ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ನವೆಂಬರ್ 24, 2011

ಉತ್ತಮ ಬಾಂಧವ್ಯದೆಡೆಗೆ


     ಮನುಷ್ಯನ ಜೀವನದಲ್ಲಿ ಸಂಬಂಧಗಳು - ತಾಯಿ, ತಂದೆ, ಮಕ್ಕಳು, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಇತ್ಯಾದಿ - ಹಾಸುಹೊಕ್ಕಾಗಿದೆ. ಈ ಸಂಬಂಧಗಳು ಮಧುರವಾಗಿದ್ದರೆ ಚೆನ್ನ. ಇಲ್ಲದಿದ್ದರೆ. . . .? ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದಂತೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಮುಂದೊಮ್ಮೆ ಚಿಕ್ಕಪ್ಪ, ದೊಡ್ಡಮ್ಮ, ಷಡ್ಡಕ, ಓರಗಿತ್ತಿ, ಅತ್ತಿಗೆ, ಮೈದುನ, ದಾಯಾದಿ, ಸೋದರತ್ತೆ, ಇತ್ಯಾದಿ ಸಂಬಂಧಗಳ ಅರ್ಥವೇ ಮಕ್ಕಳಿಗೆ ತಿಳಿಯದೇ ಹೋಗಬಹುದು. ಈಗ ಹೆಚ್ಚಿನ ಕುಟುಂಬಗಳಲ್ಲಿ ಒಂದೇ ಮಗುವಿರುವುದರಿಂದ ಅಣ್ಣ, ತಮ್ಮ, ಅಕ್ಕ, ತಂಗಿಯರ ಪ್ರೀತಿಯ ಅನುಬಂಧಗಳ ಅನುಭವಗಳೂ ಸಹ ಆ ಮಕ್ಕಳಿಗೆ ಆಗುತ್ತಿಲ್ಲ. ಗಂಡ, ಹೆಂಡತಿ ಇಬ್ಬರೂ ಒಟ್ಟಿಗೆ ಇದ್ದರೆ ಅದೇ ಅವಿಭಕ್ತ ಕುಟುಂಬ ಎಂದು ಹೇಳುವ ಪರಿಸ್ಥಿತಿ ಇಂದು ಇದೆ. ಸಂಬಂಧಗಳು ಚೆನ್ನಾಗಿರಬೇಕೆಂದರೆ ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕೆಂಬ ಮೂಲ ತತ್ವ ನೆನಪಿಡಬೇಕು.
     ಬಾಂಧವ್ಯಗಳು ಸುಮಧುರವಾಗಿರಲು ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬಹುದು. ೧.ಒಳ್ಳೆಯ ಕೆಲಸಗಳನ್ನು ಮಾಡಿದಾಗ  ಮೆಚ್ಚುಗೆ ವ್ಯಕ್ತಪಡಿಸುವುದು, ಪ್ರೋತ್ಸಾಹಿಸುವುದು. ೨.ತಪ್ಪಾದಾಗ ಸರಿಪಡಿಸಲು ಪ್ರಾಮಾಣಿಕ ಯತ್ನ ಮಾಡುವುದು. ೩.ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯದಿರುವುದು. ೪.ಸಂಬಂಧಗಳು ಕೆಡುವಂತಹ ಯಾವುದೇ ಕೆಲಸಗಳನ್ನು ಮಾಡದಿರುವುದು. ೫.ಬಂಧುಗಳೊಳಗೆ ಸಾಧ್ಯವಾದಷ್ಟೂ ಹಣಕಾಸಿನ ವ್ಯವಹಾರಗಳನ್ನು ಇಟ್ಟುಕೊಳ್ಳದಿರುವುದು. ೬.