ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಸೆಪ್ಟೆಂಬರ್ 16, 2015

ಜನಹಿತ ಪತ್ರಿಕೆಯ 'ಹಿತ-ಸಾಹಿತ್ಯ' ಅಂಕಣದಲ್ಲಿ ಮಿತ್ರ ಕೊಟ್ರೇಶ ಉಪ್ಪಾರರು ನನ್ನ ಕುರಿತು ಬರೆದ ಲೇಖನ


 ನಿಷ್ಠುರವಾದಿ ಆಡಳಿತಗಾರ, ಕವಿ, ಸಾಮಾಜಿಕ ಚಿಂತಕ - ಕ.ವೆಂ.ನಾಗರಾಜ್.

     ಕ.ವೆಂ.ನಾಗರಾಜ್ ಸಾಮಾಜಿಕ ಕಳಕಳಿಯ ಚಿಂತಕ, ವಿಚಾರವಾದಿ, ನ್ಯಾಯ, ನಿಷ್ಠುರವಾದ ವ್ಯಕ್ತಿತ್ತ್ವವುಳ್ಳವರು. ಆಡಳಿತಗಾರರಾಗಿ, ಸಾಮಾಜಿಕ ಚಳವಳಿಗಾರರಾಗಿ, ಸತ್ಸಂಗದ ವಿವೇಕಿಯಾಗಿ, ಸಾಹಿತಿಯಾಗಿ, ಅಂತರ್ಜಾಲ ಬರಹಗಾರರಾಗಿ ಚಿರಪರಿಚಿತವಾದವರು. ಮನೆ ಮನೆ ಕವಿಗೋಷ್ಠಿಯ ಸದಸ್ಯರಾಗಿಯೂ ಮುನ್ನೆಡೆದು ಬಂದವರು. ತಮ್ಮ  ಮೂಢ ಉವಾಚ ಮುಕ್ತಕಗಳ ಮೂಲಕ ಮುಕ್ತ ಕಂಠದಿಂದ ಸಮಾಜದ ಕೊಳೆಯನ್ನು ಕೀಳಲ್ಹೊರಟವರು.
ಬಾಲ್ಯ : ಶ್ರೀಯುತ ಕ.ವೆಂ.ನಾಗರಾಜ್ ರವರು 1951 ಅಕ್ಟೋಬರ್ 7 ರಂದು ತಾಯಿ ಮನೆ ಹಾಸನ ಜಿಲ್ಲೆಯ ಹಳೆಬೀಡಿನಲ್ಲಿ ಜನಿಸಿದರು. ತಂದೆ ಶ್ರೀ ಕೆ.ವೆಂಕಟಸುಬ್ಬರಾವ್, ತಾಯಿ ಶ್ರೀಮತಿ ಸೀತಮ್ಮ.
     ಚಿಕ್ಕಮಗಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ವ್ಯಾಸಂಗ ಮಾಡಿದ ಇವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಚಿತ್ರದುರ್ಗದಲ್ಲಿ ಪ್ರೌಢ ಶಿಕ್ಷಣವನ್ನು, ಚಿಕ್ಕಮಗಳೂರಿನಲ್ಲಿ ಪಿಯುಸಿಯನ್ನು ಓದಿದ ಇವರು ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ವಿಜ್ಞಾನ ಪದವಿಯನ್ನು ಪಡೆದರು.
ವೃತ್ತಿ : 1971 ಡಿಸೆಂಬರ್ ನಲ್ಲಿ ಹಾಸನದ ಅಂಛೆ ಕಛೇರಿಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ನಂತರ 1973 ಮೇ 3 ರಂದು ಹಾಸನದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಹಾರ ನಿರೀಕ್ಷಣಾಧಿಕಾರಿಯಾಗಿ ನಿಯೋಜನೆಗೊಂಡರು.  1998 ರಲ್ಲಿ ಮಂಗಳೂರಿಗೆ ತಹಸಿಲ್ದಾರರಾಗಿ ಬಡ್ತಿ ಹೊಂದಿದರು. ಮುಂದೆ ಮುಜರಾಯಿ ತಹಸಿಲ್ದಾರರಾಗಿ, ಮುನಿಸಿಪಲ್ ತಹಸಿಲ್ದಾರರಾಗಿ, ಎಲೆಕ್ಷನ್ ತಹಸಿಲ್ದಾರರಾಗಿ, ಆಡಳಿತ ತಹಸಿಲ್ದಾರರಾಗಿ, ಪುತ್ತೂರಿನ ಕಡಬದಲ್ಲಿ ವಿಶೇಷ ತಹಸಿಲ್ದಾರರಾಗಿ, ಮಂಗಳೂರಿನಲ್ಲಿ ಪ್ರೋಟೋಕಾಲ್ ತಹಸಿಲ್ದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಹಾಸನ, ಕಲಬುರ್ಗಿ ಜಿಲ್ಲೆಯ ಸೇಡಮ್, ಮೈಸೂರು, ಹೊಳೆನರಸಿಪುರ, ಸಕಲೇಶುರ, ಬೇಲೂರು, ಮಂಗಳೂರು, ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಅರಕಲಗೂಡು, ಶಿವಮೊಗ್ಗ, ಶಿಕಾರಿಪುರ, ಸೊರಬ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಸುತ್ತಲೂ ಒಂದು ಕಾರಣವಿದೆ. ಇವರ ನೇರ ನಡೆ-ನುಡಿ ಇವರನ್ನು ಒಂದೆಡೆ ನಿಲ್ಲಲು ಬಿಡಲಿಲ್ಲ ಎನ್ನುವುದಕ್ಕಿಂತಲೂ ಆಯಾ ಭಾಗದ ರಾಜಕೀಯ ವ್ಯವಸ್ಥೆಗೆ ಸಹಿಸಲು ಆಗಲಿಲ್ಲವೆಂದೇ ಹೇಳಬಹುದು. ಆದ್ದರಿಂದಲೇ ಇವರ ಸೇವಾವಧಿಯಲ್ಲಿ 26 ವರ್ಗಾವಣೆಗಳು - ಹೆಚ್ಚಿನವು ರಾಜಕೀಯ ಪ್ರೇರಿತವಾದವು ಎಂಬುದು ಗಮನಾರ್ಹ . ಇವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಿಕಾರಿಪುರದಲ್ಲಿದ್ದಾಗ ಅತ್ಯುತ್ತಮ ಅಧಿಕಾರಿಯೆಂದು ಇಲಾಖೆ ಗುರುತಿಸಿ ಸನ್ಮಾನಿಸಿ ಗೌರವಿಸಿದೆ.
ನಿಷ್ಠುರವಾದಿ : ಕ.ವೆಂ.ನಾ.ರವರು ನಿಷ್ಠುರ ಅಧಿಕಾರಿಯಾಗಿದ್ದರು ಎಂಬುದಕ್ಕೆ ಅನೇಕ ನಿದರ್ಶನಗಳು ದೊರೆಯುತ್ತವೆ. ಯಾವುದೇ ಆಸೆ, ಆಕಾಂಕ್ಷೆ, ಸ್ವಾರ್ಥಗಳ ಕಡೆಗೆ ಮುಖ ಮಾಡದೆ ನ್ಯಾಯ, ಧರ್ಮ, ನೀತಿ, ಸಮಾನತೆ ಹಾಗೂ ವೈಚಾರಿಕ ಮನೋಧೋರಣೆ ಹೊಂದಿದ್ದ ಇವರು ರಾಜಕಾರಣಿಗಳಿಗೆ ದುಃಸ್ವಪ್ನವಾಗಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ರಾಜಕೀಯ ಕುತಂತ್ರತೆಗೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರೂ ಯಾರಿಗೂ ಸೊಪ್ಪಾಕಲಿಲ್ಲ. ಅಧಿಕಾರಕ್ಕಾಗಿಯೇ ಅಂಗಲಾಚುವ ಪ್ರಸ್ತುತ ಸಂದರ್ಭದಲ್ಲಿ ಕ.ವೆಂ.ನಾ. ನಮಗೆ ವ್ಯತಿರಿಕ್ತವಾಗಿ ನಿಲ್ಲುತ್ತಾರೆ. ಆದ್ದರಿಂದಲೇ 2009ರಲ್ಲಿ ಒಂದು ತಿಂಗಳು ಮುಂದುವರೆದಿದ್ದರೆ ಸಹಾಯಕ ಕಮಿಷನರ್ ಆಗುವ ಅವಕಾಶವಿದ್ದರೂ 3 ವರ್ಷಗಳ ಸೇವೆ ಇರುವಂತೆಯೇ ಸ್ವ ಇಚ್ಛಾ ನಿವೃತ್ತಿ ಹೊಂದಿದ ಧೀಮಂತ ವ್ಯಕ್ತಿ ಇವರು. ಇದೆ ಇವರ ಜೀವನದ ಆದರ್ಶ.
ಹೋರಾಟಗಾರ : ಕ.ವೆಂ.ನಾ. ಕೇವಲ ಉತ್ತಮ ಆಡಳಿತಗಾರರಷ್ಟೇ ಅಲ್ಲ ನಾಡು-ನುಡಿಯ ಬಗ್ಗೆ, ಸಾಮಾಜಿಕ ತೊಡಕುಗಳ ಬಗ್ಗೆ ಚಿಂತಿಸುವ ಪ್ರಗತಿಪರ ವ್ಯಕ್ತಿ. ಆದ್ದರಿಂದಲೇ 1975 ರಿಂದ 1977ರ ನಡುವೆ ಇಡಿ ದೇಶಾದ್ಯಂತ ತಲೆದೋರಿದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾ.ಸ್ವ. ಸಂಘದ ಕಾರ್ಯಕರ್ತನೆಂದು ಆರೋಪಿಸಿ ಈ ಕಾರಣಕ್ಕೆ ಬಂಧಿಸಿ ವೃತ್ತಿಯಿಂದ ವಜಾಗೊಳಿಸಲಾಯಿತು. ಇದರಿಂದ ಜಿಲ್ಲಾಧಿಕಾರಿಯವರೊಂದಿಗೆ ವಾಗ್ವಾದದ ಪರಿಣಾಮ ಮತ್ತಷ್ಟು ಮೊಕದ್ದಮೆಗಳನ್ನು ಎದುರಿಸಬೇಕಾಗಿ ಬಂದಿತು. ಭಾರತ ರಕ್ಷಣಾ ಕಾಯದೆಯನ್ವಯ 13 ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಯಾವುದೇ ತಪ್ಪು ಮಾಡದಿದ್ದರೂ ಇವರನ್ನು ಒಂದೂವರೆ ವರ್ಷದ ಕಾಲ ಸೇವೆಯಿಂದ ಅಮಾನತ್ತುಗೊಳಿಸಿ ಸತ್ಯಾಸತ್ಯತೆ ಮನಗಂಡು ನಂತರ ವಿಚಾರಣೆ ಕಾಯ್ದಿರಿಸಿ ಗುಲ್ಬರ್ಗಕ್ಕೆ ವರ್ಗಾವಣೆ ಮಾಡಲಾಯಿತು. ಕೆಲವು ಮೊಕದ್ದಮೆಗಳು ವಜಾ ಆದವು. ಉಳಿದ ಪ್ರಕರಣಗಳು ತುರ್ತು ಪರಿಸ್ಥಿತಿ ಹೋದನಂತರದಲ್ಲಿ ಸರ್ಕಾರ ಹಿಂತೆಗೆದುಕೊಂಡಿತು. ಪುನಃ ಹಾಸನಕ್ಕೆ ಮರು ವರ್ಗಾವಣೆಯಾಯಿತು. ಹೀಗೆ ಇವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಇತ್ತೀಚೆಗೆ ಇವರ ಜೀವನಗಾಥೆಯನ್ನು ಬಿ-ಟಿವಿ ಪ್ರಸಾರ ಪಡಿಸಿದ ಸಂದರ್ಭದಲ್ಲಿ ಎಲ್ಲವನ್ನೂ ವೀಕ್ಷಿಸಿ ಆಶ್ಚರ್ಯಚಕಿತನಾದೆ. ಇವರ ಬಗ್ಗೆ ಗೌರವ ಹೆಚ್ಚಾಯಿತು.
ಸಾಮಾಜಿಕ ಚಟುವಟಿಕೆ ಮತ್ತು ಸಾಹಿತ್ಯ ಕ್ಷೇತ್ರ : ನಿವೃತ್ತಿಯ ನಂತರ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದಲೇ ಕವಿ ಹರಿಹರಪುರ ಶ್ರೀಧರ್ ಅವರ ಜೊತೆಗೂಡಿ ಪ್ರಸ್ತುತ ಪ್ರಖ್ಯಾತಿ ಪಡೆದಿರುವ ವೇದಭಾರತಿ ಸಂಸ್ಥೆಯನ್ನು ಹುಟ್ಟುಹಾಕಿ ಈ ಸಂಸ್ಥೆಯ ಗೌರವಾಧ್ಯಕ್ಷರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತರ್ಜಾಲದಲ್ಲಿ ‘ಕವಿಮನ’ ಹಾಗೂ ‘ವೇದ ಜೀವನ’ ಎಂಬ ತಾಣಗಳನ್ನು ಹೊಂದಿರುವ ಇವರು ಆ ಮೂಲಕ ಸಾವಿರಾರು ಓದುಗರನ್ನು ಪಡೆದಿದ್ದಾರೆ. ಈ ಜಾಲತಾಣಗಳಲ್ಲಿ ಪ್ರಕಟವಾದ ಇವರ ‘ಮೂಢ ಉವಾಚ’ ಹೆಚ್ಚು ಜನಪ್ರಿಯವಾಯಿತು. ಇದೇ 2011ರಲ್ಲಿ ‘ಮೂಢ ಉವಾಚ’ ಎಂಬ ಕೃತಿಯಾಗಿ ಪ್ರಕಟಣೆಯಾಯಿತು. 80 ಪುಟಗಳ ಈ ಕೃತಿಯು 20 ರೂಗಳ ಮುಖ ಬೆಲೆಯನ್ನು ಹೊಂದಿದೆ. 2011ರಲ್ಲಿ ಹಾಸನದ ಶಂಕರಮಠದಲ್ಲಿ ವೇದಸುಧೆ ಬಳಗದ ಪ್ರಾಯೋಜಕತ್ವದಲ್ಲಿ ನಡೆದ ಮನೆ ಮನೆ ಕವಿಗೋಷ್ಠಿಯ ವಾರ್ಷಿಕೋತ್ಸವದಲ್ಲಿ ಈ ಕೃತಿಯು ಬಿಡುಗಡೆಯಾಗಿತ್ತು. ಅದೇ ವೇದಿಕೆಯಲ್ಲಿ ನನ್ನ ‘ಮೃತ್ಯುವಿನಾಚೆಯ ಬದುಕು’ ಕವನ ಸಂಕಲನವೂ ಸಹ ಬಿಡುಗಡೆಯಾಗಿತ್ತು.
ಕವಿ ಮನೆತನ : ಕ.ವೆಂ.ನಾ.ರವರು ಕರ್ನಾಟಕದ ಪ್ರಸಿದ್ಧ ಕೆಳದಿ ಕವಿಮನೆತನದರು. ಇವರ ಪೂರ್ವಜ ಕವಿಲಿಂಗಣ್ಣಯ್ಯ ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದರು. ಕವಿಲಿಂಗಣ್ಣಯ್ಯ ರಚಿಸಿದ 'ಕೆಳದಿನೃಪ ವಿಜಯ' ಐತಿಹಾಸಿಕ ಕಾವ್ಯಕೃತಿಯಾಗಿದ್ದು, ಕೆಳದಿ ಇತಿಹಾಸ ಅಧ್ಯಯನಕ್ಕೆ ಪ್ರಮುಖವಾದ ಆಕರ ಗ್ರಂಥವಾಗಿದೆ. 13 ತಲೆಮಾರುಗಳ ವಂಶವೃಕ್ಷ ಇದರಲ್ಲಿ ಲಭ್ಯವಿದೆ. ಪ್ರತಿವರ್ಷ ಕೆಳದಿ ಕವಿ ಕುಟುಂಬದವರು ಒಟ್ಟಿಗೆ ಸೇರುವ ಮೂಲಕ ಸಮಾವೇಶಗಳ ನಡೆಸುತ್ತಾರೆ. ಈ ಕೆಳದಿ ಕವಿ ಮನೆತನದಿಂದ 'ಕವಿಕಿರಣ' ಎಂಬ ಹೆಸರಿನ ಅರ್ಧವಾರ್ಷಿಕ ಪತ್ರಿಕೆಯ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಸಂಪಾದಕರಾಗಿ ಕ.ವೆಂ.ನಾಗರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕೆಳದಿ ಕವಿಕುಟುಂಬಗಳು, ಬಂಧುಗಳು ಮತ್ತು ಸ್ನೇಹಿತರ ಸಲುವಾಗಿ ಪ್ರಕಟವಾಗುವ ಪತ್ರಿಕೆಯಾಗಿದ್ದು ಇದುವರೆಗೆ 15 ಸಂಚಿಕೆಗಳು ಪ್ರಕಟವಾಗಿವೆ. ಮುಂದಿನ ಸಂಚಿಕೆ ಡಿಸೆಂಬರ್, 2015ರಲ್ಲಿ ಪ್ರಕಟವಾಗಲಿದೆ.

ಮೂಢ ಉವಾಚ : ಕ.ವೆಂ.ನಾಗರಾಜ್ ರವರು ಪ್ರಗತಿಪರ ಚಿಂತಕರೂ ಹೌದು. ಇವರ ;ಮೂಢ ಉವಾಚ’ ಓದಿದರೆ ಇವರ ಸಮಸಮಾಜದ ದೃಷ್ಟಿಕೋನ ಅರಿವಾಗದೇ ಇರದು. ಡಿ.ವಿ.ಗುಂಡಪ್ಪನವರ ಸುಪ್ರಸಿದ್ಧ ಕೃತಿ ‘ಮಂಕು ತಿಮ್ಮನ ಕಗ್ಗ’ ದಂತೆಯೇ ಸಾಮಾಜಿಕ ಕಳಕಳಿಯನ್ನು ಹೊಂದಿರುವ ‘ಮೂಢ ಉವಾಚ’ ವೂ ಸಹ ಒಂದು ಉತ್ತಮ ಕೃತಿಯಾಗಿದೆ. ಇದರಲ್ಲಿ 250 ಮುಕ್ತಕಗಳಿವೆ. 
ಕೇಳಲೊಲ್ಲದ ಕಿವಿಗೆ ನೀತಿ ಪಾಠವದೇಕೆ?
ತಿನ್ನಲೊಲ್ಲದ ಬಾಯ್ಗೆ ಷಡ್ರಸವದೇಕೆ?
ಮೆಚ್ಚಿದವರೊಡನಾಡು ಹಸಿದವರಿಗನ್ನವಿಡು
ಪಾತ್ರಾಪಾತ್ರರನರಿತಡಿಯನಿಡು ಮೂಢ ||
***
ಕಣ್ಣಿದ್ದು ಕುರುಡಾಗಿ, ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ, ಕ್ರೂರತ್ವ ತಾನೆರಗಿ
ತಡೆಯಬಂದವರನೆ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ ||
ಹೀಗೆ ಇವರ ಮುಕ್ತಕಗಳು ಭ್ರಷ್ಟಾಚಾರ, ಸಮಾಜಿಕ ಜಾಡ್ಯತೆಗಳು, ಕ್ರೋಧ, ಮದ, ಮತ್ಸರಗಳನ್ನು ಅನಾವರಣಗೊಳಿಸುತ್ತವೆ.

