ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಫೆಬ್ರವರಿ 11, 2016

ಹೊರಬರಲಾಗದ ಮಾತುಗಳು


     'ಮಾತನಾಡಲು ಏನೋ ಇದೆ, ಅದರೆ ಆಡಲಾಗುವುದಿಲ್ಲ' ಎಂಬಂತಹ ಜನರಿಂದಲೇ ಈ ಪ್ರಪಂಚ ತುಂಬಿಹೋಗಿದೆ. ಒಳಗೆ ಇರುವುದೇ ಒಂದು, ಹೊರಬರುವ ಮಾತುಗಳೇ ಮತ್ತೊಂದು! ಇದಕ್ಕೆ ಕಾರಣಗಳು ಹಲವಾರು. ಒಳಗಿರುವ, ಆದರೆ ಹೊರಬರದ ಮಾತುಗಳೇ ಆಡಲಾಗದ ಮಾತುಗಳು! ಆಡಲಾಗದ ಮಾತುಗಳು ಒಳಗೇ ಇದ್ದು ಮಾಡುವ ಅವಾಂತರಗಳು ಅಷ್ಟಲ್ಲ. ಆಡದ ಮಾತುಗಳಿಂದಾಗಿ ಮತ್ತು ಕೇಳದ ಮಾತುಗಳಿಂದಾಗಿ ಜನ ಗೌರವ ಉಳಿಸಿಕೊಂಡಿದ್ದಾರೆ. ಆಡಲಾಗದ, ಆಡಬಾರದ ಮಾತುಗಳು ಒಳಗೇ ಬಂದಿಯಾಗಿರುತ್ತವೆ. ಅಂತಹ ಮಾತುಗಳು ಒಳಗೇ ಉಳಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆಂದು ಹೊರಗೆ ಬಂದರೆ ಆಗಲೂ ಕೈಕಾಲು ಅಲ್ಲದಿದ್ದರೂ ಮನಸ್ಸಾದರೂ ಮುರಿಯಬಹುದು.  ಮಾತುಗಳು ಒಳಗೆ ಇರುವವರೆಗೆ ಅದಕ್ಕೆ ನೀವು ಬಾಸ್, ಹೊರಬಿತ್ತೋ ಅವಕ್ಕೆ ನೀವೇ ದಾಸರು. ನ್ಯಾಯಾಲಯಗಳಲ್ಲಿ 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಎಂದು ಪ್ರಮಾಣ ಮಾಡಿಸುತ್ತಾರೆ. ಆದರೆ ಪ್ರಮಾಣ ಮಾಡಿದವರು ತಮಗೆ ಅನುಕೂಲವಾಗಲೆಂದು ಸತ್ಯವನ್ನು ಹೇಳದೇ ಒಳಗೆ ಉಳಿಸಿಕೊಂಡಿರುತ್ತಾರಲ್ಲಾ, ಅವೇ ಆಡಲಾಗದ ಮಾತುಗಳು! ಮಾತುಗಳನ್ನು ಮುಟ್ಟಲಾಗುವುದಿಲ್ಲ. ಆದರೆ ಮಾತುಗಳು ನಮ್ಮನ್ನು ಮುಟ್ಟುತ್ತವೆ.
     ಒಬ್ಬ ಒಂದು ಸುಂದರ ಹುಡುಗಿಯನ್ನು ನೋಡಿ ಅವಳು ಹೆಂಡತಿಯಾಗಿ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಂದುಕೊಳ್ಳುತ್ತಾನೆ ಎಂದಿಟ್ಟುಕೊಳ್ಳೋಣ. ಆ ಹುಡುಗಿ ಕಾರಿನಲ್ಲಿ ಓಡಾಡೋಳು, ಅವಳ ಅಪ್ಪ ದೊಡ್ಡ ಶ್ರೀಮಂತ. ಇವನಾದರೋ ಒಂದು ಅಟ್ಲಾಸ್ ಸೈಕಲ್ ಮಾಲಿಕ.  ಅವನು ಆ ಹುಡುಗಿಯನ್ನು ಅಥವ ಅವಳ ಅಪನನ್ನು ಮಾತನಾಡಿಸಿ ತನ್ನ ಆಸೆಯ ಬಗ್ಗೆ ಹೇಳಿಕೊಳ್ಳಲು ಆಗುತ್ತಾ? ಅದು ಅವನ ಗಂಟಲ ಕೆಳಗೇ ಹೂತುಹೋಗುತ್ತೆ. ಹಾಗೆಂದು ಮಾತುಗಳು ಒಳಗೇ ಉಳಿದುಬಿಡಬಾರದು ಎಂಬುದಕ್ಕೆ ಇನ್ನೊಂದು ಉದಾಹರಣೆ ನೋಡೋಣ. ಒಬ್ಬ ಹುಡುಗ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದಿಟ್ಟುಕೊಳ್ಳೋಣ. ಹೇಳೋಕೆ ಧೈರ್ಯ ಇಲ್ಲ, ಸುಮ್ಮನೆ ಇರ್ತಾನೆ. ಹುಡುಗಿಯದೂ ಅದೇ ಪರಿಸ್ಥಿತಿ! ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ಒಳಗಿನ ಮಾತುಗಳನ್ನು ಹೊರಗೆ ಹೇಳಲಾಗದೆ ಸುಮ್ಮನೆ ಇದ್ದಾಗ ಅವರ ಅಪ್ಪ-ಅಮ್ಮಂದಿರು ಅವರುಗಳಿಗೆ ಬೇರೆ ಗಂಡು/ಹೆಣ್ಣು ನೋಡಿ ಮದುವೆ ಮಾಡ್ತಾರೆ. ಆಗ ಅವರ ಒಳಗಿನ ಮಾತುಗಳು ಒಳಗೇ, ಹೊರಗಿನ ಮಾತುಗಳು ಹೊರಗೇ!
     ಒಬ್ಬ ದೇವರಲ್ಲಿ ಶಕ್ತಿ ಕೊಡು ಅಂತ ಕೇಳಿದನಂತೆ. ಆ ದೇವರು ಅವನನ್ನು ದುರ್ಬಲನಾಗಿ ಮಾಡಿಬಿಟ್ಟನಂತೆ, ಏಕೆಂದರೆ ವಿಧೇಯತೆ ಕಲಿಯಲಿ ಎಂದು!. ಆರೋಗ್ಯ ಕೊಡು ಎಂದದ್ದಕ್ಕೆ ಎಡವಟ್ಟು ಮಾಡಿದ, ಏನಾದರೂ ಮಾಡಬೇಕು ಅನ್ನುವ ಮನಸ್ಸು ಬರಲೆಂದು! ಸುಖ ಅನುಭವಿಸಲು ಶ್ರೀಮಂತಿಕೆ ಕೊಡು ಎಂದರೆ ಬಡತನ ಕೊಟ್ಟನಂತೆ, ಬುದ್ಧಿವಂತನಾಗಲೆಂದು! ಅಧಿಕಾರ ಕೊಡು ಅಂದರೆ ಜವಾನನ್ನಾಗಿಸಿದನಂತೆ, ಏಕೆಂದರೆ ತನ್ನನ್ನು ನೆನೆಸಿಕೊಳ್ಳುತ್ತಿರಲೆಂದು! ಎಲ್ಲಾ ವಸ್ತುಗಳನ್ನು ಜೀವನ ಸುಖವಾಗಿಡಲು ಕೊಡಪ್ಪಾ ಅಂದರೆ,  ಜೀವನ ಕೊಟ್ಟಿದೀನಿ, ಎಲ್ಲಾ ವಸ್ತುಗಳನ್ನು ನೀನೇ ಪಡಕೊಳ್ಳಬಹುದು ಅಂದುಬಿಟ್ಟನಂತೆ. ಆಮೇಲೆ ಅವನು ಏನು ಕೇಳಿಕೊಳ್ಳಬೇಕು ಅಂತ  ಇದ್ದನೋ ಅದನ್ನು ಕೇಳಿಕೊಳ್ಳಲೇ ಇಲ್ಲವಂತೆ. ಏಕೆಂದರೆ ಆ ದೇವರು ಕೇಳದೆ ಬಿಟ್ಟದ್ದನ್ನು ಅವನಿಗೆ ಕೊಟ್ಟನಂತೆ. ಕೇಳದೇ ಇದ್ದರೂ ದೇವರು ಕೊಟ್ಟಿದ್ದೇನು ಎಂದು ಮಿತ್ರ ಕೇಳಿದರೆ ನಗುತ್ತಾ ಹೇಳಿದನಂತೆ, "ಅದನ್ನು ಕೇಳಬಾರದು, ನಾನು ಹೇಳಲೂಬಾರದು." ಇದೇ 'ಆಡಲಾಗದ ಮಾತು!'
     ಆಡಲಾಗದ ಮಾತುಗಳು ಹೊರಬರದಿದ್ದಾಗ ಒಳಗೇ ಕುಣಿಯುತ್ತಿರುತ್ತವೆ, ಹೊರಗೆ ಬರಲು ಚಡಪಡಿಸುತ್ತಿರುತ್ತವೆ. ಆಗ ಅಸಮಾಧಾನ, ಅಸಹನೆ ಉಂಟಾಗಿ ಮನಸ್ಸಿಗೆ ಶಾಂತಿಯೇ ಇರುವುದಿಲ್ಲ. ಎದುರಿಗೆ ಇರುವವರನ್ನು ಹಂಗಿಸುವ ಇಚ್ಛೆ ಒಳಗೇ ಇದ್ದರೂ ಹಂಗಿಸಲಾರದೆ, ಮೂರನೆಯವರ ಎದುರಿಗೆ ಅಪರೋಕ್ಷವಾಗಿ ಬೇರೆ ರೀತಿಯಲ್ಲಿ ಮಾತುಗಳು ಹೊರಗೆ ಬಂದುಬಿಡುತ್ತವೆ. ಅಸಹನೆ ಸಂಬಂಧಿಸಿದವರಿಗೆ ಗೊತ್ತಾಗಲಿ ಎಂಬಂತೆ ಅವರ ವರ್ತನೆ ಇರುತ್ತದೆ. ಸಂಬಂಧಿಸಿದವರಿಗೆ ಹೇಳಲಾಗದ ಮಾತುಗಳನ್ನು ತಮ್ಮ ವಿಶ್ವಾಸದ ಸ್ನೇಹಿತರಲ್ಲಿ ಹೇಳಿಕೊಂಡು ಹಗುರಾಗುತ್ತಾರೆ. ಒಬ್ಬರಿಂದ ಒಬ್ಬರಿಗೆ ಹೋಗುತ್ತಾ ಆ ಮಾತುಗಳು ಉದ್ದೇಶಿಸಿದವರಿಗೂ ತಲುಪಿ ರಂಪ ರಾಮಾಯಣವೂ ಆಗುತ್ತದೆ. ಈ ಆಡಲಾಗದ, ಆಡದೇ ಇರುವ ಮಾತುಗಳು ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ನಾವು ಏನು ಯೋಚನೆ ಮಾಡ್ತೀವೋ ಅದರ ಬಗ್ಗೆ ಎಚ್ಚರವಾಗಿರಬೇಕು. ಏಕೆಂದರೆ ಮಾತುಗಳಾಗಿ ಹೊರಬರುವುದು ಅವೇ!
     'ಇದ್ದದ್ದನ್ನು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ!' ಎಂಬ ಗಾದೆ ಸತ್ಯವನ್ನು ಹೇಳುವಾಗ ಎಚ್ಚರಿಕೆ ಇರಬೇಕೆಂದು ಹೇಳುತ್ತದೆ. 'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನಬ್ರೂಯಾತ್ ಸತ್ಯಮಪ್ರಿಯಮ್'- ಸತ್ಯವನ್ನು ಹೇಳಬೇಕು, ಪ್ರಿಯವಾಗಿ ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು. ಒಬ್ಬ ದುಷ್ಟ ಪೈಲ್ವಾನನಿಂದ ತೊಂದರೆಯಾದರೂ ಮಾತನಾಡದೆ ಸುಮ್ಮನಿರಬೇಕಾಗುತ್ತದೆ. ಇಷ್ಟವಿರಲಿ, ಇಲ್ಲದಿರಲಿ ಸಂಬಳ ಕೊಡುವ ಧಣಿಯನ್ನು ಹೊಗಳಲೇಬೇಕು. ಬೈದುಕೊಳ್ಳುವುದೇನಾದರೂ ಇದ್ದರೆ ಹೊರಗೆ ತೋರಿಸಿಕೊಳ್ಳದಂತೆ ಒಳಗೊಳಗೇ ಶಪಿಸಬೇಕು. ಒಳ್ಳೆಯ ಕಾರಣಗಳಿಂದಲೂ ಕೆಲವೊಮ್ಮೆ ಮಾತುಗಳನ್ನು ಅದುಮಿಡಬೇಕಾಗುತ್ತದೆ. ಒಂದು ಉದಾಹರಣೆ ನೋಡೋಣ. ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಮನೆಯ ಬಾಗಿಲು ಬಡಿಯುತ್ತಾನೆ ಎಂದಿಟ್ಟುಕೊಳ್ಳೋಣ. ಬಾಗಿಲು ತೆರೆದ ತಕ್ಷಣ ಆ ಅಪರಿಚಿತ ಒಳಗೆ ನುಗ್ಗಿ ಬಾಗಿಲು ಹಾಕಿ ಮನೆಯ ಮಾಲಿಕನ ಕಾಲು ಹಿಡಿದು ತನ್ನನ್ನು ಕಾಪಾಡಲು ಕೋರುತ್ತಾನೆ ಎಂದುಕೊಳ್ಳೋಣ. ಏನಾಗುತ್ತಿದೆ ಎಂದು ತಿಳಿಯದೆ ಮಾಲಿಕ ಕಕ್ಕಾಬಿಕ್ಕಿಯಾಗಿದ್ದಾಗ ಪುನಃ ಮನೆಯ ಬಾಗಿಲು ದಬದಬ ಬಡಿಯುವ ಸದ್ದಾಗುತ್ತದೆ. ಒಳಗಿದ್ದವನು ಕರುಣಾಜನಕವಾಗಿ ನೋಡುತ್ತಾನೆ. ತಕ್ಷಣದಲ್ಲಿ ಆತನನ್ನು ಬಚ್ಚಲುಮನೆಯಲ್ಲಿ ಅಡಗಿಕೊಳ್ಳಲು ಸನ್ನೆಯಿಂದ ಸೂಚಿಸಿ ಬಾಗಿಲು ತೆರೆದಾಗ ಐದಾರು ಜನರು ದೊಣ್ಣೆ ಮಚ್ಚುಗಳನ್ನು ಹಿಡಿದು, 'ಮನೆಯೊಳಗೆ ಯಾರಾದರೂ ಬಂದರಾ?' ಎಂದು ಕೇಳುತ್ತಾರೆ. ಅವನು ಸತ್ಯಸಂಧನಂತೆ 'ಹೌದು' ಎಂದರೆ ಕಣ್ಣ ಮುಂದೆಯೇ ಒಂದು ಕೊಲೆ ನಡೆದುಹೋಗಿಬಿಡಬಹುದು. ಬದಲಾಗಿ, 'ಯಾರು? ಇಲ್ಲಿ ಯಾರೂ ಬರಲಿಲ್ಲವಲ್ಲಾ!' ಅಂದರೆ? ಬಂದವರು ಹೊರಗೆ ಹುಡುಕಲು ಓಡುತ್ತಾರೆ. ಅಡಗಿಕೊಂಡಿದ್ದವನು ನಂತರ ಕೈಮುಗಿದು ಕೃತಜ್ಞತೆಯಿಂದ ಕಣ್ಣೀರಿಡುತ್ತಾ ಹೊರಗೆ ಬೇರೊಂದು ದಾರಿಯಲ್ಲಿ ಓಡಿಹೋಗುತ್ತಾನೆ. 'ಏನು? ಏಕೆ?' ಏನನ್ನೂ ತಿಳಿಯದವನು ಮುಂದೆ ತನಗೆ ಏನೂ ಗೊತ್ತಿಲ್ಲದಂತೆ ಸುಮ್ಮನೇ ಇರಬೇಕಾಗುತ್ತದೆ.
     ಸಂಬಂಧಗಳು ಚೆನ್ನಾಗಿರಬೇಕು, ತಮಗೆ ಕೆಡುಕಾಗಬಾರದು ಅನ್ನುವ ಕಾರಣಕ್ಕೆ ಜನ ತಮ್ಮ ಮನಸ್ಸಿನಲ್ಲಿ ಇರುವುದೇ ಒಂದಾದರೂ ಹೊರಗೆ ಆಡುವುದೇ ಬೇರೆ ತೋರಿಕೆಯ ಮಾತುಗಳು. ಅವುಗಳು ಗಟ್ಟಿ ಮಾತುಗಳಲ್ಲವಾದ್ದರಿಂದ ಅಂತಹ ಮಾತುಗಳ ಪ್ರಭಾವ ಕಡಿಮೆ. ಅವು ತೋರಿಕೆಯ ಮಾತುಗಳೆಂದು ಗೊತ್ತಾದಾಗ ಅದನ್ನು ಆಡಿದವರ ಬೆಲೆ ಸಹ ಕಡಿಮೆ ಆಗುತ್ತೆ. ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳಿದ್ದರೆ ಒಳ್ಳೆಯ ಮಾತುಗಳು ಬರುತ್ತವೆ. ಕೆಟ್ಟ ವಿಚಾರಗಳಿದ್ದರೆ ಆಡಲಾಗದ ಮಾತುಗಳು ಹುಟ್ಟುತ್ತವೆ. ಅದು ಹೆಚ್ಚು ಕಾಟ ಕೊಡುವುದು ಆ ಮಾತುಗಳನ್ನು ಹುಟ್ಟಿಸಿದವರಿಗೇ. ಆದ್ದರಿಂದ ಒಳ್ಳೆಯ ವಿಚಾರ ಮನಸ್ಸಿನಲ್ಲಿ ಬರುವಂತೆ ಮಾಡು ಎಂದು ಪ್ರಾರ್ಥಿಸಬೇಕು.
     ಸ್ವಾಮಿ ದಯಾನಂದ ಸರಸ್ವತಿಯವರು ಹೇಳುತ್ತಿದ್ದರು, "ಸತ್ಯವನ್ನೇ ಹೇಳುತ್ತೇನೆಂದು ಶಪಥ ಮಾಡಬೇಡಿ. ಆದರೆ, ಸತ್ಯವನ್ನೇ ಹೇಳಿ. ಏಕೆಂದರೆ, ಶಪಥ ಮಾಡುವ ಕಾಲಕ್ಕೆ ಸತ್ಯ ಅನ್ನುವುದನ್ನು ನೀವೇ ತಪ್ಪು ತಿಳಿದುಕೊಂಡಿರಬಹುದು, ಅಥವ ಯಾವುದನ್ನೋ ಸತ್ಯವೆಂದು ತಪ್ಪು ತಿಳಿದಿರಬಹುದು. ಅದರಿಂದ ಬೇರೆಯವರಿಗೆ ಹಾನಿಯಾಗಬಹುದು." ನಿಜ, ಬೇರೆಯವರಿಗೆ ಹಾನಿ ಉಂಟುಮಾಡುವಂತಹದು ಸತ್ಯವಲ್ಲ. ತಮಗೆ ಮಾತ್ರ ಒಳ್ಳೆಯದಾಗಬೇಕೆಂದು ಬಯಸುವುದೂ ಸತ್ಯವಲ್ಲ. ನಮ್ಮ ಹಾಗೇ ಎಲ್ಲರಿಗೂ ಒಳ್ಳೆಯದಾಗಬೇಕು, ಯಾರಿಗೂ ಕೆಟ್ಟದಾಗಬಾರದು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಈ ರೀತಿ ಇದ್ದಲ್ಲಿ ಆಡಲಾಗದ ಮಾತುಗಳು ಹುಟ್ಟಲಾರವು, ಯಾರಿಗೂ ತೊಂದರೆ ಕೊಡಲಾರವು.
-ಕ.ವೆಂ.ನಾಗರಾಜ್.
***************
ದಿನಾಂಕ 18.01.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

4 ಕಾಮೆಂಟ್‌ಗಳು: