ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಆಗಸ್ಟ್ 28, 2017

ಹೊಗಳಿಕೆಯ ನಿರೀಕ್ಷೆ


     ಹೊಗಳಿಕೆಯ ನಿರೀಕ್ಷೆ ಕುಡಿತದ ಚಟವಿದ್ದಂತೆ. ಕುಡಿಯುವುದು ಕೆಟ್ಟದ್ದು ಎಂದು ಗೊತ್ತಿದ್ದರೂ ಕುಡಿತ ಬಿಡಲಾರದ ಕುಡುಕನಂತೆ, ಹೊಗಳಿಕೆಯಲ್ಲಿ ಸತ್ಯವಿರಲಿ, ಇಲ್ಲದಿರಲಿ, ಇತರರು ತಮ್ಮನ್ನು ಹೊಗಳುತ್ತಿರಬೇಕು ಎಂದು ನಿರೀಕ್ಷಿಸುವವರಿಗೇನೂ ಕೊರತೆಯಿಲ್ಲ. ಅಂತಹವರು ಕೊನೆಗೆ ಯಾವ ಸ್ಥಿತಿ ತಲುಪುತ್ತಾರೆಂದರೆ, ಹೊಗಳುಭಟರನ್ನು ಮಾತ್ರ ಗೌರವಿಸುತ್ತಾರೆ, ಅವರ ಮಾತನ್ನು ಮಾತ್ರ ಕೇಳುತ್ತಾರೆ, ಆತ್ಮ ಪ್ರಶಂಸೆ ಮಾಡಿಕೊಳ್ಳುತ್ತಾರೆ. ಸದುದ್ದೇಶದ ಟೀಕೆಗಳೂ ಸಹ್ಯವೆನಿಸುವುದಿಲ್ಲ. ತಾವು ದೊಡ್ಡ ಮನುಷ್ಯರೆಂದು ಬೀಗುತ್ತಾರೆ ಮತ್ತು ತಮ್ಮನ್ನು ಎಲ್ಲರೂ ಗೌರವಿಸಬೇಕು ಎಂಬ ಅಪೇಕ್ಷೆ ಬೆಳೆಸಿಕೊಳ್ಳುತ್ತಾರೆ. ತಮ್ಮ ಏಳಿಗೆಯನ್ನೇ ಬಯಸುವ ಆತ್ಮೀಯರನ್ನೂ ಸಹ ಅವರು ತಮ್ಮನ್ನು ಹೊಗಳುವುದಿಲ್ಲವೆಂಬ ಕಾರಣಕ್ಕೆ ದೂರವಿಟ್ಟುಬಿಡುತ್ತಾರೆ. ಈ ಚಟದಿಂದಾಗಿ ಅವರು ತಮ್ಮ ಹಿರಿಮೆಗೆ ಚ್ಯುತಿ ತಂದುಕೊಳ್ಳುತ್ತಾರೆ. ಮೇಲೇರುತ್ತಿರುವವರು, ಉನ್ನತ ಸ್ಥಾನದಲ್ಲಿರುವವರು, ಪ್ರತಿಭಾನ್ವಿತರು ಕೆಳಕ್ಕೆ ಜಾರಿದ ನಂತರವಷ್ಟೇ ಅವರುಗಳಿಗೆ ತಪ್ಪಿನ ಅರಿವಾಗುವುದು! 300 ಜನ ಚಪ್ಪಾಳೆ ತಟ್ಟುವವರು ಮುಂದೆ ಇದ್ದಾಗ ಜೊತೆಗೆ ಇರುವ ಮೂರು ಜನರನ್ನು ಕಡೆಗಣಿಸಿಬಿಡುತ್ತಾರೆ. ಇದು ಹೊಗಳಿಕೆಯಿಂದ ಉದ್ಭವಿಸುವ, ವಿವೇಚನಾಶಕ್ತಿಯನ್ನು ಮುಚ್ಚಿಹಾಕುವ ಪೊರೆ. ರಾಜಕೀಯ, ಸಾಹಿತ್ಯ, ಅಧಿಕಾರ, ಇತ್ಯಾದಿ ಯಾವುದೇ ಕ್ಷೇತ್ರದಲ್ಲಿ ಇಂತಹ ಬೆಳವಣಿಗೆ ಕಂಡುಬರುತ್ತಿರುತ್ತದೆ. ಈ ಕಾರಣಕ್ಕಾಗಿಯೇ ಬಸವಣ್ಣನವರು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸದಿರಿ ಎಂದಿದ್ದು.
