ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಮೇ 31, 2016

ಮುಪ್ಪು ಶಾಪವಾಗದಿರಲಿ - 2


     ಎಷ್ಟು ವೈಪರೀತ್ಯ! ಪೋಷಕರು ತಮ್ಮ ಮಕ್ಕಳು ಮುಂದೆ ಬರಲಿ, ಸಮಾಜದಲ್ಲಿ ಪ್ರತಿಷ್ಠಿತರಾಗಲಿ ಎಂದು ಬಯಸಿ ಶ್ರಮಪಟ್ಟು ಮಕ್ಕಳನ್ನು ಬೆಳೆಸುತ್ತಾರೆ, ಏನೆಲ್ಲಾ ಕಷ್ಟ ಪಡುತ್ತಾರೆ! ತಮಗೆ ವಂಚನೆ ಮಾಡಿಕೊಂಡು, ಮಕ್ಕಳಿಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಮಕ್ಕಳು ತಮ್ಮನ್ನು ಮುಪ್ಪಿನಲ್ಲಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ, ಆರಾಮವಾಗಿ ವಿಶ್ರಾಂತಿ ಪಡೆಯೋಣ ಎಂದು ಬಯಸುವ ಅವರಿಗೆ ಪ್ರತಿಯಾಗಿ ಮಕ್ಕಳು ತಮ್ಮನ್ನು ಹೊರೆ ಎಂಬಂತೆ ನೋಡಿದಾಗ ಆಗುವ ವೇದನೆ ಅವರ್ಣನೀಯ.
     ವೃದ್ಧಾಪ್ಯದ ಸಮಸ್ಯೆಗಳು ಆರ್ಥಿಕವಾಗಿ ಕೆಳಮಟ್ಟದವರು, ಮಧ್ಯಮವರ್ಗದವರು, ಮೇಲ್ಮಧ್ಯಮ ವರ್ಗದವರು ಮತ್ತು ಮೇಲ್ವರ್ಗದವರುಗಳಲ್ಲಿ ಭಿನ್ನ ರೀತಿಯವಾಗಿದ್ದರೂ ಅವರುಗಳು ಪಡುವ ಪರಿತಾಪಗಳು ಮಾತ್ರ ಸಂಬಂಧಿಸಿದವರಿಗೆ ಸಹಿಸಲು ಕಷ್ಟವಾಗಿರುತ್ತದೆ. ಉದಾಹರಣೆ ಕೊಟ್ಟರೆ ಅರ್ಥವಾದೀತು. ಅವರು ಒಬ್ಬ ನಿವೃತ್ತ ಹಿರಿಯ ಅಧಿಕಾರಿ. ಪತ್ನಿ ಮೃತಳಾಗಿ ಕೆಲವು ವರ್ಷಗಳಾಗಿದ್ದವು. ಪ್ರತಿನಿತ್ಯ ಬೆಳಿಗ್ಗೆ ೫.೩೦ಕ್ಕೆ ವಾಕಿಂಗಿಗೆ ಹೋಗುವಾಗ ಸಿಗುತ್ತಿದ್ದ ಕಾಫಿ ಈಗ ಸಿಗದು. ಕಾಫಿಗಾಗಿ ಕಾಯುತ್ತಾ ಕುಳಿತರೆ ವಾಕಿಂಗ್ ಸಮಯ ಮುಗಿದೇ ಹೋಗುತ್ತದೆ. ಪೇಪರ್ ಓದಲು ಸಿಗುವುದು ಎಲ್ಲರೂ ಓದಿದ ನಂತರವೇ. ಟಿವಿಯಲ್ಲಿ ತನಗೆ ಬೇಕಾದ ಚಾನೆಲ್ ವೀಕ್ಷಿಸುವ ಅವಕಾಶ ಸಿಗದು. ಇತರರು ನೋಡುವ ಚಾನೆಲ್ ಅನ್ನೇ ನೋಡಬೇಕು. ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಇವರಿಂದಲೇ ಮಾಡಿಸುತ್ತಿದ್ದರು - ಲೈಟ್ ಬಿಲ್ ಕಟ್ಟುವುದು, ಫೋನ್ ಬಿಲ್ ಕಟ್ಟುವುದು, ತರಕಾರಿ ತರುವುದು, ಮಕ್ಕಳನ್ನು ಶಾಲೆಗೆ ಬಿಡುವುದು, ಕರೆತರುವುದು, ಇತ್ಯಾದಿ. ಯಾವಾಗ ಇವರಿಗೆ ಓಡಾಡಲು ಕಷ್ಟವಾಗಿ ಇಂತಹ ಕೆಲಸ ಮಾಡುವುದು ದುಸ್ತರವಾಯಿತೋ ಇವರನ್ನು ಒಂದು ಹೊರೆಯೆಂಬಂತೆ ನೋಡಲಾರಂಭಿಸಿದ್ದರು. ತನ್ನದೇ ಮನೆಯಲ್ಲಿ ಊಟ, ತಿಂಡಿ, ಕಾಫಿಗಾಗಿ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಬಂದ ಮೇಲಂತೂ ತನ್ನ ಬಗ್ಗೆಯೇ ಆತನಿಗೆ ಜಿಗುಪ್ಸೆ ಮೂಡಿತ್ತು. ಈ ಕುರಿತು ಏನಾದರೂ ಹೇಳಿದರೆ ದೊಡ್ಡ ರಂಪ ರಾಮಾಯಣವೇ ಆಗಿಬಿಡುತ್ತಿತ್ತು. ಮೊದಲು ಇರುತ್ತಿದ್ದ ದೊಡ್ಡ ಬೆಡ್ ರೂಮಿನಲ್ಲಿ ಈಗ ಮಗ-ಸೊಸೆ ಇರುತ್ತಾರೆ. ಇವರ ಮಲಗುವ ಕೋಣೆ ಸ್ಟೋರ್ ರೂಮಿಗೆ ಬದಲಾಗಿದೆ. ಅವರು ಒಬ್ಬರೇ ಗೋಡೆ ನೋಡುತ್ತಾ ವಟಗುಟ್ಟುತ್ತಿರುತ್ತಾರೆ. ಈ ವಟಗುಟ್ಟುವಿಕೆ ವಿಚಾರದಲ್ಲಿ ಸಹ ಅವರು ಜಾಗೃತರಾಗಿರಬೇಕಿದೆ. ಯಾರಿಗೂ ಕೇಳದಂತೆ ಒಬ್ಬರೇ ಅಲವತ್ತುಗೊಳ್ಳಬೇಕು. ಇತರರಿಗೆ ಕೇಳಿದರೆ ಇವರ ಜನ್ಮ ಜಾಲಾಡಿಬಿಡುತ್ತಾರೆ. ದೊಡ್ಡ ಅಧಿಕಾರಿಯಾಗಿ ಎಲ್ಲರಿಂದಲೂ ಸಲಾಮ್ ಮಾಡಿಸಿಕೊಳ್ಳುತ್ತಿದ್ದವರಿಗೆ ಬಂದ ಇಂತಹ ಪರಿಸ್ಥಿತಿ ಕುರಿತು ಅಪರೂಪಕ್ಕೆ ಸಿಗುವ ಗೆಳೆಯರಲ್ಲಿ ಗೋಳಿಡುವ ಇವರು ಸಾವು ಬೇಗ ಬರಬಾರದೇ ಎಂದು ಕೊರಗುತ್ತಾರೆ.
ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು
ಕಿವಿಯು ಕೇಳದಿರೆ ನೋಟ ಮಂದವಾಗಿರಲು |
ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ
ಜಯವಿರುವವರೆಗೆ ಭಯವಿಲ್ಲ ಮೂಢ ||
     ಇನ್ನೊಂದು ಪ್ರಸಂಗ ಗಮನಿಸೋಣ. ಸುಕ್ಕುಗಟ್ಟಿದ ಚರ್ಮ, ನರೆತ ತಲೆ, ಕುಗ್ಗಿದ, ಬಾಗಿದ ಶರೀರ, ಕಿವಿ ಕೇಳದ, ದೃಷ್ಟಿ ಮಂದವಿರುವ ಹಣ್ಣು ಮುದುಕಿ ಸಣ್ಣಮ್ಮ ತನ್ನ ಹಳ್ಳಿಯ ಮನೆಯ ಜಗಲಿಯ ಕಟ್ಟೆಯ ಮೇಲೆ ಗೋಣಿಚೀಲದ ಹಾಸಿನ ಮೇಲೆ ಕುಳಿತಿದ್ದಾಳೆ. ಅವಳು ರಾತ್ರಿ ಮಲಗುವುದೂ ಅಲ್ಲಿಯೇ! ಪೋಸ್ಟ್‌ಮನ್ ಬಂದವನು ಆಕೆಗೆ ವಿಧವಾವೇತನದ ಹಣ ಕೊಟ್ಟು ಫಾರಮ್ಮಿಗೆ ಸಹಿ ಹಾಕಿಸಿಕೊಂಡು ಹೋಗುತ್ತಾನೆ. ಕೊಡುವಾಗ ತನ್ನ ಮಾಮೂಲನ್ನೂ ಹಿಡಿದುಕೊಂಡು ಕೊಟ್ಟಿರುತ್ತಾನೆ. ಆಕೆಯ ಕೈಯಲ್ಲಿ ಇನ್ನೂ ಹಣ ಇರುವಂತೆಯೇ ಧಾವಿಸಿ ಬಂದ ಮಗರಾಯ ಆ ಹಣವನ್ನು ಕಿತ್ತುಕೊಂಡು ಜೇಬಿಗಿಟ್ಟುಕೊಂಡು ನಡೆಯುತ್ತಾನೆ. ಆಕೆ ಮೊದಲಿನಂತೆಯೇ ನಿರ್ಲಿಪ್ತ ನೋಟ ಬೀರುತ್ತಾ ಕುಳಿತೇ ಇರುತ್ತಾಳೆ. ಆಕೆಗೆ ಅದು ಅಭ್ಯಾಸವಾಗಿ ಹೋಗಿದೆ. ಜವರಾಯನನ್ನು ನೆನೆಯುತ್ತಾ ಮಣಮಣ ಗುನುಗುತ್ತಾ ತಿನ್ನಲು ಏನಾದರೂ ತಂಗಳು ಕೊಟ್ಟಾರೇನೋ ಎಂದು ಬಗ್ಗಿ ನೋಡುತ್ತಾಳೆ.
     ಇಂತಹುದೇ ಹಲವಾರು ಸಂಗತಿಗಳು ಎಲ್ಲರಿಗೂ ಅರಿವಿರುವಂತಹುದೇ ಆಗಿದೆ. ವೃದ್ಧಾಪ್ಯದಲ್ಲಿ ಗಂಡ-ಹೆಂಡತಿಯರು ಒಬ್ಬರೊಬ್ಬರಿಗೆ ಆಶ್ರಯವಾಗಿರುತ್ತಾರೆ. ಇಬ್ಬರನ್ನೂ ನೋಡಿಕೊಳ್ಳುವುದು ಕಷ್ಟವೆಂದು ತಂದೆಯನ್ನು ಒಬ್ಬ ಮಗ ಮತ್ತು ತಾಯಿಯನ್ನು ಇನ್ನೊಬ್ಬ ಮಗ ಪ್ರತ್ಯೇಕವಾಗಿ ತಮ್ಮ ಮನೆಗಳಲ್ಲಿ ಇರಿಸಿಕೊಂಡಿರುವ ಸಂದರ್ಭಗಳಲ್ಲಿ ಹಿರಿಯ ಜೀವಗಳಿಗೆ ಆಗುವ ನೋವಿನ ಅನುಭವ ಅನುಭವಿಸಿದವರಿಗೇ ಗೊತ್ತು. ಇಬ್ಬರಲ್ಲಿ ಒಬ್ಬರು ಮೃತರಾದರೆ ಉಳಿದವರಿಗೆ ಉಂಟಾಗುವ ಅನಾಥ ಭಾವದ ಶೂನ್ಯ ತುಂಬುವುದೂ ಕಷ್ಟವೇ. ೫-೬ ಮಕ್ಕಳಿದ್ದರೂ ಇರುವ ಒಬ್ಬ ತಂದೆ ಅಥವ ತಾಯಿಯನ್ನು ಯಾರು ನೋಡಿಕೊಳ್ಳಬೇಕೆಂಬ ವಿಷಯದಲ್ಲಿ ಜಗಳಗಳಾಗುತ್ತವೆ. ಒಬ್ಬೊಬ್ಬರ ಮನೆಯಲ್ಲಿ ಕೆಲವು ತಿಂಗಳುಗಳಂತೆ ಸರತಿಯಲ್ಲಿ ನೊಡಿಕೊಳ್ಳುವ ಕುಟುಂಬಗಳೂ ಅಪರೂಪವಲ್ಲ. ಆಗುವ ಖರ್ಚಿಗೂ ಲೆಕ್ಕ ಹಾಕಿ ಜಗಳವಾಡುವವರೂ ಇರುತ್ತಾರೆ. ಕೈ-ಕಾಲುಗಳು ಗಟ್ಟಿಯಾಗಿರುವ ಹಿರಿಯರನ್ನು ಮಕ್ಕಳು ತಮಗೆ ಅನುಕೂಲವಾಗುವರೆಂಬ ಕಾರಣದಿಂದ ಇರಿಸಿಕೊಳ್ಳುವವರೂ ಇರುತ್ತಾರೆ. ಮನೆಯ ಕೆಲಸಗಳಿಗಾಗಿ ಅವರುಗಳನ್ನು ಬಳಸಿಕೊಂಡರೂ ಅವರನ್ನು ಮನೆಯ ಉಪೇಕ್ಷಿತ ಸ್ಥಳದಲ್ಲಿ ಇರಿಸಲಾಗುತ್ತದೆ. ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೋಗುವ ನಗರಗಳಲ್ಲಿ ಇದು ಸಾಮಾನ್ಯ. ಆದರೆ ಹಿರಿಯರಿಗೆ ಆರೋಗ್ಯ ಕೈಕೊಟ್ಟರೆ ನಿಜವಾದ ಸಮಸ್ಯೆ ಪ್ರಾರಂಭವಾಗುತ್ತದೆ. ಮಕ್ಕಳು ಹಿರಿಯರ ಅನಾರೋಗ್ಯದ ವಿಷಯದಲ್ಲಿ ತೀವ್ರವಾಗಿ ಅಸಹಿಷ್ಣುಗಳಾಗಿರುವುದು, ವಿಶೇಷವಾಗಿ ಸುಶಿಕ್ಷಿತರಿರುವ ನಗರಗಳಲ್ಲೇ ಹೀಗಾಗುತ್ತಿರುವುದು ಕಳವಳಕಾರಿಯಾಗಿದೆ.
     ವೃದ್ಧರು ತಮ್ಮದೇ ಸ್ವಂತದ ಮನೆ, ಆಸ್ತಿ-ಪಾಸ್ತಿ ಹೊಂದಿದ್ದರೂ ಅಭದ್ರತೆ ಕಾಡದಿರುವುದಿಲ್ಲ. ಮಕ್ಕಳು ಮನೆ, ಆಸ್ತಿಗಳಿಗಾಗಿ ಅವರನ್ನು ಗೋಳುಗುಟ್ಟಿಸುವ ಪ್ರಸಂಗಗಳು ಸಾಮಾನ್ಯವಾಗಿವೆ. ಅವರು ಹೊಂದಿದ್ದ ಆಸ್ತಿ, ಮನೆಗಳನ್ನು ತಮ್ಮ ಹೆಸರಿಗೆ ಬರೆಯಲು ಅಥವ ಮಾರಿ ಹಣ ಕೊಡಲು ಕಾಡುತ್ತಾರೆ, ಹಿಂಸಿಸುತ್ತಾರೆ. ಪ್ರತಿ ೧೦ರಲ್ಲಿ ೬ರಷ್ಟು ಹಿರಿಯರು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುವುದು ಸಾಮಾನ್ಯ. ಆಶ್ರಯ ತಪ್ಪಿದವರು ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯಬೇಕು ಅಥವ ಮಕ್ಕಳೇ ಅವರನ್ನು ಅಲ್ಲಿಗೆ ಕಳುಹಿಸಿಬಿಡುತ್ತಾರೆ. ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ ವೇಳೆಯಲ್ಲಿ ಇಂತಹ ನೂರಾರು ಸಮಸ್ಯೆಗಳು ನನ್ನ ಮುಂದೆ ಬಂದಿದ್ದವು. ಮಕ್ಕಳು/ವಾರಸುದಾರರು ಇಲ್ಲದ ಪ್ರಕರಣಗಳಲ್ಲಿ ಅವರ ಅಶಕ್ತತೆಯನ್ನು ಬಳಸಿಕೊಂಡು ಅವರುಗಳನ್ನು ಮನೆಯಿಂದ ಹೊರದಬ್ಬಿ ಆಸ್ತಿಯನ್ನು ತಮ್ಮದಾಗಿಸಿಕೊಂಡ ಬಲಾಢ್ಯರೂ ಇರುತ್ತಾರೆ. ಇಂತಹ ಕಾರಣಕ್ಕಾಗಿಯೇ ಕೊಲೆಯಾಗುವ ಒಂಟಿ ವೃದ್ಧರುಗಳ ಕುರಿತೂ ಸುದ್ದಿ ಬರುತ್ತಿರುತ್ತದೆ. ಕುಟುಂಬದ ಗೌರವ ಕಾಪಾಡುವ ಸಲುವಾಗಿ ಬಹುತೇಕ ಹಿರಿಯರ ಸಮಸ್ಯೆಗಳು ಬೀದಿಗೆ ಬರುವುದಿಲ್ಲ. ಬಂದರೂ  ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗದು, ಪ್ರಯೋಜನಕ್ಕೆ ಬಾರದ ಅನುಕಂಪ ಸಿಗಬಹುದು. ಅನಾಯಾಸದ ಮರಣ ಮತ್ತು ದೈನ್ಯತೆಯಿಲ್ಲದ ಜೀವನ ಸಾಧ್ಯವಾಗುವ ಹಿರಿಯರು ಮಾತ್ರ ಭಾಗ್ಯಶಾಲಿಗಳೆನ್ನಬಹುದು. ಅಂತಹ ಭಾಗ್ಯ ಎಲ್ಲರಿಗೂ ಸಿಗಲಾರದು. ಈ ಸಮಸ್ಯೆಗಳಿಗೆ ಪರಿಹಾರವೇನು? ಮುಂದಿನ ಲೇಖನದಲ್ಲಿ ಗಮನಿಸೋಣ.
-ಕ.ವೆಂ.ನಾಗರಾಜ್.
****************
ದಿನಾಂಕ 22-02-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌: