ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ನವೆಂಬರ್ 22, 2014

ಖಿನ್ನನಾಗದಿರು ಮನವೆ, ನಾನಿರುವೆ!


"ಜೀವನವೆಂದರೆ  ಶೇ.10ರಷ್ಟು ನಿಮಗೆ ಏನು ಅನುಭವಕ್ಕೆ ಬರುತ್ತದೋ ಅದು ಮತ್ತು ಶೇ. 90ರಷ್ಟು ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರೋ ಅದು!"
     ಪತಿ-ಪತ್ನಿ ಇಬ್ಬರೂ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪೆನಿಯಲ್ಲಿ ಇಂಜನಿಯರರು. ಇಬ್ಬರಿಗೂ ಕೈತುಂಬಾ ಸಂಬಳ ಬರುತ್ತಿತ್ತು. ಪತಿ ತನ್ನ ತಾಯಿಗೆ ಹಬ್ಬದ ಖರ್ಚಿಗಾಗಿ ರೂ.5000/- ಮನಿ ಆರ್ಡರ್ ಕಳಿಸಿದ ವಿಷಯ ಪತ್ನಿಗೆ ತಿಳಿದು ಅದನ್ನು ಆಕ್ಷೇಪಿಸಿ ಜಗಳವಾಡಿದಳು. ಮಾತಿಗೆ ಮಾತು ಬೆಳೆದು ಇಬ್ಬರೂ ಆಕ್ರೋಶದಿಂದ ಕೂಗಾಡಿದರು. ಕೊನೆಯಲ್ಲಿ ಖಿನ್ನನಾದ ಪತಿ ಅನ್ಯಮನಸ್ಕನಾಗಿ ಕುಳಿತ. ಮಲಗಿದ್ದ ಪತ್ನಿ ಬೆಳಗ್ಗೆ ಎದ್ದು ನೋಡಿದರೆ ಪತಿ ನೇಣಿಗೆ ಶರಣಾಗಿದ್ದುದು ಕಂಡು ಬಂದಿತ್ತು. ಕಳೆದ ವರ್ಷ ನಡೆದ ಈ ಘಟನೆ ಎಲ್ಲಾ ಸುದ್ದಿ ಪತ್ರಿಕೆಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ಪ್ರಚುರಗೊಂಡಿತ್ತು. ಖಿನ್ನಗೊಂಡ ಸ್ಥಿತಿಯ ದುರ್ಬಲ ಘಳಿಗೆಯಲ್ಲಿ ಕೈಗೊಂಡ ಒಂದು ತಪ್ಪು ನಿರ್ಧಾರ ಅವನ ಜೀವನವನ್ನೇ ಅಂತ್ಯಗೊಳಿಸಿತ್ತು. ಕೌಟುಂಬಿಕ ಕಲಹಗಳು, ಆರ್ಥಿಕ ಹಿನ್ನಡೆ, ಮುಂತಾದ ಕಾರಣಗಳಿಂದ ಮಕ್ಕಳಿಗೂ ವಿಷ ಉಣಿಸಿ ತಾವೂ ಆತ್ಮಹತ್ಯೆ ಮಾಡಿಕೊಳ್ಳುವ ತಂದೆ-ತಾಯಂದಿರ ಕುರಿತೂ ಕೇಳುತ್ತಿರುತ್ತೇವೆ. ಈ ಖಿನ್ನತೆ ಅನ್ನುವುದು ಇಂತಹ ಅನೇಕ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡಿ ಅನೇಕರ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ. 
     ಖಿನ್ನತೆ ಅನ್ನುವುದು ಕೆಳಮಟ್ಟದ ಮನೋಸ್ಥಿತಿಯಾಗಿದ್ದು ಒಬ್ಬ ವ್ಯಕ್ತಿಯ ಯೋಚನೆಗಳು, ನಡವಳಿಕೆಗಳು, ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆಗೊಳಗಾದವರು ಅತಂತ್ರ ಭಾವನೆಯಿಂದ ನರಳುತ್ತಾ ದುಃಖಿಗಳಾಗಿರುತ್ತಾರೆ, ಉದ್ರೇಕಿತರಾಗಿರುತ್ತಾರೆ, ಹತಾಶೆಯಿಂದ ಅಸಹಾಯಕರೆಂದು, ಬೆಲೆಯಿಲ್ಲದವರೆಂದುಕೊಂಡು ಅಭದ್ರತೆಯ ಭಾವನೆಯಿಂದ ಕುಗ್ಗಿರುತ್ತಾರೆ. ಏನು ಮಾಡಬೇಕೆಂದು ತೋಚದೆ ಚಡಪಡಿಸುತ್ತಿರುತ್ತಾರೆ. ಕೆಲವೊಮ್ಮೆ ಹುಚ್ಚರಂತೆ ವರ್ತಿಸುತ್ತಾರೆ, ಕಿರುಚಾಡುತ್ತಾರೆ. ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಒಂದೊಮ್ಮೆ ಸಂತಸ ಕೊಡುತ್ತಿದ್ದ ಸಂಗತಿಗಳು ನೀರಸವೆನಿಸುತ್ತವೆ. ಹಸಿವು ಕಡಿಮೆಯಾಗುತ್ತದೆ ಅಥವ ಹೆಚ್ಚು ತಿನ್ನಬೇಕೆನಿಸುತ್ತದೆ. ಮರೆವು ಬಾಧಿಸುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ನಿದ್ರೆಯಲ್ಲಿ ನಡೆಯುವುದು, ಹೆಚ್ಚಾಗಿ ನಿದ್ರಿಸುವುದು, ಹಲವಾರು ದೈಹಿಕ ಕಾಯಿಲೆಗಳಿಂದ ನರಳುವುದು ಮುಂತಾದ ಅನುಭವಗಳಾಗುವುದರ ಜೊತೆಗೆ ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಅಥವ ಆತ್ಮಹತ್ಯೆಗೆ ಪ್ರಯತ್ನಿಸಬಹುದು. ಖಿನ್ನತೆಗೆ ಒಳಗಾದವರಿಗೆ ಸಹಾನುಭೂತಿಗಿಂತಲೂ, ಅವರೊಂದಿಗೆ ತಾವು ಇದ್ದೇವೆ ಎಂದು ಭದ್ರತೆಯ ಭಾವನೆಯನ್ನು ಒದಗಿಸುವುದು ಅತ್ಯಂತ ಸೂಕ್ತವಾದುದು. 
     ಅಷ್ಟಕ್ಕೂ ಈ ಖಿನ್ನತೆ ಏಕೆ ಬಾಧಿಸುತ್ತದೆ? ಚಿಕ್ಕಂದಿನಲ್ಲಿ ಕಷ್ಟಗಳು, ಪೋಷಕರ ತಾರತಮ್ಯದಿಂದ ನೋಡುವ ದೃಷ್ಟಿ ಮಕ್ಕಳನ್ನು ಖಿನ್ನತೆಯಿಂದ ನರಳುವಂತೆ ಮಾಡುತ್ತವೆ. ಅದು ಮುಂದೆ ಜೀವನದುದ್ದಕ್ಕೂ ಬಾಧಿಸುವ ಸಾಧ್ಯತೆಯಿರುತ್ತದೆ. ಆರ್ಥಿಕ ಅನಾನುಕೂಲತೆ, ನಷ್ಟಗಳು, ನಿರುದ್ಯೋಗದ ಸಮಸ್ಯೆ, ವಾಸಿಯಾಗದ ಮಾರಕ ಕಾಯಿಲೆಗಳು, ಅಪೌಷ್ಠಿಕತೆ, ಪ್ರೀತಿಸಿದವರ ದ್ರೋಹ, ದುರಂತ ಘಟನೆಗಳು, ಸಾಮಾಜಿಕವಾಗಿ ಒಂಟಿಯೆನಿಸುವುದು, ದಾಂಪತ್ಯದಲ್ಲಿನ ಸಮಸ್ಯೆಗಳು, ಅಸೂಯೆ/ಮತ್ಸರ, ಸ್ತ್ರೀಯರಲ್ಲಿ ಮೆನೋಪಾಸ್, ಇತ್ಯಾದಿಗಳೂ ಖಿನ್ನತೆಗೆ ಕಾರಣವಾಗಬಲ್ಲವು. ಖಿನ್ನತೆಗೆ ವೈದ್ಯಕೀಯವಾಗಿ ಚಿಕಿತ್ಸೆ ಸಾಧ್ಯವಿದೆ. ಔಷಧೋಪಚಾರಕ್ಕಿಂತಲೂ ಮಾನಸಿಕವಾಗಿ ನೀಡುವ  ಸಲಹೆ, ಚಿಕಿತ್ಸೆಗಳು ಹೆಚ್ಚು ಉಪಕಾರಿ.
     ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಮತ್ತು ಹೊರ ಪ್ರಪಂಚಕ್ಕೆ ಗೊತ್ತಿರದ ಕೆಲವು ರಹಸ್ಯಗಳಿರುತ್ತವೆ ಮತ್ತು ಆ ಕಾರಣಗಳಿಂದ ಆತ ದುಃಖಿಯಾಗಿರುತ್ತಾನೆ. ಇದು ಗೊತ್ತಿಲ್ಲದವರು ಅವನನ್ನು ನಿರ್ಲಿಪ್ತ ಅಥವ ಲೆಕ್ಕಕ್ಕಿಲ್ಲದವನು ಎಂದುಕೊಳ್ಳುತ್ತಾರೆ. ಉದಾಹರಣೆಯಾಗಿ ಈ ಸಂಗತಿ ಹೇಳಬೇಕೆನ್ನಿಸಿದೆ. ನನ್ನ ಪರಿಚಯದ ಒಬ್ಬರು ಉಪಾಧ್ಯಾಯರು, ನನಗಿಂತ ಹತ್ತು ವರ್ಷ ದೊಡ್ಡವರು, ನಿವೃತ್ತರಾದ ನಂತರ ಪೌರೋಹಿತ್ಯ ಮಾಡುತ್ತಿದ್ದರು. ಅವರ ತಂದೆ-ತಾಯಿ ಹಳ್ಳಿಯಲ್ಲಿ ವಾಸಿಸುತ್ತಿದ್ದರು. 80-90ರ ಆಸುಪಾಸಿನಲ್ಲಿದ್ದ ಆ ಹಿರಿಯರು ವಯಾಧಿಕ್ಯ ಹಾಗೂ ಕಾಯಿಲೆಯ ಕಾರಣದಿಂದಲೂ, ಹಳ್ಳಿಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದಿದ್ದರಿಂದಲೂ ಮಗನ ಆಶ್ರಯ ಬಯಸಿದರು. ಮಗನ ಇಚ್ಛೆಯೂ ಅದೇ ಆಗಿತ್ತು. ಆದರೆ ಸೊಸೆ ಸುತರಾಂ ಒಪ್ಪಲಿಲ್ಲ. ಮದುವೆಯಾದ ಹೊಸದರಲ್ಲಿ ತನಗೆ ಅವರು ಕೊಟ್ಟ ಕಷ್ಟಗಳನ್ನು ಮುಂದೆ ಮಾಡಿ ಅವರುಗಳು ಮನೆಗೆ ಬರಲೇಬಾರದೆಂದು ಹಟ ಹಿಡಿದಳು. ಹಾಗಾಗಿ ವೃದ್ಧರು ಹಳ್ಳಿಯಲ್ಲೇ ಇರಬೇಕಾಯಿತು. ಒಂದೆರಡು ವರ್ಷದಲ್ಲಿ ತಂದೆ ಗತಿಸಿದರು. ಒಬ್ಬನೇ ಮಗನಾದ ಕಾರಣ ತಾಯಿಯನ್ನು ಪತ್ನಿಯ ವಿರೋಧದ ನಡುವೆಯೂ ಮನೆಗೆ ಕರೆತಂದ. ನಂತರದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಮನೆಯಲ್ಲಿ ಯಾರಿಗೂ ನೆಮ್ಮದಿ ಇಲ್ಲವಾಯಿತು. ತಾಯಿಯೂ ಸ್ವಲ್ಪ ಕಾಲದಲ್ಲೇ ವಿಧಿವಶಳಾದಳು. ಆದರೆ ಗಂಡ-ಹೆಂಡಿರ ನಡುವೆ ಮನಸ್ತಾಪ ಮಾತ್ರ ನಿಲ್ಲಲಿಲ್ಲ. ಅದು ಎಲ್ಲಿಯವರೆಗೆ ಹೋಯಿತೆಂದರೆ ಇಬ್ಬರೂ ಪರಸ್ಪರ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು. ಉಪಾಧ್ಯಾಯರೂ ಒಂದು ದಿನ ಕಣ್ಣು ಮುಚ್ಚಿದರು. ಈಗ ಅವರ ಪತ್ನಿ ತನ್ನ ಮಗ ಮತ್ತು ಸೊಸೆಯೊಂದಿಗೆ ಇದ್ದಾರೆ. ಆಕೆಗೆ ತನ್ನ ತಪ್ಪಿನ ಅರಿವಾಗಿದೆ. ಆದರೆ ಕಾಲ ಮಿಂಚಿದೆ.
     ಒಬ್ಬ ತಾಯಿ ತನ್ನ ಮಗು ಯಾವಾಗಲೂ ಮಂಕಾಗಿರುವುದನ್ನು ಕಂಡು ಚಿಂತಿತಳಾಗಿದ್ದಳು. ತನ್ನ ಮಗ ಎಲ್ಲಾ ಮಕ್ಕಳಂತೆ ನಗುನಗುತ್ತಾ ಆಟವಾಡಿಕೊಂಡಿರಲೆಂಬ ಕಾರಣದಿಂದ ಅವನಿಗೆ ಸಂತೋಷವಾಗಿರಲು ಹೇಳುತ್ತಿದ್ದಳು. ಕೆಲವೊಮ್ಮೆ ಅದಕ್ಕಾಗಿ ಅವನನ್ನು ದಂಡಿಸುತ್ತಲೂ ಇದ್ದಳು. "ನಗು, ಮಗೂ, ನಗು. ನೀನು ಏಕೆ ನಗುವುದಿಲ್ಲ?" ಎಂದು ಕೇಳುತ್ತಿದ್ದ ಆಕೆ ನಂತರ ಹೇಗೆ ನಗಬೇಕೆಂದು ಸ್ವತಃ ನಗುತ್ತಾ ಮಗನಿಗೆ ತೋರಿಸಿಕೊಡುತ್ತಿದ್ದಳು. ಅದು ಅತ್ಯಂತ ದುಃಖದಾಯಕ ನಗುವಾಗಿರುತ್ತಿತ್ತು. ಇಲ್ಲಿ ಮಗುವಿನೊಂದಿಗೆ ತಾಯಿಯೂ ಖಿನ್ನತೆಗೆ ಒಳಗಾಗಿದ್ದಳು.
     ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಥಿತಿ ನನಗೂ ಎದುರಾಗಿತ್ತು.  ಬೆಳ್ತಂಗಡಿಯಲ್ಲಿ ತಹಸೀಲ್ದಾರನಾಗಿದ್ದಾಗ ಕಾರ್ಯಾರ್ಥವಾಗಿ ಒಮ್ಮೆ ಧರ್ಮಸ್ಥಳಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಕಛೇರಿಯಲ್ಲಿದ್ದ ಶಿರಸ್ತೇದಾರರು ಮತ್ತು ಗುಮಾಸ್ತರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಗುಮಾಸ್ತರು ರೂ.6000/- ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಲೋಕಾಯುಕ್ತ ಇನ್ಸ್‌ಪೆಕ್ಟರರಿಗೆ ನನ್ನನ್ನೂ ಆ ಪ್ರಕರಣದಲ್ಲಿ ಸಿಲುಕಿಸಬೇಕೆಂದಿತ್ತು. ಗುಮಾಸ್ತರು ಹೇಳಿಕೆಯಲ್ಲಿ ರಾಷ್ಟ್ರೀಯ ಉಳಿತಾಯ ಪತ್ರದ ಸಲುವಾಗಿ ಆ ಹಣ ಪಡೆದಿದ್ದೆಂದು ಹೇಳಿಕೆ ಕೊಟ್ಟಿದ್ದರು. ಇನ್ಸ್‌ಪೆಕ್ಟರರು ಆ ಹೇಳಿಕೆಯನ್ನು ಹರಿದುಹಾಕಿ ತಹಸೀಲ್ದಾರರಿಗೆ ಕೊಡುವ ಸಲುವಾಗಿ ಪಡೆದಿದ್ದೆಂದು ಹೇಳಿಕೆ ಬರೆದುಕೊಡಲು ಸೂಚಿಸಿದ್ದರು. ಗುಮಾಸ್ತರು ಪುನಃ ಹಿಂದಿನಂತೆಯೇ ಹೇಳಿಕೆ ಬರೆದುಕೊಟ್ಟಿದ್ದರು. ಇನ್ಸ್‌ಪೆಕ್ಟರರು ಗುಮಾಸ್ತರ ಕಪಾಳಕ್ಕೆ ಬಾರಿಸಿ, "ತಹಸೀಲ್ದಾರರಿಗೆ ಕೊಡುವ ಸಲುವಾಗಿ ಪಡೆದಿದ್ದೆ ಎಂದು ಬರೆದುಕೊಡಲು ಹೇಳಲಿಲ್ಲವಾ? ನಿನಗೆ ಬದುಕುವುದಕ್ಕೆ ಗೊತ್ತಿಲ್ಲ. ಹೇಳಿದ ಹಾಗೆ ಬರೆದುಕೊಡು" ಎಂದು ಗದರಿಸಿ ಪುನಃ ಆ ಹೇಳಿಕೆಯನ್ನು ಹರಿದುಹಾಕಿದ್ದರು. ಆ ಗುಮಾಸ್ತರು, "ಸಾರ್, ತಹಸೀಲ್ದಾರರ ಬಗ್ಗೆ ಬರೆದುಕೊಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಅವರು ಒಳ್ಳೆಯವರು. ಬೇಕಾದರೆ ನಾನೇ ಲಂಚ ತೆಗೆದುಕೊಂಡೆ ಎಂದು ಬರೆದುಕೊಡುತ್ತೇನೆ" ಎಂದಿದ್ದರು. ಪುನಃ ಹಿಂದಿನ ಹೇಳಿಕೆಯನ್ನೇ ಬರೆದುಕೊಟ್ಟರು. ಆ ಗುಮಾಸ್ತರನ್ನು ನಾನು ಎಂದಿಗೂ ಮರೆಯಲಾರೆ. ಅವರ ಒಳ್ಳೆಯತನ ನನ್ನನ್ನು ಕಾಪಾಡಿತ್ತು. ಶಿರಸ್ತೇದಾರರ ಮೇಜಿನ ಡ್ರಾಯರಿನಲ್ಲಿ 300 ರೂ. ಸಿಕ್ಕಿದ್ದು ಅದು ಪ್ರಕರಣಕ್ಕೆ ಸಂಬಂಧಿಸದ ಹಣವಾಗಿತ್ತು. ಅವರು ಮಾತ್ರ ಇನ್ಸ್‌ಪೆಕ್ಟರರ ಸೂಚನೆಯಂತೆ ತಹಸೀಲ್ದಾರರಿಗೆ ಕೊಡುವ ಸಲುವಾದ ಹಣ ಎಂದು ಬರೆದುಕೊಟ್ಟಿದ್ದರು. ಧರ್ಮಸ್ಥಳದಲ್ಲಿದ್ದ ನನಗೆ ಇನ್ಸ್‌ಪೆಕ್ಟರರು ಪದೇ ಪದೇ ಫೋನು ಮಾಡಿ ಕಛೇರಿಗೆ ಬರಲು ಸೂಚಿಸುತ್ತಿದ್ದರು. ಪ್ರಕರಣದ ಹಿನ್ನೆಲೆ, ಮುನ್ನೆಲೆ ಅರಿಯದ ನನಗೆ ಬರಬಾರದೆಂದು, ಬಂದರೆ ತೊಂದರೆಯಾಗುವುದೆಂದು ಕಛೇರಿಯ ಇನ್ನೊಬ್ಬ ಗುಮಾಸ್ತರು ಫೋನಿನಲ್ಲಿ ತಿಳಿಸಿದ್ದರು. ನಾನು ಜಿಲ್ಲಾಧಿಕಾರಿಯವರಿಗೆ ಮತ್ತು ಸಹಾಯಕ ಆಯುಕ್ತರಿಗೆ ಫೋನು ಮೂಲಕ ಇದ್ದ ವಿಷಯ ತಿಳಿಸಿದೆ. ಅವರೂ ನನಗೆ ಕಛೇರಿಗೆ ಹೋಗದಿರಲು ಸೂಚಿಸಿದರು. ಇನ್ಸ್‌ಪೆಕ್ಟರರು ಮಾತ್ರ ನನಗೆ 'ನೀನು ಎಲ್ಲಿ ಅಡಗಿದ್ದರೂ ಬಿಡುವುದಿಲ್ಲ' ಎಂದು ಏಕವಚನದಲ್ಲಿ ಹೇಳಿದ್ದು ಅಸಹ್ಯ ಮೂಡಿಸಿತ್ತು. ನಾನು ಕೋರಿರದಿದ್ದರೂ ಮರುದಿನ ಜಿಲ್ಲಾಧಿಕಾರಿಯವರು ಸ್ವತಃ ಲೋಕಾಯುಕ್ತ ಅಧೀಕ್ಷಕರೊಂದಿಗೆ ಮಾತನಾಡಿ 'ತಹಸೀಲ್ದಾರರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅವರ ತಪ್ಪಿದ್ದರೆ ಪ್ರಕರಣದಲ್ಲಿ ಸೇರಿಸಲು ನನ್ನ ಅಭ್ಯಂತರವಿಲ್ಲ. ಸುಮ್ಮಸುಮ್ಮನೆ ಅವರನ್ನು ಸಿಲುಕಿಸಬೇಡಿ' ಎಂದು ತಿಳಿಸಿದ್ದರು. ಇದಾದ ನಂತರ ನನಗೆ ಹೇಳಿಕೆ ಕೊಡಲು ಲೋಕಾಯುಕ್ತ ಕಛೇರಿಯಿಂದ ಸೂಚನೆ ಬಂದಿತ್ತು. ನಾನು ಹೋಗಿ ನನಗೆ ತಿಳಿದ ಸಂಗತಿ ಕುರಿತು ಹೇಳಿಕೆ ನೀಡಿದ್ದೆ. ನನ್ನ ಯಾವುದೇ ತಪ್ಪಿಲ್ಲದಿದ್ದರೂ, ಆ ಪ್ರಕರಣದಲ್ಲಿ ಸಿಲುಕಿಸಬಹುದೆಂಬ ಆತಂಕದಲ್ಲಿ ಕಳೆದಿದ್ದ ಆ 3 ದಿನಗಳಲ್ಲಿ ನಾನು ನಾನಾಗಿರಲಿಲ್ಲ, ಹುಚ್ಚನಂತಾಗಿದ್ದೆ. ಒಂದು ವೇಳೆ ಸಿಲುಕಿಸಿದ್ದಿದ್ದರೆ ಬಂಧುಗಳು, ಸ್ನೇಹಿತರ ಎದುರಿಗೆ ಹೇಗೆ ಮುಖ ತೋರಿಸುವುದು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಈಗ ಆ ಘಟನೆಯ ಕುರಿತು ಅವಲೋಕಿಸಿದಾಗ ನನ್ನ ಅಂದಿನ ನಿರ್ಧಾರ ತಪ್ಪೆಂದು ಅನ್ನಿಸುತ್ತಿದೆ. ಇತರರು ಏನಾದರೂ ಅಂದುಕೊಳ್ಳುತ್ತಾರೆ ಎಂದು ನನ್ನ ಜೀವವನ್ನು ಬಲಿಗೊಡುವುದು ಸರಿಯಾಗುತ್ತಿರಲಿಲ್ಲ. ಆದರೆ ಪುಣ್ಯಕ್ಕೆ ನನ್ನನ್ನು ಆ ಪ್ರಕರಣದಲ್ಲಿ ಸಿಲುಕಿಸಲಿಲ್ಲ. ಹಾಗಾಗಿ ಈ ಲೇಖನ ಬರೆಯಲು ಅವಕಾಶ ಸಿಕ್ಕಿದೆ. 
