ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಫೆಬ್ರವರಿ 27, 2016

ಬ್ರಹ್ಮಚರ್ಯವೆಂದರೇನು? -2


    ಜನರು ಯಾವುದನ್ನು ಯಜ್ಞವೆನ್ನುತ್ತಾರೋ ಅದು ನಿಜವಾಗಿಯೂ ಬ್ರಹ್ಮಚರ್ಯವೇ ಆಗಿದೆ. ಯಜ್ಞವೆಂದರೆ ಕೇವಲ ಅಗ್ನಿಯನ್ನು ಉರಿಸುತ್ತಾ ಹೋಮ, ಹವನಗಳನ್ನು ಮಾತ್ರ ಮಾಡುವುದೆಂದು ಅರ್ಥವಲ್ಲ. ಎಲ್ಲಾ ಶ್ರೇಷ್ಠತಮ ಕರ್ಮಗಳೂ ಯಜ್ಞವೆಂದು ಶತಪತ ಬ್ರಾಹ್ಮಣದಲ್ಲಿ ಹೇಳಿದೆ. ಶ್ರೇಷ್ಠತಮ ಕರ್ಮಗಳು ಬ್ರಹ್ಮನನ್ನು ಅರಿಯಲು ಸಾಧನಗಳಾಗಿವೆ. ಯಾವುದನ್ನು ಉಪಾಸನೆ ಎನ್ನುತ್ತೇವೋ ಅದೂ ಬ್ರಹ್ಮಚರ್ಯವೇ ಆಗಿದೆ. ಏಕೆಂದರೆ ಉಪಾಸನೆಯಿಂದ ಪರಮಾತ್ಮನ ಅನುಭವವಾಗಲು ಸಾಧ್ಯವಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಸದ್ವಿಚಾರಗಳು, ಸತ್ಕರ್ಮಗಳು ಬ್ರಹ್ಮಚರ್ಯವೆನಿಸುತ್ತವೆ. ಸದ್ವಿಚಾರಗಳು, ಸತ್ಕರ್ಮಗಳು ಮಾತ್ರವೇ ಬ್ರಹ್ಮನನ್ನು, ಅಂದರೆ ಪರಮಾತ್ಮನನ್ನು, ಅರಿಯಲು ಮೆಟ್ಟಲುಗಳಾಗಿವೆ. ಜೈನ ಧರ್ಮ ಮತ್ತು ಬೌದ್ಧ ಧರ್ಮಗಳೂ ಸಹ ಬ್ರಹ್ಮಚರ್ಯಕ್ಕೆ ಮಹತ್ವ ನೀಡಿವೆ. ಮಹಾವೀರ ಮತ್ತು ಬುದ್ದರೂ ಬ್ರಹ್ಮಚರ್ಯ ಪಾಲನೆ ಮೋಕ್ಷಕ್ಕೆ ದಾರಿ ಎಂದಿದ್ದಾರೆ. ಬ್ರಹ್ಮಚರ್ಯ ಪಾಲನೆಯಿಂದ ವೀರ್ಯವೃದ್ಧಿಯಾಗುತ್ತದೆ, ದೈಹಿಕ, ಮಾನಸಿಕ ಶಕ್ತಿಗಳು ಪ್ರಬಲಗೊಳ್ಳುತ್ತವೆ, ಸದ್ವಿಚಾರಗಳಲ್ಲಿ ಆಸಕ್ತಿ ಮೂಡುತ್ತದೆ ಎಂದು ಪತಂಜಲಿ ಮಹರ್ಷಿಯವರ ಯೋಗಸೂತ್ರಗಳಲ್ಲಿ ಉಲ್ಲೇಖವಿದೆ.     
     ಬಾಲಕಿಯರೂ ಉಪನಯನ ಸಂಸ್ಕಾರ ಪಡೆಯಲು ಮತ್ತು ಬ್ರಹ್ಮಚರ್ಯ ಪಾಲಿಸಲು ಅಡ್ಡಿಯಿಲ್ಲವೆಂದು ಹಿಂದೆಯೇ ಹೇಳಿದೆ. ಕನ್ಯೆಯರ ದೇಹ ಪ್ರಕೃತಿನಿಯಮಾನುಸಾರ ಪುರುಷರಿಗಿಂತ ಬೇಗ ಯೌವನಕ್ಕೆ ಪ್ರವೇಶಿಸುವುದರಿಂದ ಅವರ ಬ್ರಹ್ಮಚರ್ಯದ ಅವಧಿ 16 ವರ್ಷಗಳಾಗಿರುತ್ತದೆ.(ಪಂ. ಸುಧಾಕರ ಚತುರ್ವೇದಿಯವರ ವೇದೋಕ್ತ ಜೀವನ ಪಥ - ಪು.60) ಬಾಲಕರೇ ಆಗಲಿ, ಬಾಲಕಿಯರೇ ಆಗಲಿ, ಬ್ರಹ್ಮಚರ್ಯದ ಅವಧಿ ಮುಗಿದ ನಂತರದಲ್ಲಿ ವೈವಾಹಿಕ ಜೀವನದಲ್ಲಿ ಮುಂದುವರೆಯಲೇಬೇಕೆಂದು ಕಡ್ಡಾಯವೇನಿಲ್ಲ. ತಮ್ಮದೇ ಆದ ಯಾವುದೇ ಘನ ಉದ್ದೇಶ, ಗುರಿ ಹೊಂದಿದ್ದಲ್ಲಿ ಅದನ್ನು ಸಾಧಿಸುವ ಸಲುವಾಗಿ ತಮಗೆ ಸರಿಯೆನ್ನಿಸುವ ಅವಧಿಯವರೆಗೆ ಅಥವ ಜೀವನಪರ್ಯಂತ ಬ್ರಹ್ಮಚಾರಿಗಳಾಗಿ ಮುಂದುವರೆಯಬಹುದು. ಇಂತಹ ಸಹಸ್ರಾರು ಸಾಧಕರುಗಳು ನಮ್ಮ ಕಣ್ಣಮುಂದೆಯೇ ಕಾಣಸಿಗುತ್ತಾರೆ. ಅನೇಕ ಸಾಧು-ಸಂತರುಗಳು, ವಿವಿಧ ಧಾರ್ಮಿಕ ನೇತಾರರುಗಳು, ಜೈನಮುನಿಗಳು, ಬೌದ್ಧಭಿಕ್ಷುಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನೇಕ ಪ್ರಚಾರಕರುಗಳು ಆಜೀವನ ಪರ್ಯಂತ ಬ್ರಹ್ಮಚಾರಿಗಳಾಗಿಯೇ ಸಾಧನೆ ಮುಂದುವರೆಸಿರುವುದು ನಮ್ಮ ಕಣ್ಣಮುಂದಿದೆ. ಇದಕ್ಕೆ ಬೇಕಾಗಿರುವುದು ಮನೋನಿಗ್ರಹ ಶಕ್ತಿ, ಗುರಿ ಸಾಧಿಸುವ ಛಲ, ಉನ್ನತ ಧ್ಯೇಯಕ್ಕಾಗಿ ಜೀವನ ಮುಡುಪಿಡುವ ಅರ್ಪಣಾ ಮನೋಭಾವಗಳು. ಇದು ಎಲ್ಲರಿಗೂ ಸಾಧ್ಯವಾಗುವಂತಹುದಲ್ಲ. ಇದಕ್ಕೆ ಉದಾಹರಣೆಯಾಗಿ ಮನೋನಿಗ್ರಹ ಮಾಡಿಕೊಳ್ಳಲಾಗದೆ ನಗೆಪಾಟಲಿಗೆ ಈಡಾದ ಸಾಧು-ಸಂತರು ಎಂಬ ಹೆಸರಿಗೆ ಕಳಂಕ ತಂದವರನ್ನೂ ಕಾಣುತ್ತಿದ್ದೇವೆ. ಇಂತಹ ಕೆಲವರಿಂದ ಎಲ್ಲರೂ ಇಂತಹವರೇ ಏನೋ ಎಂಬ ಭಾವನೆ ಬರುವ ಸಂಭವವಿದೆ ಮತ್ತು ನೈಜ ಬ್ರಹ್ಮಚಾರಿಗಳನ್ನೂ ಸಂದೇಹದಿಂದ ನೋಡುವ, ಅವಮಾನಿಸುವ ಪ್ರಸಂಗಗಳಿಗೂ ಅವಕಾಶವಿದೆ. 
     ವ್ಯಕ್ತಿಯಿಂದ ಕುಟುಂಬ, ಕುಟುಂಬಗಳಿಂದ ಗ್ರಾಮ, ಗ್ರಾಮಗಳಿಂದ ನಗರ, ನಗರಗಳಿಂದ ರಾಜ್ಯ, ರಾಜ್ಯಗಳಿಂದ ದೇಶಕ್ಕೆ ಅರ್ಥ ಮತ್ತು ಸ್ವರೂಪ ಬರುತ್ತದೆ. ವ್ಯಕ್ತಿ ದೇಶದ ಮೂಲಭೂತ ಅಂಶ, ವ್ಯಕ್ತಿಯ ವ್ಯಕ್ತಿತ್ವ ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ, ಇಲ್ಲದಿದ್ದರೆ ಇಲ್ಲ. ವ್ಯಕ್ತಿತ್ವ ನಿರ್ಮಾಣವೇ ಗುರಿಯಾದ ಬ್ರಹ್ಮಚರ್ಯದ ಉದ್ದೇಶ ಪಾಲನೆಯಾದರೆ ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಪಾಶ್ಚಾತ್ಯರ ಭೋಗ ಸಂಸ್ಕೃತಿಯ ಅಂಧಾನುಕರಣೆ, ಸನಾತನ ಧರ್ಮದ ಉತ್ತಮ ಅಂಶಗಳನ್ನೂ ಸಹ ಗೊಡ್ಡು ಸಂಪ್ರದಾಯವೆಂದು ಹೀಗಳೆಯುವುದೇ ಪ್ರಗತಿಪರತೆ, ಮೌಲ್ಯಗಳನ್ನು ಎತ್ತಿಹಿಡಿಯುವ ಸಂಗತಿಗಳನ್ನು ವಿರೂಪಗೊಳಿಸಿ ಅವಮಾನಿಸುವವರೇ ಬುದ್ಧಿಜೀವಿಗಳು ಎಂದು ಕರೆಯಲ್ಪಡುತ್ತಿರುವ ಇಂದಿನ ದಿನಮಾನದಲ್ಲಿ ವ್ಯಕ್ತಿತ್ವವನ್ನು ರೂಪಿಸುವ ಅವಧಿಯಲ್ಲಿ, ಅಂದರೆ ಜೀವಿತದ ಪ್ರಥಮ ಇಪ್ಪತ್ತೈದು ವರ್ಷಗಳಲ್ಲಿ, ನೀಡಲಾಗುತ್ತಿರುವ ಶಿಕ್ಷಣ ಪದ್ಧತಿಯಲ್ಲಿ ನೈತಿಕ ಮೌಲ್ಯಗಳಿಗೆ ಸಿಗುತ್ತಿರುವ ಪ್ರಾಧಾನ್ಯತೆ ನಗಣ್ಯವೆಂದೇ ಹೇಳಬೇಕಾಗಿದೆ. ಬೇವು ಬಿತ್ತಿ ಮಾವು ನಿರೀಕ್ಷಿಸುವ ನಾವು ಹುಂಬರೇ ಸರಿ.
     ಕೆಲವು ದಶಕಗಳ ಹಿಂದಿನ ಸ್ಥಿತಿ ಗಮನಿಸೋಣ. ಆಗ ಪ್ರತಿ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿರುತ್ತಿದ್ದವು, ಅವಿಭಕ್ತ ಕುಟುಂಬಗಳಿದ್ದವು, ಟಿವಿ ಇರಲಿಲ್ಲ, ಮನೆಯಲ್ಲಿ ಒಟ್ಟಾಗಿ ಬಾಳುವ ಮನೋಭಾವವಿರುತ್ತಿತ್ತು, ಸಂಬಂಧಗಳಿಗೆ ಮಾನ್ಯತೆಯಿತ್ತು, ನೈತಿಕ ಮೌಲ್ಯಗಳು ಅಷ್ಟಿಷ್ಟಾದರೂ ಇದ್ದವು. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಒಟ್ಟಾಗಿ ಭಜನೆ, ಪ್ರಾರ್ಥನೆ ಮಾಡುವ ಪರಿಪಾಠವಿತ್ತು. ಒಟ್ಟಾರೆಯಾಗಿ ಸಂತೋಷಕ್ಕೆ ಕೊರತೆಯಿರಲಿಲ್ಲ. ಕುಟುಂಬದ ಸದಸ್ಯರು ಯಾರೊಬ್ಬರು ದುರ್ಬಲರಾಗಿದ್ದರೂ ಉಳಿದವರು ಅವರನ್ನು ಕೈಹಿಡಿದು ಎತ್ತುತ್ತಿದ್ದರು. ಹಣದಲ್ಲಿ ಬಡತನವಿದ್ದರೂ ಆತ್ಮಸ್ಥೈರ್ಯಕ್ಕೆ ಬಡತನವಿರಲಿಲ್ಲ.
     ಇಂದಿನ ಮಕ್ಕಳ ಪರಿಸ್ಥಿತಿ ನೋಡಿದರೆ ಮರುಕವಾಗುತ್ತದೆ. ವೈವಾಹಿಕ ಸಂಬಂಧಗಳೇ ಮಹತ್ವ ಕಳೆದುಕೊಳ್ಳುತ್ತಿರುವ, ಇಂದು ಮದುವೆ, ನಾಳೆ ವಿಚ್ಛೇದನ ಎಂಬುದು ಸಾಮಾನ್ಯವಾಗುತ್ತಿರುವ, ಒಪ್ಪಂದ ಆಧಾರದ ಸಂಬಂಧಗಳು ಹೆಚ್ಚುತ್ತಿರುವಾಗ,  ವಿಚ್ಛೇದನದ ಕಾರಣದಿಂದ ಮತ್ತು ಪತಿ-ಪತ್ನಿಯರ ನಡುವಣ ಸಾಮರಸ್ಯದ ಕೊರತೆಯಿಂದ ಅನಾಥಪ್ರಜ್ಞೆಯಿಂದ ನರಳುವ ಮಕ್ಕಳನ್ನು ಕಂಡರೆ ದಿಗಿಲಾಗುತ್ತದೆ. ಮಕ್ಕಳಿಗೆ ಸುಮಾರು 6 ವರ್ಷಗಳಾಗುವವರೆಗೆ, ಮೆದುಳು ಇನ್ನೂ ಬಲಿಯಬೇಕಾಗಿರುವುದರಿಂದ, ಅವರಿಗೆ ಕಲಿಕೆಯ ಶ್ರಮ ಕೊಡಬಾರದೆಂದು ಮನೋಶಾಸ್ತ್ರಜ್ಞರು ಮತ್ತು ಶಿಕ್ಷಣತಜ್ಞರು ಹೇಳುತ್ತಾರೆ. ಆದರೆ, ನಗರಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ದುಡಿಯಲು ಹೋಗುವವರಾದರೆ ಇನ್ನೂ ತಾಯಿಯ ಮಡಿಲಿನಲ್ಲೇ ಪಿಳಿಪಿಳಿ ಕಣ್ಣು ಬಿಟ್ಟು ಆಟವಾಡಬೇಕಾದ ಮಕ್ಕಳನ್ನೂ ಶಿಶುಕೇಂದ್ರ(ಬೇಬಿ ಕೇರ್)ಗಳಲ್ಲಿ ಬಿಟ್ಟುಹೋಗುತ್ತಾರೆ. ಅಲ್ಲಿ ಮಕ್ಕಳನ್ನು ಸುಧಾರಿಸಲಾಗದೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸುತ್ತಾರೆಂದೂ ದೂರುಗಳಿವೆ. ಒಂದು ಶಿಶುಕೇಂದ್ರದಲ್ಲಂತೂ ಮಕ್ಕಳಿಗೆ ಹರಕುಬಟ್ಟೆ ಹಾಕಿ ಭಿಕ್ಷಾಟನೆಗೆ ಕರೆದೊಯ್ಯಲು ಬಾಡಿಗೆಗೆ ಒದಗಿಸುತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ಬಂದಿತ್ತು. ಹುಟ್ಟುತ್ತಲೇ ಬೇಬಿ ಸಿಟ್ಟಿಂಗ್, 2-3 ವರ್ಷವಾಗುತ್ತಲೇ ಎಲ್.ಕೆ.ಜಿ., ನಂತರ ಯು.ಕೆ.ಜಿ., ನಂತರ ಒಂದನೆಯ ತರಗತಿಗೆ ಮಕ್ಕಳನ್ನು ದಾಖಲಿಸುವುದು (ಅದೂ ಆಂಗ್ಲ ಮಾಧ್ಯಮದ ಶಾಲೆಗಳಿಗೆ) ಕಾಣುತ್ತಿದ್ದೇವೆ. ಶಾಲೆಗಳಲ್ಲೂ ಡೇ ಕೇರ್ ಸೌಲಭ್ಯವಿದ್ದು ತಂದೆ/ತಾಯಿ ಕೆಲಸ ಮುಗಿಸಿಕೊಂಡು ಬರುವವರೆಗೂ ಶಾಲೆ ಮುಗಿದ ನಂತರವೂ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ನಗರಗಳಲ್ಲಿದೆ. ಮೊದಲ ಪಾಠಶಾಲೆಯಾಗಬೇಕಾಗಿದ್ದ ಮನೆಯೇ ಮಕ್ಕಳನ್ನು ಮನೆಯಿಂದ ಹೊರಗೆ ಹಾಕುವ ಪ್ರಕ್ರಿಯೆಗೆ ಹುಟ್ಟುತ್ತಲೇ ಚಾಲನೆ ಕೊಡುತ್ತಿದೆ. ಮೊದಲ ಪಾಠಶಾಲೆಯೇ ಇಂದಿನ ಮಕ್ಕಳಿಗೆ ಇಲ್ಲ. ಮೊದಲ ಶಿಕ್ಷಕರಾದ ತಾಯಿ-ತಂದೆಯರಿಗೆ ಪುರುಸೊತ್ತೇ ಇಲ್ಲ.
-ಕ.ವೆಂ.ನಾಗರಾಜ್.

ಮಂಗಳವಾರ, ಫೆಬ್ರವರಿ 23, 2016

ಜವಹರಲಾಲ್ ನೆಹರು ವಿಶ್ವವಿದ್ಯಾಲಯ - ವಿವಾದಗಳ ಹುತ್ತ


     'ಜಂಗ್ ರಹೇಗಿ ಜಂಗ್ ರಹೇಗಿ, ಭಾರತ್ ಕಿ ಬರ್ಬಾದಿ ತಕ್'. 'ಜಂಗ್ ರಹೇಗಿ ಜಂಗ್ ರಹೇಗಿ ಕಾಶ್ಮೀರ್ ಕಿ ಆಜಾದಿ ತಕ್', 'ಪಾಕಿಸ್ತಾನ್ ಜಿಂದಾಬಾದ್', 'ಗೋ ಬ್ಯಾಕ್ ಇಂಡಿಯಾ', 'ಭಾರತ್ ತೇರೇ ತುಕಡೇ ತುಕಡೇ ಕರ್ ದೇಂಗೆ', 'ಅಫ್ಜಲ್ ಹಮೆ ಶರ್ಮಿಂದಾ ಹೈ, ತೇರೇ ಕಾತಿಲ್ ಜಿಂದಾ ಹೈ' -  ಇವು ಪಾಕಿಸ್ತಾನದಲ್ಲಿ ಮೊಳಗಿದ ಘೋಷಣೆಗಳಲ್ಲ. ಭಾರತದ ರಾಜಧಾನಿ ದೆಹಲಿಯಲ್ಲಿರುವ ಭಾರತದ ಪ್ರಥಮ ಪ್ರಧಾನಮಂತ್ರಿ ಜವಹರಲಾಲ್ ನೆಹರು ಹೆಸರು ಹೊತ್ತಿರುವ ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿಗಳೆನಿಸಿಕೊಂಡ ಕೆಲವರು ಇತ್ತೀಚೆಗೆ ಮೊಳಗಿಸಿದ ಘೋಷಣೆಗಳು. ಸಂದರ್ಭ, ಸಾಂಸ್ಕೃತಿಕ ಸಂಜೆಯ ಮುಸುಕಿನಲ್ಲಿ ಡಿ.ಎಸ್.ಯು. ಹೆಸರಿನ ವಿದ್ಯಾರ್ಥಿ ಸಂಘಟನೆಯ ಹಳೆಯ ವಿದ್ಯಾರ್ಥಿಗಳು (ಈ ಸಂಘಟನೆ ಆಂತರಿಕ ಕಚ್ಚಾಟದಿಂದ ವಿಭಜನೆಗೊಂಡು ಜೆ.ಎನ್.ಯು.ಎಸ್.ಯು.ನೊಂದಿಗೆ ವಿಲೀನವಾಗಿದೆ)  'ಎ ಕಂಟ್ರಿ ವಿಥೌಟ್ ಪೋಸ್ಟ್ ಆಫೀಸ್' ಎಂಬ ಹೆಸರು ಕೊಟ್ಟು 9.02.2016ರಂದು ಆಯೋಜಿಸಿದ್ದ ಕಾರ್ಯಕ್ರಮ. ಭಾರತದ ಸ್ವಾತಂತ್ರ್ಯದ ಅಸ್ತಿತ್ವದ ಪ್ರತೀಕವಾದ ಲೋಕಸಭೆಯ ಮೇಲಿನ ದಾಳಿಯ ರೂವಾರಿ ಅಫ್ಜಲ್ ಬೇಗ್ ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಮಕ್ಬೂಲ್ ಬಟ್‌ರವರನ್ನು ಉಚ್ಛನ್ಯಾಯಾಲಯದ ಆದೇಶದಂತೆ ಗಲ್ಲಿಗೇರಿಸಿದ್ದ ಕ್ರಮವನ್ನು ಖಂಡಿಸಲಾಗುವುದು ಮತ್ತು ಅವರು ಸತ್ತ ಮೂರನೆಯ ವರ್ಷದ ಸ್ಮರಣೆ ಮಾಡಲಾಗುವುದೆಂದು ಪ್ರಚುರಪಡಿಸಲಾಗಿತ್ತು. ಕಮ್ಯುನಿಸ್ಟ್ ಪಕ್ಷದಲ್ಲಿ ಬೇರು ಇರುವ ಜೆ.ಎನ್.ಯು.ಎಸ್.ಯು. ಸಂಘಟನೆ ಇದಕ್ಕೆ ಬೆಂಬಲ ಕೊಟ್ಟಿತ್ತು. ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಆಡಳಿತ ಅನುಮತಿ ಕೊಟ್ಟಿರಲಿಲ್ಲವೆನ್ನಲಾಗಿದೆ. ನಂತರದ ಬೆಳವಣಿಗೆಗಳು ಎಲ್ಲರಿಗೂ ತಿಳಿದೇ ಇದೆ. ದೇಶದ್ರೋಹದ ಆಪಾದನೆಯ ಮೇಲೆ ವಿದ್ಯಾರ್ಥಿ ನಾಯಕ ಕನ್ನಯ್ಯಕುಮಾರ್ ಬಂಧನವಾಯಿತು. ಕಾರ್ಯಕ್ರಮ ಆಯೋಜಿಸಿದ್ದ ಉಮರ್ ಖಲೀದ್ ಮತ್ತು ಇತರ ಹತ್ತು ಸಹಚರರು ಕಣ್ಮರೆಯಾದರು. ಕನ್ನಯ್ಯಕುಮಾರನ ಬಂಧನವನ್ನು ವಿರೋಧಿಸಿ ಮತ್ತು ಸಮರ್ಥಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದವು. ಬಂಧನವನ್ನು ವಿರೋಧಿಸುವವರ ಪ್ರಮುಖ ಆರೋಪವೆಂದರೆ 'ಸರ್ಕಾರದಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ'!
     1969ರಲ್ಲಿ ಪ್ರಾರಂಭವಾದ ಈ ವಿಶ್ವವಿದ್ಯಾಲಯದಲ್ಲಿ ಈಗ 650 ಬೋಧಕ ಸಿಬ್ಬಂದಿ, 1300 ಬೋಧಕೇತರ ಸಿಬ್ಬಂದಿ ಮತ್ತು 8500 ವಿದ್ಯಾರ್ಥಿಗಳಿದ್ದಾರೆ. ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡಲು ವಿವಿಧ ಕೇಂದ್ರಗಳು, ಶಾಲೆಗಳಿವೆ. ವಿಶ್ವವಿದ್ಯಾಲಯದ ಘಟನೆ, ಸಂವಿಧಾನ ರಚನೆ, ನೇಮಕಾತಿ, ಇತ್ಯಾದಿ ವಿಷಯಗಳನ್ನು ನಿರ್ಧರಿಸಿದವರು ಕಮ್ಯುನಿಸ್ಟ್ ವಿಚಾರಧಾರೆಯ ಧುರೀಣರು. ಶ್ರೀ ಪ್ರಕಾಶ್ ಕಾರಟ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ನೆಹರುರವರು ಪ್ರಜಾಪ್ರಭುತ್ವದ ಹೆಸರಿನಲ್ಲಿ ಕಮ್ಯುನಿಸ್ಟರಿಗೆ ನೆಲೆ ಒದಗಿಸಿದರು. ಅವರು ನಂತರದಲ್ಲಿ ಪ್ರಜಾಪ್ರಭುತ್ವವನ್ನೇ ಅಣಕಿಸಿದರು, ಆದದ್ದು ಇಷ್ಟೆ. ಹೀಗಾಗಿ ಅಲ್ಲಿ ಎಡವಿಚಾರಧಾರೆಗೆ ಹೆಚ್ಚಿನ ಪ್ರಾಧಾನ್ಯತೆ, ಮಾನ್ಯತೆ ಸಿಕ್ಕಿದೆ. ಎಡವಿಚಾರಧಾರೆಗೆ ಸೇರಿದ ವಿದ್ಯಾರ್ಥಿಗಳೇ ಅಲ್ಲಿ ಮೇಲುಗೈ ಪಡೆದಿದ್ದಾರೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಲ್ಲೂ ಅವರುಗಳ ಸಂಖ್ಯೆ ಹೆಚ್ಚಿದೆ. ಎಡವಿಚಾರಧಾರೆ ವಿರೋಧಿಸುವವರನ್ನು ಅಲ್ಲಿ ಮೂಲೆಗುಂಪು ಮಾಡಲಾಗುತ್ತಿದೆಯೆಂಬ ಆರೋಪಗಳಿವೆ. ಭಾರತದ ಇತಿಹಾಸವನ್ನು ತಿರುಚುವಲ್ಲಿ ಅಲ್ಲಿನ ವಿದ್ವಾಂಸರುಗಳು, ಸಂಶೋಧಕರುಗಳು ಕೈ ಆಡಿಸಿದ್ದಾರೆ. ಎಡವೋ, ಬಲವೋ, ಮಧ್ಯವೋ ಯಾವುದೋ ಒಂದು ವಿಚಾರಕ್ಕೆ ಜೋತು ಬೀಳದೆ ವಾಸ್ತವತೆಗೆ ಮಾನ್ಯತೆ, ಎಲ್ಲಾ ವಿಚಾರಗಳ ಪ್ರತಿಪಾದನೆ, ಮಂಡನೆಗೆ ಮುಕ್ತ ಅವಕಾಶ ಸಿಕ್ಕರೆ ಅದನ್ನು ಆದರ್ಶಸ್ಥಿತಿಯೆನ್ನಬಹುದು. ವಿಶ್ವವಿದ್ಯಾಲಯಗಳ, ಶೈಕ್ಷಣಿಕ ಸಂಸ್ಥೆಗಳ ಮೌಲ್ಯಮಾಪನ ಮಾಡುವ ನ್ಯಾಶನಲ್ ಅಸೆಸ್‌ಮೆಂಟ್ ಅಂಡ್ ಅಕ್ರೆಡಿಟೇಶನ್ ಕೌನ್ಸಿಲ್(ನ್ಯಾಕ್) ಈ ವಿಶ್ವವಿದ್ಯಾಲಯಕ್ಕೆ 2012ರಲ್ಲಿ (ಶ್ರೀ ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ, ಶ್ರೀಮತಿ ಸೋನಿಯಾಗಾಂಧಿಯವರ ರಿಮೋಟ್ ಆಡಳಿತವಿದ್ದಾಗ) 4ಕ್ಕೆ 3.9 ಅಂಕ ನೀಡಿತ್ತು. ವಿಶೇಷವೆಂದರೆ ಇಷ್ಟೊಂದು ಅಂಕವನ್ನು ಭಾರತದ ಇನ್ನು ಯಾವುದೇ ವಿಶ್ವವಿದ್ಯಾಲಯಕ್ಕೆ ಕೊಡಲಾಗಿಲ್ಲ! ಇನ್ನೊಂದು ವಿಷಯ ಇಲ್ಲಿ ಪ್ರಸ್ತಾಪಿಸಲೇಬೇಕು. ಇಲ್ಲಿ ಪ್ರತಿ ವಿದ್ಯಾರ್ಥಿಗೆ ರೂ. 3.00 ಲಕ್ಷ ರೂ. ಗಳನ್ನು ಸಬ್ಸಿಡಿ ರೂಪದಲ್ಲಿ ಸರ್ಕಾರ ಭರಿಸುತ್ತಿದೆ. ಒಟ್ಟು ಸುಮಾರು 255 ಕೋಟಿ ರೂ.ಗಳು ಈ ರೂಪದಲ್ಲಿ ವಿನಿಯೋಗವಾಗುತ್ತಿದೆ. ಒಬ್ಬ ವಿದ್ಯಾರ್ಥಿಯ ಬೋಧನಾ ಶುಲ್ಕ ರೂ.217, ವೈದ್ಯಕೀಯ ಶುಲ್ಕ ರೂ.9, ಕ್ರೀಡಾಶುಲ್ಕ ರೂ.16, ಲೈಬ್ರರಿ ಶುಲ್ಕ ರೂ.16, ತಿಂಗಳ ಹಾಸ್ಟೆಲ್ ಶುಲ್ಕ ರೂ.20 ಮಾತ್ರ! ಇಷ್ಟೊಂದು ಸವಲತ್ತುಗಳನ್ನು ಪಡೆಯುವ ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದರೆ ಸಾರ್ಥಕವಾಗುತ್ತಿತ್ತು. ಬದಲಾಗಿ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವವರಿಗೆ ಇವರುಗಳು ದಾಳಗಳಾಗಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಇದು ಇತ್ತೀಚಿನ ಬೆಳವಣಿಗೆಯಲ್ಲ, ವಿದ್ಯಾಲಯದ ಹುಟ್ಟಿನಿಂದಲೇ ಬಂದ ಜಾಡ್ಯವಾಗಿದೆ.
     ನೆಹರೂ ವಿಶ್ವವಿದ್ಯಾಲಯ ಹಲವಾರು ವಿವಾದಗಳನ್ನು ಬೆನ್ನಿಗೆ ಅಂಟಿಸಿಕೊಂಡೇ ಬಂದಿದೆ. 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿದ್ದುದು ಈಗ ಇತಿಹಾಸ. ಸುಮಾರು 3 ತಿಂಗಳುಗಳ ಕಾಲ ನಡೆದ ಸಂಘರ್ಷದಲ್ಲಿ ಭಾರತದ 527 ಯೋಧರು ಹುತಾತ್ಮರಾಗಿ 1363 ಯೋಧರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನದ ಸಂಬಂಧಗಳು ಹಳಸಿದ್ದವು. ಇನ್ನೂ ಯುದ್ಧದ ನೆನಪುಗಳು ಮಾಸದಿರುವಾಗಲೇ ಏಪ್ರಿಲ್, 2000ದಲ್ಲಿ ನೆಹರೂ ವಿಶ್ವವಿದ್ಯಾಲಯದವರು ಇಬ್ಬರು ಪಾಕಿಸ್ತಾನದ ಕವಿಗಳನ್ನು, ಅಹಮದ್ ಫರಾಜ್ ಮತ್ತು ಫಾಮಿದಾ ರಿಯಾಜ್, ಆಹ್ವಾನಿಸಿ ಕಾರ್ಯಕ್ರಮ ಏರ್ಪಡಿಸಿದ್ದರು. ಇಬ್ಬರು ಸೇನಾಧಿಕಾರಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತವಿರೋಧಿ ಕಲಾಪಗಳಿದ್ದುದನ್ನು ಗಮನಿಸಿದ ಸೇನಾಧಿಕಾರಿಗಳು ಭಾರತವಿರೋಧಿ ಅಂಶಗಳ ಬಗ್ಗೆ ಪ್ರತಿಭಟಿಸಿದರು. ಪ್ರತಿಭಟಿಸಿದ್ದಕ್ಕಾಗಿ ಅವರುಗಳ ಮೇಲೆ ಹಲ್ಲೆ ನಡೆಯಿತು. ಒಬ್ಬರು ಸೇನಾಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದಾಗಿ ಅವರು ಅಲ್ಲಿಂದ ಪಾರಾಗಿ ಬಂದರು. ಇಲ್ಲದಿದ್ದರೆ ಅನುಚಿತ ಘಟನೆ ಸಂಭವಿಸಿಬಿಡುತ್ತಿತ್ತು.
     ಇನ್ನೊಂದು ಘಟನೆ ನೋಡೋಣ. 6.4.2010ರಂದು ಛತ್ತೀಸಘಡ ರಾಜ್ಯದ ದಾಂತೆವಾಡ ಜಿಲ್ಲೆಯ ಚಿಂತಲ್ನಾರ್ ಗ್ರಾಮದ ಬಳಿ ಸುಮಾರು 300 ಜನ ಮಾವೋವಾದಿಗಳ ತಂಡ ಸಿ.ಆರ್.ಪಿ.ಎಫ್. ಜವಾನರು ಹೋಗುತ್ತಿದ್ದ ವಾಹನಗಳನ್ನು ನೆಲಬಾಂಬುಗಳ ಮೂಲಕ ಉಡಾಯಿಸಿಬಿಟ್ಟಿದ್ದರು. ಘರ್ಷಣೆಯಲ್ಲಿ 76 ಪೋಲಿಸರು ಮತ್ತು 8 ಮಾವೋವಾದಿಗಳು ಹತರಾಗಿದ್ದರು. ಮಾವೋವಾದಿಗಳ ಸಶಸ್ತ್ರಹೋರಾಟಕ್ಕೆ ನಾಂದಿಯಾಗಿದ್ದು ಪ.ಬಂಗಾಳದ ನಕ್ಸಲ್ ಬಾರಿ ಗ್ರಾಮದಲ್ಲಾದುದರಿಂದ ಇವರನ್ನು ನಕ್ಸಲರು ಅಂತಲೂ ಕರೆಯುತ್ತಾರೆ. ಆಗ ಇದೇ ಡಿ.ಎಸ್.ಯು. ಸಂಘಟನೆ 'ಜೆ.ಎನ್.ಯು. ಫೋರಮ್ ಅಗೆನೆಸ್ಟ್ ವಾರ್ ಆನ್ ಪೀಪಲ್' ಹೆಸರಿನಲ್ಲಿ ಒಂದು ಸಭೆ ಏರ್ಪಡಿಸಿ ಸಿ.ಆರ್.ಪಿ.ಎಫ್. ಜವಾನರ ಹತ್ಯೆಯನ್ನು ಸಿಹಿ ಹಂಚಿ ಸಂಭ್ರಮಿಸಿದ್ದರು. ಆಗ ಅವರುಗಳು ಕೂಗಿದ್ದ ಘೋಷಣೆಗಳು - 'ಇಂಡಿಯ ಮುರ್ದಾಬಾದ್', 'ಮಾವೋವಾದ್ ಜಿಂದಾಬಾದ್'! ಎಬಿವಿಪಿ ಮತ್ತು ಎನ್.ಎಸ್.ಯು.ಐ. ಸಂಘಟನೆಗಳು ಇದನ್ನು ಪ್ರತಿಭಟಿಸಿದ್ದವು. ದೇಶದ ರಕ್ಷಣಾ ವ್ಯವಸ್ಥೆಯನ್ನು ಹದಗೆಡಿಸಿ ಅರಾಜಕತೆ ಉಂಟುಮಾಡುವವರನ್ನು ಸಮಾನತೆ ಬಯಸುವವರು ಎನ್ನಬಹುದೇ? ವಿದ್ಯಾರ್ಥಿಗಳನ್ನು ಇವರ ಹಸ್ತಕರನ್ನಾಗಿ ಪ್ರಚೋದಿಸುವುದು ವಿಶ್ವವಿದ್ಯಾಲಯದ ವ್ಯವಸ್ಥೆಯ ಭಾಗವೇ ಎಂಬುದು ಚರ್ಚೆಯ ವಿಷಯವಾಗಬೇಕು.
     ನೆಹರು ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ಘಟನೆಯಲ್ಲಿ ಕೇಳಿಬಂದ ದೇಶದ್ರೋಹಿ ಘೋಷಣೆಗಳು, ನಂತರದ ಬೆಳವಣಿಗೆಗಳು, ಪರ-ವಿರೋಧ ಚಳುವಳಿಗಳ ಕುರಿತು ನಡೆದ ಸಂವಾದವೊಂದರಲ್ಲಿ ಮೇಲಿನ ಸಂಗತಿಗಳನ್ನು ಹಂಚಿಕೊಂಡು, ಇಂತಹ ಸಮಸ್ಯೆಗೆ ಪರಿಹಾರವಾಗಿ ಏನು ಮಾಡಬಹುದು ಎಂದು ಪ್ರಶ್ನಿಸಿದಾಗ ಶ್ರೋತೃಗಳು ಹೇಳಿದ್ದು: ನೆಹರು ವಿಶ್ವವಿದ್ಯಾಲಯವನ್ನು ಮುಚ್ಚಬೇಕು, ಅಲ್ಲಿರುವ ಎಲ್ಲಾ ಸಿಬ್ಬಂದಿಯನ್ನು ವರ್ಗಾಯಿಸಬೇಕು, ಬದಲಾಯಿಸಬೇಕು, ಸಬ್ಸಿಡಿ ರದ್ದು ಮಾಡಬೇಕು, ದೇಶದ್ರೋಹದ ಚಟುವಟಿಕೆಗಳು ಕಂಡುಬಂದಾಗ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು, ಇತ್ಯಾದಿ. ಆದರೆ, ಇವು ಸಮಸ್ಯೆಗೆ ಪರಿಹಾರವಾಗಲಾರದು. ಬದಲಾಗಿ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಲು ವಿರೋಧಿ ಶಕ್ತಿಗಳಿಗೆ ನೆರವಾಗುತ್ತವೆ. ನೆಗಡಿ ಬಂತೆಂದು ಮೂಗನ್ನೇ ಕತ್ತರಿಸಿದರೆ ಆದೀತೆ? ಎಡ, ಬಲ, ಮಧ್ಯಮ, ಇತ್ಯಾದಿ ವಿಚಾರಗಳನ್ನು ಬದಿಗೊತ್ತಿ ಎಲ್ಲಾ ವಿಚಾರಗಳಿಗೂ ಆದ್ಯತೆ ನೀಡುವ ವ್ಯವಸ್ಥೆ ಬರುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವ ಉದ್ದೇಶಕ್ಕಾಗಿ ಅಲ್ಲಿಗೆ ಬರುತ್ತಾರೋ ಆ ಉದ್ದೇಶಕ್ಕಾಗಿ ಗಮನ ನೀಡುವ ವಾತಾವರಣ ಮೂಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಹಿತಕ್ಕೆ ವಿರುದ್ಧವಾದ ಚಟುವಟಿಕೆಗಳಿಗೆ ಆಸ್ಪದವಿರಲೇಬಾರದು. ಹೀಗಾಗಬೇಕೆಂದರೆ ನೈಜ ಕಾಳಜಿಯುಳ್ಳ ಎಲ್ಲರೂ ಈಗಿನ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ರಾಜಕೀಯ ಮತ್ತು ಸ್ವಹಿತಾಸಕ್ತಿಗಳು ನುಸುಳಲೇಬಾರದು.
-ಕ.ವೆಂ.ನಾಗರಾಜ್.    

ಬುಧವಾರ, ಫೆಬ್ರವರಿ 17, 2016

ಬ್ರಹ್ಮಚರ್ಯವೆಂದರೇನು? -1

.

     ಇಂದು ಬ್ರಹ್ಮಚಾರಿ ಎಂಬುದಕ್ಕೆ ಮದುವೆಯಾಗದಿರುವವರು ಎಂಬ ಅರ್ಥ ಮಾತ್ರ ಉಳಿದುಕೊಂಡಿರುವುದಕ್ಕೆ ನಮ್ಮ ಜೀವನ ನಡೆಸುವ ರೀತಿ ಕಾರಣವಾಗಿದೆ. 'ನಮ್ ತಾತಾನೂ ಬ್ರಹ್ಮಚಾರಿ, ನಮ್ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ' ಎಂಬಂತಹ ಹಾಸ್ಯಚಟಾಕಿಗಳನ್ನೂ ಕೇಳಿದ್ದೇವೆ. ಆದರೆ ಬ್ರಹ್ಮಚರ್ಯದ ಮಹಿಮೆ ತಿಳಿದವರು ಈ ರೀತಿಯಾಗಿ ಲಘುವಾಗಿ ಮಾತನಾಡಲಾರರು. ಸನಾತನ ಧರ್ಮದಲ್ಲಿ ಮಾನವನ ಜೀವಿತದ ಅವಧಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ಆಶ್ರಮಗಳೆಂದು ಕರೆಯಲಾಗುವ ಈ ವಿಭಾಗಗಳು ಒಂದೊಂದೂ ವೈಯಕ್ತಿಕ ಮತ್ತು ಸಾಮಾಜಿಕ ಜೀವನಕ್ಕೆ ಉಪಯುಕ್ತವಾದುದಾಗಿದೆ. ಬ್ರಹ್ಮಚರ್ಯವೆಂದರೇನು, ಅದರ ಮಹತ್ವವೇನು, ಇಂದಿನ ಕಾಲದಲ್ಲಿ ಇದರ ಪ್ರಸ್ತುತತೆ ಏನು ಎಂಬ ಕುರಿತು ನೋಡೋಣ.
     ಬ್ರಹ್ಮಚರ್ಯ ಎಂಬ ಪದದ ಅರ್ಥ ಪರಮಾತ್ಮನಲ್ಲಿ ಮತ್ತು ವೇದದಲ್ಲಿ ಅರ್ಥಾತ್ ಜ್ಞಾನದಲ್ಲಿ ತೊಡಗಿಕೊಳ್ಳುವದು, ವಿಹರಿಸುವುದು ಎಂದಾಗುತ್ತದೆ. ಮಾನವನ ಜೀವಿತಾವಧಿಯನ್ನು ನೂರು ವರ್ಷಗಳು ಎಂದಿಟ್ಟುಕೊಂಡರೆ ಮೊದಲ ಇಪ್ಪತ್ತೈದು ವರ್ಷಗಳು ಬ್ರಹ್ಮಚರ್ಯ, ನಂತರದ ತಲಾ ಇಪ್ಪತ್ತೈದು ವರ್ಷಗಳು ಅನುಕ್ರಮವಾಗಿ ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮಗಳಿಗೆ ಮೀಸಲಾಗುತ್ತವೆ. ಮೊದಲಿನ ಇಪ್ಪತ್ತೈದು ವರ್ಷಗಳ ಬ್ರಹ್ಮಚರ್ಯಾಶ್ರಮದ ಅವಧಿಯಲ್ಲಿ ವ್ಯಕ್ತಿ ಯಾವ ರೀತಿ ತೊಡಗಿಕೊಳ್ಳುತ್ತಾನೆ ಎಂಬುದರ ಮೇಲೆ ಅವನ ವ್ಯಕ್ತಿತ್ವ ರೂಪಿತಗೊಳ್ಳುತ್ತದೆ. ಈ ಅವಧಿ ವ್ಯಕ್ತಿತ್ವನಿರ್ಮಾಣದ ಬುನಾದಿಯ ಅವಧಿಯಾಗಿದೆ. ಈ ಅವಧಿಯಲ್ಲಿ ಶಿಕ್ಷಣಕ್ಕೆ ಮತ್ತು ಮುಂದಿನ ಜೀವನದ ತಯಾರಿಗೆ ಅತ್ಯಾವಶ್ಯಕವಾದುದಾಗಿದೆ. ಇಂದು ಸಾಮಾಜಿಕ ಜೀವನ ಕೆಳಮಟ್ಟದಲ್ಲಿದೆಯೆಂದರೆ ಇಂದಿನ ಶಿಕ್ಷಣದ ಮಟ್ಟ ಕೆಳಮಟ್ಟದಲ್ಲಿದೆಯೆಂದೇ, ಬ್ರಹ್ಮಚರ್ಯದ ಅವಧಿ ವ್ಯರ್ಥವಾಗಿ ವಿನಿಯೋಗವಾಗುತ್ತಿದೆಯೆಂದೇ ಅರ್ಥ.
     ಶಿಕ್ಷಣ ಪಡೆಯುವ ಮತ್ತು ಮುಂದಿನ ಜೀವನದ ಸಿದ್ಧತೆ ಮಾಡಿಕೊಳ್ಳಬೇಕಾದ ಈ ಅವಧಿಯಲ್ಲಿ ಈ ಗುರಿಯನ್ನು ಬಿಟ್ಟು ಬೇರೆಡೆಗೆ ಮನಸ್ಸನ್ನು ಹೊರಳಿಸದಿರುವುದು ಅಗತ್ಯ. ಈ ಕಾರಣದಿಂದ ಈ ಸಮಯದಲ್ಲಿ ಇಂದ್ರಿಯ ನಿಗ್ರಹಕ್ಕೆ ಪ್ರಾಧಾನ್ಯತೆ ಬಂದಿದೆ. ಇಂದ್ರಿಯ ನಿಗ್ರಹವೆಂದರೆ ಕೇವಲ ಲೈಂಗಿಕ ಸಂಬಂಧಕ್ಕೆ ಕಡಿವಾಣ ಮಾತ್ರವಲ್ಲದೆ ಪ್ರ್ರಾಪಂಚಿಕವಾದ ಯಾವುದೇ ಸುಖ-ಭೋಗಗಳಿಗೂ ಮಹತ್ವ ನೀಡದೆ ಕೇವಲ ಶಿಕ್ಷಣದ ಕಡೆಗೆ ಗಮನ ಕೊಡುವುದಾಗಿದೆ. ಹಿಂದಿನ ಗುರುಕುಲ ಪದ್ಧತಿಯ ವ್ಯವಸ್ಥೆಯಲ್ಲಿ ಮಗುವಿಗೆ ಸಾಮಾನ್ಯವಾಗಿ 7-8 ವರ್ಷಗಳಾದಾಗ  ಉಪನಯನ ಸಂಸ್ಕಾರ ಮಾಡಿ ತಮಗೆ ಅನುಕೂಲವೆನ್ನಿಸುವ ಗುರುಕುಲಕ್ಕೆ ಮಕ್ಕಳನ್ನು ಬಿಡುತ್ತಿದ್ದರು. ಉಪನಯನದ ಜೊತೆಗೇ ವೇದಾರಂಭ ಸಂಸ್ಕಾರವನ್ನೂ ಮಾಡುತ್ತಿದ್ದರು. ಉಪ ಎಂದರೆ ಹತ್ತಿರಕ್ಕೆ, ನಯನವೆಂದರೆ ಕರೆದೊಯ್ಯುವುದು ಎಂದರ್ಥ. ಮಗುವನ್ನು ವಿದ್ಯಾಭ್ಯಾಸದ ಸಲುವಾಗಿ ಗುರುಗಳ ಬಳಿಗೆ ಕರೆದೊಯ್ಯುವುದೇ ಉಪನಯನ. ಈ ಕ್ರಿಯೆಗೆ ಗಂಡು ಮಕ್ಕಳು, ಹೆಣ್ಣುಮಕ್ಕಳು ಎಂಬ ಭೇದವಿರದೆ ಎಲ್ಲರಿಗೂ ಉಪನಯನ ಮಾಡಲಾಗುತ್ತಿತ್ತು. ಈಗ ಗಂಡುಮಕ್ಕಳಿಗೆ ಮತ್ತು ಒಂದು ವರ್ಗದವರಿಗೆ ಮಾತ್ರ ಉಪನಯನ ಎಂಬ ತಪ್ಪು ಸಂಪ್ರದಾಯ ರೂಢಿಯಲ್ಲಿದೆ.  ಆಗ ಸಂಕಲ್ಪದ ರೂಪದಲ್ಲಿ ಧರಿಸಲಾಗುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಋಷಿಋಣ, ಪಿತೃಋಣಗಳನ್ನು ಸಂಕೇತಿಸುತ್ತವೆ. ಇದು ಬಹು ಹಿಂದೆ ಜಾತಿಸೂಚಕವಾದ ಚಿಹ್ನೆಯಾಗಿರಲಿಲ್ಲ. ಇಂದಿನ ರೂಢಿಗತ ಸಂಪ್ರದಾಯಗಳೇನೇ ಇರಲಿ, ಸ್ತ್ರೀಯರೂ ಯಜ್ಞಕರ್ಮಾದಿಗಳನ್ನು ಮಾಡಲು ಅಧಿಕಾರಸ್ಥರು ಎಂಬುದಕ್ಕೆ ಈ ವೇದಮಂತ್ರದ ಉದಾಹರಣೆ ಸಾಕು: 'ಶುದ್ಧಾಃ ಪೂತಾ ಯೋತೋ ಯಜ್ಞಿಯಾ ಇಮಾ ಆಪಶ್ಚರುಮವ ಸರ್ಪಂತು ಶುಭ್ರ್ರಾಃ| ಅದುಃ ಪ್ರಜಾಂ ಬಹುಲಾನ್ ಪಶೂನ್ನಃ ಪಕ್ಷೌದನಸ್ಯ ಸುಕೃತಾಮೇತು ಲೋಕಮ್|| (ಅಥರ್ವ.11.1.17.)' ಸ್ತ್ರೀಯರು ಶುದ್ಧಚಿತ್ತರು, ಪವಿತ್ರ ವಾಗ್ಮಿಗಳು, ಆಪ್ತರು, ಗೌರವಾನ್ವಿತರಾಗಿದ್ದು ಅವರು ಯಜ್ಞಾದಿ ಕರ್ಮಗಳಲ್ಲಿ ಭಾಗವಹಿಸಲಿ. ಅವರು ಭೋಗಯಂತ್ರಗಳಾಗಿರದೆ ಸರ್ವ ಸಂಪತ್ತುಗಳಿಗೆ ಮೂಲಕಾರಣರು. ಹೀಗೆ ತಿಳಿಯುವವರು ಪವಿತ್ರ ಜ್ಞಾನವಂತ ಮತ್ತು ಸತ್ಕರ್ಮನಿರತರ ಸ್ಥಿತಿಯನ್ನು ಗಳಿಸುತ್ತಾನೆ ಎಂಬುದು ಈ ಮಂತ್ರದ ಅರ್ಥ. ಇಂತಹ ಮತ್ತು ಇದಕ್ಕೆ ಪುಷ್ಟಿ ನೀಡುವ ಅನೇಕ ವೇದಮಂತ್ರಗಳನ್ನು ಉದಾಹರಿಸಬಹುದಾಗಿದೆ. 
     ಸ್ತ್ರೀಯರೂ ಉಪನಯನಕ್ಕೆ ಅರ್ಹರು ಎಂಬುದನ್ನು ಹೇಳುವ ಋಗ್ವೇದದ ಮಂತ್ರವಿದು: 'ದೇವಾ ಏತಸ್ಯಾಮವದಂತ ಪೂರ್ವೇ ಸಪ್ತ ಋಷಯಸ್ತಪಸೇ ಯೇ ನಿಷೇದುಃ| ಭೀಮಾ ಜಾಯಾ ಬ್ರಾಹ್ಮಣಸ್ಯೋಪನೀತಾ ದುರ್ಧಾಂ ದಧಾತಿ ಪರಮೇ ವ್ಯೋಮನ್|| (ಋಕ್.10.109.4.)' ಸ್ತ್ರೀಯರೂ ಪಂಚಜ್ಞಾನೇಂದ್ರಿಯಗಳು ಮತ್ತು ಮನೋಬುದ್ಧಿಯನ್ನು ಹೊಂದಿದವರಾಗಿದ್ದು ಅವರೂ ಜ್ಞಾನಸಾಧನೆ ಮಾಡಿ ಉಪದೇಶ ನೀಡಲು ಸಮರ್ಥರಿದ್ದಾರೆ. ಜ್ಞಾನಿ ಪುರುಷನ ತೇಜಸ್ವಿನಿ ಸ್ತ್ರೀ ಉಪನೀತಳಾಗಿ ಬ್ರಹ್ಮಜ್ಞಾನ ಪಡೆದು ಸಾಮಾನ್ಯರಿಗೂ ಕಷ್ಟವೆನಿಸುವ ಅಸಾಮಾನ್ಯ ಸಿದ್ಧಿ ಗಳಿಸುವಳು ಎಂಬುದು ಈ ಮಂತ್ರದ ತಾತ್ಪರ್ಯವಾಗಿದೆ. 
     ವೇದಾರಂಭವೆಂದರೆ ಕೇವಲ ವೇದಮಂತ್ರಗಳನ್ನು ಕಲಿಯುವುದಲ್ಲ, ಇನ್ನಿತರ ವಿದ್ಯೆಗಳನ್ನೂ-ಗಣಿತ, ವಿಜ್ಞಾನ, ಶಸ್ತ್ರವಿದ್ಯೆ, ತರ್ಕ, ಮುಂತಾದ- ಕಲಿಯುವುದಾಗಿತ್ತು. ವೇದ ಎಂಬ ಪದದ ಅರ್ಥ ಜ್ಞಾನ ಎಂದೇ ಹೊರತು ಬೇರೆಯಲ್ಲ. ಗುರುಕುಲಗಳಲ್ಲಿ ಸಕಲ ವಿದ್ಯೆಗಳನ್ನೂ ಕಲಿಸಲಾಗುತ್ತಿತ್ತು. ರಾಮ, ಕೃಷ್ಣ, ಪಾಂಡವರೇ ಮೊದಲಾದವರು ಗುರುಕುಲಗಳಲ್ಲಿ ಶಸ್ತ್ರ-ಶಾಸ್ತ್ರ ಪ್ರವೀಣರಾದ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಗುರುಕುಲಗಳಲ್ಲಿ ಜಾತಿಭೇದವಿರಲಿಲ್ಲ, ಉಚ್ಛ-ನೀಚ ಭಾವನೆಗಳಿರಲಿಲ್ಲ. ರಾಜರ ಮಕ್ಕಳೂ, ಸಾಮಾನ್ಯರ ಮಕ್ಕಳೂ ಒಟ್ಟಿಗೇ ಗುರುಕುಲಗಳಲ್ಲಿ ವಾಸವಿದ್ದು ಸಮಾನಭಾವದಲ್ಲಿ ಅಲ್ಲಿ ವಿದ್ಯೆ ಕಲಿಯಬೇಕಿತ್ತು. ಸಮಾಜದ ಋಣದಲ್ಲಿ ನಡೆಯುತ್ತಿದ್ದ ಗುರುಕುಲಗಳಿಗೆ ಶಿಕ್ಷಾರ್ಥಿಗಳು ಭಿಕ್ಷೆ ಸಂಗ್ರಹಿಸಿ ಆಚಾರ್ಯರಿಗೆ ನೀಡುತ್ತಿದ್ದರು. ಶಿಕ್ಷಾರ್ಥಿಗಳು ಅವರ ಶಕ್ತ್ಯಾನುಸಾರ ಮತ್ತು ಆಸಕ್ತಿಗಳಿಗನುಸಾರವಾಗಿ ಶಿಕ್ಷಣ ಪಡೆದು ಪ್ರವೀಣರೆನಿಸಿದ ನಂತರ ಸಮಾವರ್ತನ (ಬೀಳ್ಕೊಡುಗೆ ಕಾರ್ಯಕ್ರಮವೆಂದರೆ ಅರ್ಥವಾದೀತು) ಸಂಸ್ಕಾರ ನಡೆಯುತ್ತದೆ. ಈ ಸಮಯದಲ್ಲಿ ಗುರುವು ತನ್ನ ಶಿಷ್ಯರಿಗೆ ವಿಶೇಷವಾದ ಉಪದೇಶ ನೀಡಿ ಸತ್ಪ್ರಜೆಗಳಾಗಲು ಹರಸಿ ಬೀಳ್ಕೊಡುತ್ತಾರೆ. ಗುರುಕುಲದಲ್ಲಿದ್ದಷ್ಟು ಕಾಲವೂ ಗುರುವು ನೀಡಿದ್ದು ಉಪದೇಶವೇ ಆಗಿದ್ದರೂ, ಸಮಾವರ್ತನ ಕಾಲದಲ್ಲಿ ಅವೆಲ್ಲವನ್ನೂ ಸಾರರೂಪದಲ್ಲಿ ಸಂಗ್ರಹವಾಗಿ ತಿಳಿಸುತ್ತಾರೆ. ಹಾಗೆ ಸ್ನಾತಕರೆನಿಸಿಕೊಂಡ ವಿದ್ಯಾರ್ಥಿಗಳು ಮನೆಗೆ ಹಿಂತಿರುಗಿದಾಗ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿಯುವ, ಸ್ವಸಾಮರ್ಥ್ಯದಲ್ಲಿ ಬದುಕುವ, ಸಮಾಜಕ್ಕೆ ಒದಗುವ ಯಾವುದೇ ಅಪಾಯದ ವಿರುದ್ಧ ಸೆಟೆದುನಿಲ್ಲುವ, ರಕ್ಷಿಸುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ, ಗುರು-ಹಿರಿಯರಿಗೆ ಗೌರವ ತೋರಿಸುವವರಾಗಿರುತ್ತಾರೆ.
     ಬ್ರಹ್ಮಚಾರಿಯ ಗುಣಗಳನ್ನು ವಿವರಿಸುವ ವೇದಮಂತ್ರವಿದು: ಬ್ರಹ್ಮಚಾರೀ ಬ್ರಹ್ಮ ಭ್ರಾಜದ್ಭಿಭರ್ತಿ ತಸ್ಮಿನ್ದೇವಾ ಅಧಿ ವಿಶ್ವೇ ಸಮೋತಾಃ | ಪ್ರಾಣಾಪಾನೌ ಜನಯನ್ನಾದ್ವ್ಯಾನಂ ವಾಚಂ ಮನೋ ಹೃದಯಂ ಬ್ರಹ್ಮ ಮೇಧಾಮ್ || (ಅಥರ್ವ.11.5.24.) ಬ್ರಹ್ಮಚಾರಿಯು ಪ್ರಾಣ, ಅಪಾನ ಮತ್ತು ವ್ಯಾನ- ಈ ಮೂರು ಪ್ರಾಣ ಶಕ್ತಿಗಳನ್ನೂ, ವಾಣಿಯನ್ನೂ, ಮನಸ್ಸನ್ನೂ, ಹೃದಯವನ್ನೂ, ವೇದಜ್ಞಾನವನ್ನೂ, ಬುದ್ಧಿಯನ್ನೂ, ಸರ್ವರೀತಿಯಲ್ಲಿಯೂ ವರ್ಧಿಸಿಕೊಳ್ಳುತ್ತಾ, ಪ್ರಕಾಶಮಾನವಾದ ಬ್ರಹ್ಮತತ್ವವನ್ನು ಧರಿಸುತ್ತಾನೆ. ಅವನಲ್ಲಿ  ಸಮಸ್ತ ಇಂದ್ರಿಯ ಶಕ್ತಿಗಳೂ, ದಿವ್ಯ ಗುಣಗಳೂ ಹಾಸು ಹೊಕ್ಕಾಗಿ ಹೆಣೆದು ಬರುತ್ತವೆ ಎಂಬುದು ಈ ಮಂತ್ರದ ಅರ್ಥ. ಇಂತಹ ದಿವ್ಯ ವ್ಯಕ್ತಿತ್ವ ಹೊಂದುದವರು ಸರ್ವಮಾನ್ಯರಾಗಿ ಬಾಳುತ್ತಾರೆ. ಬ್ರಹ್ಮಚರ್ಯದ ನಿಜವಾದ ಗುಣ ಮತ್ತು ಮಹತ್ವ ಇರುವುದು ಇಲ್ಲಿಯೇ!
-ಕ.ವೆಂ.ನಾಗರಾಜ್.
***************
ದಿನಾಂಕ ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಫೆಬ್ರವರಿ 14, 2016

ಪರಮಾತ್ಮನ ಸಂವಿಧಾನ - God's Constitution


ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ ||
     ಒಂದು ದೇಶದ ಸಂವಿಧಾನವೆಂದರೆ ಆ ದೇಶದ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ ವಿವರಗಳೊಂದಿಗೆ ದೇಶದ ರೀತಿ-ನೀತಿಗಳನ್ನು ವ್ಯಕ್ತಪಡಿಸುವ ಒಂದು ಪವಿತ್ರ ಪುಸ್ತಕ. ಇತಿಹಾಸ ಅಧ್ಯಯನ ಮಾಡುವವರು ವಿವಿಧ ದೇಶಗಳ ಸಂವಿಧಾನಗಳ ಕುರಿತು ತಿಳಿದುಕೊಳ್ಳುತ್ತಾರೆ. ದೇಶದ ಮುತ್ಸದ್ದಿಗಳು, ಚಿಂತಕರುಗಳು ಸೇರಿ ರಚಿಸಿರುವ ಸಂವಿಧಾನದ ಮೂಲ ಉದ್ದೇಶ ಪ್ರಜೆಗಳು ಸಾಮರಸ್ಯದಿಂದ, ನೆಮ್ಮದಿಯಿಂದ ಬಾಳಬೇಕು ಎಂಬುದಾಗಿರುತ್ತದೆ. ಎಷ್ಟೇ ದೂರದೃಷ್ಟಿಯಿಂದ ಸಂವಿಧಾನದ ರಚನೆಯಾದರೂ ಕುತಂತ್ರಿ, ಸ್ವಾರ್ಥಪರ ನಾಯಕರುಗಳು ಇದಕ್ಕೆ ತಮ್ಮದೇ ಆದ ಅರ್ಥ ವ್ಯಾಖ್ಯಾನ ಮಾಡಿ, ಅನೇಕ ತಿದ್ದುಪಡಿಗಳನ್ನು ತಂದು ಸಂವಿಧಾನದ ಮೂಲ ಅರ್ಥ ಮತ್ತು ಉದ್ದೇಶಗಳಿಗೆ ಭಂಗ ತಂದಿರುವದು ಮತ್ತು ತರುತ್ತಿರುವುದನ್ನು ಕಾಣುತ್ತಿದ್ದೇವೆ. ಇದರಿಂದಾಗಿ ಸಮಾಜದಲ್ಲಿ ಅಶಾಂತಿಗೆ ವಿಶ್ರಾಂತಿ ಇಲ್ಲವಾಗಿದೆ. ದೇಶದ ಸಂವಿಧಾನ, ಕಾನೂನು-ಕಾಯದೆಗಳಿಗಿಂತ ತಮ್ಮ ಧರ್ಮಗ್ರಂಥವೇ ದೊಡ್ಡದೆಂದು ವಾದಿಸುವ ಮತಾಂಧರೂ ಸಂವಿಧಾನಕ್ಕೆ ಅಪಚಾರ ಬಗೆಯುತ್ತಿರುವುದನ್ನೂ ಕಾಣುವ ದೌರ್ಭಾಗ್ಯ ಸಹ ನಮ್ಮದಾಗಿದೆ. ಹಕ್ಕುಗಳು ಬೇಕು, ಕರ್ತವ್ಯಗಳು ಬೇಡವೆಂದು ಅರಾಜಕತೆ ಪೋಷಿಸುವ ರಾಜಕೀಯ ಪಕ್ಷಗಳೂ, ಗುಂಪುಗಳೂ, ಸಂಸ್ಥೆಗಳೂ ಇಲ್ಲಿವೆ. ಪ್ರಜಾಸತ್ತೆಯ ಹೆಸರಿನಲ್ಲಿ ಸಮುದಾಯಗಳ ಓಲೈಕೆ, ಶೋಷಣೆಗಳು ಹೊಸ ಹೊಸ ರೀತಿಗಳಲ್ಲಿ ತಲೆಯೆತ್ತಿವೆ. ಹಣವಿದ್ದರೆ ಅಧಿಕಾರ, ಕಾನೂನು, ನ್ಯಾಯಗಳೂ ಹೇಳಿದಂತೆ ಕೇಳುತ್ತವೆ ಎಂಬ ವಾತಾವರಣ ಸೃಷ್ಟಿಯಾಗುತ್ತಿರುವುದು ಅಪಾಯದ ಎಚ್ಚರಿಕೆಯ ಗಂಟೆಯಾಗಿದೆ. ದೇಶದ ಹಿತ ಬಯಸುವವರು ಇದಕ್ಕೆ ಆದಷ್ಟು ಬೇಗ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದರೆ ಕ್ಷೋಭೆ ಉಂಟಾಗಿ ಪ್ರಜಾಪ್ರಭುತ್ವಕ್ಕೆ ಗ್ರಹಣ ಹಿಡಿದೀತು.
     ಜಗತ್ತಿನಲ್ಲಿರುವ ನೂರಾರು ಸಂಖ್ಯೆಯ ದೇಶಗಳು ತಮ್ಮವೇ ಆದ ರೀತಿ-ರಿವಾಜುಗಳನ್ನು ನೀತಿಯಾಗಿ, ಸಂವಿಧಾನವಾಗಿ ಆರಿಸಿಕೊಂಡಿವೆ. ಆದರೂ ಎಲ್ಲಾ ದೇಶಗಳನ್ನೂ ಒಂದಲ್ಲಾ ಒಂದು ಕೊರತೆ, ನ್ಯೂನತೆ, ಸಮಸ್ಯೆಗಳು ಕಾಡುತ್ತಲೇ ಇವೆ. ಇದಕ್ಕೆ ಕಾರಣ ಎಲ್ಲರಿಗೂ ಒಪ್ಪಿತವಾಗುವ ವಿಚಾರಗಳು ಇರುವುದಿಲ್ಲವೆಂಬದೇ ಆಗಿದೆ. ದೇಶಗಳು ತಮ್ಮ ಅಭಿವೃದ್ಧಿಗಾಗಿ ಇಷ್ಟೊಂದು ಕಷ್ಟಪಡಬೇಕಾಗಿರುವಾಗ ಇಡೀ ಬ್ರಹ್ಮಾಂಡವನ್ನೇ ನಿಯಂತ್ರಿಸುತ್ತಿರುವ ಆ ಪರಮಾತ್ಮನಿಗೆ ಎಷ್ಟು ಕಷ್ಟವಿರಬೇಕು, ಆ ಪರಮಾತ್ಮನ ಸಂವಿಧಾನವಾದರೂ ಹೇಗಿದ್ದೀತು?
     ದೇವರು, ಪರಮಾತ್ಮ ಎಂದಾಕ್ಷಣ ಆಸ್ತಿಕರು, ನಾಸ್ತಿಕರು ಇತ್ಯಾದಿ ಚರ್ಚೆಗಳು ಹುಟ್ಟಿಕೊಳ್ಳುತ್ತವೆ. ಇದನ್ನೆಲ್ಲಾ ಬದಿಗಿರಿಸಿ ವಿಚಾರ ಮಾಡೋಣ. ಆಕಾಶವನ್ನೇ ದೇವರ ಪ್ರತಿನಿಧಿ ಅಥವ ದೇವರು ಎಂದೇ ಭಾವಿಸಿಕೊಂಡು ನೋಡೋಣ. ಆಕಾಶ ಇಲ್ಲದ ಸ್ಥಳವಿಲ್ಲ. ಇಡೀ ಬ್ರಹ್ಮಾಂಡ ಎಷ್ಟಿದೆಯೋ ಅದನ್ನೆಲ್ಲಾ ಆವರಿಸಿಕೊಂಡಿರುವುದು ಆಕಾಶ. ಭೋರ್ಗರೆಯುವ ಸಮುದ್ರದ ಜೊತೆಗೆ, ಸುಡುವ ಅಗ್ನಿಯೊಡನೆ, ಯಾರೂ ಹೋಗಲಾಗದ, ನೋಡಲಾಗದ ಸ್ಥಳಗಳಲ್ಲಿ, ಒಟ್ಟಾರೆಯಾಗಿ ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ ಆಕಾಶವಿದೆ. ಈ ಆಕಾಶ ಅದೆಷ್ಟೋ ಸೂರ್ಯಮಂಡಲಗಳನ್ನು ಅವುಗಳು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇರುವಂತೆ ನೋಡಿಕೊಂಡಿದೆ! ಎಲ್ಲಕ್ಕೂ ಆಧಾರವಾಗಿರುವ ಆಕಾಶಕ್ಕೆ ಆಧಾರದ ಅಗತ್ಯವೇ ಇಲ್ಲ! ಆಕಾಶವನ್ನು ಕತ್ತರಿಸಲಾಗುವುದಿಲ್ಲ, ಸುಡಲಾಗುವುದಿಲ್ಲ, ತೋಯಿಸಲಾಗುವುದಿಲ್ಲ, ನಾಶ ಮಾಡಲೂ ಆಗುವುದಿಲ್ಲ, ಸೃಷ್ಟಿಸಲೂ ಆಗುವುದಿಲ್ಲ. ದೇವರನ್ನೂ ಹೀಗೆಯೇ ಇದ್ದಾನೆ ಎನ್ನುತ್ತೇವಲ್ಲವೇ? ಇಂತಹ ದೇವರ ಸಂವಿಧಾನವಾದರೂ ಹೇಗಿದೆ?
ಮಿತಿಯುಂಟೆ ದೇವನ ಕೊಡುಗೆ ಕರುಣೆಗೆ
ರವಿ ಸೋಮ ನೆಲ ಜಲ ವಾಯು ಆಗಸ |
ಪೂರ್ಣ ಜಗವನಿತ್ತಿಹನು ಸಕಲ ಜೀವಿಗೆ
ಭೇದವೆಣಿಸದಾತನಿಗೆ ಶರಣಾಗು ಮೂಢ ||
     ಪರಮಾತ್ಮನ ಸಂವಿಧಾನದಲ್ಲಿ ಇರುವಷ್ಟು ಸ್ವಾತಂತ್ರ್ಯ, ನ್ಯಾಯ, ನೀತಿ, ಧರ್ಮಗಳು ಮನುಷ್ಯ ನಿರ್ಮಿತ ಸಂವಿಧಾನದಲ್ಲಿ ಇರುವುದು ಅಸಾಧ್ಯ, ಇದ್ದರೂ ಜಾರಿ ಮಾಡುವುದು ದುಸ್ಸಾಧ್ಯ. ಪರಮಾತ್ಮನ ಸಂವಿಧಾನದ ಪಂಚತತ್ವಗಳು - ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶ -  ಸಕಲ ಚರಾಚರಗಳ ಅಸ್ತಿತ್ವಕ್ಕೆ ಕಾರಣವಾಗಿವೆ. ಈ ಐದೂ ತತ್ವಗಳು ಯಾವುದೇ ಜೀವಿಗೆ, ಅದು ಪಶು-ಪಕ್ಷಿಯಿರಬಹುದು, ಮಾನವನಿರಬಹುದು, ಕ್ರಿಮಿ-ಕೀಟವಿರಬಹುದು ಎಲ್ಲರಿಗೂ ಸಮಾನವಾಗಿವೆ. ಜೀವಿ, ನಿರ್ಜೀವಿ ಎಂಬ ಭೇದವನ್ನೂ ಸಹ ಅವು ಮಾಡವು. ಭೂಮಿಯಲ್ಲಿ ಇಂತಹವರು ಮಾತ್ರ ಇರಬೇಕು, ಇಂತಹವರು/ಇಂತಹವು ಇರಬಾರದು ಎಂದು ನಿರ್ಬಂಧವಿಲ್ಲ. ನಿರ್ಬಂಧವೇನಾದರೂ ಇದ್ದರೆ ಅವು ಮನುಷ್ಯನಿರ್ಮಿತವಷ್ಟೇ! ಇಡೀ ಭೂಮಿ ಒಂದೇ ಆಗಿದ್ದು, ಅದನ್ನು ದೇಶಗಳು, ರಾಜ್ಯಗಳು ಎಂದು ತುಂಡು-ತುಂಡುಗಳಾಗಿಸಿರುವವರು ನಾವೇನೇ! ನದಿ, ತೊರೆಗಳ ನೀರು ತಗ್ಗಿರುವೆಡೆಗೆ ಹರಿಯುತ್ತವೆ. ಆ ದೇಶ, ಈ ದೇಶ, ಆ ರಾಜ್ಯ, ಈ ರಾಜ್ಯ ಎಂಬ ಭೇದ ಅದಕ್ಕಿಲ್ಲ. ಈ ನಿಯಮಕ್ಕೆ ಅಪವಾದವೇ ಇಲ್ಲ, ಇದನ್ನು ಮುರಿಯಲೂ ಸಾಧ್ಯವಿಲ್ಲ. ಇನ್ನು ಬೆಂಕಿಯ ವಿಷಯವನ್ನೇ ತೆಗೆದುಕೊಂಡರೆ ಅದರ ದಹಿಸುವ ಗುಣ ಎಲ್ಲೆಡೆಯೂ ಒಂದೇ! ಬೆಂಕಿ ಸುಡುತ್ತದೆ ಎಂದು ಗೊತ್ತಿರುವವರನ್ನೂ ಅದು ಸುಡುತ್ತದೆ, ಗೊತ್ತಿಲ್ಲದವರನ್ನೂ ಅದು ಸುಡುತ್ತದೆ. ಆ ಜಾತಿಯವರನ್ನು ಮಾತ್ರ ಸುಡಬೇಕು, ಈ ಜಾತಿಯವರನ್ನು ಸುಡುವಾಗ ಸ್ವಲ್ಪ ರಿಯಾಯಿತಿ ಕೊಡಬೇಕು ಎಂಬ ತಾರತಮ್ಯ ಅದಕ್ಕೆ ಇಲ್ಲವೇ ಇಲ್ಲ. ಯಾವ ದೇಶದ ಕಾನೂನುಗಳೂ ಬೆಂಕಿಯ ಗುಣ ಬದಲಾಯಿಸಲು ಸಾಧ್ಯವೇ ಇಲ್ಲ. ಇಡೀ ದೇಶದ ಜನರು ಒಗ್ಗೂಡಿ ಬೆಂಕಿ ಸುಡಬಾರದು ಎಂದು ತೀರ್ಮಾನ ತೆಗೆದುಕೊಂಡರೂ ಬೆಂಕಿಯ ಗುಣವನ್ನು ಬದಲಾಯಿಸಲು ಸಾಧ್ಯವಿಲ್ಲ.
     ವಾಯು ಎಲ್ಲೆಡೆಯೂ, ಎಲ್ಲರಿಗೂ ಸಮನಾಗಿ ಬೀಸುತ್ತದೆ. ಮಳೆ ಸಹ ಅಷ್ಟೇ. ಸೂರ್ಯನ ಪ್ರಕಾಶವೂ ಯಾವುದೇ ತಾರತಮ್ಯ ಮಾಡದು. ಇವನು ಬುದ್ಧಿವಂತ, ಒಳ್ಳೆಯವನು ಇವನಿಗೆ ಜಾಸ್ತಿ ಫಲ ಸಿಗಲಿ; ಇವನು ದಡ್ಡ, ಇವನಿಗೆ ಕಡಿಮೆ ಸಿಗಲಿ ಎಂದು ಪಂಚತತ್ವಗಳು ತಮ್ಮ ರೀತಿ-ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ. ಇವನು ನಾಸ್ತಿಕ, ದೇವರನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದು ಅವನಿಗೆ ಅನ್ನ, ನೀರು, ಆಶ್ರಯ ಸಿಗದಂತೆ ದೇವರು ಮಾಡಿದ ಉದಾಹರಣೆಗಳಂತೂ ಕಂಡಿಲ್ಲ. ಇವನು ಪರಮ ದೇವರ ಭಕ್ತ, ಸದಾ ದೇವರ ಧ್ಯಾನದಲ್ಲೇ ಇರುತ್ತಾನೆ ಎಂದು ಆತನಿಗೆ ವಿಶೇಷ ಸವಲತ್ತುಗಳನ್ನು ದೇವರು ಒದಗಿಸಿದ ಉದಾಹರಣೆಗಳೂ ಇಲ್ಲ. ಮನುಷ್ಯ ಇಂತಹ ವ್ಯತ್ಯಾಸಗಳನ್ನು ಮಾಡಿಯಾನು. ನಮ್ಮ ದೇವರನ್ನೇ ನಂಬಬೇಕು, ಪೂಜಿಸಬೇಕು ಎಂದು ಆಗ್ರಹಿಸಿ ನರಹತ್ಯೆಗಳನ್ನು ಮಾಡುವ ಮತಾಂಧರ ನಡುವೆ ನಾವು ಬಾಳುತ್ತಿದ್ದೇವೆ. ಆದರೆ, ಸ್ವತಃ ದೇವರೇ ತನ್ನನ್ನು ಪೂಜಿಸಲಿ, ಪೂಜಿಸದಿರಲಿ ಯಾರಿಗೇ ಆಗಲಿ ತೊಂದರೆ ಕೊಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ದೇವರು ದೊಡ್ಡ ಸಮತಾವಾದಿ. ಬರುವಾಗ ಏನನ್ನೂ ತರಲು ಅವಕಾಶವಿಲ್ಲ. ಹೋಗುವಾಗಲೂ ಏನನ್ನೂ ತೆಗೆದುಕೊಂಡುಹೋಗಲು ಸಾಧ್ಯವಿಲ್ಲ. ಇರುವಾಗ ಇಡೀ ವಿಶ್ವವನ್ನೇ ಶಕ್ತ್ಯಾನುಸಾರ ಬಳಸಲು ಅವಕಾಶ ಕೊಟ್ಟಿದ್ದಾನೆ. ಎಲ್ಲರಿಗೂ ಇರುವುದು ಒಂದೇ ಸಮಯ. ಕೆಲವರಿಗೆ ಹೆಚ್ಚು ಸಮಯ, ಕೆಲವರಿಗೆ ಕಡಿಮೆ ಎಂಬುದಿಲ್ಲವೇ ಇಲ್ಲ. ದೇವರೇ ತಾರತಮ್ಯ ಮಾಡದಿರುವಾಗ ದೇವರ ಹೆಸರಿನಲ್ಲಿ ಕ್ಷುದ್ರ ಮಾನವರು ತಾರತಮ್ಯ ಮಾಡುವುದು, ಭಯೋತ್ಪಾದನೆಗೆ ತೊಡಗುವುದು, ಮುಂತಾದುವನ್ನು ನಿಯಂತ್ರಿಸುವ ಕೆಲಸವನ್ನು ಪ್ರಜ್ಞಾವಂತರು ಮಾಡಲೇಬೇಕಿದೆ. ಈ ಕೆಲಸ ಮಾಡಿದರೆ ಅದು ತಾರತಮ್ಯ ಮಾಡದ ದೇವರಿಗೆ ಸಲ್ಲಿಸುವ ನೈಜ ಪೂಜೆಯಾಗುತ್ತದೆ.  
ಏನಿಲ್ಲ ಏನಿಹುದು ಪೂರ್ಣ ಜಗವಿಹುದು
ಶಕ್ತನಿರೆ ಪಡೆಯುವೆ ದೇವನ ಕರುಣೆಯಿದು |
ಪಡೆದಿರುವೆ ನೀನು ಕೊಡದಿರಲು ದ್ರೋಹ
ಕೊಟ್ಟಷ್ಟು ಪಡೆಯುವೆ ನಿಜವು ಮೂಢ ||
-ಕ.ವೆಂ.ನಾಗರಾಜ್.
**************
ದಿನಾಂಕ 11.01.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಗುರುವಾರ, ಫೆಬ್ರವರಿ 11, 2016

ಹೊರಬರಲಾಗದ ಮಾತುಗಳು


     'ಮಾತನಾಡಲು ಏನೋ ಇದೆ, ಅದರೆ ಆಡಲಾಗುವುದಿಲ್ಲ' ಎಂಬಂತಹ ಜನರಿಂದಲೇ ಈ ಪ್ರಪಂಚ ತುಂಬಿಹೋಗಿದೆ. ಒಳಗೆ ಇರುವುದೇ ಒಂದು, ಹೊರಬರುವ ಮಾತುಗಳೇ ಮತ್ತೊಂದು! ಇದಕ್ಕೆ ಕಾರಣಗಳು ಹಲವಾರು. ಒಳಗಿರುವ, ಆದರೆ ಹೊರಬರದ ಮಾತುಗಳೇ ಆಡಲಾಗದ ಮಾತುಗಳು! ಆಡಲಾಗದ ಮಾತುಗಳು ಒಳಗೇ ಇದ್ದು ಮಾಡುವ ಅವಾಂತರಗಳು ಅಷ್ಟಲ್ಲ. ಆಡದ ಮಾತುಗಳಿಂದಾಗಿ ಮತ್ತು ಕೇಳದ ಮಾತುಗಳಿಂದಾಗಿ ಜನ ಗೌರವ ಉಳಿಸಿಕೊಂಡಿದ್ದಾರೆ. ಆಡಲಾಗದ, ಆಡಬಾರದ ಮಾತುಗಳು ಒಳಗೇ ಬಂದಿಯಾಗಿರುತ್ತವೆ. ಅಂತಹ ಮಾತುಗಳು ಒಳಗೇ ಉಳಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆಂದು ಹೊರಗೆ ಬಂದರೆ ಆಗಲೂ ಕೈಕಾಲು ಅಲ್ಲದಿದ್ದರೂ ಮನಸ್ಸಾದರೂ ಮುರಿಯಬಹುದು.  ಮಾತುಗಳು ಒಳಗೆ ಇರುವವರೆಗೆ ಅದಕ್ಕೆ ನೀವು ಬಾಸ್, ಹೊರಬಿತ್ತೋ ಅವಕ್ಕೆ ನೀವೇ ದಾಸರು. ನ್ಯಾಯಾಲಯಗಳಲ್ಲಿ 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಎಂದು ಪ್ರಮಾಣ ಮಾಡಿಸುತ್ತಾರೆ. ಆದರೆ ಪ್ರಮಾಣ ಮಾಡಿದವರು ತಮಗೆ ಅನುಕೂಲವಾಗಲೆಂದು ಸತ್ಯವನ್ನು ಹೇಳದೇ ಒಳಗೆ ಉಳಿಸಿಕೊಂಡಿರುತ್ತಾರಲ್ಲಾ, ಅವೇ ಆಡಲಾಗದ ಮಾತುಗಳು! ಮಾತುಗಳನ್ನು ಮುಟ್ಟಲಾಗುವುದಿಲ್ಲ. ಆದರೆ ಮಾತುಗಳು ನಮ್ಮನ್ನು ಮುಟ್ಟುತ್ತವೆ.
     ಒಬ್ಬ ಒಂದು ಸುಂದರ ಹುಡುಗಿಯನ್ನು ನೋಡಿ ಅವಳು ಹೆಂಡತಿಯಾಗಿ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಂದುಕೊಳ್ಳುತ್ತಾನೆ ಎಂದಿಟ್ಟುಕೊಳ್ಳೋಣ. ಆ ಹುಡುಗಿ ಕಾರಿನಲ್ಲಿ ಓಡಾಡೋಳು, ಅವಳ ಅಪ್ಪ ದೊಡ್ಡ ಶ್ರೀಮಂತ. ಇವನಾದರೋ ಒಂದು ಅಟ್ಲಾಸ್ ಸೈಕಲ್ ಮಾಲಿಕ.  ಅವನು ಆ ಹುಡುಗಿಯನ್ನು ಅಥವ ಅವಳ ಅಪನನ್ನು ಮಾತನಾಡಿಸಿ ತನ್ನ ಆಸೆಯ ಬಗ್ಗೆ ಹೇಳಿಕೊಳ್ಳಲು ಆಗುತ್ತಾ? ಅದು ಅವನ ಗಂಟಲ ಕೆಳಗೇ ಹೂತುಹೋಗುತ್ತೆ. ಹಾಗೆಂದು ಮಾತುಗಳು ಒಳಗೇ ಉಳಿದುಬಿಡಬಾರದು ಎಂಬುದಕ್ಕೆ ಇನ್ನೊಂದು ಉದಾಹರಣೆ ನೋಡೋಣ. ಒಬ್ಬ ಹುಡುಗ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದಿಟ್ಟುಕೊಳ್ಳೋಣ. ಹೇಳೋಕೆ ಧೈರ್ಯ ಇಲ್ಲ, ಸುಮ್ಮನೆ ಇರ್ತಾನೆ. ಹುಡುಗಿಯದೂ ಅದೇ ಪರಿಸ್ಥಿತಿ! ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ಒಳಗಿನ ಮಾತುಗಳನ್ನು ಹೊರಗೆ ಹೇಳಲಾಗದೆ ಸುಮ್ಮನೆ ಇದ್ದಾಗ ಅವರ ಅಪ್ಪ-ಅಮ್ಮಂದಿರು ಅವರುಗಳಿಗೆ ಬೇರೆ ಗಂಡು/ಹೆಣ್ಣು ನೋಡಿ ಮದುವೆ ಮಾಡ್ತಾರೆ. ಆಗ ಅವರ ಒಳಗಿನ ಮಾತುಗಳು ಒಳಗೇ, ಹೊರಗಿನ ಮಾತುಗಳು ಹೊರಗೇ!
     ಒಬ್ಬ ದೇವರಲ್ಲಿ ಶಕ್ತಿ ಕೊಡು ಅಂತ ಕೇಳಿದನಂತೆ. ಆ ದೇವರು ಅವನನ್ನು ದುರ್ಬಲನಾಗಿ ಮಾಡಿಬಿಟ್ಟನಂತೆ, ಏಕೆಂದರೆ ವಿಧೇಯತೆ ಕಲಿಯಲಿ ಎಂದು!. ಆರೋಗ್ಯ ಕೊಡು ಎಂದದ್ದಕ್ಕೆ ಎಡವಟ್ಟು ಮಾಡಿದ, ಏನಾದರೂ ಮಾಡಬೇಕು ಅನ್ನುವ ಮನಸ್ಸು ಬರಲೆಂದು! ಸುಖ ಅನುಭವಿಸಲು ಶ್ರೀಮಂತಿಕೆ ಕೊಡು ಎಂದರೆ ಬಡತನ ಕೊಟ್ಟನಂತೆ, ಬುದ್ಧಿವಂತನಾಗಲೆಂದು! ಅಧಿಕಾರ ಕೊಡು ಅಂದರೆ ಜವಾನನ್ನಾಗಿಸಿದನಂತೆ, ಏಕೆಂದರೆ ತನ್ನನ್ನು ನೆನೆಸಿಕೊಳ್ಳುತ್ತಿರಲೆಂದು! ಎಲ್ಲಾ ವಸ್ತುಗಳನ್ನು ಜೀವನ ಸುಖವಾಗಿಡಲು ಕೊಡಪ್ಪಾ ಅಂದರೆ,  ಜೀವನ ಕೊಟ್ಟಿದೀನಿ, ಎಲ್ಲಾ ವಸ್ತುಗಳನ್ನು ನೀನೇ ಪಡಕೊಳ್ಳಬಹುದು ಅಂದುಬಿಟ್ಟನಂತೆ. ಆಮೇಲೆ ಅವನು ಏನು ಕೇಳಿಕೊಳ್ಳಬೇಕು ಅಂತ  ಇದ್ದನೋ ಅದನ್ನು ಕೇಳಿಕೊಳ್ಳಲೇ ಇಲ್ಲವಂತೆ. ಏಕೆಂದರೆ ಆ ದೇವರು ಕೇಳದೆ ಬಿಟ್ಟದ್ದನ್ನು ಅವನಿಗೆ ಕೊಟ್ಟನಂತೆ. ಕೇಳದೇ ಇದ್ದರೂ ದೇವರು ಕೊಟ್ಟಿದ್ದೇನು ಎಂದು ಮಿತ್ರ ಕೇಳಿದರೆ ನಗುತ್ತಾ ಹೇಳಿದನಂತೆ, "ಅದನ್ನು ಕೇಳಬಾರದು, ನಾನು ಹೇಳಲೂಬಾರದು." ಇದೇ 'ಆಡಲಾಗದ ಮಾತು!'
     ಆಡಲಾಗದ ಮಾತುಗಳು ಹೊರಬರದಿದ್ದಾಗ ಒಳಗೇ ಕುಣಿಯುತ್ತಿರುತ್ತವೆ, ಹೊರಗೆ ಬರಲು ಚಡಪಡಿಸುತ್ತಿರುತ್ತವೆ. ಆಗ ಅಸಮಾಧಾನ, ಅಸಹನೆ ಉಂಟಾಗಿ ಮನಸ್ಸಿಗೆ ಶಾಂತಿಯೇ ಇರುವುದಿಲ್ಲ. ಎದುರಿಗೆ ಇರುವವರನ್ನು ಹಂಗಿಸುವ ಇಚ್ಛೆ ಒಳಗೇ ಇದ್ದರೂ ಹಂಗಿಸಲಾರದೆ, ಮೂರನೆಯವರ ಎದುರಿಗೆ ಅಪರೋಕ್ಷವಾಗಿ ಬೇರೆ ರೀತಿಯಲ್ಲಿ ಮಾತುಗಳು ಹೊರಗೆ ಬಂದುಬಿಡುತ್ತವೆ. ಅಸಹನೆ ಸಂಬಂಧಿಸಿದವರಿಗೆ ಗೊತ್ತಾಗಲಿ ಎಂಬಂತೆ ಅವರ ವರ್ತನೆ ಇರುತ್ತದೆ. ಸಂಬಂಧಿಸಿದವರಿಗೆ ಹೇಳಲಾಗದ ಮಾತುಗಳನ್ನು ತಮ್ಮ ವಿಶ್ವಾಸದ ಸ್ನೇಹಿತರಲ್ಲಿ ಹೇಳಿಕೊಂಡು ಹಗುರಾಗುತ್ತಾರೆ. ಒಬ್ಬರಿಂದ ಒಬ್ಬರಿಗೆ ಹೋಗುತ್ತಾ ಆ ಮಾತುಗಳು ಉದ್ದೇಶಿಸಿದವರಿಗೂ ತಲುಪಿ ರಂಪ ರಾಮಾಯಣವೂ ಆಗುತ್ತದೆ. ಈ ಆಡಲಾಗದ, ಆಡದೇ ಇರುವ ಮಾತುಗಳು ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ನಾವು ಏನು ಯೋಚನೆ ಮಾಡ್ತೀವೋ ಅದರ ಬಗ್ಗೆ ಎಚ್ಚರವಾಗಿರಬೇಕು. ಏಕೆಂದರೆ ಮಾತುಗಳಾಗಿ ಹೊರಬರುವುದು ಅವೇ!
     'ಇದ್ದದ್ದನ್ನು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ!' ಎಂಬ ಗಾದೆ ಸತ್ಯವನ್ನು ಹೇಳುವಾಗ ಎಚ್ಚರಿಕೆ ಇರಬೇಕೆಂದು ಹೇಳುತ್ತದೆ. 'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನಬ್ರೂಯಾತ್ ಸತ್ಯಮಪ್ರಿಯಮ್'- ಸತ್ಯವನ್ನು ಹೇಳಬೇಕು, ಪ್ರಿಯವಾಗಿ ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು. ಒಬ್ಬ ದುಷ್ಟ ಪೈಲ್ವಾನನಿಂದ ತೊಂದರೆಯಾದರೂ ಮಾತನಾಡದೆ ಸುಮ್ಮನಿರಬೇಕಾಗುತ್ತದೆ. ಇಷ್ಟವಿರಲಿ, ಇಲ್ಲದಿರಲಿ ಸಂಬಳ ಕೊಡುವ ಧಣಿಯನ್ನು ಹೊಗಳಲೇಬೇಕು. ಬೈದುಕೊಳ್ಳುವುದೇನಾದರೂ ಇದ್ದರೆ ಹೊರಗೆ ತೋರಿಸಿಕೊಳ್ಳದಂತೆ ಒಳಗೊಳಗೇ ಶಪಿಸಬೇಕು. ಒಳ್ಳೆಯ ಕಾರಣಗಳಿಂದಲೂ ಕೆಲವೊಮ್ಮೆ ಮಾತುಗಳನ್ನು ಅದುಮಿಡಬೇಕಾಗುತ್ತದೆ. ಒಂದು ಉದಾಹರಣೆ ನೋಡೋಣ. ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಮನೆಯ ಬಾಗಿಲು ಬಡಿಯುತ್ತಾನೆ ಎಂದಿಟ್ಟುಕೊಳ್ಳೋಣ. ಬಾಗಿಲು ತೆರೆದ ತಕ್ಷಣ ಆ ಅಪರಿಚಿತ ಒಳಗೆ ನುಗ್ಗಿ ಬಾಗಿಲು ಹಾಕಿ ಮನೆಯ ಮಾಲಿಕನ ಕಾಲು ಹಿಡಿದು ತನ್ನನ್ನು ಕಾಪಾಡಲು ಕೋರುತ್ತಾನೆ ಎಂದುಕೊಳ್ಳೋಣ. ಏನಾಗುತ್ತಿದೆ ಎಂದು ತಿಳಿಯದೆ ಮಾಲಿಕ ಕಕ್ಕಾಬಿಕ್ಕಿಯಾಗಿದ್ದಾಗ ಪುನಃ ಮನೆಯ ಬಾಗಿಲು ದಬದಬ ಬಡಿಯುವ ಸದ್ದಾಗುತ್ತದೆ. ಒಳಗಿದ್ದವನು ಕರುಣಾಜನಕವಾಗಿ ನೋಡುತ್ತಾನೆ. ತಕ್ಷಣದಲ್ಲಿ ಆತನನ್ನು ಬಚ್ಚಲುಮನೆಯಲ್ಲಿ ಅಡಗಿಕೊಳ್ಳಲು ಸನ್ನೆಯಿಂದ ಸೂಚಿಸಿ ಬಾಗಿಲು ತೆರೆದಾಗ ಐದಾರು ಜನರು ದೊಣ್ಣೆ ಮಚ್ಚುಗಳನ್ನು ಹಿಡಿದು, 'ಮನೆಯೊಳಗೆ ಯಾರಾದರೂ ಬಂದರಾ?' ಎಂದು ಕೇಳುತ್ತಾರೆ. ಅವನು ಸತ್ಯಸಂಧನಂತೆ 'ಹೌದು' ಎಂದರೆ ಕಣ್ಣ ಮುಂದೆಯೇ ಒಂದು ಕೊಲೆ ನಡೆದುಹೋಗಿಬಿಡಬಹುದು. ಬದಲಾಗಿ, 'ಯಾರು? ಇಲ್ಲಿ ಯಾರೂ ಬರಲಿಲ್ಲವಲ್ಲಾ!' ಅಂದರೆ? ಬಂದವರು ಹೊರಗೆ ಹುಡುಕಲು ಓಡುತ್ತಾರೆ. ಅಡಗಿಕೊಂಡಿದ್ದವನು ನಂತರ ಕೈಮುಗಿದು ಕೃತಜ್ಞತೆಯಿಂದ ಕಣ್ಣೀರಿಡುತ್ತಾ ಹೊರಗೆ ಬೇರೊಂದು ದಾರಿಯಲ್ಲಿ ಓಡಿಹೋಗುತ್ತಾನೆ. 'ಏನು? ಏಕೆ?' ಏನನ್ನೂ ತಿಳಿಯದವನು ಮುಂದೆ ತನಗೆ ಏನೂ ಗೊತ್ತಿಲ್ಲದಂತೆ ಸುಮ್ಮನೇ ಇರಬೇಕಾಗುತ್ತದೆ.
     ಸಂಬಂಧಗಳು ಚೆನ್ನಾಗಿರಬೇಕು, ತಮಗೆ ಕೆಡುಕಾಗಬಾರದು ಅನ್ನುವ ಕಾರಣಕ್ಕೆ ಜನ ತಮ್ಮ ಮನಸ್ಸಿನಲ್ಲಿ ಇರುವುದೇ ಒಂದಾದರೂ ಹೊರಗೆ ಆಡುವುದೇ ಬೇರೆ ತೋರಿಕೆಯ ಮಾತುಗಳು. ಅವುಗಳು ಗಟ್ಟಿ ಮಾತುಗಳಲ್ಲವಾದ್ದರಿಂದ ಅಂತಹ ಮಾತುಗಳ ಪ್ರಭಾವ ಕಡಿಮೆ. ಅವು ತೋರಿಕೆಯ ಮಾತುಗಳೆಂದು ಗೊತ್ತಾದಾಗ ಅದನ್ನು ಆಡಿದವರ ಬೆಲೆ ಸಹ ಕಡಿಮೆ ಆಗುತ್ತೆ. ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳಿದ್ದರೆ ಒಳ್ಳೆಯ ಮಾತುಗಳು ಬರುತ್ತವೆ. ಕೆಟ್ಟ ವಿಚಾರಗಳಿದ್ದರೆ ಆಡಲಾಗದ ಮಾತುಗಳು ಹುಟ್ಟುತ್ತವೆ. ಅದು ಹೆಚ್ಚು ಕಾಟ ಕೊಡುವುದು ಆ ಮಾತುಗಳನ್ನು ಹುಟ್ಟಿಸಿದವರಿಗೇ. ಆದ್ದರಿಂದ ಒಳ್ಳೆಯ ವಿಚಾರ ಮನಸ್ಸಿನಲ್ಲಿ ಬರುವಂತೆ ಮಾಡು ಎಂದು ಪ್ರಾರ್ಥಿಸಬೇಕು.
     ಸ್ವಾಮಿ ದಯಾನಂದ ಸರಸ್ವತಿಯವರು ಹೇಳುತ್ತಿದ್ದರು, "ಸತ್ಯವನ್ನೇ ಹೇಳುತ್ತೇನೆಂದು ಶಪಥ ಮಾಡಬೇಡಿ. ಆದರೆ, ಸತ್ಯವನ್ನೇ ಹೇಳಿ. ಏಕೆಂದರೆ, ಶಪಥ ಮಾಡುವ ಕಾಲಕ್ಕೆ ಸತ್ಯ ಅನ್ನುವುದನ್ನು ನೀವೇ ತಪ್ಪು ತಿಳಿದುಕೊಂಡಿರಬಹುದು, ಅಥವ ಯಾವುದನ್ನೋ ಸತ್ಯವೆಂದು ತಪ್ಪು ತಿಳಿದಿರಬಹುದು. ಅದರಿಂದ ಬೇರೆಯವರಿಗೆ ಹಾನಿಯಾಗಬಹುದು." ನಿಜ, ಬೇರೆಯವರಿಗೆ ಹಾನಿ ಉಂಟುಮಾಡುವಂತಹದು ಸತ್ಯವಲ್ಲ. ತಮಗೆ ಮಾತ್ರ ಒಳ್ಳೆಯದಾಗಬೇಕೆಂದು ಬಯಸುವುದೂ ಸತ್ಯವಲ್ಲ. ನಮ್ಮ ಹಾಗೇ ಎಲ್ಲರಿಗೂ ಒಳ್ಳೆಯದಾಗಬೇಕು, ಯಾರಿಗೂ ಕೆಟ್ಟದಾಗಬಾರದು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಈ ರೀತಿ ಇದ್ದಲ್ಲಿ ಆಡಲಾಗದ ಮಾತುಗಳು ಹುಟ್ಟಲಾರವು, ಯಾರಿಗೂ ತೊಂದರೆ ಕೊಡಲಾರವು.
-ಕ.ವೆಂ.ನಾಗರಾಜ್.
***************
ದಿನಾಂಕ 18.01.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಫೆಬ್ರವರಿ 4, 2016

ಹೀಗೆಯೇ ಇರುವುದಿಲ್ಲ!


ಒಂದು ಕಾಲದ ಭವ್ಯ ರಾಜಮಹಾರಾಜರೆಲ್ಲಿ
ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ |
ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ
ನಿನ್ನ ಕಥೆಯೇನು ಹೊರತಲ್ಲ ಮೂಢ ||
     'ಇದು ಹೀಗೆಯೇ ಇರುವುದಿಲ್ಲ' ಎಂಬ ಅರಿವು ನಮಗೆ ಬರುವುದೇ ಇಲ್ಲ; ಬಂದಿದ್ದರೆ ನಾವು ಹೀಗೆ ಇರುತ್ತಿರಲಿಲ್ಲ. ಈ ಭೂಮಿಯನ್ನು ಎಂತೆಂತಹ ರಾಜರು, ಮಹಾರಾಜರು, ಚಕ್ರವರ್ತಿಗಳು ಆಳಿಹೋಗಿದ್ದಾರೆ| ಒಬ್ಬರಿಗಿಂತ ಒಬ್ಬರು ಪ್ರಚಂಡರೇ! ಸಮುದ್ರಕ್ಕೇ ಸೇತುವೆ ಕಟ್ಟಿ ದುಷ್ಟ ರಾವಣನನ್ನು ಸದೆಬಡಿದ ರಾಮಚಂದ್ರ, ಸಂಖ್ಯೆ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ಬಲಿಷ್ಠರಾಗಿದ್ದ ಕೌರವರನ್ನು ಸೋಲಿಸಿ ಚಕ್ರಾಧಿಪನೆನಿಸಿದ ಧರ್ಮರಾಯ ಮುಂತಾದವರು ಈ ಭೂಮಿಗೆ ಒಡೆಯರೆನಿಸಿದ್ದರು. ಸೂರ್ಯ ಮುಳುಗದ ಸಾಮ್ಯಾಜ್ಯದ ನಾಯಕರೆನಿಸಿದ್ದ ಬ್ರಿಟಿಷರು ಶತಮಾನಗಳ ಕಾಲ ಈ ದೇಶವನ್ನು ಆಳಿದ್ದರು. ಹಲವು ಶತಮಾನಗಳ ಕಾಲ ಮೊಗಲರ ಅಧಿಪತ್ಯದಲ್ಲಿ ದೇಶವಿತ್ತು. ಛತ್ರಪತಿ ಶಿವಾಜಿ, ಅಶೋಕ, ವಿಷ್ಣುವರ್ಧನ, ಕೃಷ್ಣದೇವರಾಯ, ರಾಣಾ ಪ್ರತಾಪಸಿಂಹರಂತಹವರೂ ದೊಡ್ಡ ಸಾಮ್ರಾಜ್ಯಗಳಿಗೆ ರಾಜರಾಗಿದ್ದರು. ಅವರುಗಳು ಯಾರೂ ಈಗ ಇಲ್ಲ. ಆದರೆ ಅವರು ಆಳಿದ್ದ ಭೂಮಿ ಮಾತ್ರ ಅವರೊಡನೆ ಹೋಗದೆ ಇಲ್ಲಿಯೇ ಇದೆ. ಹುಟ್ಟುವಾಗ ನಮ್ಮೊಡನೆ ಏನೂ ಇರಲಿಲ್ಲ, ಸಾಯುವಾಗಲೂ ನಮ್ಮೊಡನೆ ಯಾವುದೂ ಬರುವುದಿಲ್ಲ. ಪ್ರಪಂಚದ ಅತಿ ದೊಡ್ಡ ಶ್ರೀಮಂತರ ಹೆಸರುಗಳನ್ನು ಕೇಳುತ್ತಿರುತ್ತೇವೆ. ಅವರ ಶ್ರೀಮಂತಿಕೆ ಅವರು ಬದುಕಿರುವವರೆಗೆ ಮಾತ್ರ! ಸತ್ತಾಗ ಒಂದು ಗುಂಡುಸೂಜಿಯನ್ನೂ ಅವರು ತೆಗೆದುಕೊಂಡುಹೋಗಲಾರರು! ಸ್ವಿಸ್ ಬ್ಯಾಂಕಿನಲ್ಲಿ ಗುಟ್ಟಾಗಿ ಸಾವಿರಾರು ಕೋಟಿ ಸಂಪತ್ತು ಇಟ್ಟು ದೇಶಕ್ಕೆ ಮೋಸ ಮಾಡಬಹುದು. ಆದರೆ ಸಾಯುವಾಗ ಗುಟ್ಟಾಗಿ ತೆಗೆದುಕೊಂಡು ಹೋಗಲು ಮಾತ್ರ ಆಗದು!
     'ಹೀಗೆಯೇ ಇರುವುದಿಲ್ಲ!' ನೀವು ಒಬ್ಬ ದೊಡ್ಡ ಅಧಿಕಾರಸ್ಥಾನದಲ್ಲಿರುವಿರೇ? ಈ ಅಧಿಕಾರ ನಿಮ್ಮೊಂದಿಗೆ ಸದಾ ಇರಲಾರದು. ಮುಂದೊಮ್ಮೆ ನಿಮಗಿಂತ ಅರ್ಹ ವ್ಯಕ್ತಿಯೊಬ್ಬರು ಆ ಸ್ಥಾನದಲ್ಲಿ ಬಂದು ಕುಳಿತಾರು! ಯಾವುದೋ ಕಾರಣದಿಂದ ನೀವು ಅಧಿಕಾರ ಕಳೆದುಕೊಳ್ಳಬಹುದು. ಅದಕ್ಕೆ ನಿಮ್ಮ ವಯಸ್ಸು, ಅನಾರೋಗ್ಯ, ವೈಫಲ್ಯ ಇತ್ಯಾದಿಗಳು ಕಾರಣವಾಗಬಹುದು. ಗಳಿಸಿಕೊಂಡ ಅಧಿಕಾರ ಕಳೆದುಹೋಗುವುದು ಅಸಹಜವಲ್ಲ, ಆದರೆ ನೋವು ಕೊಡುವಂತಹದು. ಅಧಿಕಾರ ಶಾಶ್ವತವಲ್ಲ ಎಂಬ ಅರಿವಿದ್ದರೆ ದುಃಖದ ಪ್ರಮಾಣ ಕಡಿಮೆಯಾಗುತ್ತದೆ.
ಬರುವಾಗ ತರಲಾರೆ ಹೋಗುವಾಗ ಒಯ್ಯೆ
ಇಹುದು ಬಹುದೆಲ್ಲ ಸಂಚಿತಾರ್ಜಿತ ಫಲ |
ಸಿರಿ ಸಂಪದದೊಡೆಯ ನೀನಲ್ಲ ನಿಜದಿ ದೇವ
ಅಟ್ಟಡುಗೆಯುಣ್ಣದೆ ವಿಧಿಯಿಲ್ಲ ಮೂಢ ||
     'ಹೀಗೆಯೇ ಇರುವುದಿಲ್ಲ!' ನಿಜ, ಸ್ವತಃ ನಾವು ಹೀಗೆಯೇ ಇರುತ್ತೇವೆಯೇ? ಹುಟ್ಟಿದಾಗ ಸಣ್ಣ ಮಗುವಾಗಿ ಮುದ್ದು ಮುದ್ದಾಗಿದ್ದವರು ಬೆಳೆಯುತ್ತಾ ಬೆಳೆಯುತ್ತಾ ಬದಲಾಗುತ್ತಾ ಹೋಗುತ್ತೇವೆ. ತುಂಟಾಟ ಮಾಡುವ ಬಾಲಕರಾಗುತ್ತೇವೆ, ಏನು ಬೇಕಾದರೂ ಮಾಡಬಲ್ಲೆವೆಂಬ ಹುಮ್ಮಸ್ಸಿನ ತರುಣರಾಗುತ್ತೇವೆ, ಪ್ರೌಢರಾಗಿ ಸಂಸಾರದ ನೊಗಕ್ಕೆ ಹೆಗಲು ಕೊಡುತ್ತೇವೆ, ಮುಂದೊಮ್ಮೆ ವೃದ್ಧರಾಗಿ ಕೈಕಾಲುಗಳಲ್ಲಿ ಶಕ್ತಿ ಕುಂದಿ ನಿತ್ರಾಣರಾಗುತ್ತೇವೆ. ವಯಸ್ಸಿನಲ್ಲಿದ್ದಾಗ, ಅಧಿಕಾರವಿದ್ದಾಗ ಯಜಮಾನರಾಗಿ ಮೆರೆದಿದ್ದವರು ಇತರರ ಆಶ್ರಯ ಬಯಸುವ ಪ್ರಸಂಗ ಬರುತ್ತದೆ. ನಡು ವಯಸ್ಸಿನಲ್ಲಿ ಇರುವ ಒಳ್ಳೆಯ ವರಮಾನ ಬರುವ ನೌಕರಿ ಅಥವ ವಹಿವಾಟು, ಸುಂದರ ಪತ್ನಿ, ಚುರುಕಿನ ಮಕ್ಕಳು, ಭವ್ಯವಾದ ವಾಸದ ಬಂಗಲೆ, ಓಡಾಡಲು ಐಷಾರಾಮಿ ಕಾರು, ಇತ್ಯಾದಿಗಳೆಲ್ಲವೂ ಮೊದಲು ಇರಲಿಲ್ಲ ಅಲ್ಲವೇ? ಕಾಲ ಸರಿದಂತೆ ನಮಗೂ ವಯಸ್ಸಾಗುತ್ತದೆ, ಪತ್ನಿಗೂ ವಯಸ್ಸಾಗುತ್ತದೆ. ಸೌಂದರ್ಯ ಮಾಸುತ್ತದೆ, ಚರ್ಮ ಸುಕ್ಕುಗಟ್ಟುತ್ತದೆ, ವಿವಿಧ ಕಾಯಿಲೆಗಳು ಅಡರಿಕೊಳ್ಳುತ್ತವೆ, ತಲೆಕೂದಲು ನೆರೆಯುತ್ತದೆ, ಉದುರುತ್ತದೆ. ಇದು ಸಹಜ ಕ್ರಿಯೆ. ಮೊದಲು ಇಲ್ಲದುದು ಕೊನೆಯಲ್ಲೂ ಇರುವುದಿಲ್ಲ. ಈ ಅರಿವು ಇದ್ದರೆ ಪೂರ್ವ ತಯಾರಿ ಮಾಡಿಕೊಂಡು ಸಂಧ್ಯಾಕಾಲವನ್ನು ಸಾಧ್ಯವಾದಷ್ಟು ಹಿತವಾಗಿ ಕಳೆಯಲು ಅವಕಾಶವಿರುತ್ತದೆ.
ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ
ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು |
ನಿಂದೆ ಮೂದಲಿಕೆ ಸಾಲಾಗಿ ಎರಗಿರಲು
ಬದುಕಿನರ್ಥ ತಿಳಿದೇನು ಫಲ ಮೂಢ ||
     'ಹೀಗೆಯೇ ಇರುವುದಿಲ್ಲ!' ಹಗಲು, ರಾತ್ರಿಗಳು ಒಂದಾದ ನಂತರ ಒಂದು ಬರುತ್ತವೆ, ಹೋಗುತ್ತವೆ. ಕಷ್ಟಗಳು ಬಂದು ಅನುಭವಿಸಲಾಗದೆ ಒದ್ದಾಡುವಾಗ ತಾಳ್ಮೆಯಿಂದಿರಲು ಈ ಸೂತ್ರ ನೆರವಾಗುತ್ತದೆ. ಕಷ್ಟಗಳು ಹೊಸದಾಗಿ ಬಂದದ್ದಲ್ಲವೇ? ಒಂದೊಮ್ಮೆ ಹೋಗುತ್ತವೆ. ಅಲ್ಲಿಯವರೆಗೂ ಸಹಿಸುವ ಮತ್ತು ಅದನ್ನು ಎದುರಿಸುವ ಶಕ್ತಿ ಇಟ್ಟುಕೊಳ್ಳಬೇಕಷ್ಟೆ. ಈಸಬೇಕು, ಇದ್ದು ಜೈಸಬೇಕು! ಬಂದದ್ದು ಹೋಗಲೇಬೇಕು, ಹೋದದ್ದು ಬರಲೇಬೇಕು, ಇದು ಪ್ರಕೃತಿನಿಯಮವೆಂದು ಅರಿತರೆ ಅರ್ಧ ಕಷ್ಟ ಕಡಿಮೆಯಾದಂತೆಯೇ.
ತೊಡರು ಬಹುದೆಂದು ಓಡದಿರು ದೂರ
ಓಡಿದರೆ ಸೋತಂತೆ ಸಿಗದು ಪರಿಹಾರ |
ಸಮಸ್ಯೆಯ ಜೊತೆಯಲಿರುವವನೆ ಧೀರ
ಒಗಟಿನೊಳಗಿಹುದು ಉತ್ತರವು ಮೂಢ ||
     'ಹೀಗೆಯೇ ಇರುವುದಿಲ್ಲ!' - ಇದು ಸಮದರ್ಶಿಗೆ, ಸಾಧಕನಿಗೆ ಅರ್ಥವಾಗುವ ವಿಚಾರ. ಜನಸಾಮಾನ್ಯರಾದ ನಮಗೆ ಇದು ಅರ್ಥವಾಗುವುದು ಕಷ್ಟ. ಆ ದೇವರು ಅದು ಯಾವ ಭ್ರಾಮಕ ಅಂಶವನ್ನು ನಮ್ಮೊಳಗೆ ತುರುಕಿದ್ದಾನೋ ಗೊತ್ತಿಲ್ಲ. ನಾವು ಚಿರಂಜೀವಿಗಳಂತೆ ವರ್ತಿಸುತ್ತೇವೆ, ಎಲ್ಲವೂ ನಮಗೆ ಬೇಕು ಎಂಬ ಹಪಾಹಪಿಯಲ್ಲೇ ಜೀವನ ಕಳೆದುಬಿಡುತ್ತೇವೆ. ಕಳೆದುಕೊಳ್ಳಲು ಏನೂ ಇರದವನಿಗೆ ಇರುವ ನೆಮ್ಮದಿ ಎಲ್ಲವೂ ಇರುವ ಶ್ರೀಮಂತನಿಗೆ ಇರಲಾರದು. ನೈಜ ಪರಿವ್ರಾಜಕರು, ಅವಧೂತರಲ್ಲಿ ಈ ಗುಣವನ್ನು ಕಾಣಬಹುದು. ಯಾವುದೇ ವಸ್ತು, ಸಂಗತಿ, ಜೀವಿ ಇರುವಂತೆಯೇ ಇರುವುದಿಲ್ಲ, ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ ಎಂಬ ಅರಿವು ಮೂಡಿದಾಗ ಅದು ಚಮತ್ಕಾರವನ್ನೇ ಮಾಡುತ್ತದೆ. ನವಕೋಟಿ ನಾರಾಯಣನೆಂದು ಹೆಸರು ಪಡೆದಿದ್ದ ಅಂದಿನ ಕಾಲಕ್ಕೆ ಆಗರ್ಭ ಶ್ರೀಮಂತನಾಗಿದ್ದವನು ಎಲ್ಲವನ್ನೂ ದಾನ ಮಾಡಿ ತಂಬೂರಿ ಹಿಡಿದು ಮನೆ ಬಿಟ್ಟು ಹೊರಟು ಪುರಂದರದಾಸನಾದದ್ದು, ಪರರನ್ನು ದೋಚಿ ಜೀವಿಸುತ್ತಿದ್ದ ಬೇಟೆಗಾರ ವಾಲ್ಮೀಕಿಯಾದದ್ದು, ಬುದ್ಧ ಮತ್ತು ಮಹಾವೀರರು ಐಹಿಕ ಸುಖ-ಭೋಗಗಳನ್ನು ತ್ಯಜಿಸಿ ವಿರಾಗಿಗಳಾದದ್ದು, ಇತ್ಯಾದಿಗಳೆಲ್ಲವೂ ಈ ಅರಿವು ಅವರಲ್ಲಿ ಮೂಡಿದುದರ ಫಲವೇ ಆಗಿದೆ. ಶಾಂತರಾಗಿ ಕುಳಿತು ಚಿಂತಿಸಿದರೆ ಮೂಡುವ ಈ ಅರಿವು ಕಷ್ಟ ಬಂದರೆ ಅಳುಕದ, ಸುಖದಲ್ಲಿ ಹಿಗ್ಗದ, ನಮ್ಮಲ್ಲಿ ಮಾನವೀಯತೆಯ ಒರತೆಯನ್ನು ಚಿಮ್ಮಿಸುವ ಸಾಧನವಾಗದೇ ಇರದು.
-ಕ.ವೆಂ.ನಾಗರಾಜ್.
**************
ದಿನಾಂಕ 4.01.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: