ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮೇ 20, 2015

ನಾವು ಯಾರು ಬಲ್ಲೆವೇನು? -1


ನಾನಾರು ಅವನಾರು ಜಗವೆಂದರೇನು
ಪ್ರಶ್ನತ್ರಯಗಳು ನರರ ಕಾಡದಿಹವೇನು |
ಹಿಂದಿದ್ದು ಈಗಿರುವ ಎಂದೆಂದು ಇಹವೀ
ಒಗಟಿಗುತ್ತರವ ತಿಳಿದಿಹೆಯ ಮೂಢ ||

ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ ||
     ನಾವು ಯಾರು? ಜಗತ್ತು ಅಂದರೆ ಏನು? ದೇವರು ಯಾರು? ಈ ಮೂರು ಪ್ರಶ್ನೆಗಳು ಅನಾದಿ ಕಾಲದಿಂದಲೂ ನರರನ್ನು ಕಾಡುತ್ತಲೇ ಇವೆ. ಮುಂದೂ ಕಾಡುತ್ತಲೇ ಇರುತ್ತವೆ. ದಾರ್ಶನಿಕರು, ಸಾಧು-ಸಂತರು, ಧಾರ್ಮಿಕ ಮುಖಂಡರು, ಸಮಾಜ ಸುಧಾರಕರು, ಧರ್ಮಗ್ರಂಥಗಳು, ಇತ್ಯಾದಿಗಳೆಲ್ಲವೂ ಮತ್ತು ಎಲ್ಲರೂ ವಿವರಿಸಲು ಪ್ರಯತ್ನಿಸಿರುವುದು ಮತ್ತು ವಿವರಿಸಿರುವುದು ಈ ಮೂರು ಅಂಶಗಳ ಕುರಿತೇ ಆಗಿದೆ. ಬೈಬಲ್ಲು, ಕುರಾನು, ವಿವಿಧ ಪುರಾಣ/ಪುಣ್ಯ ಕಥೆಗಳು ಈ ಜಗತ್ತು, ಜೀವಿಗಳೆಲ್ಲವನ್ನೂ ಸೃಷ್ಟಿಸಿದ್ದು ದೇವರೇ ಎಂದು ಹೇಳುತ್ತವೆ. ಏಕದೇವವಾದ, ಬಹುದೇವವಾದ, ನಿರೀಶ್ವರವಾದ, ದ್ವೈತ, ಅದ್ವೈತ, ತ್ರೈತವಾದ, ಒಂದೇ, ಎರಡೇ? ಅಸಂಖ್ಯವಾದ ವಿಚಾರಗಳು, ತರ್ಕಗಳು, ಜಿಜ್ಞಾಸೆಗಳು, ಚರ್ಚೆಗಳು ಎಂದಿನಿಂದಲೂ ನಡೆಯುತ್ತಲೇ ಇವೆ, ಮುಂದೂ ನಡೆಯುತ್ತಿರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಸತ್ಯ, ಮಿಕ್ಕಿದ್ದೆಲ್ಲವೂ ಸುಳ್ಳು ಎನ್ನುತ್ತಾರೆ. ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು? ನೂರೆಂಟು ತರ್ಕ-ವಿತರ್ಕಗಳ ಸಾಲಿನಲ್ಲಿ ಈ ಲೇಖನವೂ ಸೇರಿಕೊಂಡುಬಿಡಲಿ, ಏನಂತೀರಿ?
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ ||
     ಹಿಂದಿನ ಲೇಖನವೊಂದರಲ್ಲಿ 'ನಾವು' ಎಂದು ಅಂದುಕೊಂಡಿರುವ ಶರೀರವಾಗಲೀ, ನಮ್ಮ ಮನಸ್ಸಾಗಲೀ ವಾಸ್ತವವಾಗಿ 'ನಾವು' ಆಗಿರದೆ ನಮ್ಮೊಳಗಿನ ಪ್ರಾಣವೇ ವಸ್ತುಶಃ ನಾವಾಗಿರುತ್ತೇವೆ ಎಂಬ ಬಗ್ಗೆ ಚರ್ಚಿಸಿದೆವು. ದೇಹದಲ್ಲಿ ಪ್ರಾಣಚೈತನ್ಯ ಇರುವವರೆಗೆ ಆ ದೇಹಕ್ಕೆ ಬೆಲೆ, ಪ್ರಾಣ ಹೋದ ನಂತರ ಅದಕ್ಕೆ ಮೊದಲಿನ ಪ್ರಾಮುಖ್ಯತೆ ಇರುವುದಿಲ್ಲ. ನಾವು ಅಂದರೆ ನಮ್ಮೊಳಗಿನ ಪ್ರಾಣಚೈತನ್ಯ ಅಥವ ಜೀವಾತ್ಮ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಈ ಜೀವಾತ್ಮ ಅನ್ನುವುದಾದರೂ ಏನು? ನಮ್ಮೊಳಗಿನ ಕೌತುಕವನ್ನು ನಾವೇ ಪೂರ್ಣವಾಗಿ ಅರಿಯಲಾಗದಿರುವುದು ಕೌತುಕವೇ ಆಗಿದೆ.
ಕಾಣದದು ನಯನ ಕೇಳಿಸದು ಕಿವಿಗೆ
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? ||
     ಈ ಜೀವಾತ್ಮದ ಕುರಿತು ಹಲವಾರು ಧರ್ಮಗ್ರಂಥಗಳು ಹಲವು ರೀತಿ ತಿಳಿಸಿವೆ, ಹಲವರು ಹಲವು ರೀತಿಯಲ್ಲಿ ವಿವರಿಸುತ್ತಾರೆ. ಯಾವುದು ಸರಿ? ಈ ಕುರಿತು ವಿವಿಧ ವಿಚಾರಗಳ ಅಧ್ಯಯನ, ಮನನ, ಮಂಥನಗಳಿಂದ ನಮಗೊಪ್ಪುವ ವಿಚಾರವನ್ನು ನಾವು ಸತ್ಯಕ್ಕೆ ಹತ್ತಿರವೆಂದುಕೊಳ್ಳಬೇಕಾಗುತ್ತದೆ. ಏಕೆಂದರೆ 'ಇದು ಹೀಗೇನೇ' ಎಂದು ಖಚಿತವಾಗಿ ಸಾಧಿಸಿ ತೋರಿಸುವುದು ಮಾನವನ ಸೀಮಿತ ಬುದ್ಧಿಶಕ್ತಿಗೆ ಅಶಕ್ಯವಾಗಿದೆ. "ನಮ್ಮ ಗುರುಗಳು ದೊಡ್ಡ ಪಂಡಿತರು, ಅವರು ಹೀಗೆ ಹೇಳಿದ್ದಾರೆ ಎಂದ ಮೇಲೆ ಅದು ಸರಿಯಾಗಿಯೇ ಇರುತ್ತದೆ; ನಮ್ಮ ಧರ್ಮಶಾಸ್ತ್ರದಲ್ಲಿ ಹೀಗೆ ಹೇಳಿದೆ, ಅದನ್ನು ನಾವು ಒಪ್ಪಲೇಬೇಲ್ಲವೇ?" ಎಂಬಂತಹ ವಾದಗಳೂ ಕೇಳಿಬರುತ್ತವೆ. ತರ್ಕದಲ್ಲಿ ತೊಡಗುವ ಮನಸ್ಸೇ ಸತ್ಯ ಅನ್ವೇಷಿಸಲು ಸಾಧ್ಯ. ಪೂರ್ವಾಗ್ರಹ ಪೀಡಿತರಾಗದೆ, ನಾವು ನಂಬಿದ್ದೇ ಸತ್ಯವೆಂದು ವಾದಿಸಹೋಗದೆ ನಿಜಸತ್ಯವನ್ನು ತಿಳಿಯುವ ಕುತೂಹಲ, ಆಸಕ್ತಿ ಮತ್ತು ಅಧ್ಯಯನಗಳೇ ಸತ್ಯಾನ್ವೇಷಿಗಳಿಗೆ ಮಾರ್ಗದರ್ಶಿಯಾಗಿರುತ್ತವೆ. ಈ ವಿಷಯದಲ್ಲಿ ವೈಚಾರಿಕತೆಯನ್ನು ಎತ್ತಿ ಹಿಡಿಯುವ ಈ ವೇದಮಂತ್ರದ ಕರೆ ಆಪ್ಯಾಯಮಾನವೆನಿಸುತ್ತದೆ: 'ಯತ್ ಪೂರ್ವ್ಯಂ ಮರುತೋ ಯಚ್ಛ ನೂತನಂ ಯದುದ್ಯತೇ ವಸವೋ ಯಚ್ಛ ಶಸ್ಯತೇ | ವಿಶ್ವಸ್ಯ ತಸ್ಯ ಭವತಾ ನವೇದಸಃ ಶುಭಂ ಯಾತಾಮನು ರಥಾ ಅವೃತ್ಸತಃ || (ಋಕ್. ೫.೫೫.೮)' 'ಯಾವುದು ಪ್ರಾಚೀನವೋ, ಯಾವುದು ನವೀನವೋ, ಯಾವುದು ನಿಮ್ಮ ಅಂತಃಕರಣದಿಂದ ಉದ್ಭವಿಸುತ್ತದೋ ಮತ್ತು ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ, ಆ ಎಲ್ಲದಕ್ಕೂ ಕಿವಿಗೊಡಿ. ಆದರೆ ಕಲ್ಯಾಣಮಾರ್ಗದಲ್ಲಿ ನಡೆಯುವವರ ಹಿಂದೆ ನಿಮ್ಮ ಜೀವನ ರಥ ಸಾಗಲಿ' ಎಂಬುದು ಇದರ ಅರ್ಥ. ಇತಿಹಾಸದಿಂದ ಪಾಠ ಕಲಿಯೋಣ; ವರ್ತಮಾನದ ಸಂಗತಿಗಳನ್ನೂ ಅವಲೋಕಿಸೋಣ; ಯಾವುದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆಯೋ ಅದನ್ನೂ ಆಲಿಸೋಣ. ನಮ್ಮ ಅಂತರಂಗದ ಧ್ವನಿಗೂ ಕಿವಿಗೊಟ್ಟು ಒಳ್ಳೆಯ ದಾರಿಯಲ್ಲಿ ನಡೆಯುವವರ ಮಾರ್ಗವನ್ನು ಅನುಸರಿಸೋಣ ಎಂಬುದರಲ್ಲಿ ನಮ್ಮ ವಿವೇಚನಾಶಕ್ತಿಯನ್ನು ಬಳಸಿಕೊಳ್ಳಬೇಕೆಂಬ ಕರೆಯಿದೆ. ಈ ಮಂತ್ರವೂ ಸಹ ಹೇಳುತ್ತದೆ: 'ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || (ಋಕ್.೧.೮೬.೯)' ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ ಸತ್ಯವನ್ನು ಕಂಡುಕೊಳ್ಳಿರಿ, ಅದನ್ನು ಹೊರಕ್ಕೆ ತನ್ನಿ. ಕೆಟ್ಟ ವಿಚಾರಗಳನ್ನು ನಿಮ್ಮ ಜ್ಞಾನದ ಶಕ್ತಿಯಿಂದ ತೊಡೆದುಹಾಕಿ ಎಂಬುದು ಇದರ ಅರ್ಥ. ಜಗತ್ತಿನಲ್ಲಿ ಇರುವ ಸುಮಾರು ೮೪ ಲಕ್ಷ ಜೀವಜಂತುಗಳ ಪೈಕಿ ಮಾನವನಿಗೆ ಮಾತ್ರ ವಿವೇಚನಾ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಅದನ್ನು ಬಳಸಿಕೊಂಡು ಸತ್ಯ ಯಾವದು, ಒಳ್ಳೆಯದು ಯಾವುದು ಎಂಬುದನ್ನು ಕಂಡುಕೊಂಡು ಕೆಟ್ಟದ್ದನ್ನು ದೂರ ಮಾಡಲು ನೀಡುವ ಕರೆ ಎಷ್ಟು ಸುಂದರ ಅಲ್ಲವೇ?
ಕಂಡವರು ಯಾರಿಹರು ಜೀವ ಚೇತನವ
ತರ್ಕವನೆ ಮಾಡುವರು ಅವಿನಾಶಿಯೆನ್ನುವರು |
ವಾದಗಳ ಮುಂದಿರಿಸಿ ವಿನಾಶಿಯೆಂದಿಹರು
ಅನುಭಾವಿ ತಿಳಿದಾನು ಉತ್ತರವ ಮೂಢ ||
     ವಿಚಾರ ಮಾಡೋಣ. ಜೀವಿಗಳು ದೇವರ ಸೃಷ್ಟಿ, ದೇವರು ಸೃಷ್ಟಿಸುವ ಮುನ್ನ ಜೀವಿಗಳು ಇರಲಿಲ್ಲ ಎಂದು ಒಂದು ವಾದವಿದೆ. ಇಲ್ಲಿ ಪ್ರಶ್ನೆಗಳು ಉದ್ಭವಿಸುತ್ತವೆ. ದೇವರು ಸೃಷ್ಟಿಸಿದ್ದಾದರೆ ಏಕೆ ಸೃಷ್ಟಿಸಿದ? ಸುಮ್ಮನೆ ಸೃಷ್ಟಿಸಿದನೆ? ತನಗೆ ಬೇಕಾಗಿತ್ತು, ಸೃಷ್ಟಿಸಿದ ಎಂದರೆ, 'ಬೇಕು/ಬೇಕಾಗಿತ್ತು' ಎಂಬ ಭಾವನೆ ಇದ್ದಲ್ಲಿ ಸೃಷ್ಟಿಕರ್ತನನ್ನು ದೇವರೆನ್ನಲಾಗುವುದಿಲ್ಲ. ಏಕೆಂದರೆ 'ಏನಾದರೂ ಬೇಕು' ಎಂದರೆ ಅವನಿಗೆ ಏನೋ ಕೊರತೆಯಿತ್ತು ಅನ್ನಿಸುವುದಿಲ್ಲವೇ? ಇದು ಸರ್ವತೃಪ್ತ ದೇವರಿಗೆ ವಿರುದ್ಧವಾದವಾಗುತ್ತದೆ.
     ದೇವರು ಏನು ಬೇಕಾದರೂ ಮಾಡಬಲ್ಲ, ಶೂನ್ಯದಿಂದ ಏನನ್ನಾದರೂ ಸೃಷ್ಟಿಸಬಲ್ಲ. ಜೀವಿಗಳನ್ನು ಸೃಷ್ಟಿಸಿದ್ದೂ ಹೀಗೆಯೇ ಅನ್ನುವವರಿದ್ದಾರೆ. ವಾದದ ಸಲುವಾಗಿ ಇದನ್ನು ಒಪ್ಪಿಕೊಂಡರೂ, ಹೀಗೆ ವಾದಿಸುವವರನ್ನು ನಾವು ಪ್ರಶ್ನಿಸಲು ಅವಕಾಶವಿದೆ. ದೇವರು ಶೂನ್ಯದಿಂದ ಏನನ್ನಾದರೂ ಸೃಷ್ಟಿಸಬಲ್ಲನಾದರೆ ಇನ್ನೊಬ್ಬ ದೇವರನ್ನು, ತನಗಿಂತ ಬಲಶಾಲಿಯಾದ ಇನ್ನೊಬ್ಬ ದೇವರನ್ನು ಸೃಷ್ಟಿಸಲು ಅವನಿಗೆ ಸಾಧ್ಯವಿದೆಯೇ? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟವೇ ಸರಿ. ಆಗ ಸರ್ವಶಕ್ತನಿಗಿಂತ ಸರ್ವಶಕ್ತ ಸೃಷ್ಟಿಯಾಗುವುದರಿಂದ ದೇವರನ್ನು ಸರ್ವಶಕ್ತ ಎನ್ನಲು ಕಷ್ಟವಾಗುತ್ತದೆ. ಶೂನ್ಯದಿಂದ ಸೃಷ್ಟಿ ಸಾಧ್ಯ ಅನ್ನುವುದು ವೈಜ್ಞಾನಿಕವಾಗಿ ವಿಚಾರ ಮಾಡಿದರೂ ನಿಲ್ಲುವಂತಹ ವಾದವಾಗುವುದಿಲ್ಲ.
     ಹಾಗಾದರೆ ಜೀವಿಗಳನ್ನು ದೇವರು ಜಡಪ್ರಕೃತಿಯಿಂದ ಸೃಷ್ಟಿಸಿದನೇ? ಇದೂ ಸಹ ಒಪ್ಪಲು ಕಷ್ಟವೆನಿಸುತ್ತದೆ. ಜಡ ವಸ್ತುಗಳಿಂದ ಮತ್ತೊಂದು ಜಡವಸ್ತುವನ್ನು ನಿರ್ಮಿಸಬಹುದೇ ಹೊರತು ಜೀವಚೈತನ್ಯ ಒಡಗೂಡಿದ ಜೀವಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಜಡವಸ್ತುಗಳಿಗೆ ಜೀವಚೈತನ್ಯದಿಂದ ಅರ್ಥ ಬಂದೀತೇ ಹೊರತು, ಜಡವಸ್ತುಗಳಿಂದ ಚೈತನ್ಯಶೀಲ ವಸ್ತುವಿನ ಸೃಷ್ಟಿಯನ್ನು ಕಲ್ಪಿಸಿಕೊಳ್ಳುವುದೂ ಆಗದು. ಹಾಗಾದರೆ ಜೀವಿಯ ಸೃಷ್ಟಿ ಹೇಗೆ ಆಗಿರಬಹುದು?
     ಲೋಕದ ಜೀವಿಗಳೆಲ್ಲಾ ಪರಮಾತ್ಮನ ಅಂಶದಿಂದ ಸೃಷ್ಟಿಯಾಗಿದೆ ಎಂಬ ವಾದವೂ ಇದೆ. ಈ ವಿಚಾರದಲ್ಲಿ ತರ್ಕಿಸೋಣ. ಸುಮಾರು ೮೪ ಲಕ್ಷ ಬಗೆಯ ಜೀವಜಂತುಗಳಿವೆ ಎನ್ನುತ್ತಾರೆ. ಇದರಲ್ಲಿ ಮಾನವ ಜೀವಿಯೂ ಒಂದು ಜೀವಿಯಾಗಿದೆ. ಅದೆಷ್ಟು ಜೀವಿಗಳಿವೆಯೋ ಆ ದೇವರಿಗೇ ಗೊತ್ತು. ಈ ಜೀವಿಗಳನ್ನೆಲ್ಲಾ ದೇವರು ತನ್ನ ಅಂಶದಿಂದಲೇ ಸೃಷ್ಟಿಸಿದ ಎಂದರೆ ಆತನ ಎಷ್ಟು ಅಂಶ ಈ ಜೀವಿಗಳಲ್ಲಿ ಹಂಚಿಹೋಗಿರಬೇಕು! ಇಷ್ಟವಾಗದ ಪ್ರಶ್ನೆ ಇಲ್ಲಿ ಹುಟ್ಟುತ್ತದೆ, ಇಷ್ಟೆಲ್ಲಾ ಅಂಶವನ್ನು ಜೀವಿಗಳಲ್ಲಿ ಹಂಚಿದ ಮೇಲೂ ದೇವರು ಪರಿಪೂರ್ಣ ಎನ್ನಬಹುದೇ? ಪರಿಪೂರ್ಣನಲ್ಲವೆಂದರೆ ಆತನು ದೇವರಾಗಲಾರ ಅಲ್ಲವೇ? ಇಲ್ಲಿ ಇಂತಹ ಅನೇಕ ಉಪಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಇವುಗಳಿಗೆ ಸಮಂಜಸ ಉತ್ತರ ಕಲ್ಪಿಸಿಕೊಳ್ಳುವುದು ಕಷ್ಟ.
     'ಗೊಂಬೆಯಾಟವಯ್ಯಾ, ಈ ಬ್ರಹ್ಮಾಂಡವೇ ಆ ದೇವನಾಡುವ ಗೊಂಬೆಯಾಟವಯ್ಯಾ'- ಲೋಕದ ಎಲ್ಲಾ ಸಂಗತಿಗಳಿಗೂ ದೇವರೇ ಕಾರಣ, ಆತನ ಇಚ್ಛೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡದು ಎಂಬ ಅರ್ಥದ ಮಾತುಗಳನ್ನು ಕೇಳುತ್ತೇವೆ. 'ನಮ್ಮ ಕೈಯಲ್ಲೇನಿದೆ, ಎಲ್ಲಾ ಅವನು ಹೇಳಿದಂತೆ ನಡೆಯುತ್ತದೆ' ಎಂದು ಹೇಳುತ್ತೇವೆ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ದೇವರೇ ಕಾರಣವೆಂದರೆ ನಮ್ಮ ತಪ್ಪು ಏನಿರುತ್ತದೆ? ಯಾರನ್ನಾದರೂ ಕೊಲೆ ಮಾಡಿದರೆ ಅದಕ್ಕೂ ದೇವರೇ ಕಾರಣ ಎನ್ನಬಹುದಲ್ಲವೇ? ದೇವರು ಮಾಡಿಸಿದ ಕೆಲಸಕ್ಕೆ ಶಿಕ್ಷೆ ದೇವರಿಗೆ ಕೊಡಬೇಕೇ ಹೊರತು ನಿಮಿತ್ತ ಮಾತ್ರವಾಗಿ ಕೊಲೆ ಮಾಡಿದವರಿಗೆ ಶಿಕ್ಷೆ ಏಕೆ ಕೊಡಬೇಕು? ಹೀಗಿರುವಾಗ ಧರ್ಮ, ಅಧರ್ಮ, ಸತ್ಯ, ಅಸತ್ಯ, ಪಾಪ, ಪುಣ್ಯ, ಮೋಕ್ಷ, ಸ್ವರ್ಗ, ನರಕ ಮುಂತಾದುವುಗಳಿಗೆ ಅರ್ಥವಾದರೂ ಎಲ್ಲಿ ಬರುತ್ತದೆ?
