ಮೂವರು ಸ್ನೇಹಿತರು -ಮೂಢ, ಮಂಕ, ಮುಠ್ಠಾಳ- ಒಮ್ಮೆ ಒಟ್ಟಿಗೆ ಬಾಡಿಗೆ ಟ್ಯಾಕ್ಸಿ ಮಾಡಿಕೊಂಡು ಮಂಕನ ನೇತೃತ್ವದಲ್ಲಿ ಪ್ರವಾಸಕ್ಕೆ ಹೊರಟರು. ಮುಠ್ಠಾಳನಿಗೆ ದಾರಿಯಲ್ಲಿ ಬಾಯಾರಿಕೆಯಾಯಿತು. ಮಂಕ ಎಳನೀರು ಮಾರುತ್ತಿದ್ದ ಸ್ಥಳದಲ್ಲಿ ಟ್ಯಾಕ್ಸಿ ನಿಲ್ಲಿಸಿದ. ಮುಠ್ಠಾಳ ಟ್ಯಾಕ್ಸಿಯಲ್ಲೇ ಕುಳಿತಿದ್ದ. ಎಳನೀರು ಕೊಳ್ಳಲು ಮಂಕ ಇಳಿದಾಗ ಮೂಢನೂ ಅವನೊಂದಿಗೆ ಹೋದ. ನಾಲ್ಕು ಎಳನೀರು ಕೆತ್ತಲು ಹೇಳಿದ ಮಂಕ. ಕೆತ್ತಿದ ಮೊದಲ ಎಳನೀರನ್ನು ಮಂಕ ತೆಗೆದುಕೊಂಡು ಟ್ಯಾಕ್ಸಿಯಲ್ಲಿ ಕುಳಿತಿದ್ದ ಮುಠ್ಠಾಳನಿಗೆ ಕೊಟ್ಟು ಬಂದ. ಎರಡನೆಯ ಎಳನೀರನ್ನು ಟ್ಯಾಕ್ಸಿ ಚಾಲಕನಿಗೆ ಕೊಟ್ಟ. ಮೂರನೆಯ ಎಳನೀರು ಕೆತ್ತಿದಾಗ ತನಗೆ ಕೊಡುತ್ತಾನೆಂದು ಮೂಢ ತೆಗೆದುಕೊಳ್ಳಲು ಕೈ ಮುಂದು ಮಾಡುತ್ತಿದ್ದಾಗ ಮಂಕ ಆ ಎಳನೀರನ್ನು ಅವನಿಗೆ ಕೊಡದೆ ತಾನೇ ಗಟಗಟ ಕುಡಿದ. ವಯಸ್ಸಿನಲ್ಲಿ ಹಿರಿಯನಾದ ಮೂಢನಿಗೆ ನಾಚಿಕೆ ಮತ್ತು ಕಸಿವಿಸಿಯಾಯಿತು. ಎಳನೀರು ಕುಡಿಯಲು ಮನಸ್ಸಾಗಲಿಲ್ಲ. ಅಷ್ಟರಲ್ಲಿ ನಾಲ್ಕನೆಯ ಎಳನೀರನ್ನು ಕೆತ್ತಿದ್ದ ಮಾರುವವನು ಅದನ್ನು ಮೂಢನ ಮುಂದೆ ಹಿಡಿದ. ಕುಡಿಯಲೂ ಆಗದೆ ಬಿಡಲೂ ಆಗದೆ ಮನಸ್ಸಿಲ್ಲದ ಮನಸ್ಸಿನಿಂದ ಮೂಢ ಕುಡಿದ ಎಳನೀರು ಕಹಿಯಾಗಿತ್ತು.
(ಚಿತ್ರ ಕೃಪೆ: ಅಂತರ್ಜಾಲ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