ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿದ್ದ ನಿವಾಸಿಗಳೊಂದಿಗೆ ಮಾತನಾಡಿದಾಗ, ಕುಟುಂಬದವರೊಡನೆ ಇದ್ದರೂ ಖಿನ್ನತೆಯಿಂದ ಬಳಲುತ್ತಿರುವ ಹಲವು ವೃದ್ಧರನ್ನು ಮಾತನಾಡಿಸಿದಾಗ ಆದ ಮನಕಲಕುವ ಅನುಭವಗಳನ್ನು ಹಂಚಿಕೊಂಡರೆ ಅದೊಂದು ದೀರ್ಘ ಲೇಖನವೇ ಆಗುತ್ತದೆ. ಹಾಗೆಂದು ಅವರ ಕಥೆಗಳು ಹೊಸವನಲ್ಲ, ನಮ್ಮ-ನಿಮ್ಮ ಸುತ್ತಲಿನಲ್ಲೇ ಕಾಣುವಂತಹುದು! ನೋಡುವ ಕಣ್ಣುಗಳಿರಬೇಕು, ಮಿಡಿಯುವ ಹೃದಯಗಳಿರಬೇಕಷ್ಟೇ! ಎಲ್ಲಾ ವೃದ್ಧರುಗಳೂ ಹೀಗೆಯೇ ಬಳಲುತ್ತಾರೆ ಎಂದು ಹೇಳಲಾಗದು. ಪ್ರತಿಯೊಂದಕ್ಕೂ ಅಪವಾದಗಳಿದ್ದು, ಸುಖ-ಸಂತೋಷಗಳಿಂದ, ಮಕ್ಕಳು, ಬಂಧುಗಳಿಂದ ಪ್ರೀತಿ, ವಿಶ್ವಾಸ ಪಡೆಯುವ ಭಾಗ್ಯವಿರುವವರೂ ಇರುತ್ತಾರೆ. ಆದರೆ ಹತ್ತರಲ್ಲಿ ಆರು ಕುಟುಂಬಗಳಲ್ಲಿ ಭಾಗ್ಯವಂಚಿತರೇ ಇರುತ್ತಾರೆಂಬುದು ವಾಸ್ತವವಾಗಿದೆ. ವೃದ್ಧರ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಹೀಗೆ ಪಟ್ಟಿ ಮಾಡಬಹುದು:
೧. ಆರ್ಥಿಕ ಸಮಸ್ಯೆ,
೨. ಆಶ್ರಯದ ಸಮಸ್ಯೆ,
೩. ಆರೋಗ್ಯದ ಸಮಸ್ಯೆ,
೪. ಪ್ರೀತಿಯ ಕೊರತೆ ಅಥವ ಭಾವನಾತ್ಮಕ ಆಧಾರದ ಕೊರತೆ.
ದುಡಿದರೆ ಮಾತ್ರ ಅನ್ನ ಎಂಬ ಸ್ಥಿತಿಯಲ್ಲಿದ್ದವರು ವೃದ್ಧರಾದಾಗ ಇನ್ನೊಬ್ಬರ ಆಶ್ರಯದಲ್ಲಿ ಬಾಳಬೇಕಾಗಿ ಬಂದಾಗ ಅವರುಗಳು ಪಡುವ ಪಾಡು ಅವರಿಗೆ ಮಾತ್ರ ಗೊತ್ತಾಗಲು ಸಾಧ್ಯ. ಹಣ, ಆಸ್ತಿಯಿದ್ದವರೂ ಸಹ ಶಕ್ತಿಗುಂದಿದ ಸ್ಥಿತಿಯಲ್ಲಿ ಅನಾಥ ಸ್ಥಿತಿಯಲ್ಲಿ ಪಾಡುಪಡುವ ಉದಾಹರಣೆಗಳೂ ಇವೆ. ಅವರ ಮಕ್ಕಳು, ಸಂಬಂಧಿಗಳು ಅವರ ಹಣ ಮತ್ತು ಆಸ್ತಿಗಳ ಅನಧಿಕೃತ ಒಡೆಯರಾಗಿಬಿಡುತ್ತಾರೆ! ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಭಾವನಾತ್ಮಕ ಬೆಂಬಲದ ಕೊರತೆ! ತಮಗೆ ಏನೂ ಬೇಡ, ಪ್ರೀತಿಯ ಎರಡು ಮಾತುಗಳು ಸಾಕು ಎಂದು ಹಂಬಲಿಸುವ ಜೀವಗಳು ಕೊರಗಿನಲ್ಲೇ ಅಂತ್ಯ ಕಾಣುತ್ತವೆ ಎಂಬುದು ನೋವು ತರುತ್ತದೆ. ವೃದ್ಧಾಶ್ರಮದ ನಿವಾಸಿಗಳಲ್ಲಿ ಹೆಚ್ಚಿನವರು ಸೊಸೆಯರ ವಿರುದ್ಧ ದೂರಿದ್ದರು. ಗಂಡ-ಹೆಂಡತಿಯರಲ್ಲಿ ಜಗಳಗಳಾದಾಗ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾರೆಂದು ದೂರು ಸಲ್ಲಿಸಿ ಪೋಲಿಸ್ ಠಾಣೆ, ನ್ಯಾಯಾಲಯಗಳ ಮೆಟ್ಟಲು ಹತ್ತಬೇಕಾಗಿ ಬಂದ ಅತ್ತೆ-ಮಾವಂದಿರು, ಹಿರಿಯ ಅಧಿಕಾರಿಯಾಗಿದ್ದು ಮನೆಯಲ್ಲಿ ತಾತ್ಸಾರ, ಅವಮಾನಗಳಿಗೆ ಒಳಗಾಗಿ ವೃದ್ಧಾಶ್ರಮ ಸೇರಿದ್ದವರು, ಇದ್ದ ಒಬ್ಬಳೇ ಮಗಳು ಮತ್ತು ಅಳಿಯ ಸೇರಿಕೊಂಡು ಮೋಸದಿಂದ ಹಣವನ್ನು ಮತ್ತು ಜಮೀನನನ್ನು ಲಪಟಾಯಿಸಿ ಹೊರಗಟ್ಟಲ್ಪಟ್ಟ ಮುದುಕಿ, ಮಕ್ಕಳಾಗಲೀ, ಬಂಧುಗಳಾಗಲೀ ಇರದೆ ಅನಿವಾರ್ಯವಾಗಿ ಬಂದವರು, ಹೊಂದಿಕೊಳ್ಳದೆ ಜಗಳವಾಡಿಕೊಂಡು ಬಂದವರು ಅಥವ ಹೊರದಬ್ಬಲ್ಪಟ್ಟವರು, ಹೀಗೆ ಅನೇಕ ರೀತಿಯ ಹಿರಿಯ ಜೀವಗಳು ಅಲ್ಲಿದ್ದವು. ಒಬ್ಬೊಬ್ಬರದು ಒಂದೊಂದು ಸಮಸ್ಯೆಯಾದರೂ, ಎಲ್ಲರ ಸಾಮಾನ್ಯವಾದ ಸಮಸ್ಯೆಯೆಂದರೆ ಕೊನೆಗಾಲದಲ್ಲಿ ತಮ್ಮವರು ತಮಗೆ ಪ್ರೀತಿ ತೋರಿಸುತ್ತಿಲ್ಲವಲ್ಲಾ ಎಂಬುದೇ! ಬೇಸಿಗೆಯ ತಾಪದಿಂದ ಬಾಯಾರಿ ಬಳಲಿ ಬೆಂಡಾದವರು ನೀರಿಗೆ ಹಂಬಲಿಸುವಂತೆ ಅವರು ಪ್ರೀತಿಯ ಎರಡು ಮಾತುಗಳಿಗಾಗಿ ಹಂಬಲಿಸುತ್ತಿದ್ದಾರೆ ಎಂಬ ಅರಿವು ಸಂಬಂಧಿಸಿದವರಿಗೆ ಬಂದರೆ ಅವರ ಪುಣ್ಯ!
