ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ನವೆಂಬರ್ 30, 2014

ರಾಮರು ನಾವೇ, ರಾವಣರೂ ನಾವೇನೇ!


     "ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಈಗ ಕಾಲ ತುಂಬಾ ಕೆಟ್ಟು ಹೋಗಿದೆ. ಗುರು-ಹಿರಿಯರೆಂದರೆ ಗೌರವವೇ ಇಲ್ಲ" -  ಈ ಮಾತು ಕೇಳುವುದು ಈಗ ಸಾಮಾನ್ಯವಾಗಿ ಹೋಗಿದೆ. ವಾಸ್ತವವೆಂದರೆ ಈ ಮಾತನ್ನು ಈಗ ಹೇಳುವವರು ಚಿಕ್ಕವರಾಗಿದ್ದಾಗ ಅವರ ಹಿರಿಯರುಗಳೂ ಹೇಳುತ್ತಿದ್ದದೂ ಇದನ್ನೇ. "ಈ ಟಿವಿ ಬಂದಿದ್ದೇ ಬಂದಿದ್ದು, ನಮ್ಮ ಸಂಸ್ಕೃತಿಯೇ ಹಾಳಾಗಿ ಹೋಯಿತು" ಅನ್ನುತ್ತಾರೆ. ಟಿವಿ ತನ್ನಷ್ಟಕ್ಕೆ ತಾನೇ ಯಾರನ್ನಾದರೂ ಹಾಳು ಮಾಡುತ್ತದೆಯೇ? ಅದನ್ನು ಉಪಯೋಗಿಸಿ ಹಾಳಾದರೆ ಅದರ ಹೊಣೆಯನ್ನು ಟಿವಿಯ ಮೇಲೆ ಏಕೆ ಹಾಕಬೇಕು? ಅದೇ ರೀತಿ ಚಾಕುವನ್ನು ತರಕಾರಿ ಕತ್ತರಿಸಲೂ ಉಪಯೋಗಿಸಬಹುದು, ಇನ್ನೊಬ್ಬರನ್ನು ಕೊಲ್ಲಲೂ ಬಳಸಬಹುದು. ತನ್ನನ್ನು ಹೀಗೆಯೇ ಉಪಯೋಗಿಸಬೇಕು ಎಂದು ಚಾಕು ಹೇಳುತ್ತದೆಯೇ? ಚಾಕುವಿನಿಂದ ಏನಾದರೂ ತೊಂದರೆಯಾದರೆ ಅದು ಚಾಕುವಿನ ತಪ್ಪಂತೂ ಅಲ್ಲ. ಏನು ಹೇಳಹೊರಟಿರುವೆನೆಂದು ಈಗಾಗಲೇ ಅರ್ಥವಾಗಿರಬೇಕು. ಕೆಟ್ಟು ಹೋಗಲು ಕಾಲವಾಗಲೀ, ಯಾವುದೇ ವಸ್ತುವಾಗಲೀ ಕಾರಣವಲ್ಲ. ಅದನ್ನು ಬಳಸುವ ರೀತಿಯಿಂದ ಒಳಿತು/ಕೆಡಕು ಆಗುತ್ತದೆ. ಕಾಲ ಕೆಟ್ಟಿದೆಯೆಂದರೆ ವಾಸ್ತವಿಕವಾಗಿ ನಾವು ಕೆಟ್ಟುಹೋಗಿದ್ದೇವೆ ಎಂದೇ ಅರ್ಥ. ನೈತಿಕವಾಗಿ ಕೆಟ್ಟದ್ದು ಎಂದು ಭಾವಿಸುವ, ಭ್ರಷ್ಟತೆಯಿಂದ ಕೂಡಿದ, ಇತರರಿಗೆ ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಕೇಡು ಮಾಡುವ, ಒಳ್ಳೆಯದಕ್ಕೆ ವಿರುದ್ಧ ಎಂದು ಭಾವಿಸುವ ಯೋಚನೆಗಳು, ಕೃತಿಗಳನ್ನು ಕೆಟ್ಟದ್ದು ಅನ್ನಬಹುದು.
     ಕೆಟ್ಟ ಸಂಗತಿಗಳು, ಕೃತಿಗಳನ್ನು ಮಾಡಲು ನಾವು ಕೆಲವು ಜನಪ್ರಿಯ ಮಾತುಗಳನ್ನು ಸಮರ್ಥನೆಗಾಗಿ ಬಳಸಿಕೊಳ್ಳುತ್ತೇವೆ. 'ಯುದ್ಧದಲ್ಲಿ, ಪ್ರೀತಿಯಲ್ಲಿ ಗೆಲ್ಲಲು ಏನು ಬೇಕಾದರೂ ಮಾಡಬಹುದು', 'ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು', 'ವ್ಯಾಪಾರಮ್ ದ್ರೋಹ ಚಿಂತನಮ್', ಇತ್ಯಾದಿಗಳ ಸಾಲಿಗೆ ಈಗ 'ಅಧಿಕಾರಕ್ಕಾಗಿ, ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಏನು ಮಾಡಿದರೂ ತಪ್ಪಿಲ್ಲ' ಎಂಬುದೂ ಸೇರ್ಪಡೆಯಾಗಿದೆ. ಪರಂಪರೆಯಿಂದ ಬಂದ ಕುರುಡು  ಸಂಪ್ರದಾಯದ ಹೆಸರಿನಲ್ಲೂ ಇನ್ನೊಬ್ಬರನ್ನು ನೋಯಿಸಲು ಹಿಂದೆ ಮುಂದೆ ನೋಡದ ಪ್ರಸಂಗಗಳೂ ಇವೆ. ಅಗತ್ಯ, ಅನಿವಾರ್ಯ ಎಂಬ ಹೆಸರಿನಲ್ಲಿ ಕೇಡು ಮಾಡುವುದು ಸರ್ವಥಾ ಸರಿಯಲ್ಲ. ಕೆಟ್ಟ ಮಾರ್ಗಗಳಿಂದ ಒಳ್ಳೆಯದಾಗಬಹುದು ಎಂಬ ನಿರೀಕ್ಷೆ ಮರುಭೂಮಿಯ ಮರೀಚಿಕೆಯಿದ್ದಂತೆ. ಜನಸೇವೆಗೆ ಅವಕಾಶ ಕೊಡಿ, ಮಣ್ಣಿನ ಋಣ ತೀರಿಸಲು ಅಧಿಕಾರ ಕೊಡಿ ಎಂದು ಕೇಳುವ ಸಮಾಜಸೇವಕರು(?) ಕೆಟ್ಟ ಮಾರ್ಗಗಳಿಂದ ಅಧಿಕಾರಕ್ಕೆ ಬಂದು ಜನರನ್ನು ಉದ್ಧಾರ ಮಾಡುವರೆಂಬುದು ಹಗಲುಕನಸೇ ಸರಿ. ಅವರುಗಳು ಅಧಿಕಾರದ ಆಸೆಗಾಗಿ, ಹಣ ಗಳಿಸುವುದಕ್ಕಾಗಿ ಮಾಡಬಾರದುದನ್ನು ಮಾಡದಿದ್ದರೆ ಅದಕ್ಕಿಂತ ದೊಡ್ಡ ಜನಸೇವೆ ಇರಲಾರದು. ಕೆಟ್ಟ ಜನರು ವಿಜೃಂಭಿಸಲು ಮುಖ್ಯ ಕಾರಣವೆಂದರೆ ಒಳ್ಳೆಯ ಜನರೆನಿಸಿಕೊಂಡವರು ಸುಮ್ಮನಿರುವುದು. ಇಂದಿನ ವಸ್ತುಸ್ಥಿತಿಯನ್ನೇ ನೋಡೋಣ. ಕಾಲು ಕೆರೆದು ಗಡಿಯೊಳಗೆ ನುಗ್ಗಿ ಸಮ್ಮ ಸೈನಿಕರನ್ನು ಕೊಲ್ಲುವ, ಗಡಿ ನಿಯಂತ್ರಣ ರೇಖೆಗೆ ಗೌರವವನ್ನೇ ಕೊಡದಿರುವ, ಉಗ್ರಗಾಮಿಗಳ ಮೂಲಕ ಹಿಂಸಾಚಾರಕ್ಕೆ, ವಿನಾಕಾರಣ ಮುಗ್ಧರ ಮಾರಣಹೋಮಕ್ಕೆ ಪ್ರೇರಕರಾಗಿರುವ ನೆರೆ ರಾಷ್ಟ್ರಕ್ಕೆ ನಮ್ಮ ನಾಯಕರ ಕೇವಲ ಮಾತಿನ ಉಗ್ರ ಪ್ರತಿಭಟನೆ ನಾಟುವುದೇ? ಏಟಿಗೆ ಪ್ರತಿಯೇಟು ಬೀಳುತ್ತದೆಯೆಂದು ಅವರಿಗೆ ಗೊತ್ತಾಗುವವರೆಗೆ ಈ ಪರಿಸ್ಥಿತಿಗೆ ಮುಕ್ತಿಯಿರಲಾರದು. ಜಗತ್ತಿನ ಅತ್ಯಂತ ಕೆಡುಕಿನ ಸಂಗತಿಯೆಂದರೆ ಒಳ್ಳೆಯವರು ಗೊಣಗಾಡುವುದನ್ನು ಬಿಟ್ಟು ಏನೂ ಮಾಡದಿರುವುದೇ ಆಗಿದೆ. ಈ ಜಗತ್ತು ಕ್ರೂರವಾಗಿ ತೋರುವುದರ ಮೂಲ ಕೆಟ್ಟ ಸಂಗತಿಗಳಲ್ಲ, ಆ ಕೆಟ್ಟ ಸಂಗತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ, ಏನೂ ಮಾಡದಿರುವುದೇ ಆಗಿದೆ. ಒಳ್ಳೆಯತನದೊಂದಿಗೆ ಬುದ್ಧಿವಂತಿಕೆ ಸಹ ಇರಬೇಕು, ಬುದ್ಧಿವಂತಿಕೆ ಇಲ್ಲದ ಒಳ್ಳೆಯತನ ಕೆಡುಕಿಗೆ ಸಹಕಾರಿ. ಒಳ್ಳೆಯದನ್ನು ಮಾಡಬೇಕೋ, ಕೆಟ್ಟದನ್ನು ಮಾಡಬೇಕೋ ಎಂದು ನಿಶ್ಚಯ ಮಾಡಲಾರದವರಿಂದಲೇ ಕೆಡುಕು ಜಾಸ್ತಿ. ಡಂಭಾಚಾರ, ನಿಜಮುಖವನ್ನು ಮರೆಮಾಚುವ ಮುಖವಾಡಗಳು ಎಲ್ಲಾ ಕೆಟ್ಟ ಸಂಗತಿಗಳ, ಕ್ರೂರತೆಯ ಮೂಲವಾಗಿದೆ. ಆದರೆ ಒಂದಂತೂ ಸತ್ಯ. ಶಸ್ತ್ರರಹಿತ ಸತ್ಯ ಮತ್ತು ಪ್ರೀತಿಗಳದೇ ಕೊನೆಯ ಮಾತು. ಸತ್ಯಕ್ಕೆ ತಾತ್ಕಾಲಿಕ ಸೋಲಾದರೂ ಸಹ ಕೊನೆಯಲ್ಲಿ ವಿಜೃಂಭಿತ ಕೆಡುಕಿಗಿಂತ ಅದೇ ಬಲಶಾಲಿಯಾಗಿ ಹೊರಹೊಮ್ಮುವುದು! 
     ಕೆಟ್ಟದ್ದನ್ನು ಏಕೆ ಮಾಡುತ್ತಾರೆ? ತಮಾಷೆಯೆಂದರೆ, ಸಂತೋಷ, ಲಾಭ ಸಿಗುತ್ತದೆಯೆಂಬ ಭ್ರಮೆಯಿಂದ ಇನ್ನೊಬ್ಬರಿಗೆ ಕೇಡು ಮಾಡುತ್ತಾರೆಯೇ ಹೊರತು, ಆ ಭ್ರಮೆಯಿರದಿದ್ದಲ್ಲಿ ಯಾರೂ ಆ ತಪ್ಪು ಮಾಡುತ್ತಿರಲಿಲ್ಲ. ಪೌರಾಣಿಕ ಕಥೆಯಲ್ಲಿ ಕೇಳಿರಬಹುದು, ಹಿಂದೊಮ್ಮೆ ದೇವತೆಗಳು ಒಂದು ಕಡೆ, ಅಸುರರು ಒಂದು ಕಡೆ ಸೇರಿ ಸಮುದ್ರ ಮಥನ ಮಾಡಿದರು, ಆ ಮಥನದಿಂದ ಅನೇಕ ಒಳ್ಳೆಯ ಸಂಗತಿಗಳು, ವಜ್ರ, ವೈಢೂರ್ಯ, ಮುತ್ತು ರತ್ನಗಳು, ಲಕ್ಷ್ಮಿ, ಅಮೃತ, ಇತ್ಯಾದಿಗಳಂತೆ, ಹಾಲಾಹಲ ವಿಷ, ಕೆಡುಕು ತರುವ ವಸ್ತುಗಳೂ ಹೊರಬಂದವು, ಅಮೃತವನ್ನು ಪಡೆದು ಚಿರಂಜೀವಿಗಳಾಗಲು ಇಬ್ಬರೂ ಹೊಡೆದಾಡಿದರು, ವಿಷ್ಣು ಮೋಹಿನಿ ಅವತಾರ ತಾಳಿ, ಎಲ್ಲರನ್ನೂ ಮರುಳುಗೊಳಿಸಿ ಅಮೃತ ದೇವತೆಗಳಿಗೇ ದೊರೆಯುವಂತೆ ಮಾಡಿದ, ಇತ್ಯಾದಿ, ಇತ್ಯಾದಿ. ಈ ರೂಪಕ ಸುಂದರವಾಗಿದೆ. ನಿಜವಾಗಿ ಸಮುದ್ರವೆಂದರೆ ಮಾನವನ ಮನಸ್ಸೇ. ಅದರಲ್ಲಿ ಒಳ್ಳೆಯದರ ಜೊತೆಗೆ ಕೆಟ್ಟ ಸಂಗತಿಗಳೂ ಇವೆ. ಒಳ್ಳೆಯದು, ಕೆಟ್ಟದರ ನಡುವಣ ಸಂಘರ್ಷವೇ ಮಥನ. ಆ ಮಥನದಲ್ಲಿ ನಾವು ಏನನ್ನು ಆರಿಸಿಕೊಳ್ಳುತ್ತೇವೆ ಎಂಬುದರಿಂದ ನಾವು ಒಳ್ಳೆಯವರೋ, ಕೆಟ್ಟವರೋ ಆಗುವೆವು. ನಾವು ಏನು ಆರಿಸಿಕೊಳ್ಳುವೆವು ಎಂಬುದನ್ನು ನಮ್ಮನ್ನು ಆವರಿಸಿರುವ ಮಾಯೆ/ಭ್ರಮೆ ನಿರ್ಧರಿಸುತ್ತದೆ. 
     ನಮ್ಮೊಳಗೇ ರಾಮನೂ ಇದ್ದಾನೆ, ರಾವಣನೂ ಇದ್ದಾನೆ. ರಾಮನಾಗಬೇಕೋ, ರಾವಣನಾಗಬೇಕೋ ಎಂಬ ದ್ವಂದ್ವದಲ್ಲಿ ಇಂದಿನ ಪ್ರಪಂಚದಲ್ಲಿ ರಾಮನಂತಿದ್ದರೆ ಬದುಕಿಗೆ ಮಣ್ಣೇ ಸರಿ ಎಂದು ಮಾಯೆ ಉಪದೇಶಿಸುತ್ತದೆ. ಸಾವಿಲ್ಲದ ಜೀವಜಗತ್ತು ಇದೆಯೇ? ಹಾಗಿರುವಾಗ ಇನ್ನೊಬ್ಬರಿಗೆ ಕೇಡು ಬಗೆದು ನಾನು ಉದ್ಧಾರವಾಗಬೇಕೆಂಬ ಬಯಕೆ ಎಷ್ಟು ಸರಿ? ಪ್ರತಿಯಾಗಿ ನನಗೂ ಕೇಡು ಬಗೆಯದಿರುವರೇ? ಸಾವು ಅಂತಿಮ ಸತ್ಯವೆಂದಾದಾಗ ಆತ್ಮವಂಚನೆ ಮಾಡಿಕೊಂಡು ಹಲವಾರು ಸಲ ಸಾಯುವ ಬದಲು, ಕಷ್ಟವಾದರೂ ಒಳ್ಳೆಯ ದಾರಿಯಲ್ಲಿ ನಡೆದು ಒಂದು ಸಲ ಸಾಯುವುದು ಒಳ್ಳೆಯದು ಎಂದು ಮಾಯೆಯ ಮುಸುಕು ಸರಿಸಿದವನು ಯೋಚಿಸುತ್ತಾನೆ. ಜಗತ್ತಿನಲ್ಲಿ ಮರಗಳನ್ನು ಅದು ಕೊಡುವ ಫಲಗಳಿಂದ ಗುರುತಿಸುವಂತೆ ಜನರನ್ನು ಅವರು ಮಾಡುವ ಕಾರ್ಯಗಳಿಂದ ಗುರುತಿಸುತ್ತಾರೆ. ಗಮನಿಸಿ, ನಮ್ಮ ಹಿಂದಿನ ತಲೆಮಾರುಗಳ ಹಿರಿಯರ ನೆನಪು ನಮಗಿರುವುದಿಲ್ಲ, ಆದರೆ ವಿವೇಕಾನಂದರಂತಹವರ ಹೆಸರುಗಳು ಜನಮಾನಸದಲ್ಲಿ  ಅಜರಾಮರವಾಗಿರುತ್ತದೆ. ಒಳ್ಳೆಯ ಮತ್ತು ಶ್ರೇಷ್ಠ ಕಾರ್ಯಗಳು ಇದ್ದಕ್ಕಿದ್ದಂತೆ ಆಗುವುದಿಲ್ಲ. ಮೊದಲು ಮನುಷ್ಯನ ಮನಸ್ಸಿನಲ್ಲಿ ಅದರ ಮೊಳಕೆ ಚಿಗುರುತ್ತದೆ, ಅವನ ಸಂಕಲ್ಪದಿಂದ ಬೆಳೆಯುತ್ತದೆ, ಧೃಢತೆಯಿಂದ ಮುಂದುವರೆದಾಗ ಅಸಾಧ್ಯವೆನಿಸಿದ್ದು ಸಾಧ್ಯವಾಗುತ್ತದೆ. ಜನರನ್ನು ಅವರು ಮಾಡುವ ಕೆಲಸಗಳಿಂದ ಗುರುತಿಸುತ್ತಾರೆಯೇ ಹೊರತು ಅವನಲ್ಲಿ ಇರುವ ಸಂಪತ್ತು, ಜಾತಿ, ಅಧಿಕಾರ, ಇತ್ಯಾದಿಗಳಿಂದಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಮಾಯೆಯ ಮುಸುಕು ಸರಿಸಲು ಸಾಧ್ಯವಾದೀತು. 
ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ
ಬುದ್ಧನೂ ಬೇರಲ್ಲ ಹಿಟ್ಲರನು ಬೇರಿಲ್ಲ|
ಕೆಡುಕದು ಬೇರಲ್ಲ ಒಳಿತದು ಬೇರಿಲ್ಲ
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ||
     ಅದೆಲ್ಲಾ ಸರಿ, ಹೆಚ್ಚಿನವರು ಕೆಟ್ಟವರಾಗಿರುವಾಗ ನನ್ನೊಬ್ಬನ ಒಳ್ಳೆಯತನದಿಂದ ಏನು ಪ್ರಯೋಜನ? ಅದರಿಂದ ನನಗೇ ಕಷ್ಟ. 'ಯಾರಂತೆ ಅಂದರೆ ಊರಂತೆ' ಇರುವುದು ಜಾಣರ ಲಕ್ಷಣ ಎಂದು ಸಾಮಾನ್ಯನಾದವನು ಯೋಚಿಸುವುದು ಸಹಜ. 'ಕೆಟ್ಟು ಹೋಗಿರುವ' ಕಾಲ, ಸಂಸ್ಕೃತಿ, ಸಭ್ಯತೆಗಳನ್ನು ಸರಿಯಾಗಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಸರಿಪಡಿಸುವವರು ಯಾರು? ಬೇರೆಯವರು ಮಾಡಲಿ, ನಾವು ಬೆಂಬಲಿಸೋಣ; ಅಣ್ಣಾ ಹಜಾರೆ ಹೋರಾಟ ಮಾಡಲಿ, ನಾವು ಹಿಂದೆ ನಿಂತು ಜೈ ಅನ್ನೋಣ ಅನ್ನುವವರ ಸಂಖ್ಯೆಯೇ ಜಾಸ್ತಿ. ಇಂತಹ ಮನೋಭಾವವಿದ್ದಾಗ ಹೇಗೆ ಆಗುತ್ತದೆ ಅನ್ನುವುದಕ್ಕೆ ಅಣ್ಣಾಹಜಾರೆಯವರ ಹೋರಾಟದ ಕಾವು ತಣ್ಣಗಾಗಿರುವುದೇ ಸಾಕ್ಷಿ. ಪಕ್ಕದ ಮನೆಯ ಹುಡುಗ ಭಗತ್ ಸಿಂಗ್ ಆಗಲಿ, ನಮ್ಮ ಮನೆಯ ಹುಡುಗ ಮಾತ್ರ ಆಗುವುದು ಬೇಡ ಎಂದು ಭಾವಿಸುವವರು ಇರುವವರೆಗೆ, ಕುಟುಂಬದ ಸದಸ್ಯರಲ್ಲೇ ಒಬ್ಬರು ಸರಿಹಾದಿಯಲ್ಲಿ ನಡೆಯಲು ನಿರ್ಧರಿಸಿದರೆ ಅವನನ್ನು ಬಗ್ಗಿಸುವ, ಹಂಗಿಸುವ, ಕುಗ್ಗಿಸುವ ಕುಟುಂಬದ ಇತರ ಸದಸ್ಯರುಗಳು ಇರುವವರೆಗೆ 'ಕಾಲ ಕೆಟ್ಟೇ ಇರುತ್ತದೆ'. ಜಗತ್ತಿನಲ್ಲಿ ಏನಾದರೂ ಬದಲಾವಣೆ ಬಯಸುವುದಾದರೆ ಆ ಬದಲಾವಣೆಯನ್ನು ಮೊದಲು ನಾವು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಹೆಚ್ಚಿನವರು ಈರೀತಿ ಯೋಚಿಸಿ ಪ್ರವೃತ್ತರಾದರೆ ಬದಲಾವಣೆ ಖಂಡಿತಾ ಆಗುತ್ತದೆ. ಆದರೆ ನಮ್ಮ ಒಳಗೇ ಇರುವ 'ಬೆಕ್ಕಿಗೆ' ಗಂಟೆ ಕಟ್ಟುವವರು ಯಾರು? ನಾವೇ ಕಟ್ಟಬೇಕಲ್ಲವೇ?  
ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ಮೊದಲಾಗು ನೀನು |
ಬದಲಾಗು ನೀ ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
     "ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ ಧರ್ಮ ಸಂಸ್ಥಾನಾಪನಾರ್ಥಾಯ ಸಂಭವಾಮಿ ಯುಗೇ ಯುಗೇ" ಎಂಬುದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಉವಾಚ. ಈಗ ಅನ್ಯಾಯ ಮಿತಿ ಮೀರಿದೆ. ದೌರ್ಜನ್ಯಗಳು ಹೆಚ್ಚಿವೆ, ಭ್ರಷ್ಟಾಚಾರಕ್ಕೆ ಕಡಿವಾಣವೇ ಇಲ್ಲ, ಬಡವರ ಗೋಳು ಕೇಳುವವರೇ ದಿಕ್ಕಿಲ್ಲ. ಈಗ ಉದ್ಧಾರ ಮಾಡಲು ಪರಮಾತ್ಮ ಬಾರದಿದ್ದರೆ ಇನ್ನು ಯಾವಾಗ ಬರಬೇಕು ಅನ್ನುವ ಅಗತ್ಯವೇ ಇಲ್ಲ. ಪರಮಾತ್ಮ ಬರುತ್ತಾನೆ, ಖಂಡಿತಾ ಬರುತ್ತಾನೆ. ಆದರೆ, ಆ ಪರಮಾತ್ಮ ಎಲ್ಲೋ ಗಂಗಾತಟದಲ್ಲೋ, ಶ್ರೀರಂಗಪಟ್ಟಣದ ಹತ್ತಿರದ ಹಳ್ಳಿಯಲ್ಲೋ, ಯಾರೋ ಕಟ್ಟಾ ಸಂಪ್ರದಾಯಸ್ಥರ ಮನೆಯಲ್ಲೋ, ಮೆಕ್ಕಾ ಮದೀನಾದಲ್ಲೋ, ವ್ಯಾಟಿಕನ್ ದೇಶದಲ್ಲೋ ಹುಟ್ಟಿ ಬರುವುದಿಲ್ಲ. ಅವನಾಗಲೇ ಇದ್ದಾನೆ. ಅನಾದಿ, ಅನಂತನಾದ ಅವನು ಹೊಸದಾಗಿ ಹುಟ್ಟುವ ಅಗತ್ಯವೇ ಇಲ್ಲ. ಅವನು ನಮ್ಮ ನಿಮ್ಮೆಲ್ಲರ ಹೃದಯದಲ್ಲೇ ಇದ್ದಾನೆ. ಅವನನ್ನು ಅಲ್ಲೇ ಬಂಧಿಸಿಡದೆ ಹೊರಬಿಡಿ, ಆಗ ನೋಡಿ, ಅವನು ಮಾಡುವ ಪವಾಡವನ್ನು! ಜಗತ್ತಿನಲ್ಲಿ ಒಳ್ಳೆಯದು ಎಂದು ನಾವು ಭಾವಿಸುವ ಸಂಗತಿಗಳೆಲ್ಲವನ್ನೂ ಮಾಡಿರುವುದು, ಮಾಡುತ್ತಿರುವುದು ಮತ್ತು ಮಾಡುವುದು ಆ 'ನಮ್ಮೊಳಗಿರುವ' ಪರಮಾತ್ಮನೇ. ಆ ಕರುಣಾಳು ದೇವನಿಗೆ ನಮೋ ನಮಃ. ಯಜುರ್ವೇದದ ಈ ಮಂತ್ರದೊಂದಿಗೆ ಮುಕ್ತಾಯಗೊಳಿಸುವೆ: 
ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಃ | 
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಮಗ್ನಿನಾ || (ಯಜು. ೨೦.೨೫). 
     ಎಲ್ಲಿ ಬ್ರಾಹ್ಮಿ ಶಕ್ತಿ (ಜಾತಿಯಲ್ಲ) ಮತ್ತು ಕ್ಷಾತ್ರ ಶಕ್ತಿ (ಜಾತಿಯಲ್ಲ) ಒಂದಕ್ಕೊಂದು ಆಶ್ರಯವಾಗಿ ಒಟ್ಟಿಗೆ ಪ್ರವೃತ್ತವಾಗುತ್ತವೋ ಮತ್ತು ಎಲ್ಲಿ ಪವಿತ್ರ, ಚಾರಿತ್ರ್ಯವಂತರಾದ ವಿದ್ವಜ್ಜನರು ರಾಷ್ಟ್ರನಾಯಕರೊಡನೆ ಸಹಕರಿಸಿ ನಡೆಯುತ್ತಾರೋ ಅಂತಹ ಲೋಕವನ್ನು ಪುಣ್ಯಶಾಲಿ ಎನ್ನುತ್ತೇನೆ ಎಂಬುದು ಇದರ ಅರ್ಥ. ಪುಣ್ಯಶಾಲಿ ದೇಶದ ಪುಣ್ಯವಂತ ಪ್ರಜೆಗಳು ನಾವಾಗಬೇಕಾದರೆ ನಾವು ಮೊದಲು ಪುಣ್ಯವಂತರು,  ಚಾರಿತ್ರ್ಯವಂತರಾಗಬೇಕಲ್ಲವೇ?
-ಕ.ವೆಂ.ನಾಗರಾಜ್,
**************
ಚಿತ್ರ ಕೃಪೆ: http://www.vectorstock.com/royalty-free-vector/good-and-evil-vector-642668
ದಿನಾಂಕ 20.10.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಗುರುವಾರ, ನವೆಂಬರ್ 27, 2014

ಸಾಧನೆಯ ಹಾದಿ


ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸದಿಹುದೆ ಮೂಢ || 
     ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು, ಸರಿ-ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಾಳುತ್ತಾರೆ. ಆದರೆ ಹೀಗೆಯೇ ಜೀವಿಸಬೇಕೆಂದುಕೊಂಡವರಿಗೆ ಅಡ್ಡಿ, ಅಡಚಣೆಗಳು, ಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಆದರೆ ಅವರು ಅವೆಲ್ಲವನ್ನೂ ಎದುರಿಸಿ, ಅಗತ್ಯ ಬಿದ್ದರೆ ಪ್ರಾಣವನ್ನೂ ಪಣಕ್ಕಿಟ್ಟು ತಾವಂದುಕೊಂಡಂತೆಯೇ ಬದುಕುತ್ತಾರೆ. ಹಾಗೆ ಯಶಸ್ವಿಯಾಗಿ ಬದುಕುವವರನ್ನು ಸಾಧಕರೆನ್ನುತ್ತಾರೆ. ಅಂತಹ ಸಾಧಕರನ್ನು ಜಗತ್ತು ಗೌರವಿಸುತ್ತದೆ. ಹೇಗೋ ಬದುಕುವವರೂ ಸಹ  ಸಾಧಕರನ್ನು ಮೆಚ್ಚುಗೆಯಿಂದ, ಗೌರವದಿಂದ ಕಾಣುತ್ತಾರೆ. ಸಾಧಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದೂ ಅಪರೂಪವಲ್ಲ. ಆದರೆ, ಸಾಧಕರ ಸಾಧನೆಯ ಹಿಂದಿನ ದಿವ್ಯ ಸಂದೇಶವನ್ನು ಎಲ್ಲರೂ ಮರೆತುಬಿಡುತ್ತೇವೆ. ಅದೆಂದರೆ, 'ಅಂತಹ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು' ಎಂಬುದೇ! ಸಾಧನೆ ಮಾಡಲು ಹಿಂಜರಿಯುವ ಸಾಮಾನ್ಯರಿಗೆ, 'ಅವರು ದೇವಾಂಶ ಸಂಭೂತರು, ಮಹಾಮಹಿಮರು. ಅವರೆಲ್ಲಿ, ನಾವೆಲ್ಲಿ', 'ಉಂಟೇ, ಉಂಟೇ, ಏನು ಹೇಳುತ್ತಿದ್ದೀರಿ? ಅವರೊಡನೆ ನಮ್ಮನ್ನು ಹೋಲಿಸುವುದೇ!' ಎಂಬಂತಹ ಕುಂಟು ನೆಪಗಳೂ ನೆರವಿಗೆ ಬರುತ್ತದೆ. ಆದರೆ ನಿಜವಾದ ಕಾರಣವೆಂದರೆ, ಅವರಿಗೆ ಕಷ್ಟಪಡುವುದು ಬೇಕಿರುವುದಿಲ್ಲ ಮತ್ತು ಮೌಲ್ಯಗಳು, ನೀತಿ-ನಿಯಮಗಳು ಎಂದುಕೊಂಡು ಬೇಕಿಲ್ಲದ ತೊಂದರೆಗಳನ್ನು ಮೈಮೇಲೆ ಏಕೆ ಎಳೆದುಕೊಳ್ಳಬೇಕು ಎಂಬ ಮನೋಭಾವ. ಹೇಗೋ ಜೀವಿಸುವವರಿಗೆ ಸ್ವಾರ್ಥ ಪ್ರಮುಖವಾಗಿರುತ್ತದೆ. ಅದಕ್ಕಾಗಿ ಸಮಾಜದ ಹಿತ ಅವರಿಗೆ ಗೌಣವೆನಿಸುತ್ತದೆ. ಈ ಮನೋಭಾವವೇ ಸಮಾಜ ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮೂಲವೆಂಬುದು ಆಳವಾಗಿ ಚಿಂತಿಸಿದರೆ ಅರ್ಥವಾದೀತು. ಒಂದಂತೂ ಸತ್ಯ, ನೀತಿ-ನಿಯಮ, ಮೌಲ್ಯಗಳಿಗೆ ಬೆಲೆ ಕೊಡುವವರ, ಅದಕ್ಕಾಗಿ ಸ್ವಂತದ ಹಿತ ತ್ಯಾಗ ಮಾಡುವ ಸಾಧಕರಿಂದ ಸಮಾಜ ಲಾಭ ಪಡೆಯುತ್ತದೆ. ಈ ಕಾರಣಕ್ಕಾಗಿಯೇ ಸಮಾಜ ಸಾಧಕರನ್ನು ಗೌರವದಿಂದ ಕಾಣುತ್ತದೆ, ಕಾಣಲೇಬೇಕು.
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||
     ಸಾಧಕರು ಇದ್ದಕ್ಕಿದ್ದಂತೆ ಮೂಡಿಬರುವುದಿಲ್ಲ. ಅವಿರತ ಶ್ರಮ ಅವರ ಸಾಧನೆಯ ಬೆನ್ನಿಗಿರುತ್ತದೆ. 'ಸರ್ವಜ್ಞನೆಂಬುವನು ಗರ್ವದಿಂದಾದವನೆ, ಹಲವಂ ಬಲ್ಲವರಿಂದ ಕಲಿತು . . ವಿದ್ಯೆಯ ಪರ್ವತವೆ ಆದ ಸರ್ವಜ್ಞ' ಎಂಬ ತ್ರಿಪದಿ ಸರ್ವಜ್ಞನ ಸಾಧನೆಯ ಹಾದಿಯ ಕಿರುನೋಟ ಬೀರುತ್ತದೆ. ಸಾಧಕರ ಜೀವನವನ್ನು ಅವಲೋಕಿಸಿದರೆ ಕಂಡು ಬರುವ ವಿಚಾರಗಳು ಸಾಧನೆಯ ಹಾದಿಯಲ್ಲಿರುವವರ ಕಣ್ತೆರೆಸುವಂತಹವು. ತನ್ನನ್ನು ತಾನು ಅರಿತುಕೊಳ್ಳುವುದು ಸಾಧನಾಪಥದ ಮೊದಲ ಹೆಜ್ಜೆಯಾದರೆ, ಸತತ ಪರಿಶ್ರಮ, ಬರುವ ಕಷ್ಟಗಳು, ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿ, ಯಾವುದೇ ಸಂದರ್ಭಗಳಲ್ಲಿ ನಂಬಿದ ತತ್ವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಸಾಮಾನ್ಯವಾಗಿ ಸಾಧಕರಲ್ಲಿ ಕಂಡು ಬರುವ ಗುಣಗಳು. ಸೋಲುಗಳು, ಎಡರು-ತೊಡರುಗಳು ಅವರ ಧೃತಿಗೆಡಿಸುವ ಬದಲಾಗಿ ಜಗತ್ತನ್ನು ಅರಿಯುವ ಅವರ ಹಸಿವನ್ನು, ಪಟ್ಟು ಬಿಡದೆ ಮತ್ತೆ ಮುಂದುವರೆಯುವ ಛಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸಹಜವೆಂಬಂತೆ ಸಾಧಕ ದುಷ್ಕರ್ಮಗಳಿಂದ ದೂರವಿದ್ದು, ಸತ್ಕರ್ಮಗಳನ್ನು ಮಾಡುತ್ತಾ ಹೋಗುತ್ತಾನೆ. 
ಮೊಂಡುವಾದಗಳಿಲ್ಲ ಗರ್ವ ಮೊದಲೇ ಇಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ |
ಸೋಲು ಗೆಲವುಗಳ ಸಮದಿ ಕಾಣಲುಬಲ್ಲ
ಧೀರನವನೆ ನಿಜನಾಯಕನು ಮೂಢ ||
     'ಅಲ್ಪ ವಿದ್ಯಾವಂತ ಮಹಾಗರ್ವಿ, ಮಹಾವಿದ್ಯಾವಂತ ಘನಪಂಡಿತ' ಎಂಬ ಲೋಕೋಕ್ತಿಗೆ ತಕ್ಕಂತೆ ಸಾಧಕನಿಗೆ ತಾನೇ ದೊಡ್ಡವನು, ಎಲ್ಲವನ್ನೂ ತಿಳಿದವನು ಎಂಬ ದರ್ಪ,  ಅಹಂಕಾರವಿರುವುದಿಲ್ಲ. ತನ್ನ ಮಾತನ್ನು ಇತರರು ಕೇಳದಿದ್ದರೆ, ಅವಗಣಿಸಿದರೆ ಆತನಿಗೆ ಸಿಟ್ಟು ಬರುವುದಿಲ್ಲ. ಮೆಚ್ಚಿ ಹೊಗಳಿದರೂ ಅವನಿಗೆ ಲೆಕ್ಕಕ್ಕಿಲ್ಲ. ಇತರರು ಏನೆಂದುಕೊಂಡಾರೋ ಎಂಬ ಅಳುಕು, ಅಂಜಿಕೆ, ಲಜ್ಜೆಗಳಿಲ್ಲದೆ ನಿರ್ಲಿಪ್ತತೆಯಿಂದ ತನ್ನ ಕಾರ್ಯ ತಾನು ಮಾಡುತ್ತಿರುತ್ತಾನೆ. ಅವನಿಗೆ ಬಿಸಿಲು, ಮಳೆ, ಚಳಿ, ಗಾಳಿ, ಇತ್ಯಾದಿ ವೈಪರೀತ್ಯಗಳು ಅಡ್ಡಿಯೆನಿಸುವುದಿಲ್ಲ. ಕಾರ್ಯಕ್ಕೆ ಬೇಕಾದ ಅವಶ್ಯಕತೆಗಳು ಸಮೃದ್ಧಿಯಾಗಿರಲಿ, ಕೊರತೆಯಿರಲಿ ಬಾಧಕವೆನಿಸದು. ಒಬ್ಬ ಯಶಸ್ವಿ ವ್ಯಕ್ತಿ ತನ್ನ ಸಾಮರ್ಥ್ಯವನ್ನು ಅರಿತು ಕೆಲಸವನ್ನು ಕೈಗೆತ್ತಿಕೊಳ್ಳುತ್ತಾನೆ. ಅದನ್ನು ವ್ಯವಸ್ಥಿತವಾಗಿ ಮಾಡುತ್ತಾನೆ. ಹಾಗೆ ಮಾಡುವಾಗ ಯಾವುದೊಂದನ್ನೂ ಸಣ್ಣದೆಂಬ ಭಾವನೆಯಿಂದ ಕಡೆಗಣಿಸುವುದಿಲ್ಲ. ಮಾಡಬಲ್ಲೆನೆಂಬ ಧೃಢ ವಿಶ್ವಾಸವಿದ್ದು, ಹಿಡಿದ ಕೆಲಸವನ್ನು ಮಧ್ಯೆ ನಿಲ್ಲಿಸುವುದಿಲ್ಲ. ವ್ಯರ್ಥವಾಗಿ ಕಾಲಹರಣ ಮಾಡುವುದಿಲ್ಲ. ಚಂಚಲತೆಯಿಂದ ದೂರವಿದ್ದು, ಕೆಲಸವನ್ನು ವಿಚಲಿತಗೊಳಿಸುವ ಸಂಗತಿಗಳಿಂದ ದೂರವಿದ್ದುಬಿಡುತ್ತಾನೆ. ಸಿಗಲು ಸಾಧ್ಯವಿಲ್ಲವೆಂಬುದನ್ನು ಬಯಸದೆ, ಕಳೆದುಹೋದದ್ದರ ಬಗ್ಗೆ ಚಿಂತಿಸದೆ, ಆತಂಕದ ಸ್ಥಿತಿಯಲ್ಲೂ ಧೃತಿ ಕಳೆದುಕೊಳ್ಳದಿರುವವನು ನಾಯಕನೆನಿಸಿಕೊಳ್ಳುತ್ತಾನೆ.
ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ  ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ || 
     ಸಾಮಾನ್ಯರಲ್ಲಿ ಕಾಣುವ ಮತ್ಸರ ಸಾಧಕರಿಂದ ದೂರವಿರುತ್ತದೆ. ಈ ಮತ್ಸರ ಸಾಮಾನ್ಯರಿರಲಿ, ಅಪ್ರತಿಮರೆನಿಸಿಕೊಂಡವರನ್ನೂ ಕಾಡುತ್ತದೆ. ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ, ಸಾಹಿತಿಗಳಲ್ಲಿ, ವೈಚಾರಿಕವಾಗಿ ಪ್ರಬುದ್ಧರೆನಿಸಿದವರಲ್ಲಿ, ಅಷ್ಟೇ ಏಕೆ ಜೀವನದ ಎಲ್ಲಾ ರಂಗಗಳಲ್ಲಿ ತಾನು ಎಲ್ಲರಿಗಿಂತ ಶ್ರೇಷ್ಠರೆನಿಸಬೇಕು, ತನಗಿಂತ ಹೆಚ್ಚು ಗೌರವ ಇತರರಿಗೆ ಸಿಗಬಾರದು ಎನ್ನುವ ಹಪಾಹಪಿತನ ಒಂದಲ್ಲಾ ಒಂದು ಹಂತದಲ್ಲಿ ತನ್ನ ಅವತಾರವನ್ನು ತೋರಿಸಿಬಿಡುತ್ತದೆ. ಕನ್ನಡದ ಉನ್ನತ ಪ್ರಶಸ್ತಿಯನ್ನು ಪಡೆದವರೊಬ್ಬರು ತಾನು ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ತವಕದಿಂದ ವೈಚಾರಿಕ ಪ್ರಜ್ಞೆಯನ್ನೇ ಕಳೆದುಕೊಂಡು ಅಪದ್ಧವಾಗಿ ಮಾತನಾಡುವುದನ್ನು ಕಂಡಿದ್ದೇವೆ. ಆದರೆ ನಿಜವಾದ ಸಾಧಕ ನಾನತ್ವದಿಂದ ದೂರವೇ ಉಳಿದಿರುತ್ತಾನೆ. ಶ್ರೇಷ್ಠ ವಿಚಾರವನ್ನು ಚೆನ್ನಾಗಿ ಮಂಡಿಸುವವರನ್ನು, ಶ್ರೇಯಸ್ಕರವಾದ ಕಾರ್ಯವನ್ನು ಯಾರೇ ಮಾಡಿದರೂ ಕಂಡು ಸಂತೋಷಿಸಿ ಅವರ ಬೆನ್ನು ತಟ್ಟುತ್ತಾನೆಯೇ ಹೊರತು ಕರುಬುವುದಿಲ್ಲ. ಸಾಧಕರಿಗೆ ಸಿಗುವ ಜನಮನ್ನಣೆಯನ್ನು ಕಂಡು ಕರುಬುವವರು ಸಾಧಕರಿಗೆ ಕೇಡು ಬಗೆಯಲು ಪ್ರಯತ್ನಿಸಿದರೂ, ಅದನ್ನು ನಿರ್ಲಕ್ಷಿಸುವ ಅಸಾಮಾನ್ಯ ಗುಣ ಸಾಧಕರಿಗೆ ಮಾತ್ರ ಒಲಿದಿರುತ್ತದೆ.
ನುಡಿದಂತೆ ನಡೆದು ಮಾದರಿಯು ತಾನಾಗೆ
ಪರರ ಮನವರಿತು ನಡೆವ ಕರುಣೆಯಿರಲಾಗೆ |
ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು 
ನಾಯಕನು ಉದಯಿಸುವ ಕಾಣು ಮೂಢ ||
     ಈ ಘಟನೆಯ ಬಗ್ಗೆ ನೀವೂ ಕೇಳಿರಬಹುದು ಅಥವ ಓದಿರಬಹುದು. ಒಮ್ಮೆ ರಾಮಕೃಷ್ಣ ಪರಮಹಂಸರ ಹತ್ತಿರ ಒಬ್ಬ ತಾಯಿ ತನ್ನ ಮಗನನ್ನು ಕರೆದುಕೊಂಡು ಬಂದು, "ಪೂಜ್ಯರೇ, ನನ್ನ ಮಗನಿಗೆ ಜಿಲೇಬಿ ತಿನ್ನುವ ಚಪಲ ಜಾಸ್ತಿ. ಎಷ್ಟು ಕೊಟ್ಟರೂ ತಿನ್ನುತ್ತಾನೆ, ಮತ್ತೆ ಮತ್ತೆ ಕೇಳುತ್ತಾನೆ. ಅಷ್ಟೊಂದು ತಿಂದರೆ ಅವನ ಆರೋಗ್ಯ ಏನಾಗಬೇಕು? ನೀವು ಸ್ವಲ್ಪ ಬುದ್ಧಿ ಹೇಳಿ ಪೂಜ್ಯರೇ" ಎಂದು ಕೇಳಿಕೊಳ್ಳುತ್ತಾಳೆ. ರಾಮಕೃಷ್ಣರು ಆ ತಾಯಿಗೆ ಒಂದು ವಾರ ಬಿಟ್ಟು ಬರಲು ಹೇಳುತ್ತಾರೆ. ಒಂದು ವಾರದ ನಂತರದಲ್ಲಿ ಮತ್ತೆ ಕೆಲವು ದಿನಗಳು ಬಿಟ್ಟು ಬರಲು ಹೇಳುತ್ತಾರೆ. ಇದು ನಾಲ್ಕು-ಐದು ಸಲ ಮುಂದುವರೆಯುತ್ತದೆ. ಕೊನೆಗೆ ಒಂದು ದಿನ ರಾಮಕೃಷ್ಣರು ಮಗುವನ್ನು ಹತ್ತಿರ ಕರೆದು ಪ್ರೀತಿಯಿಂದ ತಲೆ ನೇವರಿಸುತ್ತಾ, "ಮಗು ತುಂಬಾ ಜಿಲೇಬಿ ತಿನ್ನುವುದು ಒಳ್ಳೆಯದಲ್ಲ. ಅಪರೂಪಕ್ಕೆ ಸ್ವಲ್ಪ ತಿನ್ನು. ಜಾಸ್ತಿ ತಿನ್ನಬೇಡ" ಎನ್ನುತ್ತಾರೆ. ಮಗುವಿಗೆ ಅವರು ಹೇಳಿದ ರೀತಿ ಒಪ್ಪಿಗೆಯಾಗುತ್ತದೆ. ಅದರಂತೆ ಪಾಲಿಸುತ್ತದೆ ಕೂಡಾ! ಆ ತಾಯಿಗೆ ಆಶ್ಚರ್ಯವಾಗುತ್ತದೆ. ಈ ಮಾತನ್ನು ಅವರು ಮೊದಲ ದಿನವೇ ಹೇಳಬಹುದಿತ್ತಲ್ಲಾ ಎಂದು ಮನಸ್ಸಿನಲ್ಲಿ ಅಂದುಕೊಂಡರೂ ಆಗ  ವಿಚಾರಿಸದೆ ಇನ್ನೊಂದು ದಿನ ತಾನೊಬ್ಬಳೇ ಬಂದಾಗ ಈ ಪ್ರಶ್ನೆ ಕೇಳಿಯೇಬಿಡುತ್ತಾಳೆ. ರಾಮಕೃಷ್ಣರು ನಗುತ್ತಾ ಹೇಳುತ್ತಾರೆ, "ತಾಯಿ, ನನಗೂ ಜಿಲೇಬಿ ಅಂದರೆ ಬಹಳ ಇಷ್ಟ. ಅದನ್ನು ತಿನ್ನಬೇಕೆಂಬ ಚಪಲದಿಂದ ಬಿಡಿಸಿಕೊಳ್ಳಲು ನನಗೆ ಅಷ್ಟು ಸಮಯ ಬೇಕಾಯಿತು." ದೊಡ್ಡವರ ರೀತಿಯೇ ಹಾಗೆ! ಇನ್ನೊಬ್ಬರಿಗೆ ಹೇಳುವ ಮುನ್ನ ಅದನ್ನು ತಾವು ಅನುಸರಿಸಿರಬೇಕು. ಅವರ ಅಂತರಂಗ ಮತ್ತು ಬಹಿರಂಗಗಳಲ್ಲಿ ಭಿನ್ನತೆ ಇಲ್ಲ. ಹೇಳುವುದೊಂದು ಮಾಡುವುದು ಮತ್ತೊಂದು ಅನ್ನುವುದು ಇಲ್ಲವೇ ಇಲ್ಲ. ಅಂತಹವರ ಮಾತಿನಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿ ಹೊರಗಿನದಲ್ಲ. ಒಳಗಿನಿಂದ ಬಂದುದು. ಆ ಮಾತುಗಳನ್ನು ಕೇಳಿದವರು ಮಂತ್ರಮುಗ್ಧರಂತೆ ಅನುಸರಿಸುವುದಕ್ಕೆ ಇರುವ ವಿಶೇಷ ಕಾರಣವೇ ಇದಾಗಿದೆ. 
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸಾಧಕನು ಮೂಢ || 
     ಆದಿ ಶಂಕರಾಚಾರ್ಯ ವಿರಚಿತ ಸಾಧನಾಪಂಚಕ ಒಬ್ಬ ಸಾಧಕ ಹೇಗೆ ಇರಬೇಕೆಂಬುದನ್ನು ತಿಳಿಸುವ ಒಂದು ಅಪೂರ್ವ ರಚನೆ. ನಿತ್ಯ ವೇದಾಧ್ಯಯನ, ಮಾಡುವ ಕೆಲಸಗಳನ್ನು ಭಗವಂತ ಆರಾಧನೆ ಎಂದು ಭಾವಿಸಿ ಮಾಡುವುದು, ಅಂತರಂಗದ ಕೊಳೆಯನ್ನು ತೊಡೆದು ಹಾಕುವುದು, ಮೋಹದ ಸಂಕೋಲೆಯಿಂದ ಹೊರಬರುವುದು, ಜ್ಞಾನಿಗಳ ಸತ್ಸಂಗ, ಯೋಗ್ಯ ಗುರುಗಳ ಆಶ್ರಯ, ವಿತಂಡ ವಾದಗಳಿಂದ ದೂರವಿರುವುದು, ಸಮಚಿತ್ತ ಹೊಂದುವುದು, ಇತ್ಯಾದಿಗಳು ಸಾಧಕನಿಗೆ ಇರಬೇಕೆಂದು ಅದು ಹೇಳುತ್ತದೆ. 
ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||
     'ಅಬ್ಬಬ್ಬಾ, ಸಾಧಕರಾಗುವುದು ಇಷ್ಟೊಂದು ಕಷ್ಟವೇ! ಇನ್ನೂ ಏನಾದರೂ ಇದೆಯೋ?' ಎಂಬ ಪ್ರಶ್ನೆ ಮೂಡುತ್ತದೆ. 'ಹೌದು, ಇನ್ನೂ ಇದೆ' ಎಂಬುದು ಸಾಧಕರ ನಡೆ-ನುಡಿಗಳನ್ನು ಕಂಡವರಿಗೆ ಅರಿವಾಗದೇ ಇರದು. ಅವರು 'ತಾನೇ ಸರಿ, ತನ್ನದೇ ಸರಿ' ಅನ್ನುವುದಿಲ್ಲ. ಒಂದು ಪುಟ್ಟ ಮಗುವೂ ಏನನ್ನೋ ಹೇಳುತ್ತಿದ್ದರೂ ಅದನ್ನೂ ಬೆರಗಾಗಿ ಕಣ್ಣರಳಿಸಿ ಕೇಳುವ ಆ ತನ್ಮಯತೆ ಸಾಧಕರಿಗಲ್ಲದೆ ಬೇರೆ ಯಾರಿಗೆ ಬಂದೀತು! ಎಲ್ಲವನ್ನೂ 'ಕೇಳುವ' ಆ ಗುಣ ಅನನ್ಯ. ಅವರು ಮೇಲು, ಇವರು ಕೀಳು, ಅವನು ಬಡವ, ಇವನು ಶ್ರೀಮಂತ, ಇತ್ಯಾದಿ ತಾರತಮ್ಯ ಮಾಡುವುದಿಲ್ಲ. ಎಂತಹ ಸ್ಥಿತಿಯಲ್ಲೂ ಆನಂದ ಕಾಣುವ ಗುಣ, ಆಸೆ, ಆಮಿಷಗಳಿಂದ ಮೈಮರೆತು ದಾರಿ ತಪ್ಪದ ನಡತೆ, ಅಪಾಯವನ್ನೆದುರಿಸುವ ಗಟ್ಟಿತನ, ಹೀನ-ದೀನರ ಸೇವೆಯನ್ನು ದೇವರ ಪೂಜೆಯೆಂದು ಭಾವಿಸುವ ಉದಾತ್ತತೆ, ಸರಳತೆ, ನಿಷ್ಕಾಮ ಕರ್ಮ, ಅಚಲ ವಿಶ್ವಾಸ, ಹೊರಮನದ ಕೋರಿಕೆಗಳನ್ನು ಅಲ್ಲಗಳೆದು ಒಳಮನದ ಕರೆಯನ್ನು ಆಲಿಸಿ ಅದರಂತೆ ಜೀವಿಸುವ ಕಲೆ ಸಾಧಕರ ಅಮೂಲ್ಯ ಸಂಪತ್ತು. ಇಷ್ಟೆಲ್ಲಾ ಇದ್ದ ಮೇಲೆ, ಅವರು ದೇವರೇ ಸರಿ, ಸಾಮಾನ್ಯ ಮನುಷ್ಯರಲ್ಲವೇ ಅಲ್ಲ, ಸಾಮಾನ್ಯರು ಹೀಗಿರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿ ಅವರನ್ನು ಆರಾಧಿಸಲು ಪ್ರಾರಂಭಿಸಿಬಿಡುತ್ತೇವೆ. ಇಂದು ಅನೇಕ ಸಾಧು-ಸಂತ-ಮಹಾಂತರ ಗುಡಿಗಳನ್ನು ಕಟ್ಟಿ ನಿತ್ಯ ಪೂಜೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೆ ಪೂಜಿಸುವವರದೇ ಒಂದು ಪಂಥವಾಗಿ ಬಿಡುತ್ತದೆ. ಹೊಸ ಹೊಸ ರೀತಿ-ನೀತಿಗಳು, ಕಟ್ಟಳೆಗಳು, ಸಂಪ್ರದಾಯಗಳು ರೂಢಿಗೆ ಬಂದುಬಿಡುತ್ತವೆ. ಅವರನ್ನು ಆರಾಧಿಸುವುದು ತಪ್ಪೇ, ಪೂಜಿಸಬಾರದೇ ಎಂದು ಸಿಟ್ಟಾಗದಿರಿ. ನಮಗೆ ಯೋಗ್ಯ ಮಾರ್ಗದರ್ಶನ ಮಾಡಿದವರನ್ನು, ಮಾಡುವವರನ್ನು ಆರಾಧಿಸುವುದು ತಪ್ಪಲ್ಲವೇ ಅಲ್ಲ. ಅದರೆ ಅದರಲ್ಲಿ ಒಂದು ಅಪಾಯವಿದೆ. ಅಂತಹ 'ಪೂಜ್ಯ'ರುಗಳನ್ನು 'ಹೊರಗೆ' ಇಟ್ಟುಬಿಡುವುದೇ ಆ ಅಪಾಯ. ಸಾಷ್ಟಾಂಗ ನಮಸ್ಕಾರ ಮಾಡಿ, ಆರತಿ ಬೆಳಗಿ, ತೀರ್ಥ-ಪ್ರಸಾದಗಳನ್ನು ಪಡೆದು ಕೃತಕೃತ್ಯರಾದೆವೆಂದು ಅಂದುಕೊಂಡುಬಿಡುತ್ತೇವೆ. ವಿಚಾರ ಮಾಡೋಣ. ಹೃದಯ ಮಂದಿರಗಳಲ್ಲಿ ಅವರನ್ನು ಪ್ರತಿಷ್ಠಾಪಿಸಿ ಮಾಡುವ ಪೂಜೆಯೇ ನಿಜವಾದ ಪೂಜೆ. ಅವರು ತೋರಿದ ಹಾದಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸಬಹುದಾದ ಯೋಗ್ಯ ಗುರುಕಾಣಿಕೆ. ಹಾಗೆ ನಡೆದು ಸಾಧಿಸುವುದೇ ನಮಗೆ ಸಿಗುವ ಪೂಜಾಫಲ ಎಂಬುದನ್ನು ಅರಿಯೋಣ.
-ಕ.ವೆಂ.ನಾಗರಾಜ್.
[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದುದು]
[13-10-2014ರ 'ಜನಮಿತ್ರ' ಪತ್ರಿಕೆಯಲ್ಲಿ ಪ್ರಕಟಿತ 'ಚಿಂತನ']

ಶನಿವಾರ, ನವೆಂಬರ್ 22, 2014

ಖಿನ್ನನಾಗದಿರು ಮನವೆ, ನಾನಿರುವೆ!


"ಜೀವನವೆಂದರೆ  ಶೇ.10ರಷ್ಟು ನಿಮಗೆ ಏನು ಅನುಭವಕ್ಕೆ ಬರುತ್ತದೋ ಅದು ಮತ್ತು ಶೇ. 90ರಷ್ಟು ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರೋ ಅದು!"
     ಪತಿ-ಪತ್ನಿ ಇಬ್ಬರೂ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪೆನಿಯಲ್ಲಿ ಇಂಜನಿಯರರು. ಇಬ್ಬರಿಗೂ ಕೈತುಂಬಾ ಸಂಬಳ ಬರುತ್ತಿತ್ತು. ಪತಿ ತನ್ನ ತಾಯಿಗೆ ಹಬ್ಬದ ಖರ್ಚಿಗಾಗಿ ರೂ.5000/- ಮನಿ ಆರ್ಡರ್ ಕಳಿಸಿದ ವಿಷಯ ಪತ್ನಿಗೆ ತಿಳಿದು ಅದನ್ನು ಆಕ್ಷೇಪಿಸಿ ಜಗಳವಾಡಿದಳು. ಮಾತಿಗೆ ಮಾತು ಬೆಳೆದು ಇಬ್ಬರೂ ಆಕ್ರೋಶದಿಂದ ಕೂಗಾಡಿದರು. ಕೊನೆಯಲ್ಲಿ ಖಿನ್ನನಾದ ಪತಿ ಅನ್ಯಮನಸ್ಕನಾಗಿ ಕುಳಿತ. ಮಲಗಿದ್ದ ಪತ್ನಿ ಬೆಳಗ್ಗೆ ಎದ್ದು ನೋಡಿದರೆ ಪತಿ ನೇಣಿಗೆ ಶರಣಾಗಿದ್ದುದು ಕಂಡು ಬಂದಿತ್ತು. ಕಳೆದ ವರ್ಷ ನಡೆದ ಈ ಘಟನೆ ಎಲ್ಲಾ ಸುದ್ದಿ ಪತ್ರಿಕೆಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ಪ್ರಚುರಗೊಂಡಿತ್ತು. ಖಿನ್ನಗೊಂಡ ಸ್ಥಿತಿಯ ದುರ್ಬಲ ಘಳಿಗೆಯಲ್ಲಿ ಕೈಗೊಂಡ ಒಂದು ತಪ್ಪು ನಿರ್ಧಾರ ಅವನ ಜೀವನವನ್ನೇ ಅಂತ್ಯಗೊಳಿಸಿತ್ತು. ಕೌಟುಂಬಿಕ ಕಲಹಗಳು, ಆರ್ಥಿಕ ಹಿನ್ನಡೆ, ಮುಂತಾದ ಕಾರಣಗಳಿಂದ ಮಕ್ಕಳಿಗೂ ವಿಷ ಉಣಿಸಿ ತಾವೂ ಆತ್ಮಹತ್ಯೆ ಮಾಡಿಕೊಳ್ಳುವ ತಂದೆ-ತಾಯಂದಿರ ಕುರಿತೂ ಕೇಳುತ್ತಿರುತ್ತೇವೆ. ಈ ಖಿನ್ನತೆ ಅನ್ನುವುದು ಇಂತಹ ಅನೇಕ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡಿ ಅನೇಕರ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ. 
     ಖಿನ್ನತೆ ಅನ್ನುವುದು ಕೆಳಮಟ್ಟದ ಮನೋಸ್ಥಿತಿಯಾಗಿದ್ದು ಒಬ್ಬ ವ್ಯಕ್ತಿಯ ಯೋಚನೆಗಳು, ನಡವಳಿಕೆಗಳು, ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆಗೊಳಗಾದವರು ಅತಂತ್ರ ಭಾವನೆಯಿಂದ ನರಳುತ್ತಾ ದುಃಖಿಗಳಾಗಿರುತ್ತಾರೆ, ಉದ್ರೇಕಿತರಾಗಿರುತ್ತಾರೆ, ಹತಾಶೆಯಿಂದ ಅಸಹಾಯಕರೆಂದು, ಬೆಲೆಯಿಲ್ಲದವರೆಂದುಕೊಂಡು ಅಭದ್ರತೆಯ ಭಾವನೆಯಿಂದ ಕುಗ್ಗಿರುತ್ತಾರೆ. ಏನು ಮಾಡಬೇಕೆಂದು ತೋಚದೆ ಚಡಪಡಿಸುತ್ತಿರುತ್ತಾರೆ. ಕೆಲವೊಮ್ಮೆ ಹುಚ್ಚರಂತೆ ವರ್ತಿಸುತ್ತಾರೆ, ಕಿರುಚಾಡುತ್ತಾರೆ. ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಒಂದೊಮ್ಮೆ ಸಂತಸ ಕೊಡುತ್ತಿದ್ದ ಸಂಗತಿಗಳು ನೀರಸವೆನಿಸುತ್ತವೆ. ಹಸಿವು ಕಡಿಮೆಯಾಗುತ್ತದೆ ಅಥವ ಹೆಚ್ಚು ತಿನ್ನಬೇಕೆನಿಸುತ್ತದೆ. ಮರೆವು ಬಾಧಿಸುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ನಿದ್ರೆಯಲ್ಲಿ ನಡೆಯುವುದು, ಹೆಚ್ಚಾಗಿ ನಿದ್ರಿಸುವುದು, ಹಲವಾರು ದೈಹಿಕ ಕಾಯಿಲೆಗಳಿಂದ ನರಳುವುದು ಮುಂತಾದ ಅನುಭವಗಳಾಗುವುದರ ಜೊತೆಗೆ ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಅಥವ ಆತ್ಮಹತ್ಯೆಗೆ ಪ್ರಯತ್ನಿಸಬಹುದು. ಖಿನ್ನತೆಗೆ ಒಳಗಾದವರಿಗೆ ಸಹಾನುಭೂತಿಗಿಂತಲೂ, ಅವರೊಂದಿಗೆ ತಾವು ಇದ್ದೇವೆ ಎಂದು ಭದ್ರತೆಯ ಭಾವನೆಯನ್ನು ಒದಗಿಸುವುದು ಅತ್ಯಂತ ಸೂಕ್ತವಾದುದು. 
     ಅಷ್ಟಕ್ಕೂ ಈ ಖಿನ್ನತೆ ಏಕೆ ಬಾಧಿಸುತ್ತದೆ? ಚಿಕ್ಕಂದಿನಲ್ಲಿ ಕಷ್ಟಗಳು, ಪೋಷಕರ ತಾರತಮ್ಯದಿಂದ ನೋಡುವ ದೃಷ್ಟಿ ಮಕ್ಕಳನ್ನು ಖಿನ್ನತೆಯಿಂದ ನರಳುವಂತೆ ಮಾಡುತ್ತವೆ. ಅದು ಮುಂದೆ ಜೀವನದುದ್ದಕ್ಕೂ ಬಾಧಿಸುವ ಸಾಧ್ಯತೆಯಿರುತ್ತದೆ. ಆರ್ಥಿಕ ಅನಾನುಕೂಲತೆ, ನಷ್ಟಗಳು, ನಿರುದ್ಯೋಗದ ಸಮಸ್ಯೆ, ವಾಸಿಯಾಗದ ಮಾರಕ ಕಾಯಿಲೆಗಳು, ಅಪೌಷ್ಠಿಕತೆ, ಪ್ರೀತಿಸಿದವರ ದ್ರೋಹ, ದುರಂತ ಘಟನೆಗಳು, ಸಾಮಾಜಿಕವಾಗಿ ಒಂಟಿಯೆನಿಸುವುದು, ದಾಂಪತ್ಯದಲ್ಲಿನ ಸಮಸ್ಯೆಗಳು, ಅಸೂಯೆ/ಮತ್ಸರ, ಸ್ತ್ರೀಯರಲ್ಲಿ ಮೆನೋಪಾಸ್, ಇತ್ಯಾದಿಗಳೂ ಖಿನ್ನತೆಗೆ ಕಾರಣವಾಗಬಲ್ಲವು. ಖಿನ್ನತೆಗೆ ವೈದ್ಯಕೀಯವಾಗಿ ಚಿಕಿತ್ಸೆ ಸಾಧ್ಯವಿದೆ. ಔಷಧೋಪಚಾರಕ್ಕಿಂತಲೂ ಮಾನಸಿಕವಾಗಿ ನೀಡುವ  ಸಲಹೆ, ಚಿಕಿತ್ಸೆಗಳು ಹೆಚ್ಚು ಉಪಕಾರಿ.
     ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಮತ್ತು ಹೊರ ಪ್ರಪಂಚಕ್ಕೆ ಗೊತ್ತಿರದ ಕೆಲವು ರಹಸ್ಯಗಳಿರುತ್ತವೆ ಮತ್ತು ಆ ಕಾರಣಗಳಿಂದ ಆತ ದುಃಖಿಯಾಗಿರುತ್ತಾನೆ. ಇದು ಗೊತ್ತಿಲ್ಲದವರು ಅವನನ್ನು ನಿರ್ಲಿಪ್ತ ಅಥವ ಲೆಕ್ಕಕ್ಕಿಲ್ಲದವನು ಎಂದುಕೊಳ್ಳುತ್ತಾರೆ. ಉದಾಹರಣೆಯಾಗಿ ಈ ಸಂಗತಿ ಹೇಳಬೇಕೆನ್ನಿಸಿದೆ. ನನ್ನ ಪರಿಚಯದ ಒಬ್ಬರು ಉಪಾಧ್ಯಾಯರು, ನನಗಿಂತ ಹತ್ತು ವರ್ಷ ದೊಡ್ಡವರು, ನಿವೃತ್ತರಾದ ನಂತರ ಪೌರೋಹಿತ್ಯ ಮಾಡುತ್ತಿದ್ದರು. ಅವರ ತಂದೆ-ತಾಯಿ ಹಳ್ಳಿಯಲ್ಲಿ ವಾಸಿಸುತ್ತಿದ್ದರು. 80-90ರ ಆಸುಪಾಸಿನಲ್ಲಿದ್ದ ಆ ಹಿರಿಯರು ವಯಾಧಿಕ್ಯ ಹಾಗೂ ಕಾಯಿಲೆಯ ಕಾರಣದಿಂದಲೂ, ಹಳ್ಳಿಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದಿದ್ದರಿಂದಲೂ ಮಗನ ಆಶ್ರಯ ಬಯಸಿದರು. ಮಗನ ಇಚ್ಛೆಯೂ ಅದೇ ಆಗಿತ್ತು. ಆದರೆ ಸೊಸೆ ಸುತರಾಂ ಒಪ್ಪಲಿಲ್ಲ. ಮದುವೆಯಾದ ಹೊಸದರಲ್ಲಿ ತನಗೆ ಅವರು ಕೊಟ್ಟ ಕಷ್ಟಗಳನ್ನು ಮುಂದೆ ಮಾಡಿ ಅವರುಗಳು ಮನೆಗೆ ಬರಲೇಬಾರದೆಂದು ಹಟ ಹಿಡಿದಳು. ಹಾಗಾಗಿ ವೃದ್ಧರು ಹಳ್ಳಿಯಲ್ಲೇ ಇರಬೇಕಾಯಿತು. ಒಂದೆರಡು ವರ್ಷದಲ್ಲಿ ತಂದೆ ಗತಿಸಿದರು. ಒಬ್ಬನೇ ಮಗನಾದ ಕಾರಣ ತಾಯಿಯನ್ನು ಪತ್ನಿಯ ವಿರೋಧದ ನಡುವೆಯೂ ಮನೆಗೆ ಕರೆತಂದ. ನಂತರದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಮನೆಯಲ್ಲಿ ಯಾರಿಗೂ ನೆಮ್ಮದಿ ಇಲ್ಲವಾಯಿತು. ತಾಯಿಯೂ ಸ್ವಲ್ಪ ಕಾಲದಲ್ಲೇ ವಿಧಿವಶಳಾದಳು. ಆದರೆ ಗಂಡ-ಹೆಂಡಿರ ನಡುವೆ ಮನಸ್ತಾಪ ಮಾತ್ರ ನಿಲ್ಲಲಿಲ್ಲ. ಅದು ಎಲ್ಲಿಯವರೆಗೆ ಹೋಯಿತೆಂದರೆ ಇಬ್ಬರೂ ಪರಸ್ಪರ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು. ಉಪಾಧ್ಯಾಯರೂ ಒಂದು ದಿನ ಕಣ್ಣು ಮುಚ್ಚಿದರು. ಈಗ ಅವರ ಪತ್ನಿ ತನ್ನ ಮಗ ಮತ್ತು ಸೊಸೆಯೊಂದಿಗೆ ಇದ್ದಾರೆ. ಆಕೆಗೆ ತನ್ನ ತಪ್ಪಿನ ಅರಿವಾಗಿದೆ. ಆದರೆ ಕಾಲ ಮಿಂಚಿದೆ.
     ಒಬ್ಬ ತಾಯಿ ತನ್ನ ಮಗು ಯಾವಾಗಲೂ ಮಂಕಾಗಿರುವುದನ್ನು ಕಂಡು ಚಿಂತಿತಳಾಗಿದ್ದಳು. ತನ್ನ ಮಗ ಎಲ್ಲಾ ಮಕ್ಕಳಂತೆ ನಗುನಗುತ್ತಾ ಆಟವಾಡಿಕೊಂಡಿರಲೆಂಬ ಕಾರಣದಿಂದ ಅವನಿಗೆ ಸಂತೋಷವಾಗಿರಲು ಹೇಳುತ್ತಿದ್ದಳು. ಕೆಲವೊಮ್ಮೆ ಅದಕ್ಕಾಗಿ ಅವನನ್ನು ದಂಡಿಸುತ್ತಲೂ ಇದ್ದಳು. "ನಗು, ಮಗೂ, ನಗು. ನೀನು ಏಕೆ ನಗುವುದಿಲ್ಲ?" ಎಂದು ಕೇಳುತ್ತಿದ್ದ ಆಕೆ ನಂತರ ಹೇಗೆ ನಗಬೇಕೆಂದು ಸ್ವತಃ ನಗುತ್ತಾ ಮಗನಿಗೆ ತೋರಿಸಿಕೊಡುತ್ತಿದ್ದಳು. ಅದು ಅತ್ಯಂತ ದುಃಖದಾಯಕ ನಗುವಾಗಿರುತ್ತಿತ್ತು. ಇಲ್ಲಿ ಮಗುವಿನೊಂದಿಗೆ ತಾಯಿಯೂ ಖಿನ್ನತೆಗೆ ಒಳಗಾಗಿದ್ದಳು.
     ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಥಿತಿ ನನಗೂ ಎದುರಾಗಿತ್ತು.  ಬೆಳ್ತಂಗಡಿಯಲ್ಲಿ ತಹಸೀಲ್ದಾರನಾಗಿದ್ದಾಗ ಕಾರ್ಯಾರ್ಥವಾಗಿ ಒಮ್ಮೆ ಧರ್ಮಸ್ಥಳಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಕಛೇರಿಯಲ್ಲಿದ್ದ ಶಿರಸ್ತೇದಾರರು ಮತ್ತು ಗುಮಾಸ್ತರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಗುಮಾಸ್ತರು ರೂ.6000/- ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಲೋಕಾಯುಕ್ತ ಇನ್ಸ್‌ಪೆಕ್ಟರರಿಗೆ ನನ್ನನ್ನೂ ಆ ಪ್ರಕರಣದಲ್ಲಿ ಸಿಲುಕಿಸಬೇಕೆಂದಿತ್ತು. ಗುಮಾಸ್ತರು ಹೇಳಿಕೆಯಲ್ಲಿ ರಾಷ್ಟ್ರೀಯ ಉಳಿತಾಯ ಪತ್ರದ ಸಲುವಾಗಿ ಆ ಹಣ ಪಡೆದಿದ್ದೆಂದು ಹೇಳಿಕೆ ಕೊಟ್ಟಿದ್ದರು. ಇನ್ಸ್‌ಪೆಕ್ಟರರು ಆ ಹೇಳಿಕೆಯನ್ನು ಹರಿದುಹಾಕಿ ತಹಸೀಲ್ದಾರರಿಗೆ ಕೊಡುವ ಸಲುವಾಗಿ ಪಡೆದಿದ್ದೆಂದು ಹೇಳಿಕೆ ಬರೆದುಕೊಡಲು ಸೂಚಿಸಿದ್ದರು. ಗುಮಾಸ್ತರು ಪುನಃ ಹಿಂದಿನಂತೆಯೇ ಹೇಳಿಕೆ ಬರೆದುಕೊಟ್ಟಿದ್ದರು. ಇನ್ಸ್‌ಪೆಕ್ಟರರು ಗುಮಾಸ್ತರ ಕಪಾಳಕ್ಕೆ ಬಾರಿಸಿ, "ತಹಸೀಲ್ದಾರರಿಗೆ ಕೊಡುವ ಸಲುವಾಗಿ ಪಡೆದಿದ್ದೆ ಎಂದು ಬರೆದುಕೊಡಲು ಹೇಳಲಿಲ್ಲವಾ? ನಿನಗೆ ಬದುಕುವುದಕ್ಕೆ ಗೊತ್ತಿಲ್ಲ. ಹೇಳಿದ ಹಾಗೆ ಬರೆದುಕೊಡು" ಎಂದು ಗದರಿಸಿ ಪುನಃ ಆ ಹೇಳಿಕೆಯನ್ನು ಹರಿದುಹಾಕಿದ್ದರು. ಆ ಗುಮಾಸ್ತರು, "ಸಾರ್, ತಹಸೀಲ್ದಾರರ ಬಗ್ಗೆ ಬರೆದುಕೊಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಅವರು ಒಳ್ಳೆಯವರು. ಬೇಕಾದರೆ ನಾನೇ ಲಂಚ ತೆಗೆದುಕೊಂಡೆ ಎಂದು ಬರೆದುಕೊಡುತ್ತೇನೆ" ಎಂದಿದ್ದರು. ಪುನಃ ಹಿಂದಿನ ಹೇಳಿಕೆಯನ್ನೇ ಬರೆದುಕೊಟ್ಟರು. ಆ ಗುಮಾಸ್ತರನ್ನು ನಾನು ಎಂದಿಗೂ ಮರೆಯಲಾರೆ. ಅವರ ಒಳ್ಳೆಯತನ ನನ್ನನ್ನು ಕಾಪಾಡಿತ್ತು. ಶಿರಸ್ತೇದಾರರ ಮೇಜಿನ ಡ್ರಾಯರಿನಲ್ಲಿ 300 ರೂ. ಸಿಕ್ಕಿದ್ದು ಅದು ಪ್ರಕರಣಕ್ಕೆ ಸಂಬಂಧಿಸದ ಹಣವಾಗಿತ್ತು. ಅವರು ಮಾತ್ರ ಇನ್ಸ್‌ಪೆಕ್ಟರರ ಸೂಚನೆಯಂತೆ ತಹಸೀಲ್ದಾರರಿಗೆ ಕೊಡುವ ಸಲುವಾದ ಹಣ ಎಂದು ಬರೆದುಕೊಟ್ಟಿದ್ದರು. ಧರ್ಮಸ್ಥಳದಲ್ಲಿದ್ದ ನನಗೆ ಇನ್ಸ್‌ಪೆಕ್ಟರರು ಪದೇ ಪದೇ ಫೋನು ಮಾಡಿ ಕಛೇರಿಗೆ ಬರಲು ಸೂಚಿಸುತ್ತಿದ್ದರು. ಪ್ರಕರಣದ ಹಿನ್ನೆಲೆ, ಮುನ್ನೆಲೆ ಅರಿಯದ ನನಗೆ ಬರಬಾರದೆಂದು, ಬಂದರೆ ತೊಂದರೆಯಾಗುವುದೆಂದು ಕಛೇರಿಯ ಇನ್ನೊಬ್ಬ ಗುಮಾಸ್ತರು ಫೋನಿನಲ್ಲಿ ತಿಳಿಸಿದ್ದರು. ನಾನು ಜಿಲ್ಲಾಧಿಕಾರಿಯವರಿಗೆ ಮತ್ತು ಸಹಾಯಕ ಆಯುಕ್ತರಿಗೆ ಫೋನು ಮೂಲಕ ಇದ್ದ ವಿಷಯ ತಿಳಿಸಿದೆ. ಅವರೂ ನನಗೆ ಕಛೇರಿಗೆ ಹೋಗದಿರಲು ಸೂಚಿಸಿದರು. ಇನ್ಸ್‌ಪೆಕ್ಟರರು ಮಾತ್ರ ನನಗೆ 'ನೀನು ಎಲ್ಲಿ ಅಡಗಿದ್ದರೂ ಬಿಡುವುದಿಲ್ಲ' ಎಂದು ಏಕವಚನದಲ್ಲಿ ಹೇಳಿದ್ದು ಅಸಹ್ಯ ಮೂಡಿಸಿತ್ತು. ನಾನು ಕೋರಿರದಿದ್ದರೂ ಮರುದಿನ ಜಿಲ್ಲಾಧಿಕಾರಿಯವರು ಸ್ವತಃ ಲೋಕಾಯುಕ್ತ ಅಧೀಕ್ಷಕರೊಂದಿಗೆ ಮಾತನಾಡಿ 'ತಹಸೀಲ್ದಾರರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅವರ ತಪ್ಪಿದ್ದರೆ ಪ್ರಕರಣದಲ್ಲಿ ಸೇರಿಸಲು ನನ್ನ ಅಭ್ಯಂತರವಿಲ್ಲ. ಸುಮ್ಮಸುಮ್ಮನೆ ಅವರನ್ನು ಸಿಲುಕಿಸಬೇಡಿ' ಎಂದು ತಿಳಿಸಿದ್ದರು. ಇದಾದ ನಂತರ ನನಗೆ ಹೇಳಿಕೆ ಕೊಡಲು ಲೋಕಾಯುಕ್ತ ಕಛೇರಿಯಿಂದ ಸೂಚನೆ ಬಂದಿತ್ತು. ನಾನು ಹೋಗಿ ನನಗೆ ತಿಳಿದ ಸಂಗತಿ ಕುರಿತು ಹೇಳಿಕೆ ನೀಡಿದ್ದೆ. ನನ್ನ ಯಾವುದೇ ತಪ್ಪಿಲ್ಲದಿದ್ದರೂ, ಆ ಪ್ರಕರಣದಲ್ಲಿ ಸಿಲುಕಿಸಬಹುದೆಂಬ ಆತಂಕದಲ್ಲಿ ಕಳೆದಿದ್ದ ಆ 3 ದಿನಗಳಲ್ಲಿ ನಾನು ನಾನಾಗಿರಲಿಲ್ಲ, ಹುಚ್ಚನಂತಾಗಿದ್ದೆ. ಒಂದು ವೇಳೆ ಸಿಲುಕಿಸಿದ್ದಿದ್ದರೆ ಬಂಧುಗಳು, ಸ್ನೇಹಿತರ ಎದುರಿಗೆ ಹೇಗೆ ಮುಖ ತೋರಿಸುವುದು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಈಗ ಆ ಘಟನೆಯ ಕುರಿತು ಅವಲೋಕಿಸಿದಾಗ ನನ್ನ ಅಂದಿನ ನಿರ್ಧಾರ ತಪ್ಪೆಂದು ಅನ್ನಿಸುತ್ತಿದೆ. ಇತರರು ಏನಾದರೂ ಅಂದುಕೊಳ್ಳುತ್ತಾರೆ ಎಂದು ನನ್ನ ಜೀವವನ್ನು ಬಲಿಗೊಡುವುದು ಸರಿಯಾಗುತ್ತಿರಲಿಲ್ಲ. ಆದರೆ ಪುಣ್ಯಕ್ಕೆ ನನ್ನನ್ನು ಆ ಪ್ರಕರಣದಲ್ಲಿ ಸಿಲುಕಿಸಲಿಲ್ಲ. ಹಾಗಾಗಿ ಈ ಲೇಖನ ಬರೆಯಲು ಅವಕಾಶ ಸಿಕ್ಕಿದೆ. 
     ಈ ಖಿನ್ನತೆ ಅನ್ನುವುದು ಯಾವ ರೂಪದಲ್ಲಿ ಹೇಗೆ ಬರುತ್ತದೋ ಊಹಿಸಲಾಗದು. ಚಾಕೊಲೇಟ್ ಕೊಡಿಸಲಿಲ್ಲ, ಹೊಸ ಬಟ್ಟೆ ಕೊಡಿಸಲಿಲ್ಲ, ಅಪ್ಪ/ಅಮ್ಮ/ಉಪಾಧ್ಯಾಯರು ಬೈದರು, ನಿರೀಕ್ಷಿತ ಅಂಕಗಳು ಬರಲಿಲ್ಲ ಮುಂತಾದ ಕ್ಷುಲ್ಲಕ ಕಾರಣಗಳಿಗಾಗಿ ಜೀವ ಕಳೆದುಕೊಳ್ಳುವ ಮಕ್ಕಳೂ ಇರುತ್ತಾರೆ. ಮಕ್ಕಳಿರಲಿ, ದೊಡ್ಡವರೆನಿಸಿಕೊಂಡವರೂ ಹೀಗೆ ಮಾಡಿದವರಿದ್ದಾರೆ. ಸೂಕ್ಷ್ಮ ಮನೋಭಾವದ ಇಂತಹವರೊಂದಿಗೆ ಜಾಗೃತರಾಗಿರುವುದು ಅವಶ್ಯವಾಗಿದೆ. ಹೆಚ್ಚಿನ ಸಮಸ್ಯೆಗಳು ಕೌಟುಂಬಿಕ ಸಾಮರಸ್ಯತೆಯ ಕೊರತೆಯಿಂದ ಬರುತ್ತವೆ. ಪತಿ/ಪತ್ನಿ ತನ್ನ ಮಾತೇ ನಡೆಯಬೇಕು, ತಾನು ಹೇಳಿದಂತೆಯೇ ಆಗಬೇಕು ಎಂದು ಸಾಧಿಸುವುದು, ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡದಿರುವುದು, ಯಾವುದೋ ಹಳೆಯ ಸಂಗತಿಯನ್ನು ಹಿಡಿದುಕೊಂಡು ಸದಾ ಕಿರಿಕಿರಿ ಮಾಡುವುದು, ರೇಗುವುದು, ಜಗಳವಾಡುವುದು ಮಾಡುತ್ತಿದ್ದರೆ ಸಮರಸತೆಗೆ ಜಾಗವೆಲ್ಲಿ? ಒಂದು ಹಂತದವರೆಗೆ ಸಹಿಸಿಕೊಂಡಾರು, ಮಿತಿ ಮೀರಿದಾಗ ಎಡವಟ್ಟು ಆಗದೇ ಇರದು. ಸಂಸಾರ ಸಾರ ಕಳೆದುಕೊಳ್ಳುತ್ತದೆ. ಹೊರಗಿನ ಒತ್ತಡಗಳು/ಸಮಸ್ಯೆಗಳಿಂದ ಬೇಸತ್ತ ಕೆಲವರು ಸಿಟ್ಟನ್ನು ತಮ್ಮ ಪತ್ನಿ/ಪತಿಯ ಮೇಲೆ ತೀರಿಸಿಕೊಂಡರೆ, ಅಸಹಾಯಕರಾದ ಅವರು ಅದನ್ನು ತಮ್ಮ ಮಕ್ಕಳ ಮೇಲೆ ತಿರುಗಿಸಿಬಿಡುವುದನ್ನೂ ಕಾಣಬಹುದು.
ಇತ್ತಿಹನು ಭಗವಂತ ಬದುಕಲೀ ಬದುಕು
ಬದುಕುವ ಮುನ್ನ ಸಾಯುವುದೆ ಕೆಡುಕು |
ಸಾಯುವುದು ಸುಲಭ ಬದುಕುವುದು ಕಷ್ಟ
ಸುಲಭದ ಸಾವ ಬಯಸದಿರು ಮೂಢ ||
     ಸಾಮಾನ್ಯವಾಗಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಮಯದಲ್ಲಿ, ಒಂದಲ್ಲಾ ಒಂದು ಕಾರಣಕ್ಕಾಗಿ ಖಿನ್ನತೆಯಿಂದ ಬಳಲಿದವರೇ ಇರುತ್ತಾರೆ. ಖಿನ್ನತೆಯಿದ್ದಾಗ ವಿವೇಚಿಸುವ ಶಕ್ತಿ ಇರುವುದಿಲ್ಲ. ಖಿನ್ನತೆಗೊಳಗಾದವರು ತಮ್ಮ ಜೀವನದ ಬಲೂನಿಗೆ ತಾವೇ ಪಿನ್ನು ಚುಚ್ಚಿಕೊಳ್ಳುತ್ತಾರೆ. ಆದ್ದರಿಂದ ಖಿನ್ನತೆಯಿಂದ ಹೊರಬಂದ ಸಮಯದಲ್ಲಿ ತಮ್ಮ ಖಿನ್ನತೆಯ ಕಾರಣದ ಬಗ್ಗೆ ಅವಲೋಕಿಸುವುದು ಒಳಿತು. ಯಾವುದೇ ಕಾರಣಕ್ಕೂ, ಎಂತಹ ಸಂದರ್ಭದಲ್ಲೂ ದುಡುಕದಿರುವ ನಿರ್ಧಾರವನ್ನು ಆ ಸಮಯದಲ್ಲಿ ಕೈಗೊಳ್ಳಬೇಕು. ಜೀವನವೆಂದರೆ ಕೇವಲ ಅದೊಂದೇ ಸಮಸ್ಯೆ ಅಲ್ಲ, ಅದಕ್ಕೂ ಮೀರಿದ ಬಾಳು ಇದೆ, ಕಂಗೆಡುವ ಅಗತ್ಯವೇ ಇಲ್ಲ, ಬದಲಿ ದಾರಿಗಳು, ಪರಿಹಾರಗಳು ಇವೆ ಎಂದು ಮನಗಾಣಬೇಕು. ತಮ್ಮ ದುಡುಕಿನ ಕಾರಣದಿಂದ ತಮ್ಮ ಮಕ್ಕಳು, ಪೋಷಕರು, ಪ್ರೀತಿಪಾತ್ರರುಗಳಿಗೆ ಆಗುವ ನೋವಿನ ಅರಿವು ಮೂಡಿಸಿಕೊಳ್ಳಬೇಕು. ತಮಗೆ ನೆರವಾಗಬಲ್ಲ, ಆಸರೆಯ ಹಸ್ತ ಚಾಚಬಲ್ಲವರೊಂದಿಗೆ ಸಂಪರ್ಕದಲ್ಲಿರಬೇಕು, ಕಷ್ಟದ ಸಂದರ್ಭದಲ್ಲಿ ಅವರ ಸಹಾಯ ಪಡೆಯಬೇಕು ಎಂದು ನಿಶ್ಚಯಿಸಿಕೊಳ್ಳಬೇಕು. ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಬೇಕು, ತಮಗೆ ತಾವೇ ಆಸರೆಯಾಗಿ ನಿಲ್ಲುವ ಮನಸ್ಸು ಮಾಡಬೇಕು. ಹೀಗೆ ಮಾನಸಿಕವಾಗಿ ಬಲಗೊಂಡರೆ, ಮುಂದೆ ನಿಜ ಸಮಸ್ಯೆಯ ಸಂದರ್ಭಗಳಲ್ಲಿ ಖಿನ್ನತೆಯನ್ನು ಮೆಟ್ಟಿ ನಿಲ್ಲಬಲ್ಲ ಶಕ್ತಿ ಸಂಚಯವಾದೀತು. 
     ಖಿನ್ನತೆಯಿಂದ ನರಳುವ ಸದಸ್ಯರ ಕುಟುಂಬದ ಇತರರೂ ಹೊಣೆಗಾರಿಕೆಯಿಂದ ನಡೆದುಕೊಳ್ಳುವ ಅಗತ್ಯ ಬಹಳವಾಗಿದೆ. ಗತಿಸಿದ ಘಟನೆಗಳನ್ನು ನೆನೆದು ಹಂಗಿಸಿ, ಭಂಗಿಸಿ ಮಾಡುವುದಕ್ಕಿಂತ ಈಗ ಚೆನ್ನಾಗಿರಲು ಏನು ಮಾಡಬೇಕೆಂದು ವಾಸ್ತವಿಕವಾಗಿ ನಡೆದುಕೊಳ್ಳುವುದು ವಿವೇಕವಂತರ ಲಕ್ಷಣ. ಇಲ್ಲದಿದ್ದರೆ ಅನಾಹುತಗಳಿಗೆ ಎಡೆಯಾಗುತ್ತದೆ ಮತ್ತು ಅದರ ಪರಿಣಾಮ ಕುಟುಂಬದ ಇತರರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಆಗುತ್ತದೆ. ಕೋಪ, ಅಸಹನೆ, ದ್ವೇಷಗಳು ಇನ್ನೊಬ್ಬರನ್ನು ತಿದ್ದಲಾರವು. ಬದಲಾಗಿ ಅವು ದ್ವೇಷಿಸಿದವರನ್ನೇ ದಹಿಸುತ್ತದೆ. ಕ್ಷುಲ್ಲಕ ಕಾರಣಕ್ಕಾಗಿ ಯಾರೂ ದುಡುಕಲಾರರು, ಅದರ ಹಿಂದೆ ಸತತ ಕಿರಿಕಿರಿಯ ಹಿನ್ನೆಲೆ ಇದ್ದೀತು, ಕ್ಷುಲ್ಲಕ ಕಾರಣಗಳು ಕೇವಲ ನೆಪಗಳು ಎಂಬ ಅರಿವಿರಬೇಕು. ಕುಟುಂಬದ ಕಲಹಗಳಲ್ಲಿ ಗೆದ್ದವರು ಸೋಲುತ್ತಾರೆ, ಸೋಲುವವರು ಗೆಲ್ಲುತ್ತಾರೆ. ದುರಭಿಮಾನ ಯಾರಿಗೂ ಒಳ್ಳೆಯದಲ್ಲ. ಖಿನ್ನತೆಯಿಂದ ಬಳಲುವವರಿಗೆ ಆಸರೆಯಾಗಿ ನಿಂತು ಭದ್ರತೆಯ ಭಾವನೆ ನೀಡಿದರೆ ಸಮಸ್ಯೆ ಅರ್ಧ ಪರಿಹಾರವಾದಂತೆ. ಕಲ್ಲು, ಇಟ್ಟಿಗೆ, ಮರಳು, ಸಿಮೆಂಟುಗಳನ್ನು ಜೋಡಿಸಿ ಒಳ್ಳೆಯ ಕಟ್ಟಡ ಕಟ್ಟಬಹುದು, ಆದರೆ ಅದು ಒಳ್ಳೆಯ ಮನೆ ಎಂದು ಅನ್ನಿಸಿಕೊಳ್ಳಬೇಕಾದರೆ ಅದರಲ್ಲಿ ವಾಸಿಸುವವರ ಹೃದಯಗಳ ಜೋಡಣೆ ಆದರೆ ಮಾತ್ರ ಸಾಧ್ಯ. ಇಲ್ಲದಿದ್ದರೆ ಅದು ಕೇವಲ ಮನೆಯ ಸ್ಮಾರಕ ಅನ್ನಬಹುದು. 
     ಸುಂದರವಾದ ಕಮಲ ಕೆಸರಿನಲ್ಲಿ ಬೆಳೆಯುತ್ತದೆ. ದುಃಖ, ಬಡತನ, ಕಾಯಿಲೆ, ಮೂದಲಿಕೆ, ನಷ್ಟ, ಅಡಚಣೆಗಳು, ತೊಂದರೆಗಳು ಮುಂತಾದ ಅನೇಕ ಕಷ್ಟಗಳೆಂಬ ಕೆಸರಿನ ನಡುವೆ ಸುಂದರವಾದ ಜೀವನ ಕುಸುಮ ಅರಳಿಸುವವರು ನಾವಾಗಬೇಕು. ನಮ್ಮ ಬದುಕು ನಮ್ಮದು. ಅದನ್ನು ಇತರರ ಕಾರಣದಿಂದ ಹಾಳು ಮಾಡಿಕೊಳ್ಳಬಾರದು. ಜೀವನ ಅನ್ನುವುದು ಸಮಸ್ಯೆಗೆ ನಾವು ಪ್ರತಿಕ್ರಿಯಿಸುವ ರೀತಿಯಲ್ಲಿದೆ. ಸಮರ್ಥವಾಗಿ ಪ್ರತಿಕ್ರಿಯಿಸೋಣ, ಖಿನ್ನತೆಯನ್ನು ಹೊಡೆದಟ್ಟೋಣ.
-ಕ.ವೆಂ.ನಾಗರಾಜ್.
***************
ದಿನಾಂಕ 24.11.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ನವೆಂಬರ್ 20, 2014

ದೇವರು: ಒಂದು ತರ್ಕವಿತರ್ಕ- 3


     ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್, ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಮನುಷ್ಯನ ಒಳ್ಳೆಯ ನಡವಳಿಕೆ ಬಗ್ಗೆ ಒತ್ತು ನೀಡಿವೆ. ಆದರೆ ಅವುಗಳನ್ನು ನಂಬುವ ಜನರ ನಡವಳಿಕೆ ಒಳ್ಳೆಯ ರೀತಿಯಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ದೇವರನ್ನು ಹಲವು ಹೆಸರುಗಳಲ್ಲಿ, ಹಲವು ರೂಪಗಳಲ್ಲಿ ಪೂಜಿಸುತ್ತಿರುವ ಮತ್ತು ಹೊಸ ಹೊಸ ದೇವರುಗಳು ಮತ್ತು ಪೂಜಾ ಪದ್ಧತಿಗಳನ್ನು ಹುಟ್ಟು ಹಾಕಲಾಗುತ್ತಿರುವ ಹಿಂದೂ ಸಮಾಜದಲ್ಲಿ ಪರಧರ್ಮ ಸಹಿಷ್ಣುತೆ ಮೈಗೂಡಿದೆ. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿ ಪರಧರ್ಮ ಸಹಿಷ್ಣುತೆಯ ಕೊರತೆ ಕಂಡು ಬರುತ್ತಿರುವುದು ಸುಳ್ಳೇನಲ್ಲ. ಹಾಗೆಂದು ನಾನು ಯಾವುದೇ ಧರ್ಮದ ಪರ ಅಥವಾ ವಿರೋಧಿ ಅಲ್ಲ. ನನಗೆ ಅದರ ಅಗತ್ಯವೂ ಇಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಗೊಂದಲ, ಸಮಸ್ಯೆ, ಸಂಘರ್ಷಗಳ ಬಗ್ಗೆ ಮಾತ್ರ ನನ್ನಲ್ಲಿ ತಳಮಳ ಇದೆ.
     ನನ್ನ ಮನಸ್ಥಿತಿ ಹೇಗಿದೆಯೆಂದರೆ ಯಾವುದಾದರೂ ಉತ್ತಮ ಗ್ರಂಥ ಓದಿದಾಗ ಅದರಲ್ಲಿನ ಒಳ್ಳೆಯ ಅಂಶಗಳಿಗೆ ಮಾರುಹೋಗುತ್ತೇನೆ. ಯಾವುದು ಮನಸ್ಸಿಗೆ ಹಿತ, ಸಂತೋಷ ನೀಡುತ್ತದೆಯೋ ಮತ್ತು ಅದನ್ನು ಅಂತಃಸಾಕ್ಷಿ ಒಪ್ಪುತ್ತದೆಯೋ ಅದು ಒಳ್ಳೆಯದೆಂದೇ ನನ್ನ ಭಾವನೆ. ಚಿಕ್ಕಂದಿನಲ್ಲಿ ಪ್ರತಿದಿನ ಸಾಯಂಕಾಲ ಆಟ ಆಡಿಕೊಂಡು ಬಂದ ನಂತರ ಕೈಕಾಲುಮುಖ ತೊಳೆದುಕೊಂಡು ನಾವು ಐವರು ಮಕ್ಕಳು ನಮ್ಮ ತಾಯಿ ಹೇಳಿಕೊಡುತ್ತಿದ್ದ ಪ್ರಾರ್ಥನೆ, ಭಜನೆಗಳನ್ನು ಒಟ್ಟಿಗೆ ಹೇಳಿ ದೇವರಿಗೆ ನಮಸ್ಕಾರ ಮಾಡಿದ ನಂತರವೇ ಓದಿಕೊಳ್ಳಲು ತೊಡಗುತ್ತಿದ್ದೆವು. ಹಬ್ಬ ಹರಿದಿನಗಳಲ್ಲಿ ತಂದೆಯವರು ಮಾಡುತ್ತಿದ್ದ ದೇವರ ಪೂಜೆ ನಂತರ ಮಂಗಳಾರತಿ, ತೀರ್ಥ, ಪ್ರಸಾದ ಪಡೆದ ಮೇಲಷ್ಟೇ ನಮಗೆ ತಿಂಡಿ ಸಿಗುತ್ತಿತ್ತು. ಆ ದಿನಗಳಲ್ಲಿ ತೋರಣ ಕಟ್ಟುವುದು, ಗಣಪತಿ ಪೂಜೆಗೆ ಮಂಟಪ ಸಿದ್ಧಪಡಿಸುವುದು, ನವರಾತ್ರಿಯಲ್ಲಿ ಗೊಂಬೆಗಳನ್ನು ಅಂದವಾಗಿ ಜೋಡಿಸುವುದು, ಇತ್ಯಾದಿಗಳನ್ನು ಶ್ರದ್ಧೆಯಿಂದ ಮತ್ತು ಆಸಕ್ತಿಯಿಂದ ಮಾಡುತ್ತಿದ್ದೆ. ಸಾಮೂಹಿಕ ರಾಮನವಮಿ, ಗಣೇಶ ಉತ್ಸವಗಳ ಸಂದರ್ಭಗಳಲ್ಲಿ ಏರ್ಪಾಡಾಗುತ್ತಿದ್ದ ಹರಿಕಥೆಗಳು, ಸಂಗೀತ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ತಲ್ಲೀನನಾಗಿ ಕೇಳುತ್ತಿದ್ದೆ. ವಿಶೇಷವಾಗಿ ರಾಮಾಯಣ, ಮಹಾಭಾರತಗಳಿಗೆ ಸಂಬಂಧಿಸಿರುತ್ತಿದ್ದ ಹರಿಕಥೆಗಳು ನನ್ನ ಮೇಲೆ ತುಂಬಾ ಪರಿಣಾಮ ಬೀರಿವೆ. ರಾಮಾಯಣ, ಮಹಾಭಾರತಗಳು ನಿಜವಾಗಿಯೂ ನಡೆದಿದೆಯೋ, ಇಲ್ಲವೋ ಎಂಬಿತ್ಯಾದಿ ವಿವಾದಗಳ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೆ ಅವುಗಳಲ್ಲಿ ತುಂಬಿರುವ ನೀತಿಪಾಠಗಳು, ಜೀವನದರ್ಶನ ಅನುಕರಣೀಯ.
    ಹೌದು, ದೇವರನ್ನು ಪೂಜಿಸುವುದಾದರೂ ಹೇಗೆ? ಹೇಗೆ ಪೂಜಿಸಿದರೆ ದೇವರು ಸುಪ್ರೀತನಾಗುತ್ತಾನೆ? ಅಷ್ಟಕ್ಕೂ ದೇವರು ತನ್ನನ್ನು ಪೂಜಿಸಬೇಕೆಂದು ಬಯಸುತ್ತಾನೆಯೇ? ಮಂಡಿಯೂರಿ ಪ್ರಾರ್ಥಿಸಬೇಕೇ? ಮೇಣದ ಬತ್ತಿಗಳನ್ನು ಹಚ್ಚಬೇಕೇ? ಮಂಗಳಾರತಿ ಮಾಡಬೇಕೇ? ಪ್ರಾಣಿಬಲಿ ಕೊಡಬೇಕೇ? ಕವಿ ಕೇಳುತ್ತಾನೆ: 'ಓ ದೇವರೇ, ನಿನ್ನನ್ನು ಹೇಗೆ ಅರ್ಚಿಸಲಿ? ಸರ್ವವ್ಯಾಪಕನಾದ ನಿನ್ನನ್ನು ಒಂದು ಸಣ್ಣ ಪೀಠದ ಮೇಲೆ ಕುಳಿತುಕೋ ಎನ್ನಲೇ? ಎಲ್ಲೆಲ್ಲೂ ಇರುವ ನಿನ್ನನ್ನು ಪೂಜೆ ಮಾಡುತ್ತೇನೆ, ಬಾ ಎಂದು ಗಂಟೆ ಬಾರಿಸಿ ಆಹ್ವಾನಿಸಲೇ? ನಿನ್ನದೇ ಸೃಷ್ಟಿಯಾದ ಹಣ್ಣು, ಹೂವುಗಳನ್ನು ಸರ್ವತೃಪ್ತನಾದ, ಏನನ್ನೂ ಬಯಸದ ನಿನಗೆ ನೈವೇದ್ಯವೆಂದು ನೀಡಲೇ?' ದೇವರು ತನ್ನ ಪೂಜೆ ಮಾಡಬೇಕೆಂದು ಬಯಸುವುದೂ ಇಲ್ಲ, ಮಾಡದಿದ್ದರೆ ಶಿಕ್ಷಿಸುವುದೂ ಇಲ್ಲ. ದೇವರನ್ನು ಪೂಜಿಸುವುದು, ಪ್ರಾರ್ಥಿಸುವುದು ಜನರಿಗೆ ಬೇಕಾಗಿದೆಯೇ ಹೊರತು ದೇವರಿಗಲ್ಲ. ನೂರೆಂಟು ಪಾಪಕೃತ್ಯಗಳನ್ನು ಮಾಡಿ ಪರಿಹಾರರೂಪವಾಗಿ ದೇವರಿಗೆ ಪೂಜೆ-ಪುನಸ್ಕಾರಗಳನ್ನು ಮಾಡುವುದು, ಹುಂಡಿಗೆ ಹಣ ಹಾಕುವುದು, ಇತ್ಯಾದಿ ಮಾಡಿ ಪಾಪ ಕಳೆದುಕೊಂಡ ಭಾವನೆ ಮೂಡಿಸಿಕೊಳ್ಳುವುದು ಕಾಣುತ್ತೇವೆ. ವಾಸ್ತವವಾಗಿ ದೇವರು ಸಮಚಿತ್ತ, ಸಮದರ್ಶಿಯಾಗಿರುವುದು ಕಣ್ಣುಳ್ಳವರಿಗೆ ಅರಿವಿಗೆ ಬರುತ್ತದೆ. ಅವನು ಯಾವುದೇ ಮತ/ಜಾತಿ/ಧರ್ಮಗಳ ಪಕ್ಷಪಾತಿಯಲ್ಲ. ತನ್ನನ್ನು ಹೊಗಳುವವರಿಗೆ ಹೆಚ್ಚು ಕೃಪೆ ತೋರುವುದೂ ಇಲ್ಲ, ತೆಗಳುತ್ತಾರೆಂದು ಕೆಟ್ಟದ್ದನ್ನೂ ಮಾಡುವುದಿಲ್ಲ. ಇಸ್ಲಾಮ್ ಧರ್ಮವನ್ನೇ ಪಾಲಿಸುವ, ಕ್ರಿಶ್ಚಿಯನ್ ಧರ್ಮವನ್ನೇ ಅನುಸರಿಸುವ ದೇಶಗಳಿವೆ. ಬೇರೆ ಬೇರೆ ಧರ್ಮಗಳನ್ನು ಮತ್ತು ವಿವಿದ ಧರ್ಮಗಳನ್ನು ಅನುಸರಿಸುವ, ನಾಸ್ತಿಕತೆಗೆ ಒತ್ತು ಕೊಡುವ ಕಮ್ಯುನಿಸ್ಟ್ ದೇಶಗಳಿವೆ. ದೇವರು ಪಕ್ಷಪಾತಿಯಾಗಿದ್ದರೆ ಒಬ್ಬೊಬ್ಬರಿಗೆ ಒಂದೊಂದು ತರಹ ಸೂರ್ಯ, ಚಂದ್ರರ ಬೆಳಕು ಬೀಳುವಂತೆ ಮಾಡುತ್ತಿದ್ದ, ಒಂದೊಂದು ಕಡೆ ಒಂದೊಂದು ರೀತಿಯಾಗಿ ಗಾಳಿ ಬೀಸುವಂತೆ ಅಥವ ಬೀಸದಿರುವಂತೆ ಮಾಡುತ್ತಿದ್ದ, ಮಳೆ ಬೀಳುವಂತೆ ಅಥವ ಬೀಳದಿರುವಂತೆ ಮಾಡುತ್ತಿದ್ದ ಅಲ್ಲವೇ?
     ದೇವರು ತನ್ನನ್ನು ಪೂಜಿಸುವವರನ್ನೂ, ಪೂಜಿಸದವರನ್ನೂ, ನಂಬುವವರನ್ನೂ, ನಂಬದಿರುವವರನ್ನೂ ಒಂದೇ ರೀತಿ ನೋಡುತ್ತಾನೆಂದರೆ ನಾವು ದೇವರಿಗೆ ಏಕೆ ಹೆದರಬೇಕು? ನಿಜ, ನಾವು ದೇವರಿಗೆ ಹೆದರಬೇಕಿಲ್ಲ. ನಮ್ಮ ಬಗ್ಗೆಯೇ ನಾವು ಹೆದರಬೇಕು. ದೇವರ ನ್ಯಾಯವಿಧಾನ ನೀತಿ ಹಾಗೆ ರೂಪಿತವಾಗಿದೆ. ವೇದವಿರಲಿ, ಭಗವದ್ಗೀತೆಯಿರಲಿ, ಬೈಬಲ್ ಇರಲಿ, ಕುರಾನ್ ಇರಲಿ, ಒಂದು ಸಮಾನ ಅಂಶವನ್ನು ಪ್ರತಿಪಾದಿಸುತ್ತವೆ: ಅದೆಂದರೆ ಒಳ್ಳೆಯ ಕೆಲಸಗಳಿಗೆ ಸದ್ಗತಿ ಮತ್ತು ಕೆಟ್ಟ ಕೆಲಸಗಳಿಗೆ ಶಿಕ್ಷೆ. ಅಥರ್ವ ವೇದದ ಈ ಮಂತ್ರ ನೋಡಿ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ ಸಹಾಯದಿಂದ ಮೋಕ್ಷ ಸಿಗುತ್ತದೆ ಎಂಬುದೂ ಕೂಡ ಇಲ್ಲ ಮತ್ತು ಇದಕ್ಕೆ ಆಧಾರವೂ ಇಲ್ಲ. ನಮ್ಮ ಈ ಒಡಕಿಲ್ಲದ, ಗೂಢವಾಗಿ ಇಡಲ್ಪಟ್ಟಿರುವ ಅಂತಃಕರಣದ ಪಾತ್ರೆಯಲ್ಲಿ  ಬೇಯಿಸಿದ ಅನ್ನವು (ಕರ್ಮಫಲವಿಪಾಕ) ಅದನ್ನು ಬೇಯಿಸಿದವನನ್ನು ಪುನಃ ಮರಳಿ ಸೇರಿಯೇ ತೀರುತ್ತದೆ ಎಂಬುದು ಈ ಮಂತ್ರದ ಆರ್ಥ. ಮಾಡಿದ್ದುಣ್ಣೋ ಮಹರಾಯ! ಜೀವಿತ ಕಾಲದಲ್ಲಿ ಮಾಡಿದ ಒಳ್ಳೆಯ, ಕೆಟ್ಟ ಕಾರ್ಯಗಳಿಗೆ ಅಂತರ್ನಿಹಿತವಾದ ಮಾಪಕವಿದ್ದು, ಅದರಲ್ಲಿ ಎಲ್ಲವೂ ದಾಖಲಾಗುತ್ತದೆ. ಅದಕ್ಕೆ ತಕ್ಕಂತೆ ಮುಂದಿನ ಫಲ ನಿರ್ಧರಿಸಲ್ಪಡುತ್ತದೆ. ಹೀಗಾಗಿ ಒಳ್ಳೆಯ ಕೆಲಸ ಮಾಡುವವರು ಯಾರಿಗೂ, ದೇವರಿಗೂ ಸಹ ಹೆದರಬೇಕಿಲ್ಲ. ಎಲ್ಲಿ ಕೆಟ್ಟ ಕೆಲಸ ಮಾಡುತ್ತೇವೆಯೋ ಎಂದು ಹೆದರಬೇಕಾಗುತ್ತದೆ. ಅಂದರೆ ನಾವು ನಮಗೆ ಮಾತ್ರ ಹೆದರಬೇಕಿದೆ.
     ಹಾಗಾದರೆ ನಾವು ದೇವರಿಗೆ ಹೆದರಬೇಕಿಲ್ಲವೆಂದಾದರೆ ಅವನನ್ನು ಪೂಜಿಸಬೇಕಿಲ್ಲ ಅಲ್ಲವೇ ಎಂದರೆ ಪೂಜಿಸಬೇಕು ಎನ್ನುವೆ. ಏನು ಸ್ವಾಮಿ, ಹೀಗೂ ಮಾತಾಡುತ್ತೀರಿ, ಹಾಗೂ ಮಾತಾಡುತ್ತೀರಿ. ಯಾವುದಾದರೂ ಒಂದು ರೀತಿಯಲ್ಲಿ ಮಾತನಾಡಿ, ಗೊಂದಲ ಮಾಡಬೇಡಿ ಎನ್ನುತ್ತೀರೆಂದು ನನಗೆ ಗೊತ್ತು. ಪೂರ್ತಿ ವಿವರಿಸಿಬಿಡುತ್ತೇನೆ, ನಂತರ ನೀವೇ ನಿರ್ಧರಿಸಿ. ಪ್ರತಿ ಮಾನವನೂ ಮೂರು ರೀತಿಯ ಋಣಗಳಿಗೆ ಬಾಧ್ಯನಾಗಿರುತ್ತಾನೆ. ಅವೆಂದರೆ, ದೇವಋಣ, ಪಿತೃಋಣ ಮತ್ತು ಆಚಾರ್ಯಋಣ. ಪಿತೃಋಣ ಮತ್ತು ಆಚಾರ್ಯಋಣಗಳು ಈಗಿನ ವಿಷಯಕ್ಕೆ ಸಂಬಂಧಿಸಿದ್ದಲ್ಲವಾದ್ದರಿಂದ ಇಲ್ಲಿ ಚರ್ಚಿಸುವುದು ಬೇಡ. ದೇವಋಣ ಅಂದರೆ ಏನು? ನಮಗೆ ಗೊತ್ತಿಲ್ಲದ, ತಿಳಿಯಲಾಗದ, ಅನಾದಿ, ಅನಂತ ದೇವರ ಋಣವನ್ನು ತೀರಿಸುವುದಾದರೂ ಹೇಗೆ? ಯಾವುದಾದರೂ ದೇವಸ್ಥಾನಕ್ಕೆ, ಚರ್ಚಿಗೆ, ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದರಿಂದ, ಹರಕೆ ಕಟ್ಟಿಕೊಂಡು ತೀರಿಸುವುದರಿಂದ, ವಜ್ರದ ಕಿರೀಟ, ಚಿನ್ನದ ರಥ ಮಾಡಿಸಿಕೊಡುವುದರಿಂದ, ದೇವರದೇ ಸೃಷ್ಟಿಯಾದ ಹಣ್ಣು, ಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸುವುದರಿಂದಷ್ಟೇ ದೇವಋಣ ತೀರುವುದೇ? ತೀರುವುದಿಲ್ಲವೆಂದಾದರೆ ತೀರಿಸುವುದಾದರೂ ಹೇಗೆ? 
ಸಾಲವನು ಪಡೆದಿಹೆವು ಋಣಿಗಳಾಗಿಹೆವು 
ಶರೀರವಿತ್ತ ದೇವಗೆ ಹೆತ್ತರ್ಗೆ ಹೊತ್ತರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||
     ನಿಜ, ಋಣಮುಕ್ತರಾಗದೆ ನಮಗೆ ಮುಕ್ತಿಯಿಲ್ಲ. ಪಂಚಭೂತಗಳಿಂದ, ಅರ್ಥಾತ್ ಪ್ರಕೃತಿಯಿಂದ, ಶರೀರ ಸೃಷ್ಟಿಯಾಗಿದ್ದು, ಪ್ರಕೃತಿಯಿಲ್ಲದಿದ್ದರೆ ಜೀವಗಳ ಉಗಮಕ್ಕೆ ಅವಕಾಶವೆಲ್ಲಿರುತ್ತಿತ್ತು? ಆದ್ದರಿಂದ ನಿಜವಾಗಿ ದೇವಋಣವನ್ನು ತೀರಿಸುವುದೆಂದರೆ ಪ್ರಕೃತಿಯ ರಕ್ಷಣೆಗೆ ನಮ್ಮ ಕೈಯಲ್ಲಾಗುವ ಕಾರ್ಯಗಳನ್ನು ಮಾಡುವುದು. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದನ್ನು ಹಾಳುಗೆಡವಿದರೆ ನಾಶವಾಗುವವರು ನಾವೇನೇ! ಇದೇ ನಮ್ಮ ಧರ್ಮ, ನಿಜವಾಗಿ ಪಾಲಿಸಬೇಕಾಗಿರುವ ಧರ್ಮ. ಆದರೆ, ಇಂದೇನಾಗುತ್ತಿದೆ? ಭೂದಾಹ ಅರಣ್ಯಗಳನ್ನು, ಅರಣ್ಯವನ್ನು ಆಶ್ರಯಿಸಿರುವ ಜೀವಸಂಕುಲವನ್ನು ನಾಶಮಾಡುತ್ತಿದೆ. ಅಂತರ್ಜಲವನ್ನು ನಮ್ಮ ದಾಹವನ್ನು ತಣಿಸಲು ಮಿತಿಮೀರಿ ಹೀರಲಾಗುತ್ತಿದೆ; ಅಂತರ್ಜಲದ ಮೂಲಗಳಾದ ಕೆರೆಕಟ್ಟೆಗಳನ್ನು ಮುಚ್ಚಲಾಗಿದೆ. ವಾಯುಮಾಲಿನ್ಯವನ್ನು ಎಗ್ಗಿಲ್ಲದೆ ಮಾಡುತ್ತಾ ಜೀವರಕ್ಷಕ ಓಜೋನ್ ಕವಚವನ್ನು ಛಿದ್ರಗೊಳಿಸಲಾಗುತ್ತಿದೆ. ಹೇಳತೀರದಷ್ಟು ಜಲಮಾಲಿನ್ಯ ಮಾಡಿ ಅನೇಕ ರೋಗ-ರುಜಿನಗಳಿಗೆ ಕಾರಣಕರ್ತರು ನಾವೇ ಆಗಿದ್ದೇವೆ. ಹೀಗೆ ಪ್ರಕೃತಿಯನ್ನು ನಾಶ ಮಾಡುತ್ತಾ ನಮ್ಮ ಗೋರಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಧರೆ ಹತ್ತಿ ಉರಿದೊಡೆ ನಿಲಲಹುದೆ? ಭೂಮಿಯ ಸಮತೋಲನ ತಪ್ಪಿ ಪ್ರಳಯವಾಗಲು ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕಿಲ್ಲ. ನಾವು ಪ್ರಕೃತಿಯ ಸಮತೋಲನ ಕಾಪಾಡಲು ಶ್ರಮಿಸಬೇಕು. ನೆಲ, ಜಲ, ವಾಯುಗಳನ್ನು ಸಂರಕ್ಷಿಸಲು ನಾವು ಸಂಕಲ್ಪಿಸಬೇಕು; ಈ ಪ್ರಕೃತಿ, ಈ ಸಮಾಜ ನಮ್ಮೊಬ್ಬರ ಸಲುವಾಗಿ ಇರುವುದಲ್ಲ. ಇದು ಸಮಸ್ತ ಜೀವಗಳ ಸ್ವತ್ತು. ಇದನ್ನು ನಮಗೆ ಅಗತ್ಯವಿರುವಷ್ಟು ಉಪಯೋಗಿಸಲು ಮಾತ್ರ ನಮಗೆ ಹಕ್ಕಿದೆ. ಅದನ್ನು ಬಿಟ್ಟು ಅದನ್ನು ಹಾಳುಗೆಡವುವುದರಿಂದ, ಇತರ ಜೀವಿಗಳಿಗೆ ಲಭ್ಯವಾಗದಂತೆ ಮಾಡುವುದರಿಂದ ದೇವರ ವಿಧಿ-ವಿಧಾನಗಳಿಗೆ ಧಕ್ಕೆ ತಂದಂತೆ ಆಗುತ್ತದೆ. ಕನಿಷ್ಠ ಪಕ್ಷ ನಮ್ಮ ಮಕ್ಕಳು, ಮೊಮ್ಮಕ್ಕಳ ದೃಷ್ಟಿಯಿಂದಲಾದರೂ ಈ ಭೂಮಿಯನ್ನು ಕಾಪಾಡಬೇಕಾದುದು, ಯಾವ ಪ್ರಕೃತಿಯಿಂದ ನಮಗೆ ಅರ್ಥ ಬಂದಿದೆಯೋ ಮತ್ತು ನಾವು ಇದ್ದೇವೆಯೋ, ಆ ನಮ್ಮೆಲ್ಲರ ಆದ್ಯ ಕರ್ತವ್ಯ. ನಿಜವಾಗಿ ತೀರಿಸಬೇಕಾಗಿರುವ ದೇವಋಣವೆಂದರೆ, ಮಾಡಬೇಕಾಗಿರುವ ದೇವರ ಪೂಜೆಯೆಂದರೆ ಇದೇ ಹೊರತು ಮತ್ತೊಂದಲ್ಲ. 
     ಇಂದು ಯಾರನ್ನು ನಮ್ಮ ಕಷ್ಟ, ಕಾರ್ಪಣ್ಯಗಳಿಗಾಗಿ ಮೊರೆಯಿಡುತ್ತೇವೆಯೋ ಆ ದೇವರುಗಳೇ ಸಮಸ್ಯೆಗಳ ಮೂಲವಾಗಿರುವುದು ಯುಗಮಹಿಮೆ. ದೇವರಿಗಾಗಿ ಧರ್ಮಯುದ್ಧಗಳು, ಮಾರಣಹೋಮಗಳು ನಡೆಯುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ತಮ್ಮ ಮತ-ಧರ್ಮದ ವಿಸ್ತಾರದ ಹಿನ್ನೆಲೆಯೇ ದೇಶ-ದೇಶಗಳ ನಡುವೆ ನಡೆಯುವ ಯುದ್ಧಗಳ ನಿಜವಾದ ಕಾರಣವೆಂಬುದು ಸುಸ್ಪಷ್ಟ. ನಾನು ದೇವರು/ದೇವರುಗಳ ವಿರುದ್ಧ ಮಾತನಾಡುತ್ತಿಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನದ ಬಗ್ಗೆ ಹೇಳುತ್ತಿದ್ದೇನೆ. ದೇವರ ಹೆಸರಿನಲ್ಲಿ ಅನೇಕ ಒಳ್ಳೆಯ ಜೊತೆಗೆ ಕೆಟ್ಟ ಸಂಪ್ರದಾಯಗಳೂ ಆಚರಿಸಲ್ಪಡುತ್ತಿವೆ. ಜಿಜ್ಞಾಸೆ, ಗೊಂದಲಗಳನ್ನು ಬಗೆಹರಿಸಲು ಆ ದೇವರೇ ಬರಬೇಕು! ಬಸವಣ್ಣನವರು ಎಲ್ಲಾ ಜಾತಿಗಳವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಆಗಿದ್ದೇನು? ಅಂತಹವರದ್ದೇ ಒಂದು ಜಾತಿ/ಧರ್ಮ ಆಯಿತು. ಮಧ್ಯಪ್ರದೇಶದಲ್ಲೂ ಸಹ ಜಾತಿ ಪದ್ಧತಿ ವಿರೋಧಿಸುವ ಗುಂಪಿದ್ದು, ಅವರನ್ನು 'ಅಜಾತರು' ಎಂಬ ಜಾತಿ ಹೆಸರು ಇಟ್ಟು ಅವರದೇ ಜಾತಿ ಮಾಡಿಬಿಟ್ಟಿದ್ದಾರೆ. ಯಾವುದೇ ಹೊಸ ವಿಚಾರ, ಜ್ಞಾನ ಪಸರಿಸುವವರನ್ನೂ ಸಹ ಪ್ರತ್ಯೇಕಿಸಿ ಹೆಸರಿಟ್ಟುಬಿಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯಾನ್ವೇಶಿಗಳು ಗೊಂದಲ, ತೊಂದರೆಗಳಿಗೆ ಸಿಲುಕುತ್ತಾರೆ. 
     ಸಾರರೂಪವಾಗಿ ಹೇಳಬೇಕೆಂದರೆ: 
೧. ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ಅದ್ಭುತ ಶಕ್ತಿ ಇದೆ. ಅದನ್ನು ದೇವರೆಂದಾದರೂ ಕರೆಯಿರಿ, ಯಾವ ಹೆಸರಿನಲ್ಲಾದರೂ ಕರೆಯಿರಿ. ಆ ಶಕ್ತಿ ಎಲ್ಲರನ್ನೂ -ನಂಬುವವರನ್ನೂ, ನಂಬದವರನ್ನೂ, ಕೆಟ್ಟವರನ್ನೂ, ಒಳ್ಳೆಯವರನ್ನೂ - ಸಮಾನಭಾವದಿಂದ ಕಾಣುತ್ತದೆ. ಆ ಶಕ್ತಿ  ಕೇವಲ ಮಾನವ ಜೀವಿಗಳಿಗೆ ಮತ್ತು ನಿರ್ದಿಷ್ಟ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಲ್ಲ.
೨. ನಮಗೆ ಆಗುವ ಎಲ್ಲಾ ಒಳಿತು ಕೆಡಕುಗಳಿಗೆ ನಾವೇ ಕಾರಣರೇ ಹೊರತು ಇತರರಲ್ಲ, ದೇವರಂತೂ ಅಲ್ಲವೇ ಅಲ್ಲ. ದೇವಸ್ಥಾನಕ್ಕೆ ಹೋಗಿ ತಪ್ಪುಕಾಣಿಕೆ ಹಾಕುವುದರಿಂದ ಮತ್ತು ಕ್ಷಮಿಸಲು ಪ್ರಾರ್ಥಿಸುವುದರಿಂದ ಮಾಡಿದ ಪಾಪ ಹೋಗುವುದಿಲ್ಲ. ಮಾಡಿದ ಕರ್ಮಕ್ಕೆ ಅನುಸಾರವಾಗಿ ಫಲ ಕಟ್ಟಿಟ್ಟ ಬುತ್ತಿ. 
೩. ಒಳ್ಳೆಯದು ಮತ್ತು ಸತ್ಯವೆಂದು ಭಾವಿಸುವ ದಾರಿಯಲ್ಲಿ ನಡೆಯುವುದೇ ದೇವರ ಪೂಜೆ.
೪. ಮೊದಲಿನಿಂದ ನಡೆದುಬಂದ ಸಂಪ್ರದಾಯಗಳನ್ನು ವಿಮರ್ಶಿಸಿ ಅದರಲ್ಲಿನ ಅರ್ಥಪೂರ್ಣ ಅಂಶಗಳನ್ನು ಉಳಿಸಿಕೊಂಡು ಪಾಲಿಸುವುದು. ಅರ್ಥವಿಲ್ಲದ ಮತ್ತು ಇತರರರಿಗೆ ನೋವು ಉಂಟುಮಾಡಬಹುದಾದ ಸಂಗತಿಗಳನ್ನು ಬಿಡುವುದು ಅಗತ್ಯ.
೫. ಸತ್ಯ ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹವಿಲ್ಲದೆ ಸ್ವೀಕರಿಸುವ ಮತ್ತು ಅಗತ್ಯವೆನಿಸಿದಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಮನೋಭಾವ ಬರಬೇಕು.
     ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ. ಆತ ತನ್ನ ಕೆಲಸ ಮಾಡಿಯೇ ಮಾಡುತ್ತಾನೆ. ನಾವು ನಮ್ಮ ಕೆಲಸ ಮಾಡೋಣ, ಅಂದರೆ ನಾವು ಏಕೆ ಹುಟ್ಟಿದ್ದೇವೆ ಎಂಬುದನ್ನು ಅರಿತು ಸತ್ಯಾನ್ವೇಶಿಗಳಾಗಿ ನಡೆಯೋಣ, ಇರುವಷ್ಟು ಕಾಲ ಯಾರಿಗೂ ಉಪಕಾರ ಮಾಡದಿದ್ದರೂ ಅಪಕಾರವನ್ನಂತೂ ಮಾಡದಿರೋಣ!
ದೇವರನು ಅರಸದಿರಿ ಗುಡಿ ಗೋಪುರಗಳಲಿ
ಇರದಿಹನೆ ದೇವ ಹೃದಯ ಮಂದಿರದಲ್ಲಿ |
ಹೃದಯವದು ಶುದ್ಧವಿರೆ ನಡೆಯು ನೇರವಿರೆ
ಪರಮಾತ್ಮ ಒಲಿಯುವನು ಮೂಢ || 
-ಕ.ವೆಂ.ನಾಗರಾಜ್.
**********************
ದಿನಾಂಕ 6.10.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ.


ಸೋಮವಾರ, ನವೆಂಬರ್ 17, 2014

ಕನ್ನಡ ರಾಜ್ಯೋತ್ಸವ

ದಿನಾಂಕ 1.11.2014ರಂದು ಹಾಸನದ ಶ್ರೀ ದರ್ಮಸ್ಥಳ ಮಂಜುನಾಥ ಆಯುರ್ವೇದಿಕ್ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂದರ್ಭದ ಫೋಟೋಗಳು:




















ಶನಿವಾರ, ನವೆಂಬರ್ 15, 2014

ದೇವರು: ಒಂದು ತರ್ಕ ವಿತರ್ಕ - 2

ಹಿಂದಿನ ಲೇಖನಕ್ಕೆ ಲಿಂಕ್: ದೇವರು: ಒಂದು ತರ್ಕ ವಿತರ್ಕ-1

     'ಏಕಂ ಸತ್ ವಿಪ್ರಾಃ ಬಹುಧಾ ವದಂತಿ' - ಒಬ್ಬನೇ ದೇವರು, ಒಂದೇ ಸತ್ಯ, ವಿಶೇಷ ಪ್ರಜ್ಞಾವಂತರು ಅದನ್ನು ಬಹುರೀತಿಯಲ್ಲಿ ಹೇಳುತ್ತಾರೆ. ಹಿಂದೂಗಳು ಬಹು ದೇವತಾರಾಧನೆ ಮಾಡುವವರಾದರೂ ಒಬ್ಬನೇ ದೇವರೆಂಬುದನ್ನು ನಂಬುತ್ತಾರೆ. ಮುಸ್ಲಿಮರೂ, ಕ್ರಿಶ್ಚಿಯನರೂ ಸಹ ಒಬ್ಬನೇ ದೇವರೆನ್ನುತ್ತಾರೆ. ಯಾರು ಆ ಒಬ್ಬ ದೇವರು? ಇಲ್ಲೇ ಸಮಸ್ಯೆ! ನಮ್ಮ ದೇವರೇ ಆ ಒಬ್ಬ ದೇವರು ಎಂದು ವಾದಿಸುವವರಿಂದಲೇ ಈ ಸಮಸ್ಯೆ. ಒಬ್ಬನೇ ದೇವರು ಅಂದಾಗ ಅವನನ್ನು ಯಾವ ಹೆಸರಿನಿಂದ ಕರೆದರೆ ಏನು? ಅಲ್ಲಾ ಅನ್ನಲಿ, ಏಸು ಅನ್ನಲಿ, ರಾಮ ಅನ್ನಲಿ, ಕೃಷ್ಣ ಅನ್ನಲಿ ತಪ್ಪೇನು ಎಂದು ವಾದಿಸುವವರ ಮಾತನ್ನು ಕೇಳುವವರು ಯಾರು? ಈ ವೇದ ಮಂತ್ರ ಹೇಳುತ್ತದೆ: 
ನ ದ್ವಿತೀಯೋ ನ ತೃತಿಯೋಶ್ಚತುರ್ಥೋ ನಾಪ್ಯುಚ್ಯತೇ | ನ ಪಂಚಮೋ ನ ಷಷ್ಠಃ ಸಪ್ತಮೋ ನಾಪ್ಯುಚ್ಯತೇ | ನಾಷ್ಟಮೋ ನ ನವಮೋ ದಶಮೋ ನಾಪ್ಯುಚ್ಯತೇ | ತಮಿದಂ ನಿಗತಂ ಸಹಃ ಸ ಏಷ ಏಕ ಏಕವೃದೇಕ ಏವಃ || 
(ಅಥರ್ವ.೧೩.೪.೧೬-೧೮,೨೦)

     ಎರಡನೆಯ ಪರಮಾತ್ಮನಿಲ್ಲ, ಮೂರನೆಯವನಿಲ್ಲ, ನಾಲ್ಕನೆಯವನು ಹೇಳಲ್ಪಡುವುದಿಲ್ಲ, ಐದನೆಯವನಿಲ್ಲ, ಆರನೆಯವನಿಲ್ಲ, ಏಳನೆಯವನು ವರ್ಣಿಸಲ್ಪಡುವುದಿಲ್ಲ, ಎಂಟನೆಯವನಿಲ್ಲ, ಒಂಬತ್ತನೆಯವನಿಲ್ಲ, ಹತ್ತನೆಯವನ ವಿವರಣೆಯೇ ಇಲ್ಲ. ಈ ಶಕ್ತಿ ಅವನಲ್ಲಿಯೇ ಸೇರಿದೆ. ಅವನು ಒಬ್ಬನೇ ಆಗಿದ್ದಾನೆ, ಒಬ್ಬನೇ ವ್ಯಾಪಕನಾಗಿದ್ದಾನೆ, ಇರುವುದು ಒಬ್ಬನೇ, ಒಬ್ಬನೇ, ಒಬ್ಬನೇ! ದೇವರು ಒಬ್ಬನೇ ಎಂದು ಈ ಮಂತ್ರ ಸಾರಿ ಸಾರಿ ಹೇಳುತ್ತಿದೆ. ಆದರೂ ನಾವು ನಮ್ಮ ದೇವರೇ ಹೆಚ್ಚು ಎಂದು ಬಡಿದಾಡುವುದಕ್ಕೆ ಅರ್ಥವಿದೆಯೇ?
     ಒಂದು ಹಂತದವರೆಗೆ ವಿವಿಧ ಆಚಾರ-ವಿಚಾರಗಳನ್ನು ಒಪ್ಪಿಕೊಳ್ಳಬಹುದು. ಆದರೆ, ನಾವು ಹೇಳುವುದೇ ಸರಿ, ಇತರರು ಹೇಳುವುದು ತಪ್ಪು, ದೇವರು ಹೀಗೆಯೇ ಇದ್ದಾನೆ, ನಾವು ಪಾಲಿಸುವ ಧರ್ಮ/ಜಾತಿ/ಮತವೇ ನೈಜವಾದದ್ದು ಎಂಬ ವಾದ ಒಪ್ಪುವುದು ಕಷ್ಟ. ಇತರ ವಿಚಾರಗಳನ್ನು ಹೊಂದಿರುವವರು ಧರ್ಮದ್ರೋಹಿಗಳು, ಶಿಕ್ಷಾರ್ಹರು, ಅವರು ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು, ನಮ್ಮ ಧರ್ಮಾನುಯಾಯಿಗಳಾಗಲೇಬೇಕು, ವಿಚಾರವನ್ನು ಒಪ್ಪಲೇಬೇಕು, ಎಂಬ ವಿಚಾರಧಾರೆ ಎಷ್ಟರ ಮಟ್ಟಿಗೆ ಸರಿ? ಅವರವರ ವಿಚಾರ ಅವರಿಗಿರಲಿ. ಅದನ್ನು ಕಡ್ಡಾಯವಾಗಿ ಇತರರ ಮೇಲೆ ಹೇರುವುದು ತರವಲ್ಲ. ತಮ್ಮ ಮತ/ಧರ್ಮ ಬೆಳೆಸಲು ಆರೋಗ್ಯ/ಶಿಕ್ಷಣ/ ಧಾರ್ಮಿಕ/ ವ್ಯಾವಹಾರಿಕ ಮಾಧ್ಯಮಗಳೆಲ್ಲವನ್ನೂ ಬಳಸಿಕೊಳ್ಳುವುದರ ಜೊತೆಗೆ ಬಡತನ, ಅಜ್ಞಾನಗಳನ್ನೂ ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಧರ್ಮಯುದ್ಧದ ಹೆಸರಿನಲ್ಲಿ ಇತರರನ್ನು ಮಟ್ಟ ಹಾಕುವ, ಬೆದರಿಕೆ ಹಾಕುವ, ಭಯೋತ್ಪಾದನೆ ನಡೆಸುವ ಕುರುಡು ಮತಾಂಧರ ಸಂಖ್ಯೆ ಸಹ ಕಡಿಮೆಯೇನಿಲ್ಲ. ವಿಗ್ರಹಾರಾಧನೆ ಮಾಡದಿರುವವರು ಧರ್ಮದ ಹೆಸರಿನಲ್ಲಿ ದೇವಸ್ಥಾನಗಳನ್ನು, ಪೂಜಾಸ್ಥಾನಗಳನ್ನು ಧ್ವ್ವಂಸ ಮಾಡಿ ಅನೇಕ ಅಮೂಲ್ಯ ಕಲಾಕೃತಿಗಳ ನಾಶ ಮಾಡುವುದನ್ನು, ಅದೇ ರೀತಿ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಘರ್ಷಣೆ ನಡೆಸುವುದನ್ನು ನಾಗರಿಕ ಸಮಾಜ ಒಪ್ಪಲಾರದು. ಕಲಾಕೃತಿಗಳನ್ನು ನಿರ್ಮಿಸುವುದು ಸುಲಭದ ಕೆಲಸವಲ್ಲ; ಆದರೆ ಹಾಳು ಮಾಡುವುದು ಸುಲಭ. ಸ್ವತಃ ಜೀವ ಕೊಡಲಾರದವರು ಜೀವ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಪ್ರಯತ್ನಗಳಿಂದ ಅವರು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ತರ್ಕಕ್ಕಾಗಿ ಕಾಲಘಟ್ಟದಲ್ಲಿ ಎಲ್ಲರೂ ಒಂದೇ ಮತ/ಜಾತಿ/ಧರ್ಮಕ್ಕೆ ಸೇರಿದರು ಎಂದಿಟ್ಟುಕೊಳ್ಳೋಣ. ಆಮೇಲೆ ಏನು ಮಾಡುವುದು? ವಾಸ್ತವವಾಗಿ ಆಗ ಘಟಿಸಬಹುದಾದುದೇನೆಂದರೆ ಅವರಲ್ಲೇ ಪುನಃ ಒಳಪಂಗಡಗಳ ಸೃಷ್ಟಿಯಾಗಿ ತಮ್ಮದೇ ಮೇಲು ಎಂದು ವಾದಿಸತೊಡಗುವರು. ದೇವರ ಕೊಡುಗೆಯಾದ ವೈಚಾರಿಕ ಶಕ್ತಿಯನ್ನು ಮೊಟಕುಗೊಳಿಸುವ, ಇದಕ್ಕೂ ಮುಂದೆ ಯೋಚಿಸಬಾರದು ಎಂದು ಬೇಲಿ ಹಾಕುವ ಇಂತಹ ಪ್ರವೃತ್ತಿಗಳಿಂದ ಒಂದು ರೀತಿಯಲ್ಲಿ ಪ್ರಗತಿಗೆ ಹಿನ್ನಡೆಯಾಗುತ್ತದೆ ಎಂದು ಅನ್ನಿಸುವುದಿಲ್ಲವೇ?
     ಸೂರ್ಯನ ಕಿರಣಗಳನ್ನು ಮಸೂರದ (ಲೆನ್ಸ್) ಮೂಲಕ ಹಾಯಿಸಿ ಕೇಂದ್ರೀಕರಿಸಿ ಒಣಗಿದ ಕಾಗದ, ತರಗೆಲೆಗಳಿಗೆ ಬೆಂಕಿ ಹೊತ್ತಿಸಲು ಸಾಧ್ಯವಿರುವಂತೆಯೇ, ನಮ್ಮ ಮನಸ್ಸನ್ನು ನಿಯಂತ್ರಿಸಿ ಒಂದು ವಿಷಯದ ಕುರಿತು ಕ್ರೋಢೀಕರಿಸಿ ಪ್ರಾರ್ಥಿಸಿದಾಗ, ನಾವು ಎಷ್ಟರ ಮಟ್ಟಿಗೆ ಆರೀತಿ ಮಾಡಲು ಸಾಧ್ಯವಿದೆಯೋ ಅಷ್ಟರ ಮಟ್ಟಿಗೆ ಸಫಲತೆ ಕಂಡುಕೊಳ್ಳಬಹುದೆಂಬುದು ನನ್ನ ವೈಯಕ್ತಿಕ ಅನುಭವ. ಅನಿರೀಕ್ಷಿತವಾಗಿ ಕಷ್ಟಕರ ಪರಿಸ್ಥಿತಿಗೆ ಸಿಲುಕಿ ಹತಾಶನಾಗಿದ್ದಾಗ, ಅವಮಾನಿತನಾಗುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದು ಒಳಿತೆಂದು ಭಾವಿಸಿದ ಸಂದರ್ಭವೊಂದರಲ್ಲಿ ನಾನು ದೇವಸ್ಥಾನಕ್ಕೆ ಹೋಗಿ ಅಡ್ಡಬೀಳಲಿಲ್ಲ. ಆ ಸಮಯದಲ್ಲಿ ನಾನು ಸುಬ್ರಹ್ಮಣ್ಯದಲ್ಲಿ ಕೊಠಡಿಯೊಂದರಲ್ಲಿ ವಾಸವಿದ್ದೆ. ದೇವಸ್ಥಾನದ ಹೊರಗಿನ ಕಟ್ಟೆಯೊಂದರ ಮೇಲೆ ಕುಳಿತು ನನ್ನನ್ನು ಪಾರು ಮಾಡುವಂತೆ ಅಗೋಚರ ಶಕ್ತಿಯಲ್ಲಿ ತದೇಕ ಚಿತ್ತದಿಂದ ಆರ್ತನಾಗಿ, ಮೌನವಾಗಿ ಪ್ರಾರ್ಥಿಸಿದ್ದೆ. ನನ್ನ ಪ್ರಾರ್ಥನೆಯ ಫಲವೋ, ದೇವರ ಸಹಾಯವೋ ಎಂಬಂತೆ ನನ್ನನ್ನು ಮುಸುಕಿ ಮುಳುಗಿಸಲಿದ್ದ ಕಾರ್ಮೋಡ ಸರಿದು ಹೋಗಿದ್ದಂತೂ ಸತ್ಯ. ಒಮ್ಮೆಯಾದರೆ ಆಕಸ್ಮಿಕವೆನ್ನಬಹುದಿತ್ತು. ಹಲವಾರು ಸಂದರ್ಭಗಳಲ್ಲಿ ಮನಸ್ಸು ನಿಯಂತ್ರಿಸಿ ಮಾಡಿದ ಏಕಚಿತ್ತದ ಧ್ಯಾನ ನನಗೆ ಪರಿಹಾರದ ದಾರಿ ತೋರಿದೆ, ಸಾಂತ್ವನ ನೀಡಿದೆ. ನನಗೆ ದೇವರ ಕುರಿತು ಸ್ಪಷ್ಟ ಕಲ್ಪನೆಯಿಲ್ಲ, ಅಭಿಪ್ರಾಯವಿಲ್ಲ. ಯಾರನ್ನು ಪ್ರಾರ್ಥಿಸುತ್ತಿದ್ದೇನೆ, ಆ ದೇವರು ಹೇಗಿದ್ದಾನೆ ಎಂಬುದೂ ಗೊತ್ತಿಲ್ಲ. ಆದರೆ ಅಗೋಚರ, ಕಲ್ಪನೆ/ತರ್ಕಕ್ಕೆ ಮೀರಿದ, ನಮ್ಮನ್ನೆಲ್ಲಾ ನಿಯಂತ್ರಿಸುವ ಶಕ್ತಿಯೊಂದಿದೆ ಎಂಬ ನಂಬಿಕೆ ಮಾತ್ರ ಧೃಢವಾಗಿದ್ದು ನಾನು ಪ್ರಾರ್ಥಿಸಿದ್ದು, ಪ್ರಾರ್ಥಿಸುವುದು ಆ ಶಕ್ತಿಯನ್ನೇ! ಹಾಗಾದರೆ ನಮ್ಮ ಪ್ರಾರ್ಥನೆ ಸಫಲಗೊಳಿಸಿಕೊಳ್ಳಬಲ್ಲ ಶಕ್ತಿ ನಮ್ಮೊಳಗೇ ಇದೆಯೇ? ಹೌದಾದರೆ ದೇವರು ನಮ್ಮೊಳಗೂ ಇದ್ದಾನಲ್ಲವೇ?
     ದೇವರು ಸಾಕಾರನೋ, ನಿರಾಕಾರನೋ ಎಂಬುದು ಇನ್ನೊಂದು ವಿಶೇಷವಾಗಿ ಚರ್ಚಿತವಾಗುವ ವಿಷಯ.  ನಾನು ವಿಗ್ರಹಾರಾಧನೆಯನ್ನು ಸಮರ್ಥಿಸುವುದಿಲ್ಲವೆಂದ ಮಾತ್ರಕ್ಕೆ ಅದನ್ನು ವಿರೋಧಿಸುವುದಿಲ್ಲ. ಏಕೆಂದರೆ ನಾನು ಯಾವುದೇ ವಿಚಾರ, ತತ್ವಗಳನ್ನು ಪ್ರತಿಪಾದಿಸುವಷ್ಟು ಪ್ರಬುದ್ಧತೆ ಹೊಂದಿಲ್ಲ. ವಿಗ್ರಹ ಪೂಜೆಯಿಂದ ಶಾಂತಿ, ನೆಮ್ಮದಿ ಪಡೆಯುತ್ತಿರುವ/ಪಡೆಯಬಯಸುವ ಬಹುತೇಕರ ಶ್ರದ್ಧೆ, ನಂಬಿಕೆಗಳು ಸುಳ್ಳೆಂದು ನಾನು ಹೇಗೆ ಹೇಳಲಿ? ಅವರುಗಳ ಪ್ರಾರ್ಥನೆಗೆ ವಿಗ್ರಹಗಳು ಮಾಧ್ಯಮವಾಗಿರಬಹುದು. ವಿಗ್ರಹಗಳು ಅವರ ಮನೋಶಕ್ತಿಯ ಕೇಂದ್ರೀಕರಣಕ್ಕೆ ಸಾಧನ ಹಾಗೂ ಸಹಕಾರಿಯಾಗಿ ಇರಬಹುದು. ವಿಗ್ರಹಗಳನ್ನು ದೇವರೆಂದು ಭಾವಿಸಿ, ನಂಬಿ ಪೂಜಿಸುವವರ ಮಾನಸಿಕ ಚಿಂತನೆಯ ಅಲೆಗಳು ವಿಗ್ರಹಗಳಲ್ಲಿ ಕ್ರೋಢೀಕೃತಗೊಂಡು ಅಲ್ಲಿ ಶಕ್ತಿ ಸಂಚಯನ ಆಗಿರಬಹುದು. ಅಂತಹ ಸ್ಥಳಗಳು ಶಕ್ತಿ ಕೇಂದ್ರಗಳಾಗಿರಬಹುದು. ಇಲ್ಲೂ ಸಹ ವಿಗ್ರಹಗಳಿಗಿಂತ ಅವುಗಳನ್ನು ಪೂಜಿಸುವವರ ಮನೋಶಕ್ತಿಯೇ ನಿರ್ಧಾರಕವೆಂದು ನನ್ನ ವೈಯಕ್ತಿಕ ಅನಿಸಿಕೆ. ದೇವರನ್ನು ವಿಗ್ರಹಗಳಲ್ಲಿ ಅಥವ ವಿಗ್ರಹಗಳ ಮೂಲಕ ಕಾಣುವುದರಲ್ಲಿಯೂ ಅರ್ಥವಿರಬಹುದು, ಇಲ್ಲದಿರಬಹುದು. ಆದರೆ ವಿಗ್ರಹಗಳೇ ದೇವರೆಂದು ಭಾವಿಸುವುದು ತಾರ್ಕಿಕವಾಗಿಯೂ ಸಹ ಕಷ್ಟಕರ ಸಂಗತಿ. ಒಂದು ಹಂತದ ಪರಿಪಕ್ವತೆ ಬಂದ ನಂತರದಲ್ಲಿ ವಿಗ್ರಹ ಪೂಜೆಯ ಅಗತ್ಯ ಬಾರದೇ ಹೋಗಬಹುದು. ಕೆಲವು ದೇವಸ್ಥಾನಗಳಲ್ಲಿ ದೇವರ ಪ್ರಸಾದ ಕೇಳಿ ಬೇಡುತ್ತಾ ಕುಳಿತ ಭಕ್ತರನ್ನು ಗಮನಿಸಿದ್ದೀರಾ? ಬಲಗಡೆ ಹೂವು ಬಿದ್ದರೆ ಒಪ್ಪಿಗೆಯೆಂತಲೂ ಎಡಗಡೆ ಬಿದ್ದರೆ ಅಶುಭವೆಂದು ನಂಬುವ ಅವರು ದೇವರೊಂದಿಗೆ ಮಾತನಾಡುವ ಪರಿಯನ್ನೂ ನೋಡಿದ್ದೇನೆ. ತಮ್ಮ ಕಷ್ಟ ಸುಖ ತೋಡಿಕೊಳ್ಳುತ್ತಾ 'ಯಾಕಪ್ಪಾ ಇಷ್ಟು ಪರೀಕ್ಷೆ ಮಾಡುತ್ತೀಯಾ? ಇನ್ನೂ ಸತಾಯಿಸಬೇಡ, ಒಳ್ಳೆಯದು ಮಾಡಪ್ಪಾ, ಬೇಗ ಪ್ರಸಾದ ಕೊಡು' ಎಂಬಿವೇ ಇತ್ಯಾದಿ ಹಳಹಳಿಸುತ್ತಿರುತ್ತಾರೆ. ಪ್ರಸಾದ ಕೇಳಲು ಬಂದ ಇತರರೂ ಅವರ ಸರದಿಗಾಗಿ ಕಾಯುತ್ತಿರುತ್ತಾರೆ. ಹಲವರಿಗೆ ಅದು ಭ್ರಮೆಯಂತೆ ಕಂಡರೂ ಭಕ್ತರ ತದೇಕ ಚಿತ್ತತೆ, ನಂಬಿಕೆ ಅಲ್ಲಿ ಎದ್ದು ಕಾಣುತ್ತದೆ. ಅಲ್ಲಿಯೂ ಅವರ ಮನೋಶಕ್ತಿಯೇ ಪ್ರಮುಖವೆಂದು, ವಿಗ್ರಹವಲ್ಲವೆಂದು ನನಗೆ ಅನ್ನಿಸುತ್ತದೆ. ವೈದ್ಯರಲ್ಲಿನ ನಂಬಿಕೆ ಅರ್ಧ ಕಾಯಿಲೆ ವಾಸಿ ಮಾಡುವಂತೆ ದೇವರಲ್ಲಿನ ಅವರ ನಂಬಿಕೆ ಅವರಿಗೆ ನೆಮ್ಮದಿ, ಶಾಂತಿ ಕಂಡುಕೊಳ್ಳಲು ನೆರವಾಗಬಹುದು. ಮೊದಲಿನಿಂದ ಪೂರ್ವಜರು ಮತ್ತು ಸುತ್ತಮುತ್ತಲಿನವರು ಇಟ್ಟುಕೊಂಡು ಬಂದ ನಂಬಿಕೆ, ನಡವಳಿಕೆಗಳನ್ನು ಅವರು ಮುಂದುವರೆಸುತ್ತಾರೆ. ಮುಂದೆ ಅವರ ಮಕ್ಕಳೂ ಅದೇ ರೀತಿಯಲ್ಲಿ ಸಾಗಬಹುದು.
     ದೇವರು ನಿರಾಕಾರನೆಂದು ಒಪ್ಪುವವರ ವಾದವನ್ನೂ ತಳ್ಳಿಹಾಕಲಾಗದು. ಅವರ ಪ್ರಕಾರ ಆಕಾರ ಯಾವುದೇ ಇರಲಿ, ಅದು ಸಂಯೋಗಜನ್ಯವಾದ ಪ್ರಾಕೃತಿಕ ಮತ್ತು ಭೌತಿಕ ವಸ್ತುಗಳಿಗೆ ಅನ್ವಯಿಸುತ್ತದೆಯೇ ಹೊರತು ಆಧ್ಯಾತ್ಮಿಕ ತತ್ವಗಳಿಗಲ್ಲ. ಆಕಾರಿಯಾದವನಿಗೆ ಮಿತಿಯಿರುತ್ತದೆ, ಆದ್ದರಿಂದ ಅವನನ್ನು ಸರ್ವಜ್ಞ, ಸರ್ವವ್ಯಾಪಕ, ಸರ್ವಶಕ್ತ ಎನ್ನಲಾಗುವುದಿಲ್ಲ. ಆಕಾರಕ್ಕೆ ಆದಿ ಇರುತ್ತದೆ, ಅಂತ್ಯವೂ ಇರುತ್ತದೆ. ಇದು ದೇವರ ಅನಾದಿ, ಅನಂತ ತತ್ವಕ್ಕೆ ವಿರೋಧವಾಗುತ್ತದೆ. ದೇವರಿಗೆ ಆಕಾರವನ್ನು ಕೊಟ್ಟವರು ಯಾರು ಎಂಬ ಪ್ರಶ್ನೆ ಬರುತ್ತದೆ. ದೇವರಿಗೆ ಆಕಾರವನ್ನು ಕೊಟ್ಟವರು ದೇವರಿಗಿಂತಲೂ ಶ್ರೇಷ್ಠರೇ ಆಗುತ್ತಾರೆ. ಹಾಗಾದರೆ ದೇವರ ಶ್ರೇಷ್ಠತ್ವಕ್ಕೆ ಧಕ್ಕೆ ಬರುವುದಿಲ್ಲವೇ? ಈ ಸೃಷ್ಟಿ, ಈ ಬ್ರಹ್ಮಾಂಡವೆಂದರೆ ಒಂದು ಭೂಮಿಯಲ್ಲ, ಒಂದು ಸೂರ್ಯನಲ್ಲ, ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾದ ನಕ್ಷತ್ರಗಳಿರುವ ಅನಂತ ಆಕಾಶದಲ್ಲಿ ಊಹಿಸಲು ಸಾಧ್ಯವಿಲ್ಲದಂತಹ ಕಾಯಗಳಿವೆ. ಇದನ್ನೆಲ್ಲಾ ರಚಿಸುವ, ನಿಯಂತ್ರಿಸುವ ಶಕ್ತಿ ಎಲ್ಲೋ ಒಂದು ಸ್ಥಳದಲ್ಲಿ ಇರುವಂತಹ ಶಕ್ತಿಗೆ ಅಥವ ವ್ಯಕ್ತಿಗೆ ಸಾಧ್ಯವಿಲ್ಲ. ವೇದಮಂತ್ರ ಹೇಳಿರುವಂತೆ:
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ | ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ || (ಯಜು.೪೦.೫.) 
    ಅದು ವಿಶ್ವಕ್ಕೇ ಗತಿ ನೀಡುತ್ತದೆ, ಅದು ಸ್ವತಃ ಚಲಿಸುವುದಿಲ್ಲ, ಅದು ದೂರದಲ್ಲಿಯೂ ಇದೆ, ಹತ್ತಿರದಲ್ಲಿಯೂ ಇದೆ. ಅದು ಎಲ್ಲದರ ಒಳಗೂ ಇದೆ, ಹೊರಗೂ ಇದೆ ಎಂಬುದು ಇದರ ಅರ್ಥ. ಇಂತಹ ಸರ್ವವ್ಯಾಪಕತ್ವ ಆಕಾರಿಗೆ ಅಸಾಧ್ಯ.
     ವಿಗ್ರಹಾರಾಧನೆಗೂ ಸಮರ್ಥನೆಗಳನ್ನು ಕೊಡಲಾಗುತ್ತದೆ. ಆಸ್ತಿಕರು ಎಂದು ಗುರುತಿಸಿಕೊಳ್ಳುವವರಲ್ಲಿ ಹೆಚ್ಚಿನವರು ದೇವರನ್ನು ಸಾಕಾರ ರೂಪದಲ್ಲೇ ಆರಾಧಿಸುತ್ತಿದ್ದಾರೆ ಮತ್ತು ಅದನ್ನು ಒಪ್ಪಿಕೊಂಡಿದ್ದಾರೆ. ಈ ಉದಾಹರಣೆಯನ್ನು ವಿಗ್ರಹಾರಾಧನೆಗೆ ಸಮರ್ಥನೆಯಾಗಿ ಬಳಸಲಾಗುತ್ತದೆ. ಒಂದು ಪ್ರಾಂತದ ರಾಜನೊಬ್ಬ ಸ್ವಾಮಿ ವಿವೇಕಾನಂದರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭ. ಆ ರಾಜನಿಗೆ ವಿಗ್ರಹಾರಾಧನೆಯಲ್ಲಿ/ಮೂರ್ತಿ ಪೂಜೆಯಲ್ಲಿ ನಂಬಿಕೆಯಿರಲಿಲ್ಲ. ವಿಗ್ರಹಪೂಜೆ ಬಗ್ಗೆ ಆತ ನಿಕೃಷ್ಟವಾಗಿ ಮಾತನಾಡಿದುದನ್ನು ಶಾಂತವಾಗಿ ಆಲಿಸಿದ ವಿವೇಕಾನಂದರು ರಾಜನ ಭಾವಚಿತ್ರವೊಂದನ್ನು ತರಿಸಲು ಹೇಳಿದರು. ಭಾವಚಿತ್ರ ತಂದಾಗ ಅಲ್ಲಿದ್ದ ಸಭಾಸದರೊಬ್ಬರನ್ನು ಕರೆದು ಆ ಭಾವಚಿತ್ರದ ಮೇಲೆ ಉಗುಳಲು ಹೇಳಿದರು. ಆ ವ್ಯಕ್ತಿ ನಡುಗಿಹೋದರು -'ರಾಜರ ಭಾವಚಿತ್ರದ ಮೇಲೆ ಉಗುಳುವುದೇ?'. ವಿವೇಕಾನಂದರು ಹೇಳಿದರು -'ಇದು ರಾಜರ ಭಾವಚಿತ್ರವೇ ಹೊರತು ರಾಜರಲ್ಲ; ಉಗುಳಿದರೆ ರಾಜರಿಗೆ ಏನೂ ಆಗುವುದಿಲ್ಲ'. ಅದಕ್ಕೆ ಅವರು 'ಸ್ವಾಮಿ, ಇದು ಭಾವಚಿತ್ರವಿರಬಹುದು. ಆದರೆ ಇದರಲ್ಲಿ ನಾವು ರಾಜರನ್ನು ಕಾಣುತ್ತಿದ್ದೇವೆ. ಇದರ ಮೇಲೆ ಉಗುಳುವುದು ನಮಗೆ ಕಲ್ಪನೆಯಲ್ಲಿಯೂ ಅಸಾಧ್ಯ'. ಆಗ ವಿವೇಕಾನಂದರು ರಾಜರಿಗೆ 'ದೇವರ ವಿಗ್ರಹಗಳು ದೇವರಲ್ಲ. ಅದರೆ ಜನ ಅಲ್ಲಿ ದೇವರನ್ನು ಕಾಣುತ್ತಾರೆ. ಅವುಗಳನ್ನು ಪೂಜಿಸಿ ನೆಮ್ಮದಿ, ಶಾಂತಿ ಕಂಡುಕೊಳ್ಳುತ್ತಾರೆ. ಆದ್ದರಿಂದ ವಿಗ್ರಹಪೂಜೆಯನ್ನು ವಿರೋಧಿಸುವುದು ಸಲ್ಲ' ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಇಲ್ಲೂ ಸಹ ಒಂದು ಸಂದೇಹ ಕಾಡದೇ ಇರದು. ಅದೆಂದರೆ, ರಾಜನನ್ನು ನೋಡಲು ಸಾಧ್ಯವಿದ್ದುದರಿಂದ ರಾಜರ ಭಾವಚಿತ್ರ ತಯಾರಿಸಲು ಸಾಧ್ಯವಿತ್ತು. ಆದರೆ ದೇವರು ಹೀಗೆಯೇ ಇದ್ದನೆಂದು ಹೇಗೆ ಹೇಳುವುದು? ಅವನನ್ನು ಕಂಡಿದ್ದವರು ಯಾರು?
ಆಗಸದ ಬಣ್ಣವದು ತೋರುವಂತಿಹುದೇನು
ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು |
ಅರಿತವರು ಯಾರಿಹರು ಗಗನದ ನಿಜಬಣ್ಣ
ದೇವನೆಂತಿಹನೆಂದು ಗೊತ್ತಿಹುದೆ ಮೂಢ ||
-ಕ.ವೆಂ.ನಾಗರಾಜ್. 
**********
ದಿನಾಂಕ 29.9.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ನವೆಂಬರ್ 14, 2014

ದೇವರು: ಒಂದು ತರ್ಕವಿತರ್ಕ - 1

     'ಮಾಮಿ ಜೋತ ಮಾಡು ಪುಟ್ಟಾ'
     ಅಪ್ಪನೋ, ಅಮ್ಮನೋ, ಯಾರೋ ಹಿರಿಯರೋ 5-6 ತಿಂಗಳ ಮಗುವಿನ ಎರಡೂ ಕೈಯನ್ನು ಹಿಡಿದು ಜೋಡಿಸಿ ದೇವರಿಗೆ ನಮಸ್ಕಾರ ಮಾಡುವುದನ್ನು ಹೇಳಿಕೊಡುತ್ತಾರೆ. ಮುಂದೆ ಮಗು 'ಮಾಮಿ ಜೋತ ಮಾಡು' ಎಂದಾಗಲೆಲ್ಲಾ ಕೈ ಜೋಡಿಸುತ್ತದೆ, ದೇವರ ಕೋಣೆಯ ಕಡೆಗೋ, ದೇವರ ಪಟವನ್ನೋ ನೋಡುತ್ತದೆ. ಮುಂದುವರೆದು ಹಣೆ ನೆಲಕ್ಕೆ ಮುಟ್ಟಿಸುತ್ತದೆ. ದೊಡ್ಡವರು ಅದನ್ನು ಕಂಡು ಸಂಭ್ರಮಿಸಿದಾಗ ಮಗುವೂ ಸಂತಸಪಡುತ್ತದೆ. ಸಾಮಾನ್ಯವಾಗಿ ಅವರವರ ಮನೆಯ ಪದ್ಧತಿ, ಸಂಸ್ಕಾರ, ರೀತಿ-ನೀತಿಗಳನ್ನು ಅನುಸರಿಸಿ ಮಕ್ಕಳಿಗೆ ಈ ರೀತಿಯ ಪಾಠ ಕಲಿಸಲಾಗುತ್ತದೆ. ಹೀಗೆ ಚಿಕ್ಕಂದಿನಿಂದ ಆಗುವ ಅಭ್ಯಾಸ ದೊಡ್ಡದಾದ ಮೇಲೂ ಮುಂದುವರೆಯುತ್ತದೆ. ಮಕ್ಕಳು ಹಟ ಮಾಡಿದಾಗ 'ಗುಮ್ಮ ಬರುತ್ತಾನೆ' ಎಂದು ಹೆದರಿಸುತ್ತಾರೆ. ಗುಮ್ಮ ಕೆಟ್ಟದರ ಸಂಕೇತವಾಗಿ, ಮಾಮಿ ಒಳಿತಿನ ಸಂಕೇತವಾಗಿ ಮಕ್ಕಳ ಮನಸ್ಸಿನಲ್ಲಿ ಕುಳಿತುಬಿಡುತ್ತದೆ.
ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ ||
     ಜಗತ್ತು, ಜೀವ ಮತ್ತು ದೇವ - ಈ ಮೂರು ಅಂಶಗಳ ಸುತ್ತಲೇ ಬಹುತೇಕ ಎಲ್ಲಾ ಜಿಜ್ಞಾಸೆಗಳು, ಚರ್ಚೆಗಳು, ಸಿದ್ಧಾಂತಗಳು ಸುತ್ತುತ್ತಿರುತ್ತವೆ. ಈ ಮೂರು ಅಂಶಗಳ ಕುರಿತು ವಿವಿಧ ಸಿದ್ಧಾಂತಗಳು ವಿವಿಧ ಧರ್ಮಗ್ರಂಥಗಳಾದವು, ಅದಕ್ಕನುಸಾರವಾಗಿ ಜಾತಿ, ಮತಗಳು, ಪಂಥಗಳು ಉದಯಿಸಿದವು. ಈ ಮೂರು ಅಂಶಗಳ ಪೈಕಿ ಜೀವಾತ್ಮ ಮತ್ತು ಪರಮಾತ್ಮರ ಬಗ್ಗೆ ಚರ್ಚೆ, ಜಿಜ್ಞಾಸೆಗಳು ನಡೆದಷ್ಟು ಇತರ ವಿಷಯಗಳ ಕುರಿತು ನಡೆದಿರಲಾರವು.  ಜಗತ್ತಿನ ಚರಾಚರ ಜೀವಿಗಳು, ನಿರ್ಜೀವಿಗಳ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತವಾದ ಶಕ್ತಿಯನ್ನು ದೇವರೆಂದು ಇಟ್ಟುಕೊಳ್ಳಬಹುದು. ದೇವರೇ ಇಲ್ಲ ಎಂದು ಹೇಳುವ ಚಾರ್ವಾಕ/ನಾಸ್ತಿಕರಿಂದ ಹಿಡಿದು, ದೇವರಿಗೆ ಹಲವಾರು ಹೆಸರುಗಳನ್ನು ನೀಡಿ ಪೂಜಿಸುವವರು, ನಾವು ಪೂಜಿಸುವ ದೇವರೊಬ್ಬರೇ ದೇವರು, ಆ ದೇವರನ್ನು ಪೂಜಿಸದವರೆಲ್ಲಾ ಪಾಖಂಡಿಗಳು/ಕಾಫಿರರು ಎಂದು ಹೇಳುವವರು, ತಮ್ಮ ನಂಬಿಕೆಯನ್ನು ಇತರರ ಮೇಲೆ ಬಲವಂತವಾಗಿ ಹೇರಬಯಸುವವರು, ತಮ್ಮ ಧರ್ಮ ಪ್ರಚಾರಕ್ಕಾಗಿ ಇತರರ ಬಡತನ, ಅನಾರೋಗ್ಯ, ತಿಳುವಳಿಕೆಯ ಕೊರತೆಯನ್ನು ಬಂಡವಾಳ ಮಾಡಿಕೊಳ್ಳುವವರು, ಅನೇಕ ಆಮಿಷಗಳನ್ನು ಒಡ್ಡಿ ಮತಾಂತರದ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿರುವವರು, ಧರ್ಮಯುದ್ಧದ ಹೆಸರಿನಲ್ಲಿ ನರಮೇಧ ಮಾಡುವವರು, ಇತ್ಯಾದಿ, ಇತ್ಯಾದಿ ಮಾನವರ ಸಮೂಹದಲ್ಲಿ ನಾವು ಬಾಳುತ್ತಿದ್ದೇವೆ. ಜಗತ್ತಿನ ಸೃಷ್ಟಿ ಹೇಗಾಯಿತು ಎಂಬ ಬಗ್ಗೆ ವೈಜ್ಞಾನಿಕವಾಗಿ, ಧಾರ್ಮಿಕವಾಗಿ ವಿವೇಚಿಸುವ, ವಿಶ್ಲೇಷಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಆದರೆ ಎಲ್ಲರೂ ಒಪ್ಪುವಂತಹ ವಿಚಾರವನ್ನು ಮುಂದಿಡಲು, ಆ ಅಗೋಚರ ಶಕ್ತಿಯ ಮೂಲವನ್ನು ತಿಳಿದು ಅರ್ಥೈಸುವ ಕಾರ್ಯ ಮಾಡಲು ಬಹಳ ಹಿಂದಿನ ಕಾಲದಿಂದಲೇ ನಿರಂತರ ಪ್ರಯತ್ನಗಳು, ಹುಡುಕಾಟಗಳು ಸಾಗಿವೆ, ಸಾಗುತ್ತಲೇ ಇವೆ, ಬಹುಷಃ ಸಾಗುತ್ತಲೇ ಇರುತ್ತದೆ.
ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ 
ನಿಲ್ವ ನೆಲ ಹರಿವ ಜಲ ಜೀವರಕ್ಷಕ ಗಾಳಿ |
ಅಚ್ಚರಿಯ ಆಕಾಶಗಳೆಲ್ಲದರ ಕಾರಕನು
ಪ್ರೇರಕನು ಅವನಲ್ಲವೇನು ಮೂಢ || 
     ಸಕಲ ಜೀವರಾಶಿಗಳಲ್ಲಿ ಮನುಷ್ಯ ಪ್ರಾಣಿ ಬಿಟ್ಟರೆ ಉಳಿದವು ದೇವರ ಬಗ್ಗೆ ತಲೆ ಕೆಡಿಸಿಕೊಂಡಿರಲಾರವು. ಮನುಷ್ಯ ಮಾತ್ರ ತಾನೂ ತಲೆ ಕೆಡಿಸಿಕೊಂಡು ಇತರರ ತಲೆಯನ್ನೂ ಕೆಡಿಸುತ್ತಿದ್ದಾನೆ. ಇದಕ್ಕೆ ಕಾರಣ ಅವನಿಗೆ ವಿವೇಚಿಸುವ ಶಕ್ತಿಯನ್ನು ದೇವರು ನೀಡಿರುವುದು. ಮನುಷ್ಯನಿಗೂ ಸಹ ಮೊದಲು ಈ ವಿಚಾರಗಳಿರಲಿಲ್ಲ. ವಿಕಾಸ ಹೊಂದುತ್ತಾ ಬಂದಂತೆ, ವಿಚಾರವಿಮರ್ಶೆ ಮಾಡುವ ಬುದ್ಧಿ ಬೆಳೆಯುತ್ತಾ ಹೋದಂತೆ, ತನ್ನನ್ನು ಮತ್ತು ಇತರ ಜೀವರಾಶಿಗಳನ್ನು ನಿಯಂತ್ರಿಸುವ ಶಕ್ತಿಯನ್ನು ಭಕ್ತಿಯಿಂದ, ಭಯದಿಂದ, ಗೌರವದಿಂದ ನೋಡುವ ಪ್ರವೃತ್ತಿ ಬೆಳೆದು ತನ್ನ ಕಲ್ಪನೆಯ ದೇವರುಗಳನ್ನು ಸೃಷ್ಟಿಸಿದ. ಮರ, ಗಿಡ, ಸೂರ್ಯ, ಚಂದ್ರ, ನಕ್ಷತ್ರ, ಗುಡುಗು, ಸಿಡಿಲು, ಮಿಂಚು, ಬೆಂಕಿ, ನೀರು, ಇತ್ಯಾದಿಗಳಲ್ಲಿ ದೇವರನ್ನು ಕಂಡು ಪೂಜಿಸತೊಡಗಿದ. ಇವುಗಳನ್ನೂ ಮೀರಿದ, ಇವುಗಳನ್ನೂ ನಿಯಂತ್ರಿಸುವ ಶಕ್ತಿಯೊಂದಿದೆ ಎಂದು ಅರಿತು ದೇವರ ಸಾಮ್ರಾಜ್ಯವನ್ನು ತನ್ನ ಕಲ್ಪನಾಶಕ್ತಿಯಲ್ಲಿ ಬೆಳೆಸತೊಡಗಿದ. ದೇವರ ಹೆಸರಿನಲ್ಲಿ ಕಥೆಗಳು, ಪುರಾಣಗಳು ಹುಟ್ಟಿಕೊಂಡವು. ದೇವರ ಮಹಿಮೆಯನ್ನು ಕೊಂಡಾಡಿದವು. ತಮ್ಮ ಕಲ್ಪನೆ, ನಂಬಿಕೆ, ಪ್ರದೇಶಗಳಿಗೆ ತಕ್ಕಂತೆ ಗುಂಪುಗಳಾಗಿ ಜಾತಿ, ಮತ, ಧರ್ಮಗಳು ಹುಟ್ಟಿಕೊಂಡವು. ನಂತರದಲ್ಲಿ ಹುಟ್ಟಿನ ಆಧಾರದಲ್ಲಿ ಮನುಷ್ಯನ ಜಾತಿ, ಧರ್ಮಗಳು ನಿಗದಿಸಲ್ಪಟ್ಟವು. ದೇವರು ಮನುಷ್ಯನನ್ನು ಸೃಷ್ಟಿಸಿದ. ಮನುಷ್ಯ ಹಲವು ದೇವರುಗಳನ್ನೇ ಸೃಷ್ಟಿಸಿದ.
ತಾಯಿಯು ಅವನೆ ತಂದೆಯು ಅವನೆ
ಬಂಧುವು ಅವನೆ ಬಳಗವು ಅವನೆ |
ವಿದ್ಯೆಯು ಅವನೆ ಸಕಲಸಿರಿಯವನೆ
ಸಕಲ ಸರ್ವನವನಲ್ಲದಿನ್ಯಾರು ಮೂಢ || 
     'ಸಂಕಟ ಬಂದಾಗ ವೆಂಕಟರಮಣ' ಎಂಬಂತೆ ನಾವು ಕಷ್ಟದ ಪರಿಸ್ಥಿತಿಯಲ್ಲಿ ದೇವರನ್ನು ನೆನೆಯುವುದೇ ಹೆಚ್ಚು. ತೊಂದರೆ, ತಾಪತ್ರಯಗಳಿಲ್ಲದವರು ಯಾರಿದ್ದಾರೆ? ಹೀಗಾಗಿ ಯಾರೂ ಸಹಾಯಕ್ಕೆ ಬಾರದಿದ್ದಾಗ ಸಹಾಯ ಮಾಡು ಎಂದು ದೇವರನ್ನು ಬಿಟ್ಟು ಇನ್ನು ಯಾರನ್ನು ಕೋರಬೇಕು? ಈ ಕಾರಣಕ್ಕಾಗಿಯಾದರೂ ದೇವರು ನಮಗೆ ಬೇಕು. ಒಂದೆರಡು ಉದಾಹರಣೆಗಳನ್ನು ಗಮನಿಸೋಣ. ರಸ್ತೆ ಅಪಘಾತದಲ್ಲಿ ಇರುವ ಒಬ್ಬನೇ ೬ ವರ್ಷದ ಮಗ ತೀವ್ರವಾಗಿ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿಸಿದ ತಂದೆ-ತಾಯಿಯರ ಗೋಳು ಹೇಳತೀರದು. ತುಂಬಾ ರಕ್ತಸ್ರಾವವಾಗಿ ಮಗುವಿಗೆ ತುರ್ತಾಗಿ ರಕ್ತ ಕೊಡಬೇಕಾಗಿದೆ. ತಂದೆ ನೀಡಿದ ರಕ್ತದ ಪ್ರಮಾಣ ಸಾಲದು. ಆಸ್ಪತ್ರೆಯಲ್ಲಿ ಮಗುವಿಗೆ ಬೇಕಾದ ವರ್ಗದ ರಕ್ತ ಇಲ್ಲ. ಬೇರೆಲ್ಲಾ ಕಡೆ ರಕ್ತ ಹೊಂದಿಸಲು ಪರದಾಡಿದರೂ ಫಲ ಸಿಗಲಿಲ್ಲ. ಏನು ಮಾಡಲೂ ತೋಚದ ಆ ಸಂದರ್ಭದಲ್ಲಿ ಅಕಾಸ್ಮಾತ್ತಾಗಿ ಅಲ್ಲಿಗೆ ಬಂದಿದ್ದವರೊಬ್ಬರಿಗೆ ವಿಷಯ ತಿಳಿದು ಅವರ ರಕ್ತದ ವರ್ಗವೂ ಮಗುವಿನ ರಕ್ತದ ವರ್ಗಕ್ಕೆ ಸೇರಿದ್ದು ಅವರು ರಕ್ತ ನೀಡಿದ್ದಲ್ಲದೇ ತಮ್ಮ ಸಹೋದರನನ್ನೂ ಕರೆಸಿ ಅವರಿಂದಲೂ ರಕ್ತದಾನ ಮಾಡಿಸಿದರು. ಮಗುವಿನ ಪ್ರಾಣ ಉಳಿಯಿತು. ಮಗುವಿನ ತಂದೆ, ತಾಯಿ ಆ ವ್ಯಕ್ತಿಯ ಕಾಲಿಗೆ ಬಿದ್ದು ಹೇಳಿದರು -'ನೀವೇ ನಮ್ಮ ಪಾಲಿನ ದೇವರು!'.
     ಸುಮಾರು 35 ವರ್ಷಗಳ ಹಿಂದಿನ ನನ್ನ ಸ್ವಂತದ ಒಂದು ಅನುಭವ ಹೇಳುವೆ. ನಾನು ಹಾಸನ ಜಿಲ್ಲೆಯ ಹಳ್ಳಿಮೈಸೂರಿನಲ್ಲಿ ಉಪತಹಸೀಲ್ದಾರನಾಗಿದ್ದಾಗ ಒಂದು ಮಧ್ಯಾಹ್ನ ಒಬ್ಬ ಸುಮಾರು 50 ವರ್ಷದ ಸುಬ್ಬಯ್ಯ ಎಂಬ ವ್ಯಕ್ತಿ ಕಛೇರಿಗೆ ಬಂದ. ಅಂದು ಹೆಚ್ಚಿನ ಕೆಲಸವಿಲ್ಲದ್ದರಿಂದ ಅವನೊಂದಿಗೆ ಕುಶಲೋಪರಿ ಮಾತನಾಡುತ್ತಿದ್ದೆ. ತೊಗಲು ಗೊಂಬೆ ಆಡಿಸುವ ವೃತ್ತಿಯ ಆತ ಹಲವಾರು ಪೌರಾಣಿಕ, ಐತಿಹಾಸಿಕ ಸಂಗತಿಗಳನ್ನು ರಾಗವಾಗಿ ಜಾನಪದ ಧಾಟಿಯಲ್ಲಿ ಹಾಡಿದ ಕುಶಲತೆಗೆ ಬೆರಗಾದೆ. ಅನಕ್ಷರಸ್ತನಾದರೂ ಅದ್ಭುತ ಕಲಾವಿದ ಅವನಲ್ಲಿ ನನಗೆ ಕಂಡ. ಸರ್ಕಾರ ಅವನಿಗೆ ಮಂಜೂರು ಮಾಡಿದ್ದ 4 ಎಕರೆ ಜಮೀನನ್ನು ಗ್ರಾಮದ ಬಲಾಢ್ಯರೊಬ್ಬರು ಆಕ್ರಮಿಸಿಕೊಂಡು ಅನುಭವಿಸುತ್ತಿದ್ದರು. ವಂಶದ ಕಾಯಕವಾಗಿ ತೊಗಲು ಗೊಂಬೆ ಆಡಿಸಿಕೊಂಡು ಊರೂರು ಅಲೆಯುತ್ತಿದ್ದರಿಂದ ಜಮೀನು ಉಳಿಸಿಕೊಳ್ಳಲು ಅವನಿಗೆ ಆಗಿರಲಿಲ್ಲ. ಈ ಸಮಸ್ಯೆಯ ಸಲುವಾಗಿಯೇ ಆತ ನನ್ನನ್ನು ಭೇಟಿ ಮಾಡಲು ಬಂದಿದ್ದ. ವಿವರ ಪಡೆದು ನಾನೇ ಖುದ್ದು ಗ್ರಾಮಕ್ಕೆ ಹೋಗಿ ಜಮೀನನ್ನು ಅವನಿಗೆ ಬಿಡಿಸಿಕೊಟ್ಟೆ. ನನ್ನ ಪ್ರಯತ್ನದಿಂದ ಆ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೊಂಬೆಸುಬ್ಬಯ್ಯನನ್ನು ಸನ್ಮಾನಿಸಿ ಗೌರವಿಸಲಾಯಿತು. ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಹಾಗೂ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯೂ ನಾನೇ ಆಗಿದ್ದರಿಂದ ಸಂಘಗಳ ವತಿಯಿಂದಲೂ ತೊಗಲು ಗೊಂಬೆ ಆಡಿಸಲು ಅಗತ್ಯವಾಧ ಉತ್ತಮ ಗುಣಮಟ್ಟದ ಪರದೆ, ಗ್ಯಾಸ್ ಲೈಟು, ತಬಲ, ಮುಂತಾದ ವಾದ್ಯ ಪರಿಕರಗಳೊಂದಿಗೆ ಧನಸಹಾಯವನ್ನೂ ಸಹ ಮಾಡಿಸಿದೆ. ಆ ಸಂದರ್ಭದಲ್ಲಿ ಆತ ನನಗೆ ಕೈ ಮುಗಿದು ಹೇಳಿದ್ದು: 'ಯಪ್ಪಾ, ನೀವೇ ನಮ್ಮ ದ್ಯಾವರು!'.
     ಮೇಲೆ ತಿಳಿಸಿದಂತಹ ಅನೇಕ ಉದಾಹರಣೆಗಳು ನಿಮ್ಮ ಗಮನಕ್ಕೂ ಬಂದಿರಬಹುದು. ನಮ್ಮ ನಿಮ್ಮೆಲ್ಲರ ಅನುಭವದಂತೆ ಕಷ್ಟದಲ್ಲಿದ್ದಾಗ, ಬೇರೆ ಯಾವುದೇ ಸಹಾಯ ದೊರಕದಿದ್ದಾಗ ಅನಿರೀಕ್ಷಿತ ನೆರವು ನೀಡುವವರನ್ನು ದೇವರು ಎಂತಲೋ ಅಥವಾ ದೇವರೇ ಅವರ ಮೂಲಕ ಮಾಡಿಸಿದ ಸಹಾಯ ಎಂತಲೋ ಭಾವಿಸುವುದು ಸುಳ್ಳಲ್ಲ. ಹಸಿವಿನಿಂದ ಕಂಗೆಟ್ಟು ಹಪಹಪ ಪಡುತ್ತಿರುವವರಿಗೆ ತಿನ್ನಲು ಏನಾದರೂ ಕೊಡುವವರೇ ದೇವರು. ಅಂದರೆ ದೇವರು ಆಪದ್ಭಾಂದವನೆಂದು ಎಲ್ಲರೂ ಒಪ್ಪುತ್ತೇವಲ್ಲವೇ?
     ಗಂಭೀರವಾದ ವಿಷಯದಲ್ಲಿ ಆಸಕ್ತಿ ಉಳಿಸುವ ಸಲುವಾಗಿ ಒಂದು ತಮಾಷೆಯ ಪ್ರಸಂಗ ಹೇಳುವೆ. ಒಬ್ಬ ಭಕ್ತ ದೇವರಲ್ಲಿ ಪ್ರಾರ್ಥಿಸುತ್ತಾನೆ: "ದೇವರೇ, ನನ್ನ ಪಕ್ಕದ ಮನೆಯವನು ನನಗೆ ಬಹಳ ತೊಂದರೆ ಕೊಡುತ್ತಿದ್ದಾನೆ. ಅವನ ಎರಡೂ ಕಣ್ಣುಗಳನ್ನು ಇಂಗಿಸಿಬಿಡು." ಆ ಪಕ್ಕದ ಮನೆಯವನೂ ಅದೇ ದೇವರಲ್ಲಿ ಬೇಡಿಕೆ ಇಡುತ್ತಾನೆ: "ದೇವರೇ, ಪಕ್ಕದ ಮನೆಯವನು ನನ್ನ ಎಲ್ಲಾ ಕೆಲಸಗಳಲ್ಲಿ ಅಡ್ಡಗಾಲು ಹಾಕುತ್ತಾನೆ. ಅವನ ಎರಡೂ ಕಾಲುಗಳನ್ನು ಸೇದಿಸಿಬಿಡು." ದೇವರಿಗೆ ಫಜೀತಿ! ಯಾರ ಮಾತು ಕೇಳಬೇಕು? ಅವನ ಮಾತು ಕೇಳಿದರೆ ಇವನಿಗೆ ಸಿಟ್ಟು, ಇವನ ಮಾತು ಕೇಳಿದರೆ ಅವನಿಗೆ ಸಿಟ್ಟು. ದೇವರು, "ಏನು ಬೇಕಾದರೂ ಮಾಡಿಕೊಂಡು ಹಾಳಾಗಿ ಹೋಗಿ. ನಾನು ಇಬ್ಬರ ಮಾತೂ ಕೇಳಲ್ಲ. ನೀವು ಮಾಡಿದ್ದರ ಫಲ ನೀವೇ ಅನುಭವಿಸಿ" ಎಂದುಬಿಡುತ್ತಾನೆ. ಇದು ತಮಾಷೆಗೆ ಹೇಳಿದ್ದಾದರೂ, ಎಲ್ಲಾ ಧರ್ಮಗ್ರಂಥಗಳ ಸಾರವೂ ಇದೇ ಆಗಿದೆ. 'ಮಾಡಿದ್ದುಣ್ಣೋ ಮಹರಾಯ' ಎಂಬುದೇ ಆ ಸಾರ.
     ಆಪದ್ಭಾಂಧವನೆಂದು ಭಾವಿಸುವ ದೇವರನ್ನು ತಲುಪುವ ಅಥವ ಅರಿಯುವ ಸಾಧನವೆಂದು ಭಾವಿಸಲಾಗುವ ಭಕ್ತಿಯ ಒಂದು ದೊಡ್ಡ ಅನುಕೂಲವೆಂದರೆ ಅದು ಇರುವುದರಲ್ಲಿ ಅತಿ ಸುಲಭವಾದ ಮತ್ತು ಅತ್ಯಂತ ಸಹಜವಾದ ದಿವ್ಯತ್ವವನ್ನು ತಲುಪುವ ಮಾರ್ಗ. ಅದರ ದೊಡ್ಡ ಅನಾನುಕೂಲವೆಂದರೆ ಅದು ಕೆಳಸ್ತರದಲ್ಲಿ ಹೆಚ್ಚಿನ ಸಮಯ ಹುದುಗಿದ ಹುಚ್ಚಾಟಗಳಿಗೆ ಇಳಿಯುತ್ತದೆ. ಹಿಂದುತ್ವದ, ಮಹಮದೀಯತ್ವ ಅಥವ ಕ್ರಿಶ್ಚಿಯಾನಿಟಿಯ ಮತಭ್ರಾಂತದ ಮಂದಿ ಭಕ್ತಿಯ ಕೆಳಸ್ತರದ ಹಂತದಿಂದ ಬಂದವರಾಗಿದ್ದಾರೆ. ಪ್ರೀತಿಯ ವಸ್ತುವಿಗೆ ಏಕನಿಷ್ಠೆ ಇಲ್ಲದಿದ್ದರೆ ನಿಜವಾದ ಪ್ರೀತಿ ಬೆಳೆಯಲಾರದು. ಆದರೆ ಅದು ಹೆಚ್ಚಿನ ಸಂದರ್ಭಗಳಲ್ಲಿ ಇತರ ಎಲ್ಲವನ್ನೂ ತಿರಸ್ಕರಿಸುವ ಕಾರಣವೂ ಆಗುತ್ತದೆ. ಪ್ರತಿ ಧರ್ಮದ ಅಥವ ದೇಶದ ಎಲ್ಲಾ ದುರ್ಬಲ ಮತ್ತು ಅವಿಕಸಿತ ಮನಸ್ಸುಗಳು ಅವರ ತಮ್ಮದೇ ಆದರ್ಶವನ್ನು ಪ್ರೀತಿಸುವ ಒಂದೇ ರೀತಿಯನ್ನು ಹೊಂದಿರುತ್ತವೆ, ಅದೆಂದರೆ, ಇತರ ಎಲ್ಲಾ ಆದರ್ಶಗಳನ್ನು ದ್ವೇಷಿಸುವುದು. ತನ್ನ ದೇವರನ್ನು, ಆದರ್ಶಧ್ಯೇಯವನ್ನು ಉತ್ಕಟವಾಗಿ ಪ್ರೀತಿಸುವ, ತನ್ನ ಧರ್ಮದ ಆದರ್ಶಗಳಿಗೆ ಅಷ್ಟೊಂದು ಅಂಟಿಕೊಂಡಿರುವ ಅದೇ ವ್ಯಕ್ತಿ ಹೇಗೆ ಬೇರೆ ಯಾವುದೇ ಧರ್ಮದ, ಆದರ್ಶದ ಕುರಿತು ನೋಡಿದರೆ ಅಥವ ಕೇಳಿದರೆ ಊಳಿಡುವ ಮತಭ್ರಾಂತನಾಗುತ್ತಾನೆ, ಕೆರಳುತ್ತಾನೆ ಎಂಬುದಕ್ಕೆ ಇಲ್ಲಿ ಕಾರಣ ಸಿಗುತ್ತದೆ. ಭಕ್ತಿಯ ಉನ್ನತ ಸ್ತರದಲ್ಲಿರುವವರು ಕರುಣಾಮಯಿ ದೇವರಂತೆ ಇತರ ಆದರ್ಶಗಳ, ಧರ್ಮಗಳ ಬಗ್ಗೆ ಸಹಿಷ್ಣುತೆ ಹೊಂದಿರುತ್ತಾರೆ. ಕೆಳಸ್ತರದವರ ಹುಚ್ಚಾಟಗಳು ಮತ್ತು ಅದರಿಂದ ಉತ್ಪನ್ನವಾಗುವ ಭಯೋತ್ಪಾದಕತೆ, ರಕ್ತಪಾತ, ಹಿಂಸೆಗಳನ್ನು ತಡೆಗಟ್ಟಲು ಉನ್ನತ ಸ್ತರದವರು ಗಂಭೀರವಾಗಿ ಯೋಚಿಸದಿದ್ದಲ್ಲಿ ವಿಶ್ವ ಅಶಾಂತಿಯ ಗೂಡಾಗುತ್ತದೆ, ಹಿಂಸೆಯ ನೆಲೆವೀಡಾಗುತ್ತದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಅಕೃತ್ಯಗಳನ್ನು ತಡೆಯಲು ದೇವರೇ ಬರಬೇಕೇನೋ! ಯಾರೇ ಆಗಲಿ, ಇಂತಹ ಅಶಾಂತಿ, ತಳಮಳ, ತುಮುಲಗಳನ್ನು ತಡೆದು ಸಾಮರಸ್ಯ ಮೂಡಿಸಲು ಸಮರ್ಥರಾದರೆ ಅವರೇ ಜಗತ್ತಿನ ಪಾಲಿಗೆ ದೇವರಾಗುತ್ತಾರೆ!
-ಕ.ವೆಂ.ನಾಗರಾಜ್.
. . . . (ಮುಂದುವರೆದಿದೆ).


[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದ್ದು]

22.9.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ.