ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಆಗಸ್ಟ್ 31, 2010

ಸೇವಾಪುರಾಣ -16: ಗುಲ್ಬರ್ಗ ತೋರಿಸಿದರು -1

ಮುಂದುವರೆದ ಕಿರುಕುಳ
     ನಾವು ಹನ್ನೊಂದು ಜನರನ್ನು ಸೇರಿಸಿ ನಮ್ಮ ವಿರುದ್ಧ ಒಟ್ಟಿಗೆ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆ ನ್ಯಾಯಾಲಯದಲ್ಲಿ ವಜಾಗೊಂಡು ನಮ್ಮ ಬಿಡುಗಡೆಯಾದ ಬಗ್ಗೆ ಈಗಾಗಲೇ ತಿಳಿಸಿದ್ದೇನೆ. ಈ ಆದೇಶದ ವಿರುದ್ಧ ಸರ್ಕಾರದ ಪರವಾಗಿ ಉಚ್ಛನ್ಯಾಯಾಲಯದಲ್ಲಿ ಮೇಲುಮನವಿ ಸಲ್ಲಿಸಲಾಗಿ ಅದನ್ನು ಉಚ್ಛನ್ಯಾಯಾಲಯವು ವಿಚಾರಣೆಗೇ ಅಂಗೀಕರಿಸಿರದೇ ಇದ್ದುದು ಸಂತಸದ ವಿಷಯವಾಗಿತ್ತು. ಇದೇ ಸಮಯದಲ್ಲಿ ಕೆಳ ಕೋರ್ಟಿನ ಆದೇಶದ ವಿರುದ್ಧ ರಿವಿಶನ್ ಮನವಿಯನ್ನು ಜಿಲ್ಲಾನ್ಯಾಯಾಲಯದಲ್ಲೂ ಸಲ್ಲಿಸಲಾಗಿತ್ತು. ಅದೂ ಸಹ              02-09-1976ರಲ್ಲಿ ವಜಾಗೊಂಡಿತು. ಜಿಲ್ಲಾ ನ್ಯಾಯಾಲಯದ ಈ ಆದೇಶವನ್ನೂ ಸಹ ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಿ ಮೇಲುಮನವಿ ಸಲ್ಲಿತವಾಯಿತು. ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಉಚ್ಛನ್ಯಾಯಾಲಯವು ಮೇಲುಮನವಿ ತಿರಸ್ಕರಿಸಿ 17-02-1977ರಲ್ಲಿ ಆದೇಶಿಸಿತು.
ಗುಲ್ಬರ್ಗಕ್ಕೆ ಕಳಿಸಿದರು
     ಹೊಸ ಜಿಲ್ಲಾಧಿಕಾರಿಯವರು ಬಂದಿದ್ದರಿಂದ ನಾನು 'ಮೀಸಾ' ಅನ್ವಯ ಬಂಧಿತನಾಗುವುದು ತಪ್ಪಿದ್ದ ಬಗ್ಗೆ ತಿಳಿಸಿದ್ದೇನೆ. ಆದರೆ ಹಿಂದಿನ ಜಿಲ್ಲಾಧಿಕಾರಿಯವರು ಹೋಗುವ ಮುನ್ನ ನನ್ನನ್ನು ಹಾಸನ ಜಿಲ್ಲೆಯಿಂದ ಹೊರಗಿಡುವುದು ಸೂಕ್ತವೆಂದೂ ಅದಕ್ಕಾಗಿ ನನ್ನ ಅಮಾನತ್ತನ್ನು ರದ್ದುಪಡಿಸಿ ಗುಲ್ಬರ್ಗ ವಿಭಾಗಕ್ಕೆ ವರ್ಗಾಯಿಸಲು ಸರ್ಕಾರಕ್ಕೆ ಶಿಫಾರಸು ಮಾಡಿ ದಿನಾಂಕ    15-05-1976ರಲ್ಲಿ ಪತ್ರ ಬರೆದು ಹೋಗಿದ್ದರು.ಆರು ತಿಂಗಳ ನಂತರದಲ್ಲಿ ದಿನಾಂಕ 03-02-1976ರಲ್ಲಿ ಆ ಶಿಫಾರಸನ್ನು ಒಪ್ಪಿ ಸರ್ಕಾರದ ಆದೇಶವೂ ಬಂದಿತು. ನನ್ನನ್ನು ಹಾಸನದ ಕಛೇರಿಯಿಂದ 24-12-1976ರಲ್ಲಿ ಬಿಡುಗಡೆಗೊಳಿಸಿ ಗುಲ್ಬರ್ಗ ವಿಭಾಗಾಧಿಕಾರಿಯವರನ್ನು ಕಂಡು ಮುಂದಿನ ಆದೇಶ ಪಡೆಯಲು ಸೂಚಿಸಲಾಯಿತು. ಹಾಸನದಿಂದ ದಾವಣಗೆರೆಗೆ ಹೋಗಿ ಅಲ್ಲಿಂದ ರಾತ್ರಿ ಗುಲ್ಬರ್ಗ ಬಸ್ಸಿನಲ್ಲಿ ಕುಳಿತು ಮರುದಿನ ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಗುಲ್ಬರ್ಗ ತಲುಪಿದೆ. ಬಸ್ಸು ಇಳಿಯಲು ನೋಡಿದಾಗ ನನ್ನ ಚಪ್ಪಲಿಗಳು ಕಾಣೆಯಾಗಿದ್ದವು. ನನ್ನ ಚಪ್ಪಲಿಗಳ ಜಾಗದಲ್ಲಿ ಒಂದು ಜೊತೆ ಹಳೆಯ ಮುರುಟಿಹೋಗಿದ್ದ ಚಪ್ಪಲಿ ಆಕಾರದ ಚಪ್ಪಲಿಗಳಿದ್ದವು. ನನ್ನ ಪಕ್ಕದಲ್ಲಿದ್ದವರು ಬಹುಷಃ ತಮ್ಮ ಚಪ್ಪಲಿ ಬಿಟ್ಟು ನನ್ನ ಚಪ್ಪಲಿ ಹಾಕಿಕೊಂಡು ಹೋಗಿದ್ದರು. ಗುಲ್ಬರ್ಗದಲ್ಲಿ ನಾನು ಮಾಡಿದ ಮೊದಲ ಕೆಲಸವೆಂದರೆ ಚಪ್ಪಲಿ ಅಂಗಡಿ ತೆರೆಯುವ ತನಕ ಕಾದಿದ್ದು ಹೊಸ ಚಪ್ಪಲಿ ಕೊಂಡದ್ದು. ತಿಂಡಿ ತಿಂದು ವಿಭಾಗಾಧಿಕಾರಿಯವರ ಕಛೇರಿ ಹುಡುಕಿಕೊಂಡು ಹೋಗಿ ವರದಿ ಮಾಡಿಕೊಂಡೆ. ಗುಲ್ಬರ್ಗ ವಿಭಾಗಕ್ಕೆ ಸೇರಿದಂತೆ ನಾಲ್ಕು ಜಿಲ್ಲೆಗಳು -ಬಳ್ಳಾರಿ, ರಾಯಚೂರು, ಗುಲ್ಬರ್ಗ ಮತ್ತು ಬೀದರ್ - ಇದ್ದು ಒಂದು ದಿನದ ನಂತರ ವಿಭಾಗಾಧಿಕಾರಿಯವರು ನನ್ನನ್ನು ಗುಲ್ಬರ್ಗ ಜಿಲ್ಲೆಗೆ ನಿಯೋಜಿಸಿ ಆದೇಶ ಮಾಡಿದರು. ಬಳ್ಳಾರಿ ಜಿಲ್ಲೆಗೆ ಹಾಕಿದ್ದರೆ ಹಾಸನಕ್ಕೆ ಸ್ವಲ್ಪ ಹತ್ತಿರವಾಗುತ್ತಿತ್ತು. ಗುಲ್ಬರ್ಗ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮುಂದಿನ ಆದೇಶ ಪಡೆಯಲು ಹಾಜರಾದರೆ ಹತ್ತು ದಿನಗಳು ಅಲೆದಾಡಿಸಿ ಕೊನೆಗೆ ಗುಲ್ಬರ್ಗದಿಂದ 80 ಕಿ.ಮೀ. ದೂರದ ಸೇಡಂ ತಾಲ್ಲೂಕಿನ ಭೂಸುಧಾರಣಾ ವಿಶೇಷ ತಹಸೀಲ್ದಾರರ ಕಛೇರಿಗೆ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ನೇಮಕಾತಿ ಆದೇಶ ಕೊಟ್ಟರು.
ಸೇಡಂನಲ್ಲಿ
