ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಆಗಸ್ಟ್ 17, 2010

ಕೆಂಪು ಬೆಳೆ

ಸ್ವಾರ್ಥದಾ ಭೂಮಿಗೆ ಚಾಡಿಮಾತುಗಳ ಮಳೆ ಬಿದ್ದು
ಕ್ಷೇತ್ರವದು ನಳನಳಿಸಿ ಕಂಗೊಳಿಸುತಿಹುದು|

ಅಸಹನೆ ಮತ್ಸರದುಪಕರಣದಿಂ ಉತ್ತಿರಲು
ದ್ವೇಷದಾ ಕಿಡಿಗಳೆಂಬೋ ಬೀಜವನು ಬಿತ್ತಿಹರು|

ಸಂಶಯದ ಗೊಬ್ಬರವ ಕಾಲಕಾಲಕೆ ಹಾಕಿ
ಶಾಂತಿ ಸಹನೆಯ ಕಳೆಯ ಚಿವುಟಿ ಹಾಕಿಹರು|

ವೈಮನಸ್ಸಿನ ಬೆಳೆಯು ಅಬ್ಬರದಿ ಬೆಳೆದಿರಲು
ಆಹಾ ಎಲ್ಲಿ ನೋಡಿದರಲ್ಲಿ ಕೆಂಪಿನೋಕುಳಿಯು

ಬೆಳೆಯ ಬೆಳೆದವರು ಬೆಳೆಯನುಂಡವರು
ಅಯ್ಯೋ ಕೆಂಗಣ್ಣರಾಗಿ ಮತಿಯ ಮರೆತಿಹರು|

ಪತಿ ಪತ್ನಿಯರ ನಡುವೆ ಹೆತ್ತವರ ನಡುವೆ
ವಿರಸದುರಿಯದು ಹೊತ್ತಿ ಜ್ವಲಿಸುತಿಹುದು|

ಅತ್ತೆ ಸೊಸೆಯರ ನಡುವೆ ಸೋದರರ ನಡುವೆ
ಮತ್ಸರದ ಬೆಂಕಿ ತಾ ಹೊಗೆಯಾಡುತಿಹುದು|

ಬದುಕು ಶಾಶ್ವತವಲ್ಲ ದ್ವೇಶ ಬಿಡಿ ಎಂದವರ
ನಾಲಗೆಯ ಕತ್ತರಿಸಿ ಕರುಳ ಬಗೆದೆಳೆದಿಹರು||

************
-ಕವಿ ನಾಗರಾಜ್.

2 ಕಾಮೆಂಟ್‌ಗಳು:

  1. ವಿಘ್ನ ಸಂತೋಷಿಗಳ ಮತ್ತು ಅಭಿನವ ನಾರದರ ಬಗ್ಗೆ ತಿವಿಯುವ ಈ ಕವನ ಸಾರ್ವಕಾಲೀನ ಸತ್ಯ.

    ರಚನೆಲ್ಲಿರುವ ವೈಶಿಷ್ಟ್ಯ : ದ್ವಿಪದಿ ಮತ್ತು ಪ್ರತಿ ಚರಣವೂ ಅನನ್ಯ.

    ಪ್ರತ್ಯುತ್ತರಅಳಿಸಿ