ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಜುಲೈ 31, 2014

ನಾವು ನಾಗರಿಕರಾ?


     ರಸ್ತೆಯಲ್ಲಿ ನಾಯಿಯನ್ನು ಹಿಡಿದುಕೊಂಡು ಬೆಳಗಿನ ಸಮಯದಲ್ಲಿ ವಾಕಿಂಗ್ ಹೋಗುವವರನ್ನು ನೋಡುತ್ತಿರುತ್ತೇವೆ. ನಿಜ ಹೇಳಬೇಕೆಂದರೆ ಅವರು ಅದನ್ನು ವಾಕಿಂಗಿಗೆ ಕರೆದುಕೊಂಡು ಹೋಗುತ್ತಾರೆ ಅನ್ನುವುದಕ್ಕಿಂತ ಅದರ ಪ್ರಾತರ್ವಿಧಿಗಳನ್ನು ಬೇರೆಯವರ ಮನೆಗಳ ಮುಂದೆ ಅಥವ ಸಾರ್ವಜನಿಕ ಸ್ಥಳಗಳಲ್ಲಿ ಮಾಡಿಸುವ ಸಲುವಾಗಿ ಕರೆದೊಯ್ಯುವುದು ಎಂದರೆ ಹೆಚ್ಚು ಸರಿಯಾದೀತು. ಅಮೆರಿಕಾದಲ್ಲಿ ಮತ್ತು ಜಪಾನಿನಲ್ಲಿ ನಾಯಿಯ ವಿಸರ್ಜನೆಯನ್ನು ಅದರ ಮಾಲಿಕರೇ ತೆಗೆದು ಶುದ್ಧಗೊಳಿಸಿ ಸೂಕ್ತ ಸ್ಥಳದಲ್ಲಿ ಹಾಕುತ್ತಾರೆ. ನಮ್ಮಲ್ಲಿ? ನಮ್ಮ ಮನೆಯ ಮುಂದೇನಾದರೂ ಹೀಗಾದರ ನಾಯಿಯ ಮಾಲಿಕರ ವಿರುದ್ದ ಜಗಳವಾಡುತ್ತೇವೆ, ಗಂಟಲು ಶೋಷಣೆಯೊಂದೇ ಆಗುವ ಲಾಭ! ಅಥವ, ನಗರಸಭೆ, ಪುರಸಭೆ, ಪಂಚಾಯಿತಿಗಳನ್ನು ದೂಷಿಸುತ್ತೇವೆ. ಊರು ಎಷ್ಟು ಕೊಳಕಾಗಿದೆ, ಅದನ್ನು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು  ಆಪಾದಿಸುತ್ತೇವೆ. ನಮ್ಮ ಮನೆಯ ಮತ್ತು ಮನೆಯ ಮುಂದಿನ ಕಸವನ್ನು ನಮ್ಮ ಮನೆಯ ವ್ಯಾಪ್ತಿಯ ಹೊರಗೆ ಅಥವ ಖಾಲಿ ನಿವೇಶನದಲ್ಲಿ ದೂಡಿಬಿಡುತ್ತೇವೆ, ಮುಂದಿನ ಕೆಲಸ ನಮ್ಮದಲ್ಲವೆಂಬಂತೆ. ನಿಜ, ನಗರ ಮತ್ತು ಸ್ಥಳೀಯ ಸಂಸ್ಥೆಗಳೂ ಸಹ ತಮ್ಮ ಜವಾಬ್ದಾರಿಯ ನಿರ್ವಹಣೆಯಲ್ಲಿ ಹಿಂದಿವೆ. ಆದರೆ ನಮ್ಮ ಊರನ್ನು ಕೊಳಕಾಗಿಸುವಲ್ಲಿ ನಮ್ಮ ಪಾತ್ರವೂ ಇದೆಯೆಂಬುದನ್ನು ಮರೆತುಬಿಡುತ್ತೇವೆ.
     ನಿಂತಿರುವ ಅಥವ ಚಲಿಸುತ್ತಿರುವ ಬಸ್ಸಿನ ಪಕ್ಕದಲ್ಲಿ ಹೋಗುವಾಗ ಎಚ್ಚರಿಕೆಯಿಂದ ಇರುವ ಪರಿಸ್ಥಿತಿ ಇದೆ. ಯಾರು, ಯಾವಾಗ ಬಸ್ಸಿನಿಂದ ಹೊರಗೆ ಉಗುಳುತ್ತಾರೋ, ವಾಂತಿ ಮಾಡುತ್ತಾರೋ, ತಿಂದ ಬಾಳೆಹಣ್ಣು, ಕಿತ್ತಳೆಹಣ್ಣು, ಇತ್ಯಾದಿಗಳ ಸಿಪ್ಪೆಗಳು, ಬಿಸ್ಕತ್ತಿನ ಅಥವ ತಿಂಡಿಯ ಪ್ಯಾಕೆಟ್ಟುಗಳನ್ನು ಹೊರಗೆ ಎಸೆಯುತ್ತಾರೋ ಗೊತ್ತಿಲ್ಲ. ಇನ್ನು ಬಸ್ಸಿನ ಒಳಗೋ, ತಿಂದ ಕಡಲೆಕಾಯ ಸಿಪ್ಪೆಯೂ ಸೇರಿದಂತೆ ಇತರ ತ್ಯಾಜ್ಯಗಳು ಬಿದ್ದಿರುತ್ತವೆ. ಬಸ್ಸಿನ ಸೀಟುಗಳ ಕವರುಗಳು, ಸೀಟಿನ ಸ್ಪಂಜುಗಳು ಪ್ರಯಾಣಿಕರ ಕೈಚಳಕಕ್ಕೆ ತುತ್ತಾಗಿರುತ್ತವೆ. ಬಸ್ಸು ಎಷ್ಟು ಗಲೀಜಾಗಿದೆ, ಸರಿಯಾಗಿ ನಿರ್ವಹಿಸುತ್ತಿಲ್ಲವೆಂದು ದೂರುವವರೂ ನಾವೇನೇ! 
     ನಾವು ದೂರುತ್ತೇವೆ, ದೂರುತ್ತೇವೆ, ದೂರುತ್ತೇವೆ, ದೂರುತ್ತಲೇ ಇರುತ್ತೇವೆ. ಈ ಸರ್ಕಾರ ಸರಿಯಿಲ್ಲ, ಅದು ಮಾಡಿಲ್ಲ, ಇದು ಮಾಡಿಲ್ಲ, ಎಲ್ಲೆಲ್ಲೂ ಅನ್ಯಾಯ ನಡೆಯುತ್ತಿದೆ, ನಮ್ಮ ಕಾನೂನುಗಳು ಪ್ರಯೋಜನವಿಲ್ಲ, ಲಂಚ ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ, ದುಡ್ಡು ಇರುವವರದೇ ಮತ್ತು ರೌಡಿಗಳದೇ ದರ್ಬಾರು, ಬಡವರನ್ನು ಯಾರೂ ಕೇಳುವುದೇ ಇಲ್ಲ, ಸರ್ಕಾರ ಅನ್ನುವುದು ಇಲ್ಲವೇ ಇಲ್ಲ, ಫೋನು ಸರಿಯಿಲ್ಲ, ಬಸ್ಸು ಸರಿಯಿಲ್ಲ, ರಸ್ತೆ ಸರಿಯಿಲ್ಲ, ನೀರು ಬರುವುದೇ ಇಲ್ಲ, ತರಕಾರಿ, ದವಸ ಧಾನ್ಯಗಳನ್ನು ಕೊಳ್ಳುವಂತೆಯೇ ಇಲ್ಲ, ನಗರಸಭೆ ಸೌಲಭ್ಯಗಳನ್ನು ಕಲ್ಪಿಸುವುದೇ ಇಲ್ಲ, ನ್ಯಾಯ, ನೀತಿ, ಧರ್ಮಗಳಿಗೆ ಬೆಲೆಯೇ ಇಲ್ಲ, ಇತ್ಯಾದಿ ಹೇಳುತ್ತೇವೆ, ಹೇಳುತ್ತೇವೆ, ಹೇಳುತ್ತೇವೆ, ಹೇಳುತ್ತಲೇ ಇರುತ್ತೇವೆ. ನಮ್ಮ ದೂರು, ದುಃಖ, ದುಮ್ಮಾನಗಳಿಗೆ ಕೊನೆಯೇ ಇರುವುದಿಲ್ಲ. 
     ಹೊರದೇಶಗಳಿಗೆ ಹೋಗಿಬಂದವರು ಆ ದೇಶಗಳು ಎಷ್ಟು ಸ್ವಚ್ಛವಾಗಿವೆ ಎಂದು ಬಣ್ಣಿಸುತ್ತಾ ನಮ್ಮ ದೇಶದ ಕೊಳಕನ್ನು ಹಂಗಿಸುವುದನ್ನು ಕಾಣುತ್ತಿರುತ್ತೇವೆ. ಅಲ್ಲಿ ಸ್ವಚ್ಚವಾಗಿರಲು ಕಾರಣಗಳೂ ಇವೆ. ಅಲ್ಲಿ ಜನರು (ಹೊರದೇಶಕ್ಕೆ ಹೋಗಿಬಂದವರೂ ಸೇರಿದಂತೆ) ಅಂಗಡಿಗಳ ಮುಂದೆ ನಿಂತು ಬಾಳೆಹಣ್ಣು ತಿಂದು ಸಿಪ್ಪೆಯನ್ನು ರಸ್ತೆಗೆ ಬಿಸಾಡುವುದಿಲ್ಲ. ಸಿಗರೇಟು ಸೇದಿ ಸಿಗರೇಟು, ಬೀಡಿಗಳ ತುಂಡನ್ನು ಎಲ್ಲೆಂದರೆ ಅಲ್ಲಿ ಬಿಸಾಕುವುದಿಲ್ಲ. ಹೇಳಬೇಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾಡಲು ಅಲ್ಲಿ ಅವಕಾಶವೇ ಇಲ್ಲ, ಮಾಡುವುದೂ ಇಲ್ಲ. ಅಲ್ಲಿ ಇರುವವರೂ ಜನರೇ, ಇಲ್ಲಿ ಇರುವವರೂ ಜನರೇ. ಇಲ್ಲಿ 'ಧೂಮಪಾನ ನಿಷೇಧಿಸಿದೆ' ಎಂಬ ಫಲಕದ ಪಕ್ಕದಲ್ಲಿಯೇ ನಿಂತು ಧೂಮಪಾನ ಮಾಡುವವರು ಕಾಣಸಿಗುತ್ತಾರೆ. ಬೀಡಾ, ಪಾನ್ ಪರಾಗ್, ತಂಬಾಕುಗಳನ್ನು ಜಗಿದು ಎಲ್ಲೆಂದರಲ್ಲಿ ಉಗುಳಲು ಪರದೇಶಗಳಲ್ಲಿ ಸಾಧ್ಯವಿಲ್ಲ. ಇಲ್ಲಿ? ಎಲ್ಲೆಂದರೆ ಅಲ್ಲಿ ಉಗುಳಲು ಪರಮ ಸ್ವಾತಂತ್ರ್ಯ ಹೊಂದಿರುವ ಶೂರರು ಉಗುಳಿಬಿಡುತ್ತಾರೆ. ಯಾರು ಸ್ವಾಮಿ, ನಮ್ಮನ್ನು ತಡೆಯುವವರು? ಯಾರಾದರೂ ಕೇಳಿದರೆ ಕೇಳಿದವರ ಮೇಲೆಯೇ ಉಗಿದುಬಿಟ್ಟಾರು! ಆದರೆ, ಊರು ತುಂಬಾ ಕೊಳಕು ಎಂದು ಮೂಗು ಮುರಿಯುವವರೂ ನಾವೇನೇ!
     ಟ್ರಾಫಿಕ್ ಸೆನ್ಸೇ ಇಲ್ಲದ ಅನಾಗರಿಕರು ಎಂದು ನಮ್ಮವರನ್ನು ನಾವೇ ಹಳಿಯುತ್ತೇವೆ. ಅಮೆರಿಕಾದಲ್ಲಿ ಮಿತಿಮೀರಿದ ವೇಗದಿಂದ ಚಲಿಸುವ ಯಾರೇ ಆಗಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾರರು. ಇಲ್ಲಿ? ಸಂಚಾರಿ ಪೋಲಿಸರು ತಡೆದು ನಿಲ್ಲಿಸಿದರೆ, "ನಾನು ಯಾರು ನಿನಗೆ ಗೊತ್ತಾ? ಆ ಮಂತ್ರಿ ಮಗ, ಈ ಶಾಸಕನ ತಮ್ಮ, ಡಿ.ಸಿ. ನನ್ನ ಚಿಕ್ಕಪ್ಪ" ಇತ್ಯಾದಿ ಹೇಳಿ, "ತೊಗೋ ಈ ಕಾಸು, ಜಾಗ ಖಾಲಿ ಮಾಡು" ಎಂದು ಅವರುಗಳನ್ನೇ ದಬಾಯಿಸುವುದು ಇಲ್ಲಿ ಮಾತ್ರ ಸಾಧ್ಯವಿದೆ. ಅಷ್ಟಾಗಿಯೂ ಬಿಡದಿದ್ದರೆ 'ಮೇಲಿನವರ' ಒತ್ತಡಕ್ಕೆ ಬಲಿಪಶುಗಳಾಗುವವರು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಿದವರೇ! ನಾವು ಏಕೆ ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್, ವಾಹನದ ಕಾಗದ ಪತ್ರಗಳನ್ನು ಸರಿಯಾಗಿ ಇಟ್ಟುಕೊಂಡು, ಸಿಗ್ನಲ್ಲುಗಳನ್ನು ಗೌರವಿಸುವ, ವೇಗಮಿತಿ ಪಾಲಿಸುವ ಮನಸ್ಸು ಮಾಡುವುದಿಲ್ಲ? ಪಾದಚಾರಿಗಳು ಓಡಾಡುವ ಸ್ಥಳಗಳಲ್ಲಿ ವ್ಯಾಪಾರ ನಡೆಸಲು ಅವಕಾಶ ಕೊಟ್ಟವರು ಯಾರು? ಅಂತಹ ಬೀದಿ ಅಂಗಡಿಗಳಲ್ಲಿ ವ್ಯಾಪಾರ ಮಾಡುವವರು ನಾವೇ ಮತ್ತು ಓಡಾಡಲು ತೊಂದರೆ ಅನ್ನುವವರೂ ನಾವೇನೇ!
     ಎಲ್ಲೆಲ್ಲೂ ಭ್ರಷ್ಠಾಚಾರ ತಾಂಡವವಾಡುತ್ತಿದೆ ಎನ್ನುವ ನಾವು ನಮ್ಮ ಕೆಲಸಗಳಾಗಬೇಕಾದರೆ ಲಂಚ ಕೊಟ್ಟು ಮಾಡಿಸಿಕೊಳ್ಳುತ್ತೇವೆ. 'ಅಯ್ಯೋ, ಕೊಡದಿದ್ದರೆ ಕೆಲಸ ಆಗುವುದಿಲ್ಲ. ಯಾರು ದಿನಗಟ್ಟಲೆ ಅಲೆಯುತ್ತಾರೆ? ಸುಲಭವಾಗಿ ಕೆಲಸ ಆಗುವಾಗ ಕೊಟ್ಟರೆ ತಪ್ಪೇನು?' ಎಂಬ ಮಾತುಗಳನ್ನು ಆಡುವವರು ನಾವೇನೇ! ಪ್ರಾಮಾಣಿಕ ನೌಕರರನ್ನೂ ಭ್ರಷ್ಠರನ್ನಾಗಿಸುವವರು ನಾವುಗಳೇ! ತಮಾಷೆಗೆ ಒಂದು ಕೇಳಿರುವ ಜೋಕನ್ನೇ ನೆನಪಿಸುವೆ. ತಾಯಿಯೊಬ್ಬಳು ತನ್ನ ಮಗನನ್ನು ದಂಡಿಸುತ್ತಿದ್ದ ವೇಳೆಯಲ್ಲಿಯೇ ತಂದೆ ಮನೆಗೆ ಬಂದವನು ಏಕೆಂದು ಕೇಳುತ್ತಾನೆ. ತಾಯಿ ಹೇಳುತ್ತಾಳೆ, "ನೋಡಿ, ಇವನು ಶಾಲೆಯಿಂದ ಬರುವಾಗ ಯಾರದ್ದೋ ಪೆನ್ಸಿಲ್ ಕದ್ದುಕೊಂಡು ಬಂದಿದ್ದಾನೆ." ತಂದೆ ಮಗನಿಗೆ ಹೇಳುತ್ತಾನೆ, "ಮಗು, ಹಾಗೆಲ್ಲಾ ಕದಿಯಬಾರದು. ಅದು ಒಳ್ಳೆಯದಲ್ಲ. ನನಗೇ ಹೇಳಿದ್ದರೆ ನಾನು ಆಫೀಸಿನಿಂದ ಬರುವಾಗ ಪೆನ್ನು, ಪೆನ್ಸಿಲ್ಲು, ಪೇಪರುಗಳನ್ನು ತಂದುಕೊಡುತ್ತಿರಲಿಲ್ಲವೇ?"
     ವರದಕ್ಷಿಣೆಗಾಗಿ ಕಿರುಕುಳ, ಕೊಲೆ ಮುಂತಾದುವುದರ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಲೇ ಇರುತ್ತದೆ. ಅದನ್ನು ನಾವೂ ಖಂಡಿಸುತ್ತೇವೆ. ಆದರೆ ಎಲ್ಲ ಖಂಡನೆಗಳೂ ಇತರರ ಕುರಿತು ಮಾತ್ರ, ನಮ್ಮನ್ನು ಹೊರತುಪಡಿಸಿ! ಮದುವೆಯಾಗಿ ಏಳು ವರ್ಷಗಳ ಒಳಗೆ ಯಾವ ಹೆಣ್ಣುಮಗಳಾದರೂ ಸತ್ತರೆ, ಅದನ್ನು ವರದಕ್ಷಿಣೆ ದೌರ್ಜನ್ಯದ ಹಿನ್ನೆಲೆಯಲ್ಲಿಯೇ ತನಿಖೆ ನಡೆಸಬೇಕೆಂದಿದೆ. ಆ ಸಂದರ್ಭಗಳಲ್ಲಿ ಪೋಲಿಸ್ ತನಿಖೆಯ ಜೊತೆಗೆ ತಾಲ್ಲೂಕು ದಂಡಾಧಿಕಾರಿಯೂ ಶವತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಕೊಡಬೇಕೆಂದಿದೆ. ನನ್ನ ಸೇವಾವಧಿಯಲ್ಲಿಯೂ ಇಂತಹ ಹಲವಾರು ಶವತನಿಖೆಗಳನ್ನು ನಡೆಸಿದ್ದೇನೆ. ಉದಾಹರಣೆಯಾಗಿ ಒಂದು ಪ್ರಕರಣವನ್ನು ಉಲ್ಲೇಖಿಸುವೆ. ಒಂದು ಅನುಕೂಲಸ್ಥ ಕುಟುಂಬದ ನಿರುದ್ಯೋಗಿ ಯುವಕನಿಗೆ ಆತನ ಮನೆಯ ಶ್ರೀಮಂತಿಕೆ ಕಂಡು ತಮ್ಮ ಮಗಳು ಸುಖವಾಗಿರುತ್ತಾಳೆಂದು ಭಾವಿಸಿ ಹೆತ್ತವರು ತಮ್ಮ ಮಗಳನ್ನು ಆತನಿಗೆ ಮದುವೆ ಮಾಡಿಕೊಟ್ಟಿದ್ದರು. ಜಮೀನು