ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಸೆಪ್ಟೆಂಬರ್ 25, 2017

ಅಹಮಿಕೆ (Ego)


     ಅಹಮಿಕೆ, ನಾನತ್ವ, ಅಹಂಕಾರ, ಜಂಭ ಇತ್ಯಾದಿಗಳೆಲ್ಲವೂ ಒಂದೇ ಅರ್ಥ ಕೊಡುವುದಾಗಿದ್ದರೂ, ಅಹಂಕಾರ, ಜಂಭ ಎಂಬ ಪದಗಳನ್ನು ಟೀಕಿಸುವ ಸಲುವಾಗಿ ಬಳಸಲಾಗುತ್ತಿದೆ. ಇಂಗ್ಲಿಷಿನಲ್ಲಿ ಇದನ್ನು ಇಗೊ(ego) ಎನ್ನುವರು. ಸ್ವಾಭಿಮಾನ, ಸ್ವಪ್ರಾಮುಖ್ಯತೆ, ಸ್ವಗೌರವ, ಸ್ವಮಹತ್ವ, ಸ್ವವಿಶ್ವಾಸ, ಸ್ವನಂಬಿಕೆ, ಸ್ವಪ್ರಶಂಸೆ ಇತ್ಯಾದಿ ಸ್ವಂತದ ಕುರಿತ ವಿಷಯಗಳಲ್ಲಿ ಆದ್ಯತೆ ಅಹಮಿಕೆಯ ಪ್ರಮುಖ ಲಕ್ಷಣಗಳು. ಈ ಅಹಮಿಕೆ ಜಾಗೃತ ಮತ್ತು ಸುಪ್ತ ಮನಸ್ಸುಗಳ ನಡುವಿನ ಮಧ್ಯಸ್ಥಗಾರನಾಗಿದ್ದು, ಸ್ವಂತದ ವ್ಯಕ್ತಿತ್ವ ರೂಪಿಸುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಯಾರ ಬಗ್ಗೆಯಾದರೂ, ಅವನಿಗೆ ಅಹಂಕಾರ ಜಾಸ್ತಿ ಎಂದರೆ ಅವನು ಸ್ವಾರ್ಥಿ, ಅವನದೇ ಹೆಚ್ಚುಗಾರಿಕೆಯಿರಬೇಕೆಂದು ಬಯಸುವವನು ಎಂದು ಹೇಳಿದಂತೆ. ಈ ನಾನತ್ವ ಅಥವ ಅಹಮಿಕೆ ಜಾಗೃತ ಮನಸ್ಸಿನ ಭಾಗವಾಗಿದ್ದು, ಹೊರಗಿನ ಆಗು-ಹೋಗುಗಳಿಗೆ, ಅನುಭವಗಳಿಗೆ ಪ್ರತಿಕ್ರಿಯಿಸುವ ರೀತಿಯನ್ನು ನಿರ್ದೇಶಿಸುತ್ತದೆ. ಮೂಲ ಸಂಸ್ಕೃತ ಪದವಾದ ಅಹಂ ಎಂಬುದರ ಅರ್ಥ ನಾನು ಎಂದು!
     ಅಹಮಿಕೆಯ ಲಕ್ಷಣಗಳು ಚಿಕ್ಕಂದಿನಿಂದಲೇ ಕಾಣಬರುತ್ತದೆ. ಚಿಕ್ಕ ಮಕ್ಕಳು ತಮ್ಮ ಆಟಿಕೆಗಳನ್ನು ಇತರರು ಮುಟ್ಟುವುದನ್ನು ಇಷ್ಟಪಡದಿರುವುದು, ತಾಯಿ ಇತರ ಮಕ್ಕಳನ್ನು ಎತ್ತಿಕೊಂಡು ಆಡಿಸಿದರೆ ಅತ್ತು ರಂಪ ಮಾಡುವುದು, ಇತ್ಯಾದಿಗಳನ್ನು ಉದಾಹರಿಸಬಹುದು. ಬೆಳೆಯುತ್ತಾ ಹೋದಂತೆ, ತಮ್ಮನ್ನು ಗುರುತಿಸುವ, ತಮಗೆ ಮಹತ್ವ ಕೊಡುವ ಮಕ್ಕಳೊಂದಿಗೆ ಮಾತ್ರ ಬೆರೆಯುತ್ತಾರೆ. ಈ ಲಕ್ಷಣ ಹದಿವಯಸ್ಸಿಗೆ, ಪ್ರೌಢ ವಯಸ್ಸಿಗೆ ಬಂದಂತೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಹಣ, ಅಧಿಕಾರ, ಅವಕಾಶಗಳು ಅಹಮಿಕೆಯನ್ನು ಪೋಷಿಸುವುದರಲ್ಲಿ, ಹೆಚ್ಚಿಸುವುದರಲ್ಲಿ ಸಹಾಯ ಮಾಡುತ್ತವೆ. ತನ್ನ ಮಾತೇ ನಡೆಯಬೇಕು, ತಾನು ಹೇಳಿದಂತೆಯೇ ಎಲ್ಲವೂ ಆಗಬೇಕು ಎಂದು ಬಯಸುವುದು ಅಹಮಿಕೆಯ ತುದಿಯಾಗುತ್ತದೆ. ಇಂತಹ ಮನೋಭಾವದವರು ತಮ್ಮನ್ನು ಗೌರವಿಸದವರನ್ನು ಹಳಿಯುವ, ಅವರಿಗೆ ತೊಂದರೆ ಕೊಡುವ ಮನಸ್ಥಿತಿಗೆ ತಲುಪುತ್ತಾರೆ. ಈ ಮನೋಭಾವ ಎಷ್ಟೋ ಮನೆಗಳನ್ನು ಹಾಳು ಮಾಡಿದೆ, ಎಷ್ಟೋ ಕುಕೃತ್ಯಗಳಿಗೆ ಪ್ರೇರೇಪಣೆ ನೀಡಿದೆ.
     ಈ ಅಹಮಿಕೆ ಒಳ್ಳೆಯದೋ, ಕೆಟ್ಟದ್ದೋ? ಇದು ಇರಬೇಕೋ ಬೇಡವೋ? ಈ ಪ್ರಶ್ನೆಗೆ ಎರಡೂ ಉತ್ತರಗಳು ಸಮಂಜಸವಾಗುತ್ತವೆ. ಅಂದರೆ, ಅಹಮಿಕೆ ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು. ಹಾಗೆಯೇ, ಅಹಮಿಕೆ ಇರಲೂ ಬೇಕು, ಇರಲೂ ಬಾರದು! ವಿಚಾರ ಮಾಡೋಣ. ವಿವಿಧ ಜೀವಜಂತುಗಳ ಪೈಕಿ ದೇವರು ಮಾನವನಿಗೆ ಮಾತ್ರ ವಿವೇಚನೆ ಮಾಡುವ ಶಕ್ತಿ ಕೊಟ್ಟಿದ್ದಾನೆ. ಅವನಿಗೆ ಏನನ್ನಾದರೂ ಮಾಡಬಲ್ಲ, ಮಾಡದಿರಬಲ್ಲ, ಬೇರೇನನ್ನೋ ಮಾಡಬಲ್ಲ ಶಕ್ಯತೆಯಿದೆ. ಅಹಮಿಕೆ ಸ್ವಂತದ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆಯಾದ್ದರಿಂದ ಅಹಮಿಕೆ ಇರಲೇಬೇಕು. ಅತಿಯಾದರೆ ಅಮೃತವೂ ವಿಷವಾಗುವಂತೆ, ಅಹಮಿಕೆ ಒಂದು ಮಿತಿಯಲ್ಲಿದ್ದರೆ ಉತ್ತಮ. ಒಬ್ಬ ವ್ಯಕ್ತಿ ಅಧಮನೋ, ಸಾಮಾನ್ಯನೋ, ಉತ್ತಮನೋ, ಒಳ್ಳೆಯವನೋ, ಕೆಟ್ಟವನೋ ಎಂಬುದು ಅವನು ಹೊಂದಿರುವ ಅಹಮಿಕೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ.
     ಸ್ವಂತ ವ್ಯಕ್ತಿತ್ವಕ್ಕೆ ಮಹತ್ವ ಕೊಟ್ಟುಕೊಳ್ಳದಿದ್ದವರು ದುರ್ಬಲರಾಗಿರುತ್ತಾರೆ. ವಿವೇಕಾನಂದರು ಬಲಶಾಲಿಗಳಾಗಲು, ಸ್ವಾಭಿಮಾನಿಗಳಾಗಲು ಒತ್ತಾಸೆ ನೀಡುತ್ತಿದ್ದವರು. ದುರ್ಬಲರಾಗಿರುವುದು ಪಾಪವೆಂದೇ ಅವರು ಹೇಳುತ್ತಿದ್ದರು. ವೇದವಂತೂ 'ಅದೀನಾ ಸ್ಯಾಮ ಶರದಃ ಶತಮ್'- ದೈನ್ಯತೆಯಿಲ್ಲದಂತೆ ನೂರು ವರ್ಷಗಳ ಕಾಲ ಬಾಳಬೇಕು ಎಂದಿದೆ. ಕಾರಣಗಳೇನೇ ಇರಲಿ, ವಿವೇಚನೆ ಮಾಡಿ ನಡೆಯುವ ಶಕ್ತಿಯ ಕೊರತೆಯಿರುವವರ ಅಹಮಿಕೆ ಕೆಳಮಟ್ಟದಲ್ಲಿರುತ್ತದೆ ಮತ್ತು ಅವರು ಇತರರಿಗೆ ಅಧೀನರಾಗಿ ಅವರು ಹೇಳಿದಂತೆ ನಡೆದುಕೊಳ್ಳುವುದು ಅವಮಾನವೆಂದು ಭಾವಿಸಲಾರರು. ಅಭ್ಯರ್ಥಿಗಳ ಯೋಗ್ಯತೆ, ಭವಿಷ್ಯದಲ್ಲಿ ಆಗುವ ಪರಿಣಾಮಗಳ ಚಿಂತೆಯಿಲ್ಲದೆ, ಅಲ್ಪ ಲಾಭದ ಸಲುವಾಗಿ ಚುನಾವಣೆಗಳಲ್ಲಿ ಹಣ ಕೊಟ್ಟವರು, ಹೆಂಡ ಕುಡಿಸಿದವರು ಹೇಳಿದವರಿಗೆ ಓಟು ಹಾಕುವವರನ್ನು ಇಂತಹವರ ಸಾಲಿಗೆ ಸೇರಿಸಬಹುದು.
ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು
ಇರುವುದಾದರೆ ಪಾಪ ದುರ್ಬಲತೆಯೊಂದೆ |
ದುರ್ಬಲತೆ ಪಾಪ ದುರ್ಬಲತೆಯೇ ಸಾವು
ವಿವೇಕವಾಣಿಯಿದು ನೆನಪಿರಲಿ ಮೂಢ ||
     ಸ್ವಾಭಿಮಾನಿಗಳ ಅಹಮಿಕೆ ಸಾಧನೆಗೂ ದಾರಿಯಾಗುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ಉತ್ತರಪ್ರದೇಶದ ಅಂಬೇಡ್ಕರ್ ನಗರದ ಅರುಣಿಮಾ ಸಿನ್ಹಾ ಇದಕ್ಕೆ ಪ್ರಬಲ ಮಾದರಿಯಾಗಿದ್ದಾಳೆ. ಸಿ.ಐ.ಎಸ್.ಎಫ್ ಪರೀಕ್ಷೆಗೆ ಹೋಗುವ ಸಲುವಾಗಿ ಲಕ್ನೌನಿಂದ ದೆಹಲಿಗೆ ಹೋಗುವ ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ 11.4.2011ರಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ಕಳ್ಳರು ಆಕೆಯ ಚೀಲ ಮತ್ತು ಸರವನ್ನು ಕಿತ್ತುಕೊಂಡಿದ್ದಲ್ಲದೆ, ಪ್ರತಿಭಟಿಸಿದ್ದ ಅವಳನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದುಬಿಟ್ಟಿದ್ದರು. ಅದೇ ಸಮಯಕ್ಕೆ ಎದುರಿನಿಂದ ಬರುತ್ತಿದ್ದ ರೈಲಿಗೆ ಸಿಕ್ಕಿ ಅವಳ ಕಾಲು ಜರ್ಜರಿತವಾಗಿತ್ತು. ಪ್ರಜ್ಞೆಯಿಲ್ಲದೆ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅವಳು ಬದುಕುವ ಬಗ್ಗೆ ಸಂದೇಹವಿತ್ತು. ಜೀವ ಉಳಿಸಲು ಆಸ್ಪತ್ರೆಯಲ್ಲಿ ಆಕೆಯ ಕಾಲನ್ನು ಮೊಳಕಾಲಿನಿಂದ ಕೆಳಕ್ಕೆ ಕತ್ತರಿಸಿದ್ದರು. ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಆಕೆಗೆ ಇದರಿಂದ ಆಘಾತವಾಗಿತ್ತು. ಆಕೆಗೆ ಕೇಂದ್ರ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕ ನೆರವು ದೊರೆಯಿತು. ಖಾಸಗಿ ಕಂಪೆನಿಯೊಂದು ಆಕೆಗೆ ಉಚಿತವಾಗಿ ಕೃತಕ ಕಾಲು ಅಳವಡಿಸಲು ನೆರವಾಯಿತು. ಕಾಲುಗಳನ್ನು ಕಳೆದುಕೊಂಡರೂ ಹತಾಶಳಾಗದೆ ಏನನ್ನಾದರೂ ಸಾಧಿಸಬೇಕೆಂಬ ಛಲ ಅವಳದಾಯಿತು.  ಆಸ್ಪತ್ರೆಯಲ್ಲಿದ್ದಾಗಲೇ ಎವರೆಸ್ಟ್ ಶಿಖರವನ್ನು ಏರುವ ಕನಸು ಕಂಡಳು.  ಅಗತ್ಯದ ತರಬೇತಿ ಮತ್ತು ಮಾರ್ಗದರ್ಶನ ಪಡೆದು ಪೂರ್ವಭಾವಿಯಾಗಿ 6150 ಮೀಟರ್ ಎತ್ತರದ ಐಲೆಂಡ್ ಶಿಖರವನ್ನು 2012ರಲ್ಲಿ ಯಶಸ್ವಿಯಾಗಿ ಏರಿದ್ದಳು. 1.4.2013ರಂದು ಮಾರ್ಗದರ್ಶಿ ಸುಸೇನ್ ಮಹತೋ ಜೊತೆಗೂಡಿ ಎವರೆಸ್ಟ್ ವಿಜಯಕ್ಕೆ ಹೊರಟ ಅರುಣಿಮಾ 51 ದಿನಗಳ ಸತತ ಕಠಿಣ ಪರಿಶ್ರಮದ ನಂತರದಲ್ಲಿ ಯಶಸ್ವಿಯಾಗಿ ಶಿಖರದ ತುತ್ತ ತುದಿಯನ್ನು 21.5.2013ರಂದು ತಲುಪಿಯೇಬಿಟ್ಟಳು! ಶಿಖರವೇರಿದ ಆಕೆ ಒಂದು ಸಂದೇಶವನ್ನು ಬರೆದು ಬಟ್ಟೆಯಲ್ಲಿ ಸುತ್ತಿ ಹಿಮದಲ್ಲಿ ಹೂತಿಟ್ಟಳು. ಆಕೆಯೇ ಹೇಳಿದಂತೆ ಅದು, ಶಂಕರ ಭಗವಾನ್ ಮತ್ತು ಜೀವನದುದ್ದಕ್ಕೂ ತನಗೆ ಚೈತನ್ಯದಾಯಿಯೆನಿಸಿದ್ದ ಸ್ವಾಮಿ ವಿವೇಕಾನಂದರಿಗೆ ಕೃತಜ್ಞತೆಯಾಗಿತ್ತು. ಕೈಕಾಲುಗಳು ಗಟ್ಟಿಯಾಗಿರುವವರಿಗೇ ಕಷ್ಟವೆನಿಸುವ ಆ ಕೆಲಸ ಆಕೆಗೆ ಸಾಧ್ಯವಾಗಿಸಿದ್ದು ಆಕೆಯ ಛಲ! ಗೆಲ್ಲಲೇಬೇಕೆಂಬ ಛಲ ಹೊತ್ತ ಅನೇಕ ಆಟಗಾರರುಗಳು ಕಾಣಸಿಗುತ್ತಾರೆ. ಅವರುಗಳಲ್ಲಿ ಇರುವುದು ತಮ್ಮ ಸ್ವಂತ ಶಕ್ತಿಯ ಮೇಲಿನ ನಂಬಿಕೆ, ಭರವಸೆಗಳು! ಅಹಮಿಕೆಗೆ, ಸ್ವಾಭಿಮಾನಕ್ಕೆ ಬೀಳುವ ಪೆಟ್ಟುಗಳು ಸಾಧನೆಗೆ ಕಾರಣವಾಗುವಂತೆ ಅನರ್ಥಗಳಿಗೂ ಎಡೆ ಮಾಡಿಕೊಡುವ ಸಾಧ್ಯತೆಯೂ ಇರುತ್ತದೆ. ಸಾಧಿಸಿ ತೋರಿಸಲು ಸಾಧ್ಯವಾಗದಿದ್ದವರು ಖಿನ್ನತೆಯಿಂದ, ಅವಮಾನದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳೂ ಕಾಣಸಿಗುತ್ತವೆ.
    ಸಂಪತ್ತು, ಯಶಸ್ಸು, ಅಧಿಕಾರ, ಕೀರ್ತಿ, ಇತ್ಯಾದಿಗಳು ಅಹಮಿಕೆ ಹೆಚ್ಚಿಸುವ ಸಾಧನಗಳು. ಸಮಚಿತ್ತದವರು, ಸಾಧಕರು ಈ ಸಂಗತಿಗಳಿಂದ ವಿಚಲಿತರಾಗದೆ ಎಂದಿನಂತೆ ಇರುತ್ತಾರೆ. ಹೆಚ್ಚಿನವರು ಮೆರೆಯಲು ಪ್ರಾರಂಭಿಸುತ್ತಾರೆ. ಈ ಹಂತದಲ್ಲಿಯೇ ಅವರು ಜಾರತೊಡಗುವುದು. ಇಂತಹವರು ಎಲ್ಲರೂ ತಮ್ಮನ್ನು ಗೌರವಿಸಬೇಕು, ಪ್ರಶಂಸಿಸಬೇಕು ಎಂದು ಬಯಸುತ್ತಾರೆ. ತಮ್ಮ ಕುರಿತ ಸಣ್ಣ ಟೀಕೆಯನ್ನೂ ಅವರು ಸಹಿಸಲಾರರು. ಆತ್ಮೀಯರಾದವರು ಅವರ ಒಳ್ಳೆಯದಕ್ಕಾಗಿಯೇ ಹೇಳುವ ಹಿತನುಡಿಗಳನ್ನೂ ಅವರು ಸಹಿಸರು. ಈ ಅಹಮಿಕೆ ಅತಿಯಾದಾಗ ಅವರ ನಡವಳಿಕೆಯಲ್ಲಿ ದರ್ಪ, ಅಹಂಕಾರ, ಇತರರ ಕುರಿತ ತಿರಸ್ಕಾರಗಳು ವಿಜೃಂಭಿಸತೊಡಗುತ್ತವೆ. ಹಿರಿಯರು, ಜ್ಞಾನಿಗಳನ್ನೂ ಸಹ ಅವಮಾನಿಸಲು ಅವರು ಹಿಂಜರಿಯುವುದಿಲ್ಲ. ಸ್ವಾರ್ಥಕ್ಕಾಗಿ ಏನು ಮಾಡಲೂ, ಯಾವ ಹಂತಕ್ಕೆ ಹೋಗಲೂ ಅವರು ಹಿಂಜರಿಯುವುದಿಲ್ಲ. ಇಂದಿನ ಬಹುತೇಕ ರಾಜಕಾರಣಿಗಳ ನಡವಳಿಕೆಗಳು ಇಂತಹ ಪ್ರವೃತ್ತಿಗೆ ಸಾಕ್ಷಿಗಳಾಗಿವೆ.
     ಅಹಮಿಕೆ ಇಲ್ಲದವರ, ಇರುವವರ, ಪ್ರಮಾಣದಲ್ಲಿ ಹೆಚ್ಚು-ಕಡಿಮೆಯಾದವರಲ್ಲಿ ಆಗುವ ಬದಲಾವಣೆಗಳ ಸಂಕ್ಷಿಪ್ತ ನೋಟ ಹರಿಸಿದೆವು. ಇನ್ನೊಂದು ಅತ್ಯುನ್ನತ ಸ್ಥಿತಿಯೊಂದಿದೆ. ಸಾಧಕರು, ಸಂತರು, ಜ್ಞಾನಿಗಳು, ದೇವಮಾನವರಲ್ಲಿ ಇದನ್ನು ಗುರುತಿಸಬಹುದು. ಅದು ಸಂತೃಪ್ತ, ಆನಂದಮಯ ಸ್ಥಿತಿ. ಅವರಿಗೆ ನಿಂದೆ, ಸ್ತುತಿ, ಸಮೃದ್ಧಿ, ಕೊರತೆ ಇತ್ಯಾದಿಗಳೆಲ್ಲದರ ಬಗ್ಗೆ ಆದರವೂ ಇರುವುದಿಲ್ಲ, ಅನಾದರವೂ ಇರುವುದಿಲ್ಲ. ಯಾವುದಕ್ಕೂ ಅವರು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅರ್ಥ ಮಾಡಿಕೊಳ್ಳೋಣ, ನಮ್ಮ ಅಹಮಿಕೆ ಇತರರ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಅವಲಂಬಿಸಿದೆ. ಅವರು ನಮ್ಮನ್ನು ಪ್ರಶಂಸಿಸಲೆಂದು ಅವರನ್ನು ತೃಪ್ತಿಗೊಳಿಸಲು ಪ್ರಯತ್ನಿಸುತ್ತೇವೆ ಮತ್ತು ಆ ಮೂಲಕ ನಮ್ಮ ಅಹಮಿಕೆಯನ್ನು ಶೃಂಗರಿಸಿಕೊಳ್ಳಲು ಶ್ರಮಿಸುತ್ತಿರುತ್ತೇವೆ. ಬದಲಾಗಿ, ನಮ್ಮ ಅಂತರಂಗವನ್ನು ತೃಪ್ತಿಗೊಳಿಸುವ ಪ್ರಯತ್ನ ಮಾಡತೊಡಗಿದಾಗ ಒಳಗಣ್ಣು ತೆರೆಯತೊಡಗುತ್ತದೆ, ಆತ್ಮವಿಕಾಸವಾಗುತ್ತಾ ಹೋಗುತ್ತದೆ. ನಮಗೆ ತಿಳಿಯದಂತೆಯೇ ಅಹಮಿಕೆ ಸೊರಗುತ್ತದೆ, ನಾವು ಬೆಳೆಯುತ್ತೇವೆ. ಜ್ಞಾನೋತ್ತುಂಗದಲ್ಲಿ ಅಹಮಿಕೆಯ ಅಂತ್ಯವಿದೆ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