ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಆಗಸ್ಟ್ 15, 2017

ನಮ್ಮವರು?

     ವಾಟ್ಸಪ್ ಗುಂಪುಗಳು, ಫೇಸ್ ಬುಕ್, ಇತ್ಯಾದಿಗಳಲ್ಲಿ ವಿಚಾರ ವಿರೋಧಿಗಳು ಪರಸ್ಪರ ಕೆಸರೆರಚಾಟದಲ್ಲಿ ಎಷ್ಟರ ಮಟ್ಟಿಗೆ ಹೋಗುತ್ತಾರೆಂದರೆ ಕೀಳು ಪದಪ್ರಯೋಗಗಳು, ನಿಂದನೆಗಳು ಪ್ರಯೋಗವಾಗುವುದನ್ನು ಗಮನಿಸಿರಬಹುದು. ಕೆಲವೊಮ್ಮೆ ಅದು ಪೊಲೀಸ್, ನ್ಯಾಯಾಲಯಗಳ ಮೆಟ್ಟಲಿಗೂ ತಲುಪುತ್ತವೆ, ಕಾನೂನು-ಸುವ್ಯವಸ್ಥೆ ಸಮಸ್ಯೆಗಳೂ ಉಂಟಾಗುತ್ತವೆ. ಸಾಮಾನ್ಯ ಉದಾಹರಣೆಯೆಂದರೆ ಮೋದಿ ಪರ ಮತ್ತು ವಿರೋಧಿ ಬಣಗಳು ಎದ್ದು ಕಾಣುತ್ತವೆ. ಮೋದಿಯವರ ಪ್ರತಿ ನಡೆಯನ್ನೂ ಹೊಗಳುವವರು ಇರುವಂತೆಯೇ, ಪ್ರತಿ ಮಾತಿನಲ್ಲೂ ಬೇರೆಯದೇ ಅರ್ಥ ಹುಡುಕಿ ದೂಷಿಸುವವರಿದ್ದಾರೆ. ವಿಶೇಷವೆಂದರೆ ತಮ್ಮವರ ತಪ್ಪುಗಳ ಬಗ್ಗೆ ಅವರು ತುಟಿಪಿಟಕ್ ಅನ್ನುವುದಿಲ್ಲ. ಕೇರಳದ ಮುಖ್ಯಮಂತ್ರಿ ಮಂಗಳೂರಿಗೆ ಭೇಟಿ ನೀಡಲು ಬಂದ ಸಂದರ್ಭದಲ್ಲೂ ಎರಡು ವಿಚಾರಗಳ ಸಂಘರ್ಷ ತಾರಕಕ್ಕೆ ಏರಿತ್ತು. ಇರಲಿ ಬಿಡಿ, ನಾನು ಹೇಳ ಹೊರಟಿರುವುದು ನಮ್ಮವರು ಮತ್ತು ಬೇರೆಯವರು ಎಂಬ ಬಗ್ಗೆ ನಮಗಿರುವ ಧೋರಣೆಯ ಬಗ್ಗೆ ಅಷ್ಟೆ.
     ನೀವು ಯಾವ ಜನ?- ಯಾವ ಜಾತಿಯೆಂದು ಕೇಳಿ ತಿಳಿದುಕೊಳ್ಳುವ ಸಲುವಾಗಿ ಎದುರಾಗಬಹುದಾದ ಪ್ರಶ್ನೆಯಿದು. ಕೆಲವರಿಗೆ ಈ ಪ್ರಶ್ನೆಯಿಂದ ಮುಜುಗರವೂ ಆಗುತ್ತದೆ. ಬರುವ ಉತ್ತರ ಬ್ರಾಹ್ಮಣ, ಲಿಂಗಾಯತ, ಗೌಡರು, ಕ್ರಿಶ್ಚಿಯನ್, ಮುಸ್ಲಿಮ್, ಇತ್ಯಾದಿಗಳಿದ್ದರೆ, ಮರುಪ್ರಶ್ನೆ ಬರುತ್ತದೆ, ಅದರಲ್ಲಿ ಯಾರು? ಸ್ಮಾರ್ಥ, ವೈಷ್ಣವ, ಮಾಧ್ವ, ದಾಸಗೌಡ, ಮುಳ್ಳುಗೌಡ, ಆರಾಧ್ಯ, ಶಿಯಾ, ಸುನ್ನಿ, ಪ್ರಾಟೆಸ್ಟೆಂಟ್ . . . . ಮರು ಉತ್ತರ ಹೀಗೆ ಸಾಗುತ್ತದೆ. ಅಷ್ಟಕ್ಕೇ ನಿಲ್ಲುವುದಿಲ್ಲ. ಆ ಒಳಜಾತಿಯಲ್ಲಿ ಒಳಪಂಗಡಗಳು, ಊರು, ಹೀಗೆ ಕುಲಾನ್ವೇಷಣೆ ಮುಂದುವರೆಯುತ್ತದೆ. ಇಬ್ಬರದೂ ಒಂದೇ ಜಾತಿ, ಒಳಜಾತಿಗಳಾದರೆ ಆತ್ಮೀಯತೆಯ ಬಂಧ ಗಟ್ಟಿಯಾಗುತ್ತದೆ. ಏಕೆ ಹೀಗೆ? ನಮ್ಮವರು, ಇತರೆಯವರು ಎನ್ನುವ ಭೇದ ಜಾತಿಗೆ ಮಾತ್ರ ಸೀಮಿತವಲ್ಲ. ವೃತ್ತಿ, ರಾಜಕೀಯ, ಕಲಿಯುವ ಕಲಿಕೆ, ಊರು, ಸ್ವಭಾವ, ಅಂತಸ್ತು, ಇತ್ಯಾದಿಗಳಿಗೂ ಅನ್ವಯವಾಗುತ್ತದೆ. ಈ ನಮ್ಮವರು ಪ್ರತಿಯೊಂದರಲ್ಲೂ ಇತರರಿಗಿಂತ ಮುಂದಿರಬೇಕು ಎಂಬ ಭಾವನೆ ಎಲ್ಲರಲ್ಲೂ ಅಂತರ್ಗತವಾಗಿರುತ್ತದೆ. ನಮ್ಮವರು ಎಂಬ ಭಾವನೆ ಪರಿಚಯವಿಲ್ಲದವರನ್ನೂ ಒಗ್ಗೂಡಿಸುತ್ತದೆ, ಇತರರು ಎನ್ನುವ ಭಾವನೆ ಪರಿಚಯವಿರುವರನ್ನೂ ಸಂಶಯದಿಂದ ನೋಡುವಂತೆ ಮಾಡುತ್ತದೆ.
     ಇಂದು ಕಾಣುತ್ತಿರುವ ದ್ವೇಷ, ಜಗಳ, ಭಿನ್ನಮತ, ಇತ್ಯಾದಿಗಳ ಮೂಲವೇ ಈ ನಮ್ಮವರು, ಇತರರು ಅನ್ನುವ ಭಾವನೆ. ನಮ್ಮ ದೇವರೇ ಬೇರೆ, ನಮ್ಮ ಧರ್ಮವೇ ಬೇರೆ, ನಮ್ಮ ಜಾತಿಯೇ ಬೇರೆ, ನಮ್ಮ ಆಚಾರವೇ ಬೇರೆ, ನಮ್ಮ ವಿಚಾರವೇ ಬೇರೆ - ಹೀಗೆ ನಾವೇ ಬೇರೆ, ನೀವೇ ಬೇರೆಗಳನ್ನು ಬೆಳೆಸುತ್ತಾ, ಪೋಷಿಸುತ್ತಾ ಬಂದುದರ ಫಲವಿದು. ಈ ಬೇರೆಗಳು ಬೆಳೆಯುತ್ತಾ ಬೆಳೆಯುತ್ತಾ ನಮ್ಮವರಲ್ಲೇ ನಮ್ಮ ಒಳಗಿನವರು, ಒಳಗಿನ ಒಳಗಿನವರು ಸಹ ಬೆಳೆಯುತ್ತಾ ಹೋದರು. ಎಷ್ಟು ಧರ್ಮಗಳು, ಎಷ್ಟು ಜಾತಿಗಳು, ಎಷ್ಟು ಪಂಗಡಗಳು, ಒಳಪಂಗಡಗಳು!! ಒಂದೇ ಧರ್ಮ, ಜಾತಿ, ಪಂಗಡಗಳವರಲ್ಲೇ ವಿಭಿನ್ನ ರೀತಿಯ ಆಚಾರ-ವಿಚಾರಗಳು!! ನಮ್ಮವರೇ ನಮಗೆ ಪರಕೀಯರಾಗುತ್ತಾ ಹೋದರು. ಈ ಭಾವನೆ ಪರಸ್ಪರರಲ್ಲಿ ದ್ವೇಷ, ವೈಮನಸ್ಸುಗಳನ್ನು ಉಂಟುಮಾಡಿ, ಒಂದಾಗದ ವಾತಾವರಣ ನಿರ್ಮಾಣವಾಯಿತು. ಈ ಒಳಜಗಳಗಳೇ ವಿದೇಶೀಯರು ನಮ್ಮ ದೇಶದ ಮೇಲೆ ಸಹಸ್ರ ವರ್ಷಗಳವರೆಗೆ ಹಿಡಿತ ಸಾಧಿಸಲು ಸಹಕಾರಿಯಾದವು.
     ನಮ್ಮಲ್ಲಿ ಈ ನಮ್ಮವರು, ಇತರರು ಭಾವನೆ ಎಷ್ಟು ರಕ್ತಗತವಾಗಿದೆಯೆಂದರೆ ಯಾರಾದರೂ ದಾರ್ಶನಿಕರು, ಸಂತರು ಭೇದ ಭಾವಗಳನ್ನು ದೂರಮಾಡಿ ಜಾತಿಗಳನ್ನು ಒಂದುಗೂಡಿಸಲು ಮಾಡುವ ಪ್ರಯತ್ನಕ್ಕೆ ಓಗೊಡುವವರದ್ದೇ ಮತ್ತೊಂದು ಧರ್ಮ/ಜಾತಿ ಆಗಿಬಿಡುತ್ತದೆ. ಇರುವ ಗುಂಪುಗಳ ಜೊತೆಗೆ ಮತ್ತೊಂದು ಗುಂಪು ಸೇರ್ಪಡೆಯಾಗುತ್ತದೆ. ಮಾನವತಾವಾದಿ ಬಸವಣ್ಣನವರ ಜಾತಿಗಳನ್ನು ಒಗ್ಗೂಡಿಸುವ ಕರೆಗೆ ಓಗೊಟ್ಟವರದ್ದೇ ಒಂದು ಪ್ರತ್ಯೇಕ ಜಾತಿಯಾದುದನ್ನು ಉದಾಹರಿಸಬಹುದು. ಶಂಕರಾಚಾರ್ಯರ ತತ್ವ, ಸಿದ್ಧಾಂತಗಳನ್ನು ಒಪ್ಪುವವರು ಸ್ಮಾರ್ತರೆನಿಸಿದರು. ಮಧ್ವಾಚಾರ್ಯರ ಅನುಯಾಯಿಗಳು ಮಾಧ್ವರಾದರು. ರಾಮಾನುಜರ ವಿಚಾರಗಳನ್ನು ಒಪ್ಪಿದವರು ವೈಷ್ಣವರೆನಿಸಿದರು. ಹೀಗೆ ಜಾತಿಗಳು ಹೆಚ್ಚುತ್ತಾ ಹೋದವು. ವಿಭಿನ್ನ ಆಚಾರ-ವಿಚಾರಗಳನ್ನು ರೂಢಿಸಿಕೊಂಡರು. ತಾವೇ ಹೆಚ್ಚು ಎಂದು ತರ್ಕ-ವಿತರ್ಕಗಳಲ್ಲಿ ಮುಳುಗಿಹೋದರು. ಜಾತಿಗಳು ಹೆಚ್ಚಿದಂತೆ ದೇವರುಗಳೂ ಹೆಚ್ಚಾಗುತ್ತಾ ಹೋದರು. ಸಮಾಜಕ್ಕೆ ಮಾರ್ಗದರ್ಶಿಯಾದ ಆದರ್ಶಪುರುಷರುಗಳನ್ನೂ, ಸಾಧು-ಸಂತರನ್ನೂ ದೇವರ ಮಟ್ಟಕ್ಕೆ ಏರಿಸಿ ದೇವರುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿರುವುದನ್ನೂ ಕಂಡಿದ್ದೇವೆ, ಕಾಣುತ್ತಲಿದ್ದೇವೆ. ಮುಸ್ಲಿಮರು, ಮುಸ್ಲಿಮೇತರರು ಎಂಬ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದಕತೆ ದೊಡ್ಡ ಪಿಡುಗಾಗಿದೆ.