ಇತ್ತು, ಹುಡುಗನ ಅಣ್ಣಂದಿರು ಉತ್ತಮವಾದ ಸರ್ಕಾರಿ ಹುದ್ದೆಗಳಲ್ಲಿದ್ದರು. ಐಬೆಂದರೆ ಮದುವೆಯಾದ ಹುಡುಗ ಮಾತ್ರ ಉಡಾಳನಾಗಿ ಜವಾಬ್ದಾರಿಯಿಲ್ಲದವನಾಗಿದ್ದ. ಮದುವೆಯಾದರೆ ಸರಿಯಾಗುತ್ತಾನೆಂದು ಮದುವೆ ಮಾಡಿದ್ದರು. ಕೆಲವು ತಿಂಗಳುಗಳು ಎಲ್ಲವೂ ಚೆನ್ನಾಗಿ ನಡೆದಿತ್ತು. ನಂತರದಲ್ಲಿ ಆ ಹುಡುಗಿಯನ್ನು ಎಲ್ಲರೂ ತಾತ್ಸಾರದಿಂದ ನೋಡತೊಡಗಿದ್ದರು. ಬೇಜವಾಬ್ದಾರಿ ಗಂಡನ ಹೆಂಡತಿ ಮನೆಯಲ್ಲಿ ಆಕೆ ಜೀತದಾಳಿನಂತೆ ದುಡಿಯಬೇಕಾಯಿತು. ಗಂಡನಿಗೆ ಏನಾದರೂ ಕೆಲಸ ಹುಡುಕಿಕೊಳ್ಳಿ ಎಂದು ಆಕೆಯ ಒತ್ತಾಯ ಹೆಚ್ಚಿದಾಗ ಕೆಲಸ ಹುಡುಕುವ ಸಲುವಾಗಿ ಹೆಂಡತಿಯನ್ನೂ ಕರೆದುಕೊಂಡು ಮೈಸೂರಿನಲ್ಲಿದ್ದ ಒಬ್ಬ ಅಣ್ಣನ ಮನೆಗೆ ಹೋಗಿ ಸ್ವಲ್ಪ ಸಮಯ ಇದ್ದ. ಅಲ್ಲಿಯೂ ಅವಳನ್ನು ಕಸಮುಸುರೆ ಮಾಡಲು ಬಳಸಿಕೊಂಡು ಹೀನಾಯವಾಗಿ ನಡೆಸಿಕೊಂಡರು. ಸರಿ, ಅಲ್ಲಿಂದ ಬೆಂಗಳೂರಿನಲ್ಲಿ ಕಾಲೇಜು ಲೆಕ್ಚರರ್ ಆಗಿದ್ದ ಇನ್ನೊಬ್ಬ ಅಣ್ಣನ ಮನೆಗೆ ಹೋದರೆ ಅಲ್ಲಿಯೂ ಅದೇ ಕಥೆಯ ಪುನರಾವರ್ತನೆ. ಉಡಾಳನಾದರೋ ಕೆಲಸ ಹುಡುಕುವ ನಾಟಕ ಮಾಡುತ್ತಿದ್ದು, ಅಣ್ಣನ ಮನೆಯಲ್ಲಿ ಕವಳ ಕತ್ತರಿಸುತ್ತಿದ್ದ. ಹಿಂಸೆ ತಾಳಲಾರದೆ ಹುಡುಗಿ ಪ್ರತಿಭಟಿಸಿದಾಗ ಲೆಕ್ಚರರ್ ಮತ್ತು ಅವನ ಹೆಂಡತಿ ಮನಬಂದಂತೆ ಥಳಿಸಿದರೂ ಗಂಡ ಎನಿಸಿಕೊಂಡವನು ಸುಮ್ಮನಿದ್ದುದಲ್ಲದೆ ಅವನೂ ಅವರ ಜೊತೆ ಅವಳನ್ನು ದಂಡಿಸಲು ಪಾಲುಗೊಂಡ. ಯಾವ ರೀತಿ ಹಿಂಸೆ ಕೊಟ್ಟರೆಂದರೆ ಆ ಹುಡುಗಿ ಸತ್ತೇಹೋದಳು. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳೆಂದು ನೆಂಟರಿಷ್ಟರಿಗೆ ಸುದ್ದಿ ಕೊಟ್ಟು, ಅವರು ಬರುವಷ್ಟರ ಒಳಗೆ ಅವಳ ದೇಹವನ್ನು ಬೆಂಗಳೂರಿನಿಂದ ಸುಮಾರು ೨೦೦ ಕಿ.ಮೀ. ದೂರದ ಹಳ್ಳಿಗೆ ಮಾರುತಿ ವ್ಯಾನಿನಲ್ಲಿ ತಂದು ಜಮೀನಿನಲ್ಲಿ ದಫನ್ ಮಾಡಲು ಸಿದ್ದತೆ ನಡೆಸಿದ್ದರು. ಹುಡುಗಿಯ ಬಂಧುಗಳು ಅಲ್ಲಿಗೂ ಧಾವಿಸಿ ಸಕಾಲದಲ್ಲಿ ತಡೆದಿದ್ದರಿಂದ ಪೋಲಿಸ್ ಕೇಸು ಆಯಿತು. ಆ ಹಳ್ಳಿ ನಾನು ಕೆಲಸ ಮಾಡುತ್ತಿದ್ದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುತ್ತಿದ್ದರಿಂದ ಪೋಲಿಸ್ ಕೋರಿಕೆಯ ಮೇರೆಗೆ ಶವತನಿಖೆ ನಡೆಸಿದೆ. ಮೇಲುನೋಟಕ್ಕೆ ದೈಹಿಕ ಹಿಂಸೆಯಿಂದ ಸಾವನ್ನಪ್ಪಿದ್ದುದು ಗೊತ್ತಾಗುತ್ತಿತ್ತು. ದೇಹದ ಮೇಲಿದ್ದ ಗಾಯದ ಗುರುತುಗಳು, ಬಾಸುಂಡೆಯ ಗುರುತುಗಳು, ಅಲ್ಲಲ್ಲಿ ಹೆಪ್ಪುಗಟ್ಟಿದ ರಕ್ತ, ಊದಿದ ಕೆನ್ನೆ, ಇತ್ಯಾದಿ ಕಂಡು ಸಾಯುವ ಮುನ್ನ ಆಕೆ ಅನುಭವಿಸಿರಬಹುದಾದ ಹಿಂಸೆಯನ್ನು ನೆನೆದು ನನ್ನ ಕಣ್ಣಿನಲ್ಲಿ ನೀರೂರಿತ್ತು. ನನ್ನ ಕೆಲಸ ನಾನು ಮಾಡಿದೆ. ಮುಂದೊಮ್ಮೆ ಸೆಷನ್ಸ್ ನ್ಯಾಯಾಲಯದಲ್ಲೂ ಸಾಕ್ಷ್ಯ ನುಡಿದಿದ್ದೆ. ಸಾಕ್ಷ್ಯ ನುಡಿಯುವ ಮುನ್ನ ಸರ್ಕಾರಿ ಪ್ರಾಸಿಕ್ಯೂಟರ್ ಜೊತೆಗೆ ಚರ್ಚಿಸಿದ ಸಂದರ್ಭದಲ್ಲಿ ಅವರು 'ಪಾಪ, ಕಾಲೇಜು ಲೆಕ್ಚರರ್ ಮತ್ತು ಅವರ ಮನೆಯವರು, ಗಂಡ ಎರಡು ವರ್ಷದಿಂದ ಸುಮ್ಮನೆ ಜೈಲಿನಲ್ಲಿದ್ದಾರೆ. ದುಡ್ಡಿನ ಆಸೆಗೆ ಹುಡುಗಿಯ ತಂದೆ ಗೋಳಾಡಿಸುತ್ತಿದ್ದಾರೆ' ಎಂದಾಗ ಕೇಸು ಯಾವ ಹಾದಿ ಹಿಡಿದಿತ್ತೆಂದು ನನಗೆ ಗೊತ್ತಾಗಿತ್ತು. ನಂತರದಲ್ಲಿ ಆಗಿದ್ದೂ ಅದೇ. ವಾಸ್ತವವಾಗಿ ಹಣ ಕೊಟ್ಟು ಪ್ರಕರಣ ಮುಗಿಸಲು ಪ್ರಯತ್ನ ಪಟ್ಟು ಯಶಸ್ವಿಯಾದವರು ಕೊಲೆಗಾರರೇ! ಇದೊಂದೇ ಅಲ್ಲ, ಹಲವಾರು ಪ್ರಕರಣಗಳಲ್ಲಿ 'ಹೇಗಿದ್ದರೂ ಸತ್ತವಳು ಸತ್ತಳು, ಅವಳೇನೂ ಬದುಕಿಬರುವುದಿಲ್ಲ. ಇಷ್ಟು ಹಣ ಕೊಡುತ್ತಾರೆ, ಎಲ್ಲಾ ಮರೆತು ಸುಮ್ಮನಿದ್ದುಬಿಡಿ, ನಿಮ್ಮ ಕುಟುಂಬಕ್ಕಾದರೂ ಸಹಾಯವಾಗುತ್ತದೆ' ಎಂದು ಪಂಚಾಯಿತಿ ಮಾಡಿ ಪುಸಲಾಯಿಸಿ ಪ್ರಕರಣಗಳನ್ನು ಹಳ್ಳ ಹತ್ತಿಸುವ ಪ್ರಸಂಗಗಳೇ ಜಾಸ್ತಿ. ಇದು ಏನು ತೋರಿಸುತ್ತದೆ? ನ್ಯಾಯ, ನೀತಿ ಏನಿದ್ದರೂ ಬೇರೆಯವರಿಗಿರಲಿ, ನಮಗೆ ಮಾತ್ರ ವಿನಾತಿಯಿರಲಿ ಎನ್ನುವ ಮನೋಭಾವವನ್ನಲ್ಲವೇ? ಸತ್ತವಳು ಬದುಕಿಬರುವುದಿಲ್ಲ ನಿಜ, ಆದರೆ ಅನ್ಯಾಯ ಮಾಡಿದವರಿಗೆ ಶಿಕ್ಷೆ ಆಗಬಾರದೆ? ಪೋಲಿಸರು, ರಾಜಕಾರಣಿಗಳು ಮತ್ತು ನ್ಯಾಯವಾದಿಗಳೂ ಸಹ ಇಂತಹ ಮಧ್ಯಸ್ತಿಕೆ ವಹಿಸುವಲ್ಲಿ ಪಾತ್ರ ವಹಿಸುತ್ತಾರೆ ಎಂಬುದು ಕಹಿಸತ್ಯವಾಗಿದೆ. ಕೊಲೆಗಾರನಿಗೆ ಸಹಾಯ ಮಾಡಲು ಸರ್ಕಾರಿ ವಕೀಲರೊಬ್ಬರು ಅವನ ಕಡೆಯವರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದರು.
