ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು |
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ ||
ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು
ಚಿರಂಜೀವ ನಿತ್ಯ ಶಾಶ್ವತವು ಮೂಢ ||
ಹಿಂದಿನ ಲೇಖನದಲ್ಲಿ ಜೀವಾತ್ಮದ ಸ್ವರೂಪದ ಕುರಿತ ಹಲವಾರು ವಾದಗಳ ಬಗ್ಗೆ ಚರ್ಚಿಸಿದೆವು. ತರ್ಕದ ಎದುರಿಗೆ ಜೀವಾತ್ಮ ಅನ್ನುವುದು ದೇವರ ಹೊಸ ಸೃಷ್ಟಿ, ಶೂನ್ಯದಿಂದ ಆದ ಸೃಷ್ಟಿ, ಪ್ರಕೃತಿಯ ಕೊಡುಗೆ, ಪರಮಾತ್ಮನ ಅಂಶ, ಶರೀರದ ಹುಟ್ಟಿನೊಂದಿಗೆ ಉದಯಿಸುವಂತಹದು, ಇತ್ಯಾದಿ ವಾದಗಳು ನಿಲ್ಲುವುದಿಲ್ಲವೆಂದು ಕಂಡುಕೊಂಡೆವು. ಇದಲ್ಲ, ಇದಲ್ಲ ಎಂದು ಒಂದೊಂದಾಗಿ ಹಲವು ವಾದಗಳನ್ನು ಒರೆಗೆ ಹಚ್ಚಿ ನೋಡಿ ತಿಳಿದ ನಂತರದಲ್ಲಿ ಉಳಿಯುವುದು ಒಂದೇ ವಾದ, ಅದೆಂದರೆ ಈ ಜೀವಾತ್ಮ ಅನ್ನುವುದು ಪರಮಾತ್ಮ ತತ್ತ್ವದಂತೆ ಅನಾದಿಯಾದುದು ಮತ್ತು ಅನಂತವಾದುದು ಎಂಬ ವಾದ. ಇದಕ್ಕೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಪುಷ್ಟಿ ನೀಡುವುದು ವಿಶೇಷವಾಗಿದೆ.
ಜೀವಾತ್ಮ ಅಥವ ಪ್ರಾಣಚೈತನ್ಯ ಅನಾದಿ ಮತ್ತು ಅನಂತವಾದುದು ಎಂಬ ವಾದಕ್ಕೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಹೇಗೆ ಪೂರಕವಾಗಿವೆ ಎಂಬುದನ್ನು ನೋಡೋಣ. ಈ ಲೋಕದಲ್ಲಿ ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ. ಕೆಲವರು ಹುಟ್ಟುತ್ತಲೇ ಅಂಗವಿಕಲರಾಗಿರುತ್ತಾರೆ, ಕೆಲವರು ರೋಗಿಷ್ಟರಾಗಿರುತ್ತಾರೆ. ಕೆಲವರು ದಡ್ಡರಾಗಿರುತ್ತಾರೆ, ಕೆಲವರು ಬುದ್ಧಿವಂತರಾಗಿರುತ್ತಾರೆ, ಕೆಲವರು ಸುಂದರರಾಗಿದ್ದರೆ, ಕೆಲವರು ಕುರೂಪಿಗಳಾಗಿರುತ್ತಾರೆ. ಏಕೆ? ನಾವು ಹುಟ್ಟಿದ್ದೇವೆ, ಇದ್ದೇವೆ ಎಂಬ ಸತ್ಯ ನಮಗೆ ಅರ್ಥವಾಗುತ್ತದೆ. ಆದರೆ ನಮ್ಮ ತಂದೆ-ತಾಯಿಗಳು ಇಂಥವರೇ ಆಗಿರಬೇಕು ಎಂಬ ಆಯ್ಕೆ ನಮ್ಮ ಕೈಯಲ್ಲಿದೆಯೇ? ನಾವು ಹೀಗೆಯೇ ಹುಟ್ಟಬೇಕು, ಇಂತಹ ಜಾತಿಯಲ್ಲೇ ಹುಟ್ಟಬೇಕು ಎಂದು ಬಯಸಲು ಸಾಧ್ಯವಿದೆಯೇ? ಇಲ್ಲ. ಏಕೆ? ನಮ್ಮ ಯಾವುದೇ ತಪ್ಪಿಲ್ಲದೆ ಹೀನ, ದೀನ ಸ್ಥಿತಿಯಲ್ಲಿ ಹುಟ್ಟುವುದಾದರೆ ಅದನ್ನು ದೇವರು ಮಾಡಿದ ಪಕ್ಷಪಾತ ಎನ್ನಲೇಬೇಕಾಗುತ್ತದೆ. ದೇವರು ಪಕ್ಷಪಾತ ಮಾಡುತ್ತಾನೆ ಎಂದರೆ ಯಾರು ನಂಬುತ್ತಾರೆ? ದೇವರು ಪಕ್ಷಪಾತಿಯಲ್ಲ ಅನ್ನುವುದಾದರೆ ಈ ರೀತಿ ಹುಟ್ಟುವುದಕ್ಕೆ ಬೇರೆ ಏನೋ ಕಾರಣವಿರಲೇಬೇಕು. ಅದು ಏನು?
ಪುನರ್ಜನ್ಮವನ್ನು ನಂಬುವುದಾದರೆ ಶರೀರ ಬೇರೆ ಮತ್ತು ಶರೀರದ ಚೈತನ್ಯಕ್ಕೆ ಕಾರಣವೆನಿಸಿದ ಜೀವಾತ್ಮ ಬೇರೆ ಅನ್ನುವುದನ್ನು ಒಪ್ಪಲೇಬೇಕಾಗುತ್ತದೆ. ಸತ್ತ ನಂತರ ಶರೀರ ಅಂತ್ಯ ಸಂಸ್ಕಾರದ ಮೂಲಕ ಪಂಚಭೂತಗಳಲ್ಲಿ ವಿಲೀನವಾಗುತ್ತದೆ. ಜೀವಾತ್ಮ ಜೀರ್ಣವಾದ ಬಟ್ಟೆಯನ್ನು ಎಸೆದು ಹೊಸ ಬಟ್ಟೆಯನ್ನು ತೊಡುವಂತೆ ಹೊಸ ಶರೀರದಲ್ಲಿ ಚೈತನ್ಯಶಾಲಿಯಾಗುತ್ತದೆ. ಇದನ್ನು ಒಪ್ಪುವುದಿಲ್ಲವೆಂದರೆ ಅಂತ್ಯ ಸಂಸ್ಕಾರದ ಜೊತೆಗೆ ಆತ್ಮವೂ ನಾಶವಾಗುತ್ತದೆ ಎನ್ನಬೇಕಾಗುತ್ತದೆ. ಯಾವುದು ಸರಿಯಿರಬಹುದು? ಪುನರ್ಜನ್ಮವಿಲ್ಲವೆಂದಾದರೆ ಹುಟ್ಟುವಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಡವ, ಶ್ರೀಮಂತ, ಹೀನ-ದೀನ, ಅಂಗವಿಕಲ, ಇತ್ಯಾದಿಯಾಗಿ ತಮ್ಮ ಯಾವುದೇ ತಪ್ಪಿಲ್ಲದೆ ಹುಟ್ಟುವುದಕ್ಕೆ ಸಮಂಜಸ ಕಾರಣ ಕೊಡುವುದು ಕಷ್ಟವಾಗುತ್ತದೆ. ಜೀವಾತ್ಮ ಅವಿನಾಶಿ, ಆದಿ-ಅಂತ್ಯಗಳಿಲ್ಲದುದು ಎಂದು ವೇದ ಹೇಳುತ್ತದೆ. ಮಾಡಿದ ಕರ್ಮಕ್ಕನುಸಾರವಾಗಿ ಜನ್ಮಗಳು ಪ್ರಾಪ್ತವಾಗುತ್ತದೆ ಎಂದು ವೇದ ಸಾರುತ್ತದೆ. ಕರ್ಮಫಲಭೋಗ ಅನಿವಾರ್ಯ ಎಂದು ಗೀತೆ ಘೋಷಿಸುತ್ತದೆ. ಅಥರ್ವ ವೇದದ ಈ ಮಂತ್ರ ನೋಡಿ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ || (ಅಥರ್ವ.೧೨.೩.೪೮)
ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ ಸಹಾಯದಿಂದ ಮೋಕ್ಷ ಸಿಗುತ್ತದೆ ಎಂಬುದೂ ಕೂಡ ಇಲ್ಲ ಮತ್ತು ಇದಕ್ಕೆ ಆಧಾರವೂ ಇಲ್ಲ. ನಮ್ಮ ಈ ಒಡಕಿಲ್ಲದ, ಗೂಢವಾಗಿ ಇಡಲ್ಪಟ್ಟಿರುವ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅನ್ನವು (ಕರ್ಮಫಲವಿಪಾಕ) ಅದನ್ನು ಬೇಯಿಸಿದವನನ್ನು ಪುನಃ ಮರಳಿ ಸೇರಿಯೇ ತೀರುತ್ತದೆ ಎಂಬುದು ಈ ಮಂತ್ರದ ಆರ್ಥ. 'ಮಾಡಿದ್ದುಣ್ಣೋ ಮಹರಾಯ!' ಜೀವಿತ ಕಾಲದಲ್ಲಿ ಮಾಡಿದ ಒಳ್ಳೆಯ, ಕೆಟ್ಟ ಕಾರ್ಯಗಳಿಗೆ ಅಂತರ್ನಿಹಿತವಾದ ಮಾಪಕವಿದ್ದು, ಅದರಲ್ಲಿ ಎಲ್ಲವೂ ದಾಖಲಾಗುತ್ತದೆ. ಅದಕ್ಕೆ ತಕ್ಕಂತೆ ಮುಂದಿನ ಜನ್ಮ ನಿರ್ಧರಿಸಲ್ಪಡುತ್ತದೆ. ಇದನ್ನು ಒಪ್ಪುವುದಾದರೆ, ಹುಟ್ಟುವಾಗಲೇ ಮೇಲೆ ಹೇಳಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜನಿಸುವುದಕ್ಕೆ ಕಾರಣ ಸಿಗುತ್ತದೆ. ಇದಲ್ಲದೆ ಬೇರೆ ಕಾರಣಗಳು ಅಷ್ಟೊಂದು ಸಮಂಜಸವಾಗಿ ತೋರಲಾರವು.
ತಮ್ಮ ಯಾವುದೇ ತಪ್ಪಿಲ್ಲದೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜನಿಸುವುದೇ ಪುನರ್ಜನ್ಮವನ್ನು ಸಮರ್ಥಿಸಬಹುದಾದ ಒಂದು ಪ್ರಬಲ ಕಾರಣವೆನಿಸುತ್ತದೆ. ಇದಕ್ಕೆ ಪೂರಕವಾಗಿ ಒಬ್ಬರೇ ತಂದೆ-ತಾಯಿಗಳಿಗೆ ಜನಿಸಿದ ಎಲ್ಲಾ ಮಕ್ಕಳೂ ಒಂದೇ ರೀತಿಯ ಗುಣ-ಸ್ವಭಾವದವರಾಗಿರುವುದಿಲ್ಲ. ಪುನರ್ಜನ್ಮವಿಲ್ಲವೆಂದಾದರೆ ಒಬ್ಬ ತಂದೆ-ತಾಯಿಗಳಿಗೆ ಹುಟ್ಟಿದ, ಒಂದೇ ರೀತಿಯ ಪರಿಸರದಲ್ಲಿ ಬೆಳೆದ ಮಕ್ಕಳೆಲ್ಲರೂ ಒಂದೇ ರೀತಿಯ ಗುಣ-ಸ್ವಭಾವದವರಾಗಬೇಕಿತ್ತು. ಹೀಗೆ ಇರುವ ಸಂಭವ ಅತಿ ಕಡಿಮೆಯೆಂದೇ ಹೇಳಬೇಕು. ಜೀವಿಯು ತನ್ನ ಜೀವಿತ ಕಾಲದಲ್ಲಿ ಮಾಡುವ ಪಾಪ/ಪುಣ್ಯ ಕಾರ್ಯಗಳಿಗನುಸಾರವಾಗಿ ಮುಂದಿನ ಜನ್ಮದಲ್ಲಿ ಒಳ್ಳೆಯ ಸ್ಥಿತಿಯಲ್ಲಿ ಅಥವ ಹೀನ-ದೀನ ಸ್ಥಿತಿಯಲ್ಲಿ ಜನಿಸುತ್ತಾನೆ ಎಂದರೆ ಒಪ್ಪಬಹುದು. ಒಪ್ಪದಿದ್ದರೆ, ಅಂತಹ ಸ್ಥಿತಿಯಲ್ಲಿ ಹುಟ್ಟಲು ದೇವರೊಬ್ಬನೇ ಕಾರಣ ಎನ್ನುವುದಾದರೆ ಜೀವಿಯು ಮುಂದೆ ತಾನು ಮಾಡುವ ಒಳ್ಳೆಯ/ಕೆಟ್ಟ ಕಾರ್ಯಗಳಿಗೆ ದೇವರೇ ಹೊಣೆಗಾರ ಎನ್ನಬೇಕಾಗುತ್ತದೆಯೇ ಹೊರತು ಜೀವಿಯನ್ನು ಹೊಣೆ ಮಾಡಲಾಗದು ಅಲ್ಲವೇ? ಅರ್ಥಾತ್ ಒಬ್ಬ ಕೊಲೆ ಮಾಡಿದರೂ ಅದಕ್ಕೆ ಅಂತಹ ಬುದ್ಧಿ ಕೊಟ್ಟ ದೇವರನ್ನೇ ಹೊಣೆ ಮಾಡಬೇಕಾಗುತ್ತದೆ. ಇದು ತರ್ಕಕ್ಕಾಗಲೀ, ವೈಜ್ಞಾನಿಕವಾಗಲೀ, ಧಾರ್ಮಿಕವಾಗಲೀ ಅಥವ ಇನ್ನಾವುದೇ ವಾದಕ್ಕಾಗಲೀ ಸಮಂಜಸವಾಗಿ ಕಾಣುವುದಿಲ್ಲ. ಅದೂ ಅಲ್ಲದೆ, ಧರ್ಮ, ಮೋಕ್ಷ, ಸನ್ನಡತೆ, ದುರ್ನಡತೆ, ಇತ್ಯಾದಿಗಳಿಗೆ ಅರ್ಥವೇ ಇರುವುದಿಲ್ಲ.
ಪುನರ್ಜನ್ಮವಿದೆ ಅನ್ನುವುದಾದರೆ ಹಿಂದಿನ ಜನ್ಮಗಳ ನೆನಪು ಏಕೆ ಇರುವುದಿಲ್ಲ ಎಂಬ ವಾದವೂ ಮುಂದೆ ಬರುತ್ತದೆ. ಒಂದು ವೇಳೆ ನೆನಪು ಇದ್ದಿದ್ದರೆ ಏನಾಗಬಹುದಿತ್ತು? ಹಿಂದಿನ ಜನ್ಮದಲ್ಲಿ ಹೆಂಡತಿಯಾಗಿದ್ದವಳು ನಂತರದಲ್ಲಿ ಅಕ್ಕನೋ, ತಂಗಿಯೋ ಅಥವ ಮಗಳೋ ಆಗಿ ಹುಟ್ಟಿದ್ದರೆ ಮತ್ತು ಅದರ ಅರಿವು ಜೀವಿಗೆ ಇದ್ದರೆ ಆಗುವ ಮನೋವೇದನೆಗಳು/ಭಾವಗಳು ತರ್ಕಕ್ಕೆ ನಿಲುಕದು. ಹಿಂದೊಮ್ಮೆ ಆಗರ್ಭ ಶ್ರೀಮಂತನಾಗಿದ್ದು, ಈಗ ಬಡವನ ಮನೆಯಲ್ಲಿ ಜನಿಸಿದ್ದರೆ ಮತ್ತು ಅದರ ಅರಿವಿದ್ದರೆ ಏನಾಗುತ್ತಿತ್ತು? ತಾನು ಹಿಂದಿದ್ದ ಮನೆಗೆ ಹೋಗಿ ಅವರಿಂದ ಪಾಲು ಪಡೆಯಲು ಹೋದರೆ ಏನಾಗಬಹುದು? ಕೇವಲ ಉದಾಹರಣೆಗಾಗಿ ಇವನ್ನು ಹೇಳಿದ್ದಷ್ಟೇ. ಇಂತಹ ಅನೂಹ್ಯ ಪ್ರಸಂಗಗಳು ಎದುರಾಗಿ ಬದುಕು ದುರ್ಭರವೆನಿಸುವ ಸಾಧ್ಯತೆಗಳೇ ಜಾಸ್ತಿ. ಈ ಜನ್ಮದ್ದೇ ಎಷ್ಟೋ ಸಂಗತಿಗಳು ನಮಗೆ ಮರೆತುಹೋಗುತ್ತದೆಯಲ್ಲವೇ? ಆದ್ದರಿಂದ ಹಿಂದಿನ ಜನ್ಮದ ನೆನಪು ಇಲ್ಲದಿರುವುದೇ ಒಂದು ರೀತಿಯಲ್ಲಿ ದೇವರ ಕರುಣೆಯೆನ್ನಬೇಕು. ಹಿಂದಿನ ಜನ್ಮದ ಸಂಸ್ಕಾರ/ಪ್ರಭಾವ ಪ್ರಬಲವಾಗಿರುವ ಕೆಲವರಿಗೆ ಹಿಂದಿನ ಜನ್ಮದ ನೆನಪು ಇರುವ ಹಲವಾರು ಪ್ರಕರಣಗಳನ್ನೂ ನಾವು ಕಾಣುತ್ತಿರುತ್ತೇವಲ್ಲವೆ?
ಋಗ್ವೇದದ ಈ ಮಂತ್ರ ನೋಡಿ: ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್| ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ|| (ಋಕ್. ೧.೧೬೪.೩೦.)
ಅಂತಃಸ್ಥಿತವಾದ ಪರಮಾತ್ಮ ತತ್ವ ಅತ್ಯಂತ ಚೈತನ್ಯಯುತವಾಗಿದ್ದು, ಜೀವದಾನ ಮಾಡುವಲ್ಲಿ, ಲೋಕ ಲೋಕಾಂತರಗಳಲ್ಲಿ ಸಂಚರಿಸುವಲ್ಲಿ ಪ್ರಧಾನವಾಗಿದೆ. ಮೃತರಾದವರ ಜೀವಾತ್ಮಕ್ಕೆ ಸಾವಿಲ್ಲದೆ ಇದ್ದು, ನಂತರದಲ್ಲಿ ಅದು ಸಾವು ಇರುವ ಶರೀರದಲ್ಲಿ ಪ್ರವೇಶಿಸಿ, ತನಗೆ ಪ್ರಾರಬ್ಧ ರೀತಿಯಲ್ಲಿ (ಕರ್ಮ ಫಲಾನುಸಾರವಾಗಿ) ಸಿಕ್ಕಿದ ಪರಿಸರದಲ್ಲಿ ಸಂಚರಿಸುತ್ತಿರುತ್ತದೆ ಎಂಬುದು ಈ ಮಂತ್ರದ ಅರ್ಥ. ಈ ರೀತಿಯಲ್ಲಿ ಪ್ರತಿ ಜೀವಿಯೂ ಹಿಂದೆ ಎಷ್ಟು ಜನ್ಮಗಳನ್ನು ಹಾದು ಬಂದಿದೆಯೋ, ಮುಂದೆ ಎಷ್ಟು ಜನ್ಮಗಳನ್ನು ಎತ್ತಬೇಕಿದೆಯೋ ಯಾರಿಗೆ ಗೊತ್ತು? ಶಂಕರಾಚಾರ್ಯರ 'ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ' ಎಂಬ ಉಕ್ತಿ ಹೇಳುವುದೂ ಇದನ್ನೇ!
ಪುರುಷರು ಪುರುಷರಾಗಿಯೇ ಜನಿಸುತ್ತಾರೆಯೇ? ಸ್ತ್ರೀ ಸ್ತ್ರೀಯಾಗಿಯೇ ಜನಿಸುತ್ತಾಳೆಯೇ? ಇಲ್ಲ, ವೇದದ ಪ್ರಕಾರ ಜೀವಾತ್ಮಕ್ಕೆ ಲಿಂಗ ಭೇದವಿಲ್ಲ, ಜೀವಭೇದವೂ ಇಲ್ಲ. ಗಳಿಸಿದ ಕರ್ಮಫಲಾನುಸಾರವಾಗಿ ಯಾವ ಜೀವಿಯಾಗಿಯಾದರೂ ಜನಿಸಬಹುದಾಗಿರುತ್ತದೆ. ಈ ಮಂತ್ರ ನೋಡಿ: ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ| ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ|| (ಅಥರ್ವ.೧೦.೮.೨೭). ಜೀವಾತ್ಮವು ಸ್ತ್ರೀಯೂ ಆಗಿದೆ, ಪುರುಷನೂ ಆಗಿದೆ, ಕುಮಾರನೂ ಆಗಿದೆ, ಕುಮಾರಿಯೂ ಆಗಿದೆ. ವೃದ್ಧಾಪ್ಯದ ನಂತರದಲ್ಲಿ ಮೃತನಾದ ಮೇಲೆ ಮತ್ತೆ ಜನ್ಮವೆತ್ತಿ ಎಲ್ಲೆಡೆಯೂ ಪ್ರವೇಶಿಸುವುದಾಗಿದೆ ಎಂದು ಈ ಮಂತ್ರ ಹೇಳುತ್ತದೆ. ಲಿಂಗರಹಿತವಾದ ಜೀವಾತ್ಮವು ತಾನು ಹೊಂದಿದ ಶರೀರಕ್ಕೆ ಅನುಗುಣವಾಗಿ ಸ್ತ್ರೀ, ಪುರುಷ, ಕುಮಾರ ಅಥವ ಕುಮಾರಿ ಎಂದು ಕರೆಸಿಕೊಳ್ಳುತ್ತದೆ. ಜೀವಾತ್ಮವು ಅನೇಕ ಜನ್ಮಗಳನ್ನೆತ್ತುತ್ತಾ ವಿಕಾಸವಾಗುತ್ತಾ ಹೋಗಿ, ಜ್ಞಾನ, ಕರ್ಮ, ಉಪಾಸನೆಗಳ ಫಲವಾಗಿ ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಾ ಸತ್ಕರ್ಮದ ಫಲವಾಗಿ ಮೋಕ್ಷ ಸ್ಥಿತಿ ತಲುಪುತ್ತದೆ ಎಂದು ವೇದ ಸಾರುತ್ತದೆ.
ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
ಒಂದಂತೂ ನಮಗೆ ಅರ್ಥವಾಗುತ್ತದೆ, ಅದೇನೆಂದರೆ ನಾವು ಇಂದು ಇರುವ ಸ್ಥಿತಿಗೆ ನಮ್ಮ ಹಿಂದಿನ ಕರ್ಮಗಳು ಕಾರಣೀಭೂತವಾಗಿವೆ ಎನ್ನುವುದಾದರೆ, ಮುಂದೆ ಏನಾಗಬೇಕು ಎಂದು ನಾವು ಬಯಸುತ್ತೇವೆಯೋ ಅದಕ್ಕೆ ನಮ್ಮ ಇಂದಿನ ಕರ್ಮಗಳು ನೆರವಾಗುತ್ತವೆ ಅಲ್ಲವೇ? ಜನ್ಮ ಜನ್ಮಾಂತರಗಳ ಒಂದು ಸ್ವಾರಸ್ಯಕರ ಸಂಗತಿಯನ್ನು ಪ್ರಸ್ತಾಪಿಸುವೆ. ಜೀವಾತ್ಮ ಅವಿನಾಶಿ ಎಂದರೆ ನಾವು ಎಂದೆಂದೂ ಇದ್ದೆವು, ಮುಂದೆಯೂ ಇರುತ್ತೇವೆ ಅಲ್ಲವೇ? ಅಂದರೆ, ನಾವು ಈಗ ದೇವರೆಂದು ಪೂಜಿಸುವ ರಾಮ, ಕೃಷ್ಣ, ಶಿವರ ಕಾಲದಲ್ಲಿಯೂ ಇದ್ದೆವು. ನಾವು ಆಗ ರಾಮನೇ ಆಗಿದ್ದಿರಬಹುದು, ರಾವಣನೇ ಆಗಿರಬಹುದು, ವಾಲಿ, ಸುಗ್ರೀವರಾಗಿದ್ದಿರಬಹುದು ಅಥವ ಇನ್ನು ಯಾರೋ ಆಗಿದ್ದಿರಬಹುದು. ಬುದ್ಧ, ಮಹಾವೀರ, ಬಸವಣ್ಣ, ಏಸುಕ್ರಿಸ್ತರವರಂತವರುಗಳ ಕಾಲದಲ್ಲಿಯೂ ನಾವು ಯಾವುದೋ ರೀತಿಯಲ್ಲಿ ಇದ್ದೆವು ಅಲ್ಲವೇ? ರಾಮ ಒಳಿತಿನ ಸಂಕೇತ ಮತ್ತು ರಾವಣ ಕೆಡುಕಿನ ಸಂಕೇತವೆಂದು ಇಟ್ಟುಕೊಂಡರೆ, ರಾವಣತ್ವ ಕಳೆದುಕೊಂಡರೆ ರಾವಣನೂ ರಾಮ ಆಗುತ್ತಾನಲ್ಲವೇ? ರಾಮನಾಗುವುದೋ ಅಥವ ರಾವಣನಾಗುವುದೋ ಅಥವ ನಾವು ಬಯಸಿದಂತೆ ಮತ್ತೇನೋ ಆಗುವುದೋ ಎಂಬುದು ನಮ್ಮ ಕೈಯಲ್ಲಿಯೇ ಇದೆ.
-ಕ.ವೆಂ.ನಾಗರಾಜ್.
***************
ದಿನಾಂಕ 18.05.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:
nageshamysore
ಪ್ರತ್ಯುತ್ತರಅಳಿಸಿಪುನರ್ಜನ್ಮದ ವಿಷಯಕ್ಕೆ ಬಂದರೆ ಕರ್ಮಾಂತರ ಫಲದ ಅನೇಕ ಪರಿಣಾಮಗಳಿಗೆ ನೇರ ವಿವರಣೆ ಸಿಕ್ಕಿಬಿಡುತ್ತದೆ. ಜೀವಿಯ ಅತ್ಮ ಧರಿಸುವ ವಿವಿಧ ರೂಪಗಳು ಪ್ರತಿ ಜನ್ಮದಲ್ಲು ತಮ್ಮ ಕರ್ಮದಿಂದಲೆ ಮುಂದಿನ ಜನ್ಮದ ಹಣೆಬರಹ ನಿರ್ಧರಿಸುವ ಸಿದ್ದಾಂತವೆ ಕುತೂಹಲಕರ. ಹೀಗಾಗಿ ನಮ್ಮ ವಂಶಾವಳಿ ಪಟ್ಟಿಯ ಹಾಗೆ 'ಜನ್ಮಾವಳಿ' ಅಥವಾ 'ಆತ್ಮವಳಿ' ಪಟ್ಟಿಯೇನಾದರು ಮಾಡಲು ಸಾಧ್ಯವಿದ್ದಿದ್ದರೆ ನಾವೇನಾಗಿದ್ದೆವೆಂಬ ಕುತೂಹಲಕರ ಮಾಹಿತಿ ಸಿಗುತ್ತಿತ್ತೇನೊ ? ತಮಿಳುನಾಡಿನ ದೇವಾಲಯವೊಂದರಲ್ಲಿ ಹೋದ ನನ್ನ ಗೆಳೆಯನೊಬ್ಬ ಅಲ್ಲಿನ ಅಗಸ್ತ್ಯ ನಾಡಿ ಶಾಸ್ತ್ರದನುಸಾರ, ತಾಳೆಗರಿಯೊಂದರಲ್ಲಿದ್ದ ಅವನ ಪೂರ್ವ ಜನ್ಮದ ಇತಿಹಾಸ ನೋಡಿಕೊಂಡು ಬಂದೆ - ಎಂದ. ಆ ಇತಿಹಾಸ ನಿಜವೊ ಸುಳ್ಳೊ, ಮಾನವನಿಗೆ ಅದರ ಕುರಿತ ಕುತೂಹಲ ಮಾತ್ರ ನಿರಂತರ!
kavinagaraj
ನಿಜ, ನಾಗೇಶರೇ. ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಮನುಷ್ಯನನ್ನು ಒಳ್ಳೆಯ ರೀತಿಯಲ್ಲಿ ನಡೆಯಲು ಸಹಕಾರಿಯಾಗುತ್ತವೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ಯಮನಪ್ಪ
ಅಳಿಸಿವಿವರಿಸುವ ಬಗೆ ಪೂರ್ವಗ್ರಹಕೆ ಎಡೆ ಕೊಟ್ಟಿಲ್ಲ ವಿಷಯಧಾರಿತವಾಗಿದೆ.
ನನ್ನ ಜನ್ಮ ರಹಸ್ಯ ನನಗೆ ಗೊತ್ತಿದೆ ಅದನ್ನು ಹೇಳಲು ವೇದಿಕೆ ಸಿಕ್ಕುತ್ತಿಲ್ಲ
ಪ್ರತ್ಯುತ್ತರಅಳಿಸಿ