ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ನವೆಂಬರ್ 30, 2014

ರಾಮರು ನಾವೇ, ರಾವಣರೂ ನಾವೇನೇ!


     "ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಈಗ ಕಾಲ ತುಂಬಾ ಕೆಟ್ಟು ಹೋಗಿದೆ. ಗುರು-ಹಿರಿಯರೆಂದರೆ ಗೌರವವೇ ಇಲ್ಲ" -  ಈ ಮಾತು ಕೇಳುವುದು ಈಗ ಸಾಮಾನ್ಯವಾಗಿ ಹೋಗಿದೆ. ವಾಸ್ತವವೆಂದರೆ ಈ ಮಾತನ್ನು ಈಗ ಹೇಳುವವರು ಚಿಕ್ಕವರಾಗಿದ್ದಾಗ ಅವರ ಹಿರಿಯರುಗಳೂ ಹೇಳುತ್ತಿದ್ದದೂ ಇದನ್ನೇ. "ಈ ಟಿವಿ ಬಂದಿದ್ದೇ ಬಂದಿದ್ದು, ನಮ್ಮ ಸಂಸ್ಕೃತಿಯೇ ಹಾಳಾಗಿ ಹೋಯಿತು" ಅನ್ನುತ್ತಾರೆ. ಟಿವಿ ತನ್ನಷ್ಟಕ್ಕೆ ತಾನೇ ಯಾರನ್ನಾದರೂ ಹಾಳು ಮಾಡುತ್ತದೆಯೇ? ಅದನ್ನು ಉಪಯೋಗಿಸಿ ಹಾಳಾದರೆ ಅದರ ಹೊಣೆಯನ್ನು ಟಿವಿಯ ಮೇಲೆ ಏಕೆ ಹಾಕಬೇಕು? ಅದೇ ರೀತಿ ಚಾಕುವನ್ನು ತರಕಾರಿ ಕತ್ತರಿಸಲೂ ಉಪಯೋಗಿಸಬಹುದು, ಇನ್ನೊಬ್ಬರನ್ನು ಕೊಲ್ಲಲೂ ಬಳಸಬಹುದು. ತನ್ನನ್ನು ಹೀಗೆಯೇ ಉಪಯೋಗಿಸಬೇಕು ಎಂದು ಚಾಕು ಹೇಳುತ್ತದೆಯೇ? ಚಾಕುವಿನಿಂದ ಏನಾದರೂ ತೊಂದರೆಯಾದರೆ ಅದು ಚಾಕುವಿನ ತಪ್ಪಂತೂ ಅಲ್ಲ. ಏನು ಹೇಳಹೊರಟಿರುವೆನೆಂದು ಈಗಾಗಲೇ ಅರ್ಥವಾಗಿರಬೇಕು. ಕೆಟ್ಟು ಹೋಗಲು ಕಾಲವಾಗಲೀ, ಯಾವುದೇ ವಸ್ತುವಾಗಲೀ ಕಾರಣವಲ್ಲ. ಅದನ್ನು ಬಳಸುವ ರೀತಿಯಿಂದ ಒಳಿತು/ಕೆಡಕು ಆಗುತ್ತದೆ. ಕಾಲ ಕೆಟ್ಟಿದೆಯೆಂದರೆ ವಾಸ್ತವಿಕವಾಗಿ ನಾವು ಕೆಟ್ಟುಹೋಗಿದ್ದೇವೆ ಎಂದೇ ಅರ್ಥ. ನೈತಿಕವಾಗಿ ಕೆಟ್ಟದ್ದು ಎಂದು ಭಾವಿಸುವ, ಭ್ರಷ್ಟತೆಯಿಂದ ಕೂಡಿದ, ಇತರರಿಗೆ ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಕೇಡು ಮಾಡುವ, ಒಳ್ಳೆಯದಕ್ಕೆ ವಿರುದ್ಧ ಎಂದು ಭಾವಿಸುವ ಯೋಚನೆಗಳು, ಕೃತಿಗಳನ್ನು ಕೆಟ್ಟದ್ದು ಅನ್ನಬಹುದು.
     ಕೆಟ್ಟ ಸಂಗತಿಗಳು, ಕೃತಿಗಳನ್ನು ಮಾಡಲು ನಾವು ಕೆಲವು ಜನಪ್ರಿಯ ಮಾತುಗಳನ್ನು ಸಮರ್ಥನೆಗಾಗಿ ಬಳಸಿಕೊಳ್ಳುತ್ತೇವೆ. 'ಯುದ್ಧದಲ್ಲಿ, ಪ್ರೀತಿಯಲ್ಲಿ ಗೆಲ್ಲಲು ಏನು ಬೇಕಾದರೂ ಮಾಡಬಹುದು', 'ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು', 'ವ್ಯಾಪಾರಮ್ ದ್ರೋಹ ಚಿಂತನಮ್', ಇತ್ಯಾದಿಗಳ ಸಾಲಿಗೆ ಈಗ 'ಅಧಿಕಾರಕ್ಕಾಗಿ, ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಏನು ಮಾಡಿದರೂ ತಪ್ಪಿಲ್ಲ' ಎಂಬುದೂ ಸೇರ್ಪಡೆಯಾಗಿದೆ. ಪರಂಪರೆಯಿಂದ ಬಂದ ಕುರುಡು  ಸಂಪ್ರದಾಯದ ಹೆಸರಿನಲ್ಲೂ ಇನ್ನೊಬ್ಬರನ್ನು ನೋಯಿಸಲು ಹಿಂದೆ ಮುಂದೆ ನೋಡದ ಪ್ರಸಂಗಗಳೂ ಇವೆ. ಅಗತ್ಯ, ಅನಿವಾರ್ಯ ಎಂಬ ಹೆಸರಿನಲ್ಲಿ ಕೇಡು ಮಾಡುವುದು ಸರ್ವಥಾ ಸರಿಯಲ್ಲ. ಕೆಟ್ಟ ಮಾರ್ಗಗಳಿಂದ ಒಳ್ಳೆಯದಾಗಬಹುದು ಎಂಬ ನಿರೀಕ್ಷೆ ಮರುಭೂಮಿಯ ಮರೀಚಿಕೆಯಿದ್ದಂತೆ. ಜನಸೇವೆಗೆ ಅವಕಾಶ ಕೊಡಿ, ಮಣ್ಣಿನ ಋಣ ತೀರಿಸಲು ಅಧಿಕಾರ ಕೊಡಿ ಎಂದು ಕೇಳುವ ಸಮಾಜಸೇವಕರು(?) ಕೆಟ್ಟ ಮಾರ್ಗಗಳಿಂದ ಅಧಿಕಾರಕ್ಕೆ ಬಂದು ಜನರನ್ನು ಉದ್ಧಾರ ಮಾಡುವರೆಂಬುದು ಹಗಲುಕನಸೇ ಸರಿ. ಅವರುಗಳು ಅಧಿಕಾರದ ಆಸೆಗಾಗಿ, ಹಣ ಗಳಿಸುವುದಕ್ಕಾಗಿ ಮಾಡಬಾರದುದನ್ನು ಮಾಡದಿದ್ದರೆ ಅದಕ್ಕಿಂತ ದೊಡ್ಡ ಜನಸೇವೆ ಇರಲಾರದು. ಕೆಟ್ಟ ಜನರು ವಿಜೃಂಭಿಸಲು ಮುಖ್ಯ ಕಾರಣವೆಂದರೆ ಒಳ್ಳೆಯ ಜನರೆನಿಸಿಕೊಂಡವರು ಸುಮ್ಮನಿರುವುದು. ಇಂದಿನ ವಸ್ತುಸ್ಥಿತಿಯನ್ನೇ ನೋಡೋಣ. ಕಾಲು ಕೆರೆದು ಗಡಿಯೊಳಗೆ ನುಗ್ಗಿ ಸಮ್ಮ ಸೈನಿಕರನ್ನು ಕೊಲ್ಲುವ, ಗಡಿ ನಿಯಂತ್ರಣ ರೇಖೆಗೆ ಗೌರವವನ್ನೇ ಕೊಡದಿರುವ, ಉಗ್ರಗಾಮಿಗಳ ಮೂಲಕ ಹಿಂಸಾಚಾರಕ್ಕೆ, ವಿನಾಕಾರಣ ಮುಗ್ಧರ ಮಾರಣಹೋಮಕ್ಕೆ ಪ್ರೇರಕರಾಗಿರುವ ನೆರೆ ರಾಷ್ಟ್ರಕ್ಕೆ ನಮ್ಮ ನಾಯಕರ ಕೇವಲ ಮಾತಿನ ಉಗ್ರ ಪ್ರತಿಭಟನೆ ನಾಟುವುದೇ? ಏಟಿಗೆ ಪ್ರತಿಯೇಟು ಬೀಳುತ್ತದೆಯೆಂದು ಅವರಿಗೆ ಗೊತ್ತಾಗುವವರೆಗೆ ಈ ಪರಿಸ್ಥಿತಿಗೆ ಮುಕ್ತಿಯಿರಲಾರದು. ಜಗತ್ತಿನ ಅತ್ಯಂತ ಕೆಡುಕಿನ ಸಂಗತಿಯೆಂದರೆ ಒಳ್ಳೆಯವರು ಗೊಣಗಾಡುವುದನ್ನು ಬಿಟ್ಟು ಏನೂ ಮಾಡದಿರುವುದೇ ಆಗಿದೆ. ಈ ಜಗತ್ತು ಕ್ರೂರವಾಗಿ ತೋರುವುದರ ಮೂಲ ಕೆಟ್ಟ ಸಂಗತಿಗಳಲ್ಲ, ಆ ಕೆಟ್ಟ ಸಂಗತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ, ಏನೂ ಮಾಡದಿರುವುದೇ ಆಗಿದೆ. ಒಳ್ಳೆಯತನದೊಂದಿಗೆ ಬುದ್ಧಿವಂತಿಕೆ ಸಹ ಇರಬೇಕು, ಬುದ್ಧಿವಂತಿಕೆ ಇಲ್ಲದ ಒಳ್ಳೆಯತನ ಕೆಡುಕಿಗೆ ಸಹಕಾರಿ. ಒಳ್ಳೆಯದನ್ನು ಮಾಡಬೇಕೋ, ಕೆಟ್ಟದನ್ನು ಮಾಡಬೇಕೋ ಎಂದು ನಿಶ್ಚಯ ಮಾಡಲಾರದವರಿಂದಲೇ ಕೆಡುಕು ಜಾಸ್ತಿ. ಡಂಭಾಚಾರ, ನಿಜಮುಖವನ್ನು ಮರೆಮಾಚುವ ಮುಖವಾಡಗಳು ಎಲ್ಲಾ ಕೆಟ್ಟ ಸಂಗತಿಗಳ, ಕ್ರೂರತೆಯ ಮೂಲವಾಗಿದೆ. ಆದರೆ ಒಂದಂತೂ ಸತ್ಯ. ಶಸ್ತ್ರರಹಿತ ಸತ್ಯ ಮತ್ತು ಪ್ರೀತಿಗಳದೇ ಕೊನೆಯ ಮಾತು. ಸತ್ಯಕ್ಕೆ ತಾತ್ಕಾಲಿಕ ಸೋಲಾದರೂ ಸಹ ಕೊನೆಯಲ್ಲಿ ವಿಜೃಂಭಿತ ಕೆಡುಕಿಗಿಂತ ಅದೇ ಬಲಶಾಲಿಯಾಗಿ ಹೊರಹೊಮ್ಮುವುದು! 
     ಕೆಟ್ಟದ್ದನ್ನು ಏಕೆ ಮಾಡುತ್ತಾರೆ? ತಮಾಷೆಯೆಂದರೆ, ಸಂತೋಷ, ಲಾಭ ಸಿಗುತ್ತದೆಯೆಂಬ ಭ್ರಮೆಯಿಂದ ಇನ್ನೊಬ್ಬರಿಗೆ ಕೇಡು ಮಾಡುತ್ತಾರೆಯೇ ಹೊರತು, ಆ ಭ್ರಮೆಯಿರದಿದ್ದಲ್ಲಿ ಯಾರೂ ಆ ತಪ್ಪು ಮಾಡುತ್ತಿರಲಿಲ್ಲ. ಪೌರಾಣಿಕ ಕಥೆಯಲ್ಲಿ ಕೇಳಿರಬಹುದು, ಹಿಂದೊಮ್ಮೆ ದೇವತೆಗಳು ಒಂದು ಕಡೆ, ಅಸುರರು ಒಂದು ಕಡೆ ಸೇರಿ ಸಮುದ್ರ ಮಥನ ಮಾಡಿದರು, ಆ ಮಥನದಿಂದ ಅನೇಕ ಒಳ್ಳೆಯ ಸಂಗತಿಗಳು, ವಜ್ರ, ವೈಢೂರ್ಯ, ಮುತ್ತು ರತ್ನಗಳು, ಲಕ್ಷ್ಮಿ, ಅಮೃತ, ಇತ್ಯಾದಿಗಳಂತೆ, ಹಾಲಾಹಲ ವಿಷ, ಕೆಡುಕು ತರುವ ವಸ್ತುಗಳೂ ಹೊರಬಂದವು, ಅಮೃತವನ್ನು ಪಡೆದು ಚಿರಂಜೀವಿಗಳಾಗಲು ಇಬ್ಬರೂ ಹೊಡೆದಾಡಿದರು, ವಿಷ್ಣು ಮೋಹಿನಿ ಅವತಾರ ತಾಳಿ, ಎಲ್ಲರನ್ನೂ ಮರುಳುಗೊಳಿಸಿ ಅಮೃತ ದೇವತೆಗಳಿಗೇ ದೊರೆಯುವಂತೆ ಮಾಡಿದ, ಇತ್ಯಾದಿ, ಇತ್ಯಾದಿ. ಈ ರೂಪಕ ಸುಂದರವಾಗಿದೆ. ನಿಜವಾಗಿ ಸಮುದ್ರವೆಂದರೆ ಮಾನವನ ಮನಸ್ಸೇ. ಅದರಲ್ಲಿ ಒಳ್ಳೆಯದರ ಜೊತೆಗೆ ಕೆಟ್ಟ ಸಂಗತಿಗಳೂ ಇವೆ. ಒಳ್ಳೆಯದು, ಕೆಟ್ಟದರ ನಡುವಣ ಸಂಘರ್ಷವೇ ಮಥನ. ಆ ಮಥನದಲ್ಲಿ ನಾವು ಏನನ್ನು ಆರಿಸಿಕೊಳ್ಳುತ್ತೇವೆ ಎಂಬುದರಿಂದ ನಾವು ಒಳ್ಳೆಯವರೋ, ಕೆಟ್ಟವರೋ ಆಗುವೆವು. ನಾವು ಏನು ಆರಿಸಿಕೊಳ್ಳುವೆವು ಎಂಬುದನ್ನು ನಮ್ಮನ್ನು ಆವರಿಸಿರುವ ಮಾಯೆ/ಭ್ರಮೆ ನಿರ್ಧರಿಸುತ್ತದೆ. 
     ನಮ್ಮೊಳಗೇ ರಾಮನೂ ಇದ್ದಾನೆ, ರಾವಣನೂ ಇದ್ದಾನೆ. ರಾಮನಾಗಬೇಕೋ, ರಾವಣನಾಗಬೇಕೋ ಎಂಬ ದ್ವಂದ್ವದಲ್ಲಿ ಇಂದಿನ ಪ್ರಪಂಚದಲ್ಲಿ ರಾಮನಂತಿದ್ದರೆ ಬದುಕಿಗೆ ಮಣ್ಣೇ ಸರಿ ಎಂದು ಮಾಯೆ ಉಪದೇಶಿಸುತ್ತದೆ. ಸಾವಿಲ್ಲದ ಜೀವಜಗತ್ತು ಇದೆಯೇ? ಹಾಗಿರುವಾಗ ಇನ್ನೊಬ್ಬರಿಗೆ ಕೇಡು ಬಗೆದು ನಾನು ಉದ್ಧಾರವಾಗಬೇಕೆಂಬ ಬಯಕೆ ಎಷ್ಟು ಸರಿ? ಪ್ರತಿಯಾಗಿ ನನಗೂ ಕೇಡು ಬಗೆಯದಿರುವರೇ? ಸಾವು ಅಂತಿಮ ಸತ್ಯವೆಂದಾದಾಗ ಆತ್ಮವಂಚನೆ ಮಾಡಿಕೊಂಡು ಹಲವಾರು ಸಲ ಸಾಯುವ ಬದಲು, ಕಷ್ಟವಾದರೂ ಒಳ್ಳೆಯ ದಾರಿಯಲ್ಲಿ ನಡೆದು ಒಂದು ಸಲ ಸಾಯುವುದು ಒಳ್ಳೆಯದು ಎಂದು ಮಾಯೆಯ ಮುಸುಕು ಸರಿಸಿದವನು ಯೋಚಿಸುತ್ತಾನೆ. ಜಗತ್ತಿನಲ್ಲಿ ಮರಗಳನ್ನು ಅದು ಕೊಡುವ ಫಲಗಳಿಂದ ಗುರುತಿಸುವಂತೆ ಜನರನ್ನು ಅವರು ಮಾಡುವ ಕಾರ್ಯಗಳಿಂದ ಗುರುತಿಸುತ್ತಾರೆ. ಗಮನಿಸಿ, ನಮ್ಮ ಹಿಂದಿನ ತಲೆಮಾರುಗಳ ಹಿರಿಯರ ನೆನಪು ನಮಗಿರುವುದಿಲ್ಲ, ಆದರೆ ವಿವೇಕಾನಂದರಂತಹವರ ಹೆಸರುಗಳು ಜನಮಾನಸದಲ್ಲಿ  ಅಜರಾಮರವಾಗಿರುತ್ತದೆ. ಒಳ್ಳೆಯ ಮತ್ತು ಶ್ರೇಷ್ಠ ಕಾರ್ಯಗಳು ಇದ್ದಕ್ಕಿದ್ದಂತೆ ಆಗುವುದಿಲ್ಲ. ಮೊದಲು ಮನುಷ್ಯನ ಮನಸ್ಸಿನಲ್ಲಿ ಅದರ ಮೊಳಕೆ ಚಿಗುರುತ್ತದೆ, ಅವನ ಸಂಕಲ್ಪದಿಂದ ಬೆಳೆಯುತ್ತದೆ, ಧೃಢತೆಯಿಂದ ಮುಂದುವರೆದಾಗ ಅಸಾಧ್ಯವೆನಿಸಿದ್ದು ಸಾಧ್ಯವಾಗುತ್ತದೆ. ಜನರನ್ನು ಅವರು ಮಾಡುವ ಕೆಲಸಗಳಿಂದ ಗುರುತಿಸುತ್ತಾರೆಯೇ ಹೊರತು ಅವನಲ್ಲಿ ಇರುವ ಸಂಪತ್ತು, ಜಾತಿ, ಅಧಿಕಾರ, ಇತ್ಯಾದಿಗಳಿಂದಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಮಾಯೆಯ ಮುಸುಕು ಸರಿಸಲು ಸಾಧ್ಯವಾದೀತು. 
ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ
ಬುದ್ಧನೂ ಬೇರಲ್ಲ ಹಿಟ್ಲರನು ಬೇರಿಲ್ಲ|
ಕೆಡುಕದು ಬೇರಲ್ಲ ಒಳಿತದು ಬೇರಿಲ್ಲ
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ||
     ಅದೆಲ್ಲಾ ಸರಿ, ಹೆಚ್ಚಿನವರು ಕೆಟ್ಟವರಾಗಿರುವಾಗ ನನ್ನೊಬ್ಬನ ಒಳ್ಳೆಯತನದಿಂದ ಏನು ಪ್ರಯೋಜನ? ಅದರಿಂದ ನನಗೇ ಕಷ್ಟ. 'ಯಾರಂತೆ ಅಂದರೆ ಊರಂತೆ' ಇರುವುದು ಜಾಣರ ಲಕ್ಷಣ ಎಂದು ಸಾಮಾನ್ಯನಾದವನು ಯೋಚಿಸುವುದು ಸಹಜ. 'ಕೆಟ್ಟು ಹೋಗಿರುವ' ಕಾಲ, ಸಂಸ್ಕೃತಿ, ಸಭ್ಯತೆಗಳನ್ನು ಸರಿಯಾಗಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಸರಿಪಡಿಸುವವರು ಯಾರು? ಬೇರೆಯವರು ಮಾಡಲಿ, ನಾವು ಬೆಂಬಲಿಸೋಣ; ಅಣ್ಣಾ ಹಜಾರೆ ಹೋರಾಟ ಮಾಡಲಿ, ನಾವು ಹಿಂದೆ ನಿಂತು ಜೈ ಅನ್ನೋಣ ಅನ್ನುವವರ ಸಂಖ್ಯೆಯೇ ಜಾಸ್ತಿ. ಇಂತಹ ಮನೋಭಾವವಿದ್ದಾಗ ಹೇಗೆ ಆಗುತ್ತದೆ ಅನ್ನುವುದಕ್ಕೆ ಅಣ್ಣಾಹಜಾರೆಯವರ ಹೋರಾಟದ ಕಾವು ತಣ್ಣಗಾಗಿರುವುದೇ ಸಾಕ್ಷಿ. ಪಕ್ಕದ ಮನೆಯ ಹುಡುಗ ಭಗತ್ ಸಿಂಗ್ ಆಗಲಿ, ನಮ್ಮ ಮನೆಯ ಹುಡುಗ ಮಾತ್ರ ಆಗುವುದು ಬೇಡ ಎಂದು ಭಾವಿಸುವವರು ಇರುವವರೆಗೆ, ಕುಟುಂಬದ ಸದಸ್ಯರಲ್ಲೇ ಒಬ್ಬರು ಸರಿಹಾದಿಯಲ್ಲಿ ನಡೆಯಲು ನಿರ್ಧರಿಸಿದರೆ ಅವನನ್ನು ಬಗ್ಗಿಸುವ, ಹಂಗಿಸುವ, ಕುಗ್ಗಿಸುವ ಕುಟುಂಬದ ಇತರ ಸದಸ್ಯರುಗಳು ಇರುವವರೆಗೆ 'ಕಾಲ ಕೆಟ್ಟೇ ಇರುತ್ತದೆ'. ಜಗತ್ತಿನಲ್ಲಿ ಏನಾದರೂ ಬದಲಾವಣೆ ಬಯಸುವುದಾದರೆ ಆ ಬದಲಾವಣೆಯನ್ನು ಮೊದಲು ನಾವು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಹೆಚ್ಚಿನವರು ಈರೀತಿ ಯೋಚಿಸಿ ಪ್ರವೃತ್ತರಾದರೆ ಬದಲಾವಣೆ ಖಂಡಿತಾ ಆಗುತ್ತದೆ. ಆದರೆ ನಮ್ಮ ಒಳಗೇ ಇರುವ 'ಬೆಕ್ಕಿಗೆ' ಗಂಟೆ ಕಟ್ಟುವವರು ಯಾರು? ನಾವೇ ಕಟ್ಟಬೇಕಲ್ಲವೇ?  
ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ಮೊದಲಾಗು ನೀನು |
ಬದಲಾಗು ನೀ ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
     "ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ ಧರ್ಮ ಸಂಸ್ಥಾನಾಪನಾರ್ಥಾಯ ಸಂಭವಾಮಿ ಯುಗೇ ಯುಗೇ" ಎಂಬುದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಉವಾಚ. ಈಗ ಅನ್ಯಾಯ ಮಿತಿ ಮೀರಿದೆ. ದೌರ್ಜನ್ಯಗಳು ಹೆಚ್ಚಿವೆ, ಭ್ರಷ್ಟಾಚಾರಕ್ಕೆ ಕಡಿವಾಣವೇ ಇಲ್ಲ, ಬಡವರ ಗೋಳು ಕೇಳುವವರೇ ದಿಕ್ಕಿಲ್ಲ. ಈಗ ಉದ್ಧಾರ ಮಾಡಲು ಪರಮಾತ್ಮ ಬಾರದಿದ್ದರೆ ಇನ್ನು ಯಾವಾಗ ಬರಬೇಕು ಅನ್ನುವ ಅಗತ್ಯವೇ ಇಲ್ಲ. ಪರಮಾತ್ಮ ಬರುತ್ತಾನೆ, ಖಂಡಿತಾ ಬರುತ್ತಾನೆ. ಆದರೆ, ಆ ಪರಮಾತ್ಮ ಎಲ್ಲೋ ಗಂಗಾತಟದಲ್ಲೋ, ಶ್ರೀರಂಗಪಟ್ಟಣದ ಹತ್ತಿರದ ಹಳ್ಳಿಯಲ್ಲೋ, ಯಾರೋ ಕಟ್ಟಾ ಸಂಪ್ರದಾಯಸ್ಥರ ಮನೆಯಲ್ಲೋ, ಮೆಕ್ಕಾ ಮದೀನಾದಲ್ಲೋ, ವ್ಯಾಟಿಕನ್ ದೇಶದಲ್ಲೋ ಹುಟ್ಟಿ ಬರುವುದಿಲ್ಲ. ಅವನಾಗಲೇ ಇದ್ದಾನೆ. ಅನಾದಿ, ಅನಂತನಾದ ಅವನು ಹೊಸದಾಗಿ ಹುಟ್ಟುವ ಅಗತ್ಯವೇ ಇಲ್ಲ. ಅವನು ನಮ್ಮ ನಿಮ್ಮೆಲ್ಲರ ಹೃದಯದಲ್ಲೇ ಇದ್ದಾನೆ. ಅವನನ್ನು ಅಲ್ಲೇ ಬಂಧಿಸಿಡದೆ ಹೊರಬಿಡಿ, ಆಗ ನೋಡಿ, ಅವನು ಮಾಡುವ ಪವಾಡವನ್ನು! ಜಗತ್ತಿನಲ್ಲಿ ಒಳ್ಳೆಯದು ಎಂದು ನಾವು ಭಾವಿಸುವ ಸಂಗತಿಗಳೆಲ್ಲವನ್ನೂ ಮಾಡಿರುವುದು, ಮಾಡುತ್ತಿರುವುದು ಮತ್ತು ಮಾಡುವುದು ಆ 'ನಮ್ಮೊಳಗಿರುವ' ಪರಮಾತ್ಮನೇ. ಆ ಕರುಣಾಳು ದೇವನಿಗೆ ನಮೋ ನಮಃ. ಯಜುರ್ವೇದದ ಈ ಮಂತ್ರದೊಂದಿಗೆ ಮುಕ್ತಾಯಗೊಳಿಸುವೆ: 
ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಃ | 
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಮಗ್ನಿನಾ || (ಯಜು. ೨೦.೨೫). 
     ಎಲ್ಲಿ ಬ್ರಾಹ್ಮಿ ಶಕ್ತಿ (ಜಾತಿಯಲ್ಲ) ಮತ್ತು ಕ್ಷಾತ್ರ ಶಕ್ತಿ (ಜಾತಿಯಲ್ಲ) ಒಂದಕ್ಕೊಂದು ಆಶ್ರಯವಾಗಿ ಒಟ್ಟಿಗೆ ಪ್ರವೃತ್ತವಾಗುತ್ತವೋ ಮತ್ತು ಎಲ್ಲಿ ಪವಿತ್ರ, ಚಾರಿತ್ರ್ಯವಂತರಾದ ವಿದ್ವಜ್ಜನರು ರಾಷ್ಟ್ರನಾಯಕರೊಡನೆ ಸಹಕರಿಸಿ ನಡೆಯುತ್ತಾರೋ ಅಂತಹ ಲೋಕವನ್ನು ಪುಣ್ಯಶಾಲಿ ಎನ್ನುತ್ತೇನೆ ಎಂಬುದು ಇದರ ಅರ್ಥ. ಪುಣ್ಯಶಾಲಿ ದೇಶದ ಪುಣ್ಯವಂತ ಪ್ರಜೆಗಳು ನಾವಾಗಬೇಕಾದರೆ ನಾವು ಮೊದಲು ಪುಣ್ಯವಂತರು,  ಚಾರಿತ್ರ್ಯವಂತರಾಗಬೇಕಲ್ಲವೇ?
-ಕ.ವೆಂ.ನಾಗರಾಜ್,
**************
ಚಿತ್ರ ಕೃಪೆ: http://www.vectorstock.com/royalty-free-vector/good-and-evil-vector-642668
ದಿನಾಂಕ 20.10.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


5 ಕಾಮೆಂಟ್‌ಗಳು:

 1. ಬರಹಕ್ಕೆ ಮುಕುಟವಿಟ್ಟಂತೆ ತಮ್ಮ ಈ ಸಾಲು:
  'ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ'

  ಎರಡೂ ವಿರುದ್ಧ ಭಾವಗಳು ನಮ್ಮೊಳಗೆ ಅನುಕ್ಷಣವೂ ಜಾಗೃತವಿದ್ದೇ ಇರುತ್ತದೆ ಅಲ್ಲವೇ? ಯಾವುದನ್ನು ನಿಯಂತ್ರಣದಲ್ಲಿ ಇಡಬೇಕು ಎನ್ನುವುದು ಅರಿತಿರಬೇಕು.

  ಮನೋ ಶುದ್ಧೀಕರಣದತ್ತ ಮುನ್ನಡೆಸೋ ಲೇಖನ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಈ ಬರಹಕ್ಕೆ ನಿಮ್ಮ ಪ್ರತಿಕ್ರಿಯೆಯೇ ಮುಕುಟವಾಗಿದೆ. ಧನ್ಯವಾದ, ಬದರೀನಾಥರೇ.

   ಅಳಿಸಿ
 2. baraha chennagide. Kaala kettilla ,raamanidda kaaladalle raavananu iddanallve!
  NAAVU HEGIRUTTEVE ENNUVUDASHTE MUKHYA

  DHANYAVAADAGALU.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. nageshamysore
   ಒಳಿತು ಕೆಡುಕಿನ ಮೂಲ ಇನ್ನೆಲ್ಲೊ ಇರದೆ ತನ್ನೊಳಗೆ ಅಡಗಿರುವುದೆಂಬ ಸತ್ಯವನ್ನು ಮನಗಾಣುವತನಕ, ತನ್ನ ಸುತ್ತಲ ಪರಿಸ್ಥಿತಿಗೆ ತಾನು ಹೊಣೆಗಾರನೆಂಬ ಅರಿವು ಬರುವುದಿಲ್ಲ. ಅದು ಕೇವಲ ಸಜ್ಜನರ ಅಂತರಾಳದ ಸಾತ್ವಿಕ ಸಿಟ್ಟಾಗದೆ, ನೈತಿಕ ರೋಷವಾಗಿ ಪ್ರಕಟವಾದರೆ ಕೆಡುಕು ಮಾಡಲು ಹೊರಟವರಿಗು ಭೀತಿ ಹುಟ್ಟಿ, ಅವರ ನಡೆನುಡಿಗೊಂದು ಅಂಕುಶವಿಟ್ಟಂತಾಗುತ್ತದೆ. ಆಗ ಕಾಲದೂಷಣೆಯ ಬದಲು ವ್ಯವಸ್ಥೆಯ ದೋಷ ಪರಿಹಾರಕ್ಕೆ ಒಮ್ಮತದ ಸಮಷ್ಟಿಯ ಯತ್ನ ಸಾಧ್ಯವಾಗುತ್ತದೆ. ಅವರಿವರತ್ತ ಬೆರಳು ತೋರಿಸದೆ, ನಾವೇ ಮುಂದೆ ನಿಂತು ಕಾರ್ಯಗತ ಮಾಡಬೇಕೆಂಬುದನ್ನು ಬಿಂಬಿಸಿದ ಲೇಖನ ಸಾರ ಚೆನ್ನಾಗಿದೆ.

   kavinagaraj
   ಸಾರಯುಕ್ತ ಅನಿಸಿಕೆಗೆ ವಂದನೆಗಳು, ನಾಗೇಶರೇ.

   ಅಳಿಸಿ