ಸಭೆ, ಸಮಾರಂಭಗಳಿಗೆ ಆಹ್ವಾನ ಬಂದಾಗ ಹಾಜರಾಗುವುದು. ೭.ಹುಟ್ಟುಹಬ್ಬ, ವಿವಾಹದ ದಿನ, ಹಬ್ಬ ಹರಿದಿನಗಳು, ಇತ್ಯಾದಿ ದಿನಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು. ೮.ಕಷ್ಟ ಕಾಲದಲ್ಲಿ ನೆರವಾಗುವುದು, ಸಾಧ್ಯವಿಲ್ಲದಿದ್ದಲ್ಲಿ ಸಾಂತ್ವನ ಹೇಳುವುದು. ೯.ನೇರವಾಗಿ ಅಥವಾ ಹಿಂದಿನಿಂದ ದೂರದಿರುವುದು. ೧೦.ಭಿನ್ನಾಭಿಪ್ರಾಯ ಬಂದಾಗ ಮುಖಾಮುಖಿ ಮಾತನಾಡಿ ಭಿನ್ನತೆ ಪರಿಹರಿಸಿಕೊಳ್ಳುವುದು. ೧೧.ಹೇಳುವುದಕ್ಕಿಂತ ಕೇಳುವುದಕ್ಕೆ ಆದ್ಯತೆ ನೀಡುವುದು. . . . .ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಒಟ್ಟಿನಲ್ಲಿ ಸಮಯ, ಸಂದರ್ಭ, ಪರಿಸರಕ್ಕೆ ಅನುಗುಣವಾಗಿ ನಡೆಯುತ್ತಾ ನಮ್ಮ ಕಡೆಯಿಂದ ತಪ್ಪಾಗದಿರುವಂತೆ ನೋಡಿಕೊಂಡರೆ ಬಾಂಧವ್ಯಗಳು ಎಲ್ಲರಿಗೂ ಹಿತಕಾರಿಯಾಗಿರುತ್ತದೆ.


     ದ್ವೇಷಿಸಲು ನಮಗೆ ಹಲವಾರು ಕಾರಣಗಳು ಸಿಗುತ್ತವೆ. ಆದರೆ ಪ್ರೀತಿಸಲೂ ನಮಗೆ ಕಾರಣಗಳು ಇರುತ್ತವೆಂಬುದನ್ನು ಮರೆಯದಿರೋಣ. ಇದು ನಾವು ನೋಡುವ ದೃಷ್ಟಿಯನ್ನು ಅವಲಂಬಿಸಿದೆ. ದ್ವೇಷದ ಪರಿಣಾಮ ಇತರರನನ್ನೂ ಹಾಳು ಮಾಡಿ ನಮ್ಮನ್ನೂ ಹಾಳು ಮಾಡುತ್ತದೆ ಎಂಬುದನ್ನು ಮರೆಯಬಾರದು. ದ್ವೇಷದಿಂದ ಇತರರಿಗೆ ಆಗುವ ಹಾನಿಗಿಂತ ಸ್ವಂತಕ್ಕೆ ಮತ್ತು ತನ್ನ ಕುಟುಂಬದ ಸದಸ್ಯರಿಗೆ ಆಗುವ ಹಾನಿಯೇ ಹೆಚ್ಚು. ಕತ್ತಲೆಯನ್ನು ಕತ್ತಲೆಯಿಂದ ಓಡಿಸಲಾಗುವುದಿಲ್ಲ. ಅದಕ್ಕೆ ಬೆಳಕೇ ಬರಬೇಕು. ಹಾಗೆಯೇ ದ್ವೇಷವನ್ನು ದ್ವೇಷದಿಂದ ತೊಡೆಯಲಾಗುವುದಿಲ್ಲ. ಹಾಗೆ ಮಾಡಿದರೆ ದ್ವೇಷ ಇನ್ನೂ ಹೆಚ್ಚುವುದಲ್ಲದೆ ಅದರ ವ್ಯಾಪ್ತಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೂ ಹಬ್ಬುತ್ತದೆ. ದೊಡ್ಡವರ ತಪ್ಪಿಗೆ ಮಕ್ಕಳು ಬಲಿಯಾಗಬಾರದಲ್ಲವೇ? ದ್ವೇಷವನ್ನು ಗೆಲ್ಲಲು