     ನಾವು ಯಾರನ್ನು ದೂರುತ್ತೇವೋ ಅವರನ್ನು ಆರಿಸಿರುವವರು ನಾವೇನೇ! ಈ ಜವಾಬ್ದಾರಿಯನ್ನಾದರೂ ನಾವು ಸರಿಯಾಗಿ ಮಾಡುತ್ತೇವೆಯೇ? ಚುನಾವಣೆಗಳಲ್ಲಿ ವಿದ್ಯಾವಂತರೆನಿಸಿಕೊಂಡವರು, ನಗರವಾಸಿಗಳು ಹೆಚ್ಚಿನವರು ಮತದಾನದಲ್ಲಿ ಪಾಲುಗೊಳ್ಳುವುದೇ ಇಲ್ಲ. ಆದರೆ ದೂರುವವರಲ್ಲಿ ಹೆಚ್ಚಿನವರು ಅವರೇ! ಶೇ. ೫೦ರಿಂದ ೬೦ರವರೆಗೆ ಮತದಾನವಾದರೆ ಹೆಚ್ಚು. ಇನ್ನು ಮತದಾನ ಮಾಡುವವರಲ್ಲೂ ಹಲವರು ಹಣ, ಹೆಂಡ ಮತ್ತು ಇತರ ಆಮಿಷಗಳಿಗೆ ಒಳಗಾಗಿ ಮತ ಕೊಡುತ್ತಾರೆ. ಚುನಾವಣೆಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾರೆ. ಸರ್ಕಾರಕ್ಕೂ ಚುನಾವಣೆ ನಡೆಸಲು ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಹಣ ಮಾಡಿಕೊಳ್ಳುವುದಕ್ಕೇ ಅಧಿಕಾರ ಬಯಸುವವರ ಕಾಲ ಇದಾಗಿಬಿಟ್ಟಿದೆ. ಯೋಗ್ಯರು ಚುನಾವಣೆಯಲ್ಲಿ ಭಾಗವಹಿಸುವಂತೆಯೇ ಇಲ್ಲ, ಭಾಗವಹಿಸಿದರೂ ಗೆಲ್ಲಲಾರದ ಸ್ಥಿತಿ ಇದೆ. ಇದಕ್ಕೆ ನಮ್ಮ ಜವಾಬ್ದಾರಿಯನ್ನು ನಾವು ಸರಿಯಾಗಿ ನಿರ್ವಹಿಸದೆ ಇರುವುದೇ ಕಾರಣ ಅಲ್ಲವೇ? ನಮಗೆ ಎಲ್ಲವನ್ನೂ ಕೊಟ್ಟಿರುವ ಸಮಾಜದಿಂದಲೇ ಮತ್ತಷ್ಟು, ಮಗದಷ್ಟು ಮೊಗೆಯಲು ಹವಣಿಸುವ ಮನೋಭಾವದವರನ್ನು ಅಧಿಕಾರಕ್ಕೆ ಏರಿಸುತ್ತಿರುವವರು ನಾವೇ ಆಗಿದ್ದೇವೆ. ಒಮ್ಮೆ ಯಾರನ್ನಾದರೂ ಚುನಾಯಿಸಿಬಿಟ್ಟರೆ ನಮ್ಮ ಕರ್ತವ್ಯ ಮುಗಿಯಿತೆಂದುಕೊಂಡುಬಿಡುತ್ತೇವೆ. ಎಲ್ಲವನ್ನೂ ಮಾಡುವುದು ಸರ್ಕಾರದ ಜವಾಬ್ದಾರಿ ಅಂದುಕೊಂಡುಬಿಡುತ್ತೇವೆ. ಸಮಾಜಕ್ಕೆ ನಾವು ಋಣಿಗಳಾಗಿದ್ದೇವೆ, ಸಮಾಜಕ್ಕೆ ನಾವು ಏನಾದರೂ ಮಾಡಬೇಕೆಂದರೆ ಮೊದಲು ನಾವು ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕಿದೆ. ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರಲಿ, ರೈತನಾಗಿರಲಿ, ವಿದ್ಯಾರ್ಥಿಯಾಗಿರಲಿ, ಕಾರ್ಮಿಕನಾಗಿರಲಿ, ಸರ್ಕಾರಿ ನೌಕರನಾಗಿರಲಿ, ರಾಜಕಾರಣಿಯಾಗಲಿರಲಿ, ಏನೇ ಆಗಿರಲಿ, ನಮ್ಮ ಪಾಲಿನ ಕೆಲಸಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಅದಕ್ಕಿಂತ ಸಮಾಜಕ್ಕೆ ಉತ್ತಮ ಕಾಣಿಕೆ ಮತ್ತೊಂದಿರಲಾರದು. ಸೋಮಾರಿಗಳಾಗಿ ಆ ದೇಶ ಹಾಗಿದೆ, ಈ ದೇಶ ಮುಂದಿದೆ, ನಮ್ಮ ದೇಶ ಹೀಗಿದೆ ಎಂದು ಊಳಿಡುವ ಬದಲು ಆ ದೇಶಗಳು ಮುಂದೆ ಬರಲು ಕಾರಣವಾದ ಅಂಶಗಳು ಅಲ್ಲಿನವರ ನಾಗರಿಕ ಪ್ರಜ್ಞೆ ಎಂಬುದನ್ನು ಅರ್ಥ ಮಾಡಿಕೊಂಡು, ನಮ್ಮದೇ ದೇಶವನ್ನು ಮುಂದೆ ತರುವ ಕೆಲಸಕ್ಕೆ ತೊಡಗಬೇಕಾದವರು ನಾವೇ ಅಲ್ಲವೇ?  ಈಗ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳೋಣ: ನಾವು ನಾಗರಿಕರಾ?
-ಕ.ವೆಂ.ನಾಗರಾಜ್.
***************
ದಿ. 28.7.2014ರ ಜನಮಿತ್ರ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.

8 ಕಾಮೆಂಟ್‌ಗಳು:

 1. Vaastava chennaaagi bimbisiddeera. Nanna anisikeyalli namage swatantra salladu. Naavu bandookinadiyalli maatra kaanoonu paalisutteve.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಒಮ್ಮೊಮ್ಮೆ ಹಾಗೆ ಅನ್ನಿಸುತ್ತದಾದರೂ, ಅದು ಇನ್ನೊಂದು ರೀತಿಯ ಅಪಾಯ ಆಹ್ವಾನಿಸಬಹುದು. ಧನ್ಯವಾದಗಳು, ಮಂಜುನಾಥರೇ.

   ಅಳಿಸಿ
 2. ಮನಸ್ಸು ವಿಹ್ವಲವಾಯಿತು ಹಿರಿಯರೆ ನಿಮ್ಮ ಲೇಖನವನ್ನೋದಿ! ಇದೆಲ್ಲಾ ಸರಿಯಾಗಿ ಮಣ್ಣುಗೂಡಿರುವ ದೇಶದ ಹಿರಿಮೆ, ಘನತೆ, ಗೌರವಗಳು ಮತ್ತೆ ಸಿಗಬೇಕೆಂದಿದ್ದರೆ ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಬದಲಾವಣೆಯಾಗಬೇಕು. ಬ್ರಿಟಿಶ್ ಕಾಲದ ಗುಲಾಮಗಿರಿಯನ್ನು ಬೋಧಿಸುವ ಬದಲು ನೈತಿಕತೆಯನ್ನು ಉದ್ದೀಪನಗೊಳಿಸಿ ಜಚಾಬ್ಧಾರಿಯುತ ನಾಗರೀಕರನ್ನು ಸೃಷ್ಟಿಸುವ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ನಾವು ಜಪಾನೀಯರಿಂದ ಕಲಿಯಬೇಕಾದ್ದು ಸಾಕಷ್ಟಿದೆ. ಪ್ರಾಮಾಣಿಕ ಪ್ರಯತ್ನ ಮಾಡುವ ಧೀಮಂತ ನಾಯಕರ ಕೊರತೆ ನಮ್ಮ ದೇಶದ ವರ್ತಮಾನದ ದುರಂತ! 😣

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಅನಿಸಿಕೆ ಸತ್ಯ, ಮಂಜುರವರೇ. ಶಿಕ್ಷಣ ಪದ್ಧತಿ ಬದಲಾಗಲಿ, ನೈತಿಕ ಶಿಕ್ಷಣ ಅಗತ್ಯ ಎಂದರೆ ಕೇಸರೀಕರಣ ಎಂದು ಬೊಬ್ಬೆ ಹೊಡೆಯುವವರ ಪರವಾಗಿ ಸರ್ಕಾರ ಇರುವದರಿಂದ ಪರಿಸ್ಥಿತಿ ಹದಗೆಡುತ್ತಿದೆ. ಶತಮಾನಗಳ ಗುಲಾಮತನದ ರಕ್ತ ಬದಲಾಯಿಸುವುದು ಕಷ್ಟ.

   ಅಳಿಸಿ
 3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 4. ಮೂಲದಲ್ಲೇ ತಿದ್ದುವಿಕೆಯ ಕೊರತೆ ಮತ್ತು ಉಡಾಫೆ ಮನಸ್ಥಿತಿಯಿಂದಲೇ ಇಲ್ಲಿ ಕುಲಗೆಟ್ಟಿರುವುದು ನಿಜ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸತ್ಯಸ್ಯ ಸತ್ಯ, ಬದರೀನಾಥರೇ. ವಂದನೆಗಳು.

   ಅಳಿಸಿ
  2. Prathibha Rai
   ನಮ್ಮ ಭಾರತದ ಚರಿತ್ರೆ ಬರೆದ ಹಾಗಿದೆ...ನಾವು ನಾಗರಿಕರ???????

   ಅಳಿಸಿ