ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 18, 2014

ಭಿಕ್ಷೆಯಲ್ಲ, ನ್ಯಾಯ ಕೊಡಿ!     ಇದು ನಂಬಲು ಅಸಾಧ್ಯವೆನಿಸಿದರೂ ಸತ್ಯವಾದ ಸಂಗತಿಯಾಗಿದೆ. ತಿಂಗಳಿಗೆ ರೂ. ೧೫ ಸಂಬಳ ಪಡೆದು ಸುಮಾರು ೪೦ ವರ್ಷಗಳು ದುಡಿದ ಇಬ್ಬರು ಬಡ ಹೆಣ್ಣುಮಕ್ಕಳ ವ್ಯಥೆಯ ಕಥೆಯಿದು. ಈ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟವರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಫೌಂಡೇಶನ್ನಿನ ಅಧ್ಯಕ್ಷರಾದ ಶ್ರೀ ರವೀಂದ್ರನಾಥ ಶಾನಭಾಗರು. ಕಳೆದ ವಾರ ಹಾಸನಕ್ಕೆ ಬಂದಿದ್ದ ಅವರು ಹಾಸನದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಡಳಿತದಲ್ಲಿ ಸ್ಪಂದನಶೀಲತೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡುತ್ತಾ ಇದನ್ನು ತಿಳಿಸಿದಾಗ ಕೇಳಿದವರು ಅವಾಕ್ಕಾಗಿದ್ದರು. ಆಡಳಿತ ಎಷ್ಟು ಮರಗಟ್ಟಿದೆ, ಚುಕ್ಕಾಣಿ ಹಿಡಿದವರಲ್ಲಿ ಮಾನವೀಯತೆ ಹೇಗೆ ಮರೆಯಾಗಿದೆ ಎಂಬುದನ್ನು ಎತ್ತಿ ತೋರಿಸುವ ಇಂತಹ ನೂರಾರು ಪ್ರಕರಣಗಳು ಇವೆ ಎಂಬುದು ದುರಂತವೇ ಸರಿ. 
     ಕಿನ್ನಿಮೂಲ್ಕಿ ಗ್ರಾಮದ ಅಕ್ಕು ಮತ್ತು ಚಿಟ್ಪಾಡಿ ಗ್ರಾಮದ ಲೀಲಾ ಇವರು ೧೯೭೧ರಲ್ಲಿ ಉಡುಪಿಯ ಸರ್ಕಾರಿ ಮಹಿಳಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ಪ್ರತಿ ತಿಂಗಳು ರೂ. ೧೫ ಸಂಬಳದ ಮೇಲೆ ಕೆಲಸಕ್ಕೆ ಸೇರಿದವರು ೨೦೧೧ರಲ್ಲಿ ನಿವೃತ್ತರಾದಾಗಲೂ ಇದ್ದುದು ಈ ಸಂಬಳದಲ್ಲೇ! ತಮ್ಮನ್ನು ಖಾಯಂ ನೌಕರರಾಗಿ ಪರಿಗಣಿಸಲು ಅವರು ಕೋರುತ್ತಲೇ ಇದ್ದರು. ಸಂಸ್ಥೆಯ ಪ್ರಾಂಶುಪಾಲರು ಅವರ ಖಾಯಂ ನೇಮಕಾತಿಗೆ ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರಗಳನ್ನೂ ಬರೆದಿದ್ದರು. ಆದರೆ ಇದನ್ನು ಪರಿಗಣಿಸುವುದಿರಲಿ, ಯಾವುದೇ ಕ್ರಮ ಕೈಗೊಳ್ಳಲೂ ಯಾರೂ ಮನಸ್ಸು ಮಾಡಿರಲೇ ಇಲ್ಲ. ಇವರು ಕೆಲವು ವರ್ಷಗಳ ನಂತರದಲ್ಲಿ ಕೆಲಸ ಬಿಡಬೇಕೆಂದಿದ್ದರೂ, ಪ್ರಾಂಶುಪಾಲರು ಅವರ ಕೆಲಸ ಖಾಯಂ ಆದರೆ ಬಾಕಿ ವೇತನ ಸಾವಿರಾರು ರೂ.ಗಳು ಬರುತ್ತದೆ, ಕೆಲಸ ಬಿಡಬೇಡಿ ಎಂದಿದ್ದರಿಂದ ಆ ಆಸೆಯಿಂದ ಅವರು ದುಡಿಯುತ್ತಲೇ ಹೋದರು. ಐದು ವರ್ಷವಾಯಿತು, ಹತ್ತು ವರ್ಷವಾಯಿತು, ಹೆಚ್ಚು ಸಂಬಳ ಬರುತ್ತದೆಂಬ ಆಸೆ ಮಾತ್ರವೇ ಅವರನ್ನು ಕೆಲಸ ಬಿಡದಂತೆ ನೋಡಿಕೊಂಡಿತ್ತು.
     ೧೯೮೪ಕ್ಕಿಂತ ಮುನ್ನಿನ ಅವಧಿಯಲ್ಲಿ ೧೦ ವರ್ಷಗಳಿಗೂ ಹೆಚ್ಚು ಕಾಲ ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ನೌಕರರನ್ನೂ ಖಾಯಂಗೊಳಿಸಲು ಸ್ಪಷ್ಟ ಸರ್ಕಾರಿ ಆದೇಶವಿದೆ. ಈ ಹೆಣ್ಣು ಮಕ್ಕಳು ಅದಾಗಲೇ ಈ ಅವಧಿಯಲ್ಲಿ ೧೩ ವರ್ಷಗಳಿಗೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿದ್ದು ಅವರ ಸೇವೆ ಖಾಯಂ ಗೊಳಿಸಲು ಅರ್ಹತೆ ಹೊಂದಿದ್ದರು. ಅಕ್ಕು-ಲೀಲಾರ ಹಲವಾರು ಮನವಿಗಳಿಗೆ ಕವಡೆ ಕಿಮ್ಮತ್ತಿನ ಗಮನವೂ ಸಿಗಲಿಲ್ಲ. ಕೇವಲ ರೂ. ೧೫ ಸಂಬಳ ಪಡೆದು, ನೂರಾರು ಜನರು ಬಳಸುವ ಶೌಚಾಲಯವನ್ನು ದಿನಕ್ಕೆ ಎರಡು-ಮೂರು ಸಲ ಸ್ವಚ್ಛಗೊಳಿಸುತ್ತಿದ್ದ, ರಜಾ ಸೌಲಭ್ಯವೂ ಇಲ್ಲದೆ, ಕೆಲಸದ ದಿನ, ರಜಾದಿನ ಎಂಬ ಭೇದವಿಲ್ಲದೆ ಪ್ರತಿನಿತ್ಯ ಕೆಲಸ ಮಾಡುತ್ತಿದ್ದ ಅವರ ಕೆಲಸ ಪರಿಗಣಿಸದ ಸರ್ಕಾರದ ಜಡ್ಡುಗಟ್ಟಿದ ವ್ಯವಸ್ಥೆ ಹೇಸಿಗೆ ಹುಟ್ಟಿಸುವಂತಹದು. ಬೇರೆ ದಾರಿ ಕಾಣದೆ ಇವರು ಭೇಟಿ ಮಾಡಿದ್ದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಫೌಂಡೇಶನ್ನಿನ ಅಧ್ಯಕ್ಷರಾದ ಶ್ರೀ ರವಿಂದ್ರನಾಥ ಶಾನಭಾಗರನ್ನು. ಈ ಸಂದರ್ಭದಲ್ಲಿ ಈ ಸಂಸ್ಥೆಯ ಬಗ್ಗೆ ಒಂದೆರಡು ಮಾತು. ಈ ಸಂಸ್ಥೆ ಮಾನವ ಹಕ್ಕುಗಳ ಉಲ್ಲಂಘನೆಯಾದ ಪ್ರಕರಣಗಳಲ್ಲಿ ಸಂಬಂಧಿಸಿದವರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ನೆರವು ಕೊಡುತ್ತದೆ. ಪ್ರತಿಫಲವಾಗಿ ಯಾರಿಂದಲೂ ಒಂದು ರೂಪಾಯಿಯನ್ನೂ ಬಯಸದವರು ಇವರು. ಕಾನೂನು, ಕಾಯದೆಗಳಲ್ಲಿನ ಮಾರ್ಗಗಳನ್ನು ಮಾತ್ರ ಬಳಸುತ್ತಾರೆ. ಪ್ರತಿಭಟನೆ, ಸತ್ಯಾಗ್ರಹ, ಇತ್ಯಾದಿಗಳ ಮೊರೆ ಹೋಗುವುದಿಲ್ಲ. ಸಂಸ್ಥೆಯ ಅನೇಕ ಸ್ವಯಂಸೇವಕರು ಸ್ವ ಇಚ್ಛೆಯಿಂದ ನೆರವು ನೀಡುತ್ತಾರೆ. ಈ ಪ್ರಕರಣದಲ್ಲಿ ಮಾನವ ಹಕ್ಕು ರಕ್ಷಣಾ ಫೌಂಡೇಶನ್ ನೆರವಿನಿಂದ ಅಕ್ಕು-ಲೀಲಾರವರಿಂದ ಕೆ.ಎ.ಟಿ.ಯಲ್ಲಿ ನ್ಯಾಯ ಕೋರಿ ಮನವಿಯನ್ನು ೧೯೯೮ರಲ್ಲಿ ಸಲ್ಲಿಸಲಾಗುತ್ತದೆ. ಇದರ ಪರಿಣಾಮವೆಂದರೆ ಸರ್ಕಾರ ಅಕ್ಕು, ಲೀಲಾರವರು ಮಂಜೂರಾದ ಹುದ್ದೆಯಲ್ಲಿ ಕೆಲಸ ಮಾಡುತ್ತಿಲ್ಲವೆಂಬ ಕಾರಣ ತೋರಿಸಿ ಅವರನ್ನು ಸೇವೆಯಿಂದಲೇ ತೆಗೆದುಬಿಡುತ್ತದೆ, ರಕ್ಷಿಸಿ ಎಂದು ಮೊರೆಯಿಟ್ಟವರನ್ನು ಬಾವಿಗೆ ದೂಡಿದಂತೆ! ತುತ್ತು ಅನ್ನಕ್ಕೂ ಕಷ್ಟಪಡುವವರ ಪಾಡನ್ನು ಯಾರು ಕೇಳಬೇಕು? ನಂತರದಲ್ಲಿ ಅಕ್ಕು, ಲೀಲಾರವರು ರವೀಂದ್ರನಾಥ ಶಾನಭಾಗರ ಸಲಹೆಯ ಮೇರೆಗೆ ಕೆಲಸ ಮಾಡುವುದನ್ನು ಮುಂದುವರೆಸುತ್ತಾರೆ. ಆದರೆ ಬರುತ್ತಿದ್ದ ೧೫ ರೂ. ಸಂಬಳವೂ ಅವರಿಗೆ ಸಿಗುವುದಿಲ್ಲ. ಕೆಲಸದಿಂದ ತೆಗೆದುಹಾಕಿದ ನಂತರದಲ್ಲಿ ಕೆಲಸ ಮಾಡುತ್ತಿದ್ದರೂ ಮಾಡಬೇಡವೆಂದು ಅವರಿಗೆ ತರಬೇತಿ ಸಂಸ್ಥೆಯವರು ಅಡ್ಡಿಪಡಿಸುವುದಿಲ್ಲ, ಏಕೆಂದರೆ ಶೌಚಾಲಯವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಏಕೆ ಬೇಡವೆಂದಾರು ಮತ್ತು ಇಷ್ಟು ಕಡಿಮೆ ಸಂಬಳದಲ್ಲಿ ಈ ಕೆಲಸವನ್ನು ಬೇರೆ ಯಾರು ಮಾಡಿಯಾರು?