ಕವಿ ಸುಬ್ರಹ್ಮಣ್ಯಯ್ಯ-ಒಂದು ಜೀವಗೀತೆ : ಕವಿ ಸುಬ್ರಹ್ಮಣ್ಯಯ್ಯ –ಒಂದು ಜೀವಗೀತೆ ಕೃತಿಯು 2008 ರಲ್ಲಿ ಪ್ರಕಟವಾಗಿದೆ. 60 ಪುಟಗಳನ್ನು ಹೊಂದಿರುವ ಈ ಕೃತಿಯು ಕೆಳದಿ ಕವಿಮನೆತನದ ಹಿರಿಯ ಚೇತನ ಕವಿ ಸುಬ್ರಹ್ಮಣ್ಯಯ್ಯನವರ ಜೀವನ ಕುರಿತದ್ದಾಗಿದೆ.
     ಇದರಲ್ಲಿ ಮಾಸದ ನೆನಪು, ಸಾಗರದ ಚಿಗುರು, ಅಪ್ಪಳಿಸಿದ ಆಘಾತ, ಕೊಪ್ಪಕ್ಕೆ ಸಾಗಿದ ಬಾಳಿನ ತೆಪ್ಪ, ದಾವಣಗೆರೆಗೆ ಪಯಣ, ಕರೆಯಿತು ಶಿವಮೊಗ್ಗ, ಆನಂದ ಲಕ್ಷ್ಮಮ್ಮ, ಸುಬ್ರಹ್ಮಣ್ಯನ ಹೆಗ್ಗಳಿಕೆ, ಆಶು ಕವಿ-ಹಾಸ್ಯಗಾರ ಸುಬ್ಬಣ್ಣ, ಸುಬ್ರಹ್ಮಣ್ಯನ ಪಂಚಾಂಗ ಶ್ರವಣ, ಕಳಚಿದ ಕೊಂಡಿ ಸೇರಿತು, ಜೀವನ ಸಂಧ್ಯಾಕಾಲದಲ್ಲಿ, ಕವಿ ಸುಬ್ರಹ್ಮಣ್ಯನ ವಂಶಾವಳಿ, ಮುಗಿಸುವ ಮುನ್ನ ಎಂಬ ಹದಿನಾಲ್ಕು ಬರಹಗಳು ಇಲ್ಲಿವೆ. ಈ ಎಲ್ಲ ಬರಹಗಳು ಕ.ವೆಂ.ನಾ.ರವರು ಅವರ ತಾತನೊಂದಿಗಿನ ನೆನಪುಗಳನ್ನು, ಅವರ ಹಿನ್ನಲೆಗಳನ್ನು, ಕವಿ ಮನೆತನದ ಕೊಡುಗೆಗಳನ್ನು , ಆ ಕಾಲದ ಕುಟುಂಬ ಬಾಂಧವ್ಯದ ಸುಮಧುರ ಕ್ಷಣಗಳನ್ನು ಅರ್ಥವತ್ತಾಗಿ ಚಿತ್ರಿಸಿದ್ದಾರೆ.

ಆದರ್ಶದ ಬೆನ್ನು ಹತ್ತಿ :  30 ರೂಗಳ ಮುಖಬೆಲೆಯ 100 ಪುಟಗಳ “ಆದರ್ಶದ ಬೆನ್ನು ಹತ್ತಿ”  ಕೃತಿಯು 1975 ರಿಂದ 1977 ಅವಧಿಯ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ಕುರಿತ ವಿವರವಾದ ಚಿತ್ರಣಸಾಮಾನ್ಯ ನಾಗರಿಕನೊಬ್ಬ ಎದುರಿಸಿದ ಕಷ್ಟ ನಷ್ಟಗಳ ಅನುಭವ ಕಥನ ಇದಾಗಿದೆ.
    ಈ ಪುಸ್ತಕಕ್ಕೆ ಮುನ್ನುಡಿ ಬರೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಮಟ್ಟದ ಪ್ರಚಾರಕರು, ಕುಟುಂಬ ಪ್ರಬೋಧನ್ ಅಖಿಲ ಭಾರತ ಪ್ರಮಖರೂ ಆದ ಶ್ರೀ ಸು.ರಾಮಣ್ಣನವರು ಈ ಕೃತಿಯ ಬಗ್ಗೆ ಹೀಗೆ ಹೇಳಿದ್ದಾರೆ:  “ಎಮರ್ಜೆನ್ಸಿಯ ಕರಾಳ ದಿನಗಳ ಘಟನಾವಳಿಗಳಲ್ಲಿ ಪ್ರತ್ಯಕ್ಷ್ಯ ಇದ್ದು ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಿದವರಲ್ಲಿ ಪ್ರಿಯ ನಾಗರಾಜರಂತಹವರ ಜೊತೆ  ನಾನೂ ಸಹ ಇದ್ದೆ ಎಂಬುದು ಅತ್ಯಂತ ಧನ್ಯತೆಯ ಸಂಗತಿ. ಈ ಪೀಳಿಗೆಯ ತರುಣರಿಗೆ ‘ಎಮರ್ಜೆನ್ಸಿ’ ಗೊತ್ತೇಯಿಲ್ಲ. ಗೊತ್ತಿರುವ ಹಿರಿಯರು ಅದೇಕೋ ಏನೋ ಮರೆತು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾಗರಾಜರು ರಚಿಸಿರುವ ಈ ಪುಸ್ತಕವು ಗಾತ್ರದಲ್ಲಿ ಚಿಕ್ಕದಿರಬಹುದು, ಆದರೆ ಪಾತ್ರ ಬಹಳ ದೊಡ್ಡದು. ಈ ಪುಸ್ತಕವು ಅನ್ಯಾಯಕ್ಕೆ ತಲೆ ಬಾಗದೆ, ನ್ಯಾಯಕ್ಕಾಗಿ ಬದುಕಬೇಕೆಂಬ ಛಲವನ್ನು ತರುಣರಲ್ಲಿ ಬೆಳೆಸಬಲ್ಲದು. ದೇಶ ನನಗಾಗಿ ಅಲ್ಲ. ನಾನು ದೇಶಕ್ಕಾಗಿ ಎಂಬ ಜೀವನ ರಚನೆ ನಮ್ಮದಾಗಬೇಕಾಗಿದೆ. ಭ್ರಷ್ಟಾಚಾರ ಹಾಗೂ ದುರಾಡಳಿತಗಳ ವಿರುದ್ಧವಾಗಿ ಹೋರಾಡಲು ಬೇಕಾದ ಕಸುವು ನಮ್ಮಲ್ಲಿ ಜಾಗೃತವಾಗಬೇಕಿದೆ. ಅಂತಹದ್ದೊಂದು ಪ್ರೇರಣೆಯನ್ನು ಈ ಪುಸ್ತಕ ನೀಡಲು ಅರ್ಹವಾಗಿದೆ ಎಂಬ ಧೃಢ ಅಭಿಪ್ರಾಯ ನನ್ನದು.”
     ಇದುವರೆಗೂ 600ಕ್ಕೂ ಹೆಚ್ಚು ಇವರ ಲೇಖನಗಳು ರಾಜ್ಯದ ವಿವಿಧ ದಿನಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜನಮಿತ್ರದ 'ಚಿಂತನ' ಮತ್ತು ಜನಹಿತದ 'ಜನಕಲ್ಯಾಣ' ಅಂಕಣಗಳು ಹೆಚ್ಚು ಜನಪ್ರಿಯವಾಗಿವೆ. ವಿಕ್ರಮ, ಹೊಸದಿಗಂತಗಳಲ್ಲಿ ವೈಚಾರಿಕ ಲೇಖನಗಳು. ಆಕಾಶವಾಣಿಯಲ್ಲಿ ಇವರ ಹಲವಾರು 'ಚಿಂತನ'ಗಳು ಬಿತ್ತರಗೊಂಡಿವೆ. 
                                                     ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