ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಫೆಬ್ರವರಿ 14, 2016

ಪರಮಾತ್ಮನ ಸಂವಿಧಾನ - God's Constitution


ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ ||
     ಒಂದು ದೇಶದ ಸಂವಿಧಾನವೆಂದರೆ ಆ ದೇಶದ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ ವಿವರಗಳೊಂದಿಗೆ ದೇಶದ ರೀತಿ-ನೀತಿಗಳನ್ನು ವ್ಯಕ್ತಪಡಿಸುವ ಒಂದು ಪವಿತ್ರ ಪುಸ್ತಕ. ಇತಿಹಾಸ ಅಧ್ಯಯನ ಮಾಡುವವರು ವಿವಿಧ ದೇಶಗಳ ಸಂವಿಧಾನಗಳ ಕುರಿತು ತಿಳಿದುಕೊಳ್ಳುತ್ತಾರೆ. ದೇಶದ ಮುತ್ಸದ್ದಿಗಳು, ಚಿಂತಕರುಗಳು ಸೇರಿ ರಚಿಸಿರುವ ಸಂವಿಧಾನದ ಮೂಲ ಉದ್ದೇಶ ಪ್ರಜೆಗಳು ಸಾಮರಸ್ಯದಿಂದ, ನೆಮ್ಮದಿಯಿಂದ ಬಾಳಬೇಕು ಎಂಬುದಾಗಿರುತ್ತದೆ. ಎಷ್ಟೇ ದೂರದೃಷ್ಟಿಯಿಂದ ಸಂವಿಧಾನದ ರಚನೆಯಾದರೂ ಕುತಂತ್ರಿ, ಸ್ವಾರ್ಥಪರ ನಾಯಕರುಗಳು ಇದಕ್ಕೆ ತಮ್ಮದೇ ಆದ ಅರ್ಥ ವ್ಯಾಖ್ಯಾನ ಮಾಡಿ, ಅನೇಕ ತಿದ್ದುಪಡಿಗಳನ್ನು ತಂದು ಸಂವಿಧಾನದ ಮೂಲ ಅರ್ಥ ಮತ್ತು ಉದ್ದೇಶಗಳಿಗೆ ಭಂಗ ತಂದಿರುವದು ಮತ್ತು ತರುತ್ತಿರುವುದನ್ನು ಕಾಣುತ್ತಿದ್ದೇವೆ. ಇದರಿಂದಾಗಿ ಸಮಾಜದಲ್ಲಿ ಅಶಾಂತಿಗೆ ವಿಶ್ರಾಂತಿ ಇಲ್ಲವಾಗಿದೆ. ದೇಶದ ಸಂವಿಧಾನ, ಕಾನೂನು-ಕಾಯದೆಗಳಿಗಿಂತ ತಮ್ಮ ಧರ್ಮಗ್ರಂಥವೇ ದೊಡ್ಡದೆಂದು ವಾದಿಸುವ ಮತಾಂಧರೂ ಸಂವಿಧಾನಕ್ಕೆ ಅಪಚಾರ ಬಗೆಯುತ್ತಿರುವುದನ್ನೂ ಕಾಣುವ ದೌರ್ಭಾಗ್ಯ ಸಹ ನಮ್ಮದಾಗಿದೆ. ಹಕ್ಕುಗಳು ಬೇಕು, ಕರ್ತವ್ಯಗಳು ಬೇಡವೆಂದು ಅರಾಜಕತೆ ಪೋಷಿಸುವ ರಾಜಕೀಯ ಪಕ್ಷಗಳೂ, ಗುಂಪುಗಳೂ, ಸಂಸ್ಥೆಗಳೂ ಇಲ್ಲಿವೆ. ಪ್ರಜಾಸತ್ತೆಯ ಹೆಸರಿನಲ್ಲಿ ಸಮುದಾಯಗಳ ಓಲೈಕೆ, ಶೋಷಣೆಗಳು ಹೊಸ ಹೊಸ ರೀತಿಗಳಲ್ಲಿ ತಲೆಯೆತ್ತಿವೆ. ಹಣವಿದ್ದರೆ ಅಧಿಕಾರ, ಕಾನೂನು, ನ್ಯಾಯಗಳೂ ಹೇಳಿದಂತೆ ಕೇಳುತ್ತವೆ ಎಂಬ ವಾತಾವರಣ ಸೃಷ್ಟಿಯಾಗುತ್ತಿರುವುದು ಅಪಾಯದ ಎಚ್ಚರಿಕೆಯ ಗಂಟೆಯಾಗಿದೆ. ದೇಶದ ಹಿತ ಬಯಸುವವರು ಇದಕ್ಕೆ ಆದಷ್ಟು ಬೇಗ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದರೆ ಕ್ಷೋಭೆ ಉಂಟಾಗಿ ಪ್ರಜಾಪ್ರಭುತ್ವಕ್ಕೆ ಗ್ರಹಣ ಹಿಡಿದೀತು.
     ಜಗತ್ತಿನಲ್ಲಿರುವ ನೂರಾರು ಸಂಖ್ಯೆಯ ದೇಶಗಳು ತಮ್ಮವೇ ಆದ ರೀತಿ-ರಿವಾಜುಗಳನ್ನು ನೀತಿಯಾಗಿ, ಸಂವಿಧಾನವಾಗಿ ಆರಿಸಿಕೊಂಡಿವೆ. ಆದರೂ ಎಲ್ಲಾ ದೇಶಗಳನ್ನೂ ಒಂದಲ್ಲಾ ಒಂದು ಕೊರತೆ, ನ್ಯೂನತೆ, ಸಮಸ್ಯೆಗಳು ಕಾಡುತ್ತಲೇ ಇವೆ. ಇದಕ್ಕೆ ಕಾರಣ ಎಲ್ಲರಿಗೂ ಒಪ್ಪಿತವಾಗುವ ವಿಚಾರಗಳು ಇರುವುದಿಲ್ಲವೆಂಬದೇ ಆಗಿದೆ. ದೇಶಗಳು ತಮ್ಮ ಅಭಿವೃದ್ಧಿಗಾಗಿ ಇಷ್ಟೊಂದು ಕಷ್ಟಪಡಬೇಕಾಗಿರುವಾಗ ಇಡೀ ಬ್ರಹ್ಮಾಂಡವನ್ನೇ ನಿಯಂತ್ರಿಸುತ್ತಿರುವ ಆ ಪರಮಾತ್ಮನಿಗೆ ಎಷ್ಟು ಕಷ್ಟವಿರಬೇಕು, ಆ ಪರಮಾತ್ಮನ ಸಂವಿಧಾನವಾದರೂ ಹೇಗಿದ್ದೀತು?
     ದೇವರು, ಪರಮಾತ್ಮ ಎಂದಾಕ್ಷಣ ಆಸ್ತಿಕರು, ನಾಸ್ತಿಕರು ಇತ್ಯಾದಿ ಚರ್ಚೆಗಳು ಹುಟ್ಟಿಕೊಳ್ಳುತ್ತವೆ. ಇದನ್ನೆಲ್ಲಾ ಬದಿಗಿರಿಸಿ ವಿಚಾರ ಮಾಡೋಣ. ಆಕಾಶವನ್ನೇ ದೇವರ ಪ್ರತಿನಿಧಿ ಅಥವ ದೇವರು ಎಂದೇ ಭಾವಿಸಿಕೊಂಡು ನೋಡೋಣ. ಆಕಾಶ ಇಲ್ಲದ ಸ್ಥಳವಿಲ್ಲ. ಇಡೀ ಬ್ರಹ್ಮಾಂಡ ಎಷ್ಟಿದೆಯೋ ಅದನ್ನೆಲ್ಲಾ ಆವರಿಸಿಕೊಂಡಿರುವುದು ಆಕಾಶ. ಭೋರ್ಗರೆಯುವ ಸಮುದ್ರದ ಜೊತೆಗೆ, ಸುಡುವ ಅಗ್ನಿಯೊಡನೆ, ಯಾರೂ ಹೋಗಲಾಗದ, ನೋಡಲಾಗದ ಸ್ಥಳಗಳಲ್ಲಿ, ಒಟ್ಟಾರೆಯಾಗಿ ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ ಆಕಾಶವಿದೆ. ಈ ಆಕಾಶ ಅದೆಷ್ಟೋ ಸೂರ್ಯಮಂಡಲಗಳನ್ನು ಅವುಗಳು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇರುವಂತೆ ನೋಡಿಕೊಂಡಿದೆ! ಎಲ್ಲಕ್ಕೂ ಆಧಾರವಾಗಿರುವ ಆಕಾಶಕ್ಕೆ ಆಧಾರದ ಅಗತ್ಯವೇ ಇಲ್ಲ! ಆಕಾಶವನ್ನು ಕತ್ತರಿಸಲಾಗುವುದಿಲ್ಲ, ಸುಡಲಾಗುವುದಿಲ್ಲ, ತೋಯಿಸಲಾಗುವುದಿಲ್ಲ, ನಾಶ ಮಾಡಲೂ ಆಗುವುದಿಲ್ಲ, ಸೃಷ್ಟಿಸಲೂ ಆಗುವುದಿಲ್ಲ. ದೇವರನ್ನೂ ಹೀಗೆಯೇ ಇದ್ದಾನೆ ಎನ್ನುತ್ತೇವಲ್ಲವೇ? ಇಂತಹ ದೇವರ ಸಂವಿಧಾನವಾದರೂ ಹೇಗಿದೆ?
ಮಿತಿಯುಂಟೆ ದೇವನ ಕೊಡುಗೆ ಕರುಣೆಗೆ
ರವಿ ಸೋಮ ನೆಲ ಜಲ ವಾಯು ಆಗಸ |
ಪೂರ್ಣ ಜಗವನಿತ್ತಿಹನು ಸಕಲ ಜೀವಿಗೆ
ಭೇದವೆಣಿಸದಾತನಿಗೆ ಶರಣಾಗು ಮೂಢ ||
     ಪರಮಾತ್ಮನ ಸಂವಿಧಾನದಲ್ಲಿ ಇರುವಷ್ಟು ಸ್ವಾತಂತ್ರ್ಯ, ನ್ಯಾಯ, ನೀತಿ, ಧರ್ಮಗಳು ಮನುಷ್ಯ ನಿರ್ಮಿತ ಸಂವಿಧಾನದಲ್ಲಿ ಇರುವುದು ಅಸಾಧ್ಯ, ಇದ್ದರೂ ಜಾರಿ ಮಾಡುವುದು ದುಸ್ಸಾಧ್ಯ. ಪರಮಾತ್ಮನ ಸಂವಿಧಾನದ ಪಂಚತತ್ವಗಳು - ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶ -  ಸಕಲ ಚರಾಚರಗಳ ಅಸ್ತಿತ್ವಕ್ಕೆ ಕಾರಣವಾಗಿವೆ. ಈ ಐದೂ ತತ್ವಗಳು ಯಾವುದೇ ಜೀವಿಗೆ, ಅದು ಪಶು-ಪಕ್ಷಿಯಿರಬಹುದು, ಮಾನವನಿರಬಹುದು, ಕ್ರಿಮಿ-ಕೀಟವಿರಬಹುದು ಎಲ್ಲರಿಗೂ ಸಮಾನವಾಗಿವೆ. ಜೀವಿ, ನಿರ್ಜೀವಿ ಎಂಬ ಭೇದವನ್ನೂ ಸಹ ಅವು ಮಾಡವು. ಭೂಮಿಯಲ್ಲಿ ಇಂತಹವರು ಮಾತ್ರ ಇರಬೇಕು, ಇಂತಹವರು/ಇಂತಹವು ಇರಬಾರದು ಎಂದು ನಿರ್ಬಂಧವಿಲ್ಲ. ನಿರ್ಬಂಧವೇನಾದರೂ ಇದ್ದರೆ ಅವು ಮನುಷ್ಯನಿರ್ಮಿತವಷ್ಟೇ! ಇಡೀ ಭೂಮಿ ಒಂದೇ ಆಗಿದ್ದು, ಅದನ್ನು ದೇಶಗಳು, ರಾಜ್ಯಗಳು ಎಂದು ತುಂಡು-ತುಂಡುಗಳಾಗಿಸಿರುವವರು ನಾವೇನೇ! ನದಿ, ತೊರೆಗಳ ನೀರು ತಗ್ಗಿರುವೆಡೆಗೆ ಹರಿಯುತ್ತವೆ. ಆ ದೇಶ, ಈ ದೇಶ, ಆ ರಾಜ್ಯ, ಈ ರಾಜ್ಯ ಎಂಬ ಭೇದ ಅದಕ್ಕಿಲ್ಲ. ಈ ನಿಯಮಕ್ಕೆ ಅಪವಾದವೇ ಇಲ್ಲ, ಇದನ್ನು ಮುರಿಯಲೂ ಸಾಧ್ಯವಿಲ್ಲ. ಇನ್ನು ಬೆಂಕಿಯ ವಿಷಯವನ್ನೇ ತೆಗೆದುಕೊಂಡರೆ ಅದರ ದಹಿಸುವ ಗುಣ ಎಲ್ಲೆಡೆಯೂ ಒಂದೇ! ಬೆಂಕಿ ಸುಡುತ್ತದೆ ಎಂದು ಗೊತ್ತಿರುವವರನ್ನೂ ಅದು ಸುಡುತ್ತದೆ, ಗೊತ್ತಿಲ್ಲದವರನ್ನೂ ಅದು ಸುಡುತ್ತದೆ. ಆ ಜಾತಿಯವರನ್ನು ಮಾತ್ರ ಸುಡಬೇಕು, ಈ ಜಾತಿಯವರನ್ನು ಸುಡುವಾಗ ಸ್ವಲ್ಪ ರಿಯಾಯಿತಿ ಕೊಡಬೇಕು ಎಂಬ ತಾರತಮ್ಯ ಅದಕ್ಕೆ ಇಲ್ಲವೇ ಇಲ್ಲ. ಯಾವ ದೇಶದ ಕಾನೂನುಗಳೂ ಬೆಂಕಿಯ ಗುಣ ಬದಲಾಯಿಸಲು ಸಾಧ್ಯವೇ ಇಲ್ಲ. ಇಡೀ ದೇಶದ ಜನರು ಒಗ್ಗೂಡಿ ಬೆಂಕಿ ಸುಡಬಾರದು ಎಂದು ತೀರ್ಮಾನ ತೆಗೆದುಕೊಂಡರೂ ಬೆಂಕಿಯ ಗುಣವನ್ನು ಬದಲಾಯಿಸಲು ಸಾಧ್ಯವಿಲ್ಲ.
     ವಾಯು ಎಲ್ಲೆಡೆಯೂ, ಎಲ್ಲರಿಗೂ ಸಮನಾಗಿ ಬೀಸುತ್ತದೆ. ಮಳೆ ಸಹ ಅಷ್ಟೇ. ಸೂರ್ಯನ ಪ್ರಕಾಶವೂ ಯಾವುದೇ ತಾರತಮ್ಯ ಮಾಡದು. ಇವನು ಬುದ್ಧಿವಂತ, ಒಳ್ಳೆಯವನು ಇವನಿಗೆ ಜಾಸ್ತಿ ಫಲ ಸಿಗಲಿ; ಇವನು ದಡ್ಡ, ಇವನಿಗೆ ಕಡಿಮೆ ಸಿಗಲಿ ಎಂದು ಪಂಚತತ್ವಗಳು ತಮ್ಮ ರೀತಿ-ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ. ಇವನು ನಾಸ್ತಿಕ, ದೇವರನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದು ಅವನಿಗೆ ಅನ್ನ, ನೀರು, ಆಶ್ರಯ ಸಿಗದಂತೆ ದೇವರು ಮಾಡಿದ ಉದಾಹರಣೆಗಳಂತೂ ಕಂಡಿಲ್ಲ. ಇವನು ಪರಮ ದೇವರ ಭಕ್ತ, ಸದಾ ದೇವರ ಧ್ಯಾನದಲ್ಲೇ ಇರುತ್ತಾನೆ ಎಂದು ಆತನಿಗೆ ವಿಶೇಷ ಸವಲತ್ತುಗಳನ್ನು ದೇವರು ಒದಗಿಸಿದ ಉದಾಹರಣೆಗಳೂ ಇಲ್ಲ. ಮನುಷ್ಯ ಇಂತಹ ವ್ಯತ್ಯಾಸಗಳನ್ನು ಮಾಡಿಯಾನು. ನಮ್ಮ ದೇವರನ್ನೇ ನಂಬಬೇಕು, ಪೂಜಿಸಬೇಕು ಎಂದು ಆಗ್ರಹಿಸಿ ನರಹತ್ಯೆಗಳನ್ನು ಮಾಡುವ ಮತಾಂಧರ ನಡುವೆ ನಾವು ಬಾಳುತ್ತಿದ್ದೇವೆ. ಆದರೆ, ಸ್ವತಃ ದೇವರೇ ತನ್ನನ್ನು ಪೂಜಿಸಲಿ, ಪೂಜಿಸದಿರಲಿ ಯಾರಿಗೇ ಆಗಲಿ ತೊಂದರೆ ಕೊಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ದೇವರು ದೊಡ್ಡ ಸಮತಾವಾದಿ. ಬರುವಾಗ ಏನನ್ನೂ ತರಲು ಅವಕಾಶವಿಲ್ಲ. ಹೋಗುವಾಗಲೂ ಏನನ್ನೂ ತೆಗೆದುಕೊಂಡುಹೋಗಲು ಸಾಧ್ಯವಿಲ್ಲ. ಇರುವಾಗ ಇಡೀ ವಿಶ್ವವನ್ನೇ ಶಕ್ತ್ಯಾನುಸಾರ ಬಳಸಲು ಅವಕಾಶ ಕೊಟ್ಟಿದ್ದಾನೆ. ಎಲ್ಲರಿಗೂ ಇರುವುದು ಒಂದೇ ಸಮಯ. ಕೆಲವರಿಗೆ ಹೆಚ್ಚು ಸಮಯ, ಕೆಲವರಿಗೆ ಕಡಿಮೆ ಎಂಬುದಿಲ್ಲವೇ ಇಲ್ಲ. ದೇವರೇ ತಾರತಮ್ಯ ಮಾಡದಿರುವಾಗ ದೇವರ ಹೆಸರಿನಲ್ಲಿ ಕ್ಷುದ್ರ ಮಾನವರು ತಾರತಮ್ಯ ಮಾಡುವುದು, ಭಯೋತ್ಪಾದನೆಗೆ ತೊಡಗುವುದು, ಮುಂತಾದುವನ್ನು ನಿಯಂತ್ರಿಸುವ ಕೆಲಸವನ್ನು ಪ್ರಜ್ಞಾವಂತರು ಮಾಡಲೇಬೇಕಿದೆ. ಈ ಕೆಲಸ ಮಾಡಿದರೆ ಅದು ತಾರತಮ್ಯ ಮಾಡದ ದೇವರಿಗೆ ಸಲ್ಲಿಸುವ ನೈಜ ಪೂಜೆಯಾಗುತ್ತದೆ.  
ಏನಿಲ್ಲ ಏನಿಹುದು ಪೂರ್ಣ ಜಗವಿಹುದು
ಶಕ್ತನಿರೆ ಪಡೆಯುವೆ ದೇವನ ಕರುಣೆಯಿದು |
ಪಡೆದಿರುವೆ ನೀನು ಕೊಡದಿರಲು ದ್ರೋಹ
ಕೊಟ್ಟಷ್ಟು ಪಡೆಯುವೆ ನಿಜವು ಮೂಢ ||
-ಕ.ವೆಂ.ನಾಗರಾಜ್.
**************
ದಿನಾಂಕ 11.01.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