ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಫೆಬ್ರವರಿ 17, 2016

ಬ್ರಹ್ಮಚರ್ಯವೆಂದರೇನು? -1

.

     ಇಂದು ಬ್ರಹ್ಮಚಾರಿ ಎಂಬುದಕ್ಕೆ ಮದುವೆಯಾಗದಿರುವವರು ಎಂಬ ಅರ್ಥ ಮಾತ್ರ ಉಳಿದುಕೊಂಡಿರುವುದಕ್ಕೆ ನಮ್ಮ ಜೀವನ ನಡೆಸುವ ರೀತಿ ಕಾರಣವಾಗಿದೆ. 'ನಮ್ ತಾತಾನೂ ಬ್ರಹ್ಮಚಾರಿ, ನಮ್ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ' ಎಂಬಂತಹ ಹಾಸ್ಯಚಟಾಕಿಗಳನ್ನೂ ಕೇಳಿದ್ದೇವೆ. ಆದರೆ ಬ್ರಹ್ಮಚರ್ಯದ ಮಹಿಮೆ ತಿಳಿದವರು ಈ ರೀತಿಯಾಗಿ ಲಘುವಾಗಿ ಮಾತನಾಡಲಾರರು. ಸನಾತನ ಧರ್ಮದಲ್ಲಿ ಮಾನವನ ಜೀವಿತದ ಅವಧಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ಆಶ್ರಮಗಳೆಂದು ಕರೆಯಲಾಗುವ ಈ ವಿಭಾಗಗಳು ಒಂದೊಂದೂ ವೈಯಕ್ತಿಕ ಮತ್ತು ಸಾಮಾಜಿಕ ಜೀವನಕ್ಕೆ ಉಪಯುಕ್ತವಾದುದಾಗಿದೆ. ಬ್ರಹ್ಮಚರ್ಯವೆಂದರೇನು, ಅದರ ಮಹತ್ವವೇನು, ಇಂದಿನ ಕಾಲದಲ್ಲಿ ಇದರ ಪ್ರಸ್ತುತತೆ ಏನು ಎಂಬ ಕುರಿತು ನೋಡೋಣ.
     ಬ್ರಹ್ಮಚರ್ಯ ಎಂಬ ಪದದ ಅರ್ಥ ಪರಮಾತ್ಮನಲ್ಲಿ ಮತ್ತು ವೇದದಲ್ಲಿ ಅರ್ಥಾತ್ ಜ್ಞಾನದಲ್ಲಿ ತೊಡಗಿಕೊಳ್ಳುವದು, ವಿಹರಿಸುವುದು ಎಂದಾಗುತ್ತದೆ. ಮಾನವನ ಜೀವಿತಾವಧಿಯನ್ನು ನೂರು ವರ್ಷಗಳು ಎಂದಿಟ್ಟುಕೊಂಡರೆ ಮೊದಲ ಇಪ್ಪತ್ತೈದು ವರ್ಷಗಳು ಬ್ರಹ್ಮಚರ್ಯ, ನಂತರದ ತಲಾ ಇಪ್ಪತ್ತೈದು ವರ್ಷಗಳು ಅನುಕ್ರಮವಾಗಿ ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮಗಳಿಗೆ ಮೀಸಲಾಗುತ್ತವೆ. ಮೊದಲಿನ ಇಪ್ಪತ್ತೈದು ವರ್ಷಗಳ ಬ್ರಹ್ಮಚರ್ಯಾಶ್ರಮದ ಅವಧಿಯಲ್ಲಿ ವ್ಯಕ್ತಿ ಯಾವ ರೀತಿ ತೊಡಗಿಕೊಳ್ಳುತ್ತಾನೆ ಎಂಬುದರ ಮೇಲೆ ಅವನ ವ್ಯಕ್ತಿತ್ವ ರೂಪಿತಗೊಳ್ಳುತ್ತದೆ. ಈ ಅವಧಿ ವ್ಯಕ್ತಿತ್ವನಿರ್ಮಾಣದ ಬುನಾದಿಯ ಅವಧಿಯಾಗಿದೆ. ಈ ಅವಧಿಯಲ್ಲಿ ಶಿಕ್ಷಣಕ್ಕೆ ಮತ್ತು ಮುಂದಿನ ಜೀವನದ ತಯಾರಿಗೆ ಅತ್ಯಾವಶ್ಯಕವಾದುದಾಗಿದೆ. ಇಂದು ಸಾಮಾಜಿಕ ಜೀವನ ಕೆಳಮಟ್ಟದಲ್ಲಿದೆಯೆಂದರೆ ಇಂದಿನ ಶಿಕ್ಷಣದ ಮಟ್ಟ ಕೆಳಮಟ್ಟದಲ್ಲಿದೆಯೆಂದೇ, ಬ್ರಹ್ಮಚರ್ಯದ ಅವಧಿ ವ್ಯರ್ಥವಾಗಿ ವಿನಿಯೋಗವಾಗುತ್ತಿದೆಯೆಂದೇ ಅರ್ಥ.
     ಶಿಕ್ಷಣ ಪಡೆಯುವ ಮತ್ತು ಮುಂದಿನ ಜೀವನದ ಸಿದ್ಧತೆ ಮಾಡಿಕೊಳ್ಳಬೇಕಾದ ಈ ಅವಧಿಯಲ್ಲಿ ಈ ಗುರಿಯನ್ನು ಬಿಟ್ಟು ಬೇರೆಡೆಗೆ ಮನಸ್ಸನ್ನು ಹೊರಳಿಸದಿರುವುದು ಅಗತ್ಯ. ಈ ಕಾರಣದಿಂದ ಈ ಸಮಯದಲ್ಲಿ ಇಂದ್ರಿಯ ನಿಗ್ರಹಕ್ಕೆ ಪ್ರಾಧಾನ್ಯತೆ ಬಂದಿದೆ. ಇಂದ್ರಿಯ ನಿಗ್ರಹವೆಂದರೆ ಕೇವಲ ಲೈಂಗಿಕ ಸಂಬಂಧಕ್ಕೆ ಕಡಿವಾಣ ಮಾತ್ರವಲ್ಲದೆ ಪ್ರ್ರಾಪಂಚಿಕವಾದ ಯಾವುದೇ ಸುಖ-ಭೋಗಗಳಿಗೂ ಮಹತ್ವ ನೀಡದೆ ಕೇವಲ ಶಿಕ್ಷಣದ ಕಡೆಗೆ ಗಮನ ಕೊಡುವುದಾಗಿದೆ. ಹಿಂದಿನ ಗುರುಕುಲ ಪದ್ಧತಿಯ ವ್ಯವಸ್ಥೆಯಲ್ಲಿ ಮಗುವಿಗೆ ಸಾಮಾನ್ಯವಾಗಿ 7-8 ವರ್ಷಗಳಾದಾಗ  ಉಪನಯನ ಸಂಸ್ಕಾರ ಮಾಡಿ ತಮಗೆ ಅನುಕೂಲವೆನ್ನಿಸುವ ಗುರುಕುಲಕ್ಕೆ ಮಕ್ಕಳನ್ನು ಬಿಡುತ್ತಿದ್ದರು. ಉಪನಯನದ ಜೊತೆಗೇ ವೇದಾರಂಭ ಸಂಸ್ಕಾರವನ್ನೂ ಮಾಡುತ್ತಿದ್ದರು. ಉಪ ಎಂದರೆ ಹತ್ತಿರಕ್ಕೆ, ನಯನವೆಂದರೆ ಕರೆದೊಯ್ಯುವುದು ಎಂದರ್ಥ. ಮಗುವನ್ನು ವಿದ್ಯಾಭ್ಯಾಸದ ಸಲುವಾಗಿ ಗುರುಗಳ ಬಳಿಗೆ ಕರೆದೊಯ್ಯುವುದೇ ಉಪನಯನ. ಈ ಕ್ರಿಯೆಗೆ ಗಂಡು ಮಕ್ಕಳು, ಹೆಣ್ಣುಮಕ್ಕಳು ಎಂಬ ಭೇದವಿರದೆ ಎಲ್ಲರಿಗೂ ಉಪನಯನ ಮಾಡಲಾಗುತ್ತಿತ್ತು. ಈಗ ಗಂಡುಮಕ್ಕಳಿಗೆ ಮತ್ತು ಒಂದು ವರ್ಗದವರಿಗೆ ಮಾತ್ರ ಉಪನಯನ ಎಂಬ ತಪ್ಪು ಸಂಪ್ರದಾಯ ರೂಢಿಯಲ್ಲಿದೆ.  ಆಗ ಸಂಕಲ್ಪದ ರೂಪದಲ್ಲಿ ಧರಿಸಲಾಗುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಋಷಿಋಣ, ಪಿತೃಋಣಗಳನ್ನು ಸಂಕೇತಿಸುತ್ತವೆ. ಇದು ಬಹು ಹಿಂದೆ ಜಾತಿಸೂಚಕವಾದ ಚಿಹ್ನೆಯಾಗಿರಲಿಲ್ಲ. ಇಂದಿನ ರೂಢಿಗತ ಸಂಪ್ರದಾಯಗಳೇನೇ ಇರಲಿ, ಸ್ತ್ರೀಯರೂ ಯಜ್ಞಕರ್ಮಾದಿಗಳನ್ನು ಮಾಡಲು ಅಧಿಕಾರಸ್ಥರು ಎಂಬುದಕ್ಕೆ ಈ ವೇದಮಂತ್ರದ ಉದಾಹರಣೆ ಸಾಕು: 'ಶುದ್ಧಾಃ ಪೂತಾ ಯೋತೋ ಯಜ್ಞಿಯಾ ಇಮಾ ಆಪಶ್ಚರುಮವ ಸರ್ಪಂತು ಶುಭ್ರ್ರಾಃ| ಅದುಃ ಪ್ರಜಾಂ ಬಹುಲಾನ್ ಪಶೂನ್ನಃ ಪಕ್ಷೌದನಸ್ಯ ಸುಕೃತಾಮೇತು ಲೋಕಮ್|| (ಅಥರ್ವ.11.1.17.)' ಸ್ತ್ರೀಯರು ಶುದ್ಧಚಿತ್ತರು, ಪವಿತ್ರ ವಾಗ್ಮಿಗಳು, ಆಪ್ತರು, ಗೌರವಾನ್ವಿತರಾಗಿದ್ದು ಅವರು ಯಜ್ಞಾದಿ ಕರ್ಮಗಳಲ್ಲಿ ಭಾಗವಹಿಸಲಿ. ಅವರು ಭೋಗಯಂತ್ರಗಳಾಗಿರದೆ ಸರ್ವ ಸಂಪತ್ತುಗಳಿಗೆ ಮೂಲಕಾರಣರು. ಹೀಗೆ ತಿಳಿಯುವವರು ಪವಿತ್ರ ಜ್ಞಾನವಂತ ಮತ್ತು ಸತ್ಕರ್ಮನಿರತರ ಸ್ಥಿತಿಯನ್ನು ಗಳಿಸುತ್ತಾನೆ ಎಂಬುದು ಈ ಮಂತ್ರದ ಅರ್ಥ. ಇಂತಹ ಮತ್ತು ಇದಕ್ಕೆ ಪುಷ್ಟಿ ನೀಡುವ ಅನೇಕ ವೇದಮಂತ್ರಗಳನ್ನು ಉದಾಹರಿಸಬಹುದಾಗಿದೆ. 
     ಸ್ತ್ರೀಯರೂ ಉಪನಯನಕ್ಕೆ ಅರ್ಹರು ಎಂಬುದನ್ನು ಹೇಳುವ ಋಗ್ವೇದದ ಮಂತ್ರವಿದು: 'ದೇವಾ ಏತಸ್ಯಾಮವದಂತ ಪೂರ್ವೇ ಸಪ್ತ ಋಷಯಸ್ತಪಸೇ ಯೇ ನಿಷೇದುಃ| ಭೀಮಾ ಜಾಯಾ ಬ್ರಾಹ್ಮಣಸ್ಯೋಪನೀತಾ ದುರ್ಧಾಂ ದಧಾತಿ ಪರಮೇ ವ್ಯೋಮನ್|| (ಋಕ್.10.109.4.)' ಸ್ತ್ರೀಯರೂ ಪಂಚಜ್ಞಾನೇಂದ್ರಿಯಗಳು ಮತ್ತು ಮನೋಬುದ್ಧಿಯನ್ನು ಹೊಂದಿದವರಾಗಿದ್ದು ಅವರೂ ಜ್ಞಾನಸಾಧನೆ ಮಾಡಿ ಉಪದೇಶ ನೀಡಲು ಸಮರ್ಥರಿದ್ದಾರೆ. ಜ್ಞಾನಿ ಪುರುಷನ ತೇಜಸ್ವಿನಿ ಸ್ತ್ರೀ ಉಪನೀತಳಾಗಿ ಬ್ರಹ್ಮಜ್ಞಾನ ಪಡೆದು ಸಾಮಾನ್ಯರಿಗೂ ಕಷ್ಟವೆನಿಸುವ ಅಸಾಮಾನ್ಯ ಸಿದ್ಧಿ ಗಳಿಸುವಳು ಎಂಬುದು ಈ ಮಂತ್ರದ ತಾತ್ಪರ್ಯವಾಗಿದೆ. 
     ವೇದಾರಂಭವೆಂದರೆ ಕೇವಲ ವೇದಮಂತ್ರಗಳನ್ನು ಕಲಿಯುವುದಲ್ಲ, ಇನ್ನಿತರ ವಿದ್ಯೆಗಳನ್ನೂ-ಗಣಿತ, ವಿಜ್ಞಾನ, ಶಸ್ತ್ರವಿದ್ಯೆ, ತರ್ಕ, ಮುಂತಾದ- ಕಲಿಯುವುದಾಗಿತ್ತು. ವೇದ ಎಂಬ ಪದದ ಅರ್ಥ ಜ್ಞಾನ ಎಂದೇ ಹೊರತು ಬೇರೆಯಲ್ಲ. ಗುರುಕುಲಗಳಲ್ಲಿ ಸಕಲ ವಿದ್ಯೆಗಳನ್ನೂ ಕಲಿಸಲಾಗುತ್ತಿತ್ತು. ರಾಮ, ಕೃಷ್ಣ, ಪಾಂಡವರೇ ಮೊದಲಾದವರು ಗುರುಕುಲಗಳಲ್ಲಿ ಶಸ್ತ್ರ-ಶಾಸ್ತ್ರ ಪ್ರವೀಣರಾದ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಗುರುಕುಲಗಳಲ್ಲಿ ಜಾತಿಭೇದವಿರಲಿಲ್ಲ, ಉಚ್ಛ-ನೀಚ ಭಾವನೆಗಳಿರಲಿಲ್ಲ. ರಾಜರ ಮಕ್ಕಳೂ, ಸಾಮಾನ್ಯರ ಮಕ್ಕಳೂ ಒಟ್ಟಿಗೇ ಗುರುಕುಲಗಳಲ್ಲಿ ವಾಸವಿದ್ದು ಸಮಾನಭಾವದಲ್ಲಿ ಅಲ್ಲಿ ವಿದ್ಯೆ ಕಲಿಯಬೇಕಿತ್ತು. ಸಮಾಜದ ಋಣದಲ್ಲಿ ನಡೆಯುತ್ತಿದ್ದ ಗುರುಕುಲಗಳಿಗೆ ಶಿಕ್ಷಾರ್ಥಿಗಳು ಭಿಕ್ಷೆ ಸಂಗ್ರಹಿಸಿ ಆಚಾರ್ಯರಿಗೆ ನೀಡುತ್ತಿದ್ದರು. ಶಿಕ್ಷಾರ್ಥಿಗಳು ಅವರ ಶಕ್ತ್ಯಾನುಸಾರ ಮತ್ತು ಆಸಕ್ತಿಗಳಿಗನುಸಾರವಾಗಿ ಶಿಕ್ಷಣ ಪಡೆದು ಪ್ರವೀಣರೆನಿಸಿದ ನಂತರ ಸಮಾವರ್ತನ (ಬೀಳ್ಕೊಡುಗೆ ಕಾರ್ಯಕ್ರಮವೆಂದರೆ ಅರ್ಥವಾದೀತು) ಸಂಸ್ಕಾರ ನಡೆಯುತ್ತದೆ. ಈ ಸಮಯದಲ್ಲಿ ಗುರುವು ತನ್ನ ಶಿಷ್ಯರಿಗೆ ವಿಶೇಷವಾದ ಉಪದೇಶ ನೀಡಿ ಸತ್ಪ್ರಜೆಗಳಾಗಲು ಹರಸಿ ಬೀಳ್ಕೊಡುತ್ತಾರೆ. ಗುರುಕುಲದಲ್ಲಿದ್ದಷ್ಟು ಕಾಲವೂ ಗುರುವು ನೀಡಿದ್ದು ಉಪದೇಶವೇ ಆಗಿದ್ದರೂ, ಸಮಾವರ್ತನ ಕಾಲದಲ್ಲಿ ಅವೆಲ್ಲವನ್ನೂ ಸಾರರೂಪದಲ್ಲಿ ಸಂಗ್ರಹವಾಗಿ ತಿಳಿಸುತ್ತಾರೆ. ಹಾಗೆ ಸ್ನಾತಕರೆನಿಸಿಕೊಂಡ ವಿದ್ಯಾರ್ಥಿಗಳು ಮನೆಗೆ ಹಿಂತಿರುಗಿದಾಗ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿಯುವ, ಸ್ವಸಾಮರ್ಥ್ಯದಲ್ಲಿ ಬದುಕುವ, ಸಮಾಜಕ್ಕೆ ಒದಗುವ ಯಾವುದೇ ಅಪಾಯದ ವಿರುದ್ಧ ಸೆಟೆದುನಿಲ್ಲುವ, ರಕ್ಷಿಸುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ, ಗುರು-ಹಿರಿಯರಿಗೆ ಗೌರವ ತೋರಿಸುವವರಾಗಿರುತ್ತಾರೆ.
     ಬ್ರಹ್ಮಚಾರಿಯ ಗುಣಗಳನ್ನು ವಿವರಿಸುವ ವೇದಮಂತ್ರವಿದು: ಬ್ರಹ್ಮಚಾರೀ ಬ್ರಹ್ಮ ಭ್ರಾಜದ್ಭಿಭರ್ತಿ ತಸ್ಮಿನ್ದೇವಾ ಅಧಿ ವಿಶ್ವೇ ಸಮೋತಾಃ | ಪ್ರಾಣಾಪಾನೌ ಜನಯನ್ನಾದ್ವ್ಯಾನಂ ವಾಚಂ ಮನೋ ಹೃದಯಂ ಬ್ರಹ್ಮ ಮೇಧಾಮ್ || (ಅಥರ್ವ.11.5.24.) ಬ್ರಹ್ಮಚಾರಿಯು ಪ್ರಾಣ, ಅಪಾನ ಮತ್ತು ವ್ಯಾನ- ಈ ಮೂರು ಪ್ರಾಣ ಶಕ್ತಿಗಳನ್ನೂ, ವಾಣಿಯನ್ನೂ, ಮನಸ್ಸನ್ನೂ, ಹೃದಯವನ್ನೂ, ವೇದಜ್ಞಾನವನ್ನೂ, ಬುದ್ಧಿಯನ್ನೂ, ಸರ್ವರೀತಿಯಲ್ಲಿಯೂ ವರ್ಧಿಸಿಕೊಳ್ಳುತ್ತಾ, ಪ್ರಕಾಶಮಾನವಾದ ಬ್ರಹ್ಮತತ್ವವನ್ನು ಧರಿಸುತ್ತಾನೆ. ಅವನಲ್ಲಿ  ಸಮಸ್ತ ಇಂದ್ರಿಯ ಶಕ್ತಿಗಳೂ, ದಿವ್ಯ ಗುಣಗಳೂ ಹಾಸು ಹೊಕ್ಕಾಗಿ ಹೆಣೆದು ಬರುತ್ತವೆ ಎಂಬುದು ಈ ಮಂತ್ರದ ಅರ್ಥ. ಇಂತಹ ದಿವ್ಯ ವ್ಯಕ್ತಿತ್ವ ಹೊಂದುದವರು ಸರ್ವಮಾನ್ಯರಾಗಿ ಬಾಳುತ್ತಾರೆ. ಬ್ರಹ್ಮಚರ್ಯದ ನಿಜವಾದ ಗುಣ ಮತ್ತು ಮಹತ್ವ ಇರುವುದು ಇಲ್ಲಿಯೇ!
-ಕ.ವೆಂ.ನಾಗರಾಜ್.
***************
ದಿನಾಂಕ ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌: