ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಆಗಸ್ಟ್ 31, 2014

ಮಾತನಾಡಿದ ಶವಗಳು - 2



     ಒಂದು ಮಧ್ಯಾಹ್ನ ಹಾಗೆಯೇ ಒರಗುದಿಂಬಿಗೆ ಒರಗಿ ಕುಳಿತಿದ್ದಾಗ ಮನಃಪಟಲದಲ್ಲಿ ಮೂಡಿದ ಒಂದು ಚಿತ್ರ ನನ್ನನ್ನು ಅಣಕಿಸುತ್ತಾ ಕೇಳಿತ್ತು: "ನಿಮಗೆ ಕೇರಳಾಪುರದ ಶಶಿಕಲಾ ಬಗ್ಗೆ ನೆನಪಿದೆ, ಶಿಕಾರಿಪುರದ ಜ್ಯೋತಿಯ ನೆನಪಿದೆ. ಅವರ ಬಗ್ಗೆ ಬರೆಯುತ್ತೀರಿ. ನನ್ನ ಬಗ್ಗೆ ಮಾತ್ರ ನಿಮಗೆ ಏನೂ ಅನ್ನಿಸುವುದೇ ಇಲ್ಲವಾ?" ಈ ಮಾತುಗಳು ಸೊರಬದ ತತ್ತೂರಿನ ಗಂಗಮ್ಮನದು ಎಂದು ಗೊತ್ತಾದರೂ ಸುಮ್ಮನಿದ್ದೆ. ನಾನು ಸುಮ್ಮನಿದ್ದರೂ ಆಕೆ ಸುಮ್ಮನಿರಬೇಕಲ್ಲಾ!
     "ನನಗೆ ಗೊತ್ತು. ನೀವು ನನ್ನನ್ನು ನೋಡಿದಾಗ ನಾನು ನೋಡಲೂ ಆಗದ ಸ್ಥಿತಿಯಲ್ಲಿದ್ದುದರಿಂದ ನೀವು ಮುಖ ಕಿವಿಚಿದ್ದಿರಿ. ಮೂಗು ಮುಚ್ಚಿಕೊಂಡಿದ್ದಿರಿ. ಅದಕ್ಕೋಸ್ಕರ ನೀವು ನನ್ನನ್ನು ನೆನಪಿಸಿಕೊಳ್ಳಲು ಇಷ್ಟಪಡುತ್ತಿಲ್ಲವೇನೋ!" ಅದು ಹಾಗಲ್ಲವೆಂದು ಆಕೆಗೂ ಗೊತ್ತಿದ್ದರೂ ನನ್ನನ್ನು ಕೆಣಕಿದ್ದಳು.
     ಅಂದಿನ ದಿನದ ನೆನಪಾಯಿತು. ಸುಮಾರು ಏಳು ವರ್ಷಗಳ ಹಿಂದೆ ಮಧ್ಯಾಹ್ನ 3.೦೦ ಘಂಟೆಯ ಸುಮಾರಿಗೆ ಸೊರಬ ತಾಲ್ಲೂಕಿನ ಆನವಟ್ಟಿ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರರು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ 'ತೊರವಂದ ಗ್ರಾಮದ ವ್ಯಾಪ್ತಿಯಲ್ಲಿ ವರದಾ ನದಿಯ ದಡದಲ್ಲಿ ಒಬ್ಬ ಮಹಿಳೆಯ ಶವವಿದೆ. ಆಕೆಯ ಮದುವೆಯಾಗಿ ನಾಲ್ಕೂವರೆ ತಿಂಗಳಾಗಿದೆ. ಸೊರಬ ತಹಸೀಲ್ದಾರರು ರಜೆಯಲ್ಲಿದ್ದಾರೆ. ನೀವು ದಯಮಾಡಿ ಶವತನಿಖೆ ನಡೆಸಿಕೊಡಬೇಕು' ಎಂದು ಕೋರಿದ್ದರು. ಅದೇ ಸಮಯಕ್ಕೆ ಜಿಲ್ಲಾಧಿಕಾರಿಯವರು ಶಿಕಾರಿಪುರದ ತಹಸೀಲ್ದಾರನಾಗಿದ್ದ ನನಗೆ ಸೊರಬ ತಹಸೀಲ್ದಾರರು ರಜೆಯಲ್ಲಿದ್ದ ಕಾರಣ ಶವತನಿಖೆ ನಡೆಸಲು ಅಧಿಕೃತಗೊಳಿಸಿ ಫ್ಯಾಕ್ಸ್ ಸಂದೇಶದ ಮೂಲಕ ಕಳಿಸಿದ್ದ ಆದೇಶ ಸಹ ತಲುಪಿತು. ಸರಿ, ಒಬ್ಬ ಗುಮಾಸ್ತರನ್ನು ಕರೆದುಕೊಂಡು ಹೊರಡುತ್ತಾ ಸಬ್ ಇನ್ಸ್‌ಪೆಕ್ಟರರಿಗೆ ಪೋಸ್ಟ್ ಮಾರ್ಟಮ್ ಮಾಡಲು ವೈದ್ಯಾಧಿಕಾರಿಯವರಿಗೆ ಸಿದ್ಧರಿರಲು ತಿಳಿಸುವಂತೆ ಹೇಳಿ, ತಲುಪುವಾಗ ತಡವಾಗುವ ಕಾರಣದಿಂದ ಸೂಕ್ತ ಬೆಳಕಿನ ವ್ಯವಸ್ಥೆಯನ್ನೂ ಮಾಡಿರಲು ಸೊರಬದ ತಾಲ್ಲೂಕು ಕಛೇರಿಯ ಸಿಬ್ಬಂದಿಗೆ ಸೂಚನೆಯನ್ನೂ ಕೊಟ್ಟು ಹೊರಟೆ.
     ಅರ್ಧ ದಾರಿಯಲ್ಲಿ ಅಲ್ಲಿನ  ಸರ್ಕಲ್ ಇನ್ಸ್‌ಪೆಕ್ಟರರು ಮತ್ತು ಅವರ ಸಿಬ್ಬಂದಿ ಜೊತೆಗೂಡಿದರು. ಶವವಿದ್ದ ಸ್ಥಳ ಇನ್ನೂ ಸುಮಾರು 3 ಕಿ.ಮೀ. ಇದ್ದಂತೆಯೇ ಜೀಪು ಹೋಗಲು ದಾರಿಯಿಲ್ಲದೆ ನಡೆದೇ ಹೋಗಬೇಕಿತ್ತು. ಮಳೆಗಾಲವಾಗಿದ್ದು ಮೋಡ ಮುಸುಕಿ ಜಿಟಿ ಜಿಟಿ ಮಳೆ ಬೀಳುತ್ತಿದ್ದಂತೆಯೇ ನಮ್ಮ ಸವಾರಿ ಮುಂದುವರೆಯಿತು. ನಾಟಿ ಮಾಡಿದ್ದ ಜಾರುತ್ತಿದ್ದ ಬದಿಗಳಲ್ಲಿ ಎಚ್ಚರಿಕೆಯಿಂದ ಬೀಳದಂತೆ ಹೆಜ್ಜೆಯಿಟ್ಟು ನಡೆಯಬೇಕಿತ್ತು. ನಮ್ಮ ಗ್ರಾಮಸಹಾಯಕನೊಬ್ಬ ನನಗೆ ಟಾರ್ಚು ಹಿಡಿದು ದಾರಿ ತೋರಿಸಲು ತಿರುತಿರುಗಿ ನೋಡುತ್ತಾ ಹೋಗುತ್ತಿದ್ದಾಗ ಜಾರಿಬಿದ್ದು ಮೈಕೈಯೆಲ್ಲಾ ಕೆಸರು ಮಾಡಿಕೊಂಡಿದ್ದ. ಅವನು ಬಿದ್ದದ್ದು ಕಂಡ ನನಗೆ 'ಪಾಪ' ಅನ್ನಿಸಿತು. ಅದು ಉಳಿದವರು ಇನ್ನೂ ಎಚ್ಚರಿಕೆಯಿಂದ ನಡೆಯುವಂತೆ ಮಾಡಿತ್ತು. ಆ ಕತ್ತಲೆಯ ಸಂಜೆಯಲ್ಲಿ ಗದ್ದೆಯ ಬದಿಯಲ್ಲಿ ಪೆಟ್ರೋಮ್ಯಾಕ್ಸ್ ಲೈಟುಗಳು, ಹಗ್ಗಗಳು, ಗಳುಗಳು, ಛತ್ರಿಗಳು, ಇತ್ಯಾದಿಗಳನ್ನು ಹಿಡಿದುಕೊಂಡು ನಾವುಗಳು ಹೋಗುತ್ತಿದ್ದುದನ್ನು ದೂರದಿಂದ ನೋಡಿದವರಿಗೆ ಕೊಳ್ಳಿದೆವ್ವಗಳಂತೆ ಕಂಡಿರಲೂ ಸಾಕು. ಪಾಪ, ಡಾಕ್ಟರರೂ ತಮ್ಮ ಒಬ್ಬ ಸಹಾಯಕನೊಂದಿಗೆ ಸಲಕರಣೆಗಳನ್ನು ಹಿಡಿದುಕೊಂಡು ಕಷ್ಟಪಟ್ಟು ನಮ್ಮೊಂದಿಗೆ ಹೆಜ್ಜೆ ಹಾಕಿದ್ದರು.
     ಅಂತೂ ಶವವಿದ್ದ ಸ್ಥಳ ತಲುಪಿದೆವು. ಶವವೋ ಅಲ್ಲಿದ್ದ ಹಳುಗಳ ನಡುವೆ ಸಿಕ್ಕಿಕೊಂಡಿದ್ದು ಕಾಣಿಸುತ್ತಿದ್ದರೂ, ಅದನ್ನು ಅಲ್ಲಿಂದ ಬಿಡಿಸಿ ಹೊರತರಲು ಕೆಳಗಿನ ಸಿಬ್ಬಂದಿ ಸುಮಾರು ಒಂದು ಗಂಟೆಯ ಕಾಲ ಹೆಣಗಬೇಕಾಯಿತು. ಶವಕ್ಕೆ ಕೆಸರು ಮೆತ್ತಿದ್ದರಿಂದ ನೀರು ಸುರಿದು ಸ್ವಚ್ಛಗೊಳಿಸಬೇಕಾಯಿತು. ಆ ದೃಷ್ಯ ಭೀಕರವಾಗಿತ್ತು, ದುರ್ವಾಸನೆ ತಡೆಯುವಂತಿರಲಿಲ್ಲ. ಸುಮಾರು ೨-೩ ದಿನಗಳು ನೀರಿನಲ್ಲೇ ಕೊಳೆತಿದ್ದ ಆ ಶವದ ನಾಲಿಗೆ ಹೊರಚಾಚಿ ಕಚ್ಚಿಕೊಂಡಿದ್ದು, ನಾಲಿಗೆ ಊದಿದ್ದರಿಂದ ಬಾಯಲ್ಲಿ ಬಲೂನು ಇಟ್ಟುಕೊಂಡಿದ್ದಂತೆ ಕಾಣುತ್ತಿತ್ತು. ತಲೆಯಚರ್ಮ ಕೊಳೆತಿದ್ದರಿಂದ ಕೂದಲು ಕಳಚಿಹೋಗಿ ತಲೆ ಬೋಳಾಗಿತ್ತು.  ಎರಡೂ ಕೈಗಳು ಶೆಟಗೊಂಡಿದ್ದವು. ಬಲಗೈ ಮಣಿಕಟ್ಟಿನ ಹತ್ತಿರ ಸುಮಾರು ಮೂರು ಇಂಚು ಉದ್ದ, ಎರಡೂವರೆ ಇಂಚು ಅಗಲದ ಕಡಿತದಿಂದಾದ ರೀತಿಯ ಗಾಯವಿತ್ತು. ಹೊಟ್ಟೆಯ ಕೆಳಭಾಗದಿಂದ ಕರುಳು ಹೊರಬಂದಿದ್ದು, ಇಡೀ ದೇಹ ಊದಿಕೊಂಡಿತ್ತು. ದೇಹದ ಅಲ್ಲಲ್ಲಿ ಜಲಚರಗಳು ದೇಹವನ್ನು ತಿಂದಿದ್ದವು. ಈಗಲೂ ಆ ದೃಷ್ಯ ಕಣ್ಣ ಮುಂದೆ ರಾಚಿದಂತೆ ಇದೆ. ಗಮನಿಸಿದ ಸಂಗತಿಗಳನ್ನು ಪಂಚರ ಸಮಕ್ಷಮದಲ್ಲಿ ದಾಖಲಿಸಿ ಸಂಬಂಧಿಸಿದ ಎಲ್ಲರ ಸಹಿ ಪಡೆದೆ. ಮೃತಳ ತಂದೆಯ ಮತ್ತು ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಂಡೆ. ನಂತರದಲ್ಲಿ ಸರ್ಕಾರಿ ವೈದ್ಯರಿಗೆ ಪೋಸ್ಟ್ ಮಾರ್ಟಮ್ ಮಾಡಿ ವರದಿಯನ್ನು ಪೋಲಿಸರಿಗೆ ತಲುಪಿಸಲು ಹಾಗೂ ನಂತರ ವಾರಸುದಾರರಿಗೆ ಶವವನ್ನು ಅಂತ್ಯ ಸಂಸ್ಕಾರಕ್ಕೆ ತಲುಪಿಸಲು ಸೂಚನೆ ನೀಡಿ ಹೊರಬಂದೆ. ಪೋಲಿಸರಿಗೂ ತನಿಖೆ ಮುಂದುವರೆಸಲು ಸೂಚಿಸಿದೆ. ಇದು ಶೀಲ ಶಂಕಿಸಿ ನಡೆದ ಕೊಲೆಯೆಂದು ಮೇಲುನೋಟಕ್ಕೆ ಗೋಚರವಾಗುವಂತಹ ಸಂಗತಿಯಾಗಿತ್ತು. ಶವತನಿಖಾ ವರದಿಯನ್ನು ಜುಡಿಯಲ್ ನ್ಯಾಯಾಲಯಕ್ಕೆ ಕಳಿಸಿದೆ. ನಂತರದ ಮೂರು ದಿನಗಳು ನನಗೆ ಸರಿಯಾಗಿ ಊಟ, ತಿಂಡಿ ಮಾಡಲಾಗಿರಲಿಲ್ಲ.
     ಪೋಲಿಸರು ಕೊಟ್ಟ ಪ್ರಥಮ ವರ್ತಮಾನ ವರದಿ, ಸ್ಥಳದಲ್ಲಿದ್ದ ಮೃತೆಯ ತಂದೆ ಮತ್ತು ಪಂಚರ ಹೇಳಿಕೆಗಳಿಂದ ತಿಳಿದಿದ್ದಿಷ್ಟು.  ಗಂಗಮ್ಮಳ ಹೆತ್ತವರಿಗೆ ಎರಡು ಗಂಡು, ಎರಡು ಹೆಣ್ಣು ಮಕ್ಕಳು. ಹಿರಿಯ ಮಗ ಮತ್ತು ಹಿರಿಯ ಮಗಳಿಗೆ ಮದುವೆಯಾಗಿತ್ತು. ಮಗಳು ಗಂಗಮ್ಮನಿಗೆ 23 ವರ್ಷವಾಗಿದ್ದು ಮದುವೆಗೆ ಗಂಡು ನೋಡುತ್ತಿದ್ದರು. ಒಂದು ಸಂಬಂಧ ಕೂಡಿಬಂತು. ಪರಸ್ಪರ ಒಪ್ಪಿಗೆಯಾದಾಗ ಕೊಡುವ-ಬಿಡುವ ಮಾತು, ಶಾಸ್ತ್ರಗಳು ಜರುಗಿದವು. ಮಾಡಬೇಕಾದ ವರೋಪಚಾರಗಳನ್ನೂ ಮಾಡುವುದರೊಂದಿಗೆ ಮದುವೆಯೂ ಆಯಿತು. ನೆಂಟರ, ಬೀಗರ ಔತಣಗಳು ಎಲ್ಲವೂ ಸುಸೂತ್ರವಾಗಿ ಮುಗಿದು, ಗಣೇಶ-ಗಂಗಾ ಸತಿಪತಿಗಳೆನಿಸಿದರು.
     ನಿಜವಾದ ಕಥೆ ನಂತರ ಪ್ರಾರಂಭವಾಯಿತು. ಶುಭದಿನವೊಂದನ್ನು ನೋಡಿ ಪ್ರಸ್ತಕ್ಕೆ ಪ್ರಶಸ್ತ ದಿನ ಆರಿಸಿದರು. ಅಂದು ರಾತ್ರಿ ಗಂಗೆ ತುಂಬಾ ಹೊಟ್ಟೆನೋವು ಬಂದು ಒದ್ದಾಡಲು ಪ್ರಾರಂಭಿಸಿದ್ದನ್ನು ಕಂಡ ಗಣೇಶ ಕಕ್ಕಾಬಿಕ್ಕಿಯಾದ. ಸಂಕೋಚದಿಂದಲೇ ಬಾಗಿಲು ತೆರೆದು ಹೊರಬಂದ ಅವನು ಮನೆಯವರಿಗೆ ವಿಷಯ ತಿಳಿಸಿದ. ಗುರುತಿದ್ದ ಪಕ್ಕದ ಹಳ್ಳಿಯ ಡಾಕ್ಟರರಿಗೆ ಫೋನು ಮಾಡಿದರೆ ಅವರು ರೋಗಿಯನ್ನೇ ಕರೆದುಕೊಂಡು ಬರಲು ತಿಳಿಸಿದರು. ಗಣೇಶ ಹೆಂಡತಿಯನ್ನು ಮೋಟಾರ್ ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ವೈದ್ಯರಿಗೆ ತೋರಿಸಿದ. ಪರೀಕ್ಷೆ ಮಾಡಿದ ವೈದ್ಯರು ಗಣೇಶನ ಬೆನ್ನು ತಟ್ಟಿ 'ನೀನು ತಂದೆಯಾಗುತ್ತಿದ್ದೀಯಾ, ನಿನ್ನ ಹೆಂಡತಿಗೆ ಈಗ ಎರಡೂವರೆ ತಿಂಗಳು' ಎಂದು ಶಹಭಾಶಗಿರಿ ಹೇಳಿದಾಗ ಅವನು ಕುಸಿದು ಹೋಗಿದ್ದ. ಮಾತನಾಡದೆ ಪತ್ನಿಯನ್ನು ಮನೆಗೆ ವಾಪಸು ಕರೆತಂದ. ಅವನ ಸ್ವಪ್ನ ಸೌಧ ಬಿದ್ದು ಹೋಗಿತ್ತು. ನಂತರ ಏನು ನಡೆಯಬಹುದೋ ಅದೇ ನಡೆಯಿತು. ಮೋಸ ಮಾಡಿ ಮದುವೆ ಮಾಡಿದ ಬಗ್ಗೆ ಗಣೇಶನ ಮನೆಯವರು ಕ್ರುದ್ಧರಾಗಿದ್ದರು. ಗಂಗಮ್ಮಳಿಗೆ ಕಿರುಕುಳ ಪ್ರಾರಂಭವಾಯಿತು.
     ಮಗಳಿಗೆ ಕಿರುಕುಳ ಕೊಡುತ್ತಿದ್ದ ವಿಷಯ ತಂದೆಗೆ ಗೊತ್ತಾಗಿ ಅವರು ಗಣೇಶನ ಮನೆಗೆ ಮಾತನಾಡಲು ಹೋಗಿ ಅವಮಾನಿತರಾಗಿ ಹಿಂತಿರುಗಿದ್ದರು. ಕೆಲವು ದಿನಗಳ ನಂತರ ಗಣೇಶ, ಅವನ ತಂದೆ,ತಾಯಿ ಮತ್ತು ಕೆಲವರು ಹಿರಿಯರು ಸೇರಿ ಗಂಗಮ್ಮನ ತವರುಮನೆಗೆ ನ್ಯಾಯ ಪಂಚಾಯಿತಿ ಮಾಡಲು ಬಂದರು. ಪಂಚಾಯಿತಿಗೆ ತವರು ಮನೆಯವರು ಒಪ್ಪಲಿಲ್ಲ. ಗಂಗಮ್ಮಳನ್ನು ತಂದೆಯ ಮನೆಯಲ್ಲೇ ಬಿಟ್ಟು ಬಂದವರು ಮರಳಿದರು. ಒಂದೆರಡು ತಿಂಗಳು ಕಳೆಯಿತು. ಒಂದಲ್ಲಾ ಒಂದು ಕಾರಣದಿಂದ ಪಂಚಾಯಿತಿ ನಡೆಯಲೇ ಇಲ್ಲ. ಒಂದು ದಿನ ಗಣೇಶನೇ ಮಾವನಿಗೆ ಫೋನು ಮಾಡಿ 'ನೀವೇನೂ ಪಂಚಾಯಿತಿ ಮಾಡುವುದು ಬೇಡ, ನಿಮ್ಮ ಮಗಳನ್ನು ಕರೆದುಕೊಂಡು ಬನ್ನಿ' ಎಂದು ತಿಳಿಸಿದ. ಅವರಿಗೆ ಬೇಕಾಗಿದ್ದುದೂ ಅದೇ. ಗಂಗಮ್ಮ ಗಂಡನ ಮನೆ ಸೇರಿದರೂ, ತುಟಿ ಬಿಚ್ಚಿರಲಿಲ್ಲ, ಏನನ್ನೂ ಹೇಳಿರಲಿಲ್ಲ.
     ಸುಮಾರು 10-12 ದಿನಗಳ ನಂತರ ಬೈಕಿನಲ್ಲಿ ಗಂಗ್ರೆಯನ್ನು ಕೂರಿಸಿಕೊಂಡು ಮಾವನ ಮನೆಗೆ ಬಂದ ಗಣೇಶ ಅಂದು ಮಧ್ಯಾಹ್ನ ಅಲ್ಲಿಯೇ ಊಟ ಮಾಡಿದರು. 'ಕೂಲಿ ಕೆಲಸಕ್ಕೆ ದಾವಣಗೆರೆಗೆ ಹೋಗುತ್ತಿದ್ದೇವೆ, ಸ್ವಲ್ಪ ದಿವಸ ಊರಿಗೆ ಹೋಗುವುದಿಲ್ಲ' ಎಂದು ಹೇಳಿದವನು ಊಟದ ನಂತರ ಅಲ್ಲಿಂದ ಬೈಕಿನಲ್ಲಿ ಪತ್ನಿಯನ್ನು ಕೂರಿಸಿಕೊಂಡು ಹೊರಟ. ಸಾಯಂಕಾಲ ಸುಮಾರು 7.30ರ ಸಮಯದಲ್ಲಿ ಫೋನು ಮಾಡಿ 'ದಾವಣಗೆರೆಯಲ್ಲಿ ಇರುವುದಾಗಿಯೂ, ಏನೂ ತೊಂದರೆಯಿಲ್ಲವೆಂದೂ, ಚೆನ್ನಾಗಿದ್ದೇವೆಂದೂ' ಗಂಡ-ಹೆಂಡಿರಿಬ್ಬರೂ ತಿಳಿಸಿದರು.
