ಒಡೆದ ಆಕ್ರೋಶದ ಕಟ್ಟೆ
ನ್ಯಾಯಾಲಯದಲ್ಲಿ ವಿಚಾರಣೆಯಿದ್ದಾಗ ನಮ್ಮನ್ನು ಕಾರಾಗೃಹದಿಂದ ಪೋಲಿಸ್ ವ್ಯಾನಿನಲ್ಲಿ ಭದ್ರತೆಯೊಂದಿಗೆ ಕರೆದೊಯ್ಯಲಾಗುತ್ತಿತ್ತು. ದಾರಿಯುದ್ದಕ್ಕೂ 'ಎಲ್ಲಿಗಪ್ಪ ಎಲ್ಲಿಗೆ? ಇಂದಿರಮ್ಮನ ಜೈಲಿಗೆ', 'ತುರ್ತು ಪರಿಸ್ಥಿತಿಗೆ ಧಿಕ್ಕಾರ', ಇತ್ಯಾದಿ ಘೋಷಣೆಗಳನ್ನು ಮಾಡುತ್ತಾ ಹೋಗುತ್ತಿದ್ದೆವು.ಆಗ ಭಾರತ ರಕ್ಷಣಾ ಕಾನೂನು (ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್) ಅನ್ನು 'ಡಿಫೆನ್ಸ್ ಆಫ್ ಇಂದಿರಾ ರೂಲ್ಸ್' ಎಂತಲೂ ಆಂತರಿಕ ರಕ್ಷಣಾ ನಿರ್ವಹಣಾ ಕಾಯದೆ (ಮೈಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ ಆಕ್ಟ್)'ಮೀಸಾ' ಅನ್ನು 'ಮೈಂಟೆನೆನ್ಸ್ ಆಫ್ ಇಂದಿರಾ ಸಂಜಯ್ ಆಕ್ಟ್' ಎಂತಲೂ ಅಪಹಾಸ್ಯ ಮಾಡಲಾಗುತ್ತಿತ್ತು. ಮೀಸಾ ಪ್ರಕಾರ ಯಾರನ್ನೇ ಆಗಲಿ ಯಾವುದೇ ವಿಚಾರಣೆಯಿಲ್ಲದೆ ಎರಡು ವರ್ಷಗಳವರೆಗೆ ಬಂಧನದಲ್ಲಿಡಲು ಅವಕಾಶವಿತ್ತು. ನೂರಾರು ಜನರನ್ನು ಅದರಂತೆ ಬಂಧಿಸಿಡಲಾಗಿತ್ತು.ಒಮ್ಮೆ ನ್ಯಾಯಾಲಯದ ಕಲಾಪ ಮುಗಿದು ನಮ್ಮನ್ನು ಜೈಲಿಗೆ ಕರೆದುಕೊಂಡು ಹೋಗುವ ವೇಳೆಗೆ ಮಧ್ಯಾಹ್ನ 1-30 ಆಗಿತ್ತು. ನಾವು ಹನ್ನೆರಡು ಜನ ಬಂದಿಗಳಿದ್ದೆವು. ಬರುವಾಗ ಮೂವರು ಪೋಲಿಸರು ನಮ್ಮನ್ನು ಕರೆತಂದಿದ್ದರು. ವಾಪಸು ಹೋಗಲು ನಾವು ವ್ಯಾನು ಹತ್ತಲು ನೋಡಿದರೆ ವ್ಯಾನಿನ ಭರ್ತಿ ಪೋಲಿಸರು ಇದ್ದು ನಮ್ಮನ್ನು ಅವರ ಬೂಟುಗಾಲುಗಳ ಮುಂದೆ ಕೆಳಗೆ ಕುಳಿತುಕೊಳ್ಳಲು ಹೇಳಿದರು. ನಮ್ಮಲ್ಲಿಬ್ಬರು ಆಗಲೇ ವ್ಯಾನು ಹತ್ತಿದ್ದರು. ನಾನು ಅವರ ಕಾಲುಗಳ ಮುಂದೆ ಕುಳಿತುಕೊಳ್ಳುವುದಿಲ್ಲವೆಂದೂ ಸೀಟಿನ ಮೇಲೆ ಕೂರಿಸಿ ಕರೆದೊಯ್ಯುವುದಾದರೆ ಮಾತ್ರ ವ್ಯಾನು ಹತ್ತುತ್ತೇನೆಂದೂ ಇಲ್ಲದಿದ್ದರೆ ಹತ್ತುವುದಿಲ್ಲವೆಂದು ವ್ಯಾನಿನ ಕೆಳಗೆ ನೆಲದ ಮೇಲೆ ಕುಳಿತುಬಿಟ್ಟೆ. ಇಬ್ಬರು ನನ್ನನ್ನು ಅನುಸರಿಸಿ ನನ್ನೊಂದಿಗೆ ನೆಲದ ಮೇಲೆ ಕುಳಿತರು. ಉಳಿದವರು ನಿಂತಿದ್ದರು. ಆಗ ಸಬ್ ಇನ್ಸ್ ಪೆಕ್ಟರ್ ಒಬ್ಬರು ನನ್ನ ರಟ್ಟೆ ಹಿಡಿದು ವ್ಯಾನಿನ ಒಳಗೆ ದಬ್ಬಲು ಹೋದಾಗ ನಾನು ಸಿಟ್ಟು ತಡೆಯದೆ ತಿರುಗಿ ನಿಂತು ಅವರ ಕಪಾಳಕ್ಕೆ ಬಾರಿಸಿಬಿಟ್ಟೆ. ಪೋಲಿಸರಿಂದ ಅದುವರೆಗೆ ಅನುಭವಿಸಿದ ಕಿರುಕುಳದಿಂದ ಬೇಸತ್ತಿದ್ದ ನನ್ನಲ್ಲಿ ಮಡುಗಟ್ಟಿದ್ದ ಆಕ್ರೋಶ ಭುಗಿಲೆದ್ದು ಆಗ ಹೊರಹೊಮ್ಮಿತ್ತು. ನನ್ನ ಜೊತೆಗಿದ್ದವರೂ ಕೂಗಾಡಲು ಪ್ರಾರಂಭಿಸಿದರು. ಊಟದ ಸಮಯವಾಗಿದ್ದು ಹತ್ತಿರದಲ್ಲಿದ್ದ ಜಿಲ್ಲಾಧಿಕಾರಿ ಮತ್ತು ಇತರ ಕಛೇರಿಗಳಿಂದ ಹೊರಬರುತ್ತಿದ್ದ ನೌಕರರು, ವಕೀಲರುಗಳು, ಜನರು ಗುಂಪುಕೂಡಿದರು.ದೊಡ್ಡ ಗುಂಪೇ ಸೇರಿಬಿಟ್ಟಿತು. ನನ್ನ ಸಹೋದ್ಯೋಗಿಗಳಾಗಿದ್ದ ಜಿಲ್ಲಾಧಿಕಾರಿ ಕಛೇರಿ ನೌಕರರು 'ಹೇಗಿದ್ದ ನಾಗರಾಜ ಹೇಗಾಗಿಬಿಟ್ಟ' ಎಂಬಂತೆ ನೋಡುತ್ತಿದ್ದರು. ನನ್ನ ತಂದೆಯವರೂ ದೂರದಿಂದ ನನ್ನನ್ನು ನೋಡುತ್ತಿದ್ದವರು ಹತ್ತಿರ ಬಂದು ಗಾಬರಿಯಿಂದ 'ರಾಜೂ, ರಾಜೂ' ಎನ್ನುತ್ತಿದ್ದರು. ಪೇದೆಯೊಬ್ಬ ಅವರನ್ನು ದೂರ ತಳ್ಳಿದಾಗ ಅವರು ಬೀಳುವಂತಾಗಿದ್ದು ಕಂಡು ನನ್ನ ಹೊಟ್ಟೆಯಲ್ಲಿ ತಳಮಳವಾಯಿತು. ಗಲಾಟೆ ಕೇಳಿ ಅಲ್ಲಿಗೆ ಧಾವಿಸಿದ ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ಇನ್ನೊಂದು ವ್ಯಾನು ತರಿಸಿದಾಗಲೇ ನಾವು ಹೊರಡಲನುವಾಗಿದ್ದು. ಆ ಸಂದರ್ಭದಲ್ಲಿ ನಮ್ಮೊಡನೆ ಬಂದಿಯಾಗಿದ್ದ ಆರೆಸ್ಸೆಸ್ ಪ್ರಚಾರಕ ಪ್ರಭಾಕರ ಕೆರೆಕೈರವರು ಒಂದು ಪುಟ್ಟ ಭಾಷಣ ಮಾಡಿ "ನಮ್ಮ ಹೋರಾಟ ತುರ್ತು ಪರಿಸ್ಥಿತಿ ವಿರುದ್ಧವೇ ಹೊರತು ಪೋಲಿಸರ ವಿರುದ್ಧವಲ್ಲ. ಪೋಲಿಸರೂ ಮಾನವೀಯತೆಯಿಂದ ನಡೆದುಕೊಳ್ಳಬೇಕು" ಎಂದು ಹೇಳಿದರು ಅವರು 'ಪೋಲಿಸ್, ಸೇನಾ' ಎಂದು ಹೇಳಿದಾಗ ಎಲ್ಲರೂ 'ಭಾಯಿ ಭಾಯಿ' ಎಂದು ಮರುಘೋಷಣೆ ಮಾಡಿದರು. ನನಗೆ ಸಿಟ್ಟು ತಣಿದಿರದೆ ಅವರು ಭಾಯಿ ಭಾಯಿ ಎಂದಾಗಲೆಲ್ಲಾ 'ಧಿಕ್ಕಾರ' ಎಂದು ಅರಚುತ್ತಿದ್ದೆ. ದಾರಿಯುದ್ದಕ್ಕೂ ಉಳಿದವರು ಭಾಯಿ ಭಾಯಿ ಎಂದರೆ ನಾನೊಬ್ಬನೇ ಶಕ್ತಿ ಮೀರಿ 'ಧಿಕ್ಕಾರ' ಎಂದು ಹೇಳುತ್ತಿದ್ದೆ. ನಾನು ಎಷ್ಟು ಜೋರಾಗಿ ಧಿಕ್ಕಾರ ಹೇಳುತ್ತಿದ್ದೆನೆಂದರೆ ಜೈಲು ತಲುಪುವ ವೇಳೆಗೆ ನನ್ನ ಗಂಟಲು ಕಟ್ಟಿಹೋಗಿ ಧ್ವನಿಯೇ ಹೊರಡುತ್ತಿರಲಿಲ್ಲ. ಗಂಟಲಿನಿಂದ ಸ್ವರವೇ ಹೊರಡದಿದ್ದ ನನ್ನನ್ನು ಉಳಿದವರು ಸಮಾಧಾನಿಸುತ್ತಿದ್ದರು.
ಬಿಡುಗಡೆ
ನಾನೂ ಸೇರಿದಂತೆ 11 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ನಮಗೆ ಜಾಮೀನು ಸಿಗದಿದ್ದ ವಿಷಯ ಹಿಂದೆಯೇ ಹೇಳಿದ್ದೇನೆ. ಈ ಪ್ರಕರಣದಲ್ಲಿ ನಮ್ಮ ವಿರುದ್ಧ 15 ಜನರನ್ನು ಸಾಕ್ಷಿದಾರರೆಂದು ಹೆಸರಿಸಿದ್ದರಾದರೂ 8 ಜನರನ್ನು ಮಾತ್ರ ಸಾಕ್ಷಿ ವಿಚಾರಣೆ ಮಾಡಿಸಿದರು. ಬಹುಶಃ ಉಳಿದ 7 ಜನರ ಬಗ್ಗೆ ಪೋಲಿಸರಿಗೆ ವಿಶ್ವಾಸ ಬರಲಿಲ್ಲವೆಂದು ತೋರುತ್ತದೆ. ನಮ್ಮ ವಿರುದ್ಧ ಹಾಜರು ಪಡಿಸಿದ್ದ ದಾಖಲೆಗಳೆಂದರೆ 1. ಮಹಾತ್ಮ ಗಾಂಧೀಜಿಯವರ ಭಾವಚಿತ್ರ, 2.ಸತ್ತ ಕತ್ತೆಯ ಕಥೆ ಎಂಬ ಕವನ, 3. ಕಹಳೆ ಪತ್ರಿಕೆ, 4. ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಹೊರಡಿಸಿದ್ದ ಕರಪತ್ರ. ವಿಚಾರಣೆ ಸಂದರ್ಭದಲ್ಲಿ ನಮ್ಮ ಬಂಧುಗಳು, ಸ್ನೇಹಿತರು ಏನಾಗುತ್ತದೋ ಎಂಬ ಕುತೂಹಲದಿಂದ ನ್ಯಾಯಾಲಯಕ್ಕೆ ಬರುತ್ತಿದ್ದರು. ನ್ಯಾಯಾಲಯ ಭರ್ತಿಯಾಗಿರುತ್ತಿತ್ತು. ನಮ್ಮ ವಕೀಲರಾದ ಶ್ರೀ ಹಾರನಹಳ್ಳಿ ರಾಮಸ್ವಾಮಿ ಮತ್ತು ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರು ವಾದಿಸುತ್ತಿದ್ದ ರೀತಿ ಮೆಚ್ಚುವಂತಿತ್ತು. ಸಬ್ ಇನ್ಸ್ ಪೆಕ್ಟರರನ್ನು ಪಾಟಿಸವಾಲು ಮಾಡಿದ ಸ್ಯಾಂಪಲ್ ಹೀಗಿತ್ತು:
ವಕೀಲರು: ಸ್ವಾಮಿ, ಸಬ್ಬಿನಿಸ್ಪೆಕ್ಡರೇ, ಹಾಸನದಲ್ಲಿ ಒಟ್ಟು ಎಷ್ಟು ಮನೆಗಳಿರಬಹುದು?
ಸ.ಇ.: ಗೊತ್ತಿಲ್ಲ.
ವ: ಅಂದಾಜು ಹೇಳಿ, ಪರವಾಗಿಲ್ಲ. ಸುಮಾರು 20000 ಮನೆಗಳು ಇರಬಹುದಾ?
ಸ.ಇ.: ಇರಬಹುದು.
ವ: ಆ ಪೈಕಿ ಎಷ್ಟು ಮನೆಗಳಲ್ಲಿ ಗಾಂಧೀಜಿ ಫೋಟೋ ಇರಬಹುದು? ಅಂದಾಜು 2000 ಮನೆಗಳಲ್ಲಿ , ಬೇಡ, 1000 ಮನೆಗಳಲ್ಲಿ ಇರಬಹುದಾ?
ಸ.ಇ.: ಇರಬಹುದು.
ವ: ಹಾಗಾದರೆ ಅವರನ್ನೆಲ್ಲಾ ಏಕೆ ಬಂಧಿಸಲಿಲ್ಲ? ಇವರನ್ನೇಕೆ ಬಂಧಿಸಿದಿರಿ?
ಸ.ಇ.: ಇವರ ಹತ್ತಿರ ಇರುವ ಗಾಂಧೀಜಿ ಫೋಟೋದಲ್ಲಿ ಪ್ರಚೋದನಾತ್ಮಕ ಹೇಳಿಕೆ ಇದೆ.
ವ: ಏನು ಹೇಳಿಕೆ ಇದೆ? ಯಾರು ಹೇಳಿದ್ದು?
ಸ.ಇ.: ಅಸತ್ಯ, ಅನ್ಯಾಯಗಳ ವಿರುದ್ಧ ತಲೆಬಾಗುವುದು ಹೇಡಿತನ ಎಂಬ ಹೇಳಿಕೆ ಇದೆ. ಅದನ್ನು ಗಾಂಧೀಜಿಯೇ ಹೇಳಿದ್ದು.
ವ: ಹಾಗಾದರೆ ಗಾಂಧೀಜಿಯವರೇ ಪ್ರಚೋದನಾತ್ಮಕ ಹೇಳಿಕೆ ಕೊಟ್ಟಿದ್ದರು. ಗಾಂಧೀಜಿಯವರೂ ಅಪರಾಧಿಗಳೇ. ಸರಿ, ಇದರಲ್ಲಿ ಏನು ಪ್ರಚೋದನಾತ್ಮಕ ಅಂಶ ಇದೆ?
ಈ ಹಂತದಲ್ಲಿ ನ್ಯಾಯಾಲಯದಲ್ಲಿ ಸೇರಿದ್ದ ಜನರು, ವಕೀಲರುಗಳು ಎಲ್ಲರೂ ಗೊಳ್ಳೆಂದು ನಕ್ಕಿದ್ದರು. ನ್ಯಾಯಾಧೀಶರಿಗೂ ನಗು ತಡೆಯಲಾಗಿರಲಿಲ್ಲ. ಸಬ್ ಇನ್ಸ್ ಪೆಕ್ಟರರಿಗೆ ಅವಮಾನವಾದಂತಾಗಿತ್ತು. ಸತ್ತ ಕತ್ತೆಯ ಕಥೆ ಎಂಬ ಕವನದಲ್ಲಿ ತುರ್ತು ಪರಿಸ್ಥಿತಿ ಕಾಲದ ಪ್ರಜಾಸತ್ತೆಯನ್ನು ಸತ್ತ ಕತ್ತೆಗೆ ಹೋಲಿಸಲಾಗಿತ್ತು. ಅದನ್ನು ನ್ಯಾಯಾಲಯವು ನಮ್ಮ ವಿರುದ್ಧದ ದಾಖಲೆಯೆಂದು ನ್ಯಾಯಾಲಯ ಒಪ್ಪಲಿಲ್ಲ.ಕಹಳೆ ಪತ್ರಿಕೆಯಲ್ಲಿ ಪೋಲಿಸ್ ದೌರ್ಜನ್ಯಗಳ ವಿವರ ಇದ್ದು ಅದನ್ನೂ ನ್ಯಾಯಾಲಯವು ನಮಗೆ ಪ್ರತೀಕೂಲವಾದ ದಾಖಲೆಯೆಂದು ಒಪ್ಪುವಂತಹುದಾಗಿರಲಿಲ್ಲ. ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಹೊರಡಿಸಿದ ಕರಪತ್ರದಲ್ಲಿ ಜನರಿಗೆ ತುರ್ತು ಪರಿಸ್ಥಿತಿ ವಿರೋಧಿಸಲು ಕರೆ ನೀಡಲಾಗಿತ್ತು. ಇದನ್ನು ದೇಶದ್ರೋಹಿ ಚಟುವಟಿಕೆ ಎಂದು ಹೇಗೆ ಪರಿಗಣಿಸಬಹುದು ಎಂಬುದಕ್ಕೆ ಯಾವ ಸಾಕ್ಷಿಗಳಿಂದಲೂ ಸಮರ್ಪಕ ಉತ್ತರ ಬರಲಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ನ್ಯಾಯಾಧೀಶರು ದಿನಾಂಕ 04-02-1976ರ ಆದೇಶದಲ್ಲಿ ನಮ್ಮನ್ನೆಲ್ಲಾ ಆರೋಪಮುಕ್ತರೆಂದು ಘೋಷಿಸಿ ಬಿಡುಗಡೆಗೊಳಿಸಲು 21 ಪುಟಗಳ ಆದೇಶ ಹೊರಡಿಸಿದರು. ನಮ್ಮ ಬಿಡುಗಡೆಯಾಯಿತು. ಆದರೆ ಇಷ್ಟರಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದಲ್ಲಿ ಈಗಾಗಲೇ ಮೂರು ತಿಂಗಳು ಕಳೆದಿದ್ದವು.
(ಕಾಲಘಟ್ಟ: 1975-76) .. ಮುಂದುವರೆಯುವುದು.
ಹೊಳೆ ನರಸೀಪುರ ಮಂಜುನಾಥ
ಪ್ರತ್ಯುತ್ತರಅಳಿಸಿ08AUG2010 11:32
ಅ೦ತೂ ಬಿಡುಗಡೆಯಾದಿರಲ್ಲ! ಕವಿ ನಾಗರಾಜರೆ, ತು೦ಬಾ ಭೀಭತ್ಸ ಅನುಭವ! ನಾವೂ ಒಮ್ಮೆ ಇ೦ದಿರಮ್ಮನಿಗೆ ಜೈ ಅನ್ನೋಣ ಅನ್ನಿಸುತ್ತದೆ.
Kavinagaraj
09AUG2010 1:27
ಮಂಜು, ಆ ದಿನಗಳನ್ನು ನೆನೆಸಿಕೊಂಡರೆ ಈಗಲೂ ನನ್ನಲ್ಲಿ ವ್ಯವಸ್ಥೆಯ ಬಗ್ಗೆ ಸಿಟ್ಟು ಉಕ್ಕೇರುತ್ತಿರುತ್ತದೆ. ನಿಮ್ಮ ಪ್ರತಿಕ್ರಿಯೆಗಾಗಿ ವಂದಿಸುವೆ.
ಬೆಳ್ಳಾಲ ಗೋಪೀನಾಥ ರಾವ್
09AUG2010 7:08
ಕವಿಗಳೇ
ಧನ್ಯವಾದ ಬಿಡುಗಡೆಯಾಗಿದ್ದಕ್ಕೆ. ಬರೆಯಲು ಪದಗಳು ಉಳಿದಿಲ್ಲ, ದೇವರು ನಿಮ್ಮನ್ನು ಖುಷಿಯಾಗಿಟ್ಟಿರಲಿ ತುರ್ತು ಪರಿಸ್ಥಿತಿಯ " ಭುಗಿಲು" ನಾನೂ ಓದಿದ್ದೆ
Kavinagaraj
09AUG2010 1:28
ನಿಮ್ಮ ಹಾರೈಕೆಗೆ ಕೃತಜ್ಞತೆಗಳು, ಗೋಪಿನಾಥರೆ.
Raghu S P
09AUG2010 9:58
ಅಂತು ಬಿಡುಗಡೆಯ ಭಾಗ್ಯ, ಮುಂದಿನ ನಿಮ್ಮ ಹೋರಾಟಗಳ ಕುರಿತು ಕುತೂಹಲ
Kavinagaraj
09AUG2010 1:29
ಧನ್ಯವಾದ, ರಘು.
Ksraghavendranavada
09AUG2010 10:07
ತು೦ಬಾ ಕುತೂಹಲಕಾರಿಯಾಗಿ ಮು೦ದುವರೆಯುತ್ತಾ, ತುರ್ತುಪರಿಸ್ಥಿತಿ ಕಾಲಘಟ್ಟದ ಘಟನೆಗಳ ನೈಜ ಅನಾವರಣವು ಸು೦ದರ ಶೈಲಿಯಲ್ಲಿ ಮೂಡಿಬರುತ್ತಿದೆ. ಮು೦ದುವರೆಯಲಿ.ಇನ್ನಷ್ಟು ಅನುಭವಗಳು ನಮಗಾಗಿ ಹೊರಹೊಮ್ಮಲಿ.
ನಮಸ್ಕಾರಗಳೊ೦ದಿಗೆ,
ASHOKKUMAR
09AUG2010 10:19
ಕಪಾಳಮೋಕ್ಷ ಮಾಡಿಸಿಕೊಂಡ ಪೋಲಿಸ್ ಅಧಿಕಾರಿ ನಿಮ್ಮ ವಿರುದ್ಧ ಹಗೆ ಸಾಧಿಸಲಿಲ್ಲವೇ?
Kavinagaraj
09AUG2010 1:40
ನ್ಯಾಯಾಂಗ ಬಂಧನದಲ್ಲಿದ್ದರಿಂದ ತಕ್ಷಣಕ್ಕೆ ಅವರು ಏನೂ ಮಾಡುವಂತಿರಲಿಲ್ಲ. ಅಲ್ಲದೆ ಅವರು ಬೇರೆ ಜಿಲ್ಲೆಯ ಡಿ.ಎ.ಆರ್. ಪೋಲಿಸ್ ಅಧಿಕಾರಿಯಾಗಿದ್ದು ಯಾವುದೋ ಕರ್ತವ್ಯಕ್ಕಾಗಿ ಹಾಸನಕ್ಕೆ ಬಂದಿದ್ದವರನ್ನು ಈ ಡ್ಯೂಟಿಗೆ ಕಳಿಸಿದ್ದರಂತೆ, ಪಾಪ! ಆದರೆ ಅವರ ಇಲಾಖಾ ಮಿತ್ರರುಗಳಿಂದ ಬೇರೆ ತರಹದ ಕಿರುಕುಳಗಳಾದವು. ಜೈಲಿನಲ್ಲಿದ್ದಾಗ ಕೆ.ಎ.ಎಸ್. ಪರೀಕ್ಷೆಗೆ ಹಾಜರಾಗಲು ಬಂದಿದ್ದ ಪ್ರವೇಶಪತ್ರವನ್ನು ಸಕಾಲದಲ್ಲಿ ಕೊಡದೆ ಪರೀಕ್ಷೆ ಮುಗಿದ ಮೇಲೆ ಕೊಟ್ಟರು!
Kavinagaraj
09AUG2010 1:32
ಆತ್ಮೀಯ ರಾಘವೇಂದ್ರರೇ, ತುರ್ತು ಪರಿಸ್ಥಿತಿಯ ಎಲ್ಲಾ ಘಟನೆಗಳ ವಿವರಣೆ ಪ್ರಸ್ತುತ ಲೇಖನಮಾಲೆಯ ಉದ್ದೇಶಕ್ಕೆ ಹೊಂದುವುದಿಲ್ಲ. ನನಗೆ ಸಂಬಂಧಿಸಿದ ಮತ್ತು ಪ್ರತ್ಯಕ್ಷ ನನ್ನ ಅರಿವಿಗೆ ಬಂದವನ್ನು ಮಾತ್ರ ದಾಖಲಿಸಿದ್ದೇನೆ. ನಿಮ್ಮ ಶುಭಹಾರೈಕೆಗೆ ವಂದಿಸುವೆ.
ಮನು
09AUG2010 11:08
ಇಂತಹ ಎಷ್ಟೋ ದೌರ್ಜನ್ಯಗಳ ದಾಖಲೆಗಳು ಕಾಲದಡಿಯಲ್ಲಿ ಮುಚ್ಚಿಹೋಗಿವೆಯಲ್ಲವೆ ನಾಗರಾಜರೆ? :( ವಿಪರ್ಯಾಸ .
--ಮನು
Kavinagaraj
09AUG2010 1:33
ಸತ್ಯ.
ಸಂತೋಷ್ ಎನ್. ಆಚಾರ್ಯ
09AUG2010 12:44
ಓದುವಾಗಲೆಲ್ಲಾ ಪ್ರಜಾಸತ್ತೆಯ ಉಪ ವ್ಯವಸ್ಥೆಗಳ(Sub systems) ಮೇಲೆ ಅಕ್ರೋಶ ಬರುತ್ತದೆ.
Kavinagaraj
09AUG2010 1:34
ಖಂಡಿತಕ್ಕೂ ಸತ್ಯ, ಸಂತೋಷ್.
ಚೇತನ್ ಕೋಡುವಳ್ಳಿ
11AUG2010 4:19
ಅಬ್ಬ ಅಂತೂ ಬಿಡುಗಡೆ ಆಯ್ತಲ್ಲ
ಎಂತೆಂತಾ ಅನುಭವಗಳು ಸ್ವಾಮಿ ತಮ್ಮವು..!
ಪ್ರತ್ಯುತ್ತರಅಳಿಸಿಅಬ್ಬಾ..!
ಧನ್ಯ ನಾನು ನಿಮ್ಮಂತವರ ಸಹವಾಸ ಈ ರೀತಿಯಲ್ಲಾದರೂ ಸಿಕ್ಕಿದಕ್ಕೆ.
ದಯಮಾಡಿ ಒಮ್ಮೆ ಭೇಟಿಯ ಅವಕಾಶ ಸಿಗಬಹುದೇ?
ಸದ್ಯ ನಾನು ಸಾಗರದ ಸುವಿಧಾದಲ್ಲಿ ಕೆಲಸ ಮಾಡುತ್ತಿರುವೆ.