ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಸೆಪ್ಟೆಂಬರ್ 2, 2015

ಆರರ ಮಹಿಮೆ


     ಈ 'ಆರು' ಅನ್ನುವುದಕ್ಕೆ ಪದಕೋಶದಲ್ಲಿ ಹಲವು ಅರ್ಥಗಳಿವೆ. ಎತ್ತುಗಳನ್ನು ಹೂಡಿದ ನೇಗಿಲಿಗೂ ಆರು ಎನ್ನುತ್ತಾರೆ. ಶಕ್ತವಾಗು, ಗಟ್ಟಿಯಾಗಿ ಕೂಗು, ತಣ್ಣಗಾಗು ಎಂಬ ಅರ್ಥಗಳು ಸಹ ಇವೆ. ಆರಿಸು ಎಂದರೆ ಶೇಖರಿಸು, ಆಯ್ಕೆ ಮಾಡು, ನಂದಿಸು ಎಂಬ ಅರ್ಥಗಳೂ ಪದಕೋಶದಲ್ಲಿ ಸಿಗುತ್ತವೆ. ಆರು ಗುಣಗಳು, ಅಂಶಗಳು/ವಿಚಾರಗಳ ಕುರಿತು ವಿವೇಚಿಸುವುದು ಈ ಲೇಖನದ ಉದ್ದೇಶ.      ಮಹಾಭಾರತದ ಉದ್ಯೋಗ ಪರ್ವದಲ್ಲಿ ವಿದುರ ಧೃತರಾಷ್ಟ್ರನಿಗೆ ನ್ಯಾಯಯುತ ಮಾರ್ಗದ ಕುರಿತು ತಿಳಿಸಿ ಹೇಳುವುದರೊಂದಿಗೆ, ನಡವಳಿಕೆಗಳು, ಸದಾಚಾರ, ಮಾತು, ನೀತಿ, ಧರ್ಮ, ಸುಖ-ದುಃಖಗಳ ಪ್ರಾಪ್ತಿ, ನ್ಯಾಯ-ಅನ್ಯಾಯ, ಸತ್ಯ, ಅಹಿಂಸೆ, ಕ್ಷಮೆ, ಮಿತ್ರ-ಶತ್ರುಗಳಾರು, ಮುಂತಾದ ಸಂಗತಿಗಳ ಬಗ್ಗೆ ತಿಳುವಳಿಕೆ ನೀಡಿರುವ ಬಗೆಗೂ ವಿಸ್ತೃತವಾಗಿ ವಿವರಿಸಲಾಗಿದೆ. ವಿದುರ ನೀತಿ ಎಂದೇ ಹೆಸರಾಗಿರುವ ಈ ಪರ್ವದಲ್ಲಿ ಸಜ್ಜನ-ಸಾಧಕರಿಗೆ ಇರಬೇಕಾದ ನೂರಾರು ಕಲ್ಯಾಣಕಾರಿ ಗುಣಗಳ ಬಗ್ಗೆ ಮಾಹಿತಿ, ಮಾರ್ಗದರ್ಶನಗಳು ಇದ್ದು, ಅವುಗಳಲ್ಲಿ ಬರುವ 'ಆರು' ಅಂಶಗಳನ್ನು ಹೆಕ್ಕಿ ಲೇಖನವಾಗಿಸಿರುವೆ.
     ೧. ಉನ್ನತ ಸ್ಥಿತಿಗೆ ಏರಬಯಸುವವರು, ಐಶ್ವರ್ಯ ಬಯಸುವವರು ನಿದ್ರೆ, ತೂಕಡಿಕೆ, ಭಯ, ಸಿಟ್ಟು, ಸೋಮಾರಿತನ ಮತ್ತು ವಿಳಂಬ ನೀತಿ - ಈ ಆರರಿಂದ ದೂರವಿರಬೇಕು. ಒಬ್ಬ ಸಾಧಕನ ಸಾಧನೆಗೆ ಸತತ ಶ್ರಮ, ಏಕಾಗ್ರತೆ ಅಗತ್ಯವಿದ್ದು ಇದಕ್ಕೆ ನಿದ್ರೆ, ತೂಕಡಿಕೆಗಳು, ಸೋಮಾರಿತನಗಳು ಅಡ್ಡಿ ತರುತ್ತವೆ. ನಮ್ಮ ಜೀವಿತಾವಧಿ ಯಾವಾಗ ಅಂತ್ಯವಾದೀತೋ ತಿಳಿಯದಾಗಿರುವಾಗ ಯಾವುದೇ ಕೆಲಸವನ್ನು ಮುಂದೂಡದೇ, 'ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈಗಲೇ ಮಾಡು' ಎಂಬ ಅನುಭವಿಗಳ ಮಾತನ್ನು ಅನುಸರಿಸುವುದು ಸೂಕ್ತವಾಗಿದೆ. ಮಾಡಹೊರಟಿರುವ ಕೆಲಸಕ್ಕೆ ಅಡ್ಡಿಗಳು, ಅಡಚಣೆಗಳು ಎದುರಾದಾಗ ಎದೆಗುಂದದೆ, ಭಯಪಡದೆ ಮುಂದಡಿಯಿಡುವುದು ಸಾಧಕರ ಲಕ್ಷಣವಾಗಿದೆ.
     ೨. ಜ್ಞಾನವನ್ನು ಹಂಚದ ಗುರು, ಅಧ್ಯಯನ ಮಾಡದ ಋತ್ವಿಜ, ದುರ್ಬಲ ರಾಜ, ಅಪ್ರಿಯವಾಧಿನಿ ಪತ್ನಿ, ಸದಾ ಊರಿನಲ್ಲೇ ಇರಬಯಸುವ ಗೋಪಾಲಕ ಮತ್ತು ವನದಲ್ಲಿ ಇರಬಯಸುವ ಕ್ಷೌರಿಕ - ಈ ಆರು ಜನರನ್ನು ಸಮುದ್ರದಲ್ಲಿ ರಂಧ್ರ ಬಿದ್ದ ನಾವೆಯಂತೆ ದೂರವಿರಿಸಬೇಕು ಎಂದು ವಿದುರ ಹೇಳಿದ್ದಾನೆ. ಗುರುವಾದವನು ತನ್ನ ಶಿಷ್ಯರಿಗೆ ತನಗೆ ಗೊತ್ತಿರುವ ಜ್ಞಾನವನ್ನು ಹಂಚಬೇಕು. ತಿಳಿದ ಜ್ಞಾನವನ್ನು ಇತರರಿಗೆ ಹಂಚದಿದ್ದರೆ ಅದು ಕಳ್ಳತನಕ್ಕೆ ಸಮನಾದುದು ಎಂಬುದು ವೇದೋಕ್ತಿಯಾಗಿದೆ. ಒಂದೊಮ್ಮೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಆಯುರ್ವೇದದ ಅನೇಕ ಸಂಗತಿಗಳು, ಲೋಹವನ್ನು ಚಿನ್ನವಾಗಿ ಪರಿವರ್ತಿಸಬಹುದಾದ ವಿದ್ಯೆ, ಇತ್ಯಾದಿಗಳು ಅವುಗಳನ್ನು ತಿಳಿದವರೊಂದಿಗೇ ಕಣ್ಮರೆಯಾಗಿವೆ. ಮಾರಣಾಂತಿಕ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ಕೊಡಬಲ್ಲ ನಾಟಿವೈದ್ಯರುಗಳನ್ನೂ ನಾವು ಕಂಡಿದ್ದೇವೆ. ಅವರು ತಮ್ಮ ಜ್ಞಾನವನ್ನು ಇನ್ನೊಬ್ಬರಿಗೆ ತಿಳಿಸಿಕೊಡದೇ ಇರುವುದರಿಂದ ಅವರೊಂದಿಗೇ ಆ ವಿದ್ಯೆ ಅಂತ್ಯ ಕಾಣುತ್ತವೆ. 'ಯೋಗ್ಯ ಶಿಷ್ಯ ಸಿಗಲಿಲ್ಲ, ಹೇಳಿಕೊಡಲಿಲ್ಲ' ಎಂಬುದು ನೆಪವಾಗುತ್ತದೆ. ಅಧ್ಯಯನ ಮಾಡಬೇಕಾದುದು ಒಬ್ಬ ಋತ್ವಿಜನ ಕರ್ತವ್ಯವಾಗಿದೆ. ಸಮಾಜಕ್ಕೆ ಅವರ ಮಾರ್ಗದರ್ಶನ ಅಗತ್ಯವಿರುತ್ತದೆ. ಆತನೇ ಸರಿಯಾಗಿ ತಿಳಿದುಕೊಳ್ಳದಿದ್ದರೆ ಆತ ಏನು ಮಾರ್ಗದರ್ಶನ ಮಾಡಿಯಾನು? ಮಾಡಿದರೂ ಅದು ಸರಿಯಾಗಿರದಿದ್ದರೆ ಹಾನಿಕಾರಕ ಪರಿಣಾಮ ಬೀರುವುದಂತೂ ನಿಶ್ಚಿತ. ಇಂದಿನ ಅನೇಕ ಪಂಡಿತೋತ್ತಮರು, ಗುರುಗಳು ಅನ್ನಿಸಿಕೊಂಡವರನ್ನು ಗಮನಿಸಿದರೆ ಈ ಮಾತಿನ ಮಹತ್ವ ತಿಳಿಯುತ್ತದೆ. ದುರ್ಬಲ ರಾಜನಿಂದ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ವಿವಿಧ ಮಾಫಿಯಾಗಳ ರಿಮೋಟ್ ಕಂಟ್ರೋಲಿನಲ್ಲಿ ಆಡಳಿತಗಾರರು ಆಡಳಿತ ನಡೆಸಿದರೆ ದೇಶದ ಪ್ರಜೆಗಳು ಅನೇಕ ರೀತಿಯ ಸಂಕಷ್ಟಗಳಿಗೆ ಒಳಪಡುತ್ತಾರೆ. ಇದರ ಅನುಭವ ಜನರಿಗೆ ಈಗಾಗಲೇ ಆಗಿಬಿಟ್ಟಿದೆ, ಆಗುತ್ತಿದೆ. ಗೋಪಾಲಕನಾದವನು ದನ-ಕರುಗಳನ್ನು ಮೇಯಿಸುವ ಸಲುವಾಗಿ ಕಾಡಿಗೆ ಹೋಗದೆ ಊರಿನಲ್ಲೇ ಇರಲು ಇಚ್ಛಿಸಿದರೆ ಪ್ರಯೋಜನವೇನು? ಈಗ ಕಾಡುಗಳೂ ಇಲ್ಲ, ಗೋಮಾಳವೂ ಇಲ್ಲ, ಇನ್ನು ದನ-ಕರುಗಳ ಪಾಡು, ಅವುಗಳನ್ನು ಸಾಕಿದವರ ಪಾಡು ಅನುಭವಿಸಿದವರಿಗೇ ಗೊತ್ತು. ಕ್ಷೌರಿಕನಾದವನು ಊರಿನಲ್ಲಿರದೆ ಕಾಡಿನಲ್ಲಿದ್ದರೆ ಅವನಿಂದ ಏನು ಪ್ರಯೋಜನ ಎಂಬುದು ವಿದುರನ ಪ್ರಶ್ನೆ.
     ೩. ಸತ್ಯ, ದಾನ, ಸೋಮಾರಿಯಾಗದಿರುವುದು, ಅಸೂಯಾಪರನಾಗದಿರುವುದು, ಕ್ಷಮಾಗುಣ, ಧೈರ್ಯ - ಈ ಆರು ಗುಣಗಳನ್ನು ಎಂದಿಗೂ ಬಿಡಬಾರದು. ಒಬ್ಬ ಆದರ್ಶ ವ್ಯಕ್ತಿ ಹೇಗಿರಬೇಕೆಂಬುದಕ್ಕೆ ಇಲ್ಲಿ ತಿಳುವಳಿಕೆಯಿದೆ. ಸತ್ಯವಂತ, ದಾನಶೀಲ ವ್ಯಕ್ತಿಗೆ ಸಮಾಜದಲ್ಲಿ ಮನ್ನಣೆ ಇರುತ್ತದೆ. ಸೋಮಾರಿಯಾದರೆ ಉನ್ನತ ಸ್ಥಿತಿಗೆ ಏರಲಾಗದೆಂಬುದನ್ನು ಹಿಂದೆಯೇ ತಿಳಿದೆವು. ಅಸೂಯೆ ಪಡುವುದು ತನಗಿಂತ ಇನ್ನೊಬ್ಬರು ಮೇಲಿದ್ದಾರೆ ಎಂಬುದನ್ನು ಒಪ್ಪುವವರ ಮತ್ತು ಕೀಳರಿಮೆಯಿಂದ ನರಳುವವರ ಗುಣವಾಗಿರುತ್ತದೆ. ಅಗತ್ಯದ ಸಂದರ್ಭಗಳಲ್ಲಿ ತಪ್ಪುಗಳನ್ನು ಕ್ಷಮಿಸುವ ಉದಾತ್ತತೆಯೊಂದಿಗೆ, ಸವಾಲುಗಳನ್ನು ಎದುರಿಸುವ ಛಲ ಮತ್ತು ಧೈರ್ಯಗಳಿದ್ದರೆ ಅಂತಹವನು ನಾಯಕನೆನಿಸಿಕೊಳ್ಳುತ್ತಾನೆ.