      ಮರುದಿನ ಬೆಳಿಗ್ಗೆ ತಿಮ್ಮಪ್ಪ್ಪ ಎಂದಿನಂತೆ ಜಮೀನಿನ ಕೆಲಸದಲ್ಲಿ ತೊಡಗಿಕೊಂಡಿದ್ದ. ಅಗ ಅವನ ಪರಿಚಯಸ್ಥರು ಓಡುತ್ತಾ ಬಂದು 'ತಿಮ್ಮಪ್ಪಾ, ಬೇಗ ಹೊರಡು, ನಿನ್ನ ಅಳಿಯ ವಿಷ ಕುಡಿದಿದ್ದಾನೆ, ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ' ಎಂದು ತಿಳಿಸಿದಾಗ ಗಾಬರಿಗೊಂಡ ಅವನು ಮಿತ್ರರ ಬೈಕಿನಲ್ಲಿ ಅಳಿಯನ ಊರಿನ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ. ಅಲ್ಲಿ ಗಣೇಶನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋದ ವಿಷಯ ತಿಳಿತು. ಮಗಳ ಕುರಿತು ವಿಚಾರಿಸಿದರೆ ಯಾರೂ ಸ್ಪಷ್ಟ ಮಾಹಿತಿ ಕೊಡಲಿಲ್ಲ, ತಮಗೆ ಗೊತ್ತಿಲ್ಲವೆಂದರು. ಶಿವಮೊಗ್ಗ ಆಸ್ಪತ್ರೆಗೂ ಹೋಗಿ ನೋಡಿದರೆ ಅಳಿಯ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಮಗಳ ಸುಳಿವಿರಲಿಲ್ಲ. ಮರುದಿನ ಬೆಳಿಗ್ಗೆ ಗ್ರಾಮಾಂತರ ಪೋಲಿಸ್ ಠಾಣೆಗೆ ಹೋಗಿ 'ತಮ್ಮ ಮಗಳ ಪತ್ತೆಯಿಲ್ಲ, ಹುಡುಕಿಕೊಡಿ' ಎಂದು ತಿಮ್ಮಪ್ಪ ದೂರು ದಾಖಲಿಸಿದ. ಸ್ವಲ್ಪ ಸಮಯದ ನಂತರದಲ್ಲಿ ಊರ ಹೊಳೆಯ ಹತ್ತಿರ ಯಾರದೋ ಚಪ್ಪಲಿ, ವಾಚು ಬಿದ್ದಿದೆ ಅಂತ ಊರಿನವರು ಮಾತನಾಡಿಕೊಳ್ಳುತ್ತಿದ್ದುದು ಕಿವಿಗೆ ಬಿದ್ದು, ಉಳಿದವರೊಂದಿಗೆ ಅವನೂ ಹೊಳೆಯ ಹತ್ತಿರ ಹೋಗಿ ನೋಡಿದರೆ, ಅವು ತಿಮ್ಮಪ್ಪನ ಮಗಳದ್ದೇ ಆಗಿದ್ದವು. ಹುಡುಕಿ ನೋಡಿದರೆ ಅಲ್ಲಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಹಾಳು ಕಸ ಕಡ್ಡಿ, ಬಳ್ಳಿಗಳು ತುಂಬಿದ್ದ ಹೊಳೆಯ ಹತ್ತಿರದ ಹಳುವಿನಲ್ಲಿ ಅಂಗಾತವಾಗಿ ಸಿಕ್ಕಿಕೊಂಡಿದ್ದ ಹೆಣ ಕಂಡು ಬಂತು. ಹೆಣ ಕೆಸರಿನಲ್ಲಿದ್ದು ಗುರುತು ಹಿಡಿಯುವುದು ಕಷ್ಟವಾಗಿದ್ದರೂ, ಬಟ್ಟೆಯ ಆಧಾರದಲ್ಲಿ ಅದು ಮಗಳದ್ದೇ ಎಂದು ಕಂಡುಕೊಂಡವನು ತಲೆಯ ಮೇಲೆ ಕೈಹೊತ್ತು ಕುಸಿದು ಕುಳಿತ.
     ಶವತನಿಖೆಯ ನೆನಪಿನ ಗುಂಗಿನಲ್ಲೇ ಮ್ಲಾನಚಿತ್ತನಾಗಿದ್ದ ನನ್ನನ್ನು ಗಂಗಿ ಕೆಣಕಿದಳು, "ನಿಜವಾಗಿ ಏನು ನಡೆಯಿತು ನಿಮಗೆ ಗೊತ್ತಾ?"
     ನಾನು ಸುಮ್ಮನಿರದೆ, "ಮದುವೆಗೆ ಮುಂಚೆಯೇ ಬಸಿರಾಗಿದ್ದೆಯಲ್ಲಾ, ಇದು ಬೇಕಿತ್ತಾ? ವಿಷಯ ಮುಚ್ಚಿಟ್ಟು ನಿಮ್ಮ ಅಪ್ಪ-ಅಮ್ಮ ಮದುವೆ ಮಾಡಿದ್ದು ಸರಿಯಾ?" ಎಂದು ಮೌನವಾಗಿಯೇ ಪ್ರಶ್ನಿಸಿದ್ದೆ.
     "ನನ್ನ ಅಪ್ಪನೇ ನಿಮಗೆ ಎಲ್ಲಾ ಹೇಳಿದ್ದಾರಲ್ಲಾ. ನನ್ನ ಹೊಟ್ಟೆ ತುಂಬಿಸಿದವನಿಗೆ ಆಗಲೇ ಮದುವೆ ಆಗಿತ್ತು. ಹಾಗಾಗಿ ಹೇಗೋ ನನ್ನನ್ನು ಸಾಗಿಸಿಬಿಟ್ಟರೆ ಸಾಕೆಂದು ಗುಟ್ಟಾಗಿ ಮದುವೆ ಮಾಡಿದರು. ಗುಟ್ಟು ರಟ್ಟಾಯಿತು."
     ನಾನು ಮಾತು ತುಂಡರಿಸಿದೆ, "ಅರ್ಥವಾಯಿತು ಬಿಡು. ಗಣೇಶ ತನ್ನ ಬಾಳು ಹಾಳಾಯಿತು ಅಂದುಕೊಂಡ. ಹೇಗಾದರೂ ನಿನ್ನನ್ನು ಮುಗಿಸಿದರೆ ಬೇರೆ ಮದುವೆ ಆಗಬಹುದು ಅಂದುಕೊಂಡು ನಿನ್ನನ್ನು ದಾವಣಗೆರೆಗೆ ಕರೆದುಕೊಂಡು ಹೋಗುವ ನೆಪ ಮಾಡಿ ಯಾರೂ ನೋಡದಂತಹ ಸ್ಥಳದಲ್ಲಿ ನಿನ್ನನ್ನು ಕೊಂದು ನದಿಗೆ ಬಿಸಾಕಿರಬಹುದು. ಅಷ್ಟೇ ತಾನೇ?"
     ಮೌನ ಸಂಭಾಷಣೆ ಮುಗಿದು ನಂತರ ಬಹಳ ಹೊತ್ತು ನೈಜಮೌನ ಆವರಿಸಿತ್ತು. ಕೊನೆಗೊಮ್ಮೆ ನಿಟ್ಟುಸಿರಿಟ್ಟು ಆಕೆ ಪಿಸುಗುಟ್ಟಿದಂತಾಯಿತು, "ಹೋಗಲಿ ಬಿಡಿ ಸಾರ್. ಚಪಲಕ್ಕೆ ಒಳಗಾಗಿ ನನ್ನ ಬಾಳು ಹಾಳಾಯಿತು. ಗುಟ್ಟು ಮುಚ್ಚಿಟ್ಟು ಅಪ್ಪ-ಅಮ್ಮ ನನ್ನನ್ನು ಗಂಗೆಯ ಪಾಲಾಗುವಂತೆ ಮಾಡಿದರು. ನನ್ನ ಕಥೆ ಕೇಳಿಯಾದರೂ ಬೇರೆಯವರು ತಿದ್ದಿಕೊಂಡು ನಡೆದರೆ ಅಷ್ಟೇ ಸಾಕು."
     'ಅಯ್ಯೋ ದೇವರೇ, ಏನಿದು ನಿನ್ನ ಆಟ' ಎಂದುಕೊಂಡು ಸೂರನ್ನು ದಿಟ್ಟಿಸುತ್ತಾ ಇದ್ದವನಿಗೆ ಅದು ಯಾವಾಗಲೋ ನಿದ್ದೆ ಬಂದಿತ್ತು.
-ಕ.ವೆಂ.ನಾಗರಾಜ್.
**************
ಹಿಂದಿನ ಲೇಖನಕ್ಕೆ ಲಿಂಕ್: ಮಾತನಾಡಿದ ಶವಗಳು - 1
ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಭಾನುವಾರ, ಆಗಸ್ಟ್ 24, 2014

ಮಾತನಾಡಿದ ಶವಗಳು - 1

     ಸುಮಾರು ೧೪ ವರ್ಷಗಳ ಹಿಂದಿನ ಒಂದು ಭಾನುವಾರ. ದಿನನಿತ್ಯದ ಕೆಲಸದ ಒತ್ತಡಗಳನ್ನು ಮರೆತು ಮನೆಯವರೊಂದಿಗೆ ಕಾಲ ಕಳೆಯಬೇಕೆಂದುಕೊಂಡಿದ್ದ ದಿನ. ಬೆಳಿಗ್ಗೆ ಸುಮಾರು ೭ ಘಂಟೆಯ ಸಮಯವಿರಬಹುದು. ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಕೊಣನೂರಿನ ಸಬ್‌ಇನ್ಸ್‌ಪೆಕ್ಟರರಿಂದ ಫೋನು ಬಂದಿತು. ಹಿಂದಿನ ದಿನ ಕೇರಳಾಪುರದಲ್ಲಿ ಒಬ್ಬ ಹೆಣ್ಣುಮಗಳು ನೇಣು ಹಾಕಿಕೊಂಡು ಸತ್ತಿದ್ದಾಳೆಂದೂ, ಕೂಡಲೇ ಬಂದು ಶವತನಿಖೆ ನಡೆಸಿಕೊಡಬೇಕೆಂದೂ ಅವರು ಕೋರಿದ್ದರು. ಸರಿ, ಭಾನುವಾರದ ಕಥೆ ಮುಗಿಯಿತು ಎಂದು ಅಂದುಕೊಂಡು ಬಟ್ಟೆ ಹಾಕಿಕೊಂಡು ಜೀಪಿಗೆ ಕರೆಕಳುಹಿಸಿದೆ. ಗುಮಾಸ್ತರೊಬ್ಬರನ್ನು ಜೊತೆಗೆ ಕರೆದುಕೊಂಡು ಕೇರಳಾಪುರ ತಲುಪಿದಾಗ ಅಲ್ಲಿನ ಒಂದು ಮನೆಯ ಮುಂದೆ ಜನರ ದೊಡ್ಡ ಗುಂಪು ಕೂಡಿತ್ತು. ಪೋಲಿಸರು ಜನರನ್ನು ನಿಯಂತ್ರಿಸುತ್ತಿದ್ದರು. ನಾನು ಜೀಪಿನಿಂದ ಇಳಿದ ತಕ್ಷಣ ಜನರ ಗುಂಪು 'ಸಾಹೇಬರು ಬಂದರು' ಎನ್ನುತ್ತಾ ಅಕ್ಕ ಪಕ್ಕ ಸರಿದು ನನಗೆ ಮನೆಯ ಒಳಗೆ ಹೋಗಲು ದಾರಿ ಮಾಡಿಕೊಟ್ಟರು. ನಾನು ಮನೆಯ ಒಳಗೆ ಹೋದಾಗ ನನ್ನ ಹಿಂದೆ ಒಬ್ಬ ಪೋಲಿಸ್ ಪೇದೆ, ಗುಮಾಸ್ತ ಮತ್ತು ಒಬ್ಬ ಫೋಟೋಗ್ರಾಫರ್ ಬಂದರು. ನಾನು ಮನೆಯ ಒಳ ಕೊಠಡಿಗೆ ಹೋಗುತ್ತಾ ಬಾಗಿಲ ಪಕ್ಕದಲ್ಲಿ ನಿಂತಿದ್ದ ಒಬ್ಬ ಹೆಂಗಸಿಗೆ 'ಎಲ್ಲಮ್ಮಾ?' ಎನ್ನುತ್ತಾ ಎರಡು ಹೆಜ್ಜೆ ಮುಂದಿಟ್ಟವನು ಗಕ್ಕನೆ ನಿಂತು ಹಿಂತಿರುಗಿದೆ. ನಾನು ಯಾರನ್ನು ವಿಚಾರಿಸಿ ಮುಂದೆ ಹೋಗಿದ್ದೆನೋ ಅದೇ ಹೆಣವಾಗಿತ್ತು. ಮನೆಯಲ್ಲಿ ನೀರವ ಮೌನ ಆವರಿಸಿತ್ತು.
     ವಿಷಯ ಮುಂದುವರೆಸುವ ಮುನ್ನ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರುವುದು ಅಗತ್ಯವಾಗಿದೆ. ಯಾವುದೇ ಹೆಣ್ಣುಮಗಳು ಮದುವೆಯಾದ ೭ ವರ್ಷಗಳ ಒಳಗೆ ಮೃತಳಾದರೆ ಅದನ್ನು ವರದಕ್ಷಿಣೆಗಾಗಿ ಆದ ಸಾವೆಂಬ ಹಿನ್ನೆಲೆಯಲ್ಲಿ ತಾಲ್ಲೂಕು ಮ್ಯಾಜಿಸ್ಟ್ರೇಟರು ಮತ್ತು ಮೇಲ್ಪಟ್ಟ ಅಧಿಕಾರಿಂದ ಶವತನಿಖೆ ನಡೆಸಬೇಕಾಗಿರುತ್ತದೆ. ಪೋಲಿಸರು ಮುಂದಿನ ವಿವರವಾದ ತನಿಖೆ ನಡೆಸಿ ಮುಂದುವರೆಯುತ್ತಾರೆ. ಪೋಲಿಸರಿಂದ ಪ್ರಥಮ ವರ್ತಮಾನ ವರದಿಯೊಡನೆ ಶವತನಿಖೆಗೆ ಕೋರಿಕೆ ಸ್ವೀಕರಿಸಿದ ನಂತರ ತನಿಖೆ ಮಾಡಲಾಗುತ್ತದೆ. ಕೆಲವು ಪ್ರಕರಣಗಳನ್ನು ಯಾರ ಗಮನಕ್ಕೂ ಬರದಂತೆ ಮುಚ್ಚಿಹಾಕುವುದು, ಹಣದ ವಿನಿಮಯ, ರಾಜಕಾರಣಿಗಳ ಮಧ್ಯಪ್ರವೇಶದಿಂದ ರಾಜಿ ಮಾಡಿಕೊಂಡು ಬಿಡುವುದು, ಇತ್ಯಾದಿಗಳೂ ನಡೆಯುತ್ತವೆ. ಕೆಲವು ವೈದ್ಯರುಗಳೂ ಸಹ ಹಣದ ಪ್ರಭಾವದಿಂದ ಸುಳ್ಳು ಪೋಸ್ಟ್ ಮಾರ್ಟಮ್ ವರದಿ ಕೊಟ್ಟ ಪ್ರಕರಣಗಳೂ ಇಲ್ಲವೆನ್ನಲಾಗುವುದಿಲ್ಲ. ಪ್ರಕರಣ ಮುಚ್ಚಿಹಾಕಲು ಕೆಲವು ಪ್ರಕರಣಗಳಲ್ಲಿ ಪೋಲಿಸರ ಸಹಕಾರ ಸಹ ಇಲ್ಲವೆಂದು ಹೇಳಲಾಗುವುದಿಲ್ಲ. ಮುಖ್ಯವಾಗಿ ಪ್ರಕರಣ ಮುಚ್ಚಿಹಾಕುವಂತಹ ಪ್ರಸಂಗದಲ್ಲಿ ಪ್ರಮುಖ ಪಾತ್ರ ವಹಿಸುವುದು ರಾಜಕಾರಣ ಮತ್ತು ಹಣ ಎಂಬುದಂತೂ ಗೊತ್ತಿರುವ ಸತ್ಯ. ಈಗ ಇಷ್ಟು ಮಾಹಿತಿ ಸಾಕು. ಮೂಲ ವಿಷಯ ಮುಂದುವರೆಸುವೆ.
     ಎಲ್ಲರ ಗಮನ ನನ್ನ ಮೇಲಿತ್ತು. ನಾನು ಶವವನ್ನು, ಶವವಿದ್ದ ಸ್ಥಿತಿಯನ್ನು ಗಮನಿಸಿದೆ. ಬಾಗಿಲಿನ ಪಕ್ಕದಲ್ಲಿದ್ದ ತೊಲೆಯಿಂದ ಪ್ಲಾಸ್ಟಿಕ್ ಹಗ್ಗದಲ್ಲಿ ನೇತಾಡುತ್ತಿದ್ದ ಶವದ ಕಾಲುಗಳು ಮುಂಚಾಚಿ ಇನ್ನೇನು ನೆಲವನ್ನು ಸೋಕುವಂತಿತ್ತು. ನೇಣು ಹಾಕಿಕೊಳ್ಳುವವರು ಅಷ್ಟು ಕಡಿಮೆ ಎತ್ತರದಿಂದ ನೇಣು ಹಾಕಿಕೊಳ್ಳಲಾರರು ಎಂದು ನನ್ನ ಮನಸ್ಸು ಹೇಳುತ್ತಿತ್ತು. ಅಲ್ಲದೆ ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು ಸೀರೆ ಮುಂತಾದುವನ್ನು ಬಳಸಬಹುದೇ ಹೊರತು ಪ್ಲಾಸ್ಟಿಕ್ ಹಗ್ಗ ಬಳಸುವುದು ಕಡಿಮೆ. ನಾನು ಪರೀಕ್ಷಿಸಲು ಅನುಕೂಲವಾಗುವಂತೆ ಪೋಲಿಸ್ ಪೇದೆ ಶವವನ್ನು ಪಕ್ಕಕ್ಕೆ ಸರಿಸಿದ್ದರಿಂದ ಅಲ್ಲಾಡುತ್ತಿದ್ದ ಶವ 'ನೀವಂದುಕೊಂಡಿರುವುದು ಸರಿ' ಎಂದು ಹೇಳುವಂತಿತ್ತು. ಶವದ ನಾಲಿಗೆ ಹೊರಚಾಚಿದ್ದು ಹಲ್ಲುಗಳಿಂದ ಕಚ್ಚಿಕೊಂಡಿದ್ದು, ಬಾಯಿಂದ ನೊದ್ಲೆ ಹೊರಬಂದಿತ್ತು. ತೊಲೆಯಿಂದ ನೆಲಕ್ಕೆ ಇದ್ದ ಅಂತರ ಸುಮಾರು ೭ ಅಡಿ ಇತ್ತು. ಹೆಣದ ಕುತ್ತಿಗೆಯ ಗಂಟಿಗೂ ತೊಲೆಗೂ ಇದ್ದ ಅಂತರ ಸುಮಾರು ಎರಡೂವರೆ ಅಡಿ ಇದ್ದು, ಕೆಳಗಿನ ಪಾದಕ್ಕೂ ನೆಲಕ್ಕೂ ಇದ್ದ ಅಂತರ ಸುಮಾರು ಒಂದೂವರೆ ಇಂಚು ಇತ್ತು. ತೊಲೆಗೆ ಮೂರು ಎಳೆಯಲ್ಲಿ ಸುತ್ತಿ ಹಗ್ಗವನ್ನು ಗಂಟು ಹಾಕಲಾಗಿತ್ತು. ಶವದ ಕುತ್ತಿಗೆಯಲ್ಲಿದ್ದ ಹಗ್ಗವೂ ಮೂರು ಎಳೆಯಿಂದ ಸುತ್ತಿ ಗಂಟು ಹಾಕಿದ್ದಾಗಿತ್ತು. ಆ ಸ್ಥಿತಿಯಲ್ಲಿ ಕೆಲವು ಫೋಟೋಗಳನ್ನು ಸ್ಥಳೀಯ ಫೋಟೋಗ್ರಾಫರನ ಸಹಾಯದಿಂದ ತೆಗೆಸಿದೆ. ಹೆಣದ ಫೋಟೋ ತೆಗೆಯಲು ಹೆದರುತ್ತಿದ್ದ ಅವನಿಗೆ ಗದರಿಸಿ ಧೈರ್ಯ ಹೇಳಬೇಕಾಯಿತು. ನಂತರದಲ್ಲಿ ಹೆಣವನ್ನು ಕೆಳಗೆ ಇಳಿಸಿ ಒಂದು ಚಾಪೆಯ ಮೇಲೆ ಮಲಗಿಸಿ ಹಲವು ಕೋನಗಳಿಂದ ಫೋಟೋ ತೆಗೆಸಿದೆ. ಕುತೂಹಲದಿಂದ ಗುಂಪು ಕೂಡಿದ್ದ ಜನರನ್ನು ಹೊರಕಳುಹಿಸಿ ಒಬ್ಬರು ಹೆಂಗಸನ್ನು ಕರೆಸಿ ಶವದ ಬಟ್ಟೆ ಸರಿಸಿಸಿ ದೇಹದಲ್ಲಿ ಏನಾದರೂ ಗಾಯಗಳಾಗಿವೆಯೇ, ಗಮನಿಸುವಂತಹ ಅಸಹಜ ಸಂಗತಿಗಳಿವೆಯೇ ಎಂಬುದನ್ನು ನೋಡಿದೆ. ಅದು ನನ್ನ ಕರ್ತವ್ಯವಾಗಿತ್ತು. ಕುತ್ತಿಗೆಯ ಬಲಭಾಗದಿಂದ ಗಂಟಲವರೆಗೆ ಸುಮಾರು ೧೦ ಇಂಚು ಉದ್ದ, ಅರ್ಧ ಇಂಚು ಆಳ ಕೊರೆದಿರುವ ಲಿಗೇಚರ್ ಮಾರ್ಕು ಇತ್ತು. ಕುತ್ತಿಗೆಯ ಎಡಭಾಗದಲ್ಲೂ ಸುಮಾರು ೯ ಇಂಚು ಉದ್ದ, ಅರ್ಧ ಇಂಚು ಆಳದ ಕೊರೆದ ಗುರುತು ಇತ್ತು. ಎರಡು ಕೈಗಳೂ ದೇಹಕ್ಕೆ ಅಂಟಿಕೊಂಡಂತೆ ಇದ್ದು ನೀಳವಾಗಿದ್ದವು. ಮರ್ಮಸ್ಥಾನಗಳಿಂದ ತ್ಯಾಜ್ಯ ಹೊರಬಂದಿರಲಿಲ್ಲ. ಬಲಗೈಯಲ್ಲಿ ಒಂದು ಕೇಸರಿ ಬಣ್ಣದ ಗಾಜಿನ ಬಳೆಯಿತ್ತು. ಘಟನೆ ನಡೆದ ಸ್ಥಳಸಹಿತ ಪೂರ್ಣ ಮನೆಯ ಸ್ಥಿತಿ ಗಮನಿಸಿದೆ. ಮುಂಭಾಗದ ಕೊಠಡಿಯಲ್ಲಿ ಒಂದೆರಡು ಕೇಸರಿ ಬಳೆಗಳ ಚೂರುಗಳಿದ್ದುದನ್ನು ಗಮನಿಸಿದೆ. ಮೃತೆ ಸುಮಾರು ೨೨ ವರ್ಷದವಳಾಗಿದ್ದು ಮದುವೆಯಾಗಿ ಕೇವಲ ೯ ತಿಂಗಳಾಗಿತ್ತು. ಮದುವೆಗೆ ಮುನ್ನ ಆಗಿದ್ದ ಮಾತುಕತೆಯಂತೆ ಹುಡುಗಿಯ ಮನೆಯವರು ೧೦೦ ಗ್ರಾಮ್ ಚಿನ್ನ ಮತ್ತು ರೂ. ೧,೦೦,೦೦೦/- ನಗದು ಕೊಡಬೇಕಾಗಿದ್ದು, ಅವರು ೧೦೦ ಗ್ರಾಮ್ ಚಿನ್ನ ಮತ್ತು ೭೫೦೦೦/- ಹಣ ಕೊಟ್ಟಿದ್ದರಂತೆ. ಉಳಿದ ರೂ. ೨೫೦೦೦/- ಕೊಡಲು ಒತ್ತಾಯಿಸಿ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದರಂತೆ. ಮೃತಳ ತಾಯಿ, ತಮ್ಮರೂ ಸೇರಿದಂತೆ ಕೆಲವರ ಹೇಳಿಕೆ ಪಡೆದೆ. ಪಂಚರ ಸಮಕ್ಷಮದಲ್ಲಿ ವಿವರವಾದ ಶವತನಿಖಾ ವರದಿ ಬರೆಸಿದೆ. ಅಗತ್ಯದ ಇತರ ನಿಗದಿತ ನಮೂನೆಗಳಲ್ಲಿ ಮಾಹಿತಿ ಸಿದ್ಧಪಡಿಸಿ, ಶವಪರೀಕ್ಷೆ ನಡೆಸಿ ವರದಿ ಕೊಡಲು ಕೇರಳಾಪುರದ ಸರ್ಕಾರೀ ವೈದ್ಯಾಧಿಕಾರಿಗೆ ಸೂಚಿಸಿದೆ. ಮುಂದಿನ ತನಿಖೆ ನಡೆಸಲು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿ, ಶವತನಿಖಾ ವರದಿಯನ್ನು ನನ್ನ ಅನಿಸಿಕೆಯೊಂದಿಗೆ ಜ್ಯುಡಿಶಿಯಲ್ ನ್ಯಾಯಾಧೀಶರಿಗೆ ಕಳಿಸಿದೆ.
     ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬವಾದಷ್ಟೂ ನ್ಯಾಯಕ್ಕೆ ಅನ್ಯಾಯವಾಗುತ್ತದೆ ಎಂಬುದು ಸತ್ಯ. ವಿಳಂಬಕ್ಕೆ ನಾನಾ ಕಾರಣಗಳಿರುತ್ತವೆ. ಈ ಪ್ರಕರಣದಲ್ಲಿ ಸುಮಾರು ಮೂರು ವರ್ಷಗಳ ನಂತರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ನನಗೆ ಸಾಕ್ಷಿ ಹೇಳಲು ಸಮನ್ಸ್ ಬಂದಿತ್ತು. ಸಾಕ್ಷಿ ಹೇಳಿಕೆ ಕೊಟ್ಟಿದ್ದೆ. ಸರ್ಕಾರಿ ವಕೀಲರು ಖಾಸಗಿಯಾಗಿ ನನಗೆ ದೂರು ಅರ್ಜಿದಾರರು ಮತ್ತು ಆರೋಪಿಗಳು ರಾಜಿಯಾಗಿದ್ದಾರೆಂದು ಹೇಳಿ, ಆರೋಪಿಗಳು ಆರೋಪದಿಂದ ಮುಕ್ತರಾಗಿ ಹೊರಬರಬಹುದೆಂದೂ ತಿಳಿಸಿದ್ದರು. ಕೊನೆಯಲ್ಲಿ ನ್ಯಾಯಾಲಯದ ತೀರ್ಪು ಏನಾಯಿತು ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ.
     ಸುಮಾರು ಎಂಟು ವರ್ಷಗಳ ಹಿಂದಿನ ಸಂಗತಿಯಿದು. ಆಗ ನಾನು ಶಿಕಾರಿಪುರದಲ್ಲಿ ತಹಸೀಲ್ದಾರನಾಗಿದ್ದೆ. ಒಂದು ಅನುಕೂಲಸ್ಥ ಕುಟುಂಬದ ನಿರುದ್ಯೋಗಿ ಯುವಕನಿಗೆ ಆತನ ಮನೆಯ ಶ್ರೀಮಂತಿಕೆ ಕಂಡು ಮಗಳು ಸುಖವಾಗಿರುತ್ತಾಳೆಂದು ಭಾವಿಸಿ ಹೆತ್ತವರು ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಜಮೀನು ಇತ್ತು, ಹುಡುಗನ ಅಣ್ಣಂದಿರು ಉತ್ತಮವಾದ ಸರ್ಕಾರಿ ಹುದ್ದೆಗಳಲ್ಲಿದ್ದರು. ಐಬೆಂದರೆ ಮದುವೆಯಾದ ಹುಡುಗ ಮಾತ್ರ ಉಡಾಳನಾಗಿ ಜವಾಬ್ದಾರಿಯಿಲ್ಲದವನಾಗಿದ್ದ. ಮದುವೆಯಾದರೆ ಸರಿಯಾಗುತ್ತಾನೆಂದು ಮದುವೆ ಮಾಡಿದ್ದರು. ಕೆಲವು ತಿಂಗಳುಗಳು ಎಲ್ಲವೂ ಚೆನ್ನಾಗಿ ನಡೆದಿತ್ತು. ನಂತರದಲ್ಲಿ ಆ ಹುಡುಗಿಯನ್ನು ಎಲ್ಲರೂ ತಾತ್ಸಾರದಿಂದ ನೋಡತೊಡಗಿದ್ದರು. ಬೇಜವಾಬ್ದಾರಿ ಗಂಡನ ಹೆಂಡತಿಯಾಗಿ ಆಕೆ ಮನೆಯಲ್ಲಿ ಜೀತದಾಳಿನಂತೆ ದುಡಿಯಬೇಕಾಯಿತು. ಗಂಡನಿಗೆ ಏನಾದರೂ ಕೆಲಸ ಹುಡುಕಿಕೊಳ್ಳಿ ಎಂದು ಆಕೆಯ ಒತ್ತಾಯ ಹೆಚ್ಚಿದಾಗ ಕೆಲಸ ಹುಡುಕುವ ಸಲುವಾಗಿ ಹೆಂಡತಿಯನ್ನೂ ಕರೆದುಕೊಂಡು ಮೈಸೂರಿನಲ್ಲಿದ್ದ ಒಬ್ಬ ಅಣ್ಣನ ಮನೆಗೆ ಹೋಗಿ ಸ್ವಲ್ಪ ಸಮಯ ಇದ್ದ. ಅಲ್ಲಿಯೂ ಅವಳನ್ನು ಕಸಮುಸುರೆ ಮಾಡಲು ಬಳಸಿಕೊಂಡು ಹೀನಾಯವಾಗಿ ನಡೆಸಿಕೊಂಡರು. ಸರಿ, ಅಲ್ಲಿಂದ ಬೆಂಗಳೂರಿನಲ್ಲಿ ಕಾಲೇಜು ಲೆಕ್ಚರರ್ ಆಗಿದ್ದ ಇನ್ನೊಬ್ಬ ಅಣ್ಣನ ಮನೆಗೆ ಹೋದರೆ ಅಲ್ಲಿಯೂ ಅದೇ ಕಥೆಯ ಪುನರಾವರ್ತನೆ. ಉಡಾಳನಾದರೋ ಕೆಲಸ ಹುಡುಕುವ ನಾಟಕ ಮಾಡುತ್ತಿದ್ದು, ಅಣ್ಣನ ಮನೆಯಲ್ಲಿ ಕವಳ ಕತ್ತರಿಸುತ್ತಿದ್ದ. ಹಿಂಸೆ ತಾಳಲಾರದೆ ಹುಡುಗಿ ಪ್ರತಿಭಟಿಸಿದಾಗ ಲೆಕ್ಚರರ್ ಮತ್ತು ಅವನ ಹೆಂಡತಿ ಮನಬಂದಂತೆ ಥಳಿಸಿದರೂ ಗಂಡ ಎನಿಸಿಕೊಂಡವನು ಸುಮ್ಮನಿದ್ದುದಲ್ಲದೆ ಅವನೂ ಅವರ ಜೊತೆ ಅವಳನ್ನು ದಂಡಿಸಲು ಪಾಲುಗೊಂಡ. ಎಲ್ಲರೂ ಸೇರಿ ಯಾವ ರೀತಿ ಹಿಂಸೆ ಕೊಟ್ಟರೆಂದರೆ ಆ ಹುಡುಗಿ ಸತ್ತೇಹೋದಳು. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳೆಂದು ನೆಂಟರಿಷ್ಟರಿಗೆ ಸುದ್ದಿ ಕೊಟ್ಟು, ಅವರು ಬರುವಷ್ಟರ ಒಳಗೆ ಅವಳ ದೇಹವನ್ನು ಬೆಂಗಳೂರಿನಿಂದ ಸುಮಾರು ೨೦೦ ಕಿ.ಮೀ. ದೂರದ ಹಳ್ಳಿಗೆ ಮಾರುತಿ ವ್ಯಾನಿನಲ್ಲಿ ತಂದು ಜಮೀನಿನಲ್ಲಿ ದಫನ್ ಮಾಡಲು ಸಿದ್ದತೆ ನಡೆಸಿದ್ದರು. ಹುಡುಗಿಯ ಬಂಧುಗಳು ಅಲ್ಲಿಗೂ ಧಾವಿಸಿ ಸಕಾಲದಲ್ಲಿ ತಡೆದಿದ್ದರಿಂದ ಪೋಲಿಸ್ ಕೇಸು ಆಯಿತು. ಆ ಹಳ್ಳಿ ನಾನು ಕೆಲಸ ಮಾಡುತ್ತಿದ್ದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುತ್ತಿದ್ದರಿಂದ ಪೋಲಿಸ್ ಕೋರಿಕೆಯ ಮೇರೆಗೆ ಶವತನಿಖೆ ನಡೆಸಿದೆ. ಮೇಲುನೋಟಕ್ಕೆ ದೈಹಿಕ ಹಿಂಸೆಯಿಂದ ಸಾವನ್ನಪ್ಪಿದ್ದುದು ಗೊತ್ತಾಗುತ್ತಿತ್ತು. ದೇಹದ ಮೇಲಿದ್ದ ಗಾಯದ ಗುರುತುಗಳು, ಎಳೆದಾಡಿದ ತರಚು ಗೀರುಗಳು, ಬಾಸುಂಡೆಯ ಗುರುತುಗಳು, ಅಲ್ಲಲ್ಲಿ ಹೆಪ್ಪುಗಟ್ಟಿದ ರಕ್ತ, ಊದಿದ ಕೆನ್ನೆ, ಇತ್ಯಾದಿ ಕಂಡು ಸಾಯುವ ಮುನ್ನ ಆಕೆ ಅನುಭವಿಸಿರಬಹುದಾದ ಹಿಂಸೆಯನ್ನು ನೆನೆದು ನನ್ನ ಕಣ್ಣಿನಲ್ಲಿ ನೀರೂರಿತ್ತು. ವರದಿಯಲ್ಲಿ ಗಮನಿಸಿದ್ದೆಲ್ಲವನ್ನೂ ದಾಖಲಿಸಿದೆ. ಸಂಬಂಧಿಗಳ ಹೇಳಿಕೆಗಳನ್ನು ಪಡೆದೆ. ಮುಂದೊಮ್ಮೆ ಬೆಂಗಳೂರಿನ ತ್ವರಿತಗತಿ ಸೆಷನ್ಸ್ ನ್ಯಾಯಾಲಯದಲ್ಲೂ ಸಾಕ್ಷ್ಯ ನುಡಿದಿದ್ದೆ. ಸಾಕ್ಷ್ಯ ನುಡಿಯುವ ಮುನ್ನ ಸರ್ಕಾರಿ ಪ್ರಾಸಿಕ್ಯೂಟರ್ ಜೊತೆಗೆ ಚರ್ಚಿಸಿದ ಸಂದರ್ಭದಲ್ಲಿ ಅವರು 'ಪಾಪ, ಕಾಲೇಜು ಲೆಕ್ಚರರ್ ಮತ್ತು ಅವರ ಮನೆಯವರು, ಗಂಡ ಎರಡು ವರ್ಷದಿಂದ ಸುಮ್ಮನೆ ಜೈಲಿನಲ್ಲಿದ್ದಾರೆ. ದುಡ್ಡಿನ ಆಸೆಗೆ ಹುಡುಗಿಯ ತಂದೆ ಗೋಳಾಡಿಸುತ್ತಿದ್ದಾರೆ' ಎಂದಾಗ ಕೇಸು ಯಾವ ಹಾದಿ ಹಿಡಿದಿತ್ತೆಂದು ನನಗೆ ಗೊತ್ತಾಗಿತ್ತು. ನಂತರದಲ್ಲಿ ಏನಾಯಿತು ಎಂಬುದು ನನಗೆ ತಿಳಿಯಲಿಲ್ಲ. "ಹೆತ್ತಪ್ಪ-ಅಮ್ಮದಿರಾ, ನಿಮ್ಮ ಕುಡಿಯನ್ನು ಹಣಕ್ಕಾಗಿ ಬಾಯಿ ಬಿಡುವವರಿಗೆ ಕೊಡಬೇಡಿ, ಶ್ರೀಮಂತರ ಮನೆಯೆಂದು ಉಡಾಳರಿಗೆ ಒಪ್ಪಿಸಿಬಿಡಬೇಡಿ, ನಮ್ಮಂತಹವರನ್ನು ನೋಡಿಯಾದರೂ ಬುದ್ದಿ ಕಲಿಯದಿದ್ದರೆ ನಮ್ಮಂತಹ ಇನ್ನಷ್ಟು ಜೀವಗಳು ಬಲಿಯಾದಾವು" ಎಂಬುದು ಮೃತರ ಮೌನ ಸಂದೇಶವಾಗಿದೆ.
     ನನ್ನ ಸೇವಾವಧಿಯಲ್ಲಿ ಇಂತಹ ಸುಮಾರು ೭೦-೮೦ ಶವತನಿಖೆಗಳನ್ನು ಮಾಡಿದ್ದೇನೆ. ಆ ಶವಗಳು ಹೇಳಿದ ದಾರುಣ ಕಥೆಗಳಿಗೆ ಕಿವಿ ಕೊಟ್ಟಿದ್ದೇನೆ, ಅನುಭವಿಸಿದ ನೋವುಗಳನ್ನು, ಯಾತನೆಗಳನ್ನು ವಿವರಿಸಿದಾಗ ಮರುಗಿ ಒಳಗೇ ಕಣ್ಣೀರು ಹಾಕಿದ್ದೇನೆ. ನನ್ನ ಮಿತಿಯಲ್ಲಿ ಅವು ಹೇಳಿದ ಸಂಗತಿಗಳನ್ನು ದಾಖಲಿಸಿಕೊಂಡು, ನನ್ನ ಕೈಲಾದಷ್ಟು ನ್ಯಾಯ ಒದಗಿಸಲು ಪ್ರಯತ್ನಿಸುವೆನೆಂದು ಆಶ್ವಾಸನೆ ಕೊಟ್ಟಿದ್ದೇನೆ. ಪೋಲಿಸರಿಗೂ ನ್ಯಾಯಯುತವಾಗಿ ತನಿಖೆ ಮುಂದುವರೆಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ತಿಳಿಸಿದ್ದೇನೆಂದು ಹೇಳಿದ್ದೇನೆ. ಹಾಗೂ ಅವರುಗಳಿಗೆ ನ್ಯಾಯ ಸಿಗದಿದ್ದರೆ ಅದರಲ್ಲಿ ನನ್ನ ಪಾತ್ರವಿರುವುದಿಲ್ಲವೆಂದೂ ಒಪ್ಪಿಸಿದ್ದೇನೆ. ಶವತನಿಖೆಗಳನ್ನು ನಡೆಸಿದ ಸಂದರ್ಭಗಳಲ್ಲಿ ದಾರುಣ ಅಂತ್ಯವನ್ನು ಕಣ್ಣಾರೆ ಕಂಡು ಕೆಲವು ದಿನಗಳು ಸರಿಯಾಗಿ ಊಟ, ತಿಂಡಿ ಮಾಡಲಾಗದೆ ಇದ್ದುದೂ ಇದೆ. ನೊಂದ ಜೀವಗಳೇ, ನಿಮ್ಮೆಲ್ಲರ ನೆನಪಾಗಿ ಕಣ್ಣು ತೇವವಾಗಿವೆ. ಅಗಲಿದ ಆತ್ಮಗಳೇ, ನಿಮ್ಮನ್ನು ನೆನೆಸಿಕೊಂಡು, ನಿಮಗೆ ಸದ್ಗತಿ ಕೋರುವ ಸಲುವಾಗಿ ಈ ಕೆಲವು ಸಾಲುಗಳನ್ನು ಬರೆದಿರುವೆ.
-ಕ.ವೆಂ.ನಾಗರಾಜ್.
**************
27.8.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಆಗಸ್ಟ್ 3, 2014

ರಾಷ್ಟ್ರದ ಭದ್ರತೆ ಮತ್ತು ಅಲ್ಪಸಂಖ್ಯಾತರ ಓಲೈಕೆ

     ಅಬ್ರಹಾಂ ಲಿಂಕನ್ ಹೇಳಿದ್ದ ಪ್ರಸಿದ್ಧ ನುಡಿಯಿದು: 'ಕೇವಲ ಸಂಖ್ಯಾಬಲದ ಬಹುಮತದಿಂದಾಗಿ ಒಂದು ಅಲ್ಪಸಂಖ್ಯಾತ ಗುಂಪನ್ನು ಲಿಖಿತ ಸಂವಿಧಾನದ ಹಕ್ಕಿನಿಂದ ವಂಚಿಸಿದರೆ, ನೈತಿಕತೆಯ ದೃಷ್ಟಿಯಿಂದ, (ಅದರ ವಿರುದ್ಧ) ಕ್ರಾಂತಿಯನ್ನು ಖಂಡಿತವಾಗಿ ಸಮರ್ಥಿಸಬಹುದು, ಅಂತಹ ಹಕ್ಕು ನಿಜಕ್ಕೂ ಒಂದು ಅಮೂಲ್ಯವಾದುದಾದರೆ!' ಭಾರತದಲ್ಲಿ ತದ್ವಿರುದ್ಧ ಪರಿಸ್ಥಿತಿ ಇದ್ದು, ರಾಜಕೀಯ ಕಾರಣಗಳಿಗಾಗಿ ಮತ್ತು ಓಟು ಬ್ಯಾಂಕ್ ಸೃಷ್ಟಿಗಾಗಿ ಅಲ್ಪ ಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳು, ಇತ್ಯಾದಿಯವರನ್ನು  ವಿವಿಧ ರಾಜಕೀಯ ಪಕ್ಷಗಳವರು ಓಲೈಸುತ್ತಿರುವ ರೀತಿ ನೋಡಿದರೆ ಬಹುಸಂಖ್ಯಾತರು ಎನ್ನಿಸಿಕೊಂಡವರೇ ತಮ್ಮ ಹಕ್ಕಿಗೆ ಹೋರಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ಅನ್ನಿಸುತ್ತದೆ. ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಇವರುಗಳನ್ನು ಒಟ್ಟುಗೂಡಿಸಿದರೆ ಉಳಿಯುವವರನ್ನು ಬಹುಸಂಖ್ಯಾತರು ಎನ್ನಲಾಗುವುದಿಲ್ಲ. ವಾಸ್ತವವಾಗಿ ಅವರೇ ಅಲ್ಪ ಸಂಖ್ಯಾತರಾಗಿ ತಮಗೆ ಬರಬೇಕಾದ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಅನ್ನಿಸುವುದಿಲ್ಲವೇ? ಹಿಂದುಳಿದ ಜಾತಿ, ವರ್ಗಗಳಿಗೆ ಸೇರಲು ಹಲವು ಜಾತಿಗಳವರು ಪೈಪೋಟಿ ನಡೆಸುತ್ತಿದ್ದಾರೆ. ಮೀಸಲಾತಿಯಲ್ಲೂ ಒಳಮೀಸಲಾತಿ ಬಗ್ಗೆ ಬೇಡಿಕೆಗಳಿವೆ. ಇದನ್ನೆಲ್ಲಾ ನೋಡಿದರೆ ದೇಶ ಅಭಿವೃದ್ಧಿ ಪಥದಲ್ಲಿ ಮೇಲೆ ಸಾಗುವ ಬದಲಿಗೆ ಕೆಳಕ್ಕೆ ಜಾರುತ್ತಿದೆಯೇನೋ ಎಂದು ಭಾಸವಾಗುತ್ತದೆ. 
     ಅಲ್ಪ ಸಂಖ್ಯಾತರು ಅಂದರೆ ಯಾರು? ವಿವಿಧ ಗುಂಪುಗಳಲ್ಲಿ ಸಣ್ಣ ಗುಂಪನ್ನು ಅಲ್ಪ ಸಂಖ್ಯಾತರೆನ್ನೋಣವೇ? ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಇತ್ಯಾದಿಗಳಲ್ಲಿ ಭಿನ್ನತೆ ಇದ್ದು ಸಂಖ್ಯಾತ್ಮಕವಾಗಿ ಕಡಿಮೆ ಇರುವವರನ್ನು ಅಲ್ಪ ಸಂಖ್ಯಾತರೆನ್ನಬೇಕೆ? ಭಾರತದ ಸಂವಿಧಾನದಲ್ಲಿ ಅಲ್ಪ ಸಂಖ್ಯಾತರು ಎಂಬ ಪದ ಬಳಕೆಯಾಗಿದ್ದರೂ ಅದರ ಅರ್ಥ, ವಿಸ್ತಾರಗಳ ಬಗ್ಗೆ ಏನನ್ನೂ ಹೇಳಿಲ್ಲ. ಅಲ್ಪ ಸಂಖ್ಯಾತರು ಎಂಬ ಕಾರಣದಿಂದ ಅವರ ಭಾಷೆ, ಲಿಪಿ ಅಥವ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಹಕ್ಕಿಗಾಗಿ ೨೯ನೆಯ ವಿಧಿ ರಕ್ಷಣೆ ನೀಡುತ್ತದೆ. ಅಲ್ಪಸಂಖ್ಯಾತರು ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ೩೦ನೆಯ ವಿಧಿ ಅವಕಾಶ ಕೊಡುತ್ತದೆ. ಧರ್ಮ ಅಥವ ಭಾಷೆ ಹೆಸರಿನಲ್ಲಿ ಇಂತಹ ಸಂಸ್ಥೆಗಳಿಗೆ ತಾರತಮ್ಯ ತೋರದಂತೆ ಸಹ ಹೇಳಲಾಗಿದೆ. ಅಲ್ಪ ಸಂಖ್ಯಾತರು ಎಲ್ಲರಂತೆ ಸಾಮಾನ್ಯ ನಾಗರಿಕ ಹಕ್ಕುಗಳನ್ನು ಹೊಂದಿದ್ದು, ಅನುಭವಿಸುತ್ತಿದ್ದು ಇದು ಭಾರತದ ಹೆಗ್ಗಳಿಕೆಯಾಗಿದೆ. ಆದರೂ ಅವರಿಗೆ ಇತರರಿಗಿಂತ ಹೆಚ್ಚು ಸೌಲಭ್ಯ, ಅವಕಾಶಗಳನ್ನು ಕೊಡಲು ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಪೈಪೋಟಿ ಮಾಡುತ್ತಿರುವುದಕ್ಕೆ ಕಾರಣ ನಿಚ್ಛಳವಾಗಿದೆ. ಅವರನ್ನು ಓಟು ಬ್ಯಾಂಕುಗಳಾಗಿ ಪರಿವರ್ತಿಸುವ ಏಕೈಕ ಕಾರಣ ಇಂತಹ ಓಲೈಸುವಿಕೆಯಲ್ಲಿದೆ ಎಂದು ಸಾಮಾನ್ಯರಿಗೂ ಅರ್ಥವಾಗುತ್ತದೆ. ಇದರ ಫಲವಾಗಿ ಅವರುಗಳೂ ಸಹ ತಮ್ಮ ಬೇಕುಗಳನ್ನು ಹಕ್ಕು ಎಂಬಂತೆಯೇ ಮಂಡಿಸಿ ಪಡೆದುಕೊಳ್ಳುತ್ತಿವೆ. ಅಲ್ಪಸಂಖ್ಯಾತರು ಎಂಬ ಕಾರಣದಿಂದ ಶೈಕ್ಷಣಿಕ ಹಕ್ಕುಗಳಿಗೆ ಸಂಬಂಧಿಸಿ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವುದಕ್ಕೆ ಮಾತ್ರ ಅವಕಾಶವಿದೆ. ಅವರ ಉಳಿದೆಲ್ಲಾ ಹಕ್ಕುಗಳು ಸಾಂವಿಧಾನಿಕವಾಗಿ ರಕ್ಷಿತವಾಗಿರುವುದರಿಂದ ಅವರಿಗಾಗಿಯೇ ಪ್ರತ್ಯೇಕ ಸೌಲಭ್ಯಗಳು, ವಿನಾಯಿತಿಗಳನ್ನು ಕೊಡುವುದು ಸಂವಿಧಾನ ವಿರೋಧಿ ಕ್ರಮವಷ್ಟೇ ಅಲ್ಲದೆ ಅವರನ್ನು ಇತರರಿಂದ ಪ್ರತ್ಯೇಕವಾಗಿ ಇರುವಂತೆ ನೋಡಿಕೊಳ್ಳುವ ಹಾಗೂ  ಜಾತ್ಯಾತೀತತೆ ಎಂಬ ಪದಕ್ಕೆ ಅಪಚಾರ ಮಾಡುವ ಕ್ರಮವಾಗುತ್ತದೆ. ಮುಸ್ಲಿಮರಿಗಾಗಿಯೇ ಸರ್ಕಾರಿ ಉದ್ಯೋಗದಲ್ಲಿ ಶೇ. ೫ರಷ್ಟು ಮೀಸಲಾತಿ ನಿಗದಿಸಿದ ಆಂಧ್ರ ಸರ್ಕಾರದ ಕ್ರಮವನ್ನು ನ್ಯಾಯಾಲಯ ಅನೂರ್ಜಿತಗೊಳಿಸಿರುವುದು ಓಲೈಕೆ ರಾಜಕಾರಣ ಮಾಡುವವರ ಕಣ್ತೆರೆಸಬೇಕು. ಅಷ್ಟಾದರೂ ಲೋಕಸಭಾ ಚುನಾವಣೆಯ ವೇಳೆ ಇಂತಹ ಮೀಸಲಾತಿ ನಿಗದಿಸುವುದಾಗಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಮುಂತಾದ ಜಾತ್ಯಾತೀತವೆಂದು ಕರೆದುಕೊಳ್ಳುವ ಪಕ್ಷಗಳು ಘೋಷಿಸಿದ್ದು ಅವರುಗಳ ಓಟು ಪಡೆಯುವ ಸಲುವಾಗಿಯೇ ಆಗಿತ್ತು. ಓಟಿಗಾಗಿ ಸಂವಿಧಾನದ ವಿಧಿಗಳನ್ನೇ ಉಲ್ಲಂಘಿಸುವ ಮಾತನಾಡುವುದು ಎಷ್ಟು ಸರಿ ಎಂಬುದನ್ನು ಪ್ರಜ್ಞಾವಂತರು ಯೋಚಿಸಬೇಕು. ಭಾರತದ ಅಲ್ಪ ಸಂಖ್ಯಾತರ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಉದ್ದೇಶಿಸಿದ್ದ ೨೦೦೪ರ ಸಂವಿಧಾನ ತಿದ್ದುಪಡಿ ಮಸೂದೆ ಈಗ ಲ್ಯಾಪ್ಸ್ ಆದ ಸ್ಥಿತಿಯಲ್ಲಿದೆ. ಸರ್ವೋಚ್ಛ ನ್ಯಾಯಾಲಯವು ಅಲ್ಪ ಸಂಖ್ಯಾತರು ಎಂಬುದಕ್ಕೆ ನಿರ್ಧರಿಸಲು ಮಾನದಂಡಗಳ ಬಗ್ಗೆ ನಿಗದಿಸಲು ಸರ್ಕಾರಕ್ಕೆ ಸೂಚಿಸಿದೆ. ಈ ಕೆಲಸ ಇನ್ನೂ ಆಗಬೇಕಿದೆ. ಸರ್ಕಾರವು ಮುಸ್ಲಿಮರು, ಕ್ರಿಶ್ಚಿಯನರು, ಸಿಕ್ಖರು, ಬೌದ್ಧರು ಮತ್ತು ಪಾರ್ಸಿಗಳನ್ನು ಅಲ್ಪಸಂಖ್ಯಾತರೆಂದು ಗುರುತಿಸಿದೆ. 
     ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪ್ರೊ. ಜೋಯ ಹಸನ್ ಒಂದು ಲೇಖನದಲ್ಲಿ ಪ್ರತಿಪಾದಿಸಿರುವ ಅಂಶಗಳಿವು: "ರಾಜ್ಯ ಸರ್ಕಾರಗಳೊಡನೆ ಸಮಾಲೋಚಿಸಿ ಅಲ್ಪಸಂಖ್ಯಾತರನ್ನು ಗುರುತಿಸುವ ವಿಧಾನದ ಬಗ್ಗೆ ಕೇಂದ್ರ ಸಂಪುಟ ಪ್ರಸ್ತಾವನೆಯನ್ನು ಒಪ್ಪಿದೆಯೆಂದು ಹೇಳಲಾಗಿದೆ. ಈ ಸಮಾಲೋಚನೆಯಿಂದ ಮೇಲೆ ಹೇಳಿದ ಐದು ಅಲ್ಪಸಂಖ್ಯಾತರಲ್ಲದೆ (ಮುಸ್ಲಿಮರು, ಕ್ರಿಶ್ಚಿಯನರು, ಸಿಕ್ಖರು, ಬೌದ್ಧರು ಮತ್ತು ಪಾರ್ಸಿಗಳು) ಹೊಸದಾಗಿಯೂ ಅಲ್ಪಸಂಖ್ಯಾತರನ್ನು ಗುರುತಿಸಲು ಉದ್ದೇಶಿಸಿದೆ. ಸಂವಿಧಾನವು ಅಲ್ಪಸಂಖ್ಯಾತರ ಕುರಿತು ವಿವರಿಸಿಲ್ಲವಾದರೂ, ಈ ಅಲ್ಪಸಂಖ್ಯಾತ ಅನ್ನುವುದನ್ನು ರಾಷ್ಟ್ರಮಟ್ಟದಲ್ಲಿ ನಿರ್ಧರಿಸುವ ಅಗತ್ಯವಿದೆ. ಹಲವಾರು ವರ್ಷಗಳಲ್ಲಿ ನ್ಯಾಯಾಂಗವು ಅಲ್ಪಸಂಖ್ಯಾತ ಅನ್ನುವುದರ ವ್ಯಾಖ್ಯೆಯನ್ನು ಶಿಕ್ಷಣಕ್ಕೆ ಸೀಮಿತಗೊಳಿಸಿ ವ್ಯಾಖ್ಯಾನಿಸಿದೆ. ಈ ಕುರಿತು ರಾಷ್ಟ್ರವ್ಯಾಪಿ ನಿರ್ಧಾರಕ್ಕೆ ಬರಬೇಕು. ಅಂತರ ರಾಷ್ಟ್ರೀಯವಾಗಿ ಕೆಲವು ನಿದರ್ಶನಗಳಿವೆ. ಸಾಮಾನ್ಯವಾಗಿ ಗುಂಪುಗಳು ತಾರತಮ್ಯಕ್ಕೆ ಒಳಗಾಗುವ ಗುಣವಿಶೇಷಗಳೆಂದರೆ ಧರ್ಮ, ಭಾಷೆ, ಸಂಸ್ಕೃತಿ ಮತ್ತು ಲಿಂಗ. ಅಲ್ಪಸಂಖ್ಯಾತ ಅನ್ನುವುದು ಅಧಿಕಾರದ ಸಂಬಂಧಕ್ಕೂ ಅನ್ವಯಿಸುತ್ತದೆ. ಈಗಿನ ಪ್ರಸ್ತಾವನೆ ಅಂಕಿ-ಅಂಶಗಳನ್ನು ಆಧರಿಸಿ ನಿರ್ಧಾರಕ್ಕೆ ಬರುವುದನ್ನು ಹೇಳುತ್ತದೆ. ಇದು ಗುಣಾತ್ಮಕವಾಗಿ ಸರಿಯಾಗಲಾರದು. ಅಲ್ಪಸಂಖ್ಯಾತ ಅನ್ನುವುದಕ್ಕೆ ಒಂದು ಹೆಚ್ಚಿನ ಅರ್ಥಪೂರ್ಣ ರೀತಿಯಲ್ಲಿ ನೋಡಬೇಕೆಂದರೆ ದೇಶದಲ್ಲಿ ಅವರು ದೇಶದಲ್ಲಿ (ನಿರ್ದಿಷ್ಟ ರಾಜ್ಯದಲ್ಲಲ್ಲ) ಪ್ರಭಾವಯುತವಾದ ಪ್ರಧಾನ ಅಧಿಕಾರದ ಸ್ಥಾನಗಳಲ್ಲಿ ಇರದಿರುವುದು, ಪ್ರತಿನಿಧಿಸದಿರುವುದು ಅಥವ ಕಡಿಮೆ ಸಂಖ್ಯೆಯಲ್ಲಿ ಪ್ರತಿನಿಧಿಸಿರುವುದು, ಇವುಗಳನ್ನು ಪರಿಗಣಿಸಬೇಕು. ಇದರಿಂದ ಅಲ್ಪಸಂಖ್ಯಾತರು ತಮ್ಮ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವದನ್ನು ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ." ಅಧಿಕಾರಕೇಂದ್ರಿತವಾಗಿ ಅಲ್ಪಸಂಖ್ಯಾತ ಅನ್ನುವುದನ್ನು ಗುರುತಿಸುವ ಕ್ರಮವನ್ನು ಒತ್ತಾಸುವ ಈ ವಿಚಾರದ ಹಿಂದಿರುವ ಅಪಾಯವನ್ನು ನಾಗರಿಕರು ಅರಿಯಬೇಕು. ಇದು ಸಂವಿಧಾನ ವಿರೋಧಿಯಾಗಿದ್ದು ಭಾರತದ ಜಾತ್ಯಾತೀತ ನೀತಿಗೆ ಸಲ್ಲದುದಾಗಿದೆ.

   ಸಂವಿಧಾನದ ೧೯ನೆಯ ವಿಧಿಯಲ್ಲಿ ಭಾರತದ ಪ್ರಜೆಗಳಿಗೆ ದತ್ತವಾಗಿರುವ ಸ್ವಾತಂತ್ರ್ಯಗಳ ವಿವರಗಳಿವೆ. ಇದರಲ್ಲಿ ಯಾರನ್ನೇ ಆಗಲಿ ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿ, ಇತ್ಯಾದಿಗಳ ಹೆಸರಿನಲ್ಲಿ ತಾರತಮ್ಯ ಮಾಡಲಾಗಿಲ್ಲ. ಆದರೆ ಅಂತಹ ಪ್ರತಿಯೊಂದು ಸ್ವಾತಂತ್ರ್ಯಕ್ಕೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿರ್ಬಂಧವಿದೆ - ಅದು ಸಾಮಾನ್ಯ ವಿಷಯಕ್ಕೆ ಸಂಬಂಧಿಸಿದ ಸಮರ್ಥನೀಯ ನಿರ್ಬಂಧ - ಅದೆಂದರೆ ರಾಷ್ಟ್ರದ ಭದ್ರತೆ. ಸಂವಿಧಾನ ರಚನಾಕಾರರು ರಾಷ್ಟ್ರದ ರಕ್ಷಣೆ ವಿಷಯದಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ಸರ್ವೋಚ್ಛ ನ್ಯಾಯಾಲಯದ ಜಸ್ಟಿಸ್ ಆಗಿದ್ದ ಶ್ರೀ ಕೆ.ಟಿ. ಥಾಮಸ್ ಅವರು 'ವೋಟು ಬ್ಯಾಂಕುಗಳ ಸಲುವಾಗಿ ದೇಶದ ಭದ್ರತೆಯ ವಿಷಯಗಳಲ್ಲಿ ಸರ್ಕಾರ ಅನೇಕ ರೀತಿಗಳಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಿರುವುದನ್ನು ಕಂಡು ನಾನು ವಿಚಲಿತನಾಗಿದ್ದೇನೆ' ಎಂದು ಸಾರ್ವಜನಿಕವಾಗಿ ಹೇಳಿದ್ದುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಉಗ್ರಗಾಮಿಗಳು ಒಂದು ಕೋಮಿಗೆ ಸೇರಿದವರೆಂದು, ಅವರ ವಿರುದ್ಧದ ಕ್ರಮಗಳಿಂದ ಅವರ ಕೋಮಿನ ಮತಗಳಿಕೆಗೆ ಅಡ್ಡಿಯಾಗುತ್ತದೆಂದು ಮೃದುಧೋರಣೆ ವಹಿಸುವುದು, ನೆರೆರಾಷ್ಟ್ರದ ಅಪ್ರಚೋದಿತ ದಾಳಿಗಳನ್ನು ಕಂಡೂ ಕಾಣದಂತೆ ಸುಮ್ಮನಿದ್ದುದು, ಇತ್ಯಾದಿಗಳು ರಾಷ್ಟ್ರದ ಭದ್ರತೆಗಿಂತ ಮತಗಳಿಕೆ ಮುಖ್ಯವಾಗಿತ್ತಂಬುದನ್ನು ತೋರಿಸುತ್ತವೆ. ಅಪರಾಧಗಳನ್ನು ಯಾರು ಮಾಡಿದರೂ ಅಪರಾಧವೇ. ಆದರೆ ಅಲ್ಪಸಂಖ್ಯಾತರ ವಿರುದ್ಧದ ಆರೋಪಗಳನ್ನು ಮೃದುವಾಗಿ ಪರಿಗಣಿಸಬೇಕೆಂಬ ಸುತ್ತೋಲೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸುವುದರ ಹಿಂದಿನ ಉದ್ದೇಶ ತಿಳಿಯುವುದು ಕಷ್ಟವಲ್ಲ. ಬಾಂಗ್ಲಾ ನುಸುಳುಕೋರರ ಪರವಾಗಿ ಕಾಂಗ್ರೆಸ್ ಪಕ್ಷದ ಮತ್ತು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ನಾಯಕರು ಬಹಿರಂಗವಾಗಿ ಸಮರ್ಥಿಸುತ್ತಾರೆಂದರೆ ತಲುಪುವ ಸಂದೇಶವೇನು? ಗಡಿಯಾಚೆಗಿನ ನಿಷ್ಠೆ ಹೊಂದಿದ್ದು ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವವರು, ದೇಶಕ್ಕಿಂತ ನಮಗೆ ಧರ್ಮ ಮುಖ್ಯವೆನ್ನುವವರು, ೧೫ ನಿಮಿಷ ಪೋಲಿಸರು ಸುಮ್ಮನಿದ್ದರೆ ಬಹುಸಂಖ್ಯಾತರನ್ನು ಹೊಸಕಿ ಹಾಕಿಬಿಡುತ್ತೇವೆಂದು ಘೋಷಿಸುವವರು, ಅವರನ್ನು ಬಹಿರಂಗವಾಗಿ ಬೆಂಬಲಿಸುವ ಸಾವಿರಾರು ಜನರು ಇರುವುದು, ಇತ್ಯಾದಿಗಳು ದೇಶದ ಭದ್ರತೆಗಿಂತ ಮತಗಳಿಕೆಗೆ ಪ್ರಾಧಾನ್ಯ ನೀಡಿ ಮಾಡಿದ ಓಲೈಕೆಯ ಫಲಗಳಾಗಿವೆ. ಭಾರತದ ರಕ್ಷಣಾ ಮಂತ್ರಿಯಾಗಿದ್ದ ಎ.ಕೆ. ಅಂಟನಿಯವರೇ, 'ಅಲ್ಪಸಂಖ್ಯಾತರ ಅತಿಯಾದ ಓಲೈಕೆಯೇ ಕಾಂಗ್ರೆಸ್ ಸೋಲಿಗೆ ಕಾರಣ' ಎಂದಿರುವುದು ಆಘಾತಕಾರಿ ನೈಜ ಸತ್ಯದ ಅನಾವರಣವಷ್ಟೆ. ಇತ್ತೀಚಿನ ಬೆಳವಣಿಗೆಯನ್ನೂ ನಾವು ಗಂಭೀರವಾಗಿ ನೋಡಬೇಕಿದೆ. ಇರಾಕಿಗೆ ತೆರಳಲು ಸಾವಿರಾರು ಮುಸ್ಲಿಮರು ವೀಸಾ ಕೇಳುತ್ತಿದ್ದಾರೆಂದು, ಹಲವರು ಶಿಯಾಗಳ ಪರವಾಗಿ, ಹಲವರು ಸುನ್ನಿಗಳ ಪರವಾಗಿ ಹೋರಾಡುವ ಸಲುವಾಗಿ ಹೋಗುತ್ತಿದ್ದಾರೆಂದು ಟಿವಿಗಳಲ್ಲಿ ಸುದ್ದಿ ಬಿತ್ತರವಾಗುತ್ತಿದೆ. ದೇಶದಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳು, ರಕ್ತಪಾತಗಳ ಬಗ್ಗೆ ಸುಮ್ಮನಿರುವ ಇವರು ಇರಾಕಿನ ಬೆಳವಣಿಗೆಗಳ ಬಗ್ಗೆ ಆಸಕ್ತರಾಗಿದ್ದಾರೆ ಅನ್ನುವುದು ಕಳವಳಕಾರಿ ವಿಷಯವಲ್ಲವೇ?  ದೇಶದ ಭದ್ರತೆ ಆಳುವ ಸರ್ಕಾರದ ಪ್ರಥಮ ಆದ್ಯತೆಯಾಗಲೇಬೇಕು. ಇಲ್ಲದಿದ್ದರೆ ವಿಭಜನಕಾರಿ ಶಕ್ತಿಗಳು ವಿಜೃಂಭಿಸುತ್ತವೆ. ಜಾತಿ, ಮತ, ಧರ್ಮದ ಹೆಸರಿನಲ್ಲಿ ಮಾಡುವ ಓಲೈಕೆಗಳು ಸಮಾಜವನ್ನು ವಿಭಜಿಸುವುದಷ್ಟೇ ಅಲ್ಲ, ದೇಶವನ್ನು ಕೆಳಕ್ಕೆ ಜಾರಿಸುವ ನಡೆಗಳು ಮತ್ತು ಜಾತ್ಯಾತೀತೆಗೆ ಮಾಡುವ ಅಪಚಾರವಾಗುತ್ತದೆ.
      ಝಾಕಿರ್ ಹುಸೇನರು ಭಾರತದ ರಾಷ್ಟ್ರಪತಿಯಾದಾಗ ಜರ್ನಲಿಸ್ಟ್ ಟಿ.ವಿ.ಆರ್. ಶೆಣೈರವರು ಅವರನ್ನು ಕಂಡು, "ರಾಷ್ಟ್ರಪತಿಜಿ, ನಾನು ತಮ್ಮನ್ನು ಅಭಿನಂದಿಸುತ್ತೇನೆ, ಎಕೆಂದರೆ ಇದು ಒಂದು ಭಾರತದಲ್ಲಿನ ಜಾತ್ಯಾತೀತೆಯ ದೊಡ್ಡ ಜಯ" ಎಂದಿದ್ದರು. ಝಾಕಿರ್ ಹುಸೇನರು 'ಇದು ಯಾವ ರೀತಿಯಲ್ಲಿ ಜಾತ್ಯಾತೀತತೆಯ ವಿಜಯ?' ಎಂದು ಕೇಳಿದರು. 'ಒಬ್ಬ ಮುಸ್ಲಿಮ್ ಭಾರತದ ರಾಷ್ಟ್ರಪತಿಯಾಗುತ್ತಾರೆಂದರೆ ಅದು ಜಾತ್ಯಾತೀತತೆಯ ದೊಡ್ಡ ವಿಜಯ'ವೆಂಬುದು ಶೆಣೈರವರ ಉತ್ತರ. ಝಾಕಿರ್ ಹುಸೇನರು ಅವರೆಡೆಗೆ ನೋಡಿ ಮುಗುಳ್ನಕ್ಕರು. ಶೆಣೈ ಕೇಳಿದರು, "ಏಕೆ ರಾಷ್ಟ್ರಪತಿಜಿ, ನೀವು ನನ್ನನ್ನು ನೋಡಿ ನಗುತ್ತಿದ್ದೀರಿ?" ಅವರು ಉತ್ತರಿಸಿದರು, "ಶೆಣೈ, ಜಾತ್ಯಾತೀತತೆಯ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿ ನನಗೆ ನಗು ಬಂತು." ಅವರು ಮುಂದೆ ಹೇಳಿದರು, "ಭಾರತದಲ್ಲಿ ಎಂದು ನೀವು ನನ್ನನ್ನು ಧರ್ಮದಿಂದ ಗುರುತಿಸುವುದಿಲ್ಲವೋ ಅಂದು ಮಾತ್ರ ಭಾರತದಲ್ಲಿ ಜಾತ್ಯಾತೀತತೆ ಸಾಧ್ಯವಾಗುತ್ತದೆ!" ಇದು ಜಾತ್ಯಾತೀತತೆಯ ನೈಜ ವ್ಯಾಖ್ಯಾನ. ಜಾತ್ಯಾತೀತತೆಗೂ ಧರ್ಮಕ್ಕೂ, ಜಾತಿಗಳಿಗೂ ಯಾವುದೇ ಸಂಬಂಧವಿಲ್ಲ, ಸಂಬಂಧ ಕಲ್ಪಿಸಲೂಬಾರದು. ನಮ್ಮ ನಮ್ಮ ನಂಬಿಕೆಗಳು, ಜಾತಿಗಳು, ಧರ್ಮಗಳು ಏನೇ ಇರಲಿ ಅವು ನಮಗೆ ಸಂಬಂಧಿಸಿದ ವೈಯಕ್ತಿಕ ವಿಷಯಗಳು. ಅವನ್ನು ಉಳಿಸಿಕೊಳ್ಳುವುದು, ಬೆಳೆಸುವುದು ನಮಗೆ ಬಿಟ್ಟಿದ್ದು. ಆದರೆ ನಮ್ಮ ಪ್ರಾಥಮಿಕ ನಿಷ್ಠೆ ಮಾತ್ರ ಈ ದೇಶಕ್ಕೆ ಇರಬೇಕು. ಆಗ ಮಾತ್ರ ಈ ದೇಶಕ್ಕೆ ಉಳಿವು.
-ಕ.ವೆಂ.ನಾಗರಾಜ್.
**************
   Article 29 in The Constitution Of India 1949
    29. Protection of interests of minorities
(1) Any section of the citizens residing in the territory of India or any part thereof having a distinct language, script or culture of its own shall have the right to conserve the same
(2) No citizen shall be denied admission into any educational institution maintained by the State or receiving aid out of State funds on grounds only of religion, race, caste, language or any of them
Article 30 in The Constitution Of India 1949
30. Right of minorities to establish and administer educational institutions
(1) All minorities, whether based on religion or language, shall have the right to establish and administer educational institutions of their choice
(1A) In making any law providing for the compulsory acquisition of any property of an educational institution established and administered by a minority, referred to in clause ( 1 ), the State shall ensure that the amount fixed by or determined under such law for the acquisition of such property is such as would not restrict or abrogate the right guaranteed under that clause
(2) The state shall not, in granting aid to educational institutions, discriminate against any educational institution on the ground that it is under the management of a minority, whether based on religion or language.
***********
ದಿ.30.7.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಪತ್ರಿಕೆಯಲ್ಲಿ ಪ್ರಕಟಿತ

25.8.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ: