ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಮಾರ್ಚ್ 27, 2014

ನಾಲ್ಕು - ಐದು - ಆರು

     ಮಹಾಭಾರತದ ಉದ್ಯೋಗ ಪರ್ವದ ೩೩ರಿಂದ೪೦ರವರೆಗಿನ ಎಂಟು ಅಧ್ಯಾಯಗಳಲ್ಲಿ ವಿದುರ ಧೃತರಾಷ್ಟ್ರನಿಗೆ ನ್ಯಾಯಯುತ ಮಾರ್ಗದ ಕುರಿತು ತಿಳಿಸಿ ಹೇಳುವುದರೊಂದಿಗೆ, ನಡವಳಿಕೆಗಳು, ಸದಾಚಾರ, ಮಾತು, ನೀತಿ, ಧರ್ಮ, ಸುಖ-ದುಃಖಗಳ ಪ್ರಾಪ್ತಿ, ನ್ಯಾಯ-ಅನ್ಯಾಯ, ಸತ್ಯ, ಅಹಿಂಸೆ, ಕ್ಷಮೆ, ಮಿತ್ರ-ಶತ್ರುಗಳಾರು, ಮುಂತಾದ ಸಂಗತಿಗಳ ಬಗ್ಗೆ ತಿಳುವಳಿಕೆ ನೀಡಿರುವ ಬಗೆಗೂ ವಿಸ್ತೃತವಾಗಿ ವಿವರಿಸಲಾಗಿದೆ. ಪ್ರಾಸಂಗಿಕವಾಗಿ ವಿದುರ ನೀತಿಯ ಕೆಲವು ತುಣುಕುಗಳನ್ನು ನಿಮ್ಮೊಡನೆ ಹಂಚಿಕೊಳ್ಳುವೆ.
ನಾಲ್ಕು:
೧. ಅಲ್ಪ ಬುದ್ಧಿಯವರೊಡನೆ, ಕೆಲಸವನ್ನು ನಿಧಾನವಾಗಿ ಮಾಡುವವರೊಡನೆ, ಆತುರದಿಂದ ಕೆಲಸ ಮಾಡುವವರೊಡನೆ ಮತ್ತು ಸದಾ ಹೊಗಳುವವರೊಡನೆ ಮಂತ್ರಾಲೋಚನೆ ಮಾಡಬಾರದು.
೨. ಮನೆಯಲ್ಲಿ ಕುಟುಂಬದ ವೃದ್ಧ, ಕಷ್ಟದಲ್ಲಿರುವ ಸಜ್ಜನ, ಧನಹೀನನಾದ ಸ್ನೇಹಿತ ಮತ್ತು ಮಕ್ಕಳಿಲ್ಲದ ಸೋದರಿಗೆ ಆಶ್ರಯ ನೀಡಬೇಕು.
೩. ದೇವತೆಗಳ ಸಂಕಲ್ಪ, ಮಹಾಮಹಿಮರ ಅನುಗ್ರಹ, ವಿದ್ಯಾವಂತರ ವಿನಯ ಮತ್ತು ದುರ್ಜನರ ನಾಶಗಳು ಮಂಗಳಕಾರಿಯಾದವು.
೪. ಶ್ರದ್ಧೆಯಿಂದ ಮಾಡಿದ ಅಗ್ನಿಹೋತ್ರ, ಮೌನ, ಆಧ್ಯಯನ ಮತ್ತು ಯಜ್ಞಗಳು ಫಲಕಾರಿ. ಅಶ್ರದ್ಧೆಯಿಂದ ಮಾಡಿದಲ್ಲಿ ಅಹಿತಕಾರಿ.
ಐದು:
೧. ತಂದೆ, ತಾಯಿ, ಯಜ್ಞೇಶ್ವರ, ಆತ್ಮ ಮತ್ತು ಗುರು - ಈ ಐವರನ್ನು ಪ್ರಜ್ಞಾಪೂರ್ವಕವಾಗಿ ಗೌರವಿಸಬೇಕು.
೨. ದೇವತೆಗಳು, ಪಿತೃಗಳು, ಮನುಷ್ಯರು, ಸಂನ್ಯಾಸಿಗಳು ಮತ್ತು ಅತಿಥಿಗಳನ್ನು ಸತ್ಕರಿಸುವವರು ಕೀರ್ತಿಶಾಲಿಗಳಾಗುತ್ತಾರೆ.
೩. ಸ್ನೇಹಿತರು,   ಶತ್ರುಗಳು, ಮಧ್ಯಮರು, ಆಶ್ರಯದಾತರು ಮತ್ತು ಆಶ್ರಯ ಪಡೆದಿರುವವರು - ಇವರುಗಳು ಎಲ್ಲಿಗೆ ಹೋದರೂ ಹಿಂಬಾಲಿಸುತ್ತಾರೆ.
೪. ಪಂಚೇಂದ್ರಿಯಗಳಲ್ಲಿ ಯಾವುದೇ ಒಂದಕ್ಕೆ ಹಾನಿಯಾದರೂ (ವಿಷಯಲಾಲಸೆಗೆ ಒಳಗಾದರೂ) ಮನುಷ್ಯನ ವಿವೇಕವು ಪಾತ್ರೆಯ ರಂಧ್ರದಿಂದ ನೀರೆಲ್ಲವೂ ಸೋರಿಹೋಗುವಂತೆ ಪೂರ್ಣವಾಗಿ ನಷ್ಟವಾಗುತ್ತದೆ.
ಆರು:
೧. ಉನ್ನತ ಸ್ಥಿತಿ ಗಳಿಸಬೇಕೆಂದರೆ ನಿದ್ರೆ, ತೂಕಡಿಕೆ, ಭಯ, ಸಿಟ್ಟು, ಸೋಮಾರಿತನ ಮತ್ತು ವಿಳಂಬ ನೀತಿಯಿಂದ ದೂರವಿರಬೇಕು.
೨. ಜ್ಞಾನವನ್ನು ಹಂಚದ ಗುರು, ಅಧ್ಯಯನ ಮಾಡದ ಋತ್ವಿಜ, ದುರ್ಬಲ ರಾಜ, ಅಪ್ರಿಯವಾಧಿನಿ ಪತ್ನಿ, ಸದಾ ಊರಿನಲ್ಲೇ ಇರಬಯಸುವ ಗೋಪಾಲಕ ಮತ್ತು ವನದಲ್ಲಿ ಇರಬಯಸುವ ಕ್ಷೌರಿಕ - ಈ ಆರು ಜನರನ್ನು ಸಮುದ್ರದಲ್ಲಿ ರಂಧ್ರ ಬಿದ್ದ ನಾವೆಯಂತೆ ದೂರವಿರಿಸಬೇಕು.
೩. ಸತ್ಯ, ದಾನ, ಸೋಮಾರಿಯಾಗದಿರುವುದು, ಅಸೂಯಾಪರನಾಗದಿರುವುದು, ಕ್ಷಮಾಗುಣ, ಧೈರ್ಯ - ಈ ಗುಣಗಳನ್ನು ಎಂದಿಗೂ ಬಿಡಬಾರದು.
೪. ಮನುಷ್ಯನಿಗೆ ಸುಖ-ಸಂತೋಷಗಳನ್ನು ನೀಡುವ ಸಂಗತಿಗಳೆಂದರೆ, ಧನಪ್ರಾಪ್ತಿ, ಒಳ್ಳೆಯ ಆರೋಗ್ಯ, ಅನುಕೂಲವತಿ ಜೊತೆಗೆ ಪ್ರಿಯವಾದಿನಿ ಸತಿ, ವಿಧೇಯ ಮಗ, ಧನಸಂಪಾದನೆಗೆ ನೆರವಾಗುವ ವಿದ್ಯೆ.
೫. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹಗಳ ಮೇಲೆ ಪ್ರಭುತ್ವ ಸಾಧಿಸುವವನು ಪಾಪಗಳಿಂದ ಮುಕ್ತನಾಗಿರುತ್ತಾನೆ.
೬. ಕಳ್ಳರು ಅಜಾಗರೂಕ ಜನರಿಂದ, ವೈದ್ಯರು ರೋಗಿಗಳಿಂದ, ಕಾಮಿನಿಯರು ಕಾಮುಕರಿಂದ, ಪುರೋಹಿತರು ಯಾಗ ಮಾಡುವವರಿಂದ, ವಿವಾದಗಳಲ್ಲಿ ತೊಡಗಿರುವ ಪ್ರಜೆಗಳಿಂದ ರಾಜ ಜೀವಿತಗಳನ್ನು ಕಂಡುಕೊಳ್ಳುತ್ತಾರೆ.
೭. ಉಪೇಕ್ಷೆ ಮಾಡಿದರೆ ಗೋವು, ಸೇವೆ, ಕೃಷಿ, ಪತ್ನಿ, ವಿದ್ಯೆ, ಸೇವಕ -  ಈ ಆರು ಸಂಗತಿಗಳು ಕೈಬಿಡುತ್ತವೆ.
೮. ವಿದ್ಯಾಭ್ಯಾಸದ ನಂತರ ಶಿಷ್ಯರು ಗುರುವನ್ನು, ವಿವಾಹದ ನಂತರ ಮಕ್ಕಳು ತಾಯಿಯನ್ನು, ಕಾಮವಾಂಛೆ ತೀರಿದ ನಂತರ ಪುರುಷನು ಸ್ತ್ರೀಯನ್ನು, ಕೆಲಸ ಪೂರ್ಣವಾದನಂತರ ಅದಕ್ಕೆ ನೆರವಾದವರನ್ನು, ಹೊಳೆ ದಾಟಿದ ಮೇಲೆ ಅಂಬಿಗನನ್ನು ಮತ್ತು ಕಾಯಿಲೆ ಗುಣವಾದ ನಂತರ ರೋಗಿಯು ವೈದ್ಯನನ್ನು ಉಪೇಕ್ಷಿಸುತ್ತಾರೆ.
೯. ಸುಖವೆಂದರೆ ಆರೋಗ್ಯವಾಗಿರುವುದು, ಸಾಲರಹಿತನಾಗಿರುವುದು, ವಿದೇಶಕ್ಕೆ ಹೋಗದಿರುವುದು, ಸಜ್ಜನ ಸಹವಾಸ, ಮನಸ್ಸಿಗೆ ಒಪ್ಪುವ ಕೆಲಸ ಮತ್ತು ಸ್ವಾತಂತ್ರ್ಯ.
೧೦. ನಿತ್ಯ ದುಃಖಿಗಳಿವರು: ಅಸೂಯಾಪರರು, ದುರಾಸೆಯವರು, ಅತೃಪ್ತರು, ಶೀಘ್ರಕೋಪಿಗಳು, ಪ್ರತಿಯೊಂದನ್ನೂ ಸಂಶಯ ದೃಷ್ಟಿಯಿಂದ  ನೋಡುವವರು, ಇತರರ ಗಳಿಕೆಯಿಂದ ಬಾಳುವವರು.
     ವಿದುರ ನೀತಿಯಲ್ಲಿ ಸಜ್ಜನ-ಸಾಧಕರಿಗೆ ಇರಬೇಕಾದ ನೂರಾರು ಕಲ್ಯಾಣಕಾರಿ ಗುಣಗಳ ಬಗ್ಗೆ ಮಾಹಿತಿ, ಮಾರ್ಗದರ್ಶನಗಳು ಇದ್ದರೂ ಈ ೪-೫-೬ ಅಂಶಗಳನ್ನು ಮಾತ್ರ ಹೆಕ್ಕಿ ಲೇಖನವಾಗಿಸಿದುದರ ಕಾರಣವೆಂದರೆ, ಇದು 'ಸಂಪದ'ದಲ್ಲಿನ ನನ್ನ ೪೫೬ನೆಯ ಬರಹ!
-ಕ.ವೆಂ.ನಾಗರಾಜ್.
[ಆಧಾರ: ಮಹಾಭಾರತದ ಉದ್ಯೋಗ ಪರ್ವದ ೩೩ನೆಯ ಅಧ್ಯಾಯ.]
ಚಿತ್ರ ಕೃಪೆ: http://en.wikipedia.org/wiki/File:Vidura_and_Dhritarashtra.jpg

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