     ಜಗತ್ತು ನಡೆದಿರುವುದೇ ಭಿನ್ನತೆಯಿಂದ! ಭಿನ್ನತೆಯಿರುವುದರಿಂದಲೇ ಜಗತ್ತಿಗೆ ಅರ್ಥವಿದೆ. ಆದರೆ ಈ ಭಿನ್ನತೆ ಪರಸ್ಪರರ ಉತ್ಕರ್ಷಕ್ಕೆ ಕಾರಣವಾಗಬೇಕೇ ಹೊರತು ಅವನತಿಗಲ್ಲ. ದೇವನ ಸೃಷ್ಟಿಯಲ್ಲೇ ಇರುವ ಭಿನ್ನತೆಗಳು ಪರಸ್ಪರರಿಗೆ ಪೂರಕವಾಗಿವೆ. ಆದರೆ ಮಾನವ ನಿರ್ಮಿತ ಭಿನ್ನತೆಗಳು ಅವನನ್ನು ಪಾತಾಳಕ್ಕೆ ತಳ್ಳುತ್ತಿವೆ. ಈ ನಮ್ಮವರು ಅನ್ನುವ ಭಾವನೆ ಎಷ್ಟು ಸಂಕುಚಿತವಾಗುತ್ತಾ ಹೋಗುತ್ತದೋ ಅಷ್ಟೂ ಸಮಸ್ಯೆಗಳ ತೀವ್ರತೆ ಹೆಚ್ಚುತ್ತಾ ಹೋಗುತ್ತದೆ. ನಮ್ಮವರು ಅನ್ನುವ ಭಾವನೆ ಒಳ್ಳೆಯದೇ; ಆದರೆ ಆ ಭಾವನೆ ವಿಶಾಲದೃಷ್ಟಿಯಿಂದ ಕೂಡಿ ನಮ್ಮವರ ಅಭಿವೃದ್ಧಿಯೊಂದಿಗೆ ಮತ್ತು ಆ ಮೂಲಕ ಇತರ ಎಲ್ಲರ ಅಭಿವೃದಿಯ ಧ್ಯೇಯ ಹೊಂದಿದ್ದಲ್ಲಿ ಉತ್ತಮ. ಭಿನ್ನತೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಆಗದಿರುವುದನ್ನು ಅರ್ಥ ಮಾಡಿಕೊಂಡು ಭಿನ್ನತೆಗಳನ್ನು ಉನ್ನತಿಗೆ ಸಹಕಾರಿಯಾಗುವಂತೆ ಯಾರಿಗೂ ನೋವಾಗದಂತೆ ಸರ್ವ ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಬಳಸುವುದನ್ನು ಉತ್ತೇಜಿಸಬೇಕಿದೆ.
     ಇಂದು ಪ್ರಚಲಿತವಿರುವ ಅನೇಕ ಜಾತಿಗಳಿಗೆ, ಜಾತಿಪದ್ಧತಿಗೆ ವೇದಗಳೇ ಮೂಲವೆಂದು ಆರೋಪಿಸಲಾಗುತ್ತಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಚಾತುರ್ವಣ್ಯಗಳನ್ನು ಜಾತಿಗಳೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಯಾವುದೋ ಸುದೀರ್ಘ ಹಿಂದಿನ ಕಾಲದಲ್ಲಿ ಜಾತಿಯನ್ನು ಹುಟ್ಟಿನಿಂದ ಬರುವುದೆಂದು ಪರಿಗಣಿಸಲ್ಪಟ್ಟು, ಅದೇ ಮುಂದುವರೆದು, ಸಂಪ್ರದಾಯವಾದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪೋಷಿಸಿಕೊಂಡು ಬರುತ್ತಿರುವುದೂ ಸತ್ಯ. ಸತ್ಯದ ಹಿನ್ನೆಲೆಯಲ್ಲಿ ಪೂರ್ವಾಗ್ರಹಪೀಡಿತರಾಗದೆ ಅಧ್ಯಯನ ಮಾಡುವವರಿಗೆ ವೇದಗಳಲ್ಲಿ ಜಾತಿಗಳು ಎಂದೂ ಹುಟ್ಟಿನಿಂದ ಬರುವುದೆಂದು ಪ್ರತಿಪಾದಿಸಿರುವುದು ಕಂಡುಬರುವುದಿಲ್ಲ. ಇಂದಿನ ವ್ಯವಸ್ಥೆಯೂ ಹುಟ್ಟಿನಿಂದ ಬರುವ ಜಾತಿಗೆ ಅನಗತ್ಯ ಪ್ರಾಧಾನ್ಯತೆ ನೀಡಿ, ರಾಜಕಾರಣಿಗಳು ಅಧಿಕಾರದ ಸಲುವಾಗಿ ಅದನ್ನು ಬಲಗೊಳಿಸುತ್ತಿರುವುದು ಕಠೋರ ಸತ್ಯ. ಇದರಿಂದಾಗಿ ದೇಶ ಸಂಕಟದ ಸಮಯಗಳಲ್ಲಿ ಒಂದಾಗಿ ನಿಲ್ಲುವುದೂ ದುಸ್ತರವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. 
          ನಮ್ಮವರು, ಇತರರು ಎಂಬವು ನಮ್ಮ ಸೃಷ್ಟಿಯಾಗಿವೆ, ಭಗವಂತನ ಸೃಷ್ಟಿಯಲ್ಲ. ಭಗವಂತನ ಸೃಷ್ಟಿಯಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಅನೇಕ ರೀತಿಯ ವೈದ್ಯಕೀಯ ಪದ್ಧತಿಗಳಿವೆ - ಆಯುರ್ವೇದ, ಅಲೋಪತಿ, ಹೋಮಿಯೋಪತಿ, ಇತ್ಯಾದಿ. ಇವುಗಳಲ್ಲಿ ಯಾವುದು ಮೇಲು? ಯಾವುದು ಕೀಳು? ಎಲ್ಲಾ ವೈದ್ಯಕೀಯ ಶಾಸ್ತ್ರಗಳ ಉದ್ದೇಶ ಒಂದೇ, ಆರೋಗ್ಯ ಕಾಪಾಡುವುದು. ಪ್ರತಿಯೊಂದು ವಿಧಾನಕ್ಕೂ ಈಗಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮುಂದುವರೆಯಲು ಅವಕಾಶಗಳು ಮುಕ್ತವಾಗಿವೆ. ವೈದ್ಯರುಗಳಲ್ಲೇ ಹಲವು ವಿಶೇಷ ತಜ್ಞವೈದ್ಯರಿದ್ದಾರೆ - ನರರೋಗ, ಹೃದಯರೋಗ, ನೇತ್ರ, ದಂತ, ಮನೋರೋಗ ಹೀಗೆ ಹಲವಾರು ವಿಭಾಗಗಳಲ್ಲಿ ಪರಿಣತರಿದ್ದಾರೆ. ಇವರಲ್ಲಿ ಯಾರು ಹೆಚ್ಚು ಮತ್ತು ಯಾರು ಕಡಿಮೆ? ವೈದ್ಯರ ಮಗ ವೈದ್ಯನೇ ಆಗಬೇಕೆಂದಿದೆಯೇ? ವಕೀಲರ ಮಕ್ಕಳು ವಕೀಲರೇ ಆಗಿರುತ್ತಾರೆಯೇ? ಇದೇ ವಾದವನ್ನು ಜಾತಿಗಳ ವಿಚಾರದಲ್ಲೂ ಅನ್ವಯಿಸಬಹುದಲ್ಲವೇ? ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ನೀಡಿ, ಒಡೆದು ಆಳುವ ವ್ಯವಸ್ಥೆ ಇರುವವರೆಗೂ ಜಾತಿ ಆಧಾರಿತ ಮೇಲು-ಕೀಳುಗಳಿಗೆ ಅವಕಾಶವಿದ್ದೇ ಇರುತ್ತದೆ. ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ| ಮಧ್ಯಮಾಸೋ ಮಹಸಾ ವಿವಾವೃಧುಃ|| ಸುಜಾತಾಸೋ ಜನುಷಾ ಪೃಶ್ನಿಮಾತರೋ| ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ|| [ಋಗ್. ೫.೫೯.೬] ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಉನ್ನತ ಸ್ಥಿತಿಗೆ ಏರಬಲ್ಲವರಾಗಿದ್ದಾರೆ ಎಂಬ ಈ ವೇದಮಂತ್ರದ ಕರೆ  ನಮಗೆ ಏಕೆ ಕೇಳಿಸುವುದಿಲ್ಲ? ದೇವರನ್ನು ಅರಿಯುವ ಕ್ರಿಯೆಗೆ ಜ್ಞಾನ, ಕರ್ಮ, ಉಪಾಸನೆಗಳು ಸಾಧನಾಪಥಗಳು. ಈ ಜ್ಷಾನ ಕರ್ಮ, ಉಪಾಸನೆಗಳು ಯಾವುದೇ ಒಂದು ಜಾತಿಯ, ಒಂದು ವರ್ಗದ, ಒಂದು ಧರ್ಮದ ಸ್ವತ್ತಲ್ಲ. ಎಲ್ಲಾ ಮಾನವರ ಸ್ವತ್ತು ಅದು, ಆಸಕ್ತಿ ಇರುವ ಯಾರೇ ಆದರೂ ಅದನ್ನು ಪಡೆಯಬಹುದು, ಮಾಡಬಹುದು, ಅನುಷ್ಠಾನಕ್ಕೆ ತರಬಹುದು. ಈ ಮೂಲತತ್ವ ಅರ್ಥವಾದರೆ, ನಮ್ಮ ಸಂಕುಚಿತತೆ ಕಡಿಮೆಯಾದೀತು!
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