ಅಪಾಯಕಾರಿ ಖಿನ್ನತೆ ಹೇಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತದೆಯೆಂಬದಕ್ಕೆ ನನ್ನದೇ ಉದಾಹರಣೆ ಕೊಡುವೆ. ಬೆಳ್ತಂಗಡಿಯಲ್ಲಿ ತಹಸೀಲ್ದಾರನಾಗಿದ್ದಾಗ ಕರಾವಳಿ ಉತ್ಸವದ ಸಲುವಾಗಿ ಧರ್ಮಸ್ಥಳಕ್ಕೆ ಹೋಗಿದ್ದೆ. ಆದೇ ಸಮಯದಲ್ಲಿ ಕಛೇರಿಯಲ್ಲಿದ್ದ ಶಿರಸ್ತೇದಾರರು ಮತ್ತು ಗುಮಾಸ್ತರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಲೋಕಾಯುಕ್ತ ಇನ್ಸ್‌ಪೆಕ್ಟರರಿಗೆ ನನ್ನನ್ನೂ ಪ್ರಕರಣದಲ್ಲಿ ಸಿಲುಕಿಸಬೇಕೆಂದಿತ್ತು. ಗುಮಾಸ್ತರು ಹೇಳಿಕೆಯಲ್ಲಿ ರಾಷ್ಟ್ರೀಯ ಉಳಿತಾಯ ಪತ್ರದ ಸಲುವಾಗಿ ಹಣ ಪಡೆದಿದ್ದೆಂದು ಹೇಳಿಕೆ ಕೊಟ್ಟಿದ್ದರು. ಇನ್ಸ್‌ಪೆಕ್ಟರರು ಅದನ್ನು ಹರಿದುಹಾಕಿ ತಹಸೀಲ್ದಾರರಿಗೆ ಕೊಡುವ ಸಲುವಾಗಿ ಪಡೆದಿದ್ದೆಂದು ಬರೆದುಕೊಡಲು ಸೂಚಿಸಿದ್ದರು. ಗುಮಾಸ್ತರು ಪುನಃ ಹಿಂದಿನಂತೆಯೇ ಬರೆದುಕೊಟ್ಟರು. ಇನ್ಸ್‌ಪೆಕ್ಟರರು ಗುಮಾಸ್ತರ ಕಪಾಳಕ್ಕೆ ಬಾರಿಸಿ, ನಿನಗೆ ಬದುಕುವುದಕ್ಕೆ ಗೊತ್ತಿಲ್ಲ. ಹೇಳಿದ ಹಾಗೆ ಬರೆದುಕೊಡು ಎಂದು ಗದರಿಸಿ ಪುನಃ ಹೇಳಿಕೆಯನ್ನು ಹರಿದುಹಾಕಿದ್ದರು. ಆ ಗುಮಾಸ್ತರು, 'ಸಾರ್, ತಹಸೀಲ್ದಾರರು ಒಳ್ಳೆಯವರು. ಅವರ ಬಗ್ಗೆ ಬರೆದುಕೊಡಲು ಮನಸ್ಸು ಒಪ್ಪುತ್ತಿಲ್ಲ. ಬಲವಂತ ಮಾಡಿದರೆ ನಾನೇ ಲಂಚ ತೆಗೆದುಕೊಂಡೆ ಎಂದು ಬರೆದುಕೊಡುತ್ತೇನೆ' ಎಂದು ಹೇಳಿ, ಪುನಃ ಹಿಂದಿನ ಹೇಳಿಕೆಯನ್ನೇ ಬರೆದುಕೊಟ್ಟರು. ಆ ಗುಮಾಸ್ತರನ್ನು ನಾನೆಂದೂ ಮರೆಯಲಾರೆ. ಶಿರಸ್ತೇದಾರರ ಮೇಜಿನ ಡ್ರಾಯರಿನಲ್ಲಿ 300 ರೂ. ಸಿಕ್ಕಿದ್ದು ಅದು ಪ್ರಕರಣಕ್ಕೆ ಸಂಬಂಧಿಸಿರಲಿಲ್ಲ. ಅವರು ಮಾತ್ರ ಇನ್ಸ್‌ಪೆಕ್ಟರರ ಸೂಚನೆಯಂತೆ ತಹಸೀಲ್ದಾರರಿಗೆ ಕೊಡುವ ಸಲುವಾಗಿ ಎಂದು ಬರೆದುಕೊಟ್ಟಿದ್ದರು. ಧರ್ಮಸ್ಥಳದಲ್ಲಿದ್ದ ನನಗೆ ಇನ್ಸ್‌ಪೆಕ್ಟರರು ಫೋನು ಮಾಡಿ ಕಛೇರಿಗೆ ಬರಲು ಸೂಚಿಸುತ್ತಿದ್ದರು. ಪ್ರಕರಣದ ಹಿನ್ನೆಲೆ ಅರಿಯದ ನಾನು ಕಛೇರಿಗೆ ಬಂದರೆ ತೊಂದರೆಯಾಗುವುದೆಂದು ಇನ್ನೊಬ್ಬ ಗುಮಾಸ್ತರು ಗುಟ್ಟಾಗಿ ಫೋನಿನಲ್ಲಿ ತಿಳಿಸಿದ್ದರು. ನಾನು ಜಿಲ್ಲಾಧಿಕಾರಿಯವರಿಗೆ ಮತ್ತು ಸಹಾಯಕ ಆಯುಕ್ತರಿಗೆ ಫೋನು ಮೂಲಕ ಇದ್ದ ವಿಷಯ ತಿಳಿಸಿದೆ. ಅವರೂ ನನಗೆ ಕಛೇರಿಗೆ ಹೋಗದಿರಲು ಸೂಚಿಸಿದರು. ಇನ್ಸ್‌ಪೆಕ್ಟರರು ನನಗೆ, 'ನೀನು ಎಲ್ಲಿ ಅಡಗಿದ್ದರೂ ಬಿಡುವುದಿಲ್ಲ' ಎಂದು ಏಕವಚನದಲ್ಲಿ ಹೇಳಿದ್ದು ಅಸಹ್ಯ ಮತ್ತು ಭಯ ಮೂಡಿಸಿತ್ತು. ನಾನು ಕೋರಿರದಿದ್ದರೂ ಜಿಲ್ಲಾಧಿಕಾರಿಯವರು ಲೋಕಾಯುಕ್ತ ಅಧೀಕ್ಷಕರೊಂದಿಗೆ ಮಾತನಾಡಿ 'ತಹಸೀಲ್ದಾರರ ಬಗ್ಗೆ ನನಗೆ ಗೊತ್ತಿದೆ. ಅವರ ತಪ್ಪಿದ್ದರೆ ಪ್ರಕರಣದಲ್ಲಿ ಸೇರಿಸಲು ಅಭ್ಯಂತರವಿಲ್ಲ. ಸುಮ್ಮಸುಮ್ಮನೆ ಸಿಲುಕಿಸಬೇಡಿ' ಎಂದಿದ್ದರು. ನಂತರದಲ್ಲಿ ನನಗೆ ಹೇಳಿಕೆ ಕೊಡಲು ಲೋಕಾಯುಕ್ತ ಕಛೇರಿಯಿಂದ ಸೂಚನೆ ಬಂದಿತ್ತು. ನನಗೆ ತಿಳಿದ ಸಂಗತಿ ಕುರಿತು ಹೇಳಿಕೆ ನೀಡಿದ್ದೆ. ನನ್ನ ಯಾವುದೇ ತಪ್ಪಿಲ್ಲದಿದ್ದರೂ ಪ್ರಕರಣದಲ್ಲಿ ಸಿಲುಕಿಸಬಹುದೆಂಬ ಆತಂಕದಲ್ಲಿ ಕಳೆದಿದ್ದ ಆ 3 ದಿನಗಳಲ್ಲಿ ನಾನು ನಾನಾಗಿರಲಿಲ್ಲ, ಹುಚ್ಚನಂತಾಗಿದ್ದೆ. ಒಂದು ವೇಳೆ ಸಿಲುಕಿಸಿದ್ದಿದ್ದರೆ ಬಂಧುಗಳು, ಸ್ನೇಹಿತರ ಎದುರಿಗೆ ಹೇಗೆ ಮುಖ ತೋರಿಸುವುದು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಮಗಳ ಮದುವೆ ಮಾಡಬೇಕಿದ್ದಿತು. ಈಗ ಆ ಘಟನೆಯ ಕುರಿತು ಅವಲೋಕಿಸಿದಾಗ ಅಂದಿನ ನಿರ್ಧಾರ ತಪ್ಪೆಂದು ಅನ್ನಿಸುತ್ತಿದೆ. ಇತರರು ಏನಾದರೂ ಅಂದುಕೊಳ್ಳುತ್ತಾರೆ ಎಂದು ನನ್ನ ಜೀವವನ್ನು ಬಲಿಗೊಡುವುದು ಸರಿಯಾಗುತ್ತಿರಲಿಲ್ಲ. ಪುಣ್ಯಕ್ಕೆ ನನ್ನನ್ನು ಆ ಪ್ರಕರಣದಲ್ಲಿ ಸಿಲುಕಿಸಿರಲಿಲ್ಲ. ಆ ಗುಮಾಸ್ತರು ನನ್ನ ಜೀವ ಉಳಿಸಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ ಈ ಲೇಖನ ಬರೆಯಲು ಅವಕಾಶ ಸಿಕ್ಕಿದೆ.
ಖಿನ್ನತೆ ಕೆಳಮಟ್ಟದ ಮನೋಸ್ಥಿತಿಯಾಗಿದ್ದು, ವ್ಯಕ್ತಿಯ ಯೋಚನೆಗಳು, ನಡವಳಿಕೆಗಳು, ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆಗೊಳಗಾದವರು ಅತಂತ್ರ ಭಾವನೆಯಿಂದ ದುಃಖಿಸುತ್ತಾ, ಹತಾಶೆ ಮತ್ತು ಅಭದ್ರತೆಯ ಭಾವನೆಯಿಂದ ಕುಗ್ಗಿರುತ್ತಾರೆ. ಏನು ಮಾಡಬೇಕೆಂದು ತೋಚದೆ ಚಡಪಡಿಸುತ್ತಿರುತ್ತಾರೆ, ಹುಚ್ಚರಂತೆ ವರ್ತಿಸುತ್ತಾರೆ, ಕಿರುಚಾಡುತ್ತಾರೆ. ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಸಂತಸ ಕೊಡುತ್ತಿದ್ದ ಸಂಗತಿಗಳು ನೀರಸವೆನಿಸುತ್ತವೆ. ಮರೆವು ಬಾಧಿಸುತ್ತದೆ. ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ನಿದ್ರೆಯಲ್ಲಿ ನಡೆಯುವುದು, ಹೆಚ್ಚಾಗಿ ನಿದ್ರಿಸುವುದು, ಹಲವಾರು ದೈಹಿಕ ಕಾಯಿಲೆಗಳಿಂದ ನರಳುವುದು ಮುಂತಾದ ಅನುಭವಗಳಾಗುವುದರ ಜೊತೆಗೆ ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಅಥವ ಆತ್ಮಹತ್ಯೆಗೆ ಪ್ರಯತ್ನಿಸಬಹುದು. ಖಿನ್ನತೆಗೆ ಒಳಗಾದವರಿಗೆ ಸಹಾನುಭೂತಿಗಿಂತಲೂ, ಅವರೊಂದಿಗೆ ತಾವು ಇದ್ದೇವೆ ಎಂದು ಭದ್ರತೆಯ ಭಾವನೆಯನ್ನು ಒದಗಿಸುವುದು ಅತ್ಯಂತ ಸೂಕ್ತವಾದುದು.
ಚಿಕ್ಕಂದಿನ ಕಷ್ಟಗಳು, ಪೋಷಕರ ತಾರತಮ್ಯ ಮಕ್ಕಳನ್ನು ಖಿನ್ನತೆಯಿಂದ ನರಳುವಂತೆ ಮಾಡುತ್ತವೆ. ಅದು ಮುಂದೆ ಜೀವನದುದ್ದಕ್ಕೂ ಬಾಧಿಸಬಹುದು. ಆರ್ಥಿಕ ಅನಾನುಕೂಲತೆ, ನಷ್ಟಗಳು, ನಿರುದ್ಯೋಗದ ಸಮಸ್ಯೆ, ವಾಸಿಯಾಗದ ಕಾಯಿಲೆಗಳು, ಅಪೌಷ್ಟಿಕತೆ, ಪ್ರೀತಿಸಿದವರ ದ್ರೋಹ, ದುರಂತ ಘಟನೆಗಳು, ಸಾಮಾಜಿಕವಾಗಿ ಒಂಟಿಯೆನಿಸುವುದು, ದಾಂಪತ್ಯದಲ್ಲಿನ ಸಮಸ್ಯೆಗಳು, ಅಸೂಯೆ/ಮತ್ಸರ, ಸ್ತ್ರೀಯರಲ್ಲಿ ಮೆನೋಪಾಸ್, ಇತ್ಯಾದಿಗಳೂ ಖಿನ್ನತೆಗೆ ಕಾರಣವಾಗಬಲ್ಲವು. ಖಿನ್ನತೆಗೆ ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರಕ್ಕಿಂತಲೂ ಮಾನಸಿಕ ಸಲಹೆ, ಚಿಕಿತ್ಸೆಗಳು ಪರಿಣಾಮಕಾರಿ.
ಈ ಖಿನ್ನತೆ ಹೇಗೆ ಬರುತ್ತದೋ ಊಹಿಸಲಾಗದು. ಚಾಕೊಲೇಟ್ ಕೊಡಿಸಲಿಲ್ಲ, ಹೊಸ ಬಟ್ಟೆ ಕೊಡಿಸಲಿಲ್ಲ, ಅಪ್ಪ/ಅಮ್ಮ/ಉಪಾಧ್ಯಾಯರು ಬೈದರು, ನಿರೀಕ್ಷಿತ ಅಂಕಗಳು ಬರಲಿಲ್ಲ ಮುಂತಾದ ಕ್ಷುಲ್ಲಕ ಕಾರಣಗಳಿಗಾಗಿ ಜೀವ ಕಳೆದುಕೊಳ್ಳುವ ಮಕ್ಕಳೂ ಇರುತ್ತಾರೆ. ದೊಡ್ಡವರೆನಿಸಿಕೊಂಡವರೂ ಹೀಗೆ ಮಾಡಿದವರಿದ್ದಾರೆ. ಸೂಕ್ಷ್ಮ ಮನೋಭಾವದ ಇಂತಹವರೊಂದಿಗೆ ಜಾಗೃತರಾಗಿರುವುದು ಅವಶ್ಯವಾಗಿದೆ. ಹೆಚ್ಚಿನ ಸಮಸ್ಯೆಗಳು ಕೌಟುಂಬಿಕ ಸಾಮರಸ್ಯತೆಯ ಕೊರತೆಯಿಂದ ಬರುತ್ತವೆ. ಪತಿ/ಪತ್ನಿ ತನ್ನ ಮಾತೇ ನಡೆಯಬೇಕು, ತಾನು ಹೇಳಿದಂತೆಯೇ ಆಗಬೇಕು ಎಂದು ಸಾಧಿಸುವುದು, ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡದಿರುವುದು, ಯಾವುದೋ ಹಳೆಯ ಸಂಗತಿಯನ್ನು ಹಿಡಿದುಕೊಂಡು ಸದಾ ಕಿರಿಕಿರಿ ಮಾಡುವುದು, ಜಗಳವಾಡುವುದು ಮಾಡುತ್ತಿದ್ದರೆ ಸಮರಸತೆಗೆ ಜಾಗವೆಲ್ಲಿ? ಒಂದು ಹಂತದವರೆಗೆ ಸಹಿಸಿಕೊಂಡಾರು, ಮಿತಿ ಮೀರಿದಾಗ ಎಡವಟ್ಟು ಆಗದೇ ಇರದು. ಸಂಸಾರ ಸಾರ ಕಳೆದುಕೊಳ್ಳುತ್ತದೆ.
ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಮಯದಲ್ಲಿ, ಒಂದಲ್ಲಾ ಒಂದು ಕಾರಣಕ್ಕಾಗಿ ಖಿನ್ನತೆಯಿಂದ ಬಳಲಿದವರೇ ಇರುತ್ತಾರೆ. ವಿವೇಚನೆ ಕೈಕೊಟ್ಟರೆ ಖಿನ್ನತೆಗೊಳಗಾದವರು ತಮ್ಮ ಜೀವನದ ಬಲೂನಿಗೆ ತಾವೇ ಪಿನ್ನು ಚುಚ್ಚಿಕೊಳ್ಳುತ್ತಾರೆ. ಆದ್ದರಿಂದ ಖಿನ್ನತೆಯಿಂದ ಹೊರಬಂದ ಸಮಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಂತಹ ಸಂದರ್ಭದಲ್ಲೂ ದುಡುಕದಿರುವ ನಿರ್ಧಾರವನ್ನು ಕೈಗೊಳ್ಳಬೇಕು. ಜೀವನವೆಂದರೆ ಅದೊಂದೇ ಸಮಸ್ಯೆ ಅಲ್ಲ, ಅದಕ್ಕೂ ಮೀರಿದ ಬಾಳು ಇದೆ, ಬದಲಿ ದಾರಿ/ಪರಿಹಾರಗಳು ಇವೆ ಎಂದು ಮನಗಾಣಬೇಕು. ದುಡುಕಿನ ಕಾರಣದಿಂದ ಮಕ್ಕಳು, ಪೋಷಕರು, ಪ್ರೀತಿಪಾತ್ರರುಗಳಿಗೆ ಆಗುವ ನೋವಿನ ಅರಿವು ಮೂಡಿಸಿಕೊಳ್ಳಬೇಕು. ನೆರವಾಗಬಲ್ಲ, ಆಸರೆಯ ಹಸ್ತ ಚಾಚಬಲ್ಲವರೊಂದಿಗೆ ಸಂಪರ್ಕದಲ್ಲಿರಬೇಕು, ಕಷ್ಟದ ಸಂದರ್ಭದಲ್ಲಿ ಅವರ ಸಹಾಯ ಪಡೆಯಬೇಕು ಎಂದು ನಿಶ್ಚಯಿಸಿಕೊಳ್ಳಬೇಕು. ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಬೇಕು, ತಮಗೆ ತಾವೇ ಆಸರೆಯಾಗಿ ನಿಲ್ಲುವ ಮನಸ್ಸು ಮಾಡಬೇಕು. ಹೀಗೆ ಮಾನಸಿಕವಾಗಿ ಬಲಗೊಂಡರೆ ಮಾತ್ರ ಖಿನ್ನತೆಯನ್ನು ಮೆಟ್ಟಿ ನಿಲ್ಲಬಲ್ಲ ಶಕ್ತಿ ಸಂಚಯವಾದೀತು.
ಖಿನ್ನತೆಯಿಂದ ನರಳುವವರ ಕುಟುಂಬದ ಇತರರೂ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು. ಹಂಗಿಸಿ, ಭಂಗಿಸಿ ಮಾಡುವುದಕ್ಕಿಂತ ಚೆನ್ನಾಗಿರಲು ಏನು ಮಾಡಬೇಕೆಂದು ಯೋಚಿಸಿ ನಡೆದುಕೊಳ್ಳುವುದು ವಿವೇಕವಂತರ ಲಕ್ಷಣ. ಇಲ್ಲದಿದ್ದರೆ ಅನಾಹುತಗಳಿಗೆ ಎಡೆಯಾಗುತ್ತದೆ. ಕೋಪ, ಅಸಹನೆ, ದ್ವೇಷಗಳು ಇನ್ನೊಬ್ಬರನ್ನು ತಿದ್ದಲಾರವು. ಬದಲಾಗಿ ಅವು ದ್ವೇಷಿಸಿದವರನ್ನೇ ದಹಿಸುತ್ತದೆ. ಕ್ಷುಲ್ಲಕ ಕಾರಣಕ್ಕಾಗಿ ಯಾರೂ ದುಡುಕಲಾರರು, ಅದರ ಹಿಂದೆ ಸತತ ಕಿರಿಕಿರಿಯ ಹಿನ್ನೆಲೆ ಇದ್ದೀತು, ಕ್ಷುಲ್ಲಕ ಕಾರಣಗಳು ಕೇವಲ ನೆಪಗಳು ಎಂಬ ಅರಿವಿರಬೇಕು. ಕುಟುಂಬದ ಕಲಹಗಳಲ್ಲಿ ಗೆದ್ದವರು ಸೋಲುತ್ತಾರೆ, ಸೋಲುವವರು ಗೆಲ್ಲುತ್ತಾರೆ. ದುರಭಿಮಾನ ಒಳ್ಳೆಯದಲ್ಲ. ಖಿನ್ನತೆಯಿಂದ ಬಳಲುವವರಿಗೆ ಭದ್ರತೆಯ ಭಾವನೆ ನೀಡಿದರೆ ಸಮಸ್ಯೆ ಅರ್ಧ ಪರಿಹಾರವಾದಂತೆ. ಕಲ್ಲು, ಇಟ್ಟಿಗೆ, ಮರಳು, ಸಿಮೆಂಟುಗಳನ್ನು ಜೋಡಿಸಿ ಒಳ್ಳೆಯ ಕಟ್ಟಡ ಕಟ್ಟಬಹುದು, ಆದರೆ ಅದು ಒಳ್ಳೆಯ ಮನೆ ಅನ್ನಿಸಿಕೊಳ್ಳಬೇಕಾದರೆ ಅದರಲ್ಲಿ ವಾಸಿಸುವವರ ಹೃದಯಗಳ ಜೋಡಣೆ ಆದರೆ ಮಾತ್ರ ಸಾಧ್ಯ.
ಸುಂದರವಾದ ಕಮಲ ಕೆಸರಿನಲ್ಲಿ ಬೆಳೆಯುತ್ತದೆ. ದುಃಖ, ಬಡತನ, ಕಾಯಿಲೆ, ಮೂದಲಿಕೆ, ನಷ್ಟ, ತೊಂದರೆಗಳು ಮುಂತಾದ ಅನೇಕ ಕಷ್ಟಗಳೆಂಬ ಕೆಸರಿನ ನಡುವೆ ಸುಂದರವಾದ ಜೀವನ ಕುಸುಮ ಅರಳಿಸುವವರು ನಾವಾಗಬೇಕು. ನಮ್ಮ ಬದುಕು ನಮ್ಮದು. ಅದನ್ನು ಇತರರ ಕಾರಣದಿಂದ ಹಾಳು ಮಾಡಿಕೊಳ್ಳಬಾರದು. ಜೀವನವೆಂದರೆ ಶೇ.೧೦ರಷ್ಟು ನಮಗೆ ಏನು ಅನುಭವಕ್ಕೆ ಬರುತ್ತದೋ ಅದು ಮತ್ತು ಶೇ. ೯೦ರಷ್ಟು ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆಯೋ ಅದು! ಸಮರ್ಥವಾಗಿ ಪ್ರತಿಕ್ರಿಯಿಸೋಣ, ಖಿನ್ನತೆಯನ್ನು ಹೊಡೆದಟ್ಟೋಣ.
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