     ಕೆ.ಎ.ಟಿ.ಯಲ್ಲಿ ಐದು ವರ್ಷಗಳ ಕಾಲ ವಿಚಾರಣೆ ನಡೆದು ೨೦೦೩ರಲ್ಲಿ ತೀರ್ಪು ಹೊರಬಿದ್ದು, ಅಕ್ಕು, ಲೀಲಾರವರ ಸೇವೆಯನ್ನು ೧೯೭೧ರಿಂದಲೇ ಖಾಯಂಗೊಳಿಸಿ ಅವರಿಗೆ ಕೊಡಬೇಕಾದ ವೇತನದ ಬಾಕಿ ಕೊಡಬೇಕೆಂದು ಆದೇಶವಾಗುತ್ತದೆ. ಸರ್ಕಾರ ಈ ಆದೇಶವನ್ನು ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸುತ್ತದೆ. ಅಲ್ಲಿಯೂ ವಿಚಾರಣೆ ನಡೆದು ೨೦೦೪ರಲ್ಲಿ ಕೆ.ಎ.ಟಿ.ಯ ಆದೇಶವನ್ನು ಎತ್ತಿಹಿಡಿಯಲಾಗುತ್ತದೆ. ಆದರೆ ಸರ್ಕಾರಕ್ಕೆ ನ್ಯಾಯವನ್ನು ಪುರಸ್ಕರಿಸಲು ಮನಸ್ಸು ಮಾಡುವುದಿಲ್ಲ. ಮಣ್ಣಿನ ಮಕ್ಕಳು, ಮೊಮ್ಮಕ್ಕಳು, ರೈತರ ಹಿತರಕ್ಷಕರು, ಆಮ್ ಆದ್ಮಿಯ ಶುಭಾಕಾಂಕ್ಷಿಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಅವರು ಯಾರಿಗೂ ಈ ಬಡ ಹೆಣ್ಣು ಮಕ್ಕಳ ಬಗ್ಗೆ ಕನಿಕರ ಬರುವುದೇ ಇಲ್ಲ. ಒಪ್ಪೊತ್ತಿನ ಊಟಕ್ಕೂ ಪರದಾಡಬೇಕಾದ ಈ ಬಡಪಾಗಳ ವಿರುದ್ಧವಾಗಿ ಸರ್ಕಾರ ಸುಪ್ರೀಮ್ ಕೋರ್ಟಿನ ಮೊರೆ ಹೋಗುತ್ತದೆಂದರೆ ಎಂಥವರಿಗೂ ಹೇಸಿಗೆಯೆನಿಸುತ್ತದೆ. ಸುಪ್ರೀಮ್ ಕೋರ್ಟಿನಲ್ಲಿ ರಕ್ಷಣಾ ಫೌಂಡೇಶನ್ನಿನ ಸ್ವಯಂಸೇವಕರು ಇವರ ಪರವಾಗಿ ವಾದಿಸಲು ನ್ಯಾಯವಾದಿಗಳನ್ನು ನೇಮಿಸುತ್ತದೆ. ೨೦೧೦ರಲ್ಲಿ ಸರ್ವೋಚ್ಛ ನ್ಯಾಯಾಲಯವೂ ಸಹ ಕೆಳ ಕೋರ್ಟುಗಳ ಆದೇಶಗಳನ್ನೇ ಎತ್ತಿ ಹಿಡಿದು, ನೊಂದ ಮಹಿಳೆಯರ ಸೇವೆಯನ್ನು ೧೯೭೧ರಿಂದಲೇ ಖಾಯಂ ಗೊಳಿಸಿ ಪೂರ್ಣ ವೇತನ ಪಾವತಿಸಲು ನಿರ್ದೇಶನ ನೀಡುತ್ತದೆ. ಈ ಸರ್ಕಾರಕ್ಕೆ ಏನಾಗಿತ್ತು? ಸುಪ್ರೀಮ್ ಕೋರ್ಟಿನ ಆದೇಶದ ನಂತರವೂ ಆದೇಶ ಪಾಲನೆ ಆಗುವುದೇ ಇಲ್ಲ. ವಿಧಿಯಿಲ್ಲದೆ ಇವರ ಪರವಾಗಿ ಸುಪ್ರೀಮ್ ಕೋರ್ಟಿನಲ್ಲಿ ಜೂನ್, ೨೦೧೨ರಲ್ಲಿ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಲಾಗುತ್ತದೆ. ಅಕ್ಟೋಬರ್ ತಿಂಗಳವರಗೆ ಪ್ರಕರಣ ಇತ್ಯರ್ಥ ಪಡಿಸಲು ಅವಕಾಶ ನೀಡಿದ ನ್ಯಾಯಾಲಯ, ಅದರ ಪಾಲನೆ ಮಾಡದಿದ್ದುದಕ್ಕೆ ಎಚ್ಚರಿಕೆ ನೀಡುತ್ತದೆ. ಬಂಧನಕ್ಕೊಳಗಾಗುವ ಭೀತಿಯಿಂದ ಎಚ್ಚೆತ್ತ ಅಧಿಕಾರಿಗಳು ಅಕ್ಕು, ಲೀಲಾರವರ ಸೇವೆಯನ್ನು ೧೯೯೮ರಿಂದ ೨೦೦೩ರ ಮಾರ್ಚಿವರೆಗೆ ಖಾಯಂಗೊಳಿಸಿ ಅವರಿಗೆ ತಲಾ ರೂ.೨,೨೧,೨೯೬/- ಅನ್ನು ಕೊಡಮಾಡುತ್ತದೆ. ಸರ್ಕಾರದ ವತಿಯಿಂದ ಕೋರ್ಟಿಗೆ ಎರಡನೆಯ ಕಂತಾಗಿ ರೂ.೩.೬೮ ಲಕ್ಷ ಅನ್ನು ಪಾವತಿಸಿರುವುದಾಗಿಯೂ ತಿಳಿಸುವುದರೊಂದಿಗೆ ಎರಡು ವಾರಗಳೊಳಗೆ ಸೇವೆ ಖಾಯಂಗೊಳಿಸುವ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಅಫಿಡವಿಟ್ ಸಲ್ಲಿಸುತ್ತದೆ. ಆದರೆ ೧೯೯೮ರಿಂದ ೨೦೦೩ರವರೆಗಿನ ಸೇವೆಯನ್ನು ಮಾತ್ರ ಖಾಯಂಗೊಳಿಸಿದ ಸರ್ಕಾರ ಹಿಂದಿನ ಸೇವೆಯ ಬಗ್ಗೆ ಕ್ರಮ ತೆಗೆದುಕೊಳ್ಳುವುದೇ ಇಲ್ಲ. ಸುಮಾರು ೨೭ ಲಕ್ಷ ರೂ.ಗಳು ಬಾಕಿ ಬರಬೇಕಿದ್ದು, ವಿಷಯ ಪೂರ್ಣ ತಾರ್ಕಿಕ ಅಂತ್ಯ ಕಾಣುವವರೆಗೂ ಸಂಸ್ಥೆ ಬಿಡುವುದಿಲ್ಲವೆಂದು ರವೀಂದ್ರನಾಥ ಶಾನಭಾಗರು ಹೇಳುವಾಗ ಅವರ ಕಳಕಳಿ ಮನ ತಟ್ಟುತ್ತದೆ. ರಾಜ್ಯದಲ್ಲಿ ಇಂತಹ ಸುಮಾರು ೭೫೦ ಅಕ್ಕು, ಲೀಲಾಗಳು ಹಲವೆಡೆ ಇದ್ದಾರೆಂದು ಅವರು ಹೇಳುತ್ತಾರೆ. ಇವರುಗಳಿಗೂ ನ್ಯಾಯ ಸಿಗಲೇಬೇಕಿದೆ.
     ಅಕ್ಕುವಿನ ಗಂಡ ಖಾಯಿಲೆಯಿಂದ ನರಳುತ್ತಾ ಮನೆಯಲ್ಲಿದ್ದಾನೆ. ಇಬ್ಬರು ಗಂಡು ಮಕ್ಕಳ ಪೈಕಿ ಒಬ್ಬ ಪೈಂಟರ್ ಆಗಿ ಮತ್ತು ಇನ್ನೊಬ್ಬ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಮೂವರು ಹೆಣ್ಣು ಮಕ್ಕಳ ಪೈಕಿ ಒಬ್ಬಳಿಗೆ ಮದುವೆಯಾಗಿದ್ದು, ಉಳಿದಿಬ್ಬರಿಗೆ ಮದುವೆ ಮಾಡಬೇಕಿದೆ. ಲೀಲಾಳ ಗಂಡ ಪೌರಕಾರ್ಮಿಕನಾಗಿದ್ದು ನಿವೃತ್ತನಾಗಿ, ಈಗ ಕೂಲಿ ಕೆಲಸ ಮಾಡುತ್ತಾನೆ. ಮೂವರು ಹೆಣ್ಣು ಮಕ್ಕಳಿದ್ದು ಜೀವನ ಸಾಗಿಸುವುದು ಕಷ್ಟವಾಗಿದೆ. ಜಡ್ಡುಗಟ್ಟಿದ ಅಧಿಕಾರಶಾಹಿ, ಸ್ಪಂದನರಹಿತರಾದ ಆಡಳಿತದ ಚುಕ್ಕಾಣಿ ಹಿಡಿದವರು ನಮ್ಮಲ್ಲಿ ಅವರ ವಿರುದ್ಧ ಸಿಟ್ಟು, ಹೇವರಿಕೆ ಮೂಡಿಸಿದರೆ, ಮಾನವ ಹಕ್ಕು ರಕ್ಷಣಾ ಫೌಂಡೇಶನ್ನಿನ ನಿಸ್ವಾರ್ಥ ಕಾರ್ಯ ಆಶಾಕಿರಣ ಮೂಡಿಸುತ್ತದೆ. ಈ ಸಂಸ್ಥೆಯ ನೆರವಿಲ್ಲದಿದ್ದರೆ ಅಕ್ಕು. ಲೀಲಾರಿಗೆ ನ್ಯಾಯ ಸಿಗಲು ಸಾಧ್ಯವೇ ಇರುತ್ತಿರಲಿಲ್ಲ. ಈ ಸಂಸ್ಥೆ ಸುಮಾರು ೨೬೦೦೦ ಪ್ರಕರಣಗಳಲ್ಲಿ ಇದುವರೆಗೆ ನೊಂದವರಿಗೆ ನ್ಯಾಯ ದೊರಕಿಸಿಕೊಟ್ಟಿದೆ. ಇವರಿಂದ ನೆರವು ಪಡೆದವರಲ್ಲಿ ಎನ್‌ಕೌಂಟರ್ ಖ್ಯಾತಿಯ ಇನ್ಸ್‌ಪೆಕ್ಟರ್ ದಯಾನಾಯಕ್ ಸಹಾ ಒಬ್ಬರಾಗಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರು ಮತ ಹಾಕಲು ತಲಾ ಒಂದು ಕೋಟಿ ಹಣ ಪಡೆಯುತ್ತಾರೆಂಬ ಆರೋಪವಿದೆ. ಹಣ ಕೊಟ್ಟು ನಮ್ಮನ್ನಾಳುವ ಸದಸ್ಯರಾಗುತ್ತಾರೆ. ಆದರೆ ಅಕ್ಕು. ಲೀಲಾರಂತಹವರಿಗೆ ನ್ಯಾಯ ಒದಗಿಸಲು ಅವರಿಗೆ ಮನಸ್ಸಾಗುವುದಿಲ್ಲ. ರಾಜಕಾರಣಿಗಳು ಏನೂ ಮಾಡದೆ ಕೋಟಿ ಕೋಟಿ ಅಕ್ರಮ ಸಂಪತ್ತಿನ ಒಡೆಯರಾಗುತ್ತಾರೆ. ಆದರೆ, ಶೌಚಾಲಯ ತೊಳೆಯುವ ಕಾರ್ಮಿಕರು ಸಿಗಬೇಕಾದ ಸಂಬಳ ಪಡೆಯುವುದಕ್ಕೂ ಸುಪ್ರೀಮ್ ಕೋರ್ಟಿನ ಮೊರೆ ಹೋಗಬೇಕಾಗುತ್ತದೆ.
     ನ್ಯಾಯಾಲಯದ ಆದೇಶಗಳಿಗೂ ಗೌರವ ಕೊಡದ ಸರ್ಕಾರದ ನಡವಳಿಕೆ ಖಂಡನೀಯವಾದುದು. ಸಾಂದರ್ಭಿಕವಾಗಿ ಸ್ವಂತದ ಅನುಭವವನ್ನೂ ಉಲ್ಲೇಖಿಸುವೆ. ನನ್ನದೇ ಆದ ಎರಡು ಬೇಡಿಕೆಗಳ ಇತ್ಯರ್ಥಕ್ಕೂ ಮಾನವ ಹಕ್ಕುಗಳ ರಕ್ಷಣಾ ಫೌಂಡೇಶನ್ನಿನ ನೆರವು ಪಡೆಯುವ ಬಗ್ಗೆ ಚಿಂತಿಸುತ್ತಿದ್ದೇನೆ. ಸೇವಾಜ್ಯೇಷ್ಠತೆಯಲ್ಲಿ ನನಗಿಂತ ಕಿರಿಯರಾದವರು ನನಗಿಂತ ಹೆಚ್ಚು ವೇತನ ಪಡೆಯುತ್ತಿದ್ದು, ನನ್ನ ವೇತನವನ್ನೂ ಅವರ ವೇತನಕ್ಕೆ ಸಮಾನಾಂತರದಲ್ಲಿ ನಿಗದಿಸಲು ಕೋರಿದ ನನ್ನ ಬೇಡಿಕೆ ಕಳೆದ ೧೫ ವರ್ಷಗಳಿಂದಲೂ ಬಾಕಿ ಉಳಿದಿದೆ. ಹಾಸನ ಮತ್ತು ಶಿವಮೊಗ್ಗದ ಜಿಲ್ಲಾಧಿಕಾರಿಯವರು, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ನನ್ನ ಬೇಡಿಕೆ ನ್ಯಾಯಯುತವಾದುದೆಂದು ಲಿಖಿತವಾಗಿ ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ದಾರೆ. ಕೆ.ಸಿ.ಎಸ್.ಆರ್. ನಿಯಮಾವಳಿಯಲ್ಲಿ ಸ್ಪಷ್ಟ ನಿರ್ದೇಶನವಿದೆ. ನಾನೂ ಸಹ ಕೆ.ಎ.ಟಿ.ಗೆ ಮನವಿ ಸಲ್ಲಿಸಿದ್ದು ೨೦೦೧ರಲ್ಲಿ ನನ್ನ ಮನವಿ ಪುರಸ್ಕರಿಸಲು ನ್ಯಾಯಾಲಯ ಆದೇಶಿಸಿದೆ. ಹೀಗಿದ್ದೂ ಜಡ್ಡುಗಟ್ಟಿದ ವ್ಯವಸ್ಥೆಗೆ ಸ್ಪಂದಿಸಲು ಆಗಿಲ್ಲ. ಸರ್ಕಾರದ ಕಂದಾಯ ಇಲಾಖೆಯೇ ಪ್ರಕಟಿಸಿದ ತಹಸೀಲ್ದಾರ್ ಗ್ರೇಡ್-೧ರ ಜ್ಯೇಷ್ಠತಾಪಟ್ಟಿಯಲ್ಲಿನ ಅರ್ಹತಾ ದಿನಾಂಕಕ್ಕೆ ಅನುಗುಣವಾಗಿ ನನ್ನ ವೇತನ ನಿಗದಿಸಲು ಯಾವುದೇ ಅಡ್ಡಿಯಿಲ್ಲದಿದ್ದರೂ ಕಳೆದ ೪ ವರ್ಷಗಳಿಂದಲೂ ಮಾಡದೆ ಇರುವುದಕ್ಕೆ ಕಾರಣಗಳು ಸರ್ಕಾರಕ್ಕೆ ಮಾತ್ರ ತಿಳಿದಿರಬೇಕು. ಜನರು ಆಡಳಿತದಲ್ಲಿ ವಿಶ್ವಾಸ ಕಳೆದುಕೊಳ್ಳುವ ಮುನ್ನ ಶಾಸಕಾಂಗ ಮತ್ತು ಕಾರ್ಯಾಂಗಗಳು ಎಚ್ಚರಗೊಳ್ಳುವುದು ಒಳಿತು.
-ಕ.ವೆಂ.ನಾಗರಾಜ್.
********************
ಕೊನೆಗೂ ನ್ಯಾಯ ಗೆದ್ದಿತು!!
     42 ವರ್ಷಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿತು! ರಾಜ್ಯ ಸರ್ಕಾರ ಅಕ್ಕು-ಲೀಲಾರಿಗೆ, 40 ವರ್ಷಗಳ ಕಾಲ ಕೇವಲ 15 ರೂ. ಸಂಬಳದ ಮೇಲೆ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದ ಬಡಮಹಿಳೆಯರಿಗೆ, ತಲಾ ರೂ. 30 ಲಕ್ಷ ಕೊಡಲು ಒಪ್ಪಿದೆ. ನ್ಯಾಯ ದೊರಕಿಸಲು ಹೋರಾಡಿದ ುಡುಪಿಯ ಮಾನವ ಹಕ್ಕುಗಳ ರಕ್ಷಣಾ ಫೌಂಡೇಶನ್ನಿನ ಅಧ್ಯಕ್ಷ ಶ್ರೀ ರವೀಂದ್ರನಾಥ ಶಾನಭಾಗರಿಗೆ ಮತ್ತು ಅವರ ಸಂಸ್ಥೆಯ ಸ್ವಯಂಸೇವಕರುಗಳಿಗೆ ಹೃದಯಪೂರ್ವಕ ಅಭಿನಂದನೆಗಳು.
ಪೂರಕ ವಿವರಗಳಿಗೆ: http://tulunadunews.com/186355/victory-akku-leela-last-state-govt-regularise-services-42-year/
*******************
16.7.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.

7 ಕಾಮೆಂಟ್‌ಗಳು:

 1. ಈ ವ್ಯಥೆಯ ಧಾರುಣ ವಿಚಾರವನ್ನು ಮೀಡಿಯಾ ಸಹ ವರದಿ ಮಾಡಿತ್ತು.
  ಸ್ಥಳೀಯ ಕಾರ್ಯಾಂಗವು ರಾಜ್ಯ ಶಾಸಕಾಂಗದ ಮೇಲೆ ಒತ್ತಡವಹೇರಿ ಕೂಡಲೇ ಪೂರ್ಣ ಪರಿಹಾರ ಪೂರೈಸಬೇಕು.

  ಮನ ಮಿಡಿಯುವ ಬರಹ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ವಂದನೆಗಳು, ಬದರೀನಾಥರೇ.

   ಅಳಿಸಿ
  2. Sathya Charana S.M.
   ಹಾ ಸರ್.. ಇದರ ಬಗ್ಗೆ ಓದಿದೆ.. ತಕ್ಷಣ ಇದೆಲ್ಲೋ ನೋಡದ್ನಲ್ಲಾ ಅನ್ಕೊಂಡೆ, ಆಮೇಲೆ ನಿಮ್ಮ ಬರಹ ಅನ್ನೋದು ಈಗ ಇದನ್ನ ನೋಡಿದ ಮೇಲೆ ನೆನಪಾಗಿದ್ದು...! ಹಾಗಾದರೆ, ನಿಮ್ಮ ಬರಹ ಏನಾದರೂ ಪರಿಣಾಮ ಬೀರಿತ್ತೆ ಎಲ್ಲಾದರೂ... ಏನು?

   ಅಳಿಸಿ
  3. nageshamysore
   ಕವಿಗಳೆ ನಮಸ್ಕಾರ, ಈಗಿನ ಕಾಲದಲ್ಲಿ ನ್ಯಾಯ ಸಿಗುವುದಕ್ಕಿಂತ ಭಿಕ್ಷೆ ಸಿಗುವುದೆ ಸುಲಭ! ಸದ್ಯ ಈ ಕೇಸಿನಲ್ಲಿ ಕೊನೆಗೂ ನ್ಯಾಯ ಸಿಕ್ಕಿತಲ್ಲ - ಅದು ಸಂತಸದ ವಿಷಯ :-)

   kavinagaraj
   ನ್ಯಾಯಕ್ಕಾಗಿ ಹೋರಾಡುವ ಸ್ಥಿತಿ ಇದೆಯೆಂದರೆ ಅದು ಸಮಾಜ ಅವನತಿಯತ್ತ ಹೋಗುತ್ತಿರುವ ಸಂಕೇತ! ಪ್ರತಿಕ್ರಿಯೆಗೆ ವಂದನೆಗಳು, ನಾಗೇಶರೇ.

   ಅಳಿಸಿ
  4. lpitnal
   ಆತ್ಮೀಯ ಹಿರಿಯರಾದ ಕವಿನಾ ಸರ್ ನಮಸ್ಕಾರ. ಈ ವಿಷಯ ಪತ್ರಿಕೆಗಳಲ್ಲಿ ಓದಿ ಮಮ್ಮಲ ಮರುಗಿದವರಲ್ಲಿ ನಾನೂ ಒಬ್ಬ. ಕೊನೆಗೂ ಅವರಿಗೆ ನ್ಯಾಯ ದೊರಕಿದ್ದು ಸಮಾಧಾನದ ಸಂಗತಿ. ಆದರೆ ಅವರು ಅನುಭವಿಸಿದ, ನೋವು ಬೇಗುದಿ, ಸಂಕಟಗಳಿಗೆ ಬೆಲೆ ಕಟ್ಟಾಲಾದೀತೆ. ಈ ಮೂಲಕ ಅವರಿಗೆ ನನ್ನ ಸಲಾಮ್ ಹಾಗೂ ಶಾನಭಾಗರಿಗೂ ಕೂಡ. ವಂದನೆಗಳು ಸರ್

   kavinagaraj
   ವಂದನೆಗಳು, ಇಟ್ನಾಳರೇ.

   ಅಳಿಸಿ
  5. Mohan Javgal Krishnamurthy
   horaata maadi nyaaya kodisiddakke shanbog and avara swayam sevakarugalige koti koti namana!

   ಅಳಿಸಿ