ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಜುಲೈ 24, 2014

ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದೇವೆಯೇ?

     ಭ್ರಷ್ಠಾಚಾರವೆಂದರೆ ಅಕ್ರಮ ಸಂಪಾದನೆ, ಲಂಚ ಕೊಡುವುದು, ತೆಗೆದುಕೊಳ್ಳುವುದು, ಕಳಪೆ ಕಾಮಗಾರಿಗಳು, ಪರ್ಸೆಂಟೇಜುಗಳು, ಕಮಿಷನ್ನುಗಳು, ಇತ್ಯಾದಿಗಳು ಕಣ್ಣಮುಂದೆ ಬರುತ್ತವೆ. ಆದರೆ ಭ್ರಷ್ಠಾಚಾರವೆಂದರೆ ಇಷ್ಟೇ ಅಲ್ಲ. ಅದರ ವ್ಯಾಪ್ತಿ ಬಹಳ ದೊಡ್ಡದು. ಇಂದು ದೇಶ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳ ಮೂಲವೇ ಭ್ರಷ್ಠಾಚಾರವಾಗಿದೆ. ಒಂದು ಉದಾಹರಣೆ ನೀಡಿದರೆ ಅರ್ಥವಾಗಬಹುದು. ಗಮನಿಸುವವರಿಗೆ ಹಲವಾರು ಭ್ರಷ್ಠಾಚಾರದ ಸ್ಮಾರಕಗಳು ಜನರನ್ನು ಅಣಕಿಸುತ್ತಿರುವುದು ಕಂಡುಬರುತ್ತವೆ. ಸಾಮಾನ್ಯವಾಗಿ ಎಲ್ಲರೂ ಗಮನಿಸಿದರೂ ಗಮನಿಸದಂತಿರುವ ಒಂದು ಸ್ಮಾರಕದ ಬಗ್ಗೆ ತಿಳಿಸುವೆ. ಹಾಸನ ನಗರದ ಸ್ಟೇಡಿಯಮ್ಮಿನಲ್ಲಿ ಒಂದು ಆಧುನಿಕ ಶೌಚಾಲಯ ನಿರ್ಮಾಣವಾಗಿ ಸುಮಾರು ೫ ವರ್ಷಗಳಾಗಿವೆ. ಈ ಕಾಮಗಾರಿಗೆ ಸುಮಾರು ೮ರಿಂದ೧೦ ಲಕ್ಷ ರೂ. ಖರ್ಚು ತೋರಿಸಿರಬಹುದು, ಅಥವ ಇನ್ನೂ ಹೆಚ್ಚು ತೋರಿಸಿರಲೂಬಹುದು. ಅದನ್ನು ಇದುವರೆವಿಗೂ ಸಾರ್ವಜನಿಕ ಉಪಯೋಗಕ್ಕೆ ತೆರೆದಿಲ್ಲ. ಏಕೆ ತೆರೆದಿಲ್ಲವೆಂದು ಅದನ್ನು ಕಟ್ಟಿಸಿದವರಾಗಲೀ, ಜನರಾಗಲೀ ಇದುವರೆವಿಗೂ ತಲೆ ಕೆಡಿಸಿಕೊಂಡಿಲ್ಲ. ಹಾಗೆಂದು ಅಲ್ಲಿ ಬೇರೆ ಶೌಚಾಲಯಗಳೂ ಇವೆಯೇ ಎಂದರೆ ಅದೂ ಇಲ್ಲ. ದಿನ ನಿತ್ಯ ನೂರಾರು ಜನರು ಅಲ್ಲಿ ವಾಯುಸೇವನೆಗೆ, ವಿಶ್ರಾಂತಿಗೆ ಬಂದು ಹೋಗುತ್ತಾರೆ. ಹಲವಾರು ಕ್ರೀಡಾಕೂಟಗಳು ನಡೆಯುತ್ತಲೇ ಇರುತ್ತವೆ. ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ, ಮುಂತಾದ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳು ನಡೆಯುವುದು ಇಲ್ಲಿಯೇ. ಆಗ ಸಾವಿರಾರು ಜನರು ಸೇರುತ್ತಾರೆ. ಸ್ಟೇಡಿಯಮ್ ಸಮೀಪದ ಬಡಾವಣೆಯಲ್ಲಿಯೇ ಶಾಸಕರ ವಾಸದಮನೆಯಿದೆ. ಆದರೂ ಶೌಚಾಲಯ ಉಪಯೋಗಕ್ಕೆ ತೆರೆದಿಲ್ಲ ಮತ್ತು ಜನರೂ ಸುಮ್ಮನಿದ್ದಾರೆಂದರೆ ಏನೆನ್ನಬೇಕು? ಇಲ್ಲಿ ಶೌಚಾಲಯದ ಅಗತ್ಯವಿಲ್ಲವೇ ಎಂದರೆ ತುಂಬಾ ಅಗತ್ಯವಿದೆ. ಗಂಡಸರು ಎಲ್ಲೋ ದಿಬ್ಬದ ಮರೆಯಲ್ಲಿ, ಗಿಡದ ಮರೆಯಲ್ಲಿ ಮತ್ತು ವಿಶೇಷವೆಂದರೆ ಇದೇ ಹೈಟೆಕ್ ಶೌಚಾಲಯದ ಹಿಂಬದಿಯಲ್ಲಿ ಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಹೆಂಗಸರು ಏನು ಮಾಡಬೇಕು? ಸ್ತ್ರೀಶಕ್ತಿ ಸಂಘಗಳು, ಪ್ರಬುದ್ಧ ಮಹಿಳಾಮಣಿಗಳೂ ಈ ಬಗ್ಗೆ ಚಕಾರವೆತ್ತಿಲ್ಲ. ಜನರು ಇದೇ ವ್ಯವಸ್ಥೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಶೌಚಾಲಯದ ನಿರ್ಮಾಣಕ್ಕೆ ಆದ ವೆಚ್ಚ ವ್ಯರ್ಥವಾದಂತಾಯಿತಲ್ಲವೇ? ಇದು ಸಾರ್ವಜನಿಕರ ಹಣದ ದುರುಪಯೋಗವಲ್ಲವೇ? ಇದು ಭ್ರಷ್ಟಾಚಾರವಲ್ಲವೇ? ಜನರು ಜಾಗೃತರಾಗಿದ್ದರೆ ಈ ಶೌಚಾಲಯಕ್ಕೆ ಆದ ವೆಚ್ಚ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುವುದರ ಜೊತೆಗೆ, ಅದನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯುವಂತೆ ನೋಡಿಕೊಳ್ಳುತ್ತಿದ್ದರು ಮತ್ತು ತೆರೆದ ನಂತರವೂ ಅದು ಸರಿಯಾಗಿ ನಿರ್ವಹಣೆಯಾಗುವಂತೆ ನಿಗಾ ವಹಿಸುತ್ತಿದ್ದರು ಅಥವ ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ವಾಟಾಳ್ ನಾಗರಾಜರನ್ನು ಇಲ್ಲಿ ನೆನೆಯಬೇಕು. ಅಂತಹವರು ಇಲ್ಲಿ ಯಾರಾದರೂ ಇದ್ದಿದ್ದರೆ, ಬೆಂಗಳೂರಿನಲ್ಲಿ ಶೌಚಾಲಯಗಳ ಅಗತ್ಯತೆ ಕುರಿತು ಸರ್ಕಾರದ ಗಮನ ಸೆಳೆಯಲು ಅವರು ವಿಧಾನಸೌಧದ ಮುಂದೆ 'ಮೂತ್ರ ಮಾಡುವ ಚಳುವಳಿ' ನಡೆಸಿದ್ದಂತೆ ಇಲ್ಲೂ ಮಾಡುತ್ತಿದ್ದರೇನೋ! 
     ಮೇಲಿನ ಉದಾಹರಣೆಯನ್ನು ನೋಡಿದರೆ ಭ್ರಷ್ಟಾಚಾರಕ್ಕೆ ನಿಜವಾದ ಹೊಣೆಗಾರರು ನಾವೇ ಆಗಿದ್ದೇವೆ ಎನ್ನಬೇಕಾಗುತ್ತದೆ. ಇದು ಕೇವಲ ಒಂದು ಸಣ್ಣ ಉದಾಹರಣೆಯಷ್ಟೆ. ಇಂತಹ ನೂರಾರು, ಸಾವಿರಾರು ಸಂಗತಿಗಳು ಪರಿಶೀಲಿಸಿದರೆ ಕಾಣಸಿಗುತ್ತವೆ. ಬಡವರಿಗಾಗಿ ಕಟ್ಟಿದ ಮನೆಗಳು ಅಪೂರ್ಣವಾಗಿರುತ್ತವೆ, ಎಷ್ಟೋ ಮನೆಗಳು ಮುಗಿಯುವ ಮುನ್ನವೇ ಕುಸಿಯುವಂತಿರುತ್ತವೆ. ಕಾಮಗಾರಿಗಳು ಕಳಪೆಯಾಗಿರುತ್ತವೆ. ಎಷ್ಟೋ ಕಾಮಗಾರಿಗಳು ಕೆಲಸವೇ ಆಗದೆ ಬಿಲ್ಲುಗಳಾಗುತ್ತವೆ, ಹಣ ಪಾವತಿಯಾಗಿಬಿಡುತ್ತದೆ. ಒಂದು ಉದಾಹರಣೆಯನ್ನು ನಿಮ್ಮೊಡನೆ ಹಂಚಿಕೊಳ್ಳುವೆ. ನಾನು ವಾಸವಿರುವ ಬೀದಿಗೆ ಚರಂಡಿ ಇರಲಿಲ್ಲ. ನಗರಸಭಾ ಆಯುಕ್ತರಿಗೆ ಬೀದಿಗೆ ಚರಂಡಿ ಕಾಮಗಾರಿ ಮಾಡಿಸಿ ಉಪಕರಿಸಲು ಕೋರಿದ್ದೆ. ಅವರು ಇಂಜನಿಯರರಿಗೆ ಸೂಚನೆ ಕೊಟ್ಟರು. ಹದಿನೈದು ದಿನಗಳ ನಂತರದಲ್ಲಿ ಪುನಃ ವಿಚಾರಿಸಿದಾಗ ಆಯುಕ್ತರು, 'ನಿಮ್ಮ ಬೀದಿಗೆ ಚರಂಡಿ ಕಳೆದ ವರ್ಷವೇ ಮಾಡಿಸಿದ್ದರಂತಲ್ಲಾ, ಈಗ ಹಾಳಾಗಿದೆಯೇ?' ಎಂದು ಕೇಳಿದ್ದರು. ಕಾಮಗಾರಿಗಳ ರಿಜಿಸ್ಟರಿನಲ್ಲೂ ಕೆಲಸ ಆಗಿ ಹಣ ಪಾವತಿ ಆದ ಬಗ್ಗೆ ದಾಖಲೆ ಇತ್ತು. ಇಂಜನಿಯರರನ್ನೂ ಬರಹೇಳಿದರು. ನಾನು, "ಹಾಗಾದರೆ ನಮ್ಮ ಬೀದಿಯ ಚರಂಡಿಯನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆಂದು ಕಾಣುತ್ತದೆ. ಯಾರಿಗೆ ದೂರು ಕೊಡಬೇಕು? ನಿಮಗೆ ಕೊಡಲೋ, ಜಿಲ್ಲಾಧಿಕಾರಿಯವರಿಗೆ ಕೊಡಲೋ? ಪೋಲಿಸರಿಗೆ ಕೊಡಲೋ?" ಎಂದು ತಮಾಷೆ ಮಾಡಿದ್ದೆ. 'ಏನೋ ತಪ್ಪಾಗಿರುವಂತೆ ಕಾಣುತ್ತದೆ. ಸರಿಯಾಗಿ ಪರಿಶೀಲಿಸಿ ಹೇಳುತ್ತೇನೆ' ಎಂದು ಆಯುಕ್ತರು ತಿಳಿಸಿದ್ದರು. ನಂತರ ಇಂಜನಿಯರರು ತರಾತುರಿಯಲ್ಲಿ ನಮ್ಮ ಬೀದಿಗೆ ಚರಂಡಿ ಮಾಡಿಸಿಬಿಟ್ಟರು. ಅಪಾಯದ ವಾಸನೆ ಅವರ ಮೂಗಿಗೆ ಬಡಿದಿದ್ದಿರಬೇಕು. ಜಿಲ್ಲಾಧಿಕಾರಿಯವರಿಗೂ ಮೌಖಿಕವಾಗಿ ವಿಷಯ ತಿಳಿಸಿದ್ದೆ. ಆದರೆ ಯಾರ ವಿರುದ್ಧವೂ ಏನೂ ಕ್ರಮ ಆಗಲಿಲ್ಲ.  ಇಂತಹ ಇನ್ನೆಷ್ಟು ಪ್ರಕರಣಗಳು ಆಗಿದ್ದಿರಬಹುದು? 
     ಇದು ಹಲವು ವರ್ಷಗಳ ಹಿಂದೆ ಪಕ್ಕದ ಜಿಲ್ಲೆಯಲ್ಲಿ ನಡೆದ ಘಟನೆ. ಸಹಾಯಕ ಕೃಷಿ ನಿರ್ದೇಶಕರೊಬ್ಬರು ಶಾಸಕರ ಆಜ್ಞಾನುವರ್ತಿಯಾಗಿದ್ದರು. ಅವರ ಇಷ್ಟಾನಿಷ್ಟಗಳನ್ನು ಅನುಸರಿಸಿ ಕೆಲಸ ಮಾಡುತ್ತಿದ್ದವರು. ಒಮ್ಮೆ ಶಾಸಕರು ಅವರಿಗೆ ಹಣದ ಬೇಡಿಕೆ ಇಟಿದ್ದಲ್ಲದೆ ಅದನ್ನು ಹೊಂದಿಸಲು ಮಾರ್ಗವನ್ನೂ ಸೂಚಿಸಿದ್ದರು. ನಡೆಯದ ಕಾಮಗಾರಿಗೆ ಸುಳ್ಳು ಬಿಲ್ಲು ತಯಾರಿಸಿ ಹಣ ಹೊಂದಿಸುವುದೇ ಅದು! ಅಧಿಕಾರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿಯೂ ಅಭಯ ಕೊಟ್ಟಿದ್ದರು. ಸರಿ, ಹಣ ಹೊಂದಾಣಿಕೆಯಾಯಿತು. ಅಭಯ ಕೊಟ್ಟಿದ್ದಂತೆ ಅವರಿಗೆ ಯಾರಿಂದಲೂ ತೊಂದರೆಯಾಗಲಿಲ್ಲ. ಆದರೆ, ನಿಜವಾದ ತೊಂದರೆ ಶಾಸಕರಿಂದಲೇ ಶುರುವಾಗಿತ್ತು. ಶಾಸಕರು ಆಗಾಗ್ಗೆ ಹಣಕ್ಕೆ ಹೇಳಿಕಳಿಸುತ್ತಿದ್ದರು. ಕೊಡದಿದ್ದರೆ ಸುಳ್ಳು ಬಿಲ್ಲಿನ ವಿಚಾರ ಹೊರತಂದು ಅಧಿಕಾರಿಯ ಕೆಲಸಕ್ಕೆ ಸಂಚಕಾರ ತರುವುದಾಗಿ ಬೆದರಿಸುತ್ತಿದ್ದರು. ಬರಬರುತ್ತಾ ಇದು ತುಂಬಾ ವಿಪರೀತಕ್ಕೆ ಇಟ್ಟುಕೊಂಡಾಗ ಆ ಅಧಿಕಾರಿ ಮೃತ್ಯುಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ವಿಷಯ ಎಲ್ಲಾ ಪತ್ರಿಕೆಗಳಲ್ಲಿ ಪ್ರಚುರವಾಗಿತ್ತು. ಮುಂದೇನಾಯಿತು? ಏನೂ ಆಗಲಿಲ್ಲ. ನಿಜವಾದ ಅಪರಾಧಿಗೆ ಶಿಕ್ಷೆಯಾಗಲೇ ಇಲ್ಲ. ಅಧಿಕಾರಿಯದೂ ತಪ್ಪಿರಲಿಲ್ಲ ಎಂದು ಹೇಳುವಂತಿಲ್ಲ. ಆ ತಪ್ಪಿಗಾಗಿ ಅವರು ಪ್ರಾಣವನ್ನೇ ತೆರಬೇಕಾಯಿತಷ್ಟೆ. ಗಂಭೀರವಾದ ವಿಷಯವೆಂದರೆ ಜನರು ಈ ವಿಷಯದಲ್ಲಿ ತಲೆ ಕೆಡಿಸಿಕೊಳ್ಳದೆ ತಮಗೆ ಸಂಬಂಧಿಸಿದ್ದಲ್ಲವೆಂಬಂತೆ ಸುಮ್ಮನಿದ್ದುದು! 
     ಭ್ರಷ್ಠಾಚಾರವೆಂದರೆ ಸಮಾಜದ ಹಿತಕ್ಕೆ ವಿರುದ್ಧವಾದ ಸಂಗತಿಗಳು, ನಡವಳಿಕೆಗಳು ಎನ್ನಬಹುದು. ಇದನ್ನು ನಿಯಂತ್ರಿಸಬೇಕಾದ ಹೊಣೆ ಹೊತ್ತವರೇ ಭ್ರಷ್ಠಾಚಾರದಲ್ಲಿ ತೊಡಗಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ. ನಮ್ಮನ್ನಾಳುವ ಜನಪ್ರತಿನಿಧಿಗಳು ಭ್ರಷ್ಠ ಮಾರ್ಗ ಅನುಸರಿಸಿ ಚುನಾವಣೆಯಲ್ಲಿ ಜಯಗಳಿಸಿದರೆ ಅವರು ಮುಂದೆ ಭ್ರಷ್ಠಾಚಾರದಲ್ಲಿ ತೊಡಗದೆ ಇರುತ್ತಾರೆಯೇ? ಹಿರಿಯರ, ಗಣ್ಯರ, ಸಮಾಜಸೇವಕರ ಮನೆಯೆನ್ನಲಾಗುವ ವಿಧಾನಪರಿಷತ್ತು, ರಾಜ್ಯಸಭೆಗಳು ಇಂದು ಹಣ ಇರುವವರ ಪಾಲಾಗುತ್ತಿವೆ. ವಿಧಾನ ಪರಿಷತ್ತಿನ ಸದಸ್ಯರನ್ನು ಆರಿಸಲು ೪೦ ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟ ಪ್ರಮುಖ ನಾಯಕರ ಬಗ್ಗೆ ಸಿಡಿ ಬೆಳಕಿಗೆ ಬಂದಿದೆ, ರಾಷ್ಟ್ರಮಟ್ಟದಲ್ಲೂ ಈ ಕುರಿತು ಚರ್ಚೆಯಾಗುತ್ತಿದೆ. ಒಬ್ಬೊಬ್ಬ ಸದಸ್ಯರು ಒಂದೊಂದು ಕೋಟಿ ಹಣ ಪಡೆದು ವಿಧಾನಪರಿಷತ್ತಿಗೆ ಸದಸ್ಯರನ್ನು ಆರಿಸುತ್ತಾರೆಂದರೆ ಮತ್ತು ಈ ಆರೋಪ ಬಂದಾಗ ಸಂಬಂಧಿಸಿದ ಯಾವುದೇ ಸದಸ್ಯರು ಆರೋಪ ಅಲ್ಲಗಳೆಯುವುದಿಲ್ಲವೆಂದರೆ ರಾಜಕೀಯ ಎಷ್ಟು ಕೆಳಮಟ್ಟಕ್ಕೆ ಇಳಿದಿದೆಯೆಂದು ಅರಿವಾಗುವುದಿಲ್ಲವೇ? ವಿಧಾನಸಭೆಯಲ್ಲಿಯೇ ಹಿರಿಯ ಶಾಸಕರೊಬ್ಬರು ಮೊದಲು ರೂ. ೩೫೦೦೦/- ಖರ್ಚು ಮಾಡಿ ಚುನಾವಣೆ ಗೆಲ್ಲುತ್ತಿದ್ದವನು ಈಗ ಮೂರೂವರೆ ಕೋಟಿ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲಬೇಕಾಯಿತೆಂದು ಬಹಿರಂಗವಾಗಿ ಘೋಷಿಸುತ್ತಾರೆ. ಭ್ರಷ್ಠರೇ ಆಳುವವರಾದರೆ ಭ್ರಷ್ಠಾಚಾರದ ನಿರ್ಮೂಲನೆ ಮಾಡುವವರಾದರೂ ಯಾರು? ಇದಕ್ಕೆ ಮೂಲದಲ್ಲಿ ಅವರನ್ನು ಆರಿಸುವ ಪ್ರಜೆಗಳೇ ಕಾರಣರಲ್ಲವೇ? ಹಣ, ಹೆಂಡ ಪಡೆದು ಜನಪ್ರತಿನಿಧಿಗಳನ್ನು ಆರಿಸಬಾರದಲ್ಲವೇ? ಅವರು ಹಣ ಖರ್ಚು ಮಾಡುವುದೂ ಸಹ ತಾವು ಮುಂದೆ ಇನ್ನೂ ಹೆಚ್ಚು 'ಸಂಪಾದಿಸಬೇಕು' ಎಂದೇ ಅಲ್ಲವೇ? ಜನಸೇವೆಗೆ ಅವಕಾಶ ಕೊಡಿ ಎಂದರೆ ಕಮಾಯಿಸಿಕೊಳ್ಳಲು ಅವಕಾಶ ಕೊಡಿ ಎಂದೇ ಅಲ್ಲವೇ? ಭ್ರಷ್ಠರು ಎಂದು ಅವರಿವರನ್ನು ಬೆರಳು ಎತ್ತಿ ತೋರಿಸುವ ಅಧಿಕಾರವನ್ನೇ ನಾವು ಕಳೆದುಕೊಂಡಿದ್ದೇವೆ, ಏಕೆಂದರೆ ಅವರನ್ನು ಆರಿಸಿದವರು ನಾವೇ ಆಗಿದ್ದೇವೆ. ಹಣ, ಹೆಂಡ, ಜಾತಿ, ಇತ್ಯಾದಿಗಳ ಆಮಿಷದಿಂದ ಹೊರಬಂದು ಯೋಗ್ಯ ಅಭ್ಯರ್ಥಿಗಳನ್ನು ಆರಿಸದೇ ಇರುವವರೆಗೂ ಪರಿಸ್ಥಿತಿ ಸುಧಾರಣೆ ಆಗಲಾರದು, ಒಳ್ಳೆಯ ದಿನಗಳು ಬರಲಾರವು.
     ವಿವಿಧ ಜನಪ್ರಿಯ ಯೋಜನೆಗಳೂ ಸಹ ನೈಜ ಫಲಾನುಭವಿಗಳನ್ನು ತಲುಪುವಲ್ಲಿ ವಿಫಲವಾಗಿವೆ. ಉದಾಹರಿಸಬೇಕೆಂದರೆ ಬಿಪಿಎಲ್ ಪಡಿತರದಾರರಿಗೆ ರೂ. ಒಂದಕ್ಕೆ ಒಂದು ಕೆಜಿಯಂತೆ ೩೦ ಕಿಲೋವರೆಗೆ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆ ನಿರೀಕ್ಷಿತ ಫಲ ನೀಡಿದೆಯೇ? ದಿನಬೆಳಗಾದರೆ ಬಹುತೇಕ ಪಡಿತರ ಕಾಳಸಂತೆಯ ಪಾಲಾಗುತ್ತಿರುವುದು ಗೊತ್ತಾಗುತ್ತಿದೆ. ಅಷ್ಟಕ್ಕೂ ಅರ್ಹರಿಗೆಲ್ಲಾ ಪಡಿತರ ಚೀಟಿಗಳು ಸಿಕ್ಕಿವೆಯೇ ಎಂದರೆ ಉತ್ತರ 'ಇಲ್ಲ' ಎಂದೇ ಹೇಳಬೇಕಾಗುತ್ತದೆ. ಈ ಯೋಜನೆಯ ಜಾರಿಯಲ್ಲಿ ಯಾವ ಯಾವ ಹಂತದಲ್ಲಿ ಏನೇನು ಅವ್ಯವಹಾರ ನಡೆಯುತ್ತದೆ ಎಂದು ತಿಳಿಸಹೊರಟರೆ ದೀರ್ಘ ಲೇಖನವೇ ಆಗುತ್ತದೆ. ಸರ್ಕಾರದ ವಸತಿ ಇಲಾಖೆಯ ಸಮೀಕ್ಷೆಯಂತೆ ರಾಜ್ಯದಲ್ಲಿ ಸುಮಾರು ೧೫ ಲಕ್ಷ ವಸತಿರಹಿತ ಕುಟುಂಬಗಳಿವೆ. ಪಡಿತರ ಚೀಟಿ ಪಡೆಯಲು ಮನೆಯ ವಿಳಾಸ ಕೊಡಬೇಕು. ಮನೆಯೇ ಇಲ್ಲದ ಇಂತಹವರಿಗೆ ಪಡಿತರ ಚೀಟಿಯೇ ಇಲ್ಲ. ನಿಜವಾಗಿ ಬಡವರಲ್ಲಿ ಕಡುಬಡವರು ಇವರು. ಇವರಿಗೇ ಪಡಿತರ ಚೀಟಿ ಸಿಗುವುದಿಲ್ಲವೆಂದಾದರೆ ಅನ್ನಭಾಗ್ಯ ಯಾರಿಗಾಗಿ? ಅನರ್ಹರಿಗೆ ಬಿಪಿಎಲ್ ಪಡಿತರ ಚೀಟಿಗಳು ಸಿಕ್ಕಿರುವುದು, ಒಂದೇ ಮನೆಯಲ್ಲಿ ಎರಡು-ಮೂರು ಕಾರ್ಡುಗಳಿರುವುದು ಅಕ್ಕಪಕ್ಕದವರಿಗೆ ಗೊತ್ತಿರುವುದಿಲ್ಲವೇ? ಗೊತ್ತಿದ್ದರೂ ಅವುಗಳನ್ನು ರದ್ದುಪಡಿಸಲು ಅಧಿಕಾರಿಗಳಿಗೆ ದೂರು ಕೊಡಲು ಯಾರೂ ಮುಂದೆ ಬರುವುದಿಲ್ಲ. ಕಾರಣಗಳು ಹಲವಾರು ಇರಬಹುದು, ಆದರೂ ಸುಮ್ಮನಿರುವುದು ಪರೋಕ್ಷವಾಗಿ ಭ್ರಷ್ಠ ವ್ಯವಸ್ಥೆಗೆ ಸಹಕರಿಸಿದಂತೆ ಆಗುತ್ತದೆ ಎಂಬುದನ್ನೂ ಮರೆಯಬಾರದು. ಹಗಲು ಹೊತ್ತಿನಲ್ಲೂ ಬೀದಿ ದೀಪಗಳು ಉರಿಯುತ್ತಿರುವುದನ್ನು ಆಗಾಗ್ಗೆ ಗಮನಿಸುತ್ತೇವೆ. ಬೀದಿ ದೀಪಗಳು ಅನಗತ್ಯವಾಗಿ ಉರಿದರೆ ವಿದ್ಯುಚ್ಛಕ್ತಿಯ ಪೋಲು ಮಾಡಿದಂತೆ ಅಷ್ಟೇ ಅಲ್ಲದೆ, ಅದಕ್ಕೆ ತಗಲುವ ಸಾವಿರಾರು ರೂ.ಗಳ ಹೆಚ್ಚಿನ ವೆಚ್ಚವನ್ನು ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳು ಹೊರಬೇಕಾಗುತ್ತದೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಸಿಗಬಹುದಾಗಿದ್ದ ಅನುದಾನಗಳಿಗೆ ಕಡಿತ ಬೀಳುತ್ತದೆ. ಇದೂ ಭ್ರಷ್ಠಾಚಾರವೇ ಆಗಿದೆ.
     ಭ್ರಷ್ಠತೆ ಇಂದು ಯಾವ ಮಟ್ಟದಲ್ಲಿದೆಯೆಂದರೆ ಪೋಲಿಸರ ನೈತಿಕ ಸ್ಥೈರ್ಯ ಕುಸಿಯುತ್ತಿದೆ. ಕಣ್ಣಿಗೆ ಕಾಣುವಂತೆ ಅಪರಾಧಗಳನ್ನು ಮಾಡುವ ಜನಪ್ರತಿನಿದಿಗಳು ಮತ್ತು ಅವರ ರೌಡಿ ಹಿಂಬಾಲಕರುಗಳ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಆಳುವ ವರ್ಗವೇ ಬೆಂಬಲಕ್ಕೆ ಬರುತ್ತದೆ. ಕುಡಿದು ಯದ್ವಾ ತದ್ವಾ ಕಾರು ಚಲಾಸುವ ಯುವಕ 'ತಾನು ಮಾಜಿ ಮುಖ್ಯಮಂತ್ರಿಯ ಮೊಮ್ಮಗ, ತನ್ನ ತಂಟೆಗೆ ಬಂದರೆ ಹುಷಾರ್' ಎಂದು ಪೋಲಿಸರಿಗೆ ಬಹಿರಂಗ ಬೆದರಿಕೆ ಹಾಕುತ್ತಾನೆ. ಮಾಜಿ ಸಂಸದರ ಮಗ ಮತ್ತು ಅವನ ಸ್ನೇಹಿತರು ಅಪರಾತ್ರಿಯಲ್ಲಿ ಡಾಬಾಕ್ಕೆ ನುಗ್ಗಿ ಬಿರಿಯಾನಿ ಕೊಡಲಿಲ್ಲವೆಂದು ಡಾಬಾಕ್ಕೆ ಬೆಂಕಿಡುತ್ತಾರೆ, ಪೀಠೋಪಕರಣಗಳನ್ನು ಹಾಳುಗೆಡವುತ್ತಾರೆ. ಕಾನೂನು, ಕಟ್ಟಳೆಗಳು ಹಣವುಳ್ಳವರನ್ನು, ಪುಂಡ ಪೋಕರಿಗಳನ್ನು ಮುಟ್ಟಲು ಕಷ್ಟವೆಂದರೆ ಜನಸಾಮಾನ್ಯರನ್ನು ರಕ್ಷಿಸುವವರು ಯಾರು? ಆಳುವವರಲ್ಲಿ ಜನರು ವಿಶ್ವಾಸ ಕಳೆದುಕೊಂಡರೆ ಅರಾಜಕತೆ ತಾಂಡವವಾಡುತ್ತದೆ, ಕ್ಷೋಭೆ ಹರಡುತ್ತದೆ. ಜನರಲ್ಲಿ ಜಾಗೃತಿ ಮೂಡುವವರೆಗೆ, ಹಣ, ಹೆಂಡ, ಜಾತಿ, ಮತ, ಇತ್ಯಾದಿಗಳ ಆಮಿಷಕ್ಕೆ ಒಳಗಾಗದೆ ಯೋಗ್ಯರನ್ನು ಆರಿಸಿ ಕಳಿಸುವವರೆಗೆ, ಭ್ರಷ್ಠಾಚಾರ ಕಂಡರೂ ಕಾಣದಂತೆ ಸುಮ್ಮನಿರುವವರೆಗೆ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ನಿರೀಕ್ಷಿಸಲಾಗದು. ಇಂದು ವ್ಯಾಪಕವಾಗಿರುವ ಭ್ರಷ್ಟಾಚಾರದ ಮೂಲಬೇರು ಎಲ್ಲಿದೆಯೆಂದರೆ ಜನರಿಗೆ ಅಗತ್ಯವಾದ ಮೂಲಭೂತ ಕಾರ್ಯಕ್ರಮಗಳ ಜಾರಿ ಸರಿಯಾಗಿ ಆಗುತ್ತಿದೆಯೇ ಎಂಬುದನ್ನು ಗಮನಿಸುವಲ್ಲಿನ ವೈಫಲ್ಯದಲ್ಲಿ, ನಮ್ಮ ಅಜಾಗರೂಕತೆಯಲ್ಲಿ ಮತ್ತು ಅನ್ಯಾಯವೆಂದು ಗೊತ್ತಿದ್ದೂ ಸಹಿಸಿಕೊಂಡಿರುವಲ್ಲಿ!
-ಕ.ವೆಂ.ನಾಗರಾಜ್.
**************
23.7.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


2 ಕಾಮೆಂಟ್‌ಗಳು:

  1. ನಮ್ಮ ಬುದ್ದಿಯನ್ನೇ ಮರು ಮೌಲ್ಯ ಮಾಪನ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಬರಹ.
    ರಾಜಕಾರಣಿಗಳು ಮತ್ತವರ ಆಟಾಟೋಪ ದಿನಂಪ್ರತಿ ಹೆಚ್ಚುತ್ತಲೇ ಇದೆ! ಕಡಿವೇಣವೆಂತೋ?

    ಪ್ರತ್ಯುತ್ತರಅಳಿಸಿ