ನಾವು ಆರು ಜನರು ಕವಿಕಿರಣ ವಿಶ್ವಸ್ತ ಮಂಡಳಿಯ ಸದಸ್ಯರು - ಷಣ್ಮುಖರು! ಆರು ಜನರಿಗೂ ಅವರದೇ ಆದ ಕೆಲಸ ಕಾರ್ಯಗಳು! ಅದು ಅವರವರು ಇಷ್ಟಪಡುವ ಸಾಮಾಜಿಕ ಕಾರ್ಯಗಳಿರಬಹುದು, ಹವ್ಯಾಸಗಳಿರಬಹುದು, ವೃತ್ತಿಯಲ್ಲಿ ವ್ಯಸ್ತರಿರಬಹುದು, ಕೌಟುಂಬಿಕ ಸಮಸ್ಯೆಗಳು, ಜವಾಬ್ದಾರಿಗಳಿರಬಹುದು, ಇನ್ನಿತರ ಒತ್ತಡಗಳಿರಬಹುದು, ಏನೋ ಇರಬಹುದು! ಆದರೂ, ಈ ಕಾರ್ಯ ಮಾಡಲು ಮುಂದೆ ಬಂದಿದ್ದೇವೆ. ಇದಕ್ಕೆ ಸಮಯ ಹೊಂದಾಣಿಕೆ ಹೇಗೆ? ಏನು ಮಾಡಬಹುದು? ಒಂದೆರಡು ಸಣ್ಣ ಟಿಪ್ಸ್, ನಮಗಾಗಿ!!
೧. ಮನಸ್ಸು ಮಾಡೋಣ:
ನಮ್ಮ ಮನಸ್ಸು ಒಪ್ಪುವ ಕೆಲಸಕ್ಕೆ ಸಮಯ ಹೊಂದಾಣಿಕೆ ಆಗಿಯೇ ಆಗುತ್ತದೆ. ಮೊದಲು ನಮ್ಮ ಮನಸ್ಸನ್ನು ಅಣಿ ಮಾಡಿಕೊಳ್ಳೋಣ. ಬಲವಂತದಿಂದ ಆಗುವ ಕೆಲಸ ಇದಲ್ಲ. ನಮ್ಮ ಮನಸ್ಸಿಗೇ ಬರಬೇಕು. ಇದಕ್ಕಾಗಿ ಮಾಡುವ ಕೆಲಸದ ವಿವರ ಮತ್ತು ಪರಿಜ್ಞಾನ ಹೊಂದಬೇಕು. ವಿಶ್ವಸ್ತ ಮಂಡಳಿಯ ಕೆಲಸ ಸದಾ ಕಾಲ ಇರುವುದಿಲ್ಲ. ಮತ್ತು ಇದನ್ನು ಪ್ರತಿನಿತ್ಯ ಮಾಡಲೇಬೇಕು ಎಂಬುದೂ ಇಲ್ಲ. ನಮ್ಮ ದಿನನಿತ್ಯದ, ವೃತ್ತಿ, ಹವ್ಯಾಸ, ಕೌಟುಂಬಿಕ, ಸಾಮಾಜಿಕ ವಿಷಯಗಳಿಗೆ ಮತ್ತು ಇಂತಹ ಇನ್ನಿತರ ಸಂಗತಿಗಳಿಗೆ ಸಂಬಂಧಿಸಿದ ಕರ್ತವ್ಯಗಳ ನಿರ್ವಹಣೆ ಮಾಡಿ ಉಳಿಯುವ ಸ್ವಲ್ಪ ಸಮಯವನ್ನಾದರೂ ಈ ಕೆಲಸಕ್ಕೆ ನೀಡಲು ಮನಸ್ಸನ್ನು ಅಣಿಗೊಳಿಸಿಕೊಳ್ಳಬೇಕು. ಸಮಯ, ಸಂದರ್ಭ, ಅಗತ್ಯತೆ ಅನುಸರಿಸಿ ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಸಮಯವನ್ನು ವಿಶೇಷವಾಗಿ ಹೊಂದಿಸಿಕೊಳ್ಳಲು ಮನಸ್ಸು ಸಿದ್ಧವಿರುವಂತೆ ನೋಡಿಕೊಳ್ಳಬೇಕು. ಒಂದು ಪ್ರಧಾನ ಅಂಶವೆಂದರೆ, ಇದು ಆರು ಜನರ ಪೈಕಿ ಯಾರೊಬ್ಬರೂ ಇನ್ನೊಬ್ಬರ ಸಲುವಾಗಿ, ಅವರ ಉಪಕಾರಕ್ಕಾಗಿ ಮಾಡುತ್ತಿರುವ ಕೆಲಸವಾಗಿಲ್ಲ. ಎಲ್ಲರೂ ಮಾಡುತ್ತಿರುವುದು ಒಂದು ಯಜ್ಞವೆಂಬ ಭಾವನೆಯಿಂದ! ಹೇಳುವ ಮಂತ್ರ - ಇದಂ ನಮಮ - ಇದು ನಮಗಾಗಿ ಅಲ್ಲ! ಎಲ್ಲರಿಗಾಗಿ!! ಆತ್ಮ ಸಂತೋಷದ ಸಲುವಾಗಿ!! ಪರಮಾತ್ಮನ ಪ್ರೀತ್ಯರ್ಥದ ಸಲುವಾಗಿ!!
೨. ವಿಶ್ವಸ್ತ ಮಂಡಳಿಯ ವಿಶ್ವಸನಾ ಪತ್ರ (ಟ್ರಸ್ಟ್ ಡೀಡ್) ಓದೋಣ!
ನಾವು ಮಾಡುವ ಕೆಲಸದ ಅರಿವು ನಮಗಿರಬೇಕು; ಅದಕ್ಕಾಗಿ ಟ್ರಸ್ಟ್ ಡೀಡ್ ಅನ್ನು ಸಮಯ ಮಾಡಿಕೊಂಡು ಓದೋಣ, ಮನನ ಮಾಡಿಕೊಳ್ಳೋಣ! ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ಓದುತ್ತಾ ಹೋದಂತೆ ನಮಗೆ ವಿವಿಧ ಭಾವಗಳು ಮೂಡಬಹುದು: ಇದೆಂತಹ ಹುಚ್ಚು ಕಲ್ಪನೆ, ಇದು ನಮ್ಮಂತಹವರಿಂದ ಸಾಧ್ಯವೇ? ಮಾಡಲು ಕೆಲಸವಿಲ್ಲ, ನಮಗೆ ಈಗಿರುವ ಕೆಲಸಕಾರ್ಯಗಳೇ ಹಾಸಿ ಹೊದೆಯುವಷ್ಟಿರುವಾಗ ಇದಕ್ಕೆಲ್ಲಾ ಎಲ್ಲಿ ಸಮಯ ಕೊಡುವುದು? ಹೀಗೆ ಸಮ್ಮಿಶ್ರ ವಿಚಾರಗಳು ಮನಸ್ಸಿನಲ್ಲಿ ಮೂಡಬಹುದು. ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ: ಈ ಉದ್ದೇಶ ಸರ್ವ ಸಾಮಾನ್ಯನ ಹಿತದ ಸಲುವಾಗಿ ಇದೆಯೇ, ಇಲ್ಲವೇ? ಬರುವ ಉತ್ತರ ಇದೆಯೆಂದೇ ಆಗಿರುತ್ತದೆ. ಎರಡನೆಯ ಪ್ರಶ್ನೆ: ನಮ್ಮಿಂದ ಈ ಕೆಲಸ ಸಾಧ್ಯವೇ? ಉತ್ತರ: ಖಂಡಿತಾ ಸಾಧ್ಯ! ಇಂತಹ ಕೆಲಸಗಳನ್ನು ಹಿಂದೆ ಮಾಡಿದ್ದವರು, ಈಗ ಮಾಡುತ್ತಿರುವವರು ಮತ್ತು ಮುಂದೆ ಮಾಡುವವರೂ ನಮ್ಮ ನಿಮ್ಮಂತಹ ಸಾಮಾನ್ಯರೇ. ಬೇಕಾಗಿರುವುದು ಮಾನಸಿಕ ಬಲ ಮತ್ತು ಮಾಡಬೇಕೆಂಬ ಮನಸ್ಸು, ಅಷ್ಟೇ! ಇರುವ ಆರು ಜನರೂ ಸಂಘ ಪರಿವಾರದ ಮೂಲದವರು, ಅವರ ವಿಚಾರಗಳಿಂದ ಪ್ರೇರಿತರಾದವರು ಮತ್ತು ಇದೇ ಉದ್ದೇಶದ ಚಟುವಟಿಕೆಗಳಲ್ಲಿ ಒಂದಲ್ಲಾ, ಒಂದು ರೀತಿಯಲ್ಲಿ ತೊಡಗಿಸಿಕೊಂಡವರೇ! ಮಾಡುತ್ತಿರುವ ಕೆಲಸವನ್ನೇ ಇನ್ನೊಂದು ರೂಪದಲ್ಲಿ ಮಾಡುತ್ತಿದ್ದೇವೆ ಅಷ್ಟೇ! ಮನಸ್ಸು ಮಾಡಿದರೆ ನಮ್ಮ ಕಣ್ಣ ಮುಂದೆಯೇ ಉದ್ದೇಶ ಈಡೇರುವುದನ್ನು ಕಾಣುವ ಸೌಭಾಗ್ಯ ನಮ್ಮದಾಗುತ್ತದೆ, ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಯಂತೂ ಖಂಡಿತಾ ಕಾಣುತ್ತದೆ. ನಮ್ಮ ತೊಡಗುವಿಕೆಯ ರೀತಿ ಇದನ್ನು ಅವಲಂಬಿಸಿದೆ.
೩. ಕವಿಕಿರಣ ಪತ್ರಿಕೆಯ ಪ್ರಭೆ ಬೆಳಗಿಸುವುದು:
ಟ್ರಸ್ಟಿನ ಮೊದಲ ಹೆಜ್ಜೆಯಾಗಿ ಕವಿಕಿರಣ ಪತ್ರಿಕೆಯನ್ನು ಬೆಳೆಸುವತ್ತ ಗಮನ ನೀಡಿದರೆ ಜೊತೆ ಜೊತೆಗೆ ಟ್ರಸ್ಟಿನ ಇತರ ಉದ್ದೇಶಗಳೂ ಈಡೇರುವುದನ್ನು ಕಾಣಲು ಸಾಧ್ಯವಿದೆ. ಇರುವ ಆರು ಜನರೂ ಸಂಪನ್ಮೂಲ ವ್ಯಕ್ತಿಗಳೇ, ಶಕ್ತಿಯುಳ್ಳವರೇ ಆಗಿದ್ದಾರೆ. ಆದರೆ ಅವರ ಶಕ್ತಿ ಪ್ರತ್ಯೇಕವಾಗಿ ಹರಿದು ಹಂಚದಿರುವಂತೆ, ಸಂಘಟಿತವಾಗಿ ಪ್ರವಹಿಸಿದರೆ ಅನಿರೀಕ್ಷಿತ ಫಲ ಸಿಗುತ್ತದೆಂಬುದರಲ್ಲಿ ಅನುಮಾನವಿಲ್ಲ. ಯಾವುದೇ ಕೆಲಸವನ್ನು ಸಣ್ಣದು ಎಂಬ ದೃಷ್ಟಿಯಿಂದ ನೋಡದೆ ಮಾಡಲು ಗಮನ ಕೊಡೋಣ. ಸಣ್ಣ ಸಣ್ಣ ಕೆಲಸಗಳು ಅಡೆತಡೆಯಿಲ್ಲದೆ ಚೆನ್ನಾಗಿ ಆದರೆ, ದೊಡ್ಡ ದೊಡ್ಡ ಕೆಲಸಗಳು ಮತ್ತಷ್ಟು ಚೆನ್ನಾಗಿ ಮತ್ತು ಸುಲಭವಾಗಿ ಆಗುತ್ತವೆ. ದೊಡ್ಡ ಕೆಲಸಗಳಿಗೆ ಸಣ್ಣ ಕೆಲಸಗಳೇ ತಳಪಾಯ. ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ ಎಂಬ ಭಾವನೆಯಿಂದ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿರಿಸಿ ಕೆಲಸ ಮಾಡುವ ಮನೋಭಾವ ಎಲ್ಲರಲ್ಲೂ ಬರಬೇಕು. ಇನ್ನು ಎರಡು, ಎರಡೂವರೆ ತಿಂಗಳಲ್ಲಿ ತ್ರೈಮಾಸಿಕ ಕವಿಕಿರಣದ ಹೊಸ ರೂಪ ಅವತರಿಸಬೇಕು. ಅದಕ್ಕಾಗಿ ನಾವು ಸಹಕರಿಸಬೇಕು. ಕವಿಮನೆತನದವರು ಮತ್ತು ಬಂಧುಗಳನ್ನು ಚಂದಾದಾರರು, ಪೋಷಕರುಗಳನ್ನಾಗಿಸಲು ಮೊದಲ ಹಂತದಲ್ಲಿ ಕೆಲಸ ಪ್ರಾರಂಭವಾಗಬೇಕು. ಪರಿಚಯವಿರುವ ಸ್ನೇಹಿತರು, ಹಿತೈಷಿಗಳನ್ನೂ ಮಾತನಾಡಿಸಬೇಕು. ಇನ್ನೊಬ್ಬರನ್ನು ಈ ಬಗ್ಗೆ ಪ್ರೇರಿಸುವ ಮೊದಲು ನಾವು ಆ ಕೆಲಸ ಮಾಡಿರಬೇಕು, ನಮ್ಮ ದೇಣಿಗೆಯನ್ನು ನಾವು ಮೊದಲು ಸಕಾಲದಲ್ಲಿ ನೀಡೋಣ ಮತ್ತು ಆಗ ನಮಗೆ ನೈತಿಕ ಬಲ ಸಹಜವಾಗಿ ಇರುತ್ತದೆ. ಕೆಲಸ ವೇಗವಾಗಿ ಆಗುತ್ತದೆ. ಟ್ರಸ್ಟಿನ ಒಂದು ಔಪಚಾರಿಕ ಉದ್ಘಾಟನೆ ಮತ್ತು ಕವಿಕಿರಣ ಪರಿಚಯಿಸುವ ಸಮಾರಂಭವನ್ನು ನವೆಂಬರ್ ತಿಂಗಳಿನಲ್ಲಿ ಅಥವ ಡಿಸೆಂಬರ್ ಮೊದಲ ವಾರದ ಒಳಗೆ ಮಾಡಿದರೆ ಕಾರ್ಯಕ್ಕೆ ಅನುಕೂಲವಾಗಬಹುದು. ಇದಕ್ಕೆಲ್ಲಾ ಬೇಕಾಗುವ ಸಮಯವನ್ನು, ಮೊದಲೇ ಹೇಳಿದಂತೆ ನಮ್ಮ ನಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಂಡ ನಂತರ ಉಳಿಯುವ ಸಮಯದಲ್ಲಿ ಕೊಡಲು ಸಾಧ್ಯವಿದೆ.
ಷಣ್ಮುಖರಾಗೋಣ! ಭಿನ್ನ ವಿಚಾರಗಳು, ಭಿನ್ನ ಕೆಲಸ ಕಾರ್ಯಗಳಿದ್ದರೂ ಒಂದು ಸಮಾನ ಭಾವದ, ಸರ್ವಹಿತದ ಕೆಲಸಕ್ಕಾಗಿ, ಆರು ತಲೆಗಳಿದ್ದರೂ, ಒಂದೇ ದೇಹದೊಂದಿಗೆ ಚಲಿಸುವ ಷಣ್ಮುಖನಂತೆ ಮುಂದೆ ಸಾಗೋಣ!
-ಕ.ವೆಂ. ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