ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ನವೆಂಬರ್ 22, 2011

ಮೂಢ ಉವಾಚ - 81

ಅರಿವು ಧರ್ಮದ ಶಿರವು ಕರ್ಮ ಕೈಕಾಲುಗಳು
ತಿರುಳಿರದ ಫಲಕೆ ಸಮ ಅರಿವಿರದಕರ್ಮ |
ಕರ್ಮವಿರದಾ ಧರ್ಮ ಒಣಶುಷ್ಕ ಸಿದ್ಧಾಂತ
ನಿಜಧರ್ಮದ ಮರ್ಮ ಸತ್ಕರ್ಮ ಮೂಢ ||


ಅರಿವಿರದ ನರನಿರುವನೆ ದುರಿತದಿಂ ದೂರ
ಎಡವಿ ಜಾರುವನು ಕವಿಯೆ ಗೂಢಾಂಧಕಾರ |
ಬೆಳಗೀತು ಬಾಳು ಪಸರಿಸಲರಿವ ಬೆಳಕು
ವಿಕಸಿಸುವ ಹಾದಿ ತೋರೀತು ಮೂಢ ||



ತಿಳಿದವರು ಯಾರಿಹರು ಆಗಸದ ನಿಜಬಣ್ಣ
ತುಂಬುವರು ಯಾರಿಹರು ಆಗಸದ ಶೂನ್ಯ |
ಆಗಸದ ನಿಜತತ್ವ ಅರಿತವರು ಯಾರಿಹರು 
ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ || 


ಇವರಿಂತೆ ಅವರಂತೆ ಎಂತಿರಲಿ ಏನಂತೆ
ಇರುವೆ ನೀನೆಂತೆ ಬಿಟ್ಟುಬಿಡು ಪರಚಿಂತೆ |
ಹುಳುಕನೆತ್ತಾಡದಿರು ಕೆಡುಕು ನಿನಗಂತೆ
ಕೊಟ್ಟಿಗೆಯ ಶುನಕ*ನಾಗದಿರು ಮೂಢ ||

[*ಕೊಟ್ಟಿಗೆಯ ಶುನಕ: ಕೊಟ್ಟಿಗೆಯಲ್ಲಿ ನಾಯಿ ಇದ್ದರೆ ಅದು ತಾನಂತೂ ಹುಲ್ಲು ತಿನ್ನುವುದಿಲ್ಲ, ಆದರೆ ಹಸುವಿಗೂ ಹುಲ್ಲು ತಿನ್ನಲು ಬಿಡುವುದಿಲ್ಲ.]
**************************
-ಕ.ವೆಂ.ನಾಗರಾಜ್.



2 ಕಾಮೆಂಟ್‌ಗಳು:

  1. ಕೊಟ್ಟಿಗೆಯ ಶುನಕ*ನಾಗದಿರು ಮೂಢ ||

    ಇದಂತು ಅದ್ಭುತ ಹೋಲಿಕೆ ನಾಗರಾಜ್ ಸರ್
    ಎಲ್ಲ ಕವನಗಳು ಚೆನ್ನಾಗಿದೆ.
    ಹಾಗೆಯೆ ಮೇಲಿರುವ ದೇವಾಲಯದ ಚಿತ್ರ ಯಾವುದು.

    ಪ್ರತ್ಯುತ್ತರಅಳಿಸಿ
  2. ಪಾರ್ಥರೇ, ನಿಮ್ಮ ಪ್ರತಿಕ್ರಿಯೆಗೆ ಕೃತಜ್ಞ.
    ಕೆಳದಿ ರಾಮೇಶ್ವರ ದೇವಾಲಯದ ಒಂದು ನೋಟದ ಚಿತ್ರವಿದು.

    ಪ್ರತ್ಯುತ್ತರಅಳಿಸಿ