ಪ್ರೀತಿಗೆ ಮಾತ್ರ ಸಾಧ್ಯ. ತಪ್ಪು ಮಾಡಿಯೂ, ತಪ್ಪೆಂದು ಗೊತ್ತಿದ್ದೂ ತಿದ್ದಿಕೊಂಡು ನಡೆಯಲು ಬಯಸದವರು, ಅವರದೇ ಆದ ಕಾರಣಗಳಿಗಾಗಿ ಸುಳ್ಳು ಆರೋಪಗಳನ್ನು ಮಾಡಿ ಸಂಬಂಧಗಳನ್ನು ಕೆಡಿಸುವವರು ಕೆಲವರು ಇರುತ್ತಾರೆ. ಅಂತಹವರಿಂದ ದೂರವಿರುವುದು ಒಳ್ಳೆಯದು. ಅವರನ್ನೂ ಸಾಧ್ಯವಾದರೆ ಪ್ರೀತಿಸೋಣ; ಆಗದಿದ್ದರೆ ಸುಮ್ಮನಿರೋಣ! ಆದರೆ ಯಾವ ಕಾರಣಕ್ಕೂ ದ್ವೇಷಿಸದಿರೋಣ!! ಇತರರು ಇಷ್ಟಪಡುವ ವ್ಯಕ್ತಿತ್ವ ಬೆಳೆಸಿಕೊಳ್ಳೋಣ!!! ಇತರರು ಇಷ್ಟಪಡುವ ವ್ಯಕ್ತಿತ್ವ ನಮ್ಮದಾಗಬೇಕೆಂದರೆ ಇತರರನ್ನು ಇಷ್ಟಪಡುವ ಮನೋಭಾವ ನಾವು ಬೆಳೆಸಿಕೊಂಡರೆ ಮಾತ್ರ ಸಾಧ್ಯ. ಇತರರ ಪ್ರೀತಿ, ವಿಶ್ವಾಸ, ಸ್ನೇಹ, ಸಹಕಾರ ನಮಗೆ ಬೇಕೆಂದರೆ ಮೊದಲು ಅದನ್ನು ಇತರರಿಗೆ ನಾವು ನೀಡಬೇಕು. ಹಣ ಖರ್ಚು ಮಾಡಿದಷ್ಟೂ ಕಡಿಮೆಯಾಗುತ್ತದೆ. ಆದರೆ ಪ್ರೀತಿ, ವಿಶ್ವಾಸಗಳು ನೀಡಿದಷ್ಟೂ ಹೆಚ್ಚಾಗುತ್ತಾ ಹೋಗುತ್ತದೆ. ಪ್ರೀತಿಗೆ ಮಾಂತ್ರಿಕ ಶಕ್ತಿಯಿದೆ. ಪ್ರೀತಿಯ ಭಾಷೆಯನ್ನು ಮೂಕ ಮಾತನಾಡಬಲ್ಲ; ಕಿವುಡ ಕೇಳಬಲ್ಲ; ಪ್ರೀತಿಯ ಹಾಡಿಗೆ ಹೆಳವ ಕುಣಿಯಬಲ್ಲ; ಪ್ರೀತಿಯ ಕಣ್ಣಿನಲ್ಲಿ ಕುರುಡ ನೋಡಬಲ್ಲ. ಜೀವನವನ್ನು ನೋಡುವ ರೀತಿ ಬದಲಾಯಿಸಿಕೊಂಡಲ್ಲಿ, ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ತಪ್ಪು ಹುಡುಕದೆ ಒಳ್ಳೆಯ ಅಂಶಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಂಡಲ್ಲಿ, ನಮ್ಮನ್ನು ಇತರರು ಇಷ್ಟಪಡದಿದ್ದರೂ ದ್ವೇಷಿಸುವುದಿಲ್ಲ. 
     ವೈರಿಯ ಅಬ್ಬರಕೆ ಬರೆಯೆಳೆಯಬಹುದು|
     ಕಪಟಿಯಾಟವನು ಮೊಟಕಿಬಿಡಬಹುದು||
     ಮನೆಮುರುಕರನು ತರುಬಿಬಿಡಬಹುದು|
     ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ||
***************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