ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಆಗಸ್ಟ್ 3, 2014

ರಾಷ್ಟ್ರದ ಭದ್ರತೆ ಮತ್ತು ಅಲ್ಪಸಂಖ್ಯಾತರ ಓಲೈಕೆ

     ಅಬ್ರಹಾಂ ಲಿಂಕನ್ ಹೇಳಿದ್ದ ಪ್ರಸಿದ್ಧ ನುಡಿಯಿದು: 'ಕೇವಲ ಸಂಖ್ಯಾಬಲದ ಬಹುಮತದಿಂದಾಗಿ ಒಂದು ಅಲ್ಪಸಂಖ್ಯಾತ ಗುಂಪನ್ನು ಲಿಖಿತ ಸಂವಿಧಾನದ ಹಕ್ಕಿನಿಂದ ವಂಚಿಸಿದರೆ, ನೈತಿಕತೆಯ ದೃಷ್ಟಿಯಿಂದ, (ಅದರ ವಿರುದ್ಧ) ಕ್ರಾಂತಿಯನ್ನು ಖಂಡಿತವಾಗಿ ಸಮರ್ಥಿಸಬಹುದು, ಅಂತಹ ಹಕ್ಕು ನಿಜಕ್ಕೂ ಒಂದು ಅಮೂಲ್ಯವಾದುದಾದರೆ!' ಭಾರತದಲ್ಲಿ ತದ್ವಿರುದ್ಧ ಪರಿಸ್ಥಿತಿ ಇದ್ದು, ರಾಜಕೀಯ ಕಾರಣಗಳಿಗಾಗಿ ಮತ್ತು ಓಟು ಬ್ಯಾಂಕ್ ಸೃಷ್ಟಿಗಾಗಿ ಅಲ್ಪ ಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳು, ಇತ್ಯಾದಿಯವರನ್ನು  ವಿವಿಧ ರಾಜಕೀಯ ಪಕ್ಷಗಳವರು ಓಲೈಸುತ್ತಿರುವ ರೀತಿ ನೋಡಿದರೆ ಬಹುಸಂಖ್ಯಾತರು ಎನ್ನಿಸಿಕೊಂಡವರೇ ತಮ್ಮ ಹಕ್ಕಿಗೆ ಹೋರಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ಅನ್ನಿಸುತ್ತದೆ. ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಇವರುಗಳನ್ನು ಒಟ್ಟುಗೂಡಿಸಿದರೆ ಉಳಿಯುವವರನ್ನು ಬಹುಸಂಖ್ಯಾತರು ಎನ್ನಲಾಗುವುದಿಲ್ಲ. ವಾಸ್ತವವಾಗಿ ಅವರೇ ಅಲ್ಪ ಸಂಖ್ಯಾತರಾಗಿ ತಮಗೆ ಬರಬೇಕಾದ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಅನ್ನಿಸುವುದಿಲ್ಲವೇ? ಹಿಂದುಳಿದ ಜಾತಿ, ವರ್ಗಗಳಿಗೆ ಸೇರಲು ಹಲವು ಜಾತಿಗಳವರು ಪೈಪೋಟಿ ನಡೆಸುತ್ತಿದ್ದಾರೆ. ಮೀಸಲಾತಿಯಲ್ಲೂ ಒಳಮೀಸಲಾತಿ ಬಗ್ಗೆ ಬೇಡಿಕೆಗಳಿವೆ. ಇದನ್ನೆಲ್ಲಾ ನೋಡಿದರೆ ದೇಶ ಅಭಿವೃದ್ಧಿ ಪಥದಲ್ಲಿ ಮೇಲೆ ಸಾಗುವ ಬದಲಿಗೆ ಕೆಳಕ್ಕೆ ಜಾರುತ್ತಿದೆಯೇನೋ ಎಂದು ಭಾಸವಾಗುತ್ತದೆ. 
     ಅಲ್ಪ ಸಂಖ್ಯಾತರು ಅಂದರೆ ಯಾರು? ವಿವಿಧ ಗುಂಪುಗಳಲ್ಲಿ ಸಣ್ಣ ಗುಂಪನ್ನು ಅಲ್ಪ ಸಂಖ್ಯಾತರೆನ್ನೋಣವೇ? ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಇತ್ಯಾದಿಗಳಲ್ಲಿ ಭಿನ್ನತೆ ಇದ್ದು ಸಂಖ್ಯಾತ್ಮಕವಾಗಿ ಕಡಿಮೆ ಇರುವವರನ್ನು ಅಲ್ಪ ಸಂಖ್ಯಾತರೆನ್ನಬೇಕೆ? ಭಾರತದ ಸಂವಿಧಾನದಲ್ಲಿ ಅಲ್ಪ ಸಂಖ್ಯಾತರು ಎಂಬ ಪದ ಬಳಕೆಯಾಗಿದ್ದರೂ ಅದರ ಅರ್ಥ, ವಿಸ್ತಾರಗಳ ಬಗ್ಗೆ ಏನನ್ನೂ ಹೇಳಿಲ್ಲ. ಅಲ್ಪ ಸಂಖ್ಯಾತರು ಎಂಬ ಕಾರಣದಿಂದ ಅವರ ಭಾಷೆ, ಲಿಪಿ ಅಥವ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಹಕ್ಕಿಗಾಗಿ ೨೯ನೆಯ ವಿಧಿ ರಕ್ಷಣೆ ನೀಡುತ್ತದೆ. ಅಲ್ಪಸಂಖ್ಯಾತರು ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ೩೦ನೆಯ ವಿಧಿ ಅವಕಾಶ ಕೊಡುತ್ತದೆ. ಧರ್ಮ ಅಥವ ಭಾಷೆ ಹೆಸರಿನಲ್ಲಿ ಇಂತಹ ಸಂಸ್ಥೆಗಳಿಗೆ ತಾರತಮ್ಯ ತೋರದಂತೆ ಸಹ ಹೇಳಲಾಗಿದೆ. ಅಲ್ಪ ಸಂಖ್ಯಾತರು ಎಲ್ಲರಂತೆ ಸಾಮಾನ್ಯ ನಾಗರಿಕ ಹಕ್ಕುಗಳನ್ನು ಹೊಂದಿದ್ದು, ಅನುಭವಿಸುತ್ತಿದ್ದು ಇದು ಭಾರತದ ಹೆಗ್ಗಳಿಕೆಯಾಗಿದೆ. ಆದರೂ ಅವರಿಗೆ ಇತರರಿಗಿಂತ ಹೆಚ್ಚು ಸೌಲಭ್ಯ, ಅವಕಾಶಗಳನ್ನು ಕೊಡಲು ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಪೈಪೋಟಿ ಮಾಡುತ್ತಿರುವುದಕ್ಕೆ ಕಾರಣ ನಿಚ್ಛಳವಾಗಿದೆ. ಅವರನ್ನು ಓಟು ಬ್ಯಾಂಕುಗಳಾಗಿ ಪರಿವರ್ತಿಸುವ ಏಕೈಕ ಕಾರಣ ಇಂತಹ ಓಲೈಸುವಿಕೆಯಲ್ಲಿದೆ ಎಂದು ಸಾಮಾನ್ಯರಿಗೂ ಅರ್ಥವಾಗುತ್ತದೆ. ಇದರ ಫಲವಾಗಿ ಅವರುಗಳೂ ಸಹ ತಮ್ಮ ಬೇಕುಗಳನ್ನು ಹಕ್ಕು ಎಂಬಂತೆಯೇ ಮಂಡಿಸಿ ಪಡೆದುಕೊಳ್ಳುತ್ತಿವೆ. ಅಲ್ಪಸಂಖ್ಯಾತರು ಎಂಬ ಕಾರಣದಿಂದ ಶೈಕ್ಷಣಿಕ ಹಕ್ಕುಗಳಿಗೆ ಸಂಬಂಧಿಸಿ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವುದಕ್ಕೆ ಮಾತ್ರ ಅವಕಾಶವಿದೆ. ಅವರ ಉಳಿದೆಲ್ಲಾ ಹಕ್ಕುಗಳು ಸಾಂವಿಧಾನಿಕವಾಗಿ ರಕ್ಷಿತವಾಗಿರುವುದರಿಂದ ಅವರಿಗಾಗಿಯೇ ಪ್ರತ್ಯೇಕ ಸೌಲಭ್ಯಗಳು, ವಿನಾಯಿತಿಗಳನ್ನು ಕೊಡುವುದು ಸಂವಿಧಾನ ವಿರೋಧಿ ಕ್ರಮವಷ್ಟೇ ಅಲ್ಲದೆ ಅವರನ್ನು ಇತರರಿಂದ ಪ್ರತ್ಯೇಕವಾಗಿ ಇರುವಂತೆ ನೋಡಿಕೊಳ್ಳುವ ಹಾಗೂ  ಜಾತ್ಯಾತೀತತೆ ಎಂಬ ಪದಕ್ಕೆ ಅಪಚಾರ ಮಾಡುವ ಕ್ರಮವಾಗುತ್ತದೆ. ಮುಸ್ಲಿಮರಿಗಾಗಿಯೇ ಸರ್ಕಾರಿ ಉದ್ಯೋಗದಲ್ಲಿ ಶೇ. ೫ರಷ್ಟು ಮೀಸಲಾತಿ ನಿಗದಿಸಿದ ಆಂಧ್ರ ಸರ್ಕಾರದ ಕ್ರಮವನ್ನು ನ್ಯಾಯಾಲಯ ಅನೂರ್ಜಿತಗೊಳಿಸಿರುವುದು ಓಲೈಕೆ ರಾಜಕಾರಣ ಮಾಡುವವರ ಕಣ್ತೆರೆಸಬೇಕು. ಅಷ್ಟಾದರೂ ಲೋಕಸಭಾ ಚುನಾವಣೆಯ ವೇಳೆ ಇಂತಹ ಮೀಸಲಾತಿ ನಿಗದಿಸುವುದಾಗಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಮುಂತಾದ ಜಾತ್ಯಾತೀತವೆಂದು ಕರೆದುಕೊಳ್ಳುವ ಪಕ್ಷಗಳು ಘೋಷಿಸಿದ್ದು ಅವರುಗಳ ಓಟು ಪಡೆಯುವ ಸಲುವಾಗಿಯೇ ಆಗಿತ್ತು. ಓಟಿಗಾಗಿ ಸಂವಿಧಾನದ ವಿಧಿಗಳನ್ನೇ ಉಲ್ಲಂಘಿಸುವ ಮಾತನಾಡುವುದು ಎಷ್ಟು ಸರಿ ಎಂಬುದನ್ನು ಪ್ರಜ್ಞಾವಂತರು ಯೋಚಿಸಬೇಕು. ಭಾರತದ ಅಲ್ಪ ಸಂಖ್ಯಾತರ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಉದ್ದೇಶಿಸಿದ್ದ ೨೦೦೪ರ ಸಂವಿಧಾನ ತಿದ್ದುಪಡಿ ಮಸೂದೆ ಈಗ ಲ್ಯಾಪ್ಸ್ ಆದ ಸ್ಥಿತಿಯಲ್ಲಿದೆ. ಸರ್ವೋಚ್ಛ ನ್ಯಾಯಾಲಯವು ಅಲ್ಪ ಸಂಖ್ಯಾತರು ಎಂಬುದಕ್ಕೆ ನಿರ್ಧರಿಸಲು ಮಾನದಂಡಗಳ ಬಗ್ಗೆ ನಿಗದಿಸಲು ಸರ್ಕಾರಕ್ಕೆ ಸೂಚಿಸಿದೆ. ಈ ಕೆಲಸ ಇನ್ನೂ ಆಗಬೇಕಿದೆ. ಸರ್ಕಾರವು ಮುಸ್ಲಿಮರು, ಕ್ರಿಶ್ಚಿಯನರು, ಸಿಕ್ಖರು, ಬೌದ್ಧರು ಮತ್ತು ಪಾರ್ಸಿಗಳನ್ನು ಅಲ್ಪಸಂಖ್ಯಾತರೆಂದು ಗುರುತಿಸಿದೆ. 
     ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪ್ರೊ. ಜೋಯ ಹಸನ್ ಒಂದು ಲೇಖನದಲ್ಲಿ ಪ್ರತಿಪಾದಿಸಿರುವ ಅಂಶಗಳಿವು: "ರಾಜ್ಯ ಸರ್ಕಾರಗಳೊಡನೆ ಸಮಾಲೋಚಿಸಿ ಅಲ್ಪಸಂಖ್ಯಾತರನ್ನು ಗುರುತಿಸುವ ವಿಧಾನದ ಬಗ್ಗೆ ಕೇಂದ್ರ ಸಂಪುಟ ಪ್ರಸ್ತಾವನೆಯನ್ನು ಒಪ್ಪಿದೆಯೆಂದು ಹೇಳಲಾಗಿದೆ. ಈ ಸಮಾಲೋಚನೆಯಿಂದ ಮೇಲೆ ಹೇಳಿದ ಐದು ಅಲ್ಪಸಂಖ್ಯಾತರಲ್ಲದೆ (ಮುಸ್ಲಿಮರು, ಕ್ರಿಶ್ಚಿಯನರು, ಸಿಕ್ಖರು, ಬೌದ್ಧರು ಮತ್ತು ಪಾರ್ಸಿಗಳು) ಹೊಸದಾಗಿಯೂ ಅಲ್ಪಸಂಖ್ಯಾತರನ್ನು ಗುರುತಿಸಲು ಉದ್ದೇಶಿಸಿದೆ. ಸಂವಿಧಾನವು ಅಲ್ಪಸಂಖ್ಯಾತರ ಕುರಿತು ವಿವರಿಸಿಲ್ಲವಾದರೂ, ಈ ಅಲ್ಪಸಂಖ್ಯಾತ ಅನ್ನುವುದನ್ನು ರಾಷ್ಟ್ರಮಟ್ಟದಲ್ಲಿ ನಿರ್ಧರಿಸುವ ಅಗತ್ಯವಿದೆ. ಹಲವಾರು ವರ್ಷಗಳಲ್ಲಿ ನ್ಯಾಯಾಂಗವು ಅಲ್ಪಸಂಖ್ಯಾತ ಅನ್ನುವುದರ ವ್ಯಾಖ್ಯೆಯನ್ನು ಶಿಕ್ಷಣಕ್ಕೆ ಸೀಮಿತಗೊಳಿಸಿ ವ್ಯಾಖ್ಯಾನಿಸಿದೆ. ಈ ಕುರಿತು ರಾಷ್ಟ್ರವ್ಯಾಪಿ ನಿರ್ಧಾರಕ್ಕೆ ಬರಬೇಕು. ಅಂತರ ರಾಷ್ಟ್ರೀಯವಾಗಿ ಕೆಲವು ನಿದರ್ಶನಗಳಿವೆ. ಸಾಮಾನ್ಯವಾಗಿ ಗುಂಪುಗಳು ತಾರತಮ್ಯಕ್ಕೆ ಒಳಗಾಗುವ ಗುಣವಿಶೇಷಗಳೆಂದರೆ ಧರ್ಮ, ಭಾಷೆ, ಸಂಸ್ಕೃತಿ ಮತ್ತು ಲಿಂಗ. ಅಲ್ಪಸಂಖ್ಯಾತ ಅನ್ನುವುದು ಅಧಿಕಾರದ ಸಂಬಂಧಕ್ಕೂ ಅನ್ವಯಿಸುತ್ತದೆ. ಈಗಿನ ಪ್ರಸ್ತಾವನೆ ಅಂಕಿ-ಅಂಶಗಳನ್ನು ಆಧರಿಸಿ ನಿರ್ಧಾರಕ್ಕೆ ಬರುವುದನ್ನು ಹೇಳುತ್ತದೆ. ಇದು ಗುಣಾತ್ಮಕವಾಗಿ ಸರಿಯಾಗಲಾರದು. ಅಲ್ಪಸಂಖ್ಯಾತ ಅನ್ನುವುದಕ್ಕೆ ಒಂದು ಹೆಚ್ಚಿನ ಅರ್ಥಪೂರ್ಣ ರೀತಿಯಲ್ಲಿ ನೋಡಬೇಕೆಂದರೆ ದೇಶದಲ್ಲಿ ಅವರು ದೇಶದಲ್ಲಿ (ನಿರ್ದಿಷ್ಟ ರಾಜ್ಯದಲ್ಲಲ್ಲ) ಪ್ರಭಾವಯುತವಾದ ಪ್ರಧಾನ ಅಧಿಕಾರದ ಸ್ಥಾನಗಳಲ್ಲಿ ಇರದಿರುವುದು, ಪ್ರತಿನಿಧಿಸದಿರುವುದು ಅಥವ ಕಡಿಮೆ ಸಂಖ್ಯೆಯಲ್ಲಿ ಪ್ರತಿನಿಧಿಸಿರುವುದು, ಇವುಗಳನ್ನು ಪರಿಗಣಿಸಬೇಕು. ಇದರಿಂದ ಅಲ್ಪಸಂಖ್ಯಾತರು ತಮ್ಮ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವದನ್ನು ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ." ಅಧಿಕಾರಕೇಂದ್ರಿತವಾಗಿ ಅಲ್ಪಸಂಖ್ಯಾತ ಅನ್ನುವುದನ್ನು ಗುರುತಿಸುವ ಕ್ರಮವನ್ನು ಒತ್ತಾಸುವ ಈ ವಿಚಾರದ ಹಿಂದಿರುವ ಅಪಾಯವನ್ನು ನಾಗರಿಕರು ಅರಿಯಬೇಕು. ಇದು ಸಂವಿಧಾನ ವಿರೋಧಿಯಾಗಿದ್ದು ಭಾರತದ ಜಾತ್ಯಾತೀತ ನೀತಿಗೆ ಸಲ್ಲದುದಾಗಿದೆ.

