ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಆಗಸ್ಟ್ 14, 2013

ವಿವೇಕಾನಂದ - ಯುವಶಕ್ತಿಯ ಸಂಕೇತ

     ಯಜುರ್ವೇದದ ಒಂದು ಮಂತ್ರ ಹೇಳುತ್ತದೆ: ಜೀವೇಮ ಶರದಃ ಶತಂ - ನೂರು ವರ್ಷಗಳ ಕಾಲ ಜೀವಿಸೋಣ; ಪಶ್ಶೇಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ನೋಡೋಣ; ಶೃಣುಯಾಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ಕೇಳೋಣ; ಪ್ರಬ್ರವಾಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯ ಮಾತುಗಳನ್ನಾಡೋಣ; ಅದೀನಾ ಸ್ಯಾಮ ಶರದಃ ಶತಂ - ನೂರು ವರ್ಷಗಳ ಕಾಲ ಸ್ವತಂತ್ರವಾಗಿ, ಆತ್ಮಗೌರವದಿಂದ ಜೀವಿಸೋಣ; ಭೂಯಶ್ಚ ಶರದಃ ಶತಾತ್ - ಈ ರೀತಿಯಲ್ಲಿ ನೂರು ವರ್ಷಗಳಿಗೂ ಹೆಚ್ಚು ಕಾಲ ಜೀವಿಸಿರೋಣ. ಸ್ವಾಮಿ ವಿವೇಕಾನಂದರ ೧೫೦ನೆಯ ಜನ್ಮ ವರ್ಷಾಚರಣೆಯನ್ನು ದೇಶಾದ್ಯಂತ, ಅಷ್ಟೇ ಏಕೆ, ವಿದೇಶಗಳಲ್ಲೂ ಕೂಡ ಇಡೀ ವರ್ಷ ಆಚರಣೆ ಮಾಡುತ್ತಿದ್ದೇವೆ. ಜನ್ಮ ವರ್ಷಾಚರಣೆಯನ್ನು ವರ್ಷಕ್ಕೆ ಒಂದು ಸಲ ಮಾಡುತ್ತೇವೆ. ವಿವೇಕಾನಂದರು ಇಹಲೋಕ ತ್ಯಜಿಸಿ ೧೧೦ ವರ್ಷಗಳ ಮೇಲೆ ಆಗಿದೆ. ಇಂದಿಗೂ ಸಹ ಅವರನ್ನು ನೆನಪಿಸಿಕೊಳ್ಳುತ್ತೇವೆ.  ವೇದ ಮಂತ್ರ ಹೇಳುವಂತೆ ಅವರು ನೂರು ವರ್ಷಗಳಿಗಿಂತ ಹೆಚ್ಚು ಕಾಲ ಜೀವಿಸುವುದು ಎಂದರೆ ಇದೇ! ಬಹುಷಃ ಯಾವುದೇ ವ್ಯಕ್ತಿಯನ್ನು, ಶಕ್ತಿಯನ್ನು ವಿವೇಕಾನಂದರನ್ನು ಸ್ಮರಿಸಿಕೊಂಡಷ್ಟು ಸ್ಮರಿಸಿಕೊಂಡಿರಲಿಕ್ಕಿಲ್ಲ. ಅವರು ಬಾಳಿದ ರೀತಿ, ಜಗತ್ತಿಗೆ ಅವರು ನೀಡಿದ ಮಾರ್ಗದರ್ಶನ ವಿಭಿನ್ನ ರೀತಿಯದಾಗಿದ್ದು ಅಷ್ಟೊಂದು ಪ್ರಭಾವಿಯಾಗಿದ್ದುದರಿಂದಲೇ ಅವರು ಇನ್ನೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವುದಕ್ಕೆ ಕಾರಣವಾಗಿದೆ. ಅವರ ಜನ್ಮದಿನವಾದ ಜನವರಿ ೧೨ ಅನ್ನು ಪ್ರತಿವರ್ಷ ರಾಷ್ಟ್ರೀಯ ಯುವ ದಿವಸವಾಗಿ ಆಚರಣೆ ಮಾಡಲಾಗುತ್ತಿದೆ. ನಿಜಕ್ಕೂ ಇದು ಆ ಧೀರ ಸಂನ್ಯಾಸಿಗೆ ಸಲ್ಲತಕ್ಕಂತ, ಸಲ್ಲಬೇಕಾದ ಗೌರವವೇ ಆಗಿದೆ.
     ವಿವೇಕಾನಂದರು ಯುವಶಕ್ತಿಯ ಸಂಕೇತವಾಗಿದ್ದಾರೆ. ಯುವಕರಿಗೆ ಗೌರವದ ಸಂಕೇತವಾಗಿದ್ದಾರೆ. ಅವರ ವಿಚಾರಗಳು ಆಧ್ಯಾತ್ಮಿಕತೆ, ಆಧುನಿಕತೆ, ಮಾನವತೆ, ವಾಸ್ತವತೆಗಳ ಹದವಾದ ಮಿಶ್ರಣದಿಂದ ಕೂಡಿದ್ದು ಜನರ ಹೃದಯವನ್ನು ತಟ್ಟುವಂತಿರುವುದರಿಂದಲೇ ಅವರು ನಮ್ಮೆಲ್ಲರಿಗೆ ಅತ್ಯಂತ ಪ್ರಿಯರಾಗಿದ್ದಾರೆ. ಅವರ ಜೀವನದ ರೀತಿ ಮತ್ತು ಸಾಧನೆಗಳು ನಮ್ಮ ದೇಶದ ಯುವಪೀಳಿಗೆಗೆ ಸದಾ ಕಾಲ ಮಾರ್ಗದರ್ಶಿಯಾಗಿರುತ್ತವೆ. ಕೇವಲ ೩೯ ವರ್ಷಗಳು ಬಾಳಿದ ವಿವೇಕಾನಂದರು ವಯಸ್ಸಿನಲ್ಲಿ ಯುವಕರು, ಆದರೆ ವೈಚಾರಿಕತೆಯಲ್ಲಿ ಶಾಶ್ವತರು. ವಿವೇಕಾನಂದರು ಯುವಕರಿಗೆ ಆದರ್ಶಪ್ರಾಯರು ಅನ್ನಿಸಿಕೊಳ್ಳುವುದಕ್ಕೆ ಮುಖ್ಯವಾದ ಕಾರಣವೆಂದರೆ ಅವರು ವಿಶ್ವಮಾನವಧರ್ಮಿಯಾಗಿರುವುದು. ಅವರು ಸ್ವಧರ್ಮವನ್ನು ಪಾಲಿಸುವುದರೊಂದಿಗೆ, ಪ್ರೀತಿಸುವುದರೊಂದಿಗೆ ಇತರ ಧರ್ಮಗಳ ಕುರಿತೂ ವಿಶಾಲವಾದ ದೃಷ್ಟಿಕೋನವನ್ನು ಹೊಂದಿದ್ದೂ ಸಹ ಕಾರಣವಾಗಿದೆ. ಅವರ ಎಲ್ಲಾ ಉಪನ್ಯಾಸಗಳು ಪ್ರೀತಿ, ಮಾನವತೆ, ಧರ್ಮಗಳಲ್ಲಿ ಇರಬೇಕಾದ ಸಮನ್ವಯತೆ, ದುರ್ಬಲತೆಯ ಖಂಡನೆ, ಆಧ್ಯಾತ್ಮಿಕತೆ ಹಾಸುಹೊಕ್ಕಿರುವ ರಾಷ್ಟ್ರೀಯತೆಗಳನ್ನೇ ಒತ್ತಿಹೇಳುತ್ತವೆ. ಪ್ರಚಂಡ ದೇಶಪ್ರೇಮಿ ವಿವೇಕಾನಂದರದು ಅತ್ಯಂತ ಹೆಚ್ಚು ಯುವಕರಿಗೆ ಸರ್ವಸಮ್ಮತವಾಗಿ ಒಪ್ಪಿತವಾದಂತಹ ವ್ಯಕ್ತಿತ್ವ. ಅವರು ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದರು, "ಯಾವನೇ ಹಿಂದು ಮುಸ್ಲಿಮನಾಗಿ ಪರಿವರ್ತಿತನಾಗಬಾರದು ಮತ್ತು ಯಾವನೇ ಮುಸ್ಲಿಮ್ ಹಿಂದು ಆಗಬೇಕಿಲ್ಲ. ಒಬ್ಬ ಹಿಂದೂ ನೈಜ ಹಿಂದೂ, ಉತ್ತಮ ಹಿಂದೂ ಆಗಬೇಕು. ಹಾಗೆಯೇ ಒಬ್ಬ ಮುಸ್ಲಿಮ್ ಉತ್ತಮ ಮುಸ್ಲಿಮ್ ಆಗಬೇಕು. ಪ್ರತಿಯೊಂದು ಧರ್ಮವೂ ಇನ್ನೊಂದು ಧರ್ಮದ ಒಳ್ಳೆಯತನಕ್ಕೆ ಅವಕಾಶ ನೀಡುವ ಉದಾತ್ತತೆ ಹೊಂದಿರಬೇಕು." ಈಗಿನ ರಾಜಕಾರಣಿಗಳ ಕಪಟ ಜಾತ್ಯಾತೀತತೆಯನ್ನು ಕಂಡು ರೋಸಿಹೋಗಿರುವ ನಮಗೆ ವಿವೇಕಾನಂದರ ಈ ವಿಚಾರ ಬೆಳಕಿನಂತೆ ಕಾಣುತ್ತದೆ. ಒಂದು ಧರ್ಮದವರನ್ನು ಓಲೈಸಿ, ಪರಸ್ಪರರನ್ನು ಎತ್ತಿಕಟ್ಟುವ ರಾಜಕಾರಣಿಗಳು ತಾವೇ ಹೇಳುವ ಜಾತ್ಯಾತೀತತೆಗೆ ಕಪ್ಪುಚುಕ್ಕಿಗಳಾಗಿದ್ದಾರೆ.
     ನಮ್ಮ ದೇಶದ ಮಾನವನ್ನು ನಮ್ಮ ದೇಶದ ನಾಯಕರುಗಳು ಎನಿಸಿಕೊಂಡವರೇ ದೇಶ ವಿದೇಶಗಳಲ್ಲಿ ಹರಾಜು ಹಾಕುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಯುವಶಕ್ತಿ ಮೈಕೊಡವಿ ಮೇಲೇಳಬೇಕಾಗಿದೆ. ಅಮೆರಿಕಾದ ನಮ್ಮ ರಾಯಭಾರ ಕಛೇರಿಯಲ್ಲಿನ ಮಾಹಿತಿಗಳನ್ನು ಅಮೆರಿಕಾ ಸರ್ಕಾರ ಗೂಢಚಾರಿಕೆ ನಡೆಸಿ ಪಡೆದ ಕಾರ್ಯವನ್ನು ನಮ್ಮ ವಿದೇಶಾಂಗ ಸಚಿವರೇ ಸಮರ್ಥಿಸುತ್ತಾರೆ. ೧೯೬೨ರಲ್ಲಿ ಚೀನಾ ನಮ್ಮ ದೇಶದ ಬಹುದೊಡ್ಡ ಭಾಗವನ್ನು ಆಕ್ರಮಿಸಿಕೊಂಡಾಗ ಅಂದಿನ ನಮ್ಮ ಪ್ರಧಾನಿಯವರು 'ಆ ಭಾಗದಲ್ಲಿ ಹುಲ್ಲೂ ಸಹ ಬೆಳೆಯುವುದಿಲ್ಲ, ಅದಕ್ಕಾಗಿ ಚಿಂತಿಸಬೇಕಿಲ್ಲ' ಎಂದಿದ್ದರು. ಪಾಕ್ ಸೈನಿಕರು ನಮ್ಮ ಗಡಿಯೊಳಗೆ ನುಗ್ಗಿ ನಮ್ಮ ಸೈನಿಕರನ್ನು ಕೊಂದಾಗ, 'ಹಾಗೆ ಕೊಂದವರು ಪಾಕ್ ಸೈನಿಕರ ವೇಷದಲ್ಲಿದ್ದ ಉಗ್ರಗಾಮಿಗಳು' ಎಂದು ನಮ್ಮ ರಕ್ಷಣಾ ಸಚಿವರೇ ಲೋಕಸಭೆಯಲ್ಲಿ ಘೋಷಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ವಿವೇಕಾನಂದರ ನುಡಿಗಳು ಅತ್ಯಂತ ಪ್ರಸಕ್ತವೆನಿಸುತ್ತದೆ ಎಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ಯುವಕರ ಸುಪ್ತ ಚೈತನ್ಯವನ್ನು ಬಡಿದೆಬ್ಬಿಸಲು ವಿವೇಕಾನಂದರ ವಿಚಾರಗಳು, ರೀತಿ-ನೀತಿಗಳನ್ನು ನಮ್ಮ ಯುವಕರು ಅಧ್ಯಯನ ಮಾಡಬೇಕಿದೆ, ಪಾಲಿಸಬೇಕಾಗಿದೆ. ಒಬ್ಬ ಪ್ರಚಂಡ ದೇಶಪ್ರೇಮಿಯಾದ ವಿವೇಕಾನಂದರ ಬಗ್ಗೆ ವಿನೋಬಾ ಭಾವೆಯವರು ಹೇಳಿದಂತೆ, "ವಿವೇಕಾನಂದರು ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟವರು, ಹಾಗೆಯೇ ನಮ್ಮ ದೌರ್ಬಲ್ಯಗಳನ್ನೂ ಎತ್ತಿ ತೋರಿಸಿ ಅವುಗಳನ್ನು ಹೇಗೆ ನಿವಾರಿಸಿಕೊಳ್ಳಬೇಕೆಂದು ಹೇಳಿಕೊಟ್ಟವರು". ಸ್ವತಃ ವಿವೇಕಾನಂದರೇ ಸಾರಿ ಸಾರಿ ಹೇಳುತ್ತಿದ್ದರು, "ನನ್ನ ನಂಬಿಕೆ ಇರುವುದು ಯುವಕರಲ್ಲಿ, ಹೊಸ ಪೀಳಿಗೆಯಲ್ಲಿ! ಎಲ್ಲಾ ಸಮಸ್ಯೆಗಳನ್ನು ಸಿಂಹಗಳಂತೆ ಎದುರಿಸಿ ಜಯಿಸುವವರು ಅವರೇ!" ಅಣ್ಣಾ ಹಜಾರೆಯವರು ಭ್ರಷ್ಠಾಚಾರದ ವಿರುದ್ಧ ಸಮರ ಸಾರಿದಾಗ ದೇಶದ ಯುವಜನತೆ ಎದ್ದು ನಿಂತಿದ್ದನ್ನು ಕಂಡಾಗ ನಮಗೆ ಏನೋ ಒಂದು ಆಶಾಭಾವನೆ ಚಿಗುರು ಒಡೆದಿತ್ತು. ಆದರೆ ಕಪ್ಫುಹಣದ ಪ್ರಾಬಲ್ಯ ಆ ಚಳುವಳಿಯನ್ನು ಮೆಟ್ಟಿನಿಂತಾಗ ಆ ಭರವಸೆಯ ಗುಳ್ಳೆ ಒಡೆದುಹೋಯಿತೇನೋ ಅನ್ನಿಸುತ್ತದೆ. ಹೋರಾಟದ ಕಿಚ್ಚು ನಮ್ಮ ಯುವಕರಲ್ಲಿ ಸುಪ್ತವಾಗಿದೆ ಅನ್ನುವುದಕ್ಕೆ ಆ ಚಳುವಳಿ ಸಾಕ್ಷಿಯಾಗಿದೆ. ನಮ್ಮ ಯುವಕರು ತಮಗೆ ಯೋಗ್ಯರಾದ ನಾಯಕರನ್ನು ಹುಡುಕುವ ಬದಲು ಒಬ್ಬೊಬ್ಬ ಯುವಕನೂ ಒಬ್ಬೊಬ್ಬ ನಾಯಕನಾಗಿ ತಯಾರಾದರೆ, ವಿವೇಕಾನಂದರು ಹೇಳಿದಂತೆ ಸಮಸ್ಯೆಗಳು ಹೇಳಹೆಸರಿಲ್ಲದಂತೆ ಓಡಿಹೋಗುತ್ತವೆ. 
      ವಿವೇಕಾನಂದರ ೧೫೦ನೆಯ ಜನ್ಮವರ್ಷಾಚರಣೆಯನ್ನು ಒಂದು ಅಭಿಯಾನದಂತೆ ದೇಶಾದ್ಯಂತ ಆಚರಣೆ ಮಾಡುತ್ತಿದ್ದು, ಪ್ರಮುಖವಾಗಿ ಐದು ರೀತಿಗಳಲ್ಲಿ ಕಾರ್ಯಕ್ರಮಗಳನ್ನು ಜೋಡಿಸಿಕೊಳ್ಳಲಾಗಿದೆ. ಮೊದಲನೆಯದಾಗಿ 'ಯುವಶಕ್ತಿ' - ನಮ್ಮ ಯುವಕರಲ್ಲಿ -ಅವರು ವಿದ್ಯಾರ್ಥಿಗಳಾಗಿರಲಿ, ವಿದ್ಯಾರ್ಥಿಗಳಾಗಿರದಿರಲಿ, ಅನ್ಯಾನ್ಯ ವೃತ್ತಿಗಳಲ್ಲಿ ತೊಡಗಿರಲಿ, ೪೦ ವರ್ಷಗಳಿಗಿಂತ ಕಡಿಮೆ ವಯೋಮಾನದ  ತರುಣರಲ್ಲಿ- ಹುದುಗಿರುವ ಶಕ್ತಿಯ ಅರಿವನ್ನು ಮೂಡಿಸುವುದು. ಎರಡನೆಯದಾಗಿ ಶಿಕ್ಷಿತ ಮತ್ತು ಬುದ್ಧಿಜೀವಿ ಸಮೂಹದವರನ್ನು ಗಮನದಲ್ಲಿರಿಸಿಕೊಂಡು 'ಪ್ರಬುದ್ಧ ಭಾರತ', ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು 'ಗ್ರಾಮಾಯಣ', ಮಹಿಳಾ ಸಮುದಾಯವನ್ನು ರಾಷ್ಟ್ರನಿರ್ಮಾಣಕ್ಕೆ ಪ್ರೇರಿಸುವ ಸಲುವಾಗಿ 'ಸಂವರ್ಧಿನಿ' ಮತ್ತು ವನವಾಸಿಗಳನ್ನು ಗಮನದಲ್ಲಿರಿಸಿ 'ಅಸ್ಮಿತಾ' ಎಂಬ ಅಭಿದಾನಗಳ ಅಡಿಯಲ್ಲಿ ವರ್ಷಪೂರ್ತಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲುಗೊಳ್ಳುವುದು ಸೂಕ್ತವಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