ಜಿಲ್ಲಾಧಿಕಾರಿಯವರ ಮಾದರಿ
ಜಿಲ್ಲಾಧಿಕಾರಿ ಶ್ರೀ ಬಿ.ಕೆ.ದಾಸ್ ರವರಿಗೆ ವರ್ಗವಾಗಿ ಅವರ ಸ್ಥಾನಕ್ಕೆ ಶ್ರೀ ಬಿ.ಎನ್. ಬೆಟ್‌ಕೆರೂರರವರು ಬಂದಿದ್ದರು. ಆಹಾರ ಶಾಖೆಯಲ್ಲಿ ನಾನು ಸುಮಾರು ನಾಲ್ಕು ತಿಂಗಳು ಮಾತ್ರ ಕೆಲಸ ಮಾಡಿದ್ದು ನನ್ನನ್ನು ಜಿಲ್ಲಾಧಿಕಾರಿಯವರ ಅಭಿವೃದ್ಧಿ ಶಾಖೆಗೆ ವರ್ಗಾಯಿಸಲಾಯಿತು. ಶ್ರೀಮತಿ ಇಂದಿರಾಗಾಂಧಿಯವರ ಇಪ್ಪತ್ತು ಅಂಶಗಳ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದ ಕೆಲಸ, ಜಿಲ್ಲಾ ಆಬಿವೃದ್ದಿ ಸಮಿತಿ ಮತ್ತು ಇತರ ಸಭೆಗಳಿಗೆ ಮಾಹಿತಿ ಮತ್ತು ಪ್ರಗತಿ ವರದಿ ಸಿದ್ಧಪಡಿಸುವ ಕೆಲಸ ನನಗೆ ಕೊಡಲಾಯಿತು. ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಮತ್ತು ಜಿಲ್ಲಾ ಮಟ್ಟದ ಸಭೆಗಳು ನಡೆಯುವ ಸಂದರ್ಭಗಳಲ್ಲಿ ಸಭಾಹ್ವಾನ ಪತ್ರ ಕಳಿಸುವುದು, ಸಭಾ ಸದಸ್ಯರುಗಳ ಮಾಹಿತಿಗೆ ಅಂಕಿ ಅಂಶಗಳ ಬುಕ್ ಲೆಟ್ ತಯಾರಿಸುವುದು ದೊಡ್ಡ ಕೆಲಸವೇ ಆಗುತ್ತಿತ್ತು. ಕಲ್ಲಚ್ಚು ಯಂತ್ರದಿಂದ ಭೌತಿಕವಾಗಿ ಪ್ರತಿಗಳನ್ನು ತೆಗೆದು ಜೋಡಿಸಿ ಸುಮಾರು ೨೦೦ ಪುಟಗಳನ್ನು ಪುಸ್ತಕರೂಪದಲ್ಲಿ (೨೦೦ ಪುಸ್ತಕಗಳು) ಸಿದ್ಧಪಡಿಸಬೇಕಿತ್ತು. ಮಾಹಿತಿಗಳು ಸಕಾಲದಲ್ಲಿ ಸಿಗದೆ ಕೆಲವೊಮ್ಮೆ ಸಭೆಯ ಹಿಂದಿನ ದಿನ ರಾತ್ರಿಯೆಲ್ಲಾ ಕೆಲಸ ಮಾಡಬೇಕಾಗುತ್ತಿತ್ತು. ಇಂತಹುದೇ ಒಂದು ದಿನ ಮಧ್ಯರಾತ್ರಿ ಸುಮಾರು ೧೨-೩೦ ಆಗಿರಬಹುದು. ಸಾಯಂಕಾಲ ೫-೩೦ರ ವೇಳೆಗೇ ಕಛೇರಿಯ ಜವಾನರು ಮತ್ತು ಇತರ ಸಹೋದ್ಯೋಗಿಗಳು ಹೊರಟು ಹೋಗಿದ್ದರು. ನಾನೊಬ್ಬನೇ ಕಲ್ಲಚ್ಚು ಯಂತ್ರದಿಂದ ಮರುದಿನದ ಸಭೆಗಾಗಿ ಪ್ರತಿಗಳನ್ನು ತೆಗೆಯುತ್ತಿದ್ದೆ. ಸೊಳ್ಳೆಗಳ ಕಾಟ ಬೇರೆ. ಪ್ರತಿ ಪ್ರತಿಯ ೨೦೦ ಪ್ರತಿಗಳನ್ನು ತೆಗೆದು ಜೋಡಿಸಬೇಕಾಗಿತ್ತು. ಒಟ್ಟು ಸುಮಾರು ೧೫೦ ಪುಟಗಳಷ್ಟು ಮಾಹಿತಿ ಒಟ್ಟುಗೂಡಿಸಬೇಕಿತ್ತು. ಕಛೇರಿಯ ಅಭಿವೃದ್ಧಿ ಶಾಖೆಯ ಕೊಠಡಿಯ ದೀಪ ಉರಿಯುತ್ತಿದ್ದುದನ್ನು ಗಮನಿಸಿದ ಜಿಲ್ಲಾಧಿಕಾರಿ ಶ್ರೀ ಬಿ.ಎನ್ ಬೆಟ್‌ಕೆರೂರ್‌ರವರು (ಜಿಲ್ಲಾಧಿಕಾರಿಯವರ ನಿವಾಸ ಕಛೇರಿಯ ಎದುರಿಗೇ ಇದೆ) ನಾನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ನನ್ನ ಹಿಂದೆ ನಿಂತುದನ್ನು ನಾನು ಗಮನಿಸಿರಲಿಲ್ಲ. ಮಧ್ಯರಾತ್ರಿಯಲ್ಲಿ ಏಕಾಏಕಿ ಅವರು ನನ್ನ ಭುಜದ ಮೇಲೆ ಕೈ ಹಾಕಿದಾಗ ನಾನು ಬೆಚ್ಚಿ ಬಿದ್ದಿದ್ದೆ. ಈ ಕೆಲಸ ಜವಾನರು ಏಕೆ ಮಾಡಲಿಲ್ಲವೆಂಬ ಅವರ ಪ್ರಶ್ನೆಗೆ ಜವಾನರು ಕಛೇರಿ ಅವಧಿಯವರೆಗೆ ಮಾತ್ರ ಕೆಲಸ ಮಾಡಿದರೆಂದೂ ನಂತರದಲ್ಲಿ ನಾನೇ ಮಾಡಬೇಕಾಗಿ ಬಂದಿತೆಂದೂ ತಿಳಿಸಿದೆ. ನನಗೆ ಆಶ್ಚರ್ಯವಾಗುವಂತೆ ಜಿಲ್ಲಾಧಿಕಾರಿಯವರು ಸ್ವತಃ ಕಲ್ಲಚ್ಚು ಯಂತ್ರದಿಂದ ಪ್ರತಿಗಳನ್ನು ತೆಗೆಯುವುದೂ ಸೇರಿದಂತೆ ಬುಕ್‌ಲೆಟ್ ಜೋಡಿಸಿ ಪೂರ್ಣಗೊಳ್ಳುವವರೆಗೂ ನನ್ನೊಂದಿಗೆ ಕೈಜೋಡಿಸಿದರು. ಕಲ್ಲಚ್ಚು ಯಂತ್ರದ ಕಪ್ಪು ಮಸಿ ಅವರ ಅಂಗಿಗೂ ಹತ್ತಿತು. ಮನೆಗೆ ದೂರವಾಣಿ ಮಾಡಿ ಎರಡು ಸಲ ಚಹ ಮಾಡಿಸಿ ತರಿಸಿ ನನ್ನೊಂದಿಗೆ ಕುಡಿದರು. ಎಲ್ಲಾ ಕೆಲಸ ಮುಗಿದಾಗ ಬೆಳಗಿನ ಜಾವ ನಾಲ್ಕು ಗಂಟೆಯಾಗಿತ್ತು. ಒತ್ತಾಯ ಮಾಡಿ ಅವರ ಕಾರಿನಲ್ಲಿ ನನ್ನನ್ನು ಮನೆಗೆ ಕಳಿಸಿದ ಜಿಲ್ಲಾಧಿಕಾರಿಯವರು ಆ ದಿನ ಕಛೇರಿಗೆ ನಾನು ಬರುವ ಅಗತ್ಯವಿಲ್ಲವೆಂದೂ, ವಿಶ್ರಾಂತಿ ಪಡೆಯಬೇಕೆಂದೂ ತಿಳಿಸಿದ್ದು ಅವರ ಮಾನವೀಯ ಮುಖದ ಪರಿಚಯ ಮಾಡಿಸಿತ್ತಲ್ಲದೆ ನನ್ನ ಶ್ರಮಕ್ಕೆ ಅರ್ಥ ಕೊಟ್ಟ್ಕಿತ್ತು. ಜಿಲ್ಲಾಧಿಕಾರಿಯವರು ರಾತ್ರಿ ಸಮಯದಲ್ಲಿ ಸ್ವತಃ ನನ್ನೊಂದಿಗೆ ಕೆಲಸ ಮಾಡಿದ ವಿಷಯ ಕಛೇರಿಯ ಅಧಿಕಾರಿ ಮತ್ತು ಇತರರಿಗೆ ತಿಳಿದ ನಂತರ ಕಛೇರಿಯಲ್ಲಿ ನನ್ನ ಕೆಲಸ ಸುಲಭವಾಗತೊಡಗಿತು. ಹಣ ಇರದಿದ್ದರೂ ಆಡಿಟ್ ಆಕ್ಷೇಪಣೆ ಬರುತ್ತದೆಂದು ಗೊತ್ತಿದ್ದರೂ ಜಿಲ್ಲಾಧಿಕಾರಿಯವರು ಹಿಂದೆ ಮುಂದೆ ನೋಡದೆ ಬೇರೆ ಸಂಬಂಧಪಡದ ನಿಧಿಯಿಂದ ಯಾಂತ್ರೀಕೃತ ಬಹುಪ್ರತಿ ಸಿದ್ಧಪಡಿಸುವ ಯಂತ್ರ, ಜೆರಾಕ್ಸ್ ಯಂತ್ರ, ಇತ್ಯಾದಿಗಳನ್ನು ಮುಂದಿನ ಮೂರೇ ದಿನದಲ್ಲಿ ತರಿಸಿ ಅಭಿವೃದ್ಧಿ ಶಾಖೆಗೆ ಕೊಡಿಸಿದರು.
ಬಿಡದ ಪೋಲಿಸ್ ನಂಟು
ತುರ್ತು ಪರಿಸ್ಥಿತಿ ಹೋಗಿ ಎರಡು ವರ್ಷಗಳಾಗಿದ್ದರೂ ಅದರ ಛಾಯೆ ಹೋಗಿರಲಿಲ್ಲ. ಕರ್ನಾಟಕದಲ್ಲಿನ್ನೂ ಕಾಂಗ್ರೆಸ್ ಸರ್ಕಾರವಿತ್ತು. ನಮಸ್ಕಾರ ಮಾಡದಿದ್ದಕ್ಕೆ ನನ್ನ ಮೇಲೆ ಕೇಸು ಹಾಕಲು ಹೋಗಿ ಮುಖಭಂಗ ಅನುಭವಿಸಿದ್ದ ಎ.ಎಸ್.ಐ. ಮಹಾಶಯನಿಗೆ ನನ್ನ ಮೇಲೆ ಮುನಿಸು ಹೋಗಿರಲಿಲ್ಲ. ೧೫ ದಿನಗಳಿಗೆ ಒಮ್ಮೆ ಕಾನೂನು-ಸುವ್ಯವಸ್ಥೆ ಬಗ್ಗೆ ಜಿಲ್ಲಾ ದಂಡಾಧಿಕಾರಿಯವರಿಗೆ ರಹಸ್ಯ ವರದಿಗಳು ಆರಕ್ಷಕ ಅಧಿಕಾರಿಗಳಿಂದ ಸಲ್ಲಿಕೆಯಾಗುತ್ತಿದ್ದು ಆ ವರದಿಗಳಲ್ಲಿ ನಾನು ಆರೆಸ್ಸೆಸ್ ಚಟುವಟಿಕಗಳಲ್ಲಿ ಭಾಗವಹಿಸುತ್ತಿದ್ದ ಬಗ್ಗೆ ಕಲ್ಪಿತ ವರದಿಗಳೂ ಇರುತ್ತಿದ್ದವು. ನನ್ನನ್ನು ೪ ತಿಂಗಳ ಅವಧಿಗೆ ಬೆಂಗಳೂರಿಗೆ ಲೆಕ್ಕಪತ್ರಗಳು, ಅಭಿವೃದ್ದಿ ನಿಯಮಗಳ ಕುರಿತು ತರಬೇತಿಗೆ ನಿಯೋಜಿಸಿದ್ದ ಅವಧಿಯಲ್ಲೂ ಹಾಸನದಲ್ಲಿ ವಿವಿಧ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸಿದ ಬಗ್ಗೆ ರಹಸ್ಯ ವರದಿಗಳಿದ್ದವು. ತರಬೇತಿ ಮುಗಿಸಿಕೊಂಡು ಬಂದ ನಂತರದಲ್ಲೂ ಇಂತಹ ವರದಿ ಮುಂದುವರೆಯುತ್ತಿದ್ದು ತಡವಾಗಿ ನನ್ನ ಗಮನಕ್ಕೆ ಬಂತು. ಆಗ ನಮ್ಮ ಕಛೇರಿಯ ವ್ಯವಸ್ಥಾಪಕರಾಗಿದ್ದವರು ಶ್ರೀ ರಮೇಶರಾವ್. ಅವರು ನನ್ನನ್ನು, ನನ್ನ ಕೆಲಸವನ್ನು ಬಹಳ ಮೆಚ್ಚಿಕೊಂಡಿದ್ದವರು, ಪ್ರೀತಿ ವಿಶ್ವಾಸಗಳಿಂದ ಕಾಣುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಅವರೂ ನನ್ನ ವಿರುದ್ಧದ ಪೋಲಿಸ್ ವರದಿಗಳ ಬಗ್ಗೆ ವಿಷಯ ತಿಳಿದು ನೊಂದುಕೊಂಡರು. ನನ್ನನ್ನು ಒಂದು ಭಾನುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಶ್ರೀ ಬೆಟ್‌ಕೆರೂರ್‌ರವರ ಮನೆಗೆ ಕರೆದುಕೊಂಡು ಹೋಗಿ ಸುಳ್ಳು ವರದಿಗಳ ಬಗ್ಗೆ ಗಮನಿಸಬೇಕೆಂದು ಕೋರಿದರು. ನನ್ನ ಒಳ್ಳೆಯತನದ ಬಗ್ಗೆ ಬಿಡಿಸಿ ಹೇಳುತ್ತಾ ಗದ್ಗದಿತರಾಗಿ ಕಣ್ಣೀರು ಹಾಕಿದ್ದು ಕಂಡು ನನಗೆ ಒಂದು ತರಹ ಮುಜುಗರವಾಯಿತು. ಅವರ ನಿಷ್ಕಳಂಕ ವಿಶ್ವಾಸದ ಪರಿಚಯ ನನಗಾಯಿತು. ನಾನೇ ಅಂತಹ ವರದಿ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಜಿಲ್ಲಾಧಿಕಾರಿಯವರಿಗೂ ನನ್ನ ಕೆಲಸದ ಬಗ್ಗೆ ಸದಭಿಪ್ರಾಯವಿತ್ತು. ತರಬೇತಿಗೆ ಬೆಂಗಳೂರಿಗೆ ಹೋಗಿದ್ದ ಅವಧಿಯಲ್ಲೂ ಸುಳ್ಳು ವರದಿ ಬಂದಿದ್ದುದನ್ನು ನೋಡಿ ಖಚಿತಪಡಿಸಿಕೊಂಡ ಜಿಲ್ಲಾಧಿಕಾರಿಯವರು ಆರಕ್ಷಕ ಅಧಿಕಾರಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಸಂಬಂಧಿಸಿದ ಪೋಲಿಸ್ ಮಹಾಶಯ ಮತ್ತೊಮ್ಮೆ ಛೀಮಾರಿ ಹಾಕಿಸಿಕೊಂಡನೆಂದು ತಿಳಿಯಿತು. ಅಂದಿನಿಂದ ನನ್ನ ವಿರುದ್ಧ ಬರುತ್ತಿದ್ದ ವರದಿಗಳಿಗೆ ಪೂರ್ಣವಿರಾಮ ಬಿದ್ದಿತ್ತು.
(ಕಾಲಘಟ್ಟ: 1978, ಸ್ಥಳ: ಹಾಸನ).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