ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಆಗಸ್ಟ್ 31, 2014

ಮಾತನಾಡಿದ ಶವಗಳು - 2



     ಒಂದು ಮಧ್ಯಾಹ್ನ ಹಾಗೆಯೇ ಒರಗುದಿಂಬಿಗೆ ಒರಗಿ ಕುಳಿತಿದ್ದಾಗ ಮನಃಪಟಲದಲ್ಲಿ ಮೂಡಿದ ಒಂದು ಚಿತ್ರ ನನ್ನನ್ನು ಅಣಕಿಸುತ್ತಾ ಕೇಳಿತ್ತು: "ನಿಮಗೆ ಕೇರಳಾಪುರದ ಶಶಿಕಲಾ ಬಗ್ಗೆ ನೆನಪಿದೆ, ಶಿಕಾರಿಪುರದ ಜ್ಯೋತಿಯ ನೆನಪಿದೆ. ಅವರ ಬಗ್ಗೆ ಬರೆಯುತ್ತೀರಿ. ನನ್ನ ಬಗ್ಗೆ ಮಾತ್ರ ನಿಮಗೆ ಏನೂ ಅನ್ನಿಸುವುದೇ ಇಲ್ಲವಾ?" ಈ ಮಾತುಗಳು ಸೊರಬದ ತತ್ತೂರಿನ ಗಂಗಮ್ಮನದು ಎಂದು ಗೊತ್ತಾದರೂ ಸುಮ್ಮನಿದ್ದೆ. ನಾನು ಸುಮ್ಮನಿದ್ದರೂ ಆಕೆ ಸುಮ್ಮನಿರಬೇಕಲ್ಲಾ!
     "ನನಗೆ ಗೊತ್ತು. ನೀವು ನನ್ನನ್ನು ನೋಡಿದಾಗ ನಾನು ನೋಡಲೂ ಆಗದ ಸ್ಥಿತಿಯಲ್ಲಿದ್ದುದರಿಂದ ನೀವು ಮುಖ ಕಿವಿಚಿದ್ದಿರಿ. ಮೂಗು ಮುಚ್ಚಿಕೊಂಡಿದ್ದಿರಿ. ಅದಕ್ಕೋಸ್ಕರ ನೀವು ನನ್ನನ್ನು ನೆನಪಿಸಿಕೊಳ್ಳಲು ಇಷ್ಟಪಡುತ್ತಿಲ್ಲವೇನೋ!" ಅದು ಹಾಗಲ್ಲವೆಂದು ಆಕೆಗೂ ಗೊತ್ತಿದ್ದರೂ ನನ್ನನ್ನು ಕೆಣಕಿದ್ದಳು.
     ಅಂದಿನ ದಿನದ ನೆನಪಾಯಿತು. ಸುಮಾರು ಏಳು ವರ್ಷಗಳ ಹಿಂದೆ ಮಧ್ಯಾಹ್ನ 3.೦೦ ಘಂಟೆಯ ಸುಮಾರಿಗೆ ಸೊರಬ ತಾಲ್ಲೂಕಿನ ಆನವಟ್ಟಿ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರರು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ 'ತೊರವಂದ ಗ್ರಾಮದ ವ್ಯಾಪ್ತಿಯಲ್ಲಿ ವರದಾ ನದಿಯ ದಡದಲ್ಲಿ ಒಬ್ಬ ಮಹಿಳೆಯ ಶವವಿದೆ. ಆಕೆಯ ಮದುವೆಯಾಗಿ ನಾಲ್ಕೂವರೆ ತಿಂಗಳಾಗಿದೆ. ಸೊರಬ ತಹಸೀಲ್ದಾರರು ರಜೆಯಲ್ಲಿದ್ದಾರೆ. ನೀವು ದಯಮಾಡಿ ಶವತನಿಖೆ ನಡೆಸಿಕೊಡಬೇಕು' ಎಂದು ಕೋರಿದ್ದರು. ಅದೇ ಸಮಯಕ್ಕೆ ಜಿಲ್ಲಾಧಿಕಾರಿಯವರು ಶಿಕಾರಿಪುರದ ತಹಸೀಲ್ದಾರನಾಗಿದ್ದ ನನಗೆ ಸೊರಬ ತಹಸೀಲ್ದಾರರು ರಜೆಯಲ್ಲಿದ್ದ ಕಾರಣ ಶವತನಿಖೆ ನಡೆಸಲು ಅಧಿಕೃತಗೊಳಿಸಿ ಫ್ಯಾಕ್ಸ್ ಸಂದೇಶದ ಮೂಲಕ ಕಳಿಸಿದ್ದ ಆದೇಶ ಸಹ ತಲುಪಿತು. ಸರಿ, ಒಬ್ಬ ಗುಮಾಸ್ತರನ್ನು ಕರೆದುಕೊಂಡು ಹೊರಡುತ್ತಾ ಸಬ್ ಇನ್ಸ್‌ಪೆಕ್ಟರರಿಗೆ ಪೋಸ್ಟ್ ಮಾರ್ಟಮ್ ಮಾಡಲು ವೈದ್ಯಾಧಿಕಾರಿಯವರಿಗೆ ಸಿದ್ಧರಿರಲು ತಿಳಿಸುವಂತೆ ಹೇಳಿ, ತಲುಪುವಾಗ ತಡವಾಗುವ ಕಾರಣದಿಂದ ಸೂಕ್ತ ಬೆಳಕಿನ ವ್ಯವಸ್ಥೆಯನ್ನೂ ಮಾಡಿರಲು ಸೊರಬದ ತಾಲ್ಲೂಕು ಕಛೇರಿಯ ಸಿಬ್ಬಂದಿಗೆ ಸೂಚನೆಯನ್ನೂ ಕೊಟ್ಟು ಹೊರಟೆ.
     ಅರ್ಧ ದಾರಿಯಲ್ಲಿ ಅಲ್ಲಿನ  ಸರ್ಕಲ್ ಇನ್ಸ್‌ಪೆಕ್ಟರರು ಮತ್ತು ಅವರ ಸಿಬ್ಬಂದಿ ಜೊತೆಗೂಡಿದರು. ಶವವಿದ್ದ ಸ್ಥಳ ಇನ್ನೂ ಸುಮಾರು 3 ಕಿ.ಮೀ. ಇದ್ದಂತೆಯೇ ಜೀಪು ಹೋಗಲು ದಾರಿಯಿಲ್ಲದೆ ನಡೆದೇ ಹೋಗಬೇಕಿತ್ತು. ಮಳೆಗಾಲವಾಗಿದ್ದು ಮೋಡ ಮುಸುಕಿ ಜಿಟಿ ಜಿಟಿ ಮಳೆ ಬೀಳುತ್ತಿದ್ದಂತೆಯೇ ನಮ್ಮ ಸವಾರಿ ಮುಂದುವರೆಯಿತು. ನಾಟಿ ಮಾಡಿದ್ದ ಜಾರುತ್ತಿದ್ದ ಬದಿಗಳಲ್ಲಿ ಎಚ್ಚರಿಕೆಯಿಂದ ಬೀಳದಂತೆ ಹೆಜ್ಜೆಯಿಟ್ಟು ನಡೆಯಬೇಕಿತ್ತು. ನಮ್ಮ ಗ್ರಾಮಸಹಾಯಕನೊಬ್ಬ ನನಗೆ ಟಾರ್ಚು ಹಿಡಿದು ದಾರಿ ತೋರಿಸಲು ತಿರುತಿರುಗಿ ನೋಡುತ್ತಾ ಹೋಗುತ್ತಿದ್ದಾಗ ಜಾರಿಬಿದ್ದು ಮೈಕೈಯೆಲ್ಲಾ ಕೆಸರು ಮಾಡಿಕೊಂಡಿದ್ದ. ಅವನು ಬಿದ್ದದ್ದು ಕಂಡ ನನಗೆ 'ಪಾಪ' ಅನ್ನಿಸಿತು. ಅದು ಉಳಿದವರು ಇನ್ನೂ ಎಚ್ಚರಿಕೆಯಿಂದ ನಡೆಯುವಂತೆ ಮಾಡಿತ್ತು. ಆ ಕತ್ತಲೆಯ ಸಂಜೆಯಲ್ಲಿ ಗದ್ದೆಯ ಬದಿಯಲ್ಲಿ ಪೆಟ್ರೋಮ್ಯಾಕ್ಸ್ ಲೈಟುಗಳು, ಹಗ್ಗಗಳು, ಗಳುಗಳು, ಛತ್ರಿಗಳು, ಇತ್ಯಾದಿಗಳನ್ನು ಹಿಡಿದುಕೊಂಡು ನಾವುಗಳು ಹೋಗುತ್ತಿದ್ದುದನ್ನು ದೂರದಿಂದ ನೋಡಿದವರಿಗೆ ಕೊಳ್ಳಿದೆವ್ವಗಳಂತೆ ಕಂಡಿರಲೂ ಸಾಕು. ಪಾಪ, ಡಾಕ್ಟರರೂ ತಮ್ಮ ಒಬ್ಬ ಸಹಾಯಕನೊಂದಿಗೆ ಸಲಕರಣೆಗಳನ್ನು ಹಿಡಿದುಕೊಂಡು ಕಷ್ಟಪಟ್ಟು ನಮ್ಮೊಂದಿಗೆ ಹೆಜ್ಜೆ ಹಾಕಿದ್ದರು.