ಸರ್ಕಾರದ ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ ಮುಂತಾದ ಯೋಜನೆಗಳು ಹಲವರಿಗೆ ಉಪಕಾರಿಯಾಗಿವೆ. ಆದರೆ ಈ ಸೌಲಭ್ಯ ನಿಜವಾಗಿ ಸಿಗಬೇಕಾದ ಎಲ್ಲರಿಗೂ ಸಿಕ್ಕಿದೆಯೇ ಎಂಬುದು ಪ್ರಶ್ನಾರ್ಹ. ಅರ್ಹತೆಯಿದ್ದವರಿಗೆ ಕಛೇರಿಗೆ ಅಲೆದಾಡಿ ಸೌಲಭ್ಯ ಪಡೆಯಲೂ ಆಗದು. ಈ ಸೌಲಭ್ಯಗಳನ್ನು ಅನುಕೂಲಸ್ಥರೇ ದುರುಪಯೋಗಪಡಿಸಿಕೊಂಡ ಪ್ರಕರಣಗಳಿಗೆ ಕೊರತೆಯಿಲ್ಲ. ಸಾಮಾಜಿಕ ಕಳಕಳಿಯುಳ್ಳ ಅಧಿಕಾರಿಗಳಿದ್ದರೆ ಹಲವು ಹಿರಿಯ ಜೀವಗಳಿಗೆ ಆಸರೆ ಸಿಗುತ್ತದೆ. ಇಲ್ಲದಿದ್ದರೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬಲ್ಲವರಿಗೆ ಸೌಲಭ್ಯಗಳು ಸಿಕ್ಕೀತು. ಧಾರ್ಮಿಕ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು ನಡೆಸುವ ವೃದ್ಧಾಶ್ರಮಗಳಲ್ಲೂ ಇಲ್ಲವೂ ಸರಿಯಾಗಿ ನಿರ್ವಹಿಸಲ್ಪಡುತ್ತವೆ ಎಂದೇನೂ ಇಲ್ಲ. ಹಣ ಪಡೆದು ಸೌಲಭ್ಯ ಒದಗಿಸುವ ಮತ್ತು ಹಣ ಮಾಡುವ ಸಲುವಾಗಿಯೇ ಇರುವ ವ್ಯಾವಹಾರಿಕ ಆಶ್ರಯತಾಣಗಳೂ ಇವೆ. ವಿಚಾರಿಸುವವರಿಲ್ಲ, ವಾರಸುದಾರರಿಲ್ಲ ಎಂಬಂತಹ ಪ್ರಕರಣಗಳಲ್ಲಿ ಶೋಷಣೆ ಸಾಮಾನ್ಯದ ಸಂಗತಿ. ಚೆನ್ನಾಗಿ ನಿರ್ವಹಿಸಲ್ಪಡುತ್ತಿರುವ ಸಂಸ್ಥೆಗಳನ್ನೂ ಸಂಶಯದಿಂದ ನೋಡುವಂತೆ ಇಂತಹವರು ಮಾಡುತ್ತಾರೆ. ಬೆರಳೆಣಿಕೆಯಷ್ಟು ಸಂಸ್ಥೆಗಳು ಉತ್ತಮ ರೀತಿಯಲ್ಲಿ ವೃದ್ಧರ ಆರೈಕೆಯನ್ನು ಮಾಡುತ್ತಿದ್ದು, ಅವುಗಳಲ್ಲಿ ಹಾಸನದ ಚೈತನ್ಯ ವೃದ್ಧಾಶ್ರಮವೂ ಒಂದಾಗಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕಾಗಿ ಡಾ. ಗುರುರಾಜ ಹೆಬ್ಬಾರರು ಮತ್ತು ಅವರ ಎಲ್ಲಾ ಸಹಕಾರಿಗಳೂ ಅಭಿನಂದನಾರ್ಹರಾಗಿದ್ದಾರೆ.
ಪೋಷಕರ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ನಿರ್ವಹಣಾ ಕಾಯದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದ್ದು ಅದರ ಪ್ರಕಾರ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳಿಗೆ ಮೂರು ತಿಂಗಳುಗಳವರೆಗೆ ಜೈಲು ಶಿಕ್ಷೆ ಅಥವ ದಂಡ ವಿಧಿಸಲು ಅವಕಾಶವಿದೆ. ಆದರೆ, ತಮ್ಮ ತೊಂದರೆಗಳ ಕುರಿತು ದೂರು ನೀಡುವುದಿರಲಿ, ಆಪ್ತರ ಬಳಿ ಕಷ್ಟ ಹಂಚಿಕೊಳ್ಳಲೂ ಹಿಂಜರಿಯುವವರ ಸಂಖ್ಯೆಯೇ ಹೆಚ್ಚಿದೆ. ಹೀಗೆ ಕಷ್ಟ-ಸುಖ ಹಂಚಿಕೊಂಡದ್ದೇ ನೆಪವಾಗಿ ಮತ್ತಷ್ಟು ದೂಷಣೆ, ಹಿಂಸೆಗಳಿಗೆ ಒಳಗಾಗುವ ಭಯ ಅವರನ್ನು ಕಾಡುತ್ತದೆ.
ಇಂದಿನ ಯುವಪೀಳಿಗೆಯ ಮನೋಭಾವ ಬದಲಾಗಬೇಕಿದೆ. ನೈತಿಕ ಮೌಲ್ಯಗಳಿಗೆ ಬೆಲೆ ಕೊಡದ ಶಿಕ್ಷಣ ಪದ್ಧತಿ ಈ ಸಮಸ್ಯೆಯ ಮೂಲಕಾರಣವಾಗಿದೆ. ಮದುವೆ ಆದ ತಕ್ಷಣ ಹಿರಿಯರನ್ನು ಬಿಟ್ಟು ಪ್ರತ್ಯೇಕವಾಗಿ ಬೇರೆ ವಾಸಿಸುವವರ ಸಂಖ್ಯೆ ಹೆಚ್ಚುತ್ತಿದೆ. ಮದುವೆ ಆಗಬೇಕಾದರೆ ಲಗ್ಗೇಜುಗಳಿರಬಾರದು, ದಂಡ-ಪಿಂಡಗಳಿರಬಾರದು ಎಂದು ಷರತ್ತು ವಿಧಿಸುವುದನ್ನು ಕೇಳಿದ್ದೇವೆ. ತಾವೂ ಸಹ ಮುಂದೊಮ್ಮೆ ಲಗೇಜುಗಳಾಗುತ್ತೇವೆ, ದಂಡ-ಪಿಂಡಗಳಾಗುತ್ತೇವೆ; ಇಂತಹ ದಂಡ-ಪಿಂಡಗಳಿಂದಲೇ ತಾವು ಈಗ ಇರುವ ಉತ್ತಮ ಸ್ಥಿತಿಗೆ ಬಂದದ್ದು ಎಂಬುದನ್ನು ಈ ಮಹಾನ್ ಪಿಂಡಗಳು ಮರೆತುಬಿಟ್ಟಿರುತ್ತವೆ! ಇನ್ನು ೨೫ ವರ್ಷಗಳಲ್ಲಿ ಭಾರತದ ಮೂರನೆಯ ಎರಡರಷ್ಟು ಸಂಖ್ಯೆಯ ಜನರು ವೃದ್ಧರಾಗಿರುತ್ತಾರೆ ಎಂಬುದನ್ನು ಈಗ ಹಿರಿಯರನ್ನು ಕಡೆಗಣಿಸಿರುವ, ಮುಂದೆ ವೃದ್ಧರಾಗಲಿರುವ ಯುವಸಮೂಹ ಮರೆಯಬಾರದು.
ಬರೆದಷ್ಟೂ ಮುಗಿಯದಷ್ಟು ಸಮಸ್ಯೆಗಳ ಸರಮಾಲೆಯೇ ಕಂಡುಬರುತ್ತದೆ. ಸಮಸ್ಯೆಯ ಪರಿಹಾರೋಪಾಯಗಳನ್ನು ಹೀಗೆ ಪಟ್ಟಿ ಮಾಡಬಹುದೆಂದೆನಿಸುತ್ತದೆ:
೧. ನೈತಿಕ ಮೌಲ್ಯಗಳಿಗೆ ಮಹತ್ವ ಕೊಡುವ ಶಿಕ್ಷಣ ಪದ್ಧತಿ ಅಳವಡಿಸಬೇಕು;
೨. ಸರ್ಕಾರದಿಂದ ವೃದ್ಧರಿಗೆ ಸಿಗುವ ಸೌಲಭ್ಯಗಳು ಸರಿಯಾಗಿ ಸಿಗುವಂತೆ ಸರ್ಕಾರ ಮತ್ತು ಸಮಾಜಕಾರ್ಯದಲ್ಲಿ ತೊಡಗಿರುವ ಸೇವಾಸಂಸ್ಥೆಗಳು ನೋಡಿಕೊಳ್ಳಬೇಕು; ಪೋಷಕರ ಬಗ್ಗೆ ನಿರ್ಲಕ್ಷ್ಯ ವಹಿಸುವ ಮಕ್ಕಳ ವಿರುದ್ಧ ಕ್ರಮ ಜರುಗುವಂತೆ ನೋಡಿಕೊಳ್ಳಬೇಕು;
೩. ಕೌಟುಂಬಿಕ ಸಲಹಾ ಕೇಂದ್ರಗಳಲ್ಲಿ ಸರ್ಕಾರ ಮತ್ತು ಸೇವಾ ಸಂಸ್ಥೆಗಳು ವೃದ್ಧರ ಕುರಿತ ಸಮಸ್ಯೆಗಳಿಗೆ ಆದ್ಯತೆ ಸಿಗುವಂತೆ ಮಾಡಬೇಕು. ಈಗ ಗಂಡ-ಹೆಂಡಿರ ಸಮಸ್ಯೆಗಳ ಕುರಿತು ಮಾತ್ರ ಹೆಚ್ಚು ಗಮನ ಸಿಗುತ್ತಿದೆ:
೪. ವೃದ್ಧರಿಗಾಗಿಯೇ ಪ್ರತ್ಯೇಕವಾಗಿ ಉಪನ್ಯಾಸ ಕೇಂದ್ರಗಳು, ಸಲಹಾ ಕೇಂದ್ರಗಳು, ಭಜನಾಕೇಂದ್ರಗಳು, ಮನರಂಜನಾ ಚಟುವಟಿಕೆಗಳನ್ನು ಪ್ರತಿನಿತ್ಯ ನಡೆಯುವಂತೆ ನೋಡಿಕೊಂಡರೆ ಅವರಲ್ಲಿ ಒಂಟಿತನದ ಭಾವನೆ ದೂರ ಮಾಡಲು ಅನುಕೂಲವಾಗುತ್ತದೆ. ಚಿಕ್ಕ ಮಕ್ಕಳ ಸಲುವಾಗಿ ನಡೆಸಲಾಗುತ್ತಿರುವ ಡೇ ಕೇರ್ಗಳನ್ನು ಗಮನ ಅಗತ್ಯವಿರುವ ಹಿರಿಯರ ಸಲುವಾಗಿಯೂ ನಡೆಸುವ ಬಗ್ಗೆ ಚಿಂತಿಸಬೆಕು;
೫. ಟಿ.ಆರ್.ಪಿ. ಸಲುವಾಗಿ ಸ್ವೇಚ್ಛಾಚಾರದ ನಡವಳಿಕೆಗಳಿಗೆ ಪ್ರೋತ್ಸಾಹ ಕೊಡುತ್ತಿರುವ, ಸಾಮಾಜಿಕ, ಕೌಟುಂಬಿಕ ಸಂಬಂಧಗಳನ್ನು ಹಾಳುಗೆಡವುವ ಕಾರ್ಯಕ್ರಮಗಳು, ಧಾರಾವಾಹಿಗಳಿಗೆ ಆದ್ಯತೆ ಕೊಡುತ್ತಿರುವ ಮಾಧ್ಯಮಗಳು ಯುವ ಸಮೂಹವನ್ನು ಹಿರಿಯರನ್ನು ಗೌರವಿಸುವಂತೆ ಮಾಡುವ ಕರ್ಯಕ್ರಮಗಳನ್ನು ಬಿತ್ತರಿಸಬೇಕು;
೫. ವೃದ್ಧರ ಅನುಭವ ಮತ್ತು ಸೇವೆಯನ್ನು ಸಮುದಾಯದ ಒಳಿತಿಗೆ ಬಳಸಿಕೊಳ್ಳಲು ಒತ್ತು ಕೊಡಬೇಕು;
೬. ಪೂರಕವಾದ ಇಂತಹ ಇತರ ಕಾರ್ಯಕ್ರಮಗಳನ್ನು ಸಾಮಾಜಿಕ, ಧಾರ್ಮಿಕ ಮುಖಂಡರುಗಳು, ರಾಜಕೀಯ ದುರೀಣರು, ಸೇವಾಸಂಸ್ಥೆಗಳವರು ಚಿಂತಿಸಿ ರೂಪಿಸಿ ಚಾಲನೆ ಕೊಡಬೇಕು.
