ಅಗ್ನಿಗೆ ಆಹುತಿ ನೀಡಬೇಕು. ಹೇಳಲಾಗುವ 10 ಮಂತ್ರಗಳು:
     ಓಂ ಅಗ್ನಯೇ ಸ್ವಾಹಾ || ಓಂ ಸೋಮಾಯ ಸ್ವಾಹಾ || ಓಂ ಅಗ್ನಿ ಸೋಮಾಭ್ಯಾಂ ಸ್ವಾಹಾ || ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ || ಓಂ ಧನ್ವಂತರಯೇ ಸ್ವಾಹಾ || ಓಂ ಕುಹ್ವೈ ಸ್ವಾಹಾ || ಓಂ ಅನುಮತ್ಯೈ ಸ್ವಾಹಾ || ಓಂ ಪ್ರಜಾಪತಯೇ ಸ್ವಾಹಾ || ಓಂ ಸಹ ದ್ವಾವಾ ಪೃಥಿವೀಭ್ಯಾಂ ಸ್ವಾಹಾ || ಓಂ ಸ್ವಿಷ್ಟಕೃತೇ ಸ್ವಾಹಾ || 
     ನಂತರದಲ್ಲಿ ಒಂದು ಎಲೆಯ ಮೇಲೆ ಉಪ್ಪು ಹಾಕಲ್ಪಟ್ಟ ಸಿದ್ಧಪಡಿಸಿದ ಅನ್ನ, ಸಾರು, ಪಲ್ಯ, ರೊಟ್ಟಿ ಮುಂತಾದ ಆಹಾರಪದಾರ್ಥಗಳ ಒಂದು ಭಾಗವನ್ನು ಹರಡಿ, ಅದನ್ನು ಪುನಃ ಏಳು ಭಾಗಗಳಾಗಿ ವಿಂಗಡಿಸಿ, 'ಶ್ವಭ್ಯೋ ನಮಃ| ಪತಿತೇಭ್ಯೋ ನಮಃ| ಶ್ವಪಗ್ಯೋ ನಮಃ| ಪಾಪ ರೋಗಿಭ್ಯೋ ನಮಃ| ಗೋಭ್ಯೋ ನಮಃ| ವಾಯುಸೇಭ್ಯೋ ನಮಃ| ಕೃಮಿಭ್ಯೋ ನಮಃ|' ಎಂದು ಹೇಳಿ ಆ ಭಾಗಗಳನ್ನು ದೀನರಿಗೆ, ದುರ್ಬಲರಿಗೆ, ಹಸಿದವರಿಗೆ, ರೋಗಿಗಳಿಗೆ, ಗೋವು, ನಾಯಿ, ಮುಂತಾದ ಸಾಕುಪ್ರಾಣಿಗಳಿಗೆ, ಪಕ್ಷಿಗಳಿಗೆ, ಇರುವೆ ಮೊದಲಾದ ಕ್ರಿಮಿಕೀಟಗಳಿಗೆ ಕೊಡಬೇಕು. ನಂತರದಲ್ಲಿ ಸ್ವತಃ ಊಟ ಮಾಡುವುದು ಕ್ರಮ. ಸಾಮರಸ್ಯ, ಸ್ವಾರ್ಥತ್ಯಾಗ, ಪರಾರ್ಥ ಚಿಂತನೆಗೆ ಇಂಬು ಕೊಡುವ ಇಂತಹ ಕ್ರಿಯೆಯನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಮನುಷ್ಯ-ಮನುಷ್ಯರ ನಡುವೆಯೇ ಆ ಜಾತಿ, ಈ ಜಾತಿ, ಮೇಲು-ಕೀಳು, ಬಡವ-ಶ್ರೀಮಂತ, ಜ್ಞಾನಿ-ಅಜ್ಞಾನಿ, ಇತ್ಯಾದಿ ಭೇದ ಭಾವಗಳ ಮಹಾಪೂರವನ್ನೇ ಕಾಣುತ್ತಿರುವ ನಮಗೆ, ಮಾನವರಿರಲಿ, ಸಕಲ ಜೀವರಾಶಿಗಳ ಅಭ್ಯುದಯದ ಕಲ್ಪನೆ, ಮಾರ್ಗದರ್ಶನ ಮಾಡುವ ಈ ಕ್ರಿಯೆ ಅನುಕರಣೀಯವಾಗಿದೆ. ಪಂ. ಸುಧಾಕರ ಚತುರ್ವೇದಿಯವರು ಈ ವಿಚಾರದಲ್ಲಿ ಹೇಳಿರುವುದು ಹೀಗೆ:-

     ಬಲಿವೈಶ್ವದೇವ - ಇದು ಸಾಧುಗಳಾದ ಮೂಕಪಕ್ಷಿಗಳ, ಗುಣ ಹೊಂದದ ಭಯಂಕರ ರೋಗಿಗಳ ಮತ್ತು ಇತರ ರೀತಿಯಲ್ಲಿ ಅಸಹಾಯಕರಾದ ಮಾನವರ ಸೇವೆ ಮಾಡುವ ಮಹಾಕಾರ್ಯ. ಪ್ರಿಯಃ ಪಶೂನಾಂ ಭೂಯಾಸಮ್ || (ಅಥರ್ವ.೧೭.೧.೪) - ಪ್ರಭೋ, ನಾನು ಪಶುಗಳಿಗೆ ಪ್ರಿಯನಾಗುವೆ -  ಎಂಬ ಹಾರ್ದಿಕ ಪ್ರಾರ್ಥನೆಗೆ ಕ್ರಿಯಾತ್ಮಕ ರೂಪ ಕೊಟ್ಟು ಮಾನವಜನಾಂಗಕ್ಕೆ ನಾನಾ ವಿಧದಲ್ಲಿ ಸಹಾಯಕವಾಗಿರುವ ಪಶು-ಪಕ್ಷಿಗಳಿಗೆ ತಮ್ಮ ಶಕ್ತ್ಯಾನುಸಾರ ಆಹಾರ ಕೊಡುವುದು ಬಲಿವೈಶ್ವದೇವದ ಪ್ರಥಮಭಾಗ. ನಾನಾ ಕಾರಣಗಳಿಂದ, ಅತ್ಯಂತ ದುಃಖಮಯವಾದ ಸ್ಥಿತಿಯಲ್ಲಿರುವ ಮಾನವರ ಕ್ಲೇಶನಿವಾರಣೆಗಾಗಿ ಆಹಾರಾದಿ ಪದಾರ್ಥಗಳನ್ನು ಕೊಡುವುದು ಎರಡನೆಯ ಭಾಗ. ಋಗ್ವೇದ ಹೇಳುತ್ತಿದೆ: 
ಉತ ದೇವಾ ಅವಹಿತಂ ದೇವಾ ಉನ್ನಯಥಾ ಪುನಃ | 
ಉತಾಗಶ್ಚಕ್ರುಷಂ ದೇವಾ ದೇವಾ ಜೀವಯಥಾ ಪುನಃ || (ಋಕ್.೧೦.೧೩೭.೧)
     [ದೇವಾಃ ದೇವಾಃ] ದಾನಶೀಲರಾದ ವಿದ್ವಾಂಸರೇ, [ಅವಹಿತಮ್] ಕೆಳಗೆ ಬಿದ್ದವನನ್ನು [ಪುನಃ] ಮತ್ತೆ [ಉನ್ನಯಥಾ] ಮೇಲಕ್ಕೆತ್ತಿರಿ. [ಉತ] ಮತ್ತು [ದೇವಾಃ ದೇವಾಃ] ಪ್ರಕಾಶವಂತರಾದ ಪುಣ್ಯಾತ್ಮರೇ, [ಅಗಃ ಚಕ್ರುಷಮ್] ಪಾಪ ಮಾಡುವವನಲ್ಲಿ, [ಪುನಃ] ಮರಳಿ, [ಜೀವಯಥಾ] ನವಜೀವನವನ್ನು ತುಂಬಿಸಿರಿ.
     ವೈದಿಕ ಧರ್ಮದ ಈ ಔದಾರ್ಯಕ್ಕೆ ವಾಸ್ತವಿಕತೆಯ ರೂಪ ಕೊಡುವುದು ಗೃಹಸ್ಥ-ಗೃಹಿಣಿಯರ ಕರ್ತವ್ಯವೇ ಆಗಿದೆ. ಮತ್ತೂ ಕೇಳಿರಿ:-
ಅಮಾಜುರಶ್ಚಿದ್ಭವಥೋ ಯುವಂ ಭಗೋsನಾಶೋಶ್ಚಿದವಿತಾರಾಪಮಸ್ಯ ಚಿತ್ | 
ಅಂಧಸ್ಯ ಚಿನ್ನಾಸತ್ಯಾ ಕೃಶಸ್ಯ ಚಿದ್ಯುವಾಮಿದಾಹುರ್ಭಿಷಜಾ ರುತಸ್ಯ ಚಿತ್ || (ಋಕ್.೧೦.೩೯.೩)
     [ನಾಸತ್ಯಾ] ಓ ಅಸತ್ಯದೂರರಾದ ದಂಪತಿಗಳೇ, [ಯುವಮ್] ನೀವಿಬ್ಬರೂ, [ಅಮಾಜುರಃ ಚಿತ್] ನಿಜವಾಗಿ ಒಬ್ಬರಿಗೊಬ್ಬರು ಸಮೀಪಸ್ಥರೂ, [ಭಗಃ] ಒಬ್ಬರಿಗೊಬ್ಬರು ಐಶ್ವರ್ಯರೂಪರೂ [ಭವತಃ] ಆಗಿರಿ. [ಅನಾಶೋಃ ಚಿತ್] ಉದರವ್ಯಾಧಿಯಿಂದ ತಿನ್ನಲಾಗದವನ [ಅಪಮಸ್ಯ ಚಿತ್] ಮತ್ತು ಮನೋರೋಗಕ್ಕೆ ತುತ್ತಾದವನ [ಅಂಧಸ್ಯ ಚಿತ್] ಕುರುಡನ [ಕೃಶಸ್ಯ ಚಿತ್] ಕೃಶನಾದವನ [ಅವಿತಾರಾ] ರಕ್ಷಕರಾಗಿರಿ. [ಯುವಾಂ ಇತ್] ನಿಮ್ಮಿಬ್ಬರನ್ನೇ [ರುತಸ್ಯ ಚಿತ್ ಭಿಷಜಾ] ವ್ಯಾಧಿಗ್ರಸ್ಥನ ಚಿಕಿತ್ಸಕರೆಂದು [ಆಹುಃ] ಹೇಳುತ್ತಾರೆ.
ಯುವಂ ಹ ಕೃಶಂ ಯುವಮಶ್ವಿನಾ ಶಯುಂ ಯುವಂ ವಿಧಂತಂ ವಿಧವಾಮುರುಷ್ಯಥಃ | 
ಯುವಂ ಸನಿಭ್ಯಃ ಸ್ತನಯಂತಮಶ್ವಿನಾsಪವ್ರಜಮೂರ್ಣುಥಃ ಸಪ್ತಾಸ್ಯಮ್ || (ಋಕ್.೧೦.೪೦.೮)
     [ಅಶ್ವಿನಾ ಅಶ್ವಿನಾ] ಆತ್ಮವಂತರಾದ ನರ-ನಾರಿಯರೇ, [ಹ] ನಿಜವಾಗಿ [ಯುವಮ್] ನೀವಿಬ್ಬರೂ, [ಕೃಶಂ] ಕ್ಷಯರೋಗಿಯನ್ನೂ, [ಯುವಂ] ನೀವಿಬ್ಬರೂ [ಶಯುಂ] ವ್ಯಾಧಿಗ್ರಸ್ಥನಾಗಿ ಹಾಸಿಗೆ ಹಿಡಿದವನನ್ನೂ [ಯುವಂ] ನೀವಿಬ್ಬರೂ [ವಿಧಂತಮ್] ಸಮಾಜಸೇವೆಯಲ್ಲಿ ದೀನ ದರಿದ್ರರನ್ನೂ ಉದ್ಧರಿಸಲು ನಿಂತವನನ್ನೂ, [ವಿಧವಾಮ್] ವಿಧವೆಯನ್ನೂ [ಉರುಷ್ಕಥಃ] ರಕ್ಷಿಸಿರಿ. [ಸನಿಭ್ಯಃ] ದಾತೃಗಳಿಗೆ [ಸ್ತನಯಂತಮ್] ಉದ್ಗಮದಂತಿರುವ [ಸಪ್ತಾಸ್ಯಮ್] ಪಂಚಜ್ಞಾನೇಂದ್ರಿಯಗಳು ಮತ್ತು ಮನೋಬುದ್ಧಿಗಳಿಂದ ಕೂಡಿದ್ದು [ಅಪವ್ರಜಮ್] ತಪ್ಪುದಾರಿ ಹಿಡಿದ ಇಂದ್ರಿಯಗಳನ್ನುಳ್ಳ ದುರ್ಬಲ ಮನಸ್ಕನನ್ನು [ಊರ್ಣುಥಃ] ಉದ್ಧರಿಸಿರಿ.
     ಪಾಠಕರು ಈ ಎರಡು ಮಂತ್ರಗಳ ಮೇಲೂ ಪೂರ್ಣ ಗಮನ ನೀಡಬೇಕು. ಬಲಿವೈಶ್ವದೇವ - ಎಂದರೆ, ಅಗ್ನಿಯಲ್ಲಿ ಸ್ವಲ್ಪ ಮಧುರಖಾದ್ಯಗಳನ್ನರ್ಪಿಸಿ, "ಆಯಿತು" ಎಂದುಕೊಳ್ಳುವುದಲ್ಲ. ಕುಲ-ಜಾತಿಗಳ ಪ್ರಶ್ನೆಯಲ್ಲ. ಸಮಾಜದಲ್ಲಿ ಶಾರೀರಿಕ-ಮಾನಸಿಕ ವ್ಯಾಧಿಗಳಿಗೆ ತುತ್ತಾದವರಿರುತ್ತಾರೆ. ದೌರ್ಬಲ್ಯದಿಂದ ಇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳಲಾರದೆ, ದುರ್ಮಾರ್ಗಕ್ಕಿಳಿದವರಿರುತ್ತಾರೆ. ವೈದಿಕ ಧರ್ಮ "ಪಾಪಿಗಳನ್ನು ದೂರಕ್ಕಟ್ಟು" ಎಂದು ಹೇಳುವ ಸಂಕುಚಿತ ಮನೋಭಾವ ಬೆಳೆಸುವ ಜೀವನಪಥವಲ್ಲ. ಪರಮ ಔದಾರ್ಯ ಆರ್ಯತತ್ತ್ವದ ಜೀವ ಜೀವಾಳ. "ಪಾಪವನ್ನು ದ್ವೇಷಿಸು! ಪಾಪಿಯನ್ನಲ್ಲ" ಎನ್ನುವುದು ವೇದೋಕ್ತ ಜೀವನಾದರ್ಶ. ಧೂರ್ತಿಃ ಪ್ರಣಜ್ ಮರ್ತ್ಯಸ್ಯ || (ಋಕ್.೧.೧೮.೩) - ಮಾನವನ ಧೂರ್ತತನ ನಾಶವಾಗಲಿ - ಎನ್ನುವುದೇ ವೇದಾದರ್ಶ. ಅಥರ್ವವೇದ ಹೇಳುತ್ತದೆ:-
ಸಂ ವೋ ಮನಾಂಸಿ ಸಂ ವ್ರತಾ ಸಮಾಕೂತೀರ್ನಮಾಮಸೀ | 
ಅಮೀ ಯೇ ವಿವ್ರತಾ ಸ್ಥನ ತಾನ್ವಃ ಸಂ ನಮಯಾಮಸಿ || (ಆಥರ್ವ.೬.೯೪.೧)
     [ವಃ ಮನಾಂಸಿ] ನಿಮ್ಮ ಮನಸ್ಸುಗಳು, [ಸಮ್] ಒಳಿತಾಗಿ, ಒಂದಾಗಿ ಇರಲಿ. [ವ್ರತಾ] ಸಂಕಲ್ಪಗಳೂ ಕೂಡ ಒಳಿತಾಗಿ, ಒಂದಾಗಿರಲಿ. [ನಮಾಮಸಿ] ನಾವು ವಿನೀತರಾಗಿ ನಡೆದುಕೊಳ್ಳುತ್ತೇವೆ. [ವಃ] ನಿಮ್ಮ ಮಧ್ಯೆ [ಯೇ ಅಮೀ] ಯಾವ ಈ ಜನರು [ವಿವ್ರತಾಃಸ್ಥನ] ವಿರುದ್ದ ಸಂಕಲ್ಪವುಳ್ಳವರಾಗಿರುತ್ತಾರೋ [ತಾನ್] ಅವರನ್ನು [ಸಮ್] ಒಳಿತಾದ ರೀತಿಯಲ್ಲಿ [ನಮಯಾಮಸಿ] ವಿನೀತರನ್ನಾಗಿ ಮಾಡುತ್ತೇವೆ. ಮಾತ್ರವಲ್ಲ, ಇದನ್ನೂ ಕೇಳಿರಿ:-
ತ್ರಾಯಂತಾಮಿಮಂ ದೇವಾಸ್ತ್ರಾಯಂತಾಂ ಮರುತಾಂ ಗಣಾಃ |
ತ್ರಾಯಂತಾಂ ವಿಶ್ವಾ ಭೂತಾನಿ ಯಥಾಯಮರಪಾ ಅಸತ್ || (ಅಥರ್ವ.೬.೯೪.೧)
     [ಯಥಾ ಅಯಂ ಅರಪಾಃ ಅಸತ್] ಈ ಪಾಪಿಯು ನಿಷ್ಪಾಪನಾಗುವಂತೆ [ದೇವಾಃ] ವಿದ್ವಜ್ಜನರು [ಇಮಂ ತ್ರಾಯಂತಾಮ್] ಇವನನ್ನು ರಕ್ಷಿಸಲಿ. [ಮರುತಾಂ ಗಣಾಃ] ಸಂಯಮಿಗಳು [ತ್ರಾಯಂತಾಮ್] ರಕ್ಷಿಸಲಿ. [ವಿಶ್ವಾ ಭೂತಾನಿ] ಸಮಸ್ತ ಪ್ರಾಣಿಗಳು, [ತ್ರಾಯಂತಾಮ್] ರಕ್ಷಿಸಲಿ.
     ಕ್ಷಯ-ಕುಷ್ಠ ಮೊದಲಾದವು ಶಾರೀರಿಕ ರೋಗಗಳಾದರೆ, ಉನ್ಮಾದ-ಅಪಸ್ಮಾರ ಮೊದಲಾದವು ಮಾನಸಿಕ ರೋಗಗಳಾದರೆ, ಪಾಪ ಆತ್ಮಿಕ ರೋಗ. ಈ ಬಗೆಯ ರೋಗಗಳಿಂದ ಗ್ರಸ್ತರಾದವರೂ ಗೃಹಸ್ಥ-ಗೃಹಿಣಿಯರ ಸಹಾನುಭೂತಿ, ಸೇವಾ-ಶುಶ್ರೂಷೆಗಳಿಗೆ ಪಾತ್ರರೇ ಸರಿ. ಬಲಿವೈಶ್ವದೇವಯಜ್ಞ ವಿಶ್ವದೇವನ ಮಕ್ಕಳೇ ಆದ ಪಶು-ಪಕ್ಷಿಗಳಿಗೂ, ವ್ಯಾಧಿಗ್ರಸ್ತ ಪಾಪಿಷ್ಠ ಮಾನವರಿಗೂ ಭಾಗವನ್ನೆತ್ತಿಡುವ ಈ ಶುಭಕರ್ಮ, ಮನೆಮನೆಯಲ್ಲಿಯೂ ಆಚರಿಸಲ್ಪಟ್ಟರೆ, ಅದೆಷ್ಟು ಸಂಘ-ಸಂಸ್ಥೆ-ಸಮಾಜಗಳನ್ನು ದೀನಹೀನರ ಉದ್ಧಾರಕ್ಕಾಗಿ ಕಟ್ಟಬಹುದೋ? 
    

4 ಕಾಮೆಂಟ್‌ಗಳು:

  1. ಹಂಚಿಕೊಂಡು ತಿನ್ನುವ ಪರಿಕಲ್ಪನೆಯನ್ನು ನಮ್ಮ ಹಿರೀಕರು ಬಹಳ ಚೆನ್ನಾಗಿ ರೂಡಿಸಿಕೊಟ್ಟಿದ್ದಾರೆ. ನಮಗೆ ಇದು ಯಾವಾಗ ಅರ್ಥವಾಗುವುದೋ. ಒಳ್ಳೆಯ ಸಂಗ್ರಹ ಯೋಗ್ಯ ಬರಹಕ್ಕಾಗಿ ಧನ್ಯವಾದಗಳು ಸಾರ್.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಜ, ಬದರೀನಾಥರೇ. ವಿಚಾರದಲ್ಲಿರುವುದನ್ನು ಆಚಾರಕ್ಕೆ ತರುವ ಕೆಲಸ ನಾವೇ ಮಾಡಬೇಕಿದೆ. ಧನ್ಯವಾದಗಳು.

      ಅಳಿಸಿ
  2. ಆತ್ಮೀಯ ನಾಗರಾಜರೆ,
    ಉತ್ತಮ ವಿಚಾರಗಳು ಪುಸ್ತಕದಲ್ಲಿ ಮುಚ್ಚಿ ಹೋಗಿದೆ, ಆಚರಣೆಯಲ್ಲಿ ಬಾರದೆ ಧೂಳು ಹಿಡಿಯುತ್ತದೆ. ಎಲ್ಲೋ ಒಬ್ಬರಿಬ್ಬರು ಆಚರಿಸುತ್ತಾ ಬಂದಿದ್ದಾರೆ. ಹೆಚ್ಚಿನವರು ಸರಿಯಾಗಿ ಅರ್ಥ ತಿಳಿಯದೆ ಮೂಡ ನಂಬಿಕೆ ಎಂದು ಜರಿಯುತ್ತ, ಅಪಹಾಸ್ಯ ಮಾಡುತ್ತಾರೆ. ಉತ್ತಮ ವಿಚಾರಗಳನ್ನು ತಿಳಿಸುವ ನಿಮ್ಮ ಪ್ರಯತ್ನಕ್ಕಾಗಿ ಧನ್ಯವಾದಗಳು, ಇಂತಹ ಹೆಚ್ಚು ವಿಚಾರಗಳು ಬೆಳಕಿಗೆ ಬರಲಿ ಮತ್ತು ಆಚರಿಸಲು ಪ್ರೇರಣೆ ನೀಡಲಿ ಎಂಬ ಆಶಯದೊಂದಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ವಿವೇಕಾನಂದರು ಹೇಳಿದಂತೆ ಮೂಢ ಸಂಪ್ರದಾಯಗಳು ಜೋತು ಬಿದ್ದವೆಂದರೆ ಮೆದುಳು ಹೋದಂತೆಯೇ ಸರಿ. ಈಗ ಆಗಿರುವುದು, ಆಗುತ್ತಿರುವುದು ಇದೇ. ನಾವು ಸರಿಯಾಗಿರಲು ಪ್ರಯತ್ನಿಸೋಣ. ಪ್ರತಿಕ್ರಿಯೆಗೆ ವಂದನೆಗಳು, ಆತ್ಮೀಯ ಪ್ರಕಾಶರೇ.

      ಅಳಿಸಿ