ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದಲ್ಲಿ ಸುಮಾರು ೧೪-೧೫ ನಕ್ಸಲರ ಗುಂಪು ಕಂಡು ಬಂದ ಬಗ್ಗೆ ಮತ್ತು ಕೆಲವು ವಾಹನಗಳು, ಆಸ್ತಿ-ಪಾಸ್ತಿಗೆ ಅವರು ಹಾನಿ ಮಾಡಿದ ಬಗ್ಗೆ ದೃಷ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಇದನ್ನು ನೋಡಿ ಸುಮಾರು ೧೦ ವರ್ಷಗಳ ಹಿಂದೆ ಕಡಬದ ವಿಶೇಷ ತಹಸೀಲ್ದಾರ್ ಮತ್ತು ಹೆಚ್ಚುವರಿ ಪ್ರಭಾರೆಯಾಗಿ ಬೆಳ್ತಂಗಡಿಯ ತಹಸೀಲ್ದಾರ್ ಆಗಿ ಕೆಲಸ ಮಾಡಿದ್ದ ಸಂದರ್ಭದಲ್ಲಿ ನಕ್ಸಲ್ ಸಮಸ್ಯೆಯ ಬಗ್ಗೆ ಪರಿಹಾರಕ್ಕಾಗಿ ಶ್ರಮಿಸಿದ ದಿನಗಳು ನೆನಪಾದವು. ಆ ಸಮಯದಲ್ಲಿ ಬೆಳ್ತಂಗಡಿಯ ಗಡಿಯ ಸಮೀಪದ ಕಾರ್ಕಳ ತಾಲ್ಲೂಕಿನ ಈದು ಗ್ರಾಮದಲ್ಲಿ ನಕ್ಸಲರಾದ ಪಾರ್ವತಿ ಮತ್ತು ಹಾಜಿಮಾರ ಎನ್ ಕೌಂಟರ್ ಆಗಿತ್ತು. ಈದು ಗ್ರಾಮಕ್ಕೆ ಹೋಗಬೇಕಾದರೆ ಬೆಳ್ತಂಗಡಿಯ ಗ್ರಾಮಗಳನ್ನು ಹಾದು ಹೋಗಬೇಕಾಗಿತ್ತು. ಎನ್ ಕೌಂಟರ್ ಆಗಿದ್ದ ಸ್ಥಳ ಮತ್ತು ಮನೆಗೆ ನಾನೂ ಭೇಟಿ ಕೊಟ್ಟಿದ್ದೆ. ಅದೊಂದು ಪುಟ್ಟ ಗುಡಿಸಲು ರೀತಿಯ ಮನೆಯಾಗಿತ್ತು.
ಬೆಳ್ತಂಗಡಿಯ ಕುತ್ಲೂರು, ನಾರಾವಿ, ಮುಂತಾದ ಗ್ರಾಮಗಳಿಗೆ ಹೊಂದಿಕೊಂಡಂತಿದ್ದ ಅಭಯಾರಣ್ಯದ ಪ್ರದೇಶಗಳಲ್ಲಿ ನಕ್ಸಲರ ಚಟುವಟಿಕೆಗಳು ಇದ್ದ ಬಗ್ಗೆ ತಿಳಿದುಬರುತ್ತಿತ್ತು. ನಕ್ಸಲರು ಅರಣ್ಯ ಪ್ರದೇಶಗಳಲ್ಲಿ ಮತ್ತು ಸಮೀಪದ ಸ್ಥಳಗಳಲ್ಲಿ ಇರುವ ಜನರ ಸಮಸ್ಯೆಗಳನ್ನು ನೆಪಮಾಡಿಕೊಂಡು ಜನರನ್ನು ಪ್ರಚೋದಿಸಿ ಸರ್ಕಾರದ ವಿರುದ್ಧ ಎತ್ತಿಕಟ್ಟುವುದು ಅವರ ಒಂದು ತಂತ್ರ. ಪ್ರಚಲಿತ ಅರಣ್ಯ ಕಾಯದೆ, ಕಾನೂನುಗಳು ಆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ರಸ್ತೆ, ದೀಪ, ಆರೋಗ್ಯ ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಅಡ್ಡಿಯಾಗುತ್ತಿದ್ದುದು ಅವರಿಗೆ ವರದಾನವಾದಂತಿತ್ತು. ನಕ್ಸಲರಿಗೆ ಮುಖ್ಯವಾಗಿ ಬೇಕಾಗಿದ್ದುದು ಅಡಗುತಾಣವಾದ್ದರಿಂದ ಅವರುಗಳು ಸಾಮಾನ್ಯವಾಗಿ ಅರಣ್ಯಪ್ರದೇಶಗಳನ್ನೇ ಅದಕ್ಕಾಗಿ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಆ ಪ್ರದೇಶದ ಸಮೀಪದಲ್ಲಿ ವಾಸಿಸುವ ಜನರನ್ನು ಹೆದರಿಸಿ ಬಾಯಿಬಿಡದಂತೆ ನೋಡಿಕೊಳ್ಳುತ್ತಾರೆ. ಪೋಲಿಸರಿಗೆ ಮಾಹಿತಿ ನೀಡುತ್ತಾರೆಂದು ಅನುಮಾನ ಕಂಡುಬಂದವರನ್ನು ಹಿಂಸಿಸುತ್ತಾರೆ. ವಿಪರ್ಯಾಸವೆಂದರೆ ಗ್ರಾಮಗಳ ಕೆಲವು ನಿರುದ್ಯೋಗಿ ಯುವಕ-ಯುವತಿಯರು (ಹೆಚ್ಚಿನವರು ಒಂದಲ್ಲಾ ಒಂದು ರೀತಿಯಲ್ಲಿ ಇಂದಿನ ಭ್ರಷ್ಠ ವ್ಯವಸ್ಥೆಯಲ್ಲಿ ನೊಂದವರು) ಅವರೊಂದಿಗೆ ಕೈಜೋಡಿಸಿ ನೆರವಾಗುತ್ತಾರೆ. ನಕ್ಸಲರು ಅರಣ್ಯ ಪ್ರದೇಶಗಳನ್ನು ತಮ್ಮ ರಕ್ಷಣೆಯ ಸಲುವಾಗಿ ಮತ್ತು ನಕ್ಸಲ್ ವಿಚಾರದಿಂದ ಪ್ರಭಾವಿತರಾದವರಿಗೆ ತರಬೇತಿ ಕೊಡಲು ಬಳಸಿಕೊಳ್ಳುತ್ತಾರೆ.
ತಾಲ್ಲೂಕಿನ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳವರಿಗೆ ಸಹಜವಾಗಿ ಕೆಲವು ಮೂಲಭೂತ ಸಮಸ್ಯೆಗಳಿರುತ್ತವೆ. ರಸ್ತೆ, ದೀಪಗಳು, ಅನಾರೋಗ್ಯದ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಯ ಕೊರತೆ, ಮುಂತಾದವು ಅವರನ್ನು ಕಾಡುತ್ತವೆ. ಅರಣ್ಯ ಕಾಯದೆಯಂತೆ ಅವರಿಗೆ ಬೇರೆ ಸೌಕರ್ಯ ಕಲ್ಪಿಸಿ ಅಲ್ಲಿಂದ ತೆರವುಗೊಳಿಸುವ ಪ್ರಯತ್ನಗಳು ನಡೆದರೂ ಫಲ ಕಡಿಮೆ. ತಲೆತಲಾಂತರಗಳಿಂದ ಅಲ್ಲಿ ವಾಸಿಸುತ್ತಾ ಬಂದವರನ್ನು ತೆರವುಗೊಳಿಸಲೂ ಆಗದು. ಹಾಗೆಂದು ಹೊಸದಾಗಿ ಅಲ್ಲಿ ಸೇರಿಕೊಂಡವರನ್ನು ಅಲ್ಲಿ ಇರಲು ಅವಕಾಶ ಕೊಡುವುದೂ ಸರಿಯಲ್ಲ. ಹೀಗಾಗಿ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಸಮೀಕ್ಷೆಯನ್ನು ನಮ್ಮ ಮತ್ತು ಪಂಚಾಯಿತಿ ಸಿಬ್ಬಂದಿಗಳ ನೆರವಿನಿಂದ ಮಾಡಿಸಲಾಯಿತು. ಅವರ ಕುಟುಂಬದ ಸದಸ್ಯರುಗಳ ವಿವರ, ವಿದ್ಯಾಭ್ಯಾಸ, ಉದ್ಯೋಗ, ಹೊಂದಿರುವ ಜಮೀನುಗಳ ವಿವರ, ಆರ್ಥಿಕ ಸ್ಥಿತಿ-ಗತಿಗಳ ಬಗ್ಗೆಯೂ ವಿವರ ಸಂಗ್ರಹಿಸಲಾಯಿತು. ೨೦೦೧ರ ಜನಗಣತಿ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಯೂ ನೆರವಿಗೆ ಬಂದಿತು. ಒಟ್ಟು ೨೯೨ ಕುಟುಂಬಗಳು ಅರಣ್ಯ ಪ್ರದೇಶದಲ್ಲಿ ವಾಸವಿದ್ದವು. ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ನಮ್ಮ ಇಬ್ಬರು ಸಿಬ್ಬಂದಿಗೆ ನಕ್ಸಲರೆಂದು ಹೇಳಿಕೊಂಡಿದ್ದ ಕೆಲವರು ಹೆದರಿಸಿದ್ದರಿಂದ ಅವರು ಹೆದರಿ ಓಡಿಬಂದಿದ್ದರು. ನಂತರ ಪೋಲಿಸ್ ರಕ್ಷಣೆಯನ್ನೂ ಸಿಬ್ಬಂದಿಗೆ ಒದಗಿಸಲಾಗಿತ್ತು. ಅವರುಗಳಿಗೆ ಅಗತ್ಯವಿರುವ ಸೌಲಭ್ಯಗಳ ಕುರಿತೂ ವಿವರ ಪಡೆಯಲಾಯಿತು. ಕುತೂಹಲಕರ ವಿಷಯಗಳೂ ತಿಳಿದುಬಂದವು. ಕೆಲವರಿಗೆ ಅರಣ್ಯ ಪ್ರದೇಶದ ಹೊರಗೆ ಬೇರೆ ಸ್ವಂತದ ಮನೆಗಳಿದ್ದವು. ಪಟ್ಟಣದಲ್ಲಿ ವಾಸಿಸುತ್ತಿದ್ದ ಕೆಲವರು ಐಷಾರಾಮಿ ಜೀವನ ನಡೆಸುವವರು, ಕಾರುಗಳನ್ನು ಹೊಂದಿದ್ದವರಾಗಿದ್ದರು. ಆದರೆ ಅವರು ಕಾಡಿನಲ್ಲಿದ್ದ ಮನೆಗಳನ್ನು ಬಿಡಲು ತಯಾರಿರಲಿಲ್ಲ. ಹೆಚ್ಚಿನವರು ಬಡತನದಲ್ಲಿದ್ದವರಾಗಿದ್ದರೂ, ಹೇಳಿಕೊಳ್ಳುವಂತಹ ಆರ್ಥಿಕ ದುಸ್ಥಿತಿ ಇರಲಿಲ್ಲ. ಅಲ್ಲದೆ, ಅವರು ಬಿಳಿಗಿರಿರಂಗನಬೆಟ್ಟದಲ್ಲಿ ವಾಸಿಸುವ ಮೂಲ ಅರಣ್ಯವಾಸಿಗಳಂತೆ ಪಟ್ಟಣದಿಂದ ದೂರವಿದ್ದವರಾಗಿರಲಿಲ್ಲ. ಬೇಕೆಂದಾಗ ಮತ್ತು ಅವಶ್ಯಕತೆಯಿದ್ದಾಗ ಪಟ್ಟಣಕ್ಕೆ ಹೋಗಿ ಬಂದು ಮಾಡುವವರಾಗಿದ್ದರು. ಅರಣ್ಯದಲ್ಲೇ ಇರಲು ಇಷ್ಟಪಡುತ್ತಿದ್ದ ಕಾರಣವೆಂದರೆ ಅಲ್ಲಿ ಅವರಿಗೆ ವ್ಯವಸಾಯ ಮಾಡಲು ಅವಕಾಶವಿರುವುದರೊಂದಿಗೆ ಅರಣ್ಯ ಉತ್ಪತ್ತಿಗಳನ್ನು ಸಂಗ್ರಹಿಸಿ ಅದನ್ನು ಮಾರಿ ಹಣ ಮಾಡಿಕೊಳ್ಳಲು ಅನುಕೂಲವಾಗಿದ್ದುದಾಗಿತ್ತು.
ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಆ ಪ್ರದೇಶದ ಕುಟುಂಬಗಳಿಗೆ ಮತ್ತು ಅವುಗಳಿಗೆ ಹೊಂದಿಕೊಂಡಂತಿರುವ ಗ್ರಾಮಗಳವರಿಗೆ ಒದಗಿಸಿಕೊಡಲೇಬೇಕಾದ ಸೌಕರ್ಯಗಳ ಕುರಿತು ಚರ್ಚಿಸಲಾಯಿತು. ಜಿಲ್ಲಾಧಿಕಾರಿಯವರಾದ ಶ್ರೀ ಅರವಿಂದ ಶ್ರೀವಾಸ್ತವ ಮತ್ತು ಸಹಾಯಕ ಕಮಿಷನರ್ ಶ್ರೀ ಪಂಕಜಕುಮಾರ ಪಾಂಡೆಯವರು ಸಭೆಯ ನೇತೃತ್ವ ವಹಿಸುತ್ತಿದ್ದರು. ಅರಣ್ಯ ಕಾಯದೆ ಅಡ್ಡಿ ಬರುತ್ತಿದ್ದರೂ ರಸ್ತೆಯನ್ನು ತಕ್ಕಮಟ್ಟಿಗಾದರೂ ಉಪಯೋಗಕ್ಕೆ ಬರುವಂತೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಯಿತು. ಕುತ್ಲೂರು, ನಾರಾವಿ ಸೇರಿದಂತೆ ೮-೧೦ ಗ್ರಾಮಗಳಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಲಾಯಿತು. ಸಾಧ್ಯವಾದಷ್ಟು ಅವರು ಅರ್ಜಿ ಸಲ್ಲಿಸಿ ಬಾಕಿ ಉಳಿದಿದ್ದ ಹಲವಾರು ಪ್ರಕರಣಗಳನ್ನು ಸಭೆಗಳಲ್ಲಿಯೇ ಇತ್ಯರ್ಥಪಡಿಸಲಾಯಿತು. ಪಾರ್ವತಿ ಮತ್ತು ಹಾಜಿಮಾರ ಎನ್ ಕೌಂಟರ್ ಬಳಿಕ ಸರ್ಕಾರವೂ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಸರ್ಕಾರದ ಅರಣ್ಯ, ಕಂದಾಯ, ಪಂಚಾಯಿತಿ ಮತ್ತು ಹಣಕಾಸು ಕಮಿಷನರರೂ ಈ ಸಂಪರ್ಕಸಭೆಗಳಲ್ಲಿ ಖುದ್ದಾಗಿ ಭಾಗವಹಿಸಿದ್ದರು. ಸಂಪರ್ಕ ಸಭೆಗಳಲ್ಲಿ ಎಲ್ಲಾ ಕುಟುಂಬಗಳವರಿಗೆ ಉಚಿತವಾಗಿ ಸೋಲಾರ್ ದೀಪ ಮುಂತಾದ ಅಗತ್ಯದ ಪರಿಕರಗಳನ್ನು ಒದಗಿಸಲಾಯಿತು. ಧರ್ಮಸ್ಥಳದ ಶ್ರೀಕ್ಷೇತ್ರದ ವತಿಯಿಂದಲೂ ಸಹಕಾರ ಸಿಕ್ಕಿತ್ತು. ಕುತ್ಲೂರು ಗ್ರಾಮದ ಕೆಲವು ಯುವಕ-ಯುವತಿಯರು ಸಂಪರ್ಕ ಸಭೆಗಳಿಗೆ ಜನರು ಹೋಗಬಾರದೆಂದು ಪ್ರಚೋದಿಸುತ್ತಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿ ತಾಲ್ಲೂಕಿನ ಒಂದು ಸಂಘ ಅಪರೋಕ್ಷವಾಗಿ ನಕ್ಸಲರಿಗೆ ಸಹಕಾರಿಯಾಗಿದ್ದು, ಬೆಂಬಲಿಸುತ್ತದೆಯೆಂಬ ಮಾತು ಕೇಳಿಬರುತ್ತಿತ್ತು. ಪೋಲಿಸರಿಗೆ ಆ ಕುರಿತು ನಿಗಾ ಇಟ್ಟಿರಲು ಹಿರಿಯ ಅಧಿಕಾರಿಗಳು ತಿಳಿಸಿದ್ದರು. ಸಮೀಪದ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಯಿತು. ಕರೆ ಬಂದಾಗ ಧಾವಿಸಲು ಅನುಕೂಲವಾಗುವಂತೆ ೨ ಸಂಚಾರಿ ವೈದ್ಯಕೀಯ ವ್ಯವಸ್ಥೆಯನ್ನೂ ಮಾಡಿದ್ದು ಜನರಿಗೆ ಆ ಬಗ್ಗೆ ತಿಳುವಳಿಕೆ ಕೊಡಲಾಗಿತ್ತು.
ಜನಸಂಪರ್ಕ ಸಭೆಗಳ ಮತ್ತು ಹಿರಿಯ ಅಧಿಕಾರಿಗಳ ಪೂರ್ವಭಾವಿ ಸಮಾಲೋಚನೆಯ ದೃಷ್ಯಗಳು
ನಂತರದಲ್ಲಿ ಹಲವಾರು ವರ್ಷಗಳವರೆಗೆ ಆ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಗಳು ಕಂಡಿರಲಿಲ್ಲ. ಇದೀಗ ಮತ್ತೆ ಚಟುವಟಿಕೆಗಳು ಗರಿಗೆದರಿರುವಂತೆ ತೋರುತ್ತಿದೆ. ಸಮಸ್ಯೆಯ ನಿಜವಾದ ಮೂಲವನ್ನು ಗುರುತಿಸಲು ಹೋದರೆ ಕಾಣಸಿಗುವುದು ಭ್ರಷ್ಠಾಚಾರವೆಂಬ ಪೆಡಂಬೂತ ಮತ್ತು ಅದಕ್ಕೆ ನೀರೆರೆಯುವ ಭ್ರಷ್ಠ ರಾಜಕಾರಣಿಗಳು, ಅಧಿಕಾರಿಗಳು. ವ್ಯವಸ್ಥೆ ಸರಿಯಿದ್ದರೆ, ಭ್ರಷ್ಠಾಚಾರಕ್ಕೆ ಅವಕಾಶವಿಲ್ಲದಿರುತ್ತಿದ್ದರೆ ನಕ್ಸಲ್ ಸಮಸ್ಯೆಯೂ ಸೇರಿದಂತೆ ಬಹುತೇಕ ಸಮಸ್ಯೆಗಳು ಹೇಳಹೆಸರಿಲ್ಲದಂತೆ ಕಾಣದಾಗುತ್ತಿದ್ದವು. ಬಹುತೇಕ ನಕ್ಸಲರ ಹಿಡಿತದಲ್ಲಿರುವ ಮತ್ತು ನಕ್ಸಲ್ ವಿಚಾರಗಳಿಂದ ಪ್ರೇರಿತರಾದವರು ಒಂದಲ್ಲಾ ಒಂದು ರೀತಿಯಲ್ಲಿ ಅನ್ಯಾಯಕ್ಕೆ ಒಳಗಾದವರೇ ಆಗಿರುವುದು ಇದಕ್ಕೆ ಸಾಕ್ಷಿ. ನಕ್ಸಲ್ ವಾದಿಗಳಾಗಿ ಅತಂತ್ರವಾಗಿ ಕಾಡುಮೇಡುಗಳಲ್ಲಿ ಅಲೆದು ತಮಗೂ ನೆಮ್ಮದಿಯಿಲ್ಲದೆ, ಇತರರನ್ನೂ ನೆಮ್ಮದಿಯಿಂದಿರಲು ಬಿಡದ, ಅರಾಜಕತೆ ಪ್ರೇರಿಸುವ ಅವರ ಸ್ಥಿತಿಗೆ ನಿಜವಾದ ಕಾರಣವೇ ಈ ಭ್ರಷ್ಠಾಚಾರದ ವ್ಯವಸ್ಥೆ. ಸಣ್ಣದಾಗಲೀ, ದೊಡ್ಡದಾಗಲೀ ಭ್ರಷ್ಠಾಚಾರವನ್ನು ಕಿತ್ತು ಹಾಕಲು ಯುವಜನತೆ ಮುಂದಾಗುವ ಅನಿವಾರ್ಯತೆ ಇಂದು ಇದೆ. ರಾಜಕಾರಣಿಗಳಿಂದಂತೂ ಈ ಕೆಲಸ ಆಗದು. ಅವರನ್ನೂ ನಿಯಂತ್ರಿಸುವ ಶಕ್ತಿ ಯುವಜನತೆಗೆ ಮಾತ್ರ ಇದ್ದು, ಈ ಕೆಲಸ ಮಾಡಲು ಅವರಿಗೆ ಪ್ರೇರಣೆ ಸಿಗಲೆಂದು ಹಾರೈಸೋಣ.
-ಕ.ವೆಂ.ನಾಗರಾಜ್.
H A Patil on November 13, 2013 - 6:58pm
ಪ್ರತ್ಯುತ್ತರಅಳಿಸಿಕವಿ ನಾಗರಾಜ ರವರಿಗೆ ವಂದನೆಗಳು
ನಕ್ಸಲ್ ಸಮಸ್ಯೆ ಕುರಿತ ಅನೇಕ ಸೂಕ್ಷ್ಮ ಒಳನೋಟಗಳನ್ನು ಹೊಂದಿರುವ ಲೇಖನ. ನೀವು ಹತ್ತಿರದಿಂದ ನೋಡಿ ಬಲ್ಲ ನ ನಿಮ್ಮ ಅನುಭವದ ಮಾತುಗಳಿಗೆ ಅರ್ಥವಿದೆ. ನಿಮ್ಮಂತಹ ನಿಸ್ಪ್ರಹ ವ್ಯಕ್ತಿತ್ವದ ಜನಪರ ಕಾಳಜಿಯ ಅಧಿಕಾರಿಗಳ ಅವಶ್ಯಕತೆ ಎಲ್ಲ ಇಲಾಖೆಗಳಲ್ಲಿ ಇದೆ. ಆದರೆ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ನಕ್ಸಲ್ ಚಟುವಟಿಕೆಗಳು ಕಂಡು ಬಂದಾಗ ಎಲ್ಲರೂ ಜಾಗೃತರಾಗುತ್ತಾರೆ, ಅವರ ಚಟುವಟಿಕೆ ಸ್ತಬ್ದವಾಗುತ್ತಿದ್ದಂತೆ ಮತ್ತೆ ಯಥಾ ಸ್ಥಿತಿ, ಹೀಗಾಗಿ ಈ ಸಮಸ್ಯೆ ಗಾಯವಾಗದ ವೃಣದಂತೆ ನಮ್ಮ ರಾಜ್ಯವನ್ನು ಕಾಡುತ್ತಿದೆ. ಇದರ ನಿವಾರಣೆಗೆ ಧೀರ್ಘಕಾಲದ ಕಾರ್ಯಾಚರಣೆ ಸಮಾಜಮುಖಿ ಚಿಂತನೆಯ ಅಧಿಕಾರಿಗಳ ಮತ್ತು ಜನನಾಯಕರ ಬೆಂಬಲ ಬೇಕಿದೆ. ಅದು ಈಗ ಆಗುತ್ತಿಲ್ಲ ಅದೇ ಸಮಸ್ಯೆ, ಉತ್ತಮ ಲೇಖನ ನೀಡಿದ್ದೀರಿ ಧನ್ಯವಾದಗಳು.
kavinagaraj on November 14, 2013 - 10:25am
ಧನ್ಯವಾದಗಳು, ಪಾಟೀಲರೇ. ಕ್ಷಣಿಕವಾಗಿ ಜಾಗೃತರಾಗಿದ್ದು ನಂತರ ಮರೆತುಬಿಡುವ ಇಂದಿನ ಸ್ಥಿತಿಗೆ ರಾಜಕಾರಣಿಗಳ ಕೊಡುಗೆ ಹೆಚ್ಚು. ಪೂರ್ಣ ನಿರಾಶರಾಗುವ ಮುನ್ನ ಪ್ರಜ್ಞಾವಂತರು ನಿರಂತರವಾಗಿ ಯುವಜನರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಿದೆ.
Submitted by nageshamysore on November 14, 2013 - 2:43am
ಕವಿನಾಗರಾಜರೆ, ನಕ್ಸಲೀಯತೆಯ ಪ್ರಭಾವದ ಮೂಲಕಾರಣಗಳನ್ನು ಹುಡುಕಿ ಅದರ ನಿವಾರಣೆಗೆ ಸಾಧ್ಯವಿದ್ದ ಎಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡುವುದೆ ಸೂಕ್ತ ವಿಧಾನ. ಅದನ್ನನುಸರಿಸಿದ ನಿಮ್ಮ ಸ್ವಾನುಭವದ ಚಿತ್ರಣ, ಮುಂದಿನ ಕಾರ್ಯಾಚರಣೆಗೂ ಮಾರ್ಗದರ್ಶಕವಾಗಲೆಂದು ಹಾರೈಸೋಣ.
kavinagaraj on November 14, 2013 - 10:28am
ಆ ಸಮಯದಲ್ಲಿ ಪತ್ರಕರ್ತರುಗಳು ವಿಷಯ ಸಂಗ್ರಹಣೆಗೆ ನನ್ನಲ್ಲಿ ಬರುತ್ತಿದ್ದರು. ಒಮ್ಮೆ ಸಮಸ್ಯೆ ಪರಿಹಾರಕ್ಕೆ ಇರುವ ಮಾರ್ಗಗಳ ಬಗ್ಗೆ ನನ್ನ ಅನಿಸಿಕೆ ಹಂಚಿಕೊಂಡಿದ್ದೆ. ಮರುದಿನದ ಜಿಲ್ಲಾಪತ್ರಿಕೆಗಳಲ್ಲಿ "ನಕ್ಸಲೀಯರು ಬೆಳ್ತಂಗಡಿ ತಾಲ್ಲೂಕಿಗೆ ಕಾಲಿಡದಂತೆ ಮಾಡಲು ಸಾಧ್ಯ - ತಹಸೀಲ್ದಾರ್, ನಾಗರಾಜ್" ಎಂಬ ಪ್ರಚೋದನಕಾರಿ ಶೀರ್ಷಿಕೆಯೊಂದಿಗೆ ತಿರುಚಿದ ಸುದ್ದಿಗಳು ಪ್ರಕಟವಾಗಿತ್ತು! ಸಹೃದಯೀ ಪ್ರತಿಕ್ರಿಯೆಗೆ ವಂದನೆಗಳು, ನಾಗೇಶರೇ.