   ಸಂವಿಧಾನದ ೧೯ನೆಯ ವಿಧಿಯಲ್ಲಿ ಭಾರತದ ಪ್ರಜೆಗಳಿಗೆ ದತ್ತವಾಗಿರುವ ಸ್ವಾತಂತ್ರ್ಯಗಳ ವಿವರಗಳಿವೆ. ಇದರಲ್ಲಿ ಯಾರನ್ನೇ ಆಗಲಿ ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿ, ಇತ್ಯಾದಿಗಳ ಹೆಸರಿನಲ್ಲಿ ತಾರತಮ್ಯ ಮಾಡಲಾಗಿಲ್ಲ. ಆದರೆ ಅಂತಹ ಪ್ರತಿಯೊಂದು ಸ್ವಾತಂತ್ರ್ಯಕ್ಕೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿರ್ಬಂಧವಿದೆ - ಅದು ಸಾಮಾನ್ಯ ವಿಷಯಕ್ಕೆ ಸಂಬಂಧಿಸಿದ ಸಮರ್ಥನೀಯ ನಿರ್ಬಂಧ - ಅದೆಂದರೆ ರಾಷ್ಟ್ರದ ಭದ್ರತೆ. ಸಂವಿಧಾನ ರಚನಾಕಾರರು ರಾಷ್ಟ್ರದ ರಕ್ಷಣೆ ವಿಷಯದಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ಸರ್ವೋಚ್ಛ ನ್ಯಾಯಾಲಯದ ಜಸ್ಟಿಸ್ ಆಗಿದ್ದ ಶ್ರೀ ಕೆ.ಟಿ. ಥಾಮಸ್ ಅವರು 'ವೋಟು ಬ್ಯಾಂಕುಗಳ ಸಲುವಾಗಿ ದೇಶದ ಭದ್ರತೆಯ ವಿಷಯಗಳಲ್ಲಿ ಸರ್ಕಾರ ಅನೇಕ ರೀತಿಗಳಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಿರುವುದನ್ನು ಕಂಡು ನಾನು ವಿಚಲಿತನಾಗಿದ್ದೇನೆ' ಎಂದು ಸಾರ್ವಜನಿಕವಾಗಿ ಹೇಳಿದ್ದುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಉಗ್ರಗಾಮಿಗಳು ಒಂದು ಕೋಮಿಗೆ ಸೇರಿದವರೆಂದು, ಅವರ ವಿರುದ್ಧದ ಕ್ರಮಗಳಿಂದ ಅವರ ಕೋಮಿನ ಮತಗಳಿಕೆಗೆ ಅಡ್ಡಿಯಾಗುತ್ತದೆಂದು ಮೃದುಧೋರಣೆ ವಹಿಸುವುದು, ನೆರೆರಾಷ್ಟ್ರದ ಅಪ್ರಚೋದಿತ ದಾಳಿಗಳನ್ನು ಕಂಡೂ ಕಾಣದಂತೆ ಸುಮ್ಮನಿದ್ದುದು, ಇತ್ಯಾದಿಗಳು ರಾಷ್ಟ್ರದ ಭದ್ರತೆಗಿಂತ ಮತಗಳಿಕೆ ಮುಖ್ಯವಾಗಿತ್ತಂಬುದನ್ನು ತೋರಿಸುತ್ತವೆ. ಅಪರಾಧಗಳನ್ನು ಯಾರು ಮಾಡಿದರೂ ಅಪರಾಧವೇ. ಆದರೆ ಅಲ್ಪಸಂಖ್ಯಾತರ ವಿರುದ್ಧದ ಆರೋಪಗಳನ್ನು ಮೃದುವಾಗಿ ಪರಿಗಣಿಸಬೇಕೆಂಬ ಸುತ್ತೋಲೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸುವುದರ ಹಿಂದಿನ ಉದ್ದೇಶ ತಿಳಿಯುವುದು ಕಷ್ಟವಲ್ಲ. ಬಾಂಗ್ಲಾ ನುಸುಳುಕೋರರ ಪರವಾಗಿ ಕಾಂಗ್ರೆಸ್ ಪಕ್ಷದ ಮತ್ತು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ನಾಯಕರು ಬಹಿರಂಗವಾಗಿ ಸಮರ್ಥಿಸುತ್ತಾರೆಂದರೆ ತಲುಪುವ ಸಂದೇಶವೇನು? ಗಡಿಯಾಚೆಗಿನ ನಿಷ್ಠೆ ಹೊಂದಿದ್ದು ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವವರು, ದೇಶಕ್ಕಿಂತ ನಮಗೆ ಧರ್ಮ ಮುಖ್ಯವೆನ್ನುವವರು, ೧೫ ನಿಮಿಷ ಪೋಲಿಸರು ಸುಮ್ಮನಿದ್ದರೆ ಬಹುಸಂಖ್ಯಾತರನ್ನು ಹೊಸಕಿ ಹಾಕಿಬಿಡುತ್ತೇವೆಂದು ಘೋಷಿಸುವವರು, ಅವರನ್ನು ಬಹಿರಂಗವಾಗಿ ಬೆಂಬಲಿಸುವ ಸಾವಿರಾರು ಜನರು ಇರುವುದು, ಇತ್ಯಾದಿಗಳು ದೇಶದ ಭದ್ರತೆಗಿಂತ ಮತಗಳಿಕೆಗೆ ಪ್ರಾಧಾನ್ಯ ನೀಡಿ ಮಾಡಿದ ಓಲೈಕೆಯ ಫಲಗಳಾಗಿವೆ. ಭಾರತದ ರಕ್ಷಣಾ ಮಂತ್ರಿಯಾಗಿದ್ದ ಎ.ಕೆ. ಅಂಟನಿಯವರೇ, 'ಅಲ್ಪಸಂಖ್ಯಾತರ ಅತಿಯಾದ ಓಲೈಕೆಯೇ ಕಾಂಗ್ರೆಸ್ ಸೋಲಿಗೆ ಕಾರಣ' ಎಂದಿರುವುದು ಆಘಾತಕಾರಿ ನೈಜ ಸತ್ಯದ ಅನಾವರಣವಷ್ಟೆ. ಇತ್ತೀಚಿನ ಬೆಳವಣಿಗೆಯನ್ನೂ ನಾವು ಗಂಭೀರವಾಗಿ ನೋಡಬೇಕಿದೆ. ಇರಾಕಿಗೆ ತೆರಳಲು ಸಾವಿರಾರು ಮುಸ್ಲಿಮರು ವೀಸಾ ಕೇಳುತ್ತಿದ್ದಾರೆಂದು, ಹಲವರು ಶಿಯಾಗಳ ಪರವಾಗಿ, ಹಲವರು ಸುನ್ನಿಗಳ ಪರವಾಗಿ ಹೋರಾಡುವ ಸಲುವಾಗಿ ಹೋಗುತ್ತಿದ್ದಾರೆಂದು ಟಿವಿಗಳಲ್ಲಿ ಸುದ್ದಿ ಬಿತ್ತರವಾಗುತ್ತಿದೆ. ದೇಶದಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳು, ರಕ್ತಪಾತಗಳ ಬಗ್ಗೆ ಸುಮ್ಮನಿರುವ ಇವರು ಇರಾಕಿನ ಬೆಳವಣಿಗೆಗಳ ಬಗ್ಗೆ ಆಸಕ್ತರಾಗಿದ್ದಾರೆ ಅನ್ನುವುದು ಕಳವಳಕಾರಿ ವಿಷಯವಲ್ಲವೇ?  ದೇಶದ ಭದ್ರತೆ ಆಳುವ ಸರ್ಕಾರದ ಪ್ರಥಮ ಆದ್ಯತೆಯಾಗಲೇಬೇಕು. ಇಲ್ಲದಿದ್ದರೆ ವಿಭಜನಕಾರಿ ಶಕ್ತಿಗಳು ವಿಜೃಂಭಿಸುತ್ತವೆ. ಜಾತಿ, ಮತ, ಧರ್ಮದ ಹೆಸರಿನಲ್ಲಿ ಮಾಡುವ ಓಲೈಕೆಗಳು ಸಮಾಜವನ್ನು ವಿಭಜಿಸುವುದಷ್ಟೇ ಅಲ್ಲ, ದೇಶವನ್ನು ಕೆಳಕ್ಕೆ ಜಾರಿಸುವ ನಡೆಗಳು ಮತ್ತು ಜಾತ್ಯಾತೀತೆಗೆ ಮಾಡುವ ಅಪಚಾರವಾಗುತ್ತದೆ.
      ಝಾಕಿರ್ ಹುಸೇನರು ಭಾರತದ ರಾಷ್ಟ್ರಪತಿಯಾದಾಗ ಜರ್ನಲಿಸ್ಟ್ ಟಿ.ವಿ.ಆರ್. ಶೆಣೈರವರು ಅವರನ್ನು ಕಂಡು, "ರಾಷ್ಟ್ರಪತಿಜಿ, ನಾನು ತಮ್ಮನ್ನು ಅಭಿನಂದಿಸುತ್ತೇನೆ, ಎಕೆಂದರೆ ಇದು ಒಂದು ಭಾರತದಲ್ಲಿನ ಜಾತ್ಯಾತೀತೆಯ ದೊಡ್ಡ ಜಯ" ಎಂದಿದ್ದರು. ಝಾಕಿರ್ ಹುಸೇನರು 'ಇದು ಯಾವ ರೀತಿಯಲ್ಲಿ ಜಾತ್ಯಾತೀತತೆಯ ವಿಜಯ?' ಎಂದು ಕೇಳಿದರು. 'ಒಬ್ಬ ಮುಸ್ಲಿಮ್ ಭಾರತದ ರಾಷ್ಟ್ರಪತಿಯಾಗುತ್ತಾರೆಂದರೆ ಅದು ಜಾತ್ಯಾತೀತತೆಯ ದೊಡ್ಡ ವಿಜಯ'ವೆಂಬುದು ಶೆಣೈರವರ ಉತ್ತರ. ಝಾಕಿರ್ ಹುಸೇನರು ಅವರೆಡೆಗೆ ನೋಡಿ ಮುಗುಳ್ನಕ್ಕರು. ಶೆಣೈ ಕೇಳಿದರು, "ಏಕೆ ರಾಷ್ಟ್ರಪತಿಜಿ, ನೀವು ನನ್ನನ್ನು ನೋಡಿ ನಗುತ್ತಿದ್ದೀರಿ?" ಅವರು ಉತ್ತರಿಸಿದರು, "ಶೆಣೈ, ಜಾತ್ಯಾತೀತತೆಯ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿ ನನಗೆ ನಗು ಬಂತು." ಅವರು ಮುಂದೆ ಹೇಳಿದರು, "ಭಾರತದಲ್ಲಿ ಎಂದು ನೀವು ನನ್ನನ್ನು ಧರ್ಮದಿಂದ ಗುರುತಿಸುವುದಿಲ್ಲವೋ ಅಂದು ಮಾತ್ರ ಭಾರತದಲ್ಲಿ ಜಾತ್ಯಾತೀತತೆ ಸಾಧ್ಯವಾಗುತ್ತದೆ!" ಇದು ಜಾತ್ಯಾತೀತತೆಯ ನೈಜ ವ್ಯಾಖ್ಯಾನ. ಜಾತ್ಯಾತೀತತೆಗೂ ಧರ್ಮಕ್ಕೂ, ಜಾತಿಗಳಿಗೂ ಯಾವುದೇ ಸಂಬಂಧವಿಲ್ಲ, ಸಂಬಂಧ ಕಲ್ಪಿಸಲೂಬಾರದು. ನಮ್ಮ ನಮ್ಮ ನಂಬಿಕೆಗಳು, ಜಾತಿಗಳು, ಧರ್ಮಗಳು ಏನೇ ಇರಲಿ ಅವು ನಮಗೆ ಸಂಬಂಧಿಸಿದ ವೈಯಕ್ತಿಕ ವಿಷಯಗಳು. ಅವನ್ನು ಉಳಿಸಿಕೊಳ್ಳುವುದು, ಬೆಳೆಸುವುದು ನಮಗೆ ಬಿಟ್ಟಿದ್ದು. ಆದರೆ ನಮ್ಮ ಪ್ರಾಥಮಿಕ ನಿಷ್ಠೆ ಮಾತ್ರ ಈ ದೇಶಕ್ಕೆ ಇರಬೇಕು. ಆಗ ಮಾತ್ರ ಈ ದೇಶಕ್ಕೆ ಉಳಿವು.
-ಕ.ವೆಂ.ನಾಗರಾಜ್.
**************
   Article 29 in The Constitution Of India 1949
    29. Protection of interests of minorities