     ೪. ಮನುಷ್ಯನಿಗೆ ಸುಖ-ಸಂತೋಷಗಳನ್ನು ನೀಡುವ ಆರು ಸಂಗತಿಗಳೆಂದರೆ, ಧನಪ್ರಾಪ್ತಿ, ಒಳ್ಳೆಯ ಆರೋಗ್ಯ, ಅನುಕೂಲವತಿ ಜೊತೆಗೆ ಪ್ರಿಯವಾದಿನಿ ಸತಿ, ವಿಧೇಯ ಮಗ, ಧನಸಂಪಾದನೆಗೆ ನೆರವಾಗುವ ವಿದ್ಯೆ. ಇದಕ್ಕೆ ವಿವರಣೆಯ ಅಗತ್ಯ ಕಾಣುವುದಿಲ್ಲ. ಹಣವಿದ್ದವರಿಗೆ ಆರೋಗ್ಯವಿರದಿರುವ, ಆರೋಗ್ಯವಾಗಿರುವವರಿಗೆ ಹಣವಿಲ್ಲದ ಸ್ಥಿತಿ, ಕೌಟುಂಬಿಕ ಸಂಬಂಧಗಳು ಚೆನ್ನಾಗಿಲ್ಲದಿದ್ದರೆ ಎಲ್ಲವೂ ಇದ್ದರೂ ಪ್ರಯೋಜನವಾಗದಂತಹ ಸ್ಥಿತಿಗಳನ್ನು ಕಂಡರೆ ಈ ಸಂಗತಿಗಳ ಮಹತ್ವದ ಅರಿವು ನಮಗಾಗುತ್ತದೆ.
     ೫. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹಗಳ ಮೇಲೆ ಪ್ರಭುತ್ವ ಸಾಧಿಸುವವನು ಪಾಪಗಳಿಂದ ಮುಕ್ತನಾಗಿರುತ್ತಾನೆ. ಇವುಗಳಲ್ಲಿ ಕಾಮವು ಚತುರ್ವಿಧ ಪುರುಷಾರ್ಥಗಳಲ್ಲೂ ಒಂದಾಗಿದೆ. ಸುಕಾಮವು ಮುಕ್ತಿಯೆಡೆಗೆ ಕರೆದೊಯ್ದರೆ ಕುಕಾಮ ಜೀವಿಯನ್ನು ಪಾತಾಳಕ್ಕೆ ಬೀಳಿಸುತ್ತದೆ. ಸಕಲ ಜೀವರಾಶಿಯನ್ನು ಪ್ರೀತಿಸುವ ಸುಮೋಹ ಸಮಾಜವನ್ನು ಒಂದುಗೂಡಿಸುತ್ತದೆ. ಸಂಕುಚಿತ ಮೋಹ ಸಮಾಜಕ್ಕೆ ಕಂಟಕವಾಗುತ್ತದೆ. ಇದೇ ರೀತಿ ಸಾತ್ವಿಕ ಕ್ರೋಧ ಒಳಿತು ತಂದರೆ ವಿನಾಕಾರಣದ, ಸ್ವಾರ್ಥಪರ ಕ್ರೋಧ ಹಾನಿ ತರುತ್ತದೆ. ಆದರೆ ಉಳಿದ ಲೋಭ, ಮದ, ಮತ್ಸರಗಳು ಕೆಡುಕನ್ನೇ ತರುವ ಗುಣಗಳಾಗಿವೆ.
     ೬. ಕಳ್ಳರು ಅಜಾಗರೂಕ ಜನರಿಂದ, ವೈದ್ಯರು ರೋಗಿಗಳಿಂದ, ಕಾಮಿನಿಯರು ಕಾಮುಕರಿಂದ, ಪುರೋಹಿತರು ಯಾಗ ಮಾಡುವವರಿಂದ, ವಿವಾದಗಳಲ್ಲಿ ತೊಡಗಿರುವ ಪ್ರಜೆಗಳಿಂದ ರಾಜ ಜೀವಿತಗಳನ್ನು ಕಂಡುಕೊಳ್ಳುತ್ತಾರೆ. ವಿಚಿತ್ರವೆನಿಸಿದರೂ ಸತ್ಯವಾದ ಮಾತುಗಳಿವು. ಜಾಗೃತರಾಗಿದ್ದಲ್ಲಿ ಕಳ್ಳರಿಗೆ ಅವಕಾಶವಾದರೂ ಎಲ್ಲಿ ಸಿಕ್ಕೀತು? ವಿವಾದಗಳು, ಸಮಸ್ಯೆಗಳು ಇರದಿದ್ದಲ್ಲಿ ಕೋರ್ಟು, ಕಛೇರಿಗಳು, ಪೋಲಿಸ್ ಠಾಣೆಗಳ, ನ್ಯಾಯಾಲಯಗಳ ಅವಶ್ಯಕತೆಯೇ ಬರದು. ಇದನ್ನೇ ಮುಂದುವರೆಸಿ ಹೇಳಬೇಕೆಂದರೆ, ಜನರು ಜಾಗೃತರಾಗಿದ್ದರೆ, ಭ್ರಷ್ಠರು, ಮಾಫಿಯಾಗಳು, ಸ್ವಾರ್ಥಿಗಳು ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಿರುವುದಿಲ್ಲ.
     ೭. ಉಪೇಕ್ಷೆ ಮಾಡಿದರೆ ಗೋವು, ಸೇವೆ, ಕೃಷಿ, ಪತ್ನಿ, ವಿದ್ಯೆ, ಸೇವಕ -  ಈ ಆರು ಸಂಗತಿಗಳು ಕೈಬಿಡುತ್ತವೆ. ನಿರಂತರ ತೊಡಗಿಕೊಳ್ಳುವಿಕೆ, ಮೇಲ್ವಿಚಾರಣೆಯ ಮಹತ್ವವನ್ನು ಈ ನುಡಿ ಬಿಂಬಿಸುತ್ತಿದೆ. ಸರ್ಕಾರ ನಡೆಸುವವರು ಮತ್ತು ಉನ್ನತ ಹುದ್ದೆಗಳಲ್ಲಿರುವವರು ಸಕ್ಷಮರಾಗಿರದಿದ್ದರೆ ಆಡಳಿತ ಕುಸಿಯುತ್ತದೆ, ಅದರ ಪರಿಣಾಮವನ್ನು ಸಾಮಾನ್ಯ ಜನತೆ ಎದುರಿಸಬೇಕಾಗುತ್ತದೆ. ವೈಯಕ್ತಿಕ ಜೀವನದಲ್ಲೂ ಅಷ್ಟೆ, ಗಮನ ಕೊಡದಿದ್ದರೆ ಸೋಲು ಕಾಡದೇ ಇರದು.
     ೮. ವಿದ್ಯಾಭ್ಯಾಸದ ನಂತರ ಶಿಷ್ಯರು ಗುರುವನ್ನು, ವಿವಾಹದ ನಂತರ ಮಕ್ಕಳು ತಾಯಿಯನ್ನು, ಕಾಮವಾಂಛೆ ತೀರಿದ ನಂತರ ಪುರುಷನು ಸ್ತ್ರೀಯನ್ನು, ಕೆಲಸ ಪೂರ್ಣವಾದನಂತರ ಅದಕ್ಕೆ ನೆರವಾದವರನ್ನು, ಹೊಳೆ ದಾಟಿದ ಮೇಲೆ ಅಂಬಿಗನನ್ನು ಮತ್ತು ಕಾಯಿಲೆ ಗುಣವಾದ ನಂತರ ರೋಗಿಯು ವೈದ್ಯನನ್ನು ಉಪೇಕ್ಷಿಸುತ್ತಾರೆ. ಇಂದಿನ ಕಾಲಕ್ಕೂ ವಿದುರನ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ವಿದ್ಯಾಭ್ಯಾಸ ಅನ್ನುವುದು ವ್ಯಾಪಾರವಾಗಿರುವ ಸ್ಥಿತಿಯಲ್ಲಿ ಗುರು-ಶಿಷ್ಯ ಸಂಬಂಧಗಳಿಗೆ ಮಹತ್ವ ಅಳಿಸಿಹೋಗಿಬಿಟ್ಟಿದೆ. ಹಿರಿಯರನ್ನು, ಪೋಷಕರನ್ನು ದೂರವಿಡುವ ಪ್ರವೃತ್ತಿ ಆಘಾತಕರವಾದ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಇರುವ ಸಣ್ಣ ಕುಟುಂಬದಲ್ಲೇ ಸಾಮರಸ್ಯ ಉಳಿಸಿಕೊಳ್ಳುವುದೇ ಹೆಚ್ಚುಗಾರಿಕೆಯಾಗಿದೆ. ಕೆಲಸವಾಗುವವರೆಗೆ ಓಲೈಸುವವರು ಕೆಲಸವಾದ ನಂತರ 'ಯಾರೋ' ಆಗಿಬಿಡುವುದು ಸಾಮಾನ್ಯವಾಗಿದೆ.
     ೯. ಸುಖವೆಂದರೆ ಆರೋಗ್ಯವಾಗಿರುವುದು, ಸಾಲರಹಿತನಾಗಿರುವುದು, ವಿದೇಶಕ್ಕೆ ಹೋಗದಿರುವುದು, ಸಜ್ಜನ ಸಹವಾಸ, ಮನಸ್ಸಿಗೆ ಒಪ್ಪುವ ಕೆಲಸ ಮತ್ತು ಸ್ವಾತಂತ್ರ್ಯ. ಇವುಗಳಲ್ಲಿ ಒಂದೊಂದು ಸಂಗತಿಯೂ ಅನುಭವದ ರಸಘಟ್ಟಿಗಳಾಗಿವೆ. ವಿದೇಶಕ್ಕೆ ಹೋಗದಿರುವುದು ಎಂಬುದು ಚರ್ಚೆಗೊಳಪಡುವ ಸಂಗತಿಯಾಗಿದೆ. 'ಜನನೀ ಜನ್ಮಭೂಮಿ ಸ್ವರ್ಗಾದಪಿ ಗರೀಯಸೀ' ಎಂದು ಹೇಳುವ ನಮಗೆ ವಿದೇಶಗಳಲ್ಲಿನ ಸೌಕರ್ಯಗಳು, ಅವಕಾಶಗಳು ಕೈಬೀಸಿ ಕರೆಯುತ್ತಿರುವುದು ಆಕರ್ಷಣೆಯಾಗಿ ಕಾಣುತ್ತಿರಬಹುದು. ವಿದೇಶಗಳಲ್ಲಿರುವ ನಮ್ಮವರಿಗೆ ತಾಯಿನಾಡಿನ ಹಂಬಲ, ಪ್ರೀತಿ ಎದೆಯಾಳದಲ್ಲಿ ಅಚ್ಚೊತ್ತಿರುತ್ತದೆ. ಏನೇ ಸೌಲಭ್ಯಗಳಿದ್ದರೂ, ಸುಖ-ಸಂತೋಷಗಳಿದ್ದರೂ ತಾಯಿನಾಡಿನ ಸೆಳೆತ ಅಷ್ಟು ಸುಲಭವಾಗಿ ಹೋಗುವಂತಹುದಲ್ಲ. ತಾಯಿ ಹೇಗಿದ್ದರೂ ತಾಯಿಯೇ ಅಲ್ಲವೇ?
     ೧೦. ಅಸೂಯಾಪರರು, ದುರಾಸೆಯವರು, ಅತೃಪ್ತರು, ಶೀಘ್ರಕೋಪಿಗಳು, ಪ್ರತಿಯೊಂದನ್ನೂ ಸಂಶಯ ದೃಷ್ಟಿಯಿಂದ ನೋಡುವವರು, ಇತರರ ಗಳಿಕೆಯಿಂದ ಬಾಳುವವರು- ಈ ಆರು ಗುಣಗಳುಳ್ಳವರು ನಿತ್ಯ ದುಃಖಿಗಳೆಂಬುದು ವಿದುರನ ನುಡಿ. ಮತ್ಸರಿಗಳು ಕೊಟ್ಟಿಗೆಯಲ್ಲಿ ಇರುವ ನಾಯಿಯಂತಹವರು. ನಾಯಿ  ಹುಲ್ಲು ತಿನ್ನುವುದಿಲ್ಲ, ಆದರೆ ಹಸು ಹುಲ್ಲು ತಿನ್ನಲು ಹೋದರೆ ಬೊಗಳಿ ಹಸುವಿಗೂ ಹುಲ್ಲು ತಿನ್ನಲು ಬಿಡುವುದಿಲ್ಲ. ದೇಶ, ಸಮಾಜವನ್ನೇ ಕೊಳ್ಳೆ ಹೊಡೆದು ನೂರಾರು, ಸಾವಿರಾರು ಕೋಟಿ ಹಣವನ್ನು ಅಕ್ರಮವಾಗಿ ಕೂಡಿಟ್ಟುಕೊಂಡವರಿಗೆ ಇನ್ನೂ ಸಾಲದೆಂಬ ಹಪಹಪಿ ಹೋಗುವುದೇ ಇಲ್ಲ. ಜೊತೆಗೆ ಅಕ್ರಮ ಸಂಪತ್ತನ್ನು ಉಳಿಸಿಕೊಳ್ಳುವುದರಲ್ಲೇ ಆಯಷ್ಯ ಸವೆಸಿಬಿಡುತ್ತಾರೆ. ಕೋಪಿಷ್ಟರು, ಸಂಶಯಿಗಳು ಮತ್ತು ಪರಾವಲಂಬಿಗಳಿಗೆ ನೆಮ್ಮದಿ ಅನ್ನುವುದು ಕನಸೇ ಸರಿ.
     ವಿದುರ ಹೇಳಿರುವ ಮೇಲಿನ ಸಂಗತಿಗಳಲ್ಲದೇ ಇಂತಹ ಆರು ಅಂಶಗಳ ಬಗ್ಗೆ ಸಾಕಷ್ಟು ಹೇಳಲ್ಪಟ್ಟಿವೆ. ಉದಾಹರಣೆಗೆ ಹೇಳಬೇಕೆಂದರೆ 'ಷಟ್ಧರ್ಮಯುಕ್ತ' ಪತ್ನಿ ಆದರ್ಶಪ್ರಾಯವೆಂಬ  ಉಕ್ತಿ ಇದೆ. ಆದರ್ಶ ಪತ್ನಿ  ರೂಪದಲ್ಲಿ ಲಕ್ಷ್ಮಿ,  ಊಟಕ್ಕಿಡುವಲ್ಲಿ ತಾಯಿ,  ಶಯ್ಯಾಗೃಹದಲ್ಲಿ ರಂಭೆ, ಸಲಹೆ ನೀಡುವಲ್ಲಿ ಮಂತ್ರಿ, ಭೂಮಿಯಂತೆ ಕ್ಷಮಾಗುಣವುಳ್ಳವಳು, ಕೆಲಸ ಕಾರ್ಯಗಳಲ್ಲಿ ದಾಸಿಯಂತೆ ಇರಬೇಕೆನ್ನುತ್ತದೆ ಆ ಉಕ್ತಿ! ಈಗ ಇದನ್ನು ನಿರೀಕ್ಷಿಸಲಾಗದು.
-ಕ.ವೆಂ. ನಾಗರಾಜ್.
***************
ದಿನಾಂಕ 10.8.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


1 ಕಾಮೆಂಟ್‌: