'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಮತ್ತೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' - ಇದು ನ್ಯಾಯಾಲಯಗಳಲ್ಲಿ ಸಾಕ್ಷ್ಯ ಹೇಳುವವರಿಂದ ಮಾಡಿಸಲಾಗುವ ಪ್ರಮಾಣವಚನ. ಆದರೆ ಆ ರೀತಿ ಪ್ರಮಾಣ ಮಾಡಿದವರೆಲ್ಲರೂ ಸತ್ಯ ಹೇಳುತ್ತಾರೋ ಇಲ್ಲವೋ ಗೊತ್ತಿಲ್ಲ. ಇರಲಿ ಬಿಡಿ. ಅಷ್ಟಕ್ಕೂ ಈ ಸತ್ಯ ಎಂದರೆ ಏನು? ಸತ್ಯಕ್ಕೆ ಸಾಮಾನ್ಯ ಅರ್ಥ ಕೊಡಬೇಕೆಂದರೆ ವಾಸ್ತವ ಸಂಗತಿಗೆ ಅನುಗುಣವಾಗಿರುವುದು, ಒಂದು ಆದರ್ಶ ಅಥವ ಮಾನದಂಡ ಅಥವ ಮೂಲವಿಚಾರಕ್ಕೆ ಅನುರೂಪವಾಗಿರುವುದು ಎನ್ನಬಹುದು. ಸತ್ಯ ಎಂದು ತಿಳಿದಿರುವುದಕ್ಕೆ ವಿರುದ್ಧವಾದುದನ್ನು ಸುಳ್ಳು ಎನ್ನಬಹುದು. ಸತ್ಯದ ನಡಿಗೆ ನಿಧಾನ. ಸತ್ಯ ಒಂದು ಹೆಜ್ಜೆ ಮುಂದಿಡುವಷ್ಟರಲ್ಲಿ, ಸುಳ್ಳು ಪ್ರಪಂಚವನ್ನು ಒಂದು ಸುತ್ತು ಸುತ್ತಿ ಬಂದುಬಿಡಬಹುದು. ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಗೊಬೆಲ್ಸ್ ಸಿದ್ಧಾಂತ. ಆದರೆ, ಸುಳ್ಳನ್ನು ಸತ್ಯವೆಂದು ನಂಬಿಸಬಹುದಷ್ಟೆ ಹೊರತು, ನಿಜವಾದ ಸತ್ಯ ಸತ್ಯವಾಗಿಯೇ ಉಳಿದಿರುತ್ತದೆ ಎಂಬುದೇ ಸತ್ಯ!
ಗುಣಗಳ ತಾಯಿಯೆನ್ನಲಾಗುವ ಸತ್ಯವನ್ನು ವಿವಿಧ ಹಿನ್ನೆಲೆಗಳಲ್ಲಿ ಚರ್ಚಿಸಲಾಗುತ್ತಿದೆ, ವಿಮರ್ಶಿಸಲಾಗುತ್ತಿದೆ. ಅದು ತತ್ವದರ್ಶನವಾಗಬಹುದು, ಧಾರ್ಮಿಕವಾಗಬಹುದು, ವೈಜ್ಞಾನಿಕವಾಗಿ ಆಗಬಹುದು ಅಥವ ದಿನನಿತ್ಯದ ಜೀವನದ ಅನುಭವಗಳಾಗಬಹುದು. ಸತ್ಯದ ವಿವಿಧ ಮಗ್ಗಲುಗಳು ವಿದ್ವಾಂಸರ, ದಾರ್ಶನಿಕರ, ಧಾರ್ಮಿಕ ಪಂಡಿತರ ಚರ್ಚೆಯ ವಿಷಯವಾಗಿದೆ. ಸತ್ಯ ಯಾವುದು, ಅದನ್ನು ಕಾಣುವುದು ಹೇಗೆ ಎಂಬ ಬಗ್ಗೆ ಸಹ ತಿಳಿದವರು ಉಪದೇಶಿಸುವುದನ್ನು ಕಾಣುತ್ತೇವೆ. ಜೀವನದ ಉದ್ದೇಶವೇ ಸತ್ಯದ ಹುಡುಕಾಟ ಎನ್ನುವುದನ್ನೂ ಕೇಳಿದ್ದೇವೆ. ಒಟ್ಟಾರೆಯಾಗಿ ಈ ಸತ್ಯ ಅನ್ನುವುದು ಪರೀಕ್ಷೆಗೆ ಒಳಪಟ್ಟಷ್ಟು ಇತರ ಸಂಗತಿಗಳು ಒಳಪಟ್ಟಿರಲಾರವು. ವಿಚಿತ್ರವೆಂದರೆ, ನಿಜವಾದ ಸತ್ಯ ಸತ್ಯವಾಗಿಯೇ ಇರುತ್ತದೆ, ಅದನ್ನು ಸುಳ್ಳಾಗಿ ಅರ್ಥೈಸಿದರೂ ಅರ್ಥೈಸಿದವರಿಗೆ ಅದರ ಲಾಭ/ನಷ್ಟಗಳೇ ಹೊರತು ಸತ್ಯಕ್ಕೆ ಅದರಿಂದ ಏನೂ ಬಾಧಕವಿಲ್ಲ. ಎಂತಹ ವಿಚಿತ್ರ ಸತ್ಯವಿದು! ಒಂದು ಉದಾಹರಣೆ ನೋಡೋಣ. ಬೆಂಕಿ ಸುಡುತ್ತದೆ, ಏಕೆಂದರೆ ತನ್ನ ಸಂಪರ್ಕಕ್ಕೆ ಬಂದುದನ್ನು ಸುಡುವುದೇ ಅದರ ಗುಣ. ಒಂದು ದೇಶದಲ್ಲಿ ಮಾತ್ರ ಸುಡುತ್ತದೆ, ಇನ್ನೊಂದು ದೇಶದಲ್ಲಿ ಸುಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಎಲ್ಲೆಡೆಯಲ್ಲೂ ಅದೇ ಗುಣವಿರುತ್ತದೆ. 'ಇಲ್ಲ, ಬೆಂಕಿ ಸುಡುವುದಿಲ್ಲ, ಸುಡಬಾರದು' ಎಂದು ಎಷ್ಟೇ ಪ್ರಖರವಾಗಿ ವಾದ ಮಾಡಿದರೂ ಬೆಂಕಿಯ ಸುಡುವ ಗುಣ ಬದಲಾಗದು. 'ಬೆಂಕಿ ಇನ್ನು ಮುಂದೆ ನಮ್ಮ ದೇಶದಲ್ಲಿ ಸುಡಬಾರದು' ಎಂದು ಒಂದು ದೇಶದ ಜನರೆಲ್ಲರೂ ಒಟ್ಟಾಗಿ ನಿರ್ಧರಿಸಿದರೂ, ಸರ್ಕಾರ ಆದೇಶ ಮಾಡಿದರೂ ಬೆಂಕಿ ಸುಡದೇ ಇರುತ್ತದೆಯೇ? ಹೀಗಾಗಿ ಬೆಂಕಿ ಸುಡುತ್ತದೆ ಎಂಬುದು ಪ್ರತ್ಯಕ್ಷವಾಗಿ, ಪ್ರಮಾಣವಾಗಿ ಕಂಡು ಬರುವ, ಅನುಭವಕ್ಕೆ ಸಿಗುವ, ಯಾವುದೇ ಕಾರಣಕ್ಕೂ ಬದಲಾಗದ ಸತ್ಯ. ಬೆಂಕಿಯ ವಿಷಯದಲ್ಲಿ ಹೇಳಿದಂತೆ 'ಇದೇ ಸತ್ಯ' ಎಂದು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹೇಳಲಾಗದಿರುವುದು ಸಮಸ್ಯೆಗಳ ಉದ್ಭವಕ್ಕೆ ಕಾರಣ ಎಂಬುದೂ ಸಹ ಸತ್ಯವೇ!
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ನಿಜವರಿತು ನಡೆವ ಹಿರಿಯ ಮೂಢ ||
ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನು ನಿರ್ಧರಿಸಲು ಯಾವುದಾದರೂ ಮಾನದಂಡವಿರಬೇಕು. ಅಂತಹ ಮಾನದಂಡ ಯಾವುದು? ಇನ್ನೊಂದು ಸಮಸ್ಯೆಯೂ ಇಲ್ಲಿ ಬರುತ್ತದೆ. ಒಬ್ಬರು ಒಪ್ಪಿದ್ದನ್ನು ಇನ್ನೊಬ್ಬರು ಒಪ್ಪದಿರಬಹುದು. ಆಳವಾಗಿ ವಿಶ್ಲೇಷಿಸಿದರೆ ಇಂತಹ ಹಲವಾರು ಮಾನದಂಡಗಳು ಯಾವುದೋ ಒಬ್ಬ ಪ್ರಚಂಡ ಬುದ್ಧಿಮತ್ತೆಯುಳ್ಳ ವ್ಯಕ್ತಿಯ ಅಥವ ಸಮೂಹದ ಮಥನ-ಮಂಥನಗಳಿಂದ ಒಡಮೂಡಿದ್ದಾಗಿರುತ್ತದೆ ಎಂಬುದನ್ನು ಗುರುತಿಸುವುದು ಕಷ್ಟವಲ್ಲ. ಮಾನವನಿರ್ಮಿತ ಮಾನದಂಡಗಳು ಸದಾಕಾಲಕ್ಕೆ ನಿಲ್ಲಲಾರವು ಅಥವ ಬದಲಾವಣೆಗಳಿಗೆ ಈಡಾಗುತ್ತಲೇ ಇರುತ್ತವೆ. ಈ ವಿಶಾಲ ಬ್ರಹ್ಮಾಂಡ, ಜೀವವೈವಿಧ್ಯ ಮತ್ತು ದೇವರುಗಳಿಗೆ ಕುರಿತಂತೆ ಇದೇ ಸತ್ಯವೆಂದು ನಿಖರವಾಗಿ ಹೇಳುವುದು ಕಷ್ಟವೇ ಸರಿ. ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ತಾರ್ಕಿಕವಾಗಿ ಪುಟ್ಟ ಮೆದುಳಿನ ಮನುಷ್ಯ ಇವುಗಳ ಕುರಿತು ತಿಳಿಯಲು ಪ್ರಯತ್ನಿಸುತ್ತಲೇ ಇದ್ದಾನೆ. ಪೂರ್ಣ ಸತ್ಯವೆನ್ನುವುದು ಇನ್ನೂ ಗೊತ್ತಾಗಬೇಕಿದೆ. ವೈಜ್ಞಾನಿಕವಾಗಿಯೂ ಸಹ ಬೃಹತ್ ಬ್ರಹ್ಮಾಂಡದ ವಿಸ್ತಾರ, ವಿಸ್ಮಯಗಳನ್ನು ತಿಳಿಯಲಾಗಿಲ್ಲ. ಹೀಗಿರಬಹುದು ಎಂಬ ಕಲ್ಪನೆ ಮಾತ್ರ ಮಾಡಬಹುದು. ಧಾರ್ಮಿಕವಾಗಿ ಸಹ ಜಗತ್ತು, ಜೀವ, ದೇವರನ್ನು ಸಂಪೂರ್ಣ ಸ್ಪಷ್ಟವಾಗಿ ಅರಿಯಲಾಗಿಲ್ಲವೆಂದೇ ಹೇಳಬೇಕು. ವಿವಿಧ ಧರ್ಮಗಳು, ಪಂಥಗಳು, ಪಂಗಡಗಳು ವಿವಿಧ ರೀತಿಗಳಲ್ಲಿ ಇವುಗಳನ್ನು ವಿಶ್ಲೇಷಿಸುತ್ತಿರುವುದೇ ಇದಕ್ಕೆ ಉದಾಹರಣೆ.
ಎಲ್ಲಿ ವೈಚಾರಿಕ ಸ್ವಾತಂತ್ರ್ಯಕ್ಕೆ ಅವಕಾಶವಿರುವುದಿಲ್ಲವೋ ಅಲ್ಲಿ ಸತ್ಯಾನ್ವೇಷಣೆ ಕಷ್ಟ. ಸತ್ಯವನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡುವುದಾದರೆ, ಧಾರ್ಮಿಕ ವಿಚಾರಗಳು ಜಗತ್ತು, ಜೀವ ಮತ್ತು ದೇವರ ಬಗ್ಗೆ ಕೆಲವು ಸಿದ್ಧಾಂತಗಳನ್ನು ಹೊಂದಿದ್ದು ಮಾನವನ ಧರ್ಮ ಎಂದರೆ ಏನು, ಅವನ ದೈನಂದಿನ ನಡವಳಿಕೆಗಳು ಹೇಗಿರಬೇಕು, ಯಾವ ಸಂಪ್ರದಾಯಗಳನ್ನು ಪಾಲಿಸಬೇಕು ಎಂದು ಹೇಳುತ್ತವೆ. ಈ ವಿಚಾರಗಳು ಮತ್ತು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯಗಳ ಪೈಕಿ ಕೆಲವು ಅರ್ಥಹೀನವೆನಿಸಿದರೂ, ಅಸಂಬದ್ಧವೆನಿಸಿದರೂ ಪಾಲಿಸಿಕೊಂಡು ಬರುತ್ತಿರುವವರೇ ಜಾಸ್ತಿ. ಇದೇನೇ ಇರಲಿ, 'ಇದು ನಿಜವಾದ ಧರ್ಮ, ನಾವು ನಂಬಿರುವ ದೇವರೇ ನಿಜವಾದ ದೇವರು. ಇದನ್ನು ಎಲ್ಲರೂ ಒಪ್ಪಲೇಬೇಕು, ಪಾಲಿಸಲೇಬೇಕು' ಎನ್ನುವವರ ವಾದ, ಒತ್ತಾಯದಿಂದ ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರುವುದಾಗುತ್ತದೆ. ಭಿನ್ನಾಭಿಪ್ರಾಯ, ಸಮಸ್ಯೆ, ಸಂಘರ್ಷ, ಕ್ರಾಂತಿಗಳಿಗೆ ಮೂಲ ಕಾರಣಗಳು ಇವೇ ಅಗಿವೆ. 'ಋಷಿ ಮೂಲ, ನದಿ ಮೂಲಗಳನ್ನು ಹುಡುಕಬಾರದು' ಎಂಬ ಸವಕಲಾದರೂ, ಪ್ರಚಲಿತವಾದ ಮಾತಿನಲ್ಲಿ ಏಕೆ ಎಂಬ ಪ್ರಶ್ನೆಗೆ ಉತ್ತರ ಹೇಳಲಾಗದಂತಹ ಸಂಪ್ರದಾಯಗಳನ್ನು ಪ್ರಶ್ನಿಸಬಾರದು ಎಂಬ ಧ್ವನಿ ಹೊರಡುತ್ತದೆಯಲ್ಲವೇ? ವೈಚಾರಿಕತೆಗೆ ಅಡ್ಡಿಯಾದಾಗ ಸತ್ಯ ಕಾಣದಾಗುತ್ತದೆ. ನಿಜ, ಮಾನವನಿಗಿರುವ ಇತಿಮಿತಿಗಳಲ್ಲಿ ಎಲ್ಲವನ್ನೂ ಒರೆಗೆ ಹಚ್ಚಲಾಗುವುದಿಲ್ಲ, ಇದು ಹೀಗೆಯೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಇದುವರೆವಿಗೆ ಹಿಂದಿನವರು ಹೇಳಿದ, ಒಪ್ಪಿದ ಸಂಗತಿಗಳನ್ನು ಅನುಭವದೊಂದಿಗೆ ಸೇರಿಸಿಕೊಂಡು ಆತ್ಮ ಒಪ್ಪಿದ ರೀತಿಯಲ್ಲಿ ನಡೆಯುವುದು ಸರಿಯಾದ ಮಾರ್ಗ. ಆತ್ಮ ಒಪ್ಪುವ ರೀತಿಯಲ್ಲಿ ನಡೆಯುವುದಕ್ಕೂ ಒಂದು ಮಾನದಂಡವಿರಲೇಬೇಕು, ಅದೇ ಸತ್ಯ. ಆತ್ಮ ಒಪ್ಪುವ ರೀತಿ ಯಾವುದೆಂದು ತಿಳಿಯಲು ಮಾಡುವ ಪ್ರಯತ್ನವೇ ಸತ್ಯಾನ್ವೇಷಣೆ. ಶ್ರವಣ, ಮನನ, ಮಥನಗಳೊಂದಿಗೆ ಅನುಭವ ಸೇರಿದರೆ ಸತ್ಯಕ್ಕೆ ಹತ್ತಿರವಾದ ಸಂಗತಿ ಗೋಚರವಾದೀತು.
'ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ' ಎಂಬ ಮಾತು ಸತ್ಯ ಹೇಳುವುದು ಮತ್ತು ಕೇಳುವುದು ಎಷ್ಟು ಕಷ್ಟ ಎಂಬುದನ್ನು ತೋರಿಸುತ್ತದೆ. ನಿಜ, ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವೇ ಸರಿ. ಒಬ್ಬ ಕಳ್ಳ ಅಕಾಸ್ಮಾತ್ತಾಗಿ ಒಬ್ಬ ಪಂಡಿತರ ಉಪನ್ಯಾಸ ಕೇಳಿ ಪ್ರಭಾವಿತನಾದನಂತೆ. ಉಪನ್ಯಾಸದ ನಂತರ ಪಂಡಿತರಲ್ಲಿ ತನ್ನ ಕಷ್ಟ ಹೇಳಿಕೊಂಡ, "ಹೇಳಿ ಕೇಳಿ ನಾನೊಬ್ಬ ಕಳ್ಳ. ನಾನು ಸತ್ಯ ಹೇಳುವುದು ಹೇಗೆ?" ಪಂಡಿತರು ಹೇಳಿದರು, "ಏನೂ ಯೋಚನೆ ಮಾಡಬೇಡ, ಸತ್ಯವನ್ನೇ ಹೇಳು". ಒಂದು ದಿನ ಆತ ರಾತ್ರಿ ಹನ್ನೊಂದು ಘಂಟೆಯ ವೇಳೆಗೆ ಕಳ್ಳತನಕ್ಕೆಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿ ಬೀಟ್ ಪೋಲಿಸಿನವನು 'ಎಲ್ಲಿಗೆ ಹೋಗುತ್ತಿದ್ದೀಯ?' ಎಂದು ವಿಚಾರಿಸಿದ. ಕಳ್ಳ ಒಂದು ನಿಮಿಷ ಯೋಚಿಸಿ ಸತ್ಯ ಹೇಳಿಬಿಟ್ಟ, "ಕಳ್ಳತನ ಮಾಡಕ್ಕೆ ಹೋಗ್ತಾ ಇದೀನಿ". ಪೋಲಿಸಪ್ಪ, "ತಮಾಷೆ ಮಾಡಬೇಡ, ಹೋಗು ಲೇಟಾಗಿದೆ, ಬೇಗ ಮನೆ ಸೇರಿಕೋ" ಎಂದು ನಗುತ್ತಾ ಕಳಿಸಿಕೊಟ್ಟ. ಇದು ತಮಾಷೆಗಾಗಿ ಹೇಳಿದ ಪ್ರಸಂಗವಷ್ಟೇ ಹೊರತು, ಇಂತಹ ಸತ್ಯ ಚಲಾವಣೆಯಾಗಲಾರದು. ಖ್ಯಾತ ಪತ್ರಕರ್ತ ಹಂಟರ್ ಮಾತು ಇಲ್ಲಿ ಪ್ರಸ್ತುತವೆನಿಸುತ್ತದೆ: "ಕಳೆದ ಹತ್ತು ವರ್ಷಗಳಲ್ಲಿ ನನಗೆ ಗೊತ್ತಿರುವ ಎಲ್ಲಾ ಸತ್ಯಗಳ ಕುರಿತು ನಾನೇನಾದರೂ ಬರೆದಿದ್ದರೆ, ಸುಮಾರು ೬೦೦ ಜನರು, ನಾನೂ ಸೇರಿದಂತೆ, ಜೈಲಿನಲ್ಲಿ ಕೊಳೆಯಬೇಕಾಗುತ್ತಿತ್ತು. ವೃತ್ತಿಪರ ಪತ್ರಿಕೋದ್ಯಮದಲ್ಲಿ ಪರಿಪೂರ್ಣ ಸತ್ಯ ಅತ್ಯಂತ ವಿರಳ ಮತ್ತು ಅಪಾಯಕಾರಿ ವಸ್ತು!"
'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್' (ಸತ್ಯವನ್ನೇ ಹೇಳು, ಪ್ರಿಯವಾದದ್ದನ್ನು ಹೇಳು, ಅಪ್ರಿಯವಾದ ಸತ್ಯ ಹೇಳಬೇಡ) ಎಂಬ ಮಾತನ್ನು ತಿಳಿದವರು ಹೇಳುತ್ತಾರೆ. ಇದು ಸಮಯ, ಸಂದರ್ಭಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಬೇಕಾದ ಸತ್ಯ. ಇಲ್ಲಿ ಸಾಮಾನ್ಯ ಹಿತ ಪ್ರಧಾನವಾಗುತ್ತದೆ. ಇದಕ್ಕೆ ಉದಾಹರಣೆ ಕೊಡಬೇಕೆಂದರೆ, ಒಬ್ಬ ಪ್ರಾಣಭಯದಿಂದ ನಿಮ್ಮ ಮನೆಯಲ್ಲಿ ರಕ್ಷಣೆ ಪಡೆದಿದ್ದಾನೆಂದು ಇಟ್ಟುಕೊಳ್ಳಿ. ಅವನನ್ನು ಕೊಲೆ ಮಾಡುವ ಉದ್ದೇಶ ಹೊಂದಿದ ವ್ಯಕ್ತಿ ನಿಮ್ಮನ್ನು ಆ ವ್ಯಕ್ತಿ ಮನೆಯಲ್ಲಿದ್ದಾನೆಯೇ ಎಂದು ಕೇಳಿದರೆ, ಸತ್ಯವನ್ನು ಮಾತ್ರ ಹೇಳುತ್ತೇನೆಂಬ ಹೆಮ್ಮೆಯಿಂದ ನೀವು 'ಹೌದು' ಎಂದು ಉತ್ತರಿಸಿದರೆ ಒಬ್ಬ ವ್ಯಕ್ತಿಯ ಹತ್ಯೆಗೆ ಕಾರಣರಾಗುತ್ತೀರಿ. ಇದು ಸತ್ಯದ ಇನ್ನೊಂದು ಮುಖ!
ಸತ್ಯ ಹೇಳಲು ಧೈರ್ಯವಿರಬೇಕು. ಅದು ತಿಳಿದಷ್ಟು ಸರಳವಲ್ಲ. ಮೌಲ್ಯಗಳು ಇರುವಲ್ಲಿ ಸತ್ಯಕ್ಕೆ ಬೆಲೆ ಇರುತ್ತದೆ. ಅದು ಇಲ್ಲದಲ್ಲಿ ಸತ್ಯ ಅನಾಥವಾಗುತ್ತದೆ. ಹಾಗೆಂದು ಸತ್ಯ ಹೇಳುವುದು ತಪ್ಪೇ ಎಂದರೆ ತಪ್ಪಲ್ಲ. ಮೌಲ್ಯಯುತ ಸಮಾಜವನ್ನು ಬಯಸುವುದಿಲ್ಲವೆನ್ನುವುದಾದರೆ ಸತ್ಯವನ್ನು ದೂರಕ್ಕೆ ಇಟ್ಟರಾಯಿತು. ಆದರೆ, ವೈಯಕ್ತಿಕವಾಗಿ ಪ್ರತಿಯೊಬ್ಬರೂ ಸಮಾಜ ಒಳ್ಳೆಯ ರೀತಿಯಲ್ಲಿ ಇರಬೇಕು, ಅನ್ಯಾಯ, ಮೋಸ ಆಗಬಾರದು ಎಂದು ಬಯಸುತ್ತಾರೆ. ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ದೇಶ ಇಂತಹ ಸ್ಥಿತಿಗೆ ಬಂದಿದೆ ಎಂದು ದೂರುವುದು ಸಾಮಾನ್ಯ. "ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ?" ಎಂದರೆ ಸಿಗಬಹುದಾದ ಉತ್ತರವೆಂದರೆ, "ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ? ಅವರದಾದರೋ ದೊಡ್ಡ ತಪ್ಪುಗಳು. ನಮ್ಮದಾದರೋ ಪರಿಸ್ಥಿತಿಯ ಒತ್ತಡದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು" ಎಂಬುದೇ! ಈ ಸಣ್ಣ ಪುಟ್ಟ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯವಾಗುತ್ತವೆ, ಇವೇ ಮುಂದೆ ಸಾಮಾಜಿಕ ನ್ಯಾಯ, ಮೌಲ್ಯ, ಸತ್ಯ, ಮುಂತಾದ ಬಗ್ಗೆ ಮಾತನಾಡದಂತೆ ಕಟ್ಟಿಹಾಕುತ್ತವೆ. ಒಂದಂತೂ ಸತ್ಯ, ಇತಿಹಾಸ ನಿರ್ಮಾಣ ಮಾಡುವವರು ಬಹುಸಂಖ್ಯಾತರಾದ ಸ್ವಾರ್ಥಿಗಳಲ್ಲ, ಅಲ್ಪಸಂಖ್ಯಾತರಾದ, ಸತ್ಯಕ್ಕೆ ಬೆಲೆ ಕೊಡುವ ಅಲ್ಪ ಸಂಖ್ಯಾತರೇ ಎಂಬುದನ್ನು ಮರೆಯಬಾರದು. ಈ ಜಗತ್ತಿನಲ್ಲಿ ಕೋಟ್ಯಾಂತರ ಜನರಿದ್ದಾರೆ, ಎಲ್ಲರನ್ನೂ ನಾವು ನೆನೆಸಿಕೊಳ್ಳುತ್ತೇವೆಯೇ? ಹೊರಗಿನವರು ಬೇಡ, ನಮ್ಮ ಕುಟುಂಬದ ೩-೪ ತಲೆಮಾರುಗಳ ಹಿಂದಿನವರ ಹೆಸರುಗಳೇ ನಮಗೆ ನೆನಪಿರುವುದಿಲ್ಲ. ಆದರೆ. ರಾಮ, ಕೃಷ್ಣ, ಹರಿಶ್ಚಂದ್ರ, ವಿವೇಕಾನಂದ ಮುಂತಾದವರು ಸತ್ತು ಎಷ್ಟೋ ವರ್ಷಗಳಾದರೂ ಇಂದೂ ಜನಮಾನಸದಲ್ಲಿ ಜೀವಂತವಿದ್ದಾರೆ. ಏಕೆ? ಏಕೆಂದರೆ, ಅವರುಗಳು ಸತ್ಯಕ್ಕೆ ಬೆಲೆ ಕೊಟ್ಟರು, ಇತರರಿಗಾಗಿ ಬಾಳಿದರು. ಇತರರಿಗಾಗಿ ಬಾಳುವವರು ಮಹಾಪುರುಷರೆನಿಸುತ್ತಾರೆ. ಇದು ಸತ್ಯಕ್ಕೆ, ಸತ್ಯವಿಚಾರಕ್ಕೆ ಇರುವ ಮಹತ್ವ ತೋರಿಸುತ್ತದೆಯಲ್ಲವೇ? ಕೇವಲ ತಿಂದು, ಕುಡಿದು ಒಂದು ದಿನ ಕಂತೆ ಒಗೆದು, ಇಂತಹವನು ಒಬ್ಬನಿದ್ದ ಎಂದು ಯಾರೂ ನೆನೆಸಿಕೊಳ್ಳದಂತೆ ಕಣ್ಮರೆಯಾಗಬೇಕೇ ಅಥವ ಬದುಕಿದ್ದಾಗ ಏನನ್ನಾದರೂ ಸಾಧಿಸಿ ಹೆಜ್ಜೆ ಗುರುತು ಬಿಟ್ಟುಹೋಗಬೇಕೇ ಎಂಬುದು ನಮಗೇ ಬಿಟ್ಟಿದ್ದು.
ಸತ್ಯ ಹೇಳುವುದಕ್ಕೆ ಆತ್ಮವಿಶ್ವಾಸ ಇದ್ದರೆ ಸಾಕು. ಆದರೆ ಸುಳ್ಳು ಹೇಳಲು ಮಹಾನ್ ನೆನಪಿನ ಶಕ್ತಿಯ ಜೊತೆಗೆ ಅದನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆಯೂ ಇರಬೇಕು. ಇಲ್ಲದಿದ್ದರೆ ಹೇಳಿದ ಸುಳ್ಳನ್ನು ಅರಗಿಸಿಕೊಳ್ಳಲು ಆಗದೇ ಹೋಗಬಹುದು. ಹೃದಯ, ಆತ್ಮಗಳು ನಮ್ಮ ಪ್ರತಿಯೊಂದೂ ನಾವು ಮಾಡುವ ಕೆಲಸಗಳ ಹಿಂದೆ ಇರದಿದ್ದರೆ, ನಮ್ಮ ಬಾಯಿಯಿಂದ ಹೊರಡುವ ಮಾತುಗಳು ಖಾಲಿ ಖಾಲಿಯಾಗಿರುತ್ತವೆ ಮತ್ತು ಕಾರ್ಯಗಳೂ ಅರ್ಥಹೀನವಾಗಿರುತ್ತವೆ. ಸತ್ಯಕ್ಕೆ ಗೌರವ, ಬೆಲೆ ಕೊಡದವರನ್ನು ಯಾರೂ ನಂಬಲಾರರು. ಆದರೆ ಆತ್ಮ, ಹೃದಯಗಳು ಸಾಥ್ ನೀಡುವ ಕೆಲಸಗಳು ಸತ್ಯ, ಸತ್ವ ಮತ್ತು ಆತ್ಮವಿಶ್ವಾಸದಿಂದ ಕೂಡಿರುತ್ತವೆ ಮತ್ತು ಇದರ ಪ್ರತಿಫಲವೇ ದೊರಕುವ ಸಂತೋಷ! ನಿರಾಯುಧವಾದ ಸತ್ಯ ಮತ್ತು ಷರತ್ತಿಲ್ಲದ ಪ್ರೀತಿಗಳ ಮಾತುಗಳದೇ ವಾಸ್ತವದಲ್ಲಿ ಕೊನೆಯ ಮಾತಾಗಿರುತ್ತದೆ. ಸತ್ಯಕ್ಕೆ ತಾತ್ಕಾಲಿಕವಾದ ಸೋಲುಂಟಾದರೂ, ಗೆಲುವಿನಿಂದ ಬೀಗಬಹುದಾದ ಸುಳ್ಳಿಗಿಂತಲೂ ಅದು ಹೆಚ್ಚು ಶಕ್ತಿಶಾಲಿಯಾದುದು. ವಿವೇಕಾನಂದರು ಹೇಳಿದಂತೆ, 'ಇತರರ ಅಭಿಪ್ರಾಯಗಳು, ಸಿದ್ಧಾಂತಗಳು ನಮ್ಮ ಒಳಗಿನ ಧ್ವನಿಯನ್ನು ಅದುಮಲು ಅವಕಾಶ ಕೊಡದಿರೋಣ'. ನಮ್ಮ ಅಂತರಂಗದ ದ್ವನಿಯನ್ನು ಆಲಿಸಿ, ಅದು ಹೇಳಿದಂತೆ ಕೇಳಿದರೆ, ಅದು ಕರೆದೊಯ್ಯುವುದು ಸತ್ಯಪಥದಲ್ಲೇ ಎಂಬ ಅರಿವು ಜಾಗೃತಗೊಳ್ಳಬೇಕಿದೆ. ಆಗ ಮಾತ್ರ 'ಸತ್ಯಮೇವ ಜಯತೇ' ಎಂಬ ಘೋಷವಾಕ್ಯ ಸಾರ್ಥಕ್ಯ ಕಾಣುತ್ತದೆ, 'ಸತ್ಯಮ್ ವದ ಧರ್ಮಮ್ ಚರ' (ಸತ್ಯವನ್ನೇ ಹೇಳು, ಧರ್ಮದಲ್ಲಿ ನಡೆ) ಎಂಬ ಸನಾತನವಾಣಿ ಅರ್ಥ ಕಂಡುಕೊಳ್ಳುತ್ತದೆ.
ಕೊನೆಯದಾಗಿ ಒಂದು ಮಾತು:
ಸತ್ಯವನ್ನು ಬಗ್ಗಿಸಬಹುದು, ತಿರುಚಬಹುದು, ದುರುಪಯೋಗಪಡಿಸಿಕೊಳ್ಳಬಹುದು. ಆದರೆ ಸತ್ಯವನ್ನು ದೇವರೂ ಬದಲಾಯಿಸಲಾರ!
-ಕ.ವೆಂ. ನಾಗರಾಜ್.
makara
ಪ್ರತ್ಯುತ್ತರಅಳಿಸಿಸತ್ಯದ ಕುರಿತಾದ ಒಳ್ಳೆಯ ವಿಶ್ಲೇಷಣೆ ಕವಿಗಳೆ. ಸತ್ಯವು ದೇಶ ಕಾಲಗಳಿಗೆ ಒಳಪಡುವುದರಿಂದ ಅನೇಕ ಬಾರಿ ಸತ್ಯವು ಬದಲಾಗುತ್ತಲೇ ಇರುತ್ತದೆ. ಹಲವಾರು ಬಾರಿ ತೋರಿಕೆಯ ಸತ್ಯವು ವಾಸ್ತವ ಸತ್ಯಕ್ಕಿಂತ ಭಿನ್ನವಾಗಿರುತ್ತದೆ. ಉದಾಹರಣೆಗೆ ಬೆಳಿಗ್ಗೆ ನೋಡಿದಾಗ ಸೂರ್ಯ ಪೂರ್ವದಲ್ಲಿ ಇರುತ್ತಾನೆ ಮತ್ತು ಸಾಯಂಕಾಲ ನೋಡಿದಾಗ ಅವನು ಪಶ್ಚಿಮದಲ್ಲಿ ಇರುತ್ತಾನೆ. ಹೀಗೆ ಸತ್ಯವು ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ಅದೇ ವಿಧವಾಗಿ ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಮುಳುಗುತ್ತಾನೆನ್ನುವುದು ಸರಳ ತೋರಿಕೆಯ ಸತ್ಯ ಆದರೆ ವಾಸ್ತವವಾಗಿ ಭೂಮಿಯು ತನ್ನ ಸುತ್ತಲೂ ತಾನೇ ಸುತ್ತುವುದರಿಂದ ಹಗಲು ಇರುಳುಗಳಾಗುತ್ತವೆ. ಹಾಗಾಗಿ ಅಂತಿಮ ಸತ್ಯವು ತೋರಿಕೆಯ ಸತ್ಯಕ್ಕಿಂತ ಭಿನ್ನವಾಗಿರುತ್ತದೆ ಮತ್ತುದು ಬದಲಾಗದು ಇದನ್ನೇ ನಾವು ಅನ್ವೇಷಿಸಬೇಕಾಗಿರುವುದು.
ಕೊನೆ ಹನಿ: ಸತ್ಯ ಒಂದು ಸುತ್ತು ಮುಗಿಯುವಷ್ಟರಲ್ಲಿಯೇ ಹೊರಬೀಳುವುದಿಲ್ಲ, ಅದು ಹೊರಬರಬೇಕಾದರೆ ಹಲವಾರು ಸುತ್ತುಗಳಾಗಬೇಕು :)
kavinagaraj
ಸತ್ಯ, ಸತ್ಯ! ಧನ್ಯವಾದ ಶ್ರೀಧರರೇ. ಸತ್ಯ - ಇದು ಅತಿ ಸರಳ, ಅತಿ ಸಂಕೀರ್ಣ!
nageshamysore on December 16, 2013 - 7:58pm
ಕವಿಗಳೆ, ಸಿಂಪಲ್ಲಾಗಿ 'ಸತ್ಯಮೇವ ಜಯತೆ ಎಂದುಬಿಡೋಣವೆ?' :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
kavinagaraj
ಧನ್ಯವಾದ, ನಾಗೇಶರೇ. ಕಷ್ಟಪಟ್ಟಾದರೂ ಸತ್ಯ ಗೆಲ್ಲಲೇಬೇಕು!! :)
sathishnasa
ಸತ್ಯ ಹೇಳುವುದು, ಸತ್ಯದ ಹಾದಿಯಲ್ಲಿ ನಡೆಯುವುದು ಕಷ್ಟವೆನಸಿದರೂ ಪಾಲಿಸಿದರೆ ಸಾಧನೆಯ ಹಾದಿಯಲ್ಲಿ ಮೇಲೇರಲು ಸುಲಭ ಸಾಧನ. ಸುಳ್ಳು ಎನ್ನುವುದು ಕಣ್ಣಿಗೆ ಕಾಣದ " ಸುಳಿ " ಯಂತೆ ಒಮ್ಮೆ ಸಿಲುಕಿದರೆ ಹೊರ ಬರುವುದು ಬಹು ಕಷ್ಟ . ಒಳ್ಳೆಯ ಲೇಖನ ನಾಗರಾಜ್ ರವರೆ ....ಸತೀಶ್
kavinagaraj
ನಿಜ ಸತೀಶರೇ. ಸತ್ಯದ ಹಾದಿ ಸರಳವಂತೂ ಅಲ್ಲ! ಧನ್ಯವಾದಗಳು.
partha1059
ನಿಜ ನಾಗರಾಜರೆ
ಸತ್ಯದ ಸ್ವರೂಪ ಕಾಲಕಾಲಕ್ಕೆ ಬದಲಾಗುತ್ತದೆ
ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತೆ
ಧರ್ಮದಿಂದ ಧರ್ಮಕ್ಕೆ ಬದಲಾಗುತ್ತೆ
ದೇಶದಿಂದ ದೇಶಕ್ಕೆ ಬದಲಾಗುತ್ತೆ
ಹಾಗಿರುವಾಗ ನಾನು ಹೇಳುವದೆಲ್ಲ ಸತ್ಯ ಎನ್ನುವ ಮಾತು
ನಾನು ನಂಬಿರುವುದೇ ಅಂತಿಮ ಸತ್ಯ ಎನ್ನುವ ಭಾವ
ಅವರವರಿಗಷ್ಟೆ ಸತ್ಯ!
kavinagaraj
ಧನ್ಯವಾದ ಪಾರ್ಥಸಾರಥಿಯವರೇ. ಸತ್ಯ ಬದಲಾಗಲಾರದು, ಅದನ್ನು ಅರ್ಥ ಮಾಡಿಕೊಳ್ಳುವ, ಅರ್ಥೈಸಿಕೊಳ್ಳುವ ರೀತಿ ಬದಲಾಗಬಹುದು. ಅವರವರ ಸತ್ಯ ಅವರಿಗೇ ಸತ್ಯ ಎಂಬುದೂ ಸರಿ!
H A Patil
ಅಳಿಸಿಕವಿ ನಾಗರಾಜ ರವರಿಗೆ ವಂದನೆಗಳು
' ಸತ್ಯದ ಸುತ್ತ ಒಂದು ಸತ್ಯ ' ಸತ್ಯದ ದಾರಿ ಕಠಿಣ ವೆಂಬುದನ್ನು ನಿರೂಪಿಸುವುದರ ಜೊತೆಗೆ ಅದು ಕೊಡುವ ಆತ್ಮ ತೃಪ್ತಿ ಮತ್ತು ಸಂತಸ ಕುರಿತು ಹೃದಯಂಗಮವಾಗಿ ನಿರೂಪಿಸಿದ್ದೀರಿ, ಗಾಂಧೀಜಿ ಮಹಾತ್ಮಾ ಆಗಲು ಆತ ಹಿಡಿದ ಸತ್ಯದ ದಾರಿ ಜೀವನದುದ್ದಕ್ಕೂ ಆ ಕುರಿತು ಮಾಡಿದ ಪ್ರಯೋಗಶೀಲತೆ ಕಾರಣ, ಯೋಚಿಸುತ್ತ ಹೋದಂತೆ ಬಹಳ ಅರ್ಥಗಳನ್ನು ಹೊಳೆಯುವಂತೆ ಮಾಡುವ ಲೇಖನ,ಧನ್ಯವಾದಗಳು.
kavinagaraj
ಧನ್ಯವಾದಗಳು ಪಾಟೀಲರೇ. ಸತ್ಯ ಹೇಳಿದರೂ ಕಷ್ಟ, ಹೇಳದಿದ್ದರೂ ಕಷ್ಟ, ಇದೇ ಸತ್ಯ!!
gunashekara murthy
ಆತ್ಮೀಯ ಸ್ನೇಹಿತರಾದ ಕವಿ ನಾಗರಾಜ ರವರೇ, ನನಗೆ ಈ ಮಾತು ಬಹಳ ಹಿಡಿಸಿತು ಅದು ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಗೊಬೆಲ್ಸ್ ಸಿದ್ಧಾಂತ. ಆದರೆ, ಸುಳ್ಳನ್ನು ಸತ್ಯವೆಂದು ನಂಬಿಸಬಹುದಷ್ಟೆ ಹೊರತು, ಇದು ನಮ್ಮ ಪುರಾಣಗಳಿಗೆ ಹೆಚ್ಚು ಸಮಂಜಸವಾಗುತ್ತದೆ. ನೀವು ನನ್ನ ಮಾತು ಒಪ್ಪಲಾರಿರಿ ಅದು ಬೇರೆ ಮಾತು ಯರೇ ಆದರೂ ಈ ಸತ್ಯವನ್ನು ಒಪ್ಪಲೇಬೇಕು ನಿಮ್ಮ ಮಾತಿನಂತೆ ಹೇಳಬೇಕೆಂದರೇ, ನಿಜವಾದ ಸತ್ಯ ಸತ್ಯವಾಗಿಯೇ ಉಳಿದಿರುತ್ತದೆ ಎಂಬುದೇ ಸತ್ಯ!
ಸತ್ಯಸ್ಯ ವಚನಂ ಶ್ರೇಯಂ ಧನ್ಯವಾದಗಳು
kavinagaraj
ಧನ್ಯವಾದ, ಗುಣಶೇಖರ ಮೂರ್ತಿಯವರೇ. ವಿವೇಕಾನಂದರು ಹೇಳಿದಂತೆ ಸತ್ಯವನ್ನು ಸಾವಿರ ರೀತಿಯಲ್ಲಿ ಹೇಳಬಹುದು. ಇದೂ ಸತ್ಯ.
gunashekara murthy
ಆತ್ಮೀಯ ಸ್ನೇಹಿತರಾದ ಕವಿ ನಾಗರಾಜ ರವರೇ, ಇದನ್ನು ವಿವೇಕನಂದರು ಹೇಳಿದರೂ........ ತಪ್ಪೇ ಕಾರಣ, ಸುಳ್ಳನ್ನು ಮಾತ್ರವೇ ಸಾವಿರ ರೀತಿಯಲ್ಲಿ ಹೇಳಬಹುದೇ ಹೊರತು ಸತ್ಯವನ್ನು ಒಂದೇ ರೀತಿಯಲ್ಲಿ ಹೇಳಬೇಕಾಗಿರುತ್ತದೆ. ಉದಾಹರಣೆಗೆ ಒಂದು ಕೊಲೆಯೆ ಅಗಲೀ ಹತ್ತು ಗಂಟೆಗೆ ನಡೆದದ್ದು ಪೋಲಿಸರು ಒಬ್ಬ ಅಪರಾಧಿಯನ್ನು ವಿಚಾರಿಸುವಲ್ಲಿ ಒಂದೇ ಪ್ರಶ್ನೆಯನ್ನು ಬೇರೆ ಬೇರೆ ವಿಧದಲ್ಲಿ ಕೇಳುತ್ತಾರೆ. ಅವನು ಸುಳ್ಳು ಹೇಳುವುದರಿಂದ ಸಮಯಕ್ಕೆತಕ್ಕಂತೆ ಬದಲಾಯಿಸಿ ಹೇಳುತ್ತಾನೆ. ಅದೇ ಸತ್ಯವನ್ನು ಹೇಳುವಲ್ಲಿ ಒಂದೇ ಸತ್ಯವೇ ಅದರಲ್ಲಿ ಹತ್ತು ಗಂಟೆಯೆಂದೇ ಒಂದೇ ಉತ್ತರವಿರುತ್ತದೆ. ಹಾಗೆಯೇ ಕಂಡು ಹಿಡಿಯುತ್ತಾರೆ. ಸತ್ಯವು ಯಾವಾಗಲೂ ಒಂದೇ ಆಗಿರುತ್ತದೆ. ವಿವೇಕನಂದರು ತಪ್ಪು ಹೇಳಿಕೆ ಕೊಟ್ಟಿರುತ್ತಾರೆ.
kavinagaraj
ನಾನು ಚರ್ಚಿಸುವುದಿಲ್ಲ. ಸರಳ ಉದಾಹರಣೆ ಕೊಡುವೆ. ಆನೆ ದೊಡ್ಡ ಪ್ರಾಣಿ, - ಸತ್ಯ, ಆನೆಗೆ ಸೊಂಡಿಲಿದೆ - ಸತ್ಯ, ಆನೆ ಬಲಶಾಲಿ - ಸತ್ಯ, ಹೀಗೆ ಮುಂದುವರೆಸಬಹುದು. ಇವು ಎಲ್ಲವೂ ಸತ್ಯವೇ! ಸತ್ಯ ಅನ್ನುವುದು ನಮ್ಮ ವಿವೇಚನಾ ಶಕ್ತಿಗೆ ತಕ್ಕಂತೆ ಕಾಣುತ್ತದೆ. ವಿವೇಕಾನಂದರು ಹೇಳಿದ ವಿಚಾರವೂ ಈ ಹಿನ್ನೆಲೆಯಲ್ಲಿಯೇ. ವಿವೇಕಾನಂದರು ಹೇಳಿರುವುದು ಸರಿಯೋ, ತಪ್ಪೋ ಎಂದು ವಿಮರ್ಶಿಸುವಷ್ಟು ನಾನು ದೊಡ್ಡವನಲ್ಲ. ನಾನು ಹೇಳಿದ್ದನ್ನೆಲ್ಲಾ ಎಲ್ಲರೂ ಒಪ್ಪಲೇಬೇಕೆಂಬ ಹಟವೂ ನನಗಿಲ್ಲ. ಧನ್ಯವಾದ, ಗುಣಶೇಖರಮೂರ್ತಿಯವರೇ.
partha1059 on December 18, 2013 - 9:05am
ಸತ್ಯವು ಸತ್ಯವಾಗಿಯೆ ಉಳಿದಿರುತ್ತದೆ ಅನ್ನುವುದು ಸತ್ಯ....
ಆದರೆ ಪ್ರಶ್ನೆ ಸತ್ಯವನ್ನು ನಾವು ಹೇಗೆ ಎಷ್ಟು ಅರ್ಥಮಾಡಿಕೊಂಡಿದ್ದೇವೆ , ಸತ್ಯಕ್ಕೆ ಎಷ್ಟು ಹತ್ತಿರದಲ್ಲಿದ್ದೇವೆ ಅನ್ನುವುದು ನಮಗೆ ಗೊತ್ತಾಗುವುದು ಸಹ ಮುಖ್ಯ. ನಾವು ನಂಬಿರುವುದು ಮತ್ತು ಸತ್ಯ ಎರಡು ಒಂದೇನ ಎಂದು ನಮಗೆ ಗೊತ್ತಾಗುವುದೇ ಇಲ್ಲ
kavinagaraj
ಅಳಿಸಿನಿಜ, ಪಾರ್ಥಸಾರಥಿಯವರೇ. ಬೇರೆಯವರಿಂದ ಸತ್ಯ ಅರ್ಥವಾಗಲಾರದು, ಅದು ಅಂತರಂಗದ ನ್ಯಾಯಾಧೀಶ ನಿರ್ಧರಿಸುವಂತಹದು! ಇದೂ ಒಂದು ತರಹದ ಸತ್ಯ!
gunashekara murthy on December 21, 2013 - 10:11pm
ಅಳಿಸಿಪ್ರೀತಿಯ ಕವಿ ನಾಗರಾಜ್ ರವರೇ, ಮೊದಲೇ ಹೇಳಿದಂತೆ ಸತ್ಯವು ಬಹಳ ಕಹಿ ಅದನ್ನು ಅರಗಿಸಿಕೊಳ್ಳಲು ಕಷ್ಟವೇ ಸರಿ. ವಿವೇಕನಂದರಿರಲೀ ಯಾರೇ............ ಆಗಿರಲೀ ಯಾವುದನ್ನು ಒಪ್ಪಬೇಕು ಯೆಂಬುದೊಂದಿದೆ ನೋಡಿ. ಸತ್ಯವಾದಿಗಳಿಗೆ ಹಟವು ಹುಟ್ಟುಗುಣ ನಾವೇನೂ ಮಾಡಲಾಗದು.
ಯಾವುದನ್ನು ಒಪ್ಪಬೇಕು
ಅವರಿವರು ಹೇಳಿದ್ದಾರೆ ಎಂಬ ಕಾರಣಕ್ಕಾಗಿ ಯಾವುದನ್ನು ಒಪ್ಪಬೇಡ
ನಮ್ಮವಂಶ ಪರಂಪರಗತವಾಗಿ ಬಂದಿದ್ದೆಂಬುದಕ್ಕೆ ಒಪ್ಪಬೇಡ
ಇದೇ ನಿಜವಿರಬೇಕೆಂದು ಆತುರದ ತೀರ್ಮಾನಕ್ಕೆ ಜೋತುಬಿದ್ದು ಒಪ್ಪಬೇಡ
ನಮ್ಮ ಶಾಸ್ತ್ರ ವೇದ ಪುರಾಣ ಗ್ರಂಥದಲ್ಲಿ ಹೇಳಿದೆ ಎಂದೂ ಒಪ್ಪಬೇಡ
ನಮ್ಮ ಗುರುಗಳು ಆಚಾರ್ಯರೇ ಹೇಳಿದ್ದಾರೆಂದು ಆಕಾರಣಕ್ಕೆ ಒಪ್ಪಬೇಡ
ಆದರೆ, ಯಾವುದು ನಿನಗೆ ಮೌಲಿಕವಾದವೆಂದು ತೋರುತದೆಯೋ
ವೈಙ್ಞಾನಿಕವಾಗಿ ಪ್ರಮಾಣಿಸಲ್ಪಟ್ಟಿದೆ ಎಂದು ತೋರುತ್ತದೆಯೋ
ಅಂಥದನ್ನು ಮಾತ್ರ ಒಪ್ಪಿಕೋ
ರಾಜಕೀಯ ಹಿತಚಿಂತಕ
ಜಯಪ್ರಕಾಶ್ ನಾರಾಯಣ್
kavinagaraj on December 23, 2013 - 9:45am
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ನಿಜವರಿತು ನಡೆವ ಹಿರಿಯ ಮೂಢ ||
-ಇದು ಲೇಖನದಲ್ಲಿ ಉಲ್ಲೇಖಿಸಿದ ಕಗ್ಗ. ವಿವೇಚನೆ, ಅನಿಸಿಕೆ ನಿಮ್ಮದು. ನೀವು ಹಟವಾದಿಗಳಾದಂತೆ ನಿಮ್ಮ ಸ್ನೇಹಿತರುಗಳೂ ಆಗಿರಬಹುದು ಎಂಬುದು ನನ್ನ ಸತ್ಯದ ಅನಿಸಿಕೆ. ಧನ್ಯವಾದ, ಗುಣಶೇಖರಮೂರ್ತಿಯವರೇ. ನಿಮ್ಮದೂ ಸರಿಯಿರಬಹುದು. ಅದು ನಮಗೂ ಸರಿ ಅನ್ನಿಸಬೇಕಾದರೆ ನಮಗೂ ಒಪ್ಪಿಗೆಯಾಗಬೇಕು, ಅಷ್ಟೇ.
partha1059 on December 21, 2013 - 11:03pm
ಗುಣಶೇಖರರವರಿಗೆ ನಮಸ್ಕಾರ
ಬಹುಶಃ ಇಲ್ಲಿ ವ್ಯೆತ್ಯಾಸ ಬೇಧವಿದೆ ಅನ್ನಿಸುತ್ತೆ :-)
ಸ್ವಲ್ಪ ತಮಾಷಿಯಾಗಿ ಓದಿ... ನೀವು ಮೇಲೆ 'ಯಾವುದನ್ನು ಒಪ್ಪಬೇಕು " ಎಂದು ಬರೆದು ಕೆಳಗೆ ಯಾವುದ ಯಾವುದನ್ನೆಲ್ಲ ಒಪ್ಪಬೇಡ
ಎಂದು ತಿಳಿಸಿರುತ್ತೀರಿ :-)
...
ನಾನು ವಿರುದ್ದ ದಿಕ್ಕಿನಲ್ಲಿ ಬರುತ್ತೇನೆ
ಅವರಿವರು ಹೇಳಿದ್ದರನ್ನು ಸತ್ಯವಿರಬಹುದೆ ಎಂದು ಹುಡುಕುವೆ, ಇಲ್ಲದಿದ್ದರೆ ಮುಂದೆ ಹೋಗುವುದು
ಹಾಗೆ ವಂಶಪಾರಂಪರ್ಯವಾಗಿ ಪಾಲಿಸುತ್ತಿದ್ದೇವೆ ಎಂದರೆ ಅವರೆಲ್ಲ ದಡ್ಡರಲ್ಲ ಏನೊ ಸತ್ಯವಿರಬಹುದು ಎಂದುಕೊಳ್ಳುವೆ,
ಮೊದಲು ಇದೆ ನಿಜ ಇರಬಹುದೇ ಎಂದು ಯೋಚಿಸುವೆ, ನಂತರ ಸರಿಕಾಣದಿದ್ದರೆ ಮುಂದೆ
ಶಾಸ್ತ್ರ ವೇದಗಳಲ್ಲಿ ಇರುವುದು ಸತ್ಯವಿರಬಹುದೇ ಎಂದು ಹುಡುಕುವೆ,
ಗುರು ಆಚಾರ್ಯರು ದೊಡ್ಡವರು, ಅನುಭವಸ್ಥರು ಎಂದು ನಂಬುವೆ
(ಇಲ್ಲದಿದ್ದರೆ ನಮ್ಮನ್ನು ನಮಗೆ ಸತ್ಯ ಅನ್ನಿಸಿದ್ದನ್ನು ನಮ್ಮಗಿಂತ ಕಿರಿಯರು ಸಹ ಒಪ್ಪುವದಿಲ್ಲ)
ವೈಜ್ಞಾನಿಕವಾಗಿ ಸಹ ಇಂದು ಒಂದು ಸತ್ಯವನ್ನು ಪ್ರತಿಪಾದಿಸಿ ಕಾಲನಂತರದಲ್ಲಿ ಅದು ಸುಳ್ಳು ಎಂದು ಗೊತ್ತಾಗಿದೆ,
ವಿಜ್ಞಾನವು ಪೂರ್ಣ ಸತ್ಯದೆಡೆಗೆ ದಾರಿ ತೋರುವದಿಲ್ಲ>
ಕಡೆಗೆ ಜಯಪ್ರಕಾಶರು ಸಹ ಅವರಿಗೆ ಆ ಕ್ಷಣಕ್ಕೆ ಸತ್ಯ ಎಂದು ಕಂಡಿದ್ದನ್ನು ಹೇಳಿದ್ದಾರೆ, ಅವರು ಈದಿನ ಇದ್ದಿದ್ದರೆ
ಅದೇ ಸತ್ಯವನ್ನು ಪ್ರತಿಪಾದಿಸುತ್ತ ಇದ್ದರೋ ಇಲ್ಲವೋ ಯಾರಿಗೆ ಗೊತ್ತು, ಇಂದಿನ ಜನಾಂಗವನ್ನು ಕಂಡ ಅವರು ಬೇರೇನಾದದು ಹೇಳುವ ಸಾದ್ಯತೆ ಇತ್ತು.
ಹಾಗಾಗಿ ಸತ್ಯ ಎನ್ನುವುದು ನಮ್ಮ ಮನಸಿಕೆ ಈ ಕ್ಷಣಕ್ಕಷ್ಟೆ ಗೋಚರವಾಗುವ ಚಲನ ರೂಪ.
ಇಂದು ಸತ್ಯವಾಗಿರುವುದು ನಾಳೆ ಸತ್ಯವಿರಬೇಕೆಂದೇನು ಇಲ್ಲ.
ನಾಳಿನ ಸತ್ಯ ಬೇರೆಯೆ ಇರಬಹುದು.
ಹಾಗಾಗಿ ಸತ್ಯ ಎನ್ನುವುದು ಸದಾ ಕಾಲಕ್ಕು ಸತ್ಯ ಎನ್ನುವ ಮಾತು ಎಷ್ಟು ಸತ್ಯ ಎಂದು ನನಗೆ ತಿಳಿಯುತ್ತಿಲ್ಲ. :-)
ಕವಿ ನಾಗರಾಜರು ಸಹ ಇದಕ್ಕೆ ಏನು ಹೇಳುವರು ನೋಡೋಣ
kavinagaraj on December 23, 2013 - 9:53am
ನಮಸ್ತೆ ಪಾರ್ಥರೇ. ನಾವು ಅಂದುಕೊಂಡ ಸತ್ಯ ವಾಸ್ತವ ಸತ್ಯಕ್ಕಿಂತ ಭಿನ್ನವಾಗಿರಬಹುದು. ಶ್ರವಣ, ಮನನ, ಮಂಥನ, ಅನುಭವ, ಈ ಕುರಿತು ಜಿಜ್ಞಾಸೆ, ಸಾಧನೆ ಮಾಡಿರುವ, ಅಂದರೆ ನಮಗಿಂತ ಈ ವಿಚಾರದಲ್ಲಿ ಹೆಚ್ಚು ತಿಳಿದ ಗುರು,ಹಿರಿಯರ ಮಾರ್ಗದರ್ಶನಗಳು ನಮ್ಮನ್ನು ಸತ್ಯದ ಹತ್ತಿರಕ್ಕೆ ಕರೆದೊಯ್ದಾವು! ಪೂರ್ವಾಗ್ರಹಪೀಡಿತ/ಪೂರ್ವನಿಶ್ಚಿತ ಅಭಿಪ್ರಾಯಗಳು ಸತ್ಯಾನ್ವೇಷಣೆಗೆ ತೊಡಕಾಗುವುವು ಎಂದು ನನ್ನ ಅನಿಸಿಕೆ.
gunashekara murthy on December 23, 2013 - 9:52am
ನೆಚ್ಚಿನ ಸ್ನೇಹಿತರಾದ ಪಾರ್ಥರವರೇ, ನಿಜ ನೀವೇಳುವುದು ಹೇಗಿದೆ ಎಂದರೇ, ದೈವ ಮೂಲ ನದಿ ಮೂಲ ಗುರು ಮೂಲ ಹುಡುಕಬೇಡಿ ಎನ್ನುವ ಕಾಲದಂತಿದೆ. ಅಂದು ಹಾಗೇ ಹುಡುಕುವವರನ್ನು ಹೀಯಾಳಿಸುವವರನ್ನು ಕೊಂದೇ ಹಾಕಿಬಿಡುತ್ತಿದ್ದರು. ಇಲ್ಲಿ ಮಾತ್ರವಲ್ಲ ಪಾಶ್ಚಿಮಾತ್ಯ ದೇಶದಲ್ಲೂ, ಆದರೇ, ಇಂದು ಒಂದೊಂದು ಹೆಜ್ಜೆಯು ವೈಙ್ಞಾನಿಕವಾಗಿ ಹೆಜ್ಜೆ ಇಡುತ್ತಿದ್ದೇವೆ ಎಂಬುದ ಮರೆಯುವಂತಿಲ್ಲ.ಇಲ್ಲಿ ಎಲ್ಲವನ್ನು ಅರಿಯಲೇ ಬೇಕಿದೆ.ಸತ್ಯವನ್ನೇ ಹುಡುಕುವ ನಮ್ಮ ಅದಕ್ಕೆ ಈ ಬರಹಗಳು. ಧನ್ಯವಾದಗಳು
gunashekara murthy on December 23, 2013 - 9:54am
ನೆಚ್ಚಿನ ಸ್ನೇಹಿತರಾದ ಕವಿ ನಾಗರಾಜ್ ರವರೇ, ನಿಜ ನೀವೇಳುವುದು ಹೇಗಿದೆ ಎಂದರೇ, ದೈವ ಮೂಲ ನದಿ ಮೂಲ ಗುರು ಮೂಲ ಹುಡುಕಬೇಡಿ ಎನ್ನುವ ಕಾಲದಂತಿದೆ. ಅಂದು ಹಾಗೇ ಹುಡುಕುವವರನ್ನು ಹೀಯಾಳಿಸುವವರನ್ನು ಕೊಂದೇ ಹಾಕಿಬಿಡುತ್ತಿದ್ದರು. ಇಲ್ಲಿ ಮಾತ್ರವಲ್ಲ ಪಾಶ್ಚಿಮಾತ್ಯ ದೇಶದಲ್ಲೂ, ಆದರೇ, ಇಂದು ಒಂದೊಂದು ಹೆಜ್ಜೆಯು ವೈಙ್ಞಾನಿಕವಾಗಿ ಹೆಜ್ಜೆ ಇಡುತ್ತಿದ್ದೇವೆ ಎಂಬುದ ಮರೆಯುವಂತಿಲ್ಲ.ಇಲ್ಲಿ ಎಲ್ಲವನ್ನು ಅರಿಯಲೇ ಬೇಕಿದೆ.ಸತ್ಯವನ್ನೇ ಹುಡುಕುವ ನಮ್ಮ ಅದಕ್ಕೆ ಈ ಬರಹಗಳು. ಧನ್ಯವಾದಗಳು
swara kamath on December 20, 2013 - 6:13pm
ಕವಿ ನಾಗರಾಜರಿಗೆ ನಮಸ್ಕಾರ
'ಸತ್ಯದ ಸುತ್ತ ಒಂದು ಸುತ್ತು ' ಲೇಖನ ತುಂಬಾ ಮಾರ್ಮಿಕವಾದ ಉತ್ತಮ ಲೇಖನ.ಸತ್ಯದ ಕುರಿತು ಮನಸ್ಸಿನಲ್ಲಿ ತರ್ಕೈಸಿದಷ್ಟು ಹೊಸ ಸತ್ಯಗಳು ಗೋಚರಿಸುತ್ತವೆ. ನಮ್ಮ ಅನುಭವಗಳಿಂದ ಕಂಡುಕೊಂಡ ಸತ್ಯ ಮತ್ತು ಕೆಲವು ಖಟು ಸತ್ಯಗಳು ಯಾವತ್ತು ಶಾಶ್ಯತ ವಾಗಿರುತ್ತವೆ.
ವಂದನೆಗಳು........ರಮೇಶ ಕಾಮತ್
kavinagaraj on December 23, 2013 - 9:55am
ಸತ್ಯದ ವಿಚಾರವೇ ಹಾಗೆ. ಅದು ಜಿಜ್ಞಾಸೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ಧನ್ಯವಾದ, ರಮೇಶಕಾಮತರೇ.
hariharapurasridhar on December 23, 2013 - 10:40am
ಅಳಿಸಿಸತ್ಯವೂ ಚರ್ಚೆಗೆ ಒಳಗಾಗುತ್ತದೆಂದು ಪ್ರತಿಕ್ರಿಯೆಗಳಿಂದ ಸಾಬೀತಾಯ್ತು.
kavinagaraj on December 23, 2013 - 10:48am
:)))
ಪ್ರಿಯ ಗುಣಶೇಶರರೇ, ನಿಮ್ಮ ಪ್ರತಿಕ್ರಿಯೆಗೆ ಉತ್ತರ ನನ್ನ ಲೇಖನದಲ್ಲಿನ ಈ ಭಾಗದಲ್ಲೇ ಇದೆ: " 'ಋಷಿ ಮೂಲ, ನದಿ ಮೂಲಗಳನ್ನು ಹುಡುಕಬಾರದು' ಎಂಬ ಸವಕಲಾದರೂ, ಪ್ರಚಲಿತವಾದ ಮಾತಿನಲ್ಲಿ ಏಕೆ ಎಂಬ ಪ್ರಶ್ನೆಗೆ ಉತ್ತರ ಹೇಳಲಾಗದಂತಹ ಸಂಪ್ರದಾಯಗಳನ್ನು ಪ್ರಶ್ನಿಸಬಾರದು ಎಂಬ ಧ್ವನಿ ಹೊರಡುತ್ತದೆಯಲ್ಲವೇ? ವೈಚಾರಿಕತೆಗೆ ಅಡ್ಡಿಯಾದಾಗ ಸತ್ಯ ಕಾಣದಾಗುತ್ತದೆ. ನಿಜ, ಮಾನವನಿಗಿರುವ ಇತಿಮಿತಿಗಳಲ್ಲಿ ಎಲ್ಲವನ್ನೂ ಒರೆಗೆ ಹಚ್ಚಲಾಗುವುದಿಲ್ಲ, ಇದು ಹೀಗೆಯೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಇದುವರೆವಿಗೆ ಹಿಂದಿನವರು ಹೇಳಿದ, ಒಪ್ಪಿದ ಸಂಗತಿಗಳನ್ನು ಅನುಭವದೊಂದಿಗೆ ಸೇರಿಸಿಕೊಂಡು ಆತ್ಮ ಒಪ್ಪಿದ ರೀತಿಯಲ್ಲಿ ನಡೆಯುವುದು ಸರಿಯಾದ ಮಾರ್ಗ. ಆತ್ಮ ಒಪ್ಪುವ ರೀತಿಯಲ್ಲಿ ನಡೆಯುವುದಕ್ಕೂ ಒಂದು ಮಾನದಂಡವಿರಲೇಬೇಕು, ಅದೇ ಸತ್ಯ. ಆತ್ಮ ಒಪ್ಪುವ ರೀತಿ ಯಾವುದೆಂದು ತಿಳಿಯಲು ಮಾಡುವ ಪ್ರಯತ್ನವೇ ಸತ್ಯಾನ್ವೇಷಣೆ. ಶ್ರವಣ, ಮನನ, ಮಥನಗಳೊಂದಿಗೆ ಅನುಭವ ಸೇರಿದರೆ ಸತ್ಯಕ್ಕೆ ಹತ್ತಿರವಾದ ಸಂಗತಿ ಗೋಚರವಾದೀತು. " ಧನ್ಯವಾದ.
ಅಳಿಸಿgunashekara murthy on December 23, 2013 - 3:00pm
ಅಳಿಸಿನೆಚ್ಚಿನ ಸ್ನೇಹಿತರಾದ ಕವಿ ನಾಗರಾಜ್ ರವರೇ, ನಿಜ ನೀವೇಳುವುದು ಈ ಮಾತನ್ನು ಒಪ್ಪಲೆ ಬೇಕು ವೈಚಾರಿಕತೆ ಅಡ್ಡಿಯಾದಾಗ ಸತ್ಯ ಕಾಣದಾಗುತ್ತದೆ. ನಿಜ, ಮಾನವನಿಗಿರುವ ಇತಿಮಿತಿಗಳಲ್ಲಿ ಎಲ್ಲವನ್ನೂ ಒರೆಗೆ ಹಚ್ಚಲಾಗುವುದಿಲ್ಲ, ಇದು ಹೀಗೆಯೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಇದುವರೆವಿಗೆ ಹಿಂದಿನವರು ಹೇಳಿದ, ಒಪ್ಪಿದ ಸಂಗತಿಗಳನ್ನು ಅನುಭವದೊಂದಿಗೆ ಸೇರಿಸಿಕೊಂಡು ಆತ್ಮ ಒಪ್ಪಿದ ರೀತಿಯಲ್ಲಿ ನಡೆಯುವುದು ಸರಿಯಾದ ಮಾರ್ಗ. ಆತ್ಮ ಒಪ್ಪುವ ರೀತಿಯಲ್ಲಿ ನಡೆಯುವುದಕ್ಕೂ ಒಂದು ಮಾನದಂಡವಿರಲೇಬೇಕು, ಅದೇ ಸತ್ಯ. ಆತ್ಮ ಒಪ್ಪುವ ರೀತಿ ಯಾವುದೆಂದು ತಿಳಿಯಲು ಮಾಡುವ ಪ್ರಯತ್ನವೇ ಸತ್ಯಾನ್ವೇಷಣೆ. ಶ್ರವಣ, ಮನನ, ಮಥನಗಳೊಂದಿಗೆ ಅನುಭವ ಸೇರಿದರೆ ಸತ್ಯಕ್ಕೆ ಹತ್ತಿರವಾದ ಸಂಗತಿ ಗೋಚರವಾದೀತು. ಇದನ್ನುಈ ಮಾತನ್ನು ಒಪ್ಪುತ್ತೇನೆ.
ನಿಮಗೂ ನನ್ನ ಧನ್ಯವಾದಗಳು