ಹಿಂದಿನ ಲೇಖನದಲ್ಲಿ, "ತನ್ನನ್ನು ತಾನು ಅರಿಯುವ, ಸತ್ಯವನ್ನು ತಿಳಿಯುವ ಬಯಕೆ ನಮ್ಮೊಳಗೆ ಅಂತರ್ಗತವಾಗಿದೆ. ಸತ್ಯ ತಿಳಿಯಬೇಕೆಂಬ ಬಯಕೆ ಇದೆಯೆಂದರೆ ಆ ಸತ್ಯ ಅನ್ನುವುದು ಇದೆ ಎಂದು ಅರ್ಥ. ಇರುವ ಸತ್ಯವನ್ನು ತಿಳಿಯಲು ಮತಿ ಸಹಾಯಕವಾಗುತ್ತದೆ. ಮತಿಗೆ ಸತ್ಯವಿದೆಯೆಂದು ನಂಬುವ ಶ್ರದ್ಧೆ/ನಂಬಿಕೆ ಸಾಥ್ ನೀಡುತ್ತದೆ. ಶ್ರದ್ಧೆಗೆ ನಿಷ್ಠೆ ಬೆನ್ನೆಲುಬಾಗುತ್ತದೆ" ಎಂಬ ಬಗ್ಗೆ ಚರ್ಚಿಸಿದೆವು. ಒಬ್ಬ ಸತ್ಯಾನ್ವೇಷಿ ಸಾಧಕ ಮುಂದುವರೆದಂತೆ ಅಂತರ್ಮುಖಿಯಾಗುತ್ತಾ ಹೋಗುತ್ತಾನೆ. ಬಹಿರ್ಮುಖವಾದ ಸಂಗತಿಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ವಿರಕ್ತಿಯೆನ್ನಬಹುದಾದ ಈ ಸ್ಥಿತಿ ಯಾವುದೇ ಬಾಹ್ಯ ಒತ್ತಡದಿಂದ, ಬಲವಂತದಿಂದ ಬಂದದ್ದಾಗಿರದೆ, ತನ್ನ ಸ್ವ ಇಚ್ಛೆಯಿಂದ ತಾನು ಸತ್ಯವಿಚಾರಕ್ಕೆ ಕೊಟ್ಟ ನಿಷ್ಠೆಯಿಂದ ಬಂದಿರುವಂತಹದಾಗಿರುತ್ತದೆ. ಪರಮಾತ್ಮ ತತ್ತ್ವಕ್ಕೆ ಸಮೀಕರಿಸಿಕೊಳ್ಳುವ ಈ ಪ್ರಯತ್ನ ಅವನನ್ನು 'ನಾನು', 'ನೀನು', 'ಅವನು', ಇತ್ಯಾದಿಗಳಿಂದ ದೂರ ಮಾಡಿಬಿಡುತ್ತದೆ. ಈ ನಾನು, ನೀನುಗಳು ಹೋದಾಗ ಏನೂ ಇರುವುದಿಲ್ಲ! ಆನಂದಮಯ ಸ್ಥಿತಿಯೆನ್ನಬಹುದಾದ ಈ ಸ್ಥಿತಿ ಸಾಧಕನೊಬ್ಬನ ಅತ್ಯುನ್ನತ ಸಾಧನೆಯಾಗಿರುತ್ತದೆಂದು ಉಪನಿಷತ್ತಿನಲ್ಲಿ ಹೇಳಲಾಗಿದೆ.
ಸುಖವನಾಳೆ ಭೋಗಿ ಮನವನಾಳೆ ಯೋಗಿ
ಸುಖವನುಂಡೂ ದುಃಖಪಡುವವನೆ ರೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ಸುಖವ ಬಯಸದಿರೆ ದುಃಖವೆಲ್ಲಿ ಮೂಢ ||
ಜೀವಿ ಸದಾ ಆನಂದವನ್ನು ಹಿಂಬಾಲಿಸುತ್ತಲೇ ಇರುತ್ತದೆ, ಸಿಗುತ್ತದೋ, ಇಲ್ಲವೋ ಅದು ಬೇರೆ ವಿಷಯ, ಆದರೆ ಆನಂದ ಪಡೆಯುವ ಪ್ರಯತ್ನ ಮಾತ್ರ ಸದಾ ಇರುತ್ತದೆ. ನಮ್ಮ ಎಲ್ಲಾ ಕ್ರಿಯೆಗಳು, ಆಸೆಗಳು, ಗುರಿಗಳ ಹಿಂದೆ ಆನಂದ ಪಡೆಯುವುದೇ ಉದ್ದೇಶವಾಗಿರುತ್ತದೆ. ವಿದ್ಯಾವಂತನಾಗಬೇಕು. ಒಳ್ಳೆಯ ಹೆಂಡತಿ/ಗಂಡ ಸಿಗಬೇಕು, ದೊಡ್ಡ ಮನೆ ಕಟ್ಟಿಸಬೇಕು, ನೌಕರಿಯಲ್ಲಿ ಬಡ್ತಿ ಸಿಗಬೇಕು, ದೊಡ್ಡ ಕಂಪೆನಿಯ ಮಾಲಿಕನಾಗಬೇಕು, ಹಣ ಬೇಕು, ಅಧಿಕಾರ ಬೇಕು, ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು, ಪ್ರಧಾನ ಮಂತ್ರಿ ಆಗಬೇಕು, ಇಡೀ ಜಗತ್ತು ನನ್ನ ಅಧೀನದಲ್ಲಿ ಬರಬೇಕು, ದೊಡ್ಡ ವ್ಯಕ್ತಿಯೆನ್ನಿಸಿಕೊಳ್ಳಬೇಕು, ಇತ್ಯಾದಿ ಬೇಕುಗಳಿಗೆ ಮಿತಿ ಇದೆಯೇ? ಇವೆಲ್ಲವೂ ಸಿಕ್ಕರೆ ನಮಗೆ ಆನಂದ ಸಿಗುತ್ತದೆ ಎಂದು ನಾವು ಭಾವಿಸುವುದಿಲ್ಲವೇ? ಆನಂದ ಸಿಗುತ್ತದೆಯೆಂಬ ಕಾರಣದಿಂದ ಈ ಜಗತ್ತಿನಲ್ಲಿ ಸೃಷ್ಟಿಯ ಎಲ್ಲಾ ಸಂಗತಿಗಳೂ, ಎಲ್ಲಾ ಕ್ರಿಯೆಗಳೂ ಮುಂದುವರೆಯುತ್ತಿವೆ. ಆದ್ದರಿಂದ ಈ ಆನಂದ ಅನ್ನುವುದು ಏನು ಎಂದು ತಿಳಿಯುವುದು ಅವಶ್ಯಕವಾಗಿದೆ.
ಈ ಬ್ರಹ್ಮಾಂಡದ ಸೃಷ್ಟಿ, ಸ್ಥಿತಿ. ಲಯಗಳಿಗೆ, ವಿಕಾಸ ಮತ್ತು ಹಿನ್ನಡೆಗಳಿಗೆ, ಸಕಲ ಚಟುವಟಿಕೆಗಳ ಹಿಂದಿನ ಪ್ರೇರಕ ಶಕ್ತಿಯೇ ಆನಂದವಾಗಿದೆ. ಈ ಆನಂದವೇ ತನ್ನ ಉನ್ನತ ಸ್ಥಿತಿಯನ್ನು ತಲುಪಲು, ಉಚ್ಛ್ರಾಯ ಮಟ್ಟವನ್ನು ತಲುಪಲು ಪ್ರಯತ್ನಿಸುತ್ತಿರುತ್ತದೆ. ಜೀವಿಗಳಲ್ಲಿನ ಸುಪ್ತ ಬಯಕೆಗಳಿಗೆ ಮತ್ತು ಆ ಕಾರಣದಿಂದ ಮಾಡಲಾಗುವ ಚಟುವಟಿಕೆಗಳಿಗೆ ಇದೇ ಮೂಲವಾಗಿದೆ. ಜೀವ ವಿಕಾಸಕ್ಕೆ ಇದೇ ಹೇತುವಾಗಿದೆ. ಪ್ರತಿಯೊಂದರ ಹಿಂದೆ ಆನಂದವಿದೆ ಮತ್ತು ಆನಂದ ಮಾತ್ರ ಇದೆ.