(1) Any section of the citizens residing in the territory of India or any part thereof having a distinct language, script or culture of its own shall have the right to conserve the same
(2) No citizen shall be denied admission into any educational institution maintained by the State or receiving aid out of State funds on grounds only of religion, race, caste, language or any of them
Article 30 in The Constitution Of India 1949
30. Right of minorities to establish and administer educational institutions
(1) All minorities, whether based on religion or language, shall have the right to establish and administer educational institutions of their choice
(1A) In making any law providing for the compulsory acquisition of any property of an educational institution established and administered by a minority, referred to in clause ( 1 ), the State shall ensure that the amount fixed by or determined under such law for the acquisition of such property is such as would not restrict or abrogate the right guaranteed under that clause
(2) The state shall not, in granting aid to educational institutions, discriminate against any educational institution on the ground that it is under the management of a minority, whether based on religion or language.
***********
ದಿ.30.7.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಪತ್ರಿಕೆಯಲ್ಲಿ ಪ್ರಕಟಿತ

25.8.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ:

6 ಕಾಮೆಂಟ್‌ಗಳು:

  1. ಇದನ್ನು ನಮ್ಮ ಮೂರ್ಖ ರಾಜಕಾರಣಿಗಳಿಗೆ ಇನ್ನು ಹೇಗೆ ಅರ್ಥ ಮಾಡಿಸುವುದು. ಮೊದಲು ನಮ್ಮ ಒಳಗೆ ಇರುವ ದೇಶ ದ್ರೋಹಿಗಳನ್ನು ಕಂಡು ಹಿಡಿದು ಅವರ್ನೆಲ್ಲ ಗಡಿ ಪಾರು ಮಾಡಿ. ಇವರೆಲ್ಲ ರಾಷ್ಟ್ರ ನಾಯಕರುಗಳಾಗಿ, ಬುದ್ಧಿಜೀವಿಗಳಾಗಿ, ವಾಣಿಜ್ಯೊದಮಿಗಳಾಗಿ, ಬೇರೆ ದೇಶದಲ್ಲಿ ನೆಲೆಸಿರುವ ನಮ್ಮ ಪ್ರತಿಭಾವಂತರಾಗಿ, ಇನೂ ಏನೇನೋ ಆಗಿ ಇರಬಹುದು. ಯಾವ ಮುಲ್ಲಾಜು ಇಲ್ಲದೆ, ಯಾವ ಮೀಸಲಾತಿಯನ್ನು ನೀಡದೆ ಇವರುಗಳ ಮೇಲೆ ಮೊದಲು ಕ್ರಮ ಜರುಗಿಸಿ. ಆಮೇಲೆ ನಮ್ಮ ಪ್ರಕಟಿತ ಶತ್ರುಗಳನ್ನು ದಮನಿಸುವುದು ಸುಲಭವಾಗುವುದು. ಇದಕ್ಕಾಗಿ ನಿಜವಾದ ರಾಷ್ಟ್ರ ಭಕ್ತಿ ಇರುವ ಮಹಾನ್ ನಾಯಕನ ಅವಶ್ಯಕತೆ ಇಂದು ಇದೆ.