     ಈ ಖಿನ್ನತೆ ಅನ್ನುವುದು ಯಾವ ರೂಪದಲ್ಲಿ ಹೇಗೆ ಬರುತ್ತದೋ ಊಹಿಸಲಾಗದು. ಚಾಕೊಲೇಟ್ ಕೊಡಿಸಲಿಲ್ಲ, ಹೊಸ ಬಟ್ಟೆ ಕೊಡಿಸಲಿಲ್ಲ, ಅಪ್ಪ/ಅಮ್ಮ/ಉಪಾಧ್ಯಾಯರು ಬೈದರು, ನಿರೀಕ್ಷಿತ ಅಂಕಗಳು ಬರಲಿಲ್ಲ ಮುಂತಾದ ಕ್ಷುಲ್ಲಕ ಕಾರಣಗಳಿಗಾಗಿ ಜೀವ ಕಳೆದುಕೊಳ್ಳುವ ಮಕ್ಕಳೂ ಇರುತ್ತಾರೆ. ಮಕ್ಕಳಿರಲಿ, ದೊಡ್ಡವರೆನಿಸಿಕೊಂಡವರೂ ಹೀಗೆ ಮಾಡಿದವರಿದ್ದಾರೆ. ಸೂಕ್ಷ್ಮ ಮನೋಭಾವದ ಇಂತಹವರೊಂದಿಗೆ ಜಾಗೃತರಾಗಿರುವುದು ಅವಶ್ಯವಾಗಿದೆ. ಹೆಚ್ಚಿನ ಸಮಸ್ಯೆಗಳು ಕೌಟುಂಬಿಕ ಸಾಮರಸ್ಯತೆಯ ಕೊರತೆಯಿಂದ ಬರುತ್ತವೆ. ಪತಿ/ಪತ್ನಿ ತನ್ನ ಮಾತೇ ನಡೆಯಬೇಕು, ತಾನು ಹೇಳಿದಂತೆಯೇ ಆಗಬೇಕು ಎಂದು ಸಾಧಿಸುವುದು, ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡದಿರುವುದು, ಯಾವುದೋ ಹಳೆಯ ಸಂಗತಿಯನ್ನು ಹಿಡಿದುಕೊಂಡು ಸದಾ ಕಿರಿಕಿರಿ ಮಾಡುವುದು, ರೇಗುವುದು, ಜಗಳವಾಡುವುದು ಮಾಡುತ್ತಿದ್ದರೆ ಸಮರಸತೆಗೆ ಜಾಗವೆಲ್ಲಿ? ಒಂದು ಹಂತದವರೆಗೆ ಸಹಿಸಿಕೊಂಡಾರು, ಮಿತಿ ಮೀರಿದಾಗ ಎಡವಟ್ಟು ಆಗದೇ ಇರದು. ಸಂಸಾರ ಸಾರ ಕಳೆದುಕೊಳ್ಳುತ್ತದೆ. ಹೊರಗಿನ ಒತ್ತಡಗಳು/ಸಮಸ್ಯೆಗಳಿಂದ ಬೇಸತ್ತ ಕೆಲವರು ಸಿಟ್ಟನ್ನು ತಮ್ಮ ಪತ್ನಿ/ಪತಿಯ ಮೇಲೆ ತೀರಿಸಿಕೊಂಡರೆ, ಅಸಹಾಯಕರಾದ ಅವರು ಅದನ್ನು ತಮ್ಮ ಮಕ್ಕಳ ಮೇಲೆ ತಿರುಗಿಸಿಬಿಡುವುದನ್ನೂ ಕಾಣಬಹುದು.
ಇತ್ತಿಹನು ಭಗವಂತ ಬದುಕಲೀ ಬದುಕು
ಬದುಕುವ ಮುನ್ನ ಸಾಯುವುದೆ ಕೆಡುಕು |
ಸಾಯುವುದು ಸುಲಭ ಬದುಕುವುದು ಕಷ್ಟ
ಸುಲಭದ ಸಾವ ಬಯಸದಿರು ಮೂಢ ||
     ಸಾಮಾನ್ಯವಾಗಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಮಯದಲ್ಲಿ, ಒಂದಲ್ಲಾ ಒಂದು ಕಾರಣಕ್ಕಾಗಿ ಖಿನ್ನತೆಯಿಂದ ಬಳಲಿದವರೇ ಇರುತ್ತಾರೆ. ಖಿನ್ನತೆಯಿದ್ದಾಗ ವಿವೇಚಿಸುವ ಶಕ್ತಿ ಇರುವುದಿಲ್ಲ. ಖಿನ್ನತೆಗೊಳಗಾದವರು ತಮ್ಮ ಜೀವನದ ಬಲೂನಿಗೆ ತಾವೇ ಪಿನ್ನು ಚುಚ್ಚಿಕೊಳ್ಳುತ್ತಾರೆ. ಆದ್ದರಿಂದ ಖಿನ್ನತೆಯಿಂದ ಹೊರಬಂದ ಸಮಯದಲ್ಲಿ ತಮ್ಮ ಖಿನ್ನತೆಯ ಕಾರಣದ ಬಗ್ಗೆ ಅವಲೋಕಿಸುವುದು ಒಳಿತು. ಯಾವುದೇ ಕಾರಣಕ್ಕೂ, ಎಂತಹ ಸಂದರ್ಭದಲ್ಲೂ ದುಡುಕದಿರುವ ನಿರ್ಧಾರವನ್ನು ಆ ಸಮಯದಲ್ಲಿ ಕೈಗೊಳ್ಳಬೇಕು. ಜೀವನವೆಂದರೆ ಕೇವಲ ಅದೊಂದೇ ಸಮಸ್ಯೆ ಅಲ್ಲ, ಅದಕ್ಕೂ ಮೀರಿದ ಬಾಳು ಇದೆ, ಕಂಗೆಡುವ ಅಗತ್ಯವೇ ಇಲ್ಲ, ಬದಲಿ ದಾರಿಗಳು, ಪರಿಹಾರಗಳು ಇವೆ ಎಂದು ಮನಗಾಣಬೇಕು. ತಮ್ಮ ದುಡುಕಿನ ಕಾರಣದಿಂದ ತಮ್ಮ ಮಕ್ಕಳು, ಪೋಷಕರು, ಪ್ರೀತಿಪಾತ್ರರುಗಳಿಗೆ ಆಗುವ ನೋವಿನ ಅರಿವು ಮೂಡಿಸಿಕೊಳ್ಳಬೇಕು. ತಮಗೆ ನೆರವಾಗಬಲ್ಲ, ಆಸರೆಯ ಹಸ್ತ ಚಾಚಬಲ್ಲವರೊಂದಿಗೆ ಸಂಪರ್ಕದಲ್ಲಿರಬೇಕು, ಕಷ್ಟದ ಸಂದರ್ಭದಲ್ಲಿ ಅವರ ಸಹಾಯ ಪಡೆಯಬೇಕು ಎಂದು ನಿಶ್ಚಯಿಸಿಕೊಳ್ಳಬೇಕು. ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಬೇಕು, ತಮಗೆ ತಾವೇ ಆಸರೆಯಾಗಿ ನಿಲ್ಲುವ ಮನಸ್ಸು ಮಾಡಬೇಕು. ಹೀಗೆ ಮಾನಸಿಕವಾಗಿ ಬಲಗೊಂಡರೆ, ಮುಂದೆ ನಿಜ ಸಮಸ್ಯೆಯ ಸಂದರ್ಭಗಳಲ್ಲಿ ಖಿನ್ನತೆಯನ್ನು ಮೆಟ್ಟಿ ನಿಲ್ಲಬಲ್ಲ ಶಕ್ತಿ ಸಂಚಯವಾದೀತು. 
     ಖಿನ್ನತೆಯಿಂದ ನರಳುವ ಸದಸ್ಯರ ಕುಟುಂಬದ ಇತರರೂ ಹೊಣೆಗಾರಿಕೆಯಿಂದ ನಡೆದುಕೊಳ್ಳುವ ಅಗತ್ಯ ಬಹಳವಾಗಿದೆ. ಗತಿಸಿದ ಘಟನೆಗಳನ್ನು ನೆನೆದು ಹಂಗಿಸಿ, ಭಂಗಿಸಿ ಮಾಡುವುದಕ್ಕಿಂತ ಈಗ ಚೆನ್ನಾಗಿರಲು ಏನು ಮಾಡಬೇಕೆಂದು ವಾಸ್ತವಿಕವಾಗಿ ನಡೆದುಕೊಳ್ಳುವುದು ವಿವೇಕವಂತರ ಲಕ್ಷಣ. ಇಲ್ಲದಿದ್ದರೆ ಅನಾಹುತಗಳಿಗೆ ಎಡೆಯಾಗುತ್ತದೆ ಮತ್ತು ಅದರ ಪರಿಣಾಮ ಕುಟುಂಬದ ಇತರರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಆಗುತ್ತದೆ. ಕೋಪ, ಅಸಹನೆ, ದ್ವೇಷಗಳು ಇನ್ನೊಬ್ಬರನ್ನು ತಿದ್ದಲಾರವು. ಬದಲಾಗಿ ಅವು ದ್ವೇಷಿಸಿದವರನ್ನೇ ದಹಿಸುತ್ತದೆ. ಕ್ಷುಲ್ಲಕ ಕಾರಣಕ್ಕಾಗಿ ಯಾರೂ ದುಡುಕಲಾರರು, ಅದರ ಹಿಂದೆ ಸತತ ಕಿರಿಕಿರಿಯ ಹಿನ್ನೆಲೆ ಇದ್ದೀತು, ಕ್ಷುಲ್ಲಕ ಕಾರಣಗಳು ಕೇವಲ ನೆಪಗಳು ಎಂಬ ಅರಿವಿರಬೇಕು. ಕುಟುಂಬದ ಕಲಹಗಳಲ್ಲಿ ಗೆದ್ದವರು ಸೋಲುತ್ತಾರೆ, ಸೋಲುವವರು ಗೆಲ್ಲುತ್ತಾರೆ. ದುರಭಿಮಾನ ಯಾರಿಗೂ ಒಳ್ಳೆಯದಲ್ಲ. ಖಿನ್ನತೆಯಿಂದ ಬಳಲುವವರಿಗೆ ಆಸರೆಯಾಗಿ ನಿಂತು ಭದ್ರತೆಯ ಭಾವನೆ ನೀಡಿದರೆ ಸಮಸ್ಯೆ ಅರ್ಧ ಪರಿಹಾರವಾದಂತೆ. ಕಲ್ಲು, ಇಟ್ಟಿಗೆ, ಮರಳು, ಸಿಮೆಂಟುಗಳನ್ನು ಜೋಡಿಸಿ ಒಳ್ಳೆಯ ಕಟ್ಟಡ ಕಟ್ಟಬಹುದು, ಆದರೆ ಅದು ಒಳ್ಳೆಯ ಮನೆ ಎಂದು ಅನ್ನಿಸಿಕೊಳ್ಳಬೇಕಾದರೆ ಅದರಲ್ಲಿ ವಾಸಿಸುವವರ ಹೃದಯಗಳ ಜೋಡಣೆ ಆದರೆ ಮಾತ್ರ ಸಾಧ್ಯ. ಇಲ್ಲದಿದ್ದರೆ ಅದು ಕೇವಲ ಮನೆಯ ಸ್ಮಾರಕ ಅನ್ನಬಹುದು. 
     ಸುಂದರವಾದ ಕಮಲ ಕೆಸರಿನಲ್ಲಿ ಬೆಳೆಯುತ್ತದೆ. ದುಃಖ, ಬಡತನ, ಕಾಯಿಲೆ, ಮೂದಲಿಕೆ, ನಷ್ಟ, ಅಡಚಣೆಗಳು, ತೊಂದರೆಗಳು ಮುಂತಾದ ಅನೇಕ ಕಷ್ಟಗಳೆಂಬ ಕೆಸರಿನ ನಡುವೆ ಸುಂದರವಾದ ಜೀವನ ಕುಸುಮ ಅರಳಿಸುವವರು ನಾವಾಗಬೇಕು. ನಮ್ಮ ಬದುಕು ನಮ್ಮದು. ಅದನ್ನು ಇತರರ ಕಾರಣದಿಂದ ಹಾಳು ಮಾಡಿಕೊಳ್ಳಬಾರದು. ಜೀವನ ಅನ್ನುವುದು ಸಮಸ್ಯೆಗೆ ನಾವು ಪ್ರತಿಕ್ರಿಯಿಸುವ ರೀತಿಯಲ್ಲಿದೆ. ಸಮರ್ಥವಾಗಿ ಪ್ರತಿಕ್ರಿಯಿಸೋಣ, ಖಿನ್ನತೆಯನ್ನು ಹೊಡೆದಟ್ಟೋಣ.
-ಕ.ವೆಂ.ನಾಗರಾಜ್.
***************
ದಿನಾಂಕ 24.11.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

6 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. ಗಣೇಶ
      ಆತ್ಮಹತ್ಯೆಗಳು ಹೆಚ್ಚುತ್ತಿರುವ ಈ ಕಾಲಕ್ಕೆ ಸರಿಯಾದ ಲೇಖನ. ಎಲ್ಲರೂ ಓದಲೇಬೇಕಾದ ಉತ್ತಮ ಬರಹ.

      kavinagaraj
      ಧನ್ಯವಾದಗಳು, ಗಣೇಶರೇ.

      nageshamysore
      ಖಿನ್ನತೆಯ ಅಂತರಾಳವನ್ನು ಜಾಲಾಡಿದ ಸೊಗಸಾದ ಬರಹ ಕವಿಗಳೆ. ಅದರ ಕಬಂಧ ಬಾಹುವಿನ ವಿಕೃತ ಶಕ್ತಿ ಅದರ ಹಿಡಿತಕ್ಕೆ ಸಿಕ್ಕಿ ನರಳಿದವರಿಗಷ್ಟೆ ಗೊತ್ತು. ತರ್ಕ, ಸಮಯೋಚಿತ ಚಿಂತನೆ, ಸೂಕ್ತಾಸೂಕ್ತ ವಿವೇಚನೆ - ಎಲ್ಲವು ಗಾಳಿಗೆ ತೂರಿದಂತೆ ಧೂಳೀಪಟವಾಗಿ ಬರಿಯ ಭಾವಾವೇಶವಷ್ಟೆ ನಿರ್ಧಾರಕ್ಕೆ ಪ್ರೇರಣೆಯಾಗುವುದು ಖಿನ್ನತೆಯ ಕಾರಣದಿಂದಲೆ. ನಾನೂ ಹಲವಾರು ಬಾರಿ ಅದರ ಪ್ರಭಾವಕ್ಕೆ ಸಿಕ್ಕಿ ನರಳಬೇಕಾಗಿ ಬಂತಾದರು ಆ ಹೊತ್ತಿನಲ್ಲಿ ಗಮನವನ್ನು ಬಲವಂತದಿಂದ ಮನಸಿಗೆ ಹತ್ತಿರವಾದ ಯಾವುದಾದರು ಕಾರ್ಯದಲ್ಲಿ ತೊಡಗಿಸಿಕೊಂಡು (ಉದಾಹರಣೆ - ಏನಾದರು ಬರೆಯುವುದು) ಆ ಕಾಲವಲಯವನ್ನು ಅಧಿಗಮಿಸಿಕೊಳ್ಳುತ್ತಿದ್ದೆ. ಎಂತಹ ಅನುಭವಸ್ಥರಿಗು ಕಾಡುವ ಇದರ ಪರಕ್ರಮದ ಕುರಿತು ಚೆನ್ನಾದ ಬರಹ.

      kavinagaraj
      ಧನ್ಯವಾದ, ನಾಗೇಶರೇ. ಮಾನಸಿಕವಾಗಿ ಸಬಲರೂ ಕೆಲವೊಮ್ಮೆ ಪರಿಸ್ಥಿತಿಯ ಶಿಶಿಗಳಾಗಿಬಿಡುತ್ತಾರೆ. ಇದೇ ಕಷ್ಟ.

      ಅಳಿಸಿ
    2. H A Patil
      ಕವಿ ನಾಗರಾಜ ರವರಿಗೆ ವಂದನೆಗಳು
      ಖಿನ್ನನಾಗದಿರು ಮನವೆ ಎಲ್ಲರೂ ಓದ ಬೇಕಾದ ಲೇಖನ, ತೊಂದರೆಗಳನ್ನು ನೀಗಿಕೊಂಡು ನಾವು ಮುನ್ನಡೆಯಬೇಕು ಅದು ಜೀವನ, ದುರ್ಬಲ ಮನಸ್ತಿತಿಯವರಿಗೆ ಇದೊಂದು ಉಪಯುಕ್ತ ಜೊತೆಗೆ ಬದುಕಲು ಕಲಿಸುವ ಲೇಖನ ದನ್ಯವಾದಗಳು.

      kavinagaraj
      ನನ್ನನ್ನೂ ಸೇರಿಸಿದಂತೆ ಸೂಕ್ಷ್ಮ ಮನಸ್ಕರು ಧೃಢಮನಸ್ಕರಾಗಲಿ ಎಂಬ ಕಾರಣದಿಂದ ಮೂಡಿರುವುದಿದು. ಧನ್ಯವಾದಗಳು, ಪಾಟೀಲರೇ.

      ಅಳಿಸಿ
    3. ravindra n angadi
      ನಮಸ್ಕಾರ ಸರ್
      ತುಂಬಾ ಚನ್ನಾಗಿದೆ ಸರ್ ಮನಸ್ಸಿನ ಭಾವನೆಯು ಸ್ಥಿರವಾಗಿರದ ಕಾರಣ ,ಮನಸ್ಸಿನ ಶಕ್ತಿಯ ಮುಂದೆ ಯಾವ ಶಕ್ತಿಯು ಇಲ್ಲ. ಧನ್ಯವಾದಗಳು.

      kavinagaraj
      ವಂದನೆಗಳು, ರವೀಂದ್ರ ಅಂಗಡಿಯವರೇ.

      ಅಳಿಸಿ
    4. partha1059
      ಖಿನ್ನತೆ ನಿಜಕ್ಕೂ ಅಪಾಯಕಾರಿ ಎಂಬುದು ನಿಜ‌
      ಆದರೂ ಈಗೆಲ್ಲ‌ ಆತ್ಮಹತ್ಯೆ ಮಾಡಿಕೊಳ್ಳುವ‌ ಸಂದರ್ಭ‌ ಕಾರಣಗಳು ಎಲ್ಲವನ್ನು ನೋಡುವಾಗ‌ ಖಿನ್ನತೆಯಸ್ಟೆ ಕಾರಣವಲ್ಲವೇನೊ ಅನ್ನಿಸುತ್ತೆ, ಮನುಶ್ಯನ‌ ದುರಂಹಕಾರ‌, ಹಟ‌, ಮೂರ್ಖತನ‌ ಕೋಪ‌ ಇಂತಹ‌ ಕಾರಣಗಳೆ ಜಾಸ್ತಿ ಕಾಣುತ್ತವೆ,
      ತಾವು ಸಾಯುವಾಗ‌ ತಮ್ಮ‌ ಮಕ್ಕಳನ್ನು ಕೊಲ್ಲುವ‌ ತಾಯಿಯರನ್ನು ಕಾಣುವಾಗ‌,
      ಅವರಿಗೆ ಬದುಕಲು ಮನಸಿಲ್ಲ‌ ಆದರೆ ಮಕ್ಕಳ‌ ಜೀವ‌ ತೆಗೆಯುವ‌ ಹಕ್ಕು ಅವರಿಗೆ ಯಾರು ಕೊಟ್ಟರು ಅನ್ನಿಸುತ್ತೆ. ಅವರಿಗೆ ಬಧುಕು ಅಸಹನೀಯವೆನಿಸಿದರೆ ಆವರ‌ ಮಕ್ಕಳು ಹೇಗೋ ಅನಾಥರಾಗಿ ಬದುಕಿದರು ಸಹ‌ ಜೀವನ‌ ಸಾಧಿಸಬಹುದು ಅಲ್ಲವೇ
      ಚಿಂತನೆಗೆ ಹಚ್ಚುವ‌ ಉತ್ತಮ‌ ಲೇಖನಕ್ಕಾತಿ ಅಭಿನಂದನೆಗಳು
      ವಂದನೆಗಳೊಡನೆ
      ಪಾರ್ಥಸಾರಥಿ

      kavinagaraj
      ನಿಜ, ಪಾರ್ಥರೇ. ಆತ್ಮಹತ್ಯೆಗೆ ಖಿನ್ನತೆಯೊಂದೇ ಕಾರಣವಲ್ಲ. ಖಿನ್ನತೆಯ ಕಾರಣದಿಂದ ದುರ್ಬಲಗೊಳ್ಳುವ ಮನಸ್ಸು ಅದರೆಡೆಗೆ ತಿರುಗುತ್ತದೆ. ಪ್ರತಿಕ್ರಿಯೆಗೆ ವಂದನೆಗಳು.

      ಅಳಿಸಿ