     ಜೀವಿಗಳಲ್ಲಿ ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ, ಕೆಲವರು ಹುಟ್ಟುತ್ತಲೇ ಅಂಗವಿಕಲರಾಗಿರುತ್ತಾರೆ, ಕೆಲವರು ರೋಗಿಷ್ಠರಾಗಿರುತ್ತಾರೆ. ಕೆಲವರು ದುಃಖಿಗಳಾಗಿರುತ್ತಾರೆ, ಕಷ್ಟಪಡುತ್ತಾರೆ, ಕೆಲವರು ಸುಖ-ಸಂತೋಷಗಳಲ್ಲಿ ಮುಳುಗಿರುತ್ತಾರೆ. ಕಂಡ ಕೂಡಲೇ ಹೊಡೆದು ಸಾಯಿಸಲ್ಪಡುವ ಸೊಳ್ಳೆಗಳಿರುತ್ತವೆ, ಬೆಕ್ಕಿನ ಭಯದ ಇಲಿ, ನಾಯಿಯ ಭಯದ ಬೆಕ್ಕುಗಳು ಜನ್ಮ ತಾಳುತ್ತವೆ. ಇಂತಹ ಜೀವಿಗಳನ್ನು ದೇವರೇ ಸೃಷ್ಟಿಸಿದ ಎಂದರೆ ಅವನನ್ನು ಪಕ್ಷಪಾತಿ, ಅನ್ಯಾಯಿ, ನಿಷ್ಕರುಣಿ ಅನ್ನದಿರಲು ಸಾಧ್ಯವಿದೆಯೇ? ದೇವರನ್ನು ಪಕ್ಷಪಾತಿ ಎಂದು ಹೇಳಲು ಮನಸ್ಸು, ಅದರಲ್ಲೂ ಆಸ್ತಿಕ ಮನಸ್ಸು, ಸುತರಾಂ ಒಪ್ಪುವುದಿಲ್ಲ. ಹಾಗಾದರೆ ಈ ರೀತಿಯ ಜೀವಿಗಳು ಸೃಷ್ಟಿಯಾಗಲು ಮತ್ತೇನೋ ಕಾರಣವಿರಲೇಬೇಕು. ಪುನರ್ಜನ್ಮವಿಲ್ಲವೆನ್ನುವ, ಇರುವುದೊಂದೇ ಜನ್ಮವೆನ್ನುವ ವಾದಗಳಿಗೆ ಇಂತಹ ನ್ಯೂನತೆಯಿಂದ ಒಡಗೂಡಿದ ಜೀವಜಂತುಗಳ ಸೃಷ್ಟಿಗಳಿಗೆ ಸ್ಪಷ್ಟನೆ ಕೊಡಲಾಗುವುದಿಲ್ಲ.
     ಇನ್ನೊಂದು ವಾದವಿದೆ. ಅದೆಂದರೆ 'ಜೀವಚೈತನ್ಯ ಅನ್ನುವುದು ಶರೀರಕ್ಕೆ ಸಂಬಂಧಿಸಿದುದೇ ಆಗಿದೆ., ಶರೀರದೊಂದಿಗೇ ಹುಟ್ಟುತ್ತದೆ ಮತ್ತು ಶರೀರದೊಂದಿಗೇ ಸಾಯುತ್ತದೆ' ಎಂಬುದೇ ಆಗಿದೆ. ಇಲ್ಲೂ ಸಂದೇಹಗಳು ಬರುತ್ತವೆ. ಈ ಪ್ರಾಣಚೈತನ್ಯ ಶರೀರದೊಂದಿಗೇ ಹುಟ್ಟುವುದಾಗಿದ್ದರೆ, ಶರೀರದೊಂದಿಗೇ ನಷ್ಟವಾಗಬೇಕು. ಅಂದರೆ, ಜೀವಿ ಸತ್ತಾಗ ಶರೀರ ಇರುತ್ತದೆ. ಚೈತನ್ಯವೂ ಇರಬೇಕಿತ್ತಲ್ಲವೇ? ಇದೆಂತಹ ಚೋದ್ಯ! ಈ ಚೈತನ್ಯ ಅನ್ನುವುದು ಶರೀರದ ಗುಣವೇ ಅಥವ ಹೊರಗಿನ ಮತ್ತಾವುದೋ ಸಂಗತಿಯೋ? ಶರೀರ ಜಡವಸ್ತುವಾಗಿದೆ. ಆದರೆ ಈ ಚೈತನ್ಯ ಜಡವಸ್ತುವಲ್ಲ. ಜಡವಸ್ತುವಿನಿಂದ ಚೈತನ್ಯಮಯಿ ವಸ್ತು ಜನಿಸುವುದಾದರೂ ಹೇಗೆ? ಅದು ಶರೀರದಿಂದ ಹೊರತಾದ ಸಂಗತಿಯಾಗಿದ್ದು ಶರೀರದೊಂದಿಗೆ ಸಂಯೋಜಿಸಲ್ಪಟ್ಟಿದೆಯೆಂದರೆ ಶರೀರಕ್ಕೂ ಅದಕ್ಕೂ ಸಂಬಂಧ ಹೇಗೆ? ಶರೀರಕ್ಕಾದರೋ ವಿವೇಚನಾಶಕ್ತಿಯಿಲ್ಲ, ಆದರೆ ಈ ಪ್ರಾಣಚೈತನ್ಯ ವಿವೇಚಿಸಬಲ್ಲದುದಾಗಿದೆ. ಹೇಗೆ ತರ್ಕಿಸಿದರೂ ಶರೀರದ ಭಾಗವಾಗಿ ಈ ಜೀವಾತ್ಮ ಹುಟ್ಟುತ್ತದೆ, ಶರೀರದೊಂದಿಗೇ ಸಾಯುತ್ತದೆ ಎಂಬುದು ನಿಲ್ಲುವಂತಹ ವಾದವಾಗದು.
     ಈ ಜೀವಾತ್ಮ ಅನ್ನುವುದು ದೇವರಿಂದ ಹೊಸದಾಗಿ ಸೃಷ್ಟಿಸಿದುದಲ್ಲ, ಶೂನ್ಯದಿಂದ ಸೃಷ್ಟಿಯಾದುದಲ್ಲ, ಜಡ ಪ್ರಕೃತಿಯ ನಿರ್ಮಿತವಲ್ಲ, ಪರಮಾತ್ಮನ ಅಂಶವಲ್ಲ, ಜೀವಿಗಳ ಎಲ್ಲಾ ಚಟುವಟಿಕೆಗಳಿಗೂ ದೇವರೇ ಹೊಣೆಯಲ್ಲ, ಹುಟ್ಟಿನ ರೀತಿಗೆ ದೇವರು ಕಾರಣನಲ್ಲ, ಶರೀರದ ಹುಟ್ಟಿನೊಂದಿಗೇ ಬರುವುದಲ್ಲವೆಂದರೆ ಅದರ ಅಸ್ತಿತ್ವಕ್ಕೆ ವಿವರಣೆ ಕೊಡುವುದಾದರೂ ಹೇಗೆ? ಒಂದು ಸಮಂಜಸವೆನ್ನಿಸುವ ವಾದವಿದೆ. ಜೀವಾತ್ಮ ಅನ್ನುವುದು ಪರಮಾತ್ಮ ತತ್ತ್ವದಂತೆ ಅನಾದಿ ಮತ್ತು ಅನಂತವಾದುದು ಎಂಬ ಈ ವಾದಕ್ಕೆ ಮೇಲಿನ ತರ್ಕಗಳು ಪುಷ್ಟಿ ನೀಡುತ್ತವೆ. ವಿಭಿನ್ನ ರೀತಿಯ ಹುಟ್ಟು, ಸ್ಥಿತಿ-ಗತಿಗಳಿಗೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಸಮಂಜಸವೆನ್ನುವಂತಹ ವಿವರಣೆ ಕೊಡುತ್ತವೆ. ಜೀವಾತ್ಮನ ಕುರಿತು ಮತ್ತಷ್ಟು ವಿಷಯಗಳ ಬಗ್ಗೆ ಹಾಗೂ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳ ಕುರಿತು ಇನ್ನೊಂದು ಲೇಖನದಲ್ಲಿ ಚರ್ಚಿಸೋಣ.
ಅರಿವಿರದ ನರನಿರುವನೆ ದುರಿತದಿಂ ದೂರ
ಎಡವಿ ಜಾರುವನು ಕವಿಯೆ ಗೂಢಾಂಧಕಾರ |
ಬೆಳಗೀತು ಬಾಳು ಪಸರಿಸಲರಿವ ಬೆಳಕು
ವಿಕಸಿಸುವ ಹಾದಿ ತೋರೀತು ಮೂಢ ||
-ಕ.ವೆಂ.ನಾಗರಾಜ್.
**************
ದಿನಾಂಕ 11.05.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

5 ಕಾಮೆಂಟ್‌ಗಳು:

 1. ಇಂತಹ ವಿಷಯಗಳ ಬಗೆ ತರ್ಕ ಮಾಡಿದಷ್ಟೂ ಗೊಂದಲ ಹೆಚ್ಚಾಗುತ್ತ ಹೋಗುತ್ತದೆ .. ಕೆಲವು ರೀತಿಯಲ್ಲಿ ಈ ತರಹದ ತರ್ಕಗಳು ಮನಸ್ಸಿಗೆ ಒಪ್ಪಿಗೆಯೆನಿಸುವುದು ಒಂದೇ ಮನಸ್ತಿತಿಯ ಜನರಿಗೆ. ವಿರುಧ್ಧ ಭಾವದವರಿಗೆ ಇಂಥ ತರ್ಕಗಳನ್ನು ಮಾಡುವುದೇ ತಪ್ಪೆನಿಸಬಹುದು.. ಉತ್ತಮ ಲೇಖನ. ಮುಂದುವರೆಸುವುದು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪ್ರತಿಕ್ರಿಯೆಗೆ ವಂದನೆಗಳು. ನಿಮ್ಮ ಅನಿಸಿಕೆ ಸರಿ. ತರ್ಕ ಮಾಡುವುದು ಇನ್ನೊಬ್ಬರನ್ನು ಒಪ್ಪಿಸುವ ಸಲುವಾಗಿಯಾಗಿರದೆ ಸ್ವತಃ ಅರಿಯುವ ದೃಷ್ಟಿಯಿಂದಾದರೆ ಒಳಿತು. ಇದರಿಂದ ಇನ್ನೊಂದು ಉಪಯೋಗವೂ ಇದೆ. ಹೆಚ್ಚು ತಿಳಿದವರಿಂದ ಮಾರ್ಗದರ್ಶನವೂ ಸಿಕ್ಕೀತು! ಸಮಾನ ಮನಸ್ಕರಿಗೆ ಹಿತವಾದರೆ ಸಾಕು, ವಿರುದ್ಧ ಭಾವದವರು ಕಾರಣರಹಿತವಾಗಿ ವಿರೋಧಿಸಿದರೆ ಅದಕ್ಕೆ ಅರ್ಥವಿರದು. ಸಕಾರಣಗಳನ್ನು ನೀಡಿದರೆ ಒಪ್ಪಲು ಅಭ್ಯಂತರವಿಲ್ಲ.

   ಅಳಿಸಿ
  2. H A Patil
   ಕವಿ ನಾಗರಾಜರವರಿಗೆ ವಂದನೆಗಳು
   ಈ ಅಂಕಣದಲ್ಲಿ ಜೀವಾತ್ಮದ ಕುರಿತು ಬಹಳ ಗಹನವಾದ ಮತ್ತು ಪ್ರೌಡವಾದ ವಿಚಾರವನ್ನು ನಮಗೆ ನೀಡಿದ್ದೀರಿ, ಅ ಬಗೆಗಿನ ಅರಿವು ನಮಗೆ ಹೆಚ್ಚು ತಿಳಿಯುವಂತೆ ಆಗಿದೆ ಧನ್ಯವಾದಗಳು.

   kavinagaraj
   ವಂದನೆಗಳು, ಪಾಟೀಲರೇ.

   ಅಳಿಸಿ
  3. nageshamysore
   ತಾಳೆ ನೋಡಲು ಆಗುವುದೊ ಬಿಡುವುದೊ ಅದು ಬೇರೆ ವಿಷಯ - ಆದರೆ ಈ ಜೀವಾತ್ಮದ ರೀತಿಯ ಕ್ಲಿಷ್ಟ ವಿಷಯಗಳ ಪರಿಕಲ್ಪನೆಯನ್ನು ಅಧಿಕಾರಯುತ ಸ್ಪಷ್ಟತೆಯಲ್ಲಿ ವಿವರಿಸಿರುವ ರೀತಿ ಕೇವಲ ನಮ್ಮ ಪುರಾತನ ಗ್ರಂಥ / ಜ್ಞಾನ ಭಂಢಾರದಲ್ಲಿ ಮಾತ್ರವೆಂದು ಕಾಣುತ್ತದೆ :-)

   kavinagaraj
   ಅತ್ಯಂತ ಪುರಾತನವಾದರೂ ವೇದಗಳು ಅನೇಕ ವಿಷಯಗಳಲ್ಲಿ ಸ್ಪಷ್ಟ ವಿಚಾರಗಳನ್ನು ಮುಂದಿಟ್ಟಿದೆ. ವೇದವನ್ನು ಆಧಾರವಾಗಿಟ್ಟುಕೊಂಡು ರಚಿತವಾದ ಕೃತಿಗಳಲ್ಲಿ ದ್ವಂದ್ವಗಳು ಕಂಡರೂ ವೇದದಲ್ಲಿ ಆ ದ್ವಂದ್ವ ಕಾಣದಿರುವುದು ವಿಶೇಷವಾಗಿದೆ. ವಂದನೆಗಳು, ನಾಗೇಶರೇ.

   ಅಳಿಸಿ

  4. Subraya Kamath K
   In the book Balveye Belaku by Shivaram Karanth same sentiments are eloberated!

   Kavi Nagaraj
   ಧನ್ಯವಾದಗಳು, ಸುಬ್ರಾಯ ಕಾಮತರೇ. ನಾನು ಅದನ್ನು ಓದಿಲ್ಲ. ವಿಷಯ ತಿಳಿಸಿದ್ದಕ್ಕೆ ವಂದನೆಗಳು. ಕಾರಂತರಂತಹ ಅನುಭಾವಿಗಳ ಮಾತು ತೂಕವಾಗಿರುತ್ತದೆ.

   Abhishek SD Abhi
   nice

   ಅಳಿಸಿ