ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಮಾರ್ಚ್ 12, 2013

ವಾತ್ಸಲ್ಯಮಯಿ ಶ್ರೀಮತಿ ಪ್ರಭಾಮಣಿ ಶ್ರೀನಿವಾಸಮೂರ್ತಿ



      ಹಳೇಬೀಡಿನ ದಿ. ಶ್ಯಾನುಭೋಗ್ ಸುಬ್ಬರಾಯರ ಮನೆ ಒಂದು ಕಾಲದಲ್ಲಿ ನಂದಗೋಕುಲವಿದ್ದಂತೆ ಇದ್ದ, ಚೆನ್ನಾಗಿ ಬಾಳಿ ಬದುಕಿದ್ದ ಮನೆ. ಸದಾ ಮನೆಯವರಿಂದ, ಬಂಧು-ಬಳಗದವರಿಂದ, ಬಂದು ಹೋಗುವವರಿಂದ ತುಂಬಿ ತುಳುಕುತ್ತಿದ್ದ, ಗಿಜಿಗುಡುತ್ತಿದ್ದ ಮನೆ. ಬೇಸಿಗೆ ರಜೆ ಬಂತೆಂದರೆ ಸಾಕು, ಎಲ್ಲಾ ಮೊಮ್ಮಕ್ಕಳೂ ಅಲ್ಲಿ ಆಡಿ, ಕುಣಿದಾಡಲು ಓಡೋಡಿ ಬರಲು ಬಯಸುತ್ತಿದ್ದ, ಅಲ್ಲಿ ಸಿಗುತ್ತಿದ್ದ ಪ್ರೀತಿ, ಪ್ರೇಮ, ವಿಶ್ವಾಸಗಳ ಸವಿಯನ್ನು ಉಣ್ಣಲು ಕಾತರಿಸುತ್ತಿದ್ದ ಸಮಯವೆಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ನಾನೂ ಸಹ ಒಬ್ಬ ಮೊಮ್ಮಗನಾಗಿ, ಆ ಮನೆಯ ಮೊದಲ ಮೊಮ್ಮಗನಾಗಿ, ಅಲ್ಲಿನ ಪ್ರೀತಿಯ ಸವಿಯನ್ನು ಉಂಡವನಾಗಿದ್ದು, ಅಂದಿನ ಬಾಲ್ಯದ ದಿನಗಳು ಹಚ್ಚ ಹಸಿರಾಗಿ ಉಳಿದಿವೆ. ಸುಬ್ಬರಾಯರ ಅವಿಭಕ್ತ ಕುಟುಂಬದಂತಹ ಕುಟುಂಬಗಳನ್ನು ಇಂದು ಕಾಣುವುದನ್ನಾಗಲೀ, ಕಲ್ಪಿಸಿಕೊಳ್ಳುವುದಾಗಲೀ ಇಂದಿನವರಿಗೆ ಸಾಧ್ಯವಾಗಲಾರದೇನೋ! ಆ ದೊಡ್ಡ ಕುಟುಂಬದ ಆಗು-ಹೋಗುಗಳು, ಕೆಲಸ ಕಾರ್ಯಗಳನ್ನು ನಿರ್ವಹಿಸಲು, ನಿಭಾಯಿಸಲು ಹೆಣ್ಣು ಮಕ್ಕಳು, ಸೊಸೆಯಂದಿರು ಕಷ್ಟಪಟ್ಟಿದ್ದಾರೆ. ಅಜ್ಜಿ ಲಕ್ಷ್ಮಮ್ಮನ ಹೆಗಲಿಗೆ ಹೆಗಲಾಗಿ ಶ್ರಮಿಸಿದ್ದಾರೆ. ದಿ. ಸುಬ್ಬರಾಯರ ಹಿರಿಯ ಮಗ ಶ್ರೀನಿವಾಸಮೂರ್ತಿಯವರ (ನನ್ನ ತಾಯಿ ಸೀತಮ್ಮನವರ ಅಣ್ಣ) ಕೈಹಿಡಿದು ಮನೆಗೆ ಕಾಲಿರಿಸಿದ ದಿನದಿಂದ ಮನೆಯವರ ಏಳಿಗೆ ಬಯಸಿದ, ಅದಕ್ಕಾಗಿ ದುಡಿದ ಶ್ರೀಮತಿ ಪ್ರಭಾಮಣಿಯವರು ದಿನಾಂಕ ೧೧-೦೩-೨೦೧೩ರಂದು ಬೆಂಗಳೂರಿನ ಮಗನ ನಿವಾಸದಲ್ಲಿ ಇಹಯಾತ್ರೆ ಮುಗಿಸಿ ಇನ್ನು ನಮಗೆ ನೆನಪಾಗಿ ಮಾತ್ರ ಉಳಿದಿದ್ದಾರೆ. ನನ್ನ ಸೋದರತ್ತೆ ಪ್ರಭಾಮಣಿಯವರ ಕುರಿತು ನನ್ನ ಬಾಲ್ಯಕಾಲದ ಒಂದೆರಡು ಅನುಭವಗಳನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳುತ್ತಿದ್ದೇನೆ.
     ಮೊದಲೇ ಹೇಳಿರುವಂತೆ ಬೇಸಿಗೆ ಕಾಲ ಬಂತೆಂದರೆ ನೆಂಟರ, ಇಷ್ಟರ ದೊಡ್ಡ ಸಮೂಹವೇ ಹಳೇಬೀಡಿನ ಮನೆಯಲ್ಲಿ ಸೇರುತ್ತಿತ್ತು. ಸುಬ್ಬರಾಯರು-ಲಕ್ಷ್ಮಮ್ಮನವರ ಎಂಟು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳ ಬಳಗವೆಂದರೆ ಸುಮ್ಮನಾದೀತೇ? ಹಬ್ಬ-ಹರಿದಿನಗಳು, ಕಾರ್ಯಕ್ರಮಗಳು, ಬಸಿರು, ಬಾಣಂತನ, ಆರೈಕೆಗಳು, ನಾಮಕರಣ, ಮುಂಜಿ, ಮದುವೆ, ಇತ್ಯಾದಿ, ಇತ್ಯಾದಿ ಕಲಾಪಗಳು ಸದಾ ಇದ್ದೇ ಇರುತ್ತಿದ್ದ ದಿನಗಳವು. ಮಕ್ಕಳ ಸೈನ್ಯವೇ ಅಲ್ಲಿ ಸೇರಿರುತ್ತಿತ್ತು. ಎಲ್ಲರ ಊಟೋಪಚಾರಗಳು, ಬೇಕು-ಬೇಡಗಳನ್ನು ನಿಭಾಯಿಸುವಲ್ಲಿ ಅಜ್ಜಿ ಲಕ್ಷ್ಮಮ್ಮನವರಿಗೆ ಹಿರಿಯ ಸೊಸೆ ಪ್ರಭಾಮಣಿ ಬೆನ್ನೆಲುಬಾಗಿದ್ದರು. ಗದ್ದಲವೆಬ್ಬಿಸಿ ಚಿಟ್ಟು ಹಿಡಿಸುತ್ತಿದ್ದ ಮಕ್ಕಳ ಸೈನ್ಯ ನಿಯಂತ್ರಿಸುವುದರಲ್ಲಿ ಎಲ್ಲರಿಗೂ ಸಾಕೋಸಾಕಾಗುತ್ತಿತ್ತು. ಅಂತಹ ಮಕ್ಕಳನ್ನು  ಅವರು ಒಬ್ಬೊಬ್ಬರನ್ನಾಗಿ ಹಿಡಿಹಿಡಿದು ಕರೆದೊಯ್ದು ಸ್ನಾನ ಮಾಡಿಸಿ ಟವೆಲ್ ಸುತ್ತಿ ಹೊರಗೆ ಕಳಿಸುತ್ತಿದ್ದುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆಡುತ್ತಿದ್ದ ಆಟ ಬಿಟ್ಟು ಬರದ ಅವರನ್ನು ಹಿಡಿದು ಸ್ನಾನ ಮಾಡಿಸುವ ಈ ಕೆಲಸ ಏನೂ ಸಾಮಾನ್ಯದ್ದಾಗಿರಲಿಲ್ಲ, ಒಂದು ಸಣ್ಣ ಯುದ್ಧದಲ್ಲಿ ಗೆದ್ದಂತೆಯೇ. ಅದು ಆಗುತ್ತಿದ್ದಂತೆ ತಿಂಡಿ ಮಾಡಿ ಎಲ್ಲರದೂ ಆಯಿತೇ ಎಂದು ನೋಡಿಕೊಳ್ಳುವ ಕೆಲಸ, ತಿಂಡಿ ಕೆಲಸ ಮುಗಿಯುವ ಮುನ್ನವೇ ಊಟದ ಸಿದ್ಧತೆ ಪ್ರಾರಂಭವಾಗಬೇಕಿತ್ತು. ಈಗಿನಂತೆ ಆಗ ಗ್ಯಾಸ್ ಸ್ಟೌ, ಎಲೆಕ್ಟ್ರಿಕ್ ಒಲೆಗಳು ಇರದಿದ್ದ ಕಾಲ. ಸ್ನಾನಕ್ಕೆ ಬಿಸಿನೀರು, ತಿಂಡಿ, ಅಡುಗೆ ಎಲ್ಲದಕ್ಕೂ ಸೌದೆಯನ್ನೇ ಬಳಸುತ್ತಿದ್ದುದು. ನಸುಕು ಹರಿಯುವ ಮುನ್ನವೇ ಹಚ್ಚುತ್ತಿದ್ದ ಮಣ್ಣಿನ ಒಂದು ಕೂಡಲಿ ಒಲೆ, ಮತ್ತೊಂದು ಒಂಟಿ ಒಲೆ ಆರುತ್ತಿದ್ದುದು ರಾತ್ರಿ ಮಲಗುವ ವೇಳೆಯಲ್ಲಿಯೇ. ನನಗೆ ಇನ್ನೂ ನೆನಪಿದೆ. ಒಂದು ಬೇಸಿಗೆಯ ರಜಾಕಾಲದಲ್ಲಿ ಆಟವಾಡುತ್ತಿದ್ದಾಗ ಸೋದರತ್ತೆ ಪ್ರಭಾಮಣಿ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದರು. ಹತ್ತಿರದ ದಾಸವಾಳದ ಗಿಡದಿಂದ ಬಿಳಿ ದಾಸವಾಳದ ಹೂವುಗಳನ್ನು ನಾವುಗಳು ಕಿತ್ತು ತಿನ್ನುತ್ತಾ ಆಟವಾಡುತ್ತಿದ್ದೆವು. ಆಗಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ಗಡಿಬಿಡಿಯಿಂದ ಕೋಣೆಗೆ ಹೋದ ಒಂದೆರಡು ಕ್ಷಣದಲ್ಲೇ ಹೆರಿಗೆಯಾಗಿತ್ತು. ಆಗ ಹುಟ್ಟಿದವಳೇ ಅವರ ಕಿರಿಯ ಮಗಳು ರಾಧಾ. ಅವಳು ಈಗ ನನ್ನ ಕಿರಿಯ ತಮ್ಮನ ಪತ್ನಿ, ತನ್ನ ಕುಟುಂಬದೊಡನೆ ಅಮೆರಿಕಾದಲ್ಲಿದ್ದಾಳೆ. ನಗುನಗುತ್ತಾ ಕಷ್ಟಗಳನ್ನು ಸಹಿಸಿ, ಮಕ್ಕಳ ಓದು, ವಿದ್ಯಾಭ್ಯಾಸಕ್ಕೆ ಉತ್ತೇಜಿಸಿ, ಅವರ ಅಭಿವೃದ್ಧಿ ಕಂಡು ಸಂತಸ ಪಟ್ಟ ಜೀವವದು. ಹಲವಾರು ನೆನಪುಗಳು ಅವರು ಮರೆಯಾಗಿರುವ ಈ ಸಮಯದಲ್ಲಿ ಮನಃಪಟಲದಲ್ಲಿ ಹಾದು ಹೋಗುತ್ತಿವೆ. ಅವರ ಮಾತೃವಾತ್ಸಲ್ಯ ಭರಿತ ನೋಟ, ಮಕ್ಕಳೊಡನೆ ಮಕ್ಕಳಾಗಿ ಬೆರೆತು ಆಡುತ್ತಿದ್ದುದು, ಸಣ್ಣ ಸಣ್ಣ ವಿಷಯಗಳನ್ನೂ ಬೆರಗಾಗಿ ಕೇಳಿ ಪ್ರತಿಕ್ರಿಯಿಸುತ್ತಿದ್ದ ರೀತಿ, ಉದ್ಗಾರಗಳು ಕಣ್ಣಿಗೆ ಕಟ್ಟಿದಂತಿದೆ. ಅವರ ಆಶೀರ್ವಾದದ ಫಲದಿಂದ ಅವರ ಮಕ್ಕಳು ಮತ್ತು ಬಂಧುಗಳು ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ, ಅವರ ಆಶೀರ್ವಾದ ಸದಾ ಎಲ್ಲರಿಗೂ ಶ್ರೀರಕ್ಷೆಯಾಗಿರಲಿ.     

6 ಕಾಮೆಂಟ್‌ಗಳು:

  1. Thanks Bhava for writing such a beautiful narration about my beloved mother. My tears flowed down while reading.

    Regards,
    Radha.

    ದೊಡ್ಡಮ್ಮನವರ ನೆನಪು ಸದಾ ನಮ್ಮೆಲ್ಲರ ಹೃದಯದಲ್ಲಿ ಇರಲಿ. ಅವರು ಕೊಡುತಿದ್ದ ಕೈತುತ್ತು,..ಅವರ ಮಾತು , ಎಂದೂ ಮರೆಯಲಸಾಧ್ಯ. ಹಳೇಬೀಡು ಮನೆ ಎಂದರೆ ನಮ್ಮೆಲ್ಲರಿಗು ಬಹಳ ಪ್ರೀತಿ,.ಆ ಮನೆಯಲ್ಲಿ ಕಳೆದ ಪ್ರತಿಯೊಂದು ಕ್ಷಣವು ಅವಿಸ್ಮರಣೀಯ.... ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ.....

    Thanks and Regards

    Shreeharsha H R

    ಪ್ರತ್ಯುತ್ತರಅಳಿಸಿ
  2. ಅನಿರೀಕ್ಷಿತವಾಗಿ ಅಂದೇ ನಾನು ಬೆಳಿಗ್ಗೆ ಬೆಂಗಳೂರಿಗೆ ಹೋಗಬೇಕಾದದ್ದು ಬಂದು ನನ್ನ ಅತ್ತೆಯವರ ಅಂತಿಮ ದರ್ಶನ ಭಾಗ್ಯ ಲಭಿಸಿದ್ದು ನನ್ನ ಪುಣ್ಯವೇ ಸರಿ. ಬೇಸಿಗೆ ರಜಾ ಕಾಲದಲ್ಲಿ ನಮಗೆಲ್ಲರಿಗೂ ಮೈತುಂಬಾ ಹರಳೆಣ್ಣೆ ಹಚ್ಚಿ ಬಿಸಿ ಬಿಸಿ ನೀರು ಹಾಕಿ, ಕಣ್ಣಿನಲ್ಲಿ ಸೀಗೆಪುಡಿ ಹೋಗಿ ನಾವು ಪರದಾಡುತ್ತಿದ್ದ ನೆನೆಪು ಹಾಗೂ ಅವರು ಅಡಿಗೆ ಮನೆಯಲ್ಲಿ ಒಂದು ಕಾಲು ನೀಡಿಕೊಂಡು ಗಂಟೆಗಟ್ಟಲೆ ಚಟ್ನಿ/ದೋಸೆಹಿಟ್ಟು ರುಬ್ಬುತ್ತಿದ್ದಂತಹ ದೃಶ್ಯ ಇನ್ನೂ ನನ್ನಲ್ಲಿ ಹಸಿರಾಗಿದೆ. ಎಲ್ಲ ಮಕ್ಕಳಿಗೆ ಅವರು ತೋರುತ್ತಿದ್ದ ಪ್ರೀತಿ ವಾತ್ಸಲ್ಯಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರ ಅಗಲಿಕೆ ನಿಜಕ್ಕೂ ನಮಗೆಲ್ಲರಿಗೂ ಅತ್ಯಂತ ದುಃಖಮಯವಾಗಿದೆ.

    ಪ್ರತ್ಯುತ್ತರಅಳಿಸಿ
  3. Seen by 17
    Vinay Nagaraj, Harish Hs and 3 others like this.

    Chandan Kadur RIP ajji
    Yesterday at 1:04pm via mobile · Like

    Harish Hs ಅರ್ಥ ಪೂರ್ಣ ಲೇಖನ...
    17 hours ago · Like

    Ramesh Lakkavalli Sad to read abt demise. RIP
    13 hours ago via mobile · Like

    Chandra Shekar Very sad to know the demist.. May her soul rest in peace..
    3 hours ago · Like

    ಪ್ರತ್ಯುತ್ತರಅಳಿಸಿ