     ಸತ್ಯವಾಗಿ ಹೇಳುತ್ತೇನೆ, ಸೇಡಂ ಎಂಬ ಹೆಸರಿನ ಊರು ಕರ್ನಾಟಕದಲ್ಲಿ ಇದ್ದ ಬಗ್ಗೆ ಅದುವರೆಗೆ ನನಗೆ ಗೊತ್ತಿರಲಿಲ್ಲ. 06-01-77ರಲ್ಲಿ ಸೇಡಂನ ವಿಶೇಷ ತಹಸೀಲ್ದಾರರ ಮುಂದೆ ಕರ್ತವ್ಯಕ್ಕೆ ಹಾಜರಾದೆ. ಹಾಸನದಿಂದ ದೂರದ ಸೇಡಂಗೆ ವರ್ಗವಾಗಿ ಬರಬೇಕೆಂದರೆ ನಾನು ಏನೋ ಮಾಡಬಾರದ್ದು ಮಾಡಿ ಬಂದಿದ್ದೇನೆಂದು ತಹಸೀಲ್ದಾರರು ಆ ಸಮಯದಲ್ಲಿ ಉಡಾಫೆಯಿಂದ ಹೇಳಿದ್ದರು. ಭೂಸುಧಾರಣಾ ಶಾಸನದ ತ್ವರಿತ ಇತ್ಯರ್ಥದ ಸಲುವಾಗಿ ತೆರೆದಿದ್ದ ಆ ವಿಶೇಷ ಕಛೇರಿಯಲ್ಲಿ ಒಬ್ಬರು ನಿವೃತ್ತಿ ಅಂಚಿನಲ್ಲಿದ್ದ ಉಪತಹಸೀಲ್ದಾರರು, ಬಳ್ಳಾರಿಯಿಂದ ದೂರಿನ ಮೇಲೆ ವರ್ಗವಾಗಿ ಬಂದಿದ್ದ ಒಬ್ಬರು ಪ್ರಥಮ ದರ್ಜೆ ಗುಮಾಸ್ತರು, ಮೂವರು ದ್ವಿ.ದರ್ಜೆ ಗುಮಾಸ್ತರು ಮತ್ತು ಒಬ್ಬರು ಸರ್ವೆಯರರು ಇದ್ದರು.ಭೂನ್ಯಾಯ ಮಂಡಳಿಯ ಮುಂದೆ ಕಡತಗಳನ್ನು ಪರಿಶೀಲಿಸಿ ತನಿಖಾವರದಿ ಸಹಿತ ಮಂಡಿಸುವ ಮಹತ್ವದ ಕೆಲಸ ನನ್ನದಾಗಿತ್ತು. ಉಪವಿಭಾಗಾಧಿಕಾರಿ ದರ್ಜೆಯ ಅಧಿಕಾರಿಯ ಅಧ್ಯಕ್ಷತೆಯಲ್ಲಿ ಗುಲ್ಬರ್ಗದ ಮಾಜಿ ಲೋಕಸಭಾ ಸದಸ್ಯರಾಗಿದ್ದ ಶ್ರೀ ಶೇರ್ ಖಾನ್ ಎಂಬುವವರೂ ಸೇರಿದಂತೆ ನಾಲ್ವರು ಕಾಂಗ್ರೆಸ್ಸಿಗರು ಭೂನ್ಯಾಯ ಮಂಡಳಿ ಸದಸ್ಯರಾಗಿದ್ದರು. ಸೇಡಂನಲ್ಲಿ ಸುಮಾರು ಒಂದು ವರ್ಷವಷ್ಟೇ ಕೆಲಸ ಮಾಡಿದ್ದರೂ ಅಲ್ಲಿನ ಕೆಲವು ನೆನಪುಗಳು ಅಚ್ಚಳಿಯದೆ ಉಳಿದಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಈಗಿನ ಭಾರತೀಯ ಜನತಾಪಕ್ಷದ ರಾಜ್ಯಮಟ್ಟದ ನಾಯಕರಲ್ಲಿ ಒಬ್ಬರಾಗಿರುವ (ಇವರು ಒಳ್ಳೆಯ ರಾಜಕಾರಣಿಯಾಗಿದ್ದು ಮಂತ್ರಿಯಾಗುವ ಅರ್ಹತೆ ಹೊಂದಿದ್ದರೂ ಆಗದಿರುವುದಕ್ಕೆ ಮತ್ತು ಮೂಲೆಗುಂಪು ಮಾಡಲ್ಪಟ್ಟಿರುವುದಕ್ಕೆ ಇಂದಿನ ಕೊಳಕು ವ್ಯವಸ್ಥೆ ಕಾರಣವಿರಬಹುದು)ಶಿಕ್ಷಣ ಕ್ಷೇತ್ರದಲ್ಲೂ ಹೆಸರು ಮಾಡಿರುವ ಶ್ರೀ ಬಸವರಾಜ ಪಾಟೀಲ ಸೇಡಂರವರು ಆಗಿನ್ನೂ ತರುಣರಾಗಿದ್ದು ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತರಾಗಿದ್ದವರು. ಅವರು ಕೊತ್ತಲ ಬಸವೇಶ್ವರ ಶಿಕ್ಷಣಾ ಸಂಸ್ಥೆ ನಡೆಸುತ್ತಿರಬಹುದೆಂದು ನೆನಪು. ಈಗ ಅದು ದೊಡ್ಡದಾಗಿ ಬೆಳೆದಿರಬಹುದು.ಆರೆಸ್ಸೆಸ್ ನ ಸಂಪರ್ಕ ಜಾಲ ತುರ್ತು ಪರಿಸ್ಥಿತಿ ಕಾಲದಲ್ಲೂ ಹೇಗಿತ್ತೆಂದರೆ ನಾನು ಸೇಡಂಗೆ ಬಂದ ಮರುದಿನವೇ ನನ್ನನ್ನು ಭೇಟಿ ಮಾಡಿ ಏನಾದರೂ ಸಹಾಯ ಅಗತ್ಯವಿದ್ದರೆ ಸಂಕೋಚ ಪಡದೆ ಕೇಳಬಹುದೆಂದು ಹೇಳಿದ್ದಲ್ಲದೆ ನನಗಾಗಿ ಬಾಡಿಗೆಗೆ ಒಂದು ಖೋಲಿ(ಕೊಠಡಿ)ಯನ್ನೂ ಕೊಡಿಸಿದ್ದರು. (ನಾನು ಬಂದ ಕೂಡಲೇ ಸೇಡಂನಲ್ಲಿದ್ದ ಒಂದೇ ಒಂದು ಕೊಳಕು ಲಾಡ್ಜ್ ನಲ್ಲಿ ಉಳಿದುಕೊಂಡಿದ್ದೆ.)
ಭಾಷಾ ವೈವಿಧ್ಯ
     ಹೈದರಾಬಾದ್ ಕರ್ನಾಟಕಕ್ಕೆ ಸೇರಿದ್ದ ಪ್ರದೇಶವಾಗಿದ್ದರಿಂದ ಅಲ್ಲಿನ ಕನ್ನಡದಲ್ಲಿ ಉರ್ದು ಭಾಷೆಯ ಪ್ರಭಾವ ಗಮನಿಸಬಹುದಾಗಿತ್ತು. ಕೆಲವು ಹೊಸ ಪದಗಳ ಬಳಕೆ ನನಗೆ ತಿಳಿಯಿತು. ಪಟವಾರಿ, ಕುಲಕರ್ಣಿ(ಶ್ಯಾನುಭೋಗ), ಗಿರ್ದಾವರು(ರೆವಿನ್ಯೂ ಇನ್ಸ್ ಪೆಕ್ಟರ್), ದೌರಾ(ಪ್ರವಾಸ), ಹಾರೆ(ಇದ್ದಾರೆ), ಹಾನೆ(ಇದ್ದಾನೆ),ಇಂತಹ ಪದಪ್ರಯೋಗಗಳು ಬಳಕೆಯಿಂದ ತಿಳಿಯುತ್ತಾ ಹೋಯಿತು. ಪ್ರಾರಂಭದಲ್ಲಿ ಒಬ್ಬ ರಾಜಕೀಯ ಧುರೀಣ ಕಛೇರಿಗೆ ಬಂದು 'ಸಾಹೇಬ ಹಾನೇನೋ?' ಎಂದು ಕೇಳಿದ್ದಾಗ ಜವಾನ 'ಹಾರೆ' ಎಂಬ ಉತ್ತರ ಕೊಟ್ಟಿದ್ದು ನನಗೆ ಅರ್ಥವಾಗಿರಲಿಲ್ಲ. ಒಬ್ಬರು ವಕೀಲರ ಮನೆಯ ಮುಂದೆ ಹಾಕಿದ್ದ ನಾಮಫಲಕ ಈಗಲೂ ನೆನಪಿನಲ್ಲಿದೆ. ಆಯ. ಏಮ. ಬಬಲಾದಿ,ಬೀ.ಏ.ಎಲ.ಎಲ.ಬಿ., ಅಡವೋಕೇಟ ಎಂಬ ಆ ಹೆಸರನ್ನು ಹಳೆಯ ಮೈಸೂರು ಪ್ರದೇಶದಲ್ಲಾಗಿದ್ದರೆ ಐ.ಎಂ. ಬಬಲಾದಿ,ಬಿ.ಎ.ಎಲ್.ಎಲ್.ಬಿ., ಅಡ್ವೋಕೇಟ್ ಎಂದು ಬರೆಯುತ್ತಿದ್ದರು. ಇಂತಹ ವೈವಿದ್ಯತೆ ಕುರಿತು ವಿನೋದಕರವಾಗಿ ಚರ್ಚೆಗಳು ನಮ್ಮನಮ್ಮಲ್ಲಿ ನಡೆಯುತ್ತಿತ್ತು. 'ಮರ ಇಳೀಲಿಕ್ಕ ಹತ್ಯಾನ ಅಂತೀರಿ, ಮರ ಇಳೀಲಿಕ್ಕೆ ಏಕೆ ಹತ್ತಬೇಕು?' ಎಂಬ ನನ್ನ ಪ್ರಶ್ನೆಗೆ 'ನೀವ್ ಮೈಸೂರಮಂದಿ ಏನ ಭೇಷ ಶಾಣ್ಯಾರಂತ ಮಾಡೀರೇನ? ಪೋಲಿಸ ಕಳ್ಳನ್ನ ಹಿಡಿದುಬಿಟ್ಟ ಅಂತೀರಿ. ಬಿಡಲಿಕ್ಕೆ ಯಾಕಾರ ಹಿಡೀಬೇಕು? ಲಾರಿ ಹರಿದು ಒಬ್ಬನ ಸಾವು ಅಂತೀರಿ. ಲಾರಿ ಏನ ಕಾಗದಾ ಅಂತ ಮಾಡೀರೇನ ಹರೀಲಿಕ್ಕಾ?' ಎಂಬಂತಹ ಎದಿರೇಟುಗಳು ಸಿದ್ಧವಾಗಿರುತ್ತಿದ್ದವು.

