ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಡಿಸೆಂಬರ್ 28, 2012

ಭಗತ್ ಸಿಂಗ್ - ಮತೀಯವಾದ ಮರೆ ಮಾಡುತ್ತಿರುವ ಇತಿಹಾಸ


      ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಭಗತ್ ಸಿಂಗ್ ಗಲ್ಲಿಗೇರಿದಾಗ ಅವನ ವಯಸ್ಸು ಕೇವಲ 23 ವರ್ಷಗಳು. ಬ್ರಿಟಿಷರ ಕುತಂತ್ರ, ಮುಸಲ್ಮಾನರ ಪ್ರತ್ಯೇಕ ರಾಷ್ಟ್ರಕ್ಕಾಗಿ ಮಹಮದಾಲಿ ಜಿನ್ನಾ ಒತ್ತಾಯ, ಒತ್ತಡಕ್ಕೆ ಮಣಿದ ಗಾಂಧೀಜಿಯಂತಹ ನಾಯಕರುಗಳ ಕಾರಣದಿಂದ ಭಾರತದ ವಿಭಜನೆ ಮತ್ತು ಆ ತರುಣದಲ್ಲೇ ನಡೆದ ಭೀಕರ ಕೋಮು ದಳ್ಳುರಿ ದೇಶವನ್ನು ದಹಿಸಿತು, ಸ್ವಾತಂತ್ರ್ಯ ಪ್ರೇಮಿಗಳ ಅಸಹಾಯಕತೆಯ ಕಂಬನಿ ಸುರಿಯಿತು. ಭಗತ್ ಸಿಂಗನಂತಹ ವೀರರ ಬಲಿದಾನವಾಗದಿದ್ದರೆ, ಜಿನ್ನಾರಂತಹವರು ಪಾಕಿಸ್ತಾನದ ಬೇಡಿಕೆ ಮುಂದಿಡಲಾಗುತ್ತಿರಲಿಲ್ಲ. ದೇಶ ವಿಭಜನೆಯಾದಾಗ ಭಗತ್ ಸಿಂಗನ ತವರೂರು ಫೈಸಲಾಬಾದಿನ ಲಿಲ್ಲಾಪುರಬಾಂಗೆ ಪಾಕಿಸ್ತಾನದ ಭಾಗವಾಯಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗ. ಆದರೆ ಅವನ ಹೆಸರನ್ನು, ನೆನಪನ್ನು ಮರೆ ಮಾಡುವ ವ್ಯವಸ್ಥಿತ ಷಡ್ಯಂತ್ರ ಪಾಕಿಸ್ತಾನದಲ್ಲಿ ಸಾಗಿದೆ. ದೇಶ ವಿಭಜನೆಯಾದಾಗ ಪಾಕಿಸ್ತಾನದ ಭಾಗದಲ್ಲಿದ್ದ ಹಿಂದೂಗಳ ಮೇಲೆ ನಡೆದ ದೌರ್ಜನ್ಯ, ಆ ಕಾರಣದಿಂದ ಪಾಕಿಸ್ತಾನದಿಂದ ಭಾರತದ ಭಾಗಕ್ಕೆ ವಲಸೆ ಬಂದ ಹಿಂದೂಗಳ ಸಂಖ್ಯೆ ಅಗಣಿತ. ಈಗ ಪಾಕಿಸ್ತಾನದಲ್ಲಿನ ಹಿಂದೂಗಳ ಸಂಖ್ಯೆ ವಿಭಜನಾಪೂರ್ವದಲ್ಲಿದ್ದವರ ಸಂಖ್ಯೆಯ ಶೇ. 10ಕ್ಕಿಂತಲೂ ಕಡಿಮೆ. ಅವರು ಎರಡನೆಯ ದರ್ಜೆಯ ನಾಗರಿಕರಂತೆ ಬಾಳಬೇಕಾಗಿದೆ. ಪಾಕಿಸ್ತಾನದಲ್ಲಿ ಕಟ್ಟರ್ ಮತೀಯವಾದ ಪರಧi ಸಹಿಷ್ಣುತೆಯನ್ನು ದೂರವಿರಿಸಿದ್ದರೆ, ಭಾರತದಲ್ಲಿ ಇಂತಹ ವಾಸ್ತವ ಸಂಗತಿಗಳನ್ನು ಮಾತನಾಡುವವರನ್ನು ಇಲ್ಲಿನ ಜಾತ್ಯಾತೀತವಾದಿಗಳೆನಿಸಿಕೊಂಡವರು ಹೀಯಾಳಿಸುವ ಪ್ರವೃತ್ತಿ ಹೊಂದಿದ್ದಾರೆ. ಕಟು ವಾಸ್ತವ ಇತಿಹಾಸದ ಮೇಲೆ ಪೊರೆ ಮುಸುಕುವುದಕ್ಕೆ, ಬರೆ ಎಳೆಯುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕಿಲ್ಲ. 
     ಭಗತ್ ಸಿಂಗ್ ಒಬ್ಬ ಮಾನವತಾವಾದಿ. ಮಾನವತೆಯನ್ನು ಗೌರವಿಸದ ಧರ್ಮ ಧರ್ಮವೆಂದೆನ್ನಬಹುದೇ? ಭಗತ್ ಸಿಂಗ್ ಸಾಯುವ ಮುನ್ನ ವ್ಯಕ್ತಪಡಿಸಿದ್ದ ಬಯಕೆಗಳಲ್ಲಿ ಒಂದು ತಾನು ಇದ್ದ ಜೈಲಿನ ಕೊಠಡಿಯ ಶೌಚಾಲಯದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಕೆಳವರ್ಗದ ಹೆಣ್ಣುಮಗಳ ಕೈಯಿಂದ ರೊಟ್ಟಿ ತಿನ್ನಬೇಕು ಅನ್ನುವುದು. ಅದಕ್ಕೆ ಅವನು ಕೊಟ್ಟಿದ್ದ ಕಾರಣವೆಂದರೆ ತಾನು ಚಿಕ್ಕ ಮಗುವಾಗಿದ್ದಾಗ ತನ್ನ ಹೇಸಿಗೆಯನ್ನು ತೊಳೆದು ಸ್ವಚ್ಛ ಮಾಡುತ್ತಿದ್ದವಳು ಹೆತ್ತ ತಾಯಿಯಾದರೆ, ಜೈಲಿನ ತನ್ನ ಕೊಠಡಿಯ ಶೌಚಾಲಯದ ಹೇಸಿಗೆ ತೊಳೆಯುತ್ತಿದ್ದವಳೂ ಅಮ್ಮನೇ ಆಗಬೇಕು ತಾನೇ! ಅವನು ಆಕೆಯನ್ನು ಸಂಬೋಧಿಸುತ್ತಿದ್ದುದೂ ಅಮ್ಮ ಎಂದೇ! ಅವನು ಎಂತಹ ವ್ಯಕ್ತಿತ್ವದವನು ಎಂಬುದಕ್ಕೆ ಈ ಉದಾಹರಣೆ ಸಾಕು. ಭಗತ್ ಸಿಂಗ್, ರಾಜಗುರು, ಸುಖದೇವರನ್ನು ಗಲ್ಲಿಗೇರಿಸಿದ ಲಾಹೋರಿನ ಐತಿಹಾಸಿಕ ಜೈಲನ್ನು ಪಾಕಿಸ್ತಾನ1961ರಲ್ಲಿ ಕೆಡವಿ ಹಾಕಿತು. ಲಾಹೋರ್ ಜೈಲಿನ ಸಮೀಪದ ವೃತ್ತಕ್ಕೆ 1947ರವರೆಗೂ ಭಗತ್ ಸಿಂಗನ ಹೆಸರಿತ್ತು. ಪಾಕಿಸ್ತಾನದ ಉದಯದ ನಂತರ ಭಗತ್ ಸಿಂಗ್ ಮುಸ್ಲಿಮನಲ್ಲವೆಂಬ ಕಾರಣಕ್ಕೆ ಆ ಹೆಸರನ್ನು ಶಾದ್ ಮಾನ್ ಚೌಕವೆಂದು ಬದಲಿಸಲಾಯಿತು. ಭಗತ್ ಸಿಂಗ್ ಮತ್ತು ಅವನ ಸಹಚರರನ್ನು ಕದ್ದು ಮುಚ್ಚಿ ಗಲ್ಲಿಗೇರಿಸಿದ ನಂತರ ಬ್ರಿಟಿಷರು ಅವರ ದೇಹಗಳನ್ನು ಈಗ ಭಾರತದ ಭಾಗವಾಗಿರುವ ಫಿರೋಜಪುರ ಜಿಲ್ಲೆಯ ಗಾಂದಾ ಸಿಂಗಾವಾಲಾ ಎಂಬ ಗ್ರಾಮದಲ್ಲಿ ಸುಟ್ಟು ಹಾಕಿದ್ದರು. ಲಾಹೋರಿನ ಜನರು ಧಾವಿಸಿ ಅರೆಸುಟ್ಟ ದೇಹಗಳ ಅವಶೇಷಗಳು, ಬೂದಿಯನ್ನು ಲಾಹೋರಿಗೆ ತಂದು ವಿಧಿವತ್ತಾಗಿ ಅಂತ್ಯ ಸಂಸ್ಕಾರ ಮಾಡಿದ್ದು ಇತಿಹಾಸ. ಆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದವರ ಸಂಖ್ಯೆ ಐವತ್ತು ಸಾವಿರವಾಗಿತ್ತೆಂದರೆ ಅವನ ಕುರಿತು ಅಲ್ಲಿನವರು ಎಂತಹ ಭಾವನೆ ಹೊಂದಿದ್ದರೆಂದು ಸೂಚಿಸುತ್ತದೆ. 26-03-1931ರಂದು ಹುತಾತ್ಮರ ಗೌರವಾರ್ಥ ಲಾಹೋರ್ ಬಂದ್ ಆಚರಿಸಲಾಗಿತ್ತು.  ಇತ್ತೀಚೆಗೆ ಭಗತ್ ಸಿಂಗನ 105ನೆಯ ಹುಟ್ಟುಹಬ್ಬದ ನೆನಪಿನಲ್ಲಿ ಶಾದ್ ಮಾನ್ ಚೌಕಕ್ಕೆ ಭಗತ್ ಸಿಂಗನ ಹೆಸರಿಡಲು ತೀರ್ಮಾನಿಸಲಾಗಿತ್ತು. ಭಗತ್ ಸಿಂಗ್ ಮುಸ್ಲಿಮನಲ್ಲವಾದ್ದರಿಂದ ಅವನ ಹೆಸರನ್ನು ಇಡಬಾರದೆಂದು ಕಟ್ಟರ್ ಮತೀಯವಾದಿ ಸಂಘಟನೆ ಜಮಾ ಉದ್ ದವಾ ನೀಡಿದ ಎಚ್ಚರಿಕೆಗೆ ಮಣಿದ ಸರ್ಕಾರ ತೀರ್ಮಾನ ಕೈಬಿಟ್ಟಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಇತಿಹಾಸದ ಅವಿಭಾಜ್ಯ ಅಂಗವೆನ್ನುವುದನ್ನು ಮರೆಯಬಾರದು. ಯಾವುದೋ ಹೊರದೇಶದ ಸರ್ವಾಧಿಕಾರಿ ಗಡ್ಡಾಫಿಯ ಹೆಸರನ್ನು ಅವನು ಮುಸ್ಲಿಮನೆಂಬ ಕಾರಣಕ್ಕೆ ಸ್ಟೇಡಿಯಮ್ಮಿಗೆ  ಇಡುತ್ತಾರೆ. ಆದರೆ ದೇಶದವನೇ ಆದ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರನಿಗೆ ಅವನು ಮುಸ್ಲಿಮನಲ್ಲವೆಂಬ ಕಾರಣಕ್ಕೆ ಅಗೌರವಿಸುತ್ತಾರೆ. ಇದು ಮಾನವತೆಗೆ, ಇತಿಹಾಸಕ್ಕೆ ಮಾಡುವ ಅಪಚಾರ. ಇಂತಹ ಅಪಚಾರ ಮಾಡುವ ಜಾತ್ಯಾತೀತರು ಎಂದು ಕರೆದುಕೊಂಡು ಆ ಪದಕ್ಕೆ ಅವಮಾನ ಮಾಡುವವರು ನಮ್ಮಲ್ಲೂ ಇದ್ದಾರೆ. ಅಂಡಮಾನ್ ಜೈಲಿನಲ್ಲಿರುವ ಸ್ಮಾರಕದಲ್ಲಿರುವ ವೀರ ಸಾವರ್ಕರರ ಹೆಸರನ್ನು ಅಳಿಸುವ ಅಪಚಾರ ಮಾಡಿದವರು ಕೇಂದ್ರದ ಆಡಳಿತ ಪಕ್ಷದ ನಾಯಕಮಣಿಗಳಲ್ಲಿ ಒಬ್ಬರಾಗಿದ್ದಾರೆ! ಇಂತಹ ಸ್ಥಿತಿಗೆ ಮರುಗಿ ನಿಟ್ಟುಸಿರು ಬಿಟ್ಟರಷ್ಟೇ ಸಾಕೇ? ಚಿಂತಿಸಿ. ಭಗತ್ ಸಿಂಗ್, ರಾಜಗುರು, ಸುಖದೇವ್, ಸಾವರ್ಕರರಂತಹ ಅಸಂಖ್ಯ ಬಲಿದಾನಿಗಳಿಗೆ ಅಗೌರವ ಸಲ್ಲಿಸುವವರಿಗೆ ಪಾಠ ಕಲಿಸಬೇಕಿದೆ. ಆದರೆ . . . . . . . ??????
-ಕ.ವೆಂ.ನಾಗರಾಜ್.

5 ಕಾಮೆಂಟ್‌ಗಳು:

  1. ಆತ್ಮೀಯ ನಾಗರಾಜ್,
    ಉತ್ತಮವಾದ ಮಾಹಿತಿ. ಇಂದಿನ ನಮ್ಮ ನಾಯಕರುಗಳೆಂದು ಕರೆಸಿಕೊಳ್ಳುವ ಮಂದಿಗೇನು ಗೊತ್ತು ಸ್ವಾತಂತ್ರ ಸಂಗ್ರಾಮದ ವೀರಯೋಧರ ಬಲಿದಾನ? ಕೇವಲ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸುವ ನಾಯಕರ ಜೊತೆಗೆ ನಮ್ಮ ಜನರು ಕೈಜೋಡಿಸಿರುವುದು ವಿಪರ್ಯಾಸ. ಇನ್ನು ಸ್ವಲ್ಪ ಜನ ದೇಶಾಭಿಮಾನದ ಕೂಗನ್ನು ಹುಟ್ಟಿಸುವವರು ಇದ್ದಾರೆ ಅದೇ ಸಮಾಧಾನ.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಸುಮ್ಮನಿರುವ ಬದಲು ನಮ್ಮ ಅಭಿಪ್ರಾಯ ದಾಖಲಿಸುವ, ದೇಶದ್ರೋಹಿಗಳ ವಿರುದ್ಧ ದ್ವನಿಯೆತ್ತುವ ಕೆಲಸವನ್ನಾದರೂ ನಾವು, ನೀವು ಮಾಡಬಹುದು. ಧನ್ಯವಾದ, ಆತ್ಮೀಯ ಪ್ರಕಾಶರೇ

    ಪ್ರತ್ಯುತ್ತರಅಳಿಸಿ
  3. ಉತ್ತಮ ಮಾಹಿತಿ ಸರ್, ಅವರಲ್ಲಿನ ವಿಶೇಷ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಆ ಉದಾತ್ತ ಚೇತನಗಳನ್ನು ಗೌರವಿಸೋಣ.

    ಪ್ರತ್ಯುತ್ತರಅಳಿಸಿ
  4. Dhanyavad Sir namge yallarigu alidu hod mahiti yannu nendu hakidakke dhanyavad. ennu kelvandu mahitigalu namm uva piligege hottilla adu kuda tilisidre channagirutte..
    .Sudhir.

    ಪ್ರತ್ಯುತ್ತರಅಳಿಸಿ