ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ನವೆಂಬರ್ 7, 2011

ಮೂಢ ಉವಾಚ - 78


ಹೆಸರು ಹೆಸರೆಂದು ಕೊಸರಾಡಿ ಫಲವೇನು
ನೆನೆಸುವರು ಚಿರರಿಹರೆ ಚಿರವೆ ಹೆಸರು? |
ಅರಿತವರೆ ಬಿಡದಿಹರು ಹೆಸರ ಹಂಬಲವ
ಹುಲುನರರ ಕಥೆಯೇನು ಹೇಳು ಮೂಢ ||


ಏನಿಲ್ಲ ಏನಿಹುದು ಪೂರ್ಣ ಜಗವಿಹುದು
ಶಕ್ತನಿರೆ ಪಡೆಯುವೆ ದೇವನ ಕರುಣೆಯಿದು |
ಪಡೆದಿರುವೆ ನೀನು ಕೊಡದಿರಲು ದ್ರೋಹ
ಕೊಟ್ಟಷ್ಟು ಪಡೆಯುವೆ ನಿಜವು ಮೂಢ ||ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||


ಎಲ್ಲರನು ಜಯಿಸಿದವ ವೀರನೆಂಬುದು ಸುಳ್ಳು
ತನ್ನ ತಾ ಜಯಿಸದಿರೆ ಅವನೊಂದು ಜೊಳ್ಳು |
ಎಲ್ಲವನು ಪಡೆದವನು ಹಿರಿತನವ ಪಡೆದಾನೆ
ತನದಲ್ಲವೆನುವವನೆ ಹಿರಿಯ ಮೂಢ ||
***************
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