ನಾವು ಕ್ರಮೇಣ ನಮ್ಮ ಎಲ್ಲಾ ಕ್ರಿಯೆಗಳೂ ಆನಂದದ ಅಪೇಕ್ಷೆಯಿಂದ ಜರುಗುತ್ತವೆ ಎಂಬ ಅಂಶವನ್ನು ಒಪ್ಪುವ ಹಂತಕ್ಕೆ ಬಂದೆವು. ಇದು ಕೇವಲ ವಾಸ್ತವಿಕ ಸತ್ಯ ಮಾತ್ರವಾಗಿರದೆ ಮಾನಸ ಶಾಸ್ತ್ರದ ಪ್ರಕಾರವೂ ಸತ್ಯವಾಗಿದೆ. ಇಷ್ಟು ತಿಳಿದಾಕ್ಷಣ ಎಲ್ಲವನ್ನೂ ತಿಳಿದಂತಾಗಲಿಲ್ಲ. ದಿನನಿತ್ಯದ ಜೀವನದಲ್ಲಿ ಆನಂದವೆಂದರೆ ಕಷ್ಟಪಟ್ಟು ಮಾಡಿದ ಪ್ರಯತ್ನದಿಂದ ಸಿಗುವ ಸಾಧನೆ ಎಂದುಕೊಳ್ಳುತ್ತೇವೆ. ವಿಚಿತ್ರವೆಂದರೆ, ಹಲವರು ಹಲವು ರೀತಿಯ ಸಾಧನೆಗಳನ್ನು ಗುರಿಯಾಗಿರಿಸಿಕೊಂಡು ಮುಂದುವರೆಯುತ್ತಾರೆ ಮತ್ತು ಅದರಲ್ಲಿ ಆನಂದವನ್ನು ಕಾಣಬಯಸುತ್ತಾರೆ. ಆದರೆ, ವಾಸ್ತವತೆಯ ವ್ಯಂಗ್ಯವೆಂದರೆ ಆನಂದ ಅನ್ನುವುದು ಎಲ್ಲಾ ಸಂಗತಿಗಳಲ್ಲಿ ಇರುವಂತೆ ಗೋಚರವಾದರೂ ಅದನ್ನು ಎಲ್ಲರೂ ಆನಂದವೆಂದು ಪರಿಗಣಿಸಲಾರರು. ಸಾಧನೆಯಿಂದ ಆನಂದ ಸಿಗುವುದಾದರೂ ಅದನ್ನೇ ಪರಮ ಎಂದು ಮನಸ್ಸು ಒಪ್ಪಲಾರದು. ಅದಕ್ಕೇ ಆನಂದ ಎಲ್ಲಿದೆ ಎಂಬ ಬಗ್ಗೆ ಮನಸ್ಸಿನಲ್ಲಿ ಸಂದೇಹ ಉದ್ಭವಿಸುತ್ತದೆ.
ಈ ಆನಂದ ಅನ್ನುವುದು ನಮ್ಮಲ್ಲಿಯೇ ಇದೆಯೇ ಅಥವ ಬೇರೆ ಯಾರಲ್ಲಾದರೂ ಇದೆಯೇ ಅಥವ ಯಾವುದರಲ್ಲಾದರೂ ಇದೆಯೇ? ಆನಂದ ಅನ್ನುವುದು ನಮ್ಮ ಮನಸ್ಸಿನ ಸ್ಥಿತಿ ಎಂದು ಹೇಳುವುದನ್ನು ಕೇಳಿದ್ದೇವೆ. ಮನೋವಿಜ್ಞಾನಿಗಳೂ ಇದನ್ನೇ ಹೇಳುತ್ತಾರೆ. ಆನಂದ ಅನ್ನುವುದು ನಮ್ಮ ಮನಸ್ಸಿನಲ್ಲೇ ಇರುವುದಾದರೆ ಅದನ್ನು ಹೊರಗೆ ಹುಡುಕಬೇಕಾದರೂ ಏಕೆ? ಆನಂದವನ್ನು ಹೊರಗಿನ ಸಂಗತಿಗಳಲ್ಲಿ, ಹೊರಗಿನ ವಿಷಯಗಳಲ್ಲಿ ಹುಡುಕುತ್ತೇವೆ ಎಂಬ ಸಂಗತಿಯೇ, ನಮ್ಮ ಮನಸ್ಸು ಮನಸ್ಸಿನಿಂದ ತೃಪ್ತವಾಗಿಲ್ಲ ಮತ್ತು ನಮ್ಮ ಮನಸ್ಸಿನಲ್ಲಿ ಏನೋ ಕೊರತೆ ಇದೆ ಎಂಬುದನ್ನು ತೋರಿಸುತ್ತದೆಯಲ್ಲವೇ? ಆನಂದವನ್ನು ತನ್ನಿಂದ ತಾನೇ ಕಾಣಲಾಗದ ಮನಸ್ಸಿನ ಅಸಾಮರ್ಥ್ಯವೇ, ಕೊರತೆಯೇ ಅದನ್ನು ಹೊರಗೆ ಹುಡುಕುವಂತೆ ಮಾಡುವ ಮೂಲ ಕಾರಣವಾಗಿದೆ. ಮನಸ್ಸಿನ ಚಂಚಲ ಸ್ಥಿತಿ, ನಮ್ಮ ಸುತ್ತಲಿನ ಪ್ರಪಂಚದಲ್ಲಿರುವ ಸಂಗತಿಗಳಲ್ಲಿ ಆನಂದವನ್ನು ಅರಸಬಯಸುವ ಮನೋಸ್ಥಿತಿ ಮನಸ್ಸೇ ಆನಂದದ ಮೂಲ ಎಂಬ ತತ್ವದಲ್ಲಿ ಏನೋ ದೋಷವಿದೆಯೆಂದು ಅನ್ನಿಸುವಂತೆ ಮಾಡುತ್ತದೆ.
ಆನಂದದ ಮೂಲ ಈ ಪ್ರಪಂಚದಲ್ಲಿರುವ ಸಂಗತಿಗಳಲ್ಲಿದೆಯೇ ಎಂದು ನೋಡಿದರೆ ಅಲ್ಲೂ ನಿರಾಸೆಯೇ ಕಾಣಬರುತ್ತದೆ. ಇಲ್ಲಿನ ಯಾವುದೇ ಸಂಗತಿ ಪ್ರತಿಯೊಬ್ಬರ ಗಮನವನ್ನು ಏಕಕಾಲದಲ್ಲಿ ಮತ್ತು ಸದಾಕಾಲದಲ್ಲಿ ಸೆಳೆಯುವಂತಹದು ಅಲ್ಲ. ಆದ್ದರಿಂದ ಈ ಆನಂದ ಅನ್ನುವುದು ಪ್ರಾಪಂಚಿಕ ಸಂಗತಿಗಳಲ್ಲಿ ಇದೆ ಎಂದು ಭಾವಿಸುವುದು ಕಷ್ಟ. ಒಬ್ಬೊಬ್ಬರಿಗೆ ಒಂದೊಂದು ವಿಷಯದಲ್ಲಿ ಆಸಕ್ತಿಯಿದ್ದರೂ, ಆನಂದ ಸಿಕ್ಕರೂ ಅದು ಸದಾ ಕಾಲಕ್ಕೆ ಇರುತ್ತದೆಯೆಂದು ಹೇಳಲಾಗುವುದಿಲ್ಲ. ಆದರೆ, ಈ ಆನಂದ ಅನ್ನುವುದು ಎಲ್ಲೋ ಇರಲೇಬೇಕಲ್ಲಾ! ಏಕೆಂದರೆ ಮನಸ್ಸು ಅದಕ್ಕಾಗಿಯೇ ಚಡಪಡಿಸುತ್ತಿರುತ್ತದೆ. ಅದು ನಮ್ಮ ಮನಸ್ಸಿನೊಳಗೂ ಇಲ್ಲ, ಹೊರಗೂ ಇಲ್ಲವೆಂದರೆ ಅದು ರಹಸ್ಯವೇ ಸರಿ. ಸಮಗ್ರ ವಿಶ್ಲೇಷಣೆಯಿಂದ ಆನಂದ ಎಲ್ಲಿದೆಯೆಂದು ಹೇಳುವುದೂ ಸುಲಭವಲ್ಲ. ಸಾಂದರ್ಭಿಕವಾಗಿ ಒಳಮನಸ್ಸಿನ ಸ್ಥಿತಿ ಮತ್ತು ಹೊರಗಿನ ಸಂಗತಿಯ ತುಲನೆ ಮಾತ್ರ ಹಾಗೆ ಮಾಡಲು ಸಾಧ್ಯವಾಗುತ್ತದೆ. ಹಾಗಾದರೆ ಈ ಆನಂದವಾದರೂ ಎಲ್ಲಿರಬಹುದು?
ಆನಂದ ಅನ್ನುವುದನ್ನು ಒಂದು ಸೀಮಿತ ವ್ಯಾಪ್ತಿಯ ವಸ್ತುವಾಗಿ ನೋಡುವುದೇ ಸರಿಯಾಗಲಾರದು. ಅದು ಮನಸ್ಸಿನ ಸ್ಥಿತಿಯೆಂದರೆ, ಅದು ಸೀಮಿತವಾದ ಸಂಗತಿಯಾಗಿಬಿಡುತ್ತದೆ. ಹೊರಗಿನ ಪ್ರಾಪಂಚಿಕವಾದ ಯಾವುದೇ ಸಂಗತಿ ಅಥವ ವಿಷಯ ಸಹ ಸೀಮಿತ ವ್ಯಾಪ್ತಿಯದಾಗಿರುತ್ತದೆ ಅರ್ಥಾತ್ ಆ ಆನಂದ ಶಾಶ್ವತ ಅಥವ ಸದಾ ಕಾಲ ಇರುವಂತಹದಲ್ಲ. ಸೀಮಿತ ವ್ಯಾಪ್ತಿಯ ಮನಸ್ಸು ಮತ್ತು ಸೀಮಿತ ವ್ಯಾಪ್ತಿಯ ಪ್ರಾಪಂಚಿಕ ಸಂಗತಿ ಎರಡೂ ಸೇರಿದರೂ ಸಹ ಒಟ್ಟು ಪರಿಣಾಮ ಸೀಮಿತವಾದದ್ದೇ ಆಗಿರುತ್ತದೆ. ಸೀಮಿತ ವ್ಯಾಪ್ತಿಯ ಎರಡು ಸಂಗತಿಗಳನ್ನು ಸೇರಿಸಿದರೆ ಅಥವ ಅಸಂಖ್ಯ ಸೀಮಿತ ವ್ಯಾಪ್ತಿಯ ಸಂಗತಿಗಳನ್ನೆಲ್ಲಾ ಸೇರಿಸಿದರೆ ಆಗಲೂ ಸಹ ಅದು ಅಸೀಮಿತವಾಗುವುದಿಲ್ಲ. ಇಡೀ ಪ್ರಪಂಚವನ್ನೇ ಒಟ್ಟಾಗಿಸಿದರೂ ಅದೂ ಸೀಮಿತವೇ ಆಗಿರುತ್ತದೆ. ಐಹಿಕ ಸುಖ-ಭೋಗಗಳಿರಬಹುದು, ಹಣ-ಸಂಪತ್ತುಗಳಿರಬಹುದು, ಅಧಿಕಾರ-ಹೆಸರು-ಕೀರ್ತಿಗಳಿರಬಹುದು, ಏನೇ ಇರಬಹುದು, ಅವುಗಳಲ್ಲಿ ಆನಂದ ಸಿಕ್ಕರೂ ಅದು ಶಾಶ್ವತವೆಂದು ಯಾರೂ ಹೇಳಲಾರರು. ಯಾರಾದರೂ ಸೀಮಿತವಾದ ಆನಂದ ಬಯಸುತ್ತಾರೆಯೇ? ಎಲ್ಲರಿಗೂ ನಿರಂತರವಾದ ಮತ್ತು ಸದಾ ಇರುವ ಆನಂದವೇ ಬೇಕು! ನಮ್ಮೊಳಗಿನ ಒಳತುಡಿತವೇ ಸದಾ ಆನಂದ ನಮಗೆ ಇರಬೇಕೆಂಬುದು! ಇದೇ ನಮ್ಮ ಪ್ರಶ್ನೆಗೆ, ಆನಂದ ಎಲ್ಲಿದೆಯೆಂಬ ಪ್ರಶ್ನೆಗೆ, ಉತ್ತರಿಸುತ್ತದೆ. ಮನಸ್ಸು ಸೀಮಿತವಾದ ಆನಂದದಿಂದ ತೃಪ್ತಗೊಳ್ಳುವುದೇ ಇಲ್ಲ. ನೈಜ ಆನಂದ ಅನ್ನುವುದು ಅಸೀಮಿತವಾದದ್ದಾಗಿದೆ, ಅದನ್ನು ಸೀಮಿತ ಸಂಗತಿಗಳಲ್ಲಿ ಹುಡುಕಿದರೆ ಸಿಗಲಾರದು!
ನೈಜ ಆನಂದಕ್ಕೆ ಮಿತಿಯಿಲ್ಲ, ಅಂತ್ಯವಿಲ್ಲ ಅನ್ನುವುದಾದರೆ, ಅದು ಮನಸ್ಸಿನ ಒಳಗೆ ಮತ್ತು ಯಾವುದೇ ಸೀಮಿತ ವ್ಯಾಪ್ತಿಯ ವಸ್ತು/ಸಂಗತಿಗಳಲ್ಲಿ ಸಿಗುವುದಿಲ್ಲವೆಂದಾದರೆ ಅದು ಇರುವುದಾದರೂ ಎಲ್ಲಿ? ಅಂತಹ ಆನಂದಕ್ಕೆ ವಿವರಣೆ ಕೊಡುವುದಾಗಲೀ, ವಿವರಿಸುವುದಾಗಲೀ ಅಶಕ್ಯವೇ ಸರಿ. ಅದನ್ನು ಆಧ್ಯಾತ್ಮಿಕ ಪರಿಪೂರ್ಣತೆಯ ಸ್ಥಿತಿ ಎಂದಷ್ಟೇ ಹೇಳಬಹುದೇನೋ! ಅದನ್ನು ದಾರ್ಶನಿಕರು ಸಂಪೂರ್ಣತೆ, ಅತ್ಯುನ್ನತ ಸ್ಥಿತಿ ಎಂದರೆ, ಧಾರ್ಮಿಕರು ದೇವರು ಎನ್ನುತ್ತಾರೆ. ಮನೋಶಾಸ್ತ್ರಜ್ಞರು ಅದನ್ನು ಪರಮೋಚ್ಛ ಭಾವ ಎಂದಾರು! ಸಚ್ಚಿದಾನಂದ ಎಂದೂ ದೇವರನ್ನು ಸಂಬೋಧಿಸುತ್ತಾರೆ. ಸೀಮಿತ ಆನಂದದಿಂದ ಮನಸ್ಸು ತೃಪ್ತಗೊಳ್ಳುವುದಿಲ್ಲವೆಂದಾದರೆ ಅದನ್ನು ಅಸೀಮಿತವಾದ ಅಂತ್ಯವಿಲ್ಲದ ಆನಂದದಲ್ಲಿ, ಸಚ್ಚಿದಾನಂದದಲ್ಲೇ ಕಾಣುವುದನ್ನು ಬಿಟ್ಟು ಬೇರೆ ಮಾರ್ಗವೇ ಇಲ್ಲ.
ಇಂತಹ ಪರಮೋಚ್ಛ ಸ್ಥಿತಿಯನ್ನು ತಲುಪಲು ಸಾಧಕರಿಗೆ ಮಾತ್ರ ಸಾಧ್ಯವಿದೆ. ಆದರೆ, ಅಂತಹ ಸಾಧಕರಾಗಲು ಸಾಮಾನ್ಯರಿಗೂ ಅವಕಾಶವಿದೆ. ಅವಕಾಶವನ್ನು ಬಳಸಿಕೊಳ್ಳದೆ ಜೀವನದ ಜಂಜಾಟದಲ್ಲಿ, ಮಾಯೆಯ ಸುಳಿಯಲ್ಲಿ ಸಿಲುಕಿರುವ ನಮ್ಮಂತಹ ಸಾಮಾನ್ಯರು ಹೊಂದಿರುವಷ್ಟರಲ್ಲೇ ತೃಪ್ತಭಾವ ಹೊಂದಿದರೆ ಮಾತ್ರ ಆನಂದವನ್ನು ಅನುಭವಿಸಲು ಸಾಧ್ಯವಿದೆಯೆಂಬುದು ಸಮಾಧಾನದ ಸಂಗತಿ.
ಆನಂದದ ಬಯಕೆ ನಂದದೆಂದೆಂದು
ಆನಂದವೇನೆಂದು ತಿಳಿಯಬೇಕಿಂದು |
ಸಿಕ್ಕಷ್ಟು ಸಾಲದೆನೆ ಆನಂದವಿನ್ನೆಲ್ಲಿ
ಇರುವುದೆ ಸಾಕೆನಲು ಆನಂದ ಮೂಢ ||
-ಕ.ವೆಂ.ನಾಗರಾಜ್.
**************
ದಿನಾಂಕ 20.04.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:
ವಿಶಾಲ ವ್ಯಾಪ್ತಿ ಇರುವ, ವಿರೋಧ ಪದವಿರದ ಮಹೋನ್ನತ ಸ್ಥಿತಿ ಆನಂದ.
ಪ್ರತ್ಯುತ್ತರಅಳಿಸಿಬಹುಶಃ ಆನಂದವೆಂದರೆ ಸಾಕ್ಷಾತ್ಕಾರ. ಏಕೆಂದರೆ ಸಾಕ್ಷಾತ್ಕಾರಕ್ಕೂ ದೊಡ್ಡಮಟ್ಟದ ಅರ್ಥ ವ್ಯಾಪ್ತಿ ಇದೆ. ವಿಶ್ವ ರೂಪ ದರ್ಶನದಂತೆ...
ತಮ್ಮ ಮಾತೇ ಸರಿ, ಇರುವುದೆ ಸಾಕೆನಲು ಆನಂದ ಮೂಢ!!!
ವಿಶಾಲ ವ್ಯಾಪ್ತಿ ಇರುವ, ವಿರೋಧ ಪದವಿರದ ಮಹೋನ್ನತ ಸ್ಥಿತಿ ಆನಂದ.
ಪ್ರತ್ಯುತ್ತರಅಳಿಸಿಬಹುಶಃ ಆನಂದವೆಂದರೆ ಸಾಕ್ಷಾತ್ಕಾರ. ಏಕೆಂದರೆ ಸಾಕ್ಷಾತ್ಕಾರಕ್ಕೂ ದೊಡ್ಡಮಟ್ಟದ ಅರ್ಥ ವ್ಯಾಪ್ತಿ ಇದೆ. ವಿಶ್ವ ರೂಪ ದರ್ಶನದಂತೆ...
ತಮ್ಮ ಮಾತೇ ಸರಿ, ಇರುವುದೆ ಸಾಕೆನಲು ಆನಂದ ಮೂಢ!!!
ಆನಂದಮೂರ್ತಿ ಬದರೀನಾಥರಿಗೆ ಧನ್ಯವಾದಗಳು.
ಅಳಿಸಿH A Patil
ಅಳಿಸಿಕವಿ ನಾಗರಾಜರವರಿಗೆ ವಂದನೆಗಳು
ಸತ್ ಚಿತ್ ಆನಂದಗಳ ದರ್ಶನವನ್ನು ಈ ಲೇಖನ ಅದ್ಬುತವಾಗಿ ಮಾಡಿ ಕೊಟ್ಟಿದೆ, ನಿಮ್ಮ ಚಿಂತನೆ ಮತ್ತು ಅಭಿವ್ಯಕ್ತಿ ಕ್ರಮಗಳು ಅನನ್ಯ ನಿಮ್ಮ ಲೇಖನಗಳು ಒಂದೊಳ್ಳೆಯ ಉಪನ್ಯಾಸ ಕೇಳಿದ ಅನುಭವ ನೀಡುತ್ತಿವೆ ಧನ್ಯವಾದಗಳು.
kavinagaraj
ನಮಸ್ತೆ, ಪಾಟೀಲರೇ. ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಕೃತಜ್ಞತೆಗಳು.
Roopa Satish
ಅಳಿಸಿKavi Nagaraj Sir... too gud too gud
partha1059
ನಾಗರಾಜರೆ ನಿಮ್ಮ ಬರಹ ಓದಿದೆ . ಚೆನ್ನಾಗಿದೆ .
ಇದನ್ನು ಕೋ ಇನ್ಸಿಡೆಂಟ್ ಅನ್ನಬಹುದೇನೊ. ನಾನು ಈಗ ಪ್ರಾರಂಬಿಸಿರುವ ಅಲೋಕ - ಮಿನಿಕಾದಂಬರಿಯ ಕಡೆಯ ಪುಟ ಇಂತಹುದೇ ದುಃಖ ಆನಂದ ಗಳ ಹುಡುಕುವಿಕೆ ಬಗ್ಗೆ ಬರೆದಿದ್ದೇನೆ. ಆದರೆ ನನ್ನದೇ ರೀತಿಯಲ್ಲಿ . ವಿಭಿನ್ನವಾಗಿ .
ನಿಮ್ಮ ಸಲಹೆ ಹಾಗು ಬೆಂಬಲದ ನಿರೀಕ್ಷೆಯಲ್ಲಿ
ಪಾರ್ಥಸಾರಥಿ
kavinagaraj
ಪಾರ್ಥರವರೇ, ಸಮಾನ ಮನಸ್ಕರ ಚಿಂತನೆಗಳು ಸಮಾನವಾಗಿರುತ್ತವೆ ಎಂಬುದಕ್ಕೆ ಇದೇ ಉದಾಹರಣೆಯಾಗಿದೆ. ಶುಭವಾಗಲಿ.