    ಪ್ರತ್ಯುತ್ತರಅಳಿಸಿ
  2. ರಾಜಕಾರಣಿಗಳಿಗಿಂತ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆದ್ಯತೆಯಿಂದ ಮಾಡಬೇಕಿದೆ. ಧನ್ಯವಾದಗಳು, ಗುಣರವರೇ.

    ಪ್ರತ್ಯುತ್ತರಅಳಿಸಿ
  3. ತಪ್ಪು ತಿಳಿದುಕೊಳ್ಳಬೇಡಿ ಕವಿವರ್ಯ. ಇಂತಹ ಅಸಹ್ಯಕ್ಕೆಲ್ಲ ರಾಜಕಾರಣಿಗಳೇ ಮೂಲಕಾರಕರು.

    ಪ್ರತ್ಯುತ್ತರಅಳಿಸಿ
  4. :) ನಮಸ್ತೆ, ಬದರೀನಾಥರೇ. ಆ ರಾಜಕಾರಣಿಗಳನ್ನು ಮುಂದೆ ತರುವವರು ಜನರೇ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. nageshamysore
      ಕವಿಗಳೆ ನಮಸ್ಕಾರ. ಕೇವಲ ರಾಜಕೀಯ ಪ್ರೇರಿತ ಉದ್ದೇಶಗಳಿಂದ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಹಣೆಪಟ್ಟಿಯನ್ನು ಗುರುತಿಸುವಂತಾದರೆ ಹೆಚ್ಚುಕಡಿಮೆ ಎಲ್ಲರೂ ಒಂದಲ್ಲ ಒಂದು ಅಲ್ಪಸಂಖ್ಯಾತ ಗುಂಪಿಗೆ ಸೇರಿ (ಬಹುಸಂಖ್ಯಾತರದೆ ಮತ್ತೊಂದು ಅಲ್ಪಸಂಖ್ಯಾತ ಗುಂಪಾಗಿ) ಸಕಲ ಸವಲತ್ತನ್ನು ಹಂಚಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಹಾಗಾದಾಗ ಹಂಚಿಕೆಯ ಮೂಲೋದ್ದೇಶದ ಅನುಕೂಲವೆ ಮಾಯವಾಗಿ ಒಂದು ರೀತಿ ಮೊದಲಿದ್ದ ಸ್ಥಿತಿಯೆ ಮರುಕಳಿಸುವುದು ವಿಪರ್ಯಾಸವಾದರೂ ಅದು ನೈಜ ಪರಿಸ್ಥಿತಿಗೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು. ಜಾಕೀರ್ ಹುಸೇನರ ಮಾತು ಅಕ್ಷರ ಶಃಸತ್ಯ - ಜಾತಿ ಮತ ಧರ್ಮಗಳಿಂದ ಗುರುತಿಸದ ದಿನ ಬರುವ ತನಕ ಅದು ನಿಜವಾದ ಜಾತ್ಯಾತೀತತೆ ಅಲ್ಲ. ಶೋಚನೀಯ ಸ್ಥಿತಿಯೆಂದರೆ ನಮ್ಮಲ್ಲೂ ಪ್ರಕಟವಾಗಿಯೊ ಅಪ್ರಕಟವಾಗಿಯೊ ಆ ಮನಸ್ಥಿತಿ ಒಂದಲ್ಲ ಒಂದು ರೀತಿ ಅಂತರಾಳದಲ್ಲಿ ಬೇರೂರಿಕೊಂಡು ಕೂತುಬಿಟ್ಟಿದ್ದು ಆಗಾಗ್ಗೆ ಹೊರಗೆ ಬಿದ್ದು ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ರೀತಿ. ಅದು ಪೂರ್ಣವಾಗಿ ಅಳಿಸಿ ಹೋದಾಗಷ್ಟೆ ನೈಜ ಭಾರತೀಯ ಪ್ರಜ್ಞೆ ವಿಕಸಿಸಲು ಸಾಧ್ಯ, ನಿಜವಾದ ಅರ್ಥದಲ್ಲಿ.

      kavinagaraj
      ಧನ್ಯವಾದಗಳು, ನಾಗೇಶರೇ. ಪಾಪದ ಕೊಡ ತುಂಬಲು ಇನ್ನೂ ಎಷ್ಟು ಸಮಯ ಬೇಕೋ ತಿಳಿಯದು.

      ಅಳಿಸಿ