     ಹೊಗಳಿಕೆಯ ನಿರೀಕ್ಷೆ ಎಂತಹ ಪ್ರಮಾದವನ್ನು ಉಂಟು ಮಾಡುತ್ತದೆ ಎಂಬುದಕ್ಕೆ ಈ ಉದಾಹರಣೆ ಕೊಡಬಹುದು. ಸುಮಾರು 1500 ವರ್ಷಗಳ ಹಿಂದೆ ಇದ್ದ ಭಾರವಿ ಒಬ್ಬ ದೊಡ್ಡ ವಿದ್ವಾಂಸ, ಪ್ರಸಿದ್ಧ ಸಂಸ್ಕೃತ ಕಾವ್ಯ 'ಕಿರಾತಾರ್ಜುನೀಯ' ರಚಿಸಿದ್ದವನು. ಅವನು ಚಿಕ್ಕವನಾಗಿದ್ದಾಗ ಗುರುಗಳಿಂದ ಎಲ್ಲಾ ವಿದ್ಯೆಗಳಲ್ಲೂ ಪಂಡಿತನಾಗಿ ವಾಪಸು ಬಂದಾಗ ಅವನ ಪಾಂಡಿತ್ಯ, ಸಾಮರ್ಥ್ಯ ಕಂಡು ಊರವರೆಲ್ಲಾ ಹೊಗಳುತ್ತಿದ್ದರೂ ಅವನ ಅಪ್ಪ ಮಾತ್ರ ಸುಮ್ಮನಿರುತ್ತಿದ್ದರು. ಭಾರವಿಗೆ ಅಪ್ಪನಿಂದಲೂ ಹೊಗಳಿಸಿಕೊಳ್ಳಬೇಕೆಂಬ ಆಸೆ. ಬರೆದಿದ್ದೆಲ್ಲವನ್ನೂ ಅಪ್ಪನಿಗೆ ಒಪ್ಪಿಸುತ್ತಿದ್ದ. ಎಲ್ಲಾ ಕೇಳುತ್ತಿದ್ದ ಅಪ್ಪ, 'ಇನ್ನೂ ಚೆನ್ನಾಗಿ ಬರೆಯಬಹುದಿತ್ತು' ಎಂದುಬಿಡುತ್ತಿದ್ದ. ಹೀಗೆ ಅನೇಕ ಸಲ ಆಯಿತು. ಇಡೀ ಊರೇ ಹೊಗಳುತ್ತಿದ್ದರೂ ಅಪ್ಪ ಮಾತ್ರ ಹಂಗಿಸುವುದನ್ನು ಕಂಡು ಭಾರವಿಗೆ ಅಪ್ಪನ ಮೇಲೆ ಸಿಟ್ಟು ಹೆಚ್ಚಾಗುತ್ತಾ ಹೋಯಿತು. ಎಷ್ಟರ ಮಟ್ಟಿಗೆ ಅಂದರೆ ಅಪ್ಪನನ್ನು ಕೊಂದೇಬಿಡಬೇಕು ಅಂದುಕೊಂಡ. ಒಂದು ರಾತ್ರಿ ಅಟ್ಟದ ಮೇಲೆ ಕುಳಿತು ಅಪ್ಪ-ಅಮ್ಮ ಊಟ ಮಾಡಿ ಮಲಗುವುದನ್ನೇ ಕಾಯುತ್ತಿದ್ದ. ನಿದ್ದೆ ಮಾಡಿದ ಸಮಯದಲ್ಲಿ ಅಪ್ಪನನ್ನು ಕೊಲ್ಲಬೇಕು ಎಂಬುದು ಅವನ ಯೋಜನೆ. ಅಪ್ಪ ಊಟ ಮುಗಿಸಿ ಎಲೆ-ಅಡಿಕೆ ಹಾಕಿಕೊಳ್ಳುತ್ತಿದ್ದಾಗ ಅಮ್ಮ ಹೇಳುತ್ತಿದ್ದಳು, "ಭಾರವಿ ಅಷ್ಟೊಂದು ಬುದ್ಧಿವಂತ. ಎಲ್ಲರೂ ಅವನನ್ನು ಮೆಚ್ಚುತ್ತಾರೆ. ನೀವು ಮಾತ್ರ ಅವನನ್ನು ಮೂದಲಿಸುತ್ತಲೇ ಇರುತ್ತೀರಿ. ಅವನು ಬಹಳ ಬೇಜಾರು ಮಾಡಿಕೊಂಡಿದ್ದಾನೆ". ಅದಕ್ಕೆ ಅಪ್ಪ, "ನನಗೆ ಗೊತ್ತು, ಅವನು ತುಂಬಾ ಜಾಣ. ಅವನನ್ನು ಹೊಗಳಿದರೆ ತೃಪ್ತಿ ಆಗಿ ಸುಮ್ಮನಿದ್ದುಬಿಡ್ತಾನೆ. ನಾನು ಹೀಗೆ ಮಾಡಿದರೆ ಅವನು ಇನ್ನೂ ಹೆಚ್ಚು ಸಾಧನೆ ಮಾಡಿ ಇನ್ನೂ ಮುಂದೆ ಬರುತ್ತಾನೆ. ಅದೇ ನನ್ನ ಆಸೆ". ಭಾರವಿಗೆ ದುಃಖ ತಡೆಯಲಾಗಲಿಲ್ಲ. ಕೆಳಗೆ ಬಂದವನೇ ಅಪ್ಪನ ಕಾಲು ಹಿಡಿದು ಕ್ಷಮೆ ಕೇಳಿದ. ಅಪ್ಪ-ಅಮ್ಮರಿಗೆ ವಿಧೇಯನಾಗಿ ಹೆಚ್ಚಿನ ಸಾಧನೆ ಮಾಡಿ ಜಗತ್ಪ್ರಸಿದ್ಧನಾದ. ಅಪ್ಪ-ಅಮ್ಮರ ಮಾತುಗಳು ಅವನ ಕಿವಿಗೆ ಬಿದ್ದಿರದೇ ಇದ್ದಿದ್ದರೆ ಅನಾಹುತವಾಗಿಬಿಡುತ್ತಿತ್ತು.
     ಹಾಗಾದರೆ ಹೊಗಳಿಕೆ ಕೆಟ್ಟದ್ದೇ? ಖಂಡಿತಾ ಅಲ್ಲ, ಹೊಗಳಿಕೆ ಕೆಟ್ಟದ್ದಲ್ಲ, ಹೊಗಳಿಕೆಯ ನಿರೀಕ್ಷೆ ಕೆಟ್ಟದ್ದು ಅಷ್ಟೆ. ಹೊಗಳಿಕೆ ಒಂದು ಅದ್ಭುತ ಉತ್ತೇಜಕ ಟಾನಿಕ್. ಆ ಟಾನಿಕ್ ಅನ್ನು ಹಿತಮಿತವಾಗಿ ಸೇವಿಸಬೇಕು. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಜೇನನ್ನು ಸ್ವಲ್ಪ ಸೇವಿಸಿದರೆ ಉಲ್ಲಾಸವಾಗುತ್ತದೆ, ಹೆಚ್ಚಾದರೆ ಹೊಟ್ಟೆ ಕೆಡುತ್ತದೆ. ಹೊಗಳಿಕೆ ಚಮತ್ಕಾರ ಮಾಡಬಲ್ಲದು. ನೀನು ಮಾಡಬಲ್ಲೆ, ದೊಡ್ಡ ಶಕ್ತಿವಂತ ನೀನು ಎಂದು ಹನುಮಂತನನ್ನು ಉತ್ತೇಜಿಸಿದಾಗ ಅವನು ಸಮುದ್ರವನ್ನೇ ಲಂಘಿಸಿ ಲಂಕೆ ತಲುಪಿದ. ಒಬ್ಬ ಕ್ರೀಡಾಪಟು, ವಿದ್ಯಾರ್ಥಿ, ಸಾಧಕ, ಯೋಧ, ಹೀಗೆ ಯಾರೇ ಇರಲಿ ಉತ್ತೇಜಿಸಿದಾಗ ಅವರಲ್ಲಿನ ಅತ್ಯುತ್ತಮ ಶಕ್ತಿ, ಅತ್ಯುತ್ತಮ ಪ್ರತಿಭೆ ಹೊರಬರುತ್ತದೆ. ಕೀಳರಿಮೆ ಓಡಿಸಲು ಇದಕ್ಕಿಂತ ಉತ್ತಮ ಔಷಧಿ ಇರಲಾರದು. ಖ್ಯಾತ ನಟಿ ಮರ್ಲಿನ್ ಮನ್ರೋ ಹೇಳಿದ್ದ ಮಾತಿದು: 'ನಾನು ಚಿಕ್ಕವಳಾಗಿದ್ದಾಗ ಯಾರೂ ನನ್ನನ್ನು ನೀನು ಸುಂದರವಾಗಿದ್ದೀಯ ಎಂದು ಹೇಳಲಿಲ್ಲ. ಪ್ರತಿಯೊಬ್ಬ ಚಿಕ್ಕ ಹುಡುಗಿಗೂ ನೀನು ಚೆನ್ನಾಗಿದ್ದೀಯಾ ಎಂದು ಅವಳು ಸುಂದರವಾಗಿರಲಿ, ಇಲ್ಲದಿರಲಿ, ಹೇಳಲೇಬೇಕು'. ಆತ್ಮ ವಿಶ್ವಾಸ ಉತ್ತೇಜಿಸುವ ಹೊಗಳಿಕೆಯ ಮಾತುಗಳಿಂದ ಸಾಧಕರು ಉದಯಿಸುತ್ತಾರೆ.
     ಹೊಗಳಿಕೆಯ ಮತ್ತೊಂದು ಮುಖ ನೋಡೋಣ. ವಿಷಾದದ ಸಂಗತಿಯೆಂದರೆ ಹೆಚ್ಚಿನವರು ಹೊಗಳಿಸಿಕೊಂಡು ಹಾಳಾಗಲು ಬಯಸುತ್ತಾರೆಯೇ ಹೊರತು, ಟೀಕಿಸಿಕೊಂಡು ಉಳಿಯಲು ಇಷ್ಟಪಡಲಾರರು. ಯಾರನ್ನಾದರೂ ಹಾಳು ಮಾಡಬೇಕೆಂದರೆ ಅವರನ್ನು ಯದ್ವಾ ತದ್ವಾ ಹೊಗಳಿದರೆ ಆಯಿತು. ಇದು ನರಕಕ್ಕೆ ಹೋಗುವ ದಾರಿಯನ್ನು ಸುಂದರವಾದ ರೀತಿಯಲ್ಲಿ ಅಲಂಕರಿಸಿದಂತೆ! ಹೊಗಳಿಸಿಕೊಂಡವರು ತಮ್ಮ ತಪ್ಪುಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತಾರೆ ಮತ್ತು ಫಲಿತಾಂಶ, ಅವರು ಕೆಳಗೆ ಬೀಳುತ್ತಾರೆ. ಹೊಗಳುವುದು ಹಾಳು ಮಾಡುವುದಕ್ಕೆ, ಬಯ್ಯುವುದು ಬದುಕುವುದಕ್ಕೆ ಎಂಬ ಆಡು ಮಾತಿನಲ್ಲಿ ಅರ್ಥವಿದೆ. ಶಕುನಿ ಕೌರವರನ್ನು ಹೊಗಳಿ, ಹೊಗಳಿ ಅವರನ್ನು ನಾಶ ಮಾಡುವ ಒಳ ಇಚ್ಛೆಯನ್ನು ನೆರವೇರಿಸಿಕೊಂಡ. ರಾಜಕೀಯ ನಾಯಕರನ್ನು, ಹಿರಿಯ ಅಧಿಕಾರಿಗಳನ್ನು ಹೊಗಳಿ, ಓಲೈಸಿ ಸ್ವಾರ್ಥ ಈಡೇರಿಸಿಕೊಳ್ಳುವವರನ್ನು ಸಾಮಾನ್ಯವಾಗಿ ಕಾಣುತ್ತಲೇ ಇರುತ್ತೇವೆ. ಅಂತಹವರ ಹಿಂದೆ ಹಿಂಡು ಹಿಂಡು ಹಿಂಬಾಲಕರುಗಳು ಕಾಣಸಿಗುತ್ತಾರೆ. ಅಧಿಕಾರ ಹೋಯಿತೋ, ಅವರ ಹಿಂದೆ ನರಪಿಳ್ಳೆಯೂ ಇರುವುದಿಲ್ಲ.
