ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಆಗಸ್ಟ್ 4, 2010

ಸೇವಾ ಪುರಾಣ -11: ಸರಳುಗಳ ಹಿಂದಿನ ಲೋಕ -4: ಜೇಬುಗಳ್ಳನಾದೆ!

ದೂರು ಕೊಡಬಂದವನ ಪಾಡು
     ಪೋಲಿಸ್ ಠಾಣೆಯಲ್ಲಿ ನನ್ನನ್ನು ವಿಚಾರಣೆಗೆ ಕರೆಸಿದ್ದ ಸಂದರ್ಭದಲ್ಲಿ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರರನ್ನು ಕಾಯುತ್ತಾ ಕುಳಿತಿದ್ದ ಸಮಯದಲ್ಲಿ ತನ್ನ ಮನೆಯಲ್ಲಿ ಕಳ್ಳತನವಾದ ಬಗ್ಗೆ ದೂರು ಕೊಡಲು ವ್ಯಕ್ತಿಯೊಬ್ಬರು ಬಂದಿದ್ದರು. ಸಬ್ ಇನ್ಸ್ ಪೆಕ್ಟರ್ ರೌಂಡ್ಸ್ ಗೆ ಹೋಗಿದ್ದಾರೆಂದೂ ಕಾಯಬೇಕೆಂದೂ ಅಲ್ಲಿದ್ದ ಪೇದೆ ಹೇಳಿದಾಗ ಅವರು ಬೆಂಚಿನ ಮೇಲೆ ನನ್ನ ಪಕ್ಕದಲ್ಲಿ ಕುಳಿತುಕೊಂಡರು. ಆಗ ರಾತ್ರಿ ಸುಮಾರು 8-00 ಘಂಟೆಯಾಗಿರಬೇಕು. ಠಾಣೆಯಲ್ಲಿದ್ದ ಪೇದೆಯ ಡ್ಯೂಟಿಯ ಅವಧಿ ಮುಗಿದು ಆತ ಹೊರಗೆ ಹೋದಾಗ ಇನ್ನೊಬ್ಬ ಪೇದೆ ತನ್ನ ಪಾಳಿಯ ಡ್ಯೂಟಿಗಾಗಿ ಬಂದ. ಎಲೆ ಅಡಿಕೆ ಮೆಲ್ಲುತ್ತಾ ಬಂದ ಅವನ ಕಣ್ಣುಗಳು ಕೆಂಪಗಿದ್ದವು. ಆತ ಬಂದವನೇ ನನ್ನ ಪಕ್ಕ ಕುಳಿತಿದ್ದವರಿಗೆ ಕಪಾಳಕ್ಕೆ ಫಟಾರನೆ ಹೊಡೆದ ರಭಸಕ್ಕೆ ಅವರು ತತ್ತರಿಸಿ ಕೆಳಗೆ ಬಿದ್ದರು. ಅವರು ಹೆದರಿ ಹೋಗಿ 'ಯಾಕೆ ಸಾರ್?' ಅಂದರು. (ಸಾರ್ ಎಂಬ ಪದ ಬಳಕೆಗೆ ಆ ಪೇದೆ ಅರ್ಹನಾಗಿರಲಿಲ್ಲ. ಆದರೆ ಭಯ ಗೌರವ ಕೊಡಿಸಿತ್ತು.) ಕಳ್ಳತನದ ಬಗ್ಗೆ ದೂರು ಕೊಡಲು ಬಂದ ವಿಷಯ ತಿಳಿದಾಗ 'ಮೊದಲೇ ಹೇಳಬಾರದಿತ್ತೇನ್ರೀ?' ಎಂದು ಅವರದೇ ತಪ್ಪೆಂಬಂತೆ ಹೇಳಿದ. ಇದು ಅವರ ದೃಷ್ಟಿಯಲ್ಲಿ ಠಾಣೆಯಲ್ಲಿ ಡ್ಯೂಟಿ ಮಾಡುವ ರೀತಿ! ಅವರ ದೃಷ್ಟಿಯಲ್ಲಿ ಠಾಣೆಗೆ ಬರುವವರೆಲ್ಲರೂ 'ಬದ್ಮಾಶ್'ಗಳು! ಸಬ್ ಇನ್ಸ್ ಪೆಕ್ಟರ್ ಬಂದಾಗ ಅವರು ಹೆದರುತ್ತಲೇ ಕಳ್ಳತನದ ವಿಷಯ ತಿಳಿಸಿದರು. ಅದನ್ನು ನಿರ್ವಿಕಾರವಾಗಿ ಕೇಳಿಸಿಕೊಂಡ ಸಬ್ ಇನ್ಸ್ ಪೆಕ್ಟರರು ಕಪಾಳಕ್ಕೆ ಹೊಡೆದಿದ್ದ ಪೇದೆಗೇ ದೂರು ಪಡೆಯಲು ಹೇಳಿದರು. ಅಷ್ಟರಲ್ಲಾಗಲೇ ದೂರು ಕೊಡಬಂದಿದ್ದವರಿಗೆ ತಮ್ಮ ದೂರಿನ ಗತಿ ಏನಾಗಬಹುದೆಂಬ ಅರಿವಾಗಿರಬೇಕು! ದೂರು ದಾಖಲಿಸಿ ಹೊರಬಂದರೆ ಸಾಕೆಂಬ ಮನಸ್ಥಿತಿಯಲ್ಲಿ ಅವರಿದ್ದಂತೆ ತೋರುತ್ತಿತ್ತು!
ಜೇಬುಗಳ್ಳನಾದೆ!
     ಮಾಮೂಲಿನಂತೆ ಒಂದು ದಿನ ಪೋಲಿಸ್ ಠಾಣೆಗೆ ಹೋಗಿ ಹಾಜರಾತಿ ಹಾಕಿ ಹೊರಬರುವಾಗ ಅಕಾಸ್ಮಾತ್ತಾಗಿ ನನ್ನ ದೃಷ್ಟಿ ಠಾಣೆಯ ಹೊರಭಾಗದಲ್ಲಿದ್ದ ಸೂಚನಾ ಫಲಕದ ಮೇಲೆ ಬಿತ್ತು. ಅಲ್ಲಿ ನನ್ನ ಫೋಟೋ ಸಹ ಕಂಡು ಆಶ್ಚರ್ಯಚಕಿತನಾಗಿ ಹತ್ತಿರ ಹೋಗಿ ನೋಡಿದರೆ "ಜೇಬುಗಳ್ಳರಿದ್ದಾರೆ, ಎಚ್ಚರಿಕೆ" ಎಂಬ ಶೀರ್ಷಿಕೆ ಕೆಳಗಡೆ ಹಲವಾರು ಫೋಟೋಗಳ ಜೊತೆಗೆ ನನ್ನ ಫೋಟೋ ಸಹ ಅಂಟಿಸಿದ್ದರು. ನನಗೆ ಸಿಟ್ಟು ಬಂದಿತಾದರೂ ತೋರಿಸಿಕೊಳ್ಳುವಂತಿರಲಿಲ್ಲ. ನಮಸ್ಕಾರ ಮಾಡದಿದ್ದಕ್ಕೆ ನನಗೆ ಬುದ್ಧಿ ಕಲಿಸಲು ಸುಳ್ಳು ಕೇಸು ಹಾಕಲು ಪ್ರಯತ್ನಿಸಿ ಮುಖಭಂಗಿತನಾಗಿದ್ದ ಹೆಡ್ ಕಾನ್ಸ್ ಟೇಬಲ್ಲನ ಕೆಲಸವೇ ಇದೆಂದು ಊಹಿಸಲು ನನಗೆ ಕಷ್ಟವೇನಿರಲಿಲ್ಲ. ನಾನು ನಗರ ಠಾಣೆಯಿರುವ ಕಟ್ಟಡದ ಮೊದಲ ಅಂತಸ್ತಿನಲ್ಲಿದ್ದ ಪೋಲಿಸ್ ಸೂಪರಿಂಟೆಂಡೆಂಟರನ್ನು ಭೇಟಿ ಮಾಡಲು ಹೋದೆ. ಎಸ್.ಪಿ.ಯವರು ಕಛೇರಿಯಲ್ಲೇ ಇದ್ದರು. ಬಾಗಿಲಲ್ಲಿ ನಿಂತಿದ್ದ ಸೆಂಟ್ರಿಗೆ ನನ್ನ ಪರಿಚಯ ಇದ್ದು ಆತ ನನ್ನನ್ನು ಒಳಗೆ ಹೋಗಲು ಬಿಡಲಿಲ್ಲ. ನನಗೂ ಅವನಿಗೂ ವಾದ-ವಿವಾದ ನಡೆಯುತ್ತಿತ್ತು. ಒಳಗಿದ್ದ ಎಸ್.ಪಿ.ಯವರು 'ಏನದು ಗಲಾಟೆ? ಅವನನ್ನು ಒಳಗೆ ಕಳಿಸು' ಎಂದರು. ನಾನು ಒಳಗೆ ಹೋಗಿ ಅವರಿಗೆ ನಮಸ್ಕರಿಸಿದೆ. ಅವರು 'ಏನು?' ಎಂಬರ್ಥದಲ್ಲಿ ನನ್ನನ್ನು ದೃಷ್ಟಿಸಿದರು. ನಾನು "ಇಂದಿನಿಂದ ಹೊಸ ಉದ್ಯೋಗ ಮಾಡಬೇಕೆಂದಿರುವುದಾಗಿಯೂ ಅದನ್ನು ಅವರೇ ಉದ್ಘಾಟಿಸಬೇಕೆಂದೂ" ಕೋರಿದೆ. ಅವರು ಆಗಲೂ ಮಾತನಾಡದೆ 'ಏನು?' ಎಂಬರ್ಥದಲ್ಲಿ ದಿಟ್ಟಿಸಿದರು. "ನಾನು ಪಿಕ್ ಪಾಕೆಟರ್ ಆಗಬಯಸಿರುವುದಾಗಿಯೂ ಮೊದಲನೆಯ ಪಾಕೆಟ್ ಅನ್ನು ತಮ್ಮದನ್ನೇ ಹಾರಿಸಲು ಬಯಸಿರುವುದಾಗಿಯೂ, ದಯವಿಟ್ಟು ಸಹಕರಿಸಬೇಕೆಂದು" ಹೇಳುತ್ತಿದ್ದ ಹಾಗೆ ಅವಡುಗಚ್ಚಿದ ಅವರ ಕೈ ಸಹಜವೆಂಬಂತೆ ಟೇಬಲ್ಲಿನ ಮೇಲಿದ್ದ ಲಾಠಿ ಹಿಡಿದುಕೊಂಡಿತು. ತಡ ಮಾಡಿದರೆ ಕೆಲಸ ಕೆಡುತ್ತದೆಂದು ನಾನು ಅವಸರ ಅವಸರವಾಗಿ ಠಾಣೆಯ ನೋಟಿಸ್ ಬೋರ್ಡಿನಲ್ಲಿ ಜೇಬುಗಳ್ಳನೆಂದು ನನ್ನ ಫೋಟೊ ಅಂಟಿಸಿರುವ ಬಗ್ಗೆ ಹೇಳಿದೆ. ಅವರು ಧಡಕ್ಕನೆ ಕುರ್ಚಿಯಿಂದ ಮೇಲೆದ್ದು ಕೆಳಗಿಳಿದು ಬಂದು ನೋಟಿಸ್ ಬೋರ್ಡು ನೋಡಿದರು. ಅವರು ಧಡಕ್ಕನೆ ಎದ್ದಾಗ ನನಗೆಲ್ಲಿ ಹೊಡೆಯುವರೋ ಎಂದು ನಾನು ಭಯಪಟ್ಟಿದ್ದು ಸುಳ್ಳಲ್ಲ. ನನ್ನ ಫೋಟೋ ಕಂಡು ಸಿಟ್ಟಿಗೆದ್ದ ಅವರು ಅಲ್ಲಿಗೆ ಓಡಿಬಂದ ಎಎಸ್ಸೈರವರ ಕಪಾಳಕ್ಕೆ ಬಾರಿಸಿ ನನ್ನ ಫೋಟೋ ಅಲ್ಲಿಂದ ತೆಗೆಯಲು ಆದೇಶಿಸಿದರು. ನನಗೆ 'ಸಾರಿ' ಎಂದು ಹೇಳುತ್ತಾ ತಿರುಗಿ ನೋಡದೆ ಮೆಟ್ಟಿಲು ಹತ್ತಿ ಹೋದರು. ಅಲ್ಲಿದ್ದ ಪೋಲಿಸರಿಗೆ ನನ್ನ ಮೇಲೆ ಸಿಟ್ಟು ಬಂದಿರುವುದು ಗೊತ್ತಾಯಿತು. ನಾನು ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡಿದೆ.
ಅಪ್ಪ-ಅಮ್ಮರ ಮಮತೆ
     ತುರ್ತು ಪರಿಸ್ಥಿತಿ ಕಾಲದ ದೌರ್ಜನ್ಯಗಳ ಬಗ್ಗೆ ಸುದ್ದಿಗಳು ಕಿವಿಗೆ ಬೀಳುತ್ತಿದ್ದವು. ಜೈಲಿಗೆ ಹೊಸ ಹೊಸ ಕೈದಿಗಳು ಬರುತ್ತಿದ್ದಂತೆಯೇ ಹೊಸ ಹೊಸ ದೌರ್ಜನ್ಯಗಳ ಬಗ್ಗೆ ತಿಳಿದುಬರುತ್ತಿದ್ದವು. ಕೆಲವು ನಮ್ಮನ್ನು ಹತಾಶೆಗೊಳಿಸುತ್ತಿದ್ದರೆ ಕೆಲವು ಘಟನೆಗಳು ನಮ್ಮಲ್ಲಿ ಉತ್ಸಾಹ ತುಂಬುತ್ತಿದ್ದವು. ನನ್ನ ಅಜ್ಜಿ (ತಾಯಿಯ ತಾಯಿ) ಜೈಲಿಗೆ ಬಂದು ಜೈಲರರನ್ನು ಕಾಡಿ ಬೇಡಿ ನನ್ನನ್ನು ಭೇಟಿ ಮಾಡಲು ಅವಕಾಶ ಪಡೆದು ನನ್ನನ್ನು ಮಾತನಾಡಿಸಿದ್ದುದನ್ನು ನಾನು ಮರೆಯಲಾರೆ. ಬರುವಾಗ ಅಜ್ಜಿ ನಾಲ್ಕು ಕಿತ್ತಳೆಹಣ್ಣನ್ನು ತಂದಿದ್ದು ನಾನು "ಅಜ್ಜಿ, ಒಳಗೆ ನನ್ನಂತಹವರು ನೂರಾರು ಜನ ಇದ್ದಾರೆ,ನನಗೊಬ್ಬನಿಗೇ ಹಣ್ಣು ತಂದರೆ, ನಾನು ತೆಗೆದುಕೊಂಡರೆ ಸರಿಯಾಗುವುದಿಲ್ಲ" ಎಂದು ಹೇಳಿದ್ದುದನ್ನು ಅಜ್ಜಿ ಯಾವಾಗಲೂ ಜ್ಞಾಪಿಸಿಕೊಳ್ಳುತ್ತಿದ್ದರು. ನನ್ನ ತಂದೆಯವರೂ ಸಹ ಆಗಾಗ್ಗೆ ಜೈಲಿಗೆ ಬಂದು ಜೈಲು ಸಿಬ್ಬಂದಿಗೆ ಲಂಚ ಕೊಟ್ಟು 'ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದು ಹೇಳಿಹೋಗುತ್ತಿದ್ದರಂತೆ. ಆದರೆ ಎಂದೂ ಅವರು ನನ್ನನ್ನು ಕರೆಸಿ ಮಾತನಾಡಲಿಲ್ಲ. ಬರುವಾಗ ಒಂದು ದೊಡ್ಡ ಫ್ಲಾಸ್ಕಿನ ಭರ್ತಿ ಗಟ್ಟಿ ಹಾಲು ಹಾಕಿ ಮಾಡಿದ ಹಾರ್ಲಿಕ್ಸ್ ಅನ್ನು ತಂದು ಮಗನಿಗೆ ಕೊಡಲು ಹೇಳುತ್ತಿದ್ದರಂತೆ. ಜೈಲಿನ ಗಾರ್ಡು ನನಗೆ ಕೊಡುವುದಾಗಿ ಹೇಳಿ ಒಳಕ್ಕೆ ಹೋಗಿ ತಾನೇ ಎಲ್ಲವನ್ನೂ ಕುಡಿದು ಖಾಲಿ ಫ್ಲಾಸ್ಕನ್ನು ತಂದೆಗೆ ವಾಪಸು ಕೊಡುತ್ತಿದ್ದನಂತೆ. ಈ ವಿಷಯ ಬಹಳ ಸಮಯದ ನಂತರ ನನಗೆ ಗೊತ್ತಾಯಿತು. (ಕಾಕತಾಳೀಯವೆಂಬಂತೆ ಲೇಖನದ ಈ ಭಾಗ ಬರೆಯುತ್ತಿದ್ದ ಸಮಯದಲ್ಲೇ ಹಾಸನ ಜಿಲ್ಲಾ ಉಪಕಾರಾಗೃಹದ ವಾರ್ಡನ್ ಗಳಾದ ಶೋಭಾ, ಸಿದ್ಧಲಿಂಗಪ್ಪ, ವಾಹನ ಚಾಲಕ ಭಾನುಪ್ರಕಾಶ್ ಮತ್ತು ಹಣ ವಸೂಲಿಗೆ ಸಹಕರಿಸುತ್ತಿದ್ದ ಕೊಲೆ ಆರೋಪಿ ಸುರೇಶರನ್ನು ಲೋಕಾಯುಕ್ತ ಪೋಲಿಸರು ಕೈದಿಯೊಬ್ಬರ ಭೇಟಿಗೆ ಅವಕಾಶ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬಂಧಿಸಿದ ವಿಷಯ ದಿನಾಂಕ 30-07-2010ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಓದಿದೆ. ಆರೋಪಿ ಸುರೇಶನ ಬಳಿಯಿದ್ದ ನೂರು ರೂ. ಜೈಲರ್ ನಲ್ಲಪ್ಪರೆಡ್ಡಿಯವರಿಗೆ ಕೊಡುವ ಸಲುವಾಗಿದ್ದೆಂದು ಜೈಲರರನ್ನೂ ಬಂಧಿಸಿದ ಬಗ್ಗೆ ದಿನಾಂಕ 31-07-2010ರ ಪತ್ರಿಕೆಯಲ್ಲಿ ಸುದ್ದಿಯಿದೆ.)

-ಕ.ವೆಂ.ನಾಗರಾಜ್.

1 ಕಾಮೆಂಟ್‌:

 1. ಸುರೇಶ್ ನಾಡಿಗ್
  05AUG2010 2:15
  ಸರ್, ನಿಮ್ಮ ಅನುಭವ ನಮ್ಮಲ್ಲಿ ಮತ್ತಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ.

  Kavinagaraj
  05AUG2010 7:11
  ಧನ್ಯವಾದಗಳು, ಸುರೇಶ್.

  Ashwini
  05AUG2010 2:25
  ನಿಮ್ಮ ಪ್ರತಿ ಬರಹ ನಮಗೆ ಗೊತ್ತಿರದ ಒಂದು ಹೊಸ ಲೋಕಕ್ಕೆ ಕೊಂಡೊಯ್ಯುತ್ತಿದೆ.
  ಇಂಥಹ ದಿನಗಳು ಜೀವನದಲ್ಲಿ ಯಾರಿಗೂ ಬರದೆ ಇರಲಿ.
  ಇಂದಿನ ಯುವ ಜನರಿಗೆ ನಿಮ್ಮಂಥವರು ಆದರ್ಶರಾಗಿರಬೇಕು.
  -ಅಶ್ವಿನಿ

  Kavinagaraj
  05AUG2010 7:12
  ಅಶ್ವಿನಿ, ಪ್ರೋತ್ಸಾಹಕ ಪ್ರತಿಕ್ರಿಯೆ. ವಂದನೆ.

  ಗೋಪಾಲ್ ಮಾ ಕುಲಕರ್ಣಿ
  05AUG2010 2:31
  ನಿಮ್ಮ ಈ ಕಹಿ ಅನುಭವ ಯಾರಿಗೂ ಬರದಿರಲಿ.

  Kavinagaraj
  05AUG2010 7:13
  ಗೋಪಾಲ್, ಶುಭ ಕೋರಿಕೆಗೆ ವಂದನೆ.

  ಸಂತೋಷ್ ಎನ್. ಆಚಾರ್ಯ
  05AUG2010 3:12
  'ಜೇಬುಗಳ್ಳನಾದೆ!' ಭಾಗ ಬಹಳ ಇಷ್ಟವಾಯಿತು ಹಾಗೆಯೇ ನಿಮ್ಮಂತೆ ಎಷ್ಟೋ ಜನರು ಇನ್ನೂ ಏನೇನು ಅನುಭವಿಸಿದ್ದಾರೋ ಎಂದೆನಿಸಿದಾಗ ಬೇಸರವಾಗುತ್ತಿದೆ. ಆಗಿನ ಪರಿಸ್ಥಿತಿಯ ಬಗ್ಗೆ ಯಾವುದಾದರೂ ಪುಸ್ತಕ ಬಂದಿದೆಯೇ ?

  Kavinagaraj
  05AUG2010 7:15
  ಧನ್ಯವಾದ, ಸಂತೋಷ್. 1977-85ರ ಅವಧಿಯಲ್ಲಿ ಸಾಕಷ್ಟು ಸಾಹಿತ್ಯ ಬಂದಿದೆ. ಕನ್ನಡದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಪ್ರಕಟಣೆ 'ಭುಗಿಲು' ಈ ಕುರಿತು ಓದಬೇಕಾದ ಪುಸ್ತಕ.

  ಸಿ ಸೋಮಶೇಖರಯ್ಯ
  05AUG2010 4:41
  ಆತ್ಮೀಯ ಕವಿನಾಗರಾಜ್ ಅವರೆ ,
  ನನಗೆ ಬಿಡುವು ಕಡಿಮೆ ಇರುವ ಕಾರಣದಿಂದ ನಿಮ್ಮ ಎಲ್ಲ ಲೇಖನಗಳನ್ನು ಓದಲಾಗಿರಲಿಲ್ಲ . ಈ ದಿನ ನಿಮ್ಮ ಸೇವಾ ಪುರಾಣದ ಹನ್ನೊಂದೂ ಕಂತುಗಳನ್ನು ಪೂರ್ತಿ ಓದಿದೆ , ನನ್ನ ಕಣ್ಣುಗಳು ತುಂಬಿ ಬಂದಿವೆ ; ನಿಮ್ಮ ವ್ಯಕ್ತಿತ್ವ ನನ್ನನ್ನು ಪ್ರಭಾವಿಸಿದೆ . ಇಷ್ಟೆಲ್ಲಾ ಇದ್ದರೂ , ಏನೂ ಮಾಡಿಯೇ ಇಲ್ಲವೆನ್ನುವಷ್ಟು ಸರಳವಾಗಿ ನಿರೂಪಿಸುತ್ತಿರುವ ನಿಮ್ಮ ಬಗ್ಗೆ ಏನು ಬರೆಯಲಿ ? ನಿಮ್ಮಂತಹವರ ಸ್ನೇಹವನ್ನು ದೊರಕಿಸಿಕೊಟ್ಟಿರುವ ಸಂಪದಕ್ಕೆ ಕೃತಜ್ಞತೆಗಳನ್ನು ಸೂಚಿಸಲೆ , ನಿಮಗೆ ಬರಿಯ ಅಭಿನಂದನೆಗಳು ಎಂದು ಮಾತ್ರ ಹೇಳುವುದು ಏನೂ ಅಲ್ಲವೆಂದು ಮಾತ್ರ ತಿಳಿಸಿ, ನಿಮ್ಮ ಅನುಭವಗಳನ್ನು ನಿರೀಕ್ಷಿಸುತ್ತಿದ್ದೇನೆ .

  Kavinagaraj
  05AUG2010 7:21
  ಆತ್ಮೀಯರೇ, ನಿಮ್ಮ ಹೃದಯಪೂರ್ವಕ ಮನದಾಳದ ಮಾತುಗಳು ನನಗೆ ತುಂಬಾ ಸಂತಸ ತಂದಿದೆ. ಧನ್ಯವಾದಗಳು.

  ಬೆಳ್ಳಾಲ ಗೋಪೀನಾಥ ರಾವ್
  05AUG2010 7:07
  ಕವಿಗಳೇ
  ಸಾಗಲೀ ಗುರಿ ಸೇರಲಿ
  ಮುಂದಿನ ಕಂತಿನ ನಿರೀಕ್ಷೆಯಲ್ಲಿ

  Kavinagaraj
  05AUG2010 7:23
  ಗೋಪಿನಾಥರೇ,
  ಆಗಲಿ, ನಿಮ್ಮ ಹಾರೈಕೆ ಫಲಿಸಲಿ,
  ಧನ್ಯವಾದಗಳು.

  ಹೊಳೆ ನರಸೀಪುರ ಮಂಜುನಾಥ
  05AUG2010 8:56
  ಕವಿ ನಾಗರಾಜರೆ, ನಿಮ್ಮ ಅನುಭವದ ಒ೦ದೊ೦ದು ಕ೦ತೂ ನನ್ನ, ತುರ್ತು ಪರಿಸ್ಥಿತಿಯ ಬಗೆಗಿನ, ಜ್ಞಾನವನ್ನು ಹೆಚ್ಚಿಸುತ್ತಿವೆ, ಬಹುಶಃ ಮು೦ದೊ೦ದು ದಿನ ಕಾ೦ಗ್ರೆಸ್ ಪಕ್ಷವನ್ನು ಈ ದೇಶದಿ೦ದ ಹೊರ ಹಾಕುವಲ್ಲಿ ನಿಮ್ಮ ಬರಹಗಳು ಸಹಕಾರಿಯಾಗಬಹುದು. ಮು೦ದಿನ ಭಾಗದ ನಿರೀಕ್ಷೆಯಲ್ಲಿ!

  Kavinagaraj
  05AUG2010 9:36
  ಮಂಜು, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ ವಿರೋಧಿಸಿ ಹೋರಾಡಿದ್ದವರು ಗಣನೀಯವಾಗಿ ಈಗ ಕಾಂಗ್ರೆಸ್ ನಲ್ಲಿ ಇರುವುದೂ ಕಟು ಸತ್ಯ. ಆಗ ಕಾಂಗ್ರೆಸ್ ನಲ್ಲಿದ್ದವರು ಈಗ ಬಿಜೆಪಿಯಲ್ಲೂ ಇದ್ದಾರೆ! ಧ್ಯೇಯಗಳಿಗಾಗಿ ನಿಜವಾಗಿ ಹೋರಾಡುವ ಮನೋಭಾವದವರು ಈಗ ರಾಜಕೀಯಕ್ಕೆ ಬರಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇದೆ.

  Ksraghavendranavada
  06AUG2010 1:50
  ಎ೦ದಿನ೦ತೆ ಪರಿಸ್ಥಿತಿಯ ಕೈಗೊಬೆ! ಕವಿನಾಗರಾಜರ ಸರಣಿ ಮನಸ್ಸಿಗೆ ಒ೦ದು ಕಡೆ ದು:ಖವನ್ನು, ಮತ್ತೊ೦ದು ಕಡೆ ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಸ೦ತಸವೂ ಮೂಡುತ್ತಿದೆ. ನಿಮ್ಮದೇ ಕವಿ ಪ್ರಕಾಶನದಿ೦ದ ಸಮಾನ ಮನಸ್ಕರ ಜೊತೆಗೂಡಿ ಇವುಗಳನ್ನೆಲ್ಲಾ ಒಟ್ಟಿಗೇ ಸೇರಿಸಿ, ಒ೦ದು ಸ೦ಗ್ರಾಹ್ಯ ಯೋಗ್ಯ ಹೊತ್ತಗೆಯಾಗಿ ಹೊರತರಲು ಸಾಧ್ಯವೇ ಯೋಚಿಸಿ. ನನ್ನ ಕೈಲಾದ (ತನು, ಮನ,ಧನ)ಸಹಾಯವನ್ನು ನಾನು ಮಾಡಲು ಎ೦ದಿಗೂ ಸಿಧ್ಧ. ಯೋಚನೆಯನ್ನು ಕಾರ್ಯತತ್ಪರಗೊಳಿಸುವಾಗ ನನಗೊ೦ದು ಮಿ೦ಚೆ ಕಳುಹಿಸಿ.ನಾನು ಸದಾ ಸಿಧ್ಧನಾಗಿರುತ್ತೇನೆ. ಸರಣಿ ಮು೦ದುವರೆಯಲಿ.
  ನಮಸ್ಕಾರಗಳೊ೦ದಿಗೆ,

  Kavinagaraj
  06AUG2010 2:07
  ಸೋದರ ರಾಘವೇಂದ್ರರೇ, ನಿಮ್ಮ ಅಭಿಮಾನ, ಸಹಕಾರಗಳಿಗಾಗಿ ನನ್ನ ಹೃದಯ ತುಂಬಿತು. ಅಂತಹ ಸಂದರ್ಭದಲ್ಲಿ ಖಂಡಿತಾ ನಿಮಗೆ ತಿಳಿಸುವೆ. ವಂದನೆಗಳು.

  Raghu S P
  06AUG2010 2:48
  ಆ ಪರಿಸ್ಥಿತಿಯಲ್ಲೂ , ನೀವು ಫೋಟೋ ತೆಗೆಸಿದ ರೀತಿ ಅದ್ಭುತವಾಗಿದೆ ......ಮುಂದಿನ ಸಂಚಿಕೆಗೆ ಕಾತರದಿಂದ ಕಾಯುತ್ತಿರುವೆ

  Kavinagaraj
  06AUG2010 3:10
  ಮೆಚ್ಚುಗೆಗೆ ಧನ್ಯವಾದ, ರಘು.

  ತೇಜಸ್ವಿ
  06AUG2010 5:39
  ಕವಿಗಳೇ , ....ಜೇಬುಗಳ್ಳರ ಜೊತೆಗೆ ನಿಮ್ಮ ಫೋಟೋ ಹಾಕಿದ್ದು ಬೇಸರ ತಂದಿತು. ಇವರ ವರ್ತನೆ ತೀರಾ ಕಳಪೆ ಎನ್ನಿಸಿತು.

  Kavinagaraj
  06AUG2010 6:35
  ನಮಸ್ಕಾರ, ತೇಜಸ್ವಿ. ನನಗೆ ಗೊತ್ತಿರುವ ಸಂಗತಿಗಳನ್ನೆಲ್ಲಾ ಹೇಳಿದರೆ ನೀವೇನನ್ನುತ್ತೀರೋ! ಪ್ರಸ್ತುತವಲ್ಲದ ಕಾರಣ ಹೇಳಿಲ್ಲ. ಇತರ ಅಮಾಯಕರು ಅನುಭವಿಸಿದ ಸಂಗತಿಗಳ ಮುಂದೆ ನನ್ನದೇನೂ ಅಲ್ಲ.

  ಚೇತನ್ ಕೋಡುವಳ್ಳಿ
  11AUG2010 4:18
  ಭಯಂಕರ ಅನುಭವಗಳು

  ಪ್ರತ್ಯುತ್ತರಅಳಿಸಿ