ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ನವೆಂಬರ್ 21, 2013

ಶಿಕ್ಷಣ: ದಾರಿ ತಪ್ಪುತ್ತಿದೆಯೇ?

     ಮಾನವ ಜೀವನದಲ್ಲಿ ೧೬ ಸಂಸ್ಕಾರಗಳು ಒಬ್ಬ ಆದರ್ಶವ್ಯಕ್ತಿಯಾಗಿ ರೂಪುಗೊಳ್ಳಲು ಅವಶ್ಯಕವೆಂದು ಹೇಳುತ್ತಾರೆ. ಅವೆಂದರೆ, ೧. ಗರ್ಭಾದಾನ, ೨. ಪುಂಸವನ, ೩. ಸೀಮಂತೋನ್ನಯನ, ೪. ಜಾತಕರ್ಮ, ೫. ನಾಮಕರಣ, ೬. ನಿಷ್ಕ್ರಮಣ, ೭. ಅನ್ನಪ್ರಾಶನ, ೮. ಮುಂಡನ, ೯. ಕರ್ಣವೇಧ, ೧೦. ಉಪನಯನ, ೧೧. ವೇದಾರಂಭ, ೧೨. ಸಮಾವರ್ತನ, ೧೩. ವಿವಾಹ, ೧೪. ವಾನಪ್ರಸ್ಥ, ೧೫. ಸಂನ್ಯಾಸ, ೧೬. ಅಂತ್ಯೇಷ್ಟಿ. ಇವುಗಳಲ್ಲಿ ಮೊದಲ ಮೂರು ಸಂಸ್ಕಾರಗಳು ಹುಟ್ಟುವ ಮುನ್ನದ ಸಂಸ್ಕಾರಗಳಾಗಿದ್ದು, ಇವನ್ನು ಉತ್ತಮ ಸಂತಾನವನ್ನು ಪಡೆಯುವ ಸಲುವಾಗಿ ಆಚರಿಸುತ್ತಾರೆ. ಇನ್ನು ಮೂರು ಸಂಸ್ಕಾರಗಳಾದ ವಿವಾಹ, ವಾನಪ್ರಸ್ಥ ಮತ್ತು ಸಂನ್ಯಾಸ ಇವುಗಳು ಎಲ್ಲರಿಗೂ ಕಡ್ಡಾಯವಲ್ಲ. ಈ ಸಂಸ್ಕಾರಗಳು ಅರ್ಹತೆ ಮತ್ತು ಆಸಕ್ತಿಯಿರುವರಿಗೆ ಮಾತ್ರ. ಅಂತ್ಯೇಷ್ಟಿ ಸಂಸ್ಕಾರ ಮೃತರಾದ ನಂತರ ಮಾಡುವಂತಹದು. ಇವುಗಳನ್ನು ಹೊರತುಪಡಿಸಿ ಉಳಿಯುವ ೯ ಸಂಸ್ಕಾರಗಳು ಮಕ್ಕಳಿಗೆ ಸಂಬಂಧಿಸಿದವು. ಮಕ್ಕಳನ್ನು ಸತ್ಪ್ರಜೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಈ ಸಂಸ್ಕಾರಗಳಿಗೆ ಹಿಂದೆ ಎಷ್ಟು ಪ್ರಾಧಾನ್ಯತೆಯಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಇಂದಿನ ಅವಸರದ ಪ್ರಪಂಚದಲ್ಲಿ ಮಕ್ಕಳ ಬೆಳವಣಿಗೆಗೆ ಕೊಡಬೇಕಾದಷ್ಟು ಗಮನವನ್ನು ಕೊಡುತ್ತಿದ್ದೇವೆಯೇ ನೋಡೋಣ.
     ಹಿಂದಿನ ಕಾಲದಲ್ಲಿ ಹೆರಿಗೆಗಳನ್ನು ಮನೆಗಳಲ್ಲೇ ಮಾಡುತ್ತಿದ್ದು ಸೂಲಗಿತ್ತಿಯರೆಂದು ಕರೆಯುವ ನಿಪುಣ ಸ್ತ್ರೀಯರು ಈ ಕೆಲಸ ಮಾಡುತ್ತಿದ್ದರು. ಈಗ ಸಾಮಾನ್ಯವಾಗಿ ಆಸ್ಪತ್ರೆಗಳಲ್ಲೇ ನುರಿತ ವೈದ್ಯರು, ದಾದಿಯರು ಮಾಡುತ್ತಾರೆ. ಮಗುವಿಗೆ ಹೆಸರಿಡುವಾಗ ಒಳ್ಳೆಯ ಅರ್ಥ ಕೊಡುವ, ಒಳ್ಳೆಯದನ್ನು ಸೂಚಿಸುವ ಹೆಸರುಗಳನ್ನು ಇಟ್ಟರೆ ಆ ಹೆಸರುಗಳನ್ನು ಕರೆಯುವವರಿಗೆ ಮತ್ತು ಕರೆಸಿಕೊಳ್ಳುವವರಿಗೆ ಹೆಸರಿಗೆ ತಕ್ಕಂತೆ ಇರಲು ಪ್ರೇರಿಸಿದಂತಾಗುತ್ತದೆ. ಕೆಲವರು ಅರ್ಥವೇ ತಿಳಿಯದ ಹೆಸರುಗಳನ್ನೂ ಇಡುವುದನ್ನು ಕಾಣುತ್ತಿದ್ದೇವೆ. ಮಗುವನ್ನು ಮೊದಲ ಸಲ ಹೊರಗೆ ಕರೆದೊಯ್ಯುವಾಗ ನಿಷ್ಕ್ರಮಣ, ತಾಯ ಹಾಲಿನ ಜೊತೆಗೆ ಬೇರೆ ಆಹಾರದ ಅಭ್ಯಾಸ ಪ್ರಾರಂಭದ ಸಮಯದಲ್ಲಿ ಅನ್ನಪ್ರಾಶನ (ಸಾಮಾನ್ಯವಾಗಿ ಹಲ್ಲು ಬರುವ ಸಮಯದಲ್ಲಿ), ಮಗುವಿಗೆ ಸುಮಾರು ಮೂರು ವರ್ಷವಾದಾಗ, ಅಂದರೆ ಮೃದುವಾಗಿದ್ದ ತಲೆಬುರುಡೆ ಸ್ವಲ್ಪ ಗಟ್ಟಿಯಾದಾಗ, ಚೂಡಾಕರ್ಮ, ಕಿವಿ ಚುಚ್ಚುವುದು (ಕಿವಿ ಚುಚ್ಚುವುದರಿಂದ ಹರ್ನಿಯಾ ಸಮಸ್ಯೆ ನಿವೃತ್ತಿಯಾಗುವುದೆಂದು ಶಲ್ಯತಂತ್ರ(ಸರ್ಜರಿ)ದಲ್ಲಿ ಸುಪ್ರಸಿದ್ಧನಾದ ಸುಶ್ರುತನ ಅಭಿಪ್ರಾಯ), ಮುಂತಾದವು ಮಗುವಿಗೆ ಮಾಡಲಾಗುವ ಪ್ರಾರಂಭಿಕ ಸಂಸ್ಕಾರಗಳು.                  
     ಮುಂದಿನ ಹಂತ ಮಗುವಿನ ವಿದ್ಯಾಭ್ಯಾಸಕ್ಕೆ ಅನುವು ಮಾಡುವುದು. ಇಲ್ಲೇ ನಾವು ದಾರಿ ತಪ್ಪುತ್ತಿದ್ದೇವೇನೋ ಅನ್ನಿಸುತ್ತದೆ. ಮೆಕಾಲೆಯ ಶಿಕ್ಷಣನೀತಿಯ ಬಲಿಪಶುಗಳಾಗಿ ವಿಷವರ್ತುಲದಿಂದ ಹೊರಬರಲಾರದೆ ಇದ್ದೇವೆ. ಹಿಂದಿನ ಗುರುಕುಲ ಪದ್ಧತಿಯ ವ್ಯವಸ್ಥೆಯಲ್ಲಿ ಮಗುವಿಗೆ ಸಾಮಾನ್ಯವಾಗಿ ೭-೮ ವರ್ಷಗಳಾದಾಗ ಮಗುವಿಗೆ ಉಪನಯನ ಸಂಸ್ಕಾರ ಮಾಡಿ ತಮಗೆ ಅನುಕೂಲವೆನ್ನಿಸುವ ಗುರುಕುಲಕ್ಕೆ ಮಕ್ಕಳನ್ನು ಬಿಡುತ್ತಿದ್ದರು. ಉಪನಯನದ ಜೊತೆಗೇ ವೇದಾರಂಭ ಸಂಸ್ಕಾರವನ್ನೂ ಮಾಡುತ್ತಿದ್ದರು. ಉಪ ಎಂದರೆ ಹತ್ತಿರಕ್ಕೆ, ನಯನವೆಂದರೆ ಕರೆದೊಯ್ಯುವುದು ಎಂದರ್ಥ. ಮಗುವನ್ನು ವಿದ್ಯಾಭ್ಯಾಸದ ಸಲುವಾಗಿ ಗುರುಗಳ ಬಳಿಗೆ ಕರೆದೊಯ್ಯುವುದೇ ಉಪನಯನ. ಆಗ ಸಂಕಲ್ಪದ ರೂಪದಲ್ಲಿ ಧರಿಸಲಾಗುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಋಷಿಋಣ, ಪಿತೃಋಣಗಳನ್ನು ಸಂಕೇತಿಸುತ್ತವೆ. ಇದು ಬಹು ಹಿಂದೆ ಜಾತಿಸೂಚಕವಾದ ಚಿಹ್ನೆಯಾಗಿರಲಿಲ್ಲ. ವೇದಾರಂಭವೆಂದರೆ ಕೇವಲ ವೇದಮಂತ್ರಗಳನ್ನು ಕಲಿಯುವುದಲ್ಲ, ಇನ್ನಿತರ ವಿದ್ಯೆಗಳನ್ನೂ-ಗಣಿತ, ವಿಜ್ಞಾನ, ಶಸ್ತ್ರವಿದ್ಯೆ, ತರ್ಕ, ಮುಂತಾದ- ಕಲಿಯುವುದಾಗಿತ್ತು. ವೇದ ಎಂಬ ಪದದ ಅರ್ಥ ಜ್ಞಾನ ಎಂದೇ ಹೊರತು ಬೇರೆಯಲ್ಲ. ಗುರುಕುಲಗಳಲ್ಲಿ ಸಕಲವಿದ್ಯೆಗಳನ್ನೂ ಕಲಿಸಲಾಗುತ್ತಿತ್ತು. ರಾಮ, ಕೃಷ್ಣ, ಪಾಂಡವರೇ ಮೊದಲಾದವರು ಗುರುಕುಲಗಳಲ್ಲಿ ಶಸ್ತ್ರ-ಶಾಸ್ತ್ರ ಪ್ರವೀಣರಾದ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಗುರುಕುಲಗಳಲ್ಲಿ ಜಾತಿಭೇದವಿರಲಿಲ್ಲ, ಉಚ್ಛ-ನೀಚ ಭಾವನೆಗಳಿರಲಿಲ್ಲ. ರಾಜರ ಮಕ್ಕಳೂ, ಸಾಮಾನ್ಯರ ಮಕ್ಕಳೂ ಒಟ್ಟಿಗೇ ಗುರುಕುಲಗಳಲ್ಲಿ ವಾಸವಿದ್ದು ಸಮಾನಭಾವದಲ್ಲಿ ಅಲ್ಲಿ ವಿದ್ಯೆ ಕಲಿಯಬೇಕಿತ್ತು. ಸಮಾಜದ ಋಣದಲ್ಲಿ ನಡೆಯುತ್ತಿದ್ದ ಗುರುಕುಲಗಳಿಗೆ ಶಿಕ್ಷಾರ್ಥಿಗಳು ಭಿಕ್ಷೆ ಸಂಗ್ರಹಿಸಿ ಆಚಾರ್ಯರಿಗೆ ನೀಡುತ್ತಿದ್ದರು. ಶಿಕ್ಷಾರ್ಥಿಗಳು ಅವರ ಶಕ್ತ್ಯಾನುಸಾರ ಮತ್ತು ಆಸಕ್ತಿಗಳಿಗನುಸಾರವಾಗಿ ಶಿಕ್ಷಣ ಪಡೆದು ಪ್ರವೀಣರೆನಿಸಿದ ನಂತರ ಸಮಾವರ್ತನ (ಬೀಳ್ಕೊಡುಗೆ ಕಾರ್ಯಕ್ರಮವೆಂದರೆ ಅರ್ಥವಾದೀತು) ಸಂಸ್ಕಾರ ನಡೆಯುತ್ತದೆ. ಈ ಸಮಯದಲ್ಲಿ ಗುರುವು ತನ್ನ ಶಿಷ್ಯರಿಗೆ ವಿಶೇಷವಾದ ಉಪದೇಶ ನೀಡಿ ಸತ್ಪ್ರಜೆಗಳಾಗಲು ಹರಸಿ ಬೀಳ್ಕೊಡುತ್ತಾರೆ. ಗುರುಕುಲದಲ್ಲಿದ್ದಷ್ಟು ಕಾಲವೂ ಗುರುವು ನೀಡಿದ್ದು ಉಪದೇಶವೇ ಆಗಿದ್ದರೂ, ಸಮಾವರ್ತನ ಕಾಲದಲ್ಲಿ ಅವೆಲ್ಲವನ್ನೂ ಸಾರರೂಪದಲ್ಲಿ ಸಂಗ್ರಹವಾಗಿ ತಿಳಿಸುತ್ತಾರೆ. ಹಾಗೆ ಸ್ನಾತಕರೆನಿಸಿಕೊಂಡ ವಿದ್ಯಾರ್ಥಿಗಳು ಮನೆಗೆ ಹಿಂತಿರುಗಿದಾಗ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿಯುವ, ಸ್ವಸಾಮರ್ಥ್ಯದಲ್ಲಿ ಬದುಕುವ, ಸಮಾಜಕ್ಕೆ ಒದಗುವ ಯಾವುದೇ ಅಪಾಯದ ವಿರುದ್ಧ ಸೆಟೆದುನಿಲ್ಲುವ, ರಕ್ಷಿಸುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ, ಗುರು-ಹಿರಿಯರಿಗೆ ಗೌರವ ತೋರಿಸುವವರಾಗಿರುತ್ತಾರೆ.
     ಮೇಲಿನದು ಬಹಳ ಹಿಂದಿನ ಕಾಲದ ಮಾತಾಯಿತು. ಹಲವು ದಶಕಗಳ ಹಿಂದಿನ ಸ್ಥಿತಿ ಗಮನಿಸಿದರೆ ಆಗ ಪ್ರತಿ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿರುತ್ತಿದ್ದವು, ಅವಿಭಕ್ತ ಕುಟುಂಬಗಳಿದ್ದವು, ಟಿವಿ ಇರಲಿಲ್ಲ, ಮನೆಯಲ್ಲಿ ಒಟ್ಟಾಗಿ ಬಾಳುವ ಮನೋಭಾವವಿರುತ್ತಿತ್ತು, ಸಂಬಂಧಗಳಿಗೆ ಮಾನ್ಯತೆಯಿತ್ತು, ನೈತಿಕ ಮೌಲ್ಯಗಳು ಅಷ್ಟಾದರೂ ಇದ್ದವು. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಒಟ್ಟಾಗಿ ಭಜನೆ, ಪ್ರಾರ್ಥನೆ ಮಾಡುವ ಪರಿಪಾಠವಿತ್ತು. ಒಟ್ಟಾರೆಯಾಗಿ ಸಂತೋಷಕ್ಕೆ ಕೊರತೆಯಿರಲಿಲ್ಲ. ಕುಟುಂಬದ ಸದಸ್ಯರು ಯಾರೊಬ್ಬರು ದುರ್ಬಲರಾಗಿದ್ದರೂ ಉಳಿದವರು ಅವರನ್ನು ಕೈಹಿಡಿದು ಎತ್ತುತ್ತಿದ್ದರು. ಹಣದಲ್ಲಿ ಬಡತನವಿದ್ದರೂ ಆತ್ಮಸ್ಥೈರ್ಯಕ್ಕೆ ಬಡತನವಿರಲಿಲ್ಲ.
     ಈಗ ಇಂದಿನ ಕಾಲದ ಶಿಕ್ಷಣದ ಬಗ್ಗೆ ನೋಡೋಣ. ಇಂದಿನ ಮಕ್ಕಳ ಪರಿಸ್ಥಿತಿ ನೋಡಿದರೆ ಮರುಕವಾಗುತ್ತದೆ. ವೈವಾಹಿಕ ಸಂಬಂಧಗಳೇ ಮಹತ್ವ ಕಳೆದುಕೊಳ್ಳುತ್ತಿರುವ, ಇಂದು ಮದುವೆ ಮತ್ತು ನಾಳೆ ವಿಚ್ಛೇದನ ಎಂಬಂತಹದು ಸಾಮಾನ್ಯವಾಗುತ್ತಿರುವ, ಒಪ್ಪಂದ ಆಧಾರದ ಸಂಬಂಧಗಳು ಹೆಚ್ಚುತ್ತಿರುವಾಗ,  ವಿಚ್ಛೇದನದ ಕಾರಣದಿಂದ ಮತ್ತು ಪತಿ-ಪತ್ನಿಯರ ನಡುವಣ ಸಾಮರಸ್ಯದ ಕೊರತೆಯಿಂದ ಅನಾಥಪ್ರಜ್ಞೆಯಿಂದ ನರಳುವ ಮಕ್ಕಳನ್ನು ಕಂಡರೆ ದಿಗಿಲಾಗುತ್ತದೆ. ಮಕ್ಕಳಿಗೆ ಸುಮಾರು ೬ ವರ್ಷಗಳಾಗುವವರೆಗೆ, ಮೆದುಳು ಇನ್ನೂ ಬಲಿಯಬೇಕಾಗಿರುವುದರಿಂದ, ಅವರಿಗೆ ಕಲಿಕೆಯ ಶ್ರಮ ಕೊಡಬಾರದೆಂದು ಮನೋಶಾಸ್ತ್ರಜ್ಞರು ಮತ್ತು ಶಿಕ್ಷಣತಜ್ಞರು ಹೇಳುತ್ತಾರೆ. ಆದರೆ, ನಗರಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ದುಡಿಯಲು ಹೋಗುವವರಾದರೆ ಇನ್ನೂ ತಾಯ ಮಡಿಲಿನಲ್ಲೇ ಪಿಳಿಪಿಳಿ ಕಣ್ಣು ಬಿಟ್ಟು ಆಟವಾಡಬೇಕಾದ ಮಕ್ಕಳನ್ನೂ ಶಿಶುಕೇಂದ್ರ(ಬೇಬಿ ಕೇರ್)ಗಳಲ್ಲಿ ಬಿಟ್ಟುಹೋಗುತ್ತಾರೆ. ಅಲ್ಲಿ ಮಕ್ಕಳನ್ನು ಸುಧಾರಿಸಲಾಗದೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸುತ್ತಾರೆಂದೂ ದೂರುಗಳಿವೆ. ಒಂದು ಶಿಶುಕೇಂದ್ರದಲ್ಲಂತೂ ಮಕ್ಕಳಿಗೆ ಹರಕುಬಟ್ಟೆ ಹಾಕಿ ಭಿಕ್ಷಾಟನೆಗೆ ಕರೆದೊಯ್ಯಲು ಬಾಡಿಗೆಗೆ ಒದಗಿಸುತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ಬಂದಿತ್ತು. ಹುಟ್ಟುತ್ತಲೇ ಬೇಬಿ ಸಿಟ್ಟಿಂಗ್, ೨-೩ ವರ್ಷವಾಗುತ್ತಲೇ ಎಲ್.ಕೆ.ಜಿ., ನಂತರ ಯು.ಕೆ.ಜಿ., ನಂತರ ಒಂದನೆಯ ತರಗತಿಗೆ ಮಕ್ಕಳನ್ನು ದಾಖಲಿಸುವುದು (ಅದೂ ಆಂಗ್ಲ ಮಾಧ್ಯಮದ ಶಾಲೆಗಳಿಗೆ) ಕಾಣುತ್ತಿದ್ದೇವೆ. ಶಾಲೆಗಳಲ್ಲೂ 'ಡೇ ಕೇರ್' ಸೌಲಭ್ಯವಿದ್ದು ತಂದೆ/ತಾಯಿ ಕೆಲಸ ಮುಗಿಸಿಕೊಂಡು ಬರುವವರೆಗೂ ಶಾಲೆ ಮುಗಿದ ನಂತರವೂ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ನಗರಗಳಲ್ಲಿದೆ. ಮೊದಲ ಪಾಠಶಾಲೆಯಾಗಬೇಕಾಗಿದ್ದ ಮನೆಯೇ ಮಕ್ಕಳನ್ನು ಮನೆಯಿಂದ ಹೊರಗೆ ಹಾಕುವ ಪ್ರಕ್ರಿಯೆಗೆ ಹುಟ್ಟುತ್ತಲೇ ಚಾಲನೆ ಕೊಡುತ್ತಿದೆ. ಮೊದಲ ಪಾಠಶಾಲೆಯೇ ಇಂದಿನ ಮಕ್ಕಳಿಗೆ ಇಲ್ಲ. ಮೊದಲ ಶಿಕ್ಷಕರಾದ ತಾಯಿ-ತಂದೆಯರಿಗೆ ಪುರುಸೊತ್ತೇ ಇಲ್ಲ.
     ಬೇಬಿ ಸಿಟ್ಟಿಂಗ್, ಎಲ್.ಕೆ.ಜಿ., ಯು.ಕೆ.ಜಿ.ಗಳಿಗೆ ಸೇರಿಸಲು ವರ್ಷಗಳ ಮೊದಲೇ ಮುಂಗಡ ಬುಕಿಂಗ್ ಮಾಡಿರಬೇಕು, ಸಾಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ಲಕ್ಷಗಟ್ಟಲೆ ಡೊನೇಶನ್ ಕೊಡಬೇಕು. ಮಕ್ಕಳ ತಾಯಿ-ತಂದೆಯರ ಸಂದರ್ಶನವನ್ನೂ ಮಾಡಿ ಅವರು ವಿದ್ಯಾವಂತರಾಗಿದ್ದರೆ ಮಾತ್ರ ಮಕ್ಕಳನ್ನು ಸೇರಿಸಿಕೊಳ್ಳುವ ಪರಿಪಾಠವಿದೆ. ಇಷ್ಟಾಗಿಯೂ ಅಲ್ಲಿ ಹೇಳಿಕೊಡುವುದೇನು? ಪಾಶ್ಚಾತ್ಯ ಮಾದರಿಯ ಅಣಕು ಶಿಕ್ಷಣ, ಭಾರತೀಯ ಸಂಸ್ಕೃತಿಯ ಅವಹೇಳನ ಮತ್ತು ತಿರುಚಿದ ಇತಿಹಾಸದ ಕಲಿಕೆ! ನೈತಿಕ ಶಿಕ್ಷಣ, ಮೌಲ್ಯಗಳಿಗೆ ಅಲ್ಲಿ ಅವಕಾಶವೇ ಇಲ್ಲ, ಎಲ್ಲವೂ ವ್ಯವಹಾರ, ಹಣವೇ ಅಳತೆಗೋಲು! ಭಾರತೀಯರು ಮೆಕಾಲೆ ಹಿಂದೆ ನುಡಿದಿದ್ದ ಭವಿಷ್ಯದಂತೆ ಕರಿಚರ್ಮದ ಪಾಶ್ಚಾತ್ಯರಾಗಿದ್ದಾರೆ! ಇಷ್ಟಾಗಿಯೂ ಮಕ್ಕಳನ್ನು ಲಕ್ಷ ಲಕ್ಷ ಡೊನೇಶನ್ ಕೊಟ್ಟು ಪ್ರತಿಷ್ಟಿತ ಶಾಲೆಗಳಿಗೆ ಸೇರಿಸುವ ಉದ್ದೇಶವೆಂದರೆ ಮುಂದೆ ತಮ್ಮ ಮಕ್ಕಳು ಡಾಕ್ಟರೋ, ಇಂಜನಿಯರೋ ಆಗಿ ಲಕ್ಷ ಲಕ್ಷ ಸಂಪಾದಿಸಲಿ ಎಂದು! ಶಿಕ್ಷಣವಿಂದು ವ್ಯಾಪಾರವಾಗಿದೆ, ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಕೇಂದ್ರಗಳಾಗಿವೆ. ಶಿಕ್ಷಣದ ಮೂಲ ಉದ್ದೇಶವೇ ನಾಶವಾಗಿದೆ. ಸೂಕ್ತ ಸೌಲಭ್ಯಗಳಿಲ್ಲದ, ಶಿಕ್ಷಕರ ಕೊರತೆಯಿರುವ, ವಿಶ್ವಾಸ ಕಳೆದುಕೊಳ್ಳುತ್ತಿರುವ ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಕೂಲಿನಾಲಿ ಮಾಡುವವರೂ ಸಾಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. 
     ನೈತಿಕ ಶಿಕ್ಷಣವಿಲ್ಲದಿರುವುದರಿಂದ ಮತ್ತು ಎಲ್ಲೆಲ್ಲೂ ಸ್ಪರ್ಧಾತ್ಮಕ ಮನೋಭಾವವಿರುವುದರಿಂದ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ. ಕಡಿಮೆ ಅಂಕ ಬಂದರೆ ಬಯಸಿದ ಶಿಕ್ಷಣ ಪಡೆಯಲು ಅವಕಾಶವೇ ಇಲ್ಲದ ಸ್ಥಿತಿ ಇದೆ. ಇಷ್ಟೆಲ್ಲಾ ಕಷ್ಟಪಟ್ಟು ಓದಿದರೂ ಮುಂದೆ ನೌಕರಿ ಸಿಗುವ ಸಾಧ್ಯತೆ ಕಡಿಮೆ. ಶ್ರೀಮಂತರು ಮಾತ್ರ ತಮ್ಮ ಮಕ್ಕಳಿಗೆ ಬಯಸಿದ ಶಿಕ್ಷಣ ಕೊಡಿಸಬಹುದು, ಬಡವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಿರುವುದು ಅನುಮಾನ. ಹೀಗೆ ಶಿಕ್ಷಣದ ಮೂಲ ಉದ್ದೇಶವೇ ಅರ್ಥ ಕಳೆದುಕೊಂಡಿದೆ.      ಮಕ್ಕಳು ಇಂದು ಎಷ್ಟು ಒತ್ತಡದಲ್ಲಿರುತ್ತಾರೆಂದರೆ, ಪರೀಕ್ಷೆಗೆ ಮುನ್ನವೇ ಅಥವ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ಬರುವ ಮುನ್ನವೇ ಅಥವ ನಿರೀಕ್ಷಿತ ಫಲಿತಾಂಶ ಬಾರದಿದ್ದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಆತ್ಮಸ್ಥೈರ್ಯವನ್ನೇ ಕಲಿಸದ ಶಿಕ್ಷಣವನ್ನು ಶಿಕ್ಷಣವೆನ್ನಬಹುದೇ? ಇದು ಒಂದು ಮಗ್ಗುಲಾದರೆ ಇನ್ನೊಂದು ಕರಾಳ ಮುಖವೂ ಇದೆ. ಅದೆಂದರೆ ಮಕ್ಕಳು ನೈತಿಕವಾಗಿ ಹಾದಿ ತಪ್ಪುತ್ತಿರುವುದು. ಚಿಕ್ಕ ವಯಸ್ಸಿನಲ್ಲೇ ಸಿಗರೇಟು ಸೇದುವುದು, ಮಾದಕದ್ರವ್ಯಗಳ ಸೇವನೆ, ಡ್ರಗ್ಸ್ ಸೇವನೆ, ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ಪೋಷಕರ ನಿರ್ಲಕ್ಷ್ಯವೂ ಇವುಗಳಿಗೆ ಕೊಡುಗೆ ನೀಡಿದೆಯೆಂದರೆ ತಪ್ಪಲ್ಲ. ಹಣ ಕೊಟ್ಟು ಪದವಿ, ಡಾಕ್ಟರೇಟ್ ಕೊಂಡುಕೊಳ್ಳಬಹುದೆನ್ನುತ್ತಾರೆ. ನೈತಿಕತೆ ಕೊಡದ ಶಿಕ್ಷಣ ಒಂದು ಶಿಕ್ಷಣವೇ?
     ಹಾಗಾದರೆ ಇದಕ್ಕೆ ಪರಿಹಾರವೇನು? ಶಿಕ್ಷಣಪದ್ಧತಿಯಲ್ಲಿ ಸೂಕ್ತ ಪರಿವರ್ತನೆಯಾಗದೆ, ಪೋಷಕರ ಮನೋಭಾವ ಬದಲಾಗದೆ ಪರಿಹಾರ ಕಷ್ಟಸಾಧ್ಯ. ಎಲ್ಲದಕ್ಕೂ ಒಂದು ಕೊನೆ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಭಾರತ ಮೂಲತಃ ಆಧ್ಯಾತ್ಮಿಕ ಪ್ರಧಾನ ದೇಶವಾಗಿದ್ದು, ಆಧ್ಯಾತ್ಮಿಕತೆಗೆ ಬಲ ಬಂದರೆ ಪುನಃ ಪರಿಸ್ಥಿತಿ ಬದಲಾಗಬಹುದು. ವಿವೇಕಾನಂದರು ಹೇಳಿದಂತೆ 'ಕೆಲವೊಮ್ಮೆ ಆಧ್ಯಾತ್ಮಿಕತೆ ಮೇಲುಗೈ ಪಡೆದರೆ, ಕೆಲವೊಮ್ಮೆ ಭೋಗವಾದ ಮೇಲುಗೈ ಪಡೆಯುತ್ತದೆ. ಸಮುದ್ರದ ಅಲೆಗಳಂತೆ ಒಂದನ್ನೊಂದು ಹಿಂಬಾಲಿಸುತ್ತವೆ.' ಹೀಗಾಗಲೆಂದು ಹಾರೈಸೋಣ. ನೈತಿಕತೆಯನ್ನು ಬಲಪಡಿಸುವ, ಆತ್ಮಸ್ಥೈರ್ಯವನ್ನು ಕೊಡುವಂತಹ, ದೇಶ ಹಾಗೂ ಸಮಾಜದ ಹಿತ ಬಯಸುವ ಸತ್ಪ್ರಜೆಗಳನ್ನು ನಿರ್ಮಿಸುವಂತಹ ಶಿಕ್ಷಣದ ಅವಶ್ಯಕತೆ ಇಂದು ಇದೆ. ಆ ನಿಟ್ಟಿನಲ್ಲಿ ಜನನಾಯಕರು, ಪೋಷಕರು, ಮನೋಶಾಸ್ತ್ರಜ್ಞರು, ಶಿಕ್ಷಣತಜ್ಞರು ಚಿಂತಿಸಿ ಕಾರ್ಯಪ್ರವೃತ್ತರಾಗಲೇಬೇಕಾದ ಕಾಲವೀಗ ಬಂದಿದೆ. 
ಆವರಣ ಚೆಂದವಿರೆ ಹೂರಣಕೆ ರಕ್ಷಣ
ಹೂರಣ ಚೆಂದವಿರೆ ಆವರಣ ಕಾರಣ|
ಆವರಣ ಹೂರಣ ಚೆಂದವಿರೆ ಲಕ್ಷಣ
ಬದುಕು ಸುಂದರ ಪಯಣ ಮೂಢ||
-ಕ.ವೆಂ.ನಾಗರಾಜ್
[ಚಿತ್ರಗಳು: ಅಂತರ್ಜಾಲದಿಂದ ಹೆಕ್ಕಿದವು]
*****************************
8.7.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.

21.11.2013ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ.

6 ಕಾಮೆಂಟ್‌ಗಳು:

 1. ಮಾನವ ಜೀವನದ 16 ಸಂಸ್ಕಾರಗಳನ್ನು ನಿರೂಪಿಸುತ್ತಾ, ಅವುಗಳಲ್ಲಿ ಎಷ್ಟರಮಟ್ಟಿಗೆ ನಾವು ಮಕ್ಕಳಿಗೆ ಕಲಿಸುತ್ತಿದ್ದೇವೆ ಎಂಬುದನ್ನೂ ಸಾಧ್ಯಂತ ವಿವರಿಸಿದ್ದೀರಿ.

  ಸಂಸಾರದಲ್ಲಿ ಸರಿಗಮವಿಲ್ಲದೆ ಮಕ್ಕಳನ್ನು ನೇರವಾಗಿ ನಾವೆಷ್ಟು ಅನಾಥರಾಗಿಸಿದ್ದೀವಿ ಎಂಬುದನ್ನೂ ಮನದಟ್ಟು ಮಾಡಿದ್ದೀರಿ.

  'ಆವರಣ ಹೂರಣ ಚೆಂದವಿರೆ ಲಕ್ಷಣ' ನಿಜ ನಿಜ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಅನಿಸಿಕೆ ನೂರಕ್ಕೆ ನೂರರಷ್ಟು ಸತ್ಯ. ಧನ್ಯವಾದ, ಬದರೀನಾಥರೇ.

   ಅಳಿಸಿ
  2. Jayashree Bhat
   ಹೌದು, ಆದರೆ ನನ್ನ ದೃಷ್ಟಿಯಲ್ಲಿ ಮಾನವೀಯತೆಗಿ೦ತ ದೊಡ್ಡ ಸ೦ಸ್ಕಾರವಿಲ್ಲ.... ಕರುಣೆಗಿ೦ತ ದೊಡ್ಡ ಭಾವನೆ ಇಲ್ಲ.... ನೀವು ಹೇಳಿದ ಸ೦ಸ್ಕಾರಗಳೊ೦ದಿಗೆ ಮಾನವೀಯತೆ ಕರುಣೆ ಇದ್ದರೆ ಸೊಗಸು ಅ೦ತ ನನ್ನ ಮನ ಹೇಳುತ್ತೆ Kavi Nagaraj ರವರೆ

   Kavi Nagaraj
   ಮಾನವೀಯತೆ, ಸಂಸ್ಕಾರ, ಸಾಮಾಜಿಕ ಸಾಮರಸ್ಯ, ಸಾಮಾಜಿಕ ಜವಾಬ್ದಾರಿ, ಕರುಣೆ, ಇತ್ಯಾದಿಗಳ ಪೋಷಣೆಯ ಸಲುವಾಗಿಯೇ ಈ 16 ಸಂಸ್ಕಾರಗಳಿದ್ದು, ಅವುಗಳ ಉದ್ದೇಶ, ಆಚರಣೆಯ ರೀತಿ-ನೀತಿಗಳನ್ನು ಅಭ್ಯಸಿಸಿದರೆ ಗೊತ್ತಾಗುತ್ತದೆ. ಲೇಖನದ ಉದ್ದೇಶ ಈ ಸಂಸ್ಕಾರಗಳ ಕುರಿತು ಚರ್ಚಿಸುವುದಾಗಿರದೆ, ಶಿಕ್ಷಣದ ಕುರಿತು ಗಮನ ಸೆಳೆಯುವುದಾಗಿದೆ. ಉಪನಯನ, ವಾನಪ್ರಸ್ಥ, ಅಂತ್ಯೇಷ್ಠಿ ಇವುಗಳ ಕುರಿತು ಪ್ರತ್ಯೇಕ ಲೇಖನಗಳಲ್ಲಿ ವಿಸ್ತೃತವಾಗಿ ಚರ್ಚಿಸಿರುವೆ. ಪ್ರಸ್ತುತ ಲೇಖನವನ್ನು ಪೂರ್ಣವಾಗಿ ಓದಲು ವಿನಂತಿ. ಪ್ರತಿಕ್ರಿಯೆಗೆ ವಂದನೆಗಳು, ಜಯಶ್ರೀಭಟ್ ರವರೇ. ನಿಮ್ಮ ಕಳಕಳಿ ಮೆಚ್ಚುವಂತಹದು. ಕೃತಜ್ಞತೆಗಳು.

   Saraswathi Murthy
   Uttama mahiti samskara huttinindale agabeku

   ಅಳಿಸಿ
  3. Muhammad Mubeen AbdulGaffar Sullia
   ಕವಿ ನಾಗರಾಜ್ ರವರೆ .
   ಹದಿನಾಲ್ಕು ಓದಿ ಮುಗಿದಿಲ್ಲ ಇನ್ನು ಅರ್ಥ ಮಾಡಿಲ್ಲ ತಾವು ಹದಿನಾರು ಬರೆದಿದ್ದೀರಿ ಅಂದು ಉಳಿದ ಎರಡು ಯಾವುವು ?

   Jayashree Bhat
   ಕ್ಷಮಿಸಿ, ಹೌದು ನೀವು ಹೇಳಿದ್ದು ಸರಿ ಮೊದಲು ಪೂರ್ಣ ಓದಿರಲಿಲ್ಲ.. ನನ್ನ ಕಳಕಳಿ ಎನೆ೦ದರೆ ಎಲ್ಲಾ ಧರ್ಮೀಯರಿರೂ ಎಲ್ಲಾ ವರ್ಗದವರೂ ಒಪ್ಪುವ೦ತ ಬರಹಗಳು ಇರಲಿ ಎ೦ಬುದು... ಅಷ್ಟೆ...

   Muhammad Mubeen AbdulGaffar Sullia
   ಧರ್ಮದ ಮಾತಲ್ಲ ಜಯಶ್ರೀಯವರೇ , ಕವಿ ನಾಗರಾಜ್ ರವರು ಹದಿನಾಲ್ಕು ಪಾಯಿಂಟ್ ಬರೆದಿದ್ದರೆ ಕಮೆಂಟಿನಲ್ಲಿ ಹದಿನಾರು ಎಂದಿದ್ದಾರೆ ಆ ಉಳಿದ ಎರಡನ್ನು ತಿಳಿಸಿದರೆ ಒಟ್ಟಿಗೆ ಅಧ್ಯಯನ ನಡೆಸ ಬಹುದಲ್ಲ ಎಂದಿದ್ದೆ ಅಷ್ಟೇ

   Jayashree Bhat
   ಇನ್ನೊ೦ದು ಕೆಳವರ್ಗದವರಲ್ಲಿ ಉಪನಯನ ಸ೦ಸ್ಕಾರ ಇನ್ನು ಕೆಲವು ಸ೦ಸ್ಕಾರಗಳು ಇಲ್ಲ... ನೀವು ಹೇಳಿದ ಸ೦ಸ್ಕಾರಗಳು ಬ್ರಾಹ್ಮಣ ವರ್ಗ ಮತ್ತು ಮೇಲ್ವರ್ಗದವರಲ್ಲಿ ಮಾತ್ರ ಸಾಧ್ಯ... ನನಗೆ ಅರಿವಿದೆ... ಇದು ಕೆಳವರ್ಗದವರಲ್ಲಿ ವೈಮನಸ್ಯ ತರುವುದಿಲ್ಲವೆ? ನನಗೆ ಚೆನ್ನಾಗಿ ಗೊತ್ತು... ಆದರೆ ಇದು ಎಲ್ಲರೂ ಒಪ್ಪಬೇಕಾಗಿಲ್ಲ ಅಲ್ಲವೆ?

   Jayashree Bhat
   ಇದು ತು೦ಬಾ ಆಳವಾದ ವಿಚಾರ ಮತ್ತು ವಿಸ್ತಾರವಾದದ್ದು... ಇಲ್ಲಿ ಹೇಗೆ ಪ್ರಸ್ತುತಪಡಿಸುತ್ತೀರೋ ತಿಳಿಯದು

   Muhammad Mubeen AbdulGaffar Sullia
   ೧. ಗರ್ಭಾದಾನ,
   ೨. ಪುಂಸವನ,
   ೩. ಸೀಮಂತೋನ್ನಯನ,
   ೪. ಜಾತಕರ್ಮ,
   ೫. ನಾಮಕರಣ,
   ೬. ನಿಷ್ಕ್ರಮಣ,
   ೭. ಅನ್ನಪ್ರಾಶನ,
   ೮. ಮುಂಡನ,
   ೯. ಕರ್ಣವೇಧ,
   ೧೦. ಉಪನಯನ,
   ೧೧. ವೇದಾರಂಭ,
   ೧೨. ಸಮಾವರ್ತನ,
   ೧೩. ವಿವಾಹ,
   ೧೪. ವಾನಪ್ರಸ್ಥ,
   ೧೫. ಸಂನ್ಯಾಸ,
   ೧೬. ಅಂತ್ಯೇಷ್ಟಿ.
   ಇದು ಯಾವ ಧರ್ಮದ ಮಾತೆ ಆಗಿರಲಿ , ಅರಿಯಬೇಕು, ಕಲಿಯಬೇಕು , ಅದಕ್ಕಾಗಿ ನನಗೆ ತುಸು
   ೩. ೬, ೮, ೧೨, ೧೪, ನ್ನು ತುಸು ಅರ್ಥೈಸಿರಿ , ವಿವರಣೆ ಅಗತ್ಯವಿಲ್ಲ , ಅಗತ್ಯ ಬಂದರೆ ಕೇಳುತ್ತೇನೆ .

   Kavi Nagaraj
   16 ಸಂಸ್ಕಾರಗಳು ಯಾವುವು ಎಂಬ ಬಗ್ಗೆ ಲೇಖನದ ಮೊದಲ ವಾಕ್ಯದಲ್ಲೆ ಮಾಹಿತಿ ಇದೆ. ಲೇಖನದಲ್ಲಿ ಯಾವುದೇ ಜಾತಿ/ವರ್ಗದ ವಿರುದ್ಧ ಯಾವುದೇ ಅಂಶಗಳನ್ನು ಬರೆದಿಲ್ಲ. ವೇದಕಾಲದಲ್ಲಿ ಉಪನಯನ ಯಾವುದೇ ಒಂದು ಜಾತಿ/ವರ್ಗಕ್ಕೆ ಸೀಮಿತವಾಗಿರಲಿಲ್ಲ. ಹಾಸನದ ವೇದಭಾರತೀ ವೇದವನ್ನು ಯಾವುದೇ ಜಾತಿ, ಮತ, ಲಿಂಗ, ವಯಸ್ಸಿನ ಬೇಧವಿಲ್ಲದೆ ಎಲ್ಲರಿಗೂ ಕಲಿಸುವ ವ್ಯವಸ್ಥೆ ಮಾಡಿದೆ. ಕಳೆದ ಎರಡು ವರ್ಷಗಳಿಂದಾ ಇದು ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲಾ ವರ್ಗದವರೂ ಕಲಿಯುತ್ತಿದ್ದಾರೆ. ಕಳೆದ ವರ್ಷ ನಡೆದ 3 ದಿನಗಳ ವೇದೋಕ್ತ ಜೀವನ ಶಿಬಿರದಲ್ಲಿ ನಾಲ್ವರು ಸ್ತ್ರೀಯರೂ ಸೇರಿದಂತೆ, 8 ಜನರಿಗೆ ಉಪನಯನ ಸಂಸ್ಕಾರ ನೀಡಲಾಯಿತು. ಇದರಲ್ಲೂ ಜಾತಿಬೇಧವಿರಲಿಲ್ಲ. ಕೆಳವರ್ಗದವರೆಂದು ಹೇಳುವವರೂ ಈ ಸಂಸ್ಕಾರ ಪಡೆದದ್ದು ಮತ್ತು ಈಗಲೂ ನಿತ್ಯ ವೇದಾಭ್ಯಾಸ ಮಾಡುತ್ತಿರುವುದು ವಿಶೇಷ. ಸಾಮಾಜಿಕ ಸಾಮರಸ್ಯ ಮತ್ತು ಜಾಗೃತಿಯೇ ವೇದಭಾರತಿಯ ಚಟುವಟಿಕೆಗಳ ಉದ್ದೇಶವಾಗಿದೆ. ಈ ಲೇಖನದಲ್ಲಿ ಯಾರಲ್ಲಾದರೂ ವೈಮನಸ್ಯ ತರುವಂತಹ ಅಂಶಗಳಿವೆ ಅನ್ನಿಸಿದರೆ ಅಂತಹವನ್ನು ತೋರಿಸಲು ವಿನಂತಿ ಮತ್ತು ಲೇಖನವನ್ನು ತೆಗೆದುಹಾಕಲು ಹೇಗೂ ನೀವು ಸ್ವತಂತ್ರರಿದ್ದೀರಿ. ವೈಚಾರಿಕತೆಗೂ ವೈಮನಸ್ಸಿಗೂ ಅಂತರವಿದೆಯೆಂದು ನನ್ನ ಅನಿಸಿಕೆ. ಧನ್ಯವಾದಗಳು.

   Kavi Nagaraj
   Muhammad Mubeen AbdulGaffar Sullia ರವರೇ, ನಿಮ್ಮ ಕುತೂಹಲಕ್ಕೆ ಧನ್ಯವಾದಗಳು. ನೀವು ಕೇಳಿದಂತೆ ಚುಟುಕು ವಿವರ ಹೀಗಿದೆ: 3. ಸೀಮಂತೋನ್ನಯನ: ಗರ್ಭ ನಿಂತ 4 ತಿಂಗಳುಗಳಿಂದ ಹಿಡಿದು ಎಂಟು ತಿಂಗಳವರೆಗಿನ ಅವಧಿಯಲ್ಲಿ ಮಾಡುವ ಕಾರ್ಯವಿದು. ಪತಿ ಪತ್ನಿಗೆ ಸಂತೋಷವುಂಟುಮಾಡಲು ಆರೋಗ್ಯ ಹಾಗೂ ಹರ್ಷವರ್ಧಕ ತೈಲವನ್ನು ಪತ್ನಿಯ ತಲೆಗೆ ಹಚ್ಚಿ ಅವಳ ತಲೆ ಬಾಚಿ ಜಡೆ ಹಾಕುವುದು, ಆಕೆಉ ಮನಸ್ಸಿಗೆ ಧೈರ್ಯ, ಉಲ್ಲಾಸ ಉಂಟಾಗುವಂತೆ ಮಧುರ ನುಡಿಗಳನ್ನಾಡುವುದು, ಪುಷ್ಟಿದಾಯಕವಾದ ಆಹಾರ ಸೇವಿಸಲು ಕೊಡುವುದು, ಇತ್ಯಾದಿ ಸೇರಿದಂತೆ ಅವಳಿಗೆ ಬಂಧುಗಳು ಆರತಿ ಎತ್ತಿ, ಶುಭ ಕೋರಿ ಹರಸುವುದು. 6. ನಿಷ್ಕ್ರಮಣ: ಮಗು ಮತ್ತು ತಾಯಿಯನ್ನು ಮನೆಯಿಂದ ಹೊರಗೆ ಉತ್ತಮ ವಾಯುಸೇವನೆಗೆ ಮೊದಲ ಬಾರಿ ಕರೆದೊಯ್ಯುವುದು. ಎಳೆ ಬಿಸಿಲಿನಲ್ಲಿ, ರಾತ್ರಿಯ ಬೆಳದಿಂಗಳಿನಲ್ಲಿ ಮಗುವನ್ನು ಸ್ವಲ್ಪ ಹೊತ್ತು ಓಡಾಡಿಸಿದರೆ ಸೂರ್ಯನ ತೇಜ, ಚಂದ್ರನ ಶಾಂತಭಾವ ಮೂಡಲು ಸಹಕಾರಿ. 8. ಮುಂಡನ: ಚೌಲವೆಂದೂ ಕರೆಯುತ್ತಾರೆ. ಮೊದಲು ಬೆಳೆದ ಕೂದಲನ್ನು ತೆಗೆಯುವುದರಿಂದ ಉತ್ತಮವಾದ ಮತ್ತು ಆರೋಗ್ಯಕರೌಅಧ ಕೂದಲು ಬೆಳೆಯಲು ಇದು ಸಹಕಾರಿ. ಸಾಮಾನ್ಯವಾಗಿ ಮಗು ಒಂದು ಅಥವ ಮೂರು ವರ್ಷದವನಾದಾಗ ಇದನ್ನು ಮಾಡುತ್ತಾರೆ. 12. ಸಮಾವರ್ತನ: ಇದು ವೇದಾಧ್ಯಯನದ ನಂತರ ಮಾಡುವ ಒಂದು ರೀತಿಯ ಬೀಳ್ಕೊಡುಗೆ ಇದ್ದಂತೆ. ಗುರುಕುಲದಲ್ಲಿ ವೇದ ಮತ್ತು ಜೀವನಕ್ಕೆ ಅಗತ್ಯವಾದ ಶಿಕ್ಷಣ ಪಡೆದು ಉತ್ತಮ ಪ್ರಜೆಯೆನಿಸಲು ಅರ್ಹನೆನಿಸಿದಾಗ ಶಿಕ್ಷಣ ಮುಗಿದಂತೆ. ಆಗ ಗುರುವಿಗೆ ಗುರುದಕ್ಷಿಣೆ ಅರ್ಪಿಸಿ ವಂದಿಸಿ ಮನೆಗೆ ಹಿಂತಿರುಗುವಾಗ ನಡೆಸುವ ಕ್ರಿಯೆ. ಇದು ಈಗ ಆಚರಣೆಯಲ್ಲಿರದೆ ಮಹತ್ವ ಕಳೆದುಕೊಂಡಿದೆ. 14. ವಾನಪ್ರಸ್ಥ: ಇದು ಎಲ್ಲರಿಗೂ ಕಡ್ಡಾಯವಲ್ಲ. ಆಸಕ್ತರು ಮಾಡಬಹುದಾಗಿದೆ. ಗೃಹಸ್ಥಾಶ್ರಮದ ಕರ್ತವ್ಯಗಳನ್ನು ನಿಭಾಯಿಸಿದ ನಂತರ ಸಾಮಾನ್ಯವಾಗಿ 50 ವರ್ಷಗಳಾದ ನಂತರದಲ್ಲಿ ಮುಂದಿನ ಜೀವನವನ್ನು ಸಮಾಜದ ಏಳಿಗೆಯ ಸಲುವಾಗಿ ಆತ್ಮಕಲ್ಯಾಣ, ಲೋಕಕಲ್ಯಾಣದ ಸಲುವಾಗಿ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿ ವಿರಕ್ತ ಜೀವನ ನಡೆಸುವುದು, ಪತ್ನಿ ಇಚ್ಛಿಸಿದರೆ ಅವಳೂ ಜೊತೆಗೂಡಬಹುದು. ವಿಸ್ತೃತ ಲೇಖನಕ್ಕೆ ಕೊಂಡಿ ಇದು: http://kavimana.blogspot.in/2012/12/blog-post_9.html

   ಅಳಿಸಿ
  4. Muhammad Mubeen AbdulGaffar Sullia
   ಕವಿ ನಾಗ್ರಾಜರವರೆ, ಧನ್ಯವಾದಗಳು thanks for your brief explanation.
   , ನೀವು ಬರೆದ ಹದಿರಾರು ಪಾಯಿಂಟ್ಸ್ ಓದಿದಾಗ ಬಹಳ ದೊಡ್ಡ ಶಾಸ್ತ್ರವಾಗಿರಬಹುದೆಂದು ಭಾವಿಸಿದ್ದೆ , ಆದರೆ ತಮ್ಮ ವಿವರಣೆ ಕೇಳಿದಾಗ , ಹಿಂದೆ ಅಂದರೆ ಬಾಲ್ಯದಲ್ಲಿ ನಾವೆಲ್ಲಾ ನೋಡಿದ, ಕೇಳಿದ ಒಂದಲ್ಲ ಒಂದು ರೀತಿಯಲ್ಲಿ ಆಚರಿಸಿದ ಆಚಾರಣೆಗಳಾಗಿವೆ.
   ನನ್ನ ಅಧ್ಯಯನದ ಪ್ರಕಾರ ಕೆಲವೊಂದು ಪಾಯಿಂಟ್ ಆಚೆ ಈಚೆ ಎಲ್ಲ ಧರ್ಮಗಳಲ್ಲಿ ಕೂಡ ಇವನ್ನು ಬ್ಹೊದಿಸಾಗಿದೆ ,
   ಆದರೆ ಶಿಕ್ಷಣ ದಾರಿ ತಪ್ಪುತ್ತಿದೆಯೇ? ಎಂಬುದಕ್ಕೆ ಇದರೊಂದಿಗೆ ಹೇಗೆ ಸಂಭಂದ ಜೋಡಿಸುತ್ತಿರಿ ತುಸು ಅದನ್ನು ವಿವರಿಸಿರಿ ನಂಗೂ ಬೇರೆಯವರಿಗೂ ಉಪಕಾರವಾಗಬಹುದು .

   Kavi Nagaraj
   Muhammad Mubeen AbdulGaffar Sulliaರವರೇ, ವಂದನೆಗಳು. ಲೇಖನದ ಮೊದಲ ಪ್ಯಾರಾದಲ್ಲಿಯೇ ಇದಕ್ಕೆ ಉತ್ತರಿಸಿರುವೆ. 16 ಸಂಸ್ಕಾರಗಳ ಪೈಕಿ 9 ಸಂಸ್ಕಾರಗಳು ಮಕ್ಕಳಿಗೆ ಸಂಬಂಧಿಸಿದ್ದು ಮತ್ತು ಉತ್ತಮ ಪ್ರಜೆಗಳನ್ನಾಗಿಸಲು ಸಹಕಾರಿ ಎಂದಿರುವೆ. ಪೂರ್ಣ ಲೇಖನ ಓದಿರದಿದ್ದರೆ ಲಿಂಕ್ ಕ್ಲಿಕ್ಕಿಸಿ ಓದಲು ವಿನಂತಿ. ಉತ್ತಮ ಶಿಕ್ಷಣದ ಸಂಕಲ್ಪ ಮಾಡುವ ಸಲುವಾಗಿನ ಉಪನಯನ, ಉತ್ತಮ ಶಿಕ್ಷಣ (ವೇದಾಧ್ಯಯನ ಹಾಗೂ ಉತ್ತಮ ಪ್ರಜೆಯೆನಿಸಲು ಅಗತ್ಯವಾದ ಶಿಕ್ಷಣ) ಮತ್ತು ಸಮಾವರ್ತನ ಸಂಸ್ಕಾರಗಳು ಶಿಕ್ಷಣಕ್ಕೆ ನೇರವಾಗಿ ಸಂಬಂಧಿಸಿದ್ದಾಗಿವೆ.

   ಅಳಿಸಿ
  5. Muhammad Mubeen AbdulGaffar Sullia
   ಕವಿ ನಾಗ್ರಾಜ್ ರವರೆ ಬಹಳ ಸಂತೋಷ ತಾವು ಸುಳ್ಯ ದಲ್ಲೂ ಇದ್ದಿರೆಂದರೆ ಅದೂ ತಹಾಶಿಲ್ದಾರರಾಗಿ ಅದು ನಮ್ಮ ಹೆಮ್ಮೆಯ ವಿಷಯ , ನಾನಂತೂ 1975 ರಿಂದ ಸುಳ್ಯ ದಿದಲೂ, ಕರ್ನಾಟಕ ದಿಂದಲೂ, ಭಾರತದಿಂದಲೂ ದೂರ ವಾಗಿದ್ದೇನೆ.
   ತಾವು ಹೇಳಿದಂತೆ ಉತ್ತಮ ಶಿಕ್ಷಣಕ್ಕಾಗಿ ಉತ್ತಮ ರೀತಿ ನೀತಿ ಗಳನ್ನೂ ಪಾಲಿಸಬೇಕಾದುದು ಅತೀ ಅಗತ್ಯ. ಆದರೆ ಇಂದಿನ ಶಿಕ್ಷಣವು ಜ್ಞಾನ ವರ್ಧಕ ಶಿಕ್ಷಣ ವಾಗಿರುವುದಿಲ್ಲ. ದೇವರ ಭಯವೇ ಜ್ಞಾನದ ಮೂಲ ವೆಂದಾದರೆ ಕಲಿತವರಲ್ಲಿ ಜ್ಞಾನವೇ ಅಳಿದು ಹೋದಂತೆ ಭಾಸವಾಗುತ್ತದೆ . ಎಷ್ಟು ಕಲಿಯುತ್ತಾರೋ ಅಷ್ಟೇ ದೇವ ಧಿಕ್ಕಾರಿಯಾಗಿ, ಐಶಾರಮ , ಸಂಪತ್ತು , ಮಜಾ ಮಾಡುವುದೇ ಜೀವನದ ಉದ್ದೇಶವಾಗಿ ಮಾರ್ಪಡುತ್ತದೆ . ಒಂದುವೇಳೆ ದೇವನನ್ನು ನಂಬಿದರೂ ಅವನಲ್ಲಿ ಬೇಡುವುದು ಹಣವನ್ನೇ !
   ಡಾಕ್ಟರ್ ಆದವನಲ್ಲಿ ಹ್ರದ್ಯವೇ ಇರುವುದಿಲ್ಲ [ ಎಲ್ಲರೂ ಅಲ್ಲ ಹೆಚ್ಚಿನವರು] , ಹೆಣವನ್ನು ಪರೀಕ್ಷಿಸಿ ಎಡ್ಮಿಟ್ ಮಾಡಿಸಿ ಹಣ ಸುಲಿಯುವ ಹವ್ಯಾಸ . ಮಾನವೀಯತೆ ಮರೆತ ಶಿಕ್ಷಣ ಪದ್ಧತಿ.
   ಒಟ್ಟಿನಲ್ಲಿ ಜ್ಞಾನಿಯಾಗಲು, ಸುಜ್ಞಾನಿಯಾಗಲು , ವಿಜ್ಞಾನಿಯಾಗಲು , ಶಿಕ್ಷಣದ ಅಗತ್ಯವೇ ಇಲ್ಲ , ಬರೇ ಸತ್ಯಾನ್ವೇಷಣೆಯಲ್ಲಿ ಮುಂದುವರಿದಾಗ ತಲುಪುವ ಘಟ್ಟಗಳು ವೆನ್ನಬಹುದಷ್ಟೇ .

   Kavi Nagaraj
   Muhammad Mubeen AbdulGaffar Sulliaರವರೇ, ನಿಮ್ಮ ಪೂರಕ ಅಭಿಪ್ರಾಯಕ್ಕಾಗಿ ವಂದನೆಗಳು. ಸತ್ಯಾನ್ವೇಷಣೆಯಲ್ಲಿ ತೊಡಗಿದಾಗ ದೇವರದಲ್ಲ, ಯಾರ ಭಯವೂ ಸುಳಿಯದು. ಅಷ್ಟಕ್ಕೂ ವೇದ ಎಂಬ ಪದದ ಅರ್ಥ ಜ್ಞಾನ ಎಂಬುದಷ್ಟೇ! ಈ ಜ್ಞಾನ ಎಲ್ಲರಿಗೂ ಸಿಗಲಿ. ಉತ್ತಮ ಪ್ರಜೆಗಳನ್ನು ರೂಪಿಸುವ ಶಿಕ್ಷಣ ಸಿಗುವಂತಾಗಲಿ ಎಂಬ ನಿಮ್ಮ ಕಳಕಳಿಗೆ ನಾನೂ ಒಬ್ಬ ಬೆಂಬಲಿಗನಾಗಿದ್ದೇನೆ

   ಅಳಿಸಿ