     ಹೊಗಳಿಕೆಯನ್ನು ಇಷ್ಟಪಡದಿರುವವರು ಇದ್ದಾರೆಯೇ? ದೇವರನ್ನೂ ಹೊಗಳಿ ಮೆಚ್ಚಿಸಲು ಪ್ರಯತ್ನಿಸುವವರು ನಾವು. ಸಹಸ್ರನಾಮ ಪಠಣ, ಪೂಜೆ, ಪುನಸ್ಕಾರ, ಇತ್ಯಾದಿಗಳೂ ಸಹ ದೇವರನ್ನು ಹೊಗಳುವ ಕ್ರಿಯೆಗಳೇ! ಇಡೀ ಜಗತ್ತನ್ನೇ ನಮ್ಮ ಉಪಯೋಗಕ್ಕಾಗಿ ಕೊಟ್ಟಿರುವ ಭಗವಂತನನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಹೀಗಾಗಿ ಅವನ ಅಗಾಧತೆಯನ್ನು ನೆನೆಯುವಾಗ ವಿಶೇಷಣಗಳನ್ನು ಬಳಸಲೇಬೇಕಾಗುತ್ತದೆ. ಆದರೆ ಪರಮಾತ್ಮನಿಗೆ ಸ್ತುತಿಯೂ ಒಂದೇ, ನಿಂದೆಯೂ ಒಂದೇ. ಇಂತಹ ಕ್ರಿಯೆಗಳು ಉಪಾಸನೆಯ ಹೆಸರಿನಲ್ಲಿ ಆತ್ಮೋನ್ನತಿಯನ್ನು ಪಡೆಯುವ ಪ್ರಯತ್ನವೆಂಬ ಅರಿವು ಸಾಧಕರಿಗೆ ಮಾತ್ರ ತಿಳಿದಿರುತ್ತದೆ.
     ಹೊಗಳಿಕೆ ಹಿತಮಿತವಾಗಿ ಬಳಸಬೇಕಾದ ಸಂಗತಿಯಾಗಿದೆ. ಮೆಚ್ಚುಗೆ ವ್ಯಕ್ತಪಡಿಸಲು ಹೊಗಳಿಕೆ ಉತ್ತಮ ಸಾಧನ. ಹೊಗಳಬೇಕಾದ ಸಂದರ್ಭದಲ್ಲಿ ಜಿಪುಣತನ ತೋರದೆ ಹೊಗಳೋಣ. ಕೀಳರಿಮೆಯಿಂದ ನರಳುವವರನ್ನು ಹೊಗಳಿ ಅವರಲ್ಲಿನ ಆತ್ಮವಿಶ್ವಾಸ ಜಾಗೃತಗೊಳಿಸೋಣ. ಮುನ್ನಡೆಯುತ್ತಿರುವವರನ್ನು ಬೆನ್ನುತಟ್ಟಿ ಹೆಚ್ಚು ಸಾಧನೆ ಮಾಡಲು ಪ್ರೇರಿಸೋಣ. ಹೊಗಳಿಕೆಯನ್ನು ಸ್ವಾರ್ಥದ ಸಲುವಾಗಿ ಬಳಸಿಕೊಳ್ಳುವವರ ಜೊತೆ ಎಚ್ಚರದಿಂದ ಇರೋಣ. ಹೊಗಳಿಕೆ ನಮ್ಮನ್ನು ಉಬ್ಬಿಸಿ ಮೈಮರೆಸದಿರುವಂತೆ ಜಾಗೃತರಾಗಿರೋಣ. ಉಪಕಾರ ಮಾಡಿ ಹೊಗಳಿಕೆ ನಿರೀಕ್ಷಿಸದಿರೋಣ. ನಾವೇ ಉಪಕೃತರಾದಾಗ ಉಪಕರಿಸಿದವರನ್ನು ಮರೆಯದೆ ಹೊಗಳೋಣ. ಹೊಗಳಿಕೆ ಸಂಬಂಧಿಸಿದವರೆಲ್ಲರಿಗೆ ಆನಂದ ತರುತ್ತದೆ. ಒಂದು ಮಾತು ನೆನಪಿಡೋಣ: ನಮ್ಮ ಕುರಿತ ಎಲ್ಲಾ ಹೊಗಳಿಕೆಗಳಿಗೂ ನಾವು ಹಕ್ಕುದಾರರಾಗಬಹುದು, ಅವುಗಳನ್ನು ನಮ್ಮ ಹೃದಯ ಮತ್ತು ಮೆದುಳು ಒಪ್ಪುವುದಾದರೆ ಮಾತ್ರ!
-ಕ.ವೆಂ. ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