1 ಕಾಮೆಂಟ್‌:

  1. ಹೊಳೆನರಸಿಪುರ ಮಂಜುನಾಥ
    AUG2010 9:28
    ಕವಿ ನಾಗರಾಜರೆ, ನಿಜಕ್ಕೂ ನಿಮ್ಮ ಅನುಭವಗಳು ಅದ್ಭುತವಾಗಿವೆ. ಭಾಷಾ ವೈವಿಧ್ಯತೆಯಲ್ಲಿ ಏಕತೆ ಸಾಧಿಸಿರುವ ಮಹಾನ್(!) ದೇಶ ನಮ್ಮದು! ಇದು ನಿಮ್ಮ ಅನುಭವಗಳಲ್ಲೂ ವೇದ್ಯವಾಗುತ್ತಿದೆ.

    Kavinagaraj
    01SEP2010 10:22
    ಆತ್ಮೀಯ ಮಂಜು, ನಿಮ್ಮ ನಿರಂತರ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಹೃತ್ಪೂರ್ವಕ ವಂದನೆಗಳು.

    ಬೆಳ್ಳಾಲ ಗೋಪೀನಾಥ ರಾವ್
    31AUG2010 9:32
    ಕವಿಯವರೇ ನಿಮ್ಮ ಶೈಲಿ ಮತ್ತು ಬರಹ ಆಸಕ್ತಿದಾಯಕ
    ಮುಂದುವರಿಯಲಿ

    Kavinagaraj
    01SEP2010 10:24
    ಗೋಪಿನಾಥರೇ, ನಿಮ್ಮ ಎಂದಿನ ಮೆಚ್ಚುಗೆಯ ಪ್ರತಿಕ್ರಿಯೆಗೆ ವಂದನೆಗಳು.

    Raghu S P
    01SEP2010 11:03
    ನಿಮ್ಮ ಬರಹದ ಶೈಲಿ ಮತ್ತು ನಿಮ್ಮ ಜೀವನದ ಆದರ್ಶಗಳು ಎರಡು + ೧

    Kavinagaraj
    01SEP2010 7:10
    ಮಿತ್ರ ರಘುರವರೇ, ನಿಮ್ಮ ಪ್ರತಿಕ್ರಿಯೆ ಸಂತಸ ತಂದಿದೆ.

    ಗೋಪಾಲ್ ಮಾ ಕುಲಕರ್ಣಿ
    01SEP2010 3:51
    ಉತ್ತಮ ಲೇಖನ

    Kavinagaraj
    01SEP2010 7:11
    ವಂದನೆಗಳು, ಗೋಪಾಲರೇ.

    ಪ್ರತ್ಯುತ್ತರಅಳಿಸಿ