     ಅಂತೂ ಶವವಿದ್ದ ಸ್ಥಳ ತಲುಪಿದೆವು. ಶವವೋ ಅಲ್ಲಿದ್ದ ಹಳುಗಳ ನಡುವೆ ಸಿಕ್ಕಿಕೊಂಡಿದ್ದು ಕಾಣಿಸುತ್ತಿದ್ದರೂ, ಅದನ್ನು ಅಲ್ಲಿಂದ ಬಿಡಿಸಿ ಹೊರತರಲು ಕೆಳಗಿನ ಸಿಬ್ಬಂದಿ ಸುಮಾರು ಒಂದು ಗಂಟೆಯ ಕಾಲ ಹೆಣಗಬೇಕಾಯಿತು. ಶವಕ್ಕೆ ಕೆಸರು ಮೆತ್ತಿದ್ದರಿಂದ ನೀರು ಸುರಿದು ಸ್ವಚ್ಛಗೊಳಿಸಬೇಕಾಯಿತು. ಆ ದೃಷ್ಯ ಭೀಕರವಾಗಿತ್ತು, ದುರ್ವಾಸನೆ ತಡೆಯುವಂತಿರಲಿಲ್ಲ. ಸುಮಾರು ೨-೩ ದಿನಗಳು ನೀರಿನಲ್ಲೇ ಕೊಳೆತಿದ್ದ ಆ ಶವದ ನಾಲಿಗೆ ಹೊರಚಾಚಿ ಕಚ್ಚಿಕೊಂಡಿದ್ದು, ನಾಲಿಗೆ ಊದಿದ್ದರಿಂದ ಬಾಯಲ್ಲಿ ಬಲೂನು ಇಟ್ಟುಕೊಂಡಿದ್ದಂತೆ ಕಾಣುತ್ತಿತ್ತು. ತಲೆಯಚರ್ಮ ಕೊಳೆತಿದ್ದರಿಂದ ಕೂದಲು ಕಳಚಿಹೋಗಿ ತಲೆ ಬೋಳಾಗಿತ್ತು.  ಎರಡೂ ಕೈಗಳು ಶೆಟಗೊಂಡಿದ್ದವು. ಬಲಗೈ ಮಣಿಕಟ್ಟಿನ ಹತ್ತಿರ ಸುಮಾರು ಮೂರು ಇಂಚು ಉದ್ದ, ಎರಡೂವರೆ ಇಂಚು ಅಗಲದ ಕಡಿತದಿಂದಾದ ರೀತಿಯ ಗಾಯವಿತ್ತು. ಹೊಟ್ಟೆಯ ಕೆಳಭಾಗದಿಂದ ಕರುಳು ಹೊರಬಂದಿದ್ದು, ಇಡೀ ದೇಹ ಊದಿಕೊಂಡಿತ್ತು. ದೇಹದ ಅಲ್ಲಲ್ಲಿ ಜಲಚರಗಳು ದೇಹವನ್ನು ತಿಂದಿದ್ದವು. ಈಗಲೂ ಆ ದೃಷ್ಯ ಕಣ್ಣ ಮುಂದೆ ರಾಚಿದಂತೆ ಇದೆ. ಗಮನಿಸಿದ ಸಂಗತಿಗಳನ್ನು ಪಂಚರ ಸಮಕ್ಷಮದಲ್ಲಿ ದಾಖಲಿಸಿ ಸಂಬಂಧಿಸಿದ ಎಲ್ಲರ ಸಹಿ ಪಡೆದೆ. ಮೃತಳ ತಂದೆಯ ಮತ್ತು ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಂಡೆ. ನಂತರದಲ್ಲಿ ಸರ್ಕಾರಿ ವೈದ್ಯರಿಗೆ ಪೋಸ್ಟ್ ಮಾರ್ಟಮ್ ಮಾಡಿ ವರದಿಯನ್ನು ಪೋಲಿಸರಿಗೆ ತಲುಪಿಸಲು ಹಾಗೂ ನಂತರ ವಾರಸುದಾರರಿಗೆ ಶವವನ್ನು ಅಂತ್ಯ ಸಂಸ್ಕಾರಕ್ಕೆ ತಲುಪಿಸಲು ಸೂಚನೆ ನೀಡಿ ಹೊರಬಂದೆ. ಪೋಲಿಸರಿಗೂ ತನಿಖೆ ಮುಂದುವರೆಸಲು ಸೂಚಿಸಿದೆ. ಇದು ಶೀಲ ಶಂಕಿಸಿ ನಡೆದ ಕೊಲೆಯೆಂದು ಮೇಲುನೋಟಕ್ಕೆ ಗೋಚರವಾಗುವಂತಹ ಸಂಗತಿಯಾಗಿತ್ತು. ಶವತನಿಖಾ ವರದಿಯನ್ನು ಜುಡಿಯಲ್ ನ್ಯಾಯಾಲಯಕ್ಕೆ ಕಳಿಸಿದೆ. ನಂತರದ ಮೂರು ದಿನಗಳು ನನಗೆ ಸರಿಯಾಗಿ ಊಟ, ತಿಂಡಿ ಮಾಡಲಾಗಿರಲಿಲ್ಲ.
     ಪೋಲಿಸರು ಕೊಟ್ಟ ಪ್ರಥಮ ವರ್ತಮಾನ ವರದಿ, ಸ್ಥಳದಲ್ಲಿದ್ದ ಮೃತೆಯ ತಂದೆ ಮತ್ತು ಪಂಚರ ಹೇಳಿಕೆಗಳಿಂದ ತಿಳಿದಿದ್ದಿಷ್ಟು.  ಗಂಗಮ್ಮಳ ಹೆತ್ತವರಿಗೆ ಎರಡು ಗಂಡು, ಎರಡು ಹೆಣ್ಣು ಮಕ್ಕಳು. ಹಿರಿಯ ಮಗ ಮತ್ತು ಹಿರಿಯ ಮಗಳಿಗೆ ಮದುವೆಯಾಗಿತ್ತು. ಮಗಳು ಗಂಗಮ್ಮನಿಗೆ 23 ವರ್ಷವಾಗಿದ್ದು ಮದುವೆಗೆ ಗಂಡು ನೋಡುತ್ತಿದ್ದರು. ಒಂದು ಸಂಬಂಧ ಕೂಡಿಬಂತು. ಪರಸ್ಪರ ಒಪ್ಪಿಗೆಯಾದಾಗ ಕೊಡುವ-ಬಿಡುವ ಮಾತು, ಶಾಸ್ತ್ರಗಳು ಜರುಗಿದವು. ಮಾಡಬೇಕಾದ ವರೋಪಚಾರಗಳನ್ನೂ ಮಾಡುವುದರೊಂದಿಗೆ ಮದುವೆಯೂ ಆಯಿತು. ನೆಂಟರ, ಬೀಗರ ಔತಣಗಳು ಎಲ್ಲವೂ ಸುಸೂತ್ರವಾಗಿ ಮುಗಿದು, ಗಣೇಶ-ಗಂಗಾ ಸತಿಪತಿಗಳೆನಿಸಿದರು.
     ನಿಜವಾದ ಕಥೆ ನಂತರ ಪ್ರಾರಂಭವಾಯಿತು. ಶುಭದಿನವೊಂದನ್ನು ನೋಡಿ ಪ್ರಸ್ತಕ್ಕೆ ಪ್ರಶಸ್ತ ದಿನ ಆರಿಸಿದರು. ಅಂದು ರಾತ್ರಿ ಗಂಗೆ ತುಂಬಾ ಹೊಟ್ಟೆನೋವು ಬಂದು ಒದ್ದಾಡಲು ಪ್ರಾರಂಭಿಸಿದ್ದನ್ನು ಕಂಡ ಗಣೇಶ ಕಕ್ಕಾಬಿಕ್ಕಿಯಾದ. ಸಂಕೋಚದಿಂದಲೇ ಬಾಗಿಲು ತೆರೆದು ಹೊರಬಂದ ಅವನು ಮನೆಯವರಿಗೆ ವಿಷಯ ತಿಳಿಸಿದ. ಗುರುತಿದ್ದ ಪಕ್ಕದ ಹಳ್ಳಿಯ ಡಾಕ್ಟರರಿಗೆ ಫೋನು ಮಾಡಿದರೆ ಅವರು ರೋಗಿಯನ್ನೇ ಕರೆದುಕೊಂಡು ಬರಲು ತಿಳಿಸಿದರು. ಗಣೇಶ ಹೆಂಡತಿಯನ್ನು ಮೋಟಾರ್ ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ವೈದ್ಯರಿಗೆ ತೋರಿಸಿದ. ಪರೀಕ್ಷೆ ಮಾಡಿದ ವೈದ್ಯರು ಗಣೇಶನ ಬೆನ್ನು ತಟ್ಟಿ 'ನೀನು ತಂದೆಯಾಗುತ್ತಿದ್ದೀಯಾ, ನಿನ್ನ ಹೆಂಡತಿಗೆ ಈಗ ಎರಡೂವರೆ ತಿಂಗಳು' ಎಂದು ಶಹಭಾಶಗಿರಿ ಹೇಳಿದಾಗ ಅವನು ಕುಸಿದು ಹೋಗಿದ್ದ. ಮಾತನಾಡದೆ ಪತ್ನಿಯನ್ನು ಮನೆಗೆ ವಾಪಸು ಕರೆತಂದ. ಅವನ ಸ್ವಪ್ನ ಸೌಧ ಬಿದ್ದು ಹೋಗಿತ್ತು. ನಂತರ ಏನು ನಡೆಯಬಹುದೋ ಅದೇ ನಡೆಯಿತು. ಮೋಸ ಮಾಡಿ ಮದುವೆ ಮಾಡಿದ ಬಗ್ಗೆ ಗಣೇಶನ ಮನೆಯವರು ಕ್ರುದ್ಧರಾಗಿದ್ದರು. ಗಂಗಮ್ಮಳಿಗೆ ಕಿರುಕುಳ ಪ್ರಾರಂಭವಾಯಿತು.
     ಮಗಳಿಗೆ ಕಿರುಕುಳ ಕೊಡುತ್ತಿದ್ದ ವಿಷಯ ತಂದೆಗೆ ಗೊತ್ತಾಗಿ ಅವರು ಗಣೇಶನ ಮನೆಗೆ ಮಾತನಾಡಲು ಹೋಗಿ ಅವಮಾನಿತರಾಗಿ ಹಿಂತಿರುಗಿದ್ದರು. ಕೆಲವು ದಿನಗಳ ನಂತರ ಗಣೇಶ, ಅವನ ತಂದೆ,ತಾಯಿ ಮತ್ತು ಕೆಲವರು ಹಿರಿಯರು ಸೇರಿ ಗಂಗಮ್ಮನ ತವರುಮನೆಗೆ ನ್ಯಾಯ ಪಂಚಾಯಿತಿ ಮಾಡಲು ಬಂದರು. ಪಂಚಾಯಿತಿಗೆ ತವರು ಮನೆಯವರು ಒಪ್ಪಲಿಲ್ಲ. ಗಂಗಮ್ಮಳನ್ನು ತಂದೆಯ ಮನೆಯಲ್ಲೇ ಬಿಟ್ಟು ಬಂದವರು ಮರಳಿದರು. ಒಂದೆರಡು ತಿಂಗಳು ಕಳೆಯಿತು. ಒಂದಲ್ಲಾ ಒಂದು ಕಾರಣದಿಂದ ಪಂಚಾಯಿತಿ ನಡೆಯಲೇ ಇಲ್ಲ. ಒಂದು ದಿನ ಗಣೇಶನೇ ಮಾವನಿಗೆ ಫೋನು ಮಾಡಿ 'ನೀವೇನೂ ಪಂಚಾಯಿತಿ ಮಾಡುವುದು ಬೇಡ, ನಿಮ್ಮ ಮಗಳನ್ನು ಕರೆದುಕೊಂಡು ಬನ್ನಿ' ಎಂದು ತಿಳಿಸಿದ. ಅವರಿಗೆ ಬೇಕಾಗಿದ್ದುದೂ ಅದೇ. ಗಂಗಮ್ಮ ಗಂಡನ ಮನೆ ಸೇರಿದರೂ, ತುಟಿ ಬಿಚ್ಚಿರಲಿಲ್ಲ, ಏನನ್ನೂ ಹೇಳಿರಲಿಲ್ಲ.
     ಸುಮಾರು 10-12 ದಿನಗಳ ನಂತರ ಬೈಕಿನಲ್ಲಿ ಗಂಗ್ರೆಯನ್ನು ಕೂರಿಸಿಕೊಂಡು ಮಾವನ ಮನೆಗೆ ಬಂದ ಗಣೇಶ ಅಂದು ಮಧ್ಯಾಹ್ನ ಅಲ್ಲಿಯೇ ಊಟ ಮಾಡಿದರು. 'ಕೂಲಿ ಕೆಲಸಕ್ಕೆ ದಾವಣಗೆರೆಗೆ ಹೋಗುತ್ತಿದ್ದೇವೆ, ಸ್ವಲ್ಪ ದಿವಸ ಊರಿಗೆ ಹೋಗುವುದಿಲ್ಲ' ಎಂದು ಹೇಳಿದವನು ಊಟದ ನಂತರ ಅಲ್ಲಿಂದ ಬೈಕಿನಲ್ಲಿ ಪತ್ನಿಯನ್ನು ಕೂರಿಸಿಕೊಂಡು ಹೊರಟ. ಸಾಯಂಕಾಲ ಸುಮಾರು 7.30ರ ಸಮಯದಲ್ಲಿ ಫೋನು ಮಾಡಿ 'ದಾವಣಗೆರೆಯಲ್ಲಿ ಇರುವುದಾಗಿಯೂ, ಏನೂ ತೊಂದರೆಯಿಲ್ಲವೆಂದೂ, ಚೆನ್ನಾಗಿದ್ದೇವೆಂದೂ' ಗಂಡ-ಹೆಂಡಿರಿಬ್ಬರೂ ತಿಳಿಸಿದರು.
      ಮರುದಿನ ಬೆಳಿಗ್ಗೆ ತಿಮ್ಮಪ್ಪ್ಪ ಎಂದಿನಂತೆ ಜಮೀನಿನ ಕೆಲಸದಲ್ಲಿ ತೊಡಗಿಕೊಂಡಿದ್ದ. ಅಗ ಅವನ ಪರಿಚಯಸ್ಥರು ಓಡುತ್ತಾ ಬಂದು 'ತಿಮ್ಮಪ್ಪಾ, ಬೇಗ ಹೊರಡು, ನಿನ್ನ ಅಳಿಯ ವಿಷ ಕುಡಿದಿದ್ದಾನೆ, ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ' ಎಂದು ತಿಳಿಸಿದಾಗ ಗಾಬರಿಗೊಂಡ ಅವನು ಮಿತ್ರರ ಬೈಕಿನಲ್ಲಿ ಅಳಿಯನ ಊರಿನ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ. ಅಲ್ಲಿ ಗಣೇಶನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋದ ವಿಷಯ ತಿಳಿತು. ಮಗಳ ಕುರಿತು ವಿಚಾರಿಸಿದರೆ ಯಾರೂ ಸ್ಪಷ್ಟ ಮಾಹಿತಿ ಕೊಡಲಿಲ್ಲ, ತಮಗೆ ಗೊತ್ತಿಲ್ಲವೆಂದರು. ಶಿವಮೊಗ್ಗ ಆಸ್ಪತ್ರೆಗೂ ಹೋಗಿ ನೋಡಿದರೆ ಅಳಿಯ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಮಗಳ ಸುಳಿವಿರಲಿಲ್ಲ. ಮರುದಿನ ಬೆಳಿಗ್ಗೆ ಗ್ರಾಮಾಂತರ ಪೋಲಿಸ್ ಠಾಣೆಗೆ ಹೋಗಿ 'ತಮ್ಮ ಮಗಳ ಪತ್ತೆಯಿಲ್ಲ, ಹುಡುಕಿಕೊಡಿ' ಎಂದು ತಿಮ್ಮಪ್ಪ ದೂರು ದಾಖಲಿಸಿದ. ಸ್ವಲ್ಪ ಸಮಯದ ನಂತರದಲ್ಲಿ ಊರ ಹೊಳೆಯ ಹತ್ತಿರ ಯಾರದೋ ಚಪ್ಪಲಿ, ವಾಚು ಬಿದ್ದಿದೆ ಅಂತ ಊರಿನವರು ಮಾತನಾಡಿಕೊಳ್ಳುತ್ತಿದ್ದುದು ಕಿವಿಗೆ ಬಿದ್ದು, ಉಳಿದವರೊಂದಿಗೆ ಅವನೂ ಹೊಳೆಯ ಹತ್ತಿರ ಹೋಗಿ ನೋಡಿದರೆ, ಅವು ತಿಮ್ಮಪ್ಪನ ಮಗಳದ್ದೇ ಆಗಿದ್ದವು. ಹುಡುಕಿ ನೋಡಿದರೆ ಅಲ್ಲಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಹಾಳು ಕಸ ಕಡ್ಡಿ, ಬಳ್ಳಿಗಳು ತುಂಬಿದ್ದ ಹೊಳೆಯ ಹತ್ತಿರದ ಹಳುವಿನಲ್ಲಿ ಅಂಗಾತವಾಗಿ ಸಿಕ್ಕಿಕೊಂಡಿದ್ದ ಹೆಣ ಕಂಡು ಬಂತು. ಹೆಣ ಕೆಸರಿನಲ್ಲಿದ್ದು ಗುರುತು ಹಿಡಿಯುವುದು ಕಷ್ಟವಾಗಿದ್ದರೂ, ಬಟ್ಟೆಯ ಆಧಾರದಲ್ಲಿ ಅದು ಮಗಳದ್ದೇ ಎಂದು ಕಂಡುಕೊಂಡವನು ತಲೆಯ ಮೇಲೆ ಕೈಹೊತ್ತು ಕುಸಿದು ಕುಳಿತ.
     ಶವತನಿಖೆಯ ನೆನಪಿನ ಗುಂಗಿನಲ್ಲೇ ಮ್ಲಾನಚಿತ್ತನಾಗಿದ್ದ ನನ್ನನ್ನು ಗಂಗಿ ಕೆಣಕಿದಳು, "ನಿಜವಾಗಿ ಏನು ನಡೆಯಿತು ನಿಮಗೆ ಗೊತ್ತಾ?"
     ನಾನು ಸುಮ್ಮನಿರದೆ, "ಮದುವೆಗೆ ಮುಂಚೆಯೇ ಬಸಿರಾಗಿದ್ದೆಯಲ್ಲಾ, ಇದು ಬೇಕಿತ್ತಾ? ವಿಷಯ ಮುಚ್ಚಿಟ್ಟು ನಿಮ್ಮ ಅಪ್ಪ-ಅಮ್ಮ ಮದುವೆ ಮಾಡಿದ್ದು ಸರಿಯಾ?" ಎಂದು ಮೌನವಾಗಿಯೇ ಪ್ರಶ್ನಿಸಿದ್ದೆ.
     "ನನ್ನ ಅಪ್ಪನೇ ನಿಮಗೆ ಎಲ್ಲಾ ಹೇಳಿದ್ದಾರಲ್ಲಾ. ನನ್ನ ಹೊಟ್ಟೆ ತುಂಬಿಸಿದವನಿಗೆ ಆಗಲೇ ಮದುವೆ ಆಗಿತ್ತು. ಹಾಗಾಗಿ ಹೇಗೋ ನನ್ನನ್ನು ಸಾಗಿಸಿಬಿಟ್ಟರೆ ಸಾಕೆಂದು ಗುಟ್ಟಾಗಿ ಮದುವೆ ಮಾಡಿದರು. ಗುಟ್ಟು ರಟ್ಟಾಯಿತು."
     ನಾನು ಮಾತು ತುಂಡರಿಸಿದೆ, "ಅರ್ಥವಾಯಿತು ಬಿಡು. ಗಣೇಶ ತನ್ನ ಬಾಳು ಹಾಳಾಯಿತು ಅಂದುಕೊಂಡ. ಹೇಗಾದರೂ ನಿನ್ನನ್ನು ಮುಗಿಸಿದರೆ ಬೇರೆ ಮದುವೆ ಆಗಬಹುದು ಅಂದುಕೊಂಡು ನಿನ್ನನ್ನು ದಾವಣಗೆರೆಗೆ ಕರೆದುಕೊಂಡು ಹೋಗುವ ನೆಪ ಮಾಡಿ ಯಾರೂ ನೋಡದಂತಹ ಸ್ಥಳದಲ್ಲಿ ನಿನ್ನನ್ನು ಕೊಂದು ನದಿಗೆ ಬಿಸಾಕಿರಬಹುದು. ಅಷ್ಟೇ ತಾನೇ?"
     ಮೌನ ಸಂಭಾಷಣೆ ಮುಗಿದು ನಂತರ ಬಹಳ ಹೊತ್ತು ನೈಜಮೌನ ಆವರಿಸಿತ್ತು. ಕೊನೆಗೊಮ್ಮೆ ನಿಟ್ಟುಸಿರಿಟ್ಟು ಆಕೆ ಪಿಸುಗುಟ್ಟಿದಂತಾಯಿತು, "ಹೋಗಲಿ ಬಿಡಿ ಸಾರ್. ಚಪಲಕ್ಕೆ ಒಳಗಾಗಿ ನನ್ನ ಬಾಳು ಹಾಳಾಯಿತು. ಗುಟ್ಟು ಮುಚ್ಚಿಟ್ಟು ಅಪ್ಪ-ಅಮ್ಮ ನನ್ನನ್ನು ಗಂಗೆಯ ಪಾಲಾಗುವಂತೆ ಮಾಡಿದರು. ನನ್ನ ಕಥೆ ಕೇಳಿಯಾದರೂ ಬೇರೆಯವರು ತಿದ್ದಿಕೊಂಡು ನಡೆದರೆ ಅಷ್ಟೇ ಸಾಕು."
     'ಅಯ್ಯೋ ದೇವರೇ, ಏನಿದು ನಿನ್ನ ಆಟ' ಎಂದುಕೊಂಡು ಸೂರನ್ನು ದಿಟ್ಟಿಸುತ್ತಾ ಇದ್ದವನಿಗೆ ಅದು ಯಾವಾಗಲೋ ನಿದ್ದೆ ಬಂದಿತ್ತು.
-ಕ.ವೆಂ.ನಾಗರಾಜ್.
**************
ಹಿಂದಿನ ಲೇಖನಕ್ಕೆ ಲಿಂಕ್: ಮಾತನಾಡಿದ ಶವಗಳು - 1
ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


3 ಕಾಮೆಂಟ್‌ಗಳು:

  1. ಅನೈತಿಕ ಸಂಬಂಧಕ್ಕೆ ಹಾತೊರೆಯುವ ಹೆಣ್ಣುಗಳಿಗೆ ಎಚ್ಚರಿಕೆಯ ಘಂಟೆಯಂತಿದೆ ತಮ್ಮ ಲೇಖನ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೌದು, ಮಂಜುರವರೇ. ಇಂದು ಅವರುಗಳು ಹೆಚ್ಚು ಜಾಗರೂಕರಾಗಿರಬೇಕಿದೆ.

      ಅಳಿಸಿ
    2. naveengkn
      ಕವಿಗಳೇ ನಮಸ್ತೆ, ನೈಜ‌ ಘಟನೆ ಆಧಾರಿತ‌ ನೀತಿ ಕಥೆ, ಹೃದಯ ವಿದ್ರಾವಕವಾಗಿತ್ತು, ಕಥೆಗಾಗಿ ಧನ್ಯವಾದಗಳು,

      kavinagaraj
      ವಂದನೆಗಳು, ನವೀನರೇ.

      nageshamysore
      ಕವಿಗಳೆ, ಶವಗಳು ಬಂದು ನಮ್ಮೊಡನೆಯೆ ಮಾತನಾಡಿದಂತೆ ಮೂಡಿಸಿದ್ದೀರಾ ನಿರೂಪಣೆಯನ್ನ. ಕಥೆಯ ಖೇದಕ್ಕೆ ಕೊರಗು ನಿರೂಪಣೆಯ ಮುದಕ್ಕೆ ಬೆರಗು ಎರಡು ಒಟ್ಟಾಗಿ ಮೂಡುತ್ತದೆ..ಧನ್ಯವಾದಗಳು.

      kavinagaraj
      ಧನ್ಯವಾದಗಳು, ನಾಗೇಶರೇ.

      H A Patil
      ಕವಿ ನಾಗರಾಜ ರವರಿಗೆ ವಂದನೆಗಳು
      ನಿಮ್ಮ ಮತ್ತು ಗಂಗಮ್ಮಳ ಭೇಟಿ ಮತ್ತು ಮಾತುಕತೆಗಳು ಹೃದಯಸ್ಪರ್ಶಿಯಾಗಿ ಮೂಡಿ ಬಂದಿವೆ, ನಿಮ್ಮ ನಿರೂಪಣ ಕ್ರಮ ಗಂಗಮ್ಮಳ ದುರಂತ ಬದುಕಿನ ಚಿತ್ರವನ್ನು ಸಶಕ್ತವಾಗಿ ಕಟ್ಟಿ ಕೊಟ್ಟಿದೆ. ಆಕೆಯ ಬದುಕು ದುರಂತದಲ್ಲಿ ಕೊನೆಗೊಂಡ ಬಗ್ಗೆ ನನ್ನಲ್ಲಿ ವಿಷಾದವಿದೆ, ಲೇಖನ ಮಾಲೆ ಚೆನ್ನಾಗಿ ಬರುತ್ತಿದೆ ಮುಂದುವರೆಸಿ, ಧನ್ಯವಾದಗಳು.

      kavinagaraj
      ವಂದನೆಗಳು, ಪಾಟೀಲರೇ.

      ಅಳಿಸಿ