ಮುಗಿಸುವ ಮುನ್ನ, ಒಂದು ಮಾತು: ಒಬ್ಬ ಅಶಕ್ತ ವೃದ್ಧನೋ. ವೃದ್ಧೆಯೋ ರಸ್ತೆಯನ್ನು ತಡವರಿಸುತ್ತಾ ದಾಟುತ್ತಿರುವಾಗ, ಅಲ್ಲಿ ಚಲಿಸುವ ಬೈಕ್ ಸವಾರನೋ, ಆಟೋ ಚಾಲಕನೋ ಏಯ್, ಮುದುಕಾ, ಸಾಯುವುದಕ್ಕೆ ಏಕೆ ಬರುತ್ತೀಯಾ? ತೆಪ್ಪನೆ ಮನೆಯಲ್ಲಿ ಬಿದ್ದಿರಬಾರದೇ? ಎಂದು ಗದರಿಸುತ್ತಾನೆ. ಬದಲಾಗಿ ವಾಹನ ಚಾಲಕರು ವೃದ್ಧರು ದಾಟುವವರೆಗೆ ತಾಳ್ಮೆಯಿಂದ ಇದ್ದರೆ, ಅಕ್ಕಪಕ್ಕದವರು ಅವರನ್ನು ರಸ್ತೆ ದಾಟಿಸಲು ನೆರವಾದರೆ ಎಷ್ಟು ಚೆನ್ನಾಗಿರುತ್ತದೆ! ಸಹಾಯ ಮಾಡಿದವರೆಡೆಗೆ ವೃದ್ಧರು ಬೀರಬಹುದಾದ ಕೃತಜ್ಞತೆಯ ನೋಟಕ್ಕಿಂತ ಹೆಚ್ಚಿನ ಪುಣ್ಯದ ಸಂಪಾದನೆ ಏನಿರುತ್ತದೆ? ಯುವ ಸಮೂಹವೇ, ನಿಮ್ಮ ಈಗಿನ ಹಮ್ಮು-ಬಿಮ್ಮುಗಳಿಗೆ ನಿಮ್ಮ ಹಿರಿಯರ ತ್ಯಾಗ, ಸೇವೆಗಳೇ ಕಾರಣವೆಂಬುದನ್ನು ಮರೆಯದಿರಿ, ಅವರನ್ನು ಕಡೆಗಣಿಸದಿರಿ. ಅದರಲ್ಲೂ ಅವರಿಗೆ ನಿಮ್ಮ ಸಹಾಯ, ನೆರವು ಅಗತ್ಯವಿರುವಾಗ ಕನಿಷ್ಠ ಬೊಗಸೆಯಷ್ಟು ಪ್ರೀತಿಯ ಮಾತುಗಳನ್ನಾದರೂ ಆಡಿರಿ. ಪ್ರತಿಯಾಗಿ ಬೆಟ್ಟದಷ್ಟು ಪ್ರೀತಿ ಪಡೆಯಿರಿ. ದೇವರು ಮೆಚ್ಚುವ ಕಾರ್ಯವೆಂದರೆ ಇದೇ ಆಗಿದೆ.
ಪ್ರತ್ಯುತ್ತರಅಳಿಸಿSubraya Kamath K
What I liked in Hassan vridhshram is they have a feeling that though their dear ones have deserted them they are taken care of by people totally unrelated to them.And the bond between people from diverse places is